ನಾ ನಿನ್ನ ಧ್ಯಾನದೊಳಿರಲು

ವಿಕಿಸೋರ್ಸ್ದಿಂದ

ರಚನೆ: ಶ್ರೀ ಪುರಂದರದಾಸರು


ನಾ ನಿನ್ನ ಧ್ಯಾನದೊಳಿರಲು ಮಿಕ್ಕ
ಹೀನ ಮಾನವರೇನು ಮಾಡಬಲ್ಲರೊ ರಂಗ

ಮತ್ಸರಿಸುವರೆಲ್ಲ ಕೂಡಿ ಮಾಡುವರೇನು
ಅಚ್ಯುತ ನಿನ್ನ ದಯೆಯೆನ್ನೊಳಿರಲು
ವಾತ್ಸಲ್ಯ ಬಿಡದಿರು ನಿನ್ನ ನಂಬಿದೆ ದೇವ
ಕಿಚ್ಚಿಗೆ ಇರುವೆ ಮುತ್ತುವುದೆ ಕೇಳೆಲೊ ರಂಗ

ಧೂಳಿಲಿ ಕುದುರೆ ವೈಯಾರದಿ ಕುಣಿಯಲು
ಧೂಳು ರವಿಯ ಮೇಲೆ ಮುಸುಕುವುದೆ
ತಾಳಿದವರಿಗೆ ವಿರುದ್ಧ ಲೋಕದೊಳುಂಟೆ
ಗಾಳಿಗೆ ಗಿರಿಯು ಅಲ್ಲಾಡಬಲ್ಲದೆ

ಕನ್ನಡಿಯೊಳಗಣ ಗಂಟು ಕಂಡು ಕಳ್ಳ
ಕನ್ನವಿಕ್ಕಲವನ ವಶವಹುದೆ
ನಿನ್ನ ನಂಬಲು ಮುದ್ದು ಪುರಂದರ ವಿಠ್ಠಲ
ಚಿನ್ನಕ್ಕೆ ಪುಟವನಿಟ್ಟಂತೆ ಅಹುದೋ ರಂಗ


ಕನ್ನಡ ವಿಕಿಸೋರ್ಸ್[ಸಂಪಾದಿಸಿ]

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ | ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ