ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಹಾರ್ಡಿಂಜ್, ಲಾರ್ಡ್
ಹಾರ್ಡಿಂಜ್, ಲಾರ್ಡ್ 1785-1856. ಭಾರತದ ಗವರ್ನರ್ ಜನರಲ್ (1844-48). ಇವರು 1785 ಮಾರ್ಚ್ 30 ರಂದು ಜನಿಸಿದರು. ರಾಯಲ್ ಮಿಲಿಟರಿ ಅಕಾಡೆಮಿಯಲ್ಲಿ ತರಬೇತಿ ಪಡೆದು ಅನಂತರ ಸೈನ್ಯಕ್ಕೆ ಸೇರಿ ಪರ್ಯಾಯ ದ್ವೀಪ ಯುದ್ಧ ಹಾಗೂ ವಾಟರ್‍ಲೂ ಯುದ್ಧಗಳಲ್ಲಿ ಭಾಗವಹಿಸಿ ಹೆಸರುಗಳಿಸಿದರು.
1844ರಲ್ಲಿ ಭಾರತದ ಗವರ್ನರ್ ಜನರಲ್ ಆಗಿ ಅಧಿಕಾರಕ್ಕೆ ಬಂದರು. ಇವರ ಕಾಲದಲ್ಲಿ ನಡೆದ ಅತ್ಯಂತ ಪ್ರಮುಖ ಘಟನೆ ಒಂದನೆಯ ಆಂಗ್ಲೋ-ಸಿಖ್‍ಯುದ್ಧ (1845-46). ರಣಜಿತ್ ಸಿಂಗನ ಕಾಲದಲ್ಲೇ ಅಮೃತಸರ ಒಪ್ಪಂದ ಹಾಗೂ ತ್ರಿಪಕ್ಷೀಯ ಒಪ್ಪಂದ ದ ಮೂಲಕ ಬ್ರಿಟಿಷರು ಸಟ್ಲೆಜ್‍ನ ಭಾಗದಲ್ಲಿ ತಮ್ಮ ನೆಲೆಯನ್ನು ಸ್ಥಾಪಿಸಿಕೊಂಡಿದ್ದರು. ಆಫ್ಘಾನಿಸ್ತಾನದಲ್ಲಿ ರಷ್ಯ ಆಕ್ರಮಣದ ಭೀತಿಯಿದ್ದುದರಿಂದ ಬ್ರಿಟಿಷರು ಪಂಜಾಬನ್ನು ವಶಪಡಿಸಿಕೊಳ್ಳುವ ಅವಕಾಶಕ್ಕಾಗಿ ಕಾಯುತ್ತಿದ್ದರು. ರಣಜಿತ್ ಸಿಂಗ್‍ನ ಮರಣಾನಂತರ ಉಂಟಾದ ಅನೈಕ್ಯದ ಲಾಭ ಪಡೆದುಕೊಂಡ ಬ್ರಿಟಿಷರು ತಮ್ಮ ಪ್ರಾಬಲ್ಯವನ್ನು ಹೆಚ್ಚಿಸಿಕೊಳ್ಳಲು ಬಯಸಿದರು. ಇದೇ ಸಮಯದಲ್ಲಿ ಸಿಸ್-ಸಟ್ಲೆಜ್ ಪ್ರಾಂತದಲ್ಲಿ ನೆಲೆ ಸ್ಥಾಪಿಸಿಕೊಂಡಿದ್ದ ಬ್ರಿಟಿಷರ ಅನಾವಶ್ಯಕ ಮಧ್ಯಸ್ಥಿಕೆಯಿಂದ ಅತೃಪ್ತಗೊಂಡಿದ್ದ ಸಿಖ್ಖರು ಸ್ವತಂತ್ರರಾಗಲು ಬಯಸಿದರು. 1845ರಲ್ಲಿ ತೇಜ್ ಸಿಂಗ್‍ನ ನೇತೃತ್ವದಲ್ಲಿ ಸಿಖ್ ಸೈನ್ಯ ಬ್ರಿಟಿಷರ ವಿರುದ್ಧ ಯುದ್ಧ ಘೋಷಿಸಿತು. ಆಗ ಇವರು ಸಟ್ಲೆಜ್ ನದಿಯ ಪೂರ್ವಭಾಗವೆಲ್ಲ ಬ್ರಿಟಿಷರ ಆಧಿಪತ್ಯಕ್ಕೆ ಸೇರಿರುವುದೆಂದು ಘೋಷಿಸಿದರು. ಮುಡ್ಕಿ, ಫಿರೋಜ್‍ಷಹ ಆಲಿವಾಲ್ ಹಾಗೂ, ಸೋಭಾನ್‍ಗಳಲ್ಲಿ ತೀವ್ರವಾಗಿ ಯುದ್ಧಗಳು ನಡೆದು ಕೊನೆಗೆ ಬ್ರಿಟಿಷರು ಸಿಖ್ಖರನ್ನು ಸೋಲಿಸುವಲ್ಲಿ ಯಶಸ್ವಿಯಾದರು. 54 ದಿನಗಳ ಅವಧಿಯಲ್ಲಿ 4 ಯುದ್ಧಗಳು ಜರುಗಿದುವು. ಇವರು ತಮ್ಮ ವಿಜಯೀ ಸೈನ್ಯದೊಡನೆ ಸಟ್ಲೆಜ್ ನದಿಯನ್ನು ದಾಟಿ 1846 ಫೆಬ್ರವರಿ 20ರಂದು ಲಾಹೋರನ್ನು ಆಕ್ರಮಿಸಿದರು. 1846 ಮಾರ್ಚ್ 9ರಂದು ನಡೆದ ಲಾಹೋರ್ ಒಪ್ಪಂದ ದೊಂದಿಗೆ ಒಂದನೆಯ ಆಂಗ್ಲೋ-ಸಿಖ್ ಯುದ್ಧ ಮುಕ್ತಾಯವಾಯಿತು. ಈ ಒಪ್ಪಂದದ ಪ್ರಕಾರ ಬ್ರಿಟಿಷರಿಗೆ ಜಲಂಧರ್, ಕಾಶ್ಮೀರ ಮತ್ತು ಹಜಾರ ಪ್ರದೇಶಗಳನ್ನು ಬಿಟ್ಟುಕೊಟ್ಟು ಸಿಖ್‍ಸೇನೆಯಲ್ಲಿ ಕಡಿತಗೊಳಿಸಿ ಯುದ್ಧ ಪರಿಹಾರವಾಗಿ ಅರ್ಧಪೌಂಡ್ ನೀಡಬೇಕಾಯಿತು. ಇದರಿಂದ ಬ್ರಿಟಿಷರಿಗೆ ಅಪಾರ ಹಣ ದೊರೆಯಿತಲ್ಲದೆ ಪಂಜಾಬಿನಲ್ಲಿ ಬ್ರಿಟಿಷ್ ರೆಸಿಡಂಟ್ ಆಳಿಕೆ ಆರಂಭವಾಯಿತು. ನೆಪಮಾತ್ರಕ್ಕೆ ಸಿಖ್ ದೊರೆ ದುಲೀಪ್ ಸಿಂಗ್‍ನನ್ನು ಸಿಂಹಾಸನದ ಮೇಲೆ ಕೂರಿಸಲಾಯಿತು.
ಇವರು ಭಾರತದ ಆಡಳಿತದಲ್ಲಿ ಹಲವಾರು ಪ್ರಮುಖ ಸುಧಾರಣೆ ಗಳನ್ನು ಜಾರಿಗೆ ತಂದರು. ಗಂಗಾ ನದಿ ಕಾಲುವೆ ಕೆಲಸವನ್ನು ಪ್ರಾರಂಭಿಸಿದ. ಇವುಗಳಲ್ಲಿ ರೂರ್ಕಿಯಲ್ಲಿ ಎಂಜಿನಿಯರಿಂಗ್ ಕಾಲೇಜಿನ ಸ್ಥಾಪನೆ, ಮೊದಲ ಬಾರಿಗೆ ಡಾರ್ಜಿಲಿಂಗ್‍ನಲ್ಲಿ ಕ್ಷಯರೋಗದ ಆಸ್ಪತ್ರೆಯ ಸ್ಥಾಪನೆ, ಅಸ್ಸಾಂನಲ್ಲಿ ಚಹಾ ಬೆಳೆಗೆ ಪ್ರೋತ್ಸಾಹ, ಐತಿಹಾಸಿಕ ಸ್ಮಾರಕಗಳ ರಕ್ಷಣೆ ಪ್ರಮುಖವಾಗಿವೆ. ಇವರು ಸಹಗಮನ, ನರಬಲಿ ಹಾಗೂ ಶಿಶುಹತ್ಯೆಯ ಪ್ರಬಲ ವಿರೋಧಿಯಾಗಿದ್ದರು. ಒರಿಸ್ಸದ ಗುಡ್ಡಗಾಡು ಪ್ರದೇಶದ ಗೊಂಡ ಜನರಲ್ಲಿ ಆಚರಣೆಯಲ್ಲಿದ್ದ ನರಬಲಿಯನ್ನು ನಿಲ್ಲಿಸಲು ಉಗ್ರಕ್ರಮ ಕೈಗೊಂಡರು. ಸೈನ್ಯ ವೆಚ್ಚಗಳನ್ನು ಕಡಿತಗೊಳಿಸಿ ಸೈನಿಕರ ಹಿತಾಸಕ್ತಿಗಳನ್ನು ಕಾಪಾಡಿದರು. ಗವರ್ನರ್ ಜನರಲ್ ಹುದ್ದೆಯಿಂದ ನಿವೃತ್ತರಾದ (1848) ಇವರು 1856ರಲ್ಲಿ ನಿಧನಹೊಂದಿದ.
(ಐ.ಬಿ.ಪಿ.)