ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಇಕ್ಸೋರ

ವಿಕಿಸೋರ್ಸ್ದಿಂದ

ರೂಬಿಯೇಸೀ ಕುಟುಂಬದ 150 ಜಾತಿಗಳ ಪೈಕಿ ಒಂದು. ಹೂ ಬಿಡುವ ಪೊದೆ ಸಸ್ಯ. ಅಗಲವಾದ ಮತ್ತು ಉದ್ದವಾದ ಎಲೆಗಳ ಮಧ್ಯೆ ಚೆಂಡಿನಂತೆ, ಪ್ರಭೇದಗಳಿಗೆ ಅನುಸಾರವಾಗಿ ವಿವಿಧ ಬಣ್ಣಗಳಲ್ಲಿ ಬಿಟ್ಟಿರುವ ಚೆಲುವಾದ ಹೂಗೊಂಚಲುಗಳನ್ನು ಹೊಂದಿದ್ದು ಪೊದೆಯಾಗಿಯೂ ಚಿಕ್ಕಮರವಾಗಿಯೂ ಬೆಳೆಯುತ್ತದೆ. ಸದಾ ಹಸಿರಾಗಿರುವ ಬಹುವಾರ್ಷಿಕ ಸಸ್ಯವಾಗಿ ಬೆಳೆಯುವ ಪ್ರಭೇದಗಳೂ ಇವೆ. ಎಲೆ ಅಭಿಮುಖ ಅಥವಾ ವೃತ್ತ ಜೋಡಣೆಯುಳ್ಳದ್ದು. ಕೊರಿಂಬ್ ಮಾದರಿಯ ಹೂಗೊಂಚಲು ತುದಿ ಅಥವಾ ಕಂಕುಳಲ್ಲಿ ಕಾಣಿಸಿಕೊಳ್ಳುತ್ತದೆ. ಹೂಗಳ ಬಣ್ಣ ಪ್ರಭೇದಗಳಿಗೆ ಅನುಸಾರವಾಗಿ ಬಿಳುಪು, ಗುಲಾಬಿ, ಕೇಸರಿ, ಹೀಗೆ ನಾನಾ ಬಗೆ, ಹೂಗಳಿಗೆ ತೊಟ್ಟು, ಉಪದಳ, ಗಂಟಲಲ್ಲಿ ರೋಮಗಳು ಕೂಡು ದಳದ ಹೊರಭಾಗ 4-5 ಭಾಗವಾಗಿ ಅಗಲವಾಗಿರುತ್ತದೆ. ಕೇಸರಗಳು ಹೂಗಂಟಲಿನ ಮೇಲೆ ಅಂಟಿಕೊಂಡಿರುತ್ತವೆ. ಕೆಳ ಅಂಡಾಶಯ ಮೇಲ್ಭಾಗವಾಗಿದೆ. ಹಣ್ಣು ಗಟ್ಟಿಯಾದ ಅಥವಾ ಮೆದುವಾದ ಬೆರ್ರಿ ಮಾದರಿಯದು. ಇವನ್ನು ಉದ್ಯಾನವನ ಲಾನುಗಳಲ್ಲಿ ಮತ್ತು ದಾರಿಗಳ ಪಕ್ಕದಲ್ಲಿ ಬೆಳೆಸುತ್ತಾರೆ. ಹೂವಿನ ಬಣ್ಣಗಳಿಗೆ ಅನುಸಾರವಾಗಿ ಇಕ್ಸೋರವನ್ನು ಹೀಗೆ ವಿಂಗಡಿಸಬಹುದು-

  1. ಹಳದಿ ಮತ್ತು ಕಿತ್ತಲೆ ಬಣ್ಣದ ಹೂಗಳವು.
  2. ಕಡುಗೆಂಪು ಹೂಗಳವು.
  3. ಕರಿಬಣ್ಣದ ಹೂಗಳವು.
  4. ಬಿಳಿಬಣ್ಣದ ಹೂಗಳವು.
  5. ಕಿತ್ತಲೆ ಮಿಶ್ರಿತ ಕರಿ ಬಣ್ಣದ ಹೂಗಳವು.