ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕ್ರೈಸ್ತವೇದಪ್ರಾಮಾಣ್ಯ ವಾದ
ಕ್ರೈಸ್ತವೇದಪ್ರಾಮಾಣ್ಯ ವಾದ
ಹೆಸರೇ ತಿಳಿಸುವಂತೆ ಬೈಬಲಿನ ಮೂಲಭೂತ ಉಪದೇಶಗಳ ಪ್ರಾಮಾಣ್ಯವನ್ನು ಎತ್ತಿಹಿಡಿಯಲು ಪ್ರಯತ್ನಿಸಿದ ಒಂದು ಸಾಂಪ್ರದಾಯಿಕ ಕೈಸ್ತಮತಸಂಸ್ಥೆ (ಫಂಡಮೆಂಟಲಿಸಂ). ಪ್ರಾಟೆಸ್ಟಂಟ್ ವಿಭಾಗದ ಹಲವು ಶಾಖೆಗಳಲ್ಲೊಂದು. ಇಪ್ಪತ್ತನೆಯ ಶತಮಾನದ ಆದಿಯಲ್ಲಿ ಇದು ಅವಿರ್ಭವಿಸಿತೆನ್ನಲಾಗಿದೆ. ಬೈಬಲನ್ನು ಐತಿಹಾಸಿಕ ಹಾಗೂ ಭಾಷಿಕ ವಿಶ್ಲೇಷಣೆಗೆ ಗುರಿ ಮಾಡುತ್ತಿದ್ದುದನ್ನು ಈ ಸಂಸ್ಥೆ ಖಂಡಿಸಿತಲ್ಲದೆ ಆಗತಾನೆ ವಿಶೇಷ ಪ್ರಾಮುಖ್ಯಕ್ಕೆ ಬರುತ್ತಿದ್ದ ವೈಜ್ಞಾನಿಕ ಆವಿಷ್ಕರಣಗಳ ವಿರುದ್ಧವಾಗಿ ಬೈಬಲಿನ ನಂಬಿಕೆಗಳನ್ನು ಮತ್ತೆ ಸ್ಥಾಪಿಸುವ ಉದ್ದೇಶದಿಂದ ಕೆಲಸ ಮಾಡಿತು. ಪ್ರಾರಂಭದಲ್ಲಿ ಈ ಬಗ್ಗೆ ತೀರ ಕಟುವಾದ ಚರ್ಚೆಗಳೇ ಆದುವು. ದೇಶದ ಕಾನೂನಿಗೆ ವಿರುದ್ಧವಾಗಿ ಡಾರ್ವಿನನ ವಾದವನ್ನು ಮಂಡಿಸಿದನೆಂಬ ಆಪಾದನೆಯ ಮೇಲೆ ಜುಲೈ 1925ರಲ್ಲಿ ಜಾನ್ ಟಿ.ಸ್ಕೋಪ್ಸ್ ಎಂಬಾತನನ್ನು ವಿಚಾರಣೆಗೆ ಗುರಿ ಮಾಡಿದಾಗ ಕೈಸ್ತವೇದ ಪ್ರಾಮಾಣ್ಯವಾದದ ವಕ್ತಾರರಲ್ಲೊಬ್ಬನಾದ ವಿಲಿಯಂ ಜೆನಿಂಗ್ಸ್ ಬ್ರಯನ್ ಎಂಬಾತ ದೇಶದ ಪರ ವಾದಿಸಿ ಗೆದ್ದನೆನ್ನಲಾಗಿದೆ. (ಡಿ.ವಿ.ಡಬ್ಲ್ಯು.)