ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ತ್ರಿದೋಷ
ತ್ರಿದೋಷ - ಆಯುರ್ವೇದದ ಅಡಿಪಾಯವಾದ ಪ್ರಮುಖ ಪರಿಕಲ್ಪನೆ ; ವಾತ, ಪಿತ್ತ, ಕಫ (ವಾಯು, ಪಿತ್ತ, ಶ್ಲೇಷ್ಮ ಎನ್ನುವುದೂ ಉಂಟು) ಇವುಗಳ ಒಟ್ಟು ಹೆಸರು ; ವಿಶ್ವವನ್ನು ರಚಿಸಿರುವ ಪಂಚಮಹಾಭೂತಗಳಾದ ಆಕಾಶ, ವಾಯು, ತೇಜಸ್ಸು, ಅಪ್, ಪೃಥಿವೀಗಳ ಪೈಕಿ ಮೊದಲಿನ ಎರಡರ ಸಂಯೋಜನೆಯಿಂದ ವಾತವೂ ಮೂರನೆಯದರಿಂದ ಪಿತ್ತವೂ ಕೊನೆಯ ಎರಡರ ಸಂಯೋಜನೆಯಿಂದ ಕಫವೂ ಸಂಜನಿಸಿ ದೇಹ ಧಾರಣೆ ಪೋಷಣೆಗಳಿಗೂ ಅಂತೆಯೇ ದೇಹದ ರೋಗ ನಾಶಗಳಿಗೂ ಕಾರಣವಾಗುತ್ತವೆ ಎಂಬ ಮೂಲಭೂತ ಅಭಿಗೃಹೀತ. ಆಯುರ್ವೇದ ಎಂಬ ಪದಕ್ಕೆ ಮನುಷ್ಯ ತನ್ನ ಆಯುಷ್ಯವನ್ನು ವೃದ್ಧಿಪಡಿಸಿಕೊಂಡು ಪ್ರಪಂಚದಲ್ಲಿ ಇತರರಿಗೆ ಭಾರವಾಗದಂತೆ ಬಲು ಕಾಲ ಸುಖವಾಗಿ ಬಾಳುವ ಹಾದಿಗಳನ್ನು ತಿಳಿಸುವ ಶಾಸ್ತ್ರ ಎಂಬ ಅರ್ಥವಿದೆ. ಇಂಥ ಸುಖ ಒದಗಲು ಶರೀರದ ಆರೋಗ್ಯ ಉತ್ತಮ ಸ್ಥಿತಿಯಲ್ಲಿ ಇರಬೇಕು. ವಿಶ್ವದ ಒಂದು ಅಂಶ ನಾವು. ಅಂದರೆ ನಮ್ಮ ಶರೀರ, ಸಮಸ್ತ ವಿಶ್ವವೂ ಪಂಚಭೂತಾತ್ಮಕವಾಗಿದೆ : ಆಕಾಶ, ವಾಯು, ತೇಜಸ್ಸು, ಅಪ್ ಮತ್ತು ಪೃಥಿವೀ ಇವುಗಳ ವಿವಿಧ ಸಂಯುಕ್ತಗಳಾದ ವಿಶ್ವದ ವಸ್ತುಗಳನ್ನು ದೃಶ್ಯ ಮತ್ತು ಅದೃಶ್ಯ ಎಂಬುದಾಗಿ ವಿಂಗಡಿಸಿದೆ : ಪಂಚೇದ್ರಿಯಗಳ (ಕಣ್ಣು ಕಿವಿ ಮೂಗು ನಾಲಗೆ ಮತ್ತು ಚರ್ಮ) ಅನುಭವದ ಪರಿಧಿಯೊಳಗೆ ಬರುವಂಥವು ದೃಶ್ಯ ವಸ್ತುಗಳು. ಇಂಥ ಅನುಭವದಿಂದ ಹೊರಗಾದಂಥವು ಅದೃಶ್ಯ ವಸ್ತುಗಳು - ಇವನ್ನು ಅತೀಂದ್ರಿಯವೆಂದು ಭಾವಿಸಬೇಕು. ಸ್ವತಃ ವ್ಯಾಖ್ಯೆಯಿಂದಲೇ ಅತೀಂದ್ರಿಯ ವಸ್ತು ನಮ್ಮ ಸಾಮಾನ್ಯ ಅನುಭವಾತೀತವಾದದ್ದು. ಆದರೂ ಪ್ರಾಚೀನ ಕಾಲದ ಋಷಿಗಳಂಥ ದ್ರಷ್ಟಾರರಿಂದ ಅತೀಂದ್ರಿಯ ವಸ್ತುಗಳ ವಿಚಾರ ಸಾಕಷ್ಟು ವಿವರಣೆಗಳು ಅಯುರ್ವೇದದ ಆಕರ ಗ್ರಂಥಗಳಲ್ಲಿ ದೊರೆಯುತ್ತವೆ. ಆದ್ದರಿಂದ ನಾವು ವಿಶ್ವವನ್ನು ಅತೀಂದ್ರಿಯ ವಿಷಯಗಳು ಮತ್ತು ಇಂದ್ರಿಯಗ್ರಾಹ್ಯ ವಿಷಯಗಳು ಎಂಬುದಾಗಿ ವಿಂಗಡಿಸಿ ತ್ರಿದೋಷಗಳನ್ನು ಕುರಿತ ಅಧÀ್ಯಯನವನ್ನು ತೊಡಗುತ್ತೇವೆ.
ಆಯುರ್ವೇದದ ಪ್ರಕಾರ ಅನಾದಿ ಮತ್ತು ಅನಂತವಾದ ಅವ್ಯಕ್ತವು ಮನಸ್ತತ್ವವಾಗಿ (ಅಂದರೆ ಋಷಿಗಳಂಥ ದ್ರಷ್ಟಾರರಿಗೆ ಮಾತ್ರ ಗೋಚರವಾಗುವುದು) ವಿಶ್ವದ ಆರಂಭವಾಗುತ್ತದೆ. (ಮನಸ್ಸು ಎನ್ನುವುದು ಶುದ್ಧ ಅನುಭವ). ವಿಶ್ವದಿಂದ ಮಹಾನ್ ಎಂಬುದರ ಸೃಷ್ಟಿ ಆಗುತ್ತದೆ. ಇದು ಬುದ್ಧೀ ತತ್ತ್ವ. (ಬುದ್ಧಿಗೆ ವಿವೇಚನಾತ್ಮಕ ಸಾಮಥ್ರ್ಯ ಉಂಟು). ಮಹಾನ್‍ನಿಂದ ಅಹಂಕಾರ ಎಂಬುದರ ಸೃಷ್ಟಿ ಆಗುತ್ತದೆ. ಇದು ಅಹಂಕಾರ ತತ್ತ್ವ. (ಅಹಂಕಾರಕ್ಕೆ ಅನುಭವದ ಗುಣವನ್ನು ನಿರ್ಧರಿಸುವ ಸಾಮಥ್ರ್ಯ ಉಂಟು). ಅಹಂಕಾರದಲ್ಲಿ ಮೂರು ಬಗೆಗಳಿವೆ : ವೈಚಾರಿಕ (ಇದು ಸತ್ತ್ವಗುಣ ಭೂಯಿಷ್ಠವಾದದ್ದು). ತೈಜಸ (ಇದು ರಜೋಗುಣ ಭೂಯಿಷ್ಠವಾದುದ್ದು). ಭೂತಾದಿ (ಇದು ತಮೋಗುಣ ಭೂಯಿಷ್ಠವಾದುದ್ದು). ವೈಚಾರಿಕವು ತೈಜಸದ ಸಹಾಯದಿಂದ ಹನ್ನೊಂದು ಇಂದ್ರಿಯಗಳನ್ನು ನೀಡುತ್ತದೆ. ಇವು ಐದು ಜ್ಞಾನೇಂದ್ರಿಯಗಳು (ಕಿವಿ, ಚರ್ಮ, ಕಣ್ಣು, ನಾಲಗೆ, ಮೂಗು) ಐದು ಕರ್ಮೆಂದ್ರಿಯಗಳು (ವಾಕ್, ಹಸ್ತ, ಉಪಸ್ಥ, ಪಾಯು, ಪಾದ; ಉಪಸ್ಥ ಎಂದರೆ ಲಿಂಗಾಗಗಳು ಎಂದೂ ಪಾಯು ಎಂದರೆ ವಿಸರ್ಜನಾಂಗಗಳು ಎಂದೂ ಅರ್ಥ) ಮತ್ತು ಉಭಯಾತ್ಮಕ ಇಂದ್ರಿಯವಾದ ಮನಸ್ಸು (ಇದು ಜ್ಞಾನೇಂದ್ರಿಯವೂ ಹೌದು, ಕರ್ಮೆಂದ್ರಿಯವೂ ಹೌದು). ಇದೇ ತೆರನಾಗಿ ಭೂತಾದಿಯು ತೈಜಸದ ಸಹಾಯದಿಂದ ಪಂಚ ತನ್ಮಾತ್ರಗಳನ್ನು ನೀಡುತ್ತದೆ (ತನ್ಮಾತ್ರ ಎಂದರೆ ಬೇರೆ ಯಾವುದರ ಬೆರಕೆಯೂ ಇಲ್ಲದೆ ಅದೊಂದೇ ಆಗಿರುವುದು ಎಂದರ್ಥ): ಶಬ್ದ ತನ್ಮಾತ್ರ, ಸ್ಪರ್ಶ ತನ್ಮಾತ್ರ, ರೂಪ ತನ್ಮಾತ್ರ, ರಸ ತನ್ಮಾತ್ರ, ಗಂಧ ತನ್ಮಾತ್ರ.
ಈಗ ಮೇಲೆ ಹೇಳಿರುವ ಏಕಾದಶ ಇಂದ್ರಿಯಗಳಿಗೆ ವಿಷಯಗಳು (ಆಬ್ಜಕ್ಟ್ಸ್) ಈ ಮುಂದಿನಂತಿವೆ.
ಕಿವಿ ..... ಶಬ್ದ ವಾಕ್ ..... ಮಾತು
ಚರ್ಮ ..... ಸ್ಪರ್ಶ ಹಸ್ತ ... ಆದಾನ, ಪ್ರಧಾನ ಕಣ್ಣು ..... ರೂಪ ಉಪಸ್ಥ ..... ಅನಂದ ನಾಲಗೆ ..... ರಸ ಪಾಯು ..... ವಿಸರ್ಜನೆ ಮೂಗು ..... ಗಂಧ ಪಾದ ..... ಸಂಚಾರ
ಮನಸ್ಸು ..... ಸರ್ವಗ್ರಾಹ್ಯ
ಪಂಚತನ್ಮಾತ್ರಗಳ ಪರಸ್ಪರ ಸಂಯೋಜನೆಗಳಿಂದ ಶಬ್ದ, ಸ್ಪರ್ಶ, ರೂಪ, ರಸ, ಗಂಧಗಳು ಮೈದಳೆಯುತ್ತವೆ. ಇವೇ ಅನುಕ್ರಮವಾಗಿ ಪಂಚಜ್ಞಾನೇಂದ್ರಿಯಗಳಿಗೆ ವಿಷಯಗಳು. ಮೊದಲು ಶಬ್ದ ತನ್ಮಾತ್ರದಿಂದ ಕೇವಲ ಶಬ್ದಗುಣವಿಶಿಷ್ಟವಾದ ಆಕಾಶ ಹುಟ್ಟುತ್ತದೆ. ಮತ್ತೆ ಶಬ್ದ ತನ್ಮಾತ್ರದ ಸಹಾಯದಿಂದ ಸ್ಪರ್ಶ ತನ್ಮಾತ್ರವು ಶಬ್ದ ಸ್ಪರ್ಶಗುಣವಿಶಿಷ್ಟವಾದ ವಾಯುವನ್ನು ನೀಡುತ್ತದೆ. ಬಳಿಕ ಶಬ್ದ ತನ್ಮಾತ್ರ ಹಾಗೂ ಸ್ಪರ್ಶ ತನ್ಮಾತ್ರಗಳ ಸಹಾಯದಿಂದ ರೂಪ ತನ್ಮಾತ್ರವು ಶಬ್ದ ಸ್ಪರ್ಶ ರೂಪ ಗುಣ ವಿಶಿಷ್ಟವಾದ ತೇಜಸ್ಸನ್ನು ನೀಡುತ್ತದೆ. ತರುವಾಯ ಶಬ್ದ ಸ್ಪರ್ಶ ತನ್ಮಾತ್ರ ಹಾಗೂ ರೂಪ ತನ್ಮಾತ್ರಗಳ ಸಹಾಯದಿಂದ ರಸ ತನ್ಮಾತ್ರವುಶಬ್ದ ಸ್ಪರ್ಶ ರೂಪ ರಸ ಗುಣವಿಶಿಷ್ಟವಾದ ಅಪ್‍ನ್ನು ನೀಡುತ್ತದೆ. ಅನಂತರÀ ಶಬ್ದ ತನ್ಮಾತ್ರ, ಸ್ಪರ್ಶ ತನ್ಮಾತ್ರ, ರೂಪ ತನ್ಮಾತ್ರ ಹಾಗೂ ರಸ ತನ್ಮಾತ್ರಗಳ ಸಹಾಯದಿಂದ ಗಂಧ ತನ್ಮಾತ್ರವು ಶಬ್ದ ಸ್ಪರ್ಶ ರೂಪ ರಸ ಗಂಧ ಗುಣವಿಶಿಷ್ಟವಾದ ಗಂಧವನ್ನು ನೀಡುತ್ತದೆ. ಪಂಚಮಹಾಭೂತಗಳಾದ ಈ ಆಕಾಶÀ, ವಾಯು, ತೇಜಸ್ಸು, ಅಪ್, ಪೃಥಿವೀಗಳ ಪೈಕಿ ಆಕಾಶ ಮತ್ತು ವಾಯು ಎಂಬುವುಗಳ ಸಂಯೋಜನೆಯಿಂದ ವಾಯು ಎಂಬ ದೋಷವೂ ತೇಜಸ್ಸು ಎಂಬುವುದರಿಂದ ಪಿತ್ತ ಎಂಬ ದೋಷವೂ ಪೃಥಿವೀ ಮತ್ತು ಅಪ್ ಎಂಬವುಗಳ ಸಂಯೋಜನೆಯಿಂದ ಕಫ ಎಂಬ ದೋಷವು ಸಂಜನಿಸುತ್ತವೆ. ವಾಯು (ವಾತ ಎನ್ನುವುದೂ ಉಂಟು). ಪಿತ್ತ, ಕಫ (ಶ್ಲೇಷ್ಮ ಎನ್ನುವುದೂ ಉಂಟು) ಇವನ್ನು ಒಟ್ಟಾಗಿ ತ್ರಿದೋಷವೆಂದು ಹೇಳುತ್ತೇವೆ. ದೇಹ ಆರೋಗ್ಯವಂತವಾಗಿ ಸುಸ್ಥಿತಿಯಲ್ಲಿ ಇರುವಾಗ ವಾಯು ಪಿತ್ತ, ಕಫಗಳನ್ನು ತ್ರಿಧಾತುಗಳೆಂದು ಕರೆಯುತ್ತೇವೆ. ಇವುಗಳ ಪೈಕಿ ಯಾವುದೇ ಒಂದರ ಹೆಚ್ಚಳ ಅಥವಾ ಕೊರತೆಯಿಂದ ಆರೋಗ್ಯ ಹದಗೆಟ್ಟಾಗ ಅದನ್ನು ದೋಷವೆಂದು ಸೂಚಿಸುತ್ತೇವೆ. ಆದ್ದರಿಂದ ವಾಯು ದೋಷವೆಂದರೆ ವಾಯು ಸಂಬಂಧವಾಗಿ ಆರೋಗ್ಯ ಕೆಟ್ಟಿದೆ ಎಂದರ್ಥ. ಆಧುನಿಕ ವೈದ್ಯವಿಜ್ಞಾನದ ಪರಿಭಾಷೆಯಲ್ಲಿ ಶರೀರವೈಜ್ಞಾನಿಕ ಲಕ್ಷಣವನ್ನು (ಫಿಸಿಯಲಾಜಿಕಲ್ ಸಿಂಪ್ಟಮ್) ಧಾತುವೆಂಬುದಾಗಿಯೂ ರೋಗವೈಜ್ಞಾನಿಕ ಲಕ್ಷಣವನ್ನು (ಪ್ಯಾಥಲಾಜಿಕಲ್ ಸಿಂಪ್ಟಮ್) ದೋಷವೆಂಬುದಾಗಿಯೂ ಕರೆಯುತ್ತೇವೆ.
ವ್ಯಕ್ತಿಯ ಆರೋಗ್ಯ ಚೆನ್ನಾಗಿ ಇರಬೇಕಾದರೆ ಆತನ ಶರೀರದಲ್ಲಿ ವಾತ, ಪಿತ್ತ, ಕಫಗಳೆಂಬ ಮೂರು ದೋಷಗಳು ; ರಸ (ಕೈಲ್) ರಕ್ತ, ಮಾಂಸ, ಮೇದಸ್ಸು, ಅಸ್ಥಿ, ಮಜ್ಜಾ, ಶುಕ್ರಗಳೆಂಬ ಏಳು ಧಾತುಗಳು ; ಮತ್ತು ಸ್ಪೇದ, ಮಲ ಮೂತ್ರ ಇತ್ಯಾದಿ ಕಿಟ್ಟಗಳು ಸಮಸ್ಥಿತಿಯಲ್ಲಿರುವುದು ಅಗತ್ಯ. ಇದು ಸಾಧ್ಯವಾಗಬೇಕಾದರೆ ಈ ಮುಂದಿನ ಹದಿಮೂರು ಅಗ್ನಿಗಳು (ಸೇವಿಸಿದ ಅಹಾರವನ್ನು ಪಾಕಮಾಡುವ ರಾಸಾಯನಿಕ ಕಾರಕಗಳು) ತಮ್ಮ ಕ್ರಿಯೆಯನ್ನು ಸಮರ್ಪಕವಾಗಿ ನಿರ್ವಹಿಸುತ್ತಿರಬೇಕು ; ಪಂಚಭೂತಾಗ್ನಿಗಳು, ಸಪ್ತಧಾತ್ವಗ್ನಿಗಳು ಮತ್ತು ಒಂದು ಜಠರಾಗ್ನಿ.
ನಾವು ಸೇವಿಸಿದ ಅಹಾರ ಅಂತಿಮವಾಗಿ ರಸಧಾತು (ರಸ) ಎನ್ನುವ ರೂಪವನ್ನು ತಳೆದು ದೇಹಪೋಷಣೆ ಹಾಗೂ ಆರೋಗ್ಯವರ್ಧನೆ ಮಾಡುತ್ತದೆ. ಈ ರಸಧಾತು ಶುದ್ಧ ಸ್ಫಟಿಕದಂತೆ ಪರಿಶುದ್ಧವಾಗಿ ಬೆಳ್ಳಗೆ ತೆಳುವಾಗಿರುವುದು. ಇದು ಪುನಃ ಪಾಕಗೊಂಡು ಬೇರೆ ಬೇರೆ ಹಂತಗಳನ್ನು ತಲಪಿ ಅಂತಿಮವಾಗಿ ರಕ್ತಗತವಾಗುತ್ತದೆ.
ವಿವರಗಳು ಕಾಲಾವದಿ
ದಿ ಗಂ ಮಿ ಸೆ ಆಹಾರದಿಂದ ರಸಧಾತು ..... 0 0 28 48 ಕಪೋತವರ್ಣದ ರಸ (ಗ್ರೇ) ..... 0 19 37 12 ಹರಿತವರ್ಣದ ರಸ (ಗ್ರೀನ್) .... 0 20 6 0 ಪದ್ಮವರ್ಣದ ರಸ (ಲೋಟಸ್ ರೆಡ್) ... 0 20 6 0 ಕಿಂಶುಕ ವರ್ಣದ ರಸ (ಡಾರ್ಕ್ ರೆಡ್) .... 0 20 6 0 ಅಲಕ್ತಕ ವರ್ಣದ ರಸ (ಪಿಂಕ್ ರೆಡ್) ... 0 20 6 0
ಮೊತ್ತ .... 5 0 36 0
ಅಲಕ್ತಕ ವರ್ಣದ ರಸವೇ ರಕ್ತ. ಆದ್ದರಿಂದ ಆಹಾರ ಮೊದಲು ರಸಧಾತುವಾಗಿ ಪರಿವರ್ತನೆಗೊಂಡು (ಅದೇ ವೇಳೆ ದೊರೆಯುವ ಕಿಟ್ಟಾಂಶ ಮಲಮೂತ್ರ ರೂಪದಲ್ಲಿ ವಿಸರ್ಜಿತವಾಗುವುದು) ತರುವಾಯ ಈ ಮೇಲೆ ಬರೆದಿರುವ ಐದು ಹಂತಗಳನ್ನು ಕ್ರಮಶಃ ದಾಟಿ ಆರನೆಯ ಹಂತವಾದ ಅಲಕ್ತವರ್ಣದ ರಸ, ಅಂದರೆ ರಕ್ತ ಆಗಲು ಒಟ್ಟು 5 ದಿವಸಗಳು ಮತ್ತು 36 ಮಿನಿಟುಗಳು ಬೇಕಾಗುತ್ತವೆ. ನಾವು ಸೇವಿಸಿದ ಆಹಾರವನ್ನು ರಕ್ತವನ್ನಾಗಿ ಮಾರ್ಪಡಿಸಲು ನಮ್ಮ ದೇಹದಲ್ಲಿ 7 ಧಾತ್ವಗ್ನಿಗಳು 5 ಭೂತಾಗ್ನಿಗಳು ಮತ್ತು 1 ಜಠರಾಗ್ನಿಗಳು ಹೀಗೆ ಒಟ್ಟು 13 ಅಗ್ನಿಗಳಿವೆ.
ಪಂಚಭೂತಾಗ್ನಿಗಳು : ನಮ್ಮ ದೇಹ ಅಂತೆಯೇ ನಾವು ಸೇವಿಸಿದ ಆಹಾರ ಕೂಡ ಪಂಚಭೂತಗಳ ವಿವಿಧ ಸಂಯೋಜನಗೆಳು ಎಂಬುದು ಸರಿಯಷ್ಟೆ.. ಆಹಾರದಲ್ಲಿನ ಆಯಾ ಪಂಚಭೂತಾಂಶವು ಸಂವಾದೀ ಪಂಚಭೂತಾಂಶವನ್ನು ಮಾತ್ರ ಪೋಷಿಸಬಲ್ಲುದು. ಉದಾಹರಣೆÉಗೆ ಆಹಾರದಲ್ಲಿ ಇರುವ ನೀರಿನ ಅಂಶ ದೇಹದಲ್ಲಿ ಇರುವ ನೀರಿನ ಅಂಶವನ್ನು ಪೋಷಿಸುತ್ತದೆ. ಈ ಪೋಷಣ ಕಾರ್ಯವನ್ನು ಸಾಧಿಸುವ ಕಾರಕಗಳಿಗೆ ಪಂಚಭೂತಾಗ್ನಿಗಳೆಂದು ಹೆಸರು. ಆಕಾಶ, ವಾಯು, ತೇಜಸ್ಸು, ಅಪ್ ಮತ್ತು ಪೃಥಿüವೀ ಇವು ಪಂಚಭೂತಾಗ್ನಿಗಳು. ಆಕಾಶ ಎಂದರೆ ಬೇರೆ ಬೇರೆಯಾಗಿ ಇರುವುದೆಂದರ್ಥ. ದೊಡ್ಡ ದೊಡ್ಡ ನಾಳಗಳು ಮತ್ತು ಅತಿಸೂಕ್ಷ್ಮವಾದ ಲೋಮನಾಳಗಳು ಆಕಾಶದ ಸಹಾಯದಿಂದ ರಚಿತವಾಗಿವೆ. ಆಹಾರದಲ್ಲಿ ಇರುವ ಆಕಾಶಾಂಶವನ್ನು ದೇಹದಲ್ಲಿ ಇರುವ ಆಕಾಶ ಮಹಾಭೂತಾಗ್ನಿ ಪಾಕ ಮಾಡಿ ಈ ಮೇಲಿನ ನಾಳಗಳನ್ನು ಪೋಷಿಸುತ್ತದೆ, ಹಾಗೂ ರಕ್ಷಿಸುತ್ತದೆ. ಉಚ್ಛ್ವಾಸ, ನಿಶ್ವಾಸ, ಉನ್ಮೇಷ (ಕಣ್ಣುರೆಪ್ಪೆಗಳನ್ನು ತೆರೆಯುವುದು), ನಿವೇಷ (ರೆಪ್ಪೆಗಳನ್ನು ಮುಚ್ಚುವುದು), ಆಕುಂಚನ (ಮಡಿಸುವುದು, ಪ್ರಸಾರಣ (ಬಿಡಿಸುವುದು), ಗಮನ, ಪ್ರೇರಣ, ಧಾರಣ ಮುಂತಾದವನ್ನು ವಾಯು ಮಹಾಭೂತಾಗ್ನಿ ಪೋಷಿಸುತ್ತದೆ ಹಾಗೂ ರಕ್ಷಿಸುತ್ತದೆ. ಪಿತ್ತ, ಊಷ್ಮಾ (ದೇಹೋಷ್ಣತೆ), ವರ್ಚಸ್ಸು ಇವನ್ನು ತೇಜಸ್ಸು ಮಹಾಭೂತಾಗ್ನಿ ಪೋಷಿಸುತ್ತದೆ ಹಾಗೂ ರಕ್ಷಿಸುತ್ತದೆ. ದ್ರವ, ಸರ (ಹರಿಯುವುದು), ಮಂದ, ಸ್ನಿಗ್ಧ (ಜಿಡ್ಡು), ಮೃದು, ಪಿಚ್ಛಿಲ (ಗೋಂದಿನ ಹಾಗೆ) ಗುಣವಿಶಿಷ್ಟಗಳಾದ ರಸ, ರುಧಿರ, ವಸ (ಟ್ಯಾಲೊ), ಕಫ, ಪಿತ್ತ, ಸ್ವೇದ, ಮೂತ್ರ ಮುಂತಾದವನ್ನು ಅಪ್ ಮಹಾಭೂತಾಗ್ನಿ ಪೋಷಿಸುತ್ತದೆ ಹಾಗೂ ರಕ್ಷಿಸುತ್ತದೆ. ಸ್ಥೂಲವಾದದ್ದು, ಸ್ಥಿರವಾದದ್ದು, ಮೂರ್ತಿ ಮತ್ತಾದದ್ದು, ಗುರು ಚರ ಮತ್ತು ಕಠಿಣ ಗುಣಗಳಿಂದ ಕೂಡಿರುವ ಅಂಗಗಳು ಅಲ್ಲದೇ ನಖ, ಅಸ್ಥಿ, ದಂತವೇಷ್ಟ (ಹಲ್ಲು ಗಾಜು), ಮಾಂಸ, ಚರ್ಮ, ವರ್ಚ (ಮಲ), ಕೇಶ, ಶ್ಮಶ್ರು (ಮೀಸೆ), ಲೋಮ (ದೇಹದ ಇತರ ಭಾಗಗಳಲ್ಲಿರುವ ಕೂದಲು), ಕಂಡರ (ಥಿಕ್ ಲಿಗಮೆಂಟ್) ಇವೆಲ್ಲವನ್ನೂ ಪೃಥಿವೀ ಮಹಾಭೂತಾಗ್ನಿ ಪೋಷಿಸುತ್ತದೆ ಹಾಗೂ ರಕ್ಷಿಸುತ್ತದೆ.
ಜಠರಾಗ್ನಿ : ಇದರಲ್ಲಿ ಆಹಾರ ಪಾಕಗೊಂಡು ಅದರ ಸಾರವಾದ ರಸಧಾತು (ಕೈಲ್) ಲಭಿಸುತ್ತದೆ ಅದೇ ವೇಳೆ ತಿರಸ್ಕøತ ಭಾಗ ಕಿಟ್ಟ ರೂಪದಲ್ಲಿ ಬೇರ್ಪಡುವುದು.
ಧಾತ್ವಗ್ನಿಗಳು : ರಸಧಾತುವಿನಲ್ಲಿ ಇರುವ ಅಗ್ನಿಯಿಂದ ರಸಧಾತು ರಕ್ತಗತವಾಗುತ್ತದೆ. ರಕ್ತಧಾತುವಿನಲ್ಲಿ ಇರುವ ಅಗ್ನಿಯಿಂದ ರಕ್ತಧಾತು ಮಾಂಸವಾಗುತ್ತದೆ. ತರುವಾಯ ಮಾಂಸಧಾತುವಿನಲ್ಲಿ ಇರುವ ಅಗ್ನಿಯಿಂದ ಮಾಂಸಧಾತು ಮೇದಸ್ಸು ಆಗುತ್ತದೆ. ಬಳಿಕ ಮೇದಸ್ಸು ಧಾತುವಿನಲ್ಲಿ ಇರುವ ಅಗ್ನಿಯಿಂದ ಮೇದಸ್ಸುಧಾತು ಅಸ್ಥಿ ಆಗುತ್ತದೆ. ಅನಂತರ ಅಸ್ಥಿಧಾತುವಿನಲ್ಲಿ ಇರುವ ಅಗ್ನಿಯಿಂದ ಅಸ್ಥಿಧಾತು ಮಜ್ಜ ಆಗುತ್ತದೆ. ಆಮೇಲೆ ಮಜ್ಜ ಧಾತುವಿನಲ್ಲಿ ಇರುವ ಅಗ್ನಿಯಿಂದ ಮಜ್ಜಾ ಧಾತು ಶುಕ್ರವಾಗುತ್ತದೆ. ಅಂತಿಮವಾಗಿ ಶುಕ್ರಧಾತುವಿನಲ್ಲಿ ಇರುವ ಅಗ್ನಿಯಿಂದ ಶುಕ್ರಧಾತುವಿನ ಪರಮಸಾರವಾಗಿ ಓಜಸ್ಸು ಉಂಟಾಗುತ್ತದೆ. ಶರೀರವನ್ನು ಜೀವಂತವಾಗಿಯೂ ತೇಜಃಪೂರ್ಣವಾಗಿಯೂ ಕಾಯುವ ಸಾರವಿದು. ಇದರ ಗೈರುಹಾಜರಿಯಲ್ಲಿ ವ್ಯಕ್ತಿ ಖಂಡಿತವಾಗಿಯೂ ಸಾಯುತ್ತಾನೆ.
ನಾವು ಸೇವಿಸಿದ ಆಹಾರ ಈ ಮೇಲೆ ಹೆಸರಿಸಿರುವ ಹದಿಮೂರು ಬಗೆಯ ಅಗ್ನಿಗಳ (ತೇಜೋವೈಶಿಷ್ಟ್ಯಗಳು) ಕ್ರಿಯೆಗಳಿಗೆ ಒಳಪಟ್ಟು ರೂಪಾಂತರಗೊಳ್ಳುತ್ತದೆ. ಇಂಥ ಕ್ರಿಯೆಗಳ ವೇಳೆ ಧಾತುಗಳು, ದೋಷಗಳು, ಕಿಟ್ಟಗಳು ಉಂಟಾಗುವುವು. (ದೇಹಧಾರಣೆಯನ್ನು ಪೋಷಿಸಿ ಕಾಪಾಡುವಂಥವು ಧಾತುಗಳು ; ಇವುಗಳಲ್ಲಿ ವೈಪರೀತ್ಯ ತಲೆದೋರಿದಾಗ ಇವೇ ದೋಷಗಳಾಗುತ್ತವೆ ಎಂಬುದನ್ನು ನೆನಪಿನಲ್ಲಿ ಇಡಬೇಕು). ತ್ರಿದೋಷಗಳ ವಿವರಣೆಯನ್ನೂ ಅವುಗಳಿಂದ ಶರೀರದ ರಕ್ಷಣಕ್ರಮಗಳನ್ನೂ ಈಗ ವಿಮರ್ಶಿಸೋಣ.
ವಾಯು : ವಾಯು ನಿರ್ವಹಿಸುವ ಪಾತ್ರಗಳನ್ನು ಅನುಲಕ್ಷಿಸಿ ಅದನ್ನು ಐದು ಬೇರೆ ಬೇರೆ ಹೆಸರುಗಳಿಂದ ಕರೆಯುವುದಿದೆ - ಪ್ರಾಣ, ಆಪಾನ ವ್ಯಾನ, ಉದಾನ ಮತ್ತು ಸಮಾನ, ದೇಹದಲ್ಲಿ ವಾಯುವು ಎರಡು ರೀತಿಯಲ್ಲಿ ಉತ್ಪತ್ತಿಯಾಗಿ ಸಮಸ್ಥಿತಿಯಲ್ಲಿರುವುದು. 1 ನಾವು ಹೊರಗಿನಿಂದ ಸೇವಿಸುವ ವಾಯು ಶರೀರದ ಒಳಭಾಗದಲ್ಲಿರುವ ಪ್ರಾಣ ಮತ್ತು ಉದಾನ ಎಂಬ ವಾಯುಗಳೊಡನೆ ಸಾಕ್ಷಾತ್ತಾಗಿ ಸೇರಿ ಉರಸ್ಸಿನಲ್ಲಿಯೇ (ಎದೆ) ಆಶ್ರಯ ಪಡೆದು ಇತರ ಮೂರು ವಾಯುಗಳನ್ನು (ಸಮಾನ, ವ್ಯಾನ, ಅಪಾನ) ರಕ್ಷಿಸುತ್ತದೆ. 2 ಆಹಾರ ಪಾಕವಾಗುವಾಗಿನ ಹಂತಗಳು ಮೂರು : ಆಮಾವಸ್ಥೆ (ಮಿಶ್ರಣ ಹಂತ), ಪಚ್ಯಮಾನಾವಸ್ಥೆ (ಪಾಕ ಹಂತ), ಪಕ್ವಾವಸ್ಥೆ (ಸಿದ್ಧವಸ್ತು ಆಗುವ ಹಂತ) ಆಹಾರಪಾಕ ಕ್ರಿಯೆಯ ಮೂರನೆಯ ಹಂತದಲ್ಲಿ ಆಹಾರ ಸ್ವಾಭಾವಿಕವಾಗಿ ಜಠರಾಗ್ನಿಯಿಂದ ಶೋಷಿಸಲ್ಪಟ್ಟು ಕಟು ಅವಸ್ಥೆಯನ್ನು ತಳೆಯುವಾಗ ವಾಯು ಉಂಟಾಗಿ ತ್ರಿದೋಷಗಳ ಪೈಕಿ ಒಂದಾದ ಶರೀರಾಂತರ್ಗತ ವಾಯುವಿನ ಒಡಗೂಡಿ ವೃದ್ಧಿಗೊಂಡು ತನ್ನ ಸಹಜವಾದ ಕಾರ್ಯಗಳನ್ನು ನಿರ್ವಹಿಸುತ್ತದೆ.
ವಾಯು ಸಮಸ್ಥಿತಿಯಲ್ಲಿ ಇರುವಾಗ ವ್ಯಕ್ತಿಗೆ ಕಾರ್ಯದಲ್ಲಿ ಅಧಿಕೋತ್ಸಾಹ ಇರುವುದು ಉಚ್ಛ್ವಾಸ, ನಿಶ್ವಾಸ, ಅಂಗ ಪ್ರತ್ಯಂಗಗಳ ನಿರ್ದಿಷ್ಟ ಚಲನೆಗಳು ಎಲ್ಲವೂ ಸುಗಮವಾಗಿರುತ್ತದೆ. ಮಲ, ಮೂತ್ರ, ಬೆವರು, ವಾಯು, ತೇಗು, ಆಕಳಿಕೆ ಇತ್ಯಾದಿ ಹದಿನಾಲ್ಕು ವಿಧದ ವೇಗಗಳು ತಡೆ ಇಲ್ಲದೆ ಇರುವುವು. ರಸಾದಿ ಸಪ್ತಧಾತುಗಳು ಕ್ರಮಶಃ ವೃದ್ಧಿಗೊಂಡು ಶರೀರಪುಷ್ಟಿ ಆಗುವುದು. ಪಂಚ ಜ್ಞಾನೇಂದ್ರಿಯಗಳು ಅವುಗಳ ಕಾರ್ಯಗಳನ್ನು ಚೆನ್ನಾಗಿ ನಿರ್ವಹಿಸುತ್ತವೆ. ವಾಯು ಸಮಸ್ಥಿತಿಯಲ್ಲಿ ಇಲ್ಲದಾಗ, ಅಂದರೆ ಪ್ರಕೋಪ ಸ್ಥಿತಿಯನ್ನು ಐದಿದಾಗ, ಶರೀರ ಕೃಷವಾಗಿ ಕಪ್ಪು ಬಣ್ಣಕ್ಕೆ ತಿರುಗುತ್ತದೆ; ದೇಹ ನಡುಗ ತೊಡಗುವುದು; ಉಷ್ಣೋಪಚಾರಗಳಲ್ಲಿ ಆಸಕ್ತಿ ಮೂಡುತ್ತದೆ. ಹೊಟ್ಟೆ ಉಬ್ಬರ, ಮಲಬದ್ಧತೆ, ಬಲಹೀನತೆ, ನಿದ್ರಾನಾಶ, ಜ್ಞಾನೇಂದ್ರಿಯಗಳ ಚಟುವಟಿಕೆಗಳಲ್ಲಿ ಅಸ್ಥಿರತೆ, ಅಸಂಬದ್ಧ ಪ್ರಲಾಪಗಳು, ದೇಹದ ಸಮತೋಲದಲ್ಲಿ ಏರುಪೇರು ಉಂಟಾಗಿ ತಲೆ ತಿರುಗುವ ಅನುಭವ ಮುಂತಾದವು ಆರಂಭವಾಗುತ್ತದೆ.
ವಾಯುವಿನಲ್ಲಿ ಇರುವ ಐದು ಬಗೆಗಳನ್ನು ಇಲ್ಲಿ ವಿವರಿಸಿದೆ.
ಪ್ರಾಣವಾಯು : ಇದರ ಪ್ರಧಾನ ಸ್ಥಾನ ಶಿರಸ್ಸು. ಐದು ಜ್ಞಾನೇಂದ್ರಿಯಗಳಿಗೂ ಮನಸ್ಸಿಗೆ ಅಧಿಷ್ಠಾನವಾದ ಹೃದಯಕ್ಕೂ ಇರುವ ಸಂಬಂಧ ಕಡಿದು ಹೋಗದಂತೆ ರಕ್ಷಿಸುವುದೂ ನಾವು ಸೇವಿಸಿದ ಆಹಾರವನ್ನು ಆಮಾಶಯಕ್ಕೆ ತಲಪಿಸುವುದೂ ಪ್ರಾಣವಾಯುವಿನ ಕೆಲಸ.
ಅಪಾನವಾಯು : ಇದರ ಪ್ರಧಾನ ಸ್ಥಾನ ನಾಭಿಯ ಕೆಳಭಾಗದಲ್ಲಿದೆ. ಶುಕ್ರ (ಸೆಮೆನ್), ಆರ್ತವ (ವೂಂಬ್) ಮಲ, ಮೂತ್ರ ಮತ್ತು ಗರ್ಭಗಳನ್ನು ಕಾಲಕ್ಕೆ ಸರಿಯಾಗಿ ನಿಷ್ಕ್ರಿಮಿಸುವಂತೆ ಮಾಡುವುದೂ, ಭ್ರೂಣವನ್ನು ಯುಕ್ತ ವೇಳೆಯ ತನಕ ಗರ್ಭಾಶಯದೊಳಗೆ ಹಿಡಿದಿಟ್ಟು ರಕ್ಷಿಸುವುದೂ ಅಪಾನ ವಾಯುವಿನ ಕೆಲಸ.
ವ್ಯಾನ ವಾಯು : ಇದರ ಪ್ರಧಾನ ಸ್ಥಾನ ಹೃದಯ. ಶರೀರದಲ್ಲಿ ಅತ್ಯಂತ ಶೀಘ್ರಗತಿಯಿಂದ ಸಂಚರಿಸಬಲ್ಲುದು. ಶುದ್ಧ ಹಾಗೂ ಮಲಿನ ರಕ್ತ, ರಸಧಾತು, ನಿರ್ದಿಷ್ಟ ಗ್ರಂಥಿಗಳ ಸ್ರಾವಗಳು ಇವು ಹರಿಯುವ ವೇಗವನ್ನು ಇದು ತ್ವರೆಗೊಳಿಸುತ್ತದೆ. ದೇಹದ ಈ ಮುಂದಿನ ಐದು ವಿಧವಾದ ಚಲನೆಗಳನ್ನು ಇದು ಕಾಪಾಡಿಕೊಳ್ಳುವುದು; ಮೇಲೆತ್ತುವುದು, ಕೆಳಬಗ್ಗುವುದು, ಮಡಿಸುವುದು, ಲಂಬಿಸುವುದು ಮತ್ತು ಇತರ ಬಗೆಯ ಚಲನೆಗಳು. ಬೆವರು ಮತ್ತು ದುಷ್ಟ ರಕ್ತವನ್ನು ಹೊರ ಹಾಕುವುದರಲ್ಲಿಯೂ ಕಣ್ಣಿನ ರೆಪ್ಪೆಗಳನ್ನು ಮುಚ್ಚಲು ಮತ್ತು ತೆರೆಯಲು ನಿರ್ದೇಶನ ನೀಡುವುದರಲ್ಲಿಯೂ ಶುಕ್ರವನ್ನು ಗರ್ಭಾಶಯದ ಒಳಗಡೆಗೆ ಒಯ್ದು ಅಲ್ಲಿರುವ ಆರ್ತವದೊಡನೆ ಸಂಗಮಿಸಿ ಭ್ರೂಣವನ್ನು ಉತ್ಪತ್ತಿ ಮಾಡುವುದರಲ್ಲಿಯೂ ವ್ಯಾನ ವಾಯುವಿನ ಪಾತ್ರ ಉಂಟು.
ಉದಾನ ವಾಯು : ಇದರ ಪ್ರಧಾನ ಸ್ಥಾನ ಉರಸ್ಸು (ಎದೆ). ಪಿಸುಮಾತು, ಗಟ್ಟಿ ಅರಚು, ಹಾಡುಗಾರಿಕೆ ಇತರ ಶಬ್ದಗಳ ಅನುಕರಣೆ ಈ ಕ್ರಿಯೆಗಳಲ್ಲಿ ಉದಾನ ವಾಯುವಿನ ಪಾತ್ರ ಉಂಟು. ಶರೀರದ ಬಲೋತ್ಸಾಹಗಳನ್ನೂ ಮನಸ್ಸಿನ ಜ್ಞಾಪಕ ಸಾಮಥ್ರ್ಯವನ್ನೂ ವೃದ್ಧಿಗೊಳಿಸುವುದು ಕೂಡ ಇದರ ಕ್ರಿಯೆಯೇ.
ಸಮಾನ ವಾಯು : ಇದರ ಪ್ರಧಾನ ಸ್ಥಾನ ಜಠರಾಗ್ನಿ ಸಮೀಪ ಉಂಟು. ಪಾಚಕ ಪಿತ್ತವನ್ನು ಪಚನಕ್ರಿಯೆಯಲ್ಲಿ ನಿಯೋಜಿಸುವುದು ಮತ್ತು ಅದರ ತೇಜಸ್ಸನ್ನು ವೃದ್ಧಿ ಮಾಡುವುದು, ಶರೀರದಲ್ಲಿ ಬೆವರು ಮೂತ್ರ ಸ್ತನ್ಯ ಇತ್ಯಾದಿಗಳ ಹರಿವಿಗೆ ರೋಧವಿಲ್ಲದಂತೆ ಕಾಪಾಡುವುದು. ಪಾಕಕ್ರಿಯೆಯಲ್ಲಿ ಸಾರಭಾಗ ಮತ್ತು ಕಿಟ್ಟ ಭಾಗ ಪರಸ್ಪರ ಬೆರೆಯದಂತೆ ಬೇರ್ಪಡಿಸಿ ಕಿಟ್ಟ ಭಾಗವನ್ನು ವಿಸರ್ಜನೆಗೆ ಅನುಕೂಲವಾಗುವಂತೆ ಕೆಳಭಾಗಕ್ಕೆ ರವಾನಿಸುವುದು ಇವೇ ಮುಂತಾದವು ಸಮಾನ ವಾಯುವಿನ ಕ್ರಿಯೆಗಳು.
ಪಿತ್ತ : ಇದು ಸಹ ದೇಹದಲ್ಲಿ ಎರಡು ರೀತಿಗಳಲ್ಲಿ ಉತ್ಪತ್ತಿ ಆಗಿ ಸಮ ಸ್ಥಿತಿಯಲ್ಲಿರುವುದು. 1 ಆಹಾರ ಪಾಕವಾಗುವಾಗಿನ ಎರಡನೆಯ ಹಂತದಲ್ಲಿ ಇದು ಪಚ್ಯಮಾನಾಶಯದಲ್ಲಿ (ಡಿಯೋಡೀನಮ್) ಉತ್ಪತ್ತಿ ಆಗಿ ಪಾಕಸಾಧನವಾದ ಪಾಚಕ ಪಿತ್ತವನ್ನು ಪೋಷಿಸುತ್ತದೆ. 2 ಹೀಗೆ ಅಗ್ನ್ಯಾಶಯದಲ್ಲಿನ (ಇದು ಪಚ್ಯಮಾನಾಶವೇ) ತೇಜೋವಿಶೇಷದಿಂದ ಪೋಷಿತವಾದ ಪಿತ್ತ (ಪಾಚಕ ಪಿತ್ತ) ತನ್ನ ತೇಜಸ್ಸಿನ ಬಲದಿಂದ ಆಲೋಚಕ, ಭ್ರಾಜಕ, ರಂಜಕ, ಸಾಧಕಗಳೆಂಬ ಉಳಿದ ನಾಲ್ಕು ವಿಧದ ಪಿತ್ತಗಳನ್ನು ಸಹ ವೃದ್ಧಿ ಮಾಡುತ್ತದೆ.
ಪಿತ್ತ ಸಮಸ್ಥಿತಿಯಲ್ಲಿ ಇರುವಾಗ ವ್ಯಕ್ತಿಯ ಪಚನ ಸಾಮಥ್ರ್ಯ ಸಮರ್ಪಕವಾಗಿರುವುದು. ದೇಹೋಷ್ಣತೆಯಲ್ಲಿ ಸಮತೋಲವೂ ಕಣ್ಣುಗಳ ಕಾರ್ಯದಲ್ಲಿ ತೃಪ್ತಿಯೂ ಇರುವುವು. ಸಹಜವಾದ ಹಸಿವು ಬಾಯಾರಿಕೆಗಳಿದ್ದು ಬಾಯಿ ರುಚಿ ಬಲು ಚೆನ್ನಾಗಿರುವುದು. ದೇಹ ಪ್ರಕಾಶಮಾನವಾಗಿರುವುದು. ಮಿದುಳು ತೀವ್ರ ಚಟುವಟಿಕೆಯಿಂದ ಕೆಲಸ ಮಾಡುವುದು. ಪಿತ್ತ ಸಮಸ್ಥಿತಿಯಲ್ಲಿ ಇಲ್ಲದಾಗ, ಅಂದರೆ ಪ್ರಕೋಪ ಸ್ಥಿತಿಯನ್ನು ಐದಿದಾಗ, ಅಕಾಲದಲ್ಲಿ ಹಸಿವು, ನಿದ್ರಾರಾಹಿತ್ಯ, ಹಳದಿ ಬಣ್ಣದಿಂದ ಕೂಡಿದ ಮಲಮೂತ್ರ ಬೆವರು ಇತ್ಯಾದಿಗಳು ತಲೆದೋರುವುವು. ಕಣ್ಣುಗಳ ಹಾಗೂ ಚರ್ಮದ ಬಣ್ಣ ಕೂಡ ಹಳದಿ ಆಗುತ್ತದೆ.
ಪಿತ್ತದಲ್ಲಿ ಇರುವ ಐದು ಬಗೆಗಳನ್ನು ಇಲ್ಲಿ ವಿವರಿಸಿದೆ.
ಪಾಚಕ ಪಿತ್ತ : ಇದು ಅಮಾಶಯ ಮತ್ತು ಪಕ್ವಾಶಯಗಳ ನಡುವೆ ಇದೆ. ಆಹಾರದ ಪಾಕಕ್ರಿಯೆಯಲ್ಲಿ ಇದರ ಪಾತ್ರ ಬಲು ಮುಖ್ಯವಾದದ್ದು. ದೋಷಗಳು, ರಸ, ಮೂತ್ರ, ಪುರಿಷ (ಮಲ)ಗಳನ್ನು ಇದು ಬೇರ್ಪಡಿಸುತ್ತದೆ. ಉಳಿದ ನಾಲ್ಕು ಬಗೆಯ ಪಿತ್ತಗಳಿಗೆ ಪೋಷಕವಾಗಿ ಕಾರ್ಯ ನಿರ್ವಹಿಸುವುದು.
ಆಲೋಚಕ ಪಿತ್ತ : ಇದರ ಸ್ಥಾನ ನೇತ್ರಗಳಲ್ಲಿದೆ. ಇದಕ್ಕೆ ಆಲೋಚನಾಗ್ನಿ ಎಂಬ ಹೆಸರೂ ಉಂಟು. ಇದಕ್ಕೆ ರೂಪಗ್ರಹಣ ಹಾಗೂ ವಿಭೇದನ ಸಾಮಥ್ರ್ಯ ಉಂಟು. ವಿಶೇಷವಾಗಿ ಇಂದ್ರಿಯಗಳಿಗೂ ಮನಸ್ಸಿಗೂ ನಡುವೆ ಇರುವ ಸಂಬಂಧವನ್ನು ಕಾಪಾಡುವುದು ಆಲೋಚಕ ಪಿತ್ತದ ಕೆಲಸ.
ಭ್ರಾಜಕ ಪಿತ್ತ : ಇದರ ಸ್ಥಾನ ಚರ್ಮದಲ್ಲಿದೆ. ಇದಕ್ಕೆ ಭ್ರಾಜಕಾಗ್ನಿ ಎಂಬ ಹೆಸರೂ ಉಂಟು. ಚರ್ಮದ ಹೊಳಪನ್ನು ಕಾಪಾಡುವುದು ಇದರ ಮುಖ್ಯ ಕೆಲಸ.
ರಂಜಕ ಪಿತ್ತ : ಯಕೃತ್ ಮತ್ತು ಪ್ಲೀಹಗಳಲ್ಲಿದೆ. ಶುದ್ಧ ಬಿಳುಪಾಗಿರುವ ರಸಧಾತುವಿಗೆ ಬಣ್ಣವನ್ನು ಇದು ಒದಗಿಸುವುದರಿಂದ (ರಂಜನ ಕ್ರಿಯೆ) ಇದಕ್ಕೆ ರಂಜಕಾಗ್ನಿ ಎಂಬ ಹೆಸರೂ ಉಂಟು.
ಸಾಧಕ ಪಿತ್ತ : ಇದರ ಸ್ಥಾನ ಹೃದಯದಲ್ಲಿದೆ. ಮನಸ್ಸಿನಿಂದ ಪ್ರೇರಣೆ ಆಗುವ ಕರ್ಮಗಳನ್ನು ಇಂದ್ರಿಯಗಳು ನಿರ್ವಹಿಸುವಂತೆ ಇದು ಇಂದ್ರಿಯಗಳಿಗೆ ಆದೇಶ ನೀಡುವುದರಿಂದ ಇದಕ್ಕೆ ಸಾಧಕಾಗ್ನಿ ಎಂಬ ಹೆಸರೂ ಉಂಟು.
ಕಫ : ಇದು ಸಹ ದೇಹದಲ್ಲಿ ಎರಡು ರೀತಿಗಳಲ್ಲಿ ಉತ್ಪತ್ತಿ ಆಗಿ ಸಮಸ್ಥಿತಿಯಲ್ಲಿರುವುದು. 1 ಆಮಾಶಯದಲ್ಲಿ ನಡೆವ ಆಹಾರ ಪಾಕಕ್ರಿಯೆಯ ಮೊದಲನೆಯ ಹಂತದಲ್ಲಿ ಪಾಕಾವಸ್ಥೆಯಲ್ಲಿನ ಮಾಧುರ್ಯ, ಶೈತ್ಯ, ಪಿಚ್ಛಿಲ (ಅಂಟುತನ) ಸ್ವಭಾವಗಳಿಂದ ಕಫದ ಉತ್ಪತ್ತಿ ಆಗುತ್ತದೆ. ಇದರಲ್ಲಿ ಐದು ಬಗೆಗಳಿವೆ. ಇವುಗಳ ಪೈಕಿ ಮೊದಲನೆಯದಾದ ಅವಲಂಬಕ ತನ್ನ ಸ್ಥಾನದಲ್ಲಿಯೇ ಇದ್ದು ಇವುಗಳ ಕ್ಲೇದಕ, ಬೋಧಕ, ತರ್ಪಕ, ಸಂಶ್ಲೇಷಕ ಎಂಬ ಉಳಿದ ನಾಲ್ಕು ವಿಧಗಳನ್ನು ತನ್ನ ಸ್ರವಣ ಧರ್ಮದಿಂದ ಪೋಷಿಸುತ್ತದೆ. (ಅವಲಂಬಕ ಎಂಬ ಹೆಸರೇ ಇದನ್ನು ಸೂಚಿಸುವುದು) 2 ರಸಧಾತು ದೇಹದ ಎಲ್ಲ ಕಡೆಗಳಲ್ಲಿಯೂ ಸಂಚರಿಸುತ್ತ ಪಾಕಗೊಳ್ಳುತ್ತದೆ. ಅದೇ ವೇಳೆ ಕಫ ಮಲರೂಪದಲ್ಲಿ ತಯರಾಗುವುದು. (ರಸಧಾತುವಿನ ಮಲವಾಗಿ ದೊರೆವ ಕಫ ಆಹಾರದ ಮಲವಾಗಿ ದೊರೆವ ವರ್ಚ ಅಥವಾ ಶಕೃತ್‍ಗಿಂತ ಬೇರೆ ಆದದ್ದು). ಇದು ಈ ಮೇಲೆ ಹೇಳಿದ ಐದು ವಿಧ ವಿಧವಾದ ಕಫಗಳನ್ನು ಸಹ ಪೋಷಿಸುತ್ತದೆ.
ಕಫ ಸಮಸ್ಥಿತಿಯಲ್ಲಿ ಇರುವಾಗ ವ್ಯಕ್ತಿಯ ಅಂಗ ಪ್ರತ್ಯಂಗಗಳಲ್ಲಿ ಸ್ಥಿರತೆ ಮತ್ತು ಶರೀರದ ಸಂಧಿಗಳಲ್ಲಿ ಸ್ನಿಗ್ಧತೆ (ಜಿಡ್ಡಿನಿಂದ ಕೂಡಿರುವ ಸ್ಥಿತಿ) ಇರುವುವು. ಹೀಗಾಗಿ ವ್ಯಕ್ತಿಯ ಚಲನವಲನಗಳಲ್ಲಿ ಚಟುವಟಿಕೆ ಇರುವುದು ಮನಸ್ಸಿನಲ್ಲಿ ಯಾವಾಗಲೂ ಶಾಂತ ಮತ್ತು ತೃಪ್ತ ಭಾವಗಳು ಮೂಡಿರುತ್ತವೆ. ಕಫ ಸಮಸ್ಥಿತಿಯಲ್ಲಿ ಇಲ್ಲದಾಗ, ಅಂದರೆ ಪ್ರಕೋಪ ಸ್ಥಿತಿಯನ್ನು ಐದಿದಾಗ ಅಗ್ನಿಮಾಂದ್ಯ, ಬಾಯಲ್ಲಿ ನೀರು ಬರುವುದು, ಕಾರ್ಯದಲ್ಲಿ ನಿರುತ್ಸಾಹ, ಶರೀರ ಭಾರವಾಗುವುದು - ಇವೆಲ್ಲ ಲಕ್ಷಣಗಳು ಪ್ರಕಟವಾಗುತ್ತವೆ. ದೇಹ ಅತಿಯಾಗಿ ಬೆಳುಕರಿಸಿ ಒಂದು ವಿಧದ ಶೈತ್ಯ ಭಾವನೆ ಮೂಡಬಹುದು. ಅಂಗ ಪ್ರತ್ಯಂಗಗಳಲ್ಲಿ ಬಿಗಿತ ತಪ್ಪಿದಂತಿರುತ್ತದೆ. ಕಾಸ (ಕೆಮ್ಮು) ಮತ್ತು ಶ್ವಾಸ (ದಮ್ಮು) ರೋಗಗಳು ಬರಬಹುದು. ಅತಿಯಾದ ನಿದ್ರೆ ಮತ್ತು ತೂಕಡಿಕೆಗಳಿಂದ ಕಾರ್ಯಾಚರಣೆಯಲ್ಲಿ ನಿರುತ್ಸಾಹ ಮೂಡುವುದು ಅಪರೂಪವೇನಲ್ಲ.
ಕಫದಲ್ಲಿ ಇರುವ ಐದು ಬಗೆಗಳನ್ನು ಇಲ್ಲಿ ವಿವರಿಸಿದೆ.
ಅವಲಂಬಕ ಕಫ : ಇದರ ಸ್ಥಾನ ಉರಸ್ಸಿನಲ್ಲಿದೆ. ತ್ರಿಕ (ಮೂರು ಮೂಳೆಗಳ ಸಂಧಿ ಸ್ಥಳ) ಮತ್ತು ಹೃದಯಗಳಿಗೆ ಸಾಧಕ ಪಿತ್ತದ ತೇಜಸ್ಸಿನಿಂದ ತೊಂದರೆ ಆಗದಂತೆ ಇದು ರಕ್ಷಣೆ ನೀಡುತ್ತದೆ. ಅದೇ ರೀತಿ ಉಳಿದ ನಾಲ್ಕು ವಿಧದ ಕಫಗಳಿಗೆ ಸಹ ತನ್ನ ಜಿನುಗುವ ಮತ್ತು ಅಪ್ಯಾಯನ ಧರ್ಮಗಳಿಂದ ಪೋಷಣೆ ಒದಗಿಸುತ್ತದೆ. ದೇಹದಲ್ಲಿ ನೀರಿನ ಪ್ರಮಾಣದಲ್ಲಿ ಕೊರತೆ ತಲೆದೋರದಂತೆ ನೋಡಿಕೊಳ್ಳುವುದು.
ಕ್ಲೇದಕ ಕಫ : ಇದರ ಸ್ಥಾನ ಆಮಾಶಯದಲ್ಲಿದೆ. ನಾವು ಸೇವಿಸಿದ ಆಹಾರದ ಘನಭಾಗವನ್ನು ಚೂರ್ಣೀಕರಿಸಿ ತನ್ನ ಜಿನುಗುವ ಸ್ವಭಾವದಿಂದ ಅದಕ್ಕೆ ಮಾರ್ದವತೆ ಕೊಟ್ಟು ಸುಖವಾಗಿ ಪಾಕವಾಗುವಂತೆ ಮಾಡುತ್ತದೆ. ಆಹಾರ ಆಮಾಶಯವನ್ನು ತಲಪಿದ ಬಳಿಕ ಅದರ ಜೀರ್ಣಕ್ಕೆ ಬೇಕಾಗುವಷ್ಟು ನೀರನ್ನು ಇದು ಒದಗಿಸುವುದು.
ಬೋಧಕ ಪಿತ್ತ : ಇದರ ಸ್ಥಾನ ನಾಲಗೆಯ ಮೂಲ ಮತ್ತು ಕಂಠಗಳಲ್ಲಿ ಇದೆ. ಆಹಾರದ ರಸ, ಗುಣ, ಸ್ವಭಾವ ಇತ್ಯಾದಿಗಳನ್ನು ನಾಲಗೆ ಅರಿಯುವಲ್ಲಿ ಬೋಧಕ ಪಿತ್ತದ ನೆರವು ಬೇಕಾಗುತ್ತದೆ.
ತರ್ಪಕ ಪಿತ್ತ : ಇದರ ಸ್ಥಾನ ಶಿರಸ್ಸಿನಲ್ಲಿದೆ. ಇದು ಇಂದ್ರಿಯಗಳಿಗೂ ಅವುಗಳ ವಿಷಯಗಳಿಗೂ ನಡುವಿನ ಜ್ಞಾನವನ್ನು ಸಮಸ್ಥಿತಿಯಲ್ಲಿ ಕಾಪಾಡಿಕೊಂಡು ಬರುವುದು.
ಸಂಶ್ಲೇಷಕ ಪಿತ್ತ : ಇದರ ಸ್ಥಾನ ಶರೀರದಲ್ಲಿನ ಸಂಧಿ ಪ್ರದೇಶಗಳಲ್ಲಿದೆ. ಇದರ ಸಹಾಯದಿಂದ ಸಂಧಿಗಳಲ್ಲಿನ ನಿರ್ದಿಷ್ಟ ಚಲನೆಗಳು ಮನಸ್ಸಿನ ಆದೇಶದಂತೆ ನಡೆಯುತ್ತವೆ. ತನ್ನ ಸ್ರವಣ ಧರ್ಮದಿಂದ ಇದು ಎಲ್ಲ ಸಂಧಿ ಪ್ರದೇಶಗಳನ್ನೂ ಶೋಷಣೆ ಆಗದಂತೆ ರಕ್ಷಿಸುತ್ತದೆ.
ಇದುವರೆಗೆ ತ್ರಿದೋಷಗಳು, ರಸಾದಿ ಸಪ್ತಧಾತುಗಳು ಮಲಮೂತ್ರಾದಿ ಕಿಟ್ಟಗಳು ಪೃಥಿವ್ಯಾದಿ ಪಂಚಮಹಾಭೂತಗಳು ಇತ್ಯಾದಿಗಳ ಸ್ವರೂಪ, ಉತ್ಪತ್ತಿ, ಗುಣಗಳು, ಇವು ಸಮಸ್ಥಿತಿಯಲ್ಲಿ ಇರುವಾಗ ಶರೀರಕ್ಕೆ ದೊರೆಯುವ ಪ್ರಯೋಜನಗಳು, ವಿಷಮಸ್ಥಿತಿಯನ್ನು ಐದಿದಾಗ ಶರೀರಕ್ಕೆ ಒದಗುವ ಕೆಡುಕುಗಳು ಇತ್ಯಾದಿಗಳನ್ನು ಸ್ಥೂಲವಾಗಿ ತಿಳಿದದ್ದಾಯಿತು. ಶರೀರದ ರಕ್ಷಣೆಗೆ ಅಲ್ಲದೆ ದೀರ್ಘಕಾಲ ರೋಗ ರಹಿತವಾಗಿದ್ದು ನಿಜವಾದ ಆರೋಗ್ಯಭಾಗ್ಯವನ್ನು ಅನುಭವಿಸುವುದಕ್ಕೆ ಆರೋಗ್ಯ ನಿಯಮದ ಕಟ್ಟುನಿಟ್ಟಾದ ಅನುಷ್ಠಾನ ಅತ್ಯಾವಶ್ಯಕವಾಗಿದೆ. ತ್ರಿದೋಷಗಳು ಹೇಗೆ ಮತ್ತು ಯಾವ ರೀತಿಯಲ್ಲಿ ತಮ್ಮನ್ನು ಸಂರಕ್ಷಿಸುತ್ತವೆ, ಇವುಗಳಿಗೆ ಪರಸ್ಪರ ಯಾವ ರೀತಿಯ ಸಂಬಂಧಗಳು ಇವೆ ಎಂಬುದರ ಅರಿವಿನಿಂದ ಮಾತ್ರ ಈ ಅನುಷ್ಠಾನ ಸಾಧ್ಯ. ಈ ಸಂಬಂಧಗಳನ್ನು ಇಲ್ಲಿ ವಿವರಿಸಿದೆ.
ಸಮಸ್ತ ವಿಶ್ವವೂ ಪಂಚಭೂತಾತ್ಮಕವಾಗಿರುವುದರಿಂದ ಎಲ್ಲ ಪ್ರಾಣಿಗಳೂ ಪಂಚಭೂತಾತ್ಮಕ ಎಂದು ಸಿದ್ಧವಾಗುವುದು. ಆದ್ದರಿಂದ ರಸಾದಿ ಸಪ್ತಧಾತುಗಳಲ್ಲಿ ತಲೆದೋರುವ ಏರುಪೇರುಗಳನ್ನು ಪಾಂಚಭೌತಿಕ ದ್ರವ್ಯಗಳ ಸಮರ್ಪಕ ಉಪಯೋಗದಿಂದ ಸರಿಪಡಿಸುವುದು ಸಾಧ್ಯ. ಇದನ್ನು ಮಾಡುವಂಥವು ಪಾಂಚಭೌತಿಕ ದ್ರವ್ಯಗಳಲ್ಲಿ ಅಡಕವಾಗಿರುವ ಮಧುರ, ಆಮ್ಲ, ಲವಣ, ತಿಕ್ತ, ಕಟು ಹಾಗೂ ಕಷಾಯಗಳೆಂಬ ಷಡ್ರಸಗಳು. ಇವು ಪಂಚಮಹಾಭೂತಗಳ ವಿಧ್ಯುಕ್ತ ಮಿಶ್ರಣದಿಂದ ಉತ್ಪನ್ನವಾಗುತ್ತವೆ. ಅಂದರೆ ಪ್ರತಿಯೊಂದು ರಸದಲ್ಲಿಯೂ ಪಂಚಮಹಾಭೂತಗಳು ಇದ್ದರೂ ಯಾವುದೇ ಒಂದು ವಿಶಿಷ್ಟ ರಸದಲ್ಲಿ ಎರಡು ನಿರ್ದಿಷ್ಟ ಭೂತಗಳು ಅಧಿಕಾಂಶದಿಂದ ಮೇಳೈಸಿರುತ್ತವೆ : ಮಧುರ ರಸದಲ್ಲಿ ಅಪ್ ಮತ್ತ ಪೃಥಿವೀ ಆಧಿಕ್ಯ, ಆಮ್ಲರಸದಲ್ಲಿ ಅಗ್ನಿ ಮತ್ತು ಪೃಥಿವೀ ಆಧಿಕ್ಯ, ಲವಣರಸದಲ್ಲಿ ಅಗ್ನಿ ಮತ್ತು ಅಪ್ ಆಧಿಕ್ಯ, ತಿಕ್ತರಸದಲ್ಲಿ ಆಕಾಶ ಮತ್ತು ವಾಯು ಆಧಿಕ್ಯ, ಕಟು ರಸದಲ್ಲಿ ವಾಯು ಮತ್ತು ಅಗ್ನಿ ಆಧಿಕ್ಯ, ಕಷಾಯ ರಸದಲ್ಲಿ ವಾಯು ಮತ್ತು ಪೃಥಿವೀ ಆಧಿಕ್ಯ. ಪಂಚಮಹಾಭೂತಗಳು ದ್ರವ್ಯಗಳಲ್ಲಿ ಆಶ್ರಯವನ್ನು ಹೊಂದಿರುವಾಗ ಮಾತ್ರ ಇಂದ್ರಿಯಗಳಿಗೆ ಗೋಚರವಾಗುತ್ತವೆ. ಉದಾಹರಣೆಗೆ ಮಧುರ ರಸವನ್ನು ಅದು ದ್ರವ್ಯಾಶ್ರಿತವಾಗಿರುವಾಗ ಮಾತ್ರ ನಾವು ಅರಿಯಬಹುದು. ಹೇಗೆಂದರೆ ಹಾಲು, ಕಬ್ಬು, ದ್ರಾಕ್ಷಿ, ತುಪ್ಪ ಇತ್ಯಾದಿಗಳನ್ನು ಆಸ್ವಾದಿಸಿದಾಗ ಮಾತ್ರ ಅವುಗಳಲ್ಲಿ ಮಧುರ ರಸ ಉಂಟೆಂದು ನಮಗೆ ತಿಳಿಯುತ್ತದೆ.
ಷಡ್ರಸಗಳು ದೇಹಾರೋಗ್ಯವನ್ನು ಕಾಪಾಡಲು ಯಾವ ತೆರನಾಗಿ ನೆರವಾಗುವುವು ಎನ್ನುವುದನ್ನು ಅರಿಯಲು ನಾವು ಈ ಮುಂದಿನ ಸಂಗತಿಗಳನ್ನು ತಿಳಿದುಕೊಂಡಿರಬೇಕು :
1 ಪಂಚಮಹಾಭೂತಗಳ ಶಾಶ್ವತ ಗುಣ. ಧರ್ಮ (ಅಂದರೆ ಕ್ರಿಯೆಯಲ್ಲಿ ನಿರ್ವಹಿಸುವ ಪಾತ್ರ) ಮತ್ತು ಸ್ವಭಾವ. 2 ಪಂಚಮಹಾಭೂತಗಳ ಪರಸ್ಪರ ವಿಧ್ಯುಕ್ತ ಮಿಶ್ರಣದಿಂದ ಉತ್ಪನ್ನವಾಗುವ ಷಡ್ರಸಗಳ ಗುಣ, ಧರ್ಮ ಮತ್ತು ಸ್ವಭಾವ. 3 ಪಂಚಮಹಾಭೂತಗಳ ಉತ್ಪನ್ನಗಳೇ ವಾತ ಪಿತ್ತ ಕಫ ಎಂಬ ತ್ರಿಧಾತುಗಳು (ತ್ರಿದೋಷಗಳು). 4 ಪಾಂಚಭೌತಿಕಗಳಾದ ವಾತಾದಿಗಳ ಅಧಿಷ್ಠಾನವೇ (ಅಂದರೆ ಆಶ್ರಯ) ರಸಾದಿ ಸಪ್ತಧಾತುಗಳು ಹಾಗೂ ಕಿಟ್ಟಗಳು.
ಪಂಚಮಹಾ ಭೂತ ಸಂಬಂಧ ವಾದವು ಗುಣ ಧರ್ಮ ಸ್ವಭಾವ
ಆಕಾಶ್ಯ
(ಆಕಾಶಸಂಬಂಧವಾದದ್ದು)
ಸೂಕ್ಷ್ಮ
ವಿಶದ ಲಘು
ಸೌಷಿರ್ಯ (ರಂಧ್ರಮಯ) ವೈಶದ್ಯ ಲಘುತ್ವ ಶಬ್ದಗ್ರಹಣಕ್ಕೆ ನೆರವಾಗುತ್ತದೆ
ವಾಯವ್ಯ
ರೂಕ್ಷ (ಜಿಡ್ಡಿಲ್ಲದೆ ಇರುವುದು) ವಿಶದ ಲಘು ರೂಕ್ಷತೆ
ವೈಶದ್ಯ
ಲಘುತ್ವ ಒಣಗಿಸುವುದು ಸ್ಪರ್ಶ ಗ್ರಹಣಕ್ಕೆ ನೆರವಾಗುತ್ತದೆ
ಆಗ್ನೇಯ ರೂಕ್ಷ ತೀಕ್ಷ್ಣ ಉಷ್ಣ ವಿಷದ ಸೂಕ್ಷ್ಮ
ಸುಡುವುದು (ದಾಹ) ಕಾಂತಿ ವರ್ಣ ಪ್ರಕಾಶ
ರೂಪ ಗ್ರಹಣಕ್ಕೆ ನೆರವಾಗುತ್ತದೆ
ಆಪ್ಯ
ದ್ರವ ಶೀತ ಗುರು ಸ್ನಿಗ್ಧ ಮಂದ ಸಾಂದ್ರ
ಸ್ನೇಹನ ಅಂತಸ್ಸ್ರಾವ ಜಿನುಗುವುದು ತೃಪ್ತಿ ಬಂಧನ (ಬೈಂಡಿಂಗ್) ರಸ(ರುಚಿ)ಗ್ರಹಣಕ್ಕೆ ನೆರವಾಗುತ್ತದೆ
ಪಾರ್ಥಿವ
ಗುರು ಸ್ಥೂಲ ಸ್ಥಿರ
ಗೌರವ
ಸ್ಥಿರತ್ವ
ಕಾಠಿನ್ಯ ಒಗ್ಗೂಡಿಸುವುದು
ಗಂಧ (ಘ್ರಾಣಸಂಬಂಧ) ಗ್ರಹಣಕ್ಕೆ ನೆರವಾಗುತ್ತದೆ
ಪಾಂಚಭೌತಿಕವಾದ ನಮ್ಮ ಶರೀರವನ್ನು ಸಮಸ್ಥಿತಿಯಲ್ಲಿ ಕಾಪಾಡಿಕೊಂಡು ಬರಲು ಷಡ್ರಸಗಳು ಪ್ರಧಾನ ಕಾರಣಗಳು. ಇವುಗಳ ಕಾರ್ಯ ಸಾಮಥ್ರ್ಯಕ್ಕೆ ಆಯುರ್ವೇದದಲ್ಲಿ ವೀರ್ಯ ಎಂಬ ಪಾರಿಭಾಷಿಕ ಪದದ ಬಳಕೆ ಉಂಟು. ವಿಶ್ವವಿಡೀ ಅಗ್ನಿಷೋಮೀಯವಾಗಿರುವುದರಿಂದ (ಅಗ್ನಿ ಮತ್ತು ಸೋಮ ಗುಣಾತ್ಮಕ) ಈ ವೀರ್ಯವನ್ನು ಉಷ್ಣವೀರ್ಯವೆಂದೂ (ಅಗ್ನಿ ಗುಣಾತ್ಮಕ) ಶೀತ ವೀರ್ಯವೆಂದೂ (ಸೋಮ ಗುಣಾತ್ಮಕ) ವರ್ಗೀಕರಿಸಲಾಗಿದೆ. ತಲೆಸುತ್ತು ಮತ್ತು ಬೆವರು ಬರಿಸುವುದು, ಬಾಯಾರಿಕೆ, ಅನಾಯಾಸ ಶ್ರಮ, ದಾಹ, ಉರಿ ಮುಂತಾದವನ್ನು ಉಂಟುಮಾಡುವುದು - ಇವು ಉಷ್ಣವೀರ್ಯದ ಪ್ರಧಾನ ಕಾರ್ಯಗಳು. ವಾತ ಮತ್ತು ಕಫ ಸಂಬಂಧವಾದ ವ್ಯಾಧಿಗಳನ್ನು ಶಮನ ಮಾಡುವುದು ಕೂಡ ಉಷ್ಣವೀರ್ಯದ ಕಾರ್ಯವೇ. ಮನೋಹ್ಲಾದ, ದೀರ್ಘ ಜೀವನ, ರಕ್ತ ಪಿತ್ತ ಸಂಬಂಧವಾದ ಚಟುವಟಿಕೆಗಳು ಇವು ಶೀತವೀರ್ಯದ ಪ್ರಧಾನ ಕಾರ್ಯಗಳು.
ನಾವು ಸೇವಿಸಿದ ಆಹಾರ ಶರೀರ ಪೋಷಣೆಗೆ ಅಂದರೆ ಧಾತುಗಳ ವರ್ಧನೆಗೆ ಸಮರ್ಥವಾಗಬೇಕಾದರೆ ಅದು ಜಠರಾಗ್ನಿಯ ತೇಜಸ್ಸಿನಿಂದ ಪಾಕ ಹೊಂದಿ ಅರ್ಹತೆ ಪಡೆಯಬೇಕಾಗುತ್ತದೆ. (ಉದಾಹರಣೆಗೆ ಅಕ್ಕಿ ಅನ್ನವಾದ ವಿನಾ ಹೇಗೆ ಸೇವಿಸಲು ಅನರ್ಹವೋ ಹಾಗೆ). ಈ ಕ್ರಿಯೆಗೆ ವಿಪಾಕ (ವಿಶಿಷ್ಟವಾದ ಪಾಕ) ಎಂದು ಹೆಸರು. ವಿಪಾಕವನ್ನು ಮೂರು ಪ್ರಕಾರಗಳಾಗಿ ವಿಭಾಗಿಸಿದೆ : ಮಧುರ ವಿಪಾಕ, ಆಮ್ಲವಿಪಾಕ, ಕಟುವಿಪಾಕ. ಮಧುರ ವಿಪಾಕದಲ್ಲಿ ಸೋಮಗುಣ ಪ್ರಧಾನವಾಗಿರುವುದರಿಂದ ಇದನ್ನು ಸೌಮ್ಯ ಎಂದೂ ಆಮ್ಲವಿಪಾಕದಲ್ಲಿ ಅಗ್ನಿ ಗುಣ (ತೇಜಸ್ಸು) ಪ್ರಧಾನವಾಗಿರುವುದರಿಂದ ಇದನ್ನು ಆಗ್ನೇಯ ಎಂದೂ ಹೇಳಲಾಗಿದೆ. ಕಟುವಿಪಾಕದಲ್ಲಿ ಸೌಮ್ಯ ಮತ್ತು ಆಗ್ನೇಯ ಗುಣಗಳೆರಡೂ ಕೂಡಿರುವುದರಿಂದ ಇದನ್ನು ಬೇರೆ ಪಂಗಡವಾಗಿ ಗುರುತಿಸಲಾಗಿದೆ. ಇದರಲ್ಲಿ ಅಂತರ್ಗತವಾಗಿರುವ ಪಂಚಭೂತಗಳ ಸಮುದಾಯದಲ್ಲಿ ಅಪ್ ಭಾಗ ಅತ್ಯಲ್ಪಾಂಶದಿಂದ ಕೂಡಿದ್ದು ಅತ್ಯಧಿಕ ಪ್ರಮಾಣದಲ್ಲಿ ತೇಜಸ್ಸು ಇರುವುದು.
ಸಮಾರೋಪ : ಚರಕ ಸಂಹಿತೆಯಲ್ಲಿ ಅಗ್ನಿವೇಶ ಋಷಿ ಹೇಳಿರುವ ಈ ಮುಂದಿನ ಮಾತುಗಳು ಗಮನಾರ್ಹವಾಗಿವೆ. 'ವಾತಪಿತ್ತ ಕಫಗಳು ಎಲ್ಲ ಸನ್ನಿವೇಶಗಳಲ್ಲಿಯೂ ಸಂಪೂರ್ಣ ನೈಜಸ್ಥಿತಿಯಲ್ಲಿ ಇರುವಂಥ ವ್ಯಕ್ತಿಯ ಏಕಾದಶೇಂದ್ರಿಯಗಳು ಎಂದೂ ತಮ್ಮ ಕಾರ್ಯಕ್ಷಮತೆಯನ್ನು ಕಳೆದುಕೊಳ್ಳುವುದಿಲ್ಲ; ಆತ ಅತಿಶಯವಾದ ದೈಹಿಕ ಹಾಗೂ ಮಾನಸಿಕ ಸಾಮಥ್ರ್ಯವಂತನಾಗಿರುತ್ತಾನೆ; ಆತ ನಿರೋಗಿಯಾಗಿ ಪೂರ್ಣಾಯುಷ್ಯ ಕಾಲ (120 ವರ್ಷಗಳು) ಬಾಳುತ್ತಾನೆ - ಹೇಗೆ ಧರ್ಮಾರ್ಥಕಾಮಗಳನ್ನು ಪಾತ್ರಾಪಾತ್ರಗಳ ಹಾಗೂ ಕಾಲಾಕಾಲಗಳ ವಿಮರ್ಶೆಯಿಂದ ಆಚರಿಸಿದರೆ ಅದರಿಂದ ತನಗೂ ಸಮಾಜಕ್ಕೂ ಕ್ಷೇಮ ಒದಗಿ ಇಹ ಮತ್ತು ಪರಲೋಕಗಳಲ್ಲಿ ಅತಿಶಯವಾದ ಕೀರ್ತಿ ಹಾಗೂ ಸಂಪತ್ತು ಪ್ರಾಪ್ತವಾಗುವುದೋ ಹಾಗೆ. ತದ್ವಿಪರೀತವಾದ ವರ್ತನೆಯನ್ನು ಅನುಸರಿಸಿದಾಗ ವಾತಪಿತ್ತ ಕಫಗಳು ತಮ್ಮ ನೈಜಗುಣಗಳಿಂದ ಬಿಡಿಸಲ್ಪಟ್ಟು ಅವೇ ದೇಹ ನಾಶಕ್ಕೆ ಕಾರಣಗಳಾಗುತ್ತವೆ. ಆದ್ದರಿಂದ ಪ್ರತಿಯೊಬ್ಬರೂ ಈ ಸಂಗತಿಗಳನ್ನು ತಿಳಿದು ಆರೋಗ್ಯವಂತರಾಗಿ ದೀರ್ಘಕಾಲ ಬಾಳುವಂತಾಗಬೇಕು. (ಎಸ್.ಎಲ್.ಎನ್.ಎ.)