ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಚರ್ಚ್ಯಾರ್ಡ್, ಥಾಮಸ್

ವಿಕಿಸೋರ್ಸ್ದಿಂದ

ಚರ್ಚ್‍ಯಾರ್ಡ್, ಥಾಮಸ್- 1520-1604. ಇಂಗ್ಲೆಂಡಿನ ಷ್ರೂಸಬರಿಯಲ್ಲಿ ಹುಟ್ಟಿದ ಈತ ಸಾಹಿತ್ಯ ರಚನೆಯನ್ನು ಆರಂಭಿಸಿದ್ದು ಆರನೆ ಎಡ್ವರ್ಡನ ಕಾಲದಲ್ಲಿ. ಮೊದಲನೆ ಜೇಮ್ಸ್ ಸಿಂಹಾಸನಕ್ಕೆ ಬಂದ ಅನಂತರವೂ ಈತನ ಬರವಣಿಗೆ ಮುಂದುವರಿಯಿತು. ಸಾಹಿತ್ಯಿಕ, ಮತೀಯ ಹಾಗೂ ರಾಜಕೀಯ ವಿಷಯಗಳ ಬಗ್ಗೆ ತನ್ನ ಅಭಿಪ್ರಾಯಗಳನ್ನು ಅತ್ಯುತ್ಸಾಹದಿಂದ ಗದ್ಯಪದ್ಯಗಳಲ್ಲಿ ಪ್ರಕಟಿಸುತಿದ್ದ ಈತನಿಗೆ ತನ್ನ ಸಮಕಾಲೀನರಿಂದ ಬಹುಮಟ್ಟಿಗೆ ಸಿಕ್ಕಿದ್ದು ಉಪೇಕ್ಷೆ. ಬಹುಶಃ ಇದರಿಂದಾಗಿ ಈತನ ಮುದ್ರಿತ ಕೃತಿಗಳು ದೊರಕುವುದು ಅಪೂರ್ವ. ತಾನು ಬರೆದಿರುವುದಾಗಿ ಹೇಳಿಕೊಂಡಿರುವ ಕೆಲವು ಕೃತಿಗಳಂತೂ ಅಲಭ್ಯವಾಗಿವೆ.

ಮೊದಲು ಈತ ಸರೆಯ ಶ್ರೀಮಂತ ಹೆನ್ರಿ ಹೊವಾರ್ಡ್‍ನ ಊಳಿಗದಲ್ಲಿದ್ದ. ಅನಂತರ ಯೂರೋಪಿನ ನಾನಾ ಭಾಗಗಳಲ್ಲಿ, ಸ್ಕಾಟ್‍ಲೆಂಡ್ ಮತ್ತು ಐರ್ಲೆಂಡ್‍ಗಳಲ್ಲಿ ಆಗಾಗ್ಗೆ ನಡೆಯುತ್ತಲೇ ಇದ್ದ ಯುದ್ಧಗಳಲ್ಲಿ ಹೆಸರು, ಹಣ ಗಳಿಸುವ ಉದ್ದೇಶದಿಂದ ಭಾಗವಹಿಸಿದ. ಗಣನೀಯ ಪ್ರಮಾಣದಲ್ಲಿ ಈ ಎರಡರಲ್ಲಿ ಯಾವುದನ್ನೂ ಪಡೆಯದೆ ಇಂಗ್ಲೆಂಡಿಗೆ ಹಿಂದಿರುಗಿ ಎಲಿಜಬೆತ್ ರಾಣಿಯ ಕೃಪೆ ಸಂಪಾದಿಸಲು ಪ್ರಯತ್ನಿಸಿದ. ಆದರೆ ಅದರಲ್ಲೂ ಯಶಸ್ಸು ಲಭಿಸಲಿಲ್ಲ. 1579ರಲ್ಲಿ ಈತ ಪ್ರಕಟಿಸಿದ ಜನರಲ್ ರಿಹರ್ಸಲ್ಸ್ ಆಫ್ ವಾರ್ಸ್ ಎಂಬ ಕೃತಿಯ ಕೆಲವು ಭಾಗಗಳು ರಾಣಿಗೆ ಅಪ್ರಿಯವಾಗಿ ಕಂಡದ್ದರಿಂದ ಥಾಮಸ್ ಮೂರು ವರ್ಷ ಸ್ಕಾಟ್‍ಲೆಂಡಿಗೆ ಓಡಿ ಹೋಗಬೇಕಾಯಿತು. 1584ರ ಸಮಯಕ್ಕೆ ರಾಣಿಯ ಕೃಪೆ ದೊರೆತು, ಸಣ್ಣ ಮೊಬಲಗಿನ ವಿಶ್ರಾಂತಿವೇತನ ಲಭ್ಯವಾದರೂ ಈತ 1604ರಲ್ಲಿ ಸತ್ತಾಗ ಶ್ರೀಮಂತಿಕೆಗೆ ದೂರವೇ ಉಳಿದಿದ್ದ.

ಈತ ಬರೆದದ್ದು ಸಾಹಿತ್ಯಿಕವಾಗಿ ಮುಖ್ಯ ಎನ್ನುವಂತಿಲ್ಲದಿದ್ದರೂ ಚಾರಿತ್ರಿಕ ಹಾಗೂ ಸಾಮಾಜಿಕ ದೃಷ್ಟಿಯಿಂದ ಕುತೂಹಲಕರ ಎನ್ನಬಹುದು. ದಿ ಲೆಜೆಂಡ್ ಆಫ್ ಶೋರ್ಸ್ ವೈಫ್ ಎನ್ನುವುದು ಈತನ ಅತಿಖ್ಯಾತ ಕವನ ; ಇದು ಬಾಲ್ಡ್‍ವಿನ್‍ನ ಮಿರರ್ ಫಾರ್ ಮ್ಯಾಜಿಸ್ಟ್ರೇಟ್ಸ್ ಎಂಬ ಸಂಗ್ರಹದಲ್ಲಿ ಸೇರಿದೆ. ಚರ್ಚ್‍ಯಾರ್ಡ್ ಚಿಪ್ಸ್ (1575- ಮತ್ತು 1578) ಈತನ ವೈಯಕ್ತಿಕ ಸಾಹಸಗಳನ್ನು ಬಣ್ಣಿಸುವ ದೀರ್ಘಕವನ. ಚರಿತ್ರೆಕಾರರ ಹಾಗೂ ಸಂಶೋಧಕರ ಆಸಕ್ತಿಯನ್ನು ಕೆರಳಿಸುವ ದಿ ವದ್ರ್ಯೆನ್ಸ್ ಆಫ್ ವೇಲ್ಸ್ 1587ರಲ್ಲಿ ಪ್ರಕಟವಾಯಿತು. (ಡಿ.ಎ.ಎಸ್.)