ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಗಿನಿ ಹಂದಿ
ಕೇವಿ ಎಂಬ ಪ್ರಾಣಿಯಿಂದ ವಿಕಾಸ ಹೊಂದಿದ ಸಾಕುಪ್ರಾಣಿ (ಗಿನಿಪಿಗ್); ರಾಡೆನ್ಷಿಯ ಗಣದ ಕೇವಿಯಿಡೀ ಕುಟುಂಬಕ್ಕೆ ಸೇರಿದೆ. ಕೇವಿಯ ಪಾರ್ಸೆಲಸ್ ಎಂಬುದು ಇದರ ವೈಜ್ಞಾನಿಕ ಹೆಸರು. ಜನಪ್ರಿಯವಾಗಿರುವ ಈ ಪ್ರಾಣಿಯ ಹೆಸರಿಗೂ ಆಫ್ರಿಕದ ಗಿನಿ ಮತ್ತು ಆಗ್ನೇಯ ಏಷ್ಯದ ನ್ಯೂಗಿನಿಗಳಿಗೂ ಯಾವ ಬಗೆಯಾದ ಸಂಬಂಧವಿಲ್ಲ. ಗಿನಿ ಎಂಬ ಪದ ಬಹುಶಃ ಗಿಯಾನ ಎಂಬ ಪದದಿಂದ ಪಡೆದುದಾಗಿರ ಬಹುದು. ಡಚ್ ಮತ್ತು ಇಂಗ್ಲಿಷ್ ವ್ಯಾಪಾರಸ್ಥರು ಈ ಪ್ರಾಣಿಗಳನ್ನು ಗಿಯಾನದಿಂದ ಕೊಂಡೊಯ್ದದ್ದರಿಂದ ಈ ಹೆಸರು ಬಂದಿರಬೇಕು.
ದಕ್ಷಿಣ ಅಮೆರಿಕದ ಪೆರು, ಎಕ್ವಡಾರ್ ಮತ್ತು ಕೊಲಂಬಿಯಗಳು ಗಿನಿಹಂದಿಗಳ ತೌರು. ಇವು ಈ ಪ್ರದೇಶಗಳ ಬಯಲಿನ ಮೂಲವಾಸಿಗಳಾದ ಕೇವಿ ಪ್ರಾಣಿಗಳಿಂದ ವಿಕಾಸ ಹೊಂದಿದ ಪ್ರಾಣಿಗಳೆಂದು ತಿಳಿಯಲಾಗಿದೆ. ದಕ್ಷಿಣ ಅಮೆರಿಕಕ್ಕೆ ಸ್ಪ್ಯಾನಿಷರು ಕಾಲಿಡುವುದಕ್ಕೆ ಮುಂಚೆಯೇ ಅಲ್ಲಿಯ ಮೂಲವಾಸಿಗಳಾದ ಅಮೆರಿಕದ ಇಂಡಿಯನ್ನರು ಈ ದಂಶಕ ಪ್ರಾಣಿಗಳನ್ನು ಆಹಾರಕ್ಕಾಗಿ ಸಾಕುತ್ತಿದ್ದರಂತೆ. ಡಚ್ಚರು ಹದಿನಾರನೆಯ ಶತಮಾನದಲ್ಲಿ ಯುರೋಪಿಗೆ ಇವನ್ನು ಕೊಂಡೊಯ್ದು ಇವುಗಳ ತಳಿಗಳನ್ನು ಅಭಿವೃದ್ಧಿ ಗೊಳಿಸಿದರು. ಅಲ್ಲಿಂದೀಚೆಗೆ ಪ್ರಪಂಚದ ವಿವಿಧ ದೇಶಗಳಿಗೆ ಹರಡಿದ ಇದನ್ನು ಆಹಾರಕ್ಕಾಗಿ ಸಾಕುತ್ತಿಲ್ಲವಾದರೂ ವೈಜ್ಞಾನಿಕ ಪ್ರಯೋಗಮಂದಿರಗಳಲ್ಲಿ ಇದರ ನೆರವು ಅಪಾರ. ವೈದ್ಯಕೀಯ, ಜೈವಿಕ, ತಳಿವಿಜ್ಞಾನ ಮತ್ತು ಪೋಷಣಸಂಬಂಧಿ ಸಂಶೋಧನೆ ಗಳಲ್ಲಿ ಇದನ್ನು ಪ್ರಯೋಗ ಪ್ರಾಣಿಯಾಗಿ ಬಳಸಲಾಗುತ್ತಿದೆ. ಇದು ಎಷ್ಟು ಪ್ರಚಲಿತವೆಂದರೆ ಗಿನಿಹಂದಿಯನ್ನಾಗಿ ಬಳಸು ಎಂಬುದು ಈಗ ಒಂದು ನುಡಿಗಟ್ಟಾಗಿಬಿಟ್ಟಿದೆ.
ಗಿನಿ ಹಂದಿಗಳ ಮೈ ಬಣ್ಣ ಸಾಮಾನ್ಯವಾಗಿ ಬಿಳಿ, ಕಪ್ಪು, ಕೆಂಪು, ಕಂದು, ಹೀಗೆ ವೈವಿಧ್ಯಮಯ. ಚೆನ್ನಾಗಿ ಬೆಳೆದ ಪ್ರೌಢಜೀವಿಯ ದೇಹದ ಉದ್ದ 25 ಸೆಂಮೀ, ತೂಕ ಸುಮಾರು 900 ಗ್ರಾಂ. ಗಿನಿ ಹಂದಿಗಳಿಗೆ ಬಾಲವಿಲ್ಲ. ಆದರೆ ಅದಕ್ಕೆ ಸಂಬಂಧಿಸಿದ ಏಳು ಕಶೇರುಕ ಮಣಿಗಳು ದೇಹದೊಳಗೇ ಹುದುಗಿರುತ್ತವೆ. ಸ್ಥೂಲ ದೇಹ, ದಪ್ಪತಲೆ, ಚಿಕ್ಕಕಾಲುಗಳು, ರೋಮರಹಿತವಾದ ಮತ್ತು ಗುಂಡನೆಯ ಚಿಕ್ಕ ಕಿವಿಗಳು, ಮುಂಗಾಲಿನಲ್ಲಿ ನಾಲ್ಕು, ಹಿಂಗಾಲಿನಲ್ಲಿ ಮೂರು ಬೆರಳುಗಳು, ಪ್ರತಿ ಬೆರಳಿನಲ್ಲಿ ಅಗಲವಾದ ನಖಗಳು-ಇವು ಈ ಪ್ರಾಣಿಯ ಮುಖ್ಯ ಲಕ್ಷಣಗಳು. ದೇಹದ ಮೇಲಿರುವ ಕೂದಲು ರೇಷ್ಮೆಯಂತೆ ನಯವಾಗಿರಬಹುದು ಅಥವಾ ಒರಟಾಗಿರಬಹುದು. ಹಾಗೆಯೇ ಚಿಕ್ಕದಾಗಿರಬಹುದು ಇಲ್ಲವೆ ನೀಳವಾಗಿರಬಹುದು.
ಹುಲ್ಲು, ಸೊಪ್ಪುಗಳೇ ಇದರ ಮುಖ್ಯ ಆಹಾರ. ಆಹಾರವನ್ನು ಸಾಕಷ್ಟು ಮೊತ್ತದಲ್ಲಿ ಒದಗಿಸಿದರೆ ಇದು ನೀರಿಲ್ಲದೆಯೇ ಬಹು ಕಾಲ ಬದುಕಬಲ್ಲದು. ಆದರೆ ಮರದ ಪೆಟ್ಟಿಗೆಯಲ್ಲಿ ಗೂಡು ಮಾಡಿ, ಇಲಿ, ಮೊಲ ಮುಂತಾದವಕ್ಕೆ ಕೊಡುವ ಆಹಾರವನ್ನು ಒದಗಿಸಿದಲ್ಲಿ ಇದಕ್ಕೆ ಪ್ರತ್ಯೇಕವಾಗಿ ನೀರನ್ನು ಒದಗಿಸುವುದು ಅನಿವಾರ್ಯ.
ಸಂತಾನಶಕ್ತಿಗೆ ಹೆಸರಾದ ಗಿನಿಹಂದಿ ವರ್ಷಕ್ಕೆ 5-6 ಸಲ ಮರಿ ಹಾಕುತ್ತದೆ. ಒಂದು ಸೂಲಿಗೆ 2-8 ಮರಿಗಳು ಇರುತ್ತವೆ. ಗರ್ಭಾವಧಿಯ ಕಾಲ 63-75 ದಿವಸಗಳು. ಬಸಿರಿನಲ್ಲಿಯೇ ಮರಿಗಳು ಚೆನ್ನಾಗಿ ಬೆಳೆಯುವುದರಿಂದ ಹುಟ್ಟಿದ ಮರಿಗಳಿಗೆ ಕಣ್ಣು ಬಂದಿರುತ್ತವಲ್ಲದೆ ಘನರೂಪದ ಆಹಾರವನ್ನು ಸೇವಿಸುವ ಸಾಮರ್ಥ್ಯವೂ ಇರುತ್ತದೆ. ಹುಟ್ಟಿದ ಒಂದೆರಡು ಗಂಟೆಗಳಲ್ಲಿಯೇ ತಾಯಿಯನ್ನು ಹಿಂಬಾಲಿಸಿ ಓಡಲು ಇವು ಸಮರ್ಥವಾಗಿರುತ್ತವೆ. ಎರಡು ವಾರಗಳ ಕಾಲ ತಾಯಿಯ ಹಾಲನ್ನು ಕುಡಿದು ಬೆಳೆದು ಅನಂತರ ಸ್ವತಂತ್ರ ಜೀವನವನ್ನು ಆರಂಭಿಸುತ್ತವೆ. 2 ತಿಂಗಳುಗಳಲ್ಲಿ ಪ್ರೌಢಾವಸ್ಥೆಗೆ ಬರುತ್ತವೆ. ಗಿನಿ ಹಂದಿಗಳ ಆಯಸ್ಸು ಸುಮಾರು 6-8 ವರ್ಷಗಳು.