ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಬ್ರಹ್ಮಕವಿ
ಬ್ರಹ್ಮಕವಿ:- ಸುಮಾರು 1600. ವಜ್ರ ಕುಮಾರಚರಿತೆ ಎಂಬ ಕಾವ್ಯದ ಕರ್ತೃ. ತಂದೆ ನೇಮಣ್ಣ. ತಾಯಿ ಬೊಮ್ಮರಸಿ. ಗುರು ಗುಣಭದ್ರಾಚಾರ್ಯ. ಕುಲದೇವ ಶಾಂತಿಜಿನ, ತನ್ನ ಮಗ ಗುಮ್ಮಣ್ಣನಿಗೋಸ್ಕರವಾಗಿಯೇ ತಾನು ವಜ್ರಕುಮಾರಚರಿತೆ ಕಾವ್ಯ ರಚಿಸಿದುದಾಗಿ ಹೇಳಿಕೊಂಡಿದ್ದಾನೆ. ತನಗಿಂತ ಹಿಂದಿನ ಕವಿಗಳಲ್ಲಿ ಪೊನ್ನ, ಜನ್ನ, ಗುಣವರ್ಮ, ನಯಸೇನರನ್ನು ಸ್ಮರಿಸಿದ್ದಾನೆ.
ವಜ್ರಕುಮಾರರ ಕಥೆ ಸಾಂಗತ್ಯದಲ್ಲಿದೆ. ಅಲ್ಲಲ್ಲಿ ಕಂದಪದ್ಯಗಳೂ ಇವೆ. ಕಾವ್ಯದ ನಾಯಕ ವಜ್ರಕುಮಾರ ರಾಜಪುರೋಹಿತ ಸೋಮದತ್ತನ ಮಗ. ಸೋಮದತ್ತ ವಿರಾಗಿಯಾಗಿ ಜಿನದೀಕ್ಷೆ ತಳೆದಾಗ ಅವನ ಮಡದಿ ಯಜ್ಞದತ್ತೆ ಪತ್ರಸಹಿತ ಬಂದು ಗಂಡನನ್ನು ಮತ್ತೆ ಗೃಹಸ್ಥ ಧರ್ಮಕ್ಕೆ ಮರಳಿಸಲು ಪರಿಪರಿಯಾಗಿ ಪತಿಯ ಬಳಿಯಲ್ಲೇ ಬಿಟ್ಟು ಹಿಂತಿರುಗಿದಳು. ಆ ವೇಳೆಗೆ ಅಂತರಿಕ್ಷದಲ್ಲಿ ಸಂಚರಿಸುತ್ತಿದ್ದ ಖೇಚರರು ಬಂದು ಈ ಬಾಲಕನನ್ನು ಕರೆದೊಯ್ದು ತಮ್ಮ ದೊರೆಯಾದ ಭಾಸ್ಕರನಿಗೆ ಕೊಟ್ಟರು. ಭಾಸ್ಕರ ಮಣಿಮಾಲೆ ದಂಪತಿಗಳು ಅವನನ್ನು ವಾತ್ಸಲ್ಯದಿಂದ ಸಾಕಿ ಬೆಳೆಸಿ ಮದುವೆ ಮಾಡಿದರು. ಆ ಅದೃಷ್ಟಶಾಲಿಯೇ ವಜ್ರಕುಮಾರ. ಇವನ ಕಥೆ ಸೋಮದೇವನ ಯಶಸ್ತಿಲಕ ಚಂಪೂ ಕಾವ್ಯದಲ್ಲೂ ಉಲ್ಲೇಖಗೊಂಡಿದೆ. ನಯಸೇನನ ಧರ್ಮಾಮೃತದಲ್ಲಿ ಸೋಮದತ್ತನ ಕಥೆ ಎಂಬಲ್ಲಿ ಇದು ಬಂದಿದೆ. ಬ್ರಹ್ಮಕವಿ ಈ ಮೂಲದ ಕಥೆಗಳಿಂದ ಸ್ಫೂರ್ತಿಗೊಂಡು ಸಾಂಗತ್ಯದ ಸರಳಶೈಲಿಯಲ್ಲಿ ಹಿತಮಿತವಾಗುವ ಕಾವ್ಯ ರಚಿಸಿದ್ದಾನೆ. ಇವನ ಕಾವ್ಯದಲ್ಲಿ ವರ್ಣನೆಗಳು ಹೆಚ್ಚಾಗಿದ್ದು ಚರ್ವಿತಚರ್ವಣಗಳಾಗಿವೆ. ಶೈಲಿಯಲ್ಲಿ ಪ್ರಸನ್ನತೆಯಿದೆ. ಅಲ್ಲಲ್ಲಿ ಖಂಡಪ್ರಾಸದ ಸೊಗಸಿದೆ. ಕಾವ್ಯಚಿತ್ರಗಳನ್ನು ಬಿಡಿಸುವುದಕ್ಕಿಂತ ಕಥೆ ಹೇಳುವುದೇ ಕವಿಯ ಮೂಲೋದ್ದೇಶ. ಇವನ ದೃಷ್ಟಿಯಲ್ಲಿ ವಜ್ರಕುಮಾರನೆಂದರೆ ಜಿನವಂತ ಗಗನ ದಿವಾಕರ ವಾತ್ಸಲ್ಯ, ಅನುಪಮ ಗುಣರತ್ನಾಕರ, ಅನಿಮಿಷ ವಿಭವ. ಆದ್ದರಿಂದ ಕವಿ ವಜ್ರಕುಮಾರನ ಜೀವನವನ್ನು ಉತ್ಪ್ರೇಕ್ಷಿಸಿ ವೈಭವೀಕರಿಸಿದ್ದಾನೆ. ಜೊತೆಗೆ ತಾನು ಹೇಳುತ್ತಿರುವುದು ಒಂದು ಜನಪದ ಕಥೆ ಎಂದು ಕವಿ ನಂಬಿದವ ಜನಪದ ಕಥೆಯ ಬಂಣಿಪೆನೂ" ಎಂಬ ಮಾತು ಕಾವ್ಯದಲ್ಲಿ ಬರುತ್ತದೆ. ಇದೊಂದು ಗಮನಾರ್ಹ ಹೇಳಿಕೆ. ಕವಿಯೊಬ್ಬ ತಾನು ಹೇಳುತ್ತಿರುವುದು ಒಂದು ಜನಪದ ಕಥೆ ಎಂದು ಹೇಳಿಕೊಂಡಿರುವುದರಲ್ಲಿ ಬ್ರಹ್ಮಕವಿಯೇ ಮೊದಲಿಗನೆಂದು ತೋರುತ್ತದೆ. (ಎಚ್.ಪಿ.ಎನ್.)