ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಚ್ಯವನ

ವಿಕಿಸೋರ್ಸ್ದಿಂದ

ಚ್ಯವನ

ಒಬ್ಬ ಮಹರ್ಷಿ. ವರುಣಪುತ್ರನಾದ ಭೃಗು ಈತನ ತಂದೆ. ಪುಲೋಮೆ, ತಾಯಿ. ಗರ್ಭವತಿಯಾಗಿದ್ದಾಗ ಪುಲೋಮೆಯನ್ನು ಒಬ್ಬ ರಾಕ್ಷಸ ಅಪಹರಿಸುತ್ತಾನೆ. ಭಯಗ್ರಸ್ತೆಯಾದ ಪುಲೋಮೆಯ ಗರ್ಭದಿಂದ ಶಿಶುಚ್ಯುತವಾಗುತ್ತದೆ. ಹೀಗೆ ಗರ್ಭಚ್ಯುತನಾಗಿ ಜನಿಸಿದ ಆ ಮಗುವಿಗೆ ಚ್ಯವನನೆಂದೇ ಹೆಸರಾಯಿತು. ಹುಟ್ಟಿದ ಕೂಡಲೇ ಶಿಶು ರಾಕ್ಷಸನನ್ನು ಕ್ರೂರದೃಷ್ಟಿಯಿಂದ ನೋಡಿ ಬೂದಿಮಾಡುತ್ತದೆ. ಶುಕ್ರಾಚಾರ್ಯ ಚ್ಯವನನ ಸಹೋದರ. ಮನುವಿನ ಮಗಳಾದ ಆರುಷಿ ಈತನ ಪತ್ನಿ. ಔರ್ವ ಆರುಷಿಯಲ್ಲಿ ಹುಟ್ಟಿದ ಮಗ. ಚ್ಯವನ ದೀರ್ಘಕಾಲ ತಪಸ್ಸನ್ನು ಮಾಡುತ್ತಿದ್ದಾಗ ಆತನ ಶರೀರದ ಸುತ್ತಲೂ ಹುತ್ತ ಬೆಳೆದು ಅದರ ರಂಧ್ರಗಳಿಂದ ಕಣ್ಣುಗಳು ಮಾತ್ರ ಹೊಳೆಯುತ್ತಿದ್ದವು. ಒಮ್ಮೆ ಶರ್ಯಾತಿರಾಜ ತನ್ನ ಸೇನೆಯೊಂದಿಗೆ ಬಂದು ಚ್ಯವನನ ಆಶ್ರಮದ ಹತ್ತಿರ ಬಿಡಾರಮಾಡಿದ್ದ. ರಾಜನೊಂದಿಗೆ ಆತನ ಮಗಳಾದ ಸುಕನ್ಯೆಯೂ ಬಂದಿದ್ದಳು. ಆಕೆ ಅತ್ತಿತ್ತ ಸುತ್ತಾಡುತ್ತ ಚ್ಯವನ ಇರುವ ಸ್ಥಳಕ್ಕೆ ಬಂದು ಹುತ್ತದಿಂದ ಬರುವ ಬೆಳಕನ್ನು ನೋಡಿ ಆಶ್ಚರ್ಯ ಚಕಿತಳಾಗಿ ಒಂದು ಮುಳ್ಳಿನ ಮೊನೆಯಿಂದ, ಚ್ಯವನನ ಹೊಳೆಯುತ್ತಿದ್ದ ಕಣ್ಣನ್ನು ಚುಚ್ಚುತ್ತಾಳೆ. ಇದರಿಂದ ಚ್ಯವನನ ಕಣ್ಣುಗಳು ಹೋದದ್ದು ಮಾತ್ರವಲ್ಲದೆ ಶರ್ಯಾತಿರಾಜನ ಪರಿವಾರಕ್ಕೆ ಮಲಮೂತ್ರಗಳು ಕಟ್ಟುತ್ತವೆ. ಇದರ ಕಾರಣವನ್ನು ತಿಳಿಯದೆ ಯೋಚಿಸುತ್ತಿದ್ದ ಶರ್ಯಾತಿ ತನ್ನ ಮಗಳಿಂದ ನಡೆದುಹೋದ ಅಪಚಾರವನ್ನು ತಿಳಿದು ಕೂಡಲೇ ಚ್ಯವನ ಋಷಿಯ ಸಮೀಪಕ್ಕೆ ಹೋಗಿ ಕ್ಷಮೆ ಬೇಡುತ್ತಾನೆ. ಆಗ ಆ ಋಷಿ ಕುರುಡನಾದ ತನ್ನ ಸೇವೆಗಾಗಿ ಸುಕನ್ಯೆಯನ್ನು ಕೊಡುವಂತೆ ಕೇಳುತ್ತಾನೆ. ವಿಧಿಯಿಲ್ಲದೆ ಶರ್ಯಾತಿ ತನ್ನ ಮಗಳನ್ನು ಆತನಿಗೆ ಒಪ್ಪಿಸುತ್ತಾನೆ. ಸುಕನ್ಯೆ ಚ್ಯವನನ್ನು ಮದುವೆಯಾಗಿ ಆತನ ಶುಶ್ರೂಷೆ ಮಾಡಿಕೊಂಡು ಇರುತ್ತಾಳೆ. ಕೂಡಲೆ ಶರ್ಯಾತಿಯ ಪರಿವಾರ ಆರೋಗ್ಯವನ್ನು ಪಡೆಯುತ್ತದೆ. ಒಮ್ಮೆ ಸುಕನ್ಯೆ ಕೊಳದಲ್ಲಿ ಸ್ನಾನಮಾಡಿ ಒದ್ದೆಬಟ್ಟೆಯೊಡನೆ ಆಶ್ರಮಕ್ಕೆ ಬರುತ್ತಿದ್ದಾಗ ಅಶ್ವಿನಿದೇವತೆಗಳು ಆಕೆಯನ್ನು ನೋಡಿ ಮೋಹಿಸಿ ತಮ್ಮ ಅಭಿಪ್ರಾಯವನ್ನು ಆಕೆಗೆ ಸೂಚಿಸುತ್ತಾರೆ. ಇದರಿಂದ ಕ್ರುದ್ಧಳಾದ ಸುಕನ್ಯೆ ಅವರಿಗೆ ಶಾಪಕೊಡಲು ಸಿದ್ಧಳಾಗುತ್ತಾಳೆ. ಆಗ ಅಶ್ವಿನಿದೇವತೆಗಳು ಆಕೆಗೆ ತಮ್ಮ ನಿಜರೂಪವನ್ನು ತೋರಿಸಿ ವರವನ್ನು ಬೇಡುವಂತೆ ಹೇಳುತ್ತಾರೆ. ಅದಕ್ಕೆ ಸುಕನ್ಯೆ ತನ್ನ ಪತಿಗೆ ಯೌವನಬರುವಂತೆ ಬೇಡುತ್ತಾಳೆ. ಆಗ ಆ ದೇವತೆಗಳು ಚ್ಯವನನ್ನು ಕರಿಸಿ ಅವನೊಡನೆ ತಾವೂ ಆ ಕೊಳದಲ್ಲಿ ಸ್ನಾನ ಮಾಡುತ್ತಾರೆ. ಮೇಲಕ್ಕೇಳುವಾಗ ಮೂರು ಮಂದಿಯೂ ಒಂದೇ ರೂಪದಿಂದ ಇರುತ್ತಾರೆ. ತನ್ನ ಪಾತಿವ್ರತ್ಯದ ಮಹಿಮೆಯಿಂದ ಸುಕನ್ಯೆ ತನ್ನ ಪತಿಯನ್ನೇ ಗುರುತಿಸಿ ಆತನ ಕೈಯನ್ನು ಹಿಡಿಯುತ್ತಾಳೆ. ಚ್ಯವನ ಅಶ್ವಿನೀ ದೇವತೆಗಳಿಂದ ತಾರುಣ್ಯವನ್ನು ಪಡೆದುದಕ್ಕಾಗಿ ತನ್ನ ಮಾವನಾದ ಶರ್ಯಾತಿರಾಜನಿಂದ ಯಾಗವನ್ನು ಮಾಡಿಸಿ ಅದರಲ್ಲಿ ಅಶ್ವಿನಿದೇವತೆಗಳಿಗೆ ಹವಿರ್ಭಾಗವನ್ನು ಕೊಡಿಸುತ್ತಾನೆ. ಇದನ್ನು ಕಂಡ ಇಂದ್ರ ಕುಪಿತನಾಗಿ ಚ್ಯವನನನ್ನು ಕೊಲ್ಲಲು ಅನೇಕ ತಂತ್ರಗಳನ್ನು ಮಾಡುತ್ತಾನೆ. ತನ್ನ ತಪಶ್ಶಕ್ತಿಯಿಂದ ಆ ಋಷಿ ಎಲ್ಲವನ್ನು ತಪ್ಪಿಸಿಕೊಂಡು ಪಾರಾಗುತ್ತಾನೆ.

ಒಮ್ಮೆ ಚ್ಯವನ ನೀರಿನಲ್ಲಿ ಮುಳುಗಿ ತಪಸ್ಸು ಮಾಡುತ್ತಿದ್ದಾಗ ಬೆಸ್ತರ ಬಲೆಗೆ ಸಿಕ್ಕಿಬೀಳುತ್ತಾನೆ. ನಹುಷರಾಜ ಈತನನ್ನು ಬಿಡಿಸುತ್ತಾನೆ. ಚ್ಯವನನು ಕ್ಷತ್ರಿಯನಾದ ಕುಶಿಕನ ಮನೆಯಲ್ಲಿದ್ದು ಕುಶಿಕದಂಪತಿಗಳ ಶುಶ್ರೂಷೆ ಮತ್ತು ಸಹನೆಗೆ ಮೆಚ್ಚಿ ತನ್ನ ಯೋಗಮಹಿಮೆಯಿಂದ ಒಂದು ಸ್ವರ್ಗವನ್ನೇ ಸೃಷ್ಟಿ ಮಾಡಿ ಅವರಿಗೆ ತೋರಿಸಿ, ಕುಶಿಕವಂಶದಲ್ಲಿ ಬ್ರಾಹ್ಮಣ ಹುಟ್ಟುವಂತೆ ವರವನ್ನು ಕೊಡುತ್ತಾನೆ.

ಗೋತ್ರ ಪ್ರವರಕಾರರಲ್ಲಿ ಚ್ಯವನ ಋಷಿಯೂ ಒಬ್ಬನಾಗಿದ್ದಾನೆ.

ಅಶ್ವಿನೀ ದೇವತೆಗಳಿಂದ ನವತಾರುಣ್ಯವನ್ನು ಪಡೆದ ಚ್ಯವನನ ಹೆಸರಿನಿಂದ ಕೂಡಿದ ಒಂದು ಲೇಹ್ಯ ವೈದ್ಯಶಾಸ್ತ್ರದಲ್ಲಿ ಉಕ್ತವಾಗಿದೆ. ಈ ಚ್ಯವನ ಪ್ರಾಶವೆಂಬ ಲೇಹ್ಯವನ್ನು ಉಪಯೋಗಿಸುವವರು ಚ್ಯವನ ಮಹರ್ಷಿಯಂತೆ ನವತಾರುಣ್ಯವನ್ನು ಪಡೆಯುತ್ತಾರೆಂಬ ನಂಬಿಕೆ ಇಂದಿಗೂ ಇದೆ. (ಎಸ್.ಎನ್.ಕೆ.)