ಹರಿಕಥಾಮೃತಸಾರ/ಪಂಚ ಮಹಾಯಜ್ಞ ಸಂಧಿ

ವಿಕಿಸೋರ್ಸ್ದಿಂದ

ಜನನಿಪಿತ ಭೂ ವಾರಿದಾಂಬರ ವೆನಿಪ ಪಂಚಾಗ್ನಿಯಲಿ ನಾರಾ ಯಣನ ತ್ರಿಂಶತಿ ಮೂರ್ತಿಗಳ ವ್ಯಾಪಾರ ವ್ಯಾಪ್ತಿಗಳ | ನೆನೆದು ದಿವಸಗಳೆಂಬ ಸಮಿಧೆಗ ಳನು ನಿರಂತರ ಹೋಮಿಸುತ ಪಾ ವನಕೆ ಪಾವನನೆನಿಪ ಪರಮನ ಬೇಡು ಪರಮಸುಖ || ೧ ||

ಗಗನಪಾವಕ ಸಮಿಧೆ ರವಿರ ಶ್ಮಿಗಳೆ ಧೂಮವು ಅರ್ಚಿಯೆನಿಪುದೆ ಹಗಲು ನಕ್ಷತ್ರಗಳೆ ಕಿಡಿಗಳು ಚಂದ್ರಮಾಂಗಾರ | ಮೃಗವರೋದರನೊಳಗೆ ಐರೂ ಪಗಳ ಚಿಂತಿಸಿ ಭಕ್ತಿರಸ ಮಾ ತುಗಳ ಮಂತ್ರವ ಮಾಡಿ ಹೋಮಿಸುವರು ವಿಪಶ್ಚಿತರು || ೨ ||

ಪಾವಕನು ಪರ್ಜನ್ಯ ಸಮಿಧೆಯು ಪ್ರಾವಹೀಪತಿ ಧೂಮಗಳೆ ಮೇ ಘಾವಳಿಗಳರ್ಚಿ ಕ್ಷಣ ಪ್ರಭೆಗರ್ಜನವೆ ಕಿಡಿಯು | ಭಾವಿಸುವುದಂಗಾರ ಸಿಡಿಲೆಂ ದೀ ವಿಧಾಗ್ನಿಯೊಳಭ್ರಜಾತನ ಕೋವಿದರು ಹೋಮಿಸುವರನುದಿನ ಪರಮಭಕುತಿಯಲಿ || ೩ ||

ಧರಣಿಯೆಂಬುದೆ ಅಗ್ನಿ ಸಂವ ತ್ಸರವೆ ಸಮಿಧೆ ವಿಹಾಯಸವೆ ಪೊಗೆ ಇರುಳುರಿ ದಿಶಾಂಗಾರವಂತರದಿಗ್ವಲಯ ಕಿಡಿಯು | ವರುಷವೆಂಬಾಹುತಿಗಳಿಂದಲಿ ಹರಿಯ ಮೆಚ್ಚಿಸಿ ಸಕಲರೊಳಗ ಧ್ವರಿಯನಾಗಿರು ಸರ್ವರೂಪಾತ್ಮಕನ ಚಿಂತಿಸುತ || ೪ ||

ಪುರುಷ ಶಿಖಿ ವಾಕ್ಸಮಿಧೆ ಧೂಮವು ಕರಣವರ್ಚಿಯು ಜಿಹ್ವೆಶ್ರೋತ್ರಗ ಳೆರಡು ಕಿಡಿಗಳು ಲೋಚನಗಳಂಗಾರವೆನಿಸುವುವು | ನಿರುತ ಭುಂಜಿಸುವನ್ನ ಯದುಕುಲ ವರನಿಗವದಾನಗಳು ಎಂದೀ ಪರಿ ಸಮರ್ಪಣೆಗೈಯೆ ಕೈಗೊಂಡನುದಿನದಿ ಪೊರೆವ || ೫ ||

ಮತ್ತೆ ಯೋಷಾಗ್ನಿಯೊಳು ತಿಳಿವುದು ಪಸ್ಥತತ್ತ್ವವೆ ಸಮಿಧೆ ಕಾಮೋ ತ್ಪತ್ತಿಪರ ಮಾತುಗಳೆ ಧೂಮವು ಯೋನಿ ಮಹದರ್ಚಿ | ತತ್ಪ್ರವೇಶಾಂಗಾರ ಕಿಡಿಗಳು ಉತ್ಸಹಗಳುತ್ಸರ್ಜನವು ಪುರು ಷೋತ್ತಮನಿಗವದಾನವೆನೆ ಕೈಗೊಂಡು ಮನ್ನಿಸುವ || ೬ ||

ಐದು ಅಗ್ನಿಗಳಲ್ಲಿ ಮರೆಯದೆ ಐದು ರೂಪಾತ್ಮಕನ ಇಪ್ಪ ತ್ತೈದು ರೂಪಗಳನುದಿನದಿ ನೆನೆವರಿಗೆ ಜನುಮಗಳ | ಐದಿಸನು ನಳಿನಾಕ್ಷ ರಣದೊಳು ಮೈದುನನ ಕಾಯ್ದಂತೆ ಸಲಹುವ ಬೈದವಗೆ ಗತಿಯಿತ್ತ ಭಯಹರ ಭಕ್ತವತ್ಸಲನು || ೭ ||

ಪಂಚನಾರೀತುರಗದಂದದಿ ಪಂಛರೂಪಾತ್ಮಕನು ತಾ ಷ ಟ್ಪಂಛರೂಪವ ಧರಿಸಿ ತತ್ತನ್ನಾಮದಿಂ ಕರೆಸಿ | ಪಂಚಪಾವಕ ಮುಖದಿ ಗುಣಮಯ ಪಂಚಭೂತಾತ್ಮಕ ಶರೀರವ ಪಂಛವಿಧ ಜೀವರಿಗೆ ಕೊಟ್ಟಲ್ಲಲ್ಲೆ ರಮಿಸುವನು || ೮ ||

ವಿಧಿಭವಾದಿ ಸಮಸ್ತ ಜೀವರ ಹೃದಯದೊಳಗೇಕಾತ್ಮನೆನಿಸುವ ಪದುಮನಾಭನಚ್ಯುತಾದಿ ಅನಂತರೂಪದಲಿ | ಅಧಿಸುಭೂತಾಧ್ಯಾತ್ಮವಧಿದೈ ವದೊಳು ಕರೆಸುವ ಪ್ರಾಣನಾಗಾ ಭಿದನು ದಶರೂಪದಲಿ ದಶವಿಧ ಪ್ರಾಣರೊಳಗಿದ್ದು || ೯ ||

ಈರೈದುಸಾವಿರದ ಇಪ್ಪ ತ್ತಾರಧಿಕ ಮುನ್ನೂರು ರೂಪಗ ಳೀರೆರಡು ಸ್ಥಾನದಲ್ಲಿ ಚಿಂತಿಪುದನುದಿನದಿ ಬುಧರು | ನೂರ ಇಪ್ಪತ್ತೇಳಧಿಕ ಮೂ ರಾರು ಸಾವಿರ ರೂಪದಿಂ ದಶ ಮಾರುತರೊಳಿದ್ದವರವರ ಪೆಸರಿಂದ ಕರೆಸುವನು || ೧೦ ||

ಚಿತ್ತವಿಸುವುದು ಎಂಟಧಿಕ ಇ ಪ್ಪತ್ತು ಸಾವಿರ ನಾಲ್ಕು ಶತದೈ ವತ್ತು ಮೂರು ಸುಮೂರ್ತಿಗಳಹವಿಲ್ಲಿ ಪರ್ಯಂತ | ಹತ್ತು ನಾಲ್ಕು ರೂಪಗಳ ನೆರ ಬಿತ್ತರವನೀಪರ್ ತಿಳಿದು ಪುರು ಷೋತ್ತಮನ ಸರ್ವತ್ರ ಪೂಜೆಯ ಮಾಡು ಕೊಂಡಾಡು || ೧೧ ||

ಈರೆರೆಡು ಶತದ್ವ್ಯಷ್ವಧಿಕ ಹದಿ ನಾರು ಸಾವಿರ ರೂಪ ಸರ್ವಶ ರೀರದೊಳು ಶಬ್ದಾದಿಗಳಧಿಷ್ಠಾನದೊಳಿಪ್ಪ | ಮಾರುತನು ನಾಗಾದಿ ರೂಪದಿ ಮೂರನೆಯ ಗುಣಮಾನಿ ಶ್ರೀ ದು ರ್ಗಾರಮಣ ವಿದ್ಯಾ ಕುಮೋಹವ ಕೊಡುವ ಕರಣಕ್ಕೆ || ೧೨ ||

ಐದವಿದ್ಯೆಗಳೊಳಗೆ ಇಹ ನಾ ಗಾದಿಗಳಧಿಷ್ಠಾನದಲಿ ಲಕು ಮೀಧವನು ಕೃದ್ಧೋಲ್ಕ ಮೊದಲಾದೈದು ರೂಪಗಳ | ತಾ ಧರಿಸಿ ಸಜ್ಜನರವಿದ್ಯವ ಛೇದಿಸುವ ತಾಮಸರಿಗಜ್ಞಾ ನಾದಿಗಳ ಕೊಟ್ಟವರವರ ಸಾಧನವ ಮಾಡಿಸುವ || ೧೩ ||

ಗೋವುಗಳೊಳುದ್ಗೀತನಿಹ ಪ್ರ ಸ್ತಾವಹಿಂಕಾರೆರಡು ರೂಪದ ಲಾವಿಯಜಗಳೊಳಿಹನು ಪ್ರತಿಹರಾಹ್ವಹಯಗಳೊಳು | ಜೀವನಪ್ರದನಿಧನ ಮನುಜರೊ ಳೀವಿಧದೊಳಿಹ ಪಂಚಸಾಮವ ಝಾವಝಾವಕೆ ನೆನವರಿಗೆ ಐದಿಸನು ಜನ್ಮಗಳ || ೧೪ ||

ಯುಗಚತುಷ್ಟಯಗಳಲ್ಲಿ ತಾನಿ ದ್ದ್ಯುಗಪ್ರವರ್ತಕ ಧರ್ಮಕರ್ಮಗ ಳಿಗೆ ಪ್ರವರ್ತಕ ವಾಸುದೇವಾದೀರೆರಡು ರೂಪ | ತೆಗೆದುಕೊಂಡು ಯುಗಾದಿಕ್ರತು ತಾ ಯುಗ ಪ್ರವರ್ತಕನೆನಿಸಿ ಧರ್ಮ ಪ್ರಘಟಕನು ತಾನಾಗಿ ಭಕ್ತರಿಗೀವ ಸಂಪದವ || ೧೫ ||

ತಲೆಯೊಳಿಹ ನಾರಾಯಣನು ಗಂ ಟಲೆಡೆ ಒಡಲೊಳು ವಾಸುದೇವನು ಬಲದಲಿಹ ಪ್ರದ್ಯುಮ್ನ ನೆಡಭಾಗದೊಳಗನಿರುದ್ಧ | ಕೆಳಗಿನಂಗದಿ ಸಂಕರುಷಣನ ತಿಳಿದು ಈ ಪರಿ ಸಕಲ ದೇಹಗ ಳೊಳಗೆ ಪಂಚಾತ್ಮಕನ ರೂಪವ ನೋಡು ಕೊಂಡಾದು || ೧೬ ||

ತನುವಿಶಿಷ್ಟದಿ ಇಪ್ಪ ನಾರಾ ಯಣನು ಕಟಿಪಾದಾಂತ ಸಂಕರು ಷಣನು ಶಿರಜಘನಾಂತವಾಗಿಹ ವಾಸುದೇವಾಖ್ಯ | ಅನಿಮಿಷೇಶನಿರುದ್ಧ ಪ್ರದ್ಯು ಮ್ನನು ಎಡದಿ ಬಲಭಾಗದಲಿ ಚಿಂ ತನೆಯ ಮಾಳ್ಪರಿಗುಂಟೆ ಮೈಲಿಗೆ ವಿಧಿನಿಷೇಧಗಳು || ೧೭ ||

ಪದುಮನಾಭನು ಪಾಣಿಯೊಳಗಿಹ ವದನದಲಿ ಹೃಷಿಕೇಶ ನಾಸಿಕ ಸದನದಲಿ ಶ್ರೀಧರನು ಜಿಹ್ವೆಯೊಳಿಪ್ಪ ವಾಮನನು | ಮೃದುಳ ತ್ವಗ್ದೇಶದಿ ತ್ರಿವಿಕ್ರಮ ಮಧುವಿರೋದಿಯು ಲೋಚನದಿ ಕ ರ್ಣದಲಿ ಇಪ್ಪನು ವಿಷ್ಣುನಾಮಕ ಶ್ರವಣನೆಂದೆನಿಸಿ || ೧೮ ||

ಮನದೊಳಿಹ ಗೋವಿಂದ ಮಾಧವ ಧನಪಸಖ ತತ್ವದೊಳು ನಾರಾ ಯಣನು ಮಹತ್ತತ್ವದೊಳು ಅವ್ಯಕ್ತದೊಳು ಕೇಶವನು | ಇನಿತುರೂಪವ ದೇಹದೊಳು ಚಿಂ ತನೆಯಗೈವ ಮಹಾತ್ಮರಿಳೆಯೊಳು ಮನುಜರಲ್ಲವರಮರರೇ ಸರಿ ಹರಿಕೃಪಾಬಲದಿ || ೧೯ ||

ನೆಲದೊಳಿಪ್ಪನು ಕೃಷ್ಣರೂಪದಿ ಜಲದೊಳಿಪ್ಪನು ಹರಿಯೆನಿಸಿ ಶಿಖಿ ಯೊಳಗೆ ಇಪಾನು ಪರಶುರಾಮನುಪೇಂದ್ರನೆಂದೆನಿಸಿ | ಎಲರೊಳಿಪ್ಪ ಜನಾರ್ದನನು ಬಾಂ ದಳದೊಳಚ್ಯುತ ಗಂಧ ನರಹರಿ ಪೊಳೆವದೋಕ್ಷಜ ರಸಗಳೊಳು ರಸರೂಪ ತಾನಾಗಿ || ೨೦ ||

ರೂಪ ಪುರುಷೋತ್ತಮನು ಸ್ಪರ್ಶ ಪ್ರಾಪಕನು ಅನಿರುದ್ಧ ಶಬ್ದದಿ ವ್ಯಾಪಿಸಿಹ ಪ್ರದ್ಯುಮ್ನುಪಸ್ಥದಿ ವಾಸುದೇವನಿಹ | ತಾಪೊಳೆವ ಪಾಯುಸ್ಥನಾಗಿ ಜ ಯಾಪತಿಯು ಸಂಕರುಷಣನು ಸು ಸ್ಥಾಪಕನು ಅಹಪಾದದೊಳು ದಾಮೋದರನು ಪೊಳೆವ || ೨೧ ||

ಚತುರವಿಂಶತಿ ತತ್ತ್ವದೊಳು ಶ್ರೀ ಪತಿಯೆ ಅನುರುದ್ಧಾದಿ ರೂಪದಿ ವಿತತನಾಗಿದ್ದಖಿಳಜೀವರ ಸಂಹನನದೊಳಗೆ | ವ್ರತತಿಯಂದದಿ ಸುತ್ತಿ ಸುತ್ತುವ ಪಿತೃಗಳಿಗೆ ತರ್ಪಕನೆನಿಸಿಕೊಂ ಡತುಳ ಮಹಿಮನು ಷಣ್ಣವತಿ ನಾಮದಲಿ ನೆಲೆಸಿಹನು || ೨೨ ||

ಚತುರವಿಂಶತಿ ತತ್ತ್ವದೊಳು ತ ತ್ಪತಿಗಳೆನಿಸುವ ಬ್ರಹ್ಮಮುಖ ದೇ ವತೆಗಳೊಳು ಹನ್ನೊಂದು ನೂರೈವತ್ತೆರಡು ರೂಪ | ವಿತತನಾಗಿದ್ದೆಲ್ಲ ಜೀವರ ಜತನ ಮಾಡುವಗೋಸುಗ ಜಗ ತ್ಪತಿಗೆ ಏನಾದರು ಪ್ರಯೋಜನವಿಲ್ಲವದರಿಂದ || ೨೩ ||

ಇಂದಿರಾಧವ ಶಕ್ತಿ ಮೊದಲಾ ದೊಂದಧಿಕ ದಶರೂಪದಿಂದಲಿ ಹೊಂದಿಹನು ಸಕಲೇಂದ್ರಿಯಗಳಲಿ ಪುರುಷನಾಮಕನು | ಸುಂದರಪ್ರದ ಪೂರ್ಣಜ್ಞಾನಾ ನಂದಮಯ ಚಿದ್ದೇಹದೊಳು ತಾ ನೊಂದರೆಕ್ಷಣವಗಲದಲೆ ಪರಮಾಪ್ತನಾಗಿಪ್ಪ || ೨೪ ||

ಆರಧಿಕ ದಶರೂಪದಿಂದಲಿ ತೋರುತಿಪ್ಪನು ವಿಶ್ವಲಿಂಗ ಶ ರೀರದೊಳು ತೈಜಸನು ಪ್ರಾಜ್ಞನು ತುರ್ಯನಾಮಕನು | ಮೂರೈದು ರೂಪಗಳ ಧರಿಸುತ ಲೀರೈದು ಕರಣದೊಳು ಮಾತ್ರದಿ ಖೇರ ಶಿಖಿಜಲ ಭೂಮಿಯೊಳಗಿಹನಾತ್ಮ ನಾಮದಲಿ || ೨೫ ||

ಮನದೊಳಾಹಂಕಾರದೊಳು ಚಿಂ ತನೆಯ ಮಾಳ್ಪುದು ಅಂತರಾತ್ಮನ ಘನಸುತತ್ತ್ವದಿ ಪರಮನವ್ಯಕ್ತದಲಿ ಜ್ಞಾನಾತ್ಮ ಇನಿತು ಪಂಚಾಶದ್ವರಣ ವೇ ದ್ಯನ ಅಜಾದೈವತ್ತು ಮೂರ್ತಿಗ ಳನು ಸದಾ ಸರ್ವತ್ರ ದೇಹಗಳಲ್ಲಿ ಪೂಜಿಪುದು || ೨೬ ||

ಚತುರವಿಂಶತಿ ತತ್ತ್ವದೊಳು ತ ತ್ಪತಿಗಳೆನಿಸುವ ಬ್ರಹ್ಮಮುಖ ದೇ ವತೆಗಳೊಳು ಹದಿಮೂರು ಸಾವಿರದೆಂಟು ನೂರಧಿಕ | ಚತುರವಿಂಶತಿ ರೂಪದಿಂದಲಿ ವಿತತನಾಗಿದ್ದೆಲ್ಲರೊಳು ಪ್ರಾ ಕೃತ ಪುರುಷನಂದದಲಿ ಪಂಚಾತ್ಮಕನು ರಮಿಸುವನು || ೨೭ ||

ಕೇಶವಾಗಿ ಸುಮೂರ್ತಿ ದ್ವಾದಶ ಮಾಸ ಪುಂಡ್ರಗಳಲ್ಲಿ ವೇದ ವ್ಯಾಸನನಿರುದ್ಧಾದಿ ರೂಪಗಳಾರು ಋತುಗಳಲಿ | ವಾಸವಾಗಿಹನೆಂದು ತ್ರಿಂಶತಿ ವಾಸರದಿ ಸತ್ಕರ್ಮಧರ್ಮ ನಿ ರಾಶೆಯಿಂದಲಿ ಮಾಡು ಕರುಣವ ಬೇಡು ಕೊಂಡಾಡು || ೨೮ ||

ಲೋಷ್ಟಕಾಂಚನ ಲೋಹ ಶೈಲಜ ಕಾಷ್ಠ ಮೊದಲಾದಖಿಳ ಚೇತನರೊಳಗೆ ಅನುದಿನವು | ಚೇಷ್ಟೆಗಳ ಮಾಡಿಸುತ ತಿಳಿಸದೆ ಪ್ರೇಷ್ಟನಾದಿದ್ದೆಲ್ಲರಿಗೆ ಸ ರ್ವೇಷ್ಟದಾಯಕ ಸಂತವಿಸುವನು ಸರ್ವ ಜೀವರನು || ೨೯ ||

ವಾಸುದೇವನಿರುದ್ಧರೂಪದಿ ಪುಂಶರೀರದೊಳಿಹನು ಸರ್ವದ ಸ್ತ್ರೀ ಶರೀರದೊಳಿಹನು ಸಂಕರುಷಣನು ಪ್ರದ್ಯುಮ್ನ | ದ್ವಾಸುಪರ್ಣ ಶ್ರುತಿ ವಿನುತ ಸ ರ್ವಾಸುನಿಲಯ ನಾರಾಯಣನ ಸದು ಪಾಸನೆಯ ಗೈವವರೆ ಜೀವನ್ಮುಕ್ತರೆನಿಸುವರು ||೩೦ ||

ತನ್ನನಂತಾನಂತ ರೂಪ ಹಿ ರಣ್ಯ ಗರ್ಭಾದಿಗಳೊಳಗೆ ಕಾ ರುಣ್ಯಸಾಗರ ಹರಹಿ ಅವರವರಖಿಳ ವ್ಯಾಪಾರ | ಬನ್ನ ಬಡದಲೆ ಮಾಡಿ ಮಾಡಿಸಿ ಧನ್ಯರೆನಿಸಿ ಸಮಸ್ತ ದಿವಿಜರ ಪುಣ್ಯಕರ್ಮವ ಸ್ವೀಕರಿಸಿ ಫಲವಿತ್ತು ಪಾಲಿಸುವ || ೩೧ ||

ಸಾಗರದೊಳಿಹ ನದಿಯ ಜಲ ಭೇ' ದಾಗಸದೊಳಿಪ್ಪಬ್ದ ಬಲ್ಲವು ಕಾಗೆ ಗುಬ್ಬಿಗಳರಿಯೆ ಬಲ್ಲವೆ ನದಿಯ ಜಲಸ್ಥಿತಿಯ | ಭೋಗಿವರ ಪರಿಯಂಕ ಶಯನನೊ ಳೀ ಗುಣತ್ರಯ ಬದ್ಧ ಜಗವಿಹು ದಾಗಮಜ್ಞರು ತಿಳಿವರ ಜ್ಞಾನಿಗಳಿಗಳವಡದು || ೩೨ ||

ಕರಣಗುಣ ಭೂತಗಳೊಳಗೆ ತ ದ್ವರರೆನಿಪ ಬ್ರಹ್ಮಾದಿ ದಿವಿಜರೊ ಳರಿತು ರೂಪ ಚತುಷ್ಟಯಗಳನುದಿನದಿ ಸರ್ವತ್ರ | ಸ್ಮರಿಸುತನುಮೋದಿಸುತ ಹಿಗ್ಗುತ ಪರವಶದಿ ಪಾಡುವವರಿಗೆ ತ ನ್ನಿರವ ತೋರಿಸಿ ಭವ ವಿಮುಕ್ತರ ಮಾಡಿ ಪೋಷಿಸುವ || ೩೩ ||

ಮೂಲರೂಪನು ಮನದೊಳಿಹ ಶ್ರವ ಣಾಲಿಯೊಳಗಿಹ ಮತ್ಸ್ಯ ಕೂರ್ಮನು ಕೋಲರೂಪನು ತ್ವಗ್ರಸನದೊಳಗಿಪ್ಪ ನರಸಿಂಹ | ಬಾಲವಟು ವಾಮನನು ನಾಸಿಕ ನಾಳದೊಳು ವದನದಲಿ ಭಾರ್ಗವ ವಾಲಿ ಭಂಜನ ಹಸ್ತದೊಳು ಪಾದದಲಿ ಶ್ರೀಕೃಷ್ಣ || ೩೪ ||

ಜಿನವಿಮೋಹಕ ಬುದ್ಧ ಪಾಯುಗ ದನುಜ ಮರ್ದನ ಕಲ್ಕಿ ಮೇಡ್ರದಿ ಇನಿತು ದಶರೂಪಗಳ ದಶ ಕರಣಂಗಳಲಿ ತಿಳಿದು | ಅನುಭವಿಪ ವಿಷಯಗಳ ಕೃಷ್ಣಾ ರ್ಪಣವೆನಲು ಕೈಗೊಂಬ ವೃಜನಾ ರ್ದನ ವರ ಜಗನ್ನಾಥ ವಿಠಲ ವಿಶ್ವವ್ಯಾಪಕನು || ೩೫ ||