ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಗಳಗನಾಥ1

ವಿಕಿಸೋರ್ಸ್ದಿಂದ
ಗಳಗನಾಥ1

ಹಾವೇರಿ ಜಿಲ್ಲೆ ಹಾವೇರಿ ತಾಲ್ಲೂಕಿನಲ್ಲಿರುವ ಒಂದು ಪುಣ್ಯಕ್ಷೆತ್ರ. ಸುಂದರ ತಾಣ. ವರದಾ ಮತ್ತು ತುಂಗಭದ್ರಾ ನದಿಗಳ ಸಂಗಮಸ್ಥಳದಲ್ಲಿದೆ.


ಇಲ್ಲಿರುವ ಗಳಗೇಶ್ವರ ದೇವಸ್ಥಾನದಿಂದ ಈ ಸ್ಥಳಕ್ಕೆ ಗಳಗನಾಥ ಎಂಬ ಹೆಸರು ಬಂದಿದೆ. ಈ ದೇವಾಲಯವನ್ನು ಗಳಗೇಶ್ವರ ಮುನಿ ಸ್ಥಾಪಿಸಿದರೆಂದು ಪ್ರತೀತಿ. ಈ ದೇವಾಲಯ 28ಮೀ. ಉದ್ದ 14ಮೀ ಅಗಲವಿದೆ. ಇದರ ಮೇಲ್ಚಾವಣಿಯನ್ನು ನಾಲ್ಕು ಸುಂದರವಾದ ಸ್ತಂಭಗಳು ಅಂದವಾಗಿ ಎತ್ತಿ ಹಿಡಿದಿವೆ. ದೇವಾಲಯದ ಸುತ್ತಲೂ ಗೋಡೆಯ ಮೇಲೆ ಪೌರಾಣಿಕ ಕಥೆಗಳನ್ನು ಕೆತ್ತಲಾಗಿದೆ. ಈ ದೇವಾಲಯದ ಕಟ್ಟಡದ ವೈಶಿಷ್ಟ್ಯವೆಂದರೆ ಇದರ ಅಡಿಪಾಯ. ಇದರ ಆಕಾರ ಪಿರಿಮಿಡ್ನಂತಿದೆ. ನದಿಯ ನೆರೆಹಾವಳಿಯಿಂದ ಈ ದೇವಾಲಯವನ್ನು ರಕ್ಷಿಸಲು ಗೋಡೆಗಳನ್ನು ಕಟ್ಟಲಾಗಿದೆ. ಇಲ್ಲಿ ಒಂದು ಹನುಮಂತದೇವರ ಗುಡಿಯೂ ಇದೆ. ಈ ಊರಲ್ಲಿ ಕಲ್ಯಾಣ ಚಾಳುಕ್ಯರ ಆರು ಶಾಸನಗಳು ದೊರೆತಿವೆ. ಹೊಯ್ಸಳ ವಿಷ್ಣುವರ್ಧನ ಇಲ್ಲಿಂದ ದಾನಮಾಡಿದ ಸಂಗತಿ ತಿಳಿದುಬರುತ್ತದೆ. ಈ ಗ್ರಾಮದ ಸಮೀಪದಲ್ಲಿ ಅನೇಕ ಬೃಹತ್ ಶಿಲಾ ಸಮಾದಿsಗಳು ಬೆಳಕಿಗೆ ಬಂದಿವೆ. ಕನ್ನಡದ ಪ್ರಸಿದ್ಧ ಕಾದಂಬರಿಕಾರರಾದ ಗಳಗನಾಥರು ಈ ಸ್ಥಳದವರು.