ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಮಧುರಕವಿ

ವಿಕಿಸೋರ್ಸ್ದಿಂದ

ಮಧುರಕವಿ : - ಜೈನಕವಿ. ಧರ್ಮನಾಥಪುರಾಣ ಎಂಬ ಕಾವ್ಯದ ಕರ್ತೃ. ಗೊಮ್ಮಟಸ್ತುತಿಯಷ್ಠಕ ಇವನ ಇನ್ನೊಂದು ಕೃತಿ. ಈತನ ತಂದೆ ವಿಷ್ಣು. ತಾಯಿ ನಾಗಾಂಬಿಕೆ. ಹರಿಹರರಾಯನ ಪ್ರಧಾನಿ ಮುದ್ದದಂಡೇಶ ಇವನ ಪೋಷಕ. ಭೂನಾಥಾಸ್ಥಾನಚೂಡಾಮಣಿ ಎಂಬುದರಿಂದ ಈತ ಎರಡನೆಯ ಹರಿಹರನ (1337-1404) ಆಸ್ಥಾನಕವಿಯಾಗಿದ್ದಂತೆ ಕಂಡು ಬರುತ್ತದೆ. ಕವಿಗೆ ಮಧುರ ಮಾಧವ, ಸರಸಕವಿರಸಾಲವಸಂತ, ಭಾರತೀಮಾನಸಕೇಳೀರಾಜಹಂಸ ಮೊದಲಾದ ಬಿರುದುಗಳಿದ್ದಂತೆ ತಿಳಿಯುತ್ತದೆ. ಪೂರ್ವಕವಿಗಳಲ್ಲಿ ಪಂಪ, ಪೊನ್ನ, ರನ್ನ, ನಾಗಚಂದ್ರ ನೇವಿಚಂದ್ರ, ಜನ್ನ-ಇವರನ್ನು ಸ್ತುತಿಸಿದ್ದಾನೆ, ಪುಷ್ಪದಂತ, ಗಜಾಂಕುಶ, ಮನಸಿಜ, ಶ್ರೀವಿಜಯ, ಸುಜನೋತ್ತಂಸ ಮೊದಲಾದವರನ್ನು ಪರೋಕ್ಷವಾಗಿ ಸ್ಮರಿಸಿದ್ದಾನೆ. ಇವನನ್ನು 3ನೆಯ ಮಂಗರಸ (ಸು. 1508) ಮೊದಲಾದ ಕವಿಗಳು ಸ್ತುತಿಸಿದ್ದಾರೆ. ಕವಿ ತನ್ನನ್ನು `ತನ್ನಾಣೆಗೋಸಣೆ ಸಲ್ಗುಂಸುಕವೀಂದ್ರ ವೃಂದ ಸಭೆಯೊಳ್ ತಾನೆಂದೊಡಮ್ಮಮ್ಮ ಧಾರುಣಿಯೊಳ್ ಕೇಳ್ದರಿಯಾ ಜಡಾಮಧುರನಂ ನಿರ್ಣೀತಕರ್ಣಾಟ ಲಕ್ಷಣಭಾಷಾಕವಿರಾಜನಂಪ್ರವಿಲಸದ್ವಾಣೀ ಮುಖಾಂಭೋಜನಂ ಎಂದು ಅತಿಶಯವಾಗಿ ಹೊಗಳಿಕೊಂಡಿದ್ದಾನೆ.

  • ಧರ್ಮನಾಥಪುರಾಣ ಹದಿನೈದನೆಯ ತೀರ್ಥಂಕರ ಧರ್ಮನಾಥನ ಚರಿತ್ರೆಯನ್ನೊಳಗೊಂಡ ಚಂಪೂಕಾವ್ಯ. ಕೃತಿ ಅಸಮಗ್ರವಾಗಿದ್ದು ಐದು ಆಶ್ವಾಸಗಳು ಮಾತ್ರ ಲಭ್ಯವಾಗಿವೆ. " ಪಂಡಿತರುಂ ವಿವಿಧಕಳಾ ಮಂಡಿತರುಂ ಕೇಳುತಕ್ಕ ಕೃತಿಯಂ ಕ್ಷಿತಿಯೊಳ್ ಕಂಡರ್ ಕೇಳ್ವದೆ ಗೊರವರ ಡುಂಡುಚಿಯೆ ಬೀದಿವರಿಯೆ ಬೀರನಕಥೆಯೇ " ಎಂದು ತನ್ನ ಕೃತಿಯ ಹಿರಿಮೆಯನ್ನು ಸಾರಿಕೊಂಡಿದ್ದಾನೆ. ಕಥಾ ನಿರೂಪಣೆಯಲ್ಲಿ ನವೀನತೆಯೇನೂ ಇಲ್ಲ. ಎಷ್ಟೋ ವೇಳೆ ಕವಿ ಕಥೆಯನ್ನೇ ಕೈಬಿಟ್ಟು ವರ್ಣನೆಯಲ್ಲಿ ತೊಡುಗುತ್ತಾನೆ. ಆದರೆ ಈ ವರ್ಣನೆಗಳು ಕೆಲವು ವೇಳೆ ಸಹಜವಾಗಿಯೂ ವಾಸ್ತವಿಕವಾಗಿಯೂ ಇರುವುದು ಗಮನಿಸಬೇಕಾದ ಸಂಗತಿ. ಧರ್ಮನಾಥ ತೀರ್ಥಂಕರನ ತಾಯಿಯಾಗಲಿರುವ ಸುವ್ರತೆ ತಾನು ಮಗನನ್ನು ಪಡೆಯುವೆನೊ ಇಲ್ಲವೊ ಎಂಬ ಸಂದೇಹದಿಂದ ಕೊರಗುವ ಭಾಗ ರಸದ ಮಡುವಾಗಿದೆ. ಈ ಕೃತಿಯಿಂದ ಆಯ್ದ ಕೆಲವು ಪದ್ಯಗಳನ್ನು ಅಭಿನವವಾದಿ ವಿದ್ಯಾನಂದನೂ ಭಟ್ಟಾಕಳಂಕನೂ ತಮ್ಮ ಗ್ರಂಥಗಳಲ್ಲಿ ಉದ್ಧರಿಸಿದ್ದಾರೆ.
  • ಗೊಮ್ಮಟಸ್ತುತಿಯಷ್ಠಕ ಶ್ರವಣಬೆಳಗೊಳದ ಗೊಮ್ಮಟೇಶ್ವರನ ದರ್ಶನದಿಂದ ಸ್ಫೂರ್ತಿ ಹೊಂದಿ ಆತನನ್ನು ಭಾವಪೂರ್ಣವಾಗಿ ಸ್ತುತಿಸಿರುವ ಅಷ್ಟಕ. ಇದರಲ್ಲಿ 9 ವೃತ್ತಗಳಿವೆ. ಪ್ರತಿ ಪದ್ಯವೂ ಗೊಮ್ಮಟೇಶಾ ಎಂದು ಅಂತ್ಯವಾಗುತ್ತದೆ. ಬೊಪ್ಪಣ ಪಂಡಿತನನ್ನು ಬಿಟ್ಟರೆ ಗೊಮ್ಮಟೇಶ್ವರನನ್ನು ಕುರಿತು ಹಾಡಿರುವ ಕವಿಗಳಲ್ಲಿ ಇವನು ಪ್ರಮುಖನಾದವ. ಈ ಪದ್ಯಗಳು ನಿಜವಾಗಿಯೂ ಹೃದಯವನ್ನು ಆದ್ರ್ರಗೊಳಿಸಿ ಮನಸ್ಸಿಗೆ ಸಂತಸವನ್ನುಂಟುಮಾಡುತ್ತವೆ.

ಹಂಪಿಯ ಕೃಷ್ಣದೇವಸ್ಥಾನದ ಬಳಿ ಇರುವ 1ನೆಯ ದೇವರಾಯನ ಆಳ್ವಿಕೆಯಲ್ಲಿ, 1410ರಲ್ಲಿ ಹುಟ್ಟಿದ ಒಂದು ಶಾಸನವನ್ನು ಈತನೇ ಬರೆದಂತೆ ಆ ಶಾಸನದ ಕೊನೆಯ ಪದ್ಯದಿಂದ ತಿಳಿಯುತ್ತದೆ. ಶಾಸನದಲ್ಲಿ ಮಂತ್ರಿ ಲಕ್ಷ್ಮೀಧರ ಮಾಲ್ಯವತ್ ಪರ್ವತದ ಬಳಿ ಗಣೇಶ ಪ್ರತಿಷ್ಠೆ ಮಾಡಿದಂತೆ ಹೇಳಿದೆ. ಅಲ್ಲದೆ, ಕವಿಗೆ ಮಂತ್ರಿಯಿಂದ ಸಹಾಯ ದೊರೆತ ವಿಷಯ. ದೊರೆಗೆ ಪ್ರಾಣಾಪಾಯ ಉಂಟಾದಾಗ ತನ್ನ ಸಾಹಸದಿಂದ ಕವಿ ರಾಜನನ್ನು ಉಳಿಸಿದ ವಿಷಯ-ಇವೂ ಶಾಸನದಿಂದ ವಿದಿತವಾಗುತ್ತವೆ. (ಬಿ.ಜಿ.)