ಕಾಲದ ಕರೆ

ವಿಕಿಸೋರ್ಸ್ದಿಂದ
 ಕಾಲದ ಕರೆ

ನೂರು ಮಾತನಾಡಿ ಕರೆಯು-

ತಿಹುದು ಜೀವಸೃಷ್ಟಿಯು

ನೂರು ಭಾವವಾಗಿ ತೆರೆಯು-

ತಿಹುದು ಆತ್ಮದೃಷ್ಟಿಯು


ಭಾವ ಭಾವ ಬೆಡುತಿಹುದು

ಹಾಡಿನಂತ ಮಾತನೆ

ಇಲ್ಲದಿರಲು ಮರನದಂಥ

ಮೂಕಮೌನ ಯಾತನೆ


ಅಂತೆ ಹರಿಯಿತಿಲ್ಲಿ ಹಾಡು

ಇಲ್ಲ ಬೆರೆ ಭಾಷೆಯು

ಸೃಶ್ಟ್ಯೆದೆಯ ಪಡಿನುಡಿಯಲು

ಜೀವಕೆನೋ ಆಶೆಯು


    ಆಹ್ವಾನ

ಕವಿ: ಗಂಗಾಧರ ಚಿತ್ತಾಲ

ಚೈತ್ರಯಾತ್ರೆಗೆಂದೋ ಏನೋ ಬಂದೆ ಜನ್ಮ ತಳಿ

ಬೆನ್ಗೆ ಭಾನು-ಉದಯವಿತ್ತು ಅಭಯವೆಂದು ಸಾರಿ

ವಿಶ್ವ ಕರೆಯುತಿತ್ತು ವಿಜಯರಂಗದಂತೆ ತೋರಿ:


ಕಾಲಗರ್ಭದಲ್ಲಿ ಬಾಲತೇಜ ಬೆಲೆವುದೊಂದು

ಅದುವೆ ನಿನ್ನ ಧ್ಯೇಯದೋಜವದುವೆ ಭಾಗ್ಯಬಿಂಧು

ಜೀವಪಥವ ತೆರೆಯೋ ಆ ದಿವ್ಯದಿಶೆಯಲಿಂದು.


ದಿನವು ಬಾನ ಬಸಿರಿನಿಂದ ಬೆಳಕು ಬೆಲೆವ ವೈಭವಾ

ಸಂಧ್ಯೆ ಇಂದ್ರಮಾಯೆಯಿಂದ ಬರೆವ ಸ್ವರ್ಣರಾಗ ಹಾ!


ನಿಶೆಯು ನೀಲವಾಗಿ ತೆರೆವ ತಾರಾಂಕಿತ ಶಾಂತಿಯು

ಉಷೆಯು ಮೋಹಮುಗ್ಧೆಯಂತೆ ತಳೆವ ಅರುಣಕಾಂತಿಯು


ಭಾಷೆ-ಭಾವವೇನಿದಾವ ಚೈತನ್ಯ ಲೀಲೆಯೋ

ಕಂಡ ಕಡೆಗು ಚೆಲುವ ಒಲವ ನಲವ ಮಾಲೆಮಾಲೆಯೋ


ಜೀವಮಾಯೆ ಮೋಹಕಾಯೆ ಚಿರನೂತನ ಚೆತನೆ

ದಿನವು ಈ ಧರಿತ್ರಿಮಾತೆ ಒರೆಯುಲಳಾ ಮಾತನೆ.


ಬಾನ ನೀಲಧ್ಯಾನವದನೆ ಕಂಡು ನಿತ್ಯನಲಿವುದೋ

ತನ್ನ ಹರ್ಷದಮೃತಸ್ಪರ್ಷವದಕೆ ಗಾಳಿ ತರುವದೋ.


ಪಾರವಾರ ತೆರೆವುದೋ ಪ್ರಫುಲ್ಲ ಜಲೋಲ್ಹಾಸವಾ

ಕಾಲ ಮಾಸ ಮಾಸ ಕುಣಿವ ಋತುವಿಲಾಸರಾಸವಾ


"ಎಂಥ ಭವ್ಯರಂಗವಿದೋ

ದಿನವು ದಿವ್ಯಸಂಗವಿದೋ--

ಬೆಳೆ ಅಥಾಂಗಬಲವನು

ನಡೆಯೊ ಮುಂದೆ, ಪಡೆಯೆ ಬಂದೆ ಸಿದ್ಢಿಯಮರಫಲವನು"


--ಎಂದು ಜೀವದಾಳದಿಂದ ಮಾರ್ಮೊಳಗಿ ಬಂದುದೋ

ಆವುದೇನೋ ಶಕ್ತಿ ದೇವಶಕ್ತಿಯಂತೆ ನಿಂದುದೋ


ಆಶೆಯೋಘ ಸೆಳೆಯುತಿತ್ತು ಮುಗಿಲಗಂಗೆಯುದರಕೆ

ಎದೆಯ ಬಯಕೆ ಬೆಳೆಯುತಿತ್ತು ಬಿದಿಗೆ ಬಿಂಬದಧರಕೆ.


ಪ್ರಾಣ ಚೇತರಿಸಿ ನಿಂತು ಮೇರುಧೀರನಂದದಿ

"ಎಂದು ಬಹುದೊ?" ಎಂದು ಕಾಯುತಿದ್ದ ದಿಗ್ಧಿಗಂತದಿ!


ಮಿಲನ

ಕವಿ: ಗಂಗಾಧರ ಚಿತ್ತಾಲ


ಜೀವವೇ ಕಣ್ಣಾಗಿ ಕಾದು ನಿಂತಿಹೆ, ಮನದೊ--

ಳೊರತೆಯೂರಿದೆ ನೂರು ಯುಗದ ಆಸೆ

ಒಲವ ತೆಕ್ಕೆಗೆ ಮೈಯು ಹಸಿದು ಹಾತೊರೆಯುತಿದೆ

ಎಲೆ ನಲ್ಲೆ, ಇದು ಪುರಾತನ ಪಿಪಾಸೆ


ಅಣುರೇಣುವೂ ಕೂಗಿ ಕರೆಯುತಿದೆ ನಿನಗಾಗಿ

ಮಿಂಚಾಡೆ ಸಿಹಿನೋವಿನಂಥ ಸೆಳೆತ.

ಸೂರ್ಯ-ಚಂದ್ರರ ಬಂಧಿಸಿಹ ಮೋಹನವು ಇದುವೆ;

ನಮ್ಮನೂ ಸಂಧಿಸಲು ಇದರ ಎಳೆತ!


ನೀ ಬಂದೆ; ಬೇರೊಂದು ಲೋಕವನೆ ಕರೆತಂದೆ!

ಕಣ್ಣೊಳೊಡಮೂಡಿಹುದು ಎಂಥ ಭಾಷೆ?

ಈ ಅಂತರವು ವಿರಹ. ಓಡು ಎದೆಗೊತ್ತುವೆನು--

ಜೀವಸಮ್ಮಿಲನವೇ ಜೀವದಾಸೆ!


"https://kn.wikisource.org/w/index.php?title=ಕಾಲದ_ಕರೆ&oldid=3416" ಇಂದ ಪಡೆಯಲ್ಪಟ್ಟಿದೆ