ಪುಟ:Rangammana Vathara.pdf/೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ರಂಗಮ್ಮನ ವಠಾರ

21

...ಈಗ ಭಿನ್ನವಾದ ಈ ಸನ್ನಿವೇಶ.
ಯಾರಾದರೂ ಹೇಳುವುದು ಸಾಧ್ಯವಿತ್ತು:
"ನಿರ್ಗತಿಕ ಬಡಪಾಯಿ ಆತ....ಹೋಗಲಿ ಬಿಡಿ, ಇದ್ದುಕೊಳ್ಳಲಿ."
ಆದರೆ ರಂಗಮ್ಮನಿಗೆ ತಿಳಿಯದೆ? ಹಾಗೆ ಒಮ್ಮೆ ಮೊದಲಾಯಿತೆಂದರೆ ಅದಕ್ಕೆ
ಕೊನೆಯುಂಟೆ? ಯಾರು ನಿರ್ಗತಿಕರಲ್ಲ? ಬಡಪಾಯಿಗಳಲ್ಲ?
ಅದು ಆ ತಿಂಗಳ ಮೂರನೆಯ ವಾರ. ಆಗಲೆ ಮನೆ ಖಾಲಿಯಾದರೆ ಮುಂದಿನ
ತಿಂಗಳ ಮೊದಲನೆ ತಾರೀಖಿನಿಂದಲೇ ಯಾರಾದರೂ ಬರುವುದು ಸಾಧ್ಯವಿತ್ತು, ಅದೂ
ಹೆಚ್ಚು ಬಾಡಿಗೆಗೆ-ಎರಡು ರೂಪಾಯಿಯಾದರೂ ಹೆಚ್ಚು ಬಾಡಿಗೆಗೆ. ಈಗಲೇ ಖಾಲಿ
ಯಾಗದೆ ಹೋದರೆ ಮತ್ತೂ ಒಂದು ತಿಂಗಳು ನಷ್ಟವೇ.
ಮಗನಿಗೆ ಬೆಂಗಳೂರಿಗೇ ವರ್ಗವಾದಮೇಲೆ ಮುಂಭಾಗದ ಮನೆಯ ಕೆಳಭಾಗದ
ನಾಲ್ಕು ಸಂಸಾರಗಳನ್ನೂ ಬಿಡಿಸಿ, ದುರಸ್ತಿ ಪಡಿಸಿ, ತಾವೆಲ್ಲ ಅಲ್ಲಿ ವಾಸ ಮಾಡಬೇಕು;
ಈಗ ತಾನಿರುವ ಮನೆಯನ್ನೂ ಬಾಡಿಗೆಗೆ ಕೊಡಬೇಕು-ಎಂಬುದು ರಂಗಮ್ಮನ ಅಪೇಕ್ಷೆ
ಯಾಗಿತ್ತು. ಮುಂದೆ, ಹಿಂಭಾಗದ ನಾಲ್ಕು ಮನೆಗಳ ಒಂದೊಂದು ಸಾಲನ್ನು ತಮ್ಮ
ಇಬ್ಬರು ಹೆಣ್ಣು ಮಕ್ಕಳಿಗೆ ಬಿಟ್ಟು ಹೋಗಬೇಕು ಎಂದುಕೊಂಡಿದ್ದರು.
ಇಲ್ಲ; ಬಾಡಿಗೆ ಹೋದರೆ ಹೋಗಲಿ ಎಂದು ಅವರು ಉಪೇಕ್ಷೆ ಮಾಡುವುದು
ಸಾಧ್ಯವಿರಲಿಲ್ಲ.
'ನಾನು ನಿರ್ದಯಳೂಂತ ಹೇಳೋ ಧೈರ್ಯ ಯಾರಿಗಿದೆ? ಈಗ ಮೂರು
ತಿಂಗಳ ಬಾಡಿಗೆ ಬಿಟ್ಟಿರೋದು ಸಾಲದೆ? ಶವ ಸಂಸ್ಕಾರಕ್ಕೇಂತ ಐದು ರೂಪಾಯಿ
ಬೇರೆ...'
ಯೋಚಿಸುತ್ತಿದ್ದ ರಂಗಮ್ಮನಿಗೆ ನಾರಾಯಣಿಯ ನೆನಪಾಯಿತು. ಮೊದಲ
ಸಾರೆ ಬಾಡಿಗೆಗೆ ಮನೆ ಕೇಳಲು ಬಂದ ಆಕೆ, ಚೊಚ್ಚಲ ಮಗುವನ್ನೆತ್ತಿಕೊಂಡು ನಗು
ನಗುತ್ತ ಮಾತನಾಡಿದ್ದಳು.
ಆಗ ಕೇಳಿದ್ದರು ರಂಗಮ್ಮ:
"ಮಗು__"
"ಗಂಡು," ಎಂದಿದ್ದಳು ನಾರಾಯಣಿ.
"ನನ್ನದೂ ಮೊದಲನೇದು ಗಂಡೇ."
"ಓ!"
ಆದರೆ, ನಾಲ್ಕು ಮಕ್ಕಳ ತಾಯಿಯಾಗಿ, ಸಾಯುವ ಕಾಲಕ್ಕೆ ಹೇಗಾಗಿ ಹೋಗಿ
ದ್ದಳು ಆ ನಾರಾಯಣಿ!
'ಬ್ರಹ್ಮಲಿಪಿ ಅಳಿಸೋರು ಯಾರು?' ಎಂದು ತಮ್ಮಷ್ಟಕ್ಕೆ ರಂಗಮ್ಮ ಅಂದು
ಕೊಂಡರು.
ಕನಿಕರದ ಅನುತಾಪದ ಒರತೆಗಳನ್ನು ಹತ್ತಿಕ್ಕಿ ರಂಗಮ್ಮ ಕರ್ತವ್ಯದ ಬಗೆಗೆ