ಪಂಪಭಾರತ ದ್ವಾದಶಾಶ್ವಾಸಂ

ವಿಕಿಸೋರ್ಸ್ದಿಂದ

ಪಂಪಭಾರತ -ಪದವಿಭಾಗ ಮತ್ತು ಅರ್ಥ::ಪಂಪಭಾರತ ದ್ವಾದಶಾಶ್ವಾಸಂ[ಸಂಪಾದಿಸಿ]

  • (XIII.VI.XIIX)-ಪದ್ಯದ ಮೊದಲ ಅಕ್ಷರ ವೃತ್ತದ ಹೆಸರು ಸೂಚಿಸುವುದು; ಇದು ಚಂಪೂ ಕಾವ್ಯವಾಗಿದ್ದು ಗದ್ಯವೂ ಇದೆ. (ಗಮನಿಸಿ:ಱ = ರ; ೞ=ಳ))
ಕುರುಕ್ಷೇತ್ರದಲ್ಲಿ ಘಟೋತ್ಕಜನ ವಧೆ - ದ್ರೋಣನ ದೇಹತ್ಯಾಗ- ಕರ್ಣನಿಗೆ ಸೇನಾಧಿಪತಿ ಪಟ್ಟ
ಕಂ|| ಶ್ರೀ ಶ್ರೀಕಾಂತಾಕಾಂತನಿಳಾ
ಲೋಕೈಕಲಲಾಮನಾ ಮಹೋಗ್ರಾರಿ ನೃಪಾ|
ನೀಕಮನನೇಕಮಂ ಗೆ
ಲ್ದಾ ಕಲಹದೊಳರಿಗನುಱದೆ ನಿಲ್ವುದುಮಾಗಳ್|| ೧
ಪದ್ಯ-೧:ಪದವಿಭಾಗ-ಅರ್ಥ:ಶ್ರೀ ಶ್ರೀಕಾಂತಾ ಕಾಂತಂ (ಜಯಲಕ್ಷ್ಮಿಯೆಂಬ ಸ್ತ್ರೀಗೆ ಒಡೆಯನಾದವನೂ ) ಇಳಾಲೋಕೈಕ ಲಲಾಮನ್ (ಭೂಮಂಡಲದಲ್ಲೆಲ್ಲ ಏಕಮಾತ್ರ ಶ್ರೇಷ್ಠನಾದವನೂ) ಆ ಮಹೋಗ್ರ ಅರಿ ನೃಪಾನೀಕಮನು (ವಿಶೇಷಭಯಂಕರವಾದ ಅನೇಕ ಶತ್ರುರಾಜರುಗಳ ) ಅನೇಕಮಂ ಗೆಲ್ದು (ಸಮೂಹವನ್ನು ಗೆದ್ದು) ಆ ಕಲಹದೊಳು ಅರಿಗನು ಉಱದೆ ನಿಲ್ವುದುಂ (ಆ ಯುದ್ಧದಲ್ಲಿ ಅರ್ಜುನನು ಕೂಡಲೆ ಬಂದು ನಿಂತಿರಲು,) ಆಗಳ್
ಪದ್ಯ-೧:ಅರ್ಥ: ಶ್ರೀ ಎಂಬ ಜಯಲಕ್ಷ್ಮಿಯಾದ ಸ್ತ್ರೀಗೆ ಒಡೆಯನಾದವನೂ ಭೂಮಂಡಲದಲ್ಲೆಲ್ಲ ಏಕಮಾತ್ರ ಶ್ರೇಷ್ಠನಾದವನೂ ವಿಶೇಷಭಯಂಕರವಾದ ಅನೇಕ ಶತ್ರುರಾಜರುಗಳ ಸಮೂಹವನ್ನು ಗೆದ್ದು ಆ ಯುದ್ಧದಲ್ಲಿ ಅರ್ಜುನನು ಕೂಡಲೆ ಬಂದು ನಿಂತಿರಲು, ಆಗ-.
ನಂಬಿ ನೃಪನೆನಗೆ ಸೈಂಧವ
ನಂ ಬಂದಪ್ಪೈಸೆ ಪೂಣ್ದೆನಾದುದನಾಗ|
ಲ್ಕಿಂಬಱಿದನುವರದೊಳವಂ
ಮುಂಬಯಣಂಬೋದನೆನಗೆ ಮಾಣ್ಬುದು ದೊರೆಯೇ|| ೨
ಪದ್ಯ-೨:ಪದವಿಭಾಗ-ಅರ್ಥ:ನಂಬಿ ನೃಪನು ಎನಗೆ ಸೈಂಧವನಂ ಬಂದು ಅಪ್ಪೈಸೆ (ರಾಜ ದುರ್ಯೋಧನನು ನನ್ನನ್ನು ನಂಬಿ ಸೈಂಧವನನ್ನು ತಂದು ನನಗೆ ಒಪ್ಪಿಸಲು) ಪೂಣ್ದೆನು ಆದುದನು ಆಗಲ್ಕೆ (ಅವನಾದುದನ್ನು ನಾನು ಅಗುತ್ತೇನೆ ಎಂದು ಪ್ರತಿಜ್ಞೆ ಮಾಡಿದೆನು.) ಇಂಬಱಿದು ಅನುವರದೊಳು ಅವಂ ಮುಂಬಯಣಂ ಬೋದನು (ಹದತಪ್ಪಿ ಯುದ್ಧದಲ್ಲಿ ಅವನು ಯುದ್ಧದಲ್ಲಿ ಮೊದಲು ಪಯಣ ಮಾಡಿದನು- ಮಡಿದನು.) ಎನಗೆ ಮಾಣ್ಬುದು ದೊರೆಯೇ (ನಾನು ತಡೆದು ಅವನಮತೆ ಆಗದಿರುವುದು ಉಚಿತವೇ?)
ಪದ್ಯ-೨:ಅರ್ಥ: ರಾಜ ದುರ್ಯೋಧನನು ನನ್ನನ್ನು ನಂಬಿ ಸೈಂಧವನನ್ನು ತಂದು ನನಗೆ ಒಪ್ಪಿಸಲು, ಅವನಾದುದನ್ನು ನಾನು ಅಗುತ್ತೇನೆ ಎಂದು ಪ್ರತಿಜ್ಞೆ ಮಾಡಿದೆನು. ಹದತಪ್ಪಿ ಯುದ್ಧದಲ್ಲಿ ಅವನು ಯುದ್ಧದಲ್ಲಿ ಮೊದಲು ಮಡಿದನು. ನಾನು ತಡೆದು ಅವನಮತೆ ಆಗದಿರುವುದು ಉಚಿತವೇ?-
ಬವರದಳೇಂ ಬಲ್ಲಂ ಕರ
ಮೊವಜುಗೆಯಲ್ ಪೆಱರ್ಗೆ ಕಂಡು ತನಗಱಿಯನದೆಂ|
ತುವೊ ನುಡಿ ತಪ್ಪದು ಕಮ್ಮಱ
ಯೊವಜಂ ಬಿಲ್ಲೊವಜನೆಂಬುದಂ ಮಾಡುವೆನೇ|| ೩
ಪದ್ಯ-೩:ಪದವಿಭಾಗ-ಅರ್ಥ:ಬವರದಳು ಏಂ ಬಲ್ಲಂ (ಯುದ್ಧದಲ್ಲಿ ಏನನ್ನು ಬಲ್ಲನು? ಏನೂ ಇಲ್ಲ) ಕರಂ ಒವಜುಗೆಯಲ್ ಪೆಱರ್ಗೆ (ಇತರರಿಗೆ ಉಪದೇಶ ಮಾಡುವುದಕ್ಕೆ ಬಲ್ಲನು, ವಿನಾ) ಕಂಡು ತನಗೆ ಅಱಿಯನು, ಅದೆಂತುವೊ (ನಿಜ ಯುದ್ಧದಲ್ಲಿ ಕಂಡು ತಿಳಿಯನು, ಅದು ಏನೋ! ) ಎಂತಹುದೋ ಈ ಮಾತು) ನುಡಿ ತಪ್ಪದು (ಮಾತಿಗೆ ತಪ್ಪಿದೆನೆಂಬ ನುಡಿ ನನಗೆ ತಪ್ಪುವುದಿಲ್ಲ.) ಕಮ್ಮಱಯೊವಜಂ (ಕರ್ಮ ಅವಜ್ಞೆಯ/ ತಪ್ಪಿದ ಒಜನು/ ಗುರುವು) ಬಿಲ್ಲ ಅವೊವಜಂ (ಬಿಲ್ಲು ವಿದ್ಯೆಯ ಅಓವಜ- ಆಚಾರ್ಯನಲ್ಲ;) ಎಂಬುದಂ ಮಾಡುವೆನೇ (ರಕ್ಷಣೆಯ ಮಾತಿಗೆ ತಪ್ಪಿದ ಗುರು - ಬಿಲ್ಲುವಿದ್ಯೆಯ ಉತ್ತಮ ಗುರು ಎಂಬುದನ್ನು ಮಾಡಿ ತೋರುವನೇ? ಇಲ್ಲ )
ಪದ್ಯ-೩:ಅರ್ಥ:ದ್ರೋಣನು- ಯುದ್ಧದಲ್ಲಿ ಏನನ್ನು ಬಲ್ಲನು? ಇತರರಿಗೆ ಉಪದೇಶ ಮಾಡುವುದಕ್ಕೆ ಬಲ್ಲನೇ ವಿನಾ ನಿಜ ಯುದ್ಧದಲ್ಲಿ ಕಂಡು ತಿಳಿಯನು, ಅದು ಏನೋ! ಮಾತಿಗೆ ತಪ್ಪಿದೆನೆಂಬ ನುಡಿ ನನಗೆ ತಪ್ಪುವುದಿಲ್ಲ. ಕರ್ಮ ಅವಜ್ಞೆಯ/ ತಪ್ಪಿದ ಒಜನು/ ಗುರುವು, ಬಿಲ್ಲು ವಿದ್ಯೆಯ ಅಓವಜ ಆಚಾರ್ಯನೇ ಅಲ್ಲ;ರಕ್ಷಣೆಯ ಮಾತಿಗೆ ತಪ್ಪಿದ ಗುರು - ಬಿಲ್ಲುವಿದ್ಯೆಯ ಉತ್ತಮ ಗುರು ಎಂಬುದನ್ನು ಮಾಡಿ ತೋರುವನೇ? ಇಲ್ಲ.
ಒಪ್ಪೆ ಜಯದ್ರಥನಾದುದ
ನಪ್ಪೆಂ ಪೋಗೆಂದು ಮುನ್ನೆ ನುಡಿದುದನೀಗಳ್|
ತಪ್ಪುವೆನೆ ಧರೆಯೊಳೆಂತುಂ
ತಪ್ಪದು ವಲಮೆನ್ನ ನುಡಿಯುಮೆನ್ನೆಚ್ಚಂಬುಂ|| ೪
ಪದ್ಯ-೪:ಪದವಿಭಾಗ-ಅರ್ಥ:ಒಪ್ಪೆ ಜಯದ್ರಥನಾದುದನು ಅಪ್ಪೆಂ ಪೋಗೆಂದು(ಎಲ್ಲರೂ ಒಪ್ವಪು ಹಾಗೆ, 'ಜಯದ್ರಥನಾದುದನ್ನು ನಾನು ಆಗುತ್ತೇನೆ ಹೋಗು' ಎಂದು) ಮುನ್ನೆ ನುಡಿದುದನೀಗಳ್ ತಪ್ಪುವೆನೆ (ಮೊದಲು ಆಡಿದ ಮಾತನ್ನು ಈಗ ತಪ್ಪುತ್ತೇನೆಯೇ?) ಧರೆಯೊಳು ಎಂತುಂ ತಪ್ಪದು ವಲಮ್ ಎನ್ನ ನುಡಿಯುಂ ಎನ್ನ ಎಚ್ಚ ಅಂಬುಂ (ಭೂಮಿಯಲ್ಲಿ ಎಂದೂ ನನ್ನ ಮಾತೂ ನಾನು ಪ್ರಯೋಗಿಸಿದ ಬಾಣವೂ ತಪ್ಪುವುದಿಲ್ಲ. ವಲಂ- ಅಲ್ಲವೇ? )
ಪದ್ಯ-೪:ಅರ್ಥ:ಎಲ್ಲರೂ ಒಪ್ವಪು ಹಾಗೆ, 'ಜಯದ್ರಥನಾದುದನ್ನು ನಾನು ಆಗುತ್ತೇನೆ ಹೋಗು' ಎಂದು, ಮೊದಲು ಆಡಿದ ಮಾತನ್ನು ಈಗ ತಪ್ಪುತ್ತೇನೆಯೇ? ಭೂಮಿಯಲ್ಲಿ ಎಂದೂ ನನ್ನ ಮಾತೂ ನಾನು ಪ್ರಯೋಗಿಸಿದ ಬಾಣವೂ ತಪ್ಪುವುದಿಲ್ಲ. ವಲಂ- ಅಲ್ಲವೇ?
ವ|| ಎಂದು ಕುಂಭಸಂಭವಂ ಜಳನಿಯಂ ಕುಡಿದ ಕುಂಭಸಂಭವನಂತೆ ಪಾಂಡವ ಬಳ ಜಳನಿಯನಳುರಲ್ ಬಗೆದು ನೇಸಱ್ ಪಟ್ಟೊಡಂ ಪೋಗದೆ ಪಗಲಿನನುವರ ದೊಳಳ್ಳೆವಿಳ್ಳೆಯಾದ ಪಾಂಡವರನಿರುಳೊಳೆ ಗೆಲ್ವೆನೆಂದು ಚತುರ್ಬಲಂಗಳನೊಂದುಮಾಡಿ
ವಚನ:ಪದವಿಭಾಗ-ಅರ್ಥ:ಎಂದು ಕುಂಭಸಂಭವಂ ಜಳನಿಯಂ ಕುಡಿದ ಕುಂಭಸಂಭವನಂತೆ (ಎಂದು ದ್ರೋಣಾಚಾರ್ಯನು ಸಮುದ್ರಪಾನಮಾಡಿದ ಅಗಸ್ತ್ಯರಂತೆ) ಪಾಂಡವ ಬಳ ಜಳನಿಯನು (ಪಾಂಡವ ಸೇನಾಸಮುದ್ರವನ್ನು) ಉರಲ್ ಬಗೆದು (ಸುಟ್ಟು ಹಾಕಲು ಯೋಚಿಸಿ) ನೇಸಱ್ ಪಟ್ಟೊಡಂ ಪೋಗದೆ (ಸೂರ್ಯಾಸ್ತಮಾನವಾದರೂ ಪಾಳೆಯಕ್ಕೆ ಹೋಗದೆ) ಪಗಲಿನ ಅನುವರದೊಳು ಅಳ್ಳೆವಿಳ್ಳೆಯಾದ ಪಾಂಡವರನು (ಹಗಲಿನ ಯುದ್ಧದಲ್ಲಿ ಆಯಾಸಹೊಂದಿದ) ಇರುಳೊಳೆ ಗೆಲ್ವೆನೆಂದು (ರಾತ್ರಿಯಲ್ಲಿ ಗೆಲ್ಲುತ್ತೇನೆ ಎಂದು) ಚತುರ್ಬಲಂಗಳನು ಒಂದುಮಾಡಿ (ಚತುರಂಗಸೈನ್ಯವನ್ನು ಒಟ್ಟುಗೂಡಿಸಿದನು.)
ವಚನ:ಅರ್ಥ:ಎಂದು ದ್ರೋಣಾಚಾರ್ಯನು ಸಮುದ್ರಪಾನಮಾಡಿದ ಅಗಸ್ತ್ಯರಂತೆ ಪಾಂಡವ ಸೇನಾಸಮುದ್ರವನ್ನು ಸುಟ್ಟು ಹಾಕಲು ಯೋಚಿಸಿ ಸೂರ್ಯಾಸ್ತಮಾನವಾದರೂ ಪಾಳೆಯಕ್ಕೆ ಹೋಗದೆ, ಹಗಲಿನ ಯುದ್ಧದಲ್ಲಿ ಆಯಾಸಹೊಂದಿದ ಪಾಂಡವರನ್ನು ರಾತ್ರಿಯಲ್ಲಿ ಗೆಲ್ಲುತ್ತೇನೆ ಎಂದು ಚತುರಂಗಸೈನ್ಯವನ್ನು ಒಟ್ಟುಗೂಡಿಸಿದನು.
ಉ|| ತಕ್ಕಿನ ವಿಕ್ರಮಾರ್ಜುನನ ಕೋಪದ ದಳ್ಳುರಿಗಳ್ ವಿರೋಧಿಯಂ|
ಮುಕ್ಕಲೆ ಮುತ್ತಿದಂತೆ ಕರಿಗೆಂಟು ರಥಕ್ಕನುವಾಗ ನಾಲ್ಕು ವಾ|
ಹಕ್ಕೆರಡಲ್ಲಿ ಪಾದಚರರ್ಗೊಂದೆನೆ ದೀವಿಗೆಗಳ್ ಜಲಕ್ಕನೆ
ಕ್ಕೆಕ್ಕೆಯಿನಿಟ್ಟಳಂ ಬೆಳಗುತಿರ್ದುವೆರೞ್ದೆಸೆಯೊಡ್ಡಣಂಗಳೊಳ್|| ೫
ಪದ್ಯ-೫:ಪದವಿಭಾಗ-ಅರ್ಥ:ತಕ್ಕಿನ ವಿಕ್ರಮಾರ್ಜುನನ ಕೋಪದ ದಳ್ಳುರಿಗಳ್ (ತಕ್ಕ ಶೂರನಾದ ವಿಕ್ರಮಾರ್ಜುನನ ಕೋಪದ ಮಹಾಜ್ವಾಲೆಗಳು) ವಿರೋಧಿಯಂ ಮುಕ್ಕಲೆ ಮುತ್ತಿದಂತೆ (ಶತ್ರುವನ್ನು ತಿಂದುಹಾಕಲಿಕ್ಕಾಗಿಯೇ ಮುತ್ತಿದೆಯೋ ಎನ್ನುವಂತೆ) ಕರಿಗೆ ಎಂಟು, ರಥಕ್ಕೆ ಅನುವಾಗ ನಾಲ್ಕು, ವಾಹಕ್ಕೆ ಎರಡು (ಒಂದು ಆನೆಗೆ ಎಂಟು, ರಥಕ್ಕೆ ನಾಲ್ಕು, ಕುದುರೆಗೆ ಎರಡು,) ಅಲ್ಲಿ ಪಾದಚರರ್ಗೆ ಒಂದು ಎನೆ ದೀವಿಗೆಗಳ್ (ಒಂದು ಆನೆಗೆ ಎಂಟು, ರಥಕ್ಕೆ ನಾಲ್ಕು, ಕುದುರೆಗೆ ಎರಡು, ಪಾದಚರರಿಗೆ ಒಂದು ಎನ್ನುವ ಕ್ರಮದಲ್ಲಿ ದೀವಿಟಿಗೆಗಳು) ಜಲಕ್ಕನೆ ಎಕ್ಕೆಕ್ಕೆಯಿನು ಇಟ್ಟಳಂ ಬೆಳಗುತಿರ್ದುವು (ಜಲಕ್ಕನೆ- ಚೆನ್ನಾಗಿ ಜ್ವಲಿಸುವಂತೆ ಪಕ್ಕಪಕ್ಕದಲ್ಲಿಯೇ ಮನೋಹರವಾಗಿ ಬೆಳಗುತ್ತಿದ್ದುವು) ಎರೞ್ದೆಸೆಯ ಒಡ್ಡಣಂಗಳೊಳ್, (ಎರಡು ದಿಕ್ಕಿನ ಸೈನ್ಯಗಳಲ್ಲಿಯೂ)
ಪದ್ಯ-೦೫ಅರ್ಥ: ತಕ್ಕ ಶೂರನಾದ ವಿಕ್ರಮಾರ್ಜುನನ ಕೋಪದ ಮಹಾಜ್ವಾಲೆಗಳು ಶತ್ರುವನ್ನು ತಿಂದುಹಾಕಲಿಕ್ಕಾಗಿಯೇ ಮುತ್ತಿದೆಯೋ ಎನ್ನುವಂತೆ, ಒಂದು ಆನೆಗೆ ಎಂಟು, ರಥಕ್ಕೆ ನಾಲ್ಕು, ಕುದುರೆಗೆ ಎರಡು, ಪಾದಚರರಿಗೆ ಒಂದು ಎನ್ನುವ ಕ್ರಮದಲ್ಲಿ ದೀವಿಟಿಗೆಗಳು ಜಲಕ್ಕನೆ- ಚೆನ್ನಾಗಿ ಜ್ವಲಿಸುವಂತೆ ಪಕ್ಕಪಕ್ಕದಲ್ಲಿಯೇ ಎರಡೂ ದಿಕ್ಕಿನ ಸೈನ್ಯಗಳಲ್ಲಿಯೂ ಮನೋಹರವಾಗಿ ಬೆಳಗುತ್ತಿದ್ದುವು
ವ|| ಅಂತು ಪಗಲಿಱಿದು ತಣಿಯದಿರುಳಂ ಪಗಲ್ಮಾಡಿ ಕಾದುವೆರೞ್ಪಡೆಗಳೇರ್ವೆಸನಂ ಕಣ್ಣಾರೆ ನೋಡಲೆಂದು ವೈಮಾನಿಕ ದೇವರಂಬರತಳದೊಳಿರ್ದು ಕಿರ್ಚೆೞ್ದ ಲಂಕೆಯಂ ನೋೞ್ಪಂತೆ ನೋಡೆ ಧರ್ಮಪುತ್ರನನಧೋಕ್ಷಜನಿಂತೆಂದಂ-
ವಚನ:ಪದವಿಭಾಗ-ಅರ್ಥ:ಅಂತು ಪಗಲಿಱಿದು ತಣಿಯದೆ ಇರುಳಂ ಪಗಲ್ಮಾಡಿ (ಹಾಗೆ ಹಗಲು ಯುದ್ಧಮಾಡಿ ತೃಪ್ತಿಯಾಗದೆ ರಾತ್ರಿಯನ್ನೇ ಹಗಲುಮಾಡಿಕೊಂಡು) ಕಾದುವ ಎರೞ್ ಪಡೆಗಳ ಏರ್ವೆಸನಂ ಕಣ್ಣಾರೆ ನೋಡಲೆಂದು (ಕಾದುವ ಎರಡೂ ಸೈನ್ಯಗಳ ಯುದ್ಧಕಾರ್ಯವನ್ನು ಪ್ರತ್ಯಕ್ಷವಾಗಿ ನೋಡಬೇಕೆಂದು) ವೈಮಾನಿಕ ದೇವರ್ ಅಂಬರತಳದೊಳು ಇರ್ದು (ಮೈಮಾನದಲ್ಲಿ ಬಂದ ದೇವತೆಗಳು ಆಕಾಶ ಪ್ರದೇಶದಲ್ಲಿದ್ದುಕೊಂಡು) ಕಿರ್ಚೆೞ್ದ ಲಂಕೆಯಂ ನೋೞ್ಪಂತೆ ನೋಡೆ (ಉರಿಯುತ್ತಿದ್ದ ಲಂಕಾಪಟ್ಟಣವನ್ನು ನೋಡುವಂತೆ ನೋಡಲು) ಧರ್ಮಪುತ್ರನಂ ಅಧೋಕ್ಷಜನು ಇಂತೆಂದಂ-
ವಚನ:ಅರ್ಥ: ಹಾಗೆ ಹಗಲು ಯುದ್ಧಮಾಡಿ ತೃಪ್ತಿಯಾಗದೆ ರಾತ್ರಿಯನ್ನೇ ಹಗಲುಮಾಡಿಕೊಂಡು ಕಾದುವ ಎರಡೂ ಸೈನ್ಯಗಳ ಯುದ್ಧಕಾರ್ಯವನ್ನು ಪ್ರತ್ಯಕ್ಷವಾಗಿ ನೋಡಬೇಕೆಂದು ಮೈಮಾನದಲ್ಲಿ ಬಂದ ದೇವತೆಗಳು ಆಕಾಶ ಪ್ರದೇಶದಲ್ಲಿದ್ದುಕೊಂಡು ಉರಿಯುತ್ತಿದ್ದ ಲಂಕಾಪಟ್ಟಣವನ್ನು ನೋಡುವಂತೆ ನೋಡಲು ಧರ್ಮರಾಯನು ಕೃಷ್ಣನನ್ನು ಕುರಿತು ಹೀಗೆಂದನು.
ಚಿಂ|| ಇರುಳೊಳುಮಿಂತು ಪೋಗದಿಱಿಯಲ್ ಘಟಸಂಭವನಿರ್ದನೆಂತು ನಿ
ತ್ತರಿಸುವಮೀ ಮಹಾಹವಮನೆಂಬುದುಮಿನ್ನಿರುಳೊಳ್ ಬಲಂ ನಿಶಾ|
ಚರ ಬಲಕುಂಟು ಮಾಣದೆ ಘಟೋತ್ಕಚನಂ ಬೆಸವೇೞ್ವುದೆಂದೊಡಾ
ದರದೊಳೆ ಭೀಮನಂದನನನಾ ಪದದೊಳ್ ಯಮರಾಜನಂದನಂ|| ೬ ||
ಪದ್ಯ-೬:ಪದವಿಭಾಗ-ಅರ್ಥ:ಇರುಳೊಳುಂ ಇಂತು ಪೋಗದೆ ಇಱಿಯಲ್ ಘಟಸಂಭವನು ಇರ್ದನು ಎಂತು ನಿತ್ತರಿಸುವಂ ಈ ಮಹಾಹವಮನು ಎಂಬುದುಂ (ಈ ಮಹಾಯುದ್ಧವನ್ನು ನಾವು ಹೇಗೆ ನಿರ್ವಹಿಸೋಣ ಎನ್ನಲು) ಇನ್ನು ಇರುಳೊಳ್ ಬಲಂ ನಿಶಾಚರ ಬಲಕುಂಟು ಮಾಣದೆ ಘಟೋತ್ಕಚನಂ ಬೆಸವೇೞ್ವುದು (ರಾಕ್ಷಸರು ರಾತ್ರಿಯಲ್ಲಿ ಶಕ್ತಿಯುಕ್ತರು. ಸಾವಕಾಶ ಮಾಡದೆ ಘಟೋತ್ಕಚನಿಗೆ ಆಜ್ಞೆ ಮಾಡು ಎಂದನು ಕೃಷ್ಣ.) ಎಂದೊಡೆ ಆದರದೊಳೆ ಭೀಮನಂದನನನು ಆ ಪದದೊಳ್ ಯಮರಾಜನಂದನಂ ()
ಪದ್ಯ-೬:ಅರ್ಥ: ದ್ರೋಣನು ರಾತ್ರಿಯಲ್ಲಿ ಹೀಗೆ ಹಿಂತಿರುಗದೆ ಯುದ್ಧಮಾಡಲಿದ್ದಾನೆ. ಈ ಮಹಾಯುದ್ಧವನ್ನು ನಾವು ಹೇಗೆ ನಿರ್ವಹಿಸೋಣ ಎನ್ನಲು ರಾಕ್ಷಸರು ರಾತ್ರಿಯಲ್ಲಿ ಶಕ್ತಿಯುಕ್ತರು. ಸಾವಕಾಶ ಮಾಡದೆ ಘಟೋತ್ಕಚನಿಗೆ ಆಜ್ಞೆ ಮಾಡು ಎಂದು ಕೃಷ್ಣನು ಹೇಳಿದನು. ಎಂದಾಗ ಆದರದಿಂದ ಧರ್ಮರಾಯನು ಘಟೋತ್ಕಚನನ್ನು ಕರೆದು-,
ವ|| ಕರೆದು ಮಗನೆ ನೀನಿಂದಿರುಳಿನನುವರಮನೆನಗೆ ಗೆಲ್ದೀಯಲ್ವೇೞ್ಕುಮೆಂದೊಡಿ ದಾವುದರಿದುಂ ಪಿರಿದುಮಾಗಿ ಬೆಸಸಿದರಂತೆಗೆಯ್ವೆನೆನ್ನ ತೊೞ್ತುವೆಸನನೀ ವಿಶಸನರಂಗದೊಳ್ ತೋರ್ಪೆನೆಂದು-
ವಚನ:ಪದವಿಭಾಗ-ಅರ್ಥ:ಧರ್ಮರಾಯನು ಘಟೋದ್ಘಜನಿಗೆ, ಕರೆದು ಮಗನೆ ನೀನು ಇಂದು ಇರುಳಿನ ಅನುವರಮನು ಎನಗೆ ಗೆಲ್ದು ಈಯಲ್ವೇೞ್ಕುಂ (ನೀನು ಈ ದಿನ ರಾತ್ರಿಯುದ್ಧವನ್ನು ನನಗೆ ಗೆದ್ದುಕೊಡಬೇಕು ಎಂದನು), ಎಂದೊಡೆ ಇದು ಆವುದು ಅರಿದುಂ ಪಿರಿದುಂ ಆಗಿ ಬೆಸಸಿದರಿ ಅಂತೆಗೆಯ್ವೆಂ (ಇದೇನು ಅಸಾಧ್ಯವೂ ಹಿರಿದೂ ಎನ್ನುವ ಹಾಗೆ ಅಪ್ಪಣೆಕೊಡುತ್ತೀರಿ; ಹಾಗೆಯೇ ಮಾಡುತ್ತೇನೆ) ಎನ್ನ ತೊೞ್ತುವೆಸನನು ಈ ವಿಶಸನರಂಗದೊಳ್ (ಯುದ್ಧದಲ್ಲಿ) ತೋರ್ಪೆನೆಂದು (ನನ್ನ ಸೇವಕಾರ್ಯವನ್ನು ಯುದ್ಧರಂಗದಲ್ಲಿ ತೋರಿಸುತ್ತೇನೆ ಎಂದು ಘಟೋತ್ಕಜ ಹೇಳಿದ;)-
ವಚನ:ಅರ್ಥ:ವ|| ಕರೆದು, ಮಗನೆ ನೀನು ಈ ದಿನ ರಾತ್ರಿಯುದ್ಧವನ್ನು ನನಗೆ ಗೆದ್ದುಕೊಡಬೇಕು ಎಂದನು; ಎಂದಾಗ ಅದಕ್ಕೆ ಘಟೋತ್ಕಚನು ಇದೇನು ಅಸಾಧ್ಯವೂ ಹಿರಿದೂ ಎನ್ನುವ ಹಾಗೆ ಅಪ್ಪಣೆಕೊಡುತ್ತೀರಿ; ಹಾಗೆಯೇ ಮಾಡುತ್ತೇನೆ; ನನ್ನ ಸೇವಕಾರ್ಯವನ್ನು ಯುದ್ಧರಂಗದಲ್ಲಿ ತೋರಿಸುತ್ತೇನೆ ಎಂದನು.

ಘಟೋತ್ಕಚನ ಯುದ್ಧ ಮತ್ತು ಕರ್ಣನಿಂದ ಅವನ ವಧೆ[ಸಂಪಾದಿಸಿ]

ಚಂ|| ಪರೆದುರಿಗೇಸಮವ್ವಳಿಪ ನಾಲಗೆ ಮಿಂಚುವ ದಾಟೆ ಬಿಟ್ಟ ಕಣ್
ತಿರುಪಿದ ಮೀಸೆ ಕೊಂಕಿದ ಸಟಂ ಕಱಿದಪ್ಪ ಕದಂಪು ನೀೞ್ದ ತಾ|
ೞ್ಮರದವೊಲಪ್ಪೊಡಲ್ ಕಹ ಕಹ ಧ್ವನಿ ಕೌಳಿಕ ನಾದಮಾದಮಾ
ಸುರತರಮಾಗೆ ಬಂದು ಕವಿದತ್ತು ಘಟೋತ್ಕಚ ರೌದ್ರ ಸಾಧನಂ|| ೭ ||
ಪದ್ಯ-೭:ಪದವಿಭಾಗ-ಅರ್ಥ:ಘಟೋತ್ಕಜ ಮತ್ತು ಅವನ ಸೈನಿಕರು: ಪರೆದ ಉರಿಗೇಸಮ್ ಅವ್ವಳಿಪ ನಾಲಗೆ ಮಿಂಚುವ ದಾಟೆ (ಉರಿಯಂತೆ ಕೆಂಪಗಿರುವ ಕೆದರಿದ ಕೂದಲು ಮುಂದಕ್ಕೆ ಚಾಚಿಕೊಂಡಿರುವ ನಾಲಿಗೆ, ಮಿಂಚುವ ಕೋರೆಹಲ್ಲು,) ಬಿಟ್ಟ ಕಣ್ ತಿರುಪಿದ ಮೀಸೆ ಕೊಂಕಿದ ಸಟಂ ಕಱಿದಪ್ಪ ಕದಂಪು (ತೆರೆದ ಕಣ್ಣ, ಹುರಿಮಾಡಿರುವ ಮೀಸೆ, ವಕ್ರವಾದ ಕೇಸರಗಳು, ಕರ್ರಗಿರುವ ಕೆನ್ನೆ,) ನೀೞ್ದ ತಾೞ್ಮರದವೊಲ್ ಅಪ್ಪೊಡಲ್ , ಕಹ ಕಹ ಧ್ವನಿ ಕೌಳಿಕ ನಾದಮಾದಂ ಆಸುರ ತರಮಾಗೆ (ಉದ್ದವಾದ ತಾಳೆಯ ಮರದಂತಿರುವ ಶರೀರ, ಕಹಕಹವೆಂಬ ಧ್ವನಿ, ಭಯಂಕರವಾದ ಶಬ್ದ-ಇವೆಲ್ಲ ಅತ್ಯಂತ ಭೆಯಂಕರವಾಗಿರಲು) ಬಂದು ಕವಿದತ್ತು ಘಟೋತ್ಕಚ ರೌದ್ರ ಸಾಧನಂ (ಘಟೋತ್ಕಚನ ಭಯಂಕರವಾದ ಸೈನ್ಯವು ಬಂದು ಮುತ್ತಿಕೊಂಡಿತು)
ಪದ್ಯ-೭:ಅರ್ಥ:ಘಟೋತ್ಕಜ ಮತ್ತು ಅವನ ಸೈನಿಕರು ಹೇಗಿದ್ದರೆಂದರೆ: ಉರಿಯಂತೆ ಕೆಂಪಗಿರುವ ಕೆದರಿದ ಕೂದಲು ಮುಂದಕ್ಕೆ ಚಾಚಿಕೊಂಡಿರುವ ನಾಲಿಗೆ, ಮಿಂಚುವ ಕೋರೆಹಲ್ಲು, ತೆರೆದ ಕಣ್ಣ, ಹುರಿಮಾಡಿರುವ ಮೀಸೆ, ವಕ್ರವಾದ ಕೇಸರಗಳು, ಕರ್ರಗಿರುವ ಕೆನ್ನೆ, ಉದ್ದವಾದ ತಾಳೆಯ ಮರದಂತಿರುವ ಶರೀರ, ಕಹಕಹವೆಂಬ ಧ್ವನಿ, ಭಯಂಕರವಾದ ಶಬ್ದ-ಇವೆಲ್ಲ ಅತ್ಯಂತ ಭೆಯಂಕರವಾಗಿರಲು ಘಟೋತ್ಕಚನ ಭಯಂಕರವಾದ ಸೈನ್ಯವು ಬಂದು ಮುತ್ತಿಕೊಂಡಿತು.
ವ|| ಅಂತು ನಿಶಾಚರ ಬಲಮಱವಱಗಾದ ಕಾಡನಳುರ್ವ ಬೇಗೆಯ ದಳ್ಳುರಿಯಂತೆ ದಳ್ಳಿಸಿ ಕೊಳ್ಳೆಂದರಾತಿ ಬಲಮನಳುರೆ ಕರಡಿಯ ತೊವಲೊಳ್ ಪುದಿದ ಕರ್ಬೊನ್ನ ರಥಮುಮಾ ರಥದೊಳೆಡಂಬಡೆ ಪೂಡಿದ ನಾಲ್ನೂಱು ಗೊಂಕುಱುಗೞ್ತೆಯಮಂಬರಸ್ಥಲಮನಡರ್ವ ಗ್ಯಧ್ರಧ್ವಜ ಮುಮಂಜನ ಪುಂಜದಂತಾಗಿ ಬ್ರಹ್ಮಾಂಡಮಂ ತಾಗಿದ ವಿಕಟಾಂಗಮುಮೆಳವೆಳವೆರೆಯನಡಸಿದಂತಪ್ಪ ದಾಡೆಯುಮಗುರ್ವಾಗೆ ಬಂದು ತಾಗಿದಾಗಳ್
ವಚನ:ಪದವಿಭಾಗ-ಅರ್ಥ:ಅಂತು ನಿಶಾಚರ ಬಲಂ ಅಱವಱಗಾದ (ಹಾಗೆ ರಾಕ್ಷಸ ಪಡೆಯು ಚೆನ್ನಾಗಿ ಒಣಗಿರುವ) ಕಾಡನು ಅಳುರ್ವ ಬೇಗೆಯ ದಳ್ಳುರಿಯಂತೆ ದಳ್ಳಿಸಿ (ಸುಡುವ ಬೇಸಿಗೆಯ ಮಹಾಜ್ವಾಲೆಯಂತೆ ದಹಿಸಿ- ಪ್ರಜ್ವಲಿಸಿ) ಕೊಳ್ಳೆಂದು ಆರಾತಿ ಬಲಮನು ಉಳುರೆ (‘ತೆಗೆದುಕೊ’ ಎಂದು ಶತ್ರುಸೈನ್ಯವನ್ನು ಸುಡುತ್ತಿರಲು) ಕರಡಿಯ ತೊವಲೊಳ್ ಪುದಿದ ಕರ್ಬೊನ್ನ ರಥಮುಂ (ಕರಡಿಯ ಚರ್ಮದಿಂದ ಆವರಿಸಲ್ಪಟ್ಟ ಕಬ್ಬಿಣದ ತೇರು,) ಆ ರಥದೊಳು ಎಡಂಬಡೆ ಪೂಡಿದ ನಾಲ್ನೂಱು ಗೊಂಕುಱುಗೞ್ತೆಯಂ (ಆ ರಥಕ್ಕೆ ಒಪ್ಪುವ ಹಾಗೆ ಹೂಡಿದ್ದ ನಾಲ್ಕ ನೂರು ಹೇಸರಕತ್ತೆ) ಅಂಬರಸ್ಥಲಮನು ಅಡರ್ವ ಗ್ಯಧ್ರಧ್ವಜ (ಆಕಾಶ ಪ್ರದೇಶವನ್ನು ಹತ್ತುವ ಹದ್ದಿನ ಬಾವುಟಗಳು,) ಅಂಜನ ಪುಂಜದಂತಾಗಿ (ಕಾಡಿಗೆಯ ರಾಶಿಯಂತಾಗಿ) ಬ್ರಹ್ಮಾಂಡಮಂ ತಾಗಿದ ವಿಕಟಾಂಗಮುಂ ಎಳವೆಳವೆರೆಯನು ಅಡಸಿದಂತಪ್ಪ ದಾಡೆಯುಂ (ಬಾಲಚಂದ್ರನನ್ನು ಜೋಡಿಸಿದ ಹಾಗಿದ್ದ ದಾಡೆ ) ಅಗುರ್ವಾಗೆ ಬಂದು ತಾಗಿದಾಗಳ್ ()
ವಚನ:ಅರ್ಥ: ಹಾಗೆ ರಾಕ್ಷಸ ಪಡೆಯು ಚೆನ್ನಾಗಿ ಒಣಗಿರುವ ಕಾಡನ್ನು ಸುಡುವ ಬೇಸಿಗೆಯ ಮಹಾಜ್ವಾಲೆಯಂತೆ ಪ್ರಜ್ವಲಿಸಿ ‘ತೆಕೊ’ ಎಂದು ಶತ್ರುಸೈನ್ಯವನ್ನು ಸುಡುತ್ತಿರಲು ಕರಡಿಯ ಚರ್ಮದಿಂದ ಆವರಿಸಲ್ಪಟ್ಟ ಕಬ್ಬಿಣದ ತೇರು, ಆ ರಥಕ್ಕೆ ಒಪ್ಪುವ ಹಾಗೆ ಹೂಡಿದ್ದ ನಾಲ್ಕ ನೂರು ಹೇಸರಕತ್ತೆ, ಆಕಾಶ ಪ್ರದೇಶವನ್ನು ಹತ್ತುವ ಹದ್ದಿನ ಬಾವುಟಗಳು, ಕಾಡಿಗೆಯ ರಾಶಿಯಂತಾಗಿ ಬ್ರಹ್ಮಾಂಡವನ್ನೂ ತಾಗಿದ ವಿಕಾರವಾದ ದೇಹ, ಬಾಲಚಂದ್ರನನ್ನು ಜೋಡಿಸಿದ ಹಾಗಿದ್ದ ದಾಡೆ ಇವುಗಳಿಂದ ಭಯಂಕರವಾಗಿ ಬಂದು ತಾಗಿ ಯುದ್ಧಕ್ಕೆ ತೊಡಗಿತು, ಆಗ-
ಚಂ|| ಕುದುರೆಯ ಬಿಲ್ಲ ಬಲ್ಲಣಿಯ ಕೇಣಿಯನಲ್ಲಿ ಕೆಲರ್ ನಿಶಾಟರು
ಣ್ಮಿದ ಬಿಸುನೆತ್ತರೊಳ್ ಮಿದಿದು ನುಣ್ಣನೆ ನುಂಗಿದರೆಲ್ಲಿಯುಂ ಕೆಲರ್|
ಕುದುಗುಳಿ ರಕ್ಕಸರ್ ಬಿಸುಗೆಗಳ್ವೆರಸುಗ್ರ ಮಹಾಗಜಂಗಳಂ
ಚದುರ್ಗಿಡೆ ನುಂಗಿ ಬಿಕ್ಕಿ ಕುಡಿದರ್ ಬಿಸುನೆತ್ತರ ಕಾೞ್ಪುರಂಗಳಂ|| ೮ ||
ಪದ್ಯ-೮:ಪದವಿಭಾಗ-ಅರ್ಥ:ಕುದುರೆಯ ಬಿಲ್ಲ ಬಲ್ಲಣಿಯ ಕೇಣಿಯನು (ಅಲ್ಲಿ ಕುದುರೆಗಳನ್ನು ಬಿಲ್ಗಾರರನ್ನು ಬಲಿಷ್ಠರಾದ ಕಾಲಾಳುಗಳ ಸಾಲುಗಳನ್ನು) ಅಲ್ಲಿ ಕೆಲರ್ ನಿಶಾಟರು ಉಣ್ಮಿದ (ಅಲ್ಲಿ ಕೆಲವು ರಾಕ್ಷಸರು ಚಿಮ್ಮಿದ) ಬಿಸುನೆತ್ತರೊಳ್ ಮಿದಿದು ನುಣ್ಣನೆ ನುಂಗಿದರು (ಮರ್ದನ ಮಾಡಿ (ಕುಟ್ಟಿ) ನಯವಾಗಿ ನುಂಗಿದರು) ಎಲ್ಲಿಯುಂ ಕೆಲರ್ ಕುದುಗುಳಿ ರಕ್ಕಸರ್ (ಮತ್ತೆ ಕೆಲವು ಬಹಳ ಕೋಪದಿಂದ ಕುದಿಯುವ ರಾಕ್ಷಸರು) ಬಿಸುಗೆಗಳ್ (ವೆ) ಬೆರಸು (ಅಂಬಾರಿ ಸಹಿತವಾಗಿ) ಉಗ್ರ ಮಹಾಗಜಂಗಳಂ ಚದುರ್ಗಿಡೆ ನುಂಗಿ (ಭಯಂಕರವಾದ ಆನೆಗಳನ್ನು ವಿಕಾರವಾದ ರೀತಿಯಲ್ಲಿ ನುಂಗಿ) ಬಿಕ್ಕಿ ಕುಡಿದರ್ ಬಿಸುನೆತ್ತರ ಕಾೞ್ಪುರಂಗಳಂ (ಉಸಿರೆಳೆದು ಬಿಕ್ಕುತ್ತಾ ಕಾಡುಪ್ರಾಣಿಗಳ ಬಿಸಿರಕ್ತದ ಪ್ರವಾಹವನ್ನು ಹೀರಿ ಕುಡಿದರು.) (ಕಾೞ್ಪುರಂಗಳಂ- ಕಾಢಿನ ಪ್ರವಾಹಗಳನ್ನು)
ಪದ್ಯ-೮:ಅರ್ಥ: ಅಲ್ಲಿ ಕುದುರೆಗಳನ್ನು ಬಿಲ್ಗಾರರನ್ನು ಬಲಿಷ್ಠರಾದ ಕಾಲಾಳುಗಳ ಸಾಲುಗಳನ್ನು ಅಲ್ಲಿ ಕೆಲವು ರಾಕ್ಷಸರು ಚಿಮ್ಮಿದ ಬಿಸಿರಕ್ತದಲ್ಲಿ ಮರ್ದನ ಮಾಡಿ (ಕುಟ್ಟಿ) ನಯವಾಗಿ ನುಂಗಿದರು. ಮತ್ತೆ ಕೆಲವು ಬಹಳ ಕೋಪದಿಂದ ಕುದಿಯುವ ರಾಕ್ಷಸರು ಅಂಬಾರಿ ಸಹಿತವಾಗಿ ಭಯಂಕರವಾದ ಆನೆಗಳನ್ನು ವಿಕಾರವಾದ ರೀತಿಯಲ್ಲಿ ನುಂಗಿ ಉಸಿರೆಳೆದು ಬಿಕ್ಕುತ್ತಾ ಕಾಡುಪ್ರಾಣಿಗಳ ಬಿಸಿರಕ್ತದ ಪ್ರವಾಹಗಳನ್ನು ಹೀರಿ ಕುಡಿದರು.
ವ|| ಅಂತು ರಕ್ಕಸವಡೆ ತನ್ನ ಪಡೆಯೆಲ್ಲಮಂ ತೆರಳ್ಚಿ ತೇರಯಿಸಿ ನುಂಗಿದೊಡೆ ಬೆಱಗಾದ ಸುಯೋಧನನಂ ಬಕಾಸುರ ಜಟಾಸುರರ ಮಕ್ಕಳಪ್ಪಳಂಭೂಪ ಹಲಾಯುಧ ಮುಸಲಾಯುಧ ಕಾಳ ನೀಳ ರೂಕ್ಷರಾಕ್ಷಸರ್ ಮುನ್ನೆ ತಮ್ಮಣ್ಣನ ತಂದೆಯ ಪಗೆಯಂ ನೆಱಪಲೆಂದು ಬೆಸನಂ ಬೇಡಿದಾಗಳ್-
ವಚನ:ಪದವಿಭಾಗ-ಅರ್ಥ:ಅಂತು ರಕ್ಕಸವಡೆ ತನ್ನ ಪಡೆಯೆಲ್ಲಮಂ ತೆರಳ್ಚಿ (ಉಂಡೆಮಾಡಿ?) ತೇರಯಿಸಿ ನುಂಗಿದೊಡೆ (ಹಾಗೆ ರಾಕ್ಷಸಸೈನ್ಯವು ತನ್ನ ಸೈನ್ಯವನ್ನೆಲ್ಲ ಉಂಡೆಮಾಡಿ ಆತುರದಿಂದ ನುಂಗಲು) ಬೆಱಗಾದ ಸುಯೋಧನನಂ (ಆಶ್ಚರ್ಯಪಡುತ್ತಿದ್ದ ದುರ್ಯೋಧನನ್ನನ್ನು) ಬಕಾಸುರ ಜಟಾಸುರರ ಮಕ್ಕಳಪ್ಪ-(ಬಕಾಸುರ ಮತ್ತು ಜಟಾಸುರರ ಮಕ್ಕಳಾದ) ಅಳಂಭೂಪ ಹಲಾಯುಧ ಮುಸಲಾಯುಧ ಕಾಳ ನೀಳ ರೂಕ್ಷರಾಕ್ಷಸರ್ ಮುನ್ನೆ ತಮ್ಮಣ್ಣನ ತಂದೆಯ ಪಗೆಯಂ ನೆಱಪಲೆಂದು (ಮತ್ತು ತಂದೆಯ ಹಿಂದಿನ ದ್ವೇಷವನ್ನು ತೀರಿಸಿಕೊಳ್ಳಲು) ಬೆಸನಂ ಬೇಡಿದಾಗಳ್ (ಆಜ್ಞೆಯಾಗಬೇಕೆಂದು ಕೇಳಿಕೊಂಡರು)-
ವಚನ:ಅರ್ಥ: ಹಾಗೆ ರಾಕ್ಷಸಸೈನ್ಯವು ತನ್ನ ಸೈನ್ಯವನ್ನೆಲ್ಲ ಉಂಡೆಮಾಡಿ ಆತುರದಿಂದ ನುಂಗಲು ಆಶ್ಚರ್ಯಪಡುತ್ತಿದ್ದ ದುರ್ಯೋಧನನ್ನನ್ನು ಬಕಾಸುರ ಮತ್ತು ಜಟಾಸುರರ ಮಕ್ಕಳಾದ ಅಳಂಭೂಷ, ಹಲಾಯುಧ, ಮುಸಲಾಯುಧ, ಕಾಳ ನೀಳರೆಂಬ ರೂಕ್ಷರಕ್ಷಸರು ತಮ್ಮಣ್ಣನ ಮತ್ತು ತಂದೆಯ ಹಿಂದಿನ ದ್ವೇಷವನ್ನು ತೀರಿಸಿಕೊಳ್ಳಲು, ತಮಗೆ ಆ ಕಾರ್ಯದಲ್ಲಿ ಭಾಗವಹಿಸಲು ಆಜ್ಞೆಯಾಗಬೇಕೆಂದು ಕೇಳಿಕೊಂಡರು.
ಚಂ|| ಪ್ರತಿ ವಿಷಮಗ್ನಿಗಗ್ನಿ ವಿಷಕಂ ವಿಷಮೆಂಬವೊಲಾ ನಿಶಾಚರಂ
ಗತಿ ಬಲರೀ ನಿಶಾಟರಿವರಕ್ಕೆನುತುಂ ಬೆಸವೇೞೆ ತಾಗಿದಾ|
ದಿತಿಸುತರಂ ಘಟೋತ್ಕಚನಸುಂಗೊಳೆ ಕಾದಿ ನಿಶಾಟಕೋಟಿ ಸಂ
ತತಿಗಳನಿಕ್ಕಿ ಪಾಂಡವಬಲಕ್ಕನುರಾಗಮನುಂಟುಮಾಡಿದಂ|| ೯ ||
ಪದ್ಯ-೯:ಪದವಿಭಾಗ-ಅರ್ಥ:ಪ್ರತಿ ವಿಷಮ್ ಅಗ್ನಿಗೆ ಅಗ್ನಿ ವಿಷಕಂ ವಿಷಮೆಂಬವೊಲು (ವಿಷಕ್ಕೆ ಪ್ರತಿವಿಷವೂ, ಅಗ್ನಿಗೆ ಅಗ್ನಿಯೂ ಪ್ರತಿವಿಷವು/ ಪರಿಹಾರವು ಎನ್ನುವ ಹಾಗೆ) ಆ ನಿಶಾಚರಂಗೆ ಅತಿ ಬಲರು ಈ ನಿಶಾಟರ್ ಇವರ ಕ್ಕೆನುತುಂ (ಆ ಘಟೋತ್ಕಚನೆಂಬ ರಾಕ್ಷಸನಿಗೆ ಅತಿ ಬಲಿಷ್ಠರಾದ ಈ ರಾಕ್ಷಸರು ಪ್ರತಿಶಕ್ತಿಯಾಗಲಿ ಎನ್ನುತ್ತ) ಬೆಸವೇೞೆ (ದುರ್ಯೋಧನನು ಆಗಬಹುದೆಂದು ಅವರಿಗೆ ಆಜ್ಞೆಮಾಡಿದನು.) ತಾಗಿದ ಆ ದಿತಿಸುತರಂ ಘಟೋತ್ಕಚನ ಅಸುಂಗೊಳೆ ಕಾದಿ (ಬಂದು ಎದುರಿಸಿದ ಆ ರಾಕ್ಷಸರನ್ನು ಘಟೋತ್ಕಚನು ಪ್ರಾಣಾಪಹಾರ ಮಾಡುವ ಹಾಗೆ ಹೊಡೆದು) ನಿಶಾಟಕೋಟಿ ಸಂತತಿಗಳನು ಇಕ್ಕಿ (ಆ ರಾಕ್ಷಸಸಮೂಹವನ್ನು ಸಂಹರಿಸಿ) ಪಾಂಡವಬಲಕ್ಕೆ ಅನುರಾಗಮನು ಉಂಟುಮಾಡಿದಂ ()
ಪದ್ಯ-೯:ಅರ್ಥ: ವಿಷಕ್ಕೆ ಪ್ರತಿವಿಷವೂ, ಅಗ್ನಿಗೆ ಅಗ್ನಿಯೂ ಪ್ರತಿವಿಷವು/ ಪರಿಹಾರವು ಎನ್ನುವ ಹಾಗೆ, ಆ ಘಟೋತ್ಕಚನೆಂಬ ರಾಕ್ಷಸನಿಗೆ ಅತಿ ಬಲಿಷ್ಠರಾದ ಈ ರಾಕ್ಷಸರು ಪ್ರತಿಶಕ್ತಿಯಾಗಲಿ ಎನ್ನುತ್ತ ದುರ್ಯೋಧನನು ಆಗಬಹುದೆಂದು ಅವರಿಗೆ ಆಜ್ಞೆಮಾಡಿದನು. ಬಂದು ಎದುರಿಸಿದ ಆ ರಾಕ್ಷಸರನ್ನು ಘಟೋತ್ಕಚನು ಪ್ರಾಣಾಪಹಾರ ಮಾಡುವ ಹಾಗೆ ಹೊಡೆದು, ಆ ರಾಕ್ಷಸಸಮೂಹವನ್ನು ಸಂಹರಿಸಿ ಪಾಂಡವಸೈನ್ಯಕ್ಕೆ ಸಂತೋಷವನ್ನುಂಟುಮಾಡಿದನು.
ವ|| ಅಂತು ಕುರುಬಲಮೆಲ್ಲಮಂ ಜೀರಗೆಯೊಕ್ಕಲ್ಮಾಡಿ ತುೞಿದು ಕೊಲೆ ರಾಜರಾಜಂ ಬೆಸದೊಳಂರಾಜಂ ಬಂದು ತಾಗೆ-
ವಚನ:ಪದವಿಭಾಗ-ಅರ್ಥ:ಅಂತು ಕುರುಬಲಂ ಎಲ್ಲಮಂ ಜೀರಗೆಯ ಒಕ್ಕಲ್ಮ್ ಮಾಡಿ (ಕೌರವಸೈನ್ಯವನ್ನೆಲ್ಲ ಜೀರಿಗೆಯನ್ನು ಒಕ್ಮುವಂತೆ ಮಾಡಿ) ತುೞಿದು ಕೊಲೆ ರಾಜರಾಜಂ ಬೆಸದೊಳು (ತುಳಿದು ಕೊಲ್ಲಲು ದುರ್ಯೋಧನನ ಆಜ್ಞೆಯ ಪ್ರಕಾರ) ಅಂಗ ರಾಜಂ ಬಂದು ತಾಗೆ ( ಕರ್ಣನು ಬಂದು ಎದುರಿಸಿದನು. ಆಗ)-
ವಚನ:ಅರ್ಥ:ವ|| ಕೌರವಸೈನ್ಯವನ್ನೆಲ್ಲ ಜೀರಿಗೆಯನ್ನು ಒಕ್ಮುವಂತೆ ಮಾಡಿ ತುಳಿದು ಕೊಲ್ಲಲು ದುರ್ಯೋಧನನ ಆಜ್ಞೆಯ ಪ್ರಕಾರ ಕರ್ಣನು ಬಂದು ಎದುರಿಸಿದನು, ಆಗ
ಮ|| ಸಮದೇಭೇಂದ್ರ ಸಮೂಹದಿಂದಮಿಡುತುಂ ಕಂಠೀರವಧ್ವಾನದಿಂ
ದಮಗುರ್ವಪ್ಪಿನಮಾರುತುಂ ಪೆಣಗಳಂ ನುಂಗುತ್ತುಮಾಕಾಶದಂ|
ತಮನೆಯ್ದುತ್ತುಮಿದಿರ್ಚಿ ಕಾದುವೆಡೆಯೊಳ್ ಕಾಣುತ್ತೆ ದೇವರ್ಕಳಿ
ನ್ನುಮೊಳಂ ರಾವಣನೆಂಬಿನಂ ನೆಗೞ್ದುದಾ ಹೈಡಿಂಬನಾಡಂಬರಂ|| ೧೦ ||
ಪದ್ಯ-೧೦:ಪದವಿಭಾಗ-ಅರ್ಥ:ಸಮದೇಭೇಂದ್ರ ಸಮೂಹದಿಂದಂ ಇಡುತುಂ (ಸಮತ್ ಇಭ ಇಂದ್ರ ಸಮೂಹ ; ಮದಿಸಿದ ಆನೆಗಳ ಸಮೂಹದಿಂದ ಹೊಡೆಯುತ್ತಲೂ) ಕಂಠೀರವಧ್ವಾನದಿಂದಂ ಅಗುರ್ವಪ್ಪಿನಂ (ಸಿಂಹದ ಧ್ವನಿಯಿಂದ ಭಯವುಂಟಾಗುವ ಹಾಗೆ ಆರ್ಭಟಿಸುತ್ತಲೂ) ಆ ಮಾರುತುಂ ಪೆಣಗಳಂ ನುಂಗುತ್ತುಂ (ಹೆಣಗಳನ್ನು ನುಂಗುತ್ತಲೂ) ಆಕಾಶದಂತಮನೆ ಎಯ್ದುತ್ತುಮ್ ಇದಿರ್ಚಿ (ಆಕಾಶದ ಕೊನೆಗೂ ಹೋಗಿ ಎದುರಿಸಿ) ಕಾದುವ ಎಡೆಯೊಳ್ ಕಾಣುತ್ತೆ (ಕಾದುವ ಸನ್ನಿವೇಶವನ್ನು ನೋಡಿ) ದೇವರ್ಕಳು ಇನ್ನುಮೊಳಂ ರಾವಣನೆಂಬಿನಂ (ರಾವಣನೆಂಬುವನು ಇನ್ನೂ ಇದ್ದಾನೆ ಎನ್ನುವಷ್ಟು) ನೆಗೞ್ದುದು ಆ ಹೈಡಿಂಬನ ಆಡಂಬರಂ (ಆ ಘಟೋತ್ಕಚನ ಆಡಂಬರವು ಪ್ರಸಿದ್ಧವಾಯಿತು)
ಪದ್ಯ-೧೦:ಅರ್ಥ: ೧೦. ಮದಿಸಿದ ಆನೆಗಳ ಸಮೂಹದಿಂದ ಹೊಡೆಯುತ್ತಲೂ ಸಿಂಹದ ಧ್ವನಿಯಿಂದ ಭಯವುಂಟಾಗುವ ಹಾಗೆ ಆರ್ಭಟಿಸುತ್ತಲೂ ಹೆಣಗಳನ್ನು ನುಂಗುತ್ತಲೂ ಆಕಾಶದ ಕೊನೆಗೂ ಹೋಗಿ ಎದುರಿಸಿ ಕಾದುವ ಸನ್ನಿವೇಶವನ್ನು ನೋಡಿ ದೇವತೆಗಳು ರಾವಣನೆಂಬುವನು ಇನ್ನೂ ಇದ್ದಾನೆ ಎನ್ನುವಷ್ಟು ಆ ಘಟೋತ್ಕಚನ ಆಡಂಬರವು ಪ್ರಸಿದ್ಧವಾಯಿತು.
ಕಂ|| ಸರಿದಧಿಪತಿ ಮೊೞಕಾಲ್ವರ
ಮುರಂಬರಂ ಮೇರು ಮುಯ್ವುವರೆಗಮಜಾಂಡಂ|
ಬರೆ ತಲೆಯ ನೆಲೆಗೆ ಲೋಕಾಂ
ತರಮೆಡೆಯಿಲ್ಲೆನಿಸೆ ಪೆರ್ಚಿದಂ ದನುತನಯಂ|| ೧೧ ||
ಪದ್ಯ-೧೦:ಪದವಿಭಾಗ-ಅರ್ಥ: ಸರಿದಧಿಪತಿ (ಸರಿತ್ - ನದಿಗಳಿಗೆ ಅಧಿಪತಿ-ರಾಜ ಸಮುದ್ರವು) ಮೊೞಕಾಲ್ವರಂ (ಮೊಣಕಾಲಿನವರೆಗೂ) ಉರಂಬರಂ ಮೇರುಮುಂ (ಮೇರುಪರ್ವತವು ಎದೆಯವರೆಗೂ) ಮಯ್ವುವರೆಗಂ ಅಜಾಂಡಂ ಬರೆ (ಬ್ರಹ್ಮಾಂಡವು ಭುಜದವರೆಗೂ ಬರಲು) ತಲೆಯ ನೆಲೆಗೆ ಲೋಕಾಂತರಂ ಎಡೆಯಿಲ್ಲ ಎನಿಸೆ (ತಲೆಯವರೆಗೆ ಲೋಕಾಂತರದಲ್ಲಿಯೂ ಸ್ಥಳವಿಲ್ಲ ಎನ್ನುವಂತೆ,) ಪೆರ್ಚಿದಂ ದನುತನಯಂ (ದೊಡ್ಡದಾಗಿ ದನು+ಜ ತನಯ/ ರಾಕ್ಷಸಪುತ್ರನು ಘಟೋತ್ಕಚನು ಬೆಳೆದನು)
ಪದ್ಯ-೧೦:ಅರ್ಥ: ಸಮುದ್ರವು ಮೊಣಕಾಲಿನವರೆಗೂ ಮೇರುಪರ್ವತವು ಎದೆಯವರೆಗೂ ಬ್ರಹ್ಮಾಂಡವು ಭುಜದವರೆಗೂ ಬರಲು ತಲೆಯವರೆಗೆ ಲೋಕಾಂತರದಲ್ಲಿಯೂ ಸ್ಥಳವಿಲ್ಲವೆನ್ನುವಷ್ಟು, ದೊಡ್ಡದಾಗಿ ರಾಕ್ಷಸ ಪುತ್ರನಾದ ಘಟೋತ್ಕಚನು ಬೆಳೆದನು.
ಬೆಳ್ಳಾಳ್ಗೆ ಪೊಳೆಪುದೋಱುವು
ದೊಳ್ಳಾಳ್ಗೆ ಪೊಡರ್ಪುದೋರ್ಪುದಿರದಣ್ಮಣ್ಮೊಣ್ಮೆಂ|
ದೊಳ್ಳಲಗಿನ ಶರತತಿಯಿಂ
ಕೊಳ್ಳ ಕೊಳೆಂದಂಗರಾಜನಸುರನನೆಚ್ಚಂ|| ೧೨ ||
ಪದ್ಯ-೧೨:ಪದವಿಭಾಗ-ಅರ್ಥ:ಬೆಳ್ಳ ಆಳ್ಗೆ (ಹೆದರುವ ಯೋಧನಿಗೆ) ಪೊಳೆಪುದೋಱುವುದು (ಆಯುಧದ ಹೊಳಪನ್ನು ತೋರಿಸುವುದು,ಅಷ್ಟೇ ಸಾಕು)ಒಳ್ಳಾಳ್ಗೆ ಪೊಡರ್ಪು ತೋರ್ಪುದು (ಒಳ್ಳೆಯ ವೀರಭಟನಿಗೆ ಪರಾಕ್ರಮವನ್ನು ತೋರಿಸತಕ್ಕದ್ದು;) ಇರದೆ ಅಣ್ಮಣ್ಮ ಒಣ್ಮೆ ಎಂದು (ಕೂಡಲೆ ನಿನ್ನ ಪರಾಕ್ರಮವನ್ನು ತೋರು ಎಂದು,) ಒಳ್ಳೆ ಅಲಗಿನ ಶರತತಿಯಿಂ (ಒಳ್ಳೆಯ ಅಲಗಿನಿಂದ ಕೂಡಿದ ಬಾಣಗಳ ಸಮೂಹದಿಂದ) ಕೊಳ್ಳ್ ಕೊಳ್ ಎಂದು ಅಂಗರಾಜನು ಅಸುರನನು ಎಚ್ಚಂ (ತೆಕೊ ತೆಕೊ ಎಂದು ಕರ್ಣನು ರಾಕ್ಷಸನನ್ನು ಹೊಡೆದನು.)
ಪದ್ಯ-೧೨:ಅರ್ಥ: ೧೨. ಅಂಜುಪುರಕನಿಗೆ ಆಯುಧದ ಹೊಳಪನ್ನು ತೋರಿಸತಕ್ಕದ್ದು, ಒಳ್ಳೆಯ ವೀರಭಟನಿಗೆ ಪರಾಕ್ರಮವನ್ನು ತೋರಿಸತಕ್ಕದ್ದು; ಆದುದರಿಂದ ಈಗ ನೀನು ನನಗೆ ಕೂಡಲೆ ನಿನ್ನ ಪರಾಕ್ರಮವನ್ನು ತೋರು ಎಂದು, ತೆಕೊ ತೆಕೊ ಎಂದು ಕರ್ಣನು ಒಳ್ಳೆಯ ಅಲಗಿನಿಂದ ಕೂಡಿದ ಬಾಣಗಳ ಸಮೂಹದಿಂದ ರಾಕ್ಷಸನನ್ನು ಹೊಡೆದನು.
ಉತ್ಸಾಹ|| ಎಚ್ಚೊಡಸುರನಿಟ್ಟ ಬೆಟ್ಟನೊಂದು ವಜ್ರಶರದಿನಾ
ರ್ದೆಚ್ಚು ದಿತಿಜನೆಚ್ಚ ಸಿಡಿಲ ಶರಮನುದಕಬಾಣದಿಂ|
ದೆಚ್ಚು ದನುತನೂಜನೆಚ್ಚ ವಾರ್ಧಿಗನಲಬಾಣದಿಂ
ದೆಚ್ಚು ನಚ್ಚುಗಿಡಿಸೆ ಕೊಂಡು ಶೂಲಮಂ ಘಟೋತ್ಕಚಂ|| ೧೩ ||
ಪದ್ಯ-೧೩:ಪದವಿಭಾಗ-ಅರ್ಥ:ಎಚ್ಚೊಡೆ ಅಸುರನು ಇಟ್ಟ ಬೆಟ್ಟನು ಒಂದು ವಜ್ರಶರದಿಂ ಆರ್ದು ಎಚ್ಚು (ರಾಕ್ಷಸ ಘಟೋತ್ಕಚನು ಎಸೆದ ಒಂದು ಬೆಟ್ಟವನ್ನು ವಜ್ರಾಸ್ತ್ರದಿಂದ ಆರ್ಭಟಿಸಿ ಹೊಡೆದು) ದಿತಿಜನೆಚ್ಚ ಸಿಡಿಲ ಶರಮನು ( ರಾಕ್ಷಸನು ಹಾಕಿದ ಸಿಡಿಲ ಬಾಣವನ್ನು) ಉದಕಬಾಣದಿಂದ ಎಚ್ಚು (ರಾಕ್ಷಸನು ಹಾಕಿದ ಸಿಡಿಲ ಬಾಣವನ್ನು ಉದಕಾಸ್ತ್ರದಿಂದ ಹೊಡೆದು,) ದನುತನೂಜನ ಎಚ್ಚ ವಾರ್ಧಿಗೆ ಅನಲಬಾಣದಿಂದ ಎಚ್ಚು (ಅವನು ಇಟ್ಟ ಸಮುದ್ರಾಸ್ತ್ರವನ್ನು ಕರ್ಣನು ಆಗ್ನೇಯಾಸ್ತ್ರದಿಂದ ಹೊಡೆದು ನಿವಾರಿಸಲು,) ನಚ್ಚುಗಿಡಿಸೆ (ಅವನ ಆತ್ಮವಿಶ್ವಾಸವನ್ನು ಹಾಳುಮಾಡಲಾಗಿ) ಕೊಂಡು ಶೂಲಮಂ ಘಟೋತ್ಕಚಂ (ಘಟೋತ್ಕಚನು ಶೂಲಾಯಧವನ್ನು ತೆಗೆದುಕೊಂಡು ಬಂದನು-)
ಪದ್ಯ-೧೩:ಅರ್ಥ:ಕರ್ಣನು ಹಾಗೆ ಹೊಡೆದಾಗ, ರಾಕ್ಷಸ ಘಟೋತ್ಕಚನು ಎಸೆದ ಒಂದು ಬೆಟ್ಟವನ್ನು ವಜ್ರಾಸ್ತ್ರದಿಂದ ಆರಭಟಿಸಿ ಹೊಡೆದು, ರಾಕ್ಷಸನು ಹಾಕಿದ ಸಿಡಿಲ ಬಾಣವನ್ನು ಉದಕಾಸ್ತ್ರದಿಂದ ಹೊಡೆದು, ಅವನು ಇಟ್ಟ ಸಮುದ್ರಾಸ್ತ್ರವನ್ನು ಕರ್ಣನು ಆಗ್ನೇಯಾಸ್ತ್ರದಿಂದ ಹೊಡೆದು ನಿವಾರಿಸಲು, ಅವನ ಆತ್ಮವಿಶ್ವಾಸವನ್ನು ಹಾಳುಮಾಡಲಾಗಿ, ಘಟೋತ್ಕಚನು ಶೂಲಾಯಧವನ್ನು ತೆಗೆದುಕೊಂಡು ಬಂದನು-
ಕಂ|| ನೆಲನದಿರ್ವಿನಮಿದಿರಂ ಬರೆ
ಕುಲಿಶಾಯುಧನಿತ್ತ ಶಕ್ತಿಯಿಂದಾತನುರ|
ಸ್ಥಲಮನಿಡೆ ವಜ್ರಹತಿಯಿಂ
ಕುಲಗಿರಿ ಕೆಡೆವಂತೆ ಕೆಡೆದನಾ ದನುತನಯಂ| ೧೪ ||
ಪದ್ಯ-೧೪:ಪದವಿಭಾಗ-ಅರ್ಥ:ನೆಲನ ಅದಿರ್ವಿನಂ ಇದಿರಂ ಬರೆ (ನೆಲವು ನಡುಗುವಂತೆ ಎದುರಾಗಿ ಬರಲು) ಕುಲಿಶಾಯುಧನು ಇತ್ತ ಶಕ್ತಿಯಿಂದ ಆತನ ಉರಸ್ಥಲಮನು ಇಡೆ (ಕರ್ಣನು ಇಂದ್ರನು ಕೊಟ್ಟಿದ್ದ ಶಕ್ತ್ಯಾಯುಧದಿಂದ ಆತನ ಹೃದಯಸ್ಥಳವನ್ನು ಹೊಡೆಯಲು,) ವಜ್ರಹತಿಯಿಂ ಕುಲಗಿರಿ ಕೆಡೆವಂತೆ ಕೆಡೆದನು ಆ ದನುತನಯಂ (ವಜ್ರಾಯುಧದ ಪೆಟ್ಟಿನಿಂದ ಕುಲಪರ್ವತಗಳುರುಳುವಂತೆ ಆ ರಾಕ್ಷಸಕುಮಾರನು ಕೆಳಗುರುಳಿದನು)
ಪದ್ಯ-೧೪:ಅರ್ಥ: ಘಟೋತ್ಕಚನು ಶೂಲಾಯಧವನ್ನು ತೆಗೆದುಕೊಂಡು ಬಂದಾಗ- ನೆಲವು ನಡುಗುವಂತೆ ಎದುರಾಗಿ ಬರಲು ಕರ್ಣನು ಇಂದ್ರನು ಕೊಟ್ಟಿದ್ದ ಶಕ್ತ್ಯಾಯುಧದಿಂದ ಆತನ ಹೃದಯಸ್ಥಳವನ್ನು ಹೊಡೆಯಲು, ವಜ್ರಾಯುಧದ ಪೆಟ್ಟಿನಿಂದ ಕುಲಪರ್ವತಗಳುರುಳುವಂತೆ ಆ ರಾಕ್ಷಸಕುಮಾರನು ಕೆಳಗುರುಳಿದನು.
ಒಂದಕ್ಷೋಹಿಣಿ ನುರ್ಗಿದು
ದಿಂದಿವನ ಕಬಂಧಘಾತದಿಂ ಸತ್ತಿನಿತಂ|
ಕೊಂದನಿವನಿವನನಳ್ಕುರೆ
ಕೊಂದಳವಿನತನಯನಲ್ಲದಂಗೊಪ್ಪುಗುಮೇ|| ೧೫ ||
ಪದ್ಯ-೦೧೫ಪದವಿಭಾಗ-ಅರ್ಥ:ಒಂದು ಅಕ್ಷೋಹಿಣಿ ನುರ್ಗಿದುದು ಇಂದು ಇವನ ಕಬಂಧಘಾತದಿಂ (ಇವನ ದೊಡ್ಡ ಶರೀರವು (ಮುಂಡ?) ಕೆಳಗೆ ಬಿದ್ದುದರಿಂದ ಒಂದು ಅಕ್ಷೋಹಿಣೀ ಸೆನ್ಯವು ಪುಡಿಪುಡಿಯಾಯಿತು) ಸತ್ತ ಇನಿತಂ ಕೊಂದನು ಇವನು (ತಾನು ಸತ್ತೂ ಕೂಡ- ಇವನು ಇಷ್ಟನ್ನು ಕೊಂದನು) ಇವನಂ ಅಳ್ಕುರೆ ಕೊಂದ ಅಳವು ಇನತನಯನು ಅಲ್ಲದಂಗೆ ಒಪ್ಪುಗುಮೇ (ಇವನನ್ನು ಭಯವುಂಟಾಗುವ ಹಾಗೆ ಕೊಂದ ಪರಾಕ್ರಮವು ಕರ್ಣನಲ್ಲದವನಿಗೆ ಒಪ್ಪುತ್ತದೆಯೇ?)
ಪದ್ಯ-೧೫:ಅರ್ಥ: ಇವನ ಶರೀರವು ಕೆಳಗೆ ಬಿದ್ದುದರಿಂದ ಒಂದಕ್ಷೋಹಿಣೀ ಸೆನ್ಯವು ಪುಡಿಪುಡಿಯಾಯಿತು. ತಾನು ಸತ್ತೂ ಇವನು ಇಷ್ಟನ್ನು ಕೊಂದನು. ಇವನನ್ನು ಭಯವುಂಟಾಗುವ ಹಾಗೆ ಕೊಂದ ಪರಾಕ್ರಮವು ಕರ್ಣನಲ್ಲದವನಿಗೆ ಒಪ್ಪುತ್ತದೆಯೇ? ಬೇರೆಯವರಿಗೆ ಅಸಾದ್ಯವು!
ವ|| ಎಂದೆರಡುಂ ಪಡೆಗಳುಂ ದೇವರ ಪಡೆಗಳುಂ ಕರ್ಣನನೆ ಪೊಗೞೆ ಕಾದಲ್ವೇಡೆಂಬಂತುಭಯಸೈನ್ಯಂಗಳ್ಗಡ್ಡಮಾಗಿ ಕುಲಗಿರಿ ಕೆಡೆಮಂತಯ್ಗಾವುದು ನೆಲನೊಡಲಳವಿ ಯಾಗೆ ಬಿೞ್ದಿರ್ದ ಘಟೋತ್ಕಚನ ಕರಮೞಲ್ದು ಕಣ್ಣ ನೀರಂ ಸಿಡಿವಂತಕಾತ್ಮಜನನನಂತ ನಿಂತೆಂದಂ-
ವಚನ:ಪದವಿಭಾಗ-ಅರ್ಥ:ಎಂದೆರಡುಂ ಪಡೆಗಳುಂ ದೇವರ ಪಡೆಗಳುಂ ಕರ್ಣನನೆ ಪೊಗೞೆ ( ಎಂದು ಎರಡು ಸೈನ್ಯಗಳೂ ದೇವಸಮೂಹವೂ ಕರ್ಣನನ್ನೇ ಹೊಗಳಲು-) ಕಾದಲ್ವೇಡ ಎಂಬಂತೆ ಉಭಯಸೈನ್ಯಂಗಳ್ಗೆ ಅಡ್ಡಮಾಗಿ ಕುಲಗಿರಿ ಕೆಡೆಮಂತೆ -ಅಯ್ದು ಗಾವುದು (ಇನ್ನು ಕಾದಬೇಡಿ ಎನ್ನುವ ಹಾಗೆ ಎರಡು ಸೈನ್ಯಗಳಿಗೆ ಅಡ್ಡಲಾಗಿ ಕುಲಗಿರಿ ಕೆಡೆದು ಬಿದ್ದಂತೆ ) ಅಯ್ದು ಗಾವುದದಷ್ಟು ನೆಲನ ಒಡಲ ಅಳವಿ ಯಾಗೆ (ಅಯ್ದುಗಾವುದ ಭೂಮಿಯನ್ನು ಆಕ್ರಮಿಸುವ ಶರೀರದ ಆಳತೆಯನ್ನುಳ್ಳವನಾಗಿ) ಬಿೞ್ದಿರ್ದ ಘಟೋತ್ಕಚನ ಕರಮ್ ಅೞಲ್ದು ಕಣ್ಣ ನೀರಂ ಸಿಡಿವು ಅಂತಕಾತ್ಮಜನನ (ಘಟೋತ್ಕಚನ ಸಾವಿಗೆ ವಿಶೇಷವಾಗಿ ಧರ್ಮರಾಯನು ದುಖಪಟ್ಟು ಕಣ್ಣೀರನ್ನು ಚಿಮ್ಮಿಸಿದನು) ಅನಂತ ನಿಂತೆಂದಂ (ಅವನನ್ನು ಕುರಿತು ಕೃಷ್ಣನು ಹೀಗೆ ಹೇಳಿದನು.)-
ವಚನ:ಅರ್ಥ: ಎಂದು ಎರಡು ಸೈನ್ಯಗಳೂ ದೇವಸಮೂಹವೂ ಕರ್ಣನನ್ನೇ ಹೊಗಳಲು, ಇನ್ನು ಕಾದಬೇಡಿ ಎನ್ನುವ ಹಾಗೆ ಎರಡು ಸೈನ್ಯಗಳಿಗೆ ಅಡ್ಡಲಾಗಿ ಕುಲಗಿರಿ ಕೆಡೆದು ಬಿದ್ದಂತೆ ಅಯ್ದುಗಾವುದ ಭೂಮಿಯನ್ನು ಆಕ್ರಮಿಸುವ ಶರೀರದ ಆಳತೆಯನ್ನುಳ್ಳವನಾಗಿ ಬಿದ್ದಿದ್ದ ಘಟೋತ್ಕಚನ ಸಾವಿಗೆ ವಿಶೇಷವಾಗಿ ಧರ್ಮರಾಯನು ದುಖಪಟ್ಟು ಕಣ್ಣೀರನ್ನು ಚಿಮ್ಮಿಸಿದನು. ಅವನನ್ನು ಕುರಿತು ಕೃಷ್ಣನು ಹೀಗೆ ಹೇಳಿದನು. (ನೋಡುವ ಹಾಗೆ ಉದಯಪರ್ವತವನ್ನೇರಿದನು. -ಸೂರ್ಯೋದಯವಾಯಿತು).
ಮ|| ದಿವಿಜಾಶನ ಕೊಟ್ಟ ಶಕ್ತಿಯನದಂ ಕರ್ಣಾಂ ನರಂಗೆಂದು ಬ
ಯ್ತಿವನಿಂದಿಂದಱಿವೆಯ್ದು ವಂದೊಡದಱಿಂದಿಂದಾತನಂ ಕೊಂದನಿ|
ನಿವನಂ ಕೊಲ್ವುದು ಮೊಗ್ಗದರ್ಕೞಲವೇಡೆಂಬನ್ನಮತ್ತೇಱಿದಂ
ರವಿ ಪೂರ್ವಾಚಲಮಂ ನಿಜಾತ್ಮಜನ ಗೆಲ್ದುಗ್ರಾಜಿಯಂ ನೋೞ್ಪವೋಲ್|| ೧೬ ||
ಪದ್ಯ-೧೬:ಪದವಿಭಾಗ-ಅರ್ಥ:ದಿವಿಜಾಶನ ಕೊಟ್ಟ ಶಕ್ತಿಯನು (“ಇಂದ್ರನು ವರವಾಗಿ ಕೊಟ್ಟ ಶಕ್ತ್ಯಾಯುಧವನ್ನು)ಅದಂ ಕರ್ಣಾಂ ನರಂಗೆ ಎಂದು ಬಯ್ತ(ಅರ್ಜುನಿಗೆ ಕೊಡೆಯಲು ಎಂದು ಮುಚ್ಚಿಟ್ಟಿದ್ದನು.) ಇವನಿಂದ ಇಂದು ಅಱಿವೆಯ್ದು ವಂದೊಡೆ ( ಈ ದಿನ ಇವನಿಂದ ತನಗೆ ಸಾವು ಬಂದರಿಲು- ಸಮೀಪಿಸಿದ್ದರಿಂದ) ಅದಱಿಂದ ಇಂದು ಆತನಂ ಕೊಂದನು (ಆ ಜಶಕ್ತ್ಯಾಯುಧದಿಂದ ಘಟೋತ್ಕಚನನ್ನು ಕೊಂದನು.) ಇವನಂ ಕೊಲ್ವುದುಂ ಅಗ್ಗ (ಇನ್ನು ಈ ಕರ್ಣನನ್ನು ಗೆಲ್ಲುವುದು ಸುಲಭ ಸಾಧ್ಯ;) ಅದರ್ಕ ಅೞಲವೇಡ (ಅದಕ್ಕಾಗಿ ನೀನು ಅಳಬೇಡ- ದುಃಖಪಡಬೇಡ”) ಎಂಬನ್ನಂ ಅತ್ತ ಏಱಿದಂ ರವಿ ಪೂರ್ವಾಚಲಮಂ (ಎನ್ನುವಷ್ಟರಲ್ಲಿ ಆ ಕಡೆ ಸೂರ್ಯನು ಪೂರ್ವಾಚಲವನ್ನು ಏರಿದನು; ಹೇಗೆ ಎಂದರೆ-) ನಿಜಾತ್ಮಜನ ಗೆಲ್ದ ಉಗ್ರಾಜಿಯಂ ನೋೞ್ಪವೋಲ್ (ಸೂರ್ಯನು ತನ್ನ ಮಗನು ಗೆದ್ದ ಭಯಂಕರ ಯುದ್ಧವನ್ನು ನೋಡಲು ಬಂದಂತೆ)
ಪದ್ಯ-೧೬:ಅರ್ಥ:“ಇಂದ್ರನು ವರವಾಗಿ ಕೊಟ್ಟ ಶಕ್ತ್ಯಾಯುಧವನ್ನು ಕರ್ಣನು ಅರ್ಜುನಿಗೆ ಕೊಡೆಯಲು ಎಂದು ಮುಚ್ಚಿಟ್ಟಿದ್ದನು. ಈ ದಿನ ಇವನಿಂದ ತನಗೆ ಸಾವು ಸಮೀಪಿಸಿದ್ದರಿಂದ ಆ ಜಶಕ್ತ್ಯಾಯುಧದಿಂದ ಘಟೋತ್ಕಚನನ್ನು ಕೊಂದನು. ಇನ್ನು ಈ ಕರ್ಣನನ್ನು ಗೆಲ್ಲುವುದು ಸುಲಭ ಸಾಧ್ಯ; ಅದಕ್ಕಾಗಿ ನೀನು ದುಖಪಡಬೇಡ” ಎನ್ನುವಷ್ಟರಲ್ಲಿ ಆ ಕಡೆ ಸೂರ್ಯನು ತನ್ನ ಮಗನು ಗೆದ್ದ ಭಯಂಕರ ಯುದ್ಧವನ್ನು ನೋಡಲು ಬಂದಂತೆ ಪೂರ್ವಾಚಲವನ್ನು ಏರಿದನು. -ಸೂರ್ಯೋದಯವಾಯಿತು.
ವ|| ಆಗಳ್ ಕುಂಭಸಂಭವಂ ಶೋಣಾಶ್ವಂಗಳೊಳ್ ಪೂಡಿದ ಕನಕ ಕಳಶದ್ವಜ ವಿರಾಜಿತಮಪ್ಪ ತನ್ನ ರಥಮನೇಱಿ ಘಟೋತ್ಕಚನ ಕಳೇಬರ ಗಿರಿ ದುರ್ಗಮಲ್ಲದ ಸಮಭೂಮಿಯೊಳ್ ಚತುರ್ಬಲಂಗಳನೊಂದುಮಾಡಿ ಶೃಂಗಾಟಕವ್ಯೂಹಮನೊಡ್ಡಿ ನಿಂದಾಗಳ್ ಧೃಷ್ಟದ್ಯುಮ್ನನಂ ಪಾಂಡವ ಪತಾಕಿನಿಯುಮಂ ವಜ್ರವ್ಯೂಹಮನೊಡ್ಡಿ ನಿಲೆ ಧರ್ಮಪುತ್ರನುಂ ಸುಯೋಧನನುಮೊಡನೊಡನೆ ಕೆಯ್ವೀಸಿದಾಗಳ್-
ವಚನ:ಪದವಿಭಾಗ-ಅರ್ಥ:ಆಗಳ್ ಕುಂಭಸಂಭವಂ ಶೋಣಾಶ್ವಂಗಳೊಳ್ ಪೂಡಿದ ಕನಕ ಕಳಶದ್ವಜ ವಿರಾಜಿತಮಪ್ಪ (ಆಗ ದ್ರೋಣನು ಕೆಂಪುಕುದುರೆಗಳನ್ನು ಹೂಡಿದ್ದ ಚಿನ್ನದ ಕಳಶಧ್ವಜದಿಂದ ವಿರಾಜಿತವಾಗಿರುವ) ತನ್ನ ರಥಮನೇಱಿ ಘಟೋತ್ಕಚನ ಕಳೇಬರ ಗಿರಿ ದುರ್ಗಮಲ್ಲದ ಸಮಭೂಮಿಯೊಳ್ (ಘಟೋತ್ಕಚನ ಶರೀರವೆಂಬ ಬೆಟ್ಟ ದುರ್ಗವಿಲ್ಲದ ಸಮಭೂಮಿಯಲ್ಲಿ) ಚತುರ್ಬಲಂಗಳನು ಒಂದುಮಾಡಿ (ಚತುರಂಗಸೈನ್ಯವನ್ನು ಒಟ್ಟುಗೂಡಿಸಿ) ಶೃಂಗಾಟಕವ್ಯೂಹಮನು ಒಡ್ಡಿ ನಿಂದಾಗಳ್ ( ಶೃಂಗಾಟಕ ವೆಂಬ ನಾಲ್ಕು ಬೀದಿಗಳು ಕೂಡುವ ಸ್ಥಳದಂತಿರುವ ವ್ಯೂಹವನ್ನು ಎಂದರೆ ಸೇನಾರಚನೆಯನ್ನು ಒಡ್ಡಿ- ಎದುರಿಸಿ ನಿಂತಾಗ) ಧೃಷ್ಟದ್ಯುಮ್ನನಂ ಪಾಂಡವ ಪತಾಕಿನಿಯುಮಂ ವಜ್ರವ್ಯೂಹಮನು ಒಡ್ಡಿ ನಿಲೆ (ಧ್ವಷ್ಟದ್ಯುಮ್ನನು ಪಾಂಡವಸೈನ್ಯವನ್ನು ವಜ್ರವ್ಯೂಹವನ್ನಾಗಿ ಒಡ್ಡಿ ನಿಲ್ಲಲು,) ಧರ್ಮಪುತ್ರನುಂ ಸುಯೋಧನನುಂ ಒಡನೊಡನೆ ಕೆಯ್ವೀಸಿದಾಗಳ್ (ಧರ್ಮರಾಜನೂ ದುರ್ಯೋಧನನೂ ಒಟ್ಟೊಟ್ಟಿಗೆ -ಯುದ್ಧಪ್ರಾರಂಭ ಸೂಚಕವಾಗಿ ಕೈ ಬೀಸಿದಾಗ)-
ವಚನ:ಅರ್ಥ: ಆಗ ದ್ರೋಣನು ಕೆಂಪುಕುದುರೆಗಳನ್ನು ಹೂಡಿದ್ದ ಚಿನ್ನದ ಕಳಶಧ್ವಜದಿಂದ ವಿರಾಜಿತವಾಗಿರುವ ತನ್ನ ರಥವನ್ನು ಹತ್ತಿ ಘಟೋತ್ಕಚನ ಶರೀರವೆಂಬ ಬೆಟ್ಟದುರ್ಗವಿಲ್ಲದೆ ಸಮಭೂಮಿಯಲ್ಲಿ ಚತುರಂಗಸೈನ್ಯವನ್ನು ಒಟ್ಟುಗೂಡಿಸಿ, ಶೃಂಗಾಟಕ ವೆಂಬ ನಾಲ್ಕು ಬೀದಿಗಳು ಕೂಡುವ ಸ್ಥಳದಂತಿರುವ ವ್ಯೂಹವನ್ನು ಎಂದರೆ ಸೇನಾರಚನೆಯನ್ನು ಒಡ್ಡಿ- ಎದುರಿಸಿ ನಿಂತಾಗ, ಧ್ವಷ್ಟದ್ಯುಮ್ನನು ಪಾಂಡವಸೈನ್ಯವನ್ನು ವಜ್ರವ್ಯೂಹವನ್ನಾಗಿ ಒಡ್ಡಿನಿಲ್ಲಲು, ಧರ್ಮರಾಜನೂ ದುರ್ಯೋಧನನೂ ಯುದ್ಧಪ್ರಾರಂಭ ಸೂಚಕವಾಗಿ ಕೈ ಬೀಸಿದಾಗ- ಪುನ ಯುದ್ಧ ಪ್ರಾರಂಭವಾಯಿತು.

ದ್ರೋಣನ ಯುದ್ಧ - ಅವನ ದೇಹತ್ಯಾಗ[ಸಂಪಾದಿಸಿ]

ಮ|| ಸ್ರ|| ಎಳೆಯುಂ ಬ್ರಹ್ಮಾಂಡಮುಂ ತಾಗುವವೊಲುಭಯಸೈನ್ಯಾಭ್ಧಿಗಳ್ ತಾಗಿ ಬಿಲ್ ಬಿ
ಲ್ಲೊಳುದಗ್ರಾಶ್ವಂಗಳೊಳಣಿಯಣಿಯೊಳ್ ಸ್ಯಂದನಂ ಸ್ಯಂದನೌಘಂ|
ಗಳೊಳುಗ್ರೇಭಂ ಮದೇಭಂಗಳೊಳಿಱಿಯೆ ತೆರಳ್ತರ್ಪ ಕೆನ್ನೆತ್ತರಿಂದೋ
ಕುಳಿಯಂ ಖಂಡಂಗಳೊಂದಿಂಡೆಯೊಳೆ ಜವನಡುರ್ತಾಡಿದಂತಾದುದಾಗಳ್|| ೧೭
ಪದ್ಯ-೧೭:ಪದವಿಭಾಗ-ಅರ್ಥ:ಎಳೆಯುಂ ಬ್ರಹ್ಮಾಂಡಮುಂ ತಾಗುವವೊಲು ಉಭಯ ಸೈನ್ಯಾಭ್ಧಿಗಳ್ ತಾಗಿ (ಭೂಮಿಯೂ ಬ್ರಹ್ಮಾಂಡವೂ ತಾಗುವ ಹಾಗೆ ಎರಡು ಸೇನಾಸಮುದ್ರಗಳೂ ತಾಗಿ- ಯುದ್ಧಮಾಡಿ,) ಬಿಲ್ ಬಿಲ್ಲೊಳ್, ಉದಗ್ರ ಅಶ್ವಂಗಳೊಳ್, ಅಣಿಯಣಿಯೊಳ್ ಸ್ಯಂದನಂ ಸ್ಯಂದನ ಔಘಂಗಳೊಳ್ (ಬಿಲ್ಗಾರರು ಬಿಲ್ಗಾರರಲ್ಲಿಯೂ ಅತ್ಯುತ್ತಮವಾದ ಅಶ್ವಾರೋಹಕರು ಅಶ್ವಾರೋಹಕರಲ್ಲಿಯೂ ಕಾಲುಬಲದವರು ಹಾಲುಬಲದವರಲ್ಲಿಯೂ ರಥಿಕರು ರಥಿಕ ಸಮೂಹದಲ್ಲಿಯೂ) ಉಗ್ರೇಭಂ ಮದೇಭಂಗಳೊಳ್ ಇಱಿಯೆ (ಶ್ರೇಷ್ಠವಾದ ಅನೆಗಳು ಮದ್ದಾನೆಗಳಲ್ಲಿಯೂ ಸೇರಿಕೊಂಡು ಯುದ್ಧಮಾಡಲು,) ತೆರಳ್ತರ್ಪ (ಹರಿದು ಬರುತ್ತಿರುವ) ಕೆನ್ನೆತ್ತರಿಂದ -ಓಕುಳಿಯಂ> ಖಂಡಂಗಳು ಒಂದಿಂಡೆಯೊಳೆ (ರಕ್ತದಿಂದಲೂ ಮಾಂಸಖಂಡಗಳ ರಾಶಿಯಲ್ಲೇ) ಜವಂ ಅಡುರ್ತು (-ಓಕುಳಿಯಂ) ಆಡಿದಂತಾದುದಾಗಳ್ (ಯಮನು ಮೇಲೆ ಬಿದ್ದು ಓಕುಳಿಯನ್ನು ಆಡಿದಂತಾಯಿತು)
ಪದ್ಯ-೧೭:ಅರ್ಥ: ಭೂಮಿಯೂ ಬ್ರಹ್ಮಾಂಡವೂ ತಾಗುವ ಹಾಗೆ (ಆಕಾಶ ಭೂಮಿ ಒಂದಾಗುವಹಾಗೆ) ಎರಡು ಸೇನಾಸಮುದ್ರಗಳೂ ತಾಗಿದುವು. ಬಿಲ್ಗಾರರು ಬಿಲ್ಗಾರರಲ್ಲಿಯೂ, ಅತ್ಯುತ್ತಮವಾದ ಅಶ್ವಾರೋಹಕರು ಅಶ್ವಾರೋಹಕರಲ್ಲಿಯೂ, ಕಾಲುಬಲದವರು ಹಾಲುಬಲದವರಲ್ಲಿಯೂ, ರಥಿಕರು ರಥಿಕ ಸಮೂಹದಲ್ಲಿಯೂ, ಶ್ರೇಷ್ಠವಾದ ಅನೆಗಳು ಮದ್ದಾನೆಗಳಲ್ಲಿಯೂ ಸೇರಿಕೊಂಡು ಯುದ್ಧಮಾಡಲು, ಅಲ್ಲಿ ಹರಿದು ಬರುತ್ತಿರುವ ರಕ್ತದಿಂದಲೂ ಮಾಂಸಖಂಡಗಳ ರಾಶಿಯಿಂದಲೂ ಯಮನು ಮೇಲೆ ಬಿದ್ದು ಓಕುಳಿಯನ್ನು ಆಡಿದಂತಾಯಿತು
ವ||ಅಂತು ವೀರರಸದ ತೊರಿಯುಂ ತೊರಿಯುಂ ನೆತ್ತರ ತೊಯುಮೊಡನೊಡನೆ ಬೆಳ್ಳಂಗೆಡೆದು ಪರಿಯೆ ಚತುರ್ಬಲಂಗಳ್ ಕಾದಿ ಬಸವೞಿದು ಪೆಱಪಿಂಗಿ ನಿಂದಾಗಳ್ ವಿರಾಟಂ ತನ್ನ ಚತುರ್ಬಲಂಗಳನೊಂದುಮಾಡಿಕೊಂಡು ಪಾಂಡವರ್ ತನ್ನ ಮಾನಸಿಕೆಯಂ ನಚ್ಚಿ ತನ್ನ ಪೊೞಲೊಳಜ್ಞಾತವಾಸಂ ಮಾಡಿದುದುಮಂ ದಕ್ಷಿಣೋತ್ತರ ಗೋಗ್ರಹಣದೊಳ್ ತನಗಾಗಿ ಕಾದಿ ತುಱುವಂ ಮಗುೞ್ಚಿದುದುಮಂ ನೆನೆದು-
ವಚನ:ಪದವಿಭಾಗ-ಅರ್ಥ: ಅಂತು ವೀರರಸದ ತೊರಿಯುಂ (ತೊರೆ-ಪ್ರವಾಹ) ತೊರಿಯುಂ ನೆತ್ತರ ತೊಯುಂ ಒಡನೊಡನೆ ಬೆಳ್ಳಂಗೆಡೆದು ಪರಿಯೆ (ವೀರರಸದ ಪ್ರವಾಹವೂ ರಕ್ತಪ್ರವಾಹವೂ ಜೊತೆ ಜೊತೆಯಲ್ಲಿಯೇ ಹುಚ್ಚುಹೊಳೆಯಾಗಿ ಹರಿಯಲು) ಚತುರ್ಬಲಂಗಳ್ ಕಾದಿ ಬಸವೞಿದು ಪೆಱಪಿಂಗಿ ನಿಂದಾಗಳ್ (ಚತುರಂಗಸೈನ್ಯವೂ ಹೋರಾಡಿ ಶಕ್ತಿಗುಂದಿ ಹಿಂದಕ್ಕೆ ಹೋಗಿ ನಿಂತಾಗ) ವಿರಾಟಂ ತನ್ನ ಚತುರ್ಬಲಂಗಳನು ಒಂದುಮಾಡಿಕೊಂಡು (ವಿರಾಟನು ತನ್ನ ನಾಲ್ಕು ತೆರನಾದ ಸೈನ್ಯವನ್ನೂ ಒಟ್ಟುಗೂಡಿಸಿಕೊಂಡು) ಪಾಂಡವರ್ ತನ್ನ ಮಾನಸಿಕೆಯಂ ನಚ್ಚಿ ತನ್ನ ಪೊೞಲೊಳು ಅಜ್ಞಾತವಾಸಂ ಮಾಡಿದುದುಮಂ (ಪಾಂಡವರು ತನ್ನ ಪೌರುಷವನ್ನು ನಂಬಿ ತನ್ನ ನಗರದಲ್ಲಿ ಅಜ್ಞಾತವಾಸ ಮಾಡಿದುದನ್ನೂ,) ದಕ್ಷಿಣೋತ್ತರ ಗೋಗ್ರಹಣದೊಳ್ ತನಗಾಗಿ ಕಾದಿ ತುಱುವಂ ಮಗುೞ್ಚಿದುದುಮಂ ನೆನೆದು (ತನಗಾಗಿ ಯುದ್ಧಮಾಡಿ ಗೋವುಗಳನ್ನು ಹಿಂತಿರುಗಿಸಿದುದನ್ನೂ ಜ್ಞಾಪಿಸಿಕೊಂಡು)-
ವಚನ:ಅರ್ಥ:ವೀರರಸದ ಪ್ರವಾಹವೂ ರಕ್ತಪ್ರವಾಹವೂ ಜೊತೆ ಜೊತೆಯಲ್ಲಿಯೇ ಹುಚ್ಚುಹೊಳೆಯಾಗಿ ಹರಿಯಲು, ಚತುರಂಗಸೈನ್ಯವೂ ಹೋರಾಡಿ ಶಕ್ತಿಗುಂದಿ ಹಿಂದಕ್ಕೆ ಹೋಗಿ ನಿಂತವು. ವಿರಾಟನು ತನ್ನ ನಾಲ್ಕು ತೆರನಾದ ಸೈನ್ಯವನ್ನೂ ಒಟ್ಟುಗೂಡಿಸಿಕೊಂಡು, ಪಾಂಡವರು ತನ್ನ ಪೌರುಷವನ್ನು ನಂಬಿ ತನ್ನ ನಗರದಲ್ಲಿ ಅಜ್ಞಾತವಾಸ ಮಾಡಿದುದನ್ನೂ, ತನಗಾಗಿ ಯುದ್ಧಮಾಡಿ ಗೋವುಗಳನ್ನು ಹಿಂತಿರುಗಿಸಿದುದನ್ನೂ ಜ್ಞಾಪಿಸಿಕೊಂಡು-
ಮ||ಸ್ರ|| ಮಗಳಂ ಪಾರ್ಥಾತ್ಮಜಂಗಂ ತಲೆ ಬೞಿವೆೞಿಯೆಂದಿತ್ತುದಂ ತನ್ನ ಮಕ್ಕಳ್
ನೆಗೞ್ದಾ ಸಂಗ್ರಾಮದೊಳ್ ಸತ್ತುದುಮನೆ ಮನದೊಳ್ ತಾಳ್ದಿ ತಾಪಾಗಳಾ ಜೆ|
ಟ್ಟಿಗನಂ ಕುಂಭೋದ್ಭವಂ ಬಂದದಿರದಿದಿರನಾಂತೊಂದೆ ಕೆಲ್ಲಂಬಿನಿಂ ಮೆ
ಲ್ಲಗೆ ಪಾರ್ದಾರ್ದೆಚ್ಚನೇಸಿಂ ತಲೆಪಱಿದು ಸಿಡಿಲ್ದತ್ತ ಬೀೞ್ವನ್ನಮಾಗಳ್|| ೧೮ ||
ಪದ್ಯ-೧೮:ಪದವಿಭಾಗ-ಅರ್ಥ:ಮಗಳಂ ಪಾರ್ಥಾತ್ಮಜಂಗಂ ತಲೆ ಬೞಿವೆೞಿಯೆಂದು ಇತ್ತುದಂ (ತನ್ನ ಮಗಳು ಉತ್ತರೆಯನ್ನು ಅರ್ಜುನನ ಮಗ ಅಭಿಮಾನ್ಯುವಿಗೆ ಬಳುವಳಿಯಾಗಿ ಕೊಟ್ಟುದನ್ನೂ) ತನ್ನ ಮಕ್ಕಳ್ ನೆಗೞ್ದು ಆ ಸಂಗ್ರಾಮದೊಳ್ ಸತ್ತುದುಮನೆ ಮನದೊಳ್ ತಾಳ್ದಿ ತಾಪಾಗಳ್ (ಆ ಪ್ರಸಿದ್ಧವಾದ ಯುದ್ಧದಲ್ಲಿ ತನ್ನ ಮಕ್ಕಳು ಸತ್ತುದನ್ನೂ ಮನಸ್ಸಿನಲ್ಲಿ ಜ್ಞಾಪಿಸಿಕೊಂಡು ತಾಗಿ ಎದುರಿಸಿದಾಗ,) ಆ ಜೆಟ್ಟಿಗನಂ ಕುಂಭೋದ್ಭವಂ ಬಂದದಿರದಿದಿರನಾಂತೊಂದೆ ಕೆಲ್ಲಂಬಿನಿಂ ಮೆಲ್ಲಗೆ ಪಾರ್ದು(ದ್ರೋಣನು ಹೆದರದೆ ಒಂದು ಪ್ರತಿಭಟಿಸಿ ಒಂದೆ ಕೆಲ್ಲಂಬಿನಿಂದ ಮೆಲ್ಲಗೆ ಗುರಿಯಿಟ್ಟು ನೋಡಿ) ಆರ್ದು ಎಚ್ಚನ್ (ಆರ್ಭಟಮಾಡಿ ಹೊಡೆದನು) ಏಸಿಂ ತಲೆಪಱಿದು ಸಿಡಿಲ್ದು ಅತ್ತ ಬೀೞ್ವನ್ನಂ ಆಗಳ್ (ಹೊಡೆತದಿಂದ ತಲೆಹರಿದು ಸಿಡಿದು ಅತ್ತ ಕಡೆ ಬೀಳುವ ಹಾಗೆ ಹೊಡೆದನು; ಆಗ.)|
ಪದ್ಯ-೧೮:ಅರ್ಥ: ತನ್ನ ಮಗಳು ಉತ್ತರೆಯನ್ನು ಅರ್ಜುನನ ಮಗ ಅಭಿಮಾನ್ಯುವಿಗೆ ಬಳುವಳಿಯಾಗಿ ಕೊಟ್ಟುದನ್ನೂ ಆ ಪ್ರಸಿದ್ಧವಾದ ಯುದ್ಧದಲ್ಲಿ ತನ್ನ ಮಕ್ಕಳು ಸತ್ತುದನ್ನೂ ಮನಸ್ಸಿನಲ್ಲಿ ಜ್ಞಾಪಿಸಿಕೊಂಡು ಎದುರಿಸಿದಾಗ, ದ್ರೋಣನು ಹೆದರದೆ ಒಂದು ಪ್ರತಿಭಟಿಸಿ ಒಂದೆ ಕೆಲ್ಲಂಬಿನಿಂದ ಮೆಲ್ಲಗೆ ಗುರಿಯಿಟ್ಟು ಆರ್ಭಟಮಾಡಿ ಹೊಡೆದನು; ಹೊಡೆತದಿಂದ ತಲೆಹರಿದು ಸಿಡಿದು ಅತ್ತ ಕಡೆ ಬೀಳುವ ಹಾಗೆ ಹೊಡೆದನು; ಆಗ.
ವ|| ಅಂತು ವಿರಾಟವನಿಕ್ಕಿ ಮನದೊಳಳ್ಳಾಟಮಿಲ್ಲದರಿನ್ನಪಕೋಟಿಯನಾಟರಲೆಂದಾಸ್ಪೋಟಸಿ ನಿಶಿತ ಶರಕೋಟಿಯೊಳ್ ತಳಿಗೋಂಟೆಯನಿಕ್ಕಿ ವೀರರಸನಿಕೇತನನಾಗಿರ್ದ ಕಳಶಕೇತನನಂ ನೋಡಿ ದ್ರುಪದಂ ಸೈರಿಸದೆ-
ವಚನ:ಪದವಿಭಾಗ-ಅರ್ಥ: ಅಂತು ವಿರಾಟವನ ಇಕ್ಕಿ ಮನದೊಳು ಅಳ್ಳಾಟಮಿಲ್ಲದೆ (ಹಾಗೆ ವಿರಾಟನನ್ನು ಹೊಡೆದುಕೊಂದು ಮನಸ್ಸಿನಲ್ಲಿ ಸಂಶಯವೇ ಇಲ್ಲದೆ) ಅರಿನೃಪಕೋಟಿಯನು ಆಟರಲೆಂದು (ಶತ್ರುರಾಜಸಮೂಹದ ಮೇಲೆ ಬೀಳಬೇಕೆಂದು) ಆ ಸ್ಪೋಟಸಿ ನಿಶಿತ ಶರಕೋಟಿಯೊಳ್ ತಳಿಗೋಂಟೆಯನಿಕ್ಕಿ (ತೋಳನ್ನು ತಟ್ಟಿ ಶಬ್ದಮಾಡಿ ಹರಿತವಾದ ಬಾಣರಾಶಿಯಿಂದ ಬೇಲಿಯನ್ನು ಹಾಕಿ ) ವೀರರಸನಿಕೇತನನಾಗಿರ್ದ ಕಳಶಕೇತನನಂ (ವೀರರಸಕ್ಕೆ ಆವಾಸಸ್ಥಾನನಾಗಿದ್ದ ದ್ರೋಣಾಚಾರ್ಯನನ್ನು) ನೋಡಿ ದ್ರುಪದಂ ಸೈರಿಸದೆ (ದ್ರುಪದನು ನೋಡಿ ಸೈರಿಸಲಾರದೆ)
ವಚನ:ಅರ್ಥ:ಹಾಗೆ ವಿರಾಟನನ್ನು ಹೊಡೆದುಕೊಂದು ಮನಸ್ಸಿನಲ್ಲಿ ಸಂಶಯವೇ ಇಲ್ಲದೆ, ಶತ್ರುರಾಜಸಮೂಹದ ಮೇಲೆ ಬೀಳಬೇಕೆಂದು ತೋಳನ್ನು ತಟ್ಟಿ ಶಬ್ದಮಾಡಿ ಹರಿತವಾದ ಬಾಣರಾಶಿಯಿಂದ ಬೇಲಿಯನ್ನು ಹಾಕಿ ವೀರರಸಕ್ಕೆ ಆವಾಸಸ್ಥಾನನಾಗಿದ್ದ ದ್ರೋಣಾಚಾರ್ಯನನ್ನು ದ್ರುಪದನು ನೋಡಿ ಸೈರಿಸಲಾರದೆ - ಮುಂದೆ ಬಂದು
ಹರಿಣೀಪ್ಲುತಂ|| ಗುರುಗಳೆನಗಂ ಭಾರದ್ವಾಜಂಗಮೊರ್ವರೆ ವಿದ್ದೆಯೊಳ್
ಪುರುಡ ಪಿರಿದುಂಟೆನ್ನಂ ಬಿಲ್ಬಲ್ಮೆಯೊಳ್ ಮಿಗಲೆಯ್ದೆ ಬೇ|
ರ್ವರಿದ ಪಗೆಯುಂ ಬನ್ನಂಬಟ್ಟೆನ್ನ ಮುನ್ನಿನ ಬನ್ನಮುಂ
ಪಿರಿದದೆ ನೆವಂಗೊಂಡಾನಿಂದಿಲ್ಲಿ ನೀಗದೆ ಮಾಣ್ಬೆನೇ|| ೧೯ ||
ಪದ್ಯ-೧೯:ಪದವಿಭಾಗ-ಅರ್ಥ:ಗುರುಗಳೆನಗಂ ಭಾರದ್ವಾಜಂಗಂ ಒರ್ವರೆ ವಿದ್ದೆಯೊಳ್, (ನನಗೂ ದ್ರೋಣನಿಗೂ ವಿದ್ಯಾಭ್ಯಾಸದಲ್ಲಿ ಒಬ್ಬರೇ ಗುರು.) ಪುರುಡ ಪಿರಿದುಂಟು ಅನ್ನಂ ಬಿಲ್ಬಲ್ಮೆಯೊಳ್ (ನನ್ನನ್ನು ಧನುರ್ವಿಧ್ಯೆಯಲ್ಲಿ ಮೀರಿಸಬೇಕೆಂಬ ಸ್ಪರ್ಧೆಯೂ ಅವನಲ್ಲಿ ಉಂಟು) ಮಿಗಲ್ ಎಯ್ದೆ ಬೇರ್ವರಿದ ಪಗೆಯುಂ (ಮೇಲಾಗಿ ನನಗೆ ರೂಢಮೂಲವಾದ ಶತ್ರುತ್ವವೂ ) ಬನ್ನಂಬಟ್ಟ ಎನ್ನ ಮುನ್ನಿನ ಬನ್ನಮುಂ ಪಿರಿದು ಅದೆ(ತಿರಸ್ಕೃತವಾದ ಮೊದಲಿನ ಅವಮಾನವೂ ಹಿರಿದಾಗಿಯೇ ಇ) ಅದೆ ನೆವಂಗೊಂಡು ಆನಿಂದು ಇಲ್ಲಿ ನೀಗದೆ ಮಾಣ್ಬೆನೇ (ಅದನ್ನೇ ಕಾರಣವನ್ನಾಗಿ ಮಾಡಿಕೊಂಡು ಇಂದು ಇಲ್ಲಿ ಅವುಗಳನ್ನು ಪರಿಹರಿಸದೆ ಬಿಡುತ್ತೇನೆಯೇ?)
ಪದ್ಯ-೧೯:ಅರ್ಥ:ದ್ರುಪದನು ಯೋಚಿಸಿದ: ನನಗೂ ದ್ರೋಣನಿಗೂ ವಿದ್ಯಾಭ್ಯಾಸದಲ್ಲಿ ಒಬ್ಬರೇ ಗುರು. ನನ್ನನ್ನು ಧನುರ್ವಿಧ್ಯೆಯಲ್ಲಿ ಮೀರಿಸಬೇಕೆಂಬ ಸ್ಪರ್ಧೆಯೂ ಅವನಲ್ಲಿ ಉಂಟು. ಮೇಲಾಗಿ ನನಗೆ ರೂಢಮೂಲವಾದ ಶತ್ರುತ್ವವೂ ತಿರಸ್ಕೃತವಾದ ಮೊದಲಿನ ಅವಮಾನವೂ ಹಿರಿದಾಗಿಯೇ ಇದೆ. ಅದನ್ನೇ ಕಾರಣವನ್ನಾಗಿ ಮಾಡಿಕೊಂಡು ಇಂದು ಇಲ್ಲಿ ಅವುಗಳನ್ನು ಪರಿಹರಿಸದೆ ಬಿಡುತ್ತೇನೆಯೇ?
ವ|| ಎಂದೊಂದಕ್ಷೋಹಿಣೀ ಬಲಂಬೆರಸು ಪ್ರಳಯದ ಮಾರಿಯುಮಾಕಾಶದ ಕವಿಯುಂ ನೆಲದ ಕಲ್ಲೆಯುಂ ಮುನ್ನಮೆ ಮೇರೆದಪ್ಪುವುದುಮಂ ತನ್ನೋಳಳವಡಿಸಿಕೊಂಡು ತಾಗಿದಾಗಳ್ ಶಲ್ಯನೊಳ್ ಸಾತ್ಯಕಿ ಶಾರದ್ವತನೊಳ್ ಕೃತಾಂತನಂದನಂ ಕೃತವರ್ಮನೊಳ್ ನಕುಳಂ ಶಕುನಿಯೊಳ್ ಸಹದೇವಂ ಕರ್ಣನೊಳ್ ಬೀಮಸೇನನಶ್ವತ್ಥಾಮನೊಳಕಳಂಕ ರಾಮಂ ದ್ವಂದ್ವಯುದ್ಧದೊಳ್ ತಾಗಿದಾಗಳ್-
ವಚನ:ಪದವಿಭಾಗ-ಅರ್ಥ: ಎಂದು ಒಂದು ಅಕ್ಷೋಹಿಣೀ ಬಲಂಬೆರಸು (ಎಂದು ಒಂದು ಅಕ್ಷೋಹಿಣಿ ಸೈನ್ಯದಿಂದ ಕೂಡಿ) ಪ್ರಳಯದ ಮಾರಿಯುಂ ಆಕಾಶದ ಕವಿಯುಂ (ಆಕಾಶದ ಮುಚ್ಚಳವೂ, ನೆಲದ ಮೇರೆಯಾದ ಸಮುದ್ರವೂ,) ನೆಲದ ಕಲ್ಲೆಯುಂ ಮುನ್ನಮೆ ಮೇರೆದಪ್ಪುವುದುಮಂ (ಮೊದಲೇ ತಮ್ಮ ಎಲ್ಲೆಯನ್ನು ಮೀರುವಂತೆ) ತನ್ನೋಳು ಅಳವಡಿಸಿಕೊಂಡು ತಾಗಿದಾಗಳ್ (ಮೊದಲೇ ತಮ್ಮ ಎಲ್ಲೆಯನ್ನು ಮೀರುವಂತೆ ತನ್ನಲ್ಲಿ ತುಂಬಿಕೊಂಡು ಎದುರಿಸಿದನು) ಶಲ್ಯನೊಳ್ ಸಾತ್ಯಕಿ ಶಾರದ್ವತನೊಳ್ ಕೃತಾಂತನಂದನಂ ಕೃತವರ್ಮನೊಳ್ ನಕುಳಂ ಶಕುನಿಯೊಳ್ ಸಹದೇವಂ ಕರ್ಣನೊಳ್ ಬೀಮಸೇನನು ಅಶ್ವತ್ಥಾಮನೊಳ್ ಅಕಳಂಕ ರಾಮಂ ದ್ವಂದ್ವಯುದ್ಧದೊಳ್ ತಾಗಿದಾಗಳ್ (ಅಕಳಂಕರಾಮನಾದ ಅರ್ಜುನನೂ ದ್ವಂದ್ವ ಯುದ್ಧದಲ್ಲಿ ಜೊತೆಜೊತೆಯಾಗಿ ಯುದ್ಧಕ್ಕೆ ಸಂಧಿಸಿದರು)-
ವಚನ:ಅರ್ಥ:ಎಂದು ಒಂದು ಅಕ್ಷೋಹಿಣಿ ಸೈನ್ಯದಿಂದ ಕೂಡಿ ಪ್ರಳಯಕಾಲದ ಮಾರಿದೇವತೆಯೂ, ಆಕಾಶದ ಮುಚ್ಚಳವೂ, ನೆಲದ ಮೇರೆಯಾದ ಸಮುದ್ರವೂ, ಮೊದಲೇ ತಮ್ಮ ಎಲ್ಲೆಯನ್ನು ಮೀರುವಂತೆ ತನ್ನಲ್ಲಿ ತುಂಬಿಕೊಂಡು ಎದುರಿಸಿದನು. ಶಲ್ಯನೊಡನೆ ಸಾತ್ಯಕಿಯೂ ಕೃಪನೊಡನೆ ಧರ್ಮರಾಯನೂ ಕೃತವರ್ಮನೊಡನೆ ನಕುಳನೂ ಶಕುನಿಯೊಡನೆ ಸಹದೇವನೂ ಕರ್ಣನೊಡನೆ ಭೀಮನೂ ಅಶ್ವತ್ಥಾಮನೊಡನೆ ಅಕಳಂಕರಾಮನಾದ ಅರ್ಜುನನೂ ದ್ವಂದ್ವ ಯುದ್ಧದಲ್ಲಿ ಜೊತೆಜೊತೆಯಾಗಿ ಯುದ್ಧಕ್ಕೆ ಸಂಧಿಸಿದರು.
ಮ|| ಸ್ರ|| ದೆಸೆಯೆಲ್ಲಂ ತೀವ್ರ ಬಾಣಾಳಿಯೊಳೆ ಮೆಡಱಿದಂತಂಬರಂ ಬಾಣದಿಂದಂ
ಮುಸುಕಿಟ್ಟಂತಾಗೆ ಬೇಗಂ ತುಡುವ ಬಿಡುವ ಸೂೞ್ಗೆಯ್ಯ ಬೇಗಂಗಳಂ ನಿ|
ಟ್ಟಿಸಲಾರ್ಗಂ ಬಾರದಂತಾಗಸದಳಮಿಸೆ ತದ್ರಾಜಚಕ್ರಂ ಪೊದೞ್ದ
ರ್ಬಿಸಿದತ್ತುದ್ದಾಮ ಮೌರ್ವೀ ರವ ಮುಖರ ಮಹಾಚಾಪ ಚಕ್ರಾಂಧಕಾರಂ|| ೨೦ ||
ಪದ್ಯ-೨೦:ಪದವಿಭಾಗ-ಅರ್ಥ:ದೆಸೆಯೆಲ್ಲಂ ತೀವ್ರ ಬಾಣ ಆಳಿಯೊಳೆ ಮೆಡಱಿದಂತೆ (ಬಾಣಸಮೂಹದಿಂದ ಹೆಣೆದ ಹಾಗೆ) ಅಂಬರಂ ಬಾಣದಿಂದಂ ಮುಸುಕಿಟ್ಟಂತಾಗೆ (ದಿಕ್ಕುಗಳೆಲ್ಲವೂ ತೀಕ್ಷ್ಣವಾದ ಬಾಣಸಮೂಹದಿಂದ ಹೆಣೆದ ಹಾಗಾಗಿ, ಆಕಾಶವು ಬಾಣದಿಂದ ಮುಸುಕಿಕ್ಕಿದಂತಾಯಿತು.) ಬೇಗಂ ತುಡುವ ಬಿಡುವ ಸೂೞ್ಗೆಯ್ಯ (ಸೂಳ್ ಕಯ್ಯ- ಸರದಿಯ ಕೈಯ) ಬೇಗಂಗಳಂ (ವೇಗಗಳನ್ನು)(ಬಾಣಗಳನ್ನು ಬಿಲ್ಲಿಗೆ ಹೂಡುವ ಮತ್ತು ಅದನ್ನು ಪ್ರಯೋಗಿಸುವ ಸರದಿಯ ಕೈಗಳ ವೇಗವನ್ನು) ನಿಟ್ಟಿಸಲು ಆರ್ಗಂ ಬಾರದಂತಾಗೆ (ನೋಡುವುದಕ್ಕೆ ಯಾರಿಗೂ ಸಾಧ್ಯವಿಲ್ಲದ ಹಾಗಾದಲು,) ಅಸದಳಂ ಇಸೆ (ಬಹಳವಾಗಿ ಬಾಣ ಪ್ರಯೋಗ ಮಾಡಲು,) ತದ್ ರಾಜಚಕ್ರಂ (ರಾಜಸಮೂಹ ಬಹಳ ಹೆದರಿಸುತ್ತಿತ್ತು.-. >) ಪೊದೞ್ದು ಅರ್ಬಿಸಿದತ್ತು ಉದ್ದಾಮ ಮೌರ್ವೀ ರವ (ಬಿಲ್ಲಿನ ಠೇಂಕಾರ ಶಬ್ದ ) ಮುಖರ (ಶಬ್ದದಿಂದಕೂಡಿರುವ) ಮಹಾಚಾಪ ಚಕ್ರಾಂಧಕಾರಂ (ಹೆದೆಯ ಟಂಕಾರ ಶಬ್ದದಿಂದ ಶಬ್ದಮಯವಾಗಿರುವ ಬಿಲ್ಲುಗಳ ಸಮೂಹದ ಕತ್ತಲೆಯು ವ್ಯಾಪಿಸಿ ಹೆದರಿಸಿತು)
ಪದ್ಯ-೨೦:ಅರ್ಥ:ದಿಕ್ಕುಗಳೆಲ್ಲವೂ ತೀಕ್ಷ್ಣವಾದ ಬಾಣಸಮೂಹದಿಂದ ಹೆಣೆದ ಹಾಗಾಗಿ, ಆಕಾಶವು ಬಾಣದಿಂದ ಮುಸುಕಿಕ್ಕಿದಂತಾಯಿತು. ಬಾಣಗಳನ್ನು ಬಿಲ್ಲಿಗೆ ಹೂಡುವ ಮತ್ತು ಅದನ್ನು ಪ್ರಯೋಗಿಸುವ ಸರದಿಯ ಕೈಗಳ ವೇಗವನ್ನು ನೋಡುವುದಕ್ಕೆ ಯಾರಿಗೂ ಸಾಧ್ಯವಿಲ್ಲದ ಹಾಗಾಗಲು, ಆ ರಾಜಸಮೂಹವು ವಿಶೇಷವಾಗಿ ಬಾಣಪ್ರಯೋಗ ಮಾಡುವುದಕ್ಕಾಗಿ (ಮೊದಲು) ಮಾಡಿದ ಹೆದೆಯ ಟಂಕಾರ ಶಬ್ದದಿಂದ ಶಬ್ದಮಯವಾಗಿರುವ ಬಿಲ್ಲುಗಳ ಸಮೂಹದ ಕತ್ತಲೆಯು ವ್ಯಾಪಿಸಿ ಹೆದರಿಸಿತು.
ವ|| ಅನ್ನೆಗಂ ಕಪ್ಪಂಗವಿಯಾಗಿ ಕವಿದ ದ್ರುಪದ ವಿಳಯಾನಳನಂ ದ್ರೋಣಂ ಮಹಾದ್ರೋಣ ಪುಷ್ಕಳಾವರ್ತಕಂಗಳೆಂಬ ವಿಳಯ ಕಾಳ ನೀಳ ಜಳಧರವರ್ಷಂಗಳಿಂ ನಂದಿಸೆಯುಂ ನಂದದೆ ಮುಟ್ಟಿವರೆ ದುರ್ಯೋಧನನನೇಕಾಯುಧ ಶರಭರಿತಂಗಳಪ್ಪ ರಥಂಗಳಂ ದ್ರೋಣಾಚಾರ್ಯರ ಪೆಱಗೆ ನಿಱಿಸಿಯಾಯುಧಾಧ್ಯಕ್ಷರಂ ಪೇೞ್ದು ಚಕ್ರರಕ್ಷೆಗೆ ದುಶ್ಶಾಸನಾದಿಗಳ್ವೆರಸು ತಾನೆ ಬಂದಿರ್ದಾಗಳ್-
ವಚನ:ಪದವಿಭಾಗ-ಅರ್ಥ:ಅನ್ನೆಗಂ ಕಪ್ಪಂಗವಿಯಾಗಿ (ಅಷ್ಟರಲ್ಲಿ ಆನೆಯನ್ನು ಹಿಡಿಯುವ ಗುಂಡಿಯ ಮುಚ್ಚಳದಂತೆ) ಕವಿದ ದ್ರುಪದ ವಿಳಯಾನಳನಂ (ಸುತ್ತುವರಿದು ಮುತ್ತಿದ ದ್ರುಪದನೆಂಬ ಪ್ರಳಯಾಗ್ನಿಯನ್ನು) ದ್ರೋಣಂ ಮಹಾದ್ರೋಣ ಪುಷ್ಕಳ ಆವರ್ತಕಂಗಳೆಂಬ ವಿಳಯ ಕಾಳ ನೀಳ (ದ್ರೋಣನು ಮಹಾದ್ರೋಣ ಮತ್ತು ಪುಷ್ಕಳ ಆವರ್ತಕಗಳೆಂಬ ಪ್ರಳಯಕಾಲದ ಕರಿಯ) ಜಳಧರವರ್ಷಂಗಳಿಂ ನಂದಿಸೆಯುಂ ನಂದದೆ ಮುಟ್ಟಿವರೆ (ಮೋಡಗಳ ಮಳೆಯಿಂದ ಆವರಿಸಿದರೂ ಮುಟ್ಟಲಾರದ ಹಾಗೆ) ದುರ್ಯೋಧನನು ಅನೇಕ ಆಯುಧ ಶರಭರಿತಂಗಳಪ್ಪ ರಥಂಗಳಂ (ಮುಟ್ಟಲಾರದ ಹಾಗೆ ಹತ್ತಿರಕ್ಕೆ ಬರಲು ದುರ್ಯೋಧನನು ಅನೇಕ ಆಯುಧ ಮತ್ತು ಬಾಣಗಳಿಂದ ತುಂಬಿರುವ ರಥಗಳನ್ನು) ದ್ರೋಣಾಚಾರ್ಯರ ಪೆಱಗೆ ನಿಱಿಸಿಯು (ದ್ರೋಣಾಚಾರ್ಯರ ಹಿಂದೆ ಸ್ಥಾಪಿಸಿ) ಆಯುಧಾಧ್ಯಕ್ಷರಂ ಪೇೞ್ದು ಚಕ್ರರಕ್ಷೆಗೆ ದುಶ್ಶಾಸನಾದಿಗಳ್ ವೆರಸು ತಾನೆ ಬಂದಿರ್ದಾಗಳ್ (ಆಯುಧಾಧ್ಯಕ್ಷರನ್ನು ನೇಮಿಸಿ ಚಕ್ರವ್ಯೂಹದ ರಕ್ಷೆಗೆ ದುಶ್ಶಾಸನಾದಿಗಳೊಡನೆ ತಾನೆ ಬಂದು ನಿಂತನು; ಆಗ)-
ವಚನ:ಅರ್ಥ:ಅಷ್ಟರಲ್ಲಿ ಆನೆಯನ್ನು ಹಿಡಿಯುವ ಗುಂಡಿಯ ಮುಚ್ಚಳದಂತೆ ಸುತ್ತುವರಿದು ಮುತ್ತಿದ ದ್ರುಪದನೆಂಬ ಪ್ರಳಯಾಗ್ನಿಯನ್ನು ದ್ರೋಣನು ಮಹಾದ್ರೋಣ ಮತ್ತು ಪುಷ್ಕಳ ಆವರ್ತಕಗಳೆಂಬ ಪ್ರಳಯಕಾಲದ ಕರಿಯ ಮೋಡಗಳ ಮಳೆಯಿಂದ ಆವರಿಸಿದರೂ ಮುಟ್ಟಲಾರದ ಹಾಗೆ ಹತ್ತಿರಕ್ಕೆ ಬರಲು ದುರ್ಯೋಧನನು ಅನೇಕ ಆಯುಧ ಮತ್ತು ಬಾಣಗಳಿಂದ ತುಂಬಿರುವ ರಥಗಳನ್ನು ದ್ರೋಣಾಚಾರ್ಯರ ಹಿಂದೆ ಸ್ಥಾಪಿಸಿ ಆಯುಧಾಧ್ಯಕ್ಷರನ್ನು ನೇಮಿಸಿ ಚಕ್ರವ್ಯೂಹದ ರಕ್ಷೆಗೆ ದುಶ್ಶಾಸನಾದಿಗಳೊಡನೆ ತಾನೆ ಬಂದು ನಿಂತನು.
ಚಂ|| ದ್ರುಪದ ಬಳಾಂಬುರಾಶಿಯನಗುರ್ವಿಸೆ ಪರ್ವಿಪ ಬಾಡಬಾಗ್ನಿಯಾ
ಯ್ತುಪಚಯಮಪ್ಪ ಬಿಲ್ಲೊವಜನಂಬಿನ ಬೆಳ್ಸರಿಯಾದಮಾ ರಥ|
ದ್ವಿಪಘಟೆಯೆಂಬಿವನಂಬಿನೊಳೆ ಪೂೞ್ದು ಪಡಲ್ವಡೆ ತಿಣ್ಣಮೆಚ್ಚನಾ
ತ್ರಿಪುರಮನೆಚ್ಚ ರುದ್ರನ ನೆಗೞ್ತೆಯುಮಂ ಗೆಲೆ ಕುಂಭಸಂಭವಂ|| ೨೧ ||21||
ಪದ್ಯ-೨೧:ಪದವಿಭಾಗ-ಅರ್ಥ:ದ್ರುಪದ ಬಳಾಂಬುರಾಶಿಯನು (ದ್ರುಪದನ ಸೈನ್ಯಸಾಗರವನ್ನು - ಬಲ + ಅಂಬುರಾಶಿ: ಸೈನ್ಯ + ಸಾಗರ) ಅಗುರ್ವಿಸೆ ಪರ್ವಿಪ ಬಾಡಬಾಗ್ನಿಯಾಯ್ತು (ಹೆದರಿಸುವ ಮತ್ತು ಬೆದರಿಸುವ ಬಡಬಾಗ್ನಿಯಾಯಿತು.) ಉಪಚಯಮಪ್ಪ ಬಿಲ್ಲೊವಜನ ಅಂಬಿನ ಬೆಳ್ಸರಿಯು ಆದಂ (ಹೆಚ್ಚುತ್ತಿರುವ ದ್ರೋಣಾಚಾರ್ಯರ ಬಾಣಗಳ ಬಿಳಿಯ ಸೋನೆಯ ಮಳೆಯು ಆಯಿತು) ಆ ರಥ ದ್ವಿಪಘಟೆ ಎಂಬಿವನ ಅಂಬಿನೊಳೆ (ಆ ರಥಗಳೂ ಆನೆಯ ಸಮೂಹವೂ ಎಂಬವು ಇವನ ಬಾಣಗಳಲ್ಲಿ ) ಪೂೞ್ದು ಪಡಲ್ವಡೆ (ಹೂತುಹೋಗಿ ಚೆದುರಿಹೋಗುತ್ತಿರಲು) ತಿಣ್ಣಂ ಎಚ್ಚನು (ಬಲವಾಗಿ ಹೊಡೆದನು. ಹೇಗೆಂದರೆ-) ಆ ತ್ರಿಪುರಮನ ಎಚ್ಚ ರುದ್ರನ ನೆಗೞ್ತೆಯುಮಂ ಗೆಲೆ ಕುಂಭಸಂಭವಂ (ಆ ತ್ರಿಪುರವನ್ನು ಹೊಡೆದ ಈಶ್ವರನ ಕೀರ್ತಿಯನ್ನೂ/ ಕಾರ್ಯವನ್ನೂ ಮೀರಿಸಿ ದ್ರೋಣನು - ಹೊಡೆದನು.)
ಪದ್ಯ-೨೧:ಅರ್ಥ: ಹೆಚ್ಚುತ್ತಿರುವ ದ್ರೋಣಾಚಾರ್ಯರ ಬಾಣಗಳ ಬಿಳಿಯ ಸೋನೆಯ ಮಳೆಯು ದ್ರುಪದನ ಸೈನ್ಯಸಾಗರವನ್ನು ಹೆದರಿಸುವ ಮತ್ತು ಬೆದರಿಸುವ ಬಡಬಾಗ್ನಿಯಾಯಿತು. ಆ ರಥಗಳೂ ಆನೆಯ ಸಮೂಹವೂ ಎಂಬವು ಇವನ ಬಾಣಗಳಲ್ಲಿ ಹೂತುಹೋಗಿ ಚೆದುರಿಹೋಗುತ್ತಿರಲು ದ್ರೋಣನು ಆ ತ್ರಿಪುರವನ್ನು ಹೊಡೆದ ಈಶ್ವರನ ಕೀರ್ತಿಯ ಕಾರ್ಯವನ್ನೂ ಮೀರಿಸಿ ಬಲವಾಗಿ ಹೊಡೆದನು.
ವ|| ಅಂತು ತನ್ನ ಬಲಮೆಲ್ಲಮಂ ಜವನಂತೊಕ್ಕಲಿಕ್ಕೆ ಕೊಲ್ವ ಕಳಶಕೇತನಂ ಯಜ್ಞಸೇನನೇನುಂ ಮಾಣದಾತನ ಮೇಲೆ ಬಟ್ಟಿನಂಬಿನ ಬೆಳ್ಸರಿಯುಮಂ ಕೆಲ್ಲಂಬಿನ ತಂದಲುಮಂ ಪಾರೆಯಂಬಿನ ಸೋನೆಯುಮಂ ಸುರಿಯೆ ಕಳಶಯೋನಿ ಮುಳಿದು-
ವಚನ:ಪದವಿಭಾಗ-ಅರ್ಥ:ಅಂತು ತನ್ನ ಬಲಮೆಲ್ಲಮಂ ಜವನಂತೆ ಒಕ್ಕಲಿಕ್ಕೆ ಕೊಲ್ವ ಕಳಶಕೇತನಂ(ಹಾಗೆ ತನ್ನ ಸೈನ್ಯವೆಲ್ಲವನ್ನೂ ಯಮನಂತೆ ಒಕ್ಕಣೆ ಮಾಡಿ ಕೊಲ್ಲುತ್ತಿರುವ ದ್ರೋಣನನ್ನು ) ಯಜ್ಞಸೇನನು ಏನುಂ ಮಾಣದೆ (ದ್ರುಪದನು ಹೇಗೂ ತಡೆಯಲಾರದೆ) ಆತನ ಮೇಲೆ ಬಟ್ಟಿನಂಬಿನ ಬೆಳ್ಸರಿಯುಮಂ(ಅವನ ಮೇಲೆ ಬಲವಾದ/ ಗುಂಡಾದ ಅಲಗುಳ್ಳ ಬಾಣಗಳ ಬಿಳಿ ಸೋನೆಮಳೆಯನ್ನೂ), ಕೆಲ್ಲಂಬಿನ ತಂದಲುಮಂ (ಕೆಲ್ಲಂಬುಗಳೆಂಬ ಬಾಣಗಳ ತುಂತುರು ಮಳೆಯನ್ನೂ), ಪಾರೆಯಂಬಿನ ಸೋನೆಯುಮಂ ಸುರಿಯೆ (ಹಾರೆಯಾಕಾರದ ಬಾಣಗಳ ಜಡಿಮಳೆಯನ್ನೂ ಸುರಿಸಲು) ಕಳಶಯೋನಿ (ಜ)- ಕಳಶದಲ್ಲಿ ಹುಟ್ಟಿದವನು) ಮುಳಿದು (ದ್ರೋಣನು ಕೋಪಗೊಂಡು.)-
ವಚನ:ಅರ್ಥ:ಹಾಗೆ ತನ್ನ ಸೈನ್ಯವೆಲ್ಲವನ್ನೂ ಯಮನಂತೆ ಒಕ್ಕಣೆ ಮಾಡಿ ಕೊಲ್ಲುತ್ತಿರುವ ದ್ರೋಣನನ್ನು ದ್ರುಪದನು ಹೇಗೂ ತಡೆಯಲಾರದೆ ಅವನ ಮೇಲೆ ಗುಂಡಾದ ಅಲಗುಳ್ಳ ಬಾಣಗಳ ಬಲವಾದ ಸೋನೆಮಳೆಯನ್ನೂ ಕೆಲ್ಲಂಬುಗಳೆಂಬ ಬಾಣಗಳ ತುಂತುರು ಮಳೆಯನ್ನೂ, ಹಾರೆಯಾಕಾರದ ಬಾಣಗಳ ಜಡಿಮಳೆಯನ್ನೂ ಸುರಿಸಲು, ದ್ರೋಣನು ಕೋಪಗೊಂಡು-
ಮ|| ಪದಿನೆಂಟಂಬಿನೊಳೆಚ್ಚೊಡೆಚ್ಚು ಪದಿನೆಂಟಸ್ತ್ರಂಗಳಿಂ ಸೀಳ್ದು ಕೋ
ಪದಿನೆಂಬತ್ತು ಸರಂಗಳಿಂ ಗುರು ಭರಂಗೆಯ್ದೆಚ್ಚೊಡೆಂಬತ್ತು ಬಾ|
ಣದಿನಾಗಳ್ ಕಡಿದುಗ್ರ ಸೂತ ಹಯ ಸಂಘಾತಂಗಳಂ ತಿಣ್ಣಮೆ
ಚ್ಚಿದಿರೊಳ್ ನಿಲ್ಲದಿರೋಡು ಸತ್ತೆಯೆನುತುಂ ಪಾಂಚಾಳರಾಜಾಪಂ|| ೨೨ ||
ಪದ್ಯ-೨೨:ಪದವಿಭಾಗ-ಅರ್ಥ:ಪದಿನೆಂಟಂಬಿನೊಳು ಎಚ್ಚೊಡೆ ಎಚ್ಚು ಪದಿನೆಂಟಸ್ತ್ರಂಗಳಿಂ ಸೀಳ್ದು (ಹದಿನೆಂಟು ಬಾಣಗಳಿಂದ ಹೊಡೆದರೆ ಹದಿನೆಂಟಸ್ತ್ರಗಳಿಂದ ಅವನ್ನು ಹೊಡೆದು ಸೀಳಿ) ಕೋಪದಿನೆಂಬತ್ತು ಸರಂಗಳಿಂ ಗುರು ಭರಂಗೆಯ್ದು ಎಚ್ಚೊಡೆ (ದ್ರೋಣನು ಕೋಪದಿಂದ ಎಂಬತ್ತು ಬಾಣಗಳಿಂದ ಆರ್ಭಟ ಮಾಡಿ ಹೊಡೆದರೆ) ಒಣಬತ್ತು ಬಾಣದಿನಾಗಳ್ ಕಡಿದು ಉಗ್ರ ಸೂತ ಹಯ ಸಂಘಾತಂಗಳಂ (ದ್ರುಪದನು ಎಂಬತ್ತು ಬಾಣಗಳಿಂದ ಆಗಲೇ ಕತ್ತರಿಸಿ ಹಾಕಿದನು. ದ್ರೋಣನ ಸಾರಥಿ ಮತ್ತು ಭಯಂಕರವಾದ ಕುದುರೆಗಳ ಸಮೂಹಗಳನ್ನು) ತಿಣ್ಣಂ ಎಚ್ಚಿ ಇದಿರೊಳ್ ನಿಲ್ಲದಿರ್ ಓಡು ಸತ್ತೆಯೆನುತುಂ (ಎದುರಿಗೆ ನಿಲ್ಲಬೇಡ ಓಡು ಸತ್ತೆ ಎನ್ನುತ್ತ) ಪಾಂಚಾಳರಾಜಾಪಂ (ಪಾಂಚಾಳರಾಜಾಶ್ವರನಾದ ದ್ರುಪದನು- )
ಪದ್ಯ-೨೨:ಅರ್ಥ:ಹದಿನೆಂಟು ಬಾಣಗಳಿಂದ ಹೊಡೆದರೆ ಹದಿನೆಂಟಸ್ತ್ರಗಳಿಂದ ಅವನ್ನು ಹೊಡೆದು ಸೀಳಿ, ದ್ರೋಣನು ಕೋಪದಿಂದ ಎಂಬತ್ತು ಬಾಣಗಳಿಂದ ಆರ್ಭಟ ಮಾಡಿ ಹೊಡೆದರೆ ದ್ರುಪದನು ಎಂಬತ್ತು ಬಾಣಗಳಿಂದ ಆಗಲೇ ಕತ್ತರಿಸಿ ಹಾಕಿದನು. ದ್ರೋಣನ ಸಾರಥಿ ಮತ್ತು ಭಯಂಕರವಾದ ಕುದುರೆಗಳ ಸಮೂಹಗಳನ್ನು ತೀಕ್ಷ್ಣವಾಗಿ ಹೊಡೆದು ಎದುರಿಗೆ ನಿಲ್ಲಬೇಡ ಓಡು ಸತ್ತೆ ಎನ್ನುತ್ತ ಪಾಂಚಾಳರಾಜಾಶ್ವರನಾದ ದ್ರುಪದನು-
ವ|| ಮೆಯ್ವೆರ್ಚಿ ಪೆರ್ಚಿದುಮ್ಮಚ್ಚರದೊಳಚ್ಚರಿಯಾಗೆಚ್ಚೊಡೆ ಪೂಣ್ಗೂರ್ತು-
ವಚನ:ಪದವಿಭಾಗ-ಅರ್ಥ:ಮೆಯ್ವೆರ್ಚಿ(ಕೊಬ್ಬಿ) ಪೆರ್ಚಿದ ಉಮ್ಮಚ್ಚರದೊಳ್ (ಹೆಚ್ಚಿದ ಅತಿ ಮತ್ಸರದಲ್ಲಿ/ ಕೋಪದಲ್ಲಿ) ಅಚ್ಚರಿಯಾಗೆ ಎಚ್ಚೊಡೆ ಪೂಣ್ಗೂರ್ತು (ಹೊಡೆಯಲು ದ್ರೋಣನು ಗಾಯಗೊಂಡು)-
ವಚನ:ಅರ್ಥ: ಕೊಬ್ಬಿ ಹೆಚ್ಚಿದ ಕೋಪದಲ್ಲಿ ಆಶ್ಚರ್ಯವಾಗುವಂತೆ ಹೊಡೆಯಲು ದ್ರೋಣನು ಗಾಯಗೊಂಡು
ಉ|| ಎನ್ನೊಳೆ ಮುನ್ನೆ ಮುಚ್ಚರಿಪನೇ ಒಡನೋದಿದೆನೆಂಬ ಮೇಳದಿಂ
ದೆನ್ನನೆ ಮೆಚ್ಚನೆನ್ನೊಳಮಿವಂ ಸಮನೆಚ್ಚಪನಕ್ಕುಮಾದೊಡೇ|
ನಿನ್ನವನಂ ಪಡಲ್ವಡಿಪೆನೆಂದಿರದಾಗಳೆ ಭಾರ್ಗವಾಸ್ತ್ರದಿಂ
ದನ್ನೆರೆದೆಚ್ಚನಾ ದ್ರುಪದರಾಜಶಿರೋಂಬುಜಮಂ ಘಟೋದ್ಭವಂ|| ೨೩ ||
ಪದ್ಯ-೨೩:ಪದವಿಭಾಗ-ಅರ್ಥ:ಎನ್ನೊಳೆ ಮುನ್ನೆ ಮುಚ್ಚರಿಪನೇ (ಇವನು ಮೊದಲಿನಿಂದಲೂ ನನ್ನಲ್ಲಿ ಮತ್ಸರಿಸುವವನೇ;) ಒಡನೆ ಓದಿದೆನೆಂಬ ಮೇಳದಿಂದ (ಜೊತೆಯಲ್ಲಿ ಓದಿದೆನು ಎಂಬ ಸಲಿಗೆಯಿಂದ ) ಎನ್ನನೆ ಮೆಚ್ಚನು (ನನ್ನನ್ನು ಜೊತೆ ಓದಿದವನೆಂದು ಮೆಚ್ಚಲಾರ) ಎನ್ನೊಳಂ ಇವಂ ಸಮನೆ ಎಚ್ಚಪನು ಅಕ್ಕುಂ (ನನ್ನ ಸಮಾನನಾಗಿಯೇ ಯುದ್ಧಮಾಡುವ ಶಕ್ತಿಯುಳ್ಳವನೇನೋ ಹೌದು;) ಆದೊಡೇನು ಇನ್ನು ಇವನಂ ಪಡಲ್ವಡಿಪೆನೆಂದು ಇರದೆ ಆಗಳೆ (ಇನ್ನಿವನನ್ನು ಕೆಳಗುರುಳಿಸುತ್ತೇನೆಂದು ಸಾವಕಾಶಮಾಡದೆ ಕೂಡಲೆ) ಭಾರ್ಗವಾಸ್ತ್ರದಿಂದಂ ನೆರೆದು ಎಚ್ಚನು (ಸರಿಯಾಗಿ ಹೊಡೆದನು) ಆ ದ್ರುಪದರಾಜ ಶಿರೋಂಬುಜಮಂ ಘಟೋದ್ಭವಂ (ಘಟೋದ್ಭವನಾದ ದ್ರೋಣನು ದ್ರುಪದ ರಾಜನ ತಲೆಯೆಂಬ ಕಮಲವನ್ನು ಕತ್ತರಿಸಿದನು.)
ಪದ್ಯ-೨೩:ಅರ್ಥ: ಇವನು ಮೊದಲಿನಿಂದಲೂ ನನ್ನಲ್ಲಿ ಮತ್ಸರಿಸುವವನೇ; ಜೊತೆಯಲ್ಲಿ ಓದಿದೆನು ಎಂಬ ಸಲಿಗೆಯಿಂದ ನನ್ನನ್ನು ಜೊತೆ ಓದಿದವನೆಂದು ಮೆಚ್ಚಲಾರ; ನನ್ನ ಸಮಾನನಾಗಿಯೇ ಯುದ್ಧಮಾಡುವ ಶಕ್ತಿಯುಳ್ಳವನೇನೋ ಹೌದು; ಆದರೇನು? ಇನ್ನಿವನನ್ನು ಕೆಳಗುರುಳಿಸುತ್ತೇನೆಂದು ಸಾವಕಾಶಮಾಡದೆ, ಕೂಡಲೆ ಭಾರ್ಗವಾಸ್ತ್ರದಿಂದ ಸರಿಯಾಗಿ ಹೊಡೆದನು; ದ್ರುಪದ ರಾಜನ ತಲೆಯೆಂಬ ಕಮಲವನ್ನು ದ್ರೋಣನು ಕತ್ತರಿಸಿದನು.
ವ|| ಅಂತು ದ್ರುಪದನೞಿವಂ ಕಂಡಾತನ ತಮ್ಮಂದಿರಪ್ಪ ಶತಾನೀಕ ಶತಚಂದ್ರರ್ ಮೊದಲಾಗೆ ಪನ್ನೊರ್ವರುಮಯ್ವರ್ ಕೈಕಯರುಂ ಕುಂತಿಯ ಮಾವನಪ್ಪ ಕುಂತಿಭೋಜನುಂಬೆರಸು ಪದಿನಾಲ್ಸಾಸಿರ ರಥಂಬೆರಸು ಬಂದು ತಾಗಿದೊಡೆ-
ವಚನ:ಪದವಿಭಾಗ-ಅರ್ಥ:ಅಂತು ದ್ರುಪದನ ಅೞಿವಂ ಕಂಡು (ದ್ರುಪದನ ಅಳಿವನ್ನು- ಸಾವನ್ನು ನೋಡಿ) ಅತನ ತಮ್ಮಂದಿರಪ್ಪ ಶತಾನೀಕ ಶತಚಂದ್ರರ್ ಮೊದಲಾಗೆ ಪನ್ನೊರ್ವರುಂ ಅಯ್ವರ್ ಕೈಕಯರುಂ (ಹನ್ನೊಂದು ಜನವೂ ಅಯ್ದು ಮಂದಿ ಕೈಕೆಯರೂ) ಕುಂತಿಯ ಮಾವನಪ್ಪ ಕುಂತಿಭೋಜನುಂ ಬೆರಸು (ಕುಂತಿಭೋಜನೂ ಕೂಡಿ) ಪದಿನಾಲ್ಸಾಸಿರ ರಥಂಬೆರಸು ಬಂದು ತಾಗಿದೊಡೆ (ಹದಿನಾಲ್ಕು ಸಾವಿರ ರಥದೊಡನೆ ಬಂದು ಎದುರಿಸಿದಾಗ)-
ವಚನ:ಅರ್ಥ:ಹಾಗೆ ದ್ರುಪದನ ಸಾವನ್ನು ನೋಡಿ ಆತನ ತಮ್ಮಂದಿರಾದ ಶತಾನೀಕ ಶತಚಂದ್ರರೇ ಮೊದಲಾದ ಹನ್ನೊಂದು ಜನವೂ ಅಯ್ದು ಮಂದಿ ಕೈಕೆಯರೂ ಕುಂತಿಯ ಮಾವನಾದ ಕುಂತಿಭೋಜನೂ ಕೂಡಿ ಹದಿನಾಲ್ಕು ಸಾವಿರ ರಥದೊಡನೆ ಬಂದು ಎದುರಿಸಿದರು. ಆಗ-
ಮ|| ಶಕಟಂಗಳ್ ಪದಿನೆಂಟು ಕೋಟಿವರೆಗಂ ತೀವಿರ್ದನೇಕೋಗ್ರ ಸಾ
ಯಕದಿಂದಂ ಚತುರಂಗ ಸಾಧನದ ಮೆಯ್ಮೆಯ್ಯೊಳ್ ಜಿಗಿಲ್ತಾಂತ ನಾ|
ಯಕರಂ ಸುಂಟಗೆಯಾಱಿದಂತೆ ರಥದೊಳ್ ಜೋಲ್ವನ್ನೆಗಂ ಕೋದು ಚಾ
ಪ ಕಳಾಕೌಶಳಮಂ ಜಗಕ್ಕೆ ಮೆರೆದಂ ಮೆಯ್ವೆರ್ಚಿ ಕುಂಭೋದ್ಭವಂ|| ೨೪ ||
ಪದ್ಯ-೨೪:ಪದವಿಭಾಗ-ಅರ್ಥ:ಶಕಟಂಗಳ್ ಪದಿನೆಂಟು ಕೋಟಿವರೆಗಂ ತೀವಿರ್ದ ಅನೇಕ ಉಗ್ರ ಸಾಯಕದಿಂದಂ (ಹದಿನೆಂಟು ಕೋಟಿಯವರೆಗೂ ತುಂಬಿದ ಗಾಡಿಗಳ ಅತಿಭಯಂಕರವಾದ ಬಾಣಗಳಿಂದ) ಚತುರಂಗ ಸಾಧನದ ಮೆಯ್ಮೆಯ್ಯೊಳ್ ಜಿಗಿಲ್ತಾಂತ ನಾಯಕರಂ (ಚತುರಂಗ ಸೈನ್ಯದಲ್ಲಿ ಒಂದೊಂದು ಮೈಯ್ಯಲ್ಲಿಯೂ ಅಂಟಿಕೊಂಡ, ಪ್ರತಿಭಟಿಸಿದ ನಾಯಕರ) ಸುಂಟಗೆಯಾಱಿದಂತೆ (ಸುಟ್ಟ ಮಾಂಸವನ್ನು ಆರಲಿಟ್ಟಿರುವ ಹಾಗೆ) ರಥದೊಳ್ ಜೋಲ್ವನ್ನೆಗಂ ಕೋದು (ರಥದಲ್ಲಿ ಜೋತು ಬೀಳುತ್ತಿರುವಂತೆ ಪೋಣಿಸಿ ) ಚಾಪ ಕಳಾಕೌಶಳಮಂ ಜಗಕ್ಕೆ ಮೆರೆದಂ ಮೆಯ್ವೆರ್ಚಿ ಕುಂಭೋದ್ಭವಂ (ದ್ರೋಣನು ಮಯ್ಯುಬ್ಬಿ ತನ್ನ ವಿದ್ಯಾಕೌಶಲವನ್ನು ಲೋಕಕ್ಕೆ ಪ್ರದರ್ಶಿಸಿದನು.)
ಪದ್ಯ-೦೦:ಅರ್ಥ:ಹದಿನೆಂಟು ಕೋಟಿಯವರೆಗೂ ತುಂಬಿದ ಗಾಡಿಗಳ ಅತಿಭಯಂಕರವಾದ ಬಾಣಗಳಿಂದ, ಚತುರಂಗ ಸೈನ್ಯದಲ್ಲಿ ಒಂದೊಂದು ಮೈಯ್ಯಲ್ಲಿಯೂ ಅಂಟಿಕೊಂಡ, ಪ್ರತಿಭಟಿಸಿದ ನಾಯಕರ, ಸೇನಾಪತಿಗಳ ಸುಟ್ಟ ಮಾಂಸವನ್ನು ಆರಲಿಟ್ಟಿರುವ ಹಾಗೆ ರಥದಲ್ಲಿ ಜೋತು ಬೀಳುತ್ತಿರುವಂತೆ ಪೋಣಿಸಿ (ನೇತುಹಾಕಿ-ಜೋಲುಬಿಟ್ಟು) ದ್ರೋಣನು ಮಯ್ಯುಬ್ಬಿ ತನ್ನ ವಿದ್ಯಾಕೌಶಲವನ್ನು ಲೋಕಕ್ಕೆ ಪ್ರದರ್ಶಿಸಿದನು.
ವ|| ಅಂತು ದ್ರುಪದ ದ್ರುಪದಾನುಜ ವಿರಾಟ ವಿರಾಟಾನುಜ ಕೈಕಯ ಕುಂತಿ ಭೋಜಾದಿಗಳಪ್ಪ ನಾಯಕರೆಲ್ಲರುಮಂ ಪೇೞೆ ಪೆಸರಿಲ್ಲದಂತೆ ಕೊಂದು ಮುಂದಾಂಪರಾರುಮಿಲ್ಲದಿಕ್ಕಿ ಗೆಲ್ದ ಮಲ್ಲನಿರ್ದಂತಿರ್ದಾಗಳ್-
ವಚನ:ಪದವಿಭಾಗ-ಅರ್ಥ:ಅಂತು ದ್ರುಪದ ದ್ರುಪದ-ಅನುಜ ವಿರಾಟ ವಿರಾಟ-ಅನುಜ ಕೈಕಯ ಕುಂತಿ ಭೋಜಾದಿಗಳಪ್ಪ ನಾಯಕರೆಲ್ಲರುಮಂ (ನಾಯಕರೆಲ್ಲರನ್ನೂ) ಪೇೞೆ ಪೆಸರಿಲ್ಲದಂತೆ ಕೊಂದು (ಹೇಳುವುದಕ್ಕೂ ಒಂದು ಹೆಸರಿಲ್ಲದಂತೆ ಕೊಂದು) ಮುಂದೆ ಆಂಪರು ಆರುಂ ಇಲ್ಲದೆ ಇಕ್ಕಿ(ನಂತರ ಪ್ರತಿಭಟಿಸುವವರಾರೂ ಇಲ್ಲದಂತೆ ಹೊಡೆದು ಸಂಹರಿಸಿ) ಗೆಲ್ದ ಮಲ್ಲನಿರ್ದಂತೆ ಇರ್ದಾಗಳ್-(ಗೆದ್ದ ಜಟ್ಟಿಯಿದ್ದಂತೆ ಇದ್ದನು. ಆಗ)
ವಚನ:ಅರ್ಥ: ಹೀಗೆ ದ್ರುಪದ, ದ್ರುಪದನ ತಮ್ಮ, ವಿರಾಟ, ವಿರಾಟನ ತಮ್ಮ ಕೈಕೆಯ, ಕುಂತೀಭೋಜನೇ ಮೊದಲಾದ ನಾಯಕರೆಲ್ಲರನ್ನೂ ಹೇಳುವುದಕ್ಕೂ ಒಂದು ಹೆಸರಿಲ್ಲದಂತೆ ಕೊಂದು ನಂತರ ಪ್ರತಿಭಟಿಸುವವರಾರೂ ಇಲ್ಲದಂತೆ ಹೊಡೆದು ಸಂಹರಿಸಿ ಗೆದ್ದ ಜಟ್ಟಿಯಿದ್ದಂತೆ ಇದ್ದನು. ಆಗ-
ಮ|| ಸಕಲಾರಾತಿ ನರೇಂದ್ರಮೌಳಿಗಳುರುಳ್ದಾ ದೀಪ್ತ ರತ್ನಾಂಶು ಮಾ
ಳಿಕೆಯಿಂದಾ ರಣರಂಗಮಂ ಬೆಳಗೆ ಕಾೞ್ಕಿರ್ಚೆಂದು ಭೂತಾಂಗನಾ|
ನಿಕರಂ ಶೋಣಿತವಾರಿಯಂ ಕುಡಿದಗುರ್ವಪ್ಪನ್ನೆಗಂ ಸೂಸೆ ನೋ
ಡ ಕವಿಲ್ತಿರ್ದುದು ಕೂಡೆ ಸಂಜೆಗವಿದಂತಾ ದ್ರೋಣನಿಂ ಕೊಳ್ಗುಳಂ|| ೨೫ ||
ಪದ್ಯ-೨೫:ಪದವಿಭಾಗ-ಅರ್ಥ:ಸಕಲ ಆರಾತಿ ನರೇಂದ್ರಮೌಳಿಗಳ ಉರುಳ್ದ ಆ ದೀಪ್ತ ರತ್ನಾಂಶು ಮಾಳಿಕೆಯಿಂದ (ಎಲ್ಲಾ ಶತ್ರುರಾಜರ ಕಿರೀಟಗಳುರುಳಿ ಆ ರತ್ನಕಿರಣಗಳ ಮಾಲೆಯಿಂದ) ಆ ರಣರಂಗಮಂ ಬೆಳಗೆ (ಆ ರಣರಂಗವು ಕೆಂಪಗೆ ಬೆಳಗಲು-) ಕಾೞ್ಕಿರ್ಚೆಂದು ಭೂತಾಂಗನಾ ನಿಕರಂ (ಪಿಶಾಚಸ್ತ್ರೀಯರ ಸಮೂಹವು) ಶೋಣಿತವಾರಿಯಂ ಕುಡಿದು ಅಗುರ್ವು ಅಪ್ಪನ್ನೆಗಂ ಸೂಸೆ (ಬಂದು ರಕ್ತಜಲವನ್ನು ಕುಡಿದು ಭಯವಾಗುವ ಹಾಗೆ ಚೆಲ್ಲಾಡಿತು, ಚೆಲ್ಲಾಡಲು-,) ನೋಡ ಕವಿಲ್ತಿರ್ದುದು ಕೂಡೆ ಸಂಜೆಗವಿದಂತೆ ಆ ದ್ರೋಣನಿಂ ಕೊಳ್ಗುಳಂ (ಯುದ್ಧಭೋಮಿ) (ಆ ದ್ರೋಣನಿಂದ ಆ ಯುದ್ಧಭೂಮಿಯು ಸಂಜೆಕವಿದಂತೆ ಮಾಸಲು ಕೆಂಪು - ಕಪ್ಪು ಬಣ್ಣದಿಂದ ಕೂಡಿದ್ದಿತು)
ಪದ್ಯ-೨೫:ಅರ್ಥ: ಎಲ್ಲಾ ಶತ್ರುರಾಜರ ಕಿರೀಟಗಳುರುಳಿ ಆ ರತ್ನಕಿರಣಗಳ ಮಾಲೆಯಿಂದ, ಆ ರಣರಂಗವು ಕೆಂಪಗೆ ಬೆಳಗಲು- ಅದು ಕಾಡ್ಗಿಚ್ಚೆಂದು ಪಿಶಾಚಸ್ತ್ರೀಯರ ಸಮೂಹವು ಬಂದು ರಕ್ತಜಲವನ್ನು ಕುಡಿದು ಭಯವಾಗುವ ಹಾಗೆ ಚೆಲ್ಲಾಡಲು, ಆ ದ್ರೋಣನಿಂದ ಆ ಯುದ್ಧಭೂಮಿಯು ಸಂಜೆಕವಿದಂತೆ ಮಾಸಲು ಕೆಂಪು - ಕಪ್ಪು ಬಣ್ಣದಿಂದ ಕೂಡಿದ್ದಿತು.
ವ|| ಆಗಳ್ ಯುಧಿಷ್ಠಿರಂ ನಾರಾಯಣಂ ಪೇೞ್ದ ಕಪಟೋಪದೇಶದಿಂ ದ್ರೋಣನಂ ಕೆಯ್ದೆ ಮಾಡಲೆಂದು ಪಾಂಡ್ಯ ಗಜಘಟೆಗಳನಿದಿರೊಳ್ ತಂದೊಡ್ಡಿದಾಗಳ್-
ವಚನ:ಪದವಿಭಾಗ-ಅರ್ಥ:ಆಗಳ್ ಯುಧೀಷ್ಠಿರಂ ನಾರಾಯಣಂ ಪೇೞ್ದ ಕಪಟ ಉಪದೇಶದಿಂ (ಕಪಟ ಸಲಹೆಯಿಂದ) ದ್ರೋಣನಂ ಕೆಯ್ದೆ ಮಾಡಲೆಂದು (ದ್ರೋಣನನ್ನು ವಶಪಡಿಸಿಕೊಳ್ಳಬೇಕೆಂದು) ಪಾಂಡ್ಯ ಗಜಘಟೆಗಳನು ಇದಿರೊಳ್ ತಂದು ಒಡ್ಡಿದಾಗಳ್ (ಪಾಂಡ್ಯರ ಆನೆಗಳ ಸಮೂಹವನ್ನು ಎದುರಾಗಿ ತಂದು ಒಡ್ಡಿದಾಗ, ಎದರು ನಿಲ್ಲಿಸಿದಾಗ)-
ವಚನ:ಅರ್ಥ:ಆಗ ಧರ್ಮರಾಜನು ಕೃಷ್ಣನು ಹೇಳಿದ ಕಪಟ ಸಲಹೆಯಿಂದ ದ್ರೋಣನನ್ನು ವಶಪಡಿಸಿಕೊಳ್ಳಬೇಕೆಂದು ಪಾಂಡ್ಯರ ಆನೆಗಳ ಸಮೂಹವನ್ನು ಎದುರಾಗಿ ತಂದು ಒಡ್ಡಿದಾಗ-
ಕಂ|| ನಿಶಿತ ವಿಶಿಖಂಗಳಿಂದೊಂ
ದಶನಿಯೆ ಗಿರಿಕುಲಮನಳಱುವಂತೆ ಮದೇಭ|
ಪ್ರಸರ ಸಹಸ್ರಂ ಕೆಡೆದುವು
ವಿಸಸನದೊಳ್ ದ್ರೋಣನಿದಿರ್ಗೆ ಮಾರ್ವಲಮೊಳವೇ|| ೨೬ ||
ಪದ್ಯ-೨೬:ಪದವಿಭಾಗ-ಅರ್ಥ:ನಿಶಿತ ವಿಶಿಖಂಗಳಿಂದಂ ಒಂದು ಅಶನಿಯೆ (ವಜ್ರಾಯುಧ) ಗಿರಿಕುಲಮನು ಅಳಱುವಂತೆ (ಹರಿತವಾದ ಬಾಣಗಳಿಂದ ಒಂದು ವಜ್ರಾಯುಧವೇ ಪರ್ವತಗಳ ಸಮೂಹವನ್ನು ನಾಶಮಾಡುವ ಹಾಗೆ) ಮದೇಭ ಪ್ರಸರ ಸಹಸ್ರಂ ಕೆಡೆದುವು ವಿಸಸನದೊಳ್ (ಸಾವಿರ ಮದ್ದಾನೆಯ ಗುಂಪು ಯುದ್ಧರಂಗದಲ್ಲಿ ಸತ್ತುಬಿದ್ದುವು.) ದ್ರೋಣನ ಇದಿರ್ಗೆ ಮಾರ್ವಲಂ ಒಳವೇ (ವಿಸನದೊಳ್ -ಯುದ್ಧರಂಗದಲ್ಲಿ ದ್ರೋಣನಿಗೆ ಇದಿರಾಗುವ ಪ್ರತಿಬಲವುಂಟೇ?)
ಪದ್ಯ-೨೬:ಅರ್ಥ:ಹರಿತವಾದ ಬಾಣಗಳಿಂದ ಒಂದು ವಜ್ರಾಯುಧವೇ ಪರ್ವತಗಳ ಸಮೂಹವನ್ನು ನಾಶಮಾಡುವ ಹಾಗೆ ಸಾವಿರ ಮದ್ದಾನೆಯ ಗುಂಪು ಯುದ್ಧರಂಗದಲ್ಲಿ ಸತ್ತುಬಿದ್ದುವು. ದ್ರೋಣನಿಗಿದಿರಾಗುವ ಪ್ರತಿಬಲವುಂಟೇ? ಇಲ್ಲ!
ವ|| ಅಂತು ತನಗೆ ಮಾಱಾಂತ ಮದಾಂಧಸಿಂಧುರಂಗಳಂ ಸಿಂಧುರಂಗಳಂ ಸಿಂಧುರಾರಾತಿಯೆ ಕೊಲ್ವಂತೆ ಕೊಲೆ-
ವಚನ:ಪದವಿಭಾಗ-ಅರ್ಥ:ಅಂತು ತನಗೆ ಮಾಱಾಂತ ಮದಾಂಧ ಸಿಂಧುರಂಗಳಂ (ತನಗೆ ಪ್ರತಿಭಟಿಸಿದ ಮದ್ದಾನೆಗಳನ್ನು,) ಸಿಂಧುರಂಗಳಂ ಸಿಂಧುರಾರಾತಿಯೆ ಕೊಲ್ವಂತೆ (ಮದ್ದಾನೆಗಳನ್ನು ಸಿಂಹವು ಕೊಲ್ಲುವ ಹಾಗೆ ) ಕೊಲೆ-
ವಚನ:ಅರ್ಥ: ವ|| ಹಾಗೆ ತನಗೆ ಪ್ರತಿಭಟಿಸಿದ ಮದ್ದಾನೆಗಳನ್ನು, ಸಿಂಹವು ಮದ್ದಾನೆಗಳನ್ನು ಕೊಲ್ಲುವ ಹಾಗೆ ಕೊಂದನು. ಹಾಗೆ ಕೊಲ್ಲಲು-
ಕಂ|| ಸಾಮಜಮಶ್ವತ್ಥಾಮಂ
ನಾಮದಿ ನೊಂದೞಿದೊಡಲ್ಲಿ ಕಂಡು ಹತೋಶ್ವ|
ತ್ಥಾಮಾ ಎನೆ ನೃಪನಶ್ವ
ತ್ಥಾಮನೆ ಗೆತ್ತೊಣರ್ದನೊವಜನೊರ್ವೆಸರಿಭಮಂ|| ೨೭ ||
ಪದ್ಯ-೨೭:ಪದವಿಭಾಗ-ಅರ್ಥ:ಸಾಮಜಂ ಅಶ್ವತ್ಥಾಮಂ ನಾಮದಿಂ ಒಂದು ಅೞಿದೊಡೆ (ಅಳಿದೊಡೆ- ಸತ್ತಾಗ) ಇಲ್ಲಿ ಕಂಡು (ಅಶ್ವತ್ಥಾಮನೆಂಬ ಹೆಸರಿನ ಆನೆಯೊಂದು ಯುದ್ಧರಂಗದಲ್ಲಿ ಸಾಯಲು ಅಲ್ಲಿ ಅದನ್ನು ಧರ್ಮರಾಯನು ನೋಡಿ,) 'ಹತೋಶ್ವತ್ಥಾಮಾ, ಎನೆ ನೃಪನು (ರಾಜನು, ಅಶ್ವತ್ಥಾಮ ಹತನಾದನು ಎನ್ನಲು,) ಅಶ್ವತ್ಥಾಮನೆಗೆತ್ತು ( ಒಂದೇ ಹೆಸರಿನ ಆನೆಯನ್ನು, ಮಗನಾದ ಅಶ್ವತ್ಥಾಮನೆಂದೇ ಭಾವಿಸಿ) ಒಣರ್ದನು ಒವಜನು ಒರ್ವ ಎಸರ ಇಭಮಂ(ಒವಜ- ಗುರುವಾದ ದ್ರೋಣನು ಒಣರ್ದನು - ಚಿಂತೆಗೊಂಡನು)
ಪದ್ಯ-೨೭:ಅರ್ಥ:೨೭. ಅಶ್ವತ್ಥಾಮನೆಂಬ ಹೆಸರಿನ ಆನೆಯೊಂದು ಯುದ್ಧರಂಗದಲ್ಲಿ ಸಾಯಲು ಧರ್ಮರಾಯನು ನೋಡಿ ‘ಹತೋಶ್ವತ್ಥಾಮ’ (ಅಶ್ವತ್ಥಾಮ ಹತನಾದನು) ಎಂದು ಘೋಷಿಸಿದಾಗ, ಗುರುವಾದ ದ್ರೋಣನು ಒಂದೇ ಹೆಸರಿನ ಆನೆಯನ್ನು ಮಗನಾದ ಅಶ್ವತ್ಥಾಮನೆಂದೇ ಭಾವಿಸಿ ಚಿಂತಿಸಿದನು.
ಒಗೆದ ಸುತಶೋಕದಿಂದಾ
ವಗೆಯಂತೊಳಗುರಿಯೆ ಭೋಂಕನೆರ್ದೆ ತೆರೆಯಲ್ ಹಾ|
ಮಗನೇ ಎಂದಶ್ರುಜಲಾ
ರ್ದ್ರಗಂಡನಾ ಗಂಡಿನೊಡನೆ ಬಿಸುಟಂ ಬಿಲ್ಲಂ ||೨೮ ||
ಪದ್ಯ-೨೮:ಪದವಿಭಾಗ-ಅರ್ಥ:ಒಗೆದ (ಆದ- ಉಂಟಾದ ದುಃಖವು)ಸುತಶೋಕದಿಂದ ಆವಗೆಯಂತೆ ಒಳಗುರಿಯೆ (ಪುತ್ರಶೋಕದಿಂದ ಉಂಟಾದ ದುಃಖವು ಕುಂಬಾರರ ಆವುಗೆಯ ಒಲೆಯಂತೆ ಮನಸ್ಸಿನಲ್ಲಿ ಉರಿಯಲು), ಭೋಂಕನೆರ್ದೆ ತೆರೆಯಲ್ ಹಾ ಮಗನೇ ಎಂದು ಅಶ್ರುಜಲಾರ್ದ್ರಗಂಡನು (ಕಣ್ಣೀರಿನಿಂದ ತೊಯ್ದ ಕೆನ್ನೆಯುಳ್ಳವನಾಗಿ )ಆ ಗಂಡಿನೊಡನೆ ಬಿಸುಟಂ ಬಿಲ್ಲಂ (ತನ್ನ ಪೌರುಷದೊಡನೆ ಬಿಲ್ಲನ್ನೂ ಬಿಸಾಡಿದನು)
ಪದ್ಯ-೨೮:ಅರ್ಥ: ಪುತ್ರಶೋಕದಿಂದ ಉಂಟಾದ ದುಃಖವು ಕುಂಬಾರರ ಆವುಗೆಯ ಒಲೆಯಂತೆ ಮನಸ್ಸಿನಲ್ಲಿ ಉರಿಯಲು, ಇದ್ದಕ್ಕಿದ್ದ ಹಾಗೆ ಎದೆಯು ಬಿರಿಯಲು ‘ಅಯ್ಯೋ ಮಗನೆ’ ಎಂದು ಕಣ್ಣೀರಿನಿಂದ ತೊಯ್ದ ಕೆನ್ನೆಯುಳ್ಳವನಾಗಿ ತನ್ನ ಪೌರುಷದೊಡನೆ ಬಿಲ್ಲನ್ನೂ ಬಿಸಾಡಿದನು.
ವ|| ಅಂತು ಬಿಸುಟು ವಿಚ್ಛಿನ್ನ ವೀರರಸನುಮುತ್ಪನ್ನ ಶೋಕರಸನುಮಾಗಿ ನಿಜ ವರೂಥಮಂ ಧರ್ಮಪುತ್ರನ ಸಮೀಪಕ್ಕುಯ್ದು ಮಗನ ಮಾತಂ-
ವಚನ:ಪದವಿಭಾಗ-ಅರ್ಥ:ಅಂತು ಬಿಸುಟು, ವಿಚ್ಛಿನ್ನ ವೀರರಸನುಂ (ಹಾಗೆ ಬಿಲ್ಲನ್ನು ಎಸೆದು ವೀರರಸ ಕಡಿದವನಾಗಿ) ಉತ್ಪನ್ನ ಶೋಕರಸನುಮಾಗಿ (ದು:ಖರಸದಿಂದ ಕೂಡಿ )ನಿಜ ವರೂಥಮಂ ಧರ್ಮಪುತ್ರನ ಸಮೀಪಕ್ಕೆ ಉಯ್ದು ಮಗನ ಮಾತಂ (ತನ್ನ ತೇರನ್ನು ಧರ್ಮರಾಯನ ಸಮೀಪಕ್ಕೆ ತೆಗೆದುಕೊಂಡುಹೋಗಿ ಮಗನ ಮಾತನ್ನು- )-
ವಚನ:ಅರ್ಥ:ಹಾಗೆ ಬಿಲ್ಲನ್ನು ಎಸೆದು ವೀರರಸ ಕಡಿದವನಾಗಿ ದು:ಖರಸದಿಂದ ಕೂಡಿ ತನ್ನ ತೇರನ್ನು ಧರ್ಮರಾಯನ ಸಮೀಪಕ್ಕೆ ತೆಗೆದುಕೊಂಡುಹೋಗಿ ಮಗನ (ಮರಣದ) ಮಾತನ್ನು-
ಚಂ|| ಬೆಸಗೊಳೆ ಕುಂಜರಂ ಮಡಿದುದೆಂದು ಮಹೀಭುಜನುಳ್ಳ ಮಾೞ್ಕೆಯಿಂ
ಪುಸಿಯದೆ ಪೇೞ್ದೊಡಂ ಕಿಱಿದು ನಂಬದೆಯುಂ ರಣದಲ್ಲಿ ಮುನ್ನೆ ಬಿ|
ಲ್ವಿಸುಟೆನಿದೆಂತು ಪೇೞ್ ಪಿಡಿವೆನಿನ್ನಿದನೆಂದಿರದಾತ್ಮಯೋಗಿ ತ
ನ್ನಸುವನುದಾತ್ತಯೋಗದೊಳೆ ಬಿಲ್ಲೊವಜಂ ಕಳೆದಂ ರಣಾಗ್ರದೊಳ್ ||೨೯
ಪದ್ಯ-೦೦:ಪದವಿಭಾಗ-ಅರ್ಥ:ಬೆಸಗೊಳೆ (ಪ್ರಶ್ನೆಮಾಡಲು) ಕುಂಜರಂ ಮಡಿದುದೆಂದು ಮಹೀಭುಜನು ಉಳ್ಳ ಮಾೞ್ಕೆಯಿಂ ಪುಸಿಯದೆ ಪೇೞ್ದೊಡಂ (ಇರುವ ಸ್ಥಿತಿಯಲ್ಲಿ ಹುಸಿಯದೆ ಹೇಳಿದರೂ) ಕಿಱಿದು ನಂಬದೆಯುಂ ( ಸ್ವಲ್ಪವೂ ನಂಬದೆ), ರಣದಲ್ಲಿ ಮುನ್ನೆ ಬಿಲ್ವಿಸುಟೆನು ಇದು ಎಂತು ಪೇೞ್ ಪಿಡಿವೆನು ಇನ್ನು ಇದನೆಂದು (“ಯುದ್ಧದಲ್ಲಿ ಈ ಮೊದಲು ಬಿಲ್ಲನ್ನು ಬಿಸಾಡಿದ್ದೇನೆ. ಪುನ ಅದನ್ನು ಹೇಗೆ ಹಿಡಿಯಲಿ ಹೇಳು”) ಇರದೆ ಆತ್ಮಯೋಗಿ ತನ್ನ ಅಸುವನು ಉದಾತ್ತಯೋಗದೊಳೆ ಬಿಲ್ಲೊವಜಂ ಕಳೆದಂ ರಣಾಗ್ರದೊಳ್ (ಆತ್ಮಯೋಗಿಯಾದ ದ್ರೋಣನು ಸಾವಕಾಶ ಮಾಡದೆ ಕೂಡಲೆ ತನ್ನ ಪ್ರಾಣವನ್ನು ಉದಾತ್ತವಾದ ಯೋಗಮಾರ್ಗದಲ್ಲಿ ಯುದ್ಧಮುಖದಲ್ಲಿ ನೀಗಿದನು.)
ಪದ್ಯ-೦೦:ಅರ್ಥ: ಮಗನ ಮರಣದ,ಮಾತನ್ನು- ಸತ್ಯವೇನೆಂದು, ಪ್ರಶ್ನೆಮಾಡಲು ಆನೆಯು ಸತ್ತಿತೆಂದು ರಾಜನು ಸತ್ಯವಾಗಿ) ಇರುವ ಸ್ಥಿತಿಯಲ್ಲಿ ಹುಸಿಯದೆ ಹೇಳಿದರೂ, ಸ್ವಲ್ಪವೂ ನಂಬದೆ “ಯುದ್ಧದಲ್ಲಿ ಈ ಮೊದಲು ಬಿಲ್ಲನ್ನು ಬಿಸಾಡಿದ್ದೇನೆ. ಪುನ ಅದನ್ನು ಹೇಗೆ ಹಿಡಿಯಲಿ ಹೇಳು” ಎಂದು ಆತ್ಮಯೋಗಿಯಾದ ದ್ರೋಣನು ಕೂಡಲೆ ತನ್ನ ಪ್ರಾಣವನ್ನು ಉದಾತ್ತವಾದ ಯೋಗಮಾರ್ಗದಲ್ಲಿ ಯುದ್ಧಮುಖದಲ್ಲಿ ನೀಗಿದನು.
ವ|| ಅಂತು ಭಾವಿತಾತ್ಮನಧ್ಯಾತ್ಮ ವಿಶಾರದನಾಗಿ ಪರಮಾತ್ಮನೊಳ್ ಕೂಡಿದನಾಗಳ್ ಪೆಣನನಿಱಿದು ಪಗೆಗೊಂಡರೆಂಬ ನಾಣ್ಣುಡಿಯಂ ನನ್ನಿ ಮಾಡಿ ತಮ್ಮಯ್ಯಂ ಸತ್ತ ಮುಳಿಸಿನೊಳ್ ಕಣ್ಗಾಣದೆ ಧೃಷ್ಟದ್ಯುಮ್ನಂ ಧರ್ಮತನೂಜಂ ಬಾರಿಸೆ ವಾರಿಸೆ-
ವಚನ:ಪದವಿಭಾಗ-ಅರ್ಥ:ಅಂತು ಭಾವಿತಾತ್ಮನು ಅಧ್ಯಾತ್ಮ ವಿಶಾರದನಾಗಿ ಪರಮಾತ್ಮನೊಳ್ ಕೂಡಿದನಾಗಳ್ ( ಹಾಗೆ ಆತ್ಮಧ್ಯಾನಪರನಾದ ದ್ರೋಣನು ಆಧ್ಯಾತ್ಮಪರಾಯಣನಾಗಿ ಪರಮಾತ್ಮನಲ್ಲಿ ಕೂಡಿದಾಗ) ಪೆಣನನಿಱಿದು ಪಗೆಗೊಂಡರೆಂಬ ನಾಣ್ಣುಡಿಯಂ ನನ್ನಿ ಮಾಡಿ (‘ಹೆಣವನ್ನು ಇರಿದು ಹಗೆಯನ್ನು ತೀರಿಸಿಕೊಂಡರು’ ಎಂಬ ಗಾದೆಯ ಮಾತನ್ನು ಸತ್ಯವನ್ನಾಗಿ ಮಾಡಿ,) ತಮ್ಮಯ್ಯಂ ಸತ್ತ ಮುಳಿಸಿನೊಳ್ ಕಣ್ಗಾಣದೆ (ತನ್ನ ತಂದೆ ದ್ರುಪದನು ಸತ್ತ ಕೋಪದಿಂದ ಬುದ್ಧಿಶೂನ್ಯನಾಗಿ) ಧೃಷ್ಟದ್ಯುಮ್ನಂ ಧರ್ಮತನೂಜಂ ಬಾರಿಸೆ ವಾರಿಸೆ ( ದೃಷ್ಟದ್ಯುಮ್ನನು, ಧರ್ಮರಾಜನು ಬೇಡವೆಂದು ತಡೆದರೂ)-
ವಚನ:ಅರ್ಥ: ಹಾಗೆ ಆತ್ಮಧ್ಯಾನಪರನಾದ ದ್ರೋಣನು ಆಧ್ಯಾತ್ಮಪರಾಯಣನಾಗಿ ಪರಮಾತ್ಮನಲ್ಲಿ ಕೂಡಿದಾಗ, ‘ಹೆಣವನ್ನು ಇರಿದು ಹಗೆಯನ್ನು ತೀರಿಸಿಕೊಂಡರು’ ಎಂಬ ಗಾದೆಯ ಮಾತನ್ನು ಸತ್ಯವನ್ನಾಗಿ ಮಾಡಿ, ತನ್ನ ತಂದೆ ದ್ರುಪದನು ಸತ್ತ ಕೋಪದಿಂದ ಬುದ್ಧಿಶೂನ್ಯನಾಗಿ, ದೃಷ್ಟದ್ಯುಮ್ನನು, ಧರ್ಮರಾಜನು ಬೇಡವೆಂದು ತಡೆದರೂ-
ಕಂ|| ಕರವಾಳಂ ಘರಮಟ್ಟಿಸಿ
ಶಿರೋಜಮಂ ಪಿಡಿದು ತೆಗೆದು ಗುರುವಂ ಪಚ್ಚಂ|
ತಿರೆ ಪಿರಿದು ಪೊಯ್ದನೆಂತ
ಪ್ಪರೊಳಂ ಮುಳಿಸಱಿವನಾಗಲೇನಿತ್ತಪುದೇ|| ೩೦ ||
ಪದ್ಯ-೩೦:ಪದವಿಭಾಗ-ಅರ್ಥ:ಕರವಾಳಂ ಘರಮ(ವ)ಟ್ಟಿಸಿ ಶಿರೋಜಮಂ ಪಿಡಿದು ತೆಗೆದು (ಕತ್ತಿಯನ್ನು ಬೀಸಿ ಕೂದಲನ್ನು ಹಿಡಿದೆಳೆದು ) ಗುರುವಂ ಪಚ್ಚಂತಿರೆ ಪಿರಿದು ಪೊಯ್ದನು (ಗುರುವನ್ನು ಹೆಚ್ಚುವಂತೆ-ಎರಡುಭಾಗ ಮಾಡಿದ ಹಾಗೆ ಘಟ್ಟಿಯಾಗಿ ಹೊಡೆದನು) ಅಂತಪ್ಪರೊಳಂ (ಎಂತಹವರಲ್ಲಿಯೂ) ಮುಳಿಸು ಅಱಿವಂ ಆಗಲೇನು ಇತ್ತಪುದೇ(ಕೋಪವು ಎಂತಹವರಲ್ಲಿಯೂ ವಿವೇಕವುಂಟಾಗಲು ಅವಕಾಶ ಕೊಡುತ್ತದೆಯೇ ಏನು? )
ಪದ್ಯ-೩೦:ಅರ್ಥ:ಕತ್ತಿಯನ್ನು ಬೀಸಿ ಕೂದಲನ್ನು ಹಿಡಿದೆಳೆದು ಗುರುವನ್ನು ಎರಡುಭಾಗ ಮಾಡಿದ ಹಾಗೆ ಘಟ್ಟಿಯಾಗಿ ಹೊಡೆದನು. ಕೋಪವು ಎಂತಹವರಲ್ಲಿಯೂ ವಿವೇಕವುಂಟಾಗಲು ಅವಕಾಶ ಕೊಡುತ್ತದೆಯೇ ಏನು?
ವ|| ಅಂತು ದ್ರೋಣನೆಳೆಗೋಣ ಸಾವಂ ಸಾವುದುಂ ಭೋರ್ಗರೆದಾರ್ದ ಪಾಂಡವ ಪತಾಕಿನಿಯುಮನೊಂದು ತಲೆಯಾಗೋಡುವ ಕೌರವಧ್ವಜಿನಿಯುಮಂ ಬೇರೊಂದು ಮೊನೆಯೊಳ್ ಕಾದುತಿರ್ದಶ್ವತ್ಥಾಮಂ ಕಂಡು ಮುಟ್ಟೆವರ್ಪನ್ನೆಗಂ ಶೋಣಾಶ್ವೋಪಲಕ್ಷಿತ ನಿಜಪಿತೃ ಸೂತ ಕೇತನ ಕಥಿತಮಾಗಿರ್ದ ರಥಮನುಪಲಕ್ಷಿಸಿ ನೋಡಿ ತಮ್ಮಯ್ಯನತೀತನಾದುದನಱಿದು-
ವಚನ:ಪದವಿಭಾಗ-ಅರ್ಥ:ಅಂತು ದ್ರೋಣನು ಎಳೆಗೋಣ ಸಾವಂ ಸಾವುದುಂ (ಹಾಗೆ ದ್ರೋಣನು ಎಳೆದು ತಂದು ಬಲಿಕೊಡುವ ಕೋಣನ ಸಾವಿನ ಮಾದರಿಯ ಸಾವನ್ನು ಅಥವಾ ಮಾರಿಯ ಮುಂದೆ ಕೊಡುವ ಎಳೆಯಕೋಣದ ಸಾವನ್ನು,) ಭೋರ್ಗರೆದು ಆರ್ದ ಪಾಂಡವ ಪತಾಕಿನಿಯುಮನು (ಶಬ್ದಮಾಡಿ ಆರ್ಭಟ ಮಾಡುವ ಪಾಂಡವಸೈನ್ಯವನ್ನೂ) ಒಂದು ತಲೆಯಾಗೋಡುವ ಕೌರವಧ್ವಜಿನಿಯುಮಂ (ಒಂದೇ ದಿಕ್ಕಿಗೆ ತಲೆತಿರುಗಿಸಿಕೊಂಡು ಓಡುವ ಕೌರವ ಸೈನ್ಯವನ್ನೂ) ಬೇರೊಂದು ಮೊನೆಯೊಳ್ ಕಾದುತಿರ್ದ ಅಶ್ವತ್ಥಾಮಂ ಕಂಡು (ಯುದ್ಧಭೂಮಿಯ ಮತ್ತೊಂದೆಡೆಯಲ್ಲಿ ಕಾದುತ್ತಿದ್ದ ಅಶ್ವತ್ಥಾಮನು ನೋಡಿ) ಮುಟ್ಟೆವರ್ಪನ್ನೆಗಂ ಶೋಣಾಶ್ವೋಪಲಕ್ಷಿತ (ಹತ್ತಿರ ಬರುವಷ್ಟರಲ್ಲಿ ಕೆಂಪುಕುದುರೆಗಳಿಂದ ಗುರುತಿಸಲ್ಪಟ್ಟ) ನಿಜಪಿತೃ ಸೂತ ಕೇತನ ಕಥಿತಮಾಗಿರ್ದ (ತನ್ನ ತಂದೆ, ಸಾರಥಿ, ಧ್ವಜಗಳಿಂದ ಕೂಡಿದ್ದ) ರಥಮನು ಉಪಲಕ್ಷಿಸಿ ನೋಡಿ ತಮ್ಮಯ್ಯನು ಅತೀತನಾದುದನು ಅಱಿದು (ತಮ್ಮ ತಂದೆಯು ಸತ್ತು ಹೋಗಿದ್ದುದನ್ನು ತಿಳಿದು)-
ವಚನ:ಅರ್ಥ: ಹಾಗೆ ದ್ರೋಣನು, ಎಳೆದು ತಂದು ಬಲಿಕೊಡುವ ಕೋಣನ ಸಾವಿನ ಮಾದರಿಯ ಸಾವನ್ನು (ಎಳಗೋಣಸಾವು) ಸಾಯಲಾಗಿ ಶಬ್ದಮಾಡಿ ಆರ್ಭಟ ಮಾಡುವ ಪಾಂಡವಸೈನ್ಯವನ್ನೂ ಒಂದೇ ದಿಕ್ಕಿಗೆ ತಲೆತಿರುಗಿಸಿಕೊಂಡು ಓಡುವ ಕೌರವ ಸೈನ್ಯವನ್ನೂ, ಯುದ್ಧಭೂಮಿಯ ಮತ್ತೊಂದೆಡೆಯಲ್ಲಿ ಕಾದುತ್ತಿದ್ದ ಅಶ್ವತ್ಥಾಮನು ನೋಡಿ, ಹತ್ತಿರ ಬರುವಷ್ಟರಲ್ಲಿ ಕೆಂಪುಕುದುರೆಗಳಿಂದ ಗುರುತಿಸಲ್ಪಟ್ಟ ತನ್ನ ತಂದೆ, ಸಾರಥಿ, ಧ್ವಜಗಳಿಂದ ಕೂಡಿದ್ದ ತೇರನ್ನು ದೃಷ್ಟಿಸಿ ನೋಡಿ ತಮ್ಮ ತಂದೆಯು ಸತ್ತು ಹೋಗಿದ್ದುದನ್ನು ತಿಳಿದು-.
ಚಂ|| ಒರೆತುಗುತರ್ಪ ಕಣ್ಬನಿಗಳಂ ಬರಲೀಯದೆ ಕೋಪ ಪಾವಕಂ
ನಿಱಿಸೆ ಕನಲ್ದು ರೋಷದಿನಪಾಂಡವಮಾಗಿರೆ ಮಾಡದಂದು ಬಿ|
ಲ್ಲೆರೆಯನ ಪುತ್ರನಲ್ಲೆನೆನುತುಂ ಗುರುಪುತ್ರನಿದಿರ್ಚೆ ಭೀತಿಯಿಂ
ಮಱುಗಿ ತೆರಳ್ದು ತೂಳ್ದಿ ಸುೞಿಗೊಂಡುದು ಪಾಂಡವ ಸೈನ್ಯಸಾಗರಂ|| ೩೧
ಪದ್ಯ-೦೦:ಪದವಿಭಾಗ-ಅರ್ಥ:ಒರೆತುಗುತರ್ಪ ಕಣ್ಬನಿಗಳಂ ಬರಲೀಯದೆ (ಕಣ್ಣಿನಲ್ಲಿ ಜಿನುಗಿ ಸೋರುತ್ತಿದ್ದ ಕಣ್ಣೀರಿನ ಹನಿಗಳನ್ನು ತಡೆದುಕೊಂಡು) ಕೋಪ ಪಾವಕಂ ನಿಱಿಸೆ ಕನಲ್ದು (ಕೋಪಾಗ್ನಿಯು ಕಣ್ಣಲ್ಲಿ ತುಂಬಲು ರೇಗಿ) ರೋಷದಿಂ ಅಪಾಂಡವಮಾಗಿರೆ ಮಾಡದಂದು (‘ಪ್ರಪಂಚವನ್ನು ಪಾಂಡವರಿಲ್ಲದಂತೆ ಮಾಡದಿರುವಾಗ) ಬಿಲ್ಲೆರೆಯನ ಪುತ್ರನಲ್ಲೆನ್ ಎನುತುಂ (ನಾನು ಚಾಪಾಚಾರ್ಯನ ಮಗನೇ ಅಲ್ಲ’ ಎನ್ನುತ್ತ) ಗುರುಪುತ್ರನು ಇದಿರ್ಚೆ (ಅಶ್ವತ್ಥಾಮನು ಎದುರಿಸಲು) ಭೀತಿಯಿಂ ಮಱುಗಿ ತೆರಳ್ದು (ಪಾಂಡವಸೇನಾಸಮುದ್ರವು ಭಯದಿಂದ ದುಖಪಟ್ಟು) ತೂಳ್ದಿ ಸುೞಿಗೊಂಡುದು (ಚಲಿಸಿ ತಳ್ಳಲ್ಪಟ್ಟು ಸುಳಿಸುಳಿಯಾಗಿ ತಿರುಗಿತು.) < -ಪಾಂಡವ ಸೈನ್ಯಸಾಗರಂ
ಪದ್ಯ-೦೦:ಅರ್ಥ: ಅಶ್ವತ್ಥಾಮನು ತನ್ನ ಕಣ್ಣಿನಲ್ಲಿ ಜಿನುಗಿ ಸೋರುತ್ತಿದ್ದ ಕಣ್ಣೀರಿನ ಹನಿಗಳನ್ನು ತಡೆದುಕೊಂಡು, ಕೋಪಾಗ್ನಿಯು ಕಣ್ಣಲ್ಲಿ ತುಂಬಲು ರೇಗಿ ಕೋಪದಿಂದ ‘ಪ್ರಪಂಚವನ್ನು ಪಾಂಡವರಿಲ್ಲದಂತೆ ಮಾಡದಿರುವಾಗ ನಾನು ಚಾಪಾಚಾರ್ಯನ ಮಗನೇ ಅಲ್ಲ’ ಎನ್ನುತ್ತ ಅಶ್ವತ್ಥಾಮನು ಎದುರಿಸಲು ಪಾಂಡವಸೇನಾಸಮುದ್ರವು ಭಯದಿಂದ ದುಖಪಟ್ಟು ಚಲಿಸಿ ತಳ್ಳಲ್ಪಟ್ಟು ಸುಳಿಸುಳಿಯಾಗಿ ತಿರುಗಿತು.
ವ|| ಆಗಳುರಿಯುರುಳಿಯಂತರ್ಪ್ಪ ತನ್ನ ನೊಸಲ ಕಣ್ಣಂ ತೋಱಿ ತನ್ನ ಸಾಹಸಮಂ ತೋಱಲೆಂದು ನಾರಾಯಣಾಸ್ತ್ರಮಂ ತೊಟ್ಟೆಚ್ಚಾಗಳ್-
ವಚನ:ಪದವಿಭಾಗ-ಅರ್ಥ:ಆಗಳು ಉರಿಯ ಉರುಳಿಯಂತರ್ಪ್ಪ (ಆಗ ಉರಿಯ/ ಬೆಂಕಿಯ ಉಂಡೆಯ ಹಾಗಿದ್ದ) ತನ್ನ ನೊಸಲ ಕಣ್ಣಂ ತೋಱಿ (ತನ್ನ ಹಣೆಗಣ್ಣನ್ನು ತೋರಿ) ತನ್ನ ಸಾಹಸಮಂ ತೋಱಲೆಂದು ನಾರಾಯಣಾಸ್ತ್ರಮಂ ತೊಟ್ಟೆಚ್ಚಾಗಳ್ (ತನ್ನ ಸಾಹಸವನ್ನು ಪ್ರದರ್ಶಿಸಬೇಕೆಂದು ನಾರಾಯಾಣಾಸ್ತ್ರವನ್ನು ಪ್ರಯೋಗಿಸಿದನು. ಆಗ)-
ವಚನ:ಅರ್ಥ:ಆಗ ಉರಿಯ ಉಂಡೆಯ ಹಾಗಿದ್ದ ತನ್ನ ಹಣೆಗಣ್ಣನ್ನು ತೋರಿ ತನ್ನ ಸಾಹಸವನ್ನು ಪ್ರದರ್ಶಿಸಬೇಕೆಂದು ನಾರಾಯಾಣಾಸ್ತ್ರವನ್ನು ಪ್ರಯೋಗಿಸಿದನು. ಆಗ-
ಚಂ|| ದೆಸೆ ಮಸುಳ್ದತ್ತು ವಾರ್ಧಿ ತಳರ್ದತ್ತು ನೆಲಂ ಪಿಡುಗಿತ್ತು ತೊಟ್ಟನಾ
ಗಸಮೊಡೆದತ್ತಜಾಂಡಮಳಱಿತ್ತೆನುತಿರ್ದೆಡೆಯಲ್ಲಿ ಲೋಕಮಂ|
ಬಸಿರೊಳಗಿಟ್ಟು ಕಾದಳವನಾರಳವೊಡ್ಡಿಸೆ ಕಾದನಾಗಳ
ರ್ವಿಸೆ ತೆಗೆದೆಚ್ಚ ವೈಷ್ಣವಮನೊಡ್ಡಿಸಿ ವೈಷ್ಣವದಿಂ ಮುರಾಂತಂಕಂ|| ೩೨ ||
ಪದ್ಯ-೦೦:ಪದವಿಭಾಗ-ಅರ್ಥ:ದೆಸೆ ಮಸುಳ್ದತ್ತು ವಾರ್ಧಿ ತಳರ್ದತ್ತು (ದಿಕ್ಕುಗಳು ಮಾಸಲಾದುವು, ಸಮುದ್ರಗಳು ಸರಿದುವು) ನೆಲಂ ಪಿಡುಗಿತ್ತು (ಭೂಮಿಯು ಸಿಡಿಯಿತು,) ತೊಟ್ಟನೆ ಆಗಸಂ ಒಡೆದತ್ತು ಅಜಾಂಡಮ್ ಅಳಱಿತ್ತು ಎನುತಿರ್ದ ಎಡೆಯಲ್ಲಿ (ಇದ್ದಕ್ಕಿದ್ದ ಹಾಗೆ ಆಕಾಶವು ಒಡೆದುಹೋಯಿತು, ಬ್ರಹ್ಮಾಂಡವು ಅದುರಿತು, ಎನ್ನುತ್ತಿದ್ದ ಸಮಯದಲ್ಲಿ) ಲೋಕಮಂ ಬಸಿರೊಳಗಿಟ್ಟು ಕಾದಳವಂ (ಕಾಪಾಡುವ) ಆರ ಅಳವು (ಶಕ್ತಿ) ಒಡ್ಡಿಸೆ (ಇರುವ ಸ್ಥಳದಲ್ಲಿಯೇ ಲೋಕವನ್ನು ತನ್ನ ಹೊಟ್ಟೆಯೊಳಗಿಟ್ಟು ಯಾವ ಶಕ್ತಿಯನ್ನಾದರೂ ಪ್ರತಿಭಟಿಸಿ ರಕ್ಷಿಸುವ ಶಕ್ತಿಯುಳ್ಳ) ಕಾದನು ಆಗಳ್ ಅರ್ವಿಸೆ (ಭಯಪಡಿಸೆ) ತೆಗೆದು ಎಚ್ಚ ವೈಷ್ಣವಮನು (ಭಯಂಕರವಾಗಿ ಸೆಳೆದು ಪ್ರಯೋಗಿಸಿದ ನಾರಾಯಣಾಸ್ತ್ರವನ್ನು)_ ಒಡ್ಡಿಸಿ ವೈಷ್ಣವದಿಂ ಮುರಾಂತಂಕಂ (ಶ್ರೀಕೃಷ್ಣನು ವೈಷ್ಣವಾಸ್ತ್ರದಿಂದ ಎದುರಿಸಿ) ಲೋಕವನ್ನು ರಕ್ಷಿಸಿದನು
ಪದ್ಯ-೦೦:ಅರ್ಥ: ನಾರಾಯಣ ಅಸ್ತ್ರದಿಂದ- ದಿಕ್ಕುಗಳು ಮಾಸಲಾದುವು, ಸಮುದ್ರಗಳು ಸರಿದುವು, ಭೂಮಿಯು ಸಿಡಿಯಿತು, ಇದ್ದಕ್ಕಿದ್ದ ಹಾಗೆ ಆಕಾಶವು ಒಡೆದುಹೋಯಿತು, ಬ್ರಹ್ಮಾಂಡವು ಅದುರಿತು, ಎನ್ನುತ್ತಿದ್ದ ಸಮಯದಲ್ಲಿ ಇರುವ ಸ್ಥಳದಲ್ಲಿಯೇ ಲೋಕವನ್ನು ತನ್ನ ಹೊಟ್ಟೆಯೊಳಗಿಟ್ಟು ಯಾವ ಶಕ್ತಿಯನ್ನಾದರೂ ಪ್ರತಿಭಟಿಸಿ ರಕ್ಷಿಸುವ ಶಕ್ತಿಯುಳ್ಳ ಶ್ರೀಕೃಷ್ಣನು, ಭಯಂಕರವಾಗಿ ಸೆಳೆದು ಪ್ರಯೋಗಿಸಿದ ನಾರಾಯಣಾಸ್ತ್ರವನ್ನು ವೈಷ್ಣವಾಸ್ತ್ರದಿಂದ ಎದುರಿಸಿ ಲೋಕವನ್ನು ರಕ್ಷಿಸಿದನು-
ವ|| ಅಂತಶ್ವತ್ಥಾಮನೆಚ್ಚ ನಾರಾಯಣಾಸ್ತ್ರಮಂ ನಾರಾಯಣನುಪಾಯದೊಳೆ ಗೆಲ್ದನನ್ನೆಗಂ-
ವಚನ:ಪದವಿಭಾಗ-ಅರ್ಥ:ಅಂತು ಅಶ್ವತ್ಥಾಮನು ಎಚ್ಚ ನಾರಾಯಣಾಸ್ತ್ರಮಂ (ಹಾಗೆ ಅಶ್ವತ್ಥಾಮನು ಪ್ರಯೋಗಿಸಿದ ನಾರಾಯಣಾಸ್ತ್ರವನ್ನು ) ನಾರಾಯಣನು ಉಪಾಯದೊಳೆ ಗೆಲ್ದನು ಅನ್ನೆಗಂ- (ಕೃಷ್ಣನು ಉಪಾಯದಿಂದಲೇ ಗೆದ್ದನು.) ಅಷ್ಟರಲ್ಲಿ-
ವಚನ:ಅರ್ಥ:ಹಾಗೆ ಅಶ್ವತ್ಥಾಮನು ಪ್ರಯೋಗಿಸಿದ ನಾರಾಯಣಾಸ್ತ್ರವನ್ನು ನಾರಾಯಣನಾದ ಕೃಷ್ಣನು ಉಪಾಯದಿಂದಲೇ ಗೆದ್ದನು. ಅಷ್ಟರಲ್ಲಿ-
ಚಂ|| ಕವಿದೆರಡುಂ ಪತಾಕಿನಿಗಳಾಗಡುಮೆನ್ನಮೆ ಸಕ್ಕಿ ಮಾಡಿ ಕಾ
ದುವುದಱಿನಿಲ್ಲಿ ಸತ್ತರಸುಮಕ್ಕಳ ಪಾಪಮಿದೆಲ್ಲಮೆನ್ನನೆ|
ಯ್ದುವುದುಪವಾಸದಿಂ ಜಪದಿನಾನದನೋಡಿಸಿ ಶುದ್ಧನಪ್ಪೆನೆಂ
ಬವೊಲಪರಾಂಬುರಾಶಿಗಿೞಿದಂ ನಳಿನೀವರಜೀವಿತೇಶ್ವರಂ|| ೩೩ ||
ಪದ್ಯ-೦೦:ಪದವಿಭಾಗ-ಅರ್ಥ:ಕವಿದು ರಡುಂ ಪತಾಕಿನಿಗಳ್ ಆಗಡುಂ ಎನ್ನಮೆ ಸಕ್ಕಿ ಮಾಡಿ (ಮೇಲೆಬಿದ್ದು ಎರಡು ಸೈನ್ಯಗಳೂ ಯಾವಾಗಲೂ ನನ್ನನ್ನೇ ಸಾಕ್ಷಿಯನ್ನಾಗಿ ಮಾಡಿ) ಕಾದುವುದಱಿಂ (ಯುದ್ಧಮಾಡುವುದರಿಂದ) ಇಲ್ಲಿ ಸತ್ತ ಅರಸುಮಕ್ಕಳ ಪಾಪಂ ಇದೆಲ್ಲಂ ಎನ್ನನೆ ಎಯ್ದುವುದು (ಇಲ್ಲಿ ಸತ್ತ ರಾಜಕುಮಾರರ ಈ ಪಾಪವೆಲ್ಲ ನನ್ನನ್ನೇ ಸೇರುವುದು.) ಉಪವಾಸದಿಂ ಜಪದಿಂ ನಾನದನು ಓಡಿಸಿ ಶುದ್ಧನಪ್ಪೆನು ಎಂಬವೊಲ್ (ಆ ಪಾಪವನ್ನು ಉಪವಾಸದಿಂದಲೂ ಜಪದಿಂದಲೂ ಓಡಿಸಿ ಶುದ್ಧನಾಗುತ್ತೇನೆ ಎನ್ನುವಂತೆ,) ಅಪರಾಂಬುರಾಶಿಗಿೞಿದಂ ನಳಿನೀವರ ಜೀವಿತೇಶ್ವರಂ (ನಳಿನೀವರ ಜೀವಿತೇಶ್ವರಂ- ತಾವರೆಗಳ ಶ್ರೇಷ್ಠ ಪ್ರಾಣವಲ್ಲಭನಾದ ಸೂರ್ಯನು ಪಶ್ಚಿಮಸಮುದ್ರಕ್ಕಿಳಿದನು.)
ಪದ್ಯ-೦೦:ಅರ್ಥ:ಮೇಲೆಬಿದ್ದು, ಎರಡು ಸೈನ್ಯಗಳೂ ಯಾವಾಗಲೂ ನನ್ನನ್ನೇ ಸಾಕ್ಷಿಯನ್ನಾಗಿ ಮಾಡಿ ಯುದ್ಧಮಾಡುವುದರಿಂದ ಇಲ್ಲಿ ಸತ್ತ ರಾಜಕುಮಾರರ ಈ ಪಾಪವೆಲ್ಲ ನನ್ನನ್ನೇ ಸೇರುವುದು. ಆ ಪಾಪವನ್ನು ಉಪವಾಸದಿಂದಲೂ ಜಪದಿಂದಲೂ ಓಡಿಸಿ ಶುದ್ಧನಾಗುತ್ತೇನೆ ಎನ್ನುವಂತೆ, ಸೂರ್ಯನು ಪಶ್ಚಿಮಸಮುದ್ರಕ್ಕಿಳಿದನು.
ವ|| ಅಂತೆರಡುಂ ಪಡೆಗಳೊಂದಿರುಳುಮೆರಡುಂ ಪಗಲುಮೋರಂತೆ ಕಾದಿ ಚಳಿತಪಹಾರ ತೂರ್ಯಂಗಳು ಬಾಜಿಸೆ ತಂತಮ್ಮ ಬೀಡುಗಳ್ಗೆ ಪೋದರಾಗಳ್-
ವಚನ:ಪದವಿಭಾಗ-ಅರ್ಥ:ಅಂತೆ ಎರಡುಂ ಪಡೆಗಳು ಒಂದಿರುಳುಂ ಎರಡುಂ ಪಗಲುಂ ಓರಂತೆ ಕಾದಿ (ಹಾಗೆ ಎರಡೂ ಪಡೆಗಳು ಒಂದು ರಾತ್ರಿ ಮತ್ತು ಎರಡು ಹಗಲು ಒಂದೇ ಸಮನಾಗಿ ಯುದ್ಧಮಾಡಿ,) ಚಳಿತು (ಬಲಗುಂದಿ) ಅಪಹಾರ ತೂರ್ಯಂಗಳು ಬಾಜಿಸೆ (ಯುದ್ಧವನ್ನು ನಿಲ್ಲಿಸಬೇಕೆಂಬ ಸೂಚನೆಯನ್ನು ಕೊಡುವ ವಾದ್ಯಗಳನ್ನು ಬಾಜಿಸಲು) ತಂತಮ್ಮ ಬೀಡುಗಳ್ಗೆ ಪೋದರಾಗಳ್ (ಎರಡು ಸೈನ್ಯಗಳೂ ತನ್ನ ತಮ್ಮ ನಿವಾಸಗಳಿಗೆ (ಬೀಡುಗಳಿಗೆ) ಹೋದುವು; ಆಗ-)-
ವಚನ:ಅರ್ಥ:ಹಾಗೆ ಎರಡೂ ಪಡೆಗಳು ಒಂದು ರಾತ್ರಿ ಮತ್ತು ಎರಡು ಹಗಲು ಒಂದೇ ಸಮನಾಗಿ ಯುದ್ಧಮಾಡಿ, ಬಲಗುಂದಿ, ಯುದ್ಧವನ್ನು ನಿಲ್ಲಿಸಬೇಕೆಂಬ ಸೂಚನೆಯನ್ನು ಕೊಡುವ ವಾದ್ಯಗಳನ್ನು ಬಾಜಿಸಲು ಎರಡು ಸೈನ್ಯಗಳೂ ತನ್ನ ತಮ್ಮ ನಿವಾಸಗಳಿಗೆ (ಬೀಡುಗಳಿಗೆ) ಹೋದುವು; ಆಗ-
ಚಂ|| ಗುರುವಿನ ಶೋಕದಿಂದೆ ರಥಮಧ್ಯದೊಳೊಯ್ಯನೆ ಜೋಲ್ದು ಬಿೞ್ದನಂ
ಗುರುಸುತನಂ ಕೃಪಂ ಕೃಪೆಯಿನಾತ್ಮವಿಲಾಸದೊಳಾಱಿಸುತ್ತುಮಂ|
ತಿರೆ ಗುರುಶೋಕಮಗ್ಗಳಿಸೆ ತಾತವಿಯೋಗಮುಮಕ್ಕುಮಾಗಡುಂ
ಗುರುವೆನೆ ಪೇೞಿಮಾ ಗುರುವಿಯೋಗಭರಂ ಗುರುವಾಗದಿರ್ಕುಮೇ|| ೩೪ ||
ಪದ್ಯ-೦೦:ಪದವಿಭಾಗ-ಅರ್ಥ:ಗುರುವಿನ ಶೋಕದಿಂದೆ ರಥಮಧ್ಯದೊಳ ಒಯ್ಯನೆ ಜೋಲ್ದು ಬಿೞ್ದನಂ (ತಂದೆಯಾದ ದ್ರೋಣನು ಸತ್ತ ದುಖದಿಂದ ರಥದ ಮಧ್ಯಭಾಗದಲ್ಲಿಯೇ ನಿಧಾನವಾಗಿ ಜೋತು ಬಿದ್ದಿದ್ದ) ಗುರುಸುತನಂ ಕೃಪಂ ಕೃಪೆಯಿಂ ಆತ್ಮವಿಲಾಸದೊಳ್ ಆಱಿಸುತ್ತುಂ ಅಂತಿರೆ (ಅಶ್ವತ್ಥಾಮನನ್ನು ಕೃಪನು ತನ್ನ ಮೃದುವಾದ ಮಾತುಗಳಿಂದ ಸಮಾಧಾನದ ಪಡಿಸುತ್ತಿರಲು,) ಗುರುಶೋಕಂ ಅಗ್ಗಳಿಸೆ ತಾತವಿಯೋಗಮುಮಕ್ಕುಂ ಆಗಡುಂ (ತಂದೆಯ ಸಾವಿನಿಂದ ಅಗಲಿಕೆಯು ಹೆಚ್ಚಿನ ದುಖಕ್ಕೆ ಯಾವಾಗಲೂ ಕಾರಣವಾಗಿರುವಾಗ) ಗುರುವೆನೆ ಪೇೞಿಂ (ಆ ತಂದೆಯು ಗುರುವೂ ಆದಾಗ - ಹೇಳಿ) ಆ ಗುರುವಿಯೋಗಭರಂ ಗುರುವಾಗದಿರ್ಕುಮೇ (ಆ ತಂದೆಯು ಗುರುವೂ ಆಗಿದ್ದಾಗ ಆ ಗುರುವಿಯೋಗ ದುಖವು ದೊಡ್ಡದಲ್ಲವೇ?)
ಪದ್ಯ-೦೦:ಅರ್ಥ: ತಂದೆಯಾದ ದ್ರೋಣನು ಸತ್ತ ದುಖದಿಂದ ರಥದ ಮಧ್ಯಭಾಗದಲ್ಲಿಯೇ ನಿಧಾನವಾಗಿ ಜೋತು ಬಿದ್ದಿದ್ದ ಅಶ್ವತ್ಥಾಮನನ್ನು ಕೃಪನು ತನ್ನ ಮೃದುವಾದ ಮಾತುಗಳಿಂದ ಸಮಾಧಾನದ ಪಡಿಸುತ್ತಿರಲು, ಬೀಡಿಗೆ ಕರೆದು ತಂದನು. ತಂದೆಯ ಸಾವಿನಿಂದ ಅಗಲಿಕೆಯು ಹೆಚ್ಚಿನ ದುಖಕ್ಕೆ ಯಾವಾಗಲೂ ಕಾರಣವಾಗಿರುವಾಗ, ಆ ತಂದೆಯು ಗುರುವೂ ಆಗಿದ್ದಾಗ ಆ ಗುರುವಿಯೋಗ ದುಖವು ದೊಡ್ಡದಲ್ಲವೇ?
ವ|| ಅನ್ನೆಗಂ ಪನ್ನಗಕೇತನಂ ಶೋಕಮನಾಱಿಸಲೆಂದು ಕರ್ಣ ಶಲ್ಯ ಸೌಬಲ ಸಮೇತಂ ಬಂದಶ್ವತ್ಥಾಮನನಿಂತೆಂದಂ-
ವಚನ:ಪದವಿಭಾಗ-ಅರ್ಥ: ಅನ್ನೆಗಂ ಪನ್ನಗಕೇತನಂ (ಅಷ್ಟರಲ್ಲಿ ದುರ್ಯೋಧನನು)ಶೋಕಮನು ಆಱಿಸಲೆಂದು ಕರ್ಣ ಶಲ್ಯ ಸೌಬಲ ಸಮೇತಂ ಬಂದು ಅಶ್ವತ್ಥಾಮನನು ಇಂತೆಂದಂ ( ಹೀಗೆ ಹೇಳಿದನು)-
ವಚನ:ಅರ್ಥ:ವಅಷ್ಟರಲ್ಲಿ ದುರ್ಯೋಧನನು ಅಶ್ವತ್ಥಾಮನ ದುಃಖವನ್ನು ಆರಿಸಬೇಕೆಂದು ಕರ್ಣ, ಶಲ್ಯ, ಶಕುನಿಯರೊಡನೆ ಬಂದು ಅವನಿಗೆ ಹೀಗೆ ಹೇಳಿದನು.
ಮ|| ಪುದಿದೌರ್ವಾನಳನಬ್ಧಿಯಂ ಸುಡುವವೋಲ್ ಶಸ್ತ್ರಾಗ್ನಿಯಿಂ ತೀವ್ರ ಕೋ
ಪದಿನುದ್ವೃತ್ತ ಬಳಾಬ್ಧಿಯಂ ಸುಡೆ ಕರಂ ಬೆಂಬಿೞ್ದು ದುರ್ಯುಕ್ತಿಯಿಂ|
ದದಯಂ ಧರ್ಮಜನಿಕ್ಕಿದಂ ಗುರುವನಿನ್ನೀನಾತನಂ ಬೇಗಮಿ
ಕ್ಕದೆ ಕಣ್ಣೀರ್ಗಳನಿಕ್ಕೆ ಚಂದ್ರಧವಳಂ ನಿನ್ನನ್ವಯಂ ಮಾಸದೇ|| ೩೫
ಪದ್ಯ-೦೦:ಪದವಿಭಾಗ-ಅರ್ಥ:ಪುದಿದ ಔರ್ವಾನಳಂ ಅಬ್ಧಿಯಂ ಸುಡುವವೋಲ್ (ಆವರಿಸಿಕೊಂಡಿರುವ ಬಡಬಾಗ್ನಿಯು ಕಡಲನ್ನು ಸುಡುವಂತೆ) ಶಸ್ತ್ರಾಗ್ನಿಯಿಂ ತೀವ್ರ ಕೋಪದಿಂ ಉದ್ವೃತ್ತ ಬಳಾಬ್ಧಿಯಂ ಸುಡೆ (ಶಸ್ತ್ರಾಗ್ನಿಯಿಂದಲೂ ತೀಕ್ಷ್ಣವಾದ ಕೋಪಾಗ್ನಿಯಿಂದಲೂ ಕೊಬ್ಬಿದ ಶತ್ರು ಸೈನ್ಯಸಾಗರವನ್ನು ಸುಡುತ್ತಿರಲು) ಕರಂ ಬೆಂಬಿೞ್ದು (ಬಹಳ ಬೆನ್ನುಹತ್ತಿ) ದುರ್ಯುಕ್ತಿಯಿಂದೆ ಅದಯಂ ಧರ್ಮಜನು ಇಕ್ಕಿದಂ ಗುರುವನು (ಹೀನ ಉಪಾಯಗಳಿಂದಲೂ ದಯೆ ಇಲ್ಲದೆ ಧರ್ಮರಾಯನು ಗುರುವನ್ನು ಕೊಂದನು) ಇನ್ನು ನೀನು ಆತನಂ ಬೇಗಂ ಇಕ್ಕದೆ (ಇನ್ನು ನೀನು ಅವನನ್ನು ಬೇಗನೆ ಕೊಲ್ಲದೆ) ಕಣ್ಣೀರ್ಗಳನು ಇಕ್ಕೆ ಚಂದ್ರಧವಳಂ ನಿನ್ನ ಅನ್ವಯಂ ಮಾಸದೇ (ಚಂದ್ರನಷ್ಟು ಬೆಳ್ಳಗಿರುವ ನಿನ್ನ ವಂಶವು ಮಲಿನವಾಗದೆ ಇರುತ್ತದೆಯೇ?)
ಪದ್ಯ-೦೦:ಅರ್ಥ: ಆಚಾರ್ಯರು ಆವರಿಸಿಕೊಂಡಿರುವ ಬಡಬಾಗ್ನಿಯು ಕಡಲನ್ನು ಸುಡುವಂತೆ ಶಸ್ತ್ರಾಗ್ನಿಯಿಂದಲೂ ತೀಕ್ಷ್ಣವಾದ ಕೋಪಾಗ್ನಿಯಿಂದಲೂ ಕೊಬ್ಬಿದ ಶತ್ರು ಸೈನ್ಯಸಾಗರವನ್ನು ಸುಡುತ್ತಿರಲು ಬಹಳ ಬೆನ್ನುಹತ್ತಿ ಹೀನ ಉಪಾಯಗಳಿಂದಲೂ ದಯೆ ಇಲ್ಲದೆ ಧರ್ಮರಾಯನು ಗುರುವನ್ನು ಕೊಂದನು. ಇನ್ನು ನೀನು ಅವನನ್ನು ಬೇಗನೆ ಕೊಲ್ಲದೆ ಕಣ್ಣೀರನ್ನು ಸುರಿಸುತ್ತಿದ್ದರೆ, ಚಂದ್ರನಷ್ಟು ಬೆಳ್ಳಗಿರುವ ನಿನ್ನ ವಂಶವು ಮಲಿನವಾಗದೆ ಇರುತ್ತದೆಯೇ?
ದ್ರುತವಿಲಂಬಿತಂ|| ಎನಗೆ ಕೂರ್ಪುದನಾ ಘಟಸಂಭವಂ
ನಿನಗೆ ಕೂರನೞಲ್ ನಿನತಲ್ತು ಕೇ||
ಳೆನತುಮಾಱದ ಶೋಕಮನಿರ್ವರುಂ
ಮುನಿವರಂ ತವೆ ಕೊಂದೊಡನೀಗುವಂ|| ೩೬ ||
ಪದ್ಯ-೩೬:ಪದವಿಭಾಗ-ಅರ್ಥ:ಎನಗೆ ಕೂರ್ಪುದನು ಆ ಘಟಸಂಭವಂ (ದ್ರೋಣನು ನನಗೆ ಪ್ರೀತಿಸುತ್ತಿದ್ದನು) ನಿನಗೆ ಕೂರಂ (ನಿನ್ನನ್ನು ಪ್ರೀತಿಸುತ್ತಿರಲಿಲ್ಲ) ಅೞಲ್ ನಿನತು ಅಲ್ತು (ಅಳಲು- ಈ ದು:ಖವು ನಿನ್ನದು ಮಾತ್ರವಲ್ಲ) ಕೇಳ್ ಎನತುಂ ಆಱದ ಶೋಕಮನು ಇರ್ವರುಮುಂ (ಕೇಳು, ನನ್ನದೂ ಅಹುದು. ಕಡಿಮೆಯಾಗದ ಈ ದುಖವನ್ನು, ನಾವಿಬ್ಬರೂ) ಇವರಂ ತವೆ ಕೊಂದೊಡನೀಗುವಂ- ಕೊಂದು ಒಡನೀಗುವಂ (ಇವರನ್ನು ಕೊಂದು, ಜೊತೆಯಲ್ಲಿಯೇ ಪರಿಹಾರ ಮಾಡಿಕೊಳ್ಳೋಣ)
ಪದ್ಯ-೩೬:ಅರ್ಥ: ದ್ರೋಣಾಚಾರ್ಯನು ನನ್ನನ್ನು ಪ್ರೀತಿಸುತ್ತಿದಷ್ಟು ನಿನ್ನನ್ನು ಪ್ರೀತಿಸುತ್ತಿರಲಿಲ್ಲ. ಈ ದು:ಖವು ನಿನ್ನದು ಮಾತ್ರವಲ್ಲ; ಕೇಳು, ನನ್ನದೂ ಅಹುದು. ಕಡಿಮೆಯಾಗದ ಈ ದುಖವನ್ನು, ನಾವಿಬ್ಬರೂ ನಮಗೆ ಸಮಾನ ಶತ್ರುಗಳಾದ ಪಾಂಡವರನ್ನು - ಇವರನ್ನು ಕೊಂದು, ಜೊತೆಯಲ್ಲಿಯೇ ಪರಿಹಾರ ಮಾಡಿಕೊಳ್ಳೋಣ.

ಅಶ್ವತ್ಥಾಮ ಕರ್ಣರ ಜಗಳ[ಸಂಪಾದಿಸಿ]

ವ|| ಎಂಬುದುಮಶ್ವತ್ಥಾಮನಿಂತೆಂದಂ-
ವಚನ:ಪದವಿಭಾಗ-ಅರ್ಥ:ಎಂಬುದುಂ ಅಶ್ವತ್ಥಾಮನು ಇಂತೆಂದಂ-
ವಚನ:ಅರ್ಥ:ವ|| ಎನ್ನಲು ಅಶ್ವತ್ಥಾಮನು ಹೀಗೆ ಹೇಳಿದನು.
ತರಳಂ|| ಗುರು ಮದೀಯ ವಿಮೋಹದಿಂ ಕೃಪೆಯಂ ಜವಂ ಬಿಸುಟಂತೆ ಕೊ
ಕ್ಕರಿಸಿ ಬಿಲ್ವಿಸುಟಿರ್ದೊಡಾ ಪದದೊಳ್ ಗಡಂ ದ್ರುಪದಾತ್ಮಜಂ|
ಗುರುವ ಕೇಶಕಳಾಪಮಂ ತೆಗೆದಂತೆ ಗಂಡನುಮಾದನೀ
ಪರಿಭವಕ್ಕನುರೂಪಮಿಂ ಪೆಱತೊಂದುಮಿಲ್ಲಹಿಕೇತನಾ|| ೩೭ ||
ಪದ್ಯ-೩೭:ಪದವಿಭಾಗ-ಅರ್ಥ:ಗುರು ಮದೀಯ ವಿಮೋಹದಿಂ (ಗುರುವಾದ ನನ್ನ ತಂದೆಯು ನನ್ನ ಮೇಲಿನ ಪ್ರೀತಿಯಿಂದ) ಕೃಪೆಯಂ ಜವಂ (ಯಮ) ಬಿಸುಟಂತೆ (ಯಮನು ಕರುಣವನ್ನು ಬಿಸಾಡುವ ಹಾಗೆ) ಕೊಕ್ಕರಿಸಿ ಬಿಲ್ವಿಸುಟಿರ್ದೊಡೆ (ಅಸಹ್ಯಪಟ್ಟು ಬಿಲ್ಲನ್ನು ಬಿಸುಟಿದ್ದ) ಆ ಪದದೊಳ್ ಗಡಂ ದ್ರುಪದಾತ್ಮಜಂ (ಆ ಸಮಯದಲ್ಲಿಯೇ ಅಲ್ಲವೇ ಧೃಷ್ಟದ್ಯುಮ್ನನು) ಗುರುವ ಕೇಶಕಳಾಪಮಂ ತೆಗೆದು ಅಂತೆ ಗಂಡನುಮಾದನು (ಗುರುವಿನ ಕೂದಲ ಗಂಟನ್ನು ಎಳೆದು ಮಹಾಶೂರನಾದನು!) ಈ ಪರಿಭವಕ್ಕಂ ಅನುರೂಪಂ ಇಂ ಪೆಱತು ಒಂದುಮಿಲ್ಲ ಅಹಿಕೇತನಾ (ದುರ್ಯೋಧನಾ!) (ಈ ಅವಮಾನಕ್ಕೆ ಸಮಾನವಾದುದು ಇನ್ನೋದು ಇಲ್ಲ, ದುರ್ಯೋಧನಾ!)
ಪದ್ಯ-೩೭:ಅರ್ಥ:ಗುರುವಾದ ನನ್ನ ತಂದೆಯು ನನ್ನ ಮೇಲಿನ ಪ್ರೀತಿಯಿಂದ, ಯಮನು ಕರುಣವನ್ನು ಬಿಸಾಡುವ ಹಾಗೆ ಅಸಹ್ಯಪಟ್ಟು ಬಿಲ್ಲನ್ನು ಬಿಸುಟಿದ್ದ ಆ ಸಮಯದಲ್ಲಿಯೇ ಅಲ್ಲವೇ ಧೃಷ್ಟದ್ಯುಮ್ನನು ಗುರುವಿನ ಕೂದಲ ಗಂಟನ್ನು ಎಳೆದು ಮಹಾಶೂರನಾದನು! ಈ ಅವಮಾನಕ್ಕೆ ಸಮಾನವಾದುದು ಬೇರೊಂದಿಲ್ಲ, ದುರ್ಯೋಧನಾ!
ಶಾ|| ರಾಯೆಂಬೀ ಪೆಸರಿಲ್ಲದಂತು ಮುೞಿಸಿಂ ಮುಯ್ಯೋೞು ಸೂೞೆಂತು ಕ
ಟ್ಟಾಯಂ ಪೊಂಪುೞಿವೋಗೆ ತಂದೆಯೞಿವಿಂಗಾ ಭಾರ್ಗವಂ ಕೊಂದನಂ|
ತೀಯೆಮ್ಮಯ್ಯನಿನಾದುದೊಂದು ಪಗೆಯಿಂ ಸೀಳ್ದುಗ್ರಪಾಂಚಾಳರಾ
ಜಾಯುಃಪಾರಮನನ್ಯಭೂಪಬಲಮಂ ಪರ್ದಿಂಗೆ ಬಿರ್ದಿಕ್ಕುವೆಂ|| ೩೮ ||
ಪದ್ಯ-೩೮:ಪದವಿಭಾಗ-ಅರ್ಥ:ರಾಯ ಎಂಬ ಈ ಪೆಸರಿಲ್ಲದಂತು (ರಾಜ’ ಎಂಬ ಹೆಸರೇ ಇಲ್ಲದಿರುವ ಹಾಗೆ) ಮುೞಿಸಿಂ ಮುಯ್ಯೋೞು ಸೂೞೆಂತು (ಸಿಟ್ಟಿನಿಂದ ಇಪ್ಪತ್ತೊಂದು ಸಲ) ಕಟ್ಟಾಯಂ ಪೊಂಪುೞಿವೋಗೆ (ತನ್ನ ಪೌರುಷವು ಅಧಿಕವಾಗಿರಲು) ತಂದೆಯೞಿವಿಂಗೆ ಆ ಭಾರ್ಗವಂ ಕೊಂದನು;(ತನ್ನ ತಂದೆಯ ಸಾವಿಗೆ ಹೇಗೆ ಕೊಂದನು;) ಅಂತೆ ಈಯೆಮ್ಮ ಅಯ್ಯನಿಂ ಆದುದೊಂದು ಪಗೆಯಿಂ (ಹಾಗೆಯೇ ಈಗ ನಮ್ಮ ತಂದೆಯ ಕಾರಣದಿಂದಾದ ವೈರತ್ವದಿಂದ) ಸೀಳ್ದು ಉಗ್ರಪಾಂಚಾಳರಾಜ ಆಯುಃ ಪಾರಮನು (ಭಯಂಕರವಾದ ಪಾಂಚಾಲರಾಜರ ಆಯಸ್ಸಿನ ದಡವನ್ನು ಸೀಳಿ) ಅನ್ಯ ಭೂಪಬಲಮಂ ಪರ್ದಿಂಗೆ ಬಿರ್ದಿಕ್ಕುವೆಂ (ಇತರ ಶತ್ರುರಾಜರ ಸೈನ್ಯವನ್ನು ಹದ್ದುಗಳಿಗೆ ಔತಣಮಾಡಿಸುತ್ತೇನೆ.)
ಪದ್ಯ-೩೮:ಅರ್ಥ: ಪರಶುರಾಮನು ತಂದೆಯ ಸಾವಿಗಾಗಿ ಕೋಪದಿಂದ ‘ರಾಜ’ ಎಂಬ ಹೆಸರೇ ಇಲ್ಲದಿರುವ ಹಾಗೆ ಸಿಟ್ಟಿನಿಂದ ಇಪ್ಪತ್ತೊಂದು ಸಲ ತನ್ನ ಪೌರುಷವು ಅಧಿಕವಾಗಿರಲು (ರಾಜಕುಲವನ್ನೆ) ತನ್ನ ತಂದೆಯ ಸಾವಿಗೆ ಹೇಗೆ ಕೊಂದನು; ಹಾಗೆಯೇ ಈಗ ನಮ್ಮ ತಂದೆಯ ಕಾರಣದಿಂದಾದ ವೈರತ್ವದಿಂದ ಭಯಂಕರವಾದ ಪಾಂಚಾಲರಾಜರ ಆಯಸ್ಸಿನ ದಡವನ್ನು ಸೀಳಿ, ಇತರ ಶತ್ರುರಾಜರ ಸೈನ್ಯವನ್ನು ಹದ್ದುಗಳಿಗೆ ಔತಣಮಾಡಿಸುತ್ತೇನೆ.
ಕಂ|| ಪಗೆಯಂದಮುಮಾ ರಾಮರ
ಪಗೆಯೊಳ್ ಸಮಮವರ ಪಿಡಿವ ಬಿಲ್ ಬಿಲ್ಲೆಮ್ಮಂ|
ಬುಗಳುಮವರಿತ್ತ ನಲ್ಲಂ
ಬುಗಳೆನೆ ಬೞಿಗಾಯದಂತು ಚಲಮನೆ ಕಾವೆಂ|| ೩೯||
ಪದ್ಯ-೩೯:ಪದವಿಭಾಗ-ಅರ್ಥ:ಪಗೆಯಂದಮುಂ ಆ ರಾಮರ ಪಗೆಯೊಳ್ ಸಮಂ (ನಮ್ಮ ಶತ್ರುತ್ವದ ರೀತಿಯೂ ರಾಮರ ಶತ್ರುತ್ವಕ್ಕೆ ಸಮಾನವಾದುದು.) ಅವರ ಪಿಡಿವ ಬಿಲ್ ಬಿಲ್ಲ್ ಎಮ್ಮಂ ಬುಗಳುಂ ಅವರಿತ್ತ ನಲ್ಲಂಬುಗಳು ಎನೆ (ಅವರು ಹಿಡಿಯುತ್ತಿದ್ದ ಬಿಲ್ಲೇ ನನ್ನ ಬಿಲ್ಲು ನಮ್ಮಬಾಣಗಳೂ ಅವರು ಕೊಟ್ಟ ಒಳ್ಳೆಯ ಬಾಣಗಳೇ ಆಗಿರಲು) ಬೞಿ (ವಂಶ) ಕಾಯದೆ ಅಂತು ಚಲಮನೆ ಕಾವೆಂ (ಅವರ ಕ್ಷತ್ರಿಯ ವಂಶವನ್ನು ರಕ್ಷಿಸದೆ (ಹಾಗೆಯೇ) ಹಟವನ್ನೇ ಸಾಸುತ್ತೇನೆ’)
ಪದ್ಯ-೩೯:ಅರ್ಥ:‘ನಮ್ಮ ಶತ್ರುತ್ವದ ರೀತಿಯೂ ರಾಮರ ಶತ್ರುತ್ವಕ್ಕೆ ಸಮಾನವಾದುದು. ಅವರು ಹಿಡಿಯುತ್ತಿದ್ದ ಬಿಲ್ಲೇ ನನ್ನ ಬಿಲ್ಲು ನಮ್ಮಬಾಣಗಳೂ ಅವರು ಕೊಟ್ಟ ಒಳ್ಳೆಯ ಬಾಣಗಳೇ ಆಗಿರಲು, ಅವರ ಕ್ಷತ್ರಿಯ ವಂಶವನ್ನು ರಕ್ಷಿಸದೆ (ಹಾಗೆಯೇ) ಹಟವನ್ನೇ ಸಾಸುತ್ತೇನೆ’
ವ|| ಎಂಬುದುಂ ತನ್ನಳಿಯನ ನುಡಿಗೆ ಶಾರದ್ವತಂ ಸಂತೋಷಂಬಟ್ಟು ಕೌರವೇಶ್ವರನ ನಿಂತೆಂದಂ ನೀನೀತಂಗೆ ವೀರವಟ್ಟಮಂ ಕಟ್ಟಿ ರಿಪುನೃಪಬಲಕ್ಕೆ ತೋಱಿ ಬಿಡುವುದೆನೆ ಕಳಶಜನಿಂ ಬೞಿಕ್ಕೆ ಕರ್ಣಂಗೆಂದು ನುಡಿದ ಬೀರಮಟ್ಟಮನೆಂತು ಕಟ್ಟುವೆನೆಂದೊಡಶ್ವರತ್ಥಾಮ ನಿಂತೆಂದಂ-
ವಚನ:ಪದವಿಭಾಗ-ಅರ್ಥ:ಎಂಬುದುಂ ತನ್ನ ಅಳಿಯನ ನುಡಿಗೆ ಶಾರದ್ವತಂ (ಕೃಪನು) ಸಂತೋಷಂಬಟ್ಟು ಕೌರವೇಶ್ವರನನು ಇಂತೆಂದಂ (ಕೃಪನು ಸಂತೋಷಪಟ್ಟು ದುರ್ಯೋಧನನಿಗೆ ಹೀಗೆ ಹೇಳಿದನು) ನೀನು ಈತಂಗೆ ವೀರವಟ್ಟಮಂ ಕಟ್ಟಿ ರಿಪುನೃಪಬಲಕ್ಕೆ ತೋಱಿ ಬಿಡುವುದು ಎನೆ (‘ನೀನು ಇವನಿಗೆ ವೀರಪಟ್ಟವನ್ನು ಕಟ್ಟಿ ಶತ್ರುಸೈನ್ಯದ ಕಡೆಗೆ ತೋರಿಸಿ ಬಿಡತಕ್ಕದ್ದು’ ಎನ್ನುಲು) ಕಳಶಜನಿಂ ಬೞಿಕ್ಕೆ ಕರ್ಣಂಗೆ ಎಂದು ನುಡಿದ (ದ್ರೋಣನ ಬಳಿಕ ಕರ್ಣನಿಗೆ’ ಎಂದು ಹೇಳಿದ) ಬೀರಮಟ್ಟಮನು ಎಂತು ಕಟ್ಟುವೆನು ಎಂದೊಡೆ (ವೀರಪಟ್ಟವನ್ನು ಈಗ ಇವನಿಗೆ ಹೇಗೆ ಕಟ್ಟಲಿ ಎನ್ನಲು) ಅಶ್ವರತ್ಥಾಮ ನಿಂತೆಂದಂ (ಅಶ್ವತ್ಥಾಮನು ಹೀಗೆ ಹೇಳಿದನು)-
ವಚನ:ಅರ್ಥ: ಎಂದ ತನ್ನಳಿಯನ ಮಾತಿಗೆ ಕೃಪನು ಸಂತೋಷಪಟ್ಟು ದುರ್ಯೋಧನನಿಗೆ ಹೀಗೆ ಹೇಳಿದನು- ‘ನೀನು ಇವನಿಗೆ ವೀರಪಟ್ಟವನ್ನು ಕಟ್ಟಿ ಶತ್ರುಸೈನ್ಯದ ಕಡೆಗೆ ತೋರಿಸಿ ಬಿಡತಕ್ಕದ್ದು’ ಎನ್ನುಲು, ‘ದ್ರೋಣನ ಬಳಿಕ ಕರ್ಣನಿಗೆ’ ಎಂದು ಹೇಳಿದ ವೀರಪಟ್ಟವನ್ನು ಈಗ ಇವನಿಗೆ ಹೇಗೆ ಕಟ್ಟಲಿ ಎನ್ನಲು ಅಶ್ವತ್ಥಾಮನು ಹೀಗೆ ಹೇಳಿದನು. ಕರ್ಣನಿಗೆ’ ಎಂದು ಹೇಳಿದ ವೀರಪಟ್ಟವನ್ನು ಈಗ ಇವನಿಗೆ ಹೇಗೆ ಕಟ್ಟಲಿ ಎನ್ನಲು ಅಶ್ವತ್ಥಾಮನು ಹೀಗೆ ಹೇಳಿದನು.
ಚಂ|| ನಿಜದೊಳೆ ಭೂಪರೆಂಬರವಿವೇಕಿಗಳಪ್ಪರದಕ್ಕೆ ನೀಂ ಫಣಿ
ಧ್ವಜ ಕಡುಕೆಯ್ದು ಕರ್ಣನನೆ ನಚ್ಚುವೆಯಪ್ಪೊಡೆ ಯುದ್ಧದೊಳ್ ವೃಷ|
ಧ್ವಜನುಮನಿಕ್ಕಿ ಗೆಲ್ದರಿಗನೊಳ್ ತಲೆವಟ್ಟಿದಿರಾಗಿ ನಿಂದು ಸೂ
ತಜನಿಱಿವಂ ಗಡಂ ಪಗೆಯನೇಂ ಗಳ ಪಟ್ಟಮೆ ಪಾಱಿ ತಿಂಬದೇ || ೪೦ ||
ಪದ್ಯ-೪೦:ಪದವಿಭಾಗ-ಅರ್ಥ:ನಿಜದೊಳೆ ಭೂಪರೆಂಬರ್ ಅವಿವೇಕಿಗಳಪ್ಪರು (ರಾಜರೆನ್ನುವವರು ಸಹಜವಾಗಿ ಬುದ್ಧಿಯಿಲ್ಲದವರಾಗಿರುತ್ತಾರೆ.) ಅದಕ್ಕೆ ನೀಂ ಫಣಿಧ್ವಜ ಕಡುಕೆಯ್ದು ಕರ್ಣನನೆ ನಚ್ಚುವೆಯಪ್ಪೊಡೆ (ಅದು ಹಾಗಿರಲು, ಎಲೈ ದುರ್ಯೋಧನನೇ, ಬಹಳತೀವ್ರವಾಗಿ ಕರ್ಣನನ್ನೇ ನಂಬುವೆಯಾದರೆ) ಯುದ್ಧದೊಳ್ ವೃಷಧ್ವಜನುಮನು ಇಕ್ಕಿ ಗೆಲ್ದ ಅರಿಗನೊಳ್ (ಯುದ್ಧದಲ್ಲಿ ಈಶ್ವರನನ್ನೇ ಇಕ್ಕಿ- ಹೊಡೆದು ಗೆದ್ದ ಅರ್ಜುನನಿಗೆ) ತಲೆವಟ್ಟಿದಿರಾಗಿ ನಿಂದು (ತಲೆಕೊಟ್ಟು ಎದುರು ನಿಂತು) ಸೂತಜನು ಇಱಿವಂ ಗಡಂ! (ಕರ್ಣನು ಯುದ್ಧಮಾಡುವನೋ ಗಡ! ಓಹೋ!) ಪಗೆಯಂ ಏಂಗಳ ಪಟ್ಟಮೆ ಪಾಱಿ (ಹಾರಿ) ತಿಂಬದೇ (ಕಟ್ಟಿದ ವೀರಪಟ್ಟವೇ ಹಾರಿ ಮೇಲೆ ಬಿದ್ದು ಶತ್ರುವನ್ನು ತಿನ್ನವುದೇ ಏನು? )
ಪದ್ಯ-೪೦:ಅರ್ಥ: ರಾಜರೆನ್ನುವವರು ಸಹಜವಾಗಿ ಬುದ್ಧಿಯಿಲ್ಲದವರಾಗಿರುತ್ತಾರೆ. ಅದಕ್ಕಾಗಿಯೇ, -ಅದು ಹಾಗಿರಲು, ಎಲೈ ದುರ್ಯೋಧನನೇ, ಬಹಳ ತೀವ್ರವಾಗಿ ಕರ್ಣನನ್ನೇ ನಂಬುವೆಯಾದರೆ ಯುದ್ಧದಲ್ಲಿ ಈಶ್ವರನನ್ನೇ ಇಕ್ಕಿ ಗೆದ್ದ ಅರ್ಜುನನಿಗೆ ತಲೆಕೊಟ್ಟು ಎದುರು ನಿಂತು ಕರ್ಣನು ಯುದ್ಧಮಾಡುವನೋ ಗಡ! ಕಟ್ಟಿದ ವೀರಪಟ್ಟವೇ ಹಾರಿ ಮೇಲೆ ಬಿದ್ದು ಶತ್ರುವನ್ನು ತಿನ್ನವುದೇ ಏನು?
ವ|| ಎಂಬುದುಮಂಗರಾಜಂ ಗುರುತನೂಜನನಿಂತೆಂದಂ-
ವಚನ:ಪದವಿಭಾಗ-ಅರ್ಥ:ಎಂಬುದುಂ ಅಂಗರಾಜಂ ಗುರುತನೂಜನನು ಇಂತೆಂದಂ-
ವಚನ:ಅರ್ಥ:ಎನ್ನಲು ಕರ್ಣನು ಅಶ್ವತ್ಥಾಮನನ್ನು ಕುರಿತು ಹೀಗೆ ಹೇಳಿದನು-
ಚಂ|| ಎನಿತಳವುಳ್ಳೊಡಂ ದ್ವಿಜನ ಗಂಡಗುಣಕ್ಕಗಿವನ್ನರಾರೊ ನೆ
ಟ್ಟನೆ ವಿಷಮೊಳ್ಳೆಗುಳ್ಳೊಡಮದೊಳ್ಳೆಯೆ ಕಾಳಿಯ ನಾಗನಾಗದ|
ಣ್ಮಿನ ಪಡೆಮಾತದೊಂದೆ ನೆವಮಾಗಿರೆ ಕೆಯ್ದುವನಿಕ್ಕಿ ಸತ್ತ ಸಾ
ವಿನ ಪಡಿಚಂದಮಾಗಿಯುಮಿದೇಂ ನಿಮಗೞ್ತಿಯೊ ಗಂಡುವಾತುಗಳ್ || ೪೧ ||41||
ಪದ್ಯ-೪೧:ಪದವಿಭಾಗ-ಅರ್ಥ: ಎನಿತು ಅಳವುಳ್ಳೊಡಂ (ಎಷ್ಟು ಪರಾಕ್ರಮವಿದ್ದರೂ) ದ್ವಿಜನ ಗಂಡಗುಣಕ್ಕೆ ಅಗಿವನ್ನರ್ ಆರೊ (ಬ್ರಾಹ್ಮಣನ ಪೌರುಷಕ್ಕೆ ಹೆದರುವವರು ಯಾರಿದ್ದಾರೋ?) ನೆಟ್ಟನೆ ವಿಷಮ್ ಒಳ್ಳೆಗೆ ಉಳ್ಳೊಡೆ ಅದು ಒಳ್ಳೆಯೆ (ಕೇರೆ ಹಾವಿಗೆ ಸರಿಯಾಗಿ ವಿಷವಿದ್ದರೂ ಅದು ಒಳ್ಳೆಯೇ- ಕೇರೆಹಾವೇ ) ಕಾಳಿಯ ನಾಗನು ಆಗದು, ಅಣ್ಮಿನ ಪಡೆಮಾತು (ಕಾಳೀಂಗ ಸರ್ಪವಾಗಲಾರದು. ಪೌರುಷದ ಬೀಳುಮಾತು! ಸುದ್ದಿಯು) ಅದೊಂದೆ ನೆವಮಾಗಿರೆ ಕೆಯ್ದುವನು ಇಕ್ಕಿ (ಬೀಳುಮಾತು- ಸುದ್ದಿಯು ಯಾವುದೋ ಒಂದು ನೆಪದಿಂದ ಆಯುಧವನ್ನು ಬಿಸಾಡಿ) ಸತ್ತ ಸಾವಿನ ಪಡಿಚಂದಮಾಗಿಯುಂ (ಸತ್ತ ಸಾವಿನ ಪ್ರತಿಬಿಂಬ ಕಣ್ಣಮುಂದಿದ್ದರೂ ) ಇದೇಂ ನಿಮಗೆ ಅೞ್ತಿಯೊ ಗಂಡುವಾತುಗಳ್ (ನಿಮಗೆ ಪೌರುಷದ ಮಾತುಗಳಲ್ಲಿ ಇನ್ನೂ ಪ್ರೀತಿಯಿದೆಯೇ?)
ಪದ್ಯ-೪೧:ಅರ್ಥ:‘ಎಷ್ಟು ಪರಾಕ್ರಮವಿದ್ದರೂ ಬ್ರಾಹ್ಮಣನ ಪೌರುಷಕ್ಕೆ ಹೆದರುವವರು ಯಾರಿದ್ದಾರೋ? ಕೇರೆ ಹಾವಿಗೆ ಸರಿಯಾಗಿ ವಿಷವಿದ್ದರೂ ಅದು ಒಳ್ಳೆಯೇ, (ಕೇರೆಯ ಹಾವೇ); ಕಾಳೀಂಗ ಸರ್ಪವಾಗಲಾರದು. ಪೌರುಷದ ಬೀಳುಮಾತು! ಬೀಳುಮಾತು- ಸುದ್ದಿಯು ಯಾವುದೋ ಒಂದು ನೆಪದಿಂದ ಆಯುಧವನ್ನು ಬಿಸಾಡಿ ಸತ್ತ ಸಾವಿನ ಪ್ರತಿಬಿಂಬ ಕಣ್ಣಮುಂದಿದ್ದರೂ ನಿಮಗೆ ಪೌರುಷದ ಮಾತುಗಳಲ್ಲಿ ಇನ್ನೂ ಪ್ರೀತಿಯಿದೆಯೇ?’ (ಎಷ್ಟು ಪ್ರೀತಿಯೋ)
ವ|| ಎಂಬುದುಂ ತ್ರೈಲೋಕ್ಯ ಧನುರ್ಧರನಪ್ಪೆಮ್ಯಯ್ಯನ ಗಂಡವಾತನೀ ಮೀಂಗುಗಲಿಗಂ ಮೆಚ್ಚನಿವನಂ ಮುಂ ಕೊಂದು ಬೞಿಯಂ ಪಾಂಡವರಂ ಕೊಲ್ವೆನೆಂದು ಬಾಳಂ ಕಿೞ್ತು ಕರ್ಣನ ಮೇಲೆವಾಯ್ವುದುಂ ಕೃಪನೆಡೆವೊಕ್ಕಿದಾಗದೆಂದು ಬಾರಿಸಿ-
ವಚನ:ಪದವಿಭಾಗ-ಅರ್ಥ:ಎಂಬುದುಂ (ಕರ್ಣನು ಹೀಗೆ- ಎನ್ನುಲು) ತ್ರೈಲೋಕ್ಯ ಧನುರ್ಧರನಪ್ಪ ಎಮ್ಯಯ್ಯನ ಗಂಡವಾತನು (‘ಮೂರುಲೋಕಗಳಲ್ಲಿಯೂ ಬಿಲ್ವಿದ್ಯೆಯಲ್ಲಿ ಪ್ರಸಿದ್ಧನಾದ ನನ್ನ ತಂದೆಯನ್ನು) ಈ ಮೀಂಗುಗಲಿಗಂ ಮೆಚ್ಚನು (ಈ ಮೀನುಹಿಡಿಯುವ ಬೆಸ್ತರವನು ಮೆಚ್ಚುವುದಿಲ್ಲ.) ಇವನಂ ಮುಂ ಕೊಂದು ಬೞಿಯಂ ಪಾಂಡವರಂ ಕೊಲ್ವೆನು ಎಂದು (ಇವನನ್ನು ಮೊದಲು ಕೊಂದು ಬಳಿಕ ಪಾಂಡವರನ್ನು ಕೊಲ್ಲುತ್ತೇನೆ’ ಎಂದು) ಬಾಳಂ ಕಿೞ್ತು ಕರ್ಣನ ಮೇಲೆವಾಯ್ವುದುಂ (ಕತ್ತಿಯನ್ನು ಒರೆಯಿಂದ ತೆಗೆದು ಕರ್ಣನ ಮೇಲೆ ಧಾಳಿಮಾಡಿದಾಗ.) ಕೃಪನು ಎಡೆವೊಕ್ಕು, ಇದು ಆಗದು, ಎಂದು ಬಾರಿಸಿ (ಕೃಪನು ಮಧ್ಯೆ ಪ್ರವೇಶಿಸಿ ಹೀಗೆ ಮಾಡಬಾರದು ಎಂದು ತಡೆದನು)-
ವಚನ:ಅರ್ಥ:ಕರ್ಣನು ಹೀಗೆ- ಎನ್ನುಲು ‘ಮೂರುಲೋಕಗಳಲ್ಲಿಯೂ ಬಿಲ್ವಿದ್ಯೆಯಲ್ಲಿ ಪ್ರಸಿದ್ಧನಾದ ನನ್ನ ತಂದೆಯನ್ನು ಈ ಮೀನುಹಿಡಿಯುವ ಬೆಸ್ತರವನು ಮೆಚ್ಚುವುದಿಲ್ಲ. ಇವನನ್ನು ಮೊದಲು ಕೊಂದು ಬಳಿಕ ಪಾಂಡವರನ್ನು ಕೊಲ್ಲುತ್ತೇನೆ’ ಎಂದು ಕತ್ತಿಯನ್ನು ಒರೆಯಿಂದ ತೆಗೆದು ಕರ್ಣನ ಮೇಲೆ ಧಾಳಿಮಾಡಿದಾಗ. ಕೃಪನು ಮಧ್ಯೆ ಪ್ರವೇಶಿಸಿ ಹೀಗೆ ಮಾಡಬಾರದು ಎಂದು ತಡೆದನು-
ಕಂ|| ಅಸದಳಮಾಗಿಯುಮೀ ನ
ಮ್ಮ ಸೈನ್ಯಮಿಂತೊರ್ವರೊರ್ವರೊಳ್ ಸೆಣಸಿ ಖಳ|
ವ್ಯಸನದೊಳೆ ಕೆಟ್ಟುದಲ್ಲದೊ
ಡೆ ಸುಯೋಧನ ನಿನಗೆ ಮಲೆವ ಮಾರ್ವಲಮೊಳವೇ|| ೪೨ ||
ಪದ್ಯ-೪೨:ಪದವಿಭಾಗ-ಅರ್ಥ:ಅಸದಳಮಾಗಿಯುಂ ಈ ನಮ್ಮ ಸೈನ್ಯಂ ಇಂತು ಒರ್ವರೊರ್ವರೊಳ್ ಸೆಣಸಿ (ಈ ನಮ್ಮ ಸೈನ್ಯವು ಅಸದೃಶವಾಗಿದ್ದರೂ ಹೀಗೆ ಒಬ್ಬೊಬ್ಬರಲ್ಲಿಯೂ ಜಗಳವಾಡಿ) ಖಳ (ಬಳ?) ವ್ಯಸನದೊಳೆ ಕೆಟ್ಟುದು (ಒಳ/ ಕೆಟ್ಟ ಜಗಳದಿಂದಲೇ ಕೆಟ್ಟುಹೋಯಿತು.) ಅಲ್ಲದೊಡೆ ಸುಯೋಧನ ನಿನಗೆ ಮಲೆವ ಮಾರ್ವಲಂ ಒಳವೇ (ಹಾಗಲ್ಲದಿದ್ದರೆ ನಿನಗೆ ಪ್ರತಿಭಟಿಸಲು ಶತ್ರುಸೈನ್ಯಕ್ಕೆ ಸಾಧ್ಯರುತ್ತಿದ್ದಿತೆ?’) ಎಂದನು ಕೃಪ.
ಪದ್ಯ-೪೨:ಅರ್ಥ:‘ದುರ್ಯೋಧನಾ, ಈ ನಮ್ಮ ಸೈನ್ಯವು ಅಸದೃಶವಾಗಿದ್ದರೂ ಹೀಗೆ ಒಬ್ಬೊಬ್ಬರಲ್ಲಿಯೂ ಜಗಳವಾಡಿ (ಮತ್ಸರಿಸಿ) ಒಳ/ ಕೆಟ್ಟ ಜಗಳದಿಂದಲೇ ಕೆಟ್ಟುಹೋಯಿತು. ಹಾಗಲ್ಲದಿದ್ದರೆ ನಿನಗೆ ಪ್ರತಿಭಟಿಸಲು ಶತ್ರುಸೈನ್ಯಕ್ಕೆ ಸಾಧ್ಯರುತ್ತಿದ್ದಿತೆ?’ ಎಂದನು ಕೃಪ.
ವ|| ಎಂಬುದುಮಶ್ವತ್ಥಾಮಂ ಕರ್ಣನೊಳಾದ ಮುಳಿಸನವಧಾರಿಸಲಾಱದೆ ಸುಯೋಧನನ ನಿಂತೆಂದಂ-
ವಚನ:ಪದವಿಭಾಗ-ಅರ್ಥ:ಎಂಬುದುಂ ಅಶ್ವತ್ಥಾಮಂ ಕರ್ಣನೊಳಾದ ಮುಳಿಸನು ಅವಧಾರಿಸಲಾಱದೆ( ತಡೆಯಲಾರದೆ) ಸುಯೋಧನನ ನಿಂತೆಂದಂ-
ವಚನ:ಅರ್ಥ:ಎನ್ನಲು ಅಶ್ವತ್ಥಾಮನು ಕರ್ಣನಲ್ಲುಂಟಾದ ಕೋಪವನ್ನು ತಡೆಯಲಾರದೆ ದುರ್ಯೋಧನನಿಗೆ ಹೀಗೆ ಹೇಳಿದನು-
ಖಚರಪ್ಲುತಂ|| ಬೀರವಟ್ಟಮನಾನಿರೆ ನೀನೀ ಸೂತಸುತಂಗೆಡೆಗೊಂಡು ಕೈ
ವಾರದಿಂದೊಸೆದಿತ್ತೊಡಮೇನಾಯ್ತೀ ಖಳನಿಲ್ಲಿ ಧನಂಜಯ|
ಕ್ರೂರಬಾಣಗಣಾವಳಿಯಿಂದೞ್ಕಾಡಿದೊಡಲ್ಲದೆ ವೈರಿ ಸಂ
ಹಾರ ಕಾರಣ ಚಾಪಮನಾನೀ ಸಂಗರದೊಳ್ ಪಿಡಿಯೆಂ ಗಡಾ|| ೪೩ ||
ಪದ್ಯ-೪೩:ಪದವಿಭಾಗ-ಅರ್ಥ:ಬೀರವಟ್ಟಮನು ಆನಿರೆ ನೀನು ಈ ಸೂತಸುತಂಗೆ ಎಡೆಗೊಂಡು ಕೈವಾರದಿಂದ ಒಸೆದಿತ್ತೊಡಂ ಏನಾಯ್ತು (ನಾನಿರುವಾಗ ನೀನು ಸ್ನೇಹದಿಂದ ವೀರಪಟ್ಟವನ್ನು ಈ ಸೂತನ ಮಗನಿಗೆ ಮೋಸದಿಂದ ಕೊಟ್ಟರೆ ತಾನೇ ಏನಾಯ್ತು?) ಈ ಖಳನು ಇಲ್ಲಿ ಧನಂಜಯ ಕ್ರೂರ ಬಾಣಗಣಾವಳಿಯಿಂದ ಅೞ್ಕಾಡಿದೊಡೆ ಅಲ್ಲದೆ (ಈ ದುಷ್ಟನು ಅರ್ಜುನನ ಕ್ರೂರವಾದ ಬಾಣಗಳ ಸಮೂಹದಿಂದ ನಾಶವಾಗದ ಹೊರತು) ವೈರಿ ಸಂಹಾರ ಕಾರಣ ಚಾಪಮನಾನ ಈ ಸಂಗರದೊಳ್ ಪಿಡಿಯೆಂ ಗಡಾ (ನಾನು ಶತ್ರುನಾಶಕ್ಕೆ ಕಾರಣವಾದ ಈ ಬಿಲ್ಲನ್ನು ಯುದ್ಧರಂಗದಲ್ಲಿ ಹಿಡಿಯುವುದೇ ಇಲ್ಲ.’)
ಪದ್ಯ-೪೩:ಅರ್ಥ:‘ನಾನಿರುವಾಗ ನೀನು ಸ್ನೇಹದಿಂದ ವೀರಪಟ್ಟವನ್ನು ಈ ಸೂತನ ಮಗನಿಗೆ ಮೋಸದಿಂದ ಕೊಟ್ಟರೆ ತಾನೇ ಏನಾಯ್ತು? ಈ ದುಷ್ಟನು ಅರ್ಜುನನ ಕ್ರೂರವಾದ ಬಾಣಗಳ ಸಮೂಹದಿಂದ ನಾಶವಾಗದ ಹೊರತು ನಾನು ಶತ್ರುನಾಶಕ್ಕೆ ಕಾರಣವಾದ ಈ ಬಿಲ್ಲನ್ನು ಯುದ್ಧರಂಗದಲ್ಲಿ ಹಿಡಿಯುವುದೇ ಇಲ್ಲ.’
ವ|| ಎಂಬುದುಂ ಮುಳಿಸುವೆರಸಿದ ಮುಗುಳ್ನಗೆಯಿಂ ಕರ್ಣನಿಂತೆಂದಂ-
ವಚನ:ಪದವಿಭಾಗ-ಅರ್ಥ:ಎಂಬುದುಂ ಮುಳಿಸುವೆರಸಿದ ಮುಗುಳ್ನಗೆಯಿಂ ಕರ್ಣನು ಇಂತೆಂದಂ-
ವಚನ:ಅರ್ಥ:ವ|| ಎನ್ನಲು ಕರ್ಣನು ಕೋಪಮಿಶ್ರಿತವಾದ ಹುಸಿನಗೆಯಿಂದ ಹೀಗೆ ಹೇಳಿದನು-
ಮ|| ಭುವನಂಗಳ್ ಪದಿನಾಲ್ಕುಮಂ ನಡುಗಿಸಲ್ ಸಾಮರ್ಥ್ಯಮುಳ್ಳೆನ್ನ ಕೆ
ಯ್ದುವಿನೊಳ್ ತೀರದುದಾವ ಕೆಯ್ದುವಿನೊಳಂ ತೀರ್ದಪುದೇ ನಿನ್ನ ಕೆ|
ಯ್ದುವನೆಂತುಂ ಬಿಸುಟಿರ್ದ ಲೆಕ್ಕಮೆ ವಲಂ ನಿಷ್ಕಾರಣಂ ಕೆಯ್ದುವಿ
ಕ್ಕುವ ಕಣ್ಣೀರ್ಗಳನಿಕ್ಕುವೀಯೆರಡುಮಂ ನಿಮ್ಮಯ್ಯನೊಳ್ ಕಲ್ತಿರೇ|| ೪೪
ಪದ್ಯ-೪೪:ಪದವಿಭಾಗ-ಅರ್ಥ:ಭುವನಂಗಳ್ ಪದಿನಾಲ್ಕುಮಂ ನಡುಗಿಸಲ್ ಸಾಮರ್ಥ್ಯಮುಳ್ಳ ಎನ್ನ ಕೆಯ್ದುವಿನೊಳ್ (‘ಹದಿನಾಲ್ಕು ಲೋಕಗಳನ್ನೂ ನಡುಗಿಸುವ ಸಾಮರ್ಥ್ಯವುಳ್ಳ ನನ್ನ ಆಯುಧಗಳಿಂದ) ತೀರದುದು ಆವ ಕೆಯ್ದುವಿನೊಳಂ ತೀರ್ದಪುದೇ (‘ಹದಿನಾಲ್ಕು ಲೋಕಗಳನ್ನೂ ನಡುಗಿಸುವ ಸಾಮರ್ಥ್ಯವುಳ್ಳ ನನ್ನ ಆಯುಧಗಳಿಂದ ಸಾಧ್ಯವಾಗದೇ ಇರುವುದು ಮತ್ತಾವ ಆಯುಧದಿಂದಾಗಲಿ ಸಾಧ್ಯವಾಗುತ್ತದೆಯೇ?) ನಿನ್ನ ಕೆಯ್ದುವನೆಂತುಂ ಬಿಸುಟಿರ್ದ ಲೆಕ್ಕಮೆ ವಲಂ (ನಿನ್ನ ಆಯುಧಗಳು ಯಾವಾಗಲೂ ಬಿಸಾಡಿರುವ ಲೆಕ್ಕವೇ, ವಲಂ! (ಅಪ್ರಯೋಜಕವೇ).) ನಿಷ್ಕಾರಣಂ ಕೆಯ್ದುವಿಕ್ಕುವ (ಕಾರಣವಿಲ್ಲದೇ ಬಿಲ್ಲನ್ನು ಬಿಸಾಡುವ) ಕಣ್ಣೀರ್ಗಳನು ಇಕ್ಕುವ ಈಯೆರಡುಮಂ ನಿಮ್ಮಯ್ಯನೊಳ್ ಕಲ್ತಿರೇ (ಕಾರಣವಿಲ್ಲದೇ ಬಿಲ್ಲನ್ನು ಬಿಸಾಡುವ ಮತ್ತು ಕಣ್ಣೀರನ್ನು ಸುರಿಸುವ ಈ ಎರಡನ್ನೂ ನಿಮ್ಮಯ್ಯನಿಂದ ಕಲಿತಿದ್ದೀರಾ?’)
ಪದ್ಯ-೪೪:ಅರ್ಥ:‘ಹದಿನಾಲ್ಕು ಲೋಕಗಳನ್ನೂ ನಡುಗಿಸುವ ಸಾಮರ್ಥ್ಯವುಳ್ಳ ನನ್ನ ಆಯುಧಗಳಿಂದ ಸಾಧ್ಯವಾಗದೇ ಇರುವುದು ಮತ್ತಾವ ಆಯುಧದಿಂದಾಗಲಿ ಸಾಧ್ಯವಾಗುತ್ತದೆಯೇ? ನಿನ್ನ ಆಯುಧಗಳು ಯಾವಾಗಲೂ ಬಿಸಾಡಿರುವ ಲೆಕ್ಕವೇ (ಅಪ್ರಯೋಜಕವೇ). ಕಾರಣವಿಲ್ಲದೇ ಬಿಲ್ಲನ್ನು ಬಿಸಾಡುವ ಮತ್ತು ಕಣ್ಣೀರನ್ನು ಸುರಿಸುವ ಈ ಎರಡನ್ನೂ ನಿಮ್ಮಯ್ಯನಿಂದ ಕಲಿತಿದ್ದೀರಾ?’
ವ|| ಎಂಬುದುಮಶ್ವತ್ಥಾಮಂ ಕರ್ಣನ ನುಡಿಗೆ ಸಿಗ್ಗಾಗಿ-
ವಚನ:ಪದವಿಭಾಗ-ಅರ್ಥ:ಎಂಬುದುಂ ಅಶ್ವತ್ಥಾಮಂ ಕರ್ಣನ ನುಡಿಗೆ ಸಿಗ್ಗಾಗಿ-
ವಚನ:ಅರ್ಥ:ಎನ್ನಲು ಅಶ್ವತ್ಥಾಮನು ಕರ್ಣನ ಮಾತಿಗೆ ಲಜ್ಜಿತನಾಗಿ
ಮ|| ಸ್ರ|| ಮುನಿಸಂ ಮುಂದಿಟ್ಟು ಬಿಲ್ಲಂ ಬಿಸುಡಲೆ ಬಗೆದೆಂ ಮುನ್ನಮಿನ್ನುರ್ಕ್ಕಿನಿಂ ನಿ
ನ್ನನೆ ಪೀನಂ ನಚ್ಚಿ ನಿನ್ನಾಳ್ದನೆ ನುಡಿಯಿಸೆ ನೀನಾಡಿದೈ ಮಾತನಾಡ|
ಲ್ಕೆನಗೀ ಸೂೞಲ್ತು ಸೇನಾಪ ಪದವಿಯೊಳಿಂ ನೀನೆ ನಿಲ್ ನಾಳೆ ದುರ್ಯೋ
ಧನನಂ ಸಕ್ಕಿಟ್ಟು ಮಾಱಾಂತದಟರೊಳಳವಂ ತೋಱುವಂ ನೀನುಮಾನುಂ|| ೪೫ ||
ಪದ್ಯ-೪೫:ಪದವಿಭಾಗ-ಅರ್ಥ: ಮುನಿಸಂ ಮುಂದಿಟ್ಟು ಬಿಲ್ಲಂ ಬಿಸುಡಲೆ ಬಗೆದೆಂ ಮುನ್ನಂ ಇನ್ನು ಉರ್ಕ್ಕಿನಿಂ (ಅಶ್ವತ್ಥಾಮ ಹೇಳಿದ- ನಾನು ಮೊದಲು ಕೋಪವನ್ನು ಮುಂದಿಟ್ಟು ಬಿಲ್ಲನ್ನು ಬಿಸುಡಲು ಯೋಚಿಸಿದೆನು) ಇನ್ನು ಉರ್ಕ್ಕಿನಿಂ ನಿನ್ನನೆ ಪೀನಂ(ಬಹಳ) ನಚ್ಚಿ ನಿನ್ನ ಆಳ್ದನೆ ನುಡಿಯಿಸೆ ನೀನು ಆಡಿದೈ (ಇನ್ನು ನಿನ್ನನ್ನು ನಿನ್ನ ಯಜಮಾನ ದುರ್ಯೋಧನನು ಪೂರ್ಣವಾಗಿ ನಂಬಿ ಮಾತನಾಡಿಸಲು, ನೀನು ಗರ್ವದಿಂದ ಮಾತನಾಡಿದೆ.) ಮಾತನಾಡಲ್ಕೆ ಎನಗೆ ಈ ಸೂೞಲ್ತು (ನಾನು ಮಾತನಾಡಲು ಇದು ನನಗೆ ಸಮಯವಲ್ಲ). ಸೇನಾಪ ಪದವಿಯೊಳಿಂ ನೀನೆ ನಿಲ್ (ಸೇನಾಪತಿಯ ಸ್ಥಾನದಲ್ಲಿ ನೀನೇ ನಿಲ್ಲು) ನಾಳೆ ದುರ್ಯೋಧನನಂ ಸಕ್ಕಿಟ್ಟು (ನಾಳೆ ದುರ್ಯೋಧನನನ್ನೇ ಸಾಕ್ಷಿಯಾಗಿಟ್ಟುಕೊಂಡು) ಮಾಱಾಂತ ಅದಟರೊಳ್ ಅಳವಂ (ಪರಾಕ್ರಮವನ್ನು) ತೋಱುವಂ ನೀನುಮ್ ಆನುಂ (ಪ್ರತಿಭಟಿಸಿದ ಶೂರರಲ್ಲಿ ನೀನೂ ನಾನೂ ನಮ್ಮ ಪರಾಕ್ರಮವನ್ನು ತೋರಿಸೋಣ)
ಪದ್ಯ-೪೫:ಅರ್ಥ: ಅಶ್ವತ್ಥಾಮ ಹೇಳಿದ- ನಾನು ಮೊದಲು ಕೋಪವನ್ನು ಮುಂದಿಟ್ಟು ಬಿಲ್ಲನ್ನು ಬಿಸುಡಲು ಯೋಚಿಸಿದೆನು. ಇನ್ನು ನಿನ್ನನ್ನು ನಿನ್ನ ಯಜಮಾನನು ಪೂರ್ಣವಾಗಿ ನಂಬಿ ಮಾತನಾಡಿಸಲು ನೀನು ಗರ್ವದಿಂದ ಮಾತನಾಡಿದೆ. ನಾನು ಮಾತನಾಡಲು ಇದು ನನಗೆ ಸಮಯವಲ್ಲ. ಸೇನಾಪತಿಯ ಸ್ಥಾನದಲ್ಲಿ ನೀನೇ ನಿಲ್ಲು; ನಾಳೆ ದುರ್ಯೋಧನನನ್ನೇ ಸಾಕ್ಷಿಯಾಗಿಟ್ಟುಕೊಂಡು ಪ್ರತಿಭಟಿಸಿದ ಶೂರರಲ್ಲಿ ನೀನೂ ನಾನೂ ನಮ್ಮ ಪರಾಕ್ರಮವನ್ನು ತೋರಿಸೋಣ.
ಕಂ|| ಸಾರಂಗಳ್ ನಿನ್ನ ಶರಾ
ಸಾರಂಗಳಸಾರಮುೞಿದ ಕೆಯ್ದುಗಳೆಂತುಂ|
ಸಾರಾಸಾರತೆಯಂ ನಾ
ಮಾರಯ್ವಮಿದಿರ್ಚಿದರಿನೃಪಧ್ವಜಿನಿಗಳೊಳ್|| ೪೬ ||
ಪದ್ಯ-೪೬:ಪದವಿಭಾಗ-ಅರ್ಥ:ಸಾರಂಗಳ್ ನಿನ್ನ ಶರಾಸಾರಂಗಳ್ (ನಿನ್ನ ಬಾಣದ ಮಳೆಯು ಶಕ್ತಿಯುಕ್ತವಾದುದು) ಅಸಾರಂ ಉೞಿದ ಕೆಯ್ದುಗಳು (ಉಳಿದ ನಿನ್ನದಲ್ಲದ ಆಯುಧಗಳು ಹೇಗೂ ಅಸಾರವಾದುವು) ಎಂತುಂ ಸಾರಾಸಾರತೆಯಂ ನಾಮ್ ಆರಯ್ವಂ (ವಿಚಾರ ಮಾಡೋಣ) ಈ ಸಾರಾಸಾರತೆಯನ್ನು- ವಿಚಾರ ಮಾಡೋಣ,) ಇದಿರ್ಚಿದ ಅರಿನೃಪ ಧ್ವಜಿನಿಗಳೊಳ್ (ನಮ್ಮನ್ನು ಎದುರಿಸಿದ ಶತ್ರುರಾಜರ ಸೈನ್ಯದಲ್ಲಿ)
ಪದ್ಯ-೪೬:ಅರ್ಥ: ನಿನ್ನ ಬಾಣದ ಮಳೆಯು ಶಕ್ತಿಯುಕ್ತವಾದುದು ಉಳಿದ ನಿನ್ನದಲ್ಲದ ಆಯುಧಗಳು ಹೇಗೂ ಅಸಾರವಾದುವು. (ಶಕ್ತಿಯಿಲ್ಲದುವು) ಈ ಸಾರಾಸಾರತೆಯನ್ನು ನಮ್ಮನ್ನು ಎದುರಿಸಿದ ಶತ್ರುರಾಜರ ಸೈನ್ಯದಲ್ಲಿ ವಿಚಾರ ಮಾಡೋಣ’.
ವ|| ಎಂಬುದುಂ ದುರ್ಯೋಧನ ಕರ್ಣನುಮನಶ್ವತ್ಥಾಮನುಮಂ ನಿಮ್ಮೊಳಗೆ ನೀಂ ಮುಳಿಯಲ್ವೇಡ ನಿಮ್ಮ ಪುರುಷಕಾರಮನೆ ಬಗೆದು ನೆಗೞ್ವುದಾನುಮೆನ್ನೆತ್ತಿ ಕೊಂಡ ಕಜ್ಮಮಂ ನೆಗೞ್ದಲ್ಲದಿರೆನೆಂದಾಯೆಡೆಯಿನೆೞ್ದು ನಾಯಕರಂ ಬೀಡಿಂಗೆ ಪೋಗಲ್ವೇೞ್ದಂಮನೆಯಂ ಪೊಕ್ಕು ಮಜ್ಜನ ಭೋಜನ ತಾಂಬೂಲಾನುಲೇಪನಂಗಳಿಂ ಸಂಗರ ಪರಿಶ್ರಮಮನಾಱಿಸಿ ಮಂತ್ರಶಾಲೆಗೆವಂದು ಶಲ್ಯ ಶಾರದ್ವತ ಕೃತವರ್ಮ ದುಶ್ಶಾಸನಾದಿಗಳು ಬರಿಸಿ ಯಥೋಚಿತ ಪ್ರತಿಪತ್ತಿಗಳಿಂದಿರಿಸಿ-
ವಚನ:ಪದವಿಭಾಗ-ಅರ್ಥ:ಎಂಬುದುಂ ದುರ್ಯೋಧನ ಕರ್ಣನುಮನು ಅಶ್ವತ್ಥಾಮನುಮಂ (ಎನ್ನಲು ದುರ್ಯೋಧನನು ಕರ್ಣನನ್ನೂ ಅಶ್ವತ್ಥಾಮನನ್ನೂ ಕುರಿತು ) ನಿಮ್ಮೊಳಗೆ ನೀಂ ಮುಳಿಯಲ್ವೇಡ (ನೀವು ನಿಮ್ಮನಿಮ್ಮಲ್ಲಿ ಕೋಪಿಸಬೇಡಿ;) ನಿಮ್ಮ ಪುರುಷಕಾರಮನೆ ಬಗೆದು ನೆಗೞ್ವುದು (ನಿಮ್ಮ ಪೌರುಷವನ್ನು ಯೋಚಿಸಿ ಕೆಲಸಮಾಡುವುದು) ಆನುಂ ಎನ್ನೆತ್ತಿ ಕೊಂಡ ಕಜ್ಮಮಂ ನೆಗೞ್ದಲ್ಲದೆ ಇರೆನು (ನಾನೂ ಅಂಗೀಕಾರಮಾಡಿದ ಕೆಲಸವನ್ನು ಮಾಡದೇ ಇರುವುದಿಲ್ಲ’) ಎಂದು ಆಯೆಡೆಯಿಂ ಎೞ್ದು ನಾಯಕರಂ (ಎಂದು ಆ ಸ್ಥಳದಿಂದ ಎದ್ದು) ಬೀಡಿಂಗೆ ಪೋಗಲ್ವೇೞ್ದಂ (ನಾಯಕರನ್ನು ಬೀಡಿಗೆ ಹೋಗಲು ಹೇಳಿದನು.) ಮನೆಯಂ ಪೊಕ್ಕು ಮಜ್ಜನ ಭೋಜನ ತಾಂಬೂಲ ಅನುಲೇಪನಂಗಳಿಂ (ತಾನು ಅರಮನೆಯನ್ನು ಪ್ರವೇಶಿಸಿ ಸಾನ್ನ ಭೋಜನ ತಾಂಬೂಲ ಅನುಲೇಪನಗಳಿಂದ) ಸಂಗರ ಪರಿಶ್ರಮಮನು ಆಱಿಸಿ (ಯುದ್ಧಾಯಾಸವನ್ನು ಹೋಗಲಾಡಿಸಿಕೊಂಡು) ಮಂತ್ರಶಾಲೆಗೆವಂದು ಶಲ್ಯ ಶಾರದ್ವತ ಕೃತವರ್ಮ ದುಶ್ಶಾಸನಾದಿಗಳು ಬರಿಸಿ ಯಥೋಚಿತ ಪ್ರತಿಪತ್ತಿಗಳಿಂದ ಇರಿಸಿ (ಮಂತ್ರಶಾಲೆಗೆ ಬಂದು ಶಲ್ಯ, ಶಕುನಿ, ಶಾರದ್ವತ, ಕೃತವರ್ಮ, ದುಶ್ಶ್ಶಾಸನನೇ ಮೊದಲಾದವರನ್ನು ಬರಮಾಡಿ ಯೋಗ್ಯವಾದ ಸತ್ಕಾರಗಳಿಂದ ಕುಳ್ಳಿರಿಸಿ)-

ಕರ್ಣನಿಗೆ ಸೇನಾದಿಪತಿ ಪಟ್ಟ[ಸಂಪಾದಿಸಿ]

ವಚನ:ಅರ್ಥ: ಅಶ್ವತ್ಥಾಮನುನಮ್ಮನ್ನು ಎದುರಿಸಿದ ಶತ್ರುರಾಜರ ಸೈನ್ಯದಲ್ಲಿ ವಿಚಾರ ಮಾಡೋಣ’, ಎನ್ನಲು ದುರ್ಯೋಧನನು ಕರ್ಣನನ್ನೂ ಅಶ್ವತ್ಥಾಮನನ್ನೂ ಕುರಿತು ‘ನೀವು ನಿಮ್ಮನಿಮ್ಮಲ್ಲಿ ಕೋಪಿಸಬೇಡಿ; ನಿಮ್ಮ ಪೌರುಷವನ್ನು ಯೋಚಿಸಿ ಕೆಲಸಮಾಡುವುದು. ನಾನೂ ಅಂಗೀಕಾರಮಾಡಿದ ಕೆಲಸವನ್ನು ಮಾಡದೇ ಇರುವುದಿಲ್ಲ’ ಎಂದು ಆ ಸ್ಥಳದಿಂದ ಎದ್ದು ನಾಯಕರನ್ನು ಬೀಡಿಗೆ ಹೋಗಲು ಹೇಳಿದನು. ತಾನು ಅರಮನೆಯನ್ನು ಪ್ರವೇಶಿಸಿ ಸಾನ್ನ ಭೋಜನ ತಾಂಬೂಲ ಅನುಲೇಪನಗಳಿಂದ ಯುದ್ಧಾಯಾಸವನ್ನು ಹೋಗಲಾಡಿಸಿಕೊಂಡು ಮಂತ್ರಶಾಲೆಗೆ ಬಂದು ಶಲ್ಯ, ಶಕುನಿ, ಶಾರದ್ವತ, ಕೃತವರ್ಮ, ದುಶ್ಶ್ಶಾಸನನೇ ಮೊದಲಾದವರನ್ನು ಬರಮಾಡಿ ಯೋಗ್ಯವಾದ ಸತ್ಕಾರಗಳಿಂದ ಕುಳ್ಳಿರಿಸಿ-
ಶಾ|| ಅಂತರ್ಭೇದದೊಳಂತು ಛಿದ್ರಿಸಿದರಾ ಗಾಂಗೇಯರಂ ಕೊಂದರಿಂ
ದಿಂತೀಗಳ್ ಪುಸಿದೀ ಘಟೋದ್ಭವನನಾ ಕೌಂತೇಯರಾಯಕ್ಕೆ ಗೆಂ|
ಟೆಂತೆಂತಕ್ಕುಮದುಂ ಮದುದ್ಯಮಮೆ ಪೇೞ್ಗಾ ವೈರಿಗಳ್ಗೊಲ್ವೆನಾ
ನೆಂತೊಳ್ಪಂ ತಳೆವಂತು ತೇಜಮೆನಗಿನ್ನೆಂತಕ್ಕುಮಿಂ ಪೇೞರೇ|| ೪೭ ||
ಪದ್ಯ-೪೭:ಪದವಿಭಾಗ-ಅರ್ಥ:ಅಂತರ್ ಭೇದದೊಳು ಅಂತು ಛಿದ್ರಿಸಿದರು ಆ ಗಾಂಗೇಯರಂ (ಪಾಂಡವರು ರಹಸ್ಯವಾದ ಭೇದೋಪಾಯದಿಂದ ಹಾಗೆ ಆ ಭೀಷ್ಮರನ್ನು ಒಡೆದು ಹಾಕಿದರು) ಕೊಂದರು ಇಂದಿ ಇಂತು ಈಗಳ್ ಪುಸಿದು ಈ ಘಟೋದ್ಭವನನ (ಈ ದಿನ ಹೀಗೆ ಸುಳ್ಳು ಹೇಳಿ ದ್ರೋಣಾಚಾರ್ಯರನ್ನು ಕೊಂದರು.) ಆ ಕೌಂತೇಯರ ಆಯಕ್ಕೆ(ಲಾಭಕ್ಕೆ- ಜಯಕ್ಕೆ) ಗೆಂಟು (ದೂರ, ತೊಂದರೆ) ಎಂತೆಂತಕ್ಕುಂ ಅದುಂ (ಈಗ ಆ ಪಾಂಡವರಿಗೆ ಜಯಕ್ಕೆ ಅಡ್ಡಿ ಹೇಗೆ, ರೀತಿ ಯಾವುದು ಎಂಬುದನ್ನು ತಿಳಿಸಿ.) ಮದುದ್ಯಮಮೆ - ಮತ್ ಉದ್ಯಮಮೆ ಪೇೞ್ಗೆ (ನನ್ನ ಉದ್ಯಮ ಅಥವಾ ಕಾರ್ಯ ಏನು ಹೇಳಿ) ಆ ವೈರಿಗಳ್ಗೆ ಒಲ್ವೆನು ಆನು ಎಂತು ಒಳ್ಪಂ ತಳೆವಂತು (ಆ ಶತ್ರುಗಳಲ್ಲಿ ನಾನು ಹೇಗೆ ಒಲಿಯಲಿ? ನನಗೆ ಹೇಗೆ ಸ್ನೇಹವುಂಟಾದೀತು. ಪಾಂಡವರ ವಿಷಯದಲ್ಲಿ ಒಳ್ಳೆಯ ಭಾವವು ಬರುವುದು ಹೇಗೆ ಸಾಧ್ಯ?) ತೇಜಮ್ ಎನಗೆ ಇನ್ನೆಂತಕ್ಕುಮ್ ಇಂ ಪೇೞರೇ (ಆ ಶತ್ರುಗಳಲ್ಲಿ ನನಗೆ ಹೇಗೆ ತೇಜಸ್ಸು (ಜಯ) ಬರುವುದು ಹೇಗೆ? ನೀವೇ ಹೇಳಿರಿ.)
ಪದ್ಯ-೪೭:ಅರ್ಥ: ಪಾಂಡವರು ರಹಸ್ಯವಾದ ಭೇದೋಪಾಯದಿಂದ ಹಾಗೆ ಆ ಭೀಷ್ಮರನ್ನು ಒಡೆದು ಹಾಕಿದರು. ಈ ದಿನ ಹೀಗೆ ಸುಳ್ಳು ಹೇಳಿ ದ್ರೋಣಾಚಾರ್ಯರನ್ನು ಕೊಂದರು. ಈಗ ಆ ಪಾಂಡವರಿಗೆ ಜಯಕ್ಕೆ ಅಡ್ಡಿ ಹೇಗೆ, ರೀತಿ ಯಾವುದು ಎಂಬುದನ್ನು ತಿಳಿಸಿ. ನನ್ನ ಉದ್ಯಮ ಅಥವಾ ಕಾರ್ಯ ಏನು ಹೇಳಿ, ಆ ಶತ್ರುಗಳಲ್ಲಿ ನನಗೆ ಹೇಗೆ ತೇಜಸ್ಸು (ಜಯ) ಬರುವುದು ಹೇಗೆ? ನೀವೇ ಹೇಳಿರಿ, ಎಂದನು ದುರ್ಯೋಧನ.
ವ|| ಎನೆ ಶಾರದ್ವತನಿಂತೆಂದಂ-
ವಚನ:ಪದವಿಭಾಗ-ಅರ್ಥ:ಎನೆ ಶಾರದ್ವತನು ಇಂತೆಂದಂ-
ವಚನ:ಅರ್ಥ:ವ|| ಎನ್ನಲು ಕೃಪನು ಹೀಗೆಂದನು-
ಚಂ|| ಚಲಮನೆ ಪೇೞ್ವೊಡಯ್ವರುಮನಯ್ದೞಯೂರೊಳೆ ಬಾೞಿಸೆಂದು ಮುಂ
ಬಲಿಬಲಸೂದನಂ ನುಡಿಯೆಯುಂ ಕುಡದಿರ್ದುದೆ ಪೇೞ್ಗುಮೆಯ್ದೆ ಮೆ|
ಯ್ಗಲಿತನಮಂ ಸರಿತ್ಸುತ ಘಟೋದ್ಭವರಂ ಪೊಣರ್ದಿಕ್ಕಿ ಗೆಲ್ದರೊಳ್
ಕಲಹಮೆ ಪೇೞ್ಗುಮಿಂ ಪೆಱತು ಪೇೞ್ವೆಡೆಯಾವುದೊ ಕೌರವೇಶ್ವರಾ|| ೪೮ ||
ಪದ್ಯ-೪೮:ಪದವಿಭಾಗ-ಅರ್ಥ:ಚಲಮನೆ ಪೇೞ್ವೊಡೆ ಅಯ್ವರುಮಂ ಅಯ್ದು ಅೞಯೂರೊಳೆ ಬಾೞಿಸೆಂದು (ಬಲವನ್ನು ಹೇಳುವುದಾದರೆ ಮೊದಲು ಕೃಷ್ಣನು ಬಂದು ಪಾಂಡವರು ಐವರನ್ನು ಅಯ್ದು ಕುಗ್ರಾಮಗಳಲ್ಲಿ ಬಾಳುವಹಾಗೆ ಮಾಡು) ಮುಂ ಬಲಿಬಲಸೂದನಂ ನುಡಿಯೆಯುಂ (ಕೃಷ್ಣನು ಮೊದಲು ಬಂದು ಹೇಳಿದರೂ) ಕುಡದಿರ್ದುದೆ ಪೇೞ್ಗುಮ್ (ಕೊಡದಿರುವುದೇ ಹೇಳುತ್ತದೆ.) ಎಯ್ದೆ ಮೆಯ್ಗಲಿತನಮಂ ಸರಿತ್ಸುತ ಘಟೋದ್ಭವರಂ ಪೊಣರ್ದು ಇಕ್ಕಿ ( ಭೀಷ್ಮದ್ರೋಣರನ್ನು ಪ್ರತಿಬಟಿಸಿ,ಯುದ್ಧದಲ್ಲಿ ಸಂಹರಿಸಿ) ಗೆಲ್ದರೊಳ್ ಕಲಹಮೆ ಪೇೞ್ಗುಮ್ (ಅವರನ್ನು ಗೆದ್ದ ಪಾಂಡವರಲ್ಲಿ ಯುದ್ಧಕ್ಕೆ ತೊಡಗಿರುವುದೇ ನಿನ್ನ ಪರಾಕ್ರಮವನ್ನು ಹೇಳುತ್ತದೆ) ಇಂ ಪೆಱತು ಪೇೞ್ವೆಡೆ ಯಾವುದೊ ಕೌರವೇಶ್ವರಾ ()
ಪದ್ಯ-೪೮:ಅರ್ಥ: ಬಲವನ್ನು ಹೇಳುವುದಾದರೆ ಮೊದಲು ಕೃಷ್ಣನು ಬಂದು ಪಾಂಡವರೈವರನ್ನು ಅಯ್ದು ಕುಗ್ರಾಮಗಳಲ್ಲಿ ಬಾಳುವಹಾಗೆ ಮಾಡು ಎಂದು ಹೇಳಿದರೂ ಕೊಡದಿರುವುದೇ ಹೇಳುತ್ತದೆ. ಭೀಷ್ಮದ್ರೋಣರನ್ನು ಪ್ರತಿಬಟಿಸಿ,ಯುದ್ಧದಲ್ಲಿ ಸಂಹರಿಸಿ ಅವರನ್ನು ಗೆದ್ದ ಪಾಂಡವರಲ್ಲಿ ಯುದ್ಧಕ್ಕೆ ತೊಡಗಿರುವುದೇ ನಿನ್ನ ಪರಾಕ್ರಮವನ್ನು ಹೇಳುತ್ತದೆ. ದುರ್ಯೋಧನಾ ಹೇಳುವುದು ಬೇರೆಯದು ಯಾವುದೋ? ಮತ್ತೇನಿದೆ?
ವ||ಅದಱಿಂದಮಿಂ ಪೆಱತು ಮಂತಣಕ್ಕೆಡೆಯಿಲ್ಲ ಮುನ್ನೆ ಚಕ್ಷುಷ್ಮನೆಂಬ ಮನುವಾದ ಕಾಲದೊಳ್ ಧರಾತಳಮನೋಲ್ಲಣಿಗೆಯಿಂ ಪಿೞವಂತೆ ತಳಮೆಯ್ದೆ ಸುರುಳ್ವಿನಂ ಮುಯ್ಯೇೞ್ ಸೂೞ್ ಪಿೞಿದ ಸಾಹಸಮುಮನಿಂದ್ರಂಗೆ ತನ್ನ ಸಹಜ ಕವಚಮಂ ತಿದಿಯುಗಿದು ಕೊಟ್ಟ ಚಾಗದ ಪೆಂಪುಮಂ ದಿಗ್ವಿಜಯಂಗೆಯ್ದು ಮಿಡಿದನಿತು ಬೇಗದಿಂ ಜರಾಸಂಧನಂ ನೆಲಕ್ಕಿಕ್ಕಿ ಪುಡಿಯೊಳ್ ಪೊರಳ್ಳಿ ಮಲ್ಲಯುದ್ಧದೊಳ್ ಪಿಡಿದಡಿಗೊತ್ತಿದ ಭುಜಬಲಭೀಮನಂ ಗೆಲ್ದ ಸಹಾಸಮುಮಂ ನಮ್ಮ ಪಡೆಯೆಲ್ಲಮಂ ತೊತ್ತೞದುೞದು ಕೊಲ್ವ ಘಟೋತ್ಕಚನೆಂಬ ರೂಕ್ಷ ರಾಕ್ಷಸನಂ ಕೊಂದ ಬೀರಮುಮನಾಲೋಕಾಂತರಂ ನೆಗೞೆ-
ವಚನ:ಪದವಿಭಾಗ-ಅರ್ಥ:ಅದಱಿಂದಂ ಇಂ ಪೆಱತು ಮಂತಣಕ್ಕೆ ಎಡೆಯಿಲ್ಲ (ಆದುದರಿಂದ ಇನ್ನು ಬೇರೆ ಮಂತ್ರಾಲೋಚನೆಗೆ ಅವಕಾಶವೇ ಇಲ್ಲ.) ಮುನ್ನೆ ಚಕ್ಷುಷ್ಮನೆಂಬ ಮನುವಾದ ಕಾಲದೊಳ್ (ಹಿಂದೆ ಚಕ್ಷುಷ್ಮನೆಂಬ ಮನುವಾದಕಾಲದಲ್ಲಿ) ಧರಾತಳಮನು ಒಲ್ಲಣಿಗೆಯಿಂ ಪಿೞವಂತೆ (ಭೂಮಂಡಲವನ್ನು ಒದ್ದೆಬಟ್ಟೆಯನ್ನು ಹಿಂಡುವಂತೆ) ತಳಮೆಯ್ದೆ ಸುರುಳ್ವಿನಂ (ಅಂಗೈಯಲ್ಲಿ ಸುರುಳಿಸುತ್ತಿಕೊಂಡು) ಮುಯ್ಯೇೞ್ ಸೂೞ್ ಪಿೞಿದ ಸಾಹಸಮುಮನು (ಇಪ್ಪತೊಂದು ಸಲ ಹಿಂಡಿದ ಸಾಹಸವೂ) ಇಂದ್ರಂಗೆ ತನ್ನ ಸಹಜ ಕವಚಮಂ ತಿದಿಯುಗಿದು ಕೊಟ್ಟ ಚಾಗದ ಪೆಂಪುಮಂ (ಇಂದ್ರನಿಗೆ ತನ್ನ ಸಹಜ ಕವಚವನ್ನು ತಿದಿಯ ಚರ್ಮವನ್ನು ಸುಲಿಯುವ ಹಾಗೆ ಅನಾಯಾಸವಾಗಿ ಸುಲಿದು ಕೊಟ್ಟ ತ್ಯಾಗದ ಆಧಿಕ್ಯವೂ,) ದಿಗ್ವಿಜಯಂಗೆಯ್ದು ಮಿಡಿದ ಅನಿತು ಬೇಗದಿಂ ಜರಾಸಂಧನಂ (ದಿಗ್ವಿಜಯವನ್ನು ಮಾಡಿ ಚಿಟಿಕೆ ಹಾಕುವಷ್ಟು ಅಲ್ಪಕಾಲದಲ್ಲಿ ಜರಾಸಂದನನ್ನು) ನೆಲಕ್ಕೆಇಕ್ಕಿ ಪುಡಿಯೊಳ್ ಪೊರಳ್ಳಿ (ನೆಲಕ್ಕೆ ಅಪ್ಪಳಿಸಿ ಹುಡಿಯಲ್ಲಿ ಹೊರಳಿಸಿ) ಮಲ್ಲಯುದ್ಧದೊಳ್ ಪಿಡಿದು ಅಡಿಗೊತ್ತಿದ (ಮಲ್ಲಯುದ್ಧದಲ್ಲಿ ಹಿಡಿದು ಕಾಲಿನ ಕೆಳಕ್ಕೆ ಅಮುಕಿದ) ಭುಜಬಲಭೀಮನಂ ಗೆಲ್ದ ಸಹಾಸಮುಮಂ (ಬಾಹುಬಲವುಳ್ಳ ಭೀಮನನ್ನು ಗೆದ್ದ ಸಾಹಸವೂ) ನಮ್ಮ ಪಡೆಯೆಲ್ಲಮಂ ತೊತ್ತೞದುೞದು ಕೊಲ್ವ ಘಟೋತ್ಕಚನೆಂಬ ರೂಕ್ಷ ರಾಕ್ಷಸನಂ ಕೊಂದ (ನಮ್ಮ ಸೈನ್ಯವೆಲ್ಲವನ್ನೂ ಸೊಪ್ಪಿನಮತೆ ತುಳಿದ ಘಟೋತ್ಕಚನೆಂಬ ಕ್ರೂರ ರಾಕ್ಷಸನನ್ನು ಕೊಂದ) ಬೀರಮುಮನು ಆಲೋಕಾಂತರಂ ನೆಗೞೆ ( ಕರ್ಣನ ಶೌರ್ಯವೂ ಲೋಕದ ಒಳಗೂ ಹೊರಗೂ ಪ್ರಸಿದ್ಧವಾಗಿದೆ. )-
ವಚನ:ಅರ್ಥ: ಆದುದರಿಂದ ಬೇರೆ ಮಂತ್ರಾಲೋಚನೆಗೆ ಅವಕಾಶವೇ ಇಲ್ಲ. ಹಿಂದೆ ಚಕ್ಷುಷ್ಮನೆಂಬ ಮನುವಾದಕಾಲದಲ್ಲಿ ಭೂಮಂಡಲವನ್ನು ಒದ್ದೆಬಟ್ಟೆಯನ್ನು ಹಿಂಡುವಂತೆ ಅಂಗೈಯಲ್ಲಿ ಸುರುಟಿಕೊಂಡು ಇಪ್ಪತೊಂದು ಸಲ ಹಿಂಡಿದ ಸಾಹಸವೂ, ಇಂದ್ರನಿಗೆ ತನ್ನ ಸಹಜ ಕವಚವನ್ನು ತಿದಿಯ ಚರ್ಮವನ್ನು ಸುಲಿಯುವ ಹಾಗೆ ಅನಾಯಾಸವಾಗಿ ಸುಲಿದು ಕೊಟ್ಟ ತ್ಯಾಗದ ಆಧಿಕ್ಯವೂ, ದಿಗ್ವಿಜಯವನ್ನು ಮಾಡಿ ಚಿಟಿಕೆ ಹಾಕುವಷ್ಟು ಅಲ್ಪಕಾಲದಲ್ಲಿ ಜರಾಸಂದನನ್ನು ನೆಲಕ್ಕೆ ಅಪ್ಪಳಿಸಿ ಹುಡಿಯಲ್ಲಿ ಹೊರಳಿಸಿ, ಮಲ್ಲಯುದ್ಧದಲ್ಲಿ ಹಿಡಿದು ಕಾಲಿನ ಕೆಳಕ್ಕೆ ಅಮುಕಿದ ಬಾಹುಬಲವುಳ್ಳ ಭೀಮನನ್ನು ಗೆದ್ದ ಸಾಹಸವೂ, ನಮ್ಮ ಸೈನ್ಯವೆಲ್ಲವನ್ನೂ ಸೊಪ್ಪಿನಮತೆ ತುಳಿದ ಘಟೋತ್ಕಚನೆಂಬ ಕ್ರೂರ ರಾಕ್ಷಸನನ್ನು ಕೊಂದ ಕರ್ಣನ ಶೌರ್ಯವೂ ಲೋಕದ ಒಳಗೂ ಹೊರಗೂ ಪ್ರಸಿದ್ಧವಾಗಿದೆ.
ಕಂ|| ನೆಗಳ್ದಕ ಲಿತನದ ಚಾಗದ
ಬಗೆ ತನ್ನೊಳ್ ನೆಗಳ್ದೆವೆತ್ತು ನೆಗಳ್ದಿರೆ ಸಂದಂ|
ಗಗಣಿತ ಗುಣಂಗೆ ಕರ್ಣಂ
ಗೊಗಸುಗುಮೇ ಕಟ್ಟು ಬೀರಪಟ್ಟಮನರಸಾ|| ೪೯||
ಪದ್ಯ-೪೯:ಪದವಿಭಾಗ-ಅರ್ಥ: ನೆಗಳ್ದ ಕಲಿತನದ ಚಾಗದ ಬಗೆ ತನ್ನೊಳ್ ನೆಗಳ್ದೆವೆತ್ತು ನೆಗಳ್ದಿರೆ ( ಪ್ರಸಿದ್ಧವಾದ ಶೌರ್ಯದ ತ್ಯಾಗದ ರೀತಿಗಳೆರಡೂ ಅವನಲ್ಲಿ ಖ್ಯಾತಿಗೊಂಡಿರಲು,) ಸಂದಂಗೆ ಅಗಣಿತ ಗುಣಂಗೆ (ಹೀಗೆ ಪಡೆದ ಅಸಂಖ್ಯಾತಗುಣಗಳಿಂದ ಕೂಡಿದವನಿಗೆ,) ಕರ್ಣಂಗೆ ಒಗಸುಗುಮೇ (ಕರ್ಣನಿಗೆ ಇದು ಅತಿಶಯವೇ!) ಕಟ್ಟು ಬೀರಪಟ್ಟಮನು ಅರಸಾ (ರಾಜನೇ ಅವನಿಗೆ ವೀರ ಪಟ್ಟವನ್ನು ಕಟ್ಟು, ಎಂದನು ಕೃಪ).
ಪದ್ಯ-೪೯:ಅರ್ಥ: ಪ್ರಸಿದ್ಧವಾದ ಶೌರ್ಯದ ತ್ಯಾಗದ ರೀತಿಗಳೆರಡೂ ಅವನಲ್ಲಿ ಖ್ಯಾತಿಗೊಂಡಿರಲು, ಹೀಗೆ ಅಸಂಖ್ಯಾತಗುಣಗಳಿಂದ ಕೂಡಿದವನಿಗೆ, ಕರ್ಣನಿಗೆ ಇದು ಅತಿಶಯವೇ! ರಾಜನೇ ಅವನಿಗೆ ವೀರ ಪಟ್ಟವನ್ನು ಕಟ್ಟು, ಎಂದನು ಕೃಪ
ಕಂ||ರಥಯಾನ ಪಾತ್ರದಿಂ ಪರ
ರಥಿನೀ ಜಳನಿಧಿಯ ಪಾರಮಂಸಲ್ವ ಜಗ|
ತ್ಪ್ರಿಥಿತ ಭುಜದರ್ಪದಿಂದತಿ
ರಥಮಥನಂ ಕರ್ಣಧಾರನಲ್ಲನೇ ಕರ್ಣಂ ||೫೦||
ಪದ್ಯ-೫೦:ಪದವಿಭಾಗ-ಅರ್ಥ:ರಥಯಾನ ಪಾತ್ರದಿಂ (ರಥವೆಂಬ ನಾವೆಯಿಂದ) ಪರರಥಿನೀ ಜಳನಿಧಿಯ (ಶತ್ರುಸೇನಾ ಸಮುದ್ರದ) ಪಾರಮಂ ಸಲ್ವ (ಆಚೆಯ ದಡವನ್ನು ಸೇರುವ) ಜಗತ್ಪ್ರಿಥಿತ (ಜಗತ್ ಪ್ರಸಿದ್ಧವಾದ) ಭುಜದರ್ಪದಿಂದ ಅತಿರಥಮಥನಂ (ಬಾಹುಬಲ ಗರ್ವದವನಾದ ಅತಿರಥರನ್ನು ಧ್ವಂಸಮಾಡಿದವನಾದ ಶೂರನಾದ) ಕರ್ಣಧಾರನಲ್ಲನೇ ಕರ್ಣಂ (ನಾವೆಯನ್ನು ನೆಡೆಯಿಸುವ ಕರ್ಣನಲ್ಲವೇ! ಕರ್ಣ! ನಿಜಕ್ಕೂ ಹೌದು!)
ಪದ್ಯ-೫೦:ಅರ್ಥ:ರಥವೆಂಬ ನಾವೆಯಿಂದ ಶತ್ರುಸೇನಾ ಸಮುದ್ರದ ಆಚೆಯ ದಡವನ್ನು ತನ್ನ ಭುಜದಾಟಿಸಬಲ್ಲ ಜಗತ್ ಪ್ರಸಿದ್ಧವಾದ ಬಾಹುಬಲ ಗರ್ವದವನಾದ ಅತಿರಥರನ್ನು ಧ್ವಂಸಮಾಡಿದವನಾದವನೂ ನಾವೆಯನ್ನು ನೆಡೆಯಿಸುವ ಕರ್ಣನಲ್ಲವೇ! ಕರ್ಣ! ನಿಜಕ್ಕೂ ಹೌದು!
ವ||ಎಂದು ನುಡಿದ ಕೃಪನ ಮಾತಂ ಮನದೆಗೊಂಡು ಕರ್ಣನ ಮೊಗಮಂ ನೋಡಿ-
ವಚನ:ಪದವಿಭಾಗ-ಅರ್ಥ:ಎಂದು ನುಡಿದ ಕೃಪನ ಮಾತಂ ಮನದೆಗೊಂಡು ಕರ್ಣನ ಮೊಗಮಂ ನೋಡಿ-
ವಚನ:ಅರ್ಥ:ಎಂದು ಹೇಳಿದ ಕೃಪನ ಮಾತನ್ನು ಮನಸಾರೆ ಒಪ್ಪಿ ಕರ್ಣನ ಮುಖವನ್ನು ನೋಡಿ -
ಚಂ||ನಡುಗುವುದುಂತೆ ಪಾಂಡವಬಲಂ ನಿನಗರ್ಜುನನೆಂಬನೆಂದುಮು
ರ್ಕುಡುಗಿ ಸುರುಳ್ವನೀಯೆಡೆಗೆ ಪೇಳ್ ಪೆರರಾರ್ ದೊರೆ ವೀರವಟ್ಟವಂ|
ತಡೆಯದೆ ಕಟ್ಟಿ ವೈರಿಗಳ ಪಟ್ಟನೆ ಪಾರಿಸಿ ಕಾವುದೆನ್ನ ಬೆ
ಳ್ಗೊಡೆಯುಮುನೆನ್ನ ಪಟ್ಟಮುಮನೆನ್ನುಮನಂಗಮಹೀತಳಾಧಿಪಾ||೫೧||51||
ಪದ್ಯ-೫೧:ಪದವಿಭಾಗ-ಅರ್ಥ:ನಡುಗುವುದು ಉಂತೆ ಪಾಂಡವಬಲಂ (ಪಾಂಡವಸೈನ್ಯವು ನಿನಗೆ ಸುಮ್ಮನೆ ನಡುಗುತ್ತದೆ) ನಿನಗೆ ಅರ್ಜುನನೆಂಬನು ಎಂದುಂ ಉರ್ಕುಡುಗಿ ಸುರುಳ್ವನು (ಅರ್ಜುನನೆಂಬುವನು ಯಾವಾಗಲೂ ಉತ್ಸಾಹಶೂನ್ಯನಾಗಿ ಮುದುಡಿಕೊಳ್ಳತ್ತಾನೆ.) ಈ ಯೆಡೆಗೆ ಪೇಳ್ ಪೆರರು ಆರ್ ದೊರೆ (ಈ ಸ್ಥಾನಕ್ಕೆ ಮತ್ತಾರು ಅರ್ಹರು! ಹೇಳು.) ವೀರವಟ್ಟವಂ ತಡೆಯದೆ ಕಟ್ಟಿ ವೈರಿಗಳ ಪಟ್ಟನೆ ಪಾರಿಸಿ (ವೀರಪಟ್ಟವನ್ನು ತಡಮಾಡದೆ ಕಟ್ಟಿಕೊಂಡು ವೈರಿಗಳನ್ನು ಪಟ್ಟನೆ ಹಾರಿಹೋಗುವಂತೆ ಮಾಡಿ) ಕಾವುದು ಎನ್ನ ಬೆಳ್ಗೊಡೆಯುಮುಂ ಎನ್ನ ಪಟ್ಟಮುಂ ಎನ್ನುಮಂ ()ನನ್ನ ಶ್ವೇತಚ್ಛತ್ರವನ್ನೂ ನನ್ನ ರಾಜ ಪಟ್ಟವನ್ನೂ, ನನ್ನನ್ನೂ ಕಾಪಾಡಬೇಕು ಅಂಗಮಹೀತಳಾಧಿಪಾ (<- ಕರ್ಣನೇ)
ಪದ್ಯ-೫೧:ಅರ್ಥ: ಕರ್ಣಾ ಪಾಂಡವಸೈನ್ಯವು ನಿನಗೆ ಸುಮ್ಮನೆ ನಡುಗುತ್ತದೆ. ಅರ್ಜುನನೆಂಬುವನು ಯಾವಾಗಲೂ ಉತ್ಸಾಹಶೂನ್ಯನಾಗಿ ಮುದುಡಿಕೊಳ್ಳತ್ತಾನೆ. ಈ ಸ್ಥಾನಕ್ಕೆ ಮತ್ತಾರು ಅರ್ಹರು! ಹೇಳು. ವೀರಪಟ್ಟವನ್ನು ತಡಮಾಡದೆ ಕಟ್ಟಿಕೊಂಡು ವೈರಿಗಳನ್ನು ಪಟ್ಟನೆ ಹಾರಿಹೋಗುವಂತೆ ಮಾಡಿ, ನನ್ನ ಶ್ವೇತಚ್ಛತ್ರವನ್ನೂ ನನ್ನ ರಾಜಪಟ್ಟವನ್ನೂ, ನನ್ನನ್ನೂ ಕಾಪಾಡಬೇಕು, ಎಂದನು ದುರ್ಯೋಧನ.
ವ||ಎಂಬುದುಂ ಅಂಗಾಧಿರಾಜಂ ನಿನ್ನಾಳ್ಗಳೊಳಾನಾರ ದೊರೆಯನಗೆ ಕಾರುಣ್ಯಂಗೆಯ್ವೆಯಾಗಿ ಬೆಸಿಸಿದ ನಿನ್ನ ದಯೆಗೆಯ್ದುವೀರವಟ್ಟಮೆಂಬುದೆನಗೆಣ್ಬಲರ ಪಟ್ಟಮೆಂಬುದಂ ಬದ್ದವಣಂ ಬಾಜಿಸಿಕರ್ಣನಂ ಕನಕಪೀಠದೊಳ್ ಕುಳ್ಳಿರಿಸಿ-
ವಚನ:ಪದವಿಭಾಗ-ಅರ್ಥ:ಎಂಬುದುಂ ಅಂಗಾಧಿರಾಜಂ (ಎನ್ನಲು ಕರ್ಣನು) ನಿನ್ನಾಳ್ಗಳೊಳು ಆನು ಆರ ದೊರೆ ಯನಗೆ (ನಿನ್ನ ಸೇವಕರಲ್ಲಿ ನನಗೆ ಯಾರು ಸಮಾನ?) ಕಾರುಣ್ಯಂ ಗೆಯ್ವೆಯಾಗಿ ಬೆಸಿಸಿದ ನಿನ್ನ ದಯೆಗೆಯ್ದು ವೀರವಟ್ಟಮೆಂಬುದು(ನೀನು ಕರುಣೆಯಿಂದ ದಯಮಾಡಿ ಆಜ್ಞೆಮಾಡಿಕೊಟ್ಟ ಈ ಪಟ್ಟವೆಂಬುದು) ಎನಗೆ ಎಣ್ಬಲರ ಪಟ್ಟಮೆಂಬುದಂ(ನನ್ನ ಎಂಟು ಬೆರಳಿನ ಅಗಲವಿರುವ ನನ್ನ ಹಣೆಗೆ ಕಟ್ಟುವ ಪಟ್ಟ ಎಂದನು.) ಬದ್ದವಣಂ ಬಾಜಿಸಿ ಕರ್ಣನಂ ಕನಕಪೀಠದೊಳ್ ಕುಳ್ಳಿರಿಸಿ (ಮಂಗಳವಾದ್ಯನ್ನು ಬಾರಿಸಿ ಕರ್ಣನನ್ನು ಚಿನ್ನದ ಪೀಠದಲ್ಲಿ ಕುಳ್ಳಿರಿಸಿ)-
ವಚನ:ಅರ್ಥ: ಎನ್ನಲು ಕರ್ಣನು ದುರ್ಯೋಧನಾ ನಿನ್ನ ಸೇವಕರಲ್ಲಿ ನನಗೆ ಯಾರು ಸಮಾನ? ಯಾರೂ ಇಲ್ಲ! ನೀನು ಕರುಣೆಯಿಂದ ದಯಮಾಡಿ ಆಜ್ಞೆಮಾಡಿಕೊಟ್ಟ ಈ ಪಟ್ಟವೆಂಬುದು ನನ್ನ ಎಂಟು ಬೆರಳಿನ ಅಗಲವಿರುವ ನನ್ನಹಣೆಗೆ ಕಟ್ಟುವ ಪಟ್ಟ ಎಂದನು. ಮಂಗಳವಾದ್ಯನ್ನು ಬಾರಿಸಿ ಕರ್ಣನನ್ನು ಚಿನ್ನದ ಪೀಠದಲ್ಲಿ ಕುಳ್ಳಿರಿಸಿ -
ಮೊರೆಯೆ ಪರೆಗಳ್ ಭೋರೆಂದೋರಂತೆ ಮಂಗಳಗೀತಿಗಳ್
ನೆರೆಯೆ ಗಣಿಕಾನೀಕಂ ಬಂದಾಡೆ ಪುಣ್ಯ ಜಲಂಗಳಿಂ|
ತರಿಸಿ ಮಿಸುತ್ತಾಗಳ್ ತಾಂ ತನ್ನ ಕೈಯೊಳೆ ಕಟ್ಟಿದಂ
ಕುರುಪರಿವೃಢಂ ಕರ್ಣಂಗಾ ವೀರ ಪಟ್ಟದ ಪಟ್ಟಮಂ ||೫೨||
ಪದ್ಯ-೫೨:ಪದವಿಭಾಗ-ಅರ್ಥ:ಮೊರೆಯೆ ಪರೆಗಳ್ ಭೋರೆಂದು ಓರಂತೆ ಮಂಗಳಗೀತಿಗಳ್ ನೆರೆಯೆ (ತಮ್ಮಟೆಗಳು ಒಂದೇಸಮನೆ ಭೋರೆಂದು ಸದ್ದುಮಾಡುತ್ತಿರಲು,ಮಂಗಳಗೀತೆಗಳು ಅದರ ಜೊತೆ ಸೇರಲು,) ಗಣಿಕಾನೀಕಂ ಬಂದು ಆಡೆ, ಪುಣ್ಯ ಜಲಂಗಳಿಂ ತರಿಸಿ ಮಿಸುತ್ತಾಗಳ್ (ಮೀಸು - ಸ್ನಾನ ಮಾಡಿಸು) (ವೇಶ್ಯೆರ ಸಮೂಹವು ಬಂದು ನೃತ್ಯಮಾಡುತ್ತಿರಲು, ಪುಣ್ಯತೀರ್ಥಗಳನ್ನು ತರಿಸಿ ಕರ್ಣನಿಗೆ ಸ್ನಾನಮಾಡಿಸಿ,) ತಾಂ ತನ್ನ ಕೈಯೊಳೆ ಕಟ್ಟಿದಂ ಕುರುಪರಿವೃಢಂ (ಕೌರವಶ್ರೇಷ್ಟದುರ್ಯೋಧನನು) ಕರ್ಣಂಗೆ ಆ ವೀರ ಪಟ್ಟದ ಪಟ್ಟಮಂ.(ಆಗ ತನ್ನ ಕೈಯಿಂದಲೇ ವೀರಪಟ್ಟವನ್ನು ಅವನ ಹಣೆಗೆ ಕಟ್ಟಿದನು)
ಪದ್ಯ-೫೨:ಅರ್ಥ: ತಮ್ಮಟೆಗಳು ಒಂದೇಸಮನೆ ಭೋರೆಂದು ಸದ್ದುಮಾಡುತ್ತಿರಲು,ಮಂಗಳಗೀತೆಗಳು ಅದರ ಜೊತೆ ಸೇರಲು, ವೇಶ್ಯೆರ ಸಮೂಹವು ಬಂದು ನೃತ್ಯಮಾಡುತ್ತಿರಲು, ಕೌರವಶ್ರೇಷ್ಟದುರ್ಯೋಧನನು ಪುಣ್ಯತೀರ್ಥಗಳನ್ನು ತರಿಸಿ ಕರ್ಣನಿಗೆ ಸ್ನಾನಮಾಡಿಸಿ ಆಗ ತನ್ನ ಕೈಯಿಂದಲೇ ವೀರಪಟ್ಟವನ್ನು ಅವನ ಹಣೆಗೆ ಕಟ್ಟಿದನು.
ವ|| ಅಂತು ವೀರಪಟ್ಟಮಾ ವಿರನ ನೊಸಲೊಳಸದಳಮೆಸೆದುಪಾಶ್ರಯಂಬಡೆಯೆ ಕಟ್ಟಿ ನಿಜಾಂತಃಪುರ ಪರಿವಾರಂ ಬೆರಸು ಸೇಸೆಯಿಕ್ಕಿ ತನ್ನ ತುಡುವ ತುಡಿಗೆಗಳೆಲ್ಲಮಂ ನೆರೆಯೆ ತುಡಿಸಿ ದೇವಸಬಳದ ಹದಿನೆಂಟುಕೋಟಿ ಪೊನ್ನುಮುಂ ತರಿಸಿ ಕೊಟ್ಟು, ಮಣಿಮಯಮಂಡನಾಯೋಗದೊಳ್ ನೆರೆಯೆ ಪಣ್ಣಿದ ಮದಾಂಧಸಿಂಧುರಮನೇರಲ್ ತರಿಸಿಕೊಟ್ಟು ಬೀಡಿಂಗೆ ಪೋಗೆನೆ , ಪೋಗೆ, ಹಸ್ತಿಯ ಬೆಂಗೆ ವಂದುಸುತ್ತಿಳಿದು ಪಗಲಂ ತಡವಿಕ್ಕಿದಂತೆ ಬೆಳಗುವ ಕೈದೀವಿಗೆಗಳ ಬೆಳಗೆ ಬೆಳಗಾಗೆ ತಲೆಯೊಳ್ ನಾಲಗೆಯುಳ್ಳ ಬೂತುಗಳ್ಗೆಲ್ಲಮಿಲ್ಲೆನ್ನದೀಯುತ್ತಂ ನಿಜ ನಿವಾಸಕ್ಕೆ ವಂದು, ನಿತ್ಯದಾನಕ್ಕೆಂದು ನಿಯೋಗಿಗಳ್ ತಂದು ಪುಂಜಿಸಿದ ಪಂಚರತ್ನದ ಪೊನ್ನರಾಶಿಗಳನರ್ಥಿ ಜನಕ್ಕೆ ಗೋಸನೆಯಿಟ್ಟು, ಕುಡುವೇಳ್ದು ನಾಯಕರ್ಗೆಲ್ಲಮುಡಲುಂತುಡಲುಂ ಕೊಟ್ಟು ನೇಸರ್ ಮೂಡುವಾಗಳ್ ತಮ್ಮ ಪಡೆಯನೀ ಮಾಲ್ಕೆಯೊಳೊಡ್ಡಿಮೆಂದು ಪಡೆವಳರ್ಗೆ ಬೆಸಸಿ ನಿಜವಿಜಯತುರಗರಥಂಗಳನರ್ಚಿಸಿ, ಪೊಡವಟ್ಟು ದರ್ಭಾಸ್ತರಣದೊಳಾಯಿರುಳಂಕಳೆದಾಗಳ್-
ವಚನ:ಪದವಿಭಾಗ-ಅರ್ಥ:ಅಂತು ವೀರಪಟ್ಟಮು ಆ ವಿರನ ನೊಸಲೊಳು ( ಹಾಗೆ ಆ ವೀರಪಟ್ಟವು ಆ ವೀರನ ಹಣೆಯಲ್ಲಿ) ಅಸದಳಮೆಸೆದು ಉಪಾಶ್ರಯಂಬಡೆಯೆ ಕಟ್ಟಿ (ಅತಿಶಯವಾಗಿ ಪ್ರಕಾಶಿಸಿ ವಿಶೇಷಾಶ್ರಯವನ್ನು ಪಡೆಯುವಂತೆ ಕಟ್ಟಿ) ನಿಜಾಂತಃಪುರ ಪರಿವಾರಂ ಬೆರಸು ಸೇಸೆಯಿಕ್ಕಿ (ತನ್ನ ಅಂತ್ಃಪುರ ಪರಿವಾರದೊಡನೆ ಕೂಡಿ ಅಕ್ಷತೆಯಿಂದ ಹರಸಿ) ತನ್ನ ತುಡುವ ತುಡಿಗೆಗಳೆಲ್ಲಮಂ ನೆರೆಯೆ ತುಡಿಸಿ (ತಾನು ತೊಡುವ ಆಭರಣಗಳೆಲ್ಲವನ್ನೂ ಅವನಿಗೆ ತುಂಬ ತೊಡಿಸಿ,) ದೇವಸಬಳದ ಹದಿನೆಂಟುಕೋಟಿ ಪೊನ್ನುಮುಂ ತರಿಸಿ ಕೊಟ್ಟು,(ದೇವತೆಗಳ ಅಳತೆಯಲ್ಲಿ ಹದಿನೆಂಟು ಕೋಟಿ ಸುವರ್ಣವನ್ನು ತರಿಸಿ ಕೊಟ್ಟ,) ಮಣಿಮಯ ಮಂಡನಾಯೋಗದೊಳ್ ನೆರೆಯೆ (ರತ್ನಖಚಿತವಾದ ಅಲಂಕಾರಗಳಿಂದ ಪೂರ್ಣವಾಗಿ ಸಿದ್ಧಪಡಿಸಿದ ) ಪಣ್ಣಿದ ಮದಾಂಧಸಿಂಧುರಮನು ಏರಲ್ ತರಿಸಿಕೊಟ್ಟು (ಪೂರ್ಣವಾಗಿ ಸಿದ್ಧಪಡಿಸಿದ ಮದ್ದಾನೆಯನ್ನು ಏರುವುದಕ್ಕೆ ತರಿಸಿಕೊಟ್ಟು) ಬೀಡಿಂಗೆ ಪೋಗೆನೆ , ಪೋಗೆ, (ಬೀಡಿಗೆ/ ವಸತಿಗೆ ಹೋಗು ಎಂದು ಕಳುಹಿಸಿಕೊಟ್ಟನು. ಹೋಗಲು,) ಹಸ್ತಿಯ ಬೆಂಗೆವಂದು ಸುತ್ತಿಳಿದು (ಕರ್ಣನು ಆನೆಯ ಬೆನ್ನಿಗೆ ಸುತ್ತಲೂ ವ್ಯಾಪಿಸಿ) ಪಗಲಂ ತಡವಿಕ್ಕಿದಂತೆ ಬೆಳಗುವ ಕೈದೀವಿಗೆಗಳ ಬೆಳಗೆ ಬೆಳಗಾಗೆ (ಹಗಲನ್ನು ಇನ್ನೂ ದೊಡ್ಡದು ಮಾಡಿದ ಹಾಗೆ ಬೆಳಗುತ್ತಿರುವ ಕೈದೀವಟಿಗೆಗಳ ಬೆಳಕೇ ಬೆಳಕಾಗಿರಲು) ತಲೆಯೊಳ್ ನಾಲಗೆಯುಳ್ಳ ಬೂತುಗಳ್ಗೆಲ್ಲಂ (ಮಿ) ಇಲ್ಲೆನ್ನದೆ ಈಯುತ್ತಂ (ತಲೆಯಲ್ಲಿ ನಾಲಗೆ ಇರುವ ಎಲ್ಲಾ ಪ್ರಾಣಿಗಳಿಗೂ ಇಲ್ಲ ಎನ್ನದೆ ದಾನ ಮಾಡುತ್ತಾ) ನಿಜ ನಿವಾಸಕ್ಕೆ ವಂದು, (ತನ್ನ ಮನೆಗೆ ಬಂದನು. ಬಂದು-) ನಿತ್ಯದಾನಕ್ಕೆಂದು ನಿಯೋಗಿಗಳ್ ತಂದು ಪುಂಜಿಸಿದ ಪಂಚರತ್ನದ ಪೊನ್ನರಾಶಿಗಳನು ಅರ್ಥಿ ಜನಕ್ಕೆ (ನಿಯೋಗಿಗಳು ತಂದು ರಾಶಿ ಹಾಕಿಸಿದ ಪಂಚರತ್ನದ ಮತ್ತು ಚಿನ್ನದ ರಾಸಿಗಳನ್ನು ಬೇಡುವವರಿಗೆ) ಗೋಸನೆಯಿಟ್ಟು, (ಸಾರಿಸಿ, ಘೋಷಣೆ- ಕೂಗಿ ಕರೆದು) ಕುಡುವೇಳ್ದು (ದಾನ ಮಾಡಲು ಹೇಳಿ) ನಾಯಕರ್ಗೆಲ್ಲಮು ಉಡಲುಂ ತುಡಲುಂ ಕೊಟ್ಟು (ನಾಯಕರುಗಳಿಗೆಲ್ಲಾ ಉಡಲು ತೊಡಲು ಕೊಟ್ಟು ) ನೇಸರ್ ಮೂಡುವಾಗಳ್ ತಮ್ಮ ಪಡೆಯನೀ ಮಾಲ್ಕೆಯೊಳು ಒಡ್ಡಿಮೆಂದು (ಸೂರ್ಯೋದಯವಾದಾಗ ನಮ್ಮ ಸೈನ್ಯವನ್ನು ಈ ಕ್ರಮದಲ್ಲಿ ರಚಿಸಿ ಎಂದು) ಪಡೆವಳರ್ಗೆ ಬೆಸಸಿ (ನಾಯಕರಿಗೆ ಆಜ್ಞೆಮಾಡಿ) ನಿಜ ವಿಜಯತುರಗ ರಥಂಗಳನು ಅರ್ಚಿಸಿ, ಪೊಡವಟ್ಟು (ತನ್ನ ವಿಜಯಶಾಲಿಯಾದ ಕುದುರೆ ಮತ್ತು ರಥಗಳನ್ನು ಪೂಜಿಸಿ ನಮಿಸಿ) ದರ್ಭಾಸ್ತರಣದೊಳು ಆ ಯಿರುಳಂ ಕಳೆದಾಗಳ್ (ದರ್ಭಾಸನದಲ್ಲಿ ರಾತ್ರಿಯನ್ನು ಕಳೆದನು. ಆಗ)-
ವಚನ:ಅರ್ಥ: ಹಾಗೆ ಆ ವೀರಪಟ್ಟವು ಆ ವೀರನ ಹಣೆಯಲ್ಲಿ ಅತಿಶಯವಾಗಿ ಪ್ರಕಾಶಿಸಿ ವಿಶೇಷಾಶ್ರಯವನ್ನು ಪಡೆಯುವಂತೆ ಕಟ್ಟಿ ತನ್ನ ಅಂತ್ಃಪುರ ಪರಿವಾರದೊಡನೆ ಕೂಡಿ ಅಕ್ಷತೆಯಿಂದ ಹರಸಿ ತಾನು ತೊಡುವ ಆಭರಣಗಳೆಲ್ಲವನ್ನೂ ಅವನಿಗೆ ತುಂಬ ತೊಡಿಸಿದನು. ದೇವತೆಗಳ ಅಳತೆಯಲ್ಲಿ ಹದಿನೆಂಟು ಕೋಟಿ ಸುವರ್ಣವನ್ನು ತರಿಸಿ ಕೊಟ್ಟನು. ರತ್ನಖಚಿತವಾದ ಅಲಂಕಾರಗಳಿಂದ ಪೂರ್ಣವಾಗಿ ಸಿದ್ಧಪಡಿಸಿದ ಮದ್ದಾನೆಯನ್ನು ಏರುವುದಕ್ಕೆ ತರಿಸಿಕೊಟ್ಟು, ಬೀಡಿಗೆ/ ವಸತಿಗೆ ಹೋಗು ಎಂದು ಕಳುಹಿಸಿಕೊಟ್ಟನು. ಕರ್ಣನು ಆನೆಯ ಬೆನ್ನಿಗೆ ಸುತ್ತಲೂ ವ್ಯಾಪಿಸಿ ಹಗಲನ್ನು ಇನ್ನೂ ದೊಡ್ಡದು ಮಾಡಿದ ಹಾಗೆ ಬೆಳಗುತ್ತಿರುವ ಕೈದೀವಟಿಗೆಗಳ ಬೆಳಕೇ ಬೆಳಕಾಗಿರಲು, ತಲೆಯಲ್ಲಿ ನಾಲಗೆ ಇರುವ ಎಲ್ಲಾ ಪ್ರಾಣಿಗಳಿಗೂ ಇಲ್ಲ ಎನ್ನದೆ ದಾನ ಮಾಡುತ್ತಾ ತನ್ನ ಮನೆಗೆ ಬಂದನು. ನಿಯೋಗಿಗಳು ತಂದು ರಾಶಿ ಹಾಕಿಸಿದ ಪಂಚರತ್ನದ ಮತ್ತು ಚಿನ್ನದ ರಾಸಿಗಳನ್ನು ಬೇಡುವವರಿಗೆ ಕೂಗಿ ಕರೆದು ದಾನ ಮಾಡಲು ಹೇಳಿ ನಾಯಕರುಗಳಿಗೆಲ್ಲಾ ಉಡಲು ತೊಡಲು ಕೊಟ್ಟು ಸೂರ್ಯೋದಯವಾದಾಗ ನಮ್ಮ ಸೈನ್ಯವನ್ನು ಈ ಕ್ರಮದಲ್ಲಿ ರಚಿಸಿ ಎಂದು ನಾಯಕರಿಗೆ ಆಜ್ಞೆಮಾಡಿ ತನ್ನ ವಿಜಯಶಾಲಿಯಾದ ಕುದುರೆ ಮತ್ತು ರಥಗಳನ್ನು ಪೂಜಿಸಿ ನಮಿಸಿ ದರ್ಭಾಸನದಲ್ಲಿ ರಾತ್ರಿಯನ್ನು ಕಳೆದನು. ಆಗ-

ಯುದ್ಧಕೆ ಹೊರಡುವ ಮೊದಲು, ಕರ್ಣನು ಭೀಷ್ಮರನ್ನು ಭೇಟಿಮಾಡಿ ಕ್ಷಮೆಯಾಚಿಸುವುದು[ಸಂಪಾದಿಸಿ]

ಕಂ||ಉದಯಗಿರಿ ತಟದೊಳುದಯಿಸು
ವದಿತಿಪ್ರಿಯಪುತ್ರನಲ್ಲದಿತ್ತೋರ್ವಂ ಭಾ|
ನು ದಲೊಗೆದನೆನಿಪ ತೇಜದ
ಪೊದಳ್ಕಿಯಿಂ ಜನದ ಮನಮನಜೆದಂ ಕರ್ಣಂ||೫೩ ||
ಪದ್ಯ-೫೩:ಪದವಿಭಾಗ-ಅರ್ಥ:ಉದಯಗಿರಿ ತಟದೊಳು ಉದಯಿಸುವ ಅದಿತಿಪ್ರಿಯ ಪುತ್ರನಲ್ಲದೆ (ಉದಯಪರ್ತದ ದಡದಲ್ಲಿ ಹುಟ್ಟುವ ಅದಿತಿದೇವಿಯ ಪ್ರಿಯಪುತ್ರನಾದ ಸೂರ್ಯನು ಅಲ್ಲದೆ) ಮತ್ತೋರ್ವಂ ಭಾನು ದಲ್ ಒಗೆದನು ಎನಿಪ ತೇಜದ (ಈ ಕಡೆ ಬೇರೊಬ್ಬ ಸೂರ್ಯನು ಹುಟ್ಟಿದ್ದಾನೆ ದಿಟ, ಎನ್ನವಂತಿರುವ ತೇಜಸ್ಸಿನ) ಪೊದಳ್ಕಿಯಿಂ ಜನದ ಮನಮಂ ಅಲೆದಂ ಕರ್ಣಂ (ತೇಜಸ್ಸಿನ ವ್ಯಾಪ್ತಿಯಿಂದ ಜನರ ಮನಸ್ಸನ್ನು ಕರ್ಣನು ತುಂಬಿದನು.)
ಪದ್ಯ-೫೩:ಅರ್ಥ:ಪೂರ್ವದಬೆಟ್ಟದ ದಡದಲ್ಲಿ ಹುಟ್ಟುವ ಅದಿತಿದೇವಿಯ ಪ್ರಿಯಪುತ್ರನಾದ ಸೂರ್ಯನು ಅಲ್ಲದೆ, ಈ ಕಡೆ ಬೇರೊಬ್ಬ ಸೂರ್ಯನು ಹುಟ್ಟಿದ್ದಾನೆ, ದಿಟ, ಎನ್ನವಂತಿರುವ ತೇಜಸ್ಸಿನ ವ್ಯಾಪ್ತಿಯಿಂದ ಜನರ ಮನಸ್ಸನ್ನು ಕರ್ಣನು ತುಂಬಿದನು.
ವ||ಆಗಳಾ ಚತುರ್ವೇದ ಪಾರಗರಪ್ಪ ಧರಾಮರ್ಗೆ ನಿತ್ಯದಾನಮಂ ಕೊಟ್ಟು ಸಿಡಿಲ ಬಳಗಮನೊಳಕೊಂಡಂತೆ ತಳತಳಿಸಿ ಪೊಳೆವ ಕೆಯ್ದುಗಳ್ ತೀವಿದ ವಾರುವದ ಬೋರಗುದುರೆಗಳೊಳ್ ಪೂಡಿದ ಪಸುರ್ವನ್ನ ರಥಮನೇರಿ ಮುನ್ನೊರ್ವನೆ ಶರಶಯನದೊಳಿರ್ದ ಗಾಂಗೇಯನಲ್ಲಿಗೆ ಬಂದು ರಥದಿಂದಮಿಳಿದು ಮೂರು ಬಲವಂದು ತದೀಯ ಪಾದಪದ್ಮಗಳಿಂ ತಲೆಯಲಿಟ್ಟುಕೊಂಡು-
ವಚನ:ಪದವಿಭಾಗ-ಅರ್ಥ:ಆಗಳಾ ಚತುರ್ವೇದ ಪಾರಗರಪ್ಪ ಧರಾಮರ್ಗೆ- ಧರೆಯ ಅಮರರಿಗೆ (ನಾಲ್ಕು ವೇದಗಳಲ್ಲಿ ಪಂಡಿತರಾಗಿರುವ ಬ್ರಾಹ್ಮಣರಿಗೆ) ನಿತ್ಯದಾನಮಂ ಕೊಟ್ಟು (ನಿತ್ಯದಾನವನ್ನು ಕೊಟ್ಟು) ಸಿಡಿಲ ಬಳಗಮನು ಒಳಕೊಂಡಂತೆ (ಸಿಡಿಲರಾಶಿಯನ್ನು ಒಳಗೊಂಡಿರುವ ಹಾಗೆ) ತಳತಳಿಸಿ ಪೊಳೆವ ಕೆಯ್ದುಗಳ್ ತೀವಿದ (ಥಳಥಳಿಸಿ ಹೊಳೆಯುವ ಆಯುಧಗಳು ತುಂಬಿದ) ವಾರುವದ ಬೋರಗುದುರೆಗಳೊಳ್ ಪೂಡಿದ ಪಸುರ್ವನ್ನ ರಥಮನೇರಿ (ವಾರುವದ ಬೋರ ಜಾತಿಯ ಕುದುರೆಗಳನ್ನು ಹೂಡಿರುವ ಹಸಿರು ಚಿನ್ನದ ರಥವನ್ನು ಏರಿ) ಮುನ್ನಂ ಒರ್ವನೆ ಶರಶಯನದೊಳಿರ್ದ ಗಾಂಗೇಯನಲ್ಲಿಗೆ ಬಂದು (ಮೊದಲು ಒಬ್ಬನೇ ಏಕಾಂಗಿಯಾಗಿ ಬಾಣದ ಹಾಸಿಗೆಯಲ್ಲಿ ಮಲಗಿದ್ದ ಭೀಷ್ಮರ ಹತ್ತಿರಕ್ಕೆ ಬಂದು,) ರಥದಿಂದಂ ಇಳಿದು ಮೂರು ಬಲವಂದು (ರಥದಿಂದ ಇಳಿದು ಮೂರು ಸಲ ಪ್ರದಕ್ಷಿಣೆಮಾಡಿ) ತದೀಯ ಪಾದಪದ್ಮಗಳಿಂ ತಲೆಯಲಿಟ್ಟುಕೊಂಡು (ಅವನ ಪಾದಕಮಲಗಳನ್ನು ತಲೆಯಲ್ಲಿಟ್ಟುಕೊಂಡು ಹೇಳಿದನು)-
ವಚನ:ಅರ್ಥ:ಆಗ ನಾಲ್ಕು ವೇದಗಳಲ್ಲಿ ಪಂಡಿತರಾಗಿರುವ ಬ್ರಾಹ್ಮಣರಿಗೆ ನಿತ್ಯದಾನವನ್ನು ಕೊಟ್ಟು, ಸಿಡಿಲರಾಶಿಯನ್ನು ಒಳಗೊಂಡಿರುವ ಹಾಗೆ ಥಳಥಳಿಸಿ ಹೊಳೆಯುವ ಆಯುಧಗಳು ತುಂಬಿರುವ , ವಾರುವದ ಬೋರಜಾತಿಯ ಕುದುರೆಗಳನ್ನು ಹೂಡಿರುವ ಹಸಿರು ಚಿನ್ನದ ರಥವನ್ನು ಏರಿ, ಮೊದಲು ಒಬ್ಬನೇ ಏಕಾಂಗಿಯಾಗಿ ಬಾಣದ ಹಾಸಿಗೆಯಲ್ಲಿ ಮಲಗಿದ್ದ ಭೀಷ್ಮರ ಹತ್ತಿರಕ್ಕೆ ಬಂದು, ರಥದಿಂದ ಇಳಿದು ಮೂರು ಸಲ ಪ್ರದಕ್ಷಿಣೆಮಾಡಿ, ಅವನ ಪಾದಕಮಲಗಳನ್ನು ತಲೆಯಲ್ಲಿಟ್ಟುಕೊಂಡು ಹೇಳಿದನು.-
ಕಂ||ಆಮ್ಮಾತರಿಯದೆ ಮುಳಿದುಂ
ನಿಮ್ಮಡಿಯಂ ನೋಯೆ ನುಡಿದೆನುರದೇಳಿಸಲೇ|
ನೆಮ್ಮಳವೆ ಮರಿವುದಾ ಮನ
ದುಮ್ಮಚ್ಚರಮಜ್ಜ ನಿಮ್ಮನೆರೆಯಲೆ ಬಂದೆಂ||೫೪||
ಪದ್ಯ-೫೪:ಪದವಿಭಾಗ-ಅರ್ಥ:ಆಂ ಮಾತು ಅರಿಯದೆ ಮುಳಿದುಂ ನಿಮ್ಮಡಿಯಂ ನೋಯೆ ನುಡಿದೆನು (ನಾನು ಮಾತನಾಡುವ ರೀತಿಯನ್ನು ತಿಳಿಯದೆ ಕೋಪಿಸಿಕೊಂಡು ನಿಮ್ಮ ಮನಸ್ಸು ನೋಯುವಹಾಗೆ ಮಾತನಾಡಿದೆನು.) ಉರದೆ ಏಳಿಸಲೇನು ಎಮ್ಮ ಅಳವೆ (ಸುಮ್ಮನೆ ನಿಮ್ಮನ್ನ ತಿರಸ್ಕಾರ ಮಾಡಲು ನನಗೆ ಸಾಧ್ಯವೇನು?) ಮರಿವುದು ಆ ಮನದ ಉಮ್ಮಚ್ಚರಂ ಅಜ್ಜ (ಅಜ್ಜಾ! ಮನಸ್ಸಿನ ಆ ಹೆಚ್ಚಾದ ಕೋಪವನ್ನು ಮರೆತುಬಿಡುವುದು) ನಿಮ್ಮಂ ಎರೆಯಲೆ ಬಂದೆಂ (ನಿಮ್ಮನ್ನು ಪ್ರಾರ್ಥಿಸುವುದಕ್ಕಾಗಿಯೇ ಬಂದಿದ್ದೇನೆ)
ಪದ್ಯ-೫೪:ಅರ್ಥ: ನಾನು ಮಾತನಾಡುವ ರೀತಿಯನ್ನು ತಿಳಿಯದೆ ಕೋಪಿಸಿಕೊಂಡು ನಿಮ್ಮ ಮನಸ್ಸು ನೋಯುವಹಾಗೆ ಮಾತನಾಡಿದೆನು. ಸುಮ್ಮನೆ ನಿಮ್ಮನ್ನ ತಿರಸ್ಕಾರ ಮಾಡಲು ನಮಗೆ ಸಾಧ್ಯವೇನು? ಅಜ್ಜ ಮನಸ್ಸಿನ ಆ ಹೆಚ್ಚಾದ ಕೋಪವನ್ನು ಮರೆತುಬಿಡುವುದು.ನಿಮ್ಮನ್ನು ಪ್ರಾರ್ಥಿಸುವುದಕ್ಕಾಗಿಯೇ ಬಂದಿದ್ದೇನೆ.
ಧುರದೊಳ್ ನಿಮ್ಮಡಿಯಂಗೆಲ
ಲರಿಯವು ಮಾಪಾಂಡುಸುತರನೆಮ್ಮಂಗದಿರ |
ಚ್ಚರಿಯಲ್ತೆ ಗೆಲ್ವರೆಂಬುದು
ಹರಿಗನೊಳಿರಿದೆಂತುಮೆನ್ನ ಚಲಮನೆ ಮೆರೆವೆಂ||೫೫||
ಪದ್ಯ-೫೫:ಪದವಿಭಾಗ-ಅರ್ಥ:ಧುರದೊಳ್ ನಿಮ್ಮಡಿಯಂ ಗೆಲಲು ಅರಿಯವು ಮಾಪಾಂಡುಸುತರನು (ಯುದ್ಧದಲ್ಲಿ ನಿಮ್ಮ ಪಾದಗಳೂ (ಗೌರವಕ್ಕಾಗಿ ಹೇಳುವುದು- ನೀವೂ) ಗೆಲ್ಲುವುದಕ್ಕೆ ಅಸಾಧ್ಯವಾದ ಆ ಪಾಂಡವರನ್ನು) ಎಮ್ಮಂಗದಿರ್ ಅಚ್ಚರಿಯಲ್ತೆ ಗೆಲ್ವರೆಂಬುದು (ನಮ್ಮಂತಹವರು ಗೆಲ್ಲುವರೆಂಬುವುದು ಆಶ್ಚರ್ಯವಲ್ಲವೇ?) ಹರಿಗನೊಳು ಇರಿದು ಎಂತುಮ್ ಎನ್ನ ಚಲಮನೆ ಮೆರೆವೆಂ (ಅರ್ಜುನನೊಡನೆ ಯುದ್ಧಮಾಡಿ ನನ್ನ ಛಲವನ್ನು ಪ್ರಕಾಶಪಡಿಸುತ್ತೇನೆ.)
ಪದ್ಯ-೫೫:ಅರ್ಥ: ಯುದ್ಧದಲ್ಲಿ ನಿಮ್ಮ ಪಾದಗಳೂ (ನೀವೂ) ಗೆಲ್ಲುವುದಕ್ಕೆ ಅಸಾಧ್ಯವಾದ ಆ ಪಾಂಡವರನ್ನು ನಮ್ಮಂತಹವರು ಗೆಲ್ಲುವರೆಂಬುವುದು ಆಶ್ಚರ್ಯವಲ್ಲವೇ? ಆದರೂ ಅರ್ಜುನನೊಡನೆ ಯುದ್ಧಮಾಡಿ ನನ್ನ ಛಲವನ್ನು ಪ್ರಕಾಶಪಡಿಸುತ್ತೇನೆ.
ವ||ಎಂಬುದುಂ ಕುರುಪಿತಾಮಹನಹರ್ಪತಿಸುತನನಿಂತೆಂದಂ-
ವಚನ:ಪದವಿಭಾಗ-ಅರ್ಥ:ಎಂಬುದುಂ ಕುರುಪಿತಾಮಹನು ಅಹರ್ಪತಿ ಸುತನಂ ಇಂತೆಂದಂ-
ವಚನ:ಅರ್ಥ:ಎನ್ನಲು ಕುರು ಪಿತಾಮಹನಾದ ಭೀಷ್ಮನು ಸೂರ್ಯಪುತ್ರನಾದ ಕರ್ಣನಿಗೆ ಹೀಗೆಂದನು-
ಅನವದ್ಯಂ||ನುಡಿವುದಂ ಪತಿಭಕ್ತಿಯ ಪೆಂಪಿಂ ನೀಂ ನುಡಿದೈ ಪೆರತಂದದಿಂ
ನಡಿದೆಯಲ್ತೆ ಮದಾಯಮಮೋಘಂ ಸೂಳ್ವಡೆಯಲ್ಕೆನಗಕ್ಕುಮಿ|
ನ್ನೆಡೆಯೊಳೆಂದೆಮದದೆಂದುದೇಂ ತಪ್ಪಾದುದೆ ನಮ್ಮೋಜವರ್ಜಸಂ
ಬಡೆದ ಭಾರ್ಗವರ ಪ್ಪುದರಿಂದ ನಂಟರುಮಂಗಮಹೀಪತೀ ||೫೬||
ಪದ್ಯ-೫೬:ಪದವಿಭಾಗ-ಅರ್ಥ:ನುಡಿವುದಂ ಪತಿಭಕ್ತಿಯ ಪೆಂಪಿಂ ನೀಂ ನುಡಿದೈ (ಹೇಳುವುದನ್ನೆಲ್ಲಾ ನೀನು ಸ್ವಾಮಿಭಕ್ತಿಯ ಹೆಚ್ಚಳದಿಂದ ಹೇಳಿದ್ದೀಯೆ) ಪೆರತಂದದಿಂ ನಡಿದೆಯಲ್ತೆ (ಬೇರೆ ರೀತಿಯಿಂದ ನುಡಿಯಲಿಲ್ಲ.) ಮದಾಯಂ ಅಮೋಘಂ ('ನನ್ನ ಶಕ್ತಿಯು ಮಿತಿಯಿಲ್ಲದ್ದು.) ಸೂಳ್ ವೆಡೆಯಲ್ಕೆ ಎನಗೆ ಅಕ್ಕುಂ ಇಂ ಎಡೆಯೊಳ್ ಎಂದೆಂ (ಯುದ್ಧದ ಸರದಿಯನ್ನು ಪಡೆಯುವುದಕ್ಕೆ ಈ ಸನ್ನಿವೇಶದಲ್ಲಿ ನನಗೂ ಅವಕಾಶವುಂಟು) ಅದು ಎಂದುದು ಏಂ ತಪ್ಪಾದುದೆ (ಎಂದು ಹೇಳುವುದು ತಪ್ಪಾದುದೇನು?) ನಮ್ಮ ಓಜವರ್ (ನಮ್ಮಿಬ್ಬರ ಗುರುಗಳಾಗಿದ್ದವರು) ಜಸಂಬಡೆದ ಭಾರ್ಗವರ ಪ್ಪುದರಿಂದ (ಯಶಶ್ಶಾಲಿಗಳಾದ ಪರಶುರಾಮರಾದುದರಿಂದ) ನಂಟರುಂ ಅಂಗಮಹೀಪತೀ (ಕರ್ಣಾ ನಾವು ನೆಂಟರೂ ಆಗಿದ್ದೇವೆ). (ಸೋದರರು, ಗುರು ತಂದೆಯ ಸಮಾನ)
ಪದ್ಯ-೫೬:ಅರ್ಥ: ಹೇಳುವುದನ್ನೆಲ್ಲಾ ನೀನು ಸ್ವಾಮಿಭಕ್ತಿಯ ಹೆಚ್ಚಳದಿಂದ ಹೇಳಿದ್ದೀಯೆ. ಬೇರೆ ರೀತಿಯಿಂದ ನುಡಿಯಲಿಲ್ಲ. 'ನನ್ನ ಶಕ್ತಿಯು ಮಿತಿಯಿಲ್ಲದ್ದು. ಸರದಿಯನ್ನು ಪಡೆಯುವುದಕ್ಕೆ ಈ ಸನ್ನಿವೇಶದಲ್ಲಿ ನನಗೂ ಅವಕಾಶವುಂಟು ಎಂದು ಹೇಳುವುದು ತಪ್ಪಾದುದೇನು? ನಮ್ಮಿಬ್ಬರ ಗುರುಗಳಾಗಿದ್ದವರು ಯಶಶ್ಶಾಲಿಗಳಾದ ಪರಶುರಾಮರಾದುದರಿಂದ ಕರ್ಣಾ ನಾವು ನೆಂಟರೂ ಆಗಿದ್ದೇವೆ. (ಸೋದರರು, ಗುರು ತಂದೆಯ ಸಮಾನ)
ವ|| ಅದಲ್ಲದೆಯುಂ ನೀನೆಮಗೆ ಕುಂತಿಯ ಗಾಂಧಾರಿಯ ಮಕ್ಕಳ ಲೆಕ್ಕದ ಮೊಮ್ಮನೈ-
ವಚನ:ಪದವಿಭಾಗ-ಅರ್ಥ:ಅದಲ್ಲದೆಯುಂ ನೀನು ಎಮಗೆ ಕುಂತಿಯ ಗಾಂಧಾರಿಯ ಮಕ್ಕಳ ಲೆಕ್ಕದ ಮೊಮ್ಮನೈ (ಮೊಮ್ಮಗನೈಯ್ಯಾ)-
ವಚನ:ಅರ್ಥ:ಅಷ್ಟೇ ಅಲ್ಲದೆ ನೀನು ನಮಗೆ ಕುಂತಿ ಮತ್ತು ಗಾಂಧಾರಿಯರ ಮಕ್ಕಳಾದ ಪಾಂದವ ಕೌರವರ ಹಾಗೆಯೇ ಮೊಮ್ಮಗನೈಯ್ಯಾ!
ಉ||ನಿನ್ನನೆ ನಚ್ಚಿದಂ ಕುರುಮಹೀಪತಿ ನಿನ್ನ ಶರಾವಳಿಗಳ್ಗೆ ಮುಂ
ನ್ನನ್ನಡುಗುತ್ತುಮಿರ್ಪುದರಿಸಾಧನ ಸಂಪದಮಂತೆ ಶಸ್ತ್ರಸಂ |
ಪನ್ನನೆ ಆಗಿ ಶಲ್ಯನನೆ ಸಾರಥಿಯಾಗಿರೆ ಮಾಡಿ ಕಾದು ನೀಂ
ನಿನ್ನಯ ಬಲ್ಲ ಮಾಳ್ಕೆಯೊಳಿದಂ ನುಡಿದೆಂ ನಿನಗಂಗವಲ್ಲಭಾ|| ೫೭||
ಪದ್ಯ-೫೬:ಪದವಿಭಾಗ-ಅರ್ಥ:ನಿನ್ನನೆ ನಚ್ಚಿದಂ ಕುರುಮಹೀಪತಿ (ಕೌರವ ಮಹಾರಾಜನು ನಿನ್ನನೇ ನಂಬಿದ್ದಾನೆ) ನಿನ್ನ ಶರಾವಳಿಗಳ್ಗೆ ಮುಂನ್ನಂ ನಡುಗುತ್ತುಮಿರ್ಪುದು ಅರಿಸಾಧನ ಸಂಪದಮ್ (ನಿನ್ನ ಬಾಣಗಳ ಸಮೂಹಕ್ಕೆ ಶತ್ರು ಸಾಧನ ಸಂಪತ್ತೆಲ್ಲಾ ಮೊದಲೇ ನಡುಗುತ್ತಿದೆ.) ಅಂತೆ ಶಸ್ತ್ರಸಂ ಪನ್ನನೆ ಆಗಿ ಶಲ್ಯನನೆ ಸಾರಥಿಯಾಗಿರೆ ಮಾಡಿ (ಹಾಗೆಯೇ ಆಯುಧ ಸಂಪತ್ತುಳ್ಳವನಾಗಿ ಶಲ್ಯನನ್ನೇ ಸಾರಥಿಯಾಗಿ ಮಾಡಿಕೊಂಡು) ಕಾದು ನೀಂ ನಿನ್ನಯ ಬಲ್ಲ ಮಾಳ್ಕೆಯೊಳಿದಂ ನುಡಿದೆಂ ನಿನಗೆ ಅಂಗವಲ್ಲಭಾ (ನಿನಗೆ ತಿಳಿದ ರೀತಿಯಲ್ಲಿ ಯುದ್ಧಮಾಡು ಕರ್ಣಾ; ಇದು ನನ್ನ ಸಲಹೆ ಅಷ್ಟೇ.)(
ಪದ್ಯ-೫೬:ಅರ್ಥ:ಕೌರವ ಮಹಾರಾಜನು ನಿನ್ನನೇ ನಂಬಿದ್ದಾನೆ. ನಿನ್ನ ಬಾಣಗಳ ಸಮೂಹಕ್ಕೆ ಶತ್ರುಗಳ ಸಾಧನ ಸಂಪತ್ತೆಲ್ಲಾ ಮೊದಲೇ ನಡುಗುತ್ತಿದೆ. ಹಾಗೆಯೇ ಆಯುಧ ಸಂಪತ್ತುಳ್ಳವನಾಗಿ ಶಲ್ಯನನ್ನೇ ಸಾರಥಿಯಾಗಿ ಮಾಡಿಕೊಂಡು ನಿನಗೆ ತಿಳಿದ ರೀತಿಯಲ್ಲಿ ಯುದ್ಧಮಾಡು ಕರ್ಣಾ; ಇದು ನನ್ನ ಸಲಹೆ ಅಷ್ಟೇ.
ಕಂ|| ಎನೆ ನೆಗಳ್ದ ಕುಲದ ಚಲದೊ
ಳ್ಪಿನ ಭೂಪನನೆನಗೆ ತೇರನೆಸಗೊಂಡೊಡೆ ಸ |
ದ್ವಿನಯಮುಳಿದುರ್ಕಿ ಕುಲಹೀ
ನನೆಂಬ ಪರಿವಾದಮೀಗಳೆನಗಾಗದಿರದೇ||೫೮ ||
ಪದ್ಯ-೫೮:ಪದವಿಭಾಗ-ಅರ್ಥ:ಎನೆ ನೆಗಳ್ದ ಕುಲದ ಚಲದ ಒಳ್ಪಿನ ಭೂಪನಂ ಎನಗೆ ತೇರನು ಎಸಗೊಂಡೊಡೆ (ಭೀಷ್ಮನು ಎನ್ನಲು, ಒಳ್ಳೆ ಕುಲವನ್ನೂ ಛಲವನ್ನೂ ಉಳ್ಳ ರಾಜನಾದ ಶಲ್ಯನನ್ನು ನನಗೆ ಸಾರಥಿಯಾಗಿರು ಎಂದು ಹೇಳಿದರೆ) ಸದ್ವಿನಯಮು ಉಳಿದು (ಉಚಿತವಾದ ವಿನಯವನ್ನು ಬಿಟ್ಟು) ಉರ್ಕಿ ಕುಲಹೀನನೆಂಬ ಪರಿವಾದಂ ಈಗಳೆ ಎನಗಾಗದೆ ಇರದೇ (ಕುಲಹೀನನು ಗರ್ವಿಸಿ ನುಡಿದನೆಂಬ ಅಪವಾದವು ನನಗೆ ತಟ್ಟುವುದಿಲ್ಲವೇ?)
ಪದ್ಯ-೫೮:ಅರ್ಥ:ಭೀಷ್ಮನು ಎನ್ನಲು, ಒಳ್ಳೆ ಕುಲವನ್ನೂ ಛಲವನ್ನೂ ಉಳ್ಳ ರಾಜನಾದ ಶಲ್ಯನನ್ನು ನನಗೆ ಸಾರಥಿಯಾಗಿರು ಎಂದು ಹೇಳಿದರೆ ಉಚಿತವಾದ ವಿನಯವನ್ನು ಬಿಟ್ಟು ಕುಲಹೀನನು ಗರ್ವಿಸಿ ನುಡಿದನೆಂಬ ಅಪವಾದವು ನನಗೆ ತಟ್ಟುವುದಿಲ್ಲವೇ?
ಆಯದ ಕಟ್ಟಾಳ್ ನೀಂ ಮೊದ
ಲೀ ಯುಗದೊಳ್ ಪೆರರುಮೊಳರೆ ಸಾವಕ್ಕೆ ಜಯ |
ಶ್ರೀಯಕ್ಕೆ ಧಾತ್ರನಿಂ ಕ
ಟ್ಟಾಯದ ಬಳಿಸಂದು ನಿಮ್ಮನಾಂ ಮೆಚ್ಚಿಸುವೆಂ|| ೫೯||
ಪದ್ಯ-೫೯:ಪದವಿಭಾಗ-ಅರ್ಥ:ಆಯದ ಕಟ್ಟಾಳ್ ನೀಂ ಮೊದಲೀ ಯುಗದೊಳ್ (ಈ ಯುಗದ ಶಕ್ತಿವಂತರಲ್ಲಿ ನೀವು ಮೊದಲಿಗರು.) ಪೆರರುಂ ಒಳರೆ (ಬೇರೆಯವರು ಇದ್ದಾರಯೇ?) ಸಾವಕ್ಕೆ ಜಯ ಶ್ರೀಯಕ್ಕೆ ಧಾತ್ರನಿಂ (ವಿಧಿವಶದಿಂದ ಸಾವಾಗಲಿ ಜಯಸಂಪದವಾಗಲಿ) ಕಟ್ಟಾಯದ ಬಳಿಸಂದು (ಶೌರ್ಯದ ದಾರಿಯನ್ನೇ ಹಿಡಿದು) ನಿಮ್ಮನಾಂ ಮೆಚ್ಚಿಸುವೆಂ (ನಿಮ್ಮನ್ನು ಮೆಚ್ಚಿಸುತ್ತೇನೆ.)
ಪದ್ಯ-೫೯:ಅರ್ಥ:ಕರ್ಣ ಹೇಳಿದ, ಈ ಯುಗದ ಶಕ್ತಿವಂತರಲ್ಲಿ ನೀವು ಮೊದಲಿಗರು. ಬೇರೆಯವರು ಇದ್ದಾರಯೇ? ವಿಧಿವಶದಿಂದ ಸಾವಾಗಲಿ ಜಯಸಂಪದವಾಗಲಿ ಹೆಚ್ಚಿನ ಶೌರ್ಯದ ದಾರಿಯನ್ನೇ ಹಿಡಿದು ನಿಮ್ಮನ್ನು ಮೆಚ್ಚಿಸುತ್ತೇನೆ.
ವ||ಎಂಬುದುಂ ಸಿಂಧೂತನೂಜನಂಗಾಧಿರಾಜನ ನಯದ ವಿನಯದ ಪಾಳಿಯ ಪಸುಗೆಯ ನುಡಿಗಳ್ಗೆ ಮನೆದೆಗೊಂಡೀತಂ ಕುಲಹೀನನಲ್ಲನುಭಯಕುಲ ಶುದ್ಧನಾಗಲೆ ವೇಳ್ಕುಮೆಂದು ನಿಶ್ಚೈಸಿ ನೀನೆಮಗಿಂಬು ಕೆಯ್ಜೊಡಂ ಸುಯೋಧನನ ರಾಜ್ಯಮನೊಲ್ಜಡಂ ಶಲ್ಯನನೆ ಸಾರಥಿ ಮಾಡಿ ಕಾದುವುದೆಂದು ಪರಸಿ ಪೋಗೆಂಬುದಂ ಮಹಾ ಪ್ರಸಾದಮೆಂದು ಪೊಡಮಟ್ಟು ಸಂಗ್ರಾಮಭೂಮಿಗೆ ವಂದು ಹಸ್ತ್ಯಶ್ವರಥ ಪದಾತಿಬಲಗಳನೊಂದು ಮಾಡಿ ಮಕರವ್ಯೂಹಮನೊಡ್ಡಿದಂ ಪಾಂಡವ ಪತಾಕಿನಿಯುಮರ್ಧಚಂದ್ರವ್ಯೂಹಮನೊಡ್ಡಿ ನಿಂದುದಿತ್ತ ಪರಸೈನ್ಯಭೈರವಂ ಪುರುಷೋತ್ತಮನನಿಂತೆಂದಂ.-
ವಚನ:ಪದವಿಭಾಗ-ಅರ್ಥ:ಎಂಬುದುಂ ಸಿಂಧೂತನೂಜನು ಅಂಗಾಧಿರಾಜನ ನಯದ ವಿನಯದ ಪಾಳಿಯ ಪಸುಗೆಯ ನುಡಿಗಳ್ಗೆ ಮನೆದೆಗೊಂಡು (ಎನ್ನಲು ಭೀಷ್ಮನು ಕರ್ಣನ ನೀತಿಯಿಂದಲೂ ನಮ್ರತೆಯಿಂದಲೂ ಕೂಡಿದ ವಿವೇಕದ ಮಾತುಗಳಿಗೆ ಮನಸ್ಸಿನಲ್ಲಿ ಸಂತೋಷಿಸಿ - ಒಪ್ಪಿ ) ಈತಂ ಕುಲಹೀನನಲ್ಲನು ಉಭಯಕುಲ ಶುದ್ಧನಾಗಲೆ ವೇಳ್ಕುಮೆಂದು ನಿಶ್ಚೈಸಿ ( ಇವನು ಹೀನಕುಲದವನಲ್ಲ ತಾಯಿ ತಂದೆ ಈ ಎರಡು ವಂಶಗಳಿಂದಲೂ ಶುದ್ಧನೇ ಆಗಿರಬೇಕು ಎಂದು ನಿಶ್ಚೈಸಿ,) ನೀನು ಎಮಗೆ ಎ/ಇಂಬು ಕೆಯ್ಜೊಡಂ(ನೀನು ನನಗೆ ಇಂಬು/ ಬೆಲೆಕೊಡುವುದಾರೆ, ಹೇಳಿದ್ದನ್ನು ಮಾಡುವುದಾದರೆ) ಸುಯೋಧನನ ರಾಜ್ಯಮನು ಒಲ್ಜಡಂ (ದುರ್ಯೋಧನನ ರಾಜ್ಯವನ್ನು ಪ್ರೀತಿಸುವುದಾದರೆ) ಶಲ್ಯನನೆ ಸಾರಥಿ ಮಾಡಿ ಕಾದುವುದೆಂದು ಪರಸಿ ಪೋಗು ಎಂಬುದಂ (ಶಲ್ಯನನ್ನೇ ಸಾರಥಿಯಾಗಿ ಮಾಡಿ ಕಾದುವುದು ಎಂದು ಹರಸಿ ಬೀಳ್ಕೊಡಲು-) ಮಹಾ ಪ್ರಸಾದಮೆಂದು ಪೊಡಮಟ್ಟು ಸಂಗ್ರಾಮಭೂಮಿಗೆ ವಂದು (ಕರ್ಣನು ಇದು ಪರಮಾನುಗ್ರಹ ಎಂದು ನಮಸ್ಕಾರ ಮಾಡಿ ರಣರಂಗಕ್ಕೆ ಬಂದು) ಹಸ್ತ್ಯಶ್ವರಥ ಪದಾತಿಬಲಗಳನೊಂದು ಮಾಡಿ (ಆನೆ, ಕುದುರೆ,ರಥ ಮತ್ತು ಕಾಲಾಳು ಸೈನ್ಯವನ್ನು ಒಟ್ಟಿಗೆ ಸೇರಿಸಿ) ಮಕರವ್ಯೂಹಮನು ಒಡ್ಡಿದಂ (ಮೊಸಳೆಯ ಆಕಾರದ ಸೇನಾ ರಚನೆಯನ್ನು ಮಾಡಿ ಎದುರಿಸಿನಿಂತನು) ಪಾಂಡವ ಪತಾಕಿನಿಯುಂ ಅರ್ಧಚಂದ್ರವ್ಯೂಹಮನು ಒಡ್ಡಿ ನಿಂದುದು ಇತ್ತ (ಪಾಂಡವ ಸೈನ್ಯವೂ ಅರ್ಧಚಂದ್ರಾಕಾರದ ಸಸೇನಾರಚನೆಯನ್ನು ರಚಿಸಿ ಎದುರಿಸಿ ನಿಂತಿತು. ಈ ಕಡೆ) ಪರಸೈನ್ಯಭೈರವಂ ಪುರುಷೋತ್ತಮನನು ಇಂತೆಂದಂ (ಈ ಕಡೆ ಪರಸೈನ್ಯ ಭೈರವನಾದ ಅರ್ಜುನನು ಪುರುಷೋತ್ತಮನಾದ ಕೃಷ್ಣನನ್ನು ಕುರಿತು ಹೀಗೆಂದನು-).-
ವಚನ:ಅರ್ಥ:ಎನ್ನಲು ಭೀಷ್ಮನು ಕರ್ಣನ ನೀತಿಯಿಂದಲೂ ನಮ್ರತೆಯಿಂದಲೂ ಕೂಡಿದ ವಿವೇಕದ ಮಾತುಗಳಿಗೆ ಮನಸ್ಸಿನಲ್ಲಿ ಸಂತೋಷಿಸಿ - ಒಪ್ಪಿ , ಇವನು ಹೀನಕುಲದವನಲ್ಲ ತಾಯಿ ತಂದೆ ಈ ಎರಡು ವಂಶಗಳಿಂದಲೂ ಶುದ್ಧನೇ ಆಗಿರಬೇಕು ಎಂದು ನಿಶ್ಚೈಸಿ, ನೀನು ನನಗೆ ಬೆಲೆಕೊಟ್ಟು, ಹೇಳಿದ್ದನ್ನು ಮಾಡುವುದಾದರೆ, ದುರ್ಯೋಧನನ ರಾಜ್ಯವನ್ನು ಪ್ರೀತಿಸುವುದಾದರೆ, ಶಲ್ಯನನ್ನೇ ಸಾರಥಿಯಾಗಿ ಮಾಡಿ ಕಾದುವುದು ಎಂದು ಹರಸಿಬೀಳ್ಕೊಟ್ಟನು. ಕರ್ಣನು ಇದು ಪರಮಾನುಗ್ರಹ ಎಂದು ನಮಸ್ಕಾರ ಮಾಡಿ ರಣರಂಗಕ್ಕೆ ಬಂದು ಆನೆ, ಕುದುರೆ,ರಥ ಮತ್ತು ಕಾಲಾಳು ಸೈನ್ಯವನ್ನು ಒಟ್ಟಿಗೆ ಸೇರಿಸಿ, ಮೊಸಳೆಯ ಆಕಾರದ ಸೇನಾ ರಚನೆಯನ್ನು ಮಾಡಿ ಎದುರಿಸಿನಿಂತನು. ಪಾಂಡವ ಸೈನ್ಯವೂ ಅರ್ಧಚಂದ್ರಾಕಾರದ ಸಸೇನಾರಚನೆಯನ್ನು ರಚಿಸಿ ಎದುರಿಸಿ ನಿಂತಿತು. ಈ ಕಡೆ ಪರಸೈನ್ಯ ಭೈರವನಾದ ಅರ್ಜುನನು ಪುರುಷೋತ್ತಮನಾದ ಕೃಷ್ಣನನ್ನು ಕುರಿತು ಹೀಗೆಂದನು-

ಯುದ್ಧರಂಗಕ್ಕೆ ಕರ್ಣನ ಪ್ರವೇಶ[ಸಂಪಾದಿಸಿ]

ಮ||ಸ್ರ|| ಪಿರುದುಂಕಾಯ್ಪಿಂದಮೆನ್ನೊಳ್ ನರೆದಿರಿಯಲೆ ಪೊಣ್ದತ್ತ ಸಂಸಪ್ತಕರ್ಕಳ್
ಕರೆವರ್ ಮತ್ತಿತ್ತ ಕರ್ಣಂ ಚಲ ಚಲದಿಂದಿರಿಯಲ್ ನಿಂದನೇಗೆಯ್ವುದೆಂದಾಂ|
ನರನಂ ಮುನ್ನಂ ತ್ರಿಗರ್ತಾಧಿಪ ಬಲಮನದಂ ನುರ್ಗು ನೀನೆಂದು ತೇರಂ
ಹರಿ ಕೊಂಡತ್ತುಯ್ದುನಿತ್ತೊರ್ಮೊದಲುಭಯಬಲಂ ತಾಗಿ ಕಾದಿತ್ತು ಬೇಗಂ||೬೦ ||
ಪದ್ಯ-೬೦:ಪದವಿಭಾಗ-ಅರ್ಥ:ಪಿರುದುಂಕಾಯ್ಪಿಂದಂ ಎನ್ನೊಳ್ ನರೆದು ಇರಿಯಲೆ ಪೊಣ್ದತ್ತ ಸಂಸಪ್ತಕರ್ಕಳ್ ಕರೆವರ್ (ಸಂಸಪ್ತಕರುಗಳು ವಿಶೇಷಕೋಪದಿಂದ ಕೂಡಿ ನನ್ನಲ್ಲಿ ಯುದ್ಧಮಾಡಲು ಪ್ರತಿಜ್ನೆ ಮಾಡಿ ಆಕಡೆಗೆ ಕರೆಯುತ್ತಿದ್ದಾರೆ.) ಮತ್ತೆ ಇತ್ತ ಕರ್ಣಂ ಚಲ ಚಲದಿಂದ ಇರಿಯಲ್ ನಿಂದನು (ಮತ್ತು ಈ ಕಡೆ ಕರ್ಣನು ವಿಶೇಷ ಛಲದಿಂದ ಯುದ್ಧಮಾಡಲು ನಿಂತಿದ್ದಾನೆ.) ಏಗೆಯ್ವುದೆಂದ ಆನರನಂ ಮುನ್ನಂ ತ್ರಿಗರ್ತಾಧಿಪ ಬಲಮನು ಅದಂ ನುರ್ಗು ನೀನೆಂದು (ಮೊದಲು ತ್ರಿಗರ್ತ ದೇಶದ ರಾಜನ ಸೈನ್ಯವನ್ನು ಪುಡಿಮಾಡು ನೀನು ಎಂದು) ತೇರಂ ಹರಿ ಕೊಂಡು ಅತ್ತ ಉಯ್ದುನು ಇತ್ತ ಒರ್ಮೊದಲ್ ಉಭಯಬಲಂ ತಾಗಿ ಕಾದಿತ್ತು ಬೇಗಂ (ರಥವನ್ನು ಕೃಷ್ಣನು ಆ ಕಡೆಗೆ ನೆಡಸಿಕೊಂಡು ಹೋದನು. ಈ ಕಡೆ ತಕ್ಷಣವೇ ಎರಡೂ ಸೈನ್ಯಗಳೂ ಸಂಘಟ್ಟಿಸಿ ಬೇಗ ಯುದ್ಧಮಾಡಿದವು. )
ಪದ್ಯ-೬೦:ಅರ್ಥ: ಸಂಸಪ್ತಕರುಗಳು ವಿಶೇಷಕೋಪದಿಂದ ಕೂಡಿ ನನ್ನಲ್ಲಿ ಯುದ್ಧಮಾಡಲು ಪ್ರತಿಜ್ನೆ ಮಾಡಿ ಆ ಕಡೆಗೆ ಕರೆಯುತ್ತಿದ್ದಾರೆ. ಮತ್ತು ಈ ಕಡೆ ಕರ್ಣನು ವಿಶೇಷ ಛಲದಿಂದ ಯುದ್ಧಮಾಡಲು ನಿಂತಿದ್ದಾನೆ. ಏನು ಮಾಡುವುದು ಎಂದು ಕೇಳಿದನು. ಮೊದಲು ತ್ರಿಗರ್ತ ದೇಶದ ರಾಜನ ಸೈನ್ಯವನ್ನು ಪುಡಿಮಾಡು ನೀನು ಎಂದು, ಎಂದು ಹೇಳಿ ರಥವನ್ನು ಕೃಷ್ಣನು ಆ ಕಡೆಗೆ ನೆಡಸಿಕೊಂಡು ಹೋದನು. ಈ ಕಡೆ ತಕ್ಷಣವೇ ಎರಡೂ ಸೈನ್ಯಗಳೂ ಸಂಘಟ್ಟಿಸಿ ಬೇಗ ಯುದ್ಧಮಾಡಿದವು.
ವ||ಅಂತುಚತುರ್ಬಲಂಗಳೊಂದೊಂದರೊಳ್ ಕಾಗೆ ನಟ್ಟ ಸರಳ್ವಿಡಿದು ಕರಗದ ಧಾರೆಯಂತೆ ಸುರಿವ ನೆತ್ತರ ಧಾರೆಗಳಂಬಿರಿವಿಡುವಿನಮತ್ತಮಿತ್ತಮುರ್ಚಿವೋಪ ಕಿತ್ತಂಬುಗಳಂ ಸುರುಳ್ದುರುಳ್ದ ಧನುರ್ಧರರುಮುಂ ಧನುರ್ಧರರೆಚ್ಚ ಶರನಿಕರಂಗಳಿಂ ನೆಯ್ ಪೇರುವಂತಂಬನೆ ಪೇರಿ ಪರಗೆದೆದ ತುರುಷ್ಕ ತುರಂಗಗಳಮಂ ಕೆದರಿ ಬೆದರಿ ಬೆಂಕೊಂಡು ತೊತ್ತಳಿದುಳಿವ ಮದೇಭಗಳುಮಂ ಮಧೇಭಂಗಳನಾರ್ದು ಬಿಟ್ಟಿಕ್ಕುವ ನಿಷಾದಿಗಳಳಿಯೆ ಪೊರಜೆವಿಡಿದು ಕೊರಲ ಬಳಿಗಳೊಳೆ ಕಾಲ್ಗೋದು ಪರಿಯಿಸುವ ರಸತ್ತಾರುಗರುಮಂ ಆ ರಸತ್ತಾರು ಗರುಡುವಿಟ್ಟಿಯ ಪಿರಿಕುತ್ತಿನ ಕಕ್ಕಡೆಯ ಕೋಳ್ಗೆ ಮರಪಟಲಂ ಪಾಯ್ದು ಕೆಡೆದನಾರೂಢದಿಂ ಪೇಸೇಳಿ ತುಳಿದು ಕೊಲ್ವ ಕರಿಗಳ ಕರ ವದನ ಗಾತ್ರ ಲಾಗೂಲ ಘಾತದಿಂದ ಮಡಿದು ಕೆಡೆದ ರಥಂಗಳಂ ರಥಂಗಳಿಟ್ಟಡೆಯೊಳ್ ಕಿಂಕೊಳಿಯಾಗಿ ಪೆತ್ತ ಕೆನ್ನೆತ್ತರೊಳ್ ಮೆತ್ತಿ ರೂಪರಿಯಲಾಗದಂತಿರ್ದ ವೀರಭಟರಗುರ್ವಂ ಪಡೆಯೆ ಕರ್ಣನನೇಕವಿಕರ್ಣಕೋಟಿಗಳಿಂ ಪಾಂಡವಬಲಮನಸುಂಗೊಳೆ ಕಾದುವಲ್ಲಿ ಪಾಂಡವ ಬಲದೊಳ್ವೆಸರರೆಕೆಯ ನಾಯಕಂ ಕೃತವರ್ಮಂ ಕೌರವಬಲದ ಚಿತ್ರಸೇನನಗುರ್ವಾಗೆ ತಾಗಿ-
ವಚನ:ಪದವಿಭಾಗ-ಅರ್ಥ:ಅಂತುಚತುರ್ಬಲಂಗಳು ಒಂದೊಂದರೊಳ್ ಕಾದೆ (ಹಾಗೆ ನಾಲ್ಕುಬಗೆಯ ಸೈನ್ಯಗಳೂ ಒಂದರೊಡನೊಂದು ಸೇರಿ ಯುದ್ಧ ಮಾಡಲು) ನಟ್ಟ ಸರಳ್ ವಿಡಿದು ಕರಗದ ಧಾರೆಯಂತೆ ಸುರಿವ ನೆತ್ತರ ಧಾರೆಗಳ್ (ನಾಟಿದ ಬಾಣವನ್ನೇ ಅನುಸರಿಸಿ ಗಿಂಡಿಯಿಂದ ಸುರಿಯುವ ಧಾರೆಯಂತೆ ಸುರಿಯುತ್ತಿರುವ ರಕ್ತಧಾರೆಗಳು) ಅಂಬಿರಿವಿಡುವಿನಂ (ಪ್ರವಾಹವಾಗಿ - ಹರಿದವು) ಅತ್ತಮಿತ್ತಂ ಉರ್ಚಿ ವೋಪ ಕಿತ್ತಂಬುಗಳಂ (ಆ ಕಡೆ ಈ ಕಡೆ ಭೇದಿಸಿ ಹೋಗುವಸಣ್ಣ ಬಾಣಗಳಿಂದ) ಸುರುಳ್ದು ಉರುಳ್ದ ಧನುರ್ಧರರುಮುಂ (ಸುರುಳೀಗೊಂಡು ಉರುಳಿಬಿದ್ದಿರುವ ಬಿಲ್ಗಾರರಿಂದಲೂ) ಧನುರ್ಧರರು ಎಚ್ಚ ಶರ ನಿಕರಂಗಳಿಂ (ಬಿಲ್ಗಾರರು ಹೊಡೆದ ಬಾಣಗಳ ಸಮೂಹದಿಂದ) ನೆ/ ಎಯ್ ಪೇರುವಂತೆ ಅಂಬನೆ ಪೇರಿ (ಮುಳ್ಳು ಹಂದಿಗಳನ್ನು ಹೇರುವವಂತೆ ಬಾಣಗಳನ್ನು ಹೇರಿ) ಪರಗೆದೆದ ತುರುಷ್ಕ ತುರಂಗಗಳಮಂ (ಹಿಂದೆಬಿದ್ದ ತುರುಕದೇಶದ ಕುದುರೆಗಳಿಂದಲೂ) ಕೆದರಿ ಬೆದರಿ ಬೆಂಕೊಂಡು ತೊತ್ತಳಿದುಳಿವ ಮದೇಭಗಳುಮಂ (ಚೆಲ್ಲಾಪಿಲ್ಲೆಯಾಗಿ ಬಿದ್ದ ಹೆದರಿ ಹಿಂಬಾಲಿಸಿ ಅಜ್ಜುಗುಜ್ಜಾಗಿ ತುಳಿದುಹಾಕುವ ಮದ್ದಾನೆಗಳಿಂದಲೂ,) ಮಧೇಭಂಗಳನು ಆರ್ದು ಬಿಟ್ಟಿಕ್ಕುವ ನಿಷಾದಿಗಳ (ಮದ್ದಾನೆಗಳನ್ನು ಕೂಡಿಕೊಂದು ಛೂಬಿಡುವ ಮಾವಟಿಗರೂ) ಅಳಿಯೆ ಪೊರಜೆವಿಡಿದು ಕೊರಲ ಬಳಿಗಳೊಳೆ ಕಾಲ್ಗೋದು ಪರಿಯಿಸುವ (ನಾಶವಾಗಲು ಹಗ್ಗವನ್ನೇ ಹಿಡಿದುಕೊಂಡು,ಕತ್ತಿನ ಪಕ್ಕದಲ್ಲಿಯೇ ತಮ್ಮ ಕಾಲನ್ನು ಪೋಣಿಸಿ, ಹರಿಯಿಸುವ - ಓಡಿಸುವ- ) ರಸತ್ತಾರುಗರುಮಂ (ಆನೆಯ ಮೇಲೆ ಕುಳಿತು ಯುದ್ಧಮಾಡುವವರನ್ನೂ - ಮಾವಟಿಗರಿಂದಲೂ,) ಆ ರಸತ್ತಾರುಗರ ಇಡುವಿಟ್ಟಿಯ (ಆನೆಯಭಟರು ಎಸೆಯುತ್ತಿರುವ ಈಟಿಯ ಹೊಡೆತಕ್ಕೆ) ಪಿರಿಕುತ್ತಿನ ಕಕ್ಕಡೆಯ ಕೋಳ್ಗೆ (ಪಿರಿಕುತ್ತಿ, ಕಕ್ಕಡೆ ಎಂಬ ಆಯುಧದ ಹೊಡೆತಕ್ಕೆ) ಮರಪಟಲಂ ಪಾಯ್ದು ಕೆಡೆದನ್ ಆರೂಢದಿಂ (ಮರಪಟಲದಿಂದ ಚಿಮ್ಮುವ ಕಾಯಂತೆ ಹಾರಿ ಕಳಿವನು ಕೆಡೆದ - ಕೆಳಗೆಬಿದ್ದವರನ್ನು.) ಪೇಸೇಳಿ ತುಳಿದು ಕೊಲ್ವ (ಹೇಸುವಂತೆ ತುಳಿದು ಕೊಲ್ಲುವ) ಕರಿಗಳ ಕರ ವದನ ಗಾತ್ರ ಲಾಗೂಲ ಘಾತದಿಂದ ಮಡಿದು ಕೆಡೆದ ರಥಂಗಳಂ (ಆನೆಗಳ ಸೊಂಡಿಲು, ಮುಖ, ಶರೀರ ಮತ್ತು ಬಾಲಗಳ ಪೆಟ್ಟಿನಿಂದ ಒಡೆದು ಕೆಳಗೆ ಬಿದ್ದ ತೇರುಗಳಿಂದಲೂ) ರಥಂಗಳ ಇಟ್ಟಡೆಯೊಳ್ ಕಿಂಕೊಳಿಯಾಗಿ ಪೆತ್ತ ಕೆನ್ನೆತ್ತರೊಳ್ ಮೆತ್ತಿ (ತೇರಿನ ಇಕ್ಕಟ್ಟುಗಳಲ್ಲಿ ಕೆಸರಿನ ಹಳ್ಳವಾಗಿ ಹೆತ್ತು ಹೆಪ್ಪುಗೊಂಡಿರುವ ಕೆಂಪು ರಕ್ತದಲ್ಲಿ ಅಂಟಿಕೊಂಡು,) ರೂಪು ಅರಿಯಲಾಗದಂತೆ ಇರ್ದ ವೀರಭಟರ ಅಗುರ್ವಂ ಪಡೆಯೆ ( ಆಕಾರವನ್ನು ತಿಳಿಯಲು ಆಗದಂತೆ,ವಿರೂಪವಾಗಿದ್ದರಿಂದಲೂ, ಭಯವನ್ನು ಉಂಟು ಮಾಡುವಂತೆ) ಕರ್ಣನು ಅನೇಕ ವಿಕರ್ಣಕೋಟಿಗಳಿಂ ಪಾಂಡವಬಲಮನು ಅಸುಂಗೊಳೆ ಕಾದುವಲ್ಲಿ (ಕರ್ಣನು ಅನೇಕ ಬಾಣಸಮೂಹಗಳಿಂದ ಪಾಂಡವ ಸೈನ್ಯದೊಡನೆ ಪ್ರಾಣಾಪಹಾರ ಮಾಡುವ ರೀತಿಯಲ್ಲಿ ಯುದ್ಧಮಾಡುತ್ತಿರಲು) ಪಾಂಡವ ಬಲದೊಳ್ ವೆಸರ ಅರೆಕೆಯ ನಾಯಕಂ ಕೃತವರ್ಮಂ (??) ಕೌರವಬಲದ ಚಿತ್ರಸೇನನಗುರ್ವಾಗೆ ತಾಗಿ (ಪಾಂಡವ ಸೈನ್ಯದ ಪ್ರಖ್ಯಾತನಅದ ಕೃತವರ್ಮನೂ, ಕೌರವಬಲ ನಾಯಕನಾದ ಚಿತ್ರಸೇನನೂ ಭಯಂಕರವಾದ ರೀತಿಯಲ್ಲಿ ಕಾದಲು ತೊಡಗಿದರು)-
ವಚನ:ಅರ್ಥ:ಹಾಗೆ ನಾಲ್ಕುಬಗೆಯ ಸೈನ್ಯಗಳೂ ಒಂದರೊಡನೊಂದು ಸೇರಿ ಯುದ್ಧ ಮಾಡಲು ನಾಟಿದ ಬಾಣವನ್ನೇ ಅನುಸರಿಸಿ ಗಿಂಡಿಯಿಂದ ಸುರಿಯುವ ಧಾರೆಯಂತೆ ಸುರಿಯುತ್ತಿರುವ ರಕ್ತಧಾರೆಗಳು ಪ್ರವಾಹವಾಗಿ ಹರಿದವು. ಆ ಕಡೆ ಈ ಕಡೆ ಭೇದಿಸಿ ಹೋಗುವಸಣ್ಣ ಬಾಣಗಳಿಂದ ಸುರುಳೀಗೊಂಡು ಉರುಳಿಬಿದ್ದಿರುವ ಬಿಲ್ಗಾರರಿಂದಲೂ ಬಿಲ್ಗಾರರು ಹೊಡೆದ ಬಾಣಗಳ ಸಮೂಹದಿಂದ ಮುಳ್ಳು ಹಂದಿಗಳನ್ನು ಹೇರುವವಂತೆ ಬಾಣಗಳನ್ನು ಹೇರಿ ಹಿಂದೆಬಿದ್ದ ತುರುಕದೇಶದ ಕುದುರೆಗಳಿಂದಲೂ ಚೆಲ್ಲಾಪಿಲ್ಲೆಯಾಗಿ ಬಿದ್ದ ಹೆದರಿ ಹಿಂಬಾಲಿಸಿ ಅಜ್ಜುಗುಜ್ಜಾಗಿ ತುಳಿದುಹಾಕುವ ಮದ್ದಾನೆಗಳಿಂದಲೂ, ಮದ್ದಾನೆಗಳನ್ನು ಕೂಡಿಕೊಂದು ಛೂಬಿಡುವ ಮಾವಟಿಗರೂ, ನಾಶವಾಗಲು ಹಗ್ಗವನ್ನೇ ಹಿಡಿದುಕೊಂಡು,ಕತ್ತಿನ ಪಕ್ಕದಲ್ಲಿಯೇ ತಮ್ಮ ಕಾಲನ್ನು ಪೋಣಿಸಿ, ಹರಿಯಿಸುವ ಮಾವಟಿಗರಿಂದಲೂ, ಆನೆಯ ಮೇಲೆ ಕುಳಿತು ಯುದ್ಧಮಾಡುವವರಿಂದಲೂ, ಆ ಮಾವಟಿಗರು ಆನೆಯಭಟರು ಎಸೆಯುತ್ತಿರುವ ಈಟಿಯ ಹೊಡೆತಕ್ಕೆ, ಪಿರಿಕುತ್ತಿ, ಕಕ್ಕಡೆ ಎಂಬ ಆಯುಧದ ಹೊಡೆತಕ್ಕೆ, ಮರಪಟಲದಿಂದ ಚಿಮ್ಮುವ ಕಾಯಂತೆ ಹಾರಿ ಕಳಿವನು ಕೆಳಗೆ ಬಿದ್ದವರನ್ನು ಹೇಸುವಂತೆ ತುಳಿದು ಕೊಲ್ಲುವ ಆನೆಗಳಿಂದಲೂ, ಆನೆಗಳ ಸೊಂಡಿಲು, ಮುಖ, ಶರೀರ ಮತ್ತು ಬಾಲಗಳ ಪೆಟ್ಟಿನಿಂದ ಒಡೆದು ಕೆಳಗೆ ಬಿದ್ದ ತೇರುಗಳಿಂದಲೂ, ತೇರಿನ ಇಕ್ಕಟ್ಟುಗಳಲ್ಲಿ ಕೆಸರಿನ ಹಳ್ಳವಾಗಿ ಹೆತ್ತು ಹೆಪ್ಪುಗೊಂಡಿರುವ ಕೆಂಪು ರಕ್ತದಲ್ಲಿ ಅಂಟಿಕೊಂಡು, ಆಕಾರವನ್ನು ತಿಳಿಯಲು ಆಗದಂತೆ,ವಿರೂಪವಾಗಿದ್ದರಿಂದಲೂ, ಭಯವನ್ನು ಉಂಟು ಮಾಡುವಂತೆ, ಕರ್ಣನು ಅನೇಕ ಬಾಣಸಮೂಹಗಳಿಂದ ಪಾಂಡವ ಸೈನ್ಯದೊಡನೆ ಪ್ರಾಣಾಪಹಾರ ಮಾಡುವ ರೀತಿಯಲ್ಲಿ ಯುದ್ಧಮಾಡುತ್ತಿರಲು ಪಾಂಡವ ಸೈನ್ಯದ ಪ್ರಖ್ಯಾತನಾದ ಕೃತವರ್ಮನೂ, ಕೌರವಬಲ ನಾಯಕನಾದ ಚಿತ್ರಸೇನನೂ ಭಯಂಕರವಾದ ರಿತಿಯಲ್ಲಿ ಕಾದಲು ತೊಡಗಿದರು.
ಕಂ||ಚಿತ್ರ ಪತತ್ರಿಯಳೆರಪ ಪ
ತತ್ರಿಗಳಂ ಕಡಿದು ಚಿತ್ರಸೇನನಾಗಳ್ |
ಚಿತ್ರವಧಮಾಗೆ ಕೊಂದೊಡೆ
ಧಾತ್ರಿಗೆ ತಾಂ ಚಿತ್ರಮಾಯ್ತು ಭುಜಬಲಮವನಾ||೬೧||
ಪದ್ಯ-೬೧:ಪದವಿಭಾಗ-ಅರ್ಥ:ಚಿತ್ರ ಪತತ್ರಿಯಳ್ ಎರಪ (ವಿವಿಧ ಬಗೆಯ ಮೇಲೆ ಬೀಳುವ ಬಾಣಗಳನ್ನ) ಪತತ್ರಿಗಳಂ ಕಡಿದು (ಅಂತಹ ಬಾಣಗಳಿಂದಲೇ ಕತ್ತರಿಸಿ) ಚಿತ್ರಸೇನನಂ ಆಗಳ್ (ಚಿತ್ರಸೇನನ್ನು ಆಗ) ಚಿತ್ರವಧಂ ಆಗೆ ಕೊಂದೊಡೆ (ವಿಚಿತ್ರವಾದ ರೀತಿಯಲ್ಲಿ ಕೊಂದರೆ) ಧಾತ್ರಿಗೆ ತಾಂ ಚಿತ್ರಮಾಯ್ತು ಭುಜಬಲಂ ಅವನಾ (ಅವನ/ ಕೃತವರ್ಮನ ಭುಜಬಲವು ಭೂಮಿಗೇ ವಿಚಿತ್ರವಾಯಿತು.)
  • ಅನ್ವಯ: ಎರಪ ಪತತ್ರಿಗಳಂ(ಮೇಲೆ ಬೀಳುವ ಬಾಣಗಳನ್ನು) ಚಿತ್ರ ಪತತ್ರಿಯಳ್ ಕಡಿದು (ಅದೇ ಬಗೆಯ ವಿಚಿತ್ರ ಬಾಣಗಳಿಂದಲೇ ಕತ್ತರಿಸಿ) ಆಗಳ್ ಚಿತ್ರಸೇನನಂ (ಆಗ ಚಿತ್ರಸೇನನ್ನು ) ಚಿತ್ರವಧಂ ಆಗೆ ಕೊಂದೊಡೆ (ವಿಚಿತ್ರವಾದ ರೀತಿಯಲ್ಲಿ ಕೊಂದರೆ) ಭುಜಬಲಂ ಅವನಾ (ಅವನ/ ಕೃತವರ್ಮನ ಭುಜಬಲವು) ಧಾತ್ರಿಗೆ ತಾಂ ಚಿತ್ರಮಾಯ್ತು( ಭೂಮಿಗೇ ವಿಚಿತ್ರವಾಯಿತು.)
ಪದ್ಯ-೬೧:ಅರ್ಥ:ವಿವಿಧ ಬಗೆಯ ಮೇಲೆ ಬೀಳುವ ಬಾಣಗಳನ್ನು ಅಂತಹ ಬಾಣಗಳಿಂದಲೇ ಕತ್ತರಿಸಿ, ಚಿತ್ರಸೇನನ್ನು ಆಗ ವಿಚಿತ್ರವಾದ ರೀತಿಯಲ್ಲಿ ಕೊಂದಾಗ ಕೃತವರ್ಮನ ಪರಾಕ್ರಮವು ಭೂಮಿಗೇ ವಿಚಿತ್ರವಾಯಿತು.
ವ||ಅಂತು ಕೌರವಬಲ ಪ್ರಧಾನ ನಾಯಕನಪ್ಪ ಚಿತ್ರಸೇನಂ ಕೃತವರ್ಮನ ಕಯ್ಯೊಳತೀತನಾದುದರ್ಕೇವೈಸಿ-
ವಚನ:ಪದವಿಭಾಗ-ಅರ್ಥ:ಅಂತು ಕೌರವಬಲ ಪ್ರಧಾನ ನಾಯಕನಪ್ಪ (ಹಾಗೆ ಕೌರವಸೈನ್ಯದ ಮುಖ್ಯ ಸೇನಾಧಿಪತಿಯಾದ ) ಚಿತ್ರಸೇನಂ ಕೃತವರ್ಮನ ಕಯ್ಯೊಳ್ ಅತೀತನಾದುದರ್ಕೆ ಏವೈಸಿ (ಚಿತ್ರಸೇನನು ಕೃತವರ್ಮನ ಕೈಯಲ್ಲಿ ಸತ್ತುದಕ್ಕೆ ದುಃಖಪಟ್ಟು)-
ವಚನ:ಅರ್ಥ: ಹಾಗೆ ಕೌರವಸೈನ್ಯದ ಪ್ರಮುಖ ಸೇನಾಧಿಪತಿಯಾದ ಚಿತ್ರಸೇನನು ಕೃತವರ್ಮನ ಕೈಯಲ್ಲಿ ಸತ್ತುದಕ್ಕೆ ದುಃಖಪಟ್ಟು-
ಕಂ||ಅತಿ ಚಿತ್ರಂ ಚಿತ್ರನವಿ
ಶ್ರುತ ಶೌರ್ಯಮಿದೆನಿಸಿ ತಾಪ ಚಿತ್ರನನಂತಾ|
ಪ್ರತಿವಿಂದ್ಯಂ ವಿಂಧ್ಯಾಚಲ
ಪತಿಯವೊಲವಿಚಳಿತನಾತನಂ ಬಂದಾಂತಂ||೬೨ ||
ಪದ್ಯ-೬೨:ಪದವಿಭಾಗ-ಅರ್ಥ:ಅತಿ ಚಿತ್ರಂ,- ಚಿತ್ರನ (ಚಿತ್ರನೆಂಬುವವನ) ವಿಶ್ರುತ ಶೌರ್ಯಂ (ಪ್ರಸಿದ್ಧ ಶೌರ್ಯವು) ಇದು ಎನಿಸಿ (ಅತಿ ಚಿತ್ರಂ- ಬಹಳ ಆಸ್ಚರ್ಯಕರವಾದುದು ಇದು ಎನ್ನಿಸಿಕೊಂಡು) ತಾಪ ಚಿತ್ರನಂ (ಮೇಲೆ ಬೀಳುವ ಚಿತ್ರನನ್ನು) ಅಂತು ಆ ಪ್ರತಿವಿಂದ್ಯಂ (ಹಾಗೆ ಆ ಪ್ರತಿವಿಂದ್ಯನೆಂಬುವವನು) ವಿಂಧ್ಯಾಚಲ ಪತಿಯವೊಲ್ (ಶ್ರೇಷ್ಠವಾದ ವಿಂಂಧ್ಯಪರ್ವತದಂತೆ) ಅವಿಚಳಿತಂ (ಸ್ಥಿರವಾಗಿರುವವನು) ಆತನಂ (ಆ ಚಿತ್ರನನ್ನು) ಬಂದು ಆಂತಂ (ಬಂದು ಎದುರಿಸಿದನು.)
ಪದ್ಯ-೬೨:ಅರ್ಥ: ಈ ಹಿಂದೆಂದೂ ಕೇಳದೆ ಇದ್ದ ಈ ಚಿತ್ರನ ಪ್ರಸಿದ್ಧ ಶೌರ್ಯವು ಬಹಳ ಆಸ್ಚರ್ಯಕರವಾದುದು ಇದು ಎನ್ನಿಸಿಕೊಂಡು ಮೇಲೆ ಬೀಳುವ ಶ್ರೇಷ್ಠವಾದ ವಿಂಂಧ್ಯಪರ್ವತದಂತೆ ಸ್ಥಿರವಾಗಿರುವ ಚಿತ್ರನನ್ನು ಪ್ರತಿವಿಂದ್ಯನು ಬಂದು ಎದುರಿಸಿದನು.
ಆಂತನ ಮೇಗೆ ಶಿತ ಶರ
ಸಂತತಿಯಂ ಸುರಿಯೆನೋಡಿ ಶರಪರಿಣತಿಯಂ|
ತಾಂ ತೋರ್ಪನೆನಗೆನುತ್ತಿರ
ದಂತನಿತುಮನೊಡನೆ ಕಡಿದನೆಡೆಯೊಳೆಚಿತ್ರಂ ||೬೩||
ಪದ್ಯ-೬೩:ಪದವಿಭಾಗ-ಅರ್ಥ:ಆಂತನ ಮೇಗೆ (ಎದುರಿಸಿದವನ ಮೇಲೆ) ಶಿತ ಶರ ಸಂತತಿಯಂ (ಹರಿತವಾದ ಬಾಣಗಳ ಸಮೂಹವನ್ನು) ಸುರಿಯೆ ನೋಡಿ (ಸುರಿಸಲು ನೋಡಿ) ಶರಪರಿಣತಿಯಂ ತಾಂ (ತಾನು ತನ್ನ ಬಿಲ್ಲುವಿದ್ಯೆಯ ಪಾಂಡಿತ್ಯವನ್ನು ) ತೋರ್ಪನು ಎನಗೆ ಎನುತ್ತ (ನನಗೆ ತೋರಿಸುತ್ತಾನೆಯಲ್ಲವೇ? ಎನ್ನುತ್ತಾ) ಇರದೆ ಅಂತು (ಸಾವಕಾಶಮಾಡಗೆ ಹಾಗೆ) ಅನಿತುಮನು ಒಡನೆ ಕಡಿದನು ಎಡೆಯೊಳೆ (ನಡುವೆಯೇ) ಚಿತ್ರಂ (ಆ ಅಷ್ಟನ್ನೂ ತಕ್ಷಣವೇ ಚಿತ್ರನು ಮಧ್ಯದಲ್ಲಿಯೇ ಕತ್ತರಿಸಿ ಹಾಕಿದನು.)
ಪದ್ಯ-೬೩:ಅರ್ಥ: ಎದುರಿಸಿದ ಪ್ರತಿವಿಂದ್ಯನ ಮೇಲೆ ಹರಿತವಾದ ಬಾಣಗಳ ಸಮೂಹವನ್ನು ಸುರಿಯಲು , ನೋಡಿ ತಾನು ತನ್ನ ಬಿಲ್ಲುವಿದ್ಯೆಯ ಪಾಂಡಿತ್ಯವನ್ನು ನನಗೆ ತೋರಿಸುತ್ತಾನೆಯಲ್ಲವೇ? ಎನ್ನುತ್ತಾ ಸಾವಕಾಶಮಾಡಗೆ ಹಾಗೆ ಆ ಅಷ್ಟನ್ನೂ ತಕ್ಷಣವೇ ಚಿತ್ರನು ಮಧ್ಯದಲ್ಲಿಯೇ ಕತ್ತರಿಸಿ ಹಾಕಿದನು.
ಕಡಿದೊಡೆ ಕಡುಪಿಂದಂ ಕಿಡಿ
ಕಿಡಿಯಾಗಿ ಶಿತಾಸ್ತ್ರ ನಿಕರಮಂ ಪ್ರತಿವಿಂದ್ಯಂ |
ಕಡಿದವನ ರಥಮನೊರ್ಮೆಯೆ
ಕಡಿದಂ ತಲೆಯಮನೊಂದೊಂದುದಾರುಣ ಶರದಿಂ ||೬೪||
ಪದ್ಯ-೬೪:ಪದವಿಭಾಗ-ಅರ್ಥ:ಕಡಿದೊಡೆ (ಹಾಗೆ ಬಾಣಗಳನ್ನು ಚಿತ್ರನು ಕತ್ತರಿಸಿದರೆ) ಕಡುಪಿಂದಂ ಕಿಡಿಕಿಡಿಯಾಗಿ (ತೀವ್ರತೆಯಿಂದ ಪ್ರತಿವಿಂಧ್ಯನು ಸಿಟ್ಟಿನಿಂದ ಕಿಡಿಕಿಡಿಯಾಗಿ) ಶಿತಾಸ್ತ್ರ ನಿಕರಮಂ < - ಪ್ರತಿವಿಂದ್ಯಂ (ಬರುತ್ತಿರುವ ಹರಿತವಾದ ಬಾಣಗಳ ಜಾಲವನ್ನು) ಕಡಿದು (ಕತ್ತರಿಸಿ) ಅವನ ರಥಮನು ಒರ್ಮೆಯೆ ಕಡಿದಂ(ಕತ್ತರಿಸಿ ಹಾಕಿದನು.) ತಲೆಯಮಂ ಅದೊಂದು ದಾರುಣ ಶರದಿಂ (ಅವನ ತೇರನ್ನೂ ತಲೆಯನ್ನೂ ಒಂದು ಕ್ರೂರವಾದ ಬಾಣದಿಂದ ಒಂದೇ ಸಲ ಕತ್ತರಿಸಿ ಹಾಕಿದನು.)
ಪದ್ಯ-೬೪:ಅರ್ಥ: ಹಾಗೆ ಬಾಣಗಳನ್ನು ಚಿತ್ರನು ಕತ್ತರಿಸಿದರೆ, ತೀವ್ರತೆಯಿಂದ ಪ್ರತಿವಿಂಧ್ಯನು ಸಿಟ್ಟಿನಿಂದ ಕಿಡಿಕಿಡಿಯಾಗಿ ಬರುತ್ತಿರುವ ಹರಿತವಾದ ಬಾಣಗಳ ಜಾಲವನ್ನು ಕತ್ತರಿಸಿ ಅವನ ತೇರನ್ನೂ ತಲೆಯನ್ನೂ ಒಂದು ಕ್ರೂರವಾದ ಬಾಣದಿಂದ ಒಂದೇ ಸಲ ಕತ್ತರಿಸಿ ಹಾಕಿದನು.
ವ||ಅಂತು ಚಿತ್ರನಂ ಕೊಂದು ಕುರುಕ್ಷೇತ್ರದೊಳ್ ತನ್ನ ಮಾತೇ ಮಾತಾಗೆ ಕೌರವಬಲಮೆಲ್ಲಮುಂಪ್ರತಿವಿಂಧ್ಯನವಂದ್ಯ ಕೋಪೋದ್ರೇಕದಿಂದಾಸ್ಫೋಟಿಸಿ ಕೊಲ್ವಾಗಳ್-
ವಚನ:ಪದವಿಭಾಗ-ಅರ್ಥ:ಅಂತು ಚಿತ್ರನಂ ಕೊಂದು ಕುರುಕ್ಷೇತ್ರದೊಳ್ (ಹಾಗೆ ಚಿತ್ರನನ್ನು ಕೊಂದು ಕುರುಕ್ಷೇತ್ರದಲ್ಲಿ) ತನ್ನ ಮಾತೇ ಮಾತಾಗೆ (ತನ್ನ ಶೌರ್ಯದ ಮಾತೇ ಮಾತು ಆಡುತ್ತಿರಲು,) ಕೌರವಬಲಮೆಲ್ಲಮುಂ ಪ್ರತಿವಿಂಧ್ಯನವಂದ್ಯ ಕೋಪೋದ್ರೇಕದಿಂದ ಆಸ್ಫೋಟಿಸಿ ಕೊಲ್ವಾಗಳ್ (ಪ್ರತಿವಿಂದ್ಯನು ಕೌರವಸೈನ್ಯವನ್ನೆಲ್ಲ ವ್ಯರ್ಥವಾಗದ ಕೋಪೋದ್ರೇಕದಿಂದ ಶಬ್ದಮಾಡಿ- ತೋಳನ್ನು ತಟ್ಟಿ ಕೊಲ್ಲುವಾಗ)-
ವಚನ:ಅರ್ಥ:ಹಾಗೆ ಚಿತ್ರನನ್ನು ಕೊಂದು ಕುರುಕ್ಷೇತ್ರದಲ್ಲಿ ತನ್ನ ಶೌರ್ಯದ ಮಾತೇ ಮಾತು ಆಡುತ್ತಿರಲು, ಪ್ರತಿವಿಂದ್ಯನು ಕೌರವಸೈನ್ಯವನ್ನೆಲ್ಲ ವ್ಯರ್ಥವಾಗದ ಕೋಪೋದ್ರೇಕದಿಂದ ಶಬ್ದಮಾಡಿ- ತೋಳನ್ನು ತಟ್ಟಿ ಕೊಲ್ಲುವಾಗ-
ಮ||ಸ್ರ|| ಕುರುಸೈನ್ಯಾಂಭೋಧಿ ತೊಳ್ದೆಯ್ದುಗಿದಪುದಿದನಾರಿಲ್ಲಿ ಕೆಯ್ಕೊಳ್ವರೀ ಸಂ
ಗರದೊಳ್ ನಿಲ್ವನ್ನರಾರೆಂಬೆಡೆಯೊಳಿದಿರೊಳಾನಲ್ತೆ ಬಂದಿರ್ದೆನೆಂದೆ|
ಲ್ಲರುಮಂ ಸಂತೈಸಿ ಕಣ್ಬಿಲ್ ಕರೆ ಪೆರೆ ನೊಸಲೊಳ್ ಚಂಡದೋರ್ದಂಡದೊಳ್ ಕಂ
ಧರದೊಳ್ ತನನುತ್ತಮಾಂಗಾಂತರದೊಳೆಸೆಯೆ ನಿಂದಾಂತ ನಾಚಾರ್ಯಪುತ್ರಂ||೬೫||
ಪದ್ಯ-೦೦:ಪದವಿಭಾಗ-ಅರ್ಥ:ಕುರುಸೈನ್ಯಾಂಭೋಧಿ (ಕುರುಸೈನ್ಯ ಅಂಭೋಧಿ-, ಕೌರವಸೇನಾ ಸಮುದ್ರವು) ತೊಳ್ದು ಎಯ್ದು ಉಗಿದಪುದು ಇದನು ಆರು ಇಲ್ಲಿ ಕೆಯ್ಕೊಳ್ವರು (ನೂಕಲ್ಪಟ್ಟು ವಿಶೇಷವಾಗಿ (ಹಿಂದಕ್ಕೆ) ಎಳೆಯಲ್ಪಡುತ್ತಿದೆ. ಇದನ್ನು ಇಲ್ಲಿ ಯಾರು ಬಂದು ಕಾಯುವರು?) ಈ ಸಂಗರದೊಳ್ ನಿಲ್ವನ್ನರು ಆರ ಎಂಬೆಡೆಯೊಳ್ (ಈ ಯುದ್ಧದಲ್ಲಿ ನಿಲ್ಲುವಂತಹವರು ಯಾರು, ಎನ್ನವ ಸಮಯಕ್ಕೆ ಸರಿಯಾಗಿ) ಇದಿರೊಳ್ ಆನಲ್ತೆ ಬಂದಿರ್ದೆನು ಎಂದೆಲ್ಲರುಮಂ ಸಂತೈಸಿ (ಆಚಾರ್ಯ ಪುತ್ರನಾದ ಅಶ್ವತ್ಥಾಮನು- ಆ ಕಾರ್ಯಕ್ಕೆ ಇದೋ ನಾನಲ್ಲವೇ ಎದುರಿಗೆ ಬಂದಿದ್ದೇನೆ, ಎಂದು ಎಲ್ಲರನ್ನೂ ಸಮಾಧಾನ ಮಾಡಿ) ಕಣ್ಬಿಲ್, ಕರೆ, ಪೆರೆ, ನೊಸಲೊಳ್ ಚಂಡ ದೋರ್ದಂಡದೊಳ್ ಕಂಧರದೊಳ್ (ಮುಖದಲ್ಲಿ ಮೂರು/ಕಣ್ಣು- ಹಣೆಯಲ್ಲಿ ಬಿಲ್ಲು (ಮುಚ್ಚದ ಕಣ್ಣು), ಪ್ರಚಂಡವಾದ ದೋರ್ದಂಡದಲ್ಲಿ-ಬಾಹುವಿನಲ್ಲಿ ಬಿಲ್ಲು, ಕಂಧರ-ಕತ್ತಿನಲ್ಲಿ ಕರೆಯ ವಿಷದಗುರುತು,) ತನ್ನ ಉತ್ತಮಾಂಗ ಅಂತರದೊಳು ಎಸೆಯೆ (ತನ್ನ ತಲೆಯಲ್ಲಿ ಪೆರೆ- ಅರ್ಧಚಂದ್ರನೂ ಪ್ರಕಾಶಿಸುತ್ತಿರಲು) ನಿಂದಾಂತ ನಾಚಾರ್ಯಪುತ್ರಂ (ನಿಂತು ಆಶ್ವತ್ಥಾನು ಎದುರಿಸಿದನು)
ಪದ್ಯ-೦೦:ಅರ್ಥ:ಕೌರವಸೇನಾ ಸಮುದ್ರವು ನೂಕಲ್ಪಟ್ಟು ವಿಶೇಷವಾಗಿ (ಹಿಂದಕ್ಕೆ) ಎಳೆಯಲ್ಪಡುತ್ತಿದೆ. ಇದನ್ನು ಇಲ್ಲಿ ಯಾರು ಬಂದು ಕಾಯುವರು? ಈ ಯುದ್ಧದಲ್ಲಿ ನಿಲ್ಲುವಂತಹವರು ಯಾರು, ಎನ್ನವ ಸಮಯಕ್ಕೆ ಸರಿಯಾಗಿ ಆಚಾರ್ಯ ಪುತ್ರನಾದ ಅಶ್ವತ್ಥಾಮನು ಆ ಕಾರ್ಯಕ್ಕೆ ಇದೋ ನಾನು ಬಂದಿದ್ದೇನೆ, ಎಂದು ಎಲ್ಲರನ್ನೂ ಸಮಾಧಾನ ಮಾಡಿ ಬಂದು ಮುಖದಲ್ಲಿ ಮೂರು/ಕಣ್ಣು- ಹಣೆಯಲ್ಲಿ ಬಿಲ್ಲು (ಮುಚ್ಚದ ಕಣ್ಣು), ಪ್ರಚಂಡವಾದ ದೋರ್ದಂಡದಲ್ಲಿ-ಬಾಹುವಿನಲ್ಲಿ ಬಿಲ್ಲು, ಕಂಧರ-ಕತ್ತಿನಲ್ಲಿ ಕರೆಯ ವಿಷದಗುರುತು, ತನ್ನ ತಲೆಯಲ್ಲಿ ಪೆರೆ- ಅರ್ಧಚಂದ್ರನೂ ಪ್ರಕಾಶಿಸುತ್ತಿರಲು ನಿಂತು ಆಶ್ವತ್ಥಾನು ಎದುರಿಸಿದನು.

ಯುದ್ಧಕ್ಕೆ ಭೀಮನ ಪ್ರವೇಶ[ಸಂಪಾದಿಸಿ]

ವ||ಆಗಳ್ ಪ್ರತಿವಿಂಧ್ಯನಂ ವಿಂಧ್ಯಾಚಲಮನ್ನೆಡಗಲಿಸಿದಗಸ್ತ್ಯನಂತೆ ಭೀಮಸೇನಂ ತಡೆಯದೆಡಗಲಿಸಿ ರುದ್ರಾವತಾರನ ರಥಕ್ಕದಿರದೆ ತನ್ನ ರಥಮಂ ಪರಿಯಿಸಿ-
ವಚನ:ಪದವಿಭಾಗ-ಅರ್ಥ:ಆಗಳ್ ಪ್ರತಿವಿಂಧ್ಯನಂ ವಿಂಧ್ಯಾಚಲಮನು ಎಡಗಲಿಸಿದ (ಎಡೆ-ಪಾದ ಕಲಿಸಿದ/ವಿಂಧ್ಯನು ಪಾದಕ್ಕೆ ನಮಿಸಿದಾಗ ಅಗಸ್ತ್ಯ ದಾಟಿದನು) ಅಗಸ್ತ್ಯನಂತೆ ಭೀಮಸೇನಂ ತಡೆಯದೆ ಎಡಗಲಿಸಿ (ಆಗ ವಿಂಧ್ಯ ಪರ್ವತವನ್ನು ಕಾಲಿಗೆ ಬೀಳಿಸಿದ ಅಗಸ್ತ್ಯ ಋಷಿಯ ಹಾಗೆ ಭೀಮನು ಸಾವಕಾಶ ಮಾಡದೆ ದಾಟಿ (ಅವರಿಬ್ಬರ ಮಧ್ಯೆ ಹಾರಿಬಂದು)) ರುದ್ರಾವತಾರನ ರಥಕ್ಕೆ ಅದಿರದೆ ತನ್ನ ರಥಮಂ ಪರಿಯಿಸಿ (ಅಶ್ವತ್ಥಾಮನ ತೇರಿಗೆ (ಎದುರಾಗಿ) ಹೆದರದೆ ತನ್ನ ರಥವನ್ನು ಹರಿಯಿಸಿ,)-
ವಚನ:ಅರ್ಥ: ಆಗ ವಿಂಧ್ಯ ಪರ್ವತವನ್ನು ಕಾಲಿಗೆ ಬೀಳಿಸಿದ ಅಗಸ್ತ್ಯ ಋಷಿಯ ಹಾಗೆ ಭೀಮನು ಸಾವಕಾಶ ಮಾಡದೆ ದಾಟಿ ಅಶ್ವತ್ಥಾಮನ ತೇರಿಗೆ (ಎದುರಾಗಿ) ಹೆದರದೆ ತನ್ನ ರಥವನ್ನು ಹರಿಯಿಸಿದನು.
ಚಂ|| ನಿನಗುರದೇನುಮಲ್ಲದಳಿಗಂಡರಿದಿರ್ಚುವರಲ್ಲರೆನ್ನನಾಂ
ಪನಿತಳವುಳ್ಳೊಡಿತ್ತ ಮುಗುಳಿಂದು ಶರಾವಳಿಯಿಂದೆ ಪೂಳ್ದೊಡಂ|
ಬಿನ ಸರಿಸೋನೆ ತಂದಲಿದು ದಲ್ ಪೊಸಾತಾಯ್ತೆನೆ ಕಂಡರೆಲ್ಲಮಂ
ಬಿನ ಮಳೆಗಾಲವಾಯ್ತು ಕುರುಭೂಮಿಗೆ ಭೀಮನದೇಂ ಪ್ರತಾಪಿಯೋ ||೬೬||
ಪದ್ಯ-೦೦:ಪದವಿಭಾಗ-ಅರ್ಥ:ನಿನಗೆ ಉರದೆ (ಸುಮ್ಮನೆ ಇರದೆ) ಏನುಮಲ್ಲದ ಅಳಿಗಂಡರ್ (ಶಕ್ತಿ ಇಲ್ಲದ ಸಾಮಾನ್ಯ ಶಕ್ತಿಹೀನರು ನಿನಗೆ) ಇದಿರ್ಚುವರಲ್ಲರ್ (ಎದುರಿಸುವವರಲ್ಲ.) ಎನ್ನನು ಆಂಪನಿತು ಅಳವು ಉಳ್ಳೊಡೆ ಇತ್ತ ಮುಗುಳ್ (ನನ್ನನ್ನು ಪ್ರತಿಭಟಸುವಷ್ಟು ನಿನಗೆ ಸಾಮರ್ಥ್ಯವಿದ್ದರೆ ಈ ಕಡೆ ತಿರುಗು) ಎ/ಇಂದು ಶರಾವಳಿಯಿಂದೆ ಪೂಳ್ದೊಡೆ (ಎಂದು ಭೀಮನು ಬಾಣಗಳ ಸಮೂಹದಿಂದ ಅವನನ್ನು ಹೂಳಲು,) ಅಂಬಿನ ಸರಿಸೋನೆ ತಂದಲು (ಬಾಣದ ಮಳೆ, ಜಡಿಮಳೆ, ತುಂತುರು ಮಳೆಗಳು - ಸುರಿಯಲು,) ಇದು ದಲ್ ಪೊಸಾತಾಯ್ತು ಎನೆ (ಇದು ನಿಜಕ್ಕೂ ಹೊಸದಾಯಿತು ಎಂದು) ಕಂಡರೆಲ್ಲಂ ಅಂಬಿನ ಮಳೆಗಾಲವಾಯ್ತು ಕುರುಭೂಮಿಗೆ (ಕುರುಭೂಮಿಗೆ ಬಾಣದ ಹೊಸಮಳೆಗಾಲವನ್ನು ಭೀಮನು ಉಂಟುಮಾಡಿದನು. ) ಭೀಮನು ಅದೇಂ ಪ್ರತಾಪಿಯೋ (ಭೀಮನು ಅದೆಂತಹ ಪ್ರತಾಪಶಾಲಿಯೋ! ಮಹಾ ಪ್ರತಾಪಿ.)
ಪದ್ಯ-೦೦:ಅರ್ಥ: ಶಕ್ತಿ ಇಲ್ಲದ ಸಾಮಾನ್ಯ ಶಕ್ತಿಹೀನರು ನಿನಗೆ ಎದುರಿಸುವವರಲ್ಲ. ನನ್ನನ್ನು ಪ್ರತಿಭಟಸುವಷ್ಟು ನಿನಗೆ ಸಾಮರ್ಥ್ಯವಿದ್ದರೆ ಈ ಕಡೆ ತಿರುಗು ಎಂದು ಭೀಮನು ಬಾಣಗಳ ಸಮೂಹದಿಂದ ಅವನನ್ನು ಹೂಳಲು, ಬಾಣದ ಮಳೆ, ಜಡಿಮಳೆ, ತುಂತುರು ಮಳೆಗಳು ಸುರಿಯಲು, ಇದು ನಿಜಕ್ಕೂ ಹೊಸದಾಯಿತು ಎಂದು ಕಂಡವರೆಲ್ಲರೂ ಹೇಳವಹಾಗೆ ಕುರುಭೂಮಿಗೆ ಬಾಣದ ಹೊಸಮಳೆಗಾಲವನ್ನು ಭೀಮನು ಉಂಟುಮಾಡಿದನು. ಭೀಮನು ಅದೆಂತಹ ಪ್ರತಾಪಶಾಲಿಯೋ! ಮಹಾ ಪ್ರತಾಪಿ.
ಚಂ||ಗದೆಯೊಳೆ ಜಟ್ಟಿಗಂ ಪವನನಂದನೆಂಬರ ಮಾತು ಮಾತದ
ಲ್ಲದು ಸುರಸಿಂಧುಪುತ್ರ ಗುರು ಕರ್ಣ ಕೃಪ ಪ್ರಮುರ್ಕಳಿಂತು ನೇ|
ರಿದರೆ ಶರಾಸನಾಗಮದೊಳೆಂಬಿನಂಬರದೊಳ್ ಸುರರ್ಕಳೇಂ
ಪುದಿದನೊ ಬಾಣಜಾಲದೆ ಗುರುಪ್ರಿಯ ನಂದನನಂ ಮರುತ್ಸುತಂ||೬೭ ||
ಪದ್ಯ-೬೭:ಪದವಿಭಾಗ-ಅರ್ಥ:ಗದೆಯೊಳೆ ಜಟ್ಟಿಗಂ ಪವನನಂದನು ಎಂಬರ ಮಾತು ಮಾತು ಅದಲ್ಲದು (ಭೀಮನು ಗದಾಪ್ರಯೋಗದಲ್ಲಿ ಮಾತ್ರಾ ಗಟ್ಟಿಗ ಎನ್ನುವವರ ಮಾತು ಮಾತಲ್ಲ/ ಸರಿಯಲ್ಲ.) ಸುರಸಿಂಧುಪುತ್ರ ಗುರು ಕರ್ಣ ಕೃಪ ಪ್ರಮುರ್ಕಳು ಇಂತು ನೇರಿದರೆ ಶರಾಸನಾಗಮದೊಳು (ಕೃಪನೇ ಮೊದಲಾದ ಪ್ರಮುಖರು ಹೀಗೆ ಬಿಲ್ವಿದ್ಯೆಯಲ್ಲಿ ಪಂಡಿತರೇ?/ ಇರಲಾರರು) ಎಂಬಿನ ಅಂಬರದೊಳ್ ಸುರರ್ಕಳು, ಏಂ ಪುದಿದನೊ>> (ಎನ್ನುವಂತೆ ದೇವತೆಗಳು ಆಕಾಶದಲ್ಲಿ ಹೊಗಳುವ ಹಾಗೆ;) ಬಾಣಜಾಲದೆ ಗುರುಪ್ರಿಯ ನಂದನನಂ ಮರುತ್ಸುತಂ -<< ಏಂ ಪುದಿದನೊ(ಭೀಮನು ಅಶ್ವತ್ಥಾಮನನ್ನು ಬಾಣಗಳ ಸಮೂಹದಿಂದ ಏನು ಸಂಪೂರ್ಣವಾಗಿ ಮುಚ್ಚಿಬಿಟ್ಟನೋ!.)
ಪದ್ಯ-೬೭:ಅರ್ಥ: ಭೀಮನು ಗದಾಪ್ರಯೋಗದಲ್ಲಿ ಮಾತ್ರಾ ಗಟ್ಟಿಗ ಎನ್ನುವವರ ಮಾತು ಮಾತಲ್ಲ; ಭೀಷ್ಮ ,ದ್ರೋಣ, ಕರ್ಣ ಕೃಪನೇ ಮೊದಲಾದ ಪ್ರಮುಖರು ಹೀಗೆ ಬಿಲ್ವಿದ್ಯೆಯಲ್ಲಿ ಪಂಡಿತರೇ?/ ಇರಲಾರರು ಎನ್ನುವಂತೆ ದೇವತೆಗಳು ಆಕಾಶದಲ್ಲಿ ಹೊಗಳುವ ಹಾಗೆ ಭೀಮನು ಅಶ್ವತ್ಥಾಮನನ್ನು ಬಾಣಗಳ ಸಮೂಹದಿಂದ ಸಂಪೂರ್ಣವಾಗಿ ಮುಚ್ಚಿಬಿಟ್ಟನು.
ವ||ಆಗಳಶ್ವತ್ಥಾಮಂ ಭೀಮೋದ್ದಾಮ ಶ್ಯಾಮ ಜಳಧರ ವಿಮುಕ್ತ ಶರಾವಳಿಯ ಬಳಸಂ ಕಂಡು ಮುಗುಳ್ನಗೆ ನಕ್ಕುಮೀತನುಮೆಮ್ಮಂ ಬಳಸಿದಪ್ಪನೆಂದು-
ವಚನ:ಪದವಿಭಾಗ-ಅರ್ಥ:ಆಗಳ್ ಅಶ್ವತ್ಥಾಮಂ ಭೀಮೋದ್ದಾಮ ಶ್ಯಾಮ ಜಳಧರ (ಭೀಮನೆಂಬ ವಿಸ್ತಾರವಾದ ನೀಲಮೇಘದಿಂದ, ಶ್ಯಾಮ-ನೀಲ,ಜಲಧರ- ಮೇಘ) ವಿಮುಕ್ತ ಶರಾವಳಿಯ ಬಳಸಂ ಕಂಡು (ಬಿಡಲ್ಪಟ್ಟ ಬಾಣಸಮೂಹದ ವಿಸ್ತಾರವನ್ನು ಕಂಡು) ಮುಗುಳ್ನಗೆ ನಕ್ಕುಂ ಈತನುಂ ಎಮ್ಮಂ ಬಳಸಿದಪ್ಪನು ಎಂದು (ಬಳಸು- ಮುಚ್ಚು; ಇವನೂ ನಮ್ಮನ್ನು ಬಾಣದಿಂದ ಮುಚ್ಚುತ್ತಾನಲ್ಲವೇ ಎಂದು- )-
ವಚನ:ಅರ್ಥ:ಆಗ ಅಶ್ವತ್ಥಾಮನು ಭೀಮನೆಂಬ ವಿಸ್ತಾರವಾದ ನೀಲಮೇಘದಿಂದ ಬಿಡಲ್ಪಟ್ಟ ಬಾಣಸಮೂಹದ ವಿಸ್ತಾರವನ್ನು ಕಂಡು ಹುಸಿನಗೆ ನಕ್ಕು, ಇವನೂ ನಮ್ಮನ್ನು ಬಾಣದಿಂದ ಮುಚ್ಚುತ್ತಾನಲ್ಲವೇ ಎಂದು-
ಚಂ||ಅನಲಶಿಖಾಕಳಾಪವನೆ ಭೋರ್ಗರೆದಾರ್ದು ಗುಳ್ಚಿನ್ನಮಪ್ಪಗು
ರ್ವಿನ ಶರಸಂಕಲಗಳಂಗಳೊಳೆ ಭೋರ್ಗರೆದಾರ್ದಿಸೆ ಭೀಮನೆಚ್ಚ ನ|
ಚ್ಚಿನ ಘನ ಭಾಣಜಾಳಮದು ಭೋಂಕನೆ ನೋಡುವೊಡಾಳಜಾಳವಾ
ಯ್ತೆನೆ ಕಡಿದೊಟ್ಟಿ ಸುಟ್ಟವು ಪ್ರತತಿಗಳಂ ಗುರುಪುತ್ರನಂಬುಗಳ್||೬೮||
ಪದ್ಯ-೬೮:ಪದವಿಭಾಗ-ಅರ್ಥ:ಅನಲಶಿಖಾಕಳಾಪವನೆ (ಅಗ್ನಿಜ್ವಾಲೆಗಳ ಸಮೂಹವನ್ನೇ) ಭೋರ್ಗರೆದು ಆರ್ದು (ಭೋರೆಂದು ಶಬ್ದಮಾಡಿ,- ಘರ್ಜಿಸಿ >-) ಉಗುಳ್ಚಿನ್ನಂ ಅಪ್ಪ ಅಗುರ್ವಿನ (ಉಗುಳುವಂತಹ ಭಯಂಕರ) ಶರ ಸಂಕುಲಗಳಂಗಳೊಳೆ (ಬಾಣ ಸಮೂಹಗಳಿಂದಲೇ) ಭೋರ್ಗರೆದಾರ್ದಿಸೆ ಭೀಮನು ಎಚ್ಚ (ಭೋರ್ಗರೆದು ಶಬ್ದಮಾಡಿ ಆರ್ಭಟಸಿ ಅಶ್ವತ್ಥಾಮನನ್ನು ಎಚ್ಚ-ಹೊಡದ) ನಚ್ಚಿನ ಘನ ಭಾಣಜಾಳಂ ಅದು (ಆ ನಚ್ಚಿನ - ನಂಬಿಗೆಗೆ ಅರ್ಹವಾದ ಬೀಮನು ಹೊಡೆದ ಸತ್ವದ ಆ ಬಾಣಸಮೂಹವು) ಭೋಂಕನೆ ನೋಡುವೊಡೆ ಆಳಜಾಳವಾಯ್ತು ಎನೆ (ತಟ್ಟನೆ ನೋಡುತ್ತಿರುವ ಹಾಗೆಯೇ ಜಾಳವಾದ ಹಂದರವಾಯಿತು ಎನ್ನುವ ಹಾಗೆ) ಕಡಿದು ಒಟ್ಟಿ ಸುಟ್ಟವು ಪ್ರತತಿಗಳಂ (ಭೀಮನ ಬಾಣಗಳನ್ನು) ಗುರುಪುತ್ರನ ಅಂಬುಗಳ್ (ಅಶ್ವತ್ಥಾಮನ ಬಾಣಗಳು ಭೀಮನ ಬಾಣಗಳನ್ನು ಕಡಿದು ರಾಶಿಮಾಡಿ ಸುಟ್ಟು ಹಾಕಿದವು.)
ಪದ್ಯ-೬೮:ಅರ್ಥ: ಅಗ್ನಿಜ್ವಾಲೆಗಳ ಸಮೂಹವನ್ನೇ ಭೋರೆಂದು ಶಬ್ದಮಾಡಿ ಉಗುಳುವಂತಹ ಭಯಂಕರ ಬಾಣ ಸಮೂಹಗಳಿಂದಲೇ, ಭೋರ್ಗರೆದು ಶಬ್ದಮಾಡಿ ಆರ್ಭಟಸಿ ಅಶ್ವತ್ಥಾಮನನ್ನು ಹೊಡದನು. ಆ ನಚ್ಚಿನ - ನಂಬಿಗೆಗೆ ಅರ್ಹವಾದ ಬೀಮನು ಹೊಡೆದ ಸತ್ವದ ಆ ಬಾಣಸಮೂಹವು ತಟ್ಟನೆ ನೋಡುತ್ತಿರುವ ಹಾಗೆಯೇ ಜಾಳವಾದ ಹಂದರವಾಯಿತು ಎನ್ನುವ ಹಾಗೆ ಅಶ್ವತ್ಥಾಮನ ಬಾಣಗಳು ಭೀಮನ ಬಾಣಗಳನ್ನು ಕಡಿದು ರಾಶಿಮಾಡಿ ಸುಟ್ಟು ಹಾಕಿದವು.
ವ|| ಅಂತು ಗುರುನಂದನಂ ಮರುನ್ನಂದನ ವಿರಚಿತ ನಿಶಾತ ವಿಶಿಖ ಪಂಜರಮನಳಿದು ಕಳಕುಳಂಮಾಡಿಯನಿತರೊಳ್ ಮಾಣದೆ-
ವಚನ:ಪದವಿಭಾಗ-ಅರ್ಥ:ಅಂತು ಗುರುನಂದನಂ ಮರುನ್ನಂದನ ವಿರಚಿತ ನಿಶಾತ ವಿಶಿಖ ಪಂಜರಮನು ಅಳಿದು (ಅಶ್ವತ್ಥಾಮನು ಭೀಮನಿಂದ ರಚಿತವಾದ ಹರಿತವಾದ ಬಾಣಜಾಲವನ್ನು ನಾಶಪಡಿಸಿ) ಕಳಕುಳಂಮಾಡಿಯುಂ ಅನಿತರೊಳ್ ಮಾಣದೆ (ಚದುರಿಸಿ, ಅಷ್ಟಕ್ಕೇ ಬಿಡದೆ)-
ವಚನ:ಅರ್ಥ:ಹಾಗೆ ಅಶ್ವತ್ಥಾಮನು ಭೀಮನಿಂದ ರಚಿತವಾದ ಹರಿತವಾದ ಬಾಣಜಾಲವನ್ನು ನಾಶಪಡಿಸಿ, ಚದುರಿಸಿ, ಅಷ್ಟಕ್ಕೇ ಬಿಡದೆ-

ಕಂ||ತೇರಂ ಕುದುರೆಯನೆಸಗುವ ಸಾರಥಿಯ ಪೊಡರ್ಪನಯ್ದು ಬಾಣದೊಳುಪಸಂ | ಹಾರಿಸಿ ತಳತಳ ತೊಳಗುವ ನಾರಾಚದಿನೆಚ್ಚನೂರಿ ಭೀಮನ ನೊಸಲಂ||೬೯||

ಪದ್ಯ-೬೯:ಪದವಿಭಾಗ-ಅರ್ಥ:ತೇರಂ ಕುದುರೆಯಂ ಎಸಗುವ ಸಾರಥಿಯ (ಅವನ ರಥವನ್ನೂ ಕುದುರೆಯನ್ನೂ ಅದನ್ನು ನೆಡೆಸುವ ಸಾರಥಿಯನ್ನೂ) ಪೊಡರ್ಪನು ಅಯ್ದು ಬಾಣದೊಳು ಉಪಸಂಹಾರಿಸಿ (ಶಕ್ತಿಯನ್ನೂ ಅಯ್ದು ಬಾಣಗಳಿಂದ ನಾಶಮಾಡಿ) ತಳತಳ ತೊಳಗುವ ನಾರಾಚದಿಂ ಎಚ್ಚನು ಊರಿ ಭೀಮನ ನೊಸಲಂ (ತಳತಳನೆ ಹೊಳೆಯುವ ಬಾಣದಿಂದ ಭೀಮನ ಹಣೆಗೆ ನಾಟುವಹಾಗೆ ಹೊಡದನು. ).
ಪದ್ಯ-೬೯:ಅರ್ಥ: ಅವನ ರಥವನ್ನೂ ಕುದುರೆಯನ್ನೂ ಅದನ್ನು ನೆಡೆಸುವ ಸಾರಥಿ ಶಕ್ತಿಯನ್ನೂ ಅಯ್ದು ಬಾಣಗಳಿಂದ ನಾಶಮಾಡಿ ತಳತಳನೆ ಹೊಳೆಯುವ ಬಾಣದಿಂದ ಭೀಮನ ಹಣೆಗೆ ನಾಟುವಹಾಗೆ ಹೊಡದನು.
ಮಿಸುಗುವ ನೊಸಲಂ ನಟ್ಟ
ರ್ವಿಸುವಿನೆಗಂ ತೂಗಿ ತೊನೆವ ನಾರಾಚಮದೇ |
ನೆಸದುದೋ ತದ್ವದನಾಂಭೋ
ಜ ಸೌರಭಾಕೃಷ್ಟ ಮಧುಪ ಮಾಲಾಕೃತಿಯಿಂ ||೭೦ ||
ಪದ್ಯ-೦೦:ಪದವಿಭಾಗ-ಅರ್ಥ:ಮಿಸುಗುವ ನೊಸಲಂ ನಟ್ಟು ಅರ್ವಿಸುವಿನೆಗಂ (ನೋವು- ವ್ಯಾಪಿಸುತ್ತಿರಲು) ತೂಗಿ ತೊನೆವ ನಾರಾಚಂ ( ಆಕಡೆಗೂ ಈ ಕಡೆಗೂ ತೂಗಾಡುತ್ತಿರುವ ಆ ಬಾಣವು) ಅದು ಏನ್ ಎಸದುದೋ (ಏನು ವಿಶೇಷ ಸೊಗಸಾಗಿದ್ದಿತೋ.) ತದ್ವದನಾಂಭೋಜ ಸೌರಭಾಕೃಷ್ಟ ಮಧುಪ ಮಾಲಾಕೃತಿಯಿಂ- ತತ್ ವದನ ಅಂಭೋಜ ಸೌರಭ ಆಕೃಷ್ಟ ಮಧುಪ ಮಾಲಾಕೃತಿಯಿಂ (ಆ ಬಾಣವು ಭೀಮನ ಮುಖಕಮಲದ ವಾಸನೆಯಿಂದ ಆಕರ್ಷಿತವಾದ ದುಂಬಿಗಳ ಸಮೂಹದ ಆಕಾರದಿಂದ- ಏನು ವಿಶೇಷ ಸೊಗಸಾಗಿದ್ದಿತೋ.)
ಪದ್ಯ-೦೦:ಅರ್ಥ: ಹೊಳೆಯುವ ಹಣೆಯಲ್ಲಿ ನಾಟಿಕೊಂಡು ನೋವು ವ್ಯಾಪಿಸುತ್ತಿರಲು, ಆಕಡೆಗೂ ಈ ಕಡೆಗೂ ತೂಗಾಡುತ್ತಿರುವ ಆ ಬಾಣವು ಭೀಮನ ಮುಖಕಮಲದ ವಾಸನೆಯಿಂದ ಆಕರ್ಷಿತವಾದ ದುಂಬಿಗಳ ಸಮೂಹದ ಆಕಾರದಿಂದ ಏನು ವಿಶೇಷ ಸೊಗಸಾಗಿದ್ದಿತೋ.
ನಡೆ ನಾರಾಚದ ನೋವಿನ
ನಡುಕಂ ಪಿರಿದಾಯ್ತು ಸರ್ಪ ಯೋನಿಯಂ |
ಬಿಡಿಸಿದವೊಲೆಚ್ಚು ಪಾಯ್ದ
ತ್ತೊಡನೊಡನೆ ಕದುಷ್ಣ ಕೃಷ್ಣ ರುಧಿರ ಜಲೌಘಂ ||೭೧||
ಪದ್ಯ-೭೧:ಪದವಿಭಾಗ-ಅರ್ಥ:ನಡೆ ನಾರಾಚದ ನೋವಿನ ನಡುಕಂ ಪಿರಿದಾಯ್ತು (ಬಾಣದ ನೋವಿನ ಕಂಪನವು ಹೆಚ್ಚಾಯಿತು.) ಸರ್ಪಯೋನಿಯಂ ಬಿಡಿಸಿದವೊಲ್ (ವಿಸರ್ಪಿಣಿ ಎಂಬ ರೋಗವುಳ್ಳವನ ರಕ್ತನಾಳವನ್ನು ಕತ್ತರಿಸಿದಂತೆ,) ಎಚ್ಚು ಪಾಯ್ದತ್ತು ಒಡನೊಡನೆ (ಒಡನೆ ಒಡನೆಯೇ ಸೂಸಿ ಹರಿಯಿತು.) ಕದುಷ್ಣ ಕೃಷ್ಣ ರುಧಿರ ಜಲೌಘಂ (ರುಧಿರ ಜಲ- ಔಘ- ಪ್ರವಾಹ) (ಸ್ವಲ್ಪ ಬೆಚ್ಚಗಿರುವ ಕಪ್ಪಾದ ರಕ್ತ ಧಾರೆಗಳು)
ಪದ್ಯ-೭೧:ಅರ್ಥ:ಬಾಣದ ನೋವಿನ ಕಂಪನವು ಹೆಚ್ಚಾಯಿತು. ವಿಸರ್ಪಿಣಿ ಎಂಬ ರೋಗವುಳ್ಳವನ ರಕ್ತನಾಳವನ್ನು ಕತ್ತರಿಸಿದಂತೆ, ಸ್ವಲ್ಪ ಬೆಚ್ಚಗಿರುವ ಕಪ್ಪಾದ ರಕ್ತ ಧಾರೆಗಳು ಒಡನೆಯೇ ಸೂಸಿ ಹರಿಯಿತು.
ನಡುಗಲ್ಕೆರ್ದೆ ಬೆಮರಲ್ ತನು
ತೊಡರಲ್ ನಾಲಗೆ ತಗುಳ್ದುದಾ ಮಾರ್ಗಣದಿಂ|
ಗಡ ಮತ್ತುಳಿದರನೆಂತುಂ
ಮುಡಿಪದೆ ಗುರುತನಯನೆಚ್ಚ ಶಿತ ನಾರಾಚಂ ||೭೨||
ಪದ್ಯ-೦೦:ಪದವಿಭಾಗ-ಅರ್ಥ:ನಡುಗಲ್ಕೆ ಎರ್ದೆ ಬೆಮರಲ್ ತನು ತೊಡರಲ್ ನಾಲಗೆ ತಗುಳ್ದುದು(ಭೀಮನ ಎದೆ ನಡುಗುವುದಕ್ಕೂ ಮೈ ಬೆವರುವುದಕ್ಕೂ ನಾಲಿಗೆ ತೊದಲುವುದಕ್ಕೂ ಪ್ರಾರಂಭವಾಯಿತು) ಆ ಮಾರ್ಗಣದಿಂ ಗಡ ಮತ್ತೆ ಉಳಿದರನು ಎಂತುಂ ಮುಡಿಪದೆ (ಇನ್ನುಳಿದವರನ್ನು ಕೊಲ್ಲದೆ ಇರುತ್ತದೆಯೇ? ಗಡ- ಓಹೋ!) ಗುರುತನಯನು ಎಚ್ಚ ಶಿತ ನಾರಾಚಂ (ಅಶ್ವತ್ಥಾಮನು ಪ್ರಯೋಗಿಸಿದ ಹರಿತವಾದ ಬಾಣವು)
ಪದ್ಯ-೦೦:ಅರ್ಥ: ಆ ಬಾಣದಿಂದ ಭೀಮನ ಎದೆ ನಡುಗುವುದಕ್ಕೂ ಮೈ ಬೆವರುವುದಕ್ಕೂ ನಾಲಿಗೆ ತೊದಲುವುದಕ್ಕೂ ಪ್ರಾರಂಭವಾಯಿತು. ಹೀಗಿರಲು, ಅಶ್ವತ್ಥಾಮನು ಪ್ರಯೋಗಿಸಿದ ಹರಿತವಾದ ಬಾಣವು ಇನ್ನುಳಿದವರನ್ನು ಕೊಲ್ಲದೆ ಇರುತ್ತದೆಯೇ?
ವ|| ಅಂತು ಭೀಮಸೇನಂ ನಾರಾಚಾಘಾತದಿಂ ಪುಣ್ಗೂರ್ತು ಬಸವಳಿದುಸಿರಲಪ್ಪಡ ಮಾಣದೆ ಬಿಲ್ಲ ಕೊಪ್ಪಂ ಪಿಡಿದೆರಗಿ ಕಿರಿದಾನುಂ ಬೇಗಮಿರ್ದು ನೊಸಲೊಳ್ ನೆಟ್ಟ ನಾರಾಚಮನೆಂತಾನುಂ ಕಿಳ್ತು ತನ್ನಿಂ ತಾನೆ ಚೇತರಿಸಿ ಸಿಂಹನಾದದಿಂದಾರ್ದು-
ವಚನ:ಪದವಿಭಾಗ-ಅರ್ಥ:ಅಂತು ಭೀಮಸೇನಂ ನಾರಾಚ ಆಘಾತದಿಂ ಪುಣ್ಗೂರ್ತು ಬಸವಳಿದು ಉಸಿರಲಪ್ಪಡ ಮಾಣದೆ (ಹೀಗೆ ಭೀಮಸೇನನು ಬಾಣದ ಪೆಟ್ಟಿನಿಂದ ಗಾಯಗೊಂಡು ಶಕ್ತಿಗುಂದಿ ಉಸಿರಾಡುವುದಕ್ಕೂ ಆಗದೆ) ಬಿಲ್ಲ ಕೊಪ್ಪಂ ಪಿಡಿದು ಎರಗಿ ಕಿರಿದಾನುಂ ಬೇಗಂ ಇರ್ದು (ಬಿಲ್ಲಿನ ತುದಿಯನ್ನು ಹಿಡಿದು ಒರಗಿಕೊಂಡು ಸ್ವಲ್ಪ ಕಾಲವಿದ್ದು) ನೊಸಲೊಳ್ ನೆಟ್ಟ ನಾರಾಚಮನು ಎಂತಾನುಂ ಕಿಳ್ತು (ಹಣೆಯಲ್ಲಿ ನಾಟಿದ್ದ ಬಾಣವನ್ನು ಹೇಗೋ ಕಿತ್ತು,) ತನ್ನಿಂ ತಾನೆ ಚೇತರಿಸಿ ಸಿಂಹನಾದದಿಂದ ಆರ್ದು (ತನ್ನಷ್ಟಕ್ಕೆ ತಾನೇ ಚೇತರಿಸಿಕೊಂಡು, ಸಿಂಹಧ್ವನಿಯಿಂದ ಆರ್ಭಟಿಸಿ.)-
ವಚನ:ಅರ್ಥ:ಹೀಗೆ ಭೀಮಸೇನನು ಬಾಣದ ಪೆಟ್ಟಿನಿಂದ ಗಾಯಗೊಂಡು ಶಕ್ತಿಗುಂದಿ ಉಸಿರಾಡುವುದಕ್ಕೂ ಆಗದೆ ಬಿಲ್ಲಿನ ತುದಿಯನ್ನು ಹಿಡಿದು ಒರಗಿಕೊಂಡು ಸ್ವಲ್ಪ ಕಾಲವಿದ್ದು, ಹಣೆಯಲ್ಲಿ ನಾಟಿದ್ದ ಬಾಣವನ್ನು ಹೇಗೋ ಕಿತ್ತು, ತನ್ನಷ್ಟಕ್ಕೆ ತಾನೇ ಚೇತರಿಸಿಕೊಂಡು, ಸಿಂಹಧ್ವನಿಯಿಂದ ಆರ್ಭಟಿಸಿದನು.
ಚಂ|| ಖರಕರಬಿಂಬದಿಂ ಕಿರಣ ಸಂತತಿಗಳ್ ಪೊರಪೊಣ್ಮಿದಪುವೆಂ
ಬರನುಡಿ ಪೋಲ್ವೆವೆತ್ತದೆನೆ ಬಾಣಧಿಯಿಂದಿರದುರ್ಚಿಕೊಂಡು ವಿ \
ಸ್ಫರಿತ ಶರಗಳೆಂಟನು ಅವರೊಳ್ ಪೊಳೆವಯ್ದು ಶರಂಗಳಿಂಸುರು
ಳ್ದುರುಳ್ವಿನಮೆಚ್ಚನಾ ದ್ವಿಜನ ಸೂತವರೂಥ ತುರಂಗಮಂಗಳಂ ||೭೩ ||
ಪದ್ಯ-೭೩:ಪದವಿಭಾಗ-ಅರ್ಥ:ಖರಕರಬಿಂಬದಿಂ ಕಿರಣ ಸಂತತಿಗಳ್ (ಸೂರ್ಯಬಿಂಬದಿಂದ ಕಿರಣಗಳು) ಪೊರಪೊಣ್ಮಿದಪುವು ಎಂಬರನುಡಿ ಪೋಲ್ವೆವೆತ್ತದೆ ಎನೆ (ಹೊರಕ್ಕೆ ಹೊರಟು ಬರುತ್ತವೆ ಎನ್ನುವವರ ಮಾತು ಹೋಲುವುದು ಎನ್ನುವಂತೆ) ಬಾಣಧಿಯಿಂದೆ ಇರದೆ ಉರ್ಚಿಕೊಂಡು (ಬತ್ತಳಿಕೆಯಿಂದ <./ಪ್ರಕಾಶಮಾಣವಾದ ಎಂಟು ಬಾಣಗಳನ್ನು/.> ಸೆಳೆದುಕೊಂಡು) ವಿಸ್ಫರಿತ ಶರಗಳ್ ಎಂಟನು (ಪ್ರಕಾಶಮಾಣವಾದ ಎಂಟು ಬಾಣಗಳನ್ನು) ಅವರೊಳ್ ಪೊಳೆವ ಅಯ್ದು ಶರಂಗಳಿಂ ( ಅದರಲ್ಲಿ ಹೊಳೆಯುತ್ತಿರುವ ಅಯ್ದು ಬಾಣಗಳಿಂದ) ಸುರುಳ್ದು ಉರುಳ್ವಿನಂ ಎಚ್ಚನು ಆ ದ್ವಿಜನ ಸೂತ ವರೂಥ ತುರಂಗಮಂಗಳಂ (ಆ ಬ್ರಾಹ್ಮಣನಾದ ಅಶ್ವತ್ಥಾಮನ ಸಾರಥಿ, ರಥ ಮತ್ತು ಕುದುರೆಗಳು ಸುರುಳಿಕೊಂಡು ಉರುಳಿಬೀಳುವಹಾಗೆ ಹೊಡೆದನು.)
ಪದ್ಯ-೭೩:ಅರ್ಥ: ಸೂರ್ಯಬಿಂಬದಿಂದ ಕಿರಣಗಳು ಹೊರಕ್ಕೆ ಹೊರಟು ಬರುತ್ತವೆ ಎನ್ನುವವರ ಮಾತು ಹೋಲುವುದು ಎನ್ನುವಂತೆ, ಬತ್ತಳಿಕೆಯಿಂದ ಪ್ರಕಾಶಮಾಣವಾದ ಎಂಟು ಬಾಣಗಳನ್ನು ಸೆಳೆದುಕೊಂಡು, ಅದರಲ್ಲಿ ಹೊಳೆಯುತ್ತಿರುವ ಅಯ್ದು ಬಾಣಗಳಿಂದ ಆ ಬ್ರಾಹ್ಮಣನಾದ ಅಶ್ವತ್ಥಾಮನ ಸಾರಥಿ, ರಥ ಮತ್ತು ಕುದುರೆಗಳು ಸುರುಳಿಕೊಂಡು ಉರುಳಿಬೀಳುವಹಾಗೆ ಹೊಡೆದನು.
ವ||ಆಗಳ್ ಅಶ್ವತ್ಥಾಮಂ ಹೇಮಪುಂಖಾಂಕಿತ ಭೀಮಸಾಯಕನಿರ್ಘಾತದಿಂದಳಿಯೆ ನೊಂದು ಭೋರೆಂದು ಕವಿದ ಬಿಸುನೆತ್ತರ್ ಕಣ್ಣಂ ಕವಿಯೆ ಸೀಂಟಿಕಳೆದು ನಡುಕೋಲ್ವರಂ ನಟ್ಟ ಕೂರ್ಗಣೆಗಳಂ ಗರಿವೆರಸು ತೊರೆದುಕಳೆದು-
ವಚನ:ಪದವಿಭಾಗ-ಅರ್ಥ:ಆಗಳ್ ಅಶ್ವತ್ಥಾಮಂ ಹೇಮಪುಂಖಾಂಕಿತ ಭೀಮಸಾಯಕನಿರ್ಘಾತದಿಂದಳಿಯೆ ನೊಂದು ಭೋರೆಂದು ಕವಿದ ಬಿಸುನೆತ್ತರ್ ಕಣ್ಣಂ ಕವಿಯೆ ಸೀಂಟಿಕಳೆದು ನಡುಕೋಲ್ವರಂ ನಟ್ಟ ಕೂರ್ಗಣೆಗಳಂ ಗರಿವೆರಸು ತೊರೆದುಕಳೆದು-
ವಚನ:ಅರ್ಥ:ವ|| ಆಗ ಅಶ್ವತ್ಥಾಮನು ಚಿನ್ನದ ಗರಿಗಳಿಂದ ಗುರುತುಮಾಡಲ್ಪಟ್ಟ ಹಿಂಭಾಗವನ್ನುಳ್ಳ ಭೀಮನ ಬಾಣಗಳ ಪೆಟ್ಟಿನಿಂದ ಸಾಯುವಷ್ಟು ವ್ಯಥೆಪಟ್ಟು ಭೋರೆಂದು ಸುರಿಯುತ್ತಿರುವ ಬಿಸಿರಕ್ತವು ಕಣ್ಣನ್ನು ಆವರಿಸಲು ಅದನ್ನು (ಬೆರಳಿನಿಂದ) ಸೀಂಟಿ ಕಳೆದು ಬಾಣದ ಮಧ್ಯದವರೆಗೂ ನಾಟಿಕೊಂಡಿದ್ದ ಹರಿತವಾದ ಬಾಣಗಳನ್ನು ಗರಿಗಳೊಡನೆ ಕಿತ್ತು ಬಿಸಾಡಿದನು.
ಕಂ|| ಪೆರವುಳಿದ ಮೂರು ಮಿರುಮಿರು
ಮಿರುಪ ಶಿತಾಸ್ತ್ರಂಗಳಿಂ ದ್ವಿಜನ್ಮನ ನೊಸಲಂ |
(ನ್ಕೆ)ನೆರಗೊಳ್ವಿನಮೆಚ್ಚೊಡೆ ಕ
ಣ್ದೆರೆದವೊಲಾಯ್ತದಟುಮಳವುಮಾ ಮಾರುತಿಯಾ||೭೪||
ಪದ್ಯ-೭೪:ಪದವಿಭಾಗ-ಅರ್ಥ:ಪೆರವು ಉಳಿದ ಮೂರು ಮಿರುಮಿರುಮಿರುಪ ಶಿತಾಸ್ತ್ರಂಗಳಿಂ (ಇನ್ನು ಹೆಚ್ಚಿಗೆ ಉಳಿದ ಮೂರು ಮಿರುಮಿರುಗುವ ಹರಿತವಾದ ಬಾಣಗಳಿಂದ) ದ್ವಿಜನ್ಮನ ನೊಸಲಂ ನೆರಗೊಳ್ವಿನಂ ಎಚ್ಚೊಡೆ (ಬ್ರಾಹ್ಮಣನ ಹಣೆಗೆ ಮರ್ಮವನ್ನು ಭೇದಿಸುವಂತೆ ಹೊಡೆಯಲು) ಕಣ್ದೆರೆದವೊಲಾಯ್ತ ಅದಟುಂ ಅಳವುಂ ಆ ಮಾರುತಿಯಾ (ಆ ಭೀಮಸೇನನ ಪರಾಕ್ರಮವೂ ಶಕ್ತಿಯೂ ಕಣ್ನು ತರೆದವಲ್ ಅಯ್ತು - ಕಣ್ಣು ಬಿಟ್ಟಂತಾಯಿತು. )
ಪದ್ಯ-೭೪:ಅರ್ಥ:೭೪. ಇನ್ನು ಹೆಚ್ಚಿಗೆ ಉಳಿದ ಮೂರು ಮಿರುಮಿರುಗುವ ಹರಿತವಾದ ಬಾಣಗಳಿಂದ ಬ್ರಾಹ್ಮಣನ ಹಣೆಗೆ ಮರ್ಮವನ್ನು ಭೇದಿಸುವಂತೆ ಹೊಡೆಯಲು, ಆ ಭೀಮಸೇನನ ಪರಾಕ್ರಮವೂ ಶಕ್ತಿಯೂ ಕಣ್ಣು ಬಿಟ್ಟಂತಾಯಿತು.
ಕಂ||ಅಳವೆನಿತು ಚಾಪವಿದ್ಯಾ
ಬಳಮೆನಿತುಂಟನಿತುಂ ಮೆಯ್ದೆವಂದಿಲ್ಲಿ ಪುದುಂ|
ಗೊಳಿದುದೆನೆ ಕಲ್ಪಾನಲ
ವಿಳಯಾಂತಕರೂಪನಾದನಶ್ವತ್ಥಾಮಂ || ೭೫ ||
ಪದ್ಯ-೭೫:ಪದವಿಭಾಗ-ಅರ್ಥ:ಅಳವು ಎನಿತು ಚಾಪವಿದ್ಯಾ ಬಳಂ ಎನಿತುಂಟು ಅನಿತುಂ (ತನ್ನ ಶಕ್ತಿಯೆಷ್ಟಿದೆ, ಬಿಲ್ವಿದ್ಯೆಯ ಬಲವೆಷ್ಟಿದೆ ಅಷ್ಟನ್ನೂ ಇಲ್ಲಿ ಸಂಪೂರ್ಣವಾಗಿ) ಎಯ್ದೆವಂದು ಇಲ್ಲಿ ಪುದುಂಗೊಳಿದುದೆ ಎನೆ (ಬಂದು ಸೇರಿ ಹದಗೊಳಿಸಿದೆ ಎನ್ನುವ ಹಾಗೆ) ಕಲ್ಪಾನಲ ವಿಳಯಾಂತಕರೂಪನು ಆದನು ಅಶ್ವತ್ಥಾಮಂ (ಅಶ್ವತ್ಥಾಮನು ಪ್ರಳಯಾಗ್ನಿಯ ಮತ್ತು ಪ್ರಳಯಕಾಲದ ಯಮನ ರೂಪವುಳ್ಳವನಾದನು.)
ಪದ್ಯ-೭೫:ಅರ್ಥ: ತನ್ನ ಶಕ್ತಿಯೆಷ್ಟಿದೆ, ಬಿಲ್ವಿದ್ಯೆಯ ಬಲವೆಷ್ಟಿದೆ ಅಷ್ಟನ್ನೂ ಇಲ್ಲಿ ಸಂಪೂರ್ಣವಾಗಿ ಬಂದು ಸೇರಿ ಹದಗೊಳಿಸಿದೆ ಎನ್ನುವ ಹಾಗೆ ಅಶ್ವತ್ಥಾಮನು ಪ್ರಳಯಾಗ್ನಿಯ ಮತ್ತು ಪ್ರಳಯಕಾಲದ ಯಮನ ರೂಪವುಳ್ಳವನಾದನು.
ವ|| ಆಗಳ್ ಸವ್ಯಾಪಸವ್ಯ ಭ್ರಾಂತೋದ್ಭ್ರಾಂತಂಗಳೆಂಬ ರಥಕಲ್ಪ ವಿಶೇಷ ವಿನ್ಯಾಸಂಗಳ ನಱಿದು ಸಾರಥಿಗಳ್ ಚೋದಿಸುವಾಗಳಿರ್ವರ ರಥಂಗಳುಂ ಸುಟ್ಟುರೆಯೊಳಗಣ ತಱಗೆಲೆಯಂತೆ ತಿಱ್ರನೆ ತಿರಿಯೆ-
ವಚನ:ಪದವಿಭಾಗ-ಅರ್ಥ:ಆಗಳ್ ಸವ್ಯ ಅಪಸವ್ಯ (ಎಡದಿಂದ ಬಲಕ್ಕೆ ಸುತ್ತುವ, ಬಲದಿಂದ ಎಡಕ್ಕೆ ಸುತ್ತುವ) ಭ್ರಾಂತ ಉದ್ಭ್ರಾಂತಂಗಳೆಂಬ (ತಿರುಗುವ ಮೇಲೆ ಗಿರಕಿಹೊಡೆಯುವ) ರಥಕಲ್ಪ ವಿಶೇಷ ವಿನ್ಯಾಸಂಗಳನು ಅಱಿದು ( ರಥವಿದ್ಯೆಯ ನಾನಾರೀತಿಗಳನ್ನು ಅರಿದು- ತಿಳಿದು ) ಸಾರಥಿಗಳ್ ಚೋದಿಸುವಾಗಳ್ ಇರ್ವರ ರಥಂಗಳುಂ (ಸಾರಥಿಗಳು ನಡೆಸುತ್ತಿರಲು ಇಬ್ಬರ ತೇರುಗಳೂ) ಸುಟ್ಟುರೆಯೊಳಗಣ ತಱಗೆಲೆಯಂತೆ (ಸುಂಟರುಗಾಳಿಯ ಮಧ್ಯದಲ್ಲಿರುವ ತರಗೆಲೆಯ ಹಾಗೆ) ತಿಱ್ರನೆ ತಿರಿಯೆ (ತಿರ್ರನೆ ಸುತ್ತಲು)-
ವಚನ:ಅರ್ಥ: ಆಗ ಸವ್ಯ, ಅಪಸವ್ಯ, ಭ್ರಾಂತ ಮ್ತತು ಉದ್ಭ್ರಾಂತಗಳೆಂಬ ರಥವಿದ್ಯೆಯ ನಾನಾರೀತಿಗಳನ್ನು ತಿಳಿದು ಸಾರಥಿಗಳು ನಡೆಸುತ್ತಿರಲು ಇಬ್ಬರ ತೇರುಗಳೂ ಸುಂಟರುಗಾಳಿಯ ಮಧ್ಯದಲ್ಲಿರುವ ತರಗೆಲೆಯ ಹಾಗೆ ತಿರ್ರನೆ ಸುತ್ತಿದವು.
ಚಂ|| ಮುಳಿಸಳುರ್ದೆಯ್ದೆ ಕಣ್ಗಳೊಳೆ ಪೀರ್ವವೊಲುಗ್ರಶರಾನಲಾರ್ಚಿಯಿಂ
ದಗುರ್ವವೊಲೆಯ್ದೆ ಚೋದಿಸಿ ವರೂಥಮನಿಂ ಬಿರ್ದುಕಾಡೆಯೆಂದಸುಂ|
ಗೊಳೆ ಮೊನೆಯಂಬುಗಳ್ ತನುವನಳ್ದಳಿವೋಪಿನಮೆಚ್ಚು ನೆತ್ತರು
ಚ್ಚಳಿಸಿ ರಥಂಗಳೊಳ್ ಕೊಳಗೊಳುತ್ತಿರೆ ಕಾದಿದರೊರ್ವರೊರ್ವರೊಳ್|| ೭೬
ಪದ್ಯ-೭೬:ಪದವಿಭಾಗ-ಅರ್ಥ: ಮುಳಿಸು ಉಳುರ್ದು ಎಯ್ದೆ (ಕೋಪವು ಹರಡಿ- ಚೆನ್ನಾಗಿ) ಕಣ್ಗಳೊಳೆ ಪೀರ್ವವೊಲ್ ಉಗ್ರಶರ ಅನಲ ಆರ್ಚಿಯಿಂದೆ (ಕಣ್ಣುಗಳಿಂದಲೇ ಕುಡಿಯುವ ಹಾಗೆ ಭಯಂಕರವಾದ ಬಾಣಾಗ್ನಿಯ ಜ್ವಾಲೆಯಿಂದ) ಅಗುರ್ವವೊಲ್ ಎಯ್ದೆ (ಸುಡುವ/ ಭಯಪಡುವಹಾಗೆ ಹಾಗೆ ಬರಲು) ಚೋದಿಸಿ ವರೂಥಮನು (ರಥವನ್ನು ಹತ್ತಿರಕ್ಕೆ ನಡೆಸಿ) ಇಂ ಬಿರ್ದುಕಾಡೆಯೆಂದು ಅಸುಂಗೊಳೆ (‘ಇನ್ನು ನೀನು ಬದುಕಲಾರೆ’ ಎಂದು ಮೊನಚಾದ ಬಾಣಗಳು ಪ್ರಾಣಾಪಹಾರ ಮಾಡುವಂತೆ) < - ಮೊನೆಯಂಬುಗಳ್, ತನುವಂ ಅಳ್ದು ಅಳಿವೋಪಿನಂ ಎಚ್ಚು (ಶರೀರವನ್ನು ನಾಟಿ ನಾಶವಾಗುವಂತೆ ಬಾಣ ಪ್ರಯೋಗಮಾಡಿ ) ನೆತ್ತರು ಉಚ್ಚಳಿಸಿ ರಥಂಗಳೊಳ್ ಕೊಳಗೊಳುತ್ತಿರೆ (ಕ್ತವು ಚಿಮ್ಮಿ ರಥದಲ್ಲಿಯೇ ಕೊಳವಾಗುತ್ತಿರಲು) ಕಾದಿದರ್ ಒರ್ವರ್ ಒರ್ವರೊಳ್ (ಒಬ್ಬರೊಡನೊಬ್ಬರು ಕಾದಿದರು/ ಯುದ್ಧಮಾಡಿದರು.)
ಪದ್ಯ-೭೬:ಅರ್ಥ: ಕೋಪವು ಚೆನ್ನಾಗಿ ಹರಡಿ, ಕಣ್ಣುಗಳಿಂದಲೇ ಕುಡಿಯುವ ಹಾಗೆ ಭಯಂಕರವಾದ ಬಾಣಾಗ್ನಿಯ ಜ್ವಾಲೆಯಿಂದ ಸುಡುವ/ ಭಯಪಡುವಹಾಗೆ ಹಾಗೆ ಬರಲು, ರಥವನ್ನು ಹತ್ತಿರಕ್ಕೆ ನಡೆಸಿ ‘ಇನ್ನು ನೀನು ಬದುಕಲಾರೆ’ ಎಂದು ಮೊನಚಾದ ಬಾಣಗಳು ಪ್ರಾಣಾಪಹಾರಮಾಡುವಂತೆ ಶರೀರವನ್ನು ನಾಟಿ ನಾಶವಾಗುವಂತೆ ಬಾಣ ಪ್ರಯೋಗಮಾಡಿ, ರಕ್ತವು ಚಿಮ್ಮಿ ರಥದಲ್ಲಿಯೇ ಕೊಳವಾಗುತ್ತಿರಲು ಒಬ್ಬರೊಡನೊಬ್ಬರು ಯುದ್ಧಮಾಡಿದರು.
ವ|| ಅಂತು ಮುಳಿಸಿನ ಮೋಪಿನ ಗಂಡಮಚ್ಚರದ ಮೆಚ್ಚುವಣಿಗೆಯಂಕಕಾಱರೆಕ್ಕತುಳ ಕ್ಕೆಕ್ಕೆಯಿಂ ಸೂೞೇಱಿೞಿವಂತೊರ್ವರೊರ್ವರೋಳ್ ಕಾದೆ-
ವಚನ:ಪದವಿಭಾಗ-ಅರ್ಥ:ಅಂತು ಮುಳಿಸಿನ ಮೋಪಿನ (ಹಾಗೆ ಕೋಪದ, ಹೋರಾಡಲು ಆಸಕ್ತಿಯ) ಗಂಡಮಚ್ಚರದ (ಪೌರುಷದ ಮಾತ್ಸರ್ಯದ,) ಮೆಚ್ಚುವಣಿಗೆಯ (ಪರಸ್ಪರ ಮೆಚ್ಚಿಗೆಯುಳ್ಳ) ಅಂಕಕಾಱರ್ ಎಕ್ಕತುಳ ಕ್ಕೆಕ್ಕೆಯಿಂ (ಜಟ್ಟಿಗಳು ಮಲ್ಲಯುದ್ಧಕ್ಕೆ ಅಂಕಕಾರರು ಮೇಲಿಂದ ಮೇಲಕ್ಕೆ) ಸೂೞೇಱ್ ಇೞಿವಂತೆ (ಸರದಿಯ ಪ್ರಕಾರ ಇರಿಯುವಂತೆ/ ಹೊಡೆಯುವಂತೆ) ಒರ್ವರೊರ್ವರೋಳ್ ಕಾದೆ (ಒಬ್ಬರೊಡನೊಬ್ಬರು ಕಾದಿದರು)-
ವಚನ:ಅರ್ಥ: ಹಾಗೆ ಕೋಪದ, ಹೋರಾಡುವ ಆಸಕ್ತಿಯ, ಪೌರುಷದ, ಮಾತ್ಸರ್ಯದ, ಪರಸ್ಪರ ಮೆಚ್ಚಿಗೆಯುಳ್ಳ ಜಟ್ಟಿಗಳು ಮಲ್ಲಯುದ್ಧಕ್ಕೆ ಅಂಕಕಾರರು ಮೇಲಿಂದ ಮೇಲಕ್ಕೆ ಸರದಿಯ ಪ್ರಕಾರ ಹೊಡೆದು ಯುದ್ಧಮಾಡುವ ಹಾಗೆ ಒಬ್ಬರೊಡನೊಬ್ಬರು ಕಾದಿದರು
ಉ|| ಸೂತರುರುಳ್ವಿನಂ ರಥ ತುರಂಗಮರಾಜಿ ಸುರುಳ್ವಿನಂ ಚಳ
ತ್ಕೇತುಗಳೆತ್ತಮವ್ವಳಿಸಿ ಬೀೞ್ವಿನಮಳ್ಕುರೆ ಕಾದಿ ಬಾಣ ಸಂ|
ಘಾತದ ಕೋಳೊಳುಚ್ಚಳಿಪ ನೆತ್ತರೊಳಿಚ್ಚಿಯೆ ಕೆಟ್ಪೊಡಾತನ
ತ್ತೀತನುಮಿತ್ತ ಜೋಲ್ದ ರಣಮಂ ಪೊಗೞುತ್ತಿರೆ ದೇವಕೋಟಿಗಳ್|| ೭೭ ||
ಪದ್ಯ-೭೭:ಪದವಿಭಾಗ-ಅರ್ಥ:ಸೂತರು ಉರುಳ್ವಿನಂ (ಸಾರಥಿಗಳು ಉರುಳಿ ಬೀಳುವ ಹಾಗೆ) ರಥ ತುರಂಗಮ ರಾಜಿ ಸುರುಳ್ವಿನಂ(ರಥ ಕುದುರೆಗಳ ಗುಂಪು ಸುರುಳಿಕೊಳ್ಳುವ ಹಾಗೆ) ಚಳತ್ ಕೇತುಗಳು ಎತ್ತಮ್ ಅವ್ವಳಿಸಿ ಬೀೞ್ವಿನಂ (ಚಲಿಸುತ್ತಿರುವ ಧ್ವಜಗಳು ಎಲ್ಲ ಕಡೆಗೂ ಹಾರಿ ಬೀಳುತ್ತಿರುವಂತೆ,) ಅಳ್ಕುರೆ ಕಾದಿ (ಭಯವಾಗುವಂತೆ ಹೋರಾಡಿ,) ಬಾಣ ಸಂಘಾತದ ಕೋಳೊಳ್ ಉಚ್ಚಳಿಪ ನೆತ್ತರೊಳ್ (ಬಾಣಸಮೂಹದ ತಿವಿತದಿಂದ ಚಿಮ್ಮಿದ ರಕ್ತದಲ್ಲಿ) ಇಚ್ಚಿಯೆ ಕೆಟ್ಪೊಡೆ (ಇಚ್ಛಾಶಕ್ತಿಯೇ ನಷ್ಟವಾದರೆ) ಆತನು ಅತ್ತ ಈತನುಂ ಇತ್ತ ಜೋಲ್ದ ರಣಮಂ ( ಆ ಭೀಮನು ಆ ಕಡೆ, ಈ ಅಶ್ವತ್ಥಾಮನು ಈ ಕಡೆ ಜೋತುಬಿದ್ದ ಯುದ್ಧವನ್ನು) ಪೊಗೞುತ್ತಿರೆ ದೇವಕೋಟಿಗಳ್ (ದೇವತೆಗಳ ಸಮೂಹವು ಹೊಗಳುತ್ತಿರಲು-, ಹೊಗಳುತ್ತಿದ್ದಿತು)
ಪದ್ಯ-೭೭:ಅರ್ಥ: ಸಾರಥಿಗಳು ಉರುಳಿ ಬೀಳುವ ಹಾಗೆ, ರಥ ಕುದುರೆಗಳ ಗುಂಪು ಸುರುಳಿಕೊಳ್ಳುವ ಹಾಗೆ, ಚಲಿಸುತ್ತಿರುವ ಧ್ವಜಗಳು ಎಲ್ಲ ಕಡೆಗೂ ಹಾರಿ ಬೀಳುತ್ತಿರುವಂತೆಯೂ ಭಯವಾಗುವಂತೆ ಹೋರಾಡಿ, ಬಾಣಸಮೂಹದ ತಿವಿತದಿಂದ ಚಿಮ್ಮಿದ ರಕ್ತದಲ್ಲಿ ಇಚ್ಛಾಶಕ್ತಿಯೇ ನಷ್ಟವಾದರೆ ಆ ಭೀಮನು ಆ ಕಡೆ, ಈ ಅಶ್ವತ್ಥಾಮನು ಈ ಕಡೆ ಜೋತುಬಿದ್ದ ಯುದ್ಧವನ್ನು ದೇವತೆಗಳ ಸಮೂಹವು ಹೊಗಳುತ್ತಿದ್ದಿತು.
ವ|| ಆಗಳ್ ಧರ್ಮರಾಜನುಮಿತ್ತ ರಾಜರಾಜನುಮೊಂದೊರ್ವರಂ ಕೆಯ್ಕೊಂಡು ತಂತಮ್ಮ ರಥಂಗಳನೇಱಿಸಿಕೊಂಡುಯ್ದರಿತ್ತ ಕರ್ಣನುಂ ಪಾಂಡವಬಳ ಜಳನಿಧಿಯಂ ಬಡಬಾನಳನಳುರ್ವಂತಳುರ್ದು ತನ್ನೊಳ್ ಪೋಗದೆ ಪೆಣೆದ ಪ್ರಭದ್ರಕ ಬಲಮೆಲ್ಲಮಂ ಕೊಂದನನ್ನೆಗಮಿತ್ತ ಭೀಮಾಶ್ವತ್ಥಾಮರಿರ್ವರುಂ ಚೇತರಿಸಿ ಸೂತ ಪತಾಕಾ ತುರಂಗಮೋಪೇತ ರಥಂಗಳನೇಱಿಕೊಂಡು ಮತ್ತಮೊರ್ವರೊರ್ವರನಱಸುತ್ತುಂ ಸಂಗ್ರಾಮಭೂಮಿಯೊಳಗನೆ ಬರೆ ಜರಾಸಂಧನ ಮಗಂ ಕ್ಷೇಮಧೂರ್ತಿ ತಮ್ಮಯ್ಯನಂ ಕೊಂದ ಪಗೆಯಂ ನೆನೆದು ತನ್ನೇಱಿದ ಮತ್ತಹಸ್ತಿಯಂ ಭೀಮಸೇನಂಗೆ ತೋಱಿ ಕೊಟ್ಟಾಗಳ್-
ವಚನ:ಪದವಿಭಾಗ-ಅರ್ಥ:ಆಗಳ್ ಧರ್ಮರಾಜನುಂ ಇತ್ತ ರಾಜರಾಜನುಂ ಒಂದೊರ್ವರಂ (ಒಬ್ಬೊಬ್ಬರನನ್ನು) ಕೆಯ್ಕೊಂಡು (ಆ ಕಡೆ ಧರ್ಮರಾಜನೂ ಈ ಕಡೆ ಕೌರವನೂ ಒಬ್ಬೊಬ್ಬರನ್ನೂ ಕರೆದುಕೊಂಡು ) ತಂತಮ್ಮ ರಥಂಗಳನು ಏಱಿಸಿ ಕೊಂಡು ಉಯ್ದರು (ತಮ್ಮ ರಥವನ್ನು ಹತ್ತಿಸಿಕೊಂಡು ಹೋದರು.) ಇತ್ತ ಕರ್ಣನುಂ ಪಾಂಡವ ಬಳ ಜಳನಿಧಿಯಂ (ಇತ್ತ ಕರ್ಣನು ಪಾಂಡವರ ಸೇನಾ ಸಮುದ್ರವನ್ನು) ಬಡಬಾನಳನು ಉಳುರ್ವಂತೆ ಅಳುರ್ದು (ಬಡಬಾಗ್ನಿಯು ಸುಡುವಂತೆ ಸುಟ್ಟು) ತನ್ನೊಳ್ ಪೋಗದೆ ಪೆಣೆದ ಪ್ರಭದ್ರಕ ಬಲ ಎಲ್ಲಮಂ ಕೊಂದು (ತನ್ನನ್ನು ಬಿಟ್ಟುಹೋಗದೆ ತನ್ನಲ್ಲಿಯೇ ಹೆಣೆದುಕೊಂಡಿದ್ದ ಪ್ರಭದ್ರಕಬಲವೆಲ್ಲವನ್ನೂ ಕೊಂದನು) ಅನ್ನೆಗಮಿತ್ತ ಭೀಮ ಅಶ್ವತ್ಥಾಮರು ಇರ್ವರುಂ ಚೇತರಿಸಿ (ಅಷ್ಟರಲ್ಲಿ ಈ ಕಡೆ ಭೀಮಾಶ್ವತ್ಥಾಮರು ಚೇತರಿಸಿಕೊಂಡು) ಸೂತ ಪತಾಕಾ ತುರಂಗಮ ಉಪೇತ ರಥಂಗಳನು ಏಱಿಕೊಂಡು (ಸಾರಥಿ ಧ್ವಜ ಮತ್ತು ಕುದುರೆಗಳಿಂದ ಕೂಡಿದ ರಥಗಳನ್ನು ಹತ್ತಿಕೊಂಡು) ಮತ್ತಂ ಒರ್ವರೊರ್ವರನು ಅಱಸುತ್ತುಂ (ಪುನ ಒಬ್ಬರು ಮತ್ತೊಬ್ಬರನ್ನು ಹುಡುಕುತ್ತ) ಸಂಗ್ರಾಮಭೂಮಿಯೊಳಗನೆ ಬರೆ (ಯುದ್ಧಭೂಮಿಯಲ್ಲಿ ಬರುತ್ತಿರಲು) ಜರಾಸಂಧನ ಮಗಂ ಕ್ಷೇಮಧೂರ್ತಿ ತಮ್ಮ ಅಯ್ಯನಂ ಕೊಂದ ಪಗೆಯಂ ನೆನೆದು (ಜರಾಸಂಧನ ಮಗನಾದ ಕ್ಷೇಮಧೂರ್ತಿಯು ತಮ್ಮ ತಂದೆಯನ್ನು ಕೊಂದ ಶತ್ರುತ್ವವನ್ನು ನೆನಪಿಸಿಕೊಂಡು) ತನ್ನ ಏಱಿದ ಮತ್ತಹಸ್ತಿಯಂ (ತಾನು ಹತ್ತಿದ್ದ ಮದ್ದಾನೆಯನ್ನು) ಭೀಮಸೇನಂಗೆ ತೋಱಿ ಕೊಟ್ಟಾಗಳ್ (ಮದ್ದಾನೆಯನ್ನು ಭೀಮನ ಕಡೆ ಛೂ ಬಿಟ್ಟಾಗ,)-
ವಚನ:ಅರ್ಥ:ವ|| ಆ ಕಡೆ ಧರ್ಮರಾಜನೂ ಈ ಕಡೆ ಕೌರವನೂ ಒಬ್ಬೊಬ್ಬರನ್ನೂ ಕರೆದುಕೊಂಡು ತಮ್ಮ ರಥವನ್ನು ಹತ್ತಿಸಿಕೊಂಡು ಹೋದರು. ಇತ್ತ ಕರ್ಣನು ಪಾಂಡವರ ಸೇನಾ ಸಮುದ್ರವನ್ನು ಬಡಬಾಗ್ನಿಯು ಸುಡುವಂತೆ ಸುಟ್ಟು ತನ್ನನ್ನು ಬಿಟ್ಟುಹೋಗದೆ ತನ್ನಲ್ಲಿಯೇ ಹೆಣೆದುಕೊಂಡಿದ್ದ ಪ್ರಭದ್ರಕಬಲವೆಲ್ಲವನ್ನೂ ಕೊಂದನು. ಅಷ್ಟರಲ್ಲಿ ಈ ಕಡೆ ಭೀಮಾಶ್ವತ್ಥಾಮರು ಚೇತರಿಸಿಕೊಂಡು ಸಾರಥಿ ಧ್ವಜ ಮತ್ತು ಕುದುರೆಗಳಿಂದ ಕೂಡಿದ ರಥಗಳನ್ನು ಹತ್ತಿಕೊಂಡು ಪುನ ಒಬ್ಬರು ಮತ್ತೊಬ್ಬರನ್ನು ಹುಡುಕುತ್ತ ಯುದ್ಧಭೂಮಿಯಲ್ಲಿ ಬರುತ್ತಿರಲು ಜರಾಸಂಧನ ಮಗನಾದ ಕ್ಷೇಮಧೂರ್ತಿಯು ತಮ್ಮ ತಂದೆಯನ್ನು ಕೊಂದ ಶತ್ರುತ್ವವನ್ನು ಜ್ಞಾಪಿಸಿಕೊಂಡು ತಾನು ಹತ್ತಿದ್ದ ಮದ್ದಾನೆಯನ್ನು ಭೀಮನ ಕಡೆ ಛೂಬಿಟ್ಟನು, ಛೂಬಿಟ್ಟಾಗ.
ಕಂ|| ಬಡಿಗೊಂಡು ಮಸಗಿ ಬೈತ್ರಮ
ನೊಡೆವ ಮಹಾ ಮಕರದಂತೆ ಕರಿಘಟೆಗಳನಾ|
ರ್ದುಡಿಯೆ ಬಡಿದಾನೆವೆರಸಾ
ಗಡೆ ಕೊಂದಂ ಕ್ಷೇಮಧೂರ್ತಿಯಂ ಪವನಸುತಂ| ೭೮ ||
ಪದ್ಯ-೭೮:ಪದವಿಭಾಗ-ಅರ್ಥ:ಬಡಿಗೊಂಡು ಮಸಗಿ (ಬಡಿತವನ್ನು ತಿಂದು, ಪೆಟ್ಟುತಿಂದು ರೇಗಿ) ಬೈತ್ರಮಂ ಒಡೆವ ಮಹಾ ಮಕರದಂತೆ (ಹಡಗನ್ನು ಮುರಿಯುವ ದೊಡ್ಡ ಮೊಸಳೆಯ ಹಾಗೆ) ಕರಿಘಟೆಗಳಂ ಆರ್ದು ಉಡಿಯೆ ಬಡಿದು (ಭೀಮಸೇನನು ಆನೆಯ ಸಮೂಹವನ್ನು ಆರ್ಭಟಿಸಿ ನಾಶಮಾಡುವಂತೆ ಹೊಡೆದು) ಆನೆವೆರಸು ಆಗಡೆ ಕೊಂದಂ (ಆನೆಯ ಸಮೇತ ಆಗಲೇ ಕೊಂದನು.) ಕ್ಷೇಮಧೂರ್ತಿಯಂ ಪವನಸುತಂ (ಕ್ಷೇಮಧೂರ್ತಿಯನ್ನು ಭೀಮನು)
ಪದ್ಯ-೭೮:ಅರ್ಥ: ಪೆಟ್ಟುತಿಂದು ರೇಗಿ ಹಡಗನ್ನು ಮುರಿಯುವ ದೊಡ್ಡ ಮೊಸಳೆಯ ಹಾಗೆ ಭೀಮಸೇನನು ಆನೆಯ ಸಮೂಹವನ್ನು ಆರ್ಭಟಿಸಿ ನಾಶಮಾಡುವಂತೆ ಹೊಡೆದು, ಆರ್ಭಟಮಾಡಿ, ಆನೆಯ ಸಮೇತ ಕ್ಷೇಮಧೂರ್ತಿಯನ್ನು ಆಗಲೇ ಕೊಂದನು.
ವ|| ಅಂತು ಕ್ಷೇಮಧೂರ್ತಿಯಂ ಕ್ಷೇಮದಿಂ ಕೊಂದನನ್ನೆಗಮತ್ತ ಮರುನ್ನಂದನನಱಸುತ್ತುಂ ಬರ್ಪಶ್ವತ್ಥಾಮನಂ ಪಾಂಡ್ಯನೆಡೆಗೊಂಡು ಬಂದು ಮಾರ್ಕೊಂಡು-
ವಚನ:ಪದವಿಭಾಗ-ಅರ್ಥ:ಅಂತು ಕ್ಷೇಮಧೂರ್ತಿಯಂ ಕ್ಷೇಮದಿಂ ಕೊಂದನು; ಅನ್ನೆಗಂ ಅತ್ತ ಮರುನ್ನಂದನನ ಅಱಸುತ್ತುಂ ಬರ್ಪ ಅಶ್ವತ್ಥಾಮನಂ (ಆ ಕಡೆ ಭೀಮನನ್ನು ಹುಡುಕುತ್ತಾ ಬರುತ್ತಿದ್ದ ಅಶ್ವತ್ಥಾಮನನ್ನು) ಪಾಂಡ್ಯನು ಎಡೆಗೊಂಡು ಬಂದು (ಪಾಂಡ್ಯನು ಮಧ್ಯೆ ಬಂದು) ಮಾರ್ಕೊಂಡು (ಎದುರಿಸಿ)--
ವಚನ:ಅರ್ಥ:ಹಾಗೆ ಭೀಮನು ಕ್ಷೇಮಧೂರ್ತಿಯನ್ನು ಸುಲಭವಾಗಿ ಕೊಂದನು. ಅಷ್ಟರಲ್ಲಿ ಆ ಕಡೆ ಭೀಮನನ್ನು ಹುಡುಕುತ್ತಾ ಬರುತ್ತಿದ್ದ ಅಶ್ವತ್ಥಾಮನನ್ನು ಪಾಂಡ್ಯನು ಮಧ್ಯೆ ಬಂದು ಎದುರಿಸಿ-
ಕಂ|| ನೀನಲ್ಲದೆನ್ನ ಶರಸಂ
ಧನಮನಾನಲ್ಕೆ ನೆಱೆವರಿಲ್ಲೀ ಪಡೆಯೊಳ್|
ನೀನಿಸನಾಂಪುದೆಂಬುದು
ಮಾನಲ್ಲದೆ ನಿನ್ನನಾಂಪ ಗಂಡರುಮೊಳರೇ|| ೭೯ ||
ಪದ್ಯ-೭೯:ಪದವಿಭಾಗ-ಅರ್ಥ:ನೀನಲ್ಲದೆ ಎನ್ನ ಶರಸಂಧನಮನ ಆನಲ್ಕೆ (ನನ್ನ ಬಾಣಪ್ರಯೋಗವನ್ನು ತಾಳುವುದಕ್ಕೆ) ನೆಱೆವರು ಇಲ್ಲಿ ಈ ಪಡೆಯೊಳ್ ನೀಂ ಇನಿಸಂ ಆಂಪುದೆಂಬುದುಂ ( ಈ ಸೈನ್ಯದಲ್ಲಿ ಇನಿಸನ್ನು- ಸ್ವಲ್ಪಮಟ್ಟಿಗೆ ನಿನ್ನನ್ನು ಬಿಟ್ಟು ಸಮರ್ಥರಾದವರು) ಆನು ಅಲ್ಲದೆ ನಿನ್ನನು ಆಂಪ ಗಂಡರುಮೊಳರೇ (ನಾನಲ್ಲದೇ ನಿನ್ನನ್ನು ಪ್ರತಿಭಟಿ ತಕ್ಕ ಶೂರರೂ ಇದ್ದಾರೆಯೇ?)
ಪದ್ಯ-೭೯:ಅರ್ಥ: ನನ್ನ ಬಾಣಪ್ರಯೋಗವನ್ನು ತಾಳುವುದಕ್ಕೆ ಈ ಸೈನ್ಯದಲ್ಲಿ ಇನಿಸನ್ನು- ಸ್ವಲ್ಪಮಟ್ಟಿಗೆ ನಿನ್ನನ್ನು ಬಿಟ್ಟು ಸಮರ್ಥರಾದವರು ನಾನಲ್ಲದೇ ನಿನ್ನನ್ನು ಪ್ರತಿಭಟಿ ತಕ್ಕ ಶೂರರೂ ಇದ್ದಾರೆಯೇ? ಬೇರೆ ಯಾರೂ ಇಲ್ಲ.
ಎನೆ ಬೆಳ್ಮಸೆಯಂಬಿನ ಸರಿ
ಮೊನೆಯಂಬಿನ ಸೋನೆ ಪಾರೆಯಂಬಿನ ತಂದಲ್|
ಘನಮಾದುದಲ್ಲಿ ಕಿತ್ತಂ
ಬಿನ ಬಡಪಮಿದೆನಿಸಿ ಪಾಂಡ್ಯನಂಬಂ ಕರೆದಂ|| ೮೦ ||
ಪದ್ಯ-೦೦:ಪದವಿಭಾಗ-ಅರ್ಥ:ಎನೆ ಬೆಳ್ಮಸೆಯ ಅಂಬಿನ, ಸರಿಮೊನೆಯಂಬಿನ ಸೋನೆ, (ಎನ್ನಲು ಬೆಳ್ಳಗೆ ಮಸೆದಿರುವ ಬಾಣದ ಮಳೆ, ಮೊನಚಾದ ಬಾಣಗಳ ತುಂತುರುಮಳೆ) ಪಾರೆಯಂಬಿನ ತಂದಲ್ (ಹಾರೆಯಾಕಾರದ ಅಂಬಿನ ತುಂತುರು) ಘನಮಾದುದು ಅಲ್ಲಿ (ಅಲ್ಲಿ ಅತಿಶಯವಾದವು.) ಕಿತ್ತ ಅಂಬಿನ ಬಡಪಂ ಇದೆನಿಸಿ (ಕಿರಿಯಬಾಣಗಳ ನಿರಂತರವಾದ ಮಳೆ ಇದು ಎನಿಸವಂತೆ) ಪಾಂಡ್ಯನು ಅಂಬಂ ಕರೆದಂ (ಪಾಂಡ್ಯನು ಬಾಣಗಳನ್ನು ಸುರಿಸಿದನು.)
ಪದ್ಯ-೦೦:ಅರ್ಥ: ಎನ್ನಲು ಬೆಳ್ಳಗೆ ಮಸೆದ ಬಾಣದ ಮಳೆ, ಮೊನಚಾದ ಬಾಣಗಳ ತುಂತುರುಮಳೆ, ಹಾರೆಯಾಕಾರದ ಅಂಬಿನ ತುಂತುರು, ಅಲ್ಲಿ ಅತಿಶಯವಾದವು. ಅಲ್ಲಿಯ ಕಿರಿಯಬಾಣಗಳ ನಿರಂತರವಾದ ಮಳೆ ಇದು ಎನಿಸವಂತೆ ಪಾಂಡ್ಯನು ಬಾಣಗಳನ್ನು ಸುರಿಸಿದನು.
ಕೃರೆದೊಡವನಿತುಮನಂತಂ
ತುಱದೆಚ್ಚು ಕಡಂಗಿ ತಱಿದು ಶರವರ್ಷದಿನಂ|
ದಱಿಯೆ ಕಡಿಕೆಯ್ದು ಬಿಡದೆಡೆ
ಮಱನಂ ಮಾಡಿದುವು ಗುರುತನೂಜನ ಕಣೆಗಳ್|| ೮೧||
ಪದ್ಯ-೮೧:ಪದವಿಭಾಗ-ಅರ್ಥ:ಕರೆದೊಡೆ (ಸುರಿಸಿದರೆ)ಅವು ಅನಿತುಮನು ಅಂತಂತೆ ಉಱದೆ ಎಚ್ಚು (ಅವಷ್ಟನ್ನೂ ಹಾಗೆ ಹಾಗೆಯೇ ಸುಮ್ಮನಿರದೆ ಜಾಗ್ರತೆಯಾಗಿ ಹೊಡೆದು) ಕಡಂಗಿ ತಱಿದು (ಉತ್ಸಾಹದಿಂದ ಕತ್ತರಿಸಿ) ಶರವರ್ಷದಿಂ ಅಂದು ಅಱಿಯೆ (ಕಾಣುವಂತೆ) ಕಡಿಕೆಯ್ದು (ಬಾಣದ ಮಳೆಯಿಂದ ಕಾಣುವಂತೆ ಸಂಪೂರ್ಣವಾಗಿ ತುಂಡರಿಸಿ,) ಬಿಡದೆ ಎಡೆಮಱನಂ ಮಾಡಿದುವು (ನಿಲ್ಲದೆ ಅವರಿಬ್ಬರ ನಡುವೆ ಬರಿದಾಗುವಂತೆ ಮಾಡಿದುವು.) ಗುರುತನೂಜನ ಕಣೆಗಳ್ (ಅಶ್ವತ್ಥಾಮನ ಬಾಣಗಳು)
ಪದ್ಯ-೮೧:ಅರ್ಥ: ಬಾಣಗಳ ಮಳೆಯನ್ನು ಸುರಿಸಿದರೆ ಅವಷ್ಟನ್ನೂ ಹಾಗೆ ಹಾಗೆಯೇ ಸುಮ್ಮನಿರದೆ ಹೊಡೆದು, ಉತ್ಸಾಹದಿಂದ ಕತ್ತರಿಸಿ, ಬಾಣದ ಮಳೆಯಿಂದ ಕಾಣುವಂತೆ ಸಂಪೂರ್ಣವಾಗಿ ತುಂಡರಿಸಿ, ನಿಲ್ಲದೆ ಅಶ್ವತ್ಥಾಮನ ಬಾಣಗಳು ಅವರಿಬ್ಬರ ನಡುವೆ ಬರಿದಾಗುವಂತೆ ಮಾಡಿದುವು.
ಎಡೆವಱದೊಳೆಱಗಿ ಬಱಸಿಡಿ
ಲಿಡುಮುಡುಕನೆ ಪೊಡೆದುದೆನಿಸಿ ಪಾಂಡ್ಯನ ರಥದ|
ಚ್ಚುಡಿದೞ್ಗೆ ತೞ್ಗೆ ಕೊಂಡುವು
ಕಡುಗೂರಿದುವೆನಿಪ ಗುರುತನೂಜನ ಕಣೆಗಳ್|| ೮೨ ||
ಪದ್ಯ-೮೨:ಪದವಿಭಾಗ-ಅರ್ಥ:ಎಡೆವಱದೊಳು ಎಱಗಿ ಬಱಸಿಡಿಲು (ಬರಿದುಪ್ರದೇಶದಲ್ಲಿ ಬರಸಿಡಿಲು ಹೊಡೆದು) ಇಡುಮುಡುಕನೆ ಪೊಡೆದುದು ಎನಿಸಿ (ಛಟಿಲುಛಟಿಲೆಂದು ಹೊಡೆಯಿತು ಎಂಬಂತೆ) ಪಾಂಡ್ಯನ ರಥದ ಅಚ್ಚುಡಿದು ಅೞ್ಗೆ ತೞ್ಗೆ (ಪಾಂಡ್ಯನ ರಥದ ಅಚ್ಚು ಮುರಿದು ಕುಗ್ಗಿ ಕುಸಿಯುವಂತೆ) ಕೊಂಡುವು (ಆಕ್ರಮಿಸಿದವು.) ಕಡುಗೂರಿದುವು ಎನಿಪ ಗುರುತನೂಜನ ಕಣೆಗಳ್ (ಬಹಳ ಹರಿತವಾದವು ಎನ್ನಿಸುವ ಅಶ್ವತ್ಥಾಮನ ಬಾಣಗಳು)
ಪದ್ಯ-೮೨:ಅರ್ಥ:ನಡುವಿನ ಬರಿದು ಪ್ರದೇಶದಲ್ಲಿ ಬರಸಿಡಿಲು ಹೊಡೆದು ಛಟಿಲುಛಟಿಲೆಂದು ಹೊಡೆಯಿತು ಎಂಬಂತೆ ಅಶ್ವತ್ಥಾಮನ ಬಹಳ ಹರಿತವಾದ ಬಾಣಗಳು ಪಾಂಡ್ಯನ ರಥದ ಅಚ್ಚು ಮುರಿದು ಕುಗ್ಗಿ ಕುಸಿಯುವಂತೆ ಮಾಡಿ, ಬಹಳ ಹರಿತವಾದವು ಎನ್ನಿಸುವ ಅಶ್ವತ್ಥಾಮನ ಬಾಣಗಳು ಆಕ್ರಮಿಸಿದವು.
ವಿರಥಂ ಪಾಂಡ್ಯಂ ಕೋಪ
ಸ್ಪುರಿತಾಧರನುಡಿದು ಕೆಡೆಯೆ ಪೞಯಿಗೆಯುಂ ಬಿ|
ಬ್ಬರ ಬಿರಿಯೆ ಗುರುತನೂಭವ
ನುರಮಂ ಬಿರಿಯೆಚ್ಚು ಬೆಂಗೆವಂದಂಗಜದಾ|| ೮೩ ||
ಪದ್ಯ-೮೩:ಪದವಿಭಾಗ-ಅರ್ಥ:ವಿರಥಂ ಪಾಂಡ್ಯಂ ಕೋಪ ಸ್ಪುರಿತಾಧರಂ ಉಡಿದು ಕೆಡೆಯೆ (ಕೋಪದಿಂದ ನಡುಗುತ್ತಿರುವ ತುಟಿಯಳ್ಳ ರಥವಿಲ್ಲದ ಪಾಂಡ್ಯನು ಮುರಿದು ಬೀಳಲು) ಪೞಯಿಗೆಯುಂ ಬಿಬ್ಬರ ಬಿರಿಯೆ (ಬಾವುಟವೂ ಪೂರ್ಣವಾಗಿ ಬಿರಿಯಲು) ಗುರುತನೂಭವನ ಉರಮಂ ಬಿರಿಯೆ ಎಚ್ಚು (ಅಶ್ವತ್ಥಾಮನ ಎದೆಯನ್ನೂ ಬಿರಿದುಹೋಗುವಂತೆ ಹೊಡೆದು) ಬೆಂಗೆವಂದಂ ಗಜದಾ (ಗಜದ- ಆನೆಯ ಬೆನ್ನಿಗೆ ಬಂದನು)
ಪದ್ಯ-೮೩:ಅರ್ಥ: ಕೋಪದಿಂದ ನಡುಗುತ್ತಿರುವ ತುಟಿಯಳ್ಳ, ರಥವಿಲ್ಲದ ಪಾಂಡ್ಯನು ಮುರಿದು ಬೀಳಲು, ಬಾವುಟವೂ ಪೂರ್ಣವಾಗಿ ಬಿರಿಯಲು (ಪಾಂಡ್ಯನು) ಅಶ್ವತ್ಥಾಮನ ಎದೆಯನ್ನೂ ಬಿರಿದುಹೋಗುವಂತೆ ಹೊಡೆದು ಆನೆಯ ಬೆನ್ನಿಗೆ ಬಂದನು.
ವ|| ಅಂತು ತನ್ನ ನಚ್ಚುವ ಕೆಯ್ದುಗಳನಿತು ಪೊಳೆಯೆ ಮಸೆದೊಟ್ಟಿ ಮತ್ತಹಸ್ತಿಯನಣೆದು ತೋಱಿಕೊಟ್ಟಾಗಳ್-
ವಚನ:ಪದವಿಭಾಗ-ಅರ್ಥ:ಅಂತು ತನ್ನ ನಚ್ಚುವ ಕೆಯ್ದುಗಳು ಅನಿತು ಪೊಳೆಯೆ ಮಸೆದು ಒಟ್ಟಿ (ತಾನು ನಂಬಿದ್ದ ತನ್ನ ಆಯುಧಗಳೆಲ್ಲ ಹೊಸತಾಗಿ ಮಸೆಯಲ್ಪಟ್ಟು ರಾಶಿಯಾಗಿ ಪೊಳೆಯೆ- ಹೊಳೆಯುತ್ತಿರಲು) ಮತ್ತಹಸ್ತಿಯಂ ಅಣೆದು ತೋಱಿ ಕೊಟ್ಟಾಗಳ್ (ಮದ್ದಾನೆಯನ್ನು ಅಂಕುಶದಿಂದ ತಿವಿದು ಪಾಂಡ್ಯನು ಅಶ್ವತ್ಥಾಮನ ಮೇಲೆ ಛೂಬಿಟ್ಟಾಗ-)-
ವಚನ:ಅರ್ಥ:ತಾನು ನಂಬಿದ್ದ ಆಯುಧಗಳೆಲ್ಲ ಹೊಸತಾಗಿ ಮಸೆಯಲ್ಪಟ್ಟು ರಾಶಿಯಾಗಿ ಹೊಳೆಯುತ್ತಿರಲು ಮದ್ದಾನೆಯನ್ನು ಅಂಕುಶದಿಂದ ತಿವಿದು ಪಾಂಡ್ಯನು ಅಶ್ವತ್ಥಾಮನ ಮೇಲೆ ಛೂಬಿಟ್ಟಾಗ-
ಉ|| ಈ ಮದದಂತಿಯೆೞ್ತರವುಮೀತನ ಶೌರ್ಯಮುಮೀ ಮಹೋಗ್ರ ಸಂ
ಗ್ರಾಮದೊಳೆನ್ನುಮಂ ಚಳಿಯಿಸಲ್ ಬಗೆದಪ್ಪುದು ಪಾಂಡ್ಯನನ್ನನಿ|
ನ್ನೀ ಮಹಿಯೊಳ್ ಪೆಱಂ ಕಲಿಯೆ ನೆಟ್ಟನಿದಿರ್ಚುವ ನಿಚ್ಚಟಿಕ್ಕೆಯೊಳ್
ಭೀಮನುಮಿನ್ನನಲ್ಲನೆನೆ ಪೋಲ್ವೆಗಿವಂಗೆಣೆ ಗಂಡರೆಂಬರಾರ್|| ೮೪ ||
ಪದ್ಯ-೮೪:ಪದವಿಭಾಗ-ಅರ್ಥ:ಈ ಮದದಂತಿಯ ಎೞ್ತರವುಂ (ಈ ಮದ್ದಾನೆಯ ಬರುವಿಕೆಯೂ) ಈತನ ಶೌರ್ಯಮುಂ (ಈತನ ಪರಾಕ್ರಮವೂ) ಮಹೋಗ್ರ ಸಂಗ್ರಾಮದೊಳ್ ಎನ್ನುಮಂ ಚಳಿಯಿಸಲ್ ಬಗೆದಪ್ಪುದು (ಈ ಘೋರಯುದ್ಧದಲ್ಲಿ ನನ್ನನ್ನು ಶಕ್ತಿಹೀನನನ್ನಾಗಿ ಮಾಡಲು ಯೋಚಿಸುತ್ತಿದೆ.) ಪಾಂಡ್ಯನನ್ನಂ ಇಂ ಈ ಮಹಿಯೊಳ್ ಪೆಱಂ ಕಲಿಯೆ (ಪಾಂಡ್ಯನಂತಹವನೂ ಇನ್ನು ಈ ಭೂಮಿಯಲ್ಲಿ ಇನ್ನೊಬ್ಬ ಶೂರನಿರುವನೇ?) ನೆಟ್ಟನೆ ಇದಿರ್ಚುವ ನಿಚ್ಚಟಿಕ್ಕೆಯೊಳ್ ಭೀಮನುಂ ಇನ್ನನು ಅಲ್ಲನು ಎನೆ (ನೇರವಾಗಿ ವೈರಿಯನ್ನು ಎದುರಿಸುವ ಸ್ಥೆರ್ಯದಲ್ಲಿ ಭೀಮನು ಕೂಡ ಇಂತಹವನು ಅಲ್ಲ, ಎನ್ನವಾಗ) ಪೋಲ್ವೆಗೆ ಇವಂಗೆ ಎಣೆ ಗಂಡರೆಂಬರಾರ್ (ಹೋಲಿಕೆಮಾಡಲು ಇವನಿಗೆ ಸಮಾನರಾದವರು ಶೂರರು ಯಾರು ಇದ್ದಾರೆ? )
ಪದ್ಯ-೮೪:ಅರ್ಥ:ಅಶ್ವತ್ಥಾಮನು ಯೋಚಿಸಿದ, ಈ ಮದ್ದಾನೆಯ ಬರುವಿಕೆಯೂ ಈತನ ಪರಾಕ್ರಮವೂ ಈ ಘೋರಯುದ್ಧದಲ್ಲಿ ನನ್ನನ್ನು ಶಕ್ತಿಹೀನನನ್ನಾಗಿ ಮಾಡಲು ಯೋಚಿಸುತ್ತಿದೆ. ಪಾಂಡ್ಯನಂತಹವನೂ ಇನ್ನು ಈ ಭೂಮಿಯಲ್ಲಿ ಇನ್ನೊಬ್ಬ ಶೂರನಿರುವನೇ? ನೇರವಾಗಿ ವೈರಿಯನ್ನು ಎದುರಿಸುವ ಸ್ಥೆರ್ಯದಲ್ಲಿ ಭೀಮನು ಕೂಡ ಇಂತಹವನು ಅಲ್ಲ, ಎನ್ನುವಾಗ ಹೋಲಿಕೆಮಾಡಲು ಇವನಿಗೆ ಸಮಾನರಾದವರು ಶೂರರು ಯಾರು ಇದ್ದಾರೆ?
ವ|| ಎಂಬಿನ್ನೆಗಂ ಪಾಂಡ್ಯನಶ್ವತ್ಥಾಮನ ರಥಮಂ ಮುಟ್ಟೆವಂದು-
ವಚನ:ಪದವಿಭಾಗ-ಅರ್ಥ:ಎಂಬ ಇನ್ನೆಗಂ ಪಾಂಡ್ಯನು ಅಶ್ವತ್ಥಾಮನ ರಥಮಂ ಮುಟ್ಟೆವಂದು (ಹತ್ತಿರ ಬಂದು)-
ವಚನ:ಅರ್ಥ:ವ|| ಎನ್ನುವಷ್ಟರಲ್ಲಿ ಪಾಂಡ್ಯನು ಅಶ್ವತ್ಥಾಮನ ತೇರಿನ ಸಹತ್ತಿರ ಬಂದು-
ಕಂ|| ವಿಳಯಾನಳ ವಿಳಸನ ವಿ
ಸುಳಿಂಗ ಸಂಘಾತದಿಂ ತಗುಳ್ದಡರ್ವನಿತೊಂ|
ದಳವಿಯ ತೋಮರದಿಂದಿಡೆ
ಪೊಳೆವಸ್ತ್ರದೆ ಗುರುತನೂಜನೆಡೆಯೊಳೆ ಕಡಿದಂ|| ೮೫ ||
ಪದ್ಯ-೮೫:ಪದವಿಭಾಗ-ಅರ್ಥ: ವಿಳಯಾನಳ ವಿಳಸನ ವಿಸುಳಿಂಗ ಸಂಘಾತದಿಂ (ಪ್ರಳಯಾಗ್ನಿಯ ಪ್ರಕಾಶದ ಕಿಡಿಗಳ ಸಮೂಹದಿಂದ) ತಗುಳ್ದು ಅಡರ್ವ ಅನಿತೊಂದು ಅಳವಿಯ (ಹಿಂಬಾಲಿಸಿ ಮೇಲೇರುವಷ್ಟು ಶಕ್ತಿಯುಳ್ಳ) ತೋಮರದಿಂದ ಇಡೆ (ಹೊಡೆಯಲು) ಪೊಳೆವ ಅಸ್ತ್ರದೆ (ತೋಮರವೆಂಬ ಹೊಳೆಯುವ ಆಯುಧ (ದೊಡ್ಡಗದೆ) ಹೊಡೆಯಲು) ಗುರುತನೂಜನು ಎಡೆಯೊಳೆ ಕಡಿದಂ (ಅಶ್ವತ್ಥಾಮನು ಮಧ್ಯಮಾರ್ಗದಲ್ಲಿಯೇ ಅದನ್ನು ಕತ್ತರಿಸಿದನು.)
ಪದ್ಯ-೮೫:ಅರ್ಥ: ಪ್ರಳಯಾಗ್ನಿಯ ಪ್ರಕಾಶದ ಕಿಡಿಗಳ ಸಮೂಹದಿಂದ ಹಿಂಬಾಲಿಸಿ ಮೇಲೇರುವಷ್ಟು ಶಕ್ತಿಯುಳ್ಳ ತೋಮರವೆಂಬ ಹೊಳೆಯುವ ಆಯುಧ (ದೊಡ್ಡಗದೆ) ಹೊಡೆಯಲು ಅಶ್ವತ್ಥಾಮನು ಮಧ್ಯಮಾರ್ಗದಲ್ಲಿಯೇ ಅದನ್ನು ಕತ್ತರಿಸಿದನು.
ವ|| ಅಂತದಂ ಕಡಿದು ಕೂರಿದುವುಂ ನೇರಿದುವುದಮಪ್ಪಯ್ದಮೋಘಾಸ್ತ್ರಂಗಳಂ ಬಾಣಯಿಂದುರ್ಚಿಕೊಂಡು ತನ್ನ ಮನದೊಳೆ ಸಮಕಟ್ಟಿಕೊಂಡೆಚ್ಚಾಗಳ್-
ವಚನ:ಪದವಿಭಾಗ-ಅರ್ಥ:ಅಂತದಂ ಕಡಿದು (ಹಾಗೆ ಅದನ್ನು ಕತ್ತರಿಸಿ) ಕೂರಿದುವುಂ ನೇರಿದುವುದಂ ಅಪ್ಪ ಅಯ್ದು ಅಮೋಘಾಸ್ತ್ರಂಗಳಂ (ಹರಿತವೂ ನೇರವೂ ಆದ ಬೆಲೆಯೇ ಇಲ್ಲದ ಅಯ್ದು ಬಾಣಗಳನ್ನು) ಬಾಣಯಿಂದ ಉರ್ಚಿಕೊಂಡು ( ಬತ್ತಳಿಕೆಯಿಂದ ಸೆಳೆದುಕೊಂಡು) ತನ್ನ ಮನದೊಳೆ ಸಮಕಟ್ಟಿಕೊಂಡೆಚ್ಚಾಗಳ್ (ತನ್ನ ಮನಸ್ಸಿನಲ್ಲಿಯೇ ಹೇಗೆ ಪ್ರಯೋಗಮಾಡಬೇಕೆಂದು ಯೋಚಿಸಿ ಹೊಡೆದಾಗ.)-
ವಚನ:ಅರ್ಥ: ಹಾಗೆ ಅದನ್ನು ಕತ್ತರಿಸಿ ಹರಿತವೂ ನೇರವೂ ಆದ ಬೆಲೆಯೇ ಇಲ್ಲದ ಅಯ್ದು ಬಾಣಗಳನ್ನು ಬತ್ತಳಿಕೆಯಿಂದ ಸೆಳೆದುಕೊಂಡು ತನ್ನ ಮನಸ್ಸಿನಲ್ಲಿಯೇ ಹೇಗೆ ಪ್ರಯೋಗಮಾಡಬೇಕೆಂದು ಯೋಚಿಸಿ ಹೊಡೆದಾಗ.
ಕಂ|| ಕರಿಕರಮುಂ ಮಾವಂತನ
ಕರಮುಂ ತತ್ಪಾಂಡ್ಯಶಿರಮುಮೊಡನುರುಳೆ ಭಯಂ|
ಕರಮುಮನುರ್ವಿಗಗುರ್ವುಮ
ನೆರಡುಂ ಪಡೆಗಳ್ಗೆ ತೋಱಿದಂ ಗುರುತನಯಂ|| ೮೬ ||
ಪದ್ಯ-೮೬:ಪದವಿಭಾಗ-ಅರ್ಥ:ಕರಿಕರಮುಂ (ಆನೆಯ ಕೈ: ಆನೆಯ ಸೊಂಡಿಲೂ) ಮಾವಂತನಕರಮುಂ (ಮಾವಟಿಗನ ಕೈಯೂ) ತತ್ ಪಾಂಡ್ಯ ಶಿರಮುಂ ಒಡನೆ ಉರುಳೆ (ಆ ಪಾಂಡ್ಯನ ತಲೆಯೂ ಜೊತೆಯಾಗಿಯೇ ಉರುಳಲು) ಭಯಂಕರಮುಂ ಅನುರ್ವಿಗೆ ಅಗುರ್ವುಮಂ ಎರಡುಂ ಪಡೆಗಳ್ಗೆ (ಭಯಾನಕವನ್ನೂ ಅದ್ಭುತವನ್ನೂ ಜೊತೆಯಲ್ಲಿಯೇ ತೋರಿದನು.) ತೋಱಿದಂ ಗುರುತನಯಂ (ಅಶ್ವತ್ಥಾಮನು ತೋರಿದನು.)
ಪದ್ಯ-೮೬:ಅರ್ಥ: ಆನೆಯ ಸೊಂಡಿಲೂ ಮಾವಟಿಗನ ಕೈಯೂ ಆ ಪಾಂಡ್ಯನ ತಲೆಯೂ ಜೊತೆಯಾಗಿಯೇ ಉರುಳಲು ಅಶ್ವತ್ಥಾಮನು ಲೋಕಕ್ಕೆ ಭಯಾನಕವನ್ನೂ ಅದ್ಭುತವನ್ನೂ ಜೊತೆಯಲ್ಲಿಯೇ ತೋರಿದನು.
ವ|| ಅನ್ನೆಗಂ ಸಂಸಪ್ತಕನಿಕಾಯಮನತಿ ನಿಶಿತ ಸಾಯಕನಿಕಾಯದಿಂ ನಿಶ್ಯೇಷಮಾಗೆ ಮಾೞ್ಪ ಸಾಮಂತಚೂಡಾಮಣಿ ಕೌರವಬಲದ ಕಳಕಳಮಂ ಕೇಳ್ದು ಮನಪವನವೇಗದಿಂ ಜವನೆ ಬರ್ಪಂತೆ ಬಂದು ತಾಗಿದಾಗಳಕ್ಷೋಹಿಣೀ ನಾಯಕಂ ದಂಡಧಾರಂ ಗಂಡಗುಣಕ್ಕಾಧಾರಮಾಗಿ ಮದಗಳಿತ ಗಂಡ ಪ್ರಚಂಡ ಮದವೇತಂಡಮನಣೆದು ಬಿಟ್ಟಿಕ್ಕಿದಾಗಳ್-
ವಚನ:ಪದವಿಭಾಗ-ಅರ್ಥ:ಅನ್ನೆಗಂ ಸಂಸಪ್ತಕ ನಿಕಾಯಮನು (ಅಷ್ಟರಲ್ಲಿ ಸಂಸಪ್ತಕಸಮೂಹವನ್ನು) ಅತಿ ನಿಶಿತ ಸಾಯಕ ನಿಕಾಯದಿಂ (ಬಹಳ ಹರಿತವಾದ ಬಾಣಗಳ ಸಮೂಹದಿಂದ) ನಿಶ್ಯೇಷಮಾಗೆ ಮಾೞ್ಪ (ಸ್ವಲ್ಪವೂ ಉಳಿಯದ ಹಾಗೆ ಮಾಳ್ಪ- ಮಾಡುವ) ಸಾಮಂತಚೂಡಾಮಣಿ ಕೌರವಬಲದ ಕಳಕಳಮಂ ಕೇಳ್ದು (ಸಾಮಂತ ಚೂಡಾಮಣಿಯಾದ ಅರ್ಜುನನು, ಕೌರವಸೈನ್ಯದ ಕೋಲಾಹಲ ಶಬ್ದವನ್ನು ಕೇಳಿ) ಮನಪವನ ವೇಗದಿಂ ಜವನೆ ಬರ್ಪಂತೆ ಬಂದು (ಮನೋವೇಗ ವಾಯುವೇಗದಿಂದ ಯಮನೇ ಬರುವ ಹಾಗೆ ಬಂದು) ತಾಗಿದಾಗಳ್ (ಎದುರಿಸಿದಾಗ,) ಅಕ್ಷೋಹಿಣೀ ನಾಯಕಂ ದಂಡಧಾರಂ ಗಂಡ ಗುಣಕ್ಕಾಧಾರಮಾಗಿ (ಅಕ್ಷೋಹಿಣೀ ಸೈನ್ಯದ ಒಡೆಯನಾದ ದಂಡಧಾರನು ಪೌರುಷಗುಣಕ್ಕೆ ಆಶ್ರಯವಾಗಿ) ಮದಗಳಿತ ಗಂಡ ಪ್ರಚಂಡ ಮದವೇ ತಂಡಮನು ಅಣೆದು ಬಿಟ್ಟಿಕ್ಕಿದಾಗಳ್ (ಮದೋದಕವು ಸುರಿಯುತ್ತಿರುವ ಕಪೋಲವುಳ್ಳ ಮದ್ದಾನೆಯನ್ನು ತಿವಿದು ಛೂಬಿಟ್ಟಾಗ-)-
ವಚನ:ಅರ್ಥ:ಅಷ್ಟರಲ್ಲಿ ಸಂಸಪ್ತಕಸಮೂಹವನ್ನು ಬಹಳ ಹರಿತವಾದ ಬಾಣಗಳ ಸಮೂಹದಿಂದ ಸ್ವಲ್ಪವೂ ಉಳಿಯದ ಹಾಗೆ ಮಾಡುವ ಸಾಮಂತ ಚೂಡಾಮಣಿಯಾದ ಅರ್ಜುನನು, ಕೌರವಸೈನ್ಯದ ಕೋಲಾಹಲ ಶಬ್ದವನ್ನು ಕೇಳಿ ಮನೋವೇಗ ವಾಯುವೇಗದಿಂದ ಯಮನೇ ಬರುವ ಹಾಗೆ ಬಂದು ಎದುರಿಸಿದಾಗ, ಅವನ ಮೇಲೆ, ಅಕ್ಷೋಹಿಣೀ ಸೈನ್ಯದ ಒಡೆಯನಾದ ದಂಡಧಾರನು ಪೌರುಷಗುಣಕ್ಕೆ ಆಶ್ರಯವಾಗಿ ಮದೋದಕವು ಸುರಿಯುತ್ತಿರುವ ಕಪೋಲವುಳ್ಳ ಮದ್ದಾನೆಯನ್ನು ತಿವಿದು ಛೂಬಿಟ್ಟಾಗ-
ಉ|| ಕಾದಲಿದಿರ್ಚಿ ಬಂದ ಪಗೆ ಸಂಪಗೆಯಂತೆ ಶಿಳೀಮುಖಕ್ಕೆ ಗೆಂ
ಟಾದುದಿದೊಂದೆ ಸಿಂಧುರದೊಳಿಂತಿವನೊರ್ವನೆ ತಳ್ತನಾದೊಡೇ|
ನಾದುದೋ ಬಲ್ಲೆನೆಂದು ಮುಳಿದೆಚ್ಚೊಡೆ ಸೌಳನೆ ಸೀಳ್ದು ಪಚ್ಚವೋ
ಲಾದುದು ದಂಡಧಾರ ಗಜಮಾತನೊಡಲ್ವೆರಸಂದು ಪಾರ್ಥನಿಂ|| ೮೭ ||
ಪದ್ಯ-೮೭:ಪದವಿಭಾಗ-ಅರ್ಥ:ಕಾದಲು ಇದಿರ್ಚಿ ಬಂದ ಪಗೆ (ಅರ್ಜುನನೊಡನೆ- ಯುದ್ಧಕ್ಕೆ ಎದುರಸಿ ಬಂದ ಶತ್ರುವು) ಸಂಪಗೆಯಂತೆ ಶಿಳೀಮುಖಕ್ಕೆ ಗೆಂಟಾದುದು (ದುಂಬಿಗೆ ಶೀಳೀಮುಖ ಬಾಣಗಳಿಗೆ ಎದುರಾದ ಸಂಪಗೆಯ ಹೂವಿನಂತೆ (??) ದೂರವಾಯಿತು) ಇದೊಂದೆ ಸಿಂಧುರದೊಳು ಇಂತು ಇವನು ಒರ್ವನೆ ತಳ್ತನಾದೊಡೆ ಏನಾದುದೋ ಬಲ್ಲೆನೆಂದು (ಇದೊಂದೇ ಆನೆಯೊಡನೆ ಇವನೊಬ್ಬನೆ ಪ್ರತಿಭಟಿಸಿದರೇನಾಯಿತು, ಇದಕ್ಕೆ ಪರಿಹಾರವನ್ನು ನಾನು ತಿಳಿದಿದ್ದೇನೆ. ಎಂದು ) ಮುಳಿದು ಎಚ್ಚೊಡೆ ಸೌಳನೆ ಸೀಳ್ದು ಪಚ್ಚವೋಲಾದುದು ದಂಡಧಾರ ಗಜಮಾತನೊಡಲ್ವೆರಸಂದು ಪಾರ್ಥನಿಂ (ಕೋಪಿಸಿ ಹೊಡೆಯಲು ಅರ್ಜುನನಿಂದ ದಂಡಧಾರನ ಶರೀರದೊಡನೆ ಆ ಆನೆಯು ಸೌಳೆಂದು ಸೀಳಿ ವಿಭಾಗಿಸಿದ ಹಾಗಾಯಿತು.)
ಪದ್ಯ-೮೭:ಅರ್ಥ: ಅರ್ಜುನನೊಡನೆ ಯುದ್ಧಕ್ಕೆ ಎದುರಸಿ ಬಂದ ಶತ್ರುವು ದುಂಬಿಗೆ ಎದುರಾದ ಸಂಪಗೆಯ ಹೂವಿನಂತೆ ದೂರವಾಯಿತು. ಇದೊಂದೇ ಆನೆಯೊಡನೆ ಇವನೊಬ್ಬನೆ ಪ್ರತಿಭಟಿಸಿದರೇನಾಯಿತು, ಇದಕ್ಕೆ ಪರಿಹಾರವನ್ನು ನಾನು ತಿಳಿದಿದ್ದೇನೆ. ಎಂದು ಕೋಪಿಸಿ ಹೊಡೆಯಲು ಅರ್ಜುನನಿಂದ ದಂಡಧಾರನ ಶರೀರದೊಡನೆ ಆ ಆನೆಯು ಸೌಳೆಂದು ಸೀಳಿ ವಿಭಾಗಿಸಿದ ಹಾಗಾಯಿತು.
ವ||ಅಂತಾತಂ ಕೃತಾಂತನಿವಾಸಮನೆಯ್ದುವುದುಂ-
ವಚನ:ಪದವಿಭಾಗ-ಅರ್ಥ:ಅಂತು ಆತಂ ಕೃತಾಂತ ನಿವಾಸಮನು ಎಯ್ದುವುದುಂ (ಅವನು ಯಮನ ಮನೆಯನ್ನು ಸೇರಲಾಗಿ)-
ವಚನ:ಅರ್ಥ: ವ|| ಹಾಗೆ ಅವನು ಯಮನ ಮನೆಯನ್ನು ಸೇರಲಾಗಿ
ಕಂ|| ಇನ್ನಿನಿಸನಿರ್ದೇಡಾಜಿಯೊ
ಳೆನ್ನ ತನೂಜನುಮನೞ್ಗಿಪಂ ನರನದನಿ|
ನ್ನಾನ್ನೋಡಲಾರೆನೆಂಬವೊ
ಲನ್ನೆಗಮಸ್ತಾಚಳಸ್ಥನಾದಂ ದಿನಪಂ|| ೮೮ ||
ಪದ್ಯ-೮೮:ಪದವಿಭಾಗ-ಅರ್ಥ:ಇನ್ನು ಇನಿಸನು ಇರ್ದೇಡೆ ಆಜಿಯೊಳ್ ಎನ್ನ ತನೂಜನುಂ ಅೞ್ಗಿಪಂ ನರನು(ಇನ್ನೂ ಸ್ವಲ್ಪ ಕಾಲ ಇದ್ದರೆ ಯುದ್ಧದಲ್ಲಿ ಅರ್ಜುನನು ನನ್ನ ಮಗನಾದ ಕರ್ಣನನ್ನೂ ಸಾಯಿಸುತ್ತಾನೆ) ಅದಂ ಇಂ ನಾಂ/ಆಂ ನೋಡಲಾರೆಂನೆಂಬವೊಲ್ (ಇದನ್ನು ನಾನು ನೋಡಲಾರೆ ಎನ್ನುವ ಹಾಗೆ) ಅನ್ನೆಗಂ ಅಸ್ತಾಚಳಸ್ಥನು ಆದಂ ದಿನಪಂ (ಅಷ್ಟರಲ್ಲಿ ಸೂರ್ಯನು ಮುಳುಗಿದನು.)
ಪದ್ಯ-೮೮:ಅರ್ಥ:ಇನ್ನೂ ಸ್ವಲ್ಪ ಕಾಲ ಇದ್ದರೆ ಯುದ್ಧದಲ್ಲಿ ಅರ್ಜುನನು ನನ್ನ ಮಗನಾದ ಕರ್ಣನನ್ನೂ ಸಾಯಿಸುತ್ತಾನೆ. ಇದನ್ನು ನಾನು ನೋಡಲಾರೆ ಎನ್ನುವ ಹಾಗೆ ಅಷ್ಟರಲ್ಲಿ ಸೂರ್ಯನು ಮುಳುಗಿದನು.

ದುರ್ಯೋಧನನು ಶಲ್ಯನನ್ನು ಕರ್ಣನ ಸಾರಥಿಯಾಗಲು ಒಪ್ಪಿಸುವುದು[ಸಂಪಾದಿಸಿ]

ವ|| ಅಂತು ಪತಂಗಮಂಡಲಮಪರಗಿರಿತಟಮನೆಯ್ದುವುದುಮೆರಡುಂ ಪಡೆಗಳಪಹಾರ ತೂರ್ಯಂಗಳಂ ಬಾಜಿಸಿ ತಂತಮ್ಮ ಬೀಡುಗಳ್ಗೆ ಪೋದುವಾಗಳ್ ರಾಜರಾಜನಲ್ಲಿಗಂಗರಾಜಂ ಬಂದು ಹಯೋಪಾಯಕುಶಲರಪ್ಪ ಗಾಂಗೇಯರಱಿಪಿದ ಮಾತನೇಕಾಂತ ದೊಳಱಿಪುವುದುಂ ತ್ರಿಣೇತ್ರನೊಳ್ ಕಲ್ತಶ್ವಹೃದಯದೊಳಂ ರಥಕಲ್ಪದೊಳಂ ಶಲ್ಯಂ ಮುಂರಾಂತಕಂಗಂ ಪ್ರವೀಣನಪ್ಪುದಱಿಂದಾತನ ನೆಂತಾನುಮೊಡಂಬಡೆ ನುಡಿದು ನಿನಗೆ ಸಾರಥಿ ಮಾಡುವೆನೆಂದು ದಿನಕರತನೂಜನಂ ಬೀಡಿಂಗೆ ಪೋಗಲ್ವೇೞ್ದು ಪೊನ್ನ ಪಣ್ಣುಗೆಯ ಪಿಡಿಯನೇಱಿ ದಿನಕರನ ಬೞಿದಪ್ಪಿದ ಕಿರಣಂಗಳ್ ಕೞ್ತಲೆಯಂ ಕಂಡಳ್ಕಿ ತನ್ನ ಮರೆಯಂ ಪೊಕ್ಕಂತೆ ಕೆಯ್ದೀವಿಗೆಗಳ್ ಬೆಳಗೆ ಕಿಱಿದಾನುಂ ಮಾನಸರ್ವೆರಸು ರಾಜರಾಜಂ ಮದ್ರರಾಜನ ಮನೆಗೆ ಬರ್ಪುದುಮಾತನತ್ಯಂತ ಸಂಭ್ರಮಾಕ್ರಾಂತಹೃದಯನಾಗಿ ಬೇಗಮಿದಿರೇೞೆ-
ವಚನ:ಪದವಿಭಾಗ-ಅರ್ಥ:ಅಂತು ಪತಂಗಮಂಡಲಂ ಅಪರಗಿರಿತಟಮನು ಎಯ್ದುವುದುಂ (ನಂತರ ಸೂರ್ಯಬಿಂಬವು ಪಶ್ಚಿಮಗಿರಿಯ ಬುಡವನ್ನು ತಲುಪಲು) ಎರಡುಂ ಪಡೆಗಳ್ ಅಪಹಾರ ತೂರ್ಯಂಗಳಂ ಬಾಜಿಸಿ (ಎರಡು ಸೈನ್ಯಗಳೂ ಯುದ್ಧವನ್ನು ನಿಲ್ಲಿಸಲು ಸೂಚನೆಕೊಡುವ ವಾದ್ಯವನ್ನು ಬಾರಿಸಿ) ತಂತಮ್ಮ ಬೀಡುಗಳ್ಗೆ ಪೋದುವು ಆಗಳ್ ( ಆಗ, ತಮ್ಮ ತಮ್ಮ ಬೀಡುಗಳಿಗೆ ತೆರಳಿದುವು.) ರಾಜರಾಜನಲ್ಲಿಗೆ ಅಂಗರಾಜಂ ಬಂದು ಹಯ ಉಪಾಯಕುಶಲರಪ್ಪ ಗಾಂಗೇಯರು ಅಱಿಪಿದ ಮಾತನು ಏಕಾಂತದೊಳ್ ಅಱಿಪುವುದುಂ (ಆಗ ರಾಜ ದುರ್ಯೋಧನನಲ್ಲಿಗೆ ಕರ್ಣನು ಬಂದು ಅಶ್ವಶಾಸ್ತ್ರವನ್ನು ಚೆನ್ನಾಗಿ ತಿಳಿದ ಭೀಷ್ಮರು ತಿಳಿಸಿದ ಮಾತನ್ನು ರಹಸ್ಯವಾಗಿ ತಿಳಿಸಿದನು. ಆಗ-) ತ್ರಿಣೇತ್ರನೊಳ್ ಕಲ್ತ ಅಶ್ವಹೃದಯದೊಳಂ ರಥಕಲ್ಪದೊಳಂ ಶಲ್ಯಂ ಮುಂರಾಂತಕಂಗಂ ಪ್ರವೀಣನಪ್ಪುದಱಿಂದ (ಮುಕ್ಕಣ್ಣನಾದ ಈಶ್ವರನಲ್ಲಿ ಕಲಿತ ಅಶ್ವಹೃದಯದಲ್ಲಿಯೂ ರಥಕಲ್ಪದಲ್ಲಿಯೂ ಶಲ್ಯನು ಶ್ರೀಕೃಷ್ಣನಿಗಿಂತಲೂ ಹೆಚ್ಚು ತಿಳಿದವನಾದುದರಿಂದ) ಆತನನು ಎಂತಾನುಂ ಒಡಂಬಡೆ ನುಡಿದು ನಿನಗೆ ಸಾರಥಿ ಮಾಡುವೆನೆಂದು (ವನನ್ನು ಹೇಗಾದರೂ ಮಾಡಿ ಒಪ್ಪುವ ಹಾಗೆ ಮಾಡಿ ನಿನಗೆ ಸಾರಥಿಯನ್ನಾಗಿ ಮಾಡುತ್ತೇನೆ ಎಂದು) ದಿನಕರತನೂಜನಂ ಬೀಡಿಂಗೆ ಪೋಗಲ್ ವೇೞ್ದು (ಎಂದು ಕರ್ಣನನ್ನು ಬೀಡಿಗೆ ಹೋಗಹೇಳಿ), ಪೊನ್ನ ಪಣ್ಣುಗೆಯ (ಅಲಂಕಾರಿಸಿದ) ಪಿಡಿಯನು ಏಱಿ (ಚಿನ್ನದಿಂದ ಅಲಂಕಾರಮಾಡಿದ ಹೆಣ್ಣಾನೆಯನ್ನು ಹತ್ತಿಕೊಂಡು) ದಿನಕರನ ಬೞಿದಪ್ಪಿದ ಕಿರಣಂಗಳ್ (ಸೂರ್ಯನ ದಾರಿತಪ್ಪಿದ ಕಿರಣಗಳು) ಕೞ್ತಲೆಯಂ ಕಂಡಳ್ಕಿ ತನ್ನ ಮರೆಯಂ ಪೊಕ್ಕಂತೆ (ತನ್ನ ಆಶ್ರಯವನ್ನು ಪ್ರವೇಶಿಸಿದ ಹಾಗೆ) ಕೆಯ್ದೀವಿಗೆಗಳ್ ಬೆಳಗೆ (ಕೈದೀವಟಿಗೆಗಳು ಪ್ರಕಾಶಿಸಲು) ಕಿಱಿದಾನುಂ ಮಾನಸರ್ ವೆರಸು ರಾಜರಾಜಂ ಮದ್ರರಾಜನ ಮನೆಗೆ ಬರ್ಪುದುಂ (ಕೆಲವೇ ಪರಿಜನರೊಡನೆ ದುರ್ಯೋಧನನು ಮದ್ರರಾಜನಾದ ಶಲ್ಯನ ಮನೆಗೆ ಬರಲು,) ಆತನು ಅತ್ಯಂತ ಸಂಭ್ರಮಾಕ್ರಾಂತ ಹೃದಯನಾಗಿ ( ಅವನು ಅತ್ಯಂತ ಸಂಭ್ರಮದಿಂದ ಕೂಡಿದ ಮನಸ್ಸುಳ್ಳವನಾಗಿ) ಬೇಗಂ ಇದಿರೇೞೆ (ಬೇಗನೆ ಇದಿರುಗೊಂಡನು. ಆಗ-)
ವಚನ:ಅರ್ಥ:ನಂತರ ಸೂರ್ಯಬಿಂಬವು ಪಶ್ಚಿಮಗಿರಿಯ ಬುಡವನ್ನು ತಲುಪಲು, ಎರಡು ಸೈನ್ಯಗಳೂ ಯುದ್ಧವನ್ನು ನಿಲ್ಲಿಸಲು ಸೂಚನೆಕೊಡುವ ವಾದ್ಯವನ್ನು ಬಾರಿಸಿ ತಮ್ಮ ತಮ್ಮ ಬೀಡುಗಳಿಗೆ ತೆರಳಿದುವು. ಆಗ ರಾಜ ದುರ್ಯೋಧನನಲ್ಲಿಗೆ ಕರ್ಣನು ಬಂದು ಅಶ್ವಶಾಸ್ತ್ರವನ್ನು ಚೆನ್ನಾಗಿ ತಿಳಿದ ಭೀಷ್ಮರು ತಿಳಿಸಿದ ಮಾತನ್ನು ರಹಸ್ಯವಾಗಿ ತಿಳಿಸಿದನು. ಮುಕ್ಕಣ್ಣನಾದ ಈಶ್ವರನಲ್ಲಿ ಕಲಿತ ಅಶ್ವಹೃದಯದಲ್ಲಿಯೂ ರಥಕಲ್ಪದಲ್ಲಿಯೂ ಶಲ್ಯನು ಶ್ರೀಕೃಷ್ಣನಿಗಿಂತಲೂ ಹೆಚ್ಚು ತಿಳಿದವನಾದುದರಿಂದ ಅವನನ್ನು ಹೇಗಾದರೂ ಮಾಡಿ ಒಪ್ಪುವ ಹಾಗೆ ಮಾಡಿ ನಿನಗೆ ಸಾರಥಿಯನ್ನಾಗಿ ಮಾಡುತ್ತೇನೆ ಎಂದು ಕರ್ಣನನ್ನು ಬೀಡಿಗೆ ಹೋಗಹೇಳಿದನು. ಚಿನ್ನದಿಂದ ಅಲಂಕಾರಮಾಡಿದ ಹೆಣ್ಣಾನೆಯನ್ನು ಹತ್ತಿಕೊಂಡು ಸೂರ್ಯನ ದಾರಿತಪ್ಪಿದ ಕಿರಣಗಳು ಕತ್ತಲೆಯನ್ನು ಕಂಡು ಹೆದರಿ ತನ್ನ ಆಶ್ರಯವನ್ನು ಪ್ರವೇಶಿಸಿದ ಹಾಗೆ ಕೈದೀವಟಿಗೆಗಳು ಪ್ರಕಾಶಿಸಲು ಕೆಲವೇ ಪರಿಜನರೊಡನೆ ದುರ್ಯೋಧನನು ಮದ್ರರಾಜನಾದ ಶಲ್ಯನ ಮನೆಗೆ ಬಂದನು. ಹಾಗೆ ಬರಲು ಶಲ್ಯನು / ಅವನು ಅತ್ಯಂತ ಸಂಭ್ರಮದಿಂದ ಕೂಡಿದ ಮನಸ್ಸುಳ್ಳವನಾಗಿ ವೇಗದಿಂದ ಇದಿರಾಗಿ ಎದ್ದು ಬಂದನು-
ಮಲ್ಲಿಕಾಮಾಲೆ|| ಅಂತೆ ಕುಳ್ಳಿರಿರಪ್ಪೊಡಿಂ ನಿಮಗಾಣೆಯೆಂದಿರವೇೞ್ದಿಳಾ
ಕಾಂತನುಂ ತೊಡೆಸೋಂಕಿ ಕುಳ್ಳಿರೆ ಬಾೞ್ತೆಯುಳ್ಳೊಡೆ ನೀನೆ ಬ
ರ್ಪಂತುಟಾದುದೆ ಪೇೞ ನೀಂ ಬಿೞಿಯಟ್ಟಲಾಗದೆ ಕೆಮ್ಮನಿ
ನ್ನೆಂತುಮೇಂ ಮನೆವಾೞ್ತೆಯಂ ಬೆಸಸಲ್ಕೆ ಬಂದೆಯಿಳಾಧಿಪಾ.. || ೮೯ ||
ಪದ್ಯ-೮೯:ಪದವಿಭಾಗ-ಅರ್ಥ:ಅಂತೆ ಕುಳ್ಳಿರಿರಪ್ಪೊಡಿಂ (ಕುಳ್ಳಿರಿ ಇರಪ್ಪೊಡೆ ಇಂ-ಇನ್ನು- ಹಾಗೆಯೇ ಕುಳಿತುಕೊಳ್ಳಿ; ಇರದಿದ್ದರೆ) ನಿಮಗಾಣೆಯೆಂದು ಇರವೇೞ್ದ ಇಳಾಕಾಂತನುಂ (ನಿಮ್ಮ ಮೇಲಾಣೆಯೆಂದು ಕುಳಿತುಕೊಂಡೇ ಇರಬೇಕೆಂದು ಹೇಳಿ ರಾಜ ದುರ್ಯೋಧನನೂ) ತೊಡೆಸೋಂಕಿ ಕುಳ್ಳಿರೆ (ತೊಡೆಸೋಂಕಿನಷ್ಟು ಹತ್ತಿರ ಕುಳಿತುಕೊಂಡಿರಲು) ಬಾೞ್ತೆಯುಳ್ಳೊಡೆ ನೀನೆ ಬರ್ಪಂತುಟೆ ಆದುದೆ ಪೇೞ (“ಕಾರ್ಯವಿದ್ದರೆ ನೀನೇ ಬರುವ ಹಾಗಾಯಿತೇ? ಹೇಳಪ್ಪಾ,) ನೀಂ ಬಿೞಿಯಟ್ಟಲಾಗದೆ (ನೀನು ದೂತರ ಮೂಲಕ ಹೇಳಿ ಕಳುಹಿಸ ಬಾರದಾಗಿತ್ತೇ?) ಕೆಮ್ಮನೆ ಇನ್ನೆಂತುಮೇಂ (ಸುಮ್ಮನೆ ಇನ್ನು ನೀನೇ ಬಂದಮೇಲೆ ಹೇಗೆ?) ಮನೆವಾೞ್ತೆಯಂ ಬೆಸಸಲ್ಕೆ ಬಂದೆ (ಯಿ) ಇಳಾಧಿಪಾ (ಇಳೆಯ ಅಧಿಪ-ರಾಜ; ರಾಜನೇ, ಯಾವ ಗೃಹಕೃತ್ಯದ ಮಾತನ್ನು ತಿಳಿಸುವುದಕ್ಕೆ, ಆಜ್ಞೆ ಮಾಡುವುದಕ್ಕೆ ಬಂದಿರುವೆ” )
ಪದ್ಯ-೮೯:ಅರ್ಥ: ಹಾಗೆಯೇ ಕುಳಿತುಕೊಳ್ಳಿ; ಇರದಿದ್ದರೆ ನಿಮ್ಮ ಮೇಲಾಣೆಯೆಂದು ಕುಳಿತುಕೊಂಡೇ ಇರಬೇಕೆಂದು ಹೇಳಿ ದುರ್ಯೋಧನನೂ ತೊಡೆಸೋಂಕಿನಷ್ಟು ಹತ್ತಿರ ಕುಳಿತುಕೊಂಡನು. “ಕಾರ್ಯವಿದ್ದರೆ ನೀನೇ ಬರುವ ಹಾಗಾಯಿತೇ ಹೇಳು, ನೀನು ದೂತರ ಮೂಲಕ ಹೇಳಿ ಕಳುಹಿಸ ಬಾರದಾಗಿತ್ತೇ? ಸುಮ್ಮನೆ ಇನ್ನು ನೀನೇ ಬಂದಮೇಲೆ ಹೇಗೆ? ರಾಜನೇ, ಯಾವ ಗೃಹಕೃತ್ಯದ ಮಾತನ್ನು ತಿಳಿಸುವುದಕ್ಕೆ, ಆಜ್ಞೆ ಮಾಡುವುದಕ್ಕೆ ಬಂದಿರುವೆ”
ಕಂ|| ಬೆಸಸೆನೆಯುಂ ನುಡಿಯಲ್ ಶಂ
ಕಿಸಿದಪೆ ನಾನೆಂದೊಡೇಕೆ ಶಂಕಿಸುವೈ ನೀಂ|
ಬೆಸವೇೞೆನೆ ಜಯವಧು ಕೂ
ರ್ತೊಸೆದಿರ್ಕುಂ ಮಾವ ನಿಮ್ಮ ದಯೆಯಿಂದೆಮ್ಮಂ|| ೯೦ ||
ಪದ್ಯ-೯೦:ಪದವಿಭಾಗ-ಅರ್ಥ:ಬೆಸಸೆನೆಯುಂ ನುಡಿಯಲ್ ಶಂಕಿಸಿದಪೆ ನಾನು ಎಂದೊಡೆ (ಹೇಳು, ಎಂದರೂ ‘ನುಡಿಯುವುದಕ್ಕೆ ನಾನು ಸಂದೇಹಪಡುತ್ತೇನೆ’ ಎನ್ನಲು) ಏಕೆ ಶಂಕಿಸುವೈ ನೀಂ ಬೆಸವೇೞು ಎನೆ (‘ಏಕೆ ಸಂಕಿಸುತ್ತೀಯೆ. ಆಜ್ಞೆ ಮಾಡು’ ಎನ್ನಲು,) ಜಯವಧು ಕೂರ್ತು (ಪ್ರೀತಿಸಿ) ಒಸೆದು ಇರ್ಕುಂ (ಅನುರಾಗದಿಂದ ಇರುತ್ತಾಳೆ) ಮಾವ ನಿಮ್ಮ ದಯೆಯಿಂದ ಎಮ್ಮಂ (ಮಾವ, ಜಯಲಕ್ಷ್ಮಿಯ ನಿಮ್ಮ ದೆಯೆಯಿಂದ ನಮ್ಮನ್ನು ಪ್ರೀತಿಸಿ ಅನುರಾಗದಿಂದಿರುತ್ತಾಳೆ’)
ಪದ್ಯ-೯೦:ಅರ್ಥ:ಹೇಳು, ಎಂದರೂ ‘ನುಡಿಯುವುದಕ್ಕೆ ನಾನು ಸಂದೇಹಪಡುತ್ತೇನೆ’ ಎನ್ನಲು ‘ಏಕೆ ಸಂಕಿಸುತ್ತೀಯೆ. ಆಜ್ಞೆ ಮಾಡು’ ಎನ್ನಲು, ‘ಮಾವ, ಜಯಲಕ್ಷ್ಮಿಯ ನಿಮ್ಮ ದೆಯೆಯಿಂದ ನಮ್ಮನ್ನು ಪ್ರೀತಿಸಿ ಅನುರಾಗದಿಂದ ಇರುತ್ತಾಳೆ’ ಎಂದನು
ಕಂ|| ಪುಸಿಯೆನೆ ರಥಮಂ ಹರಿ ಚೋ
ದಿಸುವಂತೆವೊಲಿರ್ದದೆಂತು ನರನಂ ಗೆಲಿಪಂ|
ವಿಸಸನದೊಳಂತೆ ನೀಮುಂ
ಪೆಸರಂ ಕರ್ಣಂಗೆ ಮಾಡಿ ಗೆಲ್ಲಂಗೊಳ್ಳಿಂ|| ೯೧ ||
ಪದ್ಯ-೯೧:ಪದವಿಭಾಗ-ಅರ್ಥ:ಪುಸಿಯೆನೆ (ಸುಳ್ಳು ನಟನೆಯಿಂದ) ರಥಮಂ ಹರಿ ಚೋದಿಸುವಂತೆವೊಲ್ ಇರ್ದು (ಚೋದಿಸು- ರಥನೆಡೆಸು: ಕೃಷ್ಣನು ಅರ್ಜುನನ ರಥವನ್ನು ನಡೆಸುವವನಂತೆ ನಟಿಸಿಕೊಂಡಿದ್ದು) ಅದೆಂತು ನರನಂ ಗೆಲಿಪಂ ವಿಸಸನದೊಳು (ಅರ್ಜುನನು ಯುದ್ಧದಲ್ಲಿ ಗೆಲ್ಲುವಂತೆ ಹೇಗೆಮಾಡುವನೋ) ಅಂತೆ ನೀಮುಂ ಪೆಸರಂ ಕರ್ಣಂಗೆ ಮಾಡಿ ಗೆಲ್ಲಂಗೊಳ್ಳಿಂ (ಹಾಗೆಯೇ ಯುದ್ಧರಂಗದಲ್ಲಿ ನೀವೂ ಕೂಡ ಕರ್ಣನಿಗೆ ಕೀರ್ತಿಬರುವಂತೆ ಮಾಡಿ ಗೆಲುವನ್ನು ಸಂಪಾದಿಸಿ ಕೊಡಬೇಕು’)
ಪದ್ಯ-೯೧:ಅರ್ಥ:ಕೃಷ್ಣನು ಅರ್ಜುನನ ರಥವನ್ನು ನಡೆಸುವವನಂತೆ ನಟಿಸಿಕೊಂಡಿದ್ದು, ಅರ್ಜುನನು ಯುದ್ಧದಲ್ಲಿ ಗೆಲ್ಲುವಂತೆ ಹೇಗೆಮಾಡುವನೋ ಹಾಗೆಯೇ ಯುದ್ಧರಂಗದಲ್ಲಿ ನೀವೂ ಕೂಡ ಕರ್ಣನಿಗೆ ಕೀರ್ತಿಬರುವಂತೆ ಮಾಡಿ ಗೆಲುವನ್ನು ಸಂಪಾದಿಸಿ ಕೊಡಬೇಕು’ ಎಂದನು ದುರ್ಯೋದನ.
ವ|| ಎಂಬುದುಂ ಮದ್ರರಾಜನುಮ್ಮಚ್ಚರದೊಳುಮ್ಮನೆ ಬೆಮರ್ತು ಕಿನಿಸಿ ಕಿಂಕಿಱಿವೋಗಿ-
ವಚನ:ಪದವಿಭಾಗ-ಅರ್ಥ:ಎಂಬುದುಂ ಮದ್ರರಾಜನು ಉಮ್ಮಚ್ಚರದೊಳು (ಶಲ್ಯನು ಕೋಪದಿಂದ) ಉಮ್ಮನೆ ಬೆಮರ್ತು (ಬಿಸಿಬಿಸಿಯಾಗಿ ಬೆವರಿ) ಕಿನಿಸಿ ಕಿಂಕಿಱಿವೋಗಿ (ಕೆರಳಿ ಕಿಡಿ ಕಿಡಿಯಾಗಿ)-
ವಚನ:ಅರ್ಥ: ವ|| ಎನ್ನಲು ಶಲ್ಯನು ಕೋಪದಿಂದ ಬಿಸಿಬಿಸಿಯಾಗಿ ಬೆವರಿ ಕೆರಳಿ ಕಿಡಿ ಕಿಡಿಯಾಗಿ-
ಚಂ|| ಕಲಿಯನೆ ಪಂದೆ ಮಾೞ್ಪ ಕಡುವಂದೆಯನೊಳ್ಗಲಿ ಮಾೞ್ಪ ತಕ್ಕನಂ
ಪೊಲೆಯನೆ ಮಾೞ್ಪ ಮುಂ ಪೊಲೆಯನಂ ನೆರೆ ತಕ್ಕನೆ ಮಾೞ್ಪ ತಮ್ಮೊಳ|
ಗ್ಗಲಿಸಿ ಪೊದೞ್ದು ಪರ್ವಿದವಿವೇಕತೆಯಿಂ ನೃಪಚಿತ್ತವೃತ್ತಿ ಸಂ
ಚಲಮದಱಿಂದಮೋಲಗಿಸಿ ಬಾೞ್ವುದೆ ಕಷ್ಟಮಿಳಾನಾಥರಂ|| ೯೨ ||
ಪದ್ಯ-೯೨:ಪದವಿಭಾಗ-ಅರ್ಥ:ಕಲಿಯನೆ ಪಂದೆ ಮಾೞ್ಪ (ಶೂರನನ್ನು ಹೇಡಿಯಾಗಿ ಮಾಡುವ) ಕಡುವಂದೆಯನು ಒಳ್ (ಗ) ಕಲಿ ಮಾೞ್ಪ (ಯೋಗ್ಯನನ್ನು ಹೊಲೆಯನನ್ನಾಗಿ ಮಾಡುವ) ತಕ್ಕನಂ ಪೊಲೆಯನೆ ಮಾೞ್ಪ (ಯೋಗ್ಯನನ್ನು ಹೊಲೆಯನನ್ನಾಗಿ ಮಾಡುವ,) ಮುಂ ಪೊಲೆಯನಂ ನೆರೆ ತಕ್ಕನೆ ಮಾೞ್ಪ (ಮೊದಲು ಹೊಲೆಯನಾಗಿದ್ದವನನ್ನು ಪೂರ್ಣ ಯೋಗ್ಯನನ್ನಾಗಿ ಮಾಡುವ,) ತಮ್ಮೊಳು ಅಗ್ಗಲಿಸಿ ಪೊದೞ್ದು ಪರ್ವಿದ ಅವಿವೇಕತೆಯಿಂ (ತಮ್ಮಲ್ಲಿ ಅಧಿಕವಾಗಿ ತುಂಬಿರುವ ಅವಿವೇಕತೆಯಿಂದ) ನೃಪಚಿತ್ತವೃತ್ತಿ ಸಂಚಲಂ (ರಾಜರ ಮನಸ್ಸಿನ ಸ್ಥಿತಿ ಬಹಳ ಚಂಚಲವಾದುದು) ಅದಱಿಂದಂ ಓಲಗಿಸಿ ಬಾೞ್ವುದೆ ಕಷ್ಟಂ ಇಳಾನಾಥರಂ - ರಾಜರನ್ನು (ಆದುದರಿಂದ ರಾಜರನ್ನು ಸೇವೆ ಮಾಡಿ ಬದುಕುವುದೇ ಕಷ್ಟ)
ಪದ್ಯ-೯೨:ಅರ್ಥ:ಶೂರನನ್ನು ಹೇಡಿಯಾಗಿ ಮಾಡುವ, ಪೂರ್ಣಹೇಡಿಯನ್ನು ಉತ್ತಮಶೂರನನ್ನಾಗಿ ಮಾಡುವ, ಯೋಗ್ಯನನ್ನು ಹೊಲೆಯನನ್ನಾಗಿ ಮಾಡುವ, ಮೊದಲು ಹೊಲೆಯನಾಗಿದ್ದವನನ್ನು ಪೂರ್ಣಯೋಗ್ಯನನ್ನಾಗಿ ಮಾಡುವ, ತಮ್ಮಲ್ಲಿ ಅತ್ಯಕವಾಗಿ ಹಬ್ಬಿರುವ ಅವಿವೇಕತೆಯಿಂದ ರಾಜರ ಮನಸ್ಸಿನ ಸ್ಥಿತಿ ಬಹಳ ಚಂಚಲವಾದುದು. ಆದುದರಿಂದ ರಾಜರನ್ನು ಸೇವೆ ಮಾಡಿ ಬದುಕುವುದೇ ಕಷ್ಟ, ಎಂದನು ಶಲ್ಯ. ಶಲ್ಯ ಮಾದ್ರದೇಶದ ರಾಜ ಅವನು ಸೂತಪುತ್ರನೇಂದು ಹೆಸರಾದ ಕರ್ಣನಿಗೆ ಸಾರಥ್ಯ ಮಾಡುವುದು ಸಾಯುವಷ್ಠು ಅವಮಾನವಾದುದು ಎಂದು ಶಲ್ಯ ಭಾವಿಸುತ್ತಾನೆ.
ಅನುಪಮ ವಿಕ್ರಕ್ರಮಮುದಾರಗುಣಂ ಋತವಾಕ್ಯಮೆಂಬ ಪೆಂ
ಪೆನಲಿವು ಮೂರೆ ನಾಲ್ಕೆ ಗುಣಮತ್ತ ಮದಾನ್ವಿತರಾಜಬೀಜಸಂ|
ಜನಿತಗುಣಂ ಮದಂ ಮದಮನಾಳ್ದವಿವೇಕತೆಯಿಂದಮಲ್ತೆ ತೊ
ೞ್ತಿನ ಮೊಲೆವಾಲನುಂಡ ಗುಣಮಿಂತಿವನಾರ್ ಕಿಡಿಪರ್ ನರೇಂದ್ರರೊಳ್|| ೯೩ ||
ಪದ್ಯ-೯೩:ಪದವಿಭಾಗ-ಅರ್ಥ:ಅನುಪಮ ವಿಕ್ರಕ್ರಮಂ ಉದಾರಗುಣಂ ಋತವಾಕ್ಯಮೆಂಬ ಪೆಂಪು ಎನಲು(ಅನುಪಮ ಪರಾಕ್ರಮ, ಔದಾರ್ಯಗುಣ, ನೇರವಾದ ಸತ್ಯವಾಕ್ಕು ಎನ್ನವ ಹಿರಿಮೆ) ಇವು ಮೂರೆ ನಾಲ್ಕೆ ಗುಣಂ (ಇವು ಮೂರೇ ನಾಲ್ಕೇ ಗುಣಗಳು.) ಅತ್ತ- ಮದಾನ್ವಿತ ರಾಜಬೀಜಸಂಜನಿತಗುಣಂ (ಇನ್ನೊಂದು ಕಡೆ ರಾಜವಂಶದಲ್ಲಿ ಹುಟ್ಟಿದ ಗುಣ) ಮದಂ ಮದಮನಾಳ್ದ ಅವಿವೇಕತೆಯಿಂದಂ ಅಲ್ತೆ ((ವಂಶಮದ) ಅಹಂಕಾರ, ಅಹಂಕಾರದಿಂದ ಕೂಡಿದ ಅವಿವೇಕತೆ,) ತೊೞ್ತಿನ ಮೊಲೆವಾಲನು ಉಂಡ ಗುಣಂ ಇಂತು ಇವನು ಆರ್ ಕಿಡಿಪರ್ ನರೇಂದ್ರರೊಳ್ (ಕೂಡಿದ ದಾದಿಯ ಮೊಲೆ ಹಾಲನ್ನು ಕುಡಿದ ಗುಣ ಇವುಗಳನ್ನು ಯಾರು ಕಿಡಿಪರ- ಯಾರು ಹೋಗಲಾಡಿಸುವರ? )
ಪದ್ಯ-೯೩:ಅರ್ಥ: ಅನುಪಮ ಪರಾಕ್ರಮ, ಔದಾರ್ಯಗುಣ, ನೇರವಾದ ಸತ್ಯವಾಕ್ಕು, ಎನ್ನವ ಹಿರಿಮೆ, ಇವು ಮೂರೇ ನಾಲ್ಕೇ ಗುಣಗಳು. ಇದು ಒಂದು ಕಡೆಯಾದರೆ ಇನ್ನೊಂದು ಕಡೆ ರಾಜವಂಶದಲ್ಲಿ ಹುಟ್ಟಿದ ಗುಣ (ವಂಶಮದ) ಅಹಂಕಾರ, ಅಹಂಕಾರದಿಂದ ಕೂಡಿದ ಅವಿವೇಕತೆ, ಇದರೊಡನೆ ಕೂಡಿದ ದಾದಿಯ ಮೊಲೆ ಹಾಲನ್ನು ಕುಡಿದ ಗುಣ ಇವುಗಳನ್ನು ಯಾರು ಕಿಡಿಪರ್- ಯಾರು ಹೋಗಲಾಡಿಸುವರ?
ಉ|| ಪಿಂದೆ ಕಡಂಗಿ ತೇರನೆಸಗೆಂಬವನಂಬಿಗನಾಜಿ ರಂಗದೊಳ್
ಮುಂದೆ ಸಮಾನನಾಗಿ ಬೆಸದಿರ್ಪವನುಂ ತುಱುಕಾಱನಾಗೆ ಮ|
ತ್ಸ್ಯಂದನಚೋದನಕ್ರಮಮದುಂ ಪೊಲೆಯಂಗಮರ್ದಿರ್ಕುಮಂತುಟಂ
ನೀಂ ದಯೆಗೆಯ್ದು ಪೇೞ್ದೆಯಿದನಾರ್ ಪಡೆವರ್ ಫಣಿರಾಜಕೇತನಾ| ೯೪ ||
ಪದ್ಯ-೯೪:ಪದವಿಭಾಗ-ಅರ್ಥ:ಪಿಂದೆ ಕಡಂಗಿ ತೇರನು ಎಸಗು ಎಂಬವನ್ ಅಂಬಿಗನ್ (ಹಿಂದುಗಡೆ-ರಥಿಕ- ಆವೇಶದಿಂದ ತೇರನ್ನು ನಡೆಸು ಎನ್ನುವವನು ಅಂಬಿಗ,) ಆಜಿ ರಂಗದೊಳ್ ಮುಂದೆ ಸಮಾನನಾಗಿ ಬೆಸದಿರ್ಪ ಅವನುಂ ತುಱುಕಾಱನು ಆಗೆ (ಯುದ್ಧರಂಗದಲ್ಲಿ ನನಗೆ ಮುಂಭಾಗದಲ್ಲಿ ಸಮಾನನಾಗಿ -ಸಾರಥಿಯಾಗಿ ಕೆಲಸದಲ್ಲಿರುವವನು ದನಕಾಯವವನು (ಗೋವಳಿಗ, ಕೃಷ್ಣ).) ಮತ್ಸ್ಯಂದನ ಚೋದನ ಕ್ರಮಮ್ ಅದುಂ ಪೊಲೆಯಂಗೆ ಅಮರ್ದಿರ್ಕುಂ ಅಂತುಟಂ (ರಥವನ್ನು ನಡೆಸುವ ನನ್ನ ರೀತಿಯದು ಹೊಲೆಯನಿಗೆ ಸರಿಯಾದುದಾಗಿ ಒಪ್ಪಿರಲು ಅಷ್ಟನ್ನು) ನೀಂ ದಯೆಗೆಯ್ದು ಪೇೞ್ದೆ (ಪೇಳ್ದೆ- ಹೇಳಿದೆ)ಯಿದನಾರ್ ಪಡೆವರ್ ಫಣಿರಾಜಕೇತನಾ (ನೀನು ದಯಮಾಡಿ ಹೇಳಿದೆಯಲ್ಲ ದುರ್ಯೋಧನಾ ಇಂತಹ ಸೌಭಾಗ್ಯವನ್ನು ಯಾರು ತಾನೆ ಪಡೆಯುತ್ತಾರೆ?)
ಪದ್ಯ-೯೪:ಅರ್ಥ: ಹಿಂದುಗಡೆ ಆವೇಶದಿಂದ ತೇರನ್ನು ನಡೆಸು ಎನ್ನುವವನು ಅಂಬಿಗ, ಯುದ್ಧರಂಗದಲ್ಲಿ ನನಗೆ ಮುಂಭಾಗದಲ್ಲಿ ಸಮಾನನಾಗಿ -ಸಾರಥಿಯಾಗಿ ಕೆಲಸದಲ್ಲಿರುವವನು ದನಕಾಯವವನು (ಗೋವಳಿಗ, ಕೃಷ್ಣ). ರಥವನ್ನು ನಡೆಸುವ ನನ್ನ ರೀತಿಯದು ಹೊಲೆಯನಿಗೆ ಸರಿಯಾದುದಾಗಿ ಒಪ್ಪಿರಲು ಅಷ್ಟನ್ನು ನೀನು ದಯಮಾಡಿ ಹೇಳಿದೆಯಲ್ಲ ದುರ್ಯೋಧನ ಇಂತಹ ಅದೃಷ್ಟವನ್ನು ಯಾರು ತಾನೆ ಪಡೆಯುತ್ತಾರೆ?
ಕಂ|| ಎನಿತೊಲ್ಲದಿರ್ದೊಡಂ ಸ
ಜ್ಜನರುಂ ಪತಿಹಿತರುಮಱಿಯಮೇೞ್ಕುಂ ನೀನಿ|
ನ್ನೆನಿತಂ ಕೂರದೊಡಂ ನಿ
ನ್ನ ನುಡಿಯನಾನಾಜಿರಂಗದೊಳ್ ಮೀಱುವೆನೇ|| ೯೫ ||
ಪದ್ಯ-೯೫:ಪದವಿಭಾಗ-ಅರ್ಥ: ಎನಿತು ಒಲ್ಲದೆ ಇರ್ದೊಡಂ (ಮನಸ್ಸಿಗೆ ಎಷ್ಟುಮಟ್ಟಿಗೆ ಒಪ್ಪದಿದ್ದರೂ) ಸಜ್ಜನರುಂ ಪತಿಹಿತರುಂ ಅಱಿಯಮೇೞ್ಕುಂ (ಸತ್ಪುರುಷರು ಸ್ವಾಮಿಗೆ ಹಿತರಾದವರೂ ಒಪ್ಪಬೇಕು ತಾನೇ?) ನೀನು ಇನ್ನು ಎನಿತಂ ಕೂರದೊಡಂ (ನೀನು ಎಷ್ಟೂ ಪ್ರೀತಿಸದಿದ್ದರೂ) ನಿನ್ನ ನುಡಿಯನು ಆನು ಆಜಿರಂಗದೊಳ್ ಮೀಱುವೆನೇ (ನಿನ್ನ ಮಾತನ್ನು ನಾನು ಯುದ್ಧರಂಗದಲ್ಲಿ ಮೀರುತ್ತೇನೆಯೇ? )
ಪದ್ಯ-೯೫:ಅರ್ಥ: ಮನಸ್ಸಿಗೆ ಎಷ್ಟುಮಟ್ಟಿಗೆ ಒಪ್ಪದಿದ್ದರೂ, ಸತ್ಪುರುಷರು ಸ್ವಾಮಿಗೆ ಹಿತರಾದವರೂ ಒಪ್ಪಬೇಕು ತಾನೇ? ನೀನು ಎಷ್ಟೂ ಪ್ರೀತಿಸದಿದ್ದರೂ ನಿನ್ನ ಮಾತನ್ನು ನಾನು ಯುದ್ಧರಂಗದಲ್ಲಿ ಮೀರುತ್ತೇನೆಯೇ?
ವ|| ಎಂದು ನೊಂದು ನುಡಿದ ಮದ್ರರಾಜನ ನುಡಿಗೆ ಫಣಿರಾಜಕೇತನನಿಂತೆಂದಂ-
ವಚನ:ಪದವಿಭಾಗ-ಅರ್ಥ:ಎಂದು ನೊಂದು ನುಡಿದ ಮದ್ರರಾಜನ ನುಡಿಗೆ ಫಣಿರಾಜಕೇತನನು ಇಂತೆಂದಂ (ದುರ್ಯೋಧನನು ಹೀಗೆಂದನು)-
ವಚನ:ಅರ್ಥ:ಎಂದು ವ್ಯಥೆಯಿಂದ ಆಡಿದ ಶಲ್ಯನ ಮಾತಿಗೆ ದುರ್ಯೋಧನನು ಹೀಗೆಂದನು.
ಕಂ|| ನೀಮೆನಗಿನಿತಂ ಕೆಮ್ಮನೆ
ಮಾಮ ಮನಂ ನೊಂದು ಬೆಸಸಿದಿರ್ ಬಿನ್ನಪಮಂ|
ನೀಮವಧಾರಿಸಿಮೆಂತೆನೆ
ಸಾಮಾನ್ಯದ ಮನುಜನಲ್ಲನಂಗಮಹೀಶಂ|| ೯೬ ||
ಪದ್ಯ-೯೬:ಪದವಿಭಾಗ-ಅರ್ಥ:ನೀಂ ಎನಗೆ ಇನಿತಂ ಕೆಮ್ಮನೆ ಮಾಮ ಮನಂ ನೊಂದು ಬೆಸಸಿದಿರ್ (ಮಾವ ನೀವು ನನಗೆ ಇಷ್ಟನ್ನು ಸುಮ್ಮನೆ ಮನಸ್ಸಿನಲ್ಲಿ ನೊಂದುಕೊಂಡು ಹೇಳಿದಿರಿ.) ಬಿನ್ನಪಮಂ ನೀಂ ಅವಧಾರಿಸಿಂ ಎಂತೆನೆ ಸಾಮಾನ್ಯದ ಮನುಜನಲ್ಲನು ಅಂಗಮಹೀಶಂ (ನನ್ನ ವಿಜ್ಞಾಪನೆಯನ್ನು ನೀವು ಕೇಳಿ. ಹೇಗೆಂದರೆ ಕರ್ಣನು ಸಾಮಾನ್ಯ ಮನುಷ್ಯನಲ್ಲ.)
ಪದ್ಯ-೯೬:ಅರ್ಥ:ಮಾವ ನೀವು ನನಗೆ ಇಷ್ಟನ್ನು ಸುಮ್ಮನೆ ಮನಸ್ಸಿನಲ್ಲಿ ನೊಂದುಕೊಂಡು ಹೇಳಿದಿರಿ. ನನ್ನ ವಿಜ್ಞಾಪನೆಯನ್ನು ನೀವು ಕೇಳಿ. ಹೇಗೆಂದರೆ ಕರ್ಣನು ಸಾಮಾನ್ಯ ಮನುಷ್ಯನಲ್ಲ.
ಕುಲಹೀನನೆ ಅಪ್ಪೊಡೆ ಕೇ
ವಲಬೋಧಂ ಪರಶುರಾಮನೇನೀಗುಮೆ ನಿ|
ರ್ಮಲಿಕುಲಂಗಲ್ಲದೆ ಪಿಡಿ
ಯಲ್ಲಲ್ಲದಂತಪ್ಪ ದಿವ್ಯಬಾಣಾವಳಿಯಂ|| ೯೭ ||
ಪದ್ಯ-೯೭:ಪದವಿಭಾಗ-ಅರ್ಥ:ಕುಲಹೀನನೆ ಅಪ್ಪೊಡೆ ಕೇವಲಬೋಧಂ ಪರಶುರಾಮನು ಏಂ ಈಗುಮೆ (ಕುಲಹೀನನೇ ಆಗಿದ್ದರೆ ಸರ್ವಜ್ಞಾನಿಯಾದ ಪರಶುರಾಮನು ---ಏನು ಕೊಡುವನೇ?) ನಿರ್ಮಲಿ ಕುಲಂಗಲ್ಲದೆ ಪಿಡಿಯಲ್ ಅಲ್ಲದಂತಪ್ಪ ದಿವ್ಯಬಾಣ ಆವಳಿಯಂ (ಪರಿಶುದ್ಧವಾದ ಕುಲದವರಲ್ಲದೆ ಬೇರೆಯವರು ಹಿಡಿಯಲಾಗದ ದಿವ್ಯಾಸ್ತ್ರಸಮೂಹವನ್ನು ಅವನಿಗೆ ಏನು ಕೊಡುವನೇ )
ಪದ್ಯ-*೭:ಅರ್ಥ: ಕುಲಹೀನನೇ ಆಗಿದ್ದರೆ ಸರ್ವಜ್ಞಾನಿಯಾದ ಪರಶುರಾಮನು ಪರಿಶುದ್ಧವಾದ ಕುಲದವರಲ್ಲದೆ ಬೇರೆಯವರು ಹಿಡಿಯಲಾಗದ ದಿವ್ಯಾಸ್ತ್ರಸಮೂಹವನ್ನು ಅವನಿಗೆ ಏನು ಕೊಡುವನೇ ಕೊಡುತ್ತಿದ್ದನೇ?
ಮಣಿಕುಂಡಲಮುಂ ಕವಚಂ
ಮಣಿಯದ ಚಾರಿತ್ರಮುಗ್ರತೇಜಮುಮೀಯೊ|
ಳ್ಗುಣಮುಂ ಕಲಿತನಮುಮವೇಂ
ಪ್ರಣತಾರೀ ಸೂತಸುತನೊಳೊಡವುಟ್ಟುಗುಮೇ ೯೮ ||
ಪದ್ಯ-೯೮:ಪದವಿಭಾಗ-ಅರ್ಥ:ಮಣಿಕುಂಡಲಮುಂ ಕವಚಂ ಮಣಿಯದ ಚಾರಿತ್ರಂ (ಮಣಿಕುಂಡಲವೂ ಕವಚವೂ ಬಗ್ಗದ ನಡತೆಯೂ) ಉಗ್ರತೇಜಮುಂ ಈ (ಯ) ಒಳ್ಗುಣಮುಂ ಕಲಿತನಮುಂ (ಉಗ್ರವಾದ ತೇಜಸ್ಸೂ- ಈ ಒಳ್ಳೆಯ ಗುಣ, ಶೌರ್ಯ,) ಅವೇಂ ಪ್ರಣತಾರೀ ಸೂತಸುತನೊಳು ಒಡವುಟ್ಟುಗುಮೇ (ಸೂತಪುತ್ರನಲ್ಲಿ ಜೊತೆಯಾಗಿ ಹುಟ್ಟುತ್ತವೆಯೇ? ಸಾಧ್ಯವಿಲ್ಲ!)
ಪದ್ಯ-೯೮:ಅರ್ಥ:ವಿಧೇಯರಾದ ಶತ್ರುಗಳನ್ನುಳ್ಳ ಎಲೈ ಶಲ್ಯನೇ, ಮಣಿಕುಂಡಲವೂ ಕವಚವೂ ಬಗ್ಗದ ನಡತೆಯೂ, ಉಗ್ರವಾದ ತೇಜಸ್ಸೂ- ಈ ಒಳ್ಳೆಯ ಗುಣ ಮತ್ತು ತೇಜಸ್ಸು ಇವು ಸೂತಪುತ್ರನಲ್ಲಿ ಜೊತೆಯಾಗಿ ಹುಟ್ಟುತ್ತವೆಯೇ? ಸಾಧ್ಯವಿಲ್ಲ!
ಕಲಿತನದ ನೆಗೞ್ದ ಕಸವರ
ಗಲಿತನದ ಪೊದೞ್ದ ಪರಮಕೋಟಿಗೆ ಪೆಱರಾರ್|
ಸಲೆ ಕರ್ಣನಲ್ಲದೆನಿಸುವ
ಕಲಿತನಮಂ ಹರಿಗೆ ಕವಚಮಿತ್ತುದೆ ಪೇೞ್ಗುಂ|| ೯೯ ||
ಪದ್ಯ-೯೯:ಪದವಿಭಾಗ-ಅರ್ಥ:ಕಲಿತನದ ನೆಗೞ್ದ ಕಸವರಗಲಿತನದ (ಶೌರ್ಯದ ಮತ್ತು ಪ್ರಸಿದ್ಧವಾದ ದಾನಶೂರತೆಯ) ಪೊದೞ್ದ ಪರಮಕೋಟಿಗೆ (ಹೆಚ್ಚಿನ ಪರಾಕಾಷ್ಠತೆಗೆ ಸಲ್ಲಲು) ಪೆಱರಾರ್ ಸಲೆ ಕರ್ಣನಲ್ಲದೆ ಎನಿಸುವ (ಕರ್ಣನಲ್ಲದೆ ಮತ್ತಾರಿದ್ದಾರೆ ಎನ್ನಿಸುವ) ಕಲಿತನಮಂ ಹರಿಗೆ ಕವಚಮಿತ್ತುದೆ ಪೇೞ್ಗುಂ (ಶೌರ್ಯವನ್ನು ಇಂದ್ರನಿಗೆ ಕವಚವನ್ನು ಕೊಟ್ಟಿದ್ದೇ ಹೇಳುತ್ತದೆ.)
ಪದ್ಯ-೯೯:ಅರ್ಥ:೯೯. ಶೌರ್ಯದ ಮತ್ತು ಪ್ರಸಿದ್ಧವಾದ ದಾನಶೂರತೆಯ ಹೆಚ್ಚಿನ ಪರಾಕಾಷ್ಠತೆಗೆ ಸಲ್ಲಲು ಕರ್ಣನಲ್ಲದೆ ಮತ್ತಾರಿದ್ದಾರೆ ಎನ್ನಿಸುವ ಶೌರ್ಯವನ್ನು ಇಂದ್ರನಿಗೆ ಕವಚವನ್ನು ಕೊಟ್ಟಿದ್ದೇ ಹೇಳುತ್ತದೆ.
ವ|| ಎಂದು ಕುರುಕುಲಚೂಡಾಮಣಿ ಶಲ್ಯನ ಹೃಚ್ಛಲ್ಯಮೆಲ್ಲಮುಂ ಕೞಲೆ ನುಡಿದೊಡಾತ ನಿಂತೆಂದಂ-
ವಚನ:ಪದವಿಭಾಗ-ಅರ್ಥ:ಎಂದು ಕುರುಕುಲಚೂಡಾಮಣಿ (ದುರ್ಯೋಧನನು) ಶಲ್ಯನ ಹೃಚ್ಛಲ್ಯಮ್ ಎಲ್ಲಮುಂ ಕೞಲೆ (ಶಲ್ಯನ ಹೃದಯದ ನೋವೆಲ್ಲವೂ ಸಡಿಲವಾಗುವಂತೆ) ನುಡಿದೊಡೆ ಆತ ನಿಂತೆಂದಂ (ಹೇಳಲು ಅವನು ಹೀಗೆಂದನು.)-
ವಚನ:ಅರ್ಥ:ವ|| ಎಂದು ಕುರುಕುಲಚೂಡಾಮಣಿಯಾದ ದುರ್ಯೋಧನನು ಶಲ್ಯನ ಹೃದಯದ ನೋವೆಲ್ಲವೂ ಸಡಿಲವಾಗುವಂತೆ ಹೇಳಲು ಶಲ್ಯನು ಹೀಗೆಂದನು.
ಚಂ|| ಅಱಿಯದೆಯುಂ ವಿಚಾರಸದೆಯುಂ ನೃಪ ನೀಂ ನೆಗೞ್ವನ್ನೆಯಲ್ಲೆಯಾ
ನಱಿವೆನದಂತೆ ಕರ್ಣನೆಣೆಗಂ ತೊಣೆಗಂ ನೃಪರಾರುಮಿಲ್ಲ ಬೆ|
ಳ್ಕುರೆ ರಿಪುಸೇನೆ ತೇರನೊಸೆದಾನೆಸಗುತ್ತಿರೆ ಕರ್ಣನಂ ಗೆಲಲ್
ನೆರೆವರೆ ನಾಳೆ ಫಲ್ಗುಣನುಮಚ್ಯುತನುಂ ರಣರಂಗಭೂಮಿಯೊಳ್|| ೧೦೦ ||100||
ಪದ್ಯ-೧೦೦:ಪದವಿಭಾಗ-ಅರ್ಥ:ಅಱಿಯದೆಯುಂ ವಿಚಾರಸದೆಯುಂ ನೃಪ ನೀಂ (ರಾಜನೇ ನೀನು ತಿಳಿಯದೆಯೂ ವಿಚಾರಮಾಡದೆಯೂ) ನೆಗೞ್ವನ್ನಂ ಅಲ್ಲ,(ಕಾರ್ಯ ಮಾಡುವಂಥವನಲ್ಲ) ಆನು ಅಱಿವೆಂ (ಅದನ್ನು ನಾನು ಬಲ್ಲೆ.) ಅದು ಅಂತೆ ಕರ್ಣನ ಎಣೆಗಂ ತೊಣೆಗಂ ನೃಪರ್ ಆರುಮ್ ಇಲ್ಲ (ಕರ್ಣನಿಗೆ ಸಮಾನರಾದ ರಾಜರಾರೂ ಇಲ್ಲ.) ಬೆಳ್ಕುರೆ ರಿಪುಸೇನೆ ತೇರನು ಒಸೆದು ಆನು ಎಸಗುತ್ತಿರೆ (ಶತ್ರುಸೈನ್ಯಕ್ಕೆ ಭಯವಾಗುವ ರೀತಿಯಲ್ಲಿ ನಾನು ಪ್ರೀತಿಯಿಂದ ತೇರನ್ನು ನಡೆಸುತ್ತಿದ್ದರೆ), ಕರ್ಣನಂ ಗೆಲಲ್ ನೆರೆವರೆ (ಕರ್ಣನನ್ನು ಗೆಲ್ಲಲು ಸಮಥರಾಗುತ್ತಾರೆಯೇ?) ನಾಳೆ ಫಲ್ಗುಣನುಂ ಅಚ್ಯುತನುಂ ರಣರಂಗಭೂಮಿಯೊಳ್ (ಕೃಷ್ಣನೂ ಅರ್ಜುನನೂ ಯುದ್ಧಭೂಮಿಯಲ್ಲಿ ಕರ್ಣನನ್ನು ಗೆಲ್ಲಲು ಸಮಥರಾಗುತ್ತಾರೆಯೇ?)
ಪದ್ಯ-೧೦೦:ಅರ್ಥ:ರಾಜನೇ ನೀನು ತಿಳಿಯದೆಯೂ ವಿಚಾರಮಾಡದೆಯೂ ಕಾರ್ಯ ಮಾಡುವಂಥವನಲ್ಲ. ಅದನ್ನು ನಾನು ಬಲ್ಲೆ. ಕರ್ಣನಿಗೆ ಸಮಾನರಾದ ರಾಜರಾರೂ ಇಲ್ಲ. ಶತ್ರುಸೈನ್ಯಕ್ಕೆ ಭಯವಾಗುವ ರೀತಿಯಲ್ಲಿ ನಾನು ಪ್ರೀತಿಯಿಂದ (ಮನಪೂರ್ವಕವಾಗಿ) ತೇರನ್ನು ನಡೆಸುತ್ತಿದ್ದರೆ ನಾಳೆ ಕೃಷ್ಣನೂ ಅರ್ಜುನನೂ ಯುದ್ಧಭೂಮಿಯಲ್ಲಿ ಕರ್ಣನನ್ನು ಗೆಲ್ಲಲು ಸಮಥರಾಗುತ್ತಾರೆಯೇ?
ಕಂ|| ಒಂದೆ ಗಡ ಹರಿಯ ಪೇೞೊಂ (ಳೊಂ)
ದಂದದೆ ನರನೆಸಗುವಂತೆ ಕರ್ಣನುಮೆನ್ನೆಂ|
ದೊಂದೋಜೆಯೊಳೆಸಗದೊಡಾಂ
ಸ್ಯಂದನದಿಂದಿೞಿದು ಪೋಪೆನೆಸಗೆಂ ತೇರಂ|| ೧೦೧ ||101||
ಪದ್ಯ-೧೦೧:ಪದವಿಭಾಗ-ಅರ್ಥ:ಒಂದೆ ಗಡ (ಆದರೆ ಒಂದು ವಿಷಯ) ಹರಿಯ ಪೇೞ್ ಒಂದಂದೆ (ಕೃಷ್ಣನು ಹೇಳಿದ ರೀತಿಯಲ್ಲೇ) ನರನು ಎಸಗುವಂತೆ (ಅರ್ಜುನನು ಮಾಡುವಂತೆ) ಕರ್ಣನುಂ ಎನ್ನೆಂದ ಒಂದ ಓಜೆಯೊಳ್ (ಕರ್ಣನೂ ನಾನು ಹೇಳಿದ ಕ್ರಮದಲ್ಲಿ) ಎಸಗದೊಡೆ (ಮಾಡದೇ ಹೋದರೆ) ಆಂ ಸ್ಯಂದನದಿಂದ ಇೞಿದು ಪೋಪೆನು (ತೇರನ್ನು ಇಳಿದು ಹೋಗುತ್ತೇನೆ.) ಎಸಗೆಂ ತೇರಂ (ತೇರನ್ನು ನಡೆಸುವುದಿಲ್ಲ.)
ಪದ್ಯ-೧೦೧:ಅರ್ಥ:ಆದರೆ ಒಂದು ವಿಷಯ, ಕೃಷ್ಣನು ಹೇಳಿದ ರೀತಿಯಲ್ಲಿ ಅರ್ಜುನನು ಮಾಡುವಂತೆ ಕರ್ಣನೂ ನಾನು ಹೇಳಿದ ಕ್ರಮದಲ್ಲಿ ಮಾಡದೇ ಹೋದರೆ ತೇರನ್ನು ಇಳಿದು ಹೋಗುತ್ತೇನೆ. ತೇರನ್ನು ನಡೆಸುವುದಿಲ್ಲ, ಎಂದನು ಶಲ್ಯ.
ಎಂಬುದುಮಂಗಮಹೀಪತಿ
ಯಂ ಬರಿಸಿ ಮಹಾಜಿಯಲ್ಲಿ ಮಾವಂ ತಾನೇ|
ನೆಂಬನದನಂತೆ ಮೀಱದೊ
ಡಂಬಡು ನೀನೆಂದು ಭೂಭುಜಂ ಪ್ರಾರ್ಥಿಸಿದಂ|| ೧೦೨ ||
ಪದ್ಯ-೧೦೨:ಪದವಿಭಾಗ-ಅರ್ಥ:ಎಂಬುದುಮಂ ಅಂಗಮಹೀಪತಿಯಂ ಬರಿಸಿ (ಎನ್ನಲು ಕರ್ಣನನ್ನು ಬರಮಾಡಿಕೊಂಡು,) ಮಹಾಜಿಯಲ್ಲಿ ಮಾವಂ ತಾನೇನು ಎಂಬನೊ (ಈ ಮಹಾಯುದ್ಧದಲ್ಲಿ ಮಾವನು ತಾನೇನು ಹೇಳುತ್ತಾನೆಯೋ) ಅದನು ಅಂತೆ ಮೀಱದೆ ಒಡಂಬಡು ನೀನು ಎಂದು ಭೂಭುಜಂ ಪ್ರಾರ್ಥಿಸಿದಂ (ನೀನು ಅದನ್ನು ಹಾಗೆಯೇ ಮೀರದೆ ಒಪ್ಪಿಕೊ ಎಂದು ಮಹಾರಾಜನು ಪ್ರಾರ್ಥಿಸಿದನು. )
ಪದ್ಯ-೧೦೨:ಅರ್ಥ:ಎನ್ನಲು ದುರ್ಯೋಧನನು ಕರ್ಣನನ್ನು ಬರಮಾಡಿಕೊಂಡು, ಈ ಮಹಾಯುದ್ಧದಲ್ಲಿ ಮಾವನು ತಾನೇನು ಹೇಳುತ್ತಾನೆಯೋ ನೀನು ಅದನ್ನು ಹಾಗೆಯೇ ಮೀರದೆ ಒಪ್ಪಿಕೊ ಎಂದು ಮಹಾರಾಜನು ಪ್ರಾರ್ಥಿಸಿದನು.
ವ|| ಅಂತಿರ್ವರುಮನೊರ್ವರೊರ್ವರೊಳೊಡಂಬಡಿಸಿ ತನ್ನೊಡನೆೞ್ದು ನಿಂದಿರ್ದ ಮದ್ರರಾಜನನಿರಲ್ವೇೞ್ದು ಕರ್ಣನುಂ ತಾನುಂ ನಿಜನಿವಾಸಂಗಳ್ಗೆ ಪೋದರಾಗಳಾ ಪಡೆಮಾತನಜಾತಶತ್ರು ಕೇಳ್ದು ಮುರಾಂತಕಂಗೆ ಬಿೞಿಯನಟ್ಟಿ ಬರಿಸಿ-
ವಚನ:ಪದವಿಭಾಗ-ಅರ್ಥ:ಅಂತು ಇರ್ವರುಮನು ಒರ್ವರೊರ್ವರೊಳ್ ಒಡಂಬಡಿಸಿ (ಹಾಗೆ ಇಬ್ಬರನ್ನೂ ಒಬ್ಬರನ್ನೊಬ್ಬರು ಒಪ್ಪುದ ಹಾಗೆ ಮಾಡಿ) ತನ್ನೊಡನೆ ಎೞ್ದು ನಿಂದಿರ್ದ ಮದ್ರರಾಜನನು ಇರಲ್ ವೇೞ್ದು ಕರ್ಣನುಂ ತಾನುಂ (ತನ್ನೊಡನೆ ಎದ್ದು ನಿಂತಿದ್ದ ಶಲ್ಯನನ್ನು ಅಲ್ಲಿಯೇ ಇರಲು ಹೇಳಿ) ನಿಜನಿವಾಸಂಗಳ್ಗೆ ಪೋದರ್ (ಕರ್ಣನೂ ತಾನೂ/ದುರ್ಯೋಧನನೂ ತಮ್ಮ ಮನೆಗಳಿಗೆ ಹೋದರು.) ಆಗಳಾ ಪಡೆಮಾತಂ ಅಜಾತಶತ್ರು ಕೇಳ್ದು ಮುರಾಂತಕಂಗೆ ಬಿೞಿಯನಟ್ಟಿ ಬರಿಸಿ (ಈ ಸಮಾಚಾರವನ್ನು ಧರ್ಮರಾಯನು ಕೇಳಿ ಕೃಷ್ಣನಲ್ಲಿಗೆ ದೂತರನ್ನು ಕಳುಹಿಸಿ ಬರಮಾಡಿಕೊಂಡು- )-
ವಚನ:ಅರ್ಥ:ಹಾಗೆ ಇಬ್ಬರನ್ನೂ ಒಬ್ಬರನ್ನೊಬ್ಬರು ಒಪ್ಪುದ ಹಾಗೆ ಮಾಡಿ, ತನ್ನೊಡನೆ ಎದ್ದು ನಿಂತಿದ್ದ ಶಲ್ಯನನ್ನು ಅಲ್ಲಿಯೇ ಇರಲು ಹೇಳಿ ಕರ್ಣನೂ ತಾನೂ/ದುರ್ಯೋಧನನೂ ತಮ್ಮ ಮನೆಗಳಿಗೆ ಹೋದರು. ಈ ಸಮಾಚಾರವನ್ನು ಧರ್ಮರಾಯನು ಕೇಳಿ ಕೃಷ್ಣನಲ್ಲಿಗೆ ದೂತರನ್ನು ಕಳುಹಿಸಿ ಬರಮಾಡಿಕೊಂಡು-

ಧರ್ಮರಾಯನ ಚಿಂತೆ[ಸಂಪಾದಿಸಿ]

ಚಂ|| ಗೆಲಲರಿದುಂತೆ ಸೂತಸುತನಂ ರಣರಂಗದೊಳೆಂಬುದೊಂದು ಪಂ
ಬಲೆ ಪಿರಿದಂತವಂಗೊಸೆದು ತೇರೆಸಪಂ ಗಡ ನಾಳೆ ಶಲ್ಯನೀ|
ಕಲಹಮಿದೆಂತು ದಲ್ ಬಿದಿರ ಗಂಟುಗಳಂ ಕಳೆವಂತೆ ಮನ್ಮನಃ
ಸ್ಖಲನೆಯನುಂಟುಮಾಡಿದಪುದಿಲ್ಲಿಗೆ ಕಜ್ಜಮದಾವುದಚ್ಯುತಾ|| ೧೦೩ ||
ಪದ್ಯ-೧೦೩:ಪದವಿಭಾಗ-ಅರ್ಥ:ಗೆಲಲು ಅರಿದು ಉಂತೆ ಸೂತಸುತನಂ (ಯುದ್ಧರಂಗದಲ್ಲಿ ಕರ್ಣನನ್ನು ಸುಮ್ಮನೆ) ರಣರಂಗದೊಳೆ ಎಂಬುದೊಂದು ಪಂಬಲೆ ಪಿರಿದು ಅಂತು (ಯುದ್ಧರಂಗದಲ್ಲಿ ಗೆಲ್ಲಲು ಸಾಧ್ಯವಿಲ್ಲವೆಂಬ ಚಿಂತೆಯೇ ಹಿರಿದಾಗಿದೆ.) ಅವಂಗೆ ಒಸೆದು ತೇರೆಸಪಂ ಗಡ ನಾಳೆ ಶಲ್ಯನು (ಅಂತಹ ಅವನಿಗೆ ನಾಳೆ ಪ್ರೀತಿಯಿಂದ ಶಲ್ಯನು ತೇರನ್ನು ನಡೆಸುತ್ತಾನಂತೆ.) ಈ ಕಲಹಂ ಇದೆಂತು (ಈ ಯುದ್ಧದಲ್ಲಿ ನಾವು ಹೇಗೆ ಗೆಲ್ಲುವುದು?) ದಲ್ ಬಿದಿರ ಗಂಟುಗಳಂ ಕಳೆವಂತೆ (ಬಿದಿರಿನ ಗಿಣ್ಣುಗಳನ್ನು ಒಡೆಯುವಂತೆ) ಮನ್ ಮನಃ ಸ್ಖಲನೆಯನು ಉಂಟುಮಾಡಿದಪುದು (ನನ್ನ ಮನಸ್ಥೆರ್ಯವನ್ನು ಕದಲಿಸುತ್ತಿದೆ.) ಇಲ್ಲಿಗೆ ಕಜ್ಜಮದು ಆವುದು ಅಚ್ಯುತಾ (ಈ ಸಮಯದಲ್ಲಿ ಮಾಡಬೇಕಾದ ಕಾರ್ಯವಾವುದು? )
ಪದ್ಯ-೧೦೩:ಅರ್ಥ:ಯುದ್ಧರಂಗದಲ್ಲಿ ಕರ್ಣನನ್ನು ಸುಮ್ಮನೆ (ಯಾರ ಸಹಾಯವಿಲ್ಲದೆ ಏಕಾಕಿಯಾಗಿರುವಾಗಲೇ)ಗೆಲ್ಲಲು ಸಾಧ್ಯವಿಲ್ಲವೆಂಬ ಚಿಂತೆಯೇ ಹಿರಿದಾಗಿದೆ. ಅಂತಹ ಅವನಿಗೆ ನಾಳೆ ಪ್ರೀತಿಯಿಂದ ಶಲ್ಯನು ತೇರನ್ನು ನಡೆಸುತ್ತಾನಂತೆ. ಈ ಯುದ್ಧದಲ್ಲಿ ನಾವು ಹೇಗೆ ಗೆಲ್ಲುವುದು? ಬಿದಿರಿನ ಗಿಣ್ಣುಗಳನ್ನು ಒಡೆಯುವಂತೆ ನನ್ನ ಮನಸ್ಥೆರ್ಯವನ್ನು ಕದಲಿಸುತ್ತಿದೆ. ಕೃಷ್ಣ, ಈ ಸಮಯದಲ್ಲಿ ಮಾಡಬೇಕಾದ ಕಾರ್ಯವಾವುದು?
ವ|| ಎಂಬುದುಂ ನೀನೆಂದಂತೆ ರಥಕಲ್ಪಮೆಂಬುದು ಶಲ್ಯಂಗೊಡವುಟ್ಟಿದುದಾದೊಡ ಮವರಿರ್ವರ್ಗಮೊರ್ವರೊರ್ವರೊಳ್ ಮೂಗುದುಱಸಲಾಗದ ಕಡ್ಡಮವರ್ಗೆಂತುಮೊಡಂಬಡಾಗದ ದಲ್ಲದೆಯುಂ-
ವಚನ:ಪದವಿಭಾಗ-ಅರ್ಥ:ಎಂಬುದುಂ ನೀನು ಎಂದಂತೆ ರಥಕಲ್ಪಮೆಂಬುದು (ಎನ್ನಲು, ನೀನು ಹೇಳಿದಂತೆ ರಥವಿದ್ಯೆಯೆಂಬುದು) ಶಲ್ಯಂಗೆ ಒಡವುಟ್ಟಿದುದಾದೊಡಂ (ಶಲ್ಯನ ಜೊತೆಯಲ್ಲಿ ಹುಟ್ಟಿದುದಾದರೂ/ ಶಲ್ಯನು ಬಹಳ ಪರಿಣತನಾದರೂ) ಅವರಿರ್ವರ್ಗಂ ಒರ್ವರೊರ್ವರೊಳ್ ಮೂಗು(ದು)ತುಱಿಸಲು ಆಗದ ಕಡ್ಡಂ (ಅವರಿಬ್ಬರಿಗೂ ಒಬ್ಬೊಬ್ಬರಲ್ಲಿ ಮೂಗುತುರಿಸಿ ಕೊಳ್ಳುವುದಕ್ಕಾಗದ ದ್ವೇಷಾಸೂಯೆಗಳಿವೆ) ಅವರ್ಗೆ ಎಂತುಂ ಒಡಂಬಡಾಗದ ಅದು ದಲ್ಲದೆಯುಂ (ಅವರಿಗೆ ಯಾವತ್ತೂ ಒಪ್ಪಿಗೆ ಯೆಂಬುವುದಾಗುವುದಿಲ್ಲ. ಅದು ಅಲ್ಲದೆಯೂ )-
ವಚನ:ಅರ್ಥ:ಎನ್ನಲು, ನೀನು ಹೇಳಿದಂತೆ ರಥವಿದ್ಯೆಯೆಂಬುದು ಶಲ್ಯನ ಜೊತೆಯಲ್ಲಿ ಹುಟ್ಟಿದುದಾದರೂ ಅವರಿಬ್ಬರಿಗೂ ಒಬ್ಬೊಬ್ಬರಲ್ಲಿ ಮೂಗುತುರಿಸಿ ಕೊಳ್ಳುವುದಕ್ಕಾಗದ ದ್ವೇಷಾಸೂಯೆಗಳಿವೆ. ಅವರಿಗೆ ಯಾವತ್ತೂ ಒಪ್ಪಿಗೆ ಯೆಂಬುವುದಾಗುವುದಿಲ್ಲ. ಅದು ಅಲ್ಲದೆಯೂ-
ಸ್ರ|| ಕರ್ಣಂಗಂಡಲ್ತೆ ಕಲ್ತರ್ ನುಡಿವ ಪಸುಗೆಯಂ ಗಂಡರಾ ಗಂಡವಾತುಂ
ಕರ್ಣಂ ಮುಂ ಪುಟ್ಟೆ ಪುಟ್ಟಿತ್ತಳವಮರ್ದೊಡವುಟ್ಟಿತ್ತು ಪೂಣ್ದೀವ ಚಾಗಂ|
ಕರ್ಣಂಗೊಡ್ಡಿತ್ತು ದಲ್ ಭಾರತಮೆನೆ ಜಗದೊಳ್ ಸಂದನೇಂ ಸಂದೊಡಾಂತಾ
ಕರ್ಣಾಂತಾಕೃಷ್ಟ ಬಾಣಾವಳಿಯೊಳೆ ಹರಿಗಂ ಕರ್ಣನಂ ನಾಳೆ ಕೊಲ್ಗುಂ| ೧೦೪ ||
ಪದ್ಯ-೧೦೪:ಪದವಿಭಾಗ-ಅರ್ಥ:ಕರ್ಣಂ ಗಂಡಲ್ತೆ ಕಲ್ತರ್ ನುಡಿವ ಪಸುಗೆಯಂ (ವಿವೇಕ) ಗಂಡರು (ಶೂರರಾದವರು ಕರ್ಣನನ್ನು ನೋಡಿಯಲ್ಲವೇ ಮಾತನಾಡುವ ವಿವೇಕವನ್ನು ಕಲಿತರು) ಆ ಗಂಡವಾತುಂ ಕರ್ಣಂ ಮುಂ ಪುಟ್ಟೆ (ಆ ಪೌರುಷಯುಕ್ತವಾದ ಮಾತುಗಳು ಕರ್ಣನು ಹುಟ್ಟಿದ ಮೇಲೆಯೇ ಹುಟ್ಟಲು,) ಪುಟ್ಟಿತ್ತು ಅಳವು ಅಮರ್ದು (ಸಹಿತ) ಒಡವುಟ್ಟಿತ್ತು (ಪ್ರತಾಪ ಸಹಿತವಾದ ತ್ಯಾಗವೂ ಅವನೊಡನೆಯೇ ಸೇರಿಕೊಂಡು ಹುಟ್ಟಿದುವು.) ಪೂಣ್ದೀವ ಚಾಗಂ ಕರ್ಣಂಗೆ ಒಡ್ಡಿತ್ತು (ಪ್ರತಿಜ್ಷೆ ಮಾಡಿ ಕೊಡುವ ತ್ಯಾಗವೂ ಜೊತೆಯಲ್ಲಿ ಹುಟ್ಟಿತು.) ದಲ್ ಭಾರತಮಂ ಎನೆ (ನಿಜಕ್ಕೂ ಭಾರತಯುದ್ಧವೂ ಕರ್ಣನಿಗಾಗಿಯೇ ಒಡ್ಡಿದೆ, ಎನ್ನುವಾಗ) ಜಗದೊಳ್ ಸಂದನು (ಎಂಬ ಜಗತ್ಪ್ರಸಿದ್ಧಿಯನ್ನು ಪಡೆದಿದ್ದಾನೆ.) ಏಂ ಸಂದೊಡೆ ಆಂತ (ಯುದ್ಧಕ್ಕೆ ಬಂದ) ಆ ಕರ್ಣಾಂತಾಕೃಷ್ಟ ಬಾಣಾವಳಿಯೊಳೆ (ಕಿವಿಯವರೆಗೆ ಸೆಳೆದ ತನ್ನ ಆ ಬಾಣಸಮೂಹದಿಂದಲೇ) ಹರಿಗಂ ಕರ್ಣನಂ ನಾಳೆ ಕೊಲ್ಗುಂ (ಹರಿಗನಾದ ಅರ್ಜುನನು ನಾಳೆ ಕರ್ಣನನ್ನು ಕೊಲ್ಲುವನು.)
ಪದ್ಯ-೧೦೪:ಅರ್ಥ:ಶೂರರಾದವರು ಕರ್ಣನನ್ನು ನೋಡಿಯಲ್ಲವೇ ಮಾತನಾಡುವ ವಿವೇಕವನ್ನು ಕಲಿತರು. ಆ ಪೌರುಷಯುಕ್ತವಾದ ಮಾತುಗಳು ಕರ್ಣನು ಹುಟ್ಟಿದ ಮೇಲೆಯೇ ಹುಟ್ಟಿರಲು, ಪ್ರತಾಪಹಿತವಾದ ತ್ಯಾಗವೂ ಅವನೊಡನೆಯೇ ಸೇರಿಕೊಂಡು ಹುಟ್ಟಿದುವು. ಪ್ರತಿಜ್ಷೆ ಮಾಡಿ ಕೊಡುವ ತ್ಯಾಗವೂ ಜೊತೆಯಲ್ಲಿ ಹುಟ್ಟಿತು. ಭಾರತಯುದ್ಧವೂ ಕರ್ಣನಿಗಾಗಿಯೇ ಒಡ್ಡಿದೆ ಎಂಬ ಜಗತ್ಪ್ರಸಿದ್ಧಿಯನ್ನು ಪಡೆದಿದ್ದಾನೆ. ಏನು ಪಡೆದಿದ್ದರೇನು? ಹರಿಗನಾದ ಅರ್ಜುನನು ನಾಳೆ ಕಿವಿಯವರೆಗೆ ಸೆಳೆದ ತನ್ನ ಬಾಣಸಮೂಹದಿಂದಲೇ ಕರ್ಣನನ್ನು ಕೊಲ್ಲುವನು.
ಕಂ|| ಎಂಬಿನೆಗಮಾಗಳಾ ವಿಕ
ಚಾಂಬುಜಸೌರಭಮನೊಸೆದು ಸೇವಿಸುವಾ ಪೆ
ಣ್ದುಂಬಿಗಳ ಸರಮನೆತ್ತಿ ತ
ಱುಂಬುತ್ತುಂ ಬಂದುದಾ ಪ್ರಭಾತಸಮೀರಂ|| ೧೦೫ ||
ಪದ್ಯ-೧೦೫:ಪದವಿಭಾಗ-ಅರ್ಥ:ಎಂಬಿನೆಗಂ ಆಗಳ್ ಆ ವಿಕಚಾಂಬುಜ ಸೌರಭಮಂ ಒಸೆದು (ಅರಳಿದ ಕಮಲದ ಸುವಾಸನೆಯನ್ನು ಸಂತೋಷದಿಂದ) ಸೇವಿಸುವ ಆ ಪೆಣ್ದುಂಬಿಗಳ (ಸೇವಿಸುವ ಹೆಣ್ಣು ದುಂಬಿಗಳ) ಸರಮನು ಎತ್ತಿ ತಱುಂಬುತ್ತುಂ ಬಂದುದು ಆ ಪ್ರಭಾತ ಸಮೀರಂ (ಸ್ವರವನ್ನು ಎಬ್ಬಿಸಿ ಅಟ್ಟುತ್ತಾ ಪ್ರಾತಕಾಲದ ಮಾರುತವು ಬೀಸಿತು. .)
ಪದ್ಯ-೧೦೫:ಅರ್ಥ: ಎನ್ನುವಷ್ಟರಲ್ಲಿ, ಆಗ ಅರಳಿದ ಕಮಲದ ಸುವಾಸನೆಯನ್ನು ಸಂತೋಷದಿಂದ ಆಘ್ರಾಣಿಸುವ ಹೆಣ್ಣು ದುಂಬಿಗಳ ಸ್ವರವನ್ನು ಎಬ್ಬಿಸಿ ಅಟ್ಟುತ್ತಾ ಪ್ರಾತಕಾಲದ ಮಾರುತವು ಬೀಸಿತು. .
ಸೂತ ನಟ ವಂದಿ ಮಾಗಧ
ವೈತಾಳಿಕ ಕಥಕ ಪುಣ್ಯಪಾಠಕ ವಿಪ್ರೋ|
ದ್ಭೂತರವಮೆಸೆಯೆ ಜಯ ಜಯ
ಗೀತಿಗಳೊರ್ಮೊದಲೆ ತಡೆಯದೆರಡುಂ ಪಡೆಯೊಳ್|| ೧೦೬ ||
ಪದ್ಯ-೧೦೬:ಪದವಿಭಾಗ-ಅರ್ಥ:ಸೂತ, ನಟ, ವಂದಿಮಾಗಧ, ವೈತಾಳಿಕ, ಕಥಕ, ಪುಣ್ಯಪಾಠಕ, ವಿಪ್ರೋದ್ಭೂತ - > ರವಮ್ ಎಸೆಯೆ - ಗೀತೆಗಳ ಸದ್ದು (ಪೌರಾಣಿಕರು, ನಟುವರು, ಹೊಗಳುಭಟರು, ಸ್ತುತಿಪಾಠಕರು, ಹಾಡುವವರು, ಕತೆಹೇಳುವವರು, ಮಂಗಳಪಾಠಕರು, ಬ್ರಾಹ್ಮಣರು ) ಜಯ ಜಯಗೀತಿಗಳ್ ಒರ್ಮೊದಲೆ ತಡೆಯದೆ ಎರಡುಂ ಪಡೆಯೊಳ್ (ಮೊದಲಾದವರಿಂದ ಎದ್ದ ಜಯಜಯಮಿಶ್ರವಾದ ಗೀತೆಗಳ ಸದ್ದು ಎರಡು ಸೈನ್ಯದಲ್ಲಿಯೂ ಸಾವಕಾಶಮಾಡದೆ ಒಟ್ಟಿಗೆ ಶೋಭಿಸಿದುವು)
ಪದ್ಯ-೧೦೬:ಅರ್ಥ:ಪೌರಾಣಿಕರು, ನಟುವರು, ಹೊಗಳುಭಟರು, ಸ್ತುತಿಪಾಠಕರು, ಹಾಡುವವರು, ಕತೆಹೇಳುವವರು, ಮಂಗಳಪಾಠಕರು, ಬ್ರಾಹ್ಮಣರು ಮೊದಲಾದವರಿಂದ ಎದ್ದ ಜಯಜಯಮಿಶ್ರವಾದ ಗೀತೆಗಳ ಸದ್ದು ಎರಡೂ ಸೈನ್ಯಗಳಲ್ಲಿಯೂ ಸಾವಕಾಶಮಾಡದೆ ಒಟ್ಟಿಗೆ ಶೋಭಿಸಿದುವು
ಎರಡುಂಪಕ್ಕಮನೆಱಗಿದ
ಕರಿಗಳ್ ಪಾರ್ದೆಯ್ದೆ ವೇಱ್ದ ಕೊರಲ ಸರಂಬೆ|
ತ್ತಿರೆ ಮುರಿವಿಟ್ಟೀಹೇಷಾ
ಸ್ವರಮಂ ತೋಱಿದಪುವಲ್ಲಿ ನೃಪ ತುರಗಂಗಳ್|| ೧೦೭ ||
ಪದ್ಯ-೧೦೭:ಪದವಿಭಾಗ-ಅರ್ಥ:ಎರಡುಂ ಪಕ್ಕಮನೆ ಎಱಗಿದ ಕರಿಗಳ್ (ಎರಡು ಪಕ್ಷದಲ್ಲಿಯೂ ಧಾಳಿಮಾಡಿದ ಆನೆಗಳು) ಪಾರ್ದು ಎಯ್ದೆ ವೇಱ್ದ (ನಿಟ್ಟಿಸಿ ಹೋಗುವಂತೆ ಹೇಳಿದ) ಕೊರಲ ಸರಂ ಬೆತ್ತಿರೆ (ಕೂಗುವಸ್ವರದಿಂದ ಕೂಡಿರಲು) ಮುರಿವಿಟ್ಟೇ (ಆಹಾರ ತಿನ್ನದೆ ಕೂಗುವ ಅಪಶಕುನ?) ಹೇಷಾಸ್ವರಮಂ ತೋಱಿದಪುವು ಅಲ್ಲಿ ನೃಪ ತುರಗಂಗಳ್ (ಮುರ, ಮುರು-ಪಶುವಿಗೆ ಹುಲ್ಲು ಮತ್ತು ಬೇಯಿಸಿದ ಧಾನ್ಯ ಸೇರಿಸಿ ತಯಾರಿಸಿದ ಆಹಾರ, ಈ ಪದ ಈಗಲೂ ಹಳ್ಳಿಗಳಲ್ಲಿ ರೂಢಿಯಲ್ಲಿದೆ. ಮುರುವ+ ವಿಟ್ಟ ಬಿಟ್ಟ,-ಪ್ರಾಣಿಗಳ ಆಹಾರ ಬಿಟ್ಟ, ದುರ್ಯೋಧನನ ಸೈನ್ಯದಲ್ಲಿ ಕುದುರೆಗಳು ಆಹಾರ ತಿನ್ನದೆ ಕೂಗುವ ಅಪಶಕುನ?)
ಪದ್ಯ-೧೦೭:ಅರ್ಥ: ಎರಡು ಪಕ್ಷದಲ್ಲಿಯೂ ಧಾಳಿಮಾಡಿದ ಆನೆಗಳು ನಿಟ್ಟಿಸಿ ಹೋಗುವಂತೆ ಹೇಳಿದ ಕೂಗುವ ಸ್ವರದಿಂದ ಕೂಡಿರಲು, ಅಲ್ಲಿ ದುರ್ಯೋಧನನ ರಾಜಾಶ್ವಗಳು ಆಹಾರವನ್ನು ಬಿಟ್ಟು ಕೆನೆಯುತ್ತಿರುವುವು. (ಇವು ಅಪಶಕುನದ ಸೂಚನೆಗಳು).

ಇಂದೆನ್ನ ಮಗನನರ್ಜುನ ನೊಂದುಂ ತಳ್ವಿಲ್ಲದೞಿವನವನಂ ನೀಂ ಕಾ|| ಯೆಂದು ಸುರಪತಿಯ ಕಾಲ್ವಿಡಿ ವಂದಮನಿೞಿಸಿದುವು ಪಸರಿಪಿನಕಿರಣಂಗಳ್|| ೧೦೮

ಪದ್ಯ-೧೦೮:ಪದವಿಭಾಗ-ಅರ್ಥ:ಇಂದು ಎನ್ನ ಮಗನನು ಅರ್ಜುನನು ಒಂದುಂ ತಳ್ವಿಲ್ಲದೆ ಅೞಿವನು(ಈ ದಿನ ನನ್ನ ಮಗನಾದ ಕರ್ಣನನ್ನು ಅರ್ಜುನನು ಒಂದುಸ್ವಲ್ಪವೂ ತಡಮಾಡದೆ ಕೊಲ್ಲುವನು) ಅವನಂ ನೀಂ ಕಾಯೆಂದು (ಅವನನ್ನು ನೀನು ಕಾಪಾಡು ಎಂದು) ಸುರಪತಿಯ ಕಾಲ್ವಿಡಿವ ಅಂದಮಂ (ಇಂದ್ರನ ಕಾಲನ್ನು ಹಿಡಿಯುವ ರೀತಿಯನ್ನು) ಇೞಿಸಿದುವು (ಇಳಿಸಿದವು) ಪಸರಿಪ ಇನ ಕಿರಣಂಗಳ್ (ಪ್ರಸರಿಸುತ್ತಿರುವ ಸೂರ್ಯನ ಕಿರಣಗಳು ತಮ್ಮನು ಕೆಳಗೆ ಭೂಮಿಗೆ ಇಳಿಸಿದವು.)
ಪದ್ಯ-೧೦೮:ಅರ್ಥ:ಈ ದಿನ ನನ್ನ ಮಗನಾದ ಕರ್ಣನನ್ನು ಅರ್ಜುನನು ಒಂದುಸ್ವಲ್ಪವೂ ತಡಮಾಡದೆ ಕೊಲ್ಲುವನು. ಅವನನ್ನು ನೀನು ಕಾಪಾಡು ಎಂದು ಇಂದ್ರನ ಕಾಲನ್ನು ಹಿಡಿಯುವ ರೀತಿಯನ್ನು ಪ್ರಸರಿಸುತ್ತಿರುವ ಸೂರ್ಯನ ಕಿರಣಗಳು ತಮ್ಮನು ಕೆಳಗೆ ಭೂಮಿಗೆ ಇಳಿಸಿದವು.

ಕರ್ಣನ ಕೊನೆಯ ದಿನದ ಯುದ್ಧಕ್ಕೆ ಪ್ರವೇಶ[ಸಂಪಾದಿಸಿ]

ವ|| ಆಗಳಂಗರಾಜಂ ತನ್ನಂ ಪರಿಚ್ಛೇದಿಸಿ ನೇಸಱ್ ಮೂಡೆಯಾಜ್ಯಾವೇಕ್ಷಣಂಗೆಯ್ದು ಸವತ್ಸ ಸುರಭಿಯನಭಿವಂದಿಸಿ ನಿಜ ರಥ ತುರಗ ದಿವಾಸ್ತ್ರಂಗಳುೞಿಯೆ ಪಸುರ್ಮಣಿಯನಪ್ಪೊಡ ಮುೞಿಯದಂತು ಚಾಗಂಗೆಯ್ದು ಚಾಗ ಬೀರದ ಪೞಯಿಗೆಯನೆತ್ತಿಸಿ ಪಂಚರತ್ನ ಗರ್ಭಂಗಳಪ್ಪ ಮಂಗಳಜಳಂಗಳಂ ಮಿಂದು ಮೆಯ್ಯನಾಱಿಸಿ ದುಕೂಲಾಂಬರಮನುಟ್ಟು ಪೊಸವಾವುಗೆಯಂ ಮೆಟ್ಟಿ ಕನಕಸಂವ್ಯಾನಸೂತ್ರನಾಚಮಿಸಿ ಕನಕಕಮಳಂಗಳಿಂ ಕಮಳಾಕರಬಾಂಧವಂಗರ್ಘ್ಯಮೆತ್ತಿ ಪಾಲ್ಗಡಲ ತೆರೆಯ ನೊರೆಯ ದೊರೆಯ ದುಕೂಲಾಂಬರದೊಳಿಂಬಾಗಿ ಚಲ್ಲಣಮನುಟ್ಟು ಪುಡಿಗತ್ತುರಿಯಂ ತಲೆಯೊಳ್ ತೀವೆ ಪೊಯ್ದು ಪಸಿಯ ನೇತ್ರದಸಿಯ ಪಾಳೆಯೊಳ್ ತಲೆನವಿರಂ ಪಚ್ಚುಗಂಟಕ್ಕಿ ಮಣಿಮಯಮಕುಟಮಂ ಕವಿದು ತೋರ ನೆಲ್ಲಿಯ ಕಾಯಿಂ ಪಿರಿಯವಪ್ಪ ಮುತ್ತಿನ ಬ್ರಹ್ಮಸೂತ್ರಮನೆೞಲಿಕ್ಕಿ ಪಸದನಮನೆನಗಿಂದಿನಿತೆ ಎಂಬಂತೆ ನೆರೆಯೆ ಕೆಯ್ಗೆಯ್ದು ಬಂದು ಮದ್ರರಾಜಂಗೆ ಪೊಡೆವಟ್ಟು ಸನ್ನಣಂಗಳನೆಲ್ಲಮನಾತಂಗೆ ನೆರೆಯೆ ತುಡಿಸಿ-
ವಚನ:ಪದವಿಭಾಗ-ಅರ್ಥ:ಆಗಳ್ ಅಂಗರಾಜಂ ತನ್ನಂ ಪರಿಚ್ಛೇದಿಸಿ ನೇಸಱ್ ಮೂಡೆ (ಆಗ ಕರ್ಣನು ತಾನು ನಿಶ್ಚೆಸಿಕೊಂಡು ಸೂರ್ಯೋದಯವಾಗಲು) (ಯ)ಆಜ್ಯಾವೇಕ್ಷಣಂಗೆಯ್ದು (ತುಪ್ಪದಲ್ಲಿ ತನ್ನ ಮುಖಬಿಂಬವನ್ನು ನೋಡಿ) ಸವತ್ಸ ಸುರಭಿಯನು ಅಭಿವಂದಿಸಿ (ಕರುವಿನಿಂದ ಕೂಡಿದ ಗೋವನ್ನು ನಮಿಸಿ) ನಿಜ ರಥ ತುರಗ ದಿವಾಸ್ತ್ರಂಗಳು ಉೞಿಯೆ (ತನ್ನ ತೇರು, ಕುದುರೆ, ದಿವ್ಯಾಸ್ತ್ರಗಳನ್ನು ಬಿಟ್ಟು ) ಪಸುರ್ಮಣಿಯನು ಅಪ್ಪೊಡ ಮುೞಿಯದಂತು ಚಾಗಂಗೆಯ್ದು (ಒಂದು ಹಸಿರು ಮಣಿಯೂ ಉಳಿಯದಂತೆ ದಾನಮಾಡಿ) ಚಾಗ ಬೀರದ ಪೞಯಿಗೆಯನೆತ್ತಿಸಿ (ತ್ಯಾಗವೀರದ ಧ್ವಜವನ್ನು ಎತ್ತಿಕಟ್ಟಿ) ಪಂಚರತ್ನ ಗರ್ಭಂಗಳಪ್ಪ ಮಂಗಳಜಳಂಗಳಂ ಮಿಂದು ಮೆಯ್ಯನಾಱಿಸಿ ದುಕೂಲಾಂಬರಮನುಟ್ಟು ( ಪಂಚರತ್ನಗಳಿಂದ ಕೂಡಿದ ಮಂಗಳತೀರ್ಥಗಳಲ್ಲಿ ಸ್ನಾನಮಾಡಿ ಶರೀರವನ್ನು ಒಣಗಿಸಿಕೊಂಡು ರೇಷ್ಮೆಯಂಥ ಬಟ್ಟೆಯನ್ನುಟ್ಟು) ಪೊಸವಾವುಗೆಯಂ ಮೆಟ್ಟಿ (ಹೊಸಪಾದುಕೆಗಳನ್ನು ಮೆಟ್ಟಿ ) ಕನಕಸಂವ್ಯಾನಸೂತ್ರನಾಚಮಿಸಿ (ಚಿನ್ನದ ಉತ್ತರೀಯವನ್ನೂ ಕಟಿಸೂತ್ರವನ್ನೂ ಧರಿಸಿದನು.) ಕನಕ ಕಮಳಂಗಳಿಂ ಕಮಳಾಕರಬಾಂಧವಂಗೆ ಅರ್ಘ್ಯಮೆತ್ತಿ (ಆಚಮನಮಾಡಿ ಚಿನ್ನದ ಕಮಲಗಳಿಂದ ಸೂರ್ಯನಿಗೆ ಅರ್ಘ್ಯನ್ನು ಕೊಟ್ಟು,) ಪಾಲ್ಗಡಲ ತೆರೆಯ ನೊರೆಯ ದೊರೆಯ ದುಕೂಲಾಂಬರದೊಳು ಇಂಬಾಗಿ ಚಲ್ಲಣಮನುಟ್ಟು ( ಕ್ಷೀರಸಮುದ್ರದ ಅಲೆಯ ನೊರೆಗೆ ಸಮಾನವಾದ ರೇಷ್ಮೆಯ ಬಟ್ಟೆಯಲ್ಲಿ ಮನೋಹರವಾಗಿ ಕಚ್ಚೆಯನ್ನುಟ್ಟನು.) ಪುಡಿಗತ್ತುರಿಯಂ ತಲೆಯೊಳ್ ತೀವೆ ಪೊಯ್ದು (ಕಸ್ತುರಿಯ ಹುಡಿ ತಲೆಯ ಮೇಲೆ ತುಂಬ ಚೆಲ್ಲಿಕೊಂಡು) ಪಸಿಯ ನೇತ್ರದಸಿಯ ಪಾಳೆಯೊಳ್ ತಲೆನವಿರಂ ಪಚ್ಚುಗಂಟಕ್ಕಿ (ಹಸಿರು ಬಣ್ಣದ ನವುರಾದ ಪಟ್ಟಿಯಲ್ಲಿ ತಲೆಗೂದಲನ್ನು ಭಾಗಮಾಡಿ ಗಂಟಿಕ್ಕಿಕೊಂಡನು.) ಮಣಿಮಯ ಮಕುಟಮಂ ಕವಿದು (ರತ್ನಮಯಕಿರೀಟವನ್ನು ತಲೆಗೆ ಧರಿಸಿ) ತೋರನೆಲ್ಲಿಯ ಕಾಯಿಂ ಪಿರಿಯವಪ್ಪ ಮುತ್ತಿನ ಬ್ರಹ್ಮಸೂತ್ರಮನು ಎೞಲಿಕ್ಕಿ (ದಪ್ಪವಾದ ನೆಲ್ಲಿಯ ಕಾಯಿಗಿಂತಲೂ ದಪ್ಪವಾದ ಮುತ್ತಿನ ಯಜ್ಞೋಪವೀತವನ್ನು ಜೋಲುಬಿಟ್ಟು) ಪಸದನಂ ಎನೆ ಎನಗೆ ಇಂದಿನಿತೆ ಎಂಬಂತೆ (ಈ- ಅಲಂಕಾರ ಈ ದಿನಕ್ಕೆ ಮಾತ್ರ ಎನ್ನುವ ಹಾಗೆ) ನೆರೆಯೆ ಕೆಯ್ಗೆಯ್ದು (ಸಂಪೂರ್ಣವಾಗಿ ಅಲಂಕಾರ ಮಾಡಿಕೊಂಡು) ಬಂದು ಮದ್ರರಾಜಂಗೆ ಪೊಡೆವಟ್ಟು (ಶಲ್ಯನಿಗೆ ನಮಸ್ಕಾರಮಾಡಿ) ಸನ್ನಣಂಗಳಂ ಎಲ್ಲಮನು ಆತಂಗೆ ನೆರೆಯೆ ತುಡಿಸಿ (ಕವಚನಗಳನ್ನೆಲ್ಲ ಆತನಿಗೆ ಪೂರ್ಣವಾಗಿ ತೊಡಿಸಿ)-
ವಚನ:ಅರ್ಥ:ಆಗ ಕರ್ಣನು ತಾನು ನಿಶ್ಚೆಸಿಕೊಂಡು ಸೂರ್ಯೋದಯವಾಗಲು ತುಪ್ಪದಲ್ಲಿ ತನ್ನ ಮುಖಬಿಂಬವನ್ನು ನೋಡಿ, ಕರುವಿನಿಂದ ಕೂಡಿದ ಗೋವನ್ನು ನಮಿಸಿದನು. ತನ್ನ ತೇರು, ಕುದುರೆ, ದಿವ್ಯಾಸ್ತ್ರಗಳನ್ನು ಬಿಟ್ಟು ಒಂದು ಹಸಿರು ಮಣಿಯೂ ಉಳಿಯದಂತೆ ದಾನಮಾಡಿ, ತ್ಯಾಗವೀರದ ಧ್ವಜವನ್ನು ಎತ್ತಿಕಟ್ಟಿದನು. ಪಂಚರತ್ನಗಳಿಂದ ಕೂಡಿದ ಮಂಗಳತೀರ್ಥಗಳಲ್ಲಿ ಸ್ನಾನಮಾಡಿ ಶರೀರವನ್ನು ಒಣಗಿಸಿಕೊಂಡು ರೇಷ್ಮೆಯಂಥ ಬಟ್ಟೆಯನ್ನುಟ್ಟು ಹೊಸಪಾದುಕೆಗಳನ್ನು ಮೆಟ್ಟಿ ಚಿನ್ನದ ಉತ್ತರೀಯವನ್ನೂ ಕಟಿಸೂತ್ರವನ್ನೂ ಧರಿಸಿದನು. ಆಚಮನಮಾಡಿ ಚಿನ್ನದ ಕಮಲಗಳಿಂದ ಸೂರ್ಯನಿಗೆ ಅರ್ಘ್ಯವನ್ನೆತ್ತಿ, ಕ್ಷೀರಸಮುದ್ರದ ಅಲೆಯ ನೊರೆಗೆ ಸಮಾನವಾದ ರೇಷ್ಮೆಯ ಬಟ್ಟೆಯಲ್ಲಿ ಮನೋಹರವಾಗಿ ಕಚ್ಚೆಯನ್ನುಟ್ಟನು. ಕಸ್ತುರಿಯ ಹುಡಿ ತಲೆಯ ಮೇಲೆ ತುಂಬ ಚೆಲ್ಲಿಕೊಂಡು, ಹಸಿರು ಬಣ್ಣದ ನವುರಾದ ಪಟ್ಟಿಯಲ್ಲಿ ತಲೆಗೂದಲನ್ನು ಭಾಗಮಾಡಿ ಗಂಟಿಕ್ಕಿಕೊಂಡನು. ರತ್ನಮಯಕಿರೀಟವನ್ನು ತಲೆಗೆ ಧರಿಸಿಕೊಂಡನು. ದಪ್ಪವಾದ ನೆಲ್ಲಿಯ ಕಾಯಿಗಿಂತಲೂ ದಪ್ಪವಾದ ಮುತ್ತಿನ ಯಜ್ಞೋಪವೀತವನ್ನು ಜೋಲುಬಿಟ್ಟು, ಈ ಅಲಂಕಾರ ಈ ದಿನಕ್ಕೆ ಮಾತ್ರ ಎನ್ನುವ ಹಾಗೆ ಸಂಪೂರ್ಣವಾಗಿ ಅಲಂಕಾರ ಮಾಡಿಕೊಂಡು, ಶಲ್ಯನಿಗೆ ನಮಸ್ಕಾರಮಾಡಿ ಕವಚನಗಳನ್ನೆಲ್ಲ ಆತನಿಗೆ ಪೂರ್ಣವಾಗಿ ತೊಡಿಸಿದನು. ತೊಡಿಸಿ-
ಕಂ|| ತಿದಿಯುಗಿದು ಕೊಟ್ಟೆನೊಡವು
ಟ್ಟಿದ ಕವಚಮನಮರಪತಿಗೆ ಮುನ್ನಿನ್ನೆನಗೊ|
ಪ್ಪದು ಮರೆಯನಾಸೆವಡಲೆಂ
ದದಟನಣಂ ತುಡನೆ ಕವಚಮಂ ರಾಧೇಯಂ|| ೧೦೯ ||
ಪದ್ಯ-೦೦:ಪದವಿಭಾಗ-ಅರ್ಥ:ತಿದಿಯುಗಿದು ಕೊಟ್ಟೆನು (ಚರ್ಮವನ್ನು ಸುಲಿಯುವ ಹಾಗೆ ಸುಲಿದು ಕೊಟ್ಟೆನು.) ಒಡವುಟ್ಟಿದ ಕವಚಮಂ ಅಮರಪತಿಗೆ (ಜೊತೆಯಲ್ಲಿ ಹುಟ್ಟಿದ ಕವಚವನ್ನು ಇಂದ್ರನಿಗೆ) ಮುನ್ನ ಇನ್ನೆ ನಗೆ ಒಪ್ಪದು ಮರೆಯನು ಆಸೆವಡಲೆಂದು (ಇನ್ನು ನನಗೆ ದೇಹಕ್ಕೆ ಮರೆಯಾದ ಕವಚಾದಿಗಳನ್ನು ಅಪೇಕ್ಷೆಪಡುವುದು ಒಪ್ಪುವುದಿಲ್ಲ.) ಅದಟನು ಅಣಂ ತುಡನೆ ಕವಚಮಂ ರಾಧೇಯಂ (ಅದಟನು ರಾಧೇಯಂ ಕವಚಮಂ ಅಣಂ ತುಡನೆ- ಪರಾಕ್ರಮಶಾಲಿಯಾದ ಕರ್ಣನು ಕವಚವನ್ನು ಸ್ವಲ್ಪವೂ ತೊಡಲಿಲ್ಲವೇ!)
ಪದ್ಯ-೦೦:ಅರ್ಥ: ಜೊತೆಯಲ್ಲಿ ಹುಟ್ಟಿದ ಕವಚವನ್ನು ಚರ್ಮವನ್ನು ಸುಲಿಯುವ ಹಾಗೆ ಮೊದಲು ಇಂದ್ರನಿಗೆ ಸುಲಿದು ಕೊಟ್ಟೆನು. ಇನ್ನು ನನಗೆ ದೇಹಕ್ಕೆ ಮರೆಯಾದ ಕವಚಾದಿಗಳನ್ನು ಅಪೇಕ್ಷೆಪಡುವುದು ಒಪ್ಪುವುದಿಲ್ಲ ಎಂದು ಪರಾಕ್ರಮಶಾಲಿಯಾದ ಕರ್ಣನು ಕವಚವನ್ನು ಸ್ವಲ್ಪವೂ ತೊಡಲಿಲ್ಲವೇ!
ವ|| ಆಗಳ್ ಮದಗಜ ಕಕ್ಷದ್ವಜ ವಿರಾಜಿತಮಪ್ಪ ತನ್ನ ಪೊನ್ನ ರಥಮಂ ಮದ್ರರಾಜನ ನೇಱಲ್ವೇೞ್ದು ಮೂಱು ಸೂೞ್ ಬಲವಂದು ಪೊಡೆವಟ್ಟು ತನ್ನ ಸಗ್ಗಮನೇಱುವುದನನು ಕರಿಸುವಂತೇಱಿ ನೆಲನಂಬರದೆಡೆಗೆ ಬರ್ಪಂತೆ ರಣರಂಗಭೂಮಿಗೆ ವಂದು ಕುರುರಾಜಧ್ವಜಿನಿಯಂ ಪದ್ಮವ್ಯೂಹಮನೊಡ್ಡಿದೆಡೆ-
ವಚನ:ಪದವಿಭಾಗ-ಅರ್ಥ:ಆಗಳ್ ಮದಗಜ ಕಕ್ಷದ್ವಜ ವಿರಾಜಿತಮಪ್ಪ (ಆಗ ಮದ್ದಾನೆಯ ಪಕ್ಕದಲ್ಲಿ ನಿಂತಿರುವ) ತನ್ನ ಪೊನ್ನ ರಥಮಂ (ತನ್ನ ಸುವರ್ಣರಥವನ್ನು) ಮದ್ರರಾಜನನು ಏಱಲ್ ವೇೞ್ದು (ಶಲ್ಯನನ್ನು ಏರಲು- ಹತ್ತಲು ಹೇಳಿ) ಮೂಱು ಸೂೞ್ ಬಲವಂದು ಪೊಡೆವಟ್ಟು (ಮೂರು ಸಲ ಪ್ರದಕ್ಷಿಣೆ ಮಾಡಿ ನಮಸ್ಕರಿಸಿ) ತನ್ನ ಸಗ್ಗಮನು ಏಱುವುದನು ಅನುಕರಿಸುವಂತೆ ಏಱಿ (ತಾನು ಸ್ವರ್ಗಕ್ಕೆ ಹತ್ತುವುದನ್ನು ಅನುಕರಿಸುವಂತೆ ಹತ್ತಿ-) ನೆಲನು ಅಂಬರದೆಡೆಗೆ ಬರ್ಪಂತೆ (ಭೂಮಿಯು ಆಕಾಶದೆಡೆಗೆ ಬರುವ ಹಾಗೆ) ರಣರಂಗಭೂಮಿಗೆ ವಂದು ಕುರುರಾಜಧ್ವಜಿನಿಯಂ ಪದ್ಮವ್ಯೂಹಮನು ಒಡ್ಡಿದೆಡೆ (ಯುದ್ಧಭೂಮಿಗೆ ಬಂದು ಕೌರವಸೈನ್ಯವನ್ನು ಪದ್ಮವ್ಯೂಹದಾಕಾರದಲ್ಲಿ ರಚಿಸಿ ಮುಂದಕ್ಕೆ ಚಾಚಿದನು)-
ವಚನ:ಅರ್ಥ:ಆಗ ಮದ್ದಾನೆಯ ಪಕ್ಕದಲ್ಲಿ ನಿಂತಿರುವ ತನ್ನ ಸುವರ್ಣರಥವನ್ನು ಶಲ್ಯನನ್ನು ಹತ್ತಲು ಹೇಳಿ ಮೂರು ಸಲ ಪ್ರದಕ್ಷಿಣೆ ಮಾಡಿ ನಮಸ್ಕರಿಸಿ ತಾನು ಸ್ವರ್ಗಕ್ಕೆ ಹತ್ತುವುದನ್ನು ಅನುಕರಿಸುವಂತೆ ಹತ್ತಿದನು. ಭೂಮಿಯು ಆಕಾಶದೆಡೆಗೆ ಬರುವ ಹಾಗೆ ಯುದ್ಧಭೂಮಿಗೆ ಬಂದು ಕೌರವಸೈನ್ಯವನ್ನು ಪದ್ಮವ್ಯೂಹದಾಕಾರದಲ್ಲಿ ರಚಿಸಿ ಮುಂದಕ್ಕೆ ಚಾಚಿದನು.
ಕಂ|| ಕಂಸಾರಿಸಖಂ ಪರಿವಿ
ಧ್ವಂಸಿತ ರಿಪುನೃಪಸಮೂಹನೊಡ್ಡಿದನಾಗಳ್|
ಹಂಸವ್ಯೂಹಮನುತ್ತುಂ
ಗಾಂಸಂ ತಾಂ ವಿಬುಧವನಜವನಕಳಹಂಸಂ|| ೧೧೦ ||
ಪದ್ಯ-೧೧೦:ಪದವಿಭಾಗ-ಅರ್ಥ:ಕಂಸಾರಿಸಖಂ (ಕಂಸನನ್ನು ಕೊಂದ ಕೃಷ್ಣನ ಗೆಳೆಯನೂ) ಪರಿವಿಧ್ವಂಸಿತ ರಿಪು ನೃಪಸಮೂಹನು (ಶತ್ರುರಾಜರ ಸಮೂಹವನ್ನು ಪೂರ್ಣವಾಗಿ ಧ್ವಂಸಮಾಡಿದವನೂ) ಒಡ್ಡಿದನಾಗಳ್ ಹಂಸವ್ಯೂಹಮನು (ಹಂಸವ್ಯೂಹವನ್ನು ಒಡ್ಡಿದನು) ಉತ್ತುಂಗಾಂಸಂ (ಎತ್ತರವಾದ ಹೆಗಲನ್ನುಳ್ಳವನೂ) ತಾಂ ವಿಬುಧವನಜವನ ಕಳಹಂಸಂ (ವಿದ್ವಾಂಸರೆಂಬ ಸರೋವರಕ್ಕೆ ರಾಜಹಂಸದಂತೆ ಇರುವವನೂ ಆದ- ಅರ್ಜುನನು ಹಂಸವ್ಯೂಹವನ್ನು ಒಡ್ಡಿದನು.)
ಪದ್ಯ-೦೦:ಅರ್ಥ: ಕೃಷ್ಣನ ಸ್ನೇಹಿತನೂ ಶತ್ರುರಾಜರ ಸಮೂಹವನ್ನು ಪೂರ್ಣವಾಗಿ ಧ್ವಂಸಮಾಡಿದವನೂ ಎತ್ತರವಾದ ಹೆಗಲನ್ನುಳ್ಳವನೂ ವಿದ್ವಾಂಸರೆಂಬ ಸರೋವರಕ್ಕೆ ರಾಜಹಂಸದಂತೆ ಇರುವವನೂ ಆದ ಅರ್ಜುನನು ಹಂಸವ್ಯೂಹವನ್ನು ಒಡ್ಡಿದನು.
ವ|| ಅಂತೊಡ್ಡಿದೊಡ್ಡನೆರಡುಂ ಬಲದ ನಾಯಕರುಂ ತಮ್ಮ ಕೋಪಾಗ್ನಿಗಳನೆ ಬೀಸುವಂತೆ ಕೆಯ್ವೀಸಿದಾಗಳ್-
ವಚನ:ಪದವಿಭಾಗ-ಅರ್ಥ:ಅಂತು ಒಡ್ಡಿದ ಒಡ್ಡನು ಎರಡುಂ ಬಲದ ನಾಯಕರುಂ (ಹಾಗೆ ಒಡ್ಡಿರುವ ಸೈನ್ಯಗಳ ಎರಡು ಪಕ್ಷದ ನಾಯಕರೂ) ತಮ್ಮ ಕೋಪಾಗ್ನಿಗಳನೆ ಬೀಸುವಂತೆ ಕೆಯ್ವೀಸಿದಾಗಳ್ (ತಮ್ಮ ಕೋಪಾಗ್ನಿಗಳನ್ನೇ ಬೀಸುವಂತೆ (ಯುದ್ಧ ಪ್ರಾರಂಭಸೂಚಕವಾಗಿ) ಕೈಗಳನ್ನು ಬೀಸಿದಾಗ-)-
ವಚನ:ಅರ್ಥ:ವ|| ಹಾಗೆ ಒಡ್ಡಿರುವ ಸೈನ್ಯಗಳ ಎರಡು ಪಕ್ಷದ ನಾಯಕರೂ ತಮ್ಮ ತಮ್ಮ ಕೋಪಾಗ್ನಿಗಳನ್ನೇ ಬೀಸುವಂತೆ (ಯುದ್ಧ ಪ್ರಾರಂಭಸೂಚಕವಾಗಿ) ಕೈಗಳನ್ನು ಬೀಸಿದರು, ಆಗ-
ಚಂ|| ಕರದಸಿಗಳ್ ಪಳಂಚೆ ಕಿಡಿವಿಟ್ಟೊಗೆದೊಳ್ಗಿಡಿ ತಾರಕಾಳಿಯಂ
ತಿರೆ ರಜಮೊಡ್ಡಿನಿಂದ ಮುಗಿಲಂತಿರೆ ಬಾಳುಡಿ ಪಾಱುವುಳ್ಕದಂ|
ತಿರೆ ತಡಮಾದುದಂಬರದೊಳಂಬರಮೆಂಬಿನೆಗಂ ಜಗತ್ರಯಂ
ಬರಮೆಸೆವಂತು ತಳ್ತಿಱಿದುವಂದೆರಡುಂ ಬಲಮುಗ್ರಕೋಪದಿಂ|| ೧೧೧||
ಪದ್ಯ-೧೧೧:ಪದವಿಭಾಗ-ಅರ್ಥ:ಕರದ ಅಸಿಗಳ್ ಪಳಂಚೆ ಕಿಡಿವಿಟ್ಟು ಒಗೆದ ಒಳ್ಗಿಡಿ (ಕಯ್ಯಲ್ಲಿರುವ ಕತ್ತಿಗಳು ಒಂದಕ್ಕೊಂದು ತಗಲಲು ಕಿಡಿಗಳನ್ನು ಹಾರಿಸಿ ಹುಟ್ಟಿದ ಒಳ್ಳೆಯ ಕಿಡಿಗಳು) ತಾರಕಾಳಿಯಂತಿರೆ (ನಕ್ಷತ್ರಸಮೂಹದಂತೆ ಕಾಣಿಸಲು,) ರಜಮ್ ಒಡ್ಡಿನಿಂದ ಮುಗಿಲಂತಿರೆ (ಧೂಳು ತುಂಬಿಕೊಂಡು ಮೋಡದಂತಿರಲು,) ಬಾಳುಡಿ ಪಾಱುವ ಉಳ್ಕದಂತಿರೆ (ಕತ್ತಿಯ ಚೂರುಗಳು ಹಾರುವ ಉಲ್ಕೆದ ಹಾಗಿರಲು,) ತಡಮಾದುದು ಅಂಬರದೊಳಂಬರಂ ಎಂಬಿನೆಗಂ ( ಆಕಾಶದಲ್ಲಿ ಮತ್ತೊಂದು ಆಕಾಶಕ್ಕೆ ಸಮವಾಯಿತು- ತಡಂ- ತರಂ/ ತೆರಂ) ಜಗತ್ರಯಂಬರಂ ಎಸೆವಂತು (ಮೂರುಲೋಕದವರೆಗೆ ಪ್ರಕಾಶಮಾನವಾಗುವ ಹಾಗೆ ) ತಳ್ತು ಇಱಿದುವು ಅಂದು ಎರಡುಂ ಬಲಂ ಉಗ್ರಕೋಪದಿಂ (ಎರಡು ಸೈನ್ಯಗಳು ಉಗ್ರವಾದ ಕೋಪದಿಂದ ತಾಗಿ ಯುದ್ಧಮಾಡಿದುವು.)
ಪದ್ಯ-೧೧೧:ಅರ್ಥ: ಕಯ್ಯಲ್ಲಿರುವ ಕತ್ತಿಗಳು ಒಂದಕ್ಕೊಂದು ತಗಲಲು ಕಿಡಿಗಳನ್ನು ಹಾರಿಸಿ ಹುಟ್ಟಿದ ಒಳ್ಳೆಯ ಕಿಡಿಗಳು ನಕ್ಷತ್ರಸಮೂಹದಂತೆ ಕಾಣಿಸಿದುವು. ಧೂಳು ತುಂಬಿಕೊಂಡು ಮೋಡದಂತಿದ್ದುವು. ಕತ್ತಿಯ ಚೂರುಗಳು ಹಾರುವ ಉಲ್ಕೆದ ಹಾಗಿತ್ತು. ಆಕಾಶದಲ್ಲಿ ಮತ್ತೊಂದು ಆಕಾಶಕ್ಕೆ ಸಮವಾಯಿತು ಎನ್ನುವ ಹಾಗೆ ಮೂರುಲೋಕದವರೆಗೆ ಪ್ರಕಾಶಮಾನವಾಗುವ ಹಾಗೆ ಎರಡು ಸೈನ್ಯಗಳು ಉಗ್ರವಾದ ಕೋಪದಿಂದ ತಾಗಿ ಯುದ್ಧಮಾಡಿದುವು.
ವ|| ಅನ್ನೆಗಂ ದುಯೋಧನಂಗಾಪ್ತರಪ್ಪ ಸಂಸಪ್ತಕರತಿರಥಮಥನನ ರಥಮಂ ತಮ್ಮತ್ತ ತೆಗೆಯಲೊಡಮವರ ರಥಕ್ಕೆ ಮದಾಂಧ ಗಂಧಸಿಂಧುರದಂತಮ್ಮನ ಗಂಧವಾರಣಂ ಪರಿದು-
ವಚನ:ಪದವಿಭಾಗ-ಅರ್ಥ:ಅನ್ನೆಗಂ ದುಯೋಧನಂಗೆ ಆಪ್ತರಪ್ಪ ಸಂಸಪ್ತಕರು (ಅಷ್ಟರಲ್ಲಿ ದುರ್ಯೋಧನನಿಗಾಪ್ತರಾದ ಸಂಸಪ್ತಕರು) ಅತಿರಥಮಥನನ ರಥಮಂ ತಮ್ಮತ್ತ ತೆಗೆಯಲೊಡಂ (ಅತಿರಥಮಥನನಾದ ಅರ್ಜುನನ ತೇರನ್ನು ತಮ್ಮಕಡೆ ತೆಗೆಯಿಸಿಕೊಂಡು ಹೋಗಲು) ಅವರ ರಥಕ್ಕೆ ಮದಾಂಧ ಗಂಧಸಿಂಧುರದಂತ ಅಮ್ಮನ ಗಂಧವಾರಣಂ ಪರಿದು (ಅಮ್ಮು- ಸಾಮರ್ಥ್ಯ; ಅಮ್ಮನ/ ಸಮರ್ಥ ಗಂಧವಾರಣನಾದ ಅರ್ಜುನನು ಅವರ ರಥಕ್ಕೆ ಅಭಿಮುಖವಾಗಿ ಮದದಿಂದ ಕುರುಡಾದ ಶ್ರೇಷ್ಠವಾದ ಆನೆಯಂತೆ ನುಗ್ಗಿದನು)-
ವಚನ:ಅರ್ಥ:ಅಷ್ಟರಲ್ಲಿ ದುರ್ಯೋಧನನಿಗಾಪ್ತರಾದ ಸಂಸಪ್ತಕರು ಅತಿರಥಮಥನನಾದ ಅರ್ಜುನನ ತೇರನ್ನು ತಮ್ಮಕಡೆ ತೆಗೆಯಿಸಿಕೊಂಡು ಹೋಗಲು ಅಮ್ಮನ ಗಂಧವಾರಣನಾದ ಅರ್ಜುನನು ಅವರ ರಥಕ್ಕೆ ಅಭಿಮುಖವಾಗಿ ಮದದಿಂದ ಕುರುಡಾದ ಶ್ರೇಷ್ಠವಾದ ಆನೆಯಂತೆ ನುಗ್ಗಿದನು.
ಚಂ|| ಪಱಿಪಡದಾಯ್ತು ಭಾರತಮಿವಂದಿರ ಕಾರಣದಿಂದಿವಂದಿರಂ
ಪಱಿಪಡೆ ಕೊಂದು ಕರ್ಣನೊಳೆ ಕಾದಲೆಮೇೞ್ಕುಮಮೋಘಮೆಂದು ಕೆಂ|
ಗಱಿಗಳ ಪಾರೆಯಂಬುಗಳೊಳೂಱಿ ಕಱುತ್ತಿಸೆ ಬಿೞ್ದರೆಯ್ದೆ ಪ
ರ್ದೆಱಗೆ ಸುರುಳ್ದು ಬೀೞ್ವ ಕಿಱುವಕ್ಕಿವೊಲುಗ್ರ ವಿರೋಧಿನಾಯಕರ್| ೧೧೨ ||
ಪದ್ಯ-೧೧೨+:ಪದವಿಭಾಗ-ಅರ್ಥ:ಪಱಿಪಡದಾಯ್ತು ಭಾರತಂ ಇವಂದಿರ ಕಾರಣದಿಂದ (ಸಂಸಪ್ತಕರಿಂದ ಈ ಭಾರತಯುದ್ದವು ನಿಷ್ಕರ್ಷಯಾಗದೆ (ಮುಗಿಯದೇ) ಇದೆ) ಇವಂದಿರಂ ಪಱಿಪಡೆ ಕೊಂದು ಕರ್ಣನೊಳೆ ಕಾದಲೆಮೇೞ್ಕುಂ (ಇವರನ್ನು ಕತ್ತರಿಸಿ ಬೀಳುವಂತೆ ಕೊಂದು ಆಮೇಲೆ ಬೆಲೆಯೇ ಇಲ್ಲದ ರೀತಿಯಲ್ಲಿ (ಅದ್ಭುತವಾಗಿ) ಕರ್ಣನಲ್ಲಿ ಕಾದಲೇಬೇಕು ಎಂದು) ಮಮೋಘಮೆಂದು ಕೆಂಗಱಿಗಳ ಪಾರೆಯಂಬುಗಳೊಳೂಱಿ ಕಱುತ್ತಿಸೆ (ಕೆಂಪಾದ ಗರಿಗಳನ್ನುಳ್ಳ ಹಾರೆಯಂತಿರುವ ಬಾಣಗಳನ್ನು ನಾಟಿ ಗುರಿಯಿಟ್ಟು ಹೊಡೆಯಲು) ಬಿೞ್ದರು ಎಯ್ದೆ ಪರ್ದೆಱಗೆ(ಹದ್ದು ಎರಗಿದಾಗ) ಸುರುಳ್ದು ಬೀೞ್ವ (ಶತ್ರುನಾಯಕರು ಸುರುಳಿಕೊಂಡು ಬೀಳುವ ಹಾಗೆ ಬಿದ್ದರು.) ಕಿಱುವಕ್ಕಿವೊಲ್ ಉಗ್ರ ವಿರೋಧಿನಾಯಕರ್ (ಹದ್ದು ಎರಗಿದಾಗ ಸಣ್ಣ ಹಕ್ಕಿಗಳು ಸುರುಳಿಕೊಂಡು ಬೀಳುವ ಹಾಗೆ ವಿರೋಧಿನಾಯಕರು ಬಿದ್ದರು. )
ಪದ್ಯ-೧೧೨:ಅರ್ಥ:ಸಂಸಪ್ತಕರಿಂದ ಈ ಭಾರತಯುದ್ದವು ನಿಷ್ಕರ್ಷಯಾಗದೆ (ಮುಗಿಯದೇ) ಇದೆ. ಇವರನ್ನು ಕತ್ತರಿಸಿ ಬೀಳುವಂತೆ ಕೊಂದು ಆಮೇಲೆ ಬೆಲೆಯೇ ಇಲ್ಲದ ರೀತಿಯಲ್ಲಿ (ಅದ್ಭುತವಾಗಿ) ಕರ್ಣನಲ್ಲಿ ಕಾದಲೇಬೇಕು ಎಂದು ಕೆಂಪಾದ ಗರಿಗಳನ್ನುಳ್ಳ ಹಾರೆಯಂತಿರುವ ಬಾಣಗಳನ್ನು ನಾಟಿ ಗುರಿಯಿಟ್ಟು ಹೊಡೆಯಲು ಶತ್ರುನಾಯಕರು ರಭಸದಿಂದ ಹದ್ದು ಎರಗಿದಾಗ ಸಣ್ಣ ಹಕ್ಕಿಗಳು ಸುರುಳಿಕೊಂಡು ಬೀಳುವ ಹಾಗೆ ವಿರೋಧಿನಾಯಕರು ಬಿದ್ದರು.
ಕಂ|| ಕೞಕುೞಮಾದ ರಥಂಗಳಿ
ನೞಿದರಿಭಟರಿಂ ಸುರುಳ್ದ ಮದಗಜಘಟೆಯಿಂ|
ಸುೞಿಸುೞಿದೊಡವರಿದುದು ಕ
ಲ್ವೞಿಯೊಳ್ ಭೋರ್ಗರೆವ ತೊಯವೋಲ್ ರುಧಿರಜಳಂ|| ೧೧೩ ||
ಪದ್ಯ-೧೧೩:ಪದವಿಭಾಗ-ಅರ್ಥ:ಕೞಕುೞಮಾದ ರಥಂಗಳಿನು ಅೞಿದ ಅರಿಭಟರಿಂ ಸುರುಳ್ದ ಮದಗಜಘಟೆಯಿಂ (ಅಸ್ತವ್ಯಸ್ತವಾದ ರಥಗಳಿಂದಲೂ ಸತ್ತ ಶತ್ರುವೀರರಿಂದಲೂ ಸುರುಳಿಗೊಂಡು ಬಿದ್ದ ಮದ್ದಾನೆಗಳಿಂದಲೂ) ಸುೞಿಸುೞಿದು ಒಡವರಿದುದು ಕಲ್ವೞಿಯೊಳ್ (ಸುಳಿಸುಳಿಯಾಗಿ ಜೊತೆಯಲ್ಲಿಯೇ ಹರಿಯಿತು.) ಭೋರ್ಗರೆವ ತೊಯವೋಲ್ ರುಧಿರಜಳಂ ( ಭೋರೆಂದು ಶಬ್ದ ಮಾಡುತ್ತ ಕಲ್ಲುಗಳಿಂದ ಕೂಡಿರುವ ಪಾತ್ರದಲ್ಲಿ ಹರಿಯುವ ನದಿಯಂತೆ ರಕ್ತಪ್ರವಾಹವು- ಹರಿಯಿತು)
ಪದ್ಯ-೧೧೩:ಅರ್ಥ: ಅಸ್ತವ್ಯಸ್ತವಾದ ರಥಗಳಿಂದಲೂ ಸತ್ತ ಶತ್ರುವೀರರಿಂದಲೂ ಸುರುಳಿಗೊಂಡು ಬಿದ್ದ ಮದ್ದಾನೆಗಳಿಂದಲೂ ರಕ್ತಪ್ರವಾಹವು ಭೋರೆಂದು ಶಬ್ದ ಮಾಡುತ್ತ ಕಲ್ಲುಗಳಿಂದ ಕೂಡಿರುವ ಪಾತ್ರದಲ್ಲಿ ಹರಿಯುವ ನದಿಯಂತೆ ಸುಳಿಸುಳಿಯಾಗಿ ಜೊತೆಯಲ್ಲಿಯೇ ಹರಿಯಿತು.
ಪಿರಿದು ಪೊಗೞಿಸಿದ ಪಾಡಿಸಿ
ದರಿಯರನಾನಲ್ಕೆ ಪಿರಿಯರಂ ಪೂಣಿಗರಂ|
ಬಿರುದರನದಟಿನೊಳುಬ್ಬರ
ಮುರಿವರನಾಯ್ದಱಸಿ ಕೊಂಡುವರಿಗನ ಕಣೆಗಳ್|| ೧೧೪ ||
ಪದ್ಯ-೧೧೪:ಪದವಿಭಾಗ-ಅರ್ಥ:ಪಿರಿದು ಪೊಗೞಿಸಿದ ಪಾಡಿಸಿದ ಅರಿಯರನು ಆನಲ್ಕೆ ಪಿರಿಯರಂ(ಹಿರಿದಾಗಿ ಹೊಗಳಿಸಿಕೊಂಡವರು ಹಾಡಿಸಿಕೊಂಡವರು ಎದುರಿಸಲು ಅಸಾಧ್ಯರಾದ ಬಲಿಷ್ಠರು) ಪೂಣಿಗರಂ ಬಿರುದರನು ಅದಟಿನೊಳ್ ಉಬ್ಬರಂ ಉರಿವರಂ (ಪ್ರತಿಜ್ಞೆಮಾಡಿದವರು ಬಿರುದುಳ್ಳವರು ಪರಾಕ್ರಮದಿಂದ ವಿಶೇಷವಾಗಿ ಉರಿಯುತ್ತಿರುವವರು) ಆಯ್ದಱಸಿ ಕೊಂಡುವು ಅರಿಗನ ಕಣೆಗಳ್ (ಮೊದಲಾದವರನ್ನೆಲ್ಲ ಅರ್ಜುನನ ಬಾಣಗಳು ಬಲಿತೆಗೆದುಕೊಂಡವು.)
ಪದ್ಯ-೧೧೪:ಅರ್ಥ: ಹಿರಿದಾಗಿ ಹೊಗಳಿಸಿಕೊಂಡವರು ಹಾಡಿಸಿಕೊಂಡವರು ಎದುರಿಸಲು ಅಸಾಧ್ಯರಾದವರು ಪ್ರತಿಜ್ಞೆಮಾಡಿದವರು ಬಿರುದುಳ್ಳವರು ಪರಾಕ್ರಮದಿಂದ ವಿಶೇಷವಾಗಿ ಉರಿಯುತ್ತಿರುವವರು ಮೊದಲಾದವರನ್ನೆಲ್ಲ ಅರ್ಜುನನ ಬಾಣಗಳು ಬಲಿತೆಗೆದುಕೊಂಡವು.
ಕಣೆ ಕೊಳೆ ಪಱಿದರಿ ನರಪರ
ಕಣೆಕಾಲ್ಗಳ್ ಬೆರಲ ರತ್ನಮುದ್ರಿಕೆಗಳ ಸಂ|
ದಣಿಯ ಬೆಳಗುಗಳಿನೆಸೆದುವು
ರಣರಂಗದೊಳಯ್ದುಪೆಡೆಯ ನಾಗಂಗಳವೋಲ್|| ೧೧೫ ||
ಪದ್ಯ-೧೧೫:ಪದವಿಭಾಗ-ಅರ್ಥ:ಕಣೆ ಕೊಳೆ (ಹೀಗೆ ಅರ್ಜುನನ ಬಾಣಗಳು ತಾಗಿಕೊಳ್ಳಲು) ಪಱಿದ ಅರಿನರಪರ ಕಣೆಕಾಲ್ಗಳ್ ಬೆರಲ ರತ್ನಮುದ್ರಿಕೆಗಳ ಸಂದಣಿಯ (ಕತ್ತರಿಸಿಬಿದ್ದಿದ್ದ ಶತ್ರುರಾಜರ ಅಡಿಯ ಕಾಲುಗಳ ಬೆರಳಿನ ರತ್ನಗದುಂಗುರಗಳ ಬೆಳಗಿನ ಸಮೂಹದಿಂದ) ಬೆಳಗುಗಳಿಂ ಎಸೆದುವು (ಬೆಳಗಿನಂತೆ ಕಾಂತಿಯಿಂದ ಪ್ರಕಾಶಿಸಿದವು; ಹೇಗೆಂದರೆ) ರಣರಂಗದೊಳ್ ಅಯ್ದುಪೆಡೆಯ ನಾಗಂಗಳವೋಲ್ (ಯುದ್ಧರಂಗದಲ್ಲಿ ಅಯ್ದು ಹೆಡೆಯ ಹಾವುಗಳ ಹಾಗೆ ಪ್ರಕಾಶಿಸಿದುವು. - ಹೆಡೆಯಲ್ಲಿ ರತ್ನವನ್ನು ಹೊಂದಿದ ನಾಗಗಳಂತೆ)
ಪದ್ಯ-೧೧೫:ಅರ್ಥ: ಹೀಗೆ ಅರ್ಜುನನ ಬಾಣಗಳು ತಾಗಿಕೊಳ್ಳಲು ಕತ್ತರಿಸಿಬಿದ್ದಿದ್ದ ಶತ್ರುರಾಜರ ಅಡಿಯ ಕಾಲುಗಳ ಬೆರಳಿನ ರತ್ನಗದುಂಗುರಗಳಿಂದ ಬೆಳಗಿನಂತೆ ಕಾಂತಿಯಿಂದ ಪ್ರಕಾಶಿಸಿದವು; ಹೇಗೆಂದರೆ ಸಮೂಹದಿಂದ ಯುದ್ಧರಂಗದಲ್ಲಿ ಅಯ್ದು ಹೆಡೆಯ ಹಾವುಗಳ ಹಾಗೆ ಪ್ರಕಾಶಿಸಿದುವು. ಹೆಡೆಯಲ್ಲಿ ರತ್ನವನ್ನು ಹೊಂದಿದ ನಾಗಗಳಂತೆ
ಆಗಳ್ ವಿಜಯನ ವೀರ
ಶ್ರೀಗೆ ಕರಂ ಕಿನಿಸಿ ಕಲಿ ಸುಶರ್ಮಂ ಮೆಯ್ಯೊಳ್|
ತಾಗೆ ಪಗೆ ನೀಗೆ ತಲೆಯಂ
ಪೋಗೆಚ್ಚನದೊಂದು ಪರಸು ದಾರುಣಶರದಿಂ|| ೧೧೬ ||
ಪದ್ಯ-೧೧೬:ಪದವಿಭಾಗ-ಅರ್ಥ:ಆಗಳ್ ವಿಜಯನ ವೀರಶ್ರೀಗೆ ಕರಂ ಕಿನಿಸಿ ಕಲಿ ಸುಶರ್ಮಂ ಮೆಯ್ಯೊಳ್ (ಸ್ವತಃ, ತಾನೇ) ತಾಗೆ (ಆಗ ಅರ್ಜುನನ ಶೌರ್ಯದ ಮಹತ್ವಕ್ಕೆ (ವಿಜಯಲಕ್ಷ್ಮಿಗೆ) ವಿಶೇಷವಾಗಿ ಕೋಪಿಸಿಕೊಂಡು ಶೂರನಾದ ಸುಶರ್ಮನು ತಾನೇ ಎದುರಿಸಲು,) ಪಗೆ ನೀಗೆ ತಲೆಯಂ ಪೋಗೆ ಎಚ್ಚನು ಅದೊಂದು ಪರಸು ದಾರುಣಶರದಿಂ (ದ್ವೇಷವು ತೀರುವಂತೆ ಒಂದು ಕೊಡಲಿಯಂತಿರುವ ಕ್ರೂರವಾದ ಬಾಣದಿಂದ ತಲೆಯು ಕತ್ತರಿಸಿ ಹೋಗುವ ಹಾಗೆ ಹೊಡೆದನು.)
ಪದ್ಯ-೧೧೬:ಅರ್ಥ: ಆಗ ಅರ್ಜುನನ ಶೌರ್ಯದ ಮಹತ್ವಕ್ಕೆ (ವಿಜಯಲಕ್ಷ್ಮಿಗೆ) ವಿಶೇಷವಾಗಿ ಕೋಪಿಸಿಕೊಂಡು ಶೂರನಾದ ಸುಶರ್ಮನು ತಾನೇ ಎದುರಿಸಲು (ಮೇಲೆ ಬೀಳಲು) (ಅರ್ಜುನನು) ದ್ವೇಷವು ತೀರುವಂತೆ ಒಂದು ಕೊಡಲಿಯಂತಿರುವ ಕ್ರೂರವಾದ ಬಾಣದಿಂದ ತಲೆಯು ಕತ್ತರಿಸಿ ಹೋಗುವ ಹಾಗೆ ಹೊಡೆದನು.
ವ|| ಅಂತು ಸಂಸಪ್ತಕಬಲಕ್ಕಾಳ್ದನಾಗಿರ್ದ ಸುಶರ್ಮನಂ ರಾವಣನಂ ರಾಘವಂ ಕೊಲ್ವಂತೆ ವಿದ್ವಿಷ್ಟವಿದ್ರಾವಣಂ ಕೊಂದೊಡುೞಿದ ನಾಯಕರೆಲ್ಲರ್ ತಮ್ಮಾಳ್ದನ ಸಾವಂ ಕಂಡು ರಿಪುಕುರಂಗ ರಾವಣನನ್ನು ಕಂಠಿರವನಂ ಮಾರ್ಕೊಂಡು ಕಾದುತ್ತಿರ್ದರನ್ನೆಗಮಿತ್ತ ಕರ್ಣನುಮುದೀರ್ಣವೀರ ರಸಾಸ್ವಾದನಲಂಪಟನಾಗಿ ನೀಮೆಲ್ಲಮಿಂದೆನ್ನ ಕಾಳೆಗಮಂ ಸುರಿಗೆಗಾಳೆಗಮಂ ನೋೞ್ಪಂತೆ ನೋೞ್ಪುದೆಂದು ಕೌರವಬಲದ ನಾಯಕರೆಲ್ಲರುಮನೊಡ್ಡಿ ಪಾಂಡವಬಲಕ್ಕೆ ಮಿೞ್ತು ಬರ್ಪಂತೆ ಬಂದು ತಾಗಿದಾಗಳ್ ತನಗಿದಿರೊಳದಿರದಾಂತ ಸೋಮಕ ಶ್ರೀಜಯ ಪ್ರಮುಖ ಕೋಸಲಾಶ ಸೈನ್ಯಂಗಳನಲ್ಲಕಲ್ಲೋಲಂ ಮಾಡಿ ಪೆಸರಱಿಕೆಯ ನಾಯಕರನಱುವತ್ತು ಸಾಸಿರ್ವರನೊರ್ವನಂ ಕೊಲ್ವಂತೆ ಕೊಂದು ನಿಟ್ಟಾಲಿಗೊಂಡು ಯುಷ್ಠಿರನಂ ಮುಟ್ಟೆವಂದಾಗಳ್-
ವಚನ:ಪದವಿಭಾಗ-ಅರ್ಥ:ಅಂತು ಸಂಸಪ್ತಕಬಲಕ್ಕಾಳ್ದನಾಗಿರ್ದ ಸುಶರ್ಮನಂ ರಾವಣನಂ ರಾಘವಂ ಕೊಲ್ವಂತೆ ವಿದ್ವಿಷ್ಟವಿದ್ರಾವಣಂ ಕೊಂದೊಡೆ (ಹಾಗೆ ಸಂಸಪ್ತಕರ ಸೈನ್ಯಕ್ಕೆ ಯಜಮಾನನಾಗಿದ್ದ (ಒಡೆಯನಾಗಿದ್ದ) ಸುಶರ್ಮನನ್ನು, ರಾಮನು ಕೊಂದಹಾಗೆ ವಿದ್ವಿಷ್ಟವಿದ್ರಾವಣನಾದ ಅರ್ಜುನನು ಕೊಲ್ಲಲು) ಉೞಿದ ನಾಯಕರೆಲ್ಲರ್ ತಮ್ಮಾಳ್ದನ ಸಾವಂ ಕಂಡು (ಉಳಿದ ನಾಯಕರೆಲ್ಲ ತಮ್ಮ ಯಜಮಾನನ ಸಾವನ್ನು ನೋಡಿ) ರಿಪುಕುರಂಗ ರಾವಣನನ್ನು?? ಕಂಠಿರವನಂ ಮಾರ್ಕೊಂಡು ಕಾದುತ್ತಿರ್ದರು (ಶತ್ರುಗಳೆಂಬ ಜಿಂಕೆಗಳಿಗೆ ಸಿಂಹದ ಹಾಗಿರುವ ಅರ್ಜುನನನ್ನು ಎದುರಿಸಿ ಯುದ್ಧಮಾಡುತ್ತಿದ್ದರು.) ಅನ್ನೆಗಮಿತ್ತ ಕರ್ಣನುಂ ಉದೀರ್ಣವೀರ ರಸಾಸ್ವಾದನ ಲಂಪಟನಾಗಿ ನೀಮೆಲ್ಲಂ ಇಂದೆಉ ಎನ್ನ ಕಾಳೆಗಮಂ (ಅಷ್ಟರಲ್ಲಿ ಈ ಕಡೆ ಕರ್ಣನು ಹೆಚ್ಚುತ್ತಿರುವ ವೀರರಸವನ್ನು ರುಚಿನೋಡುವುದರಲ್ಲಿ ಆಸಕ್ತನರಾಗಿ ನೀವೆಲ್ಲರೂ ಈ ದಿವಸ ನನ್ನ ಯುದ್ಧವನ್ನು) ಸುರಿಗೆಗಾಳೆಗಮಂ ನೋೞ್ಪಂತೆ (ಸಣ್ಣ ಕತ್ತಿಯ ದ್ವಂದ್ವಯುದ್ಧವನ್ನು ನೋಡುವ ಹಾಗೆ) ನೋೞ್ಪುದೆಂದು (ನೀವೆಲ್ಲರೂ ಈ ದಿವಸ ನನ್ನ ಯುದ್ಧವನ್ನು ಸಣ್ಣ ಕತ್ತಿಯ ದ್ವಂದ್ವಯುದ್ಧವನ್ನು ನೋಡುವ ಹಾಗೆ ನೋಡುವುದು) ಕೌರವಬಲದ ನಾಯಕರೆಲ್ಲರುಮನು ಒಡ್ಡಿ (ಕೌರವಸೈನ್ಯದ ನಾಯಕರೆಲ್ಲರನ್ನೂ ಒಟ್ಟುಗೂಡಿಸಿ ಎದುರಿಸಿ,) ಪಾಂಡವಬಲಕ್ಕೆ ಮಿೞ್ತು ಬರ್ಪಂತೆ ಬಂದು ತಾಗಿದಾಗಳ್ (ಪಾಂಡವ ಸೈನ್ಯದ ಮೃತ್ಯು ಬರುವ ಹಾಗೆ ಬಂದು ಮೇಲೆಬಿದ್ದಾಗ-) ತನಗೆ ಇದಿರೊಳ್ ಇದಿರದಾಂತ ಸೋಮಕ ಶ್ರೀಜಯ ಪ್ರಮುಖ ಕೋಸಲಾಶ ಸೈನ್ಯಂಗಳನು ಅಲ್ಲಕಲ್ಲೋಲಂ ಮಾಡಿ (ತನ್ನ ಎದುರಿಗೆ ಭಯಪಡದೆ ಪ್ರತಿಭಟಿಸಿದ ಸೋಮಕ ಶ್ರೀಜಯರೇ ಮುಖ್ಯರಾದ ಕೋಸಲದೇಶದ ರಾಜರುಗಳ ಸೈನ್ಯವನ್ನೆಲ್ಲ ಚದುರಿಸಿದನು) ಪೆಸರಱಿಕೆಯ ನಾಯಕರನು ಅಱುವತ್ತು ಸಾಸಿರ್ವರನು ಒರ್ವನಂ ಕೊಲ್ವಂತೆ ಕೊಂದು (ಹೆಸರಿನಿಂದಲೇ ಪ್ರಸಿದ್ಧರಾದ ಅರವತ್ತುಸಾವಿರ ನಾಯಕರನ್ನು ಒಬ್ಬನನ್ನು ಕೊಲ್ಲುವ ಹಾಗೆ ಸುಲಭವಾಗಿ ಕೊಂದು) ನಿಟ್ಟಾಲಿಗೊಂಡು ಯುಷ್ಠಿರನಂ ಮುಟ್ಟೆವಂದಾಗಳ್ (ದೀರ್ಘವಾಗಿ ದಿಟ್ಟಿಸಿನೋಡಿ ಧರ್ಮರಾಯನನ್ನು ಮುಟ್ಟುವಷ್ಟು ಸಮೀಪಕ್ಕೆ ಬಂದಾಗ-. )-
ವಚನ:ಅರ್ಥ: ಹಾಗೆ ಸಂಸಪ್ತಕರ ಸೈನ್ಯಕ್ಕೆ ಯಜಮಾನನಾಗಿದ್ದ (ಒಡೆಯನಾಗಿದ್ದ) ಸುಶರ್ಮನನ್ನು, ರಾಮನು ಕೊಂದಹಾಗೆ ವಿದ್ವಿಷ್ಟವಿದ್ರಾವಣನಾದ ಅರ್ಜುನನು ಕೊಲ್ಲಲು ಉಳಿದ ನಾಯಕರೆಲ್ಲ ತಮ್ಮ ಯಜಮಾನನ ಸಾವನ್ನು ನೋಡಿ ಶತ್ರುಗಳೆಂಬ ಜಿಂಕೆಗಳಿಗೆ ಸಿಂಹದ ಹಾಗಿರುವ ಅರ್ಜುನನನ್ನು ಎದುರಿಸಿ ಯುದ್ಧಮಾಡುತ್ತಿದ್ದರು. ಅಷ್ಟರಲ್ಲಿ ಈ ಕಡೆ ಕರ್ಣನು ಹೆಚ್ಚುತ್ತಿರುವ ವೀರರಸವನ್ನು ರುಚಿನೋಡುವುದರಲ್ಲಿ ಆಸಕ್ತರಾಗಿ, ನೀವೆಲ್ಲರೂ ಈ ದಿವಸ ನನ್ನ ಯುದ್ಧವನ್ನು ಸಣ್ಣ ಕತ್ತಿಯ ದ್ವಂದ್ವಯುದ್ಧವನ್ನು ನೋಡುವ ಹಾಗೆ ನೋಡುವುದು ಎಂದು ಕೌರವಸೈನ್ಯದ ನಾಯಕರೆಲ್ಲರನ್ನೂ ಒಟ್ಟುಗೂಡಿಸಿ ಪಾಂಡವ ಸೈನ್ಯದ ಮೃತ್ಯು ಬರುವ ಹಾಗೆ ಬಂದು ತಾಗಿದನು. ತನ್ನ ಎದುರಿಗೆ ಭಯಪಡದೆ ಪ್ರತಿಭಟಿಸಿದ ಸೋಮಕ ಶ್ರೀಜಯರೇ ಮುಖ್ಯರಾದ ಕೋಸಲದೇಶದ ರಾಜರುಗಳ ಸೈನ್ಯವನ್ನೆಲ್ಲ ಚದುರಿಸಿದನು. ಹೆಸರಿನಿಂದಲೇ ಪ್ರಸಿದ್ಧರಾದ ಅರವತ್ತುಸಾವಿರ ನಾಯಕರನ್ನು ಒಬ್ಬನನ್ನು ಕೊಲ್ಲುವ ಹಾಗೆ ಸುಲಭವಾಗಿ ಕೊಂದು, ದೀರ್ಘವಾಗಿ ದಿಟ್ಟಿಸಿನೋಡಿ ಧರ್ಮರಾಯನನ್ನು ಮುಟ್ಟುವಷ್ಟು ಸಮೀಪಕ್ಕೆ ಬಂದಾಗ-.

ಧರ್ಮರಾಯನಿಗೆ ಕರ್ಣನ ಬಾಣದಿಂದ ಮೂರ್ಛೆ[ಸಂಪಾದಿಸಿ]

ಚಂ|| ಯಮಸುತನಣ್ಮಿ ಸತ್ತೆಯೆನುತುಂ ನಿಶಿತಾಸ್ತ್ರಮನುರ್ಚಿಕೊಂಡು ವ
ಕ್ಷಮನಿರದೆಚ್ಚಡೆಚ್ಚ ಶರಮಂ ಕಲಿ ಚಕ್ಕನೆ ಕಿೞ್ತುರಪ್ರದೇ||
ಶಮನಿಸೆ ನೆತ್ತರೊಕ್ಕು ಪತಿ ಮುಚ್ಚೆಯೊಳಿಚ್ಚೆಯೆಗೆಟ್ಟು ಜೋಲ್ದೊಡಾ
ದಮೆ ನಸುನೊಂದು ನಂದಿಸದೆ ತನ್ನನೆ ನಿಂದಿಸಿದಂ ದಿನೇಶಜಂ|| ೧೧೭ ||
ಪದ್ಯ-೧೧೭:ಪದವಿಭಾಗ-ಅರ್ಥ:ಯಮಸುತನು ಅಣ್ಮಿ (ಧರ್ಮರಾಜನು ಪೌರರುಷದಿಂದ) ಸತ್ತೆಯೆನುತುಂ ನಿಶಿತಾಸ್ತ್ರಮನು ಉರ್ಚಿಕೊಂಡು (ನೀನು ಸತ್ತೆ ಎನ್ನುತ್ತ ಹರಿತವಾದ ಬಾಣವನ್ನು ಸೆಳೆದುಕೊಂಡು) ವಕ್ಷಮನು (ವಕ್ಷ- ಎದೆ) ಇರದೆ ಎಚ್ಚಡೆ (ನೀನು ಸತ್ತೆ ಎನ್ನುತ್ತ ಹರಿತವಾದ ಬಾಣವನ್ನು ಸೆಳೆದುಕೊಂಡು ತಡೆಯದೆ ಎದೆಗೆ ಹೊಡೆದನು.) ಎಚ್ಚ ಶರಮಂ ಕಲಿ ಚಕ್ಕನೆ ಕಿೞ್ತು ಉರಪ್ರದೇಶಮನು ಇಸೆ (ಹೊಡೆದ ಆ ಬಾಣವನ್ನು ಶೂರನಾದ ಕರ್ಣನು ಚಕ್ಕನೆ ಕಿತ್ತು, ಧರ್ಮರಾಜನ ಹೃದಯ ಪ್ರವೇಶವನ್ನು ಹೊಡೆಯಲಾಗಿ) ನೆತ್ತರು ಉಕ್ಕು ಪತಿ (ರಕ್ತವು ಸುರಿದು ಧರ್ಮರಾಜನು) ಮುಚ್ಚೆಯೊಳು ಇಚ್ಚೆಯೆಗೆಟ್ಟು (ಮೂರ್ಛೆಯಲ್ಲಿ- ಮೈಮರೆತು ಎಚ್ಚರತಪ್ಪಿ) ಜೋಲ್ದೊಡೆ (ಜೋತುಬೀಳಲು) ಆದಮೆ (ಅದರಿಂದ?) ನಸುನೊಂದು ನಂದಿಸದೆ (ಕೊಲ್ಲದೆ) ತನ್ನನೆ ನಿಂದಿಸಿದಂ ದಿನೇಶಜಂ- ಕರ್ಣನು, (ಕರ್ಣನು ಸ್ವಲ್ಪ ವ್ಯಥೆಪಟ್ಟು ಪೂರ್ಣವಾಗಿ ಕೊಲ್ಲದೆ ತನ್ನನ್ನೇ ತಾನು ನಿಂದಿಸಿಕೊಂಡನು)
ಪದ್ಯ-೧೧೭:ಅರ್ಥ: ಕರ್ಣನನ್ನು ಕುರಿತು, ಧರ್ಮರಾಜನು ಪೌರರುಷದಿಂದ ನೀನು ಸತ್ತೆ ಎನ್ನುತ್ತ ಹರಿತವಾದ ಬಾಣವನ್ನು ಸೆಳೆದುಕೊಂಡು ತಡೆಯದೆ ಎದೆಗೆ ಹೊಡೆದನು. ಹೊಡೆದ ಆ ಬಾಣವನ್ನು ಶೂರನಾದ ಕರ್ಣನು ಚಕ್ಕನೆ ಕಿತ್ತು ಧರ್ಮರಾಜನ ಹೃದಯ ಪ್ರವೇಶವನ್ನು ಹೊಡೆಯಲಾಗಿ ರಕ್ತವು ಸುರಿದು ಧರ್ಮರಾಜನು ಮೂರ್ಛೆಯಲ್ಲಿ ಮರೆತು ಎಚ್ಚರತಪ್ಪಿ ಜೋತುಬೀಳಲು, ಕರ್ಣನು ಸ್ವಲ್ಪ ವ್ಯಥೆಪಟ್ಟು ಪೂರ್ಣವಾಗಿ ಕೊಲ್ಲದೆ ತನ್ನನ್ನೇ ತಾನು ನಿಂದಿಸಿಕೊಂಡನು-
ವ|| ಅಂತು ಕೊಂತಿಗೆ ನಾಲ್ವರೊಳಾರುಮಂ ಕೊಲ್ಲೆನೆಂದು ನುಡಿದ ತನ್ನ ತನ್ನಿಗೆ ಬನ್ನಂ ಬಂದಪುದೆಂದು ಕರ್ಣಂ ಚಿಂತಿಸುತ್ತಿರ್ದನಿತ್ತಲರಸನಂ ಪೆಱಗಿಕ್ಕಿ ನಕುಳಸಹದೇವರಿರ್ವರುಂ ಬಂದಾಂತೊಡಿವರನೇಗೆಯ್ವುದೆಂದು ಕರುಣಿಸಿ ಶಲ್ಯನ ಮನಮಂ ನೋಡಲೆಂದು ಬೆಸಗೊಂಡೊಡೆ ತನ್ನಳಿಯಂದಿರ ಸಾವಿಂಗಾಱದೆ ಶಲ್ಯನಿಂತೆಂದಂ-
ವಚನ:ಪದವಿಭಾಗ-ಅರ್ಥ: ಅಂತು ಕೊಂತಿಗೆ ನಾಲ್ವರೊಳು ಆರುಮಂ ಕೊಲ್ಲೆನೆಂದು ನುಡಿದ (ಕುಂತೀದೇವಿಗೆ ನಾಲ್ಕು ಜನರಲ್ಲಿ ಯಾರನ್ನೂ ಕೊಲ್ಲುವುದಿಲ್ಲವೆಂದು ಮಾತು ಕೊಟ್ಟಿದ್ದ) ತನ್ನ ತನ್ನಿಗೆ ಬನ್ನಂ ಬಂದಪುದೆಂದು (ತನ್ನ ಸತ್ಯವಾಕ್ಕಿಗೆ ಭಂಗವುಂಟಾಗುತ್ತೆಂದು) ಕರ್ಣಂ ಚಿಂತಿಸುತ್ತಿರ್ದನು ಇತ್ತಲು ಅರಸನಂ ಪೆಱಗಿಕ್ಕಿ ನಕುಳಸಹದೇವರು ಇರ್ವರುಂ ಬಂದು ಆಂತೊಡೆ (ಈ ಕಡೆ ಧರ್ಮರಾಜನನ್ನು ಹಿಂದಕ್ಕೆ ಹಾಕಿ ನಕುಲಸಹದೇವರಿಬ್ಬರೂ ಬಂದು ಎದುರಿಸಲು) ಇವರನು ಏಗೆಯ್ವುದೆಂದು ಕರುಣಿಸಿ (ಇವರನ್ನು ಏನುಮಾಡುವುದು ಎಂದು ದಯೆತೋರಿ) ಶಲ್ಯನ ಮನಮಂ ನೋಡಲೆಂದು (ಶಲ್ಯನ ಮನಸ್ಸನ್ನು ಪರೀಕ್ಷಿಸೋಣವೆಂದು ಅವನನ್ನು ಪ್ರಶ್ನೆಮಾಡಲು) ಬೆಸಗೊಂಡೊಡೆ (ಏನುಮಾಡುವುದು ಎಂದು ಶಲ್ಯನನ್ನು ಪ್ರಶ್ನೆಮಾಡಲು) ತನ್ನಳಿಯಂದಿರ ಸಾವಿಂಗೆ ಆಱದೆ ಶಲ್ಯನು ಇಂತೆಂದಂ (ಶಲ್ಯನು ತನ್ನ ಅಳಿಯಂದಿರಾದ ನಕುಲ ಸಹದೇವರ ಸಾವಿಗೆ ಸೈರಿಸಲಾರದೆ, ಹೀಗೆಂದನು)- (ನಕುಲ ಸಹದೇವರು ಶಲ್ಯನ ತಂಗಿ ಮಾದ್ರಿಯ ಮಕ್ಕಳು.)
ವಚನ:ಅರ್ಥ:ಕುಂತೀದೇವಿಗೆ ನಾಲ್ಕು ಜನರಲ್ಲಿ ಯಾರನ್ನೂ ಕೊಲ್ಲುವುದಿಲ್ಲವೆಂದು ಮಾತು ಕೊಟ್ಟಿದ್ದ ತನ್ನ ಸತ್ಯವಾಕ್ಕಿಗೆ ಭಂಗವುಂಟಾಗುತ್ತೆಂದು ಕರ್ಣನು ಯೋಚಿಸುತ್ತಿದ್ದನು. ಈ ಕಡೆ ಧರ್ಮರಾಜನನ್ನು ಹಿಂದಕ್ಕೆ ಹಾಕಿ ನಕುಲಸಹದೇವರಿಬ್ಬರೂ ಬಂದು ಎದುರಿಸಲು ಇವರನ್ನು ಏನುಮಾಡುವುದು (ತನಗೆ ಮಾನರಲ್ಲದ ಇವರೊಡನೆ ಏನು ಯುದ್ಧಮಾಡುವುದು) ಎಂದು ದಯೆತೋರಿ ಶಲ್ಯನ ಮನಸ್ಸನ್ನು ಪರೀಕ್ಷಿಸೋಣವೆಂದು ಪ್ರಶ್ನೆಮಾಡಲು, ಶಲ್ಯನು ತನ್ನಳಿಯಂದಿರಾದ ನಕುಲಸಹದೇವರ ಸಾವಿಗೆ ಸೈರಿಸಲಾರದೆ ಹೀಗೆಂದನು-
ಚಂ|| ಎರೆದನ ಪೆಂಪುಮಾಂತಧಿಕನಪ್ಪನ ಪೆಂಪುಮನೀವ ಕಾವ ನಿ
ನ್ನೆರಡುಗುಣಂಗಳುಂ ಬಯಸುತಿರ್ಪುವು ನಿನ್ನೊಳಿವಂದಿರೇತರೊಳೊ|
ದೊರೆ ದೊರೆವೆತ್ತ ಕಾಳೆಗದ ಗೆಲ್ಲದ ಸೋಲದ ಮಾತು ನಿನ್ನೊಳಂ
ನರನೊಳಮಿರ್ದುದುಯ್ಗೆ ಸಿಸುಗಳ್ ಸಿಬಿರಕ್ಕೆ ಬೞಲ್ದ ಭೂಪನಂ|| ೧೧೮ ||
ಪದ್ಯ-೧೧೮:ಪದವಿಭಾಗ-ಅರ್ಥ:ಎರೆದನ ಪೆಂಪುಂ (ಎರೆ -ಕೊಡು;ದಾನಮಾಡುವ ಹಿರಿಮೆ )ಆಂತ ಅಧಿಕನ ಅಪ್ಪನ ಪೆಂಪುಮಂ (ಎದುರಿಸಿದವನನ್ನು ಮೀರುವ ಕೀರ್ತಿ,) ಈವ ಕಾವ ನಿನ್ನ ಎರಡುಗುಣಂಗಳುಂ ಬಯಸುತಿರ್ಪುವು (ಕೊಡುವ, ರಕ್ಷಿಸುವ ಈ ಎರಡು ಗುಣಗಳು ಹಾಗೆಯೇ ಇರಲು ಬಯಸುತ್ತಿವೆ). ನಿನ್ನೊಳು ಇವಂದಿರು ಏತರೊಳೊ ದೊರೆ (ನಿನ್ನಲ್ಲಿ ಈ ನಕುಲಸಹದೇವರು ಯಾವಗುಣಗಳಲ್ಲಿ ಸಮಾನರು?) ದೊರೆವೆತ್ತ ಕಾಳೆಗದ ಗೆಲ್ಲದ ಸೋಲದ ಮಾತು (ಯುದ್ಧದ ಜಯಾಪಜಯಗಳ ಮಾತು ಅಥವಾ ಹಿರಿಮೆ,) ನಿನ್ನೊಳಂ ನರನೊಳಂ ಇರ್ದುದು (ಸಮಾನತೆ ನಿನ್ನಲ್ಲಿ ಮತ್ತು ಅರ್ಜುನನಲ್ಲಿ ಇದೆ.) ಉಯ್ಗೆ ಸಿಸುಗಳ್ ಸಿಬಿರಕ್ಕೆ ಬೞಲ್ದ ಭೂಪನಂ (ಈ ಶಿಶುಗಳು ಬಳಲಿರುವ ಧರ್ಮರಾಯನನ್ನು ಬೀಡಿಗೆ ಕರೆದುಕೊಂಡು ಹೋಗಲಿ.)
ಪದ್ಯ-೧೧೮:ಅರ್ಥ: ನಿನ್ನ ದಾನಮಾಡುವ ಹಿರಿಮೆ, ಎದುರಿಸಿದವನನ್ನು ಮೀರುವ ಕೀರ್ತಿ, ಕೊಡುವ, ರಕ್ಷಿಸುವ ಈ ಎರಡು ಗುಣಗಳು ಹಾಗೆಯೇ ಇರಲು ಬಯಸುತ್ತಿವೆ. ನಿನ್ನಲ್ಲಿ ಈ ನಕುಲಸಹದೇವರು ಯಾವಗುಣಗಳಲ್ಲಿ ಸಮಾನರು. ಯುದ್ಧದ ಜಯಾಪಜಯಗಳ ಮಾತು ಅಥವಾ ಹಿರಿಮೆ, ಸಮಾನತೆ ನಿನ್ನಲ್ಲಿ ಮತ್ತು ಅರ್ಜುನನಲ್ಲಿ ಇದೆ. ಈ ಶಿಶುಗಳು ಬಳಲಿರುವ ಧರ್ಮರಾಯನನ್ನು ಬೀಡಿಗೆ ಕರೆದುಕೊಂಡು ಹೋಗಲಿ.
ವ|| ಅದಲ್ಲದೆಯುಮತ್ತ ದುರ್ಯೋಧನಂಗಂ ಭೀಮಂಗಮನುವರಂ ಪೊಣರ್ದಿರ್ದುದರಸನಂ ಬೇಗಂ ಪೋಗಿ ಕೊಯ್ಕೊಳ್ವಮೆಂದು ಬರೆವರೆ ಯುಧಿಷ್ಠಿರಮೞಿಯೆನೊಂದ ನೋವಂ ಕಂಡು ಪಾಂಡವಬಲದ ನಾಯಕರುತ್ತಾಯಕರಾಗಿ ತಂತಮ್ಮ ಚತುರ್ವಲಂಗಳನೊಂದು ಮಾಡಿಕೊಂಡು ಕಾಲಾಗ್ನಿಯಂ ಕಿಡಿ ಸುತ್ತುವಂತೆ ಕರ್ಣನಂ ಸುತ್ತಿ ಮುತ್ತಿಕೊಂಡು ಕಣಯ ಕಂಪಣ ಮುಸಲ ಮುಸುಂಡಿ ಭಿಂಡಿವಾಳ ತೋಮರ ಮುದ್ಗರ ಮಹಾ ವಿವಿಧಾಯುಧಂ ಗಳೊಳಿಟ್ಟುಮೆಚ್ಚುಮಿಱಿದುಮಗುರ್ವುಮದ್ಭತಮುಮಾಗೆ ಕಾದುವಾಗಳ್-
ವಚನ:ಪದವಿಭಾಗ-ಅರ್ಥ: ಅದಲ್ಲದೆಯುಂ ಅತ್ತ ದುರ್ಯೋಧನಂಗಂ ಭೀಮಂಗಂ ಅನುವರಂ ಪೊಣರ್ದು ಇರ್ದುದು (ಅದಲ್ಲದೆಯೂ ಆ ಕಡೆ ದುರ್ಯೋಧನನಿಗೂ ಭೀಮನಿಗೂ ಯುದ್ಧರು ಹೆಣೆದುಕೊಂಡಿದೆ.) ಅರಸನಂ ಬೇಗಂ ಪೋಗಿ ಕೊಯ್ಕೊಳ್ವಮ್ ಎಂದು (ಬೇಗಹೋಗಿ ರಾಜನನ್ನು ರಕ್ಷಿಸೋಣ ಎಂದು) ಬರೆವರೆ ಯುಧಿಷ್ಠಿರಮ್ ಅೞಿಯೆನೊಂದ ನೋವಂ ಕಂಡು (ಧರ್ಮರಾಜನು ಸಾಯುವಷ್ಟು ಬಲವಾಗಿ ನೊಂದನೋವನ್ನು ನೋಡಿ,) ಪಾಂಡವಬಲದ ನಾಯಕರು ಉತ್ತಾಯಕರಾಗಿ (ಪಾಂಡವಬಲದ ನಾಯಕರು ನೋಡಿ ಪ್ರತಿಭಟಿಸಿದವರಾಗಿ) ತಂತಮ್ಮ ಚತುರ್ವಲಂಗಳನು ಒಂದು ಮಾಡಿಕೊಂಡು (ತಮ್ಮತಮ್ಮ ಚತುರಂಗ ಬಲವನ್ನು ಒಟ್ಟಾಗಿ ಸೇರಿಸಿಕೊಂಡು) ಕಾಲಾಗ್ನಿಯಂ ಕಿಡಿ ಸುತ್ತುವಂತೆ (ಕಾಲಾಗ್ನಿಯನ್ನು ಬೆಂಕಿಯ ಕಿಡಿಗಳು ಬಳಸಿ ಕೊಳ್ಳುವ ಹಾಗೆ) ಕರ್ಣನಂ ಸುತ್ತಿ ಮುತ್ತಿಕೊಂಡು (ಕರ್ಣನನ್ನು ಮುತ್ತಿ ಆವರಿಸಿಕೊಂಡರು.) ಕಣಯ ಕಂಪಣ ಮುಸಲ ಮುಸುಂಡಿ ಭಿಂಡಿವಾಳ ತೋಮರ ಮುದ್ಗರ ಮಹಾ ವಿವಿಧ ಆಯುಧಂಗಳೊಳ್ (ಎಂಬ ದೊಡ್ಡದಾದ ಬೇರೆಬೇರೆಯ ನಾನಾವಿಧವಾದ ಆಯುಧ ವಿಶೇಷಗಳಿಂದ ) ಇಟ್ಟುಂ ಎಚ್ಚುಂ ಇಱಿದುಂ (ಎಸೆದೂ ಹೊಡೆದೂ ಕತ್ತರಿಸಿಯೂ) ಅಗುರ್ವುಂ ಅದ್ಭತಮುಂ ಆಗೆ ಕಾದುವಾಗಳ್ (ಭಯಂಕರವೂ ಆಶ್ಚರ್ಯಕರವೂ ಆಗುವ ಹಾಗೆ ಯುದ್ಧಮಾಡುವಾಗ-)-
ವಚನ:ಅರ್ಥ:ಅದಲ್ಲದೆಯೂ ಆ ಕಡೆ ದುರ್ಯೋಧನನಿಗೂ ಭೀಮನಿಗೂ ಯುದ್ಧರು ಹೆಣೆದುಕೊಂಡಿದೆ. ಬೇಗಹೋಗಿ ರಾಜನನ್ನು ರಕ್ಷಿಸೋಣ ಎಂದು ತೇರನ್ನು ಬೇರೆಕಡೆಗೆ ತಿರುಗಿಸಿದನು. ಧರ್ಮರಾಜನು ಸಾಯುವಷ್ಟು ಬಲವಾಗಿ ನೊಂದನೋವನ್ನು ನೋಡಿ, ಪಾಂಡವಬಲದ ನಾಯಕರು ನೋಡಿ ಪ್ರತಿಭಟಿಸಿದವರಾಗಿ ತಮ್ಮತಮ್ಮ ಚತುರಂಗ ಬಲವನ್ನು ಒಟ್ಟಾಗಿ ಸೇರಿಸಿಕೊಂಡು, ಕಾಲಾಗ್ನಿಯನ್ನು ಬೆಂಕಿಯ ಕಿಡಿಗಳು ಬಳಸಿ ಕೊಳ್ಳುವ ಹಾಗೆ ಕರ್ಣನನ್ನು ಮುತ್ತಿ ಆವರಿಸಿಕೊಂಡರು. ಕಣಯ, ಕಂಪಣ, ಮುಸಲ, ಮುಸುಂಡಿ, ಭಿಂಡಿವಾಳ, ತೋಮರ, ಮುದ್ಗರ ಎಂಬ ದೊಡ್ಡದಾದ ಬೇರೆಬೇರೆಯ ನಾನಾವಿಧವಾದ ಆಯುಧ ವಿಶೇಷಗಳಿಂದ ಎಸೆದೂ ಹೊಡೆದೂ ಕತ್ತರಿಸಿಯೂ ಭಯಂಕರವೂ ಆಶ್ಚರ್ಯಕರವೂ ಆಗುವ ಹಾಗೆ ಯುದ್ಧಮಾಡಿದರು, ಆಗ-
ಚಂ|| ಎನಗಮರಾತಿ ಸಾಧನಮಿದಿರ್ಚುಗುಮಳ್ಕದಿದಿರ್ಚಿ ಬಾೞ್ಗುಮಿ
ನ್ನೆನೆ ಪೆಱತುಂಟೆ ದೋಷಮೆನಗಂತದೆ ದೋಷಮದಾಗಲಾಗದೆಂ|
ದಿನ ತನಯಂ ತಗುಳ್ದಿಸೆ ನಿಶಾತ ಶರಾಳಿಗಳೆಯ್ದೆ ಚಕ್ಕು ಚ
ಕ್ಕನೆ ಕೊಳೆ ಮೊಕ್ಕುಮೊಕ್ಕೆನೆ ಶಿರಂಗಳುರುಳ್ದುವು ವೈರಿಭೂಪರಾ| ೧೧೯ ||
ಪದ್ಯ-೦೦:ಪದವಿಭಾಗ-ಅರ್ಥ:ಎನಗಂ ಅರಾತಿ ಸಾಧನಂ ಇದಿರ್ಚುಗುಂ (ನನ್ನನ್ನು ಶತ್ರುಸೈನ್ಯವು ಎದುರಿಸುತ್ತದೆ’) (ಮತ್ತು) ಅಳ್ಕದೆ ಇದಿರ್ಚಿ ಬಾೞ್ಗುಂ ಇನ್ನು ಎನೆ (ಹೆದರದೆ ಪ್ರತಿಭಟಿಸಿ ಇನ್ನೂ ಬದುಕಿದೆ ಎಂದರೆ) ಪೆಱತುಂಟೆ ದೋಷಮು ಎನಗೆ (ನನಗೆ ಇದಕ್ಕಿಂತ ಬೇರೆ ಕಳಂಕವುಂಟೇ?) ಅಂತು ಅದೆ ದೋಷಮ್ ಅದಾಗಲಾಗದು ಎಂದು ಇನ ತನಯಂ (ತನಗೆ ಆ ದೋಷವು ಆಗಬಾರದು’ ಎಂದು ಸೂರ್ಯಪುತ್ರನಾದ ಕರ್ಣನು) ತಗುಳ್ದು ಇಸೆ ನಿಶಾತ ಶರಾಳಿಗಳು ಎಯ್ದೆ (ರಭಸದಿಂದ ಹೊಡೆಯಲು ಹರಿತವಾದ ಬಾಣಗಳು ಪೂರ್ಣವಾಗಿ) ಚಕ್ಕು ಚಕ್ಕನೆ ಕೊಳೆ (ಚಕ್ ಚಕ್ ಎಂದು ಕತ್ತರಿಸಲು- ತಲೆಯನ್ನು ಕೊಳ್ಳಲು) ಮೊಕ್ಕುಮೊಕ್ಕೆನೆ ಶಿರಂಗಳು ಉರುಳ್ದುವು ವೈರಿಭೂಪರಾ (ಶತ್ರುರಾಜರ ತಲೆಗಳು ಮೊಕ್‌ಮೊಕ್ ಎಂದು ಉರುಳಿದುವು.)
ಪದ್ಯ-೦೦:ಅರ್ಥ:(ಕರ್ಣನು ಭಾವಿಸಿದನು,)‘ನನ್ನನ್ನು ಶತ್ರುಸೈನ್ಯವು ಎದುರಿಸುತ್ತದೆ’ (ಮತ್ತು) ಹೆದರದೆ ಪ್ರತಿಭಟಿಸಿ ಇನ್ನೂ ಬದುಕಿದೆ ಎಂದರೆ ನನಗೆ ಇದಕ್ಕಿಂತ ಬೇರೆ ಕಳಂಕವುಂಟೇ? ತನಗೆ ಆ ದೋಷವು ಆಗಬಾರದು’ ಎಂದು ಸೂರ್ಯಪುತ್ರನಾದ ಕರ್ಣನು ರಭಸದಿಂದ ಹೊಡೆಯಲು ಹರಿತವಾದ ಬಾಣಗಳು ಪೂರ್ಣವಾಗಿ ಚಕ್ ಚಕ್ ಎಂದು ಕತ್ತರಿಸಲು ಶತ್ರುರಾಜರ ತಲೆಗಳು ಮೊಕ್‌ಮೊಕ್ ಎಂದು ಉರುಳಿದುವು.
ವ|| ಆ ಪ್ರಸ್ತಾವದೊಳ್-
ವಚನ:ಅರ್ಥ:ವ|| ಆ ಸಮಯದಲ್ಲಿ-
ಉ|| ಮಂತ್ರ ಪದಪ್ರವೀಣ ಬಹು ಸಾಧನ ಹೂಂಕರಣಾದಿ ಮಂತ್ರಮಾ
ಮಂತ್ರಿತ ಡಾಕಿನೀ ದಶನ ಘಟ್ಟನ ಜಾತ ವಿಭೀಷಣಂ ಮದೇ|
ಭಾಂತ್ರ ನಿಯಂತ್ರಿತಾಶ್ವ ಶವ ಮಾಂಸ ರಸಾಸವ ಮತ್ತಯೋಗಿನೀ
ತಂತ್ರಮಿದೇನಗುರ್ವನೊಳಕೊಂಡುದೊ ಕರ್ಣನ ಗೆಲ್ದ ಕೊಳ್ಗುಳಂ|| ೧೨೦ ||
ಪದ್ಯ-೦೦:ಪದವಿಭಾಗ-ಅರ್ಥ:ಮಂತ್ರ ಪದ ಪ್ರವೀಣ ಬಹು ಸಾಧನ ಹೂಂ ಕರಣ ಆದಿ ಮಂತ್ರಂ (ರಣಮಂತ್ರ ಪಠನದಲ್ಲಿ ಪ್ರವೀಣರಾದ ಅನೇಕ ಸೈನಿಕರ ಹುಂಕಾರವೇ ಮೊದಲಾದ ಮಂತ್ರವನ್ನುಳ್ಳುದೂ) ಆಮಂತ್ರಿತ ಡಾಕಿನೀ ದಶನ ಘಟ್ಟನ ಜಾತ ವಿಭೀಷಣಂ(ಆಹ್ವಾನಿತರಾದ ಪಿಶಾಚಿಗಳ ಹಲ್ಲುಕಡಿಯುವುದರಿಂದ ಹುಟ್ಟಿ ಭಯಂಕಾರಕವೂ ಆದ ಶಬ್ದವನ್ನುಳ್ಳುದೂ) ಮದೇಭ ಅಂತ್ರ ನಿಯಂತ್ರಿತತ ಅಶ್ವ (ಮದ್ದಾನೆಯ ಕರುಳುಗಳಿಂದ ಕಟ್ಟಲ್ಪಟ್ಟ ಕುದುರೆಯ) ಶವ ಮಾಂಸ ರಸಾಸವ ಮತ್ತಯೋಗಿನೀ ತಂತ್ರಂ ಇದೇನು ಅಗುರ್ವನು ಒಳಕೊಂಡುದೊ (ಹೆಣದ ಮಾಂಸದಲ್ಲಿ ಆಸಕ್ತವಾದ ಮದಿಸಿರುವ ಮರುಳುಗಳ ಸಮೂಹವನ್ನುಳ್ಳದ್ದೂ ಆಗಿ,) ಕರ್ಣನ ಗೆಲ್ದ ಕೊಳ್ಗುಳಂ (ಕರ್ಣನು ಗೆದ್ದ ಯುದ್ಧರಂಗವು ಏನು ಅಗುರ್ವನು ಒಳಕೊಂಡುದೊ - ಏನು ಭಯಂಕರವಾಗಿತ್ತೊ!)
ಪದ್ಯ-೦೦:ಅರ್ಥ:ರಣಮಂತ್ರ ಪಠನದಲ್ಲಿ ಪ್ರವೀಣರಾದ ಅನೇಕ ಸೈನಿಕರ ಹುಂಕಾರವೇ ಮೊದಲಾದ ಮಂತ್ರವನ್ನುಳ್ಳುದೂ ಆಹ್ವಾನಿತರಾದ ಪಿಶಾಚಿಗಳ ಹಲ್ಲುಕಡಿಯುವುದರಿಂದ ಹುಟ್ಟಿ ವಿಕಾರವೂ ಭಯಂಕರವೂ ಆದ ಶಬ್ದವನ್ನುಳ್ಳುದೂ ಮದ್ದಾನೆಯ ಕರುಳುಗಳಿಂದ ಕಟ್ಟಲ್ಪಟ್ಟ ಕುದುರೆಯ ಹೆಣದ ಮಾಂಸದಲ್ಲಿ ಆಸಕ್ತವಾದ ಮದಿಸಿರುವ ಮರುಳುಗಳ ಸಮೂಹವನ್ನುಳ್ಳದ್ದೂ ಆಗಿ ಕರ್ಣನು ಗೆದ್ದ ಯುದ್ಧರಂಗವು ಏನು ಭಯಂಕರವಾಗಿತ್ತೊ!
ವ|| ಅನ್ನೆಗಮಿತ್ತ ಸಂಸಪ್ತಕ ನಿಕುರುಂಬದೊಳಗೊರ್ವರುಮಂ ಕಿಱುವೀೞಲೀಯದೆ ರಸಮಂ ಕೊಲ್ವಂತೆಂತಾನುಂ ಕೊಂದು ಕರ್ಣನೊಳ್ ಪೊಣರಲ್ ಬರ್ಪ ವಿಕ್ರಾಂತ ತುಂಗಂ ನಿಜ ಪತಾಕಿನಿಯ ನಡುವೆ ಮೆರೆವ ಪತಾಕಾ ವಿರಾಜಮಾನುಮಪ್ಪ ತಮ್ಮಣ್ಣನ ರಥಮಂ ಕಾಣದೆ ಕೌರವಬಳಜಳನಿಧಿಯೊಳ್ ಬಳ್ವಳ ಬಳೊದೊಗೆದ ಕೇಸುರಿಯಂತೆ ತೞತೞಿಸಿ ಮಿಳಿರ್ವ ಪವನತನೂಜನ ಕೇಸರಿಕೇತನಮಪ್ಪ ಪೞಯಿಗೆಯಂ ಕಂಡು ಮುಟ್ಟೆ ವರ್ಪನ್ನೆಗಮರಸನಂ ಬೀಡಿಂಗೆ ಕಳಿಪಿ ಮಗುೞ್ದು ಬಂದ ನಕುಳ ಸಹದೇವರಿಂದರವಿಂದಬಾಂಧವತನೂಜನ ಮಹಾ ಪ್ರಹರಣಹತಿಯೊಳ್ ಯಮನಂದನನ ನೋವುಮನಾತ್ಮೀಯಬಲದ ನಾಯಕರ ಸಾವುಮನಱಿದು-
ವಚನ:ಪದವಿಭಾಗ-ಅರ್ಥ:ಅನ್ನೆಗಮಿತ್ತ ಸಂಸಪ್ತಕ ನಿಕುರುಂಬದೊಳಗೆ ಒರ್ವರುಮಂ ಕಿಱುವೀೞಲೀಯದೆ (ಅಷ್ಟರಲ್ಲಿ ಈ ಕಡೆ ಸಂಸಪ್ತಕರ ಸಮೂಹದಲ್ಲಿ ಒಬ್ಬರೂ ತಪ್ಪಿಸಿಕೊಳ್ಳಲು ಅವಕಾಶ ಕೊಡದಂತೆ) ರಸಮಂ ಕೊಲ್ವಂತೆಂ ತಾನುಂ ಕೊಂದು (ಪಾದರಸವನ್ನು ಮರ್ದಿಸುವ ಹಾಗೆ ಹೇಗೋ ಕೊಂದು) ಕರ್ಣನೊಳ್ ಪೊಣರಲ್ ಬರ್ಪ ವಿಕ್ರಾಂತ ತುಂಗಂ (ಕರ್ಣನಲ್ಲಿ ಯುದ್ಧಮಾಡಲು ಬರುತ್ತಿರುವ ಉತ್ತಮ ಪೌರುಷಶಾಲಿಯಾದ ಅರ್ಜುನನು) ನಿಜ ಪತಾಕಿನಿಯ ನಡುವೆ ಮೆರೆವ ಪತಾಕಾ ವಿರಾಜಮಾನುಮಪ್ಪ (ತನ್ನ ಸೈನ್ಯಮಧ್ಯದಲ್ಲಿ ಧ್ವಜದಿಂದ ವಿರಾಜಮಾನವಾಗಿ ಮೆರೆಯುವ) ತಮ್ಮಣ್ಣನ ರಥಮಂ ಕಾಣದೆ (ತಮ್ಮಣ್ಣನ ರಥವನ್ನು ಕಾಣದೆ) ಕೌರವಬಳಜಳನಿಧಿಯೊಳ್ ಬಳ್ವಳ ಬಳೊದು ಒಗೆದ (ಕೌರವಸೇನಾಸಮುದ್ರದಲ್ಲಿ ವಿಶೇಷವಾಗಿ ಬೆಳೆದು ಶೋಭಿಸುವ) ಕೇಸುರಿಯಂತೆ ತೞತೞಿಸಿ ಮಿಳಿರ್ವ ಪವನತನೂಜನ ಕೇಸರಿ ಕೇತನಮಪ್ಪ ಪೞಯಿಗೆಯಂ ಕಂಡು (ಕೆಂಪುಬಣ್ಣದ ಉರಿಯಂತೆ ತಳತಳಿಸಿ ಅಲುಗಾಡುವ ಸಿಂಹದ ಗುರುತಿನ ಬಾವುಟವನ್ನು ನೋಡಿ) ಮುಟ್ಟೆ ವರ್ಪನ್ನೆಗಂ ಅರಸನಂ ಬೀಡಿಂಗೆ ಕಳಿಪಿ ಮಗುೞ್ದು ಬಂದ ನಕುಳ ಸಹದೇವರಿಂದ (ಹತ್ತಿರಕ್ಕೆ ಬರುವಷ್ಟರಲ್ಲಿ ಧರ್ಮರಾಯನನ್ನು ಬೀಡಿಗೆ ಕಳುಹಿಸಿ ಹಿಂತಿರುಗಿ ಬಂದ ನಕುಳಸಹದೇವರಿಂದ) ಅರವಿಂದಬಾಂಧವತನೂಜನ ಮಹಾ ಪ್ರಹರಣ ಹತಿಯೊಳ್ (ಕರ್ಣನ ಬಲವಾದ ಪೆಟ್ಟಿನಿಂದ) ಯಮನಂದನನ ನೋವುಮಂ ಆತ್ಮೀಯಬಲದ ನಾಯಕರ ಸಾವುಮನು ಅಱಿದು- ತಿಳಿದು-(ಧರ್ಮರಾಯನ ವ್ಯಥೆಯನ್ನು ತಮ್ಮ ಸೈನ್ಯದ ನಾಯಕರ ಸಾವನ್ನೂ ತಿಳಿದು-)
ವಚನ:ಅರ್ಥ:ಅಷ್ಟರಲ್ಲಿ ಈ ಕಡೆ ಸಂಸಪ್ತಕರ ಸಮೂಹದಲ್ಲಿ ಒಬ್ಬರೂ ತಪ್ಪಿಸಿಕೊಳ್ಳಲು ಅವಕಾಶ ಕೊಡದಂತೆ ಪಾದರಸವನ್ನು ಮರ್ದಿಸುವ ಹಾಗೆ ಹೇಗೋ ಕೊಂದು ಕರ್ಣನಲ್ಲಿ ಯುದ್ಧಮಾಡಲು ಬರುತ್ತಿರುವ ಉತ್ತಮ ಪೌರುಷಶಾಲಿಯಾದ ಅರ್ಜುನನು ತನ್ನ ಸೈನ್ಯಮಧ್ಯದಲ್ಲಿ ಧ್ವಜದಿಂದ ವಿರಾಜಮಾನವಾಗಿ ಮೆರೆಯುವ ತಮ್ಮಣ್ಣನ ರಥವನ್ನು ಕಾಣದೆ ಕೌರವಸೇನಾಸಮುದ್ರದಲ್ಲಿ ವಿಶೇಷವಾಗಿ ಬೆಳೆದು ಶೋಭಿಸುವ ಹಚ್ಚಿದ ಕೆಂಪುಬಣ್ಣದ ಉರಿಯಂತೆ ತಳತಳಿಸಿ ಅಲುಗಾಡುವ ಸಿಂಹದ ಗುರುತಿನ ಬಾವುಟವನ್ನು ನೋಡಿ ಹತ್ತಿರಕ್ಕೆ ಬರುವಷ್ಟರಲ್ಲಿ ಧರ್ಮರಾಯನನ್ನು ಬೀಡಿಗೆ ಕಳುಹಿಸಿ ಹಿಂತಿರುಗಿ ಬಂದ ನಕುಳಸಹದೇವರಿಂದ ಕರ್ಣನ ಬಲವಾದ ಪೆಟ್ಟಿನಿಂದು ಧರ್ಮರಾಯನ ವ್ಯಥೆಯನ್ನು ತಮ್ಮ ಸೈನ್ಯದ ನಾಯಕರ ಸಾವನ್ನೂ ತಿಳಿದನು. ತಿಳಿದು-
ಚಂ|| ಪವನಸುತಂಗೆ ಪಾಸಟಿಗಳೊರ್ವರುಮಿಲ್ಲದಱಿಂದಮಾಂತ ಕೌ
ರವಬಲದುರ್ಕನೊಂದಿನಿಸು ಮಾಣಿಸಿ ಪೋಪಮಿಳೇಶನಲ್ಲಿಗೆಂ|
ದವನತ ವೈರಿ ವೈರಿಬಲ ವಾರಿಧಿಯಂ ವಿಶಿಖೌರ್ವವಹ್ನಿಯಿಂ
ತವಿಸಿ ಮರುತ್ತನೂಭವನಲ್ಲಿಗೆ ಪೇೞ್ದಿರದೆಯ್ದಿ ಭೂಪನಂ|| ೧೨೧ /121||
ಪದ್ಯ-೦೦:ಪದವಿಭಾಗ-ಅರ್ಥ:ಪವನಸುತಂಗೆ ಪಾಸಟಿಗಳು ಒರ್ವರುಮಿಲ್ಲ(ಭೀಮನಿಗೆ ಸರಿಸಮಾನರಾದ ಬಲಶಾಲಿಗಳಾರೂ ಇಲ್ಲ) ಅದಱಿಂದಂ ಆಂತ ಕೌರವಬಲದ ಉರ್ಕನು ಒಂದಿನಿಸು ಮಾಣಿಸಿ (ಆದುದರಿಂದ ಎದುರಿಸಿದ ಕೌರವಸೈನ್ಯದ ಅಹಂಕಾರವನ್ನು ಸ್ವಲ್ಪ ಕಡಿಮೆಮಾಡಿ) ಪೋಪಂ ಇಳೇಶನಲ್ಲಿಗೆಂದು (ರಾಜನಲ್ಲಿಗೆ ಹೋಗೋಣ ಎಂದು) ಅವನತ (ಬಗ್ಗಿಸಿದ) ವೈರಿ ವೈರಿಬಲ ವಾರಿಧಿಯಂ ವಿಶಿಖ ಉರ್ವ ವಹ್ನಿಯಿಂ (ಬಾಣಗಳೆಂಬ ಬಡಬಾನಲನಿಂದ) ತವಿಸಿ (ಶತ್ರುಸೈನ್ಯವನ್ನು ಬಗ್ಗಿಸಿದವನಾದ ಅರ್ಜುನನು ಶತ್ರುಸೈನ್ಯಸಾಗರವನ್ನು ಬಾಣಗಳೆಂಬ ಬಡಬಾನಲನಿಂದ ನಾಶಮಾಡಿ) ಮರುತ್ತನೂಭವನ ಅಲ್ಲಿಗೆ ಪೇೞ್ದು ಇರದೆ ಎಯ್ದಿ ಭೂಪನಂ(ಅಲ್ಲಿಯ ಯುದ್ಧಕ್ಕೆ ಭೀಮನನ್ನು ಇರಹೇಳಿ ಸಾವಕಾಶಮಾಡದೆ ಧರ್ಮರಾಜನನ್ನು ಸೇರಿದನು)
ಪದ್ಯ-೦೦:ಅರ್ಥ:ಭೀಮನಿಗೆ ಸರಿಸಮಾನರಾದ ಬಲಶಾಲಿಗಳಾರೂ ಇಲ್ಲ; ಆದುದರಿಂದ ಎದುರಿಸಿದ ಕೌರವಸೈನ್ಯದ ಅಹಂಕಾರವನ್ನು ಸ್ವಲ್ಪ ಕಡಿಮೆಮಾಡಿ ರಾಜನಲ್ಲಿಗೆ ಹೋಗೋಣ ಎಂದು ಶತ್ರುಸೈನ್ಯವನ್ನು ಬಗ್ಗಿಸಿದವನಾದ ಅರ್ಜುನನು ಶತ್ರುಸೈನ್ಯಸಾಗರವನ್ನು ಬಾಣಗಳೆಂಬ ಬಡಬಾನಲನಿಂದ ನಾಶಮಾಡಿ ಅಲ್ಲಿಯ ಯುದ್ಧಕ್ಕೆ ಭೀಮನನ್ನು ಇರಹೇಳಿ ಸಾವಕಾಶಮಾಡದೆ ಧರ್ಮರಾಜನನ್ನು ಸೇರಿದನು.
ಕಂ|| ತಾನುಂ ಹರಿಯುಂ ಭೂಪತಿ
ಗಾನತರಾಗಲೊಡಮೊಸೆದು ಪತಿ ಪರಸಿ ಯಮ|
ಸ್ಥಾನಮನೆಂತೆಯ್ದಿಸಿದಿರೊ
ಕಾನೀನನ ದೊರೆಯ ಕಲಿಯನುಗ್ರಾಹವದೊಳ್|| ೧೨೨ ||
ಪದ್ಯ-೧೨೨:ಪದವಿಭಾಗ-ಅರ್ಥ: ತಾನುಂ ಹರಿಯುಂ ಭೂಪತಿಗೆ ಆನತರಾಗಲು ಒಡಂ ಒಸೆದು ಪತಿ (ಪ್ರಭುವು) ಪರಸಿ (ತಾನೂ ಕೃಷ್ಣನೂ ಧರ್ಮರಾಯನಿಗೆ ನಮಸ್ಕಾರಮಾಡಲು ಧರ್ಮರಾಯನು ಕೂಡಲೆ ಹರಸಿ) ಯಮಸ್ಥಾನಮಂ ಎಂತು ಎಯ್ದಿಸಿದಿರೊ (ಯಮಪಟ್ಟಣಕ್ಕೆ ಹೇಗೆ ಸೇರಿಸಿದಿರೋ?) ಕಾನೀನನ ದೊರೆಯ ಕಲಿಯನು ಉಗ್ರ ಆಹವದೊಳ್ (ಈ ಭಯಂಕರವಾದ ಯುದ್ಧದಲ್ಲಿ ಕರ್ಣನಂತಹ ಸಾಮರ್ಥ್ಯವುಳ್ಳ ಶೂರನನ್ನು)
ಪದ್ಯ-೦೨೨:ಅರ್ಥ:ತಾನೂ ಕೃಷ್ಣನೂ ಧರ್ಮರಾಯನಿಗೆ ನಮಸ್ಕಾರಮಾಡಲು ಧರ್ಮರಾಯನು ಹರಸಿ, ಈ ಭಯಂಕರವಾದ ಯುದ್ಧದಲ್ಲಿ ಕರ್ಣನಂತಹ ಸಾಮರ್ಥ್ಯವುಳ್ಳ ಶೂರನನ್ನು ಯಮಪಟ್ಟಣಕ್ಕೆ ಹೇಗೆ ಸೇರಿಸಿದಿರೋ?
  • ಟಿಪ್ಪಣಿ::ಕಾನೀನ ಎಂದರೆ ಮದುವೆಗೆ ಮೊದಲು ಹುಟ್ಟಿದವನು. ಢರ್ಮರಾಯನಿಗೆ ಕರ್ಣನು ಕಾನೀನನೆಂದು ಇನ್ನೂ ತಿಳಿದಿಲ್ಲ. ಅವನು ಸತ್ತನಂತರ ತಿಳಿಯುವುದು. ಆದರೆ ಇಲ್ಲಿ ಧರ್ಮಜ ಹೀಗೆ ಪ್ರಯೋಗಿಸಿದ್ದು ಅನುಚಿತವಾಗಿ ಕಾಣುವುದು.
ನರ ನಾರಾಯಣರೆಂಬಿ
ರ್ವರುಮೊಡಗೂಡಿದೊಡೆ ಗೆಲ್ವರಾರುರ್ವರೆಯೊಳ್|
ನಿರುತಮೆನೆ ನೆಗೞ್ದ ನಿಮ್ಮಿ
ರ್ವರ ದೊರೆಗಂ ಬಗೆವೊಡಗ್ಗಳಂ ನರರೊಳರೇ|| ೧೨೩ ||
ಪದ್ಯ-೧೨೩:ಪದವಿಭಾಗ-ಅರ್ಥ:ನರ ನಾರಾಯಣರೆಂಬ ಇರ್ವರುಂ ಒಡಗೂಡಿದೊಡೆ ಗೆಲ್ವರಾರುಂ ಒರ್ವರೆಯೊಳ್ (ಲೋಕದಲ್ಲಿ) ನಿರುತಂ (ನಿಶ್ಚಯವಾಗಿ) (ನರನಾರಾಯಣರೆಂಬ ಇಬ್ಬರೂ ಒಟ್ಟುಗೂಡಿದರೆ ಈ ಭೂಮಿಯಲ್ಲಿ ನಿಮ್ಮನ್ನು ನಿಶ್ಚಯವಾಗಿ ಗೆಲ್ಲುವರಾರು ಯಾರು?) ಎನೆ ನೆಗೞ್ದ ನಿಮ್ಮಿರ್ವರ ದೊರೆಗಂ ಬಗೆವೊಡೆ ಅಗ್ಗಳಂ ನರರೊಳರೇ (ಎನ್ನುವಾಗ ಪ್ರಸಿದ್ಧರಾದ ನಿಮ್ಮಿಬ್ಬರನ್ನು ಮೀರಿದ ಮನುಷ್ಯರು ಇದ್ದಾರೆಯೇ? ಇಲ್ಲ.)
ಪದ್ಯ-೧೨೩:ಅರ್ಥ:ನರನಾರಾಯಣರೆಂಬ ಇಬ್ಬರೂ ಒಟ್ಟುಗೂಡಿದರೆ ಈ ಭೂಮಿಯಲ್ಲಿ ನಿಮ್ಮನ್ನು ನಿಶ್ಚಯವಾಗಿ ಗೆಲ್ಲುವರಾರು ಯಾರು? ಇಲ್ಲ. ಎನ್ನುವಾಗ ಪ್ರಸಿದ್ಧರಾದ ನಿಮ್ಮಿಬ್ಬರನ್ನು ಮೀರಿದ ಮನುಷ್ಯರು ಇದ್ದಾರೆಯೇ? ಇಲ್ಲವೇ ಇಲ್ಲ.
ಎಂತೆನೆ ಮುಯ್ಯೇೞ್ ಸೂೞೆಳೆ
ಯಂ ತಳದೊಳೆ ಪಿೞಿದನಾತನೆಂಬುದನಾಂ ಮು|
ನ್ನೆಂತುಂ ನಂಬೆನ ನಂಬಿದೆ
ನಿಂತಿಂದಿನ ಗಂಡವಾತಿನೊಳ್ ಸೂತಜನಂ|| ೧೨೪ ||
ಪದ್ಯ-೧೨೪:ಪದವಿಭಾಗ-ಅರ್ಥ:ಎಂತೆನೆ ಮುಯ್ಯೇೞ್ ಸೂೞೆಳೆಯಂ ತಳದೊಳೆ ಪಿೞಿದನು (ಮೂರು ಏಳುಸಲ (ಇಪ್ಪತ್ತೊಂದು ಸಲ) ಭೂಮಿಯನ್ನು ಅಂಗೈಯಲ್ಲಿಯೇ ಹಿಂಡಿದವನು) ಆತನು ಎಂಬುದನು ಆಂ ಮುನ್ನೆಂತುಂ ನಂಬೆನ (ಎಂಬುದನ್ನು ನಾನು ಮೊದಲು ಹೇಗೂ ನಂಬಿರಲಿಲ್ಲ.) ನಂಬಿದೆನು ಇಂತು ಇಂದಿನ ಗಂಡವಾತಿನೊಳ್ ಸೂತಜನಂ (ಹೀಗೆ ಇಂದಿನ ಕರ್ಣನ ಪೌರುಷದ ಸುದ್ದಿಯಲ್ಲಿ ನಂಬಿದೆನು. )
ಪದ್ಯ-೧೨೪:ಅರ್ಥ: ಹಿಂದೆ ಕರ್ಣನು ಮೂರು ಏಳುಸಲ (ಇಪ್ಪತ್ತೊಂದು ಸಲ) ಭೂಮಿಯನ್ನು ಅಂಗೈಯಲ್ಲಿಯೇ ಹಿಂಡಿದವನು ಎಂಬುದನ್ನು ನಾನು ಮೊದಲು ಹೇಗೂ ನಂಬಿರಲಿಲ್ಲ. ಹೀಗೆ ಇಂದಿನ ಕರ್ಣನ ಪೌರುಷದ ಸುದ್ದಿಯಲ್ಲಿ ನಂಬಿದೆನು.
ಪೆತ್ತಳ್ ಕೊಂತಿಯೆ ಮಕ್ಕ
ಳ್ವೆತ್ತರೊಳೆಂಬವರೆ ಕೊಂತಿ ಮಾದೇವಿಗಮೊಂ|
ದುತ್ತರಮಾದಳ್ ಕರ್ಣಂ
ಬೆತ್ತಕ್ಕನೆ ಎಂದು ಪೊಗೞ್ದುವೆರಡುಂ ಪಡೆಗಳ್|| ೧೨೫ ||
ಪದ್ಯ-೧೨೫:ಪದವಿಭಾಗ-ಅರ್ಥ:ಪೆತ್ತಳ್ ಕೊಂತಿಯೆ ಮಕ್ಕಳ್ (ವೆ) ಹೆತ್ತರೊಳ್ ಎಂಬವರೆ,( ಮಕ್ಕಳನ್ನು ಹೆತ್ತವರಲ್ಲಿ ಪಾಂಡವರನ್ನು ಹೆತ್ತ ಕುಂತೀದೇವಿಯೇ ಮಕ್ಕಳನ್ನು ಹೆತ್ತವಳು (ಉತ್ತಮಳಾದವಳು) ಎಂದು) ಕೊಂತಿ ಮಾದೇವಿಗಂ ಒಂದು ಉತ್ತರಮಾದಳ್ ಕರ್ಣಂ ಬೆತ್ತಕ್ಕನೆ ಎಂದು (ಎಂದು ಹೇಳುತ್ತಿದ್ದ ಎರಡು ಸೈನ್ಯಗಳೂ ಇಂದು ಕರ್ಣನನ್ನು ಹೆತ್ತವಳು ಕುಂತೀದೇವಿಗಿಂತ ಉತ್ತಮಳಾದವಳು ಎಂದು) ಪೊಗೞ್ದುವೆರಡುಂ ಪಡೆಗಳ್ (ರಡು ಸೈನ್ಯಗಳೂ ಹೊಗಳಿದುವು.)
ಪದ್ಯ-೧೨೫:ಅರ್ಥ: ಮಕ್ಕಳನ್ನು ಹೆತ್ತವರಲ್ಲಿ ಪಾಂಡವರನ್ನು ಹೆತ್ತ ಕುಂತೀದೇವಿಯೇ ಮಕ್ಕಳನ್ನು ಹೆತ್ತವಳು (ಉತ್ತಮಳಾದವಳು) ಎಂದು ಹೇಳುತ್ತಿದ್ದ ಎರಡು ಸೈನ್ಯಗಳೂ ಇಂದು ಕರ್ಣನನ್ನು ಹೆತ್ತವಳು ಕುಂತೀದೇವಿಗಿಂತ ಉತ್ತಮಳಾದವಳು ಎಂದು ಹೊಗಳಿದುವು.
ಕಂ|| ಇನ್ನುಂ ಕರ್ಣನ ರೂಪೆ ದ
ಲೆನ್ನೆರ್ದೆಯೊಳಮೆನ್ನ ಕಣ್ಣೊಳಂ ಸುೞಿದಪುದಾಂ|
ತೆನ್ನೆಚ್ಚ ಶರಮುಮಂ ಗೆ
ಲ್ದೆನ್ನುಮನಂಜಿಸಿದನೆಂದೊಡಿನ್ನೇನೆಂಬೆಂ|| ೧೨೬ ||
ಪದ್ಯ-೧೨೬:ಪದವಿಭಾಗ-ಅರ್ಥ:ಇನ್ನುಂ ಕರ್ಣನ ರೂಪೆ ದಲ್ ಎನ್ನೆರ್ದೆಯೊಳಂ ಎನ್ನ ಕಣ್ಣೊಳಂ ಸುೞಿದಪುದು (ಇನ್ನೂ ನನ್ನ ಎದೆಯಲ್ಲಿಯೂ ಕಣ್ಣಿನಲ್ಲಿಯೂ ಕರ್ಣನ ಆಕಾರವೇ ಸುಳಿದಾಡುತ್ತಿದೆ.) ಆಂತು ಎನ್ನ ಎಚ್ಚ ಶರಮುಮಂ ಗೆಲ್ದು (ಎದುರಿಸಿ ನಾನು ಪ್ರಯೋಗಿಸಿದ ಬಾಣಗಳನ್ನು ಗೆದ್ದು) ಎನ್ನುಮನುಂ ಅಂಜಿಸಿದನೆಂದೊಡೆ ಇನ್ನೇನು ಎಂಬೆಂ ( ನನ್ನನ್ನೂ ಭಯಪಡಿಸದನೆಂದಾಗ ಇನ್ನೇನನ್ನು ಹೇಳಲಿ.)|
ಪದ್ಯ-೧೨೬:ಅರ್ಥ:ಇನ್ನೂ ನನ್ನ ಎದೆಯಲ್ಲಿಯೂ ಕಣ್ಣಿನಲ್ಲಿಯೂ ಕರ್ಣನ ಆಕಾರವೇ ಸುಳಿದಾಡುತ್ತಿದೆಯಲ್ಲ; ಎದುರಿಸಿ ನಾನು ಪ್ರಯೋಗಿಸಿದ ಬಾಣಗಳನ್ನು ಗೆದ್ದು ನನ್ನನ್ನೂ ಭಯಪಡಿಸದನೆಂದಾಗ ಇನ್ನೇನನ್ನು ಹೇಳಲಿ.
ಅಂತಪ್ಪದಟನನಾಜಿಯೊ
ಳೆಂತೆಂತಿದಿರಾಂತು ಗೆಲ್ದಿರೆನೆ ನೃಪನಂ ಕಂ|
ಸಾಂತಕನೆಂದಂ ಕರ್ಣನು
ಮಾಂತಿರೆ ನೀಮಿಂದು ನೊಂದುದಂ ಕೇಳ್ದೀಗಳ್|| ೧೨೭ |
ಪದ್ಯ-೧೨೭:ಪದವಿಭಾಗ-ಅರ್ಥ:ಅಂತಪ್ಪ ಅದಟನನು ಆಜಿಯೊಳ್ ಎಂತೆಂತು ಇದಿರಾಂತು ಗೆಲ್ದಿರಿ ಎನೆ (ಅಂತಹ ಪರಾಕ್ರಮಶಾಲಿಯನ್ನು ಯುದ್ಧದಲ್ಲಿ ಹೇಗೆ ಎದುರಿಸಿ ಗೆದ್ದಿರಿ’ ಎನ್ನಲು) ನೃಪನಂ ಕಂಸಾಂತಕನು ಎಂದಂ ಕರ್ಣನುಂ ಆಂತಿರೆ ನೀಮಿಂದು ನೊಂದುದಂ ಕೇಳ್ದೀu ಈಗಳ್ ()
ಪದ್ಯ-೧೨೭:ಅರ್ಥ:‘ಅಂತಹ ಪರಾಕ್ರಮಶಾಲಿಯನ್ನು ಯುದ್ಧದಲ್ಲಿ ಹೇಗೆ ಎದುರಿಸಿ ಗೆದ್ದಿರಿ’ ಎನ್ನಲು ಧರ್ಮರಾಯನನ್ನು ಕುರಿತು ಕೃಷ್ಣನು ಹೇಳಿದನು. ನೀವು ಇಂದು ಕರ್ಣನನ್ನು ಎದುರಿಸಿ ನೋವುಪಟ್ಟುದನ್ನು ಕೇಳಿ ಈಗ-
ಆರಯ್ಯಲೆಂದು ಬಂದೆವ
ಪಾರ ಗುಣಾಕೊಂದೆವಿಲ್ಲವಿನ್ನುಂ ಬಳವ|
ತ್ಕ್ರೂರಾರಾತಿಯನುಪಸಂ
ಹಾರಿಪೆವೇವಿರಿಯನಾದನೆಂಬುದುಮಾಗಳ್|| ೧೨೮ ||
ಪದ್ಯ-೧೨೮:ಪದವಿಭಾಗ-ಅರ್ಥ:ನೋವುಪಟ್ಟುದನ್ನು ಕೇಳಿ ಈಗ ಆರಯ್ಯಲೆಂದು ಬಂದೆವು (ವಿಚಾರಿಸಿ ಸಮಾಧಾನಮಾಡಲು ಬಂದೆವು) ಅಪಾರ ಗುಣಾ ಕೊಂದೆವಿಲ್ಲಂ ಇನ್ನುಂ (ಇನ್ನೂ ಕೊಂದಿಲ್ಲ;) ಬಳವತ್ಕ್ರೂರ ಆರಾತಿಯನು (ಬಲಿಷ್ಠನೂ ಕ್ರೂರನೂ ಆದ ಶತ್ರುವನ್ನು) ಉಪಸಂಹಾರಿಪೆವು ಏಂ (ವಿ) ಪಿರಿಯನಾದನೆ? ಎಂಬುದುಂ ಆಗಳ್ (ನಾಶಪಡಿಸುತ್ತೇವೆ. ಅವನೇನು ಮಹಾದೊಡ್ಡವನು ಎನ್ನಲು ಆಗ )
ಪದ್ಯ-೧೨೮:ಅರ್ಥ:ಧರ್ಮರಾಯನನ್ನು ಕುರಿತು ಕೃಷ್ಣನು ಹೇಳಿದನು., ವಿಚಾರಿಸುವುದಕ್ಕೆ ಬಂದೆವು; ಎಲ್ಲೆಯಿಲ್ಲದ ಗುಣಶಾಲಿಯಾದ ಧರ್ಮರಾಯನೇ ಬಲಿಷ್ಠನೂ ಕ್ರೂರನೂ ಆದ ಶತ್ರುವನ್ನು ನಾವು ಇನ್ನೂ ಕೊಂದಿಲ್ಲ; ನಾಶಪಡಿಸುತ್ತೇವೆ. ಅವನೇನು ಮಹಾದೊಡ್ಡವನು ಎನ್ನಲು ಆಗ-
ನರಕಾಂತಕನಂ ನುಡಿದಂ
ನರೇಂದ್ರನಾನರಸುಗೆಯ್ವ ಪೞುವಗೆಯನದಂ|
ಪರಿಹರಿಸಿದೆನಾತನನೀ
ಕಿರೀಟಿ ಗೆಲ್ದೆನಗೆ ಪಟ್ಟವಂ ಮಾಡುವನೇ|| ೧೨೯ ||
ಪದ್ಯ-೧೨೯:ಪದವಿಭಾಗ-ಅರ್ಥ:ನರಕಾಂತಕನಂ ನುಡಿದಂ ನರೇಂದ್ರಂ ಆಂ ಅರಸುಗೆಯ್ವ ಪೞುವಗೆಯನು ಅದಂ (ಆ ಆಸೆಯನ್ನು) (ಕೃಷ್ಣನನ್ನು ಕುರಿತು ಧರ್ಮರಾಜನು ಹೇಳಿದನು- ಇನ್ನು ಮೇಲೆ ನಾನು ರಾಜ್ಯವಾಳುವ ವ್ಯರ್ಥವಾದ ಆಸೆಯನ್ನು) ಪರಿಹರಿಸಿದೆನು (ಬಿಟ್ಟಿದ್ದೇನೆ.) ಆತನನು ಈ ಕಿರೀಟಿ ಗೆಲ್ದೆನಗೆ ಪಟ್ಟವಂ ಮಾಡುವನೇ (ಅವನನ್ನು ಗೆದ್ದು ನಿಜವಾಗಿಯೂ ಅರ್ಜುನನು ನನಗೆ ಪಟ್ಟವನ್ನು ಕಟ್ಟುತ್ತಾನೆಯೇ? )
ಪದ್ಯ-೧೨೯:ಅರ್ಥ: ಕೃಷ್ಣನನ್ನು ಕುರಿತು ಧರ್ಮರಾಜನು ಹೇಳಿದನು- ಇನ್ನು ಮೇಲೆ ನಾನು ರಾಜ್ಯವಾಳುವ ವ್ಯರ್ಥವಾದ ಆಸೆಯನ್ನು ಬಿಟ್ಟಿದ್ದೇನೆ. ಅವನನ್ನು ಗೆದ್ದು ನಿಜವಾಗಿಯೂ ಅರ್ಜುನನು ನನಗೆ ಪಟ್ಟವನ್ನು ಕಟ್ಟುತ್ತಾನೆಯೇ?
ಏಮ್ಮೊಗ್ಗೆ ಕರ್ಣನಿಂತೀ
ನಿಮ್ಮಂದಿಗರಿಱಿಯೆ ಸಾವನೇ ಸುಖಮಿರಿಮಿ|
ನ್ನಮ್ಮ ಸುಯೋಧನನೊಳ್ ಪಗೆ
ಯಮ್ಮರೆದಾನುಂ ತಪೋನಿಯೋಗದೊಳಿರ್ಪೆಂ|| ೧೩೦ ||
ಪದ್ಯ-೧೩೦:ಪದವಿಭಾಗ-ಅರ್ಥ:ಏಮ್ಮೊಗ್ಗೆ- ಏಂ ಮೊಗ್ಗೆ (ಏನು ಸಾಧ್ಯವೇ?) ಕರ್ಣಂ ಇಂತು ಈ ನಿಮ್ಮಂದಿಗರ ಇಱಿಯೆ ಸಾವನೇ (ಕರ್ಣನು ಹೀಗೆ ನಿಮ್ಮಂತಹವರು ಯುದ್ಧಮಾಡಿದರೆ ಸಾಯುತ್ತಾನೆಯೇ?) ಸುಖಮಿರಿಂ ಇನ್ನು ಅಮ್ಮ ಸುಯೋಧನನೊಳ್ ಪಗೆಯಂ ಮರೆದು (ಅಪ್ಪಗಳಿರಾ ಇನ್ನು ದುಯೋಧನನಲ್ಲಿ ಹಗೆತನವನ್ನು ಮರೆತು ಸುಖವಾಗಿರಿ.) ಆನುಂ ತಪೋನಿಯೋಗದೊಳ ಇರ್ಪೆಂ (ತಾನು ವಾನಪ್ರಸ್ತಕ್ಕೆ ಹೋಗುವೆನು ಎಂದು ಹೇಳಿದ ಧರ್ಮರಾಯ)
ಪದ್ಯ-೧೩೦:ಅರ್ಥ: ಕರ್ಣನನ್ನು ಗೆಲ್ಲುವುದು ಸಾಧ್ಯವೇ? ಕರ್ಣನು ಹೀಗೆ ನಿಮ್ಮಂತಹವರು ಯುದ್ಧಮಾಡಿದರೆ ಸಾಯುತ್ತಾನೆಯೇ? ಅಪ್ಪಗಳಿರಾ ಇನ್ನು ದುಯೋಧನನಲ್ಲಿ ಹಗೆತನವನ್ನು ಮರೆತು ಸುಖವಾಗಿರಿ. ನಾನೂ ತಪಸ್ಸಿನ ನಿಯಮದಲ್ಲಿ ಇರುತ್ತೇನೆ. ಎಂದರೆ, ತಾನು ವಾನಪ್ರಸ್ತಕ್ಕೆ ಹೋಗುವೆನು ಎಂದು ಹೇಳಿದ ಧರ್ಮರಾಯ.
ವ|| ಎಂದು ತನ್ನ ನೋಯೆ ನುಡಿದ ನಿಜಾಗ್ರಜನ ನುಡಿಗೆ ಮನದೊಳೇವೈಸಿಯುಮೇವೈ ಸದೆ ವಿನಯಮನೆ ಮುಂದಿಟ್ಟು ವಿನಯವಿಭೂಷಣನಿಂತೆಂದಂ-
ವಚನ:ಪದವಿಭಾಗ-ಅರ್ಥ:ಎಂದು ತನ್ನ ನೋಯೆ ನುಡಿದ ನಿಜ ಅಗ್ರಜನ ನುಡಿಗೆ (ತನಗೆ ನೋವಾಗುವ ಹಾಗೆ ನುಡಿದ ತನ್ನ ಅಣ್ಣನ ಮಾತಿಗೆ) ಮನದೊಳು ಏವೈಸಿಯುಂ (ಮನಸ್ಸಿನಲ್ಲಿ ಕೋಪಬಂದರೂ) ಏವೈಸದೆ ವಿನಯಮನೆ ಮುಂದಿಟ್ಟು (ಕೋಪಿಸಿಕೊಳ್ಳದೆ ನಮ್ರತೆಯನ್ನೇ ಪ್ರದರ್ಶಿಸಿ) ವಿನಯ ವಿಭೂಷಣನು ಇಂತೆಂದಂ (ಅರ್ಜುನನು ಹೀಗೆಂದನು.)-
ವಚನ:ಅರ್ಥ:ಎಂದುದಕ್ಕೆ ಅರ್ಜುನನು, ತನಗೆ ನೋವಾಗುವ ಹಾಗೆ ನುಡಿದ ತನ್ನ ಅಣ್ಣನ ಮಾತಿಗೆ ಮನಸ್ಸಿನಲ್ಲಿ ಕೋಪಬಂದರೂ (ಹೊರಗೆ) ಕೋಪಿಸಿಕೊಳ್ಳದೆ ನಮ್ರತೆಯನ್ನೇ ಪ್ರದರ್ಶಿಸಿ ವಿನಯಭೂಷಣನಾದ ಅರ್ಜುನನು ಹೀಗೆಂದನು.
ಕಂ|| ಮುಳಿದಿಂತು ಬೆಸಸೆ ನಿಮ್ಮಡಿ
ಯೊಳೆ ಮಾರ್ಕೊಂಡೆಂತು ನುಡಿಮೆನುಸಿರೆಂ ನಿಮ್ಮಂ|
ಮುಳಿಯಿಸಿದ ಸುರಾಸುರುಮ
ನೊಳರೆನಿಸೆಂ ಕರ್ಣನೆಂಬನೆನಗೇವಿರಿಯಂ|| ೧೩೧
ಪದ್ಯ-೧೩೧:ಪದವಿಭಾಗ-ಅರ್ಥ:ಮುಳಿದು ಇಂತು ಬೆಸಸೆ ನಿಮ್ಮಡಿಯೊಳೆ ಮಾರ್ಕೊಂಡು ಎಂತು ನುಡಿಮೆನು (ಕೋಪಿಸಿಕೊಂಡು ಹೀಗೆ ಹೇಳಿದ ನಿಮ್ಮಪಾದದಲ್ಲಿ ಪ್ರತಿಭಟಿಸಿ ಹೇಗೆ ನುಡಿಯಲಿ?) ಉಸಿರೆಂ (ಮಾತಾನಾಡುವುದಿಲ್ಲ;) ನಿಮ್ಮಂ ಮುಳಿಯಿಸಿದ ಸುರಾಸುರುಮನು (ನಿಮಗೆ ಕೋಪವನ್ನುಂಟುಮಾಡಿದ ದೇವದಾನವರಿನ್ನೂ) ಒಳರ್ ಎನಿಸೆಂ (ಜೀವದಿಂದಿದ್ದಾರೆ -ಎಂದು ನಾನು- ಎನ್ನಿಸುವುದಿಲ್ಲ ) ಕರ್ಣನೆಂಬನು ಎನಗೆ ಏವಿರಿಯಂ ( ಕರ್ಣನೆಂಬುವನು ನನಗೆ ಏನು ದೊಡ್ಡವನು? ಅವನೇನು ಮಹಾ?)
ಪದ್ಯ-೧೩೧:ಅರ್ಥ:ಅರ್ಜುನ ಹೇಳಿದ, ಕೋಪಿಸಿಕೊಂಡು ಹೀಗೆ ಹೇಳಿದ ನಿಮ್ಮಪಾದದಲ್ಲಿ ಪ್ರತಿಭಟಿಸಿ ಹೇಗೆ ನುಡಿಯಲಿ? ಮಾತಾನಾಡುವುದಿಲ್ಲ; ನಿಮಗೆ ಕೋಪವನ್ನುಂಟುಮಾಡಿದ ದೇವದಾನವರಿನ್ನೂ ಜೀವದಿಂದಿದ್ದಾರೆ ಎನ್ನಿಸುವುದಿಲ್ಲ (ಹಾಕಿರುವಾಗ) ಕರ್ಣನೆಂಬುವನು ನನಗೆಷ್ಟು ದೊಡ್ಡವನು?
ನರಸಿಂಗಂಗಂ ಜಾಕ
ಬ್ಬರಸಿಗಮಳವೊದವೆ ಪುಟ್ಟಿ ಪುಟ್ಟಿಯುಮರಿಕೇ|
ಸರಿಯೆನೆ ನೆಗೞ್ದುಮರಾತಿಯ
ಸರಿದೊರೆಗಂ ಬಂದೆನಪ್ಪೊಡಾಗಳ್ ನಗಿರೇ|| ೧೩೨
ಪದ್ಯ-೧೩೨:ಪದವಿಭಾಗ-ಅರ್ಥ:ನರಸಿಂಗಂಗಂ (ನರಸಿಂಹನೆಂಬ ರಾಜನಿಗೂ) ಜಾಕಬ್ಬೆ ಅರಸಿಗಂ ಅಳವುಂ ಒದವೆ (ಜಾಕಬ್ಬೆಯೆಂಬ ರಾಣಿಗೂ ಪರಾಕ್ರಮವೇ ಉಂಟಾಗಲು/ ಹುಟ್ಟಿದೆಯೆಂಬ ರೀತಿಯಲ್ಲಿ) ಪುಟ್ಟಿ, ಪುಟ್ಟಿಯುಂ ಅರಿಕೇಸರಿಯೆನೆ ನೆಗೞ್ದುಂ (ಹುಟ್ಟಿ, ಹುಟ್ಟಿಯೂ ಕೂಡ ಅರಿಕೇಸರಿಯೆಂದು ಪ್ರಸಿದ್ಧನಾಗಿಯೂ) ಅರಾತಿಯ ಸರಿ ದೊರೆಗಂ (ಶತ್ರುವಿನ ಸರಿಸಮಾನತೆಗೆ) ಬಂದೆನಪ್ಪೊಡೆ ಆಗಳ್ ನಗಿರೇ (ಬಂದೆನಾದರೆ ನೀವೇ ತಿರಸ್ಕಾರದಿಂದ ಪರಿಹಾಸಮಾಡುವುದಿಲ್ಲವೇ?)
ಪದ್ಯ-೧೩೨:ಅರ್ಥ:ನರಸಿಂಹನೆಂಬ ರಾಜನಿಗೂ ಜಾಕಬ್ಬೆಯೆಂಬ ರಾಣಿಗೂ ಪರಾಕ್ರಮವೇ ಹುಟ್ಟಿದೆಯೆಂಬ ರೀತಿಯಲ್ಲಿ ಹುಟ್ಟಿ, ಹುಟ್ಟಿಯೂ ಕೂಡ ಅರಿಕೇಸರಿಯೆಂದು ಪ್ರಸಿದ್ಧನಾಗಿಯೂ ಶತ್ರುವಿನ ಸರಿಸಮಾನತೆಗೆ ಬಂದೆನಾದರೆ ನೀವೇ ತಿರಸ್ಕಾರದಿಂದ ಪರಿಹಾಸಮಾಡುವುದಿಲ್ಲವೇ?
ಪುಟ್ಟೆ ಮುಳಿಸೊಸಗೆಗಳೆ ಕಡು
ಗಟ್ಟಂ ಮುಳಿಸೊಸಗೆಯೆಂಬ ನೃಪತನಯನವಂ|
ಮುಟ್ಟುಗಿಡೆ ಪಾರದರದೊಳ್
ಪುಟ್ಟಿದನರಸಂಗಮರಸಿಗಂ ಪುಟ್ಟಿದನೇ|| ೧೩೩
ಪದ್ಯ-೧೩೩:ಪದವಿಭಾಗ-ಅರ್ಥ:ಪುಟ್ಟೆ ಮುಳಿಸು ಒಸಗೆಗಳೆ ಕಡುಗಟ್ಟಂ (ಕೋಪ ಸಂತೋಷಗಳು ಹುಟ್ಟಲು ಅದು ನಿಜವಾಗಿಯೂ ಕಷ್ಟವೇ!) ಮುಳಿಸು ಒಸಗೆಯೆಂಬ ನೃಪ ತನಯನು ಅವಂ ಮುಟ್ಟುಗಿಡೆ (ಆದರೆ ಆ ಕೋಪ ಪ್ರಸಾದಗಳು ಎಂಬ ರಾಜಕುಮಾರನು ವಿಫಲನಾದರೆ,) ಪಾರದರದೊಳ್ ಪಟ್ಟಿದನು ಅರಸಂಗ ಅರಸಿಗಂ ಪುಟ್ಟಿದನೇ (ರಾಜ ರಾಣಿಯರಿಗೆ ಹುಟ್ಟಿದವನೇ? ಹಾದರಕ್ಕೆ ಹುಟ್ಟಿದವನು.)
ಪದ್ಯ-೧೩೩:ಅರ್ಥ: ಕೋಪ ಸಂತೋಷಗಳು ಹುಟ್ಟಲು ಅದು ನಿಜವಾಗಿಯೂ ಕಷ್ಟವೇ! ಆದರೆ ಆ ಕೋಪ ಪ್ರಸಾದಗಳು ಎಂಬ ರಾಜಕುಮಾರನು ವಿಫಲನಾದರೆ, ರಾಜ ರಾಣಿಯರಿಗೆ ಹುಟ್ಟಿದವನೇ? ಹಾದರಕ್ಕೆ ಹುಟ್ಟಿದವನು.
  • ಟಿಪ್ಪಣಿ:: ಇಲ್ಲಿ ಕವಿಯು, ನರಸಿಂಹ ಜಾಕಬ್ಬೆಯ ಮಗ ಅರಿಕೇಸರಿಗೆ ಅರ್ಜುನನ್ನು ಹೋಲಿಸುತ್ತಾ, ಅನುಚಿತ, ಅತಿರೇಕಕ್ಕೆ ಹೋಗಿ ಪದ ಬಳಸಿದ್ದಾನೆಂದು ವಿದ್ವಾಂಸರಾದ ಡಿ.ಎಲ್.ಎನ್. ಅಭಿಪ್ರಾಯಪಡುತ್ತಾರೆ.(ಪಂಪಭಾರತ ದೀಪಿಕೆ)
ಎಂದರಸ ನೇಸಱಂದೊಳ
ಗಾಂ ದಿನಕರಸುತನನಿಕ್ಕಿ ಬಂದಲ್ಲದೆ ಕಾ|
ಣೆಂ ದಲ್ ಭವತ್ಪದಾಜ್ಜಮ
ನೆಂದೆೞ್ದನುದಶ್ರುಜಳಲವಾರ್ದ್ರಕಪೋಳಂ|| ೧೩೪ ||
ಪದ್ಯ-೧೩೪:ಪದವಿಭಾಗ-ಅರ್ಥ:ಎಂದು, ( ಎಂಬುದಾಗಿ ಹೇಳಿ) ಅರಸ, ನೇಸಱಂ ದೊಳಗೆ (ರಾಜನೇ ಸೂರ್ಯನು ಮುಳುಗುವದರೊಳಗೆ) // ನೇಸರಂ -ಸೂರ್ಯನು ಅಂದೊಳಗೆ (ಸೂರ್ಯನು ಕಂದುವುದರೊಳಗೆ??) ಆಂ ದಿನಕರಸುತನನು ಇಕ್ಕಿ ಬಂದಲ್ಲದೆ (ನಾನು ಕರ್ಣನನ್ನು ಸಂಹರಿಸಿ ಬಂದಲ್ಲದೆ) ಕಾಣೆಂ (ನಿಮ್ಮನ್ನು ನೋಡೆನು,) ದಲ್ (ನಿಜಕ್ಕೂ) ಭವತ್ ಪದಾಜ್ಜಮನು (ನಿಮ್ಮ ಪಾದ ಕಮಲವನ್ನು) ಎಂದು ಎೞ್ದನು (ಎಂದು ಎದ್ದನು) ಉದಶ್ರುಜಳಲವ ಆರ್ದ್ರ ಕಪೋಳಂ (ಕಣ್ಣೀರಿನ ಕಣಗಳಿಂದ ಒದ್ದೆಯಾದ ಕೆನ್ನೆಯನ್ನುಳ್ಳ ಅರ್ಜುನನು)
ಪದ್ಯ-೧೩೪:ಅರ್ಥ: ೧೩೪. ಎಂಬುದಾಗಿ ಹೇಳಿ ರಾಜನೇ ಸೂರ್ಯನು ಮುಳುಗುವದರೊಳಗೆ ನಾನು ಕರ್ಣನನ್ನು ಸಂಹರಿಸಿ ಬಂದಲ್ಲದೆ ನಿಮ್ಮ ಪಾದ ಕಮಲವನ್ನು ನೋಡೆನು, ಎಂದು ಚಿಮ್ಮುತ್ತಿರುವ ಕಣ್ಣೀರಿನ ಕಣಗಳಿಂದ ಒದ್ದೆಯಾದ ಕೆನ್ನೆಯನ್ನುಳ್ಳ ಅರ್ಜುನನು ಎದ್ದನು.

ಕರ್ಣನೊಡನೆ ಯುದ್ಧಕ್ಕೆ ಅರ್ಜುನನ ಪ್ರವೇಶ[ಸಂಪಾದಿಸಿ]

ವ|| ಅಂತು ಭೂನಾಥಂ ತನ್ನಳವನಱಿದುಮಱಿಯದೆ ಕೆಡೆನುಡಿದು ತಪೋವನದೊಳಲ್ಲದೆ ನೀಗೆನೆಂದೆೞ್ದು ನಿಂದಿರ್ದನನುಸುರಾಂತಕನುಂ ತಾನುಮೆಂತಾನುಂ ಪ್ರಾರ್ಥಿಸಿದೊಡೊಡಂಬಟ್ಟಜಾತ ಶತ್ರುಗೆ ಪೊಡೆವಟ್ಟು ರಥಮನೇಱಿ ಕೌರವದ್ವಜಿನಿಗೆ ಭಯಜ್ವರಂ ಬರ್ಪಂತೆ ಬಂದು ಪವನ ತನಯಂಗಂತಕತನಯನಸಮಾವಸ್ಥೆಯಂ ಪೇೞ್ದಿಂದಿನನುವರಮೆಲ್ಲಮಂ ನಿಮ್ಮೊರ್ವರ ಮೇಲಿಕ್ಕಿ ಪಿರಿದುಂ ಪೊೞ್ತು ತಡೆದಿರ್ಪೆವೆನೆ ಹಿಡಿಂಬಾಂತಕನಿಂತೆಂದಂ-
ವಚನ:ಪದವಿಭಾಗ-ಅರ್ಥ:ಅಂತು ಭೂನಾಥಂ ತನ್ನಳವನು ಅಱಿದುಂ ಅಱಿಯದೆ ಕೆಡೆನುಡಿದು (ಹೀಗೆ ರಾಜನಾದ ಧರ್ಮರಾಯನು ತನ್ನ ಪರಾಕ್ರಮವನ್ನು ಅರಿತೂ ಅರಿಯದಂತೆ ಕೆಟ್ಟಮಾತುಗಳನ್ನಾಡಿ) ತಪೋವನದೊಉ ಅಲ್ಲದೆ ನೀಗೆನು ಎಂದು ಎೞ್ದು ನಿಂದಿರ್ದನನು (ತಪೋವನದಲ್ಲಲ್ಲದೆ (ತನ್ನ ಜೀವನವನ್ನು) ಬೇರೆ ಕಡೆಯಲ್ಲಿ ಕಳೆಯುವುದಿಲ್ಲವೆಂದು ಎದ್ದು ನಿಂತಿದ್ದವನನ್ನು) ಅಸುರಾಂತಕನುಂ ತಾನುಂ ಎಂತಾನುಂ ಪ್ರಾರ್ಥಿಸಿದೊಡೆ (ಕೃಷ್ಣನೂ ಅರ್ಜುನನೂ ಹೇಗೋ ಬೇಡಿಕೊಳ್ಳಲಾಗಿ) ಒಡಂಬಟ್ಟ ಅಜಾತ ಶತ್ರುಗೆ ಪೊಡೆವಟ್ಟು ರಥಮನೇಱಿ (ಒಪ್ಪಿಕೊಂಡ ಧರ್ಮರಾಜನಿಗೆ ನಮಸ್ಕಾರಮಾಡಿ ತೇರನ್ನು ಹತ್ತಿಕೊಂಡು) ಕೌರವದ್ವಜಿನಿಗೆ ಭಯಜ್ವರಂ ಬರ್ಪಂತೆ ಬಂದು (ಕೌರವಸೈನ್ಯಕ್ಕೆ ಭಯಜ್ವರ ಬರುವ ಹಾಗೆ ಬಂದು) ಪವನ ತನಯಂಗೆ ಅಂತಕತನಯನ ಸಮಾವಸ್ಥೆಯಂ (ಭೀಮನಿಗೆ ಧರ್ಮರಾಯನ ಸಮಸ್ಥಿತಿಯನ್ನು ಹೇಳಿ) ಪೇೞ್ದಿಂದಿನ ಅನುವರಮೆಲ್ಲಮಂ ನಿಮ್ಮೊರ್ವರ ಮೇಲಿಕ್ಕಿ (ಈ ದಿನದ ಯುದ್ಧಭಾರವೆಲ್ಲವನ್ನೂ ನಿಮ್ಮೊಬ್ಬರ ಮೇಲೆಯೇ ಹೇರಿ) ಪಿರಿದುಂ ಪೊೞ್ತು ತಡೆದಿರ್ಪೆವೆನೆ ಹಿಡಿಂಬಾಂತಕನು ಇಂತೆಂದಂ (ಬಹಳ ಹೊತ್ತು ತಡೆದಿದ್ದೆವು ಎನ್ನಲು ಭೀಮನು ಹೀಗೆಂದನು)-
ವಚನ:ಅರ್ಥ:ಹೀಗೆ ರಾಜನಾದ ಧರ್ಮರಾಯನು ತನ್ನ ಪರಾಕ್ರಮವನ್ನು ಅರಿತೂ ಅರಿಯದಂತೆ ಕೆಟ್ಟಮಾತುಗಳನ್ನಾಡಿ, ತಪೋವನದಲ್ಲಿ ಅಲ್ಲದೆ (ತನ್ನ ಜೀವನವನ್ನು) ಬೇರೆ ಕಡೆಯಲ್ಲಿ ಕಳೆಯುವುದಿಲ್ಲವೆಂದು ಎದ್ದು ನಿಂತಿದ್ದವನನ್ನು, ಕೃಷ್ಣನೂ ಅರ್ಜುನನೂ ಹೇಗೋ ಬೇಡಿಕೊಳ್ಳಲಾಗಿ ಒಪ್ಪಿಕೊಂಡ ಧರ್ಮರಾಜನಿಗೆ ನಮಸ್ಕಾರಮಾಡಿ ತೇರನ್ನು ಹತ್ತಿಕೊಂಡು ಕೌರವಸೈನ್ಯಕ್ಕೆ ಭಯಜ್ವರ ಬರುವ ಹಾಗೆ ಬಂದು ಭೀಮನಿಗೆ ಧರ್ಮರಾಯನ ಸಮಸ್ಥಿತಿಯನ್ನು ಹೇಳಿ ಈ ದಿನದ ಯುದ್ಧಭಾರವೆಲ್ಲವನ್ನೂ ನಿಮ್ಮೊಬ್ಬರ ಮೇಲೆಯೇ ಹೇರಿ ಬಹಳ ಹೊತ್ತು ತಡೆದಿದ್ದೆವು ಎನ್ನಲು ಭೀಮನು ಹೀಗೆಂದನು-
ಮ|| ನರ ಮಾತಂಗ ತುರಂಗ ಸೈನ್ಯಮಿದಿರಾಂತೀರೆಂಟು ಲಕ್ಕಂಬರಂ
ಕರಗಿತ್ತೆನ್ನ ನಿಶಾತ ಹೇತಿ ಹತಿಯಿಂ ಮತ್ತಂತುಮೀ ತೋಳ ತೀನ್|
ಕರಗಲ್ಕಾರ್ತಪುದಿಲ್ಲದಕ್ಕರಿಗ ಪೇೞ್ ನೀಂ ಬೇೞ್ಪುದೇ ಸಂಗರಾ
ಜಿರದೊಳ್ ಕೌರವರೆಂಬ ಕಾಕಕುಳಕೆನ್ನೀಯೊಂದೆ ಬಿಲ್ ಸಾಲದೇ|| ೧೩೫ ||
ಪದ್ಯ-೧೩೫:ಪದವಿಭಾಗ-ಅರ್ಥ:ನರ ಮಾತಂಗ ತುರಂಗ ಸೈನ್ಯಮ್ ಇದಿರಾಂತು ಈರೆಂಟು ಲಕ್ಕಂಬರಂ ಕರಗಿತ್ತು (ನನ್ನನ್ನು ಎದುರಿಸಿದ ಸುಮಾರು ಹದಿನಾರುಲಕ್ಷದವರೆಗಿನ ಆನೆ ಕುದುರೆ ಪದಾತಿಗಳು ನನ್ನ ಹೊಡೆತಕ್ಕೆ ಸಿಕ್ಕಿ - > ಕರಗಿದುವು.); ಎನ್ನ ನಿಶಾತ ಹೇತಿ ಹತಿಯಿಂ ( ನನ್ನ ಹರಿತ ಆಯುಧಗಳ ಹೊಡೆತಕ್ಕೆ ಸಿಕ್ಕಿ ಕರಗಿದುವು) ಮತ್ತು ಅಂತುಂ ಈ ತೋಳ ತೀನ್, (ಅಷ್ಟಾದರೂ ಈ ನನ್ನ ತೋಳಿನ ನವೆಯು) ಕರಗಲ್ಕೆ ಆರ್ತಪುದು (ಕರಗುವುದಕ್ಕೆ ಸಮರ್ಥವಾಗಿಲ್ಲ.) ಇಲ್ಲದ ಅಕ್ಕರಿಗ ಪೇೞ್ ನೀಂ ಬೇೞ್ಪುದೇ ಸಂಗರಾಜಿರದೊಳ್ ಕೌರವರೆಂಬ ಕಾಕಕುಳಕೆನ್ನೀಯೊಂದೆ ಬಿಲ್ ಸಾಲದೇ
ಪದ್ಯ-೧೩೫:ಅರ್ಥ: ನನ್ನನ್ನು ಎದುರಿಸಿದ ಸುಮಾರು ಹದಿನಾರುಲಕ್ಷದವರೆಗಿನ ಆನೆ ಕುದುರೆ ಪದಾತಿಗಳು ನನ್ನ ಹರಿತ ಆಯುಧಗಳ ಹೊಡೆತಕ್ಕೆ ಸಿಕ್ಕಿ ಕರಗಿದುವು. ಅಷ್ಟಾದರೂ ಈ ನನ್ನ ತೋಳಿನ ನವೆಯು ಮಾತ್ರ ಕರಗುವುದಕ್ಕೆ ಸಮರ್ಥವಾಗಿಲ್ಲ. (ಆ ಸೈನ್ಯಕ್ಕೆ ನೀನು ಹೇಳಬೇಕೇ- ನಾನೊಬ್ಬನೇ ಸಾಕು) ಅರ್ಜುನ, ಅದಕ್ಕೆ ನೀನೂ ಬರಬೇಕೆ? ಯುದ್ಧದಲ್ಲಿ ಕೌರವರೆಂಬ ಕಾಗೆಯ ಗುಂಪಿಗೆ ನನ್ನ ಈ ಒಂದೇ ಬಿಲ್ಲು ಸಾಲದೇ? ಎಂದನು ಭೀಮ.
ವ|| ಎಂದ ಭೀಮನನಕಲಂಕರಾಮಂ ನಿಮ್ಮ ಭುಜಬಲಕ್ಕದೇವಿರಿದೆಂದು ನೀಮೆನ್ನ ಕಾಳೆಗಮಂ ಸುರಿಗೆಗಾಳೆಗಮಂ ನೋೞ್ಪಂತೆ ತೊಡೆಯಂ ಪೊಯ್ದಾರ್ದು ನೋಡುತ್ತುಮಿರಿಮೆಂದು ಪವನಜನನೊಡಗೊಂಡು ಪವನಜವದಿಂ ಕರ್ಣನ ರಥಮೆಲ್ಲಿತ್ತೆತ್ತ ಪೋದುದೆನುತುಂ ಬರ್ಪತಿರಥ ಮಥನನ ರಥದ ಬರವಂ ಕಂಡು ಕೌರವಬಲಮೆಲ್ಲಮೊಲ್ಲನುಲಿದೋಡಿ ವೈಕರ್ತನನ ಮರೆಯಂ ಪುಗುವುದುಂ ಮದೀಯ ಮನೋರಥಮಿಂದು ದೊರೆಕೊಂಡುದೆಂದು ದಿನಕರತನೂಜನೆರಡು ಮುಯ್ವುಮಂ ನೋಡಿ ಸಮರಾನಂದಂಬೆರಸು ಶಲ್ಯನಂ ರಥಮನೆಸಗಲ್ವೇೞ್ದು ದಿವ್ಯಾಸ್ತ್ರಂಗಳ ದೊಣೆಗಳನೆರಡುಂ ದೆಸೆಯೊಳಂ ಬಿಗಿದು ತಾಳವಟ್ಟದ ಬಿಲ್ಲಂ ಕೆಂದಳದೊಳಮರೆ ನೀವಿ ಜೇವೊಡೆದಾಗಳ್-
ವಚನ:ಪದವಿಭಾಗ-ಅರ್ಥ:ಎಂದ ಭೀಮನನು ಅಕಲಂಕರಾಮಂ (ಎಂದು ಹೇಳಿದ ಭೀಮನನ್ನು ಕುರಿತು ಅರ್ಜುನನು ) ನಿಮ್ಮ ಭುಜಬಲಕ್ಕೇ ಆದೇವಿರಿದೂ ಏಂದು (ನಿಮ್ಮ ತೋಳಬಲಕ್ಕೆ ಅದೇನು ದೊಡ್ಡದು ಎಂದು ಹೇಳಿ,) ನೀಂ ಎನ್ನ ಕಾಳೆಗಮಂ ಸುರಿಗೆಗಾಳೆಗಮಂ (ಸುರಿಗೆ ಕಾಳಗವನ್ನು) ನೋೞ್ಪಂತೆ ತೊಡೆಯಂ ಪೊಯ್ದು ಆರ್ದು (ನೀವು ನನ್ನ ಸುರಿಗೆ ಕಾಳಗವನ್ನು ನೋಡುವಂತೆ ತೊಡೆಯನ್ನು ತಟ್ಟಿ ಆರ್ಭಟಮಾಡಿ) ನೋಡುತ್ತುಂ ಇರಿಂ ಎಂದು (ನೋಡುತ್ತಾ ಇರಿ ಎಂದು-) ಪವನಜನನು ಒಡಗೊಂಡು ಪವನಜವದಿಂ (ಭೀಮನೊಡಗೂಡಿಕೊಂಡು ವಾಯುವೇಗದಿಂದ) ಕರ್ಣನ ರಥಂ ಎಲ್ಲಿತ್ತೊ ಎ/ಅತ್ತ ಪೋದುದು ಎನುತುಂ ಬರ್ಪ ಅತಿರಥ ಮಥನನ ರಥದ ಬರವಂ ಕಂಡು (ಕರ್ಣನ ತೇರೆಲ್ಲಿದೆ ಯಾವಕಡೆ ಹೋಯಿತು ಎನ್ನುವ ಬರುತ್ತಿರುವ ಅತಿರಥಮಥನನಾದ ಅರ್ಜುನನ ಬರವನ್ನು ಕಂಡು) ಕೌರವಬಲಂ ಎಲ್ಲಮು ಒಲ್ಲನು ಉಲಿದೋಡಿ (ಕೌರವಸೈನ್ಯವೆಲ್ಲ ಮೆಲ್ಲಗೆ ಕೂಗಿಕೊಂಡು ಓಡಿಹೋಗಿ) ವೈಕರ್ತನನ ಮರೆಯಂ ಪುಗುವುದುಂ (ಕರ್ಣನ ಮರೆಯನ್ನು ಪ್ರವೇಶಿಸಲು,) ಮದೀಯ ಮನೋರಥಮಿಂದು ದೊರೆಕೊಂಡುದೆಂದು (ನನ್ನ ಇಷ್ಟಾರ್ಥವು ಈ ದಿನ ಪೂರ್ಣವಾಯಿತು ಎಂದು) ದಿನಕರತನೂಜನು ಎರಡು ಮುಯ್ವುಮಂ ನೋಡಿ ( ಕರ್ಣನು ತನ್ನ ಎರಡು ಭುಜಗಳನ್ನೂ ನೋಡಿ) ಸಮರಾನಂದಂ ಬೆರಸು ಶಲ್ಯನಂ ರಥಮನು ಎಸಗಲ್ ವೇೞ್ದು (ಯುದ್ಧಾನಂದದಿಂದ ಕೂಡಿ ಶಲ್ಯನನ್ನು ತೇರನ್ನು ನಡೆಸುವಂತೆ ಹೇಳಿ) ದಿವ್ಯಾಸ್ತ್ರಂಗಳ ದೊಣೆಗಳನೆರಡುಂ ದೆಸೆಯೊಳಂ ಬಿಗಿದು (ದಿವ್ಯಾಸ್ತ್ರಗಳ ಬತ್ತಳಿಕೆಯನ್ನು ಎರಡು ಪಕ್ಕದಲ್ಲಿಯೂ ಬಿಗಿದುಕೊಂಡು) ತಾಳವಟ್ಟದ ಬಿಲ್ಲಂ ಕೆಂದಳದೊಳ್ (ಕೆಂಪಗಿರುವ ತನ್ನ ಅಂಗೈಯನ್ನು) ಅಮರೆ ನೀವಿ ಜೇವೊಡೆದಾಗಳ್ (ತಾಳವಟ್ಟವೆಂಬ ಬಿಲ್ಲು ಕೆಂಪಗಿರುವ ತನ್ನ ಅಂಗೈಯನ್ನು ಸೇರಿಕೊಂಡಿರಲು ಬಿಲ್ಲಿನ ಹದೆಯನ್ನು ಎಳೆದು ಮೀಟಿ ಠೇಂಕಾರ ಮಾಡಿ(ಜೇವೊಡೆ)ದನು. )-
ವಚನ:ಅರ್ಥ:ಎಂದು ಹೇಳಿದ ಭೀಮನನ್ನು ಕುರಿತು ಅರ್ಜುನನು ನಿಮ್ಮ ತೋಳಬಲಕ್ಕೆ ಅದೇನು ದೊಡ್ಡದು ಎಂದು ಹೇಳಿ ನೀವು ನನ್ನ ಸುರಿಗೆ ಕಾಳಗವನ್ನು ನೋಡುವಂತೆ ತೊಡೆಯನ್ನು ತಟ್ಟಿ ಆರ್ಭಟಮಾಡಿ ನೋಡುತ್ತಾ ಇರಿ ಎಂದನು. ಭೀಮನೊಡಗೂಡಿಕೊಂಡು ವಾಯುವೇಗದಿಂದ ಕರ್ಣನ ತೇರೆಲ್ಲಿದೆ ಯಾವಕಡೆ ಹೋಯಿತು ಎನ್ನುವ ಬರುತ್ತಿರುವ ಅತಿರಥಮಥನನಾದ ಅರ್ಜುನನ ಬರವನ್ನು ಕಂಡು ಕೌರವಸೈನ್ಯವೆಲ್ಲ ಮೆಲ್ಲಗೆ ಕೂಗಿಕೊಂಡು ಓಡಿಹೋಗಿ ಕರ್ಣನ ಮರೆಯನ್ನು ಪ್ರವೇಶಿಸಿದುವು. ನನ್ನ ಇಷ್ಟಾರ್ಥವು ಈ ದಿನ ಪೂರ್ಣವಾಯಿತು ಎಂದು ಕರ್ಣನು ತನ್ನ ಎರಡು ಭುಜಗಳನ್ನೂ ನೋಡಿ ಯುದ್ಧಾನಂದದಿಂದ ಕೂಡಿ ಶಲ್ಯನನ್ನು ತೇರನ್ನು ನಡೆಸುವಂತೆ ಹೇಳಿ ದಿವ್ಯಾಸ್ತ್ರಗಳ ಬತ್ತಳಿಕೆಯನ್ನು ಎರಡು ಪಕ್ಕದಲ್ಲಿಯೂ ಬಿಗಿದುಕೊಂಡು ತಾಳವಟ್ಟವೆಂಬ ಬಿಲ್ಲು ಕೆಂಪಗಿರುವ ತನ್ನ ಅಂಗೈಯನ್ನು ಸೇರಿಕೊಂಡಿರಲು ಬಿಲ್ಲಿನ ಹದೆಯನ್ನು ಎಳೆದು ಮೀಟಿ ಠೇಂಕಾರ ಮಾಡಿ(ಜೇವೊಡೆ)ದನು.
ಪೃಥ್ವಿ|| ಮಹಾ ಪ್ರಳಯ ಭೈರವ ಕ್ಷುಭಿತ ಪುಷ್ಕಳಾವರ್ತಮಾ
ಮಹೋಗ್ರ ರಿಪು ಭೂಭುಜ ಶ್ರವಣ ಭೈರವಾಡಂಬರಂ|
ಗುಹಾ ಗಹನ ಗಹ್ವರೋದರ ವಿಶೀರ್ಣಮಾದಂದದೇಂ
ಮುಹು ಪ್ರಕಟಮಾದುದಾ ರವಿತನೂಭವ ಜ್ಯಾರವಂ|| ೧೩೬ ||
ಪದ್ಯ-೧೩೬:ಪದವಿಭಾಗ-ಅರ್ಥ:ಮಹಾ ಪ್ರಳಯ ಭೈರವ ಕ್ಷುಭಿತ (ಪ್ರಳಯಕಾಲದ ಕಾಲಭೈರವನಿಂದ ಕಲಕಲ್ಪಟ್ಟ/ ರೇಗಿಸಲ್ಪಟ್ಟ) ಪುಷ್ಕಳಾವರ್ತಂ ಆ ಮಹೋಗ್ರ ರಿಪು ಭೂಭುಜ ಶ್ರವಣ (ಪುಷ್ಟಲಾವರ್ತ ಮೋಡದಂತೆ ಆ ಅತಿಭಯಂಕರವಾದ ಶತ್ರುರಾಜರ ಕಿವಿಗೆ) ಭೈರವಾಡಂಬರಂ ಗುಹಾ ಗಹನ ಗಹ್ವರೋದರ ವಿಶೀರ್ಣಮಾದು ಅಂದು ಅದೇಂ (ಭೈರವಾಡಂಬರವಾಗಿ ಗುಹೆಗಳ ಆಳವಾದ ಕಣಿವೆಗಳ ಒಳಭಾಗವನ್ನು ಭೇದಿಸಿದ ಕರ್ಣನ ಬಿಲ್ಲಿನ ಹೆದೆಯ ಶಬ್ದವು ಆ ದಿನ ಪುನ ಪುನ ಪ್ರಕಟವಾಯಿತು.)ಮುಹು ಪ್ರಕಟಮಾದುದು ರವಿತನೂಭವ ಜ್ಯಾ ರವಂ (ಕರ್ಣನ ಬಿಲ್ಲಿನ ಹೆದೆಯ ಶಬ್ದವು)
ಪದ್ಯ-೧೩೬:ಅರ್ಥ: ೧೩೬. ಪ್ರಳಯಕಾಲದ ಕಾಲಭೈರವನಿಂದ ಕಲಕಲ್ಪಟ್ಟ/ ರೇಗಿಸಲ್ಪಟ್ಟ ಪುಷ್ಟಲಾವರ್ತ ಮೋಡದಂತೆ ಆ ಅತಿಭಯಂಕರವಾದ ಶತ್ರುರಾಜರ ಕಿವಿಗೆ ಭೈರವಾಡಂಬರವಾಗಿ ಗುಹೆಗಳ ಆಳವಾದ ಕಣಿವೆಗಳ ಒಳಭಾಗವನ್ನು ಭೇದಿಸಿದ ಕರ್ಣನ ಬಿಲ್ಲಿನ ಹೆದೆಯ ಶಬ್ದವು ಆ ದಿನ ಪುನ ಪುನ ಪ್ರಕಟವಾಯಿತು.
ವ|| ಅಂತು ಯುಗಾಂತ ವಾತಾಹತ ಕುಲಗಿರಿಯೆ ನೆಲೆಯಿಂ ತಳರ್ವಂತೆ ತಳರ್ದು ಧ್ವಾಂಕ್ಷಧ್ವಜಮಂಬರತಳದೊಳ್ ಮಿಳಿರೆ ತನಗಿದಿರಂ ಬರ್ಪ ಕರ್ಣನ ರಥಕ್ಕೆ ತನ್ನ ರಥಮನಾಸನ್ನಮಾಗೆ ಪರಿಯಿಸಿ ವಿಂಧ್ಯ ಮಳಯ ಮಹೀಧರಂಗಳೊಂದೊಂದರೊಳ್ ತಾಗುವಂತೆ ತಾಗಿ ದೇವದತ್ತ ಶಂಖಮಂ ಪೂರೈಸಿ ಗಾಂಡೀವಮನೇಱಿಸಿ ನೀವಿ ಜೇವೊಡೆದಾಗಳ್-
ವಚನ:ಪದವಿಭಾಗ-ಅರ್ಥ:ಅಂತು ಯುಗಾಂತ ವಾತಾಹತ ಕುಲಗಿರಿಯೆ ನೆಲೆಯಿಂ (ಹಾಗೆ ಪ್ರಳಯಕಾಲದ ಗಾಳಿಯಿಂದ ಹೊಡೆಯಲ್ಪಟ್ಟ ಕುಲಪರ್ವತಗಳು (ತಾವಿರುವ) ನೆಲೆಯಿಂದ) ತಳರ್ವಂತೆ ತಳರ್ದು (ಚಲಿಸುವಂತೆ ಕರ್ಣನು ಚಲಿಸಿ,) ಧ್ವಾಂಕ್ಷಧ್ವಜ ಅಂಬರತಳದೊಳ್ ಮಿಳಿರೆ (ಕಾಗೆಯ ಬಾವುಟವು ಆಕಾಶಪ್ರದೇಶದಲ್ಲಿ ಅಲುಗಾಡುತ್ತಿರಲು) ತನಗೆ ಇದಿರಂ ಬರ್ಪ ಕರ್ಣನ ರಥಕ್ಕೆ (ತನಗೆ ಎದುರಾಗಿ ಬರುತ್ತಿರುವ ಕರ್ಣನ ರಥಕ್ಕೆ,) ತನ್ನ ರಥಮನು ಆಸನ್ನಮಾಗೆ ಪರಿಯಿಸಿ (ಸಮೀಪವಾಗುವ ಹಾಗೆ ಹರಿಯಿಸಿ) ವಿಂಧ್ಯ ಮಳಯ ಮಹೀಧರಂಗಳು ಒಂದೊಂದರೊಳ್ ತಾಗುವಂತೆ (ವಿಂಧ್ಯ ಮಲಯಪರ್ವತಗಳು ಒಂದರೊಡನೊಂದು ತಾಗುವಂತೆ) ತಾಗಿ ದೇವದತ್ತ ಶಂಖಮಂ ಪೂರೈಸಿ (ಅರ್ಜುನನು ದೇವದತ್ತಶಂಖವನ್ನು ಊದಿ,) ಗಾಂಡೀವಮನು ಏಱಿಸಿ ನೀವಿ ಜೇವೊಡೆದಾಗಳ್ ( ಗಾಂಡೀವಕ್ಕೆ ಹೆದೆಯನ್ನೇರಿಸಿ ನಾಣನ್ನು ಚೆನ್ನಾಗಿ ಸೆಳೆದು ಶಬ್ದಮಾಡಿದಾಗ,-)-
ವಚನ:ಅರ್ಥ:ಹಾಗೆ ಪ್ರಳಯಕಾಲದ ಗಾಳಿಯಿಂದ ಹೊಡೆಯಲ್ಪಟ್ಟ ಕುಲಪರ್ವತಗಳು (ತಾವಿರುವ) ನೆಲೆಯಿಂದ ಚಲಿಸುವಂತೆ ಕರ್ಣನು ಚಲಿಸಿದನು. ಕಾಗೆಯ ಬಾವುಟವು ಆಕಾಶಪ್ರದೇಶದಲ್ಲಿ ಅಲುಗಾಡುತ್ತಿರಲು ತನಗೆ ಎದುರಾಗಿ ಬರುತ್ತಿರುವ ಕರ್ಣನ ರಥಕ್ಕೆ, ತನ್ನ ರಥವನ್ನು ಸಮೀಪವಾಗುವ ಹಾಗೆ ಹರಿಯಿಸಿ ವಿಂಧ್ಯ ಮಲಯಪರ್ವತಗಳು ಒಂದರೊಡನೊಂದು ತಾಗುವಂತೆ ಎದುರಿಸಿ, ಅರ್ಜುನನು ದೇವದತ್ತಶಂಖವನ್ನು ಊದಿ, ಗಾಂಡೀವಕ್ಕೆ ಹೆದೆಯನ್ನೇರಿಸಿ ನಾಣನ್ನು ಚೆನ್ನಾಗಿ ಸೆಳೆದು ಶಬ್ದಮಾಡಿದನು. ಆಗ-
ವ|| ಸ್ರ|| ಎನಿತಾ ಬ್ರಹ್ಮಾಂಡದಿಂದಿತ್ತುದಧಿ ಕುಲ ನಗ ದ್ವೀಪ ಸಂಘಾತಮಂತಂ
ತನಿತುಂ ಬತ್ತಿತ್ತು ತೂಳ್ದತ್ತುಡುಗಿದುದೆನೆ ದಿಕ್ಪಾಲರಾ ದೇವದತ್ತ|
ಧ್ವನಿ ಸಂಮಿಶ್ರಂ ಸಮುದ್ಯದ್ರಜತಗಿರಿತಟ ಸ್ಪಷ್ಟ ಸಂಶ್ಲಿಷ್ಟ ಮೌರ್ವೀ
ನಿನದಂ ಪರ್ವಿತ್ತಕಾಂಡ ಪ್ರಳಯ ಘನ ಘಟಾಟೋಪ ಗಂಭೀರನಾದಂ|| ೧೩೭ ||
ಪದ್ಯ-೧೩೭:ಪದವಿಭಾಗ-ಅರ್ಥ:ಎನಿತು (ಎಷ್ಟು) ಆ ಬ್ರಹ್ಮಾಂಡದಿಂದ ಇತ್ತ ಉದಧಿ ಕುಲ ನಗ ದ್ವೀಪ ಸಂಘಾತಂ (ಬ್ರಹ್ಮಾಂಡದಿಂದ ಈ ಕಡೆ ಎಷ್ಟು ಸಮುದ್ರ, ಕುಲಪರ್ವತದ್ವೀಪ ಸಮೂಹವಿದ್ದಿತೋ ಅವಷ್ಟೂ ಕ್ರಮವಾಗಿ ಬತ್ತಿತು,) ಆ ಅಂತು ಅಂತನಿತುಂ ಬತ್ತಿತ್ತು ತೂಳ್ದತ್ತು ಉಡುಗಿದುದು ಎನೆ ದಿಕ್ಪಾಲರು (ತಳ್ಳಲ್ಪಟ್ಟಿತು ಮತ್ತು ಸುಕ್ಕಿಹೋಯಿತು ಎಂದು ದಿಕ್ಪಾಲಕರು ಹೇಳುತ್ತಿರಲು) ದೇವದತ್ತ ಧ್ವನಿ ಸಂಮಿಶ್ರಂ (ದೇವದತ್ತವೆಂಬ ಶಂಖಧ್ವನಿಯಿಂದ ಕೂಡಿಕೊಂಡಿರುವುದೂ) ಸಮುದ್ಯತ್ ರಜತಗಿರಿ ತಟ (ಎತ್ತರವಾದ ಕೈಲಾಸಪರ್ವತದ ದಡದಲ್ಲಿಯೂ ಸ್ಪಷ್ಟವಾಗಿ ಸೇರಿಕೊಂಡು ಪ್ರಕಟವಾಯಿತು.) ಸ್ಪಷ್ಟ ಸಂಶ್ಲಿಷ್ಟ ಮೌರ್ವೀ ನಿನದಂ (ಪ್ರಳಯಕಾಲದ ಮೋಡಗಳ ಸಮೂಹದ ಆಡಂಬರವುಳ್ಳದೂ ಆದ ಆ ಹೆದೆಯ ಟಂಕಾರ ಶಬ್ದವು) ಪರ್ವಿತ್ತು ಅಕಾಂಡ ಪ್ರಳಯ ಘನ ಘಟಾಟೋಪ ಗಂಭೀರನಾದಂ (ಅಕಾಲದಲ್ಲಿ ಉಂಟಾದ ಪ್ರಳಯ ಮೇಘ ಸಮೂಹಗಳ ಆಡಂಬರವನ್ನುಳ್ಳ ಗಂಭೀರ ಶಬ್ದವನ್ನುಳ್ಳ ಅತಿ ಎತ್ತರವಾದ ರಜತಗಿರಿ ಪ್ರದೇಶದಲ್ಲಿ ಸ್ಪಷ್ಟವಾಗಿ ಸೇರಿಕೊಂಡು - ಬಿಲ್ಲಿನ ಠೇಂಕಾರ ಶಬ್ದವು- ಹಬ್ಬಿತ್ತು.)
ಪದ್ಯ-೧೩೭:ಅರ್ಥ: ಬ್ರಹ್ಮಾಂಡದಿಂದ ಈ ಕಡೆ ಎಷ್ಟು ಸಮುದ್ರ, ಕುಲಪರ್ವತದ್ವೀಪ ಸಮೂಹವಿದ್ದಿತೋ ಅವಷ್ಟೂ ಕ್ರಮವಾಗಿ ಬತ್ತಿತು, ತಳ್ಳಲ್ಪಟ್ಟಿತು ಮತ್ತು ಸುಕ್ಕಿಹೋಯಿತು ಎಂದು ದಿಕ್ಪಾಲಕರು ಹೇಳುತ್ತಿರಲು ದೇವದತ್ತವೆಂಬ ಶಂಖಧ್ವನಿಯಿಂದ ಕೂಡಿಕೊಂಡಿರುವುದೂ ಪ್ರಳಯಕಾಲದ ಮೋಡಗಳ ಸಮೂಹದ ಆಡಂಬರವುಳ್ಳದೂ ಆದ ಆ ಹೆದೆಯ ಟಂಕಾರಶಬ್ದವು ಎತ್ತರವಾದ ಕೈಲಾಸಪರ್ವತದ ದಡದಲ್ಲಿಯೂ ಸ್ಪಷ್ಟವಾಗಿ ಸೇರಿಕೊಂಡು ಪ್ರಕಟವಾಯಿತು.
ವ|| ಆಗಳಾ ಧ್ವನಿಯಂ ಕೇಳ್ದು ದೇವೇಂದ್ರನಿಂದ್ರಲೋಕದೋಳ್ ಮಿಟ್ಟೆಂದುಮಿಡುಕಲಪ್ಪೊಡಂ ದೇವರಿಲ್ಲದಂತು ದೇವನಿಕಾಯಂಬೆರಸು ತನ್ನ ಮಗನ ಕಾಳೆಗಮಂ ನೋಡಲೆಂದು ಚಿತ್ರಪಟಮಂ ಕೆದಱಿ ಗಗನತಳಮನಳಂಕರಿಸಿದಂತೆ ಷೋಡಶ ರಾಜರ್ವೆರಸು ಬಂದಿರ್ದನಾಗಳ್-
ವಚನ:ಪದವಿಭಾಗ-ಅರ್ಥ:ಆಗಳಾ ಧ್ವನಿಯಂ ಕೇಳ್ದು ದೇವೇಂದ್ರನು ಇಂದ್ರಲೋಕದೋಳ್ ಮಿಟ್ಟೆಂದು ಮಿಡುಕಲಪ್ಪೊಡಂ (ಆಗ ಆ ಧ್ವನಿಯನ್ನು ಕೇಳಿ ದೇವೇಂದ್ರನ ಇಂದ್ರಲೋಕದಲ್ಲಿ ಮಿಟ್ಟೆಂದು ಅಲುಗಾಡುವುದಕ್ಕೂ- ಕುಮುಟಿಬಿದ್ದರು) ದೇವರಿಲ್ಲದಂತು ದೇವನಿಕಾಯಂ ಬೆರಸು (ದೇವಲೋಕದಲ್ಲಿ ದೇವತೆಯಿಲ್ಲದ ಹಾಗೆ ಎಲ್ಲ ದೇವತೆಗಳ ಸಮೂಹದೊಡನೆ ಕೂಡಿ) ತನ್ನ ಮಗನ ಕಾಳೆಗಮಂ ನೋಡಲೆಂದು ಚಿತ್ರಪಟಮಂ ಕೆದಱಿ (ತನ್ನ ಮಗನ ಕಾಳಗವನ್ನು ನೋಡಬೇಕೆಂದು ಚಿತ್ರಪಟವನ್ನು ಹರಡಿ) ಗಗನತಳಮನು ಅಳಂಕರಿಸಿದಂತೆ ಷೋಡಶ ರಾಜರ್ವೆರಸು ಬಂದಿರ್ದನಾಗಳ್ (ಆಕಾಶಪ್ರದೇಶವನ್ನು ಅಲಂಕರಿಸುವ ಹಾಗೆ ಹದಿನಾರುರಾಜರುಗಳೊಡನೆ ಬಂದಿದ್ದನು.) -
ವಚನ:ಅರ್ಥ: ಆಗ ಆ ಧ್ವನಿಯನ್ನು ಕೇಳಿ ದೇವೇಂದ್ರನ ಇಂದ್ರಲೋಕದಲ್ಲಿ ಮಿಟ್ಟೆಂದು ಅಲುಗಾಡುವುದಕ್ಕೂ ದೇವಲೋಕದಲ್ಲಿ ದೇವತೆಯಿಲ್ಲದ ಹಾಗೆ ಎಲ್ಲ ದೇವತೆಗಳ ಸಮೂಹದೊಡನೆ ಕೂಡಿ ತನ್ನ ಮಗನ ಕಾಳಗವನ್ನು ನೋಡಬೇಕೆಂದು ಚಿತ್ರಪಟವನ್ನು ಹರಡಿ ಆಕಾಶಪ್ರದೇಶವನ್ನು ಅಲಂಕರಿಸುವ ಹಾಗೆ ಹದಿನಾರುರಾಜರುಗಳೊಡನೆ ಬಂದಿದ್ದನು.
ಕಂ|| ದೇವ ಬ್ರಹ್ಮ ಮುನೀಂದ್ರಾ
ಸೇವಿತನುತ್ತಪ್ತ ಕನಕವರ್ಣಂ ಹಂಸ|
ಗ್ರೀವ ನಿಹಿತೈಕಪಾದನಿ
ಳಾವಂದ್ಯನನಿಂದ್ಯನಬ್ಜಗರ್ಭಂ ಬಂದಂ|| ೧೩೮ ||
ಪದ್ಯ-೧೩೮:ಪದವಿಭಾಗ-ಅರ್ಥ:ದೇವ ಬ್ರಹ್ಮ ಮುನೀಂದ್ರಾಸೇವಿತಂ (ಆಗ ದೇವತೆಗಳು, ಬ್ರಹ್ಮ ಮತ್ತು ಋಷಿಶ್ರೇಷ್ಠರುಗಳಿಂದ ಸೇವಿಸಲ್ಪಟ್ಟವನೂ) ಉತ್ತಪ್ತ ಕನಕವರ್ಣಂ (ಚೆನ್ನಾಗಿ ಕಾಸಿದ ಚಿನ್ನದ ಬಣ್ಣವುಳ್ಳವನೂ) ಹಂಸಗ್ರೀವ ನಿಹಿತ ಏಕಪಾದನು (ಹಂಸದ ಕತ್ತಿನ ಮೇಲೆ ಇಡಲ್ಪಟ್ಟ ಒಂದು ಪಾದವುಳ್ಳವನೂ) ಇಳಾವಂದ್ಯನು ಅನಿಂದ್ಯನು (ಲೋಕಪೂಜ್ಯನೂ ಯಾರಿಂದಲೂ ನಿಂದಿಸಲ್ಪಡದವನೂ) ಅಬ್ಜಗರ್ಭಂ ಬಂದಂ (ಅಬ್ಜ-ತಾವರೆ; ತಾವರೆಯಲ್ಲ ಹುಟ್ಟಿದವನೂ ಆದ ಬ್ರಹ್ಮನು ಬಂದನು.)
ಪದ್ಯ-೧೩೮:ಅರ್ಥ:ಆಗ ದೇವತೆಗಳು, ಬ್ರಹ್ಮ ಮತ್ತು ಋಷಿಶ್ರೇಷ್ಠರುಗಳಿಂದ ಸೇವಿಸಲ್ಪಟ್ಟವನೂ, ಚೆನ್ನಾಗಿ ಕಾಸಿದ ಚಿನ್ನದ ಬಣ್ಣವುಳ್ಳವನೂ ಹಂಸದ ಕತ್ತಿನ ಮೇಲೆ ಇಡಲ್ಪಟ್ಟ ಒಂದು ಪಾದವುಳ್ಳವನೂ ಲೋಕಪೂಜ್ಯನೂ ಯಾರಿಂದಲೂ ನಿಂದಿಸಲ್ಪಡದವನೂ ತಾವರೆಯಲ್ಲಿ ಹುಟ್ಟಿದವನೂ ಆದ ಬ್ರಹ್ಮನು ಬಂದನು.
ವ|| ಆಗಳ್-
ವಚನ:ಅರ್ಥ: ಆಗ-
ಕಂ|| ಏಱಿಯೆ ನಂದಿಯನಾ ಪೆಱ
ಗೇಱಿದ ಗಿರಿಸುತೆಯ ಮೊಲೆಗಳಳ್ಳೇಱಿಂ ನೀ|
ರೇಱಿಸುತಿರೆ ಕರ್ಣಾರ್ಜುನ
ರೇಱಂ ನೋಡಲ್ಕೆ ಭೂತನಾಥಂ ಬಂದಂ|| ೧೩೯ ||
ಪದ್ಯ-೧೩೯:ಪದವಿಭಾಗ-ಅರ್ಥ:ಏಱಿಯೆ ನಂದಿಯನು ಆ (ಆ ನಂದಿಯನ್ನು ಏರಿಕೊಂಡು) ಪೆಱಗೇಱಿದ (ಪೆರೆಗೆ ಏರಿದ- ಹಿಂದೆ ಹತ್ತಿ ಕುಳಿತಿರುವ) ಗಿರಿಸುತೆಯ ಮೊಲೆಗಳ್ ಅಳ್ಳೇಱಿಂ (ಪಾರ್ವತಿಯ ಮೊಲೆಗಳ ನಯವಾದ ತಿವಿತದಿಂದ) ನೀರ್ ಏಱಿಸುತಿರೆ (ರಸವನ್ನು ಉಕ್ಕಿಸುತ್ತಿರಲು) ಕರ್ಣಾರ್ಜುನರ ಏಱಂ ನೋಡಲ್ಕೆ (ಕರ್ಣಾರ್ಜುನರ ಕಾಳಗವನ್ನು ನೋಡಲು) ಭೂತನಾಥಂ ಬಂದಂ (ಶಿವನೂ ಬಂದನು.)
ಪದ್ಯ-೧೩೯:ಅರ್ಥ: ಆ ನಂದಿಯನ್ನು ಏರಿಕೊಂಡು ಹಿಂದೆ ಹತ್ತಿಕುಳಿತಿರುವ ಪಾರ್ವತಿಯ ಮೊಲೆಗಳ ನಯವಾದ ತಿವಿತದಿಂದ ರಸವನ್ನು ಉಕ್ಕಿಸುತ್ತಿರಲು, ಕರ್ಣಾರ್ಜುನರ ಕಾಳಗವನ್ನು ನೋಡಲು ಶಿವನೂ ಬಂದನು.
ಕಂ|| ಆರನುವರದೊಳಮೆನಗಣ
ಮಾರದ ಕಣ್ಮಲರ್ಗಳಾರ್ಗುಮರಿಗನಿನೆನುತುಂ|
ನೀರದಪಥದೊಳ್ ಮುತ್ತಿನ
ಹಾರದ ಬೆಳಗೆಸೆಯೆ ನಾರದಂ ಬಂದಿರ್ದಂ|| ೧೪೦ ||
ಪದ್ಯ-೧೪೦:ಪದವಿಭಾಗ-ಅರ್ಥ:ಆರ ನುವರದೊಳಂ ಎನಗೆ ಅಣಂ ಆರದ (ಯಾರ ಯುದ್ಧದಲ್ಲಿಯೂನನಗೆ ಸ್ವಲ್ಪವೂ ತೃಪ್ತಿಯಾಗದ) ಕಣ್ ಅಲರ್ಗಳ್ (ನೇತ್ರಪುಷ್ಪಗಳು ಹೂ/ ಕಮಲದಂತಿರುಬವ ಕಣ್ಣುಗಳು) ಆರ್ಗುಂ ಅರಿಗನಿಂ ಎನುತುಂ ( ಅರ್ಜುನನಿಂದ ತೃಪ್ತಿಹೊಂದುತ್ತವೆ) ನೀರದ ಪಥದೊಳ್ (ಮೋಡದ ಮಾರ್ಗದಲ್ಲಿ) ಮುತ್ತಿನಹಾರದ ಬೆಳಗೆಸೆಯೆ ನಾರದಂ ಬಂದಿರ್ದಂ (ಮುತ್ತಿನ ಹಾರದ ಕಾಂತಿಯು ಪ್ರಕಾಶಿಸುತ್ತಿರಲು ನಾರದನು ಬಂದಿದ್ದನು)
ಪದ್ಯ-೧೪೦:ಅರ್ಥ:ಯಾರ ಯುದ್ಧದಲ್ಲಿಯೂ ನನಗೆ ಸ್ವಲ್ಪವೂ ತೃಪ್ತಿಯಾಗದ ನನ್ನ ನೇತ್ರಪುಷ್ಪಗಳು, ಅರ್ಜುನನಿಂದ ತೃಪ್ತಿಹೊಂದುತ್ತವೆ ಎಂದು ಹೇಳುತ್ತಾ ಆಕಾಶಮಾರ್ಗದಲ್ಲಿ ಮುತ್ತಿನ ಹಾರದ ಕಾಂತಿಯು ಪ್ರಕಾಶಿಸುತ್ತಿರಲು ನಾರದನು ಬಂದಿದ್ದನು.
ಕಂ||ರಸೆಯಿಂದಮೊಗೆದು ಪೆಡೆಗಳ
ಪೊಸ ಮಾಣಿಕದೆಳವಿಸಿಲ್ಗಳೊಳ್ ಪೊಸದಳಿರೊಳ್|
ಮುಸುಕಿದ ತೆಱದಿಂದೆಸೆದಿರೆ
ಪೊಸತೆನೆ ನಡೆ ನೋಡಲುರಗರಾಜಂ ಬಂದಂ|| ೧೪೧ ||
ಪದ್ಯ-೧೪೧:ಪದವಿಭಾಗ-ಅರ್ಥ:ರಸೆಯಿಂದಂ ಒಗೆದು ಪೆಡೆಗಳ ಪೊಸ ಮಾಣಿಕದೆ (ಪಾತಾಳಲೋಕದಿಂದ ಹುಟ್ಟಿ ಹೆಡೆಗಳ ಹೊಸಮಾಣಿಕ್ಯಗಳು) ಎಳವಿಸಿಲ್ಗಳೊಳ್ ಪೊಸ (ದ) ತಳಿರೊಳ್ ಮುಸುಕಿದ (ಎಳೆಬಿಸಿಲಿನಲ್ಲಿ ಹೊಸ ಚಿಗುರುಗಳಿಂದ ಮುಚ್ಚಿಕೊಂಡಿರುವ) ತೆಱದಿಂದೆ ಎಸೆದಿರೆ ಪೊಸತೆನೆ ನಡೆ ನೋಡಲು ಉರಗರಾಜಂ ಬಂದಂ (ರೀತಿಯಿಂದ ಪ್ರಕಾಶಿಸುತ್ತಿರಲು ಸರ್ಪರಾಜನಾದ ವಾಸುಕಿಯೂ ಬಂದನು)
ಪದ್ಯ-೧೪೧:ಅರ್ಥ: ಪಾತಾಳಲೋಕದಿಂದ ಹುಟ್ಟಿ ಹೆಡೆಗಳ ಹೊಸಮಾಣಿಕ್ಯಗಳು ಎಳೆಬಿಸಿಲಿನಲ್ಲಿ ಹೊಸ ಚಿಗುರುಗಳಿಂದ ಮುಚ್ಚಿಕೊಂಡಿರುವ ರೀತಿಯಿಂದ ಪ್ರಕಾಶಿಸುತ್ತಿರಲು ಸರ್ಪರಾಜನಾದ ವಾಸುಕಿಯೂ ಬಂದನು.
ದಿನಕರನುಮಿಂದ್ರನುಂ ನಿಜ
ತನಯರ ದೆಸೆಗೆಱಗಿದೆಱಕದಿಂ ಗೆಲವಿನ ಮಾ|
ತನೆ ನುಡಿಯೆ ನುಡಿದ ಜಗಳಮ
ದಿನಿಸಾನುಂ ತ್ರಿಪುರಹರನ ಕಿವಿಗೆಯ್ದುವುದುಂ|| ೧೪೨
ಪದ್ಯ-೧೪೨:ಪದವಿಭಾಗ-ಅರ್ಥ:ದಿನಕರನುಂ ಇಂದ್ರನುಂ ನಿಜ ತನಯರ ದೆಸೆಗೆ ಎಱಗಿದ ಎಱಕದಿಂ (ಸೂರ್ಯನೂ ಇಂದ್ರನೂ ತಮ್ಮ ಮಕ್ಕಳ ಕಡೆಗೆ ಉಂಟಾದ ಪಕ್ಷಪಾತದಿಂದ) ಗೆಲವಿನ ಮಾತನೆ ನುಡಿಯೆ (ಜಯದ ಮಾತನ್ನೇ ಆಡುತ್ತಿರಲು) ನುಡಿದ ಜಗಳಮದು ಇನಿಸಾನುಂ ತ್ರಿಪುರಹರನ ಕಿವಿಗೆ ಎಯ್ದುವುದುಂ (ಆಡಿದ ಜಗಳವು ಒಂದಿಷ್ಟು ಈಶ್ವರನ ಕಿವಿಗಳಿಗೂ ಮುಟ್ಟಿತು, ಮುಟ್ಟಲು-)
ಪದ್ಯ-೧೪೨:ಅರ್ಥ:ಸೂರ್ಯನೂ ಇಂದ್ರನೂ ತಮ್ಮ ಮಕ್ಕಳ ಕಡೆಗೆ ಉಂಟಾದ ಪಕ್ಷಪಾತದಿಂದ (ತಮ್ಮ ತಮ್ಮ ಮಕ್ಕಳ) ಜಯದ ಮಾತನ್ನೇ ಆಡುತ್ತಿರಲು ಆಡಿದ ಜಗಳವು ಒಂದಿಷ್ಟು ಈಶ್ವರನ ಕಿವಿಗಳಿಗೂ ಮುಟ್ಟಿತು.
ವ|| ಆಗಳ್ ದೇವೇಂದ್ರಂಗಂ ದಿವಸೇಂದ್ರಂಗಂ ಬೞಯನಟ್ಟಿ ಬರಿಸಿ-
ವಚನ:ಪದವಿಭಾಗ-ಅರ್ಥ:ಆಗಳ್ ದೇವೇಂದ್ರಂಗಂ ದಿವಸೇಂದ್ರಂಗಂ ಬೞಯನು ಅಟ್ಟಿ (ದೂತರನ್ನು ಕಳುಹಿಸಿ ) ಬರಿಸಿ ( ಬರಮಾಡಿಕೊಂಡು)-
ವಚನ:ಅರ್ಥ:ವ|| ಆಗ ಇಂದ್ರನಿಗೂ ಸೂರ್ಯನಿಗೂ ದೂತರನ್ನು ಕಳುಹಿಸಿ ಬರಮಾಡಿಕೊಂಡು-
ಕಂ|| ಜಗಳಮಿದೇಂ ದಿನಕರ ಪೊಣ
ರ್ದು ಗೆಲ್ವನೇ ನಿಜತನೂಭವಂ ಹರಿಗನೊಳೇಂ|
ಬಗೆಗೆಟ್ಟೆಯೊ ಧುರದೊಳವಂ
ಮಿಗಿಲೆನಗೆನೆ ನಿನಗೆ ಪಗಲೊಳೇಂ ಕೞ್ತಲೆಯೇ|| ೧೪೩ ||
ಪದ್ಯ-೧೪೩:ಪದವಿಭಾಗ-ಅರ್ಥ:ಜಗಳಂ ಇದೇಂ ದಿನಕರ (ಸೂರ್ಯನೇ ಇದೇನು ಜಗಳ,) ಪೊಣರ್ದು ಗೆಲ್ವನೇ ನಿಜ ತನೂಭವಂ ಹರಿಗನೊಳು ಏಂ, (ನಿನ್ನ ಮಗನಾದ ಕರ್ಣನು ಹರಿಗನಲ್ಲಿ ಹೆಣಗಾಡಿ ಗೆಲ್ಲುತ್ತಾನೆಯೇ,) ಬಗೆಗೆಟ್ಟೆಯೊ (ಬುದ್ಧಿ ಕೆಟ್ಟಿದ್ದೀಯೇನು?) ಧುರದೊಳವಂ ಮಿಗಿಲು ಎನಗೆ ಎನೆ, ನಿನಗೆ ಪಗಲೊಳೇಂ ಕೞ್ತಲೆಯೇ ( ನಿನಗೆ ಹಗಲಿನಲ್ಲಿಯೇ ಕತ್ತಲೆಯೇ?)
ಪದ್ಯ-೧೪೩:ಅರ್ಥ: ಸೂರ್ಯನೇ ಇದೇನು ಜಗಳ, ನಿನ್ನ ಮಗನಾದ ಕರ್ಣನು ಹರಿಗನಲ್ಲಿ ಹೆಣಗಾಡಿ ಗೆಲ್ಲುತ್ತಾನೆಯೇ, ಬುದ್ಧಿ ಕೆಟ್ಟಿದ್ದೀಯೇನು? ಯುದ್ಧದಲ್ಲಿ ಅವನು ನನಗಿಂತಲೂ ಮೇಲಾದವನು ಎನ್ನುವಾಗ (ಧುರದೊಳವಂ ಮಿಗಿಲು ಎನಗೆ ಎನೆ,) ನಿನಗೆ ಹಗಲಿನಲ್ಲಿಯೇ ಕತ್ತಲೆಯೇ? (ವ್ಯಾಸಭಾರತದಲ್ಲಿಯೂ ಈ ಜಗಳದ ವಿಷಯ ಇದೆ!)
ವ|| ಎಂದು ದಿನಕರನ ಪುರಂದರನ ಜಗಳಮಂ ಪತ್ತುವಿಡೆ ನುಡಿದು-
ವಚನ:ಪದವಿಭಾಗ-ಅರ್ಥ:ಎಂದು ದಿನಕರನ ಪುರಂದರನ (ಸೂರ್ಯನ ಇಂದ್ರನ) ಜಗಳಮಂ ಪತ್ತುವಿಡೆ ನುಡಿದು (ಕೊನೆಗಾಣುವಂತೆ ಹೇಳಿ)-
ವಚನ:ಅರ್ಥ:ವ|| ಸೂರ್ಯ ಮತ್ತು ಇಂದ್ರರ ಜಗಳವನ್ನು ಕೊನೆಗಾಣುವಂತೆ ಹೇಳಿ-
ಕಂ|| ಅಳವಿನೊಳೆನ್ನುಮನಿನಿಸ
ಗ್ಗಳಿಸಿದ ಹರಿಗನೊಳಿದಿರ್ಚಿ ಕರ್ಣಂ ಗೆಲಲು|
ಮ್ಮಳಿಪಂ ಗಡಮೆಂದೋಪಳ
ತಳಮಂ ಪೊಯ್ದೀಶ್ವರಂ ಮುಗುಳ್ನಗೆ ನಕ್ಕಂ|| ೧೪೪ ||
ಪದ್ಯ-೦೦:ಪದವಿಭಾಗ-ಅರ್ಥ:ಅಳವಿನೊಳು ಎನ್ನುಮಂ ಇನಿಸು ಅಗ್ಗಳಿಸಿದ ಹರಿಗನೊಳು ಇದಿರ್ಚಿ (ಪರಾಕ್ರಮದಲ್ಲಿ ನನ್ನನ್ನೂ ಒಂದಿಷ್ಟು ಮೀರಿರುವ ಹರಿಗನನ್ನು ಎದುರಿಸಿ) ಕರ್ಣಂ ಗೆಲಲು ಉಮ್ಮಳಿಪಂ ಗಡಂ (ಗೆಲ್ಲುವುದಕ್ಕೆ ಕರ್ಣನು ಕಾತರನಾಗಿದ್ದಾನೆಯಲ್ಲವೇ, ಗಡ!ಓಹೋ! ) ಎಂದು ಓಪಳ ತಳಮಂ (ಎಂದು ಈಶ್ವರನು ತನ್ನ ಪ್ರಿಯೆಯಾದ ಪಾರ್ವತಿಯ ಅಂಗೈಯನ್ನು) ಪೊಯ್ದು ಈಶ್ವರಂ ಮುಗುಳ್ನಗೆ ನಕ್ಕಂ (ತಟ್ಟಿ ಹುಸಿನಗೆಯನ್ನು ನಕ್ಕನು.)
ಪದ್ಯ-೦೦:ಅರ್ಥ: ಪರಾಕ್ರಮದಲ್ಲಿ ನನ್ನನ್ನೂ ಒಂದಿಷ್ಟು ಮೀರಿರುವ ಹರಿಗನನ್ನು ಎದುರಿಸಿ ಗೆಲ್ಲುವುದಕ್ಕೆ ಕರ್ಣನು ಕಾತರನಾಗಿದ್ದಾನೆಯಲ್ಲವೇ ಎಂದು ಈಶ್ವರನು ತನ್ನ ಪ್ರಿಯೆಯಾದ ಪಾರ್ವತಿಯ ಅಂಗೈಯನ್ನು ತಟ್ಟಿ ಹುಸಿನಗೆಯನ್ನು ನಕ್ಕನು.
ವ|| ಅಂತು ಮುಗಿಲೂಱಿದ ಮೂಱುಲೋಕಮುಂ ಕರ್ಣಾರ್ಜುನರ ಯುದ್ಧಮಂ ನೋಡಲ್ ನೆರೆದಲ್ಲಿ ನೆರವಿವಡೆದೆನ್ನ ಪ್ರತಿಜ್ಞೆಯಂ ನೆಱಪಲಿಂದವಸಂಬಡೆದೆನೆಂದು ಕೌರವ ಕುಲಹಿಮಕರಾನಿಲಪ್ರಚಯವರ್ಷವಾರಿದನಪ್ಪ ಪವನತನಯಂ ಬದ್ಧವಪುವಾಗಿ ದುರ್ಯೋಧನಾನುಜರಂ ಪೆಸರ್ವೆಸರೊಳೆ ಕರೆದು ಮೂದಲಿಸಿದೊಡೆ ಮುನ್ನೆ ತಮ್ಮೊಡವುಟ್ಟಿದರ್ ಸತ್ತೞಲೊಳ ನಿಬರುವೊಂದಾಗಿ ಬಂದು ತಾಗಿದಾಗಳ್-
ವಚನ:ಪದವಿಭಾಗ-ಅರ್ಥ:ಅಂತು ಮುಗಿಲು ಊಱಿದ (ಹಾಗೆ ಆಕಾಶದಲ್ಲಿ ನೆರೆದಿರುವ) ಮೂಱುಲೋಕಮುಂ (ಮೂರುಲೋಕವೂ) ಕರ್ಣಾರ್ಜುನರ ಯುದ್ಧಮಂ ನೋಡಲ್ ನೆರೆದಲ್ಲಿ (ಕರ್ಣಾರ್ಜುನರ ಯುದ್ಧವನ್ನು ನೋಡಲು ನೆರೆದಿರುವಾಗಲೇ) ನೆರವಿವಡೆದು ಎನ್ನ ಪ್ರತಿಜ್ಞೆಯಂ ನೆಱಪಲಿಂದು ಅವಸಂಬಡೆದೆನೆಂದು (ನಾನೂ ನನ್ನ ಪ್ರತಿಜ್ಞೆಯನ್ನು ಪೂರ್ಣಮಾಡಲು ಅವಕಾಶಪಡೆದೆನೆಂದು) ಕೌರವ ಕುಲ ಹಿಮಕರ ಆನಿಲಪ್ರಚಯ (ಚಂದ್ರನ ಕೊಳೆಯ ರಾಶಿಗೆ ) ವರ್ಷ ವಾರಿದನಪ್ಪ ಪವನತನಯಂ (ಮಳೆಗಾಲದ ಮೋಡವಾಗಿರುವ ಭೀಮಸೇನನು) ಬದ್ಧವಪುವಾಗಿ (ಗಟ್ಟಿ ಶರೀರದವನಾಗಿ) ದುರ್ಯೋಧನ ಅನುಜರಂ ಪೆಸರ್ವೆಸರೊಳೆ ಕರೆದು (ದುರ್ಯೋಧನನ ತಮ್ಮಂದಿರು ಒಬ್ಬರೊಬ್ಬರನ್ನೂ ಅವರ ಹೆಸರನ್ನು ಹಿಡಿದು ಕರೆದು) ಮೂದಲಿಸಿದೊಡೆ (ಮೂದಲಿಸಿದಾಗ) ಮುನ್ನೆ ತಮ್ಮ ಒಡವುಟ್ಟಿದರ್ ಸತ್ತೞಲೊಳು (ಈಗಾಗಲೇ ತಮ್ಮ ಸಹೋದರರು ಸತ್ತ ದುಖದಿಂದ) ಅನಿಬರುಂ ಒಂದಾಗಿ ಬಂದು ತಾಗಿದಾಗಳ್ (ಆ ಅಷ್ಟು ಜನವೂ ಒಂದಾಗಿ ಸೇರಿ ಎದುರಿಸಿದರು, ಆಗ)-
ವಚನ:ಅರ್ಥ:ಹಾಗೆ ಆಕಾಶದಲ್ಲಿ ನೆರೆದಿರುವ ಮೂರುಲೋಕವೂ ಕರ್ಣಾರ್ಜುನರ ಯುದ್ಧವನ್ನು ನೋಡಲು ನೆರೆದಿರುವಾಗಲೇ ನಾನೂ ನನ್ನ ಪ್ರತಿಜ್ಞೆಯನ್ನು ಪೂರ್ಣಮಾಡಲು ಅವಕಾಶಪಡೆದೆನೆಂದು ಕೌರವವಂಶವೆಂಬ ಚಂದ್ರನ ಕೊಳೆಯ ರಾಶಿಗೆ ಮಳೆಗಾಲದ ಮೋಡವಾಗಿರುವ ಭೀಮಸೇನನು ಗಟ್ಟಿ ಶರೀರದವನಾಗಿ (ಉಬ್ಬಿ), ದುರ್ಯೋಧನನ ತಮ್ಮಂದಿರು ಒಬ್ಬರೊಬ್ಬರನ್ನೂ ಅವರ ಹೆಸರನ್ನು ಹಿಡಿದು ಕರೆದು ಮೂದಲಿಸಿದಾಗ, ಈಗಾಗಲೇ ತಮ್ಮ ಸಹೋದರರು ಸತ್ತ ದುಖದಿಂದ ದುಖಿತರಾದ ಆ ಅಷ್ಟು ಜನವೂ ಒಂದಾಗಿ ಸೇರಿ ಎದುರಿಸಿದರು. ಆಗ
ಮ|| ಮಸಕಂಗುಂದದೆ ಪಾಯ್ವರಾತಿ ಶರಸಂಘಾತಂಗಳಂ ಕೂಡೆ ಖಂ
ಡಿಸಿ ಬಿಲ್ಲಂ ಮುಱಿಯೆಚ್ಚೊಡಂತನಿಬರುಂ ಬಾಳ್ಗಿೞ್ತು ಮೇಲ್ವಾಯ್ದೊಡ|
ರ್ಬಿಸೆ ತಿಣ್ಣಂ ತೆಗೆದರ್ಧಚಂದ್ರಶರದಿಂ ಸೂೞ್ ಸೂೞೊಳೆಚ್ಚಾಗಳ
ರ್ಚಿಸಿದಂತಿರ್ದುದುರುಳ್ದ ಕೌರವಶಿರಪದ್ಮಂಗಳಿಂ ಕೊಳ್ಗುಳಂ|| ೧೪೫ ||
ಪದ್ಯ-೦೦:ಪದವಿಭಾಗ-ಅರ್ಥ: ಮಸಕಂ-ಗುಂದದೆ ಪಾಯ್ವ ಅರಾತಿ ಶರ ಸಂಘಾತಂಗಳಂ (ಕಡಿಮೆಯಾಗದ ವೇಗದಿಂದ ಹಾದುಬರುತ್ತಿರುವ ಬಾಣಸಮೂಹಗಳನ್ನು) ಕೂಡೆ ಖಂಡಿಸಿ ಬಿಲ್ಲಂ ಮುಱಿಯೆಚ್ಚೊಡೆ (ತಕ್ಷಣವೇ ಕತ್ತರಿಸಿ ಬಿಲ್ಲನ್ನೂ ಮುರಿದುಹೋಗುವ ಹಾಗೆ ಹೊಡೆಯಲು,) ಅಂತು ಅನಿಬರುಂ ಬಾಳ್ಗಿೞ್ತು (ಬಾಳ್ ಕಿಳ್ತು- ಕತ್ತಿಯನ್ನು ಒರೆಯಿಂದ ಹೊರತೆಗೆದು) ಮೇಲ್ವಾಯ್ದೊಡೆ ಅರ್ಬಿಸೆ ತಿಣ್ಣಂ (ಸೆಳೆದು ಮೇಲೆ ನುಗ್ಗಿ ಬರಲು, ಅತಿಕ್ರಮಿಸಲು, ತೀವ್ರವಾಗಿ) ತೆಗೆದು ಅರ್ಧಚಂದ್ರಶರದಿಂ ( ಭೀಮನು ರಭಸದಿಂದ ಅರ್ಧಚಂದ್ರಾಕಾರದ ಬಾಣವನ್ನು ತೆಗೆದು) ಸೂೞ್ ಸೂೞೊಳೆಚ್ಚಾಗಳ್ (ಬಾರಿಬಾರಿಗೂ, / ಪದೇ ಪದೇ ಹೊಡೆದಾಗ ) ಅರ್ಚಿಸಿದಂತೆ ಇರ್ದುದು ಉರುಳ್ದ ಕೌರವಶಿರ ಪದ್ಮಂಗಳಿಂ ಕೊಳ್ಗುಳಂ (ಕೊಳ್ಗುಳಂ- ಯುದ್ಧಭೂಮಿಯು ಉರುಳಿರುವ ಕೌರವರ ತಲೆಯೆಂಬ ಕಮಲಗಳಿಂದ ಪೂಜಿಸಲ್ಪಟ್ಟಂತೆ ಇದ್ದಿತು.)
ಪದ್ಯ-೦೦:ಅರ್ಥ: ಕಡಿಮೆಯಾಗದ ವೇಗದಿಂದ ಹಾದುಬರುತ್ತಿರುವ ಬಾಣಸಮೂಹಗಳನ್ನು ತಕ್ಷಣವೇ ಕತ್ತರಿಸಿ ಬಿಲ್ಲನ್ನೂ ಮುರಿದುಹೋಗುವ ಹಾಗೆ ಹೊಡೆದನು. ಅಷ್ಟು ಜನವೂ ಕತ್ತಿಯನ್ನು ಒರೆಯಿಂದ ಹೊರತೆಗೆದು- ಸೆಳೆದು ಮೇಲೆ ನುಗ್ಗಿ ಬರಲು, ಭೀಮನು ರಭಸದಿಂದ ಅರ್ಧಚಂದ್ರಾಕಾರದ ಬಾಣವನ್ನು ತೆಗೆದು ಬಾರಿಬಾರಿಗೂ, / ಪದೇ ಪದೇ ಹೊಡೆದಾಗ ಯುದ್ಧಭೂಮಿಯು ಉರುಳಿರುವ ಕೌರವರ ತಲೆಯೆಂಬ ಕಮಲಗಳಿಂದ ಪೂಜಿಸಲ್ಪಟ್ಟಂತೆ ಇದ್ದಿತು.

ದುಶ್ಶಾಸನನ ವಧೆ[ಸಂಪಾದಿಸಿ]

ವ|| ಅಂತು ದುರ್ಯೋಧನ ದುಶ್ಶಾಸನರಿರ್ವರುಮುೞಿಯುೞಿದ ಕೌರವರೆಲ್ಲರುಮಂ ಜೀರಗೆಯೊಕ್ಕಲ್ಮಾಡಿ ಕೆಡೆದ ಪೆಣಂಗಳನೆಡಗಲಿಸಿ ನಿಂದು-
ವಚನ:ಪದವಿಭಾಗ-ಅರ್ಥ:ಅಂತು ದುರ್ಯೋಧನ ದುಶ್ಶಾಸನರ್ ಇರ್ವರುಂ ಉೞಿಯೆ (ಹಾಗೆ ದುರ್ಯೋಧನ ದುಶ್ಶಾಸನರಿಬ್ಬರನ್ನು ಬಿಟ್ಟು ಉಳಿಯಲು) ಉೞಿದ ಕೌರವರೆಲ್ಲರುಮಂ (ಉಳಿದ ಕೌರವರೆಲ್ಲರನ್ನೂ) ಜೀರಗೆಯೊಕ್ಕಲ್ಮಾಡಿ ಕೆಡೆದ ಪೆಣಂಗಳನು ಎಡಗಲಿಸಿ ನಿಂದು (ಜೀರಿಗೆಯನ್ನು ಒಕ್ಕುವಂತೆ ಒಕ್ಕಲುಮಾಡಿ/ ಪುಡಿಮಾಡಿ ಸತ್ತವರ ಹೆಣಗಳನ್ನು ದಾಟಿ ನಿಂತನು.)
ವಚನ:ಅರ್ಥ:ಹಾಗೆ ದುರ್ಯೋಧನ ದುಶ್ಶಾಸನರಿಬ್ಬರನ್ನು ಬಿಟ್ಟು ಉಳಿಯಲು, ಉಳಿದ ಕೌರವರೆಲ್ಲರನ್ನೂ ಜೀರಿಗೆಯನ್ನು ಒಕ್ಕುವಂತೆ ಒಕ್ಕಲುಮಾಡಿ/ ಪುಡಿಮಾಡಿ ಸತ್ತವರ ಹೆಣಗಳನ್ನು ದಾಟಿ ನಿಂತನು.
ಮ|| ಚಲದಿಂ ಕೃಷ್ಣೆಯ ಕೇಶಮಂ ಪಿಡಿದ ನಿನ್ನಿಂದಾದೞಲ್ ನಿನ್ನುರ
ಸ್ಥಲಮಂ ಪೋೞದೆ ಪೋಪುದಲ್ತೆನಗದೇಕಳ್ಕಿರ್ದಪೈ ಬಾೞ್ವ ಪಂ|
ಬಲದೇನಿಂ ನಿನಗುಂಟೆ ನಿನ್ನನುಜರಂ ಕಂಡೆಂತುಮೇನೆನ್ನ ತೋ
ಳ್ವಲೆಯೊಳ್ ಸಿಲ್ಕಿದೆಯೆಂದು ಮೂದಲಿಪುದುಂ ದುಶ್ಶಾಸನಂ ತಾಗಿದಂ|| ೧೪೬ ||
ಪದ್ಯ-೧೪೬:ಪದವಿಭಾಗ-ಅರ್ಥ:ಚಲದಿಂ ಕೃಷ್ಣೆಯ ಕೇಶಮಂ ಪಿಡಿದ ನಿನ್ನಿಂದಾದ ಅೞಲ್ (ಛಲದಿಂದ ದ್ರೌಪದಿಯ ಕೂದಲನ್ನು ಹಿಡಿದೆಳೆದ ನಿನ್ನಿಂದಾಗಿರುವ ದುಃಖವು) ನಿನ್ನ ಉರಸ್ಥಲಮಂ ಪೋೞದೆ (ನಿನ್ನ ಹೃದಯಪ್ರದೇಶವನ್ನು ಸೀಳದೇ / ಹೋಳು ಮಾಡದೆ,) ಪೋಪುದಲ್ತು ಎನಗೆ ಅದೇಕೆ ಅಳ್ಕಿರ್ದಪೈ (ಹೋಗುವುದಿಲ್ಲ. ನನಗೆ ಏತಕ್ಕಾಗಿ ಹೆದರಿದ್ದೀಯೆ?) ಬಾೞ್ವ ಪಂಬಲ ಅದೇನ್ ಇಂ ನಿನಗುಂಟೆ ನಿನ್ನ ಅನುಜರಂ ಕಂಡು (ನಿನ್ನ -ಸತ್ತ- ತಮ್ಮಂದಿರನ್ನು ನೋಡಿಯೂ ಬದುಕಬೇಕೆಂಬ ಹಂಬಲ ನಿನಗೆ ಇನ್ನೂ ಇದೆಯೇ?) ಎಂತುಂ ಏನೆನ್ನ ತೋಳ್ವಲೆಯೊಳ್ ಸಿಲ್ಕಿದೆಯೆಂದು (ಹೇಗಾದರೇನು? ನನ್ನ ತೋಳಿನ ಬಲೆಯಲ್ಲಿ ಸಿಕ್ಕಿದ್ದೀಯೇ’ ಎಂದು) ಮೂದಲಿಪುದುಂ ದುಶ್ಶಾಸನಂ ತಾಗಿದಂ (ಎಂದು ಮೂದಲಿಸಲು ದುಶ್ಶಾಸನನು ತಾಗಿ ಯುದ್ಧಕ್ಕೆ ಬಂದನು.)
ಪದ್ಯ-೧೪೬:ಅರ್ಥ:‘ಛಲದಿಂದ ದ್ರೌಪದಿಯ ಕೂದಲನ್ನು ಹಿಡಿದೆಳೆದ ನಿನ್ನಿಂದಾಗಿರುವ ದುಃಖವು ನಿನ್ನ ಹೃದಯಪ್ರದೇಶವನ್ನು ಸೀಳದೇ ಹೋಗುವುದಿಲ್ಲ. ನನಗೆ ಏತಕ್ಕಾಗಿ ಹೆದರಿದ್ದೀಯೆ? ನಿನ್ನ -ಸತ್ತ- ತಮ್ಮಂದಿರನ್ನು ನೋಡಿಯೂ ಬದುಕಬೇಕೆಂಬ ಹಂಬಲ ನಿನಗೆ ಇನ್ನೂ ಇದೆಯೇ? ಹೇಗಾದರೇನು? ನನ್ನ ತೋಳಿನ ಬಲೆಯಲ್ಲಿ ಸಿಕ್ಕಿದ್ದೀಯೇ’ ಎಂದು ಮೂದಲಿಸಲು ದುಶ್ಶಾಸನನು ತಾಗಿ ಯುದ್ಧಕ್ಕೆ ಬಂದನು.
ವ|| ಅಂತು ತಾಗಿದಾಗಳ್-
ವಚನ:ಅರ್ಥ:ವ|| ಹಾಗೆ ಎದರಿಸಿದಾಗ-
ಕಂ|| ಕಱುಪೆೞ್ದ ಪಗೆಯ ಬೇರ್ವರಿ
ದುಱುಮಿಕೆಯ ಪೊದೞ್ದ ಗಂಡಮಚ್ಚರದೊದವಿಂ|
ನೆಱನನೆ ಮೂದಲಿಸುತ್ತುಂ
ನೆಱನನೆ ತೆಗೆದೆಚ್ಚರೊರ್ವರೊರ್ವರನಾಗಳ್|| ೧೪೭ ||
ಪದ್ಯ-೧೪೭:ಪದವಿಭಾಗ-ಅರ್ಥ: ಕಱುಪಿ ಎೞ್ದ ಪಗೆಯ (ಕೆರಳಿರುವ ಹೆಚ್ಚಿದ ಹಗೆತನದಿಂದಲೂ,) ಬೇರ್ವರಿದ ಉಱುಮಿಕೆಯ (ಬೇರುಬಿಟ್ಟಿರುವ ಸಿಟ್ಟಿನಂದಲೂ) ಪೊದೞ್ದ ಗಂಡಮಚ್ಚರದ (ತುಂಬಿದ ಪೌರುಷ ಮತ್ತು ಮತ್ಸರದ ) ಒದವಿಂ ನೆಱನನೆ (ಮರ್ಮವನ್ನೇ ಒದವಿ-ಕುರಿತು) ಮೂದಲಿಸುತ್ತುಂ ನೆಱನನೆ (ನೆರೆ- ಬಹಳ, ಹೆಚ್ಚು-ನೆರವು-ಬಲ, ಬಹಳವಾಗಿ ಶಕ್ತಿಯನ್ನು ಮರ್ಮಸ್ಥಾನವನ್ನು, ಬಹಳವಾಗಿ ಮೂದಲಿಸುತ್ತ ) ತೆಗೆದು ಎಚ್ಚರು ಒರ್ವರೊರ್ವರನು ಆಗಳ್ (ಒಬ್ಬೊಬ್ಬರೂ ಮರ್ಮಸ್ಥಾನವನ್ನು ಗುರಿಮಾಡಿ ಹೊಡೆದರು.)
ಪದ್ಯ-೧೪೭:ಅರ್ಥ: ಕೆರಳಿರುವ ಹೆಚ್ಚಿದ ಹಗೆತನದಿಂದಲೂ, ಬೇರುಬಿಟ್ಟಿರುವ ಸಿಟ್ಟಿನಂದಲೂ, ತುಂಬಿದ ಪೌರುಷ ಮತ್ತು ಮತ್ಸರದ ಸೇರುವಿಕೆಯಿಂದಲೂ ಮರ್ಮವನ್ನೇ ಒದವಿ-ಕುರಿತು ಶಕ್ತಿಯನ್ನು ಬಹಳವಾಗಿ ಮೂದಲಿಸುತ್ತ ಒಬ್ಬೊಬ್ಬರೂ ಮರ್ಮಸ್ಥಾನವನ್ನು ಗುರಿಮಾಡಿ ಹೊಡೆದರು.
ಸುರಿಗಿಱಿವ ತೆಱದಿನೋರೊ
ರ್ವರನಿಸೆ ನಡೆ ನಟ್ಟ ಕೋಲ ಬೞಿವಿಡಿದೆತ್ತಂ|
ಸುರಿದುವವಂದಿರ ಮುಳಿಸಿನ
ತೆರಳ್ದ ದಳ್ಳುರಿಯನಿೞಿಸಿ ನವರುರಂಗಳ್|| ೧೪೮||
ಪದ್ಯ-೧೪೮:ಪದವಿಭಾಗ-ಅರ್ಥ:ಸುರಿಗಿ ಇಱಿವ ತೆಱದಿ ಓರೊರ್ವರನು ಇಸೆ ( ಕತ್ತಿಯಿಂದ ಹೊಡೆಯುವಂತೆ ಒಬ್ಬನು ಮತ್ತೊಬ್ಬನನ್ನು ಬಾಣದಿಂದ ಹೊಡೆಯಲು), ನಡೆ ನಟ್ಟ ಕೋಲ ಬೞಿವಿಡಿದು (ಚೆನ್ನಾಗಿ ನಾಟಿಕೊಂಡ ಬಾಣದ ದಾರಿಯನ್ನೇ ಅನುಸರಿಸಿ) ಎತ್ತಂ ಸುರಿದುವು ಅವಂದಿರ ಮುಳಿಸಿನ ತೆರಳ್ದ ದಳ್ಳುರಿಯನು ಇೞಿಸಿ ನವ ರುಧಿರಂಗಳ್ (ಉಧಿರ- ರಕ್ತ) (ಹೊಸರಕ್ತವು ಅವರುಗಳ ಕೋಪದ ಒಟ್ಟುಗೂಡಿಸಿದ ದಳ್ಳುರಿಯನ್ನೂ ತಿರಸ್ಕರಿಸುತ್ತ ಎಲ್ಲಕಡೆಯಲ್ಲಿಯೂ ಸುರಿಯಿತು.)
ಪದ್ಯ-೧೪೮:ಅರ್ಥ: ಕತ್ತಿಯಿಂದ ಹೊಡೆಯುವಂತೆ ಒಬ್ಬನು ಮತ್ತೊಬ್ಬನನ್ನು ಬಾಣದಿಂದ ಹೊಡೆಯಲು, ಚೆನ್ನಾಗಿ ನಾಟಿಕೊಂಡ ಬಾಣದ ದಾರಿಯನ್ನೇ ಅನುಸರಿಸಿ ಹೊಸರಕ್ತವು ಅವರುಗಳ ಕೋಪದ ಒಟ್ಟುಗೂಡಿಸಿದ ದಳ್ಳುರಿಯನ್ನೂ ತಿರಸ್ಕರಿಸುತ್ತ ಎಲ್ಲಕಡೆಯಲ್ಲಿಯೂ ಸುರಿಯಿತು.
ವ|| ಅಂತು ನಿಜನಿಶಿತಮಾರ್ಗಣಂಗಳಿಂದಮಂಬು ತಪ್ಪ ಜಟ್ಟಿಗ ಬಿಲ್ಲಾಳಂತೆಚ್ಚು ಪಾಯ್ವರಾತಿಯ ಮೆಯ್ಯ ನೆತ್ತರಂ ಕಂಡು ಸೂೞೇಸಿನೊಳಿವನ ನೆತ್ತರೊಕ್ಕೊಡಂ ತನಗೆ ಬಸಿಱೂರೆ ಕುಡಿಯಲುಂ ದ್ರೌಪದಿಯ ಕೇಶಪಾಶಮಂ ತೊಯ್ದು ಮುಡಿಯಲುಂ ನೆರೆಯದೆಂದು-
ವಚನ:ಪದವಿಭಾಗ-ಅರ್ಥ:ಅಂತು ನಿಜ ನಿಶಿತ ಮಾರ್ಗಣಂಗಳಿಂದಂ ಅಂಬು ತಪ್ಪ (ಭೀಮನು ಹರಿತವಾದ ಬಾಣಗಳಿಂದ -ಹೊಡೆದು-, ಆ ಬಾಣಗಳು ಮುಗಿದುಹೋಗಲು,) ಜಟ್ಟಿಗ ಬಿಲ್ಲಾಳಂತೆ ಎಚ್ಚು (ಶೂರನಾದ ಭೀಮನು ಬಿಲ್ಲಾಳಿನಂತೆ ಹೊಡೆದು) ಪಾಯ್ವ ಸರಾತಿಯ ಮೆಯ್ಯ ನೆತ್ತರಂ ಕಂಡು (ದುಶ್ಶಾಸನನ ಮೆಯ್ಯಿಂದ ಹರಿದುಬರುತ್ತಿರುವ ರಕ್ತವನ್ನು ನೋಡಿ ) ಸೂೞ್ ಏಸಿನೊಳ್ ಇವನ ನೆತ್ತರು ಒಕ್ಕೊಡಂ (ಬಾರೀಬಾರಿಯ ಪೆಟ್ಟಿನಿಂದಲೇ ಇವನ ರಕ್ತವು ಒಕ್ಕೊಡಂ-ಸುರಿದರೆ) ತನಗೆ ಬಸಿಱೂರೆ ಕುಡಿಯಲುಂ (ತನಗೆ ಹೊಟ್ಟೆಯು ತುಂಬುವ ಹಾಗೆ ಕುಡಿಯುವುದಕ್ಕೂ) ದ್ರೌಪದಿಯ ಕೇಶಪಾಶಮಂ ತೊಯ್ದು ಮುಡಿಯಲುಂ (ದ್ರೌಪದಿಯ ಕೂದಲಿನರಾಶಿಯನ್ನು ಒದ್ದೆಮಾಡಿ ಮುಡಿಸುವುದಕ್ಕೂ) ನೆರೆಯದೆಂದು (ಸಾಲದೇ ಇರಬಹುದು ಎಂದು)-
ವಚನ:ಅರ್ಥ: ಭೀಮನು ಹರಿತವಾದ ಬಾಣಗಳಿಂದ -ಹೊಡೆದು-, ಆ ಬಾಣಗಳು ಮುಗಿದು ಹೋಗಲು, ಶೂರನಾದ ಭೀಮನು ಬಿಲ್ಲಾಳಿನಂತೆ ಹೊಡೆದು ದುಶ್ಶಾಸನನ ಮೆಯ್ಯಿಂದ ಹರಿದುಬರುತ್ತಿರುವ ರಕ್ತವನ್ನು ನೋಡಿ ಬಾರೀಬಾರಿಯ ಪೆಟ್ಟಿನಿಂದಲೇ ಇವನ ರಕ್ತವು ಒಕ್ಕೊಡಂ-ಸುರಿದರೆ, ತನಗೆ ಹೊಟ್ಟೆಯು ತುಂಬುವ ಹಾಗೆ ಕುಡಿಯುವುದಕ್ಕೂ, ದ್ರೌಪದಿಯ ಕೂದಲಿನರಾಶಿಯನ್ನು ಒದ್ದೆಮಾಡಿ ಮುಡಿಸುವುದಕ್ಕೂ ಸಾಲದೇ ಇರಬಹುದು ಎಂದು
ಕಂ|| ಅವನಂ ಬಂಚಿಸಿ ಗದೆಗೊಂ
ಡವನ ವರೂಥಮನೆ ತಿಣ್ಣಮಿಟ್ಟೊಡೆ ಗದೆಗೊಂ|
ಡವನೆಯ್ತರೆ ರಥದಿಂದಿೞಿ
ದವನಿಯೊಳವನುಮನುರುಳ್ಚಿದಂ ಪವನಸುತಂ|| ೧೪೯ ||
ಪದ್ಯ-೧೪೯:ಪದವಿಭಾಗ-ಅರ್ಥ:ಅವನಂ ಬಂಚಿಸಿ (ಅವನನ್ನು ವಂಚಿಸಿ) ಗದೆಗೊಂಡು ಅವನ ವರೂಥಮನೆ ತಿಣ್ಣಂ ಇಟ್ಟೊಡೆ (ಗದೆಯನ್ನು ತೆಗೆದುಕೊಂಡು ಅವನ ತೇರನ್ನು ತೀಕ್ಷ್ಣವಾಗಿ ಹೊಡೆದಾಗ,) ಗದೆಗೊಂಡು ಅವಂ ಎಯ್ತರೆ ( ಅವನು ಗದೆಯನ್ನು ತೆಗೆದುಕೊಂಡು ಬರಲು) ರಥದಿಂದಿೞಿದು ಅವನಿಯೊಳು ಅವನುಮನು ಉರುಳ್ಚಿದಂ ಪವನಸುತಂ (ಭೀಮನು ರಥದಿಂದಿಳಿದು ಅವನನ್ನು ಭೂಮಿಯಲ್ಲಿ ಉರುಳಿಸಿದನು)
ಪದ್ಯ-೧೪೯:ಅರ್ಥ:ಅವನನ್ನು ವಂಚಿಸಿ ಗದೆಯನ್ನು ತೆಗೆದುಕೊಂಡು ಅವನ ತೇರನ್ನು ತೀಕ್ಷ್ಣವಾಗಿ ಹೊಡೆದಾಗ, ಅವನು ಗದೆಯನ್ನು ತೆಗೆದುಕೊಂಡು ಬರಲು ಭೀಮನು ರಥದಿಂದಿಳಿದು ಅವನನ್ನು ಭೂಮಿಯಲ್ಲಿ ಉರುಳಿಸಿದನು
ಮ|| ಬಳೆ ನರ್ಗುತ್ತಿರೆ ಮೆಟ್ಟಿ ಗಂಟಲನಿವಂ ದುಶ್ಶಾಸನಂ ಭೀಮನಿಂ
ಬಳ ಸಂಪನ್ನನವುಂಕಿ ಕೊಂದಪನಿದಂ ಮಾರ್ಕೊಳ್ವ ಬಲ್ಲಾಳ್ಗಸುಂ|
ಗೊಳೆ ಬಾಳೆತ್ತಿದೆನೇಕೆ ಕಣ್ಣ ಮಿಡುಕೈ ಪಿಂಗಾಕ್ಷ ನೀನೇಕೆ ಮಿ
ಳ್ಮಿಳ ನೋಡುತ್ತುಳನಿರ್ದೆಯೆಂದದಟರಂ ಭೀಮಂ ಪಳಂಚಲ್ವಿದಂ|| ೧೫೦ ||
ಪದ್ಯ-೧೫೦:ಪದವಿಭಾಗ-ಅರ್ಥ:ಬಳೆ ನರ್ಗುತ್ತಿರೆ ಮೆಟ್ಟಿ ಗಂಟಲನು (ಗಂಟಲಿನಬಳೆಗಳು ಜಜ್ಜಿಹೋಗುವ ಹಾಗೆ ಕಾಲಿನಿಂದ ಮೆಟ್ಟಿ) ಇವಂ ದುಶ್ಶಾಸನಂ ಭೀಮನಿಂ ಬಳ ಸಂಪನ್ನನು (ಇವನು ದುಶ್ಶಾಸನ, ಭೀಮನಿಗಿಂತ ಬಲಶಾಲಿಯಾದವನು,) ಅವುಂಕಿ ಕೊಂದಪ(ಪೆ)ನ್ (ಇವನನ್ನು ಅಮುಕಿ ಕೊಂದು ಹಾಕುತ್ತೇನೆ,) ಇದಂ ಮಾರ್ಕೊಳ್ವ ಬಲ್ಲಾಳ್ಗೆ ಅಸುಂಗೊಳೆ ಬಾಳ ಎತ್ತಿದೆನು (ಇದನ್ನು ಪ್ರತಿಭಟಿಸುವ ಶೂರರ ಪ್ರಾಣಾಪಹಾರಮಾಡಲು ಕತ್ತಿಯನ್ನೆತ್ತಿದ್ದೇನೆ,) ಏಕೆ ಕಣ್ಣ ಮಿಡುಕೈ (ದುರ್ಯೋಧನನೇ! ಯಾತಕ್ಕೋಸ್ಕರ ನೀನು ಕಣ್ಣನ್ನು ಮಿಟುಕಿಸುವುದಿಲ್ಲ?) ಪಿಂಗಾಕ್ಷ ನೀನೇಕೆ ಮಿಳ್ಮಿಳ ನೋಡುತ್ತ ಉಳನಿರ್ದೆಯೆಂದು (ಏತಕ್ಕೆ ಮಿಳಮಿಳನೆ ನೋಡುತ್ತ -ಸೈನ್ಯದ- ಒಳಗೇ ಇದ್ದೀಯೆ ಎಂದು) ಅದಟರಂ ಭೀಮಂ ಪಳಂಚಿ ಅಲ್ವಿದಂ (ಭೀಮನು ಶೂರರನ್ನು ಪ್ರತಿಭಟಿಸಿ ಗರ್ಜಿಸಿದನು.)
ಪದ್ಯ-೧೫೦:ಅರ್ಥ: ಗಂಟಲಿನಬಳೆಗಳು ಜಜ್ಜಿಹೋಗುವ ಹಾಗೆ ಕಾಲಿನಿಂದ ಮೆಟ್ಟಿ, ಇವನು ದುಶ್ಶಾಸನ, ಭೀಮನಿಗಿಂತ ಬಲಶಾಲಿಯಾದವನು, ಇವನನ್ನು ಅಮುಕಿ ಕೊಂದು ಹಾಕುತ್ತೇನೆ, ಇದನ್ನು ಪ್ರತಿಭಟಿಸುವ ಶೂರರ ಪ್ರಾಣಾಪಹಾರಮಾಡಲು ಕತ್ತಿಯನ್ನೆತ್ತಿದ್ದೇನೆ, ದುರ್ಯೋಧನನೇ! ಯಾತಕ್ಕೋಸ್ಕರ ನೀನು ಕಣ್ಣನ್ನು ಮಿಟುಕಿಸುವುದಿಲ್ಲ? ಏತಕ್ಕೆ ಮಿಳಮಿಳನೆ ನೋಡುತ್ತ (ಸೈನ್ಯದ) ಒಳಗೇ ಇದ್ದೀಯೆ ಎಂದು ಭೀಮನು ಶೂರರನ್ನು ಪ್ರತಿಭಟಿಸಿ ಗರ್ಜಿಸಿದನು.
ವ|| ಅಂತು ಮುಳಿದ ಪವನಜನ ಕೋಪಾಟೋಪಮಂ ಕಂಡು ಕೌರವಬಲದ ನಾಯಕರೊಳೊರ್ವರಪ್ಪೊಡಂ ಮಿಟ್ಟೆಂದು ಮಿಡುಕಲಣ್ಮದಿರೆ ಪವನಾತ್ಮಜಂ ದ್ರುಪದಾತ್ಮಜೆಗೆ ಬೞಿಯನಟ್ಟುವುದುಮಾ ವನಿತೆ ಜಯವನಿತೆ ಬರ್ಪಂತೆ ಬಂದು-
ವಚನ:ಪದವಿಭಾಗ-ಅರ್ಥ:ಅಂತು ಮುಳಿದ ಪವನಜನ ಕೋಪಾಟೋಪಮಂ ಕಂಡು ಕೌರವಬಲದ ನಾಯಕರೊಳು (ಹಾಗೆ ಕೋಪಿಸಿಕೊಂಡ ಭೀಮನ ಕೋಪಾಟೋಪವನ್ನು ಕಂಡು ಕೌರವಸೈನ್ಯದ ನಾಯಕರಲ್ಲಿ) ಒರ್ವರಪ್ಪೊಡಂ ಮಿಟ್ಟೆಂದು ಮಿಡುಕಲಣ್ಮದಿರೆ (ಒಬ್ಬರಾದರೂ ಮಿಟ್ಟೆಂದು ಮಿಡುಕಲಾರದವರಾಗಿರಲು) ಪವನಾತ್ಮಜಂ ದ್ರುಪದಾತ್ಮಜೆಗೆ ಬೞಿಯನಟ್ಟುವುದುಂ (ಭೀಮನು ದ್ರೌಪದಿಗೆ ದೂತರ ಮೂಲಕ ಹೇಳಿಕಳುಹಿಸಲು ) ಆ ವನಿತೆ ಜಯವನಿತೆ ಬರ್ಪಂತೆ ಬಂದು(ಆ ಹೆಣ್ಣು ಜಯಲಕ್ಷ್ಮಿಯು ಬರುವಂತೆ ಬಂದು) -
ವಚನ:ಅರ್ಥ:ಹಾಗೆ ಕೋಪಿಸಿಕೊಂಡ ಭೀಮನ ಕೋಪಾಟೋಪವನ್ನು ಕಂಡು ಕೌರವಸೈನ್ಯದ ನಾಯಕರಲ್ಲಿ ಒಬ್ಬರಾದರೂ ಮಿಟ್ಟೆಂದು ಮಿಡುಕಲಾರದವರಾಗಿರಲು ಭೀಮನು ದ್ರೌಪದಿಗೆ ದೂತರ ಮೂಲಕ ಹೇಳಿಕಳುಹಿಸಲು, ಆ ಹೆಣ್ಣು ಜಯಲಕ್ಷ್ಮಿಯು ಬರುವಂತೆ ಬಂದು-
ಮ|| ಉಸಿರೊತ್ತಿಂ ತಿದಿಯಂತಿರೊತ್ತಿದ ಬಸಿಱ್ ಪೋತಂದ ಕಣ್ ಬಿಟ್ಟ ಬಾಯ್
ಮಸಕಂಗುಂದಿದ ಮೆಯ್ ವಲಂ ಬಡಿವ ಕಾಲ್ ಭೂಭಾಗದೊಳ್ ತಂದು ತಾ|
ಟಿಸುತುಂ ಕೋಟಲೆಗೊಳ್ವ ರತ್ನಮಕುಟದ್ಯೋತೋತ್ತಮಾಂಗಂ ವಿರಾ
ಜಿಸುವನ್ನಂ ಪುಡಿಯೊಳ್ ಪೊರಳ್ವ ಪಗೆಯಂ ಕಣ್ಣಾರ್ವಿನಂ ನೋಡಿದಳ್ ||೧೫೧ ||
ಪದ್ಯ-೧೫೧:ಪದವಿಭಾಗ-ಅರ್ಥ:ಉಸಿರೊತ್ತಿಂ ತಿದಿಯಂತಿರೆ (ಉಸಿರಿನ ಒತ್ತಡದಿಂದ ತಿದಿಯ ಹಾಗೆ ಆಗಿತ್ತು,) ಒತ್ತಿದ ಬಸಿಱ್ ಪೋತಂದ ಕಣ್ ಬಿಟ್ಟ ಬಾಯ್ (ಅಮುಕಿದ ಹೊಟ್ಟೆ, ಹೊರಕ್ಕೆ ಹೊರಟಿರುವ ಕಣ್ಣು, ಬಿಟ್ಟಿರುವ ಬಾಯಿ) ಮಸಕಂಗುಂದಿದ ಮೆಯ್ (ಶಕ್ತಿಕುಂದಿದ ದೇಹ,) ವಲಂ ಬಡಿವ ಕಾಲ್ ಭೂಭಾಗದೊಳ್ ತಂದು ತಾಟಿಸುತುಂ (ನೆಲದಮೇಲೆ ಬಡಿಯುತ್ತ ಹಿಂಸೆ ಪಡುತ್ತಿರುವ ಚೆನ್ನಾಗಿ ಬಡಿಯುತ್ತಿರುವ ಕಾಲು,) ಕೋಟಲೆಗೊಳ್ವ ರತ್ನಮಕುಟದ್ಯೋತ ಉತ್ತಮಾಂಗಂ (ರತ್ನಖಚಿತವಾದ ಕಿರೀಟದಿಂದ ಪ್ರಕಾಶಮಾನವಾಗಿರುವ ತಲೆ) ವಿರಾಜಿಸುವನ್ನಂ (ಇವೆಲ್ಲವೂ ವಿರಾಜಿಸುತ್ತಿರಲು) ಪುಡಿಯೊಳ್ ಪೊರಳ್ವ ಪಗೆಯಂ (ಧೂಳಿನಲ್ಲಿ ಹೊರಳಾಡುತ್ತಿರುವ ಹಗೆಯನ್ನು) ಕಣ್ಣಾರ್ವಿನಂ ನೋಡಿದಳ್ (ಕಣ್ಣುತೃಪ್ತಿ ಪಡುವವರೆಗೂ ದ್ರೌಪದಿಯು ನೋಡಿದಳು.)
ಪದ್ಯ-೧೫೧:ಅರ್ಥ: ಉಸಿರಿನ ಒತ್ತಡದಿಂದ ತಿದಿಯ ಹಾಗೆ ಆಗಿತ್ತು, ಅಮುಕಿದ ಹೊಟ್ಟೆ, ಹೊರಕ್ಕೆ ಹೊರಟಿರುವ ಕಣ್ಣು, ಬಿಟ್ಟಿರುವ ಬಾಯಿ, ಶಕ್ತಿಕುಂದಿದ ದೇಹ, ನೆಲದಮೇಲೆ ಬಡಿಯುತ್ತ ಹಿಂಸೆ ಪಡುತ್ತಿರುವ ಚೆನ್ನಾಗಿ ಬಡಿಯುತ್ತಿರುವ ಕಾಲು, ರತ್ನಖಚಿತವಾದ ಕಿರೀಟದಿಂದ ಪ್ರಕಾಶಮಾನವಾಗಿರುವ ತಲೆ ಇವೆಲ್ಲವೂ ವಿರಾಜಿಸುತ್ತಿರಲು, ಧೂಳಿನಲ್ಲಿ ಹೊರಳಾಡುತ್ತಿರುವ ಹಗೆಯನ್ನು ಕಣ್ಣುತೃಪ್ತಿ ಪಡುವವರೆಗೂ ದ್ರೌಪದಿಯು ನೋಡಿದಳು.
ಕಂ|| ಆಸತ್ತು ತಿರಿದರಣ್ಯಾ
ವಾಸದ ಪರಿಭವದ ಕುದಿಪಮಂ ನೀಗಿ ಸುಖಾ|
ವಾಸಮನೆಯ್ದಿಸಿದುದು ದು
ಶ್ಶಾಸನನಿರ್ದಿರವು ಮನದೊಳಾ ದ್ರೌಪದಿಯಾ|| ೧೫೨ ||
ಪದ್ಯ-೧೫೨:ಪದವಿಭಾಗ-ಅರ್ಥ:ಆಸತ್ತು ತಿರಿದ (ಬಳಲಿ ಅಲೆದಾಡಿದ,) ಅರಣ್ಯಾವಾಸದ ಪರಿಭವದ ಕುದಿಪಮಂ ನೀಗಿ (ವನವಾಸದ ಅವಮಾನವನ್ನೂ ಸಂಕಟವನ್ನೂ ಹೋಗಲಾಡಿಸಿ ) ಸುಖ ಆವಾಸಮನ ಎಯ್ದಿಸಿದುದು (ಅವಳಿಗೆ ಸುಖದ ನೆಲೆಯನ್ನುಂಟುಮಾಡಿತು.) ದುಶ್ಶಾಸನನು ಇರ್ದ ಇರವು ಮನದೊಳು ಆ ದ್ರೌಪದಿಯಾ (ದುಶ್ಶಾಸನನು ಇದ್ದ ಸ್ಥಿತಿಯು ದ್ರೌಪದಿಯ ಮನಸ್ಸಿನಲ್ಲಿ ಸುಖದ ನೆಲೆಯನ್ನುಂಟುಮಾಡಿತು.)
ಪದ್ಯ-೧೫೨:ಅರ್ಥ: ದುಶ್ಶಾಸನನು ಇದ್ದ ಸ್ಥಿತಿಯು ಅವಳು ಕಾಡಿನಲ್ಲಿ ಬಳಲಿ ಅಲೆದಾಡಿದ, ವನವಾಸದ ಅವಮಾನವನ್ನೂ ಸಂಕಟವನ್ನೂ ಹೋಗಲಾಡಿಸಿ ದ್ರೌಪದಿಯ ಮನಸ್ಸಿನಲ್ಲಿ ಸುಖದ ನೆಲೆಯನ್ನುಂಟುಮಾಡಿತು.
ವ|| ಆಗಳ್ ವೃಕೋದರಂ ತನ್ನ ತಳೋದರಿಯ ಮುಖಮಂ ನೋಡಿ ನಿನ್ನೆನ್ನ ಪ್ರತಿಜ್ಞೆಯಂ ನೆಱಪುವಂ ಬಾಯೆಂದು ಕೆಲದೊಳ್ ಕುಳ್ಳಿರಿಸಿ ದೃಢ ಕಠಿನಹೃದಯನಪ್ಪ ಹಿರಣ್ಯಾಕ್ಷನುರಮಂ ಪೋೞ್ವ ನಾರಸಿಂಗನಂತೆ-
ವಚನ:ಪದವಿಭಾಗ-ಅರ್ಥ:ಆಗಳ್ ವೃಕೋದರಂ ತನ್ನ ತಳೋದರಿಯ ಮುಖಮಂ ನೋಡಿ (ಆಗ ಭೀಮನು ತನ್ನ ಸಣ್ಣಸೊಂಟದ ವನಿತೆಯ ಮುಖವನ್ನು ನೋಡಿ) ನಿನ್ನ ಎನ್ನ ಪ್ರತಿಜ್ಞೆಯಂ ನೆಱಪುವಂ ಬಾಯೆಂದು (ನ್ನ ಮತ್ತು ನನ್ನ ಪ್ರತಿಜ್ಞೆಯನ್ನು ಪೂರ್ಣ ಮಾಡೋಣ ಬಾ ಎಂದು) ಕೆಲದೊಳ್ ಕುಳ್ಳಿರಿಸಿ (ಪಕ್ಕದಲ್ಲಿ ಕುಳ್ಳಿರಿಸಿಕೊಂಡು) ದೃಢ ಕಠಿನಹೃದಯನಪ್ಪ ಹಿರಣ್ಯಾಕ್ಷನುರಮಂ ಪೋೞ್ವ ನಾರಸಿಂಗನಂತೆ (ದೃಢವೂ ಕಠಿಣವೂ ಆದ ಹಿರಣ್ಯಾಕ್ಷನ ಎದೆಯನ್ನು ಸೀಳುವ ನರಸಿಂಹನಂತೆ)-
ವಚನ:ಅರ್ಥ:ಆಗ ಭೀಮನು ತನ್ನ ಸಣ್ಣಸೊಂಟದ ವನಿತೆಯ ಮುಖವನ್ನು ನೋಡಿ ನಿನ್ನ ಮತ್ತು ನನ್ನ ಪ್ರತಿಜ್ಞೆಯನ್ನು ಪೂರ್ಣ ಮಾಡೋಣ ಬಾ ಎಂದು ಪಕ್ಕದಲ್ಲಿ ಕುಳ್ಳಿರಿಸಿಕೊಂಡು ದೃಢವೂ ಕಠಿಣವೂ ಆದ ಹಿರಣ್ಯಾಕ್ಷನ ಎದೆಯನ್ನು ಸೀಳುವ ನರಸಿಂಹನಂತೆ-
  • ಟಿಪ್ಪಣಿ::(ಇಲ್ಲಿ ಹಿರಣ್ಯಕಶಿಪು ಎಂದಿರಬೇಕಿತ್ತು, ಹಿರಣ್ಯಾಕ್ಷನನ್ನು ಕೊಂದಿದ್ದು ವರಾಹ- ಕವಿ ಮರೆತನೇ? ಮತ್ತೆ ಭೀಮನಿಗೆ ತನ್ನ ತಳೋದರಿಯ ಎಂದು ಪತ್ನಿಯಂತೆ ಹೇಳಿರುವುದು ದ್ರೌಪದಿಯನ್ನು ಅರ್ಜುನನೊಬ್ಬನೇ ವಿವಾಹವಾದುದನ್ನು ಮರೆತಂತೆ ಕಾಣುವುದು. ವ್ಯಾಸ ಭಾರತದ ಪ್ರಭಾವ ಪ್ರತಿಭೆಯ ಕವಿಗೂ ಮರೆವೆಯನ್ನು ತಂದಿರಬಹುದು)
ಕಂ|| ಡೊಕ್ಕನೆ ಸುರಿಗೆಯೊಳುರಮಂ
ಬಿಕ್ಕನೆ ಬಿರಿಯಿಱಿದು ಬರಿಯನಗಲೊತ್ತಿ ಮನಂ|
ಕೊಕ್ಕರಿಸದೆ ಬಗಸಿರೆಯಿನ
ಳುರ್ಕ್ಕೆಯೆ ಮೊಗೆಮೊಗೆದು ನೆತ್ತರಂ ಪವನಸುತಂ|| ೧೫೩ ||
ಪದ್ಯ-೧೫೩:ಪದವಿಭಾಗ-ಅರ್ಥ:ಡೊಕ್ಕನೆ ಸುರಿಗೆಯೊಳು ಉರಮಂ ಬಿಕ್ಕನೆ ಬಿರಿಯಿಱಿದು (ಕೈಗತ್ತಿಯಿಂದ ಎದೆಯನ್ನು ಡೊಕ್ಕೆಂದು ಬಿರುಬಿರನೆ ಬಿರಿಯುವಂತೆ ಇರಿದು- ತಿವಿದು) ಬರಿಯಂ ಅಗಲೊತ್ತಿ (ಪಕ್ಕವನ್ನು ಅಗಲವಾಗಿ ತಳ್ಳಿ- ಹಿಗ್ಗಿಸಿ) ಮನಂ ಕೊಕ್ಕರಿಸದೆ (ಮನಸ್ಸಿನಲ್ಲಿ ಅಹಸ್ಯಪಟ್ಟುಕೊಳ್ಳದೆ) ಬಗಸಿರೆಯಿನ ಅಳುರ್ಕ್ಕೆಯೆ (ಬೊಗೆಸೆಯಿಂದ ಹೆಚ್ಚಾಗಿ) ಮೊಗೆಮೊಗೆದು ನೆತ್ತರಂ ಪವನಸುತಂ (ಭೀಮನು ರಕ್ತವನ್ನು ಮೊಗೆಮೊಗೆದು)-
ಪದ್ಯ-೧೫೩:ಅರ್ಥ: ಕೈಗತ್ತಿಯಿಂದ ಎದೆಯನ್ನು ಡೊಕ್ಕೆಂದು ಬಿರುಬಿರನೆ ಬಿರಿಯುವಂತೆ ತಿವಿದು ಪಕ್ಕವನ್ನು ಅಗಲವಾಗಿ ತಳ್ಳಿ ಮನಸ್ಸಿನಲ್ಲಿ ಅಹಸ್ಯಪಟ್ಟುಕೊಳ್ಳದೆ ಬೊಗೆಸೆಯಿಂದ ಭೀಮನು ರಕ್ತವನ್ನು ಮೊಗೆಮೊಗೆದು-
ಕಂ|| ನೆತ್ತಿಯೊಳೆರೆದೆರೆದಿನಿಸರೆ
ಯೊತ್ತಿ ಬೞಿಕ್ಕಿೞಿಯೆ ಪೊಸೆದು ಜಡೆಗೊಂಡಿರ್ದು|
ದ್ವೃತ್ತ ಕುಚಯುಗೆಯ ಕೇಶಮ
ನೆತ್ತಂ ಪಸರಿಸಿದನೆಯ್ದೆ ಪಸರಿಸಿದದಟಿಂ|| ೧೫೪ ||
ಪದ್ಯ-೧೫೪:ಪದವಿಭಾಗ-ಅರ್ಥ:ನೆತ್ತಿಯೊಳ್ ಎರೆದು ಎರೆದು ಇನಿಸ ಅರೆಯೊತ್ತಿ (ತಲೆಯಮೇಲೆ ಹೊಯಿದು ಹೊಯಿದು,ಒಂದಿಷ್ಟು ತಲೆಗಿಳಿಯುವಂತೆ ತಟ್ಟಿ) ಬೞಿಕ್ಕೆ ಇೞಿಯೆ ಪೊಸೆದು (ಬಳಿಕ ಕೆಳಕ್ಕೆ ಇಳಿಯಲು ಹೊಸೆದು) ಜಡೆಗೊಂಡಿರ್ದ + ಉದ್ವೃತ್ತ ( ಜಡಕಾಗಿದ್ದ-) ಉದ್ವೃತ್ತ ಕುಚಯುಗೆಯ ಕೇಶಮನು ಎತ್ತಂ - ಎಲ್ಲಾಕಡೆಯೂ(->) (ಎದ್ದುನಿಂತಿದ್ದ ಎರಡು ಮೊಲೆಯ ಮೇಲಿದ್ದ ದ್ರೌಪದಿಯ ಕೂದಲನ್ನು) ಪಸರಿಸಿದನು ಎಯ್ದೆ ಪಸರಿಸಿದ ಅದಟಿಂ (ಭೀಮನು ರಕ್ತದಿಂದ ನೆನೆಸಿ ತನ್ನ ಪರಾಕ್ರಮತೋರಿ ಬಿಡಿಸಿದನು)
ಪದ್ಯ-೧೫೪:ಅರ್ಥ: ದ್ರೌಪದಿಯ ತಲೆಯಮೇಲೆ ಹೊಯಿದು ಹೊಯಿದು, ಒಂದಿಷ್ಟು ತಲೆಗಿಳಿಯುವಂತೆ ತಟ್ಟಿ, ಬಳಿಕ ಕೆಳಕ್ಕೆ ಇಳಿಯಲು ಹೊಸೆದು ಜಡಕಾಗಿದ್ದ- ಎದ್ದುನಿಂತಿದ್ದ ಎರಡು ಮೊಲೆಯ ಮೇಲಿದ್ದ ದ್ರೌಪದಿಯ ಕೂದಲನ್ನು ಭೀಮನು ರಕ್ತದಿಂದ ನೆನೆಸಿ ತನ್ನ ಪರಾಕ್ರಮತೋರಿ ಎಲ್ಲಾಕಡೆಯೂ ಬಿಡಿಸಿದನು.
ಪಸರಿಸಿ ಪಂದಲೆಯಂ ಮೆ
ಟ್ಟಿಸಿ ವೈರಿಯ ಪಲ್ಲ ಪಣಿಗೆಯಿಂ ಬಾರ್ಚಿ ಪೊದ|
ೞ್ದೊಸಗೆಯಿನವನ ಕರುಳ್ಗಳೆ
ಪೊಸವಾಸಿಗಮಾಗೆ ಕೃಷ್ಣೆಯಂ ಮುಡಿಯಿಸಿದಂ|| ೧೫೫ ||
ಪದ್ಯ-೧೫೫:ಪದವಿಭಾಗ-ಅರ್ಥ:ಪಸರಿಸಿ- ಬಿಡಿಸಿ, ಪಂದಲೆಯಂ (ತಲೆಯ ಸಿಕ್ಕನ್ನು ಬಿಡಿಸಿ) ಮೆಟ್ಟಿಸಿ (ಅವಳ ಕಾಲಿನಿಂದ ಅವನನ್ನು ತುಳಿಯಿಸಿ) ವೈರಿಯ ಪಲ್ಲ ಪಣಿಗೆಯಿಂ ಬಾರ್ಚಿ (ವೈರಿಯ ಹಲ್ಲೆಂಬ ಬಾಚಣಿಗೆಯಿಂದ ಬಾಚಿ ) ಪೊದೞ್ದ ಹೊಸಗೆಯಿಂ ಅವನ ಕರುಳ್ಗಳೆ ಪೊಸವಾಸಿಗಮಾಗೆ - ಹೊಸ ಬಾಸಿಗ (ಹೆಚ್ಚಿನ ಸಂತೋಷದಿಂದ ಅವನ ಹೊಸಕರುಳುಗಳೇ ಹೊಸ ಹೂವಿನ ದಂಡೆಯಾಗಲು) ಕೃಷ್ಣೆಯಂ ಮುಡಿಯಿಸಿದಂ (ದ್ರೌಪದಿಗೆ ತಾನೆ ಮುಡಿಸಿದನು.)
ಪದ್ಯ-೧೫೫:ಅರ್ಥ: ದುಶ್ಶಾಸನನ ರಕ್ತದಿಂದ ಜಿಗಟಾದ ಅವಳ ತಲೆಯ ಸಿಕ್ಕನ್ನು ಬಿಡಿಸಿ, ಅವಳ ಕಾಲಿನಿಂದ ಅವನನ್ನು ತುಳಿಯಿಸಿ, ವೈರಿಯ ಹಲ್ಲೆಂಬ ಬಾಚಣಿಗೆಯಿಂದ ಬಾಚಿ, ಹೆಚ್ಚಿನ ಸಂತೋಷದಿಂದ ಅವನ ಹೊಸಕರುಳುಗಳೇ ಹೊಸ ಹೂವಿನ ದಂಡೆಯಾಗಲು ದ್ರೌಪದಿಗೆ ತಾನೆ ಮುಡಿಸಿದನು.
ವ|| ಅಂತು ತನ್ನಪಗೆಯುಂ ಬಗೆಯುಮೊಡನೊಡನೆ ಮುಡಿಯೆ ರಿಪು ವಿಪುಳರುಧಿರ ಜಲಂಗಳೊಳಂ ರುಚಿರ ತದೀಯಾಂತ್ರಮಾಲೆಯನೆ ಮಾಲೆಮಾಡಿ ಮುಡಿಯಿಸಿ ಕೃಷ್ಣೆಯ ಮೊಗಮಂ ನೋಡಿ ಮುಗುಳ್ನಗೆ ನಕ್ಕು ಕೌರವಕುಳವಿಳಯಕೇತುವಿಂತೆಂದಂ-
ವಚನ:ಪದವಿಭಾಗ-ಅರ್ಥ:ಅಂತು ತನ್ನಪಗೆಯುಂ ಬಗೆಯುಂ ಒಡನೆ ಒಡನೆ ಮುಡಿಯೆ (ಹಾಗೆ ತನ್ನ ಶತ್ರುವೂ ಇಷ್ಟಾರ್ಥವೂ ಜೊತೆಯಾಗಿ (ಒಟ್ಟಿಗೆ) ತೀರಲು) ರಿಪು ವಿಪುಳರುಧಿರ ಜಲಂಗಳೊಳಂ (ವೈರಿಯ ವಿಶೇಷವಾದ ರಕ್ತದಿಂದಲೂ) ರುಚಿರ ತದೀಯ ಆಂತ್ರಮಾಲೆಯನೆ ಮಾಲೆಮಾಡಿ ಮುಡಿಯಿಸಿ (ಅವನ ಮನೋಹರವಾದ ಕರುಳ ದಂಡೆಯಿಂದಲೂ ದಂಡೇಯನ್ನೇ ಮಾಡಿ ದ್ರೌಪದಿಗೆ ಮುಡಿಯಿಸಿ) ಕೃಷ್ಣೆಯ ಮೊಗಮಂ ನೋಡಿ ಮುಗುಳ್ನಗೆ ನಕ್ಕು (ಅವಳ ಮುಖವನ್ನು ನೋಡಿ ಮುಗುಳ್ನಗೆ ನಕ್ಕು) ಕೌರವಕುಳ ವಿಳಯಕೇತುವು ಇಂತೆಂದಂ (ಕೌರವಕುಲ ನಾಶಕೇತುವಾದ ಭೀಮನು ಹೀಗೆಂದನು.)-
ವಚನ:ಅರ್ಥ:ಹಾಗೆ ತನ್ನ ಶತ್ರುವೂ ಇಷ್ಟಾರ್ಥವೂ ಜೊತೆಯಾಗಿ (ಒಟ್ಟಿಗೆ) ತೀರಲು ವೈರಿಯ ವಿಶೇಷವಾದ ರಕ್ತದಿಂದಲೂ ಅವನ ಮನೋಹರವಾದ ಕರುಳ ದಂಡೆಯಿಂದಲೂ ದಂಡೇಯನ್ನೇ ಮಾಡಿ, ದ್ರೌಪದಿಗೆ ಮುಡಿಯಿಸಿ, ಅವಳ ಮುಖವನ್ನು ನೋಡಿ ಮುಗುಳ್ನಗೆ ನಕ್ಕು, ಕೌರವಕುಲ ನಾಶಕೇತುವಾದ ಭೀಮನು ಹೀಗೆಂದನು.
ವ|| ಸ್ರ|| ಇದರೊಳೊ ಶ್ವೇತಾತಪತ್ರಸ್ಥಗಿತ ದಶ ದಿಶಾಮಂಡಲಂ ರಾಜಚಕ್ರಂ
ಪುದಿದೞ್ಕಾಡಿತ್ತಡಿಂಗಿತ್ತಿದರೊಳೆ ಕುರುರಾಜಾನ್ವಯಂ ಮತ್ಪ್ರತಾಪ|
ಕ್ಕಿದಱಿಂದಂ ನೋಡಗುರ್ವುವಿದುದಿದುವೆ ಮಹಾಭಾರತಕ್ಕಾದಿಯಾಯ್ತ
ಬ್ಜದಳಾಕ್ಷೀ ಪೇೞ ಸಾಮಾನ್ಯಮೆ ಬಗೆಯೆ ಭವತ್ಕೇಶಪಾಶಪ್ರಪಂಚಂ|| ೧೫೬||
ಪದ್ಯ-೧೫೬:ಪದವಿಭಾಗ-ಅರ್ಥ:ಇದರೊಳೊ ಶ್ವೇತ ಆತಪತ್ರ ಸ್ಥಗಿತ ದಶ ದಿಶಾಮಂಡಲಂ (ಈ ಮುಡಿಯಲ್ಲಿ ಹತ್ತು ದಿಕ್ಕುಗಳಲ್ಲಿಯೂ ಬೆಳುಗೊಡೆಗಳನ್ನೆತ್ತಿಸಿದ) ರಾಜಚಕ್ರಂ ಪುದಿದ ಅೞ್ಕಾಡಿತ್ತು (ರಾಜಸಮೂಹವು ಪ್ರವೇಶಮಾಡಿ ನಾಶವಾಯಿತು,) ಅಡಿಂಗಿತ್ತು ಇದರೊಳೆ ಕುರುರಾಜಾನ್ವಯಂ (ಕುರುರಾಜವಂಶವು ಇದರಲ್ಲಿ ಅಡಗಿಹೋಯಿತು,) ಮತ್ ಪ್ರತಾಪಕ್ಕೆ ಇದಱಿಂದಂ ನೋಡೆ ಅಗುರ್ವುಂ ಇದುದು (ನನ್ನ ಶೌರ್ಯಕ್ಕೆ ಇದರಿಂದ ಗೌರವವು (ಭಯವು) ಹೆಚ್ಚಾಯಿತು.) ಇದುವೆ ಮಹಾಭಾರತಕ್ಕೆ ಆದಿಯಾಯ್ತು ಅಬ್ಜದಳಾಕ್ಷೀ (ಇದೇ ಮಹಾಭಾರತಕ್ಕೆ ಆದಿಯಾಯ್ತು. ಕಮಲದಳದಂತೆ ವಿಸ್ತಾರವಾದ ಕಣ್ಣುಳ್ಳ ದ್ರೌಪದಿಯೇ) ಪೇೞ ಸಾಮಾನ್ಯಮೆ ಬಗೆಯೆ ಭವತ್ ಕೇಶಪಾಶ ಪ್ರಪಂಚಂ (ವಿಚಾರಮಾಡಿದರೆ ನಿನ್ನ ತಲೆಯ ಕುರುಳ ರಾಶಿಯು ಸಾಮಾನ್ಯವಾದುದೇ ಹೇಳು.) ಎಂದನು ಭೀಮ.
ಪದ್ಯ-೧೫೬:ಅರ್ಥ:“ಈ ಮುಡಿಯಲ್ಲಿ ಹತ್ತು ದಿಕ್ಕುಗಳಲ್ಲಿಯೂ ಬೆಳುಗೊಡೆಗಳನ್ನೆತ್ತಿಸಿದ ರಾಜಸಮೂಹವು ಪ್ರವೇಶಮಾಡಿ ನಾಶವಾಯಿತು, ಕುರುರಾಜವಂಶವು ಇದರಲ್ಲಿ ಅಡಗಿಹೋಯಿತು, ನನ್ನ ಶೌರ್ಯಕ್ಕೆ ಇದರಿಂದ ಗೌರವವು (ಭಯವು) ಹೆಚ್ಚಾಯಿತು. ಇದೇ ಮಹಾಭಾರತಕ್ಕೆ ಆದಿಯಾಯ್ತು. ಕಮಲದಳದಂತೆ ವಿಸ್ತಾರವಾದ ಕಣ್ಣುಳ್ಳ ದ್ರೌಪದಿಯೇ! ವಿಚಾರಮಾಡಿದರೆ ನಿನ್ನ ತಲೆಯ ಕುರುಳ ರಾಶಿಯು ಸಾಮಾನ್ಯವಾದುದೇ ಹೇಳು.” ಎಂದನು ಭೀಮ.
ವ|| ಎಂದು ನುಡಿದು ನೀನುಂ ನಿನ್ನ ಪ್ರತಿಜ್ಞೆಯಂ ನೆರೆಪಿದೆಯಾನುಮೆನ್ನ ಪ್ರತಿಜ್ಞೆಯಂ ನೆಱಪುವೆನೆಂದು ದ್ರೌಪದಿಯಂ ಪಿಡಿಯನೇಱಿಸಿ ಬೀಡಿಂಗೆ ಕಳಿಪಿ ರಾಕ್ಷಸಕ್ರೀಡೆಯನಾಡಲ್ ಬಗೆದು ಹಿಡಿಂಬೆಯಂ ನೆನೆದು ಬರಿಸಿ-
ವಚನ:ಪದವಿಭಾಗ-ಅರ್ಥ:ಎಂದು ನುಡಿದು ನೀನುಂ ನಿನ್ನ ಪ್ರತಿಜ್ಞೆಯಂ ನೆರೆಪಿದೆಯ, ಆನುಂ ಎನ್ನ ಪ್ರತಿಜ್ಞೆಯಂ ನೆಱಪುವೆನು ಎಂದು (ನೀನು ನನ್ನ ಪ್ರತಿಜ್ಞೆಯನ್ನು ಪೂರ್ಣಮಾಡಿದೆ. ನಾನೂ ನನ್ನ ಪ್ರತಿಜ್ಞೆಯನ್ನು ಪೂರ್ಣಮಾಡುತ್ತೇನೆ ಎಂದು) ದ್ರೌಪದಿಯಂ ಪಿಡಿಯನೇಱಿಸಿ ಬೀಡಿಂಗೆ ಕಳಿಪಿ (ದ್ರೌಪದಿಯನ್ನು ಹೆಣ್ಣಾನೆಯ ಮೇಲೆ ಕುಳ್ಳಿರಿಸಿ ಮನೆಗೆ ಕಳುಹಿಸಿ) ರಾಕ್ಷಸಕ್ರೀಡೆಯನು ಆಡಲ್ ಬಗೆದು ಹಿಡಿಂಬೆಯಂ ನೆನೆದು ಬರಿಸಿ (ರಾಕ್ಷಸಕ್ರೀಡೆಯನ್ನು ಆಡಲು ಯೋಚಿಸಿ ಹಿಡಿಂಬೆಯನ್ನು ಜ್ಞಾಪಿಸಿಕೊಂಡು ಬರಮಾಡಿ)-
ವಚನ:ಅರ್ಥ:ವ|| ಎಂದು ಹೇಳಿ ನೀನು ನನ್ನ ಪ್ರತಿಜ್ಞೆಯನ್ನು ಪೂರ್ಣಮಾಡಿದೆ. ನಾನೂ ನನ್ನ ಪ್ರತಿಜ್ಞೆಯನ್ನು ಪೂರ್ಣಮಾಡುತ್ತೇನೆ ಎಂದು ದ್ರೌಪದಿಯನ್ನು ಹೆಣ್ಣಾನೆಯ ಮೇಲೆ ಕುಳ್ಳಿರಿಸಿ ಮನೆಗೆ ಕಳುಹಿಸಿ, ರಾಕ್ಷಸಕ್ರೀಡೆಯನ್ನು ಆಡಲು ಯೋಚಿಸಿ ಹಿಡಿಂಬೆಯನ್ನು ಜ್ಞಾಪಿಸಿಕೊಂಡು ಬರಮಾಡಿ-
ಕಂ|| ಒಸರ್ವ ಬಿಸುನೆತ್ತರಂ ರ
ಕ್ಕಸನಂದದೆ ಕುಡಿದು ಕುಡಿದು ಕಂಡಂಗಳನ|
ರ್ವಿಸೆ ಮೇಲ್ದು ಮೆಲ್ದು ಕರ್ಬಿನ
ರಸಕ್ಕಮಿನಿಸಂಪುಗಾಣೆನೆಂದನಿಲಸುತಂ|| ೧೫೭ ||
ಪದ್ಯ-೧೫೭:ಪದವಿಭಾಗ-ಅರ್ಥ:ಒಸರ್ವ ಬಿಸು ನೆತ್ತರಂ ರಕ್ಕಸನಂದದೆ ಕುಡಿದು ಕುಡಿದು (ಸ್ರವಿಸುತ್ತಿರುವ ಬಿಸಿರಕ್ತವನ್ನು ರಾಕ್ಷಸನ ಹಾಗೆ ಕುಡಿದು ಕುಡಿದು) ಕಂಡಂಗಳನು ಅರ್ವಿಸೆ ಮೇಲ್ದು ಮೆಲ್ದು (ಮಾಂಸಖಂಡಗಳನ್ನು ವಿಶೇಷವಾಗಿ ಆಗಿದು ಅಗಿದು) ಕರ್ಬಿನರಸಕ್ಕಂ ಇನಿಸು ಇಂಪುಗಾಣೆಂ ಎಂದು ಅನಿಲಸುತಂ (ಕಬ್ಬಿನ ರಸದಲ್ಲಿಯೂ ಇಷ್ಟು ರುಚಿಯನ್ನು ಕಾಣೆನೆ ಎಂದು ಭೀಮನು)
ಪದ್ಯ-೧೫೭:ಅರ್ಥ: ಸ್ರವಿಸುತ್ತಿರುವ ಬಿಸಿರಕ್ತವನ್ನು ರಾಕ್ಷಸನ ಹಾಗೆ ಕುಡಿದು ಕುಡಿದು, ಮಾಂಸಖಂಡಗಳನ್ನು ವಿಶೇಷವಾಗಿ ಆಗಿದು ಅಗಿದು ಕಬ್ಬಿನ ರಸದಲ್ಲಿಯೂ ಇಷ್ಟು ರುಚಿಯನ್ನು ಕಾಣೆನೆ ಎಂದು ಭೀಮನು
ಸವಿ ಸವಿದು ಬಿಕ್ಕ ಬಿಕ್ಕನೆ
ಸವಿನೋಡೆನ್ನಾಣೆಯೆಂದು ರಕ್ಕಸಿಗಮದಂ||
ಸವಿದೋಱಿ ನೆತ್ತರೆಲ್ಲಂ
ತವೆ ಮುಳಿಸಿಂದವನ ಕರುಳ ಪಿಣಿಲಂ ನೊಣೆದಂ|| ೧೫೮ ||
ಪದ್ಯ-೧೫೮:ಪದವಿಭಾಗ-ಅರ್ಥ:ಸವಿ ಸವಿದು ಬಿಕ್ಕ ಬಿಕ್ಕನೆ ಸವಿನೋಡು ಎನ್ನಾಣೆಯೆಂದು (ರುಚಿ ನೋಡಿ ನೋಡಿ ಬಿಕ್ಕಬಿಕ್ಕನೆ ರುಚಿನೋಡು ಎನ್ನಾಣೆ ಎಂದು) ರಕ್ಕಸಿಗಂ ಅದಂ ಸವಿದೋಱಿ (ರಾಕ್ಷಸಿಗೂ ಅದರ ರುಚಿಯನ್ನು ತೋರಿಸಿ) ನೆತ್ತರೆಲ್ಲಂ ತವೆ (ರಕ್ತವೆಲ್ಲವೂ ಮುಗಿದು ಹೋಗಲು) ಮುಳಿಸಿಂದ ಅವನ ಕರುಳ ಪಿಣಿಲಂ ನೊಣೆದಂ (ಅವನ ಕರುಳುಗಳ ಕುಚ್ಚನ್ನು ಕೋಪದಿಂದ ಚಪ್ಪರಿಸಿದನು.)
ಪದ್ಯ-೧೫೮:ಅರ್ಥ: ರುಚಿ ನೋಡಿ ನೋಡಿ ಬಿಕ್ಕಬಿಕ್ಕನೆ ರುಚಿನೋಡು ಎನ್ನಾಣೆ ಎಂದು ರಾಕ್ಷಸಿಗೂ ಅದರ ರುಚಿಯನ್ನು ತೋರಿಸಿ ರಕ್ತವೆಲ್ಲವೂ ಮುಗಿದು ಹೋಗಲು ಅವನ ಕರುಳುಗಳ ಕುಚ್ಚನ್ನು ಕೋಪದಿಂದ ಚಪ್ಪರಿಸಿದನು.
ವ|| ಅಂತು ಕುಡಿದು ನಿಜವಿರೋಧಿ ರುಧಿರಾಸವದೊಳಳವಿಗಳಿಯೆ ಸೊಕ್ಕಿ ತಾನುಂ ಹಿಡಿಂಬೆಯುಮವನ ಬರಿಯ ನರವಿನಡುಗಿನಿಡುವಿನೆಡೆಯ ಕೆನ್ನೆತ್ತರೊಳೊರ್ವರೊರ್ವರಂ ತಳ್ಕಿಱಿದುಂ ಬೊಬ್ಬಿಱಿದುಂ ತ್ರಿಪುಂಡ್ರಮಿಟ್ಟುಂ ಕೂಕಿಱಿದುಂ ತೇಗಿಯುಂ ಪಸಿಗೆವರಿದುಂ ಬವಳಿವರಿದುಂ ಬಾಸಂಗುೞಿಗೆವಱಿದುಂ ಸೂೞ್ವರಿದುಮಾಡುವಾಗಳುಭಯಬಲಂಗಳ್ ಬೆಕ್ಕಸಂಬಟ್ಟು ನೋಡಿ-
ವಚನ:ಪದವಿಭಾಗ-ಅರ್ಥ:ಅಂತು ಕುಡಿದು ನಿಜವಿರೋಧಿ ರುಧಿರಾಸವದೊಳ್ (ಆ ರೀತಿಯಲ್ಲಿ ಕುಡಿದು ತನ್ನ ಶತ್ರುವಿನ ರಕ್ತವೆಂಬ ಹೆಂಡದಲ್ಲಿ) ಅಳವಿಗಳಿಯೆ ಸೊಕ್ಕಿ ತಾನುಂ ಹಿಡಿಂಬೆಯುಂ (ಅಳತೆಮೀರಿ ಸೊಕ್ಕಿ ಹೋಗಿ ತಾನೂ ಹಿಡಿಂಬೆಯೂ) ಅವನ ಬರಿಯ (ಅವನ ಪಕ್ಕೆಗಳ) ನರವಿನ ಅಡುಗಿನ ಇಡುವಿನ ಎಡೆಯ (ನರಗಳ ಮಾಂಸಗಳ ಸಂದಿಗಳಲ್ಲಿದ್ದ ) ಕೆನ್ನೆತ್ತರೊಳು ಒರ್ವರೊರ್ವರಂ (ಕೆಂಪಾದ ರಕ್ತವನ್ನು ಇಬ್ಬರೂ) ತಳ್ಕಿಱಿದುಂ (ಮೈಗೆ ಬಳಿದುಕೊಂಡು) ಬೊಬ್ಬಿಱಿದುಂ ತ್ರಿಪುಂಡ್ರಮಿಟ್ಟುಂ (ಬೊಬ್ಬಿರಿದು ಹಣೆಯಲ್ಲಿ ಮೂರು ಎಳೆಗಳನ್ನು ಧರಿಸಿ) ಕೂಕಿಱಿದುಂ ತೇಗಿಯುಂ (ಘಟ್ಟಿಯಾಗಿ ಕೂಗಿ ತೇಗಿ) ಪಸಿಗೆವರಿದುಂ ಬವಳಿವರಿದುಂ (ನೇರವಾಗಿ ಓಡಿ ಸುತ್ತಲೂ ತಿರುಗಿ) ಬಾಸಂಗುೞಿಗೆ ವಱಿದುಂ (ನಕ್ಷತ್ರಮಂಡಲಕ್ಕೆ ನೆಗೆದು) ಸೂೞ್ವರಿದುಂ ಸೂಳ್ + ವರಿದು, ಪರಿದು,ಹರಿದು, ಓಡಿ ಆಡುವಾಗಳು (ಸರದಿಯ ಮೇಲೆ ಓಡಿ ಆಡುವಾಗ) ಉಭಯ ಬಲಂಗಳ್ ಬೆಕ್ಕಸಂಬಟ್ಟು ನೋಡಿ(ಎರಡು ಸೈನ್ಯಗಳೂ ಆಶ್ಚರ್ಯಪಟ್ಟು ನೋಡಿದವು. ನೋಡಿ-)-
ವಚನ:ಅರ್ಥ: ಆ ರೀತಿಯಲ್ಲಿ ಕುಡಿದು ತನ್ನ ಶತ್ರುವಿನ ರಕ್ತವೆಂಬ ಹೆಂಡದಲ್ಲಿ ಅಳತೆಮೀರಿ ಸೊಕ್ಕಿ ಹೋಗಿ ತಾನೂ ಹಿಡಿಂಬೆಯೂ ಅವನ ಪಕ್ಕೆಗಳ ನರಗಳ ಮಾಂಸಗಳ ಸಂದಿಗಳಲ್ಲಿದ್ದ ಕೆಂಪಾದ ರಕ್ತವನ್ನು ಇಬ್ಬರೂ ಮೈಗೆ ಬಳಿದುಕೊಂಡು ಬೊಬ್ಬಿರಿದು ಹಣೆಯಲ್ಲಿ ಮೂರು ಎಳೆಗಳನ್ನು ಧರಿಸಿ ಘಟ್ಟಿಯಾಗಿ ಕೂಗಿ ತೇಗಿ, ನೇರವಾಗಿ ಓಡಿ ಸುತ್ತಲೂ ತಿರುಗಿ ನಕ್ಷತ್ರಮಂಡಲಕ್ಕೆ ನೆಗೆದು ಸರದಿಯ ಮೇಲೆ ಓಡಿ ಆಡುವಾಗ ಎರಡು ಸೈನ್ಯಗಳೂ ಆಶ್ಚರ್ಯಪಟ್ಟು ನೋಡಿದವು.
ಕಂ|| ಆದ ಮುಳಿಸಿಂದಮೆಲ್ವಂ
ತೇದುಂ ಕುಡಿಯಲ್ಕೆ ತಕ್ಕ ಪಗೆವನ ರುಧಿರಾ|
ಚ್ಛೋದಮನೆ ಕುಡಿದು ಮಾಣ್ದ ವೃ
ಕೋದರನೇನಾವ ತೆಱದೊಳಂ ದೋಷಿಗನೇ|| ೧೫೯ ||
ಪದ್ಯ-೧೫೯:ಪದವಿಭಾಗ-ಅರ್ಥ:ಆದ ಮುಳಿಸಿಂದಂ ಎಲ್ವಂ ತೇದುಂ ಕುಡಿಯಲ್ಕೆ ತಕ್ಕ ಪಗೆವನ (ಇವನಿಗೆ ಉಂಟಾದ ಕೋಪದಿಂದ ಎಲುಬನ್ನೂ ತೇದು ಕುಡಿಯಲು ತಕ್ಕ ಶತ್ರುವಿನ) ರುಧಿರ ಆಚ್ಛೋದಮನೆ ಕುಡಿದು (ರಕ್ತವೆಂಬ ತಿಳಿನೀರನ್ನೇ ಕುಡಿದು) ಮಾಣ್ದ (ಬಿಟ್ಟ, ಕುಡಿದುಬಿಟ್ಟ?) ವೃಕೋದರನು ಏನಾವ ತೆಱದೊಳಂ ದೋಷಿಗನೇ (ಭೀಮನು ಏನು ಯಾವರೀತಿಯಿಂದಲಾದರೂ ದೋಷಿಯೇ? ದೋಷಿಯಲ್ಲ!.)
ಪದ್ಯ-೧೫೯:ಅರ್ಥ: ಭೀಮನಿಗೆ- / ಇವನಿಗೆ ಉಂಟಾದ ಕೋಪದಿಂದ ಎಲುಬನ್ನೂ ತೇದು ಕುಡಿಯಲು ತಕ್ಕ ಶತ್ರುವಿನ ರಕ್ತವೆಂಬ ತಿಳಿನೀರನ್ನೇ ಕುಡಿದುಬಿಟ್ಟ, ಭೀಮನು ಏನು ಯಾವರೀತಿಯಿಂದಲಾದರೂ ದೋಷಿಯೇ? ದೋಷಿಯಲ್ಲ!.
ಮ|| ಮುನಿಸಂ ಮಾಡಿದರಾತಿನಾಥರಡಗಂ ಸುಪ್ಪಲ್ಗೆ ಕೆನ್ನೆತ್ತರಂ
ಕೆನೆಗೊಂಡಾಱಿದ ಪಾಲ್ಗೆ ದೊಂಡೆಗರುಳಂ ಕರ್ಬಿಂಗೆ ಲೆಕ್ಕಕ್ಕೆ ತಂ|
ದಿನಿಸುಂ ಮಾಣದೆ ಪೀರ್ದು ಪೀರ್ದು ನೊಣೆದಂತೀ ಮಾೞ್ಕೆಯಿಂ ಭೀಮಸೇ
ನನವೋಲ್ ಪೂಣ್ದುದನೆಯ್ದೆ ಪೂಣ್ದ ಪಗೆಯಂ ಕೊಂಡಾಡದಂ ಗಂಡನೇ|| ೧೬೦ ||
ಪದ್ಯ-೧೬೦:ಪದವಿಭಾಗ-ಅರ್ಥ:ಮುನಿಸಂ ಮಾಡಿದ ಅರಾತಿನಾಥರ ಅಡಗಂ ಸುಪ್ಪಲ್ಗೆ (ಕೋಪವನ್ನುಂಟುಮಾಡಿದ ಶತ್ರುರಾಜರ ಮಾಂಸವನ್ನು ಉಪ್ಪುಹಾಕಿದ ಪಲ್ಯ- ಭಕ್ಷ್ಯವಿಶೇಷಕ್ಕೂ) ಕೆನ್ನೆತ್ತರಂ ಕೆನೆಗೊಂಡು ಆಱಿದ ಪಾಲ್ಗೆ (ಕೆಂಪುರಕ್ತವನ್ನು ಕೆನೆಗಟ್ಟಿ ಆರಿದ ಹಾಲಿಗೂ) ದೊಂಡೆಗರುಳಂ ಕರ್ಬಿಂಗೆ (ದೊಂಡೆ ಕರುಳನ್ನು ಕಬ್ಬಿಗೂ) ಲೆಕ್ಕಕ್ಕೆ ತಂದು ಇನಿಸುಂ ಮಾಣದೆ (ಸಮನಾಗಿ ಭಾವಿಸಿ ಸ್ವಲ್ಪವನ್ನೂ ಬಿಡದೆ ) ಪೀರ್ದು ಪೀರ್ದು ನೊಣೆದಂತ ಈ ಮಾೞ್ಕೆಯಿಂ (ಕುಡಿದು ಚಪ್ಪರಿಸಿದ ಈ ಕ್ರಿಯೆಯಿಂದ) ಭೀಮಸೇನನವೋಲ್ ಪೂಣ್ದುದನು ಎಯ್ದೆ ಪೂಣ್ದ (ಭೀಮಸೇನನ ಹಾಗೆ ಪ್ರತಿಜ್ಞೆ ಮಾಡಿದುದನ್ನು ಪೂರ್ಣಮಾಡಿದ) ಪಗೆಯಂ (ಹಗೆತನವನ್ನು) ಕೊಂಡಾಡದಂ ಗಂಡನೇ (ಹೊಗಳದವನು ಶೂರನೇ! )
ಪದ್ಯ-೧೬೦:ಅರ್ಥ: ಕೋಪವನ್ನುಂಟುಮಾಡಿದ ಶತ್ರುರಾಜರ ಮಾಂಸವನ್ನು ಉಪ್ಪುಹಾಕಿದ ಪಲ್ಯ- ಭಕ್ಷ್ಯವಿಶೇಷಕ್ಕೂ, ಕೆಂಪುರಕ್ತವನ್ನು ಕೆನೆಗಟ್ಟಿ ಆರಿದ ಹಾಲಿಗೂ, ದೊಂಡೆ ಕರುಳನ್ನು ಕಬ್ಬಿಗೂ ಸಮನಾಗಿ ಭಾವಿಸಿ ಸ್ವಲ್ಪವನ್ನೂ ಬಿಡದೆ, ಕುಡಿದು ಚಪ್ಪರಿಸಿದ ಈ ಕ್ರಿಯೆಯಿಂದ ಭೀಮಸೇನನ ಹಾಗೆ ಪ್ರತಿಜ್ಞೆ ಮಾಡಿದುದನ್ನು ಪೂರ್ಣಮಾಡಿದ ಹಗೆತನವನ್ನು ಹೊಗಳದವನು ಶೂರನೇ!
ವ|| ಎಂದು ಜರಾಸಂಧಾರಿಯ ಗಂಡವಾತಂ ಕೊಂಡಾಡುತ್ತಿರೆ ಭೀಮಸೇನನಾ ನೆರೆದ ನೆರವಿಗಿಂತೆಂದಂ-
ವಚನ:ಪದವಿಭಾಗ-ಅರ್ಥ:ಎಂದು ಜರಾಸಂಧಾರಿಯ ಗಂಡವಾತಂ ಕೊಂಡಾಡುತ್ತಿರೆ (ಎಂದು ಜರಾಸಂಧನನ್ನು ಕೊಂದ ಭೀಮನ ಪೌರುಷದ ಮಾತನ್ನು ಕೊಂಡಾಡುತ್ತಿರಲು) ಭೀಮಸೇನನು ಆ ನೆರೆದ ನೆರವಿಗೆ ಇಂತೆಂದಂ (ಭೀಮಸೇನನು ಅಲ್ಲಿ ನೆರೆದಿದ್ದ ಗುಂಪಿಗೆ ಹೀಗೆಂದನು)-
ವಚನ:ಅರ್ಥ:ಎಂದು ಜರಾಸಂಧನನ್ನು ಕೊಂದ ಭೀಮನ ಪೌರುಷದ ಮಾತನ್ನು ಕೊಂಡಾಡುತ್ತಿರಲು ಭೀಮಸೇನನು ಅಲ್ಲಿ ನೆರೆದಿದ್ದ ಗುಂಪಿಗೆ ಹೀಗೆಂದನು-
ಉ|| ಪೊಲ್ಲದು ಪೂಣ್ದು ಪುಚ್ಚೞಿಯದುರ್ಕಿದ ಕೌರವರಂ ಪೊರಳ್ಚಿ ಕೊಂ
ದಿಲ್ಲಿಯೆ ವೈರಿ ಶೋಣಿತಮನೀಂಟಿ ತದಂತ್ರದೆ ಕೃಷ್ಣೆಗಿಂದು ಧ|
ಮ್ಮಿಲ್ಲವನಿನಿಂಬಿನಿಂ ಮುಡಿಸಿ ಕೌರವ ನಾಯಕನೂರುಭಂಗಮೊಂ
ದಲ್ಲದುದೆಲ್ಲಮಂ ನೆಱಪಿದೆಂ ಗಡಮೋಳಿಯೆ ಕೇಳಿಮೆಲ್ಲರುಂ|| ೧೬೧ ||
ಪದ್ಯ-೧೬೧:ಪದವಿಭಾಗ-ಅರ್ಥ:ಪೊಲ್ಲದು ಪೂಣ್ದು ಪುಚ್ಚೞಿಯದೆ ಉರ್ಕಿದ ಕೌರವರಂ (ಕೆಟ್ಟ ಪ್ರತಿಜ್ಞೆಯನ್ನು ಮಾಡಿ ಅದು ವ್ಯರ್ಥವಾಗದಂತೆ ಗರ್ವಿಷ್ಠರಾದ ಕೌರವರನ್ನು) ಪೊರಳ್ಚಿ ಕೊಂದು ಇಲ್ಲಿಯೆ ವೈರಿ ಶೋಣಿತಮನು ಈಂಟಿ (ಹೊರಳಿಸಿ ಕೊಂದು ಇಲ್ಲಿಯ ವೈರಿಯ ರಕ್ತವನ್ನು ಕುಡಿದು) ತದಂತ್ರದೆ (ಅವನ ಕರುಳಿನಿಂದ) ಕೃಷ್ಣೆಗೆ ಇಂದು ಧಮ್ಮಿಲ್ಲವನಂ ಇಂಬಿನಿಂ ಮುಡಿಸಿ (ದ್ರೌಪದಿಗೆ ತುರುಬನ್ನು ಮನೋಹರವಾಗಿರುವಂತೆ ಮುಡಿಸಿ) ಕೌರವ ನಾಯಕನ ಊರುಭಂಗಮೊಂದು ಅಲ್ಲದೆ ಅದು ಎಲ್ಲಮಂ ನೆಱಪಿದೆಂ ಗಡ ಓಳಿಯೆ- ಕ್ರಮವಾಗಿ(ಕೌರವನಾಯಕನಾದ ದುರ್ಯೋಧನನ ತೊಡೆಯನ್ನು ಮುರಿಯುವುದೊಂದನ್ನು ಬಿಟ್ಟು ಮತ್ತೆಲ್ಲವನ್ನೂ ಕ್ರಮವಾಗಿ ಪೂರ್ಣಮಾಡಿದೆನು) ಕೇಳಿಂ ಎಲ್ಲರುಂ (ಎಲ್ಲರೂ ಕೇಳಿ!)
ಪದ್ಯ-೧೬೧:ಅರ್ಥ: ಕೆಟ್ಟ ಪ್ರತಿಜ್ಞೆಯನ್ನು ಮಾಡಿ ಅದು ವ್ಯರ್ಥವಾಗದಂತೆ ಗರ್ವಿಷ್ಠರಾದ ಕೌರವರನ್ನು ಹೊರಳಿಸಿ ಕೊಂದು ಇಲ್ಲಿಯ ವೈರಿಯ ರಕ್ತವನ್ನು ಕುಡಿದು ಅವನ ಕರುಳಿನಿಂದ ದ್ರೌಪದಿಗೆ ತುರುಬನ್ನು ಮನೋಹರವಾಗಿರುವಂತೆ ಮುಡಿಸಿ, ಕೌರವನಾಯಕನಾದ ದುರ್ಯೋಧನನ ತೊಡೆಯನ್ನು ಮುರಿಯುವುದೊಂದನ್ನುಳಿದು ಮತ್ತೆಲ್ಲವನ್ನೂ ಕ್ರಮವಾಗಿ ಪೂರ್ಣಮಾಡಿದೆನು. ಎಲ್ಲರೂ ಕೇಳಿ!
ವ|| ಎಂದು ನುಡಿದು ಗಜಱಿ ಗರ್ಜಿಸಿ ಕಾಲದಂಡಮಂ ಪೋಲ್ವ ತನ್ನ ಗದಾದಂಡಮಂ ಕೊಂಡು ತಿರಿಪಿ ಬೀಸುತ್ತುಂ ಬರ್ಪ ಭೀಮಸೇನನಂ ಕರ್ಣನ ಮಗಂ ವೃಷಸೇನಂ ಕಂಡು-
ವಚನ:ಪದವಿಭಾಗ-ಅರ್ಥ: ಎಂದು ನುಡಿದು ಗಜಱಿ ಗರ್ಜಿಸಿ ಕಾಲದಂಡಮಂ ಪೋಲ್ವ (ಆರ್ಭಟಮಾಡಿ ಯಮನ ದಂಡವನ್ನು ಹೋಲುವ) ತನ್ನ ಗದಾದಂಡಮಂ ಕೊಂಡು ತಿರಿಪಿ ಬೀಸುತ್ತುಂ ಬರ್ಪ ಭೀಮಸೇನನಂ (ತನ್ನ ಗದಾದಂಡವನ್ನು ತೆಗೆದುಕೊಂಡು ತಿರುಗಿಸುತ್ತ ಬರುತ್ತಿರುವ ಭೀಮಸೇನನನ್ನು) ಕರ್ಣನ ಮಗಂ ವೃಷಸೇನಂ ಕಂಡು (ಕರ್ಣನ ಮಗನಾದ ವೃಷಸೇನನು ನೋಡಿದನು.ನೋಡಿ-)-
ವಚನ:ಅರ್ಥ:ಎಂದು ಹೇಳಿ ಆರ್ಭಟಮಾಡಿ ಯಮನ ದಂಡವನ್ನು ಹೋಲುವ ತನ್ನ ಗದಾದಂಡವನ್ನು ತೆಗೆದುಕೊಂಡು ತಿರುಗಿಸುತ್ತ ಬರುತ್ತಿರುವ ಭೀಮಸೇನನನ್ನು ಕರ್ಣನ ಮಗನಾದ ವೃಷಸೇನನು ನೋಡಿದನು.ನೋಡಿ-
ಚಂ|| ದಡಿಗನ ಮಿೞ್ತುವಂ ಮಿದಿದೊಡಲ್ಲದೆ ಮಾಣೆನಮೋಘಮೆಂದು ಕೂ
ರ್ಪುಡುಗದೆ ಬಂದು ತಾಗೆ ಯಮಳರ್ ತಡೆಗೊಂಡೊಡೆ ತಾವುಮೆಮ್ಮೊಳಂ
ತೊಡರ್ದಪರೆಂದವಂದಿರ ರಥಂಗಳನಚ್ಚುಡಿಯೆಚ್ಚು ಭೀಮನಂ
ತಡೆಯದೆ ಮುಟ್ಟಿ ಪೆರ್ಚೆ ನುಡಿದಂ ಕಪಿಕೇತನನಂ ಮುರಾಂತಕಂ|| ೧೬೨ ||
ಪದ್ಯ-೧೬೨:ಪದವಿಭಾಗ-ಅರ್ಥ:ದಡಿಗನ ಮಿೞ್ತುವಂ ಮಿದಿದೊಡೆ ಅಲ್ಲದೆ ಮಾಣೆನು ಅಮೋಘಂ ಎಂದು (ದಾಂಡಿಗನಾದ ಭೀಮನೆಂಬ ಈ ಮೃತ್ಯುವನ್ನು ತುಳಿದುದಲ್ಲದೆ ಬಿಡುವುದಿಲ್ಲ, ಇವನದು ಅತಿಯಾಯಿತು’ ಎಂದು) ಕೂರ್ಪು ಉಡುಗದೆ ಬಂದು ತಾಗೆ (ತನ್ನ ತೀಕ್ಷಣತೆಯನ್ನು ಕಡಮೆಮಾಡದೆ ಬಂದು ಎದುರಿಸಿದಾಗ,) ಯಮಳರ್ ತಡೆಗೊಂಡೊಡೆ (ನಕುಲಸಹದೇವರು ಬಂದು ಅವನನ್ನು ಅಡ್ಡಗಟ್ಟಿದರು. ಆಗ,) ತಾವು ಎಮ್ಮೊಳಂ ತೊಡರ್ದಪರೆಂದು ಅವಂದಿರ ರಥಂಗಳ ನಚ್ಚುಡಿಯೆಚ್ಚು (ತಾವೂ/ ಇವರೂ ನಮ್ಮಲ್ಲಿ ಯುದ್ಧಮಾಡುತ್ತಾರೆಯೇ ಎಂದು ಅವರ ರಥಗಳನ್ನು ಅಚ್ಚು ಮುರಿದುಹೋಗುವ ಹಾಗೆ ಹೊಡೆದು) ಭೀಮನಂ ತಡೆಯದೆ ಮುಟ್ಟಿ ಪೆರ್ಚೆ (ಭೀಮನ ಹತ್ತಿರಕ್ಕೆ ಬಂದು ಹೆಚ್ಚಿದನು/ ವಿಜೃಂಭಿಸಿದನು. ಆಗ) ನುಡಿದಂ ಕಪಿಕೇತನನಂ ಮುರಾಂತಕಂ ( ಆಗ ಕೃಷ್ಣನು ಅರ್ಜುನನಿಗೆ ಹೇಳಿದನು.)
ಪದ್ಯ-೧೬೨:ಅರ್ಥ: ಬಲಶಾಲಿಯಾದ/ ‘ದಾಂಡಿಗನಾದ ಭೀಮನೆಂಬ ಈ ಮೃತ್ಯುವನ್ನು ತುಳಿದುದಲ್ಲದೆ ಬಿಡುವುದಿಲ್ಲ, ಇವನದು ಅತಿಯಾಯಿತು’ ಎಂದು ವೃಷಸೇನನು ತನ್ನ ತೀಕ್ಷಣತೆಯನ್ನು ಕಡಮೆಮಾಡದೆ ಬಂದು ಎದುರಿಸಿದಾಗ, ನಕುಲಸಹದೇವರು ಬಂದು ಅವನನ್ನು ಅಡ್ಡಗಟ್ಟಿದರು. ಇವರೂ ನಮ್ಮಲ್ಲಿ ಯುದ್ಧಮಾಡುತ್ತಾರೆಯೇ ಎಂದು ಅವರ ತೇರುಗಳನ್ನು ಅಚ್ಚು ಮುರಿದುಹೋಗುವ ಹಾಗೆ ಹೊಡೆದು ತಡಮಾಡದೆ ಭೀಮನ ಹತ್ತಿರಕ್ಕೆ ಬಂದು ವಿಜೃಂಭಿಸಿದನು. ಆಗ ಕೃಷ್ಣನು ಅರ್ಜುನನಿಗೆ ಹೇಳಿದನು.
ಕಂ|| ಇವನ ಶರಕಲ್ಪಮಿವನದ
ಟಿವನಳವಿವನಣ್ಮು ನಿನಗಮಗ್ಗಳಮಿವನಂ|
ಪವನಸುತಂ ಗೆಲ್ಲಂ ನೀ
ನಿವನೊಳ್ ಪೊಣರೆಂದೊಡವನೊಳರಿಗಂ ಪೊಣರ್ದಂ|| ೧೬೩ ||
ಪದ್ಯ-೧೬೩:ಪದವಿಭಾಗ-ಅರ್ಥ:ಇವನ ಶರಕಲ್ಪಂ ಇವನ ಅದಟು ಇವನ ಅಳವಿವನ ಅಣ್ಮು (ಇವನ ಬಾಣವಿದ್ಯೆ, ಇವನ ಪರಾಕ್ರಮ, ಇವನ ಪೌರುಷ, ಇವನ ಶಕ್ತಿ ಇವು) ನಿನಗಂ ಅಗ್ಗಳಂ ಇವನಂ ಪವನಸುತಂ ಗೆಲ್ಲಂ (ನಿನಗಿಂತಲೂ ಹೆಚ್ಚಿನವು. ಇವನನ್ನು ಭೀಮನು ಗೆಲ್ಲಲಾರ.) ನೀಂ ಇವನೊಳ್ ಪೊಣರ್ ಎಂದೊಡೆ ಅವನೊಳ್ ಅರಿಗಂ ಪೊಣರ್ದಂ (ನೀನು ಇವನಲ್ಲಿ ಯುದ್ಧಮಾಡು ಎನ್ನಲು ಅರಿಗನು ಅವನಲ್ಲಿ ಕಾದಿದನು)
ಪದ್ಯ-೧೬೩:ಅರ್ಥ: ಇವನ ಬಾಣವಿದ್ಯೆ, ಇವನ ಪರಾಕ್ರಮ, ಇವನ ಪೌರುಷ, ಇವನ ಶಕ್ತಿ ಇವು ನಿನಗಿಂತಲೂ ಹೆಚ್ಚಿನವು. ಇವನನ್ನು ಭೀಮನು ಗೆಲ್ಲಲಾರ. ನೀನು ಇವನಲ್ಲಿ ಯುದ್ಧಮಾಡು ಎನ್ನಲು ಅರಿಗನು ಅವನಲ್ಲಿ ಕಾದಿದನು

ಕರ್ಣನ ಮಗ ವೃಷಸೇನನ ವಧೆ[ಸಂಪಾದಿಸಿ]

ಪೊಣರ್ದೊಡಮನುವರಮಿವನೊಳ್
ತೊಣೆವೆತ್ತಪುದೆನಗೆ ನರನೊಳೆಂದಱಿಕೆಯ ಕೂ|
ರ್ಗಣೆಗಳೊಳೆ ಪೂೞ್ದು ತನ್ನಳ
ವಣಿಯರಮೆನೆ ನಾಲ್ಕು ಶರದೆ ಪಾರ್ಥನನೆಚ್ಚಂ|| ೧೬೪ ||
ಪದ್ಯ-೧೬೪:ಪದವಿಭಾಗ-ಅರ್ಥ:ಪೊಣರ್ದೊಡಂ ಅನುವರಂ ಇವನೊಳ್ ತೊಣೆವೆತ್ತಪುದು ಎನಗೆ (ಇವನೊಡನೆ ಕಾದಿದರೆ ನನಗೆ ಯುದ್ಧವು ಅನುರೂಪವಾಗುತ್ತದೆ (ಸರಿಸಮಾನವಾಗುತ್ತದೆ)) ನರನೊಳ್ (ಅರ್ಜುನನೊಡನೆ) ಎಂದು ಅಱಿಕೆಯ (ಪ್ರಸಿದ್ಧ) ಕೂರ್ಗಣೆಗಳೊಳೆ ಪೂೞ್ದು (ಪ್ರಸಿದ್ಧವೂ ಹರಿತವೂ ಆದ ಬಾಣಗಳಿಂದ ಪೂಳ್ದು- ಹೂಳಿ) ತನ್ನಳವು ಅಣಿಯರಂ (ಅತಿಶಯ) ಎನೆ ನಾಲ್ಕು ಶರದೆ ಪಾರ್ಥನನು ಎಚ್ಚಂ (ತನ್ನ ಶಕ್ತಿಯು ಅತಿಶಯವಾದುದು ಎನ್ನುವ ಹಾಗೆ ನಾಲ್ಕುಬಾಣಗಳಿಂದ ಅರ್ಜುನನನ್ನು ಹೊಡೆದನು.)
ಪದ್ಯ-೧೬೪:ಅರ್ಥ:ಕರ್ಣನ ಮಗ ವೃಷಸೇನನು, ಇವನೊಡನೆ ಕಾದಿದರೆ ನನಗೆ ಯುದ್ಧವು ಸರಿಸಮಾನವಾಗುತ್ತದೆ ಎಂದು ಹೇಳಿ ಪ್ರಸಿದ್ಧವೂ ಹರಿತವೂ ಆದ ಬಾಣಗಳಿಂದಲೇ ಹೂಳಿ ತನ್ನ ಶಕ್ತಿಯು ಅತಿಶಯವಾದುದು ಎನ್ನುವ ಹಾಗೆ ನಾಲ್ಕುಬಾಣಗಳಿಂದ ಅರ್ಜುನನನ್ನು ಹೊಡೆದನು.
ಇಸೆ ಮುತ್ತಿ ಮುಸುಱ ಪರಿ ಬಂ
ಧಿಸಿದುವು ನರರಥತುರಂಗಮಂಗಳನಂತಾ|
ರ್ದೆಸಗಲ್ ಪೊಣರಲ್ ಮಿಡುಕಲ್
ಮಿಸುಕಲ್ಕಣಮೀಯದಾದುವವನ ಸರಲ್ಗಳ್|| ೧೬೫ ||
ಪದ್ಯ-೧೬೫:ಪದವಿಭಾಗ-ಅರ್ಥ:ಇಸೆ ಮುತ್ತಿ ಮುಸುಱ ಪರಿ ಬಂಧಿಸಿದುವು (ಆ ಬಾಣಗಳು ಅರ್ಜುನನ ತೇರು ಕುದುರೆಗಳನ್ನು ಮುತ್ತಿ ಆವರಿಸಿಕೊಂಡು ಕಟ್ಟಿ ಹಾಕಿದುವು.) ನರ ರಥ ತುರಂಗಮಂಗಳನು ಅಂತು ಆರ್ದು ಎಸಗಲ್ (ಹಾಗೆ ಆರ್ಭಟಿಸಿ ಹೊಡೆಯುಲು) ಪೊಣರಲ್ ಮಿಡುಕಲ್ ಮಿಸುಕಲ್ಕೆ ಅಣಂ ಈಯದಾದುವು ಅವನ ಸರಲ್ಗಳ್ (ಹೋರಾಡುವುದಕ್ಕೂ ಅಲುಗಾಡುವುದಕ್ಕೂ (ಚಲಿಸುವುದಕ್ಕೂ) ಸ್ವಲ್ಪವೂ ಅವಕಾಶ ಕೊಡದಂತೆ ಆದುವು.) (ಅಂತು ಎಸಗಲ್-ಹಾಗೆ ಮಾಡಲು, ರಥ ಚಲಿಸುವುದಕ್ಕೂ?)
ಪದ್ಯ-೧೬೫:ಅರ್ಥ: ಹಾಗೆ ಹೊಡೆಯಲು, ಆ ಬಾಣಗಳು ಅರ್ಜುನನ ತೇರು ಕುದುರೆಗಳನ್ನು ಮುತ್ತಿ ಆವರಿಸಿಕೊಂಡು ಕಟ್ಟಿ ಹಾಕಿದುವು. ಹಾಗೆ ಆರ್ಭಟಿಸಿ ಹೊಡೆಯುಲು ಆ ಬಾಣಗಳು ಹೋರಾಡುವುದಕ್ಕೂ ಅಲುಗಾಡುವುದಕ್ಕೂ ಸ್ವಲ್ಪವೂ ಅವಕಾಶ ಕೊಡದಂತೆ ಆದುವು.
ವ|| ಆಗಳದಂ ಕಂಡು ಪರಸೈನ್ಯಭೈರವಂ ಮುಕುಂದನನಿಂತೆಂದಂ-
ವಚನ:ಪದವಿಭಾಗ-ಅರ್ಥ:ಆಗಳು ಅದಂ ಕಂಡು ಪರಸೈನ್ಯಭೈರವಂ ಮುಕುಂದನನು ಇಂತು ಎಂದಂ (ಆರ್ಜುನನು ಕೃಷ್ಣನಿಗೆ ಹೀಗೆ ಹೇಳಿದನು)-
ವಚನ:ಅರ್ಥ:ಅದನ್ನು ನೋಡಿ ಪರಸೈನ್ಯಭೈರವನಾದ ಆರ್ಜುನನು ಕೃಷ್ಣನಿಗೆ ಹೀಗೆ ಹೇಳಿದನು
ಕಂ|| ಸ್ಯಂದನಬಂಧನಮೆಂಬುದ
ನಿಂದೀ ವೃಷಸೇನನಿಂದಮಱಿದೆನಿದಂ ಮು|
ನ್ನೆಂದುಂ ಕಂಡಱಿಯೆನಿದ
ರ್ಕಾಂ ದಲ್ ಬೆಱಗಾದೆನೆನಗೆ ಬೆಸಸು ಮುಕುಂದಾ|| ೧೬೬ ||
ಪದ್ಯ-೧೬೬:ಪದವಿಭಾಗ-ಅರ್ಥ:ಸ್ಯಂದನಬಂಧನಂ ಎಂಬುದನು ಇಂದು ಈ ವೃಷಸೇನನಿಂದಂ ಅಱಿದೆಂ (ರಥವನ್ನು ಕಟ್ಟಿಹಾಕುವುದೆಂಬುದನ್ನು ಈ ದಿನ ವೃಷಸೇನನಿಂದ ತಿಳಿದೆನು.) ಇದಂ ಮುನ್ನೆಂದುಂ ಕಂಡಱಿಯೆನು (ಇದಕ್ಕೆ ಮೊದಲು ಎಂದೂ ತಿಳಿದಿರಲಿಲ್ಲ.) ಇದರ್ಕೆ ಆಂ ದಲ್ ಬೆಱಗಾದೆನು (ಇದಕ್ಕೆ ನಾನು ಬೆರಗಾಗಿದ್ದೇನೆ.) ಎನಗೆ ಬೆಸಸು ಮುಕುಂದಾ (ಮುಂದೇನು ಮಾಡಬೇಕೆಂಬುದನ್ನು ತಿಳಿಸು ಕೃಷ್ಣಾ.)
ಪದ್ಯ-೧೬೬:ಅರ್ಥ:ರಥವನ್ನು ಕಟ್ಟಿಹಾಕುವುದೆಂಬುದನ್ನು ಈ ದಿನ ವೃಷಸೇನನಿಂದ ತಿಳಿದೆನು. ಇದಕ್ಕೆ ಮೊದಲು ಎಂದೂ ತಿಳಿದಿರಲಿಲ್ಲ. ಇದಕ್ಕೆ ನಾನು ಬೆರಗಾಗಿದ್ದೇನೆ. ಮುಂದೇನು ಮಾಡಬೇಕೆಂಬುದನ್ನು ತಿಳಿಸು ಕೃಷ್ಣಾ, ಎಂದನು ಅರ್ಜುನ.
ಎನೆ ಪರಶುರಾಮನಿಂ ಕ
ರ್ಣನೆ ಬಲ್ಲಂ ಚಾಪವಿದ್ಯೆಯಂ ಕರ್ಣನಿನೀ|
ತನೆ ಬಲ್ಲನಿವನ ಸರಲೆನಿ
ತನಿತುಮನೆಡೆವಿಡದೆ ತಱಿದು ತಲೆಯಂ ತಱಿಯಾ|| ೧೬೭ ||
ಪದ್ಯ-೧೬೭:ಪದವಿಭಾಗ-ಅರ್ಥ:ಎನೆ ಪರಶುರಾಮನಿಂ ಕರ್ಣನೆ ಬಲ್ಲಂ ಚಾಪವಿದ್ಯೆಯಂ (ಎನ್ನಲು ಬಿಲ್ಲು ವಿದ್ಯೆಯಲ್ಲಿ ಕರ್ಣನು ಪರಶುರಾಮನಿಗಿಂತ ಸಮರ್ಥನಾದವನು.) ಕರ್ಣನಿಂ ಈತನೆ ಬಲ್ಲನು (ಇವನು ಕರ್ಣನಿಗಿಂತ ಸಮರ್ಥನು.) ಇವನ ಸರಲ್ ಎನಿತು ಅನಿತುಮಂ ಡೆವಿಡದೆ ತಱಿದು (ಇವನ ಬಾಣಗಳಷ್ಟನ್ನೂ ಒಂದೇ ಸಮನಾಗಿ ಕತ್ತರಿಸಿ) ತಲೆಯಂ ತಱಿಯಾ (ತಲೆಯನ್ನು ಕತ್ತರಿಸಯ್ಯಾ.)
ಪದ್ಯ-೧೬೭:ಅರ್ಥ: ಎನ್ನಲು ಬಿಲ್ಲು ವಿದ್ಯೆಯಲ್ಲಿ ಕರ್ಣನು ಪರಶುರಾಮನಿಗಿಂತ ಸಮರ್ಥನಾದವನು. ಇವನು ಕರ್ಣನಿಗಿಂತ ಸಮರ್ಥನು. ಇವನ ಬಾಣಗಳಷ್ಟನ್ನೂ ಒಂದೇ ಸಮನಾಗಿ ಕತ್ತರಿಸಿ ತಲೆಯನ್ನು ಕತ್ತರಿಸಯ್ಯಾ.
ವ|| ಎಂಬುದುಮಳವಿಗೞಿಯೆ ಬಳೆದು ಪುದುಂಗೊಳಿಸಿದ ಬಿದಿರ ಸಿಡುಂಬನೆಡೆಗೊಳೆ ಕಡಿವ ಪೊಡುಂಗಾಱನಂತೆ ಪರಶು ಚಕ್ರಾಸಿಧೇನುಗಳಿಂದಂ ತನ್ನ ತೋಡುಂ ಬೀಡಿಂಗಂ ರಥಮನೆಸಗುವ ಮುಂರಾಂತಕನ ಕೆಯ್ಗಮೆಡೆಮಾಡಿ-
ವಚನ:ಪದವಿಭಾಗ-ಅರ್ಥ: ಎಂಬುದುಂ ಅಳವಿಗೞಿಯೆ ಬಳೆದು ಪುದುಂಗೊಳಿಸಿದ ಬಿದಿರ ಸಿಡುಂಬನು (ಎನ್ನಲು ಅಳತೆಮೀರಿ ದಟ್ಟವಾಗಿ ಬೆಳೆದಿರುವ ಬಿದುರಿನ ಮೆಳೆಯನ್ನು) ಎಡೆಗೊಳೆ ಕಡಿವ ಪೊಡುಂಗಾಱನಂತೆ (ದಾರಿಗಾಗಿ ಬಿಡಿಸಲು ಕಾಡನ್ನು ಕತ್ತರಿಸುವ ಹಾಗೆ) ಪರಶು ಚಕ್ರ ಅಸಿಧೇನುಗಳಿಂದಂ: ಅಸಿಧೇನು- ಕತ್ತಿ (ಕೊಡಲಿ ಚಕ್ರ ಕತ್ತಿಗಳಿಂದ) ತನ್ನ ತೋಡುಂ ಬೀಡಿಂಗಂ ರಥಮನು ಎಸಗುವ (ತನ್ನ ಬಾಣಸಂಧಾನ ಮತ್ತು ಮೋಚನಗಳಿಗೆ ಹೊಂದಿಕೊಳ್ಳುವುದಕ್ಕೂ ರಥವನ್ನು ನಡೆಸುವ) ಮುಂರಾಂತಕನ ಕೆಯ್ಗಂ ಎಡೆಮಾಡಿ (ಕೃಷ್ಣನ ಕೈಗಳನ್ನಾಡಿಸುವುದಕ್ಕೂ ಅವಕಾಶಮಾಡಿಕೊಂಡು)-
ವಚನ:ಅರ್ಥ:ಎನ್ನಲು ಅಳತೆಮೀರಿ ದಟ್ಟವಾಗಿ ಬೆಳೆದಿರುವ ಬಿದುರಿನ ಮೆಳೆಯನ್ನು ದಾರಿಗಾಗಿ ಬಿಡಿಸಲು ಕಾಡನ್ನು ಕತ್ತರಿಸುವ ಹಾಗೆ ಕೊಡಲಿ ಚಕ್ರ ಕತ್ತಿಗಳಿಂದ ತನ್ನ ಬಾಣಸಂಧಾನ ಮತ್ತು ಮೋಚನಗಳಿಗೆ ಹೊಂದಿಕೊಳ್ಳುವುದಕ್ಕೂ ರಥವನ್ನು ನಡೆಸುವ ಕೃಷ್ಣನ ಕೈಗಳನ್ನಾಡಿಸುವುದಕ್ಕೂ ಅವಕಾಶಮಾಡಿಕೊಂಡು-
ಚಂ|| ತನಗೆ ವಿನಾಯಕಂ ದಯೆಯಿನಿತ್ತ ಜಯಾಸ್ತ್ರಮನುರ್ಚಿಕೊಂಡು ಭೋಂ
ಕೆನೆ ದೊಣೆಯಿಂದ ಶರಾಸನದೊಳಂತದನಾಗಡೆ ಪೂಡಿ ಧಾತ್ರಿ ತಿ|
ಱ್ರನೆ ತಿರಿವನ್ನೆಗಂ ತೆಗೆದು ಕಂಧರಸಂಧಿಯನೆಯ್ದೆ ನೋಡಿ ತೊ
ಟ್ಟನೆ ನರನೆಚ್ಚೊಡುಚ್ಚಳಿಸಿ ಬಿೞ್ದುದು ವೈರಿಶಿರಸ್ಸರೋರುಹಂ|| ೧೬೮
ಪದ್ಯ-೧೬೮:ಪದವಿಭಾಗ-ಅರ್ಥ:ತನಗೆ ವಿನಾಯಕಂ ದಯೆಯಿಂ ಇತ್ತ ಜಯಾಸ್ತ್ರಮನು ಉರ್ಚಿಕೊಂಡು ಭೋಂಕೆನೆ ದೊಣೆಯಿಂದ (ವಿನಾಯಕನು ತನಗೆ ಕೃಪೆಯಿಂದ ಕೊಟ್ಟ ಜಯಾಸ್ತ್ರವನ್ನು ರಭಸದಿಂದ ಬತ್ತಳಿಕೆಯಿಂದ ಸೆಳೆದುಕೊಂಡು) ಶರಾಸನದೊಳ್ (ಬಿಲ್ಲಿನಲ್ಲಿ) ಅಂತು ಅದನು ಆಗಡೆ ಪೂಡಿ (ಅದನ್ನು ಆಗಲೇ ಬಿಲ್ಲಿನಲ್ಲಿ ಹೂಡಿ) ಧಾತ್ರಿ ತಿಱ್ರನೆ ತಿರಿವನ್ನೆಗಂ (ಭೂಮಿಯು ತಿರ್ರೆಂದು ತಿರುಗುತ್ತಿರಲು,) ತೆಗೆದು ಕಂಧರ ಸಂಧಿಯನು ಎಯ್ದೆ ನೋಡಿ (ಕತ್ತಿನ ಸಂಧಿಭಾಗವನ್ನೇ ಚೆನ್ನಾಗಿ ನೋಡಿ) ತೊಟ್ಟನೆ ನರನು ಎಚ್ಚೊಡೆ (ಬೇಗನೆ ಅರ್ಜುನನು ಹೊಡೆಯಲಾಗಿ) ಉಚ್ಚಳಿಸಿ ಬಿೞ್ದುದು ವೈರಿ ಶಿರಸ್ಸರೋರುಹಂ; ಶಿರಸ್+ ಸರೋರುಹ- ಕಮಲ (ವೈರಿಯಾದ ವೃಷಸೇನನ ತಲೆಯೆಂಬ ಕಮಲವು ಮೇಲಕ್ಕೆ ಹಾರಿ ಬಿದ್ದಿತು)
ಪದ್ಯ-೧೬೮:ಅರ್ಥ:ವಿನಾಯಕನು ತನಗೆ ಕೃಪೆಯಿಂದ ಕೊಟ್ಟ ಜಯಾಸ್ತ್ರವನ್ನು ರಭಸದಿಂದ ಬತ್ತಳಿಕೆಯಿಂದ ಸೆಳೆದುಕೊಂಡು ಅದನ್ನು ಆಗಲೇ ಬಿಲ್ಲಿನಲ್ಲಿ ಹೂಡಿ ಭೂಮಿಯು ತಿರ್ರೆಂದು ತಿರುಗುವ ಹಾಗೆ ಹೆದೆಯನ್ನು ಸೆಳೆದು ಕತ್ತಿನ ಸಂಧಿಭಾಗವನ್ನೇ ಚೆನ್ನಾಗಿ ನೋಡಿ ಗುರಿಯಿಟ್ಟು ಬೇಗನೆ ಅರ್ಜುನನು ಹೊಡೆಯಲಾಗಿ ವೈರಿಯಾದ ವೃಷಸೇನನ ತಲೆಯೆಂಬ ಕಮಲವು ಮೇಲಕ್ಕೆ ಹಾರಿ ಬಿದ್ದಿತು.

ಕರ್ಣಾರ್ಜುನರ ಯುದ್ಧ[ಸಂಪಾದಿಸಿ]

ಕಂ|| ಅಂತತ್ತ ಪರಿದ ತಲೆಯನ
ದಂ ತಂದಟ್ಟೆಯೊಳಮರ್ಚಿ ಸುರ ಗಣಿಕೆಯರ|
ಭ್ರಾಂತರದೊಳೆ ತಮ್ಮ ವಿಮಾ
ನಾಂತರದೊಳಗಿಟ್ಟು ಕರ್ಣತನಯನನುಯ್ದರ್|| ೧೬೯ ||
ಪದ್ಯ-೦೦:ಪದವಿಭಾಗ-ಅರ್ಥ:ಅಂತು ಅತ್ತ ಪರಿದ ತಲೆಯನು ಅದಂ ತಂದು ಅಟ್ಟೆಯೊಳಂ ಅರ್ಚಿ (ಆ ಕಡೆ ಹಾರಿದ ತಲೆಯನ್ನು ತಂದು ಶರೀರದೊಡನೆ ಕೂಡಿಸಿ) ಸುರ ಗಣಿಕೆಯರ ಭ್ರಾಂತರದೊಳೆ ತಮ್ಮ ವಿಮಾನಾಂತರದೊಳಗಿಟ್ಟು ಕರ್ಣತನಯನನು ಉಯ್ದರ್ (ಅಪ್ಸರೆಯರು ಮೋಡಗಳ ಮಧ್ಯದಲ್ಲಿ ತಮ್ಮ ವಿಮಾನದೊಳಗಡೆ ಇಟ್ಟು ಕರ್ಣನ ಮಗನನ್ನು ತೆಗೆದುಕೊಂಡು ಹೋದರು)
ಪದ್ಯ-೦೦:ಅರ್ಥ: ಆ ಕಡೆ ಹಾರಿದ ತಲೆಯನ್ನು ತಂದು ಶರೀರದೊಡನೆ ಕೂಡಿಸಿ ಅಪ್ಸರೆಯರು ಮೋಡಗಳ ಮಧ್ಯದಲ್ಲಿ ತಮ್ಮ ವಿಮಾನದೊಳಗಡೆ ಇಟ್ಟು ಕರ್ಣನ ಮಗನನ್ನು ತೆಗೆದುಕೊಂಡು ಹೋದರು.
ವ|| ಅಂತು ನೋಡಿ ನೋಡಿ ತನ್ನ ಪಿರಿಯ ಮಗನಪ್ಪ ವೃಷಸೇನನನಂತಕನಣಲೊಳಡಸಿ ತನ್ನುಮನಣಲೊಳಡಸಲೆಂದಿರ್ದ ವಿಕ್ರಮಾರ್ಜುನನಂ ನೋಡಿ-
ವಚನ:ಪದವಿಭಾಗ-ಅರ್ಥ:ಅಂತು ನೋಡಿ ನೋಡಿ ತನ್ನ ಪಿರಿಯ ಮಗನಪ್ಪ ವೃಷಸೇನನಂ ಅಂತಕನ ಅಣಲೊಳ್ ಅಡಸಿ (ತನ್ನ ಹಿರಿಯಮಗನಾದ ವೃಷಸೇನನ್ನು ಯಮನ ಗಂಟಲಿನಲ್ಲಿ ತುರುಕಿ) ತನ್ನುಮನು ಅಣಲೊಳ ಅಡಸಲೆಂದಿರ್ದ ವಿಕ್ರಮಾರ್ಜುನನಂ ನೋಡಿ (ತನ್ನನ್ನೂ -ಯಮನ- ಗಂಟಲಿನಲ್ಲಿ ತುರುಕಬೇಕೆಂದಿದ್ದ ವಿಕ್ರಮಾರ್ಜುನನ್ನು ನೋಡಿ)-
ವಚನ:ಅರ್ಥ: ವ|| ಹಾಗೆ ನೋಡಿ ನೋಡಿ ತನ್ನ ಹಿರಿಯಮಗನಾದ ವೃಷಸೇನನ್ನು ಯಮನ ಗಂಟಲಿನಲ್ಲಿ ತುರುಕಿ ತನ್ನನ್ನೂ ಗಂಟಲಿನಲ್ಲಿ ತುರುಕಬೇಕೆಂದಿದ್ದ ವಿಕ್ರಮಾರ್ಜುನನ್ನು ನೋಡಿ
ಚಂ|| ಮಗನೞಲೊಂದು ಭೂಪತಿಯ ತಮ್ಮನೊಳಾದೞಲೊಂದು ನೊಂದು ಬಿ
ನ್ನಗೆ ಮೊಗದಿಂದೆ ಕುಂದಿ ಫಣೀಕೇತನನಿರ್ದೞಲೊಂದು ತನ್ನನಾ|
ವಗೆಯುರಿಯೞ್ವವೋಲಳುರೆ ತನ್ನ ನೆಗೞ್ತೆಗೆ ಮುಯ್ವನಾಂತು ಮುಂ
ಪೊಗೞಿಸಿ ಬೞ್ದುದಂ ನೆನೆದು ಕರ್ಣನಸುಂಗೊಳೆ ಬಂದು ತಾಗಿದಂ|| ೧೭೦ ||
ಪದ್ಯ-೧೭೦:ಪದವಿಭಾಗ-ಅರ್ಥ: ಮಗನ ಅೞಲೊಂದು (ಮಗನ ದುಖವೊಂದು) ಭೂಪತಿಯ ತಮ್ಮನೊಳು ಆದ ಅೞಲೊಂದು (ರಾಜನ ತಮ್ಮನಾದ ದುಶ್ಶಾಸನನ -ವಧೆಯ- ದುಖವೊಂದು) ನೊಂದು ಬಿನ್ನಗೆ ಮೊಗದಿಂದೆ ಕುಂದಿ (ಚಿಂತಾಸಕ್ತನಾಗಿ ದೀನಮುಖದಿಂದ ಕುಂದಿಹೋಗಿರುವ) ಫಣೀಕೇತನನ ಇರ್ದೞಲೊಂದು (ದುರ್ಯೋಧನನಿರುವ ಸ್ಥಿತಿಯೊಂದು) ತನ್ನನು ಆವಗೆಯ ಉರಿಯು ಅೞ್ವವೋಲ್ ಅಳುರೆ- ವ್ಯಾಪಿಸಲು (ಈ ಮೂರೂ ತನ್ನನ್ನು ಕುಂಬಾರರ ಆವಗೆಯ ಬೆಂಕಿಯ ಹಾಗೆ ಸುಡುತ್ತ ವ್ಯಾಪಿಸಿರಲು ) ತನ್ನ ನೆಗೞ್ತೆಗೆ ಮುಯ್ವನಾಂತು ಮುಂಪೊಗೞಿಸಿ ಬೞ್ದುದಂ ನೆನೆದು (ತನ್ನ ಕೀರ್ತಿಗೆ ಹಗಲನ್ನುಕೊಟ್ಟು/ ಆಶ್ರಯವಿತ್ತು ಮೊದಲು ಹೊಗಳಿಸಿಕೊಂಡು ತಾನು ಬಾಳಿದುದನ್ನು ಜ್ಞಾಪಿಸಿಕೊಂಡ) ಕರ್ಣನು ಅಸುಂಗೊಳೆ ಬಂದು ತಾಗಿದಂ (ಅರ್ಜುನನ ಪ್ರಾಣವನ್ನು ಸೆಳೆಯುವಂತೆ ಬಂದು ಎದುರಿಸಿದನು/ ತಾಗಿದನು.)
ಪದ್ಯ-೧೭೦:ಅರ್ಥ: ಮಗನ ಸಾವಿನ ದುಖವೊಂದು, ರಾಜನ ತಮ್ಮನಾದ ದುಶ್ಶಾಸನನ -ವಧೆಯ- ದುಖವೊಂದು, ಚಿಂತಾಸಕ್ತನಾಗಿ ದೀನಮುಖದಿಂದ ಕುಂದಿಹೋಗಿರುವ ದುರ್ಯೋಧನನಿರುವ ಸ್ಥಿತಿಯೊಂದು ಈ ಮೂರೂ ತನ್ನನ್ನು ಕುಂಬಾರರ ಆವಗೆಯ ಬೆಂಕಿಯ ಹಾಗೆ ಸುಡುತ್ತ ವ್ಯಾಪಿಸಿರಲು, ತನ್ನ ಕೀರ್ತಿಗೆ ಹಗಲನ್ನುಕೊಟ್ಟು/ ಆಶ್ರಯವಿತ್ತು ಮೊದಲು ಹೊಗಳಿಸಿಕೊಂಡು ತಾನು ಬಾಳಿದುದನ್ನು ಜ್ಞಾಪಿಸಿಕೊಂಡ ಕರ್ಣನು ಅರ್ಜುನನ ಪ್ರಾಣವನ್ನು ಸೆಳೆಯುವಂತೆ ಬಂದು ಎದುರಿಸಿದನು/ ತಾಗಿದನು.
ವ|| ಅಂತು ಬಂದು ತಾಗಿದಾಗಳುಭಯಸೈನ್ಯಸಾಗರಂಗಳೊಳ್-
ವಚನ:ಪದವಿಭಾಗ-ಅರ್ಥ:ಅಂತು ಬಂದು ತಾಗಿದಾಗಳ್ ಉಭಯ ಸೈನ್ಯಸಾಗರಂಗಳೊಳ್-
ವಚನ:ಅರ್ಥ:ವ|| ಹಾಗೆ ಬಂದು ತಾಗಿದಾಗ ಎರಡು ಸೇನಾಸಮುದ್ರದಲ್ಲಿಯೂ .
ಕಂ|| ಬಧರಿತ ಸಮಸ್ತದಿಕ್ತಟ
ಮಧರಿತ ಸರ್ವೇಭ್ಯಗರ್ವಿತಂ ಕ್ಷುಭಿತಾಂಭೋ|
ನಿಧಿ ಸಲಿಲಂ ಪರೆದುದು ಧುರ
ವಿಧಾನ ಪಟು ಪಟಹ ಕಹಳ ಭೇರೀ ರಭಸಂ|| ೧೭೧ ||
ಪದ್ಯ-೧೭೧:ಪದವಿಭಾಗ-ಅರ್ಥ:ಬಧಿರಿತ (ಕಿವುಡಾದ) ಸಮಸ್ತ ದಿಕ್ತಟಂ (ಎಲ್ಲ ದಿಕ್ಕಿನ ಪ್ರದೇಶಗಳೂ ಕಿವುಡಾಗುವಂತೆ) ಅಧರಿತ (ಕಡಿಮ ಎನಿಸುವಂತೆ) ಸರ್ವೇಭ್ಯ (ಸರ್ವ +ಇಭ +ಯ) ಗರ್ವಿತಂ (ಆನೆಗಳ ಘ್ರೀಂಕಾರವನ್ನೂ ತಿರಸ್ಕರಿಸುವಂತೆ) ಕ್ಷುಭಿತ ಅಂಭೋನಿಧಿ ಸಲಿಲಂ(ಕಲಕಿದ ಸಮುದ್ರದ ನೀರಿನಂತೆ,) ಪರೆದುದು (ವ್ಯಾಪಿಸಿತು, ಹರಡಿತು) ಧುರವಿಧಾನ ಪಟು ಪಟಹ ಕಹಳ ಭೇರೀ ರಭಸಂ (ಯುದ್ಧಕಾರ್ಯದಲ್ಲಿ ಸಮರ್ಥವಾದ ತಮಟೆ, ಕೊಂಬು ಮತ್ತು ನಗಾರಿಯ ಶಬ್ದಗಳ ರಭಸವು ಹರಡಿತು.)
ಪದ್ಯ-೧೭೧:ಅರ್ಥ: ಎಲ್ಲ ದಿಕ್ಕಿನ ಪ್ರದೇಶಗಳೂ ಕಿವುಡಾಗುವಂತೆ, ಆನೆಗಳ ಘ್ರೀಂಕಾರವನ್ನೂ ತಿರಸ್ಕರಿಸುವಂತೆ, ಕಲಕಿದ ಸಮುದ್ರದ ನೀರಿನಂತೆ, ಯುದ್ಧಕಾರ್ಯದಲ್ಲಿ ಸಮರ್ಥವಾದ ತಮಟೆ, ಕೊಂಬು ಮತ್ತು ನಗಾರಿಯ ಶಬ್ದಗಳ ರಭಸವು ಹರಡಿತು.
ಆದಿತ್ಯನ ಸಾರಥಿ ಬೆಱ
ಗಾದಂ ಮಾತಾಳಿ ಮಾತುಗೆಟ್ಟಂ ಧುರದೊಳ್|
ಚೋದಿಸೆ ಹರಿಯುಂ ಶಲ್ಯನು
ಮಾದರದಿಂ ನರನ ದಿನಪತನಯನ ರಥಮಂ|| ೧೭೨ ||
ಪದ್ಯ-೧೭೨:ಪದವಿಭಾಗ-ಅರ್ಥ:ಆದಿತ್ಯನ ಸಾರಥಿ ಬೆಱಗಾದಂ (ಸೂರ್ಯನ ಸಾರಥಿಯಾದ ಅರುಣನು ಆಶ್ಚರ್ಯಚಕಿತನಾದನು;) ಮಾತಾಳಿ ಮಾತುಗೆಟ್ಟಂ (ಇಂದ್ರನ ಸಾರಥಿ ಮಾತಲಿಯೂ ಮೂಕನಾದನು) ಧುರದೊಳ್ ಚೋದಿಸೆ ಹರಿಯುಂ ಶಲ್ಯನುಂ ಆದರದಿಂ ನರನ ದಿನಪತನಯನ ರಥಮಂ (ಯುದ್ಧದಲ್ಲಿ ಕೃಷ್ಣನೂ ಶಲ್ಯನೂ ಅರ್ಜುನ ಮತ್ತು ಕರ್ಣನ ರಥಗಳನ್ನು ಆದರದಿಂದ ನಡೆಸುತ್ತಿರಲು <-)
ಪದ್ಯ-೧೭೨:ಅರ್ಥ: ಯುದ್ಧದಲ್ಲಿ ಕೃಷ್ಣನೂ ಶಲ್ಯನೂ ಅರ್ಜುನ ಮತ್ತು ಕರ್ಣನ ರಥಗಳನ್ನು ಆದರದಿಂದ ನಡೆಸುತ್ತಿರಲು ಸೂರ್ಯನ ಸಾರಥಿಯಾದ ಅರುಣನು ಆಶ್ಚರ್ಯಚಕಿತನಾದನು. ಇಂದ್ರನ ಸಾರಥಿ ಮಾತಲಿಯೂ ಮೂಕನಾದನು
ವ|| ಅಂತಿರ್ವರುಮೊರ್ವರೊರ್ವರಂ ಮುಟ್ಟೆವಂದಲ್ಲಿ ವಿಕ್ರಾಂತತುಂಗನಂಗಾರಾಜನ ನಿಂತೆಂದಂ-
ವಚನ:ಪದವಿಭಾಗ-ಅರ್ಥ:ಅಂತು ಇರ್ವರುಂ ಒರ್ವರೊರ್ವರಂ ಮುಟ್ಟೆವಂದಲ್ಲಿ (ಇಬ್ಬರೂ ಒಬ್ಬೊಬ್ಬರನ್ನು ಮುಟ್ಟುವಷ್ಟು ಸಮೀಪಕ್ಕೆ ಬಂದಾಗ) ವಿಕ್ರಾಂತತುಂಗನು ಅಂಗಾರಾಜನ ನು ಇಂತೆಂದಂ (ವಿಕ್ರಾಂತತುಂಗನಾದ ಅರ್ಜುನನು ಕರ್ಣನಿಗೆ ಹೀಗೆ ಹೇಳಿದನು)-
ವಚನ:ಅರ್ಥ:ಹಾಗೆ ಇಬ್ಬರೂ ಒಬ್ಬೊಬ್ಬರನ್ನು ಮುಟ್ಟುವಷ್ಟು ಸಮೀಪಕ್ಕೆ ಬಂದಾಗ ವಿಕ್ರಾಂತತುಂಗನಾದ ಅರ್ಜುನನು ಕರ್ಣನಿಗೆ ಹೀಗೆ ಹೇಳಿದನು.
ಹರಿಣೀಪ್ಲುತಂ|| ಪಿರಿದು ನಿನ್ನಂ ದುರ್ಯೋಧನಂ ನಿನಗೆನ್ನೊಳಂ
ಪಿರಿದು ಕಲುಷಂ ಕರ್ಣಂಗೊಡ್ಡಿತ್ತು ಭಾರತವೇಂ ಬೆಸಂ|
ಪಿರಿದು ನಿನಗಂ ರಾಗಂ ಮಿಕ್ಕಿರ್ದಗುರ್ವಿನ ಸೂನು ನಿ
ರ್ನೆರಮೞಿಯೆಯುಂ ನೋಡುತ್ತಿಂತಿರ್ದೆಯಿರ್ಪುದು ಪಾೞಿಯೇ|| ೧೭೩ ||
ಪದ್ಯ-೧೭೩:ಪದವಿಭಾಗ-ಅರ್ಥ:ಪಿರಿದು ನಿನ್ನಂ ದುರ್ಯೋಧನಂ (ನಿನ್ನನ್ನು ದುರ್ಯೋಧನನು ವಿಶೇಷ ಗೌರವದಿಂದ ಸಾಕಿದನು) ನಿನಗೆ ಎನ್ನೊಳಂ ಪಿರಿದು ಕಲುಷಂ (ನಿನಗೆ ನನ್ನಲ್ಲಿಯೂ ವಿಶೇಷವಾದ ದ್ವೇಷ,) ಕರ್ಣಂ ಗೊಡ್ಡಿತ್ತು ಭಾರತವು (ಕರ್ಣನಿಂದಾಗಿಯೇ ಭಾರತಯುದ್ಧವು ಒಡ್ಡಿತ್ತು, ಪ್ರಾಪ್ತವಾದುದು.) ಏಂ ಬೆಸಂ ಪಿರಿದು (ಯುದ್ಧಕಾರ್ಯವು ನಿನಗೇನು ದೊಡ್ಡದು?) ನಿನಗಂ ರಾಗಂ ಮಿಕ್ಕಿರ್ದ ಅಗುರ್ವಿನ ಸೂನು (ನಿನಗೆ ವಿಶೇಷ ಪ್ರೀತಿಪಾತ್ರನೂ ಪ್ರಚಂಡನೂ ಆದ ಮಗನು) ನಿರ್ನೆರಂ ಅೞಿಯೆಯುಂ (ನಿಷ್ಕಾರಣವಾಗಿ ಅಳಿದರೂ,ಸತ್ತರೂ) ನೋಡುತ್ತ ಇಂತಿರ್ದೆಯಿರ್ಪುದು ಪಾೞಿಯೇ (ನೋಡುತ್ತ ಹೀಗೆ ಇದ್ದೀಯೇ? ಇರುವುದು ಧರ್ಮವೇ )
ಪದ್ಯ-೧೭೩:ಅರ್ಥ:೧೭೩. ನಿನ್ನನ್ನು ದುರ್ಯೋಧನನು ವಿಶೇಷ ಗೌರವದಿಂದ ಸಾಕಿದನು. ನಿನಗೆ ನನ್ನಲ್ಲಿಯೂ ವಿಶೇಷವಾದ ದ್ವೇಷ, ಕರ್ಣನಿಂದಾಗಿಯೇ ಭಾರತಯುದ್ಧವು ಪ್ರಾಪ್ತವಾದುದು. ಯುದ್ಧಕಾರ್ಯವು ನಿನಗೇನು ದೊಡ್ಡದು? ನಿನಗೆ ವಿಶೇಷ ಪ್ರೀತಿಪಾತ್ರನೂ ಪ್ರಚಂಡನೂ ಆದ ಮಗನು ನಿಷ್ಕಾರಣವಾಗಿ ಸತ್ತರೂ ನೋಡುತ್ತ ಹೀಗೆ ಇದ್ದೀಯೇ? ಇರುವುದು ಧರ್ಮವೇ?
ಕಂ|| ಎನ್ನ ಪೆಸರ್ಗೇಳ್ದು ಸೈರಿಸ
ದನ್ನಯದಿಂತೀಗಳೆನ್ನ ರೂಪಂ ಕಂಡುಂ|
ನಿನ್ನರಸನಣುಗದಮ್ಮನ
ನಿನ್ನ ತನೂಭವನ ಸಾವುಗಂಡುಂ ಮಾಣ್ಬಾ|| ೧೭೪ ||
ಪದ್ಯ-೧೭೪:ಪದವಿಭಾಗ-ಅರ್ಥ:ಎನ್ನ ಪೆಸರ್ ಕೇಳ್ದು ಸೈರಿಸದಂ (ನನ್ನ ಹೆಸರನ್ನೂ ಕೇಳಿ ಸೈರಿಸದವನು) ನಯಿದಿ ಇಂತು ಈಗಳ್ ಎನ್ನ ರೂಪಂ ಕಂಡುಂ (ಈಗ ನನ್ನ ರೂಪವನ್ನು ಕಂಡೂ) ನಿನ್ನ ಅರಸನ ಅಣುಗದಮ್ಮನ (ನಿನ್ನ ರಾಜರ ಪ್ರೀತಿಯ ತಮ್ಮನ,) ನಿನ್ನ ತನೂಭವನ ಸಾವುಗಂಡುಂ (ನಿನ್ನ ಮಗನ ಸಾವನ್ನು ನೋಡಿಯೂ) ಮಾಣ್ಬಾ (ಮಾಡದೆ ಇದ್ದೀಯಾ?)
ಪದ್ಯ-೧೭೪:ಅರ್ಥ: ನನ್ನ ಹೆಸರನ್ನೂ ಕೇಳಿ ಸೈರಿಸದವನು ನೀನು, ನಯದಿಂದ/ ಈಗ ನನ್ನ ರೂಪವನ್ನು ಕಂಡೂ ನಿನ್ನ ರಾಜರ ಪ್ರೀತಿಯ ತಮ್ಮನ, ನಿನ್ನ ಮಗನ ಸಾವನ್ನು ನೋಡಿಯೂ ಏನೂ ಮಾಡದೆ ಇದ್ದೀಯಾ?
ಮ|| ಭಯಮೇಕಕ್ಕುಮದೆಂತುಟಿಂದದಟುಮಂ ಪೆರ್ಮಾತುಮಂ ಭೂತ ಧಾ
ತ್ರಿಯೊಳೋರಂತೆ ನೆಗೞ್ಚಿ ಮುನ್ನೆ ಬೞಿಯಂ ಕಾನೀನ ನೀನೀ ಮಹಾ|
ಜಿಯೊಳಿಂತೇನೆನಗಂಜಿ ಮಾಣ್ದೆ ಪೆಱತೇಂ ಪೋ ಮಾತು ಲೇಸಣ್ಣ ಸೆ
ಟ್ಟಿಯ ಬಳ್ಳಂ ಕಿಱಿದೆಂಬುದೊಂದು ನುಡಿಯಂ ನೀಂ ನಿಕ್ಕುವಂ ಮಾಡಿದೈ|| ೧೭೫ ||
ಪದ್ಯ-೧೭೫:ಪದವಿಭಾಗ-ಅರ್ಥ:ಭಯಂ ಏಕೆ ಅಕ್ಕುಂ ಅದೆಂತುಟು ಎಂದು (ಭಯವೇಕಾಗುತ್ತದೆ, ಅದು ಹೇಗಿದೆ? ಎಂದು) ಅದಟುಮಂ ಪೆರ್ಮಾತುಮಂ ಭೂತ ಧಾತ್ರಿಯೊಳ್ ಓರಂತೆ ನೆಗೞ್ಚಿ ಮುನ್ನೆ (ಪರಾಕ್ರಮವನ್ನೂ ದೊಡ್ಡ ಮಾತುಗಳನ್ನೂ ಮೊದಲು ಲೋಕದಲ್ಲೆಲ್ಲ ಆಡಿದೆ) ಬೞಿಯಂ ಕಾನೀನ ನೀನೀ ಮಹಾಜಿಯೊಳ್ (ಕರ್ಣನೇ ನಂತರ ಈ ಮಹತ್ ಯುದ್ಧದಲ್ಲಿ) ಇಂತೇನ್ ಎನಗೆ ಅಂಜಿ ಮಾಣ್ದೆ (ಹೀಗೆ ನನಗೆ ಹೆದರಿ ತಡಮಾಡುತ್ತಿದ್ದೀಯೆ.) ಪೆಱತೇಂ ಪೋ (ಮತ್ತೇನು ಹೋಗಯ್ಯ) ಮಾತು ಲೇಸಣ್ಣ ಸೆಟ್ಟಿಯ ಬಳ್ಳಂ ಕಿಱಿದೆಂಬುದು ಒಂದು ನುಡಿಯಂ (ಮಾತನಾಡುವುದು ಸುಲಭ! ‘ಸೆಟ್ಟಿಯ ಬಳ್ಳ ಕಿರಿದು’ ಎಂಬ ಗಾದೆಯ ಮಾತನ್ನು) ನೀಂ ನಿಕ್ಕುವಂ ಮಾಡಿದೈ (ನೀನು ನಿಜವೆನಿಸಿಬಿಟ್ಟೆ!)
  • ಟಿಪ್ಪಣಿ::ಅರ್ಜುನನಿಗೆ ಇಲ್ಲಿ ಕರ್ಣ ಕಾನೀನ ಎಂದು ಗೊತ್ತಿಲ್ಲ, ಆದರೂ ಪ್ರಯೋಗವಾಗಿದೆ. ಕಾನೀನ ಎಂದರೆ ಮದುವೆಗೆ ಮೊದಲು ಜನಿಸಿದವನು.
ಪದ್ಯ-೧೭೫:ಅರ್ಥ:ಭಯವೇಕಾಗುತ್ತದೆ, ಅದು ಹೇಗಿದೆ? ಎಂದು ಪರಾಕ್ರಮವನ್ನೂ ದೊಡ್ಡ ಮಾತುಗಳನ್ನೂ ಮೊದಲು ಲೋಕದಲ್ಲೆಲ್ಲ ಆಡಿದೆ, ಕರ್ಣನೇ ನಂತರ ಈ ಮಹತ್ ಯುದ್ಧದಲ್ಲಿ ಹೀಗೆ ನನಗೆ ಹೆದರಿ ತಡಮಾಡುತ್ತಿದ್ದೀಯೆ. ಮತ್ತೇನು ಹೋಗಯ್ಯ ಮಾತನಾಡುವುದು ಸುಲಭ! ‘ಸೆಟ್ಟಿಯ ಬಳ್ಳ ಕಿರಿದು’ ಎಂಬ ಗಾದೆಯ ಮಾತನ್ನು ನೀನು ನಿಜವೆನಿಸಿಬಿಟ್ಟೆ!
ಕಂ|| ಪೆಸರೆಸೆಯೆ ಬೀರಮಂ ಪಾ
ಡಿಸಿಯುಂ ಪೊಗೞಿಸಿಯುಮುರ್ಕಿ ಬಿೞ್ದಾಹವದೊಳ್|
ಕುಸಿದು ಪೆಱಪಿಂಗಿ ಪೇೞ್ ಮಾ
ನಸರೇನಿನ್ನೂಱು ವರ್ಷಮಂ ಬೞ್ದಪರೇ|| ೧೭೬ ||
ಪದ್ಯ-೧೭೬:ಪದವಿಭಾಗ-ಅರ್ಥ:ಪೆಸರ್ ಎಸೆಯೆ (ಹೆಸರು ಪ್ರಸಿದ್ಧವಾಗಲು) ಬೀರಮಂ ಪಾಡಿಸಿಯುಂ ಪೊಗೞಿಸಿಯುಂ ಉರ್ಕಿ (ಶೌರ್ಯವನ್ನು ಹಾಡಿಸಿಯೂ ಹೊಗಳಿಸಿಯೂ ಉಬ್ಬಿ) ಬಿೞ್ದು ಆಹವದೊಳ್ ಕುಸಿದು ಪೆಱಪಿಂಗಿ (ಯುದ್ಧದಲ್ಲಿ ಸೋತು ಕುಸಿದು ಹಿಂಜರಿಯುವುದಕ್ಕೆ) ಪೇೞ್ ಮಾನಸರೇನ್ ಇನ್ನೂಱು ವರ್ಷಮಂ ಬೞ್ದಪರೇ (ಮನುಷ್ಯರು ಏನು ಇನ್ನೂರು ವರ್ಷ ಬದುಕುತ್ತಾರೆಯೇ? )
ಪದ್ಯ-೧೭೬:ಅರ್ಥ: ಹೆಸರು ಪ್ರಸಿದ್ಧವಾಗಲು ಶೌರ್ಯವನ್ನು ಹಾಡಿಸಿಯೂ ಹೊಗಳಿಸಿಯೂ ಉಬ್ಬಿ ಯುದ್ಧದಲ್ಲಿ ಸೋತು ಕುಸಿದು ಹಿಂಜರಿಯುವುದಕ್ಕೆ ಮನುಷ್ಯರು ಏನು ಇನ್ನೂರು ವರ್ಷ ಬದುಕುತ್ತಾರೆಯೇ?
ವ|| ಎಂದು ನೃಪ ಪರಮಾತ್ಮನ ಪಾೞಿಯ ಪಸುಗೆಯ ನುಡಿಗೆ ಪರಮಾರ್ತನಾಗಿ ತನ್ನನುದ್ಘಾಟಿಸಿ ನುಡಿದೊಡುಮ್ಮಚ್ಚದೊಳ್ ಮೆಚ್ಚದೆ ದರಹಸಿತವದನಾರವಿಂದನಾಗಿ ದಶಶತಕರ ತನೂಜನಿಂತೆಂದಂ-
ವಚನ:ಪದವಿಭಾಗ-ಅರ್ಥ:ಎಂದು ನೃಪ ಪರಮಾತ್ಮನ ಪಾೞಿಯ ಪಸುಗೆಯ ನುಡಿಗೆ (ಎಂಬುದಾಗಿ ಹೇಳಿದ ನೃಪಪರಮಾತ್ಮನಾದ ಅರ್ಜುನನ ವಿವೇಕದ ಮಾತಿಗೆ) ಪರಮಾರ್ತನಾಗಿ (ಬಹಳ ದುಖಪಟ್ಟು) ತನ್ನನು ಉದ್ಘಾಟಿಸಿ ನುಡಿದೊಡೆ ಉಮ್ಮಚ್ಚದೊಳ್ ಮೆಚ್ಚದೆ (ತನ್ನನ್ನು ಕುರಿತು ಮರ್ಮಭೇದಕವಾದ ರೀತಿಯಲ್ಲಿ ನುಡಿದರೂ ಕೋಪಿಸಿಕೊಳ್ಳಲು ಇಷ್ಟಪಡದೆ) ದರಹಸಿತ ವದನಾರವಿಂದನಾಗಿ (ದರಹಸಿತ-ಅರ್ಧನಗುವಿನ, ವದನ ಅರವಿಂದ- ಮುಖಕಮಲ) ದಶಶತಕರ (ಸೂರ್ಯ) ತನೂಜನು (ಮಗ) ಇಂತೆಂದಂ (ಮುಗುಳ್ನಗೆಯಿಂದ ಕೂಡಿದ ಮುಖಕಮಲವುಳ್ಳವನಾಗಿ ಕರ್ಣನು ಹೀಗೆಂದನು)-
ವಚನ:ಅರ್ಥ:ಎಂಬುದಾಗಿ ಹೇಳಿದ ಅರ್ಜುನನ ವಿವೇಕದ ಮಾತಿಗೆ ಬಹಳ ದುಖಪಟ್ಟು ತನ್ನನ್ನು ಕುರಿತು ಮರ್ಮಭೇದಕವಾದ ರೀತಿಯಲ್ಲಿ ನುಡಿದರೂ ಕೋಪಿಸಿಕೊಳ್ಳಲು ಇಷ್ಟಪಡದೆ ಮುಗುಳ್ನಗೆಯಿಂದ ಕೂಡಿದ ಮುಖಕಮಲವುಳ್ಳವನಾಗಿ ಕರ್ಣನು ಹೀಗೆಂದನು-
ಕಂ|| ಎಳೆಯಂ ಕೋಳ್ಪಟ್ಟುಂ ಮುಂ
ಬಳೆದೊಟ್ಟುಂ ಮುಟ್ಟುಗೆಟ್ಟುಮಿರ್ದೀಗಳ್ ಬ|
ಳ್ವಳನೆ ನುಡಿದಪುದೆ ನುಡಿವಂ
ತಳವುಂ ಪೆರ್ಮಾತುಮಾಯಮುಂ ನಿನಗಾಯ್ತೇ|| ೧೭೭ ||
ಪದ್ಯ-೧೭೭:ಪದವಿಭಾಗ-ಅರ್ಥ:ಎಳೆಯಂ (ನೆಲವನ್ನು,ರಾಜ್ಯವನ್ನು ) ಕೋಳ್ಪಟ್ಟುಂ (ಪರಾಧೀನಮಾಡಿಯೂ) ಮುಂಬಳೆದೊಟ್ಟುಂ (ಮುಂಗೈಗೆ ಬಳೆ ತೊಟ್ಟೂ) ಮುಟ್ಟುಗೆಟ್ಟುಂ ಇರ್ದು (ಆಯುಧ ಹಿಡಿಯದಂತಿದ್ದೂ) ಈಗಳ್ ಬಳ್ವಳನೆ ನುಡಿದಪುದೆ (ಈಗ ಬಡಬಡನೆ ಮಾತನಾಡುವುದೇ?) ನುಡಿವಂತೆ ಅಳವುಂ ಪೆರ್ಮಾತುಂ ಆಯಮುಂ ನಿನಗಾಯ್ತೇ (ಹಾಗೆ ಮಾತನಾಡುವ ನಿನಗೆ ಶಕ್ತಿಯೂ ಪ್ರೌಢಿಮೆಯೂ ಪರಾಕ್ರಮವೂ ಉಂಟೇ?).
ಪದ್ಯ-೧೭೭:ಅರ್ಥ: ರಾಜ್ಯವನ್ನು ಮೊದಲು ಪರಾಧೀನಮಾಡಿಯೂ, ಮುಂಗೈಗೆ ಬಳೆ ತೊಟ್ಟೂ, ಆಯುಧ ಹಿಡಿಯದಂತಿದ್ದೂ ಈಗ ಬಡಬಡನೆ ಮಾತನಾಡುವುದೇ? ಹಾಗೆ ಮಾತನಾಡುವ ನಿನಗೆ ಶಕ್ತಿಯೂ ಪ್ರೌಢಿಮೆಯೂ ಪರಾಕ್ರಮವೂ ಉಂಟೇ?
ಕಂ|| ಏೞ್ಕಟ್ಟನೆೞೆದು ನಿಮ್ಮಂ
ನಾೞ್ಕಡಿಗಳಿದೊಡೆ ಮದೀಯ ನಾಥಂ ಬೇರಂ|
ಬಿೞ್ಕೆಯನೆ ತಿಂದ ದೆವಸದೊ
ಳೞ್ಕಾಡಿದ ಬೀರಮೀಗಳೇಂ ಪೊಸತಾಯ್ತೇ|| ೧೭೮ ||
ಪದ್ಯ-೧೭೮:ಪದವಿಭಾಗ-ಅರ್ಥ:ಏೞ್ಕಟ್ಟಿಂ ಎೞೆದು (ವರ್ಷಗಳ ಅವಧಿಯ- ಕಟ್ಟುಪಾಡಿನಿಂದ ಎಳೆದು) ನಿಮ್ಮಂ ನಾೞ್ಕಡಿ ಗಳಿದೊಡೆ- ನಾಳ್ಕು ಗಡಿ ಕಳಿದೊಡೆ (ನಿಮ್ಮನ್ನು ನಾಡಗಡಿಯಿಂದ ಕಳಿಸಿದಾಗ, ಹೊರದೂಡಿದಾಗ) ಮದೀಯ ನಾಥಂ (ನನ್ನ ರಾಜ ದುರ್ಯೋಧನನು) ಬೇರಂ ಬಿೞ್ಕೆಯನೆ ತಿಂದ ದೆವಸದೊಳ್ (ಬೇರನ್ನೂ ಬಿಕ್ಕೆಯನ್ನೂ ತಿಂದ ದಿವಸಗಳಲ್ಲಿ ) ಅೞ್ಕಾಡಿದ (ನಾಶವಾದ) ಬೀರಂ ಈಗಳ್ ಏಂ ಪೊಸತಾಯ್ತೇ (ಪೌರುಷವು ಈಗ ಹೊಸದಾಯಿತೇನು?)
ಪದ್ಯ-೧೭೮:ಅರ್ಥ:ನನ್ನ ರಾಜ ದುರ್ಯೋಧನನು ವರ್ಷಗಳ ಅವಧಿಯ ಕಟ್ಟುಪಾಡಿನಿಂದ ಎಳೆದು, ನಿಮ್ಮನ್ನು ನಾಡಗಡಿಯಿಂದ ಹೊರದೂಡಿದಾಗ ಬೇರನ್ನೂ ಬಿಕ್ಕೆಯನ್ನೂ ತಿಂದ ದಿವಸಗಳಲ್ಲಿ ನಾಶವಾದ ಪೌರುಷವು ಈಗ ಹೊಸದಾಯಿತೇನು?
ಮತ್ತನಯನರಸನನುಜನ
ಸತ್ತೞಲಂ ನಿನ್ನೊಳಱಸಲೆಂದಿರ್ದೆಂ ಬೆ|
ಳ್ಕುತ್ತಿರ್ದೆನಪ್ಟೊಡೇತೊದ
ಳಿತ್ತಣ ದಿನನಾಥನಿತ್ತ ಮೂಡುಗುಮಲ್ತೇ|| ೧೭೯ ||
ಪದ್ಯ-೧೭೯:ಪದವಿಭಾಗ-ಅರ್ಥ:ಮತ್ ತನಯನ ಅರಸನ ಅನುಜನ ಸತ್ತ ಅೞಲಂ -ಅಳಲಂ (ನನ್ನ ಮಗನೂ ರಾಜನ ತಮ್ಮನಾದ ದುಶ್ಶಾಸನನೂ ಸತ್ತ ದುಖವನ್ನು) ನಿನ್ನೊಳು ಅಱಸಲೆಂದು ಇರ್ದೆಂ (ನಿನ್ನಲ್ಲಿ ಹುಡುಕಬೇಕೆಂದಿದ್ದೆ.) ಬೆಳ್ಕುತ್ತಿ ಇರ್ದೆನಪ್ಟೊಡೆ (ಹೆದರಿ ಇದ್ದವನಾಗಿದ್ದರೆ) ಏ ತೊದಳು (‍ಏನು ಸುಳ್ಳು), ಇತ್ತಣ ದಿನನಾಥನು ಇತ್ತ ಮೂಡುಗುಂ ಅಲ್ತೇ (ಈ/ ಆ ಕಡೆಯ ಸೂರ್ಯ ಈ ಕಡೆಯೇ ಹುಟ್ಟುತ್ತಾನಲ್ಲವೇ? (ಪೂರ್ವಕ್ಕೂ ಪಶ್ಚಿಮಕ್ಕೂ ಕೈ ತೋರಿದಾಗ ಈ ಕಡೆಯ ಸೂರ್ಯ ಈ ಕಡೆ ಹುಟ್ಟುತ್ತಾನಲ್ಲವೇ? ಎಂದಾಗುತ್ತದೆ. )
ಪದ್ಯ-೧೭೯:ಅರ್ಥ:ನನ್ನ ಮಗನೂ ರಾಜನ ತಮ್ಮನಾದ ದುಶ್ಶಾಸನನೂ ಸತ್ತ ದುಖವನ್ನು ನಿನ್ನಲ್ಲಿ ಹುಡುಕಬೇಕೆಂದಿದ್ದೆ. ಹೆದರಿ ಇದ್ದವನಾಗಿದ್ದರೆ ಎಂದರೆ ಅದೆಂತಹ ಸುಳ್ಳು ಮಾತು! ಈ/ ಆ ಕಡೆಯ ಸೂರ್ಯ ಈ ಕಡೆ ಹುಟ್ಟುತ್ತಾನಲ್ಲವೇ?
ಕಸವರದ ಸವಿಯುಮಂ ಭಯ
ರಸಕದ ಸವಿಯುಮನೆದೆಂತುಮಾನಱಿಯದುದಂ|
ವಸುಮತಿಯಱಿವುದು ನೀಂ ಪುರು
ಡಿಸಿ ನುಡಿದೊಡೆ ನಿನ್ನ ನುಡಿದ ಮಾತೇಱುಗುಮೇ|| ೧೮೦ ||
ಪದ್ಯ-೧೮೦:ಪದವಿಭಾಗ-ಅರ್ಥ:ಕಸವರದ (ಚಿನ್ನದ) ಸವಿಯುಮಂ (ಚಿನ್ನದ ರುಚಿಯನ್ನೂ) ಭಯರಸಕದ ಸವಿಯುಮಂ (ಭಯರಸದ ರುಚಿಯನ್ನೂ) ಅದೆಂತುಂ ಆನು ಅಱಿಯದುದಂ ವಸುಮತಿಯು ಅಱಿವುದು (ನಾನು ಎಂದೂ ಅರಿಯದುದನ್ನು ಈ ಭೂಮಂಡಲವೇ ತಿಳಿದಿದೆ.) ನೀಂ ಪುರುಡಿಸಿ ನುಡಿದೊಡೆ (ನೀನು ಹೊಟ್ಟೆಕಿಚ್ಚಿನಿಂದ ನುಡಿದರೆ) ನಿನ್ನ ನುಡಿದ ಮಾತು ಏಱುಗುಮೇ (ನೀನು ಆಡಿದ ಮಾತು ಪುಷ್ಟಿಯಾಗುತ್ತದೆಯೇ? )
ಪದ್ಯ-೧೮೦:ಅರ್ಥ: ಚಿನ್ನದ ರುಚಿಯನ್ನೂ, ಭಯರಸದ ರುಚಿಯನ್ನೂ ನಾನು ಎಂದೂ ಅರಿಯದುದನ್ನು ಈ ಭೂಮಂಡಲವೇ ತಿಳಿದಿದೆ. ನೀನು ಹೊಟ್ಟೆಕಿಚ್ಚಿನಿಂದ ನುಡಿದರೆ ನೀನು ಆಡಿದ ಮಾತು ಬೆಲೆಯುಳ್ಳದ್ದಾಗುವುದೇ?/ ಪುಷ್ಟಿಯಾಗುತ್ತದೆಯೇ?
ಒಡಲುಂ ಪ್ರಾಣಮುಮೆಂಬಿವು
ಕಿಡಲಾದುವು ಜಸಮದೊಂದೆ ಕಿಡದದನಾಂ ಬ|
ಲ್ವಿಡಿವಿಡಿದು ನೆಗೞ್ದೆನುೞಿದೞಿ
ವಡೆಮಾತಂ ಮಾಡಿ ನೀನೆ ಕೆಮ್ಮನೆ ನುಡಿವೈ|| ೧೮೧ ||
ಪದ್ಯ-೧೮೧:ಪದವಿಭಾಗ-ಅರ್ಥ:ಒಡಲುಂ ಪ್ರಾಣಮುಂ ಎಂಬಿವು ಕಿಡಲ್ ಆದುವು (ಶರೀರವೂ ಪ್ರಾಣವೂ ಎಂಬ ಇವು ನಾಶವಾಗಲು ಆದವು.) ಜಸಂ ಅದೊಂದೆ ಕಿಡದು ಅದ ನಾಂ ಬಲ್ವಿಡಿವಿಡಿದು (ಯಶಸ್ಸೊಂದೆ ಕೆಡದೆ ಇರತಕ್ಕದ್ದು; ಅದನ್ನು ನಾನು ಬಿಗಿಯಾಗಿ ಆಶ್ರಯಿಸಿ) ನೆಗೞ್ದೆನು ಉೞಿದ ಅೞಿವ ಅಡೆಮಾತಂ ಆಡಿ(ಉಳಿದ ನಿಲ್ಲದ ಹೀನವಾದ ಮಾತನ್ನಾಡಿ ) ನೀನೆ ಕೆಮ್ಮನೆ ನುಡಿವೈ (ನೀನು ಸುಮ್ಮನೆ/ ನಿಷ್ಟ್ರಯೋಜಕವಾಗಿ ನುಡಿಯುತ್ತಿದ್ದೀಯೆ.)
ಪದ್ಯ-೧೮೧:ಅರ್ಥ: ಶರೀರವೂ ಪ್ರಾಣವೂ ಎಂಬ ಇವು ನಾಶವಾಗಲು ಆದವು. ಯಶಸ್ಸೊಂದೆ ಕೆಡದೆ ಇರತಕ್ಕದ್ದು; ಅದನ್ನು ನಾನು ಬಿಗಿಯಾಗಿ ಆಶ್ರಯಿಸಿ ಪ್ರಸಿದ್ಧನಾಗಿದ್ದೇನೆ. ಉಳಿದ ಹೀನವಾದ ಮಾತನ್ನಾಡಿ, ನೀನು ಸುಮ್ಮನೆ ನುಡಿಯುತ್ತಿದ್ದೀಯೆ.
ಚಂ|| ಬಿದಿ ವಸದಿಂದೆ ಪುಟ್ಟುವುದು ಪುಟ್ಟಿಸುವಂ ಬಿದಿ ಪುಟ್ಟಿದಂದಿವಂ
ಗಿದು ಬಿಯಮೊಳ್ಪಿವಂಗಿದು ವಿನೋದಮಿವಂಗಿದು ಸಾವ ಪಾಂಗಿವಂ|
ಗಿದು ಪಡೆಮಾತಿವಂಗಿದು ಪರಾಕ್ರಮಮೆಂಬುದನೆಲ್ಲ ಮಾೞ್ಕೆಯಿಂ
ಬಿದಿ ಸಮಕಟ್ಟಿ ಕೊಟ್ಟೊಡೆಡೆಯೊಳ್ ಕಿಡಿಸಲ್ ಕುಡಿಸಲ್ ಸಮರ್ಥರಾರ್|| ೧೮೨ ||
ಪದ್ಯ-೧೮೨:ಪದವಿಭಾಗ-ಅರ್ಥ:ಬಿದಿ ವಸದಿಂದೆ ಪುಟ್ಟುವುದು (ಹುಟ್ಟುವುದು ದೈವವಶದಿಂದ) ಪುಟ್ಟಿಸುವಂ ಬಿದಿ (ಹುಟ್ಟಿಸುವವನೂ ವಿಧಿಯೇ) ಪುಟ್ಟಿದಂದು ಇವಂಗೆ ಇದು ಬಿಯಮ್ (ಹುಟ್ಟಿದಾಗ ಇವನಿಗಿದು ಸಂಪತ್ತು) ಒಳ್ಪು ಇವಂಗೆ ಇದು ವಿನೋದಂ (ಇವನಿಗೆ ಒಳ್ಳೆಯದಿದು, ಇವನಿಗೆ ಇದು ವಿನೋದ,) ಇವಂಗೆ ಇದು ಸಾವ ಪಾಂಗು (ಇವನಿಗೆ ಇದು ಸಾಯುವ ರೀತಿ,) ಇವಂಗಿದು ಪಡೆಮಾತು ಇವಂಗಿದು ಪರಾಕ್ರಮಂ ಎಂಬುದನೆಲ್ಲ (ಇವನಿಗೆ ಇದು ಬರಿಮಾತು, ಇವನಿಗಿದು ಪರಾಕ್ರಮ ಎಂಬುದನ್ನು) ಮಾೞ್ಕೆಯಿಂ ಬಿದಿ ಸಮಕಟ್ಟಿ ಕೊಟ್ಟೊಡೆ (ಎಲ್ಲ ರೀತಿಯಲ್ಲಿಯೂ ವಿಧಿ ಸಮಕಟ್ಟುಮಾಡಿ ಕೊಟ್ಟಿರುವಾಗ) ಎಡೆಯೊಳ್ ಕಿಡಿಸಲ್ ಕುಡಿಸಲ್ ಸಮರ್ಥರಾರ್ (ಮಧ್ಯದಲ್ಲಿ ಅದನ್ನು ಕೆಡಿಸುವುದಕ್ಕಾಗಲಿ ಕೊಡಿಸುವುದಕ್ಕಾಗಲಿ ಯಾರು ಸಮರ್ಥರು?)
ಪದ್ಯ-೧೮೨:ಅರ್ಥ:ಮಾನವನು ಹುಟ್ಟುವುದು ದೈವವಶದಿಂದ; ಹುಟ್ಟಿಸುವವನೂ ವಿಧಿಯೇ; ಹುಟ್ಟಿದಾಗ ಇವನಿಗಿದು ಸಂಪತ್ತು, ಇವನಿಗೆ ಒಳ್ಳೆಯದಿದು, ಇವನಿಗೆ ಇದು ವಿನೋದ, ಇವನಿಗೆ ಇದು ಸಾಯುವ ರೀತಿ, ಇವನಿಗೆ ಇದು ಬರಿಮಾತು, ಇವನಿಗಿದು ಪರಾಕ್ರಮ ಎಂಬುದನ್ನು ಎಲ್ಲ ರೀತಿಯಲ್ಲಿಯೂ ವಿಧಿ ಸಮಕಟ್ಟುಮಾಡಿ ಕೊಟ್ಟಿರುವಾಗ, ಮಧ್ಯದಲ್ಲಿ ಅದನ್ನು ಕೆಡಿಸುವುದಕ್ಕಾಗಲಿ ಕೊಡಿಸುವುದಕ್ಕಾಗಲಿ ಯಾರು ಸಮರ್ಥರು?
ಕಂ|| ಎಂದೀ ಬಾಯ್ವಾತಿನೊಳೇ
ವಂದಪುದಮ್ಮಣ್ಮಿ ಕಾದುಕೊಳ್ಳೆನುತುಂ ಭೋಂ|
ರೆಂದಿಸೆ ಪೊಸ ಮಸೆಯಂಬಿನ
ತಂದಲ ಬೆಳ್ಸರಿಗಳಿರದೆ ಕವಿದುವು ನರನಂ|| ೧೮೩ ||
ಪದ್ಯ-೧೮೩:ಪದವಿಭಾಗ-ಅರ್ಥ:ಎಂದು ಈ ಬಾಯ್ವಾತಿನೊಳು ಏವಂದಪುದು ಅಮ್ಮ (ಅಪ್ಪಾ ಈ ಬಾಯಿ ಮಾತಿನಲ್ಲಿ ಏನು ಪ್ರಯೋಜನವಾಗುತ್ತದೆ?) ಅಣ್ಮಿ ಕಾದುಕೊಳ್ಳ್ ಎನುತುಂ (ಪೌರುಷಪ್ರದರ್ಶನಮಾಡಿ ನಿನ್ನನ್ನು ನೀನು ರಕ್ಷಿಸಿಕೊ ಎನ್ನುತ್ತ) ಭೋಂರೆಂದು ಇಸೆ (ಭೋಂ ಎಂದು ಸದ್ದುಮಾಡಿ ರಭಸದಿಂದ ಹೊಡೆದಾಗ,) ಪೊಸ ಮಸೆಯ ಅಂಬಿನ ತಂದಲ (ಆಗ ಹೊಸದಾಗಿ ಮಸೆದ ಬಾಣಗಳ ತುಂತುರು ಮಳೆಯೂ) ಬೆಳ್ಸರಿಗಳು ಇರದೆ ಕವಿದುವು ನರನಂ (ಬಿಳಿಜಡಿಮಳೆಯೂ ಬಿಡದ ಅರ್ಜುನನನ್ನು ಮುಚ್ಚಿದುವು.)
ಪದ್ಯ-೧೮೩:ಅರ್ಥ: ಅಪ್ಪಾ ಈ ಬಾಯಿ ಮಾತಿನಲ್ಲಿ ಏನು ಪ್ರಯೋಜನವಾಗುತ್ತದೆ? ಪೌರುಷಪ್ರದರ್ಶನಮಾಡಿ ನಿನ್ನನ್ನು ನೀನು ರಕ್ಷಿಸಿಕೊ ಎನ್ನುತ್ತ ಭೋಂ ಎಂದು ಸದ್ದುಮಾಡಿ ರಭಸದಿಂದ ಹೊಡೆದನು. ಆಗ ಹೊಸದಾಗಿ ಮಸೆದ ಬಾಣಗಳ ತುಂತುರು ಮಳೆಯಧಾರೆಯೂ, ಬಿಳಿಯ- ಜಡಿಮಳೆಯೂ ಬಿಡದ ಅರ್ಜುನನನ್ನು ಮುಚ್ಚಿದುವು.
ದೊಣೆಗಳಿನುರ್ಚುವ ತಿರುವಾ
ಯ್ವೊಣರ್ಚಿ ತೆಗೆನೆರೆವ ಬೇಗಮಂ ಕಾಣದೆ ಕೂ|
ರ್ಗಣೆಗಳ ಪಂದರನೆ ನಭೋಂ
ಗಣದೊಳ್ ಕಂಡುತ್ತು ದೇವಗಣಮಿನಸುತನಾ|| ೧೮೪ ||
ಪದ್ಯ-೧೮೪:ಪದವಿಭಾಗ-ಅರ್ಥ:ದೊಣೆಗಳಿಂ ಉರ್ಚುವ (ಬತ್ತಳಿಕೆಯಿಂದ ಬಾಣಗಳನ್ನು ಸೆಳೆದುಕೊಳ್ಳುವ) ತಿರುವಾಯ್ ಒಣರ್ಚಿ ತೆಗೆನೆರೆವ ಬೇಗಮಂ ಕಾಣದೆ (ಬಿಲ್ಲಿನ ಬಾಯಿಗೆ ಸೇರಿಸಿ ಕಿವಿಯವರೆಗೂ ಸೆಳೆಯುವ ವೇಗವನ್ನು ಕಾಣದೆ) ಕೂರ್ಗಣೆಗಳ ಪಂದರನೆ ನಭೋಂಗಣದೊಳ್ ಕಂಡುತ್ತು ದೇವಗಣಂ ಇನಸುತನಾ- ಕರ್ಣನಾ (ಕರ್ಣನ ಹರಿತವಾದ ಬಾಣಗಳ ಚಪ್ಪರವನ್ನೇ ಆಕಾಶಪ್ರದೇಶದಲ್ಲಿ ದೇವತೆಗಳ ಸಮೂಹವು ನೋಡಿತು.)
ಪದ್ಯ-೧೮೪:ಅರ್ಥ: ಬತ್ತಳಿಕೆಯಿಂದ ಬಾಣಗಳನ್ನು ಸೆಳೆದುಕೊಳ್ಳುವ, ಬಿಲ್ಲಿನ ಬಾಯಿಗೆ ಸೇರಿಸಿ ಕಿವಿಯವರೆಗೂ ಸೆಳೆಯುವ ವೇಗವನ್ನು ಕಾಣದೆ ಕರ್ಣನ ಹರಿತವಾದ ಬಾಣಗಳ ಚಪ್ಪರವನ್ನೇ ಆಕಾಶಪ್ರದೇಶದಲ್ಲಿ ದೇವತೆಗಳ ಸಮೂಹವು ನೋಡಿತು.
ಪಾತಂ ಲಕ್ಷ್ಮಂ ಶೀಘ್ರಂ
ಘಾತಂ ಬಹುವೇಗಮೆಂಬಿವಯ್ದೇಸಿನೊಳಂ|
ತೀತನ ದೊರೆಯಿಲ್ಲೆನಿಸಿದು
ದಾತನ ಬಿಲ್ಬಲ್ಮೆ ಸುರರಿನಂಬರತಲದೊಳ್|| ೧೮೫
ಪದ್ಯ-೧೮೫:ಪದವಿಭಾಗ-ಅರ್ಥ:ಪಾತಂ ಲಕ್ಷ್ಮಂ ಶೀಘ್ರಂ ಘಾತಂ ಬಹುವೇಗಮೆಂಬ ಇವು ಅಯ್ದು ಏಸಿನೊಳು (ಈ ಅಯ್ದು ರೀತಿಯ ಬಾಣಪ್ರಯೋಗಗಳಲ್ಲಿಯೂ) ಅಂತು ಈತನ ದೊರೆಯಿಲ್ಲ ಎನಿಸಿದುದು (ಈತನಿಗೆ ಸಮಾನರಿಲ್ಲ ಎನ್ನಿಸಿತು) ಆತನ ಬಿಲ್ ಬಲ್ಮೆ (ಆತನ ಬಿಲ್ವಿದ್ಯೆಯ ಶ್ರೇಷ್ಠತೆಯಲ್ಲಿಯೂ) ಸುರರಿಂ ಅಂಬರತಲದೊಳ್ (ಆಕಾಶದಲ್ಲಿರುವ ದೇವತೆಗಳಿಂದ- )
ಪದ್ಯ-೧೮೫:ಅರ್ಥ: ಪಾತ (ಬೀಳಿಸುವುದು) ಲಕ್ಷ್ಯ (ಗುರಿಯಿಡುವುದು) ಶೀಘ್ರ (ವೇಗದಿಂದ ಹೊಡೆಯುವುದು) ಘಾತ (ಘಟ್ಟಿಸುವುದು) ಬಹುವೇಗ (ಅತ್ಯಂತವೇಗ) ಎಂಬ ಈ ಅಯ್ದು ರೀತಿಯ ಬಾಣಪ್ರಯೋಗಗಳಲ್ಲಿಯೂ ಆತನ ಬಿಲ್ವಿದ್ಯೆಯ ಶ್ರೇಷ್ಠತೆಯಲ್ಲಿಯೂ, ಆಕಾಶದಲ್ಲಿರುವ ದೇವತೆಗಳಿಂದ ಈತನಿಗೆ ಸಮಾನರಿಲ್ಲ ಎನ್ನಿಸಿತು.
ವ|| ಆಗಳ್ ಪರಸೈನ್ಯಬೈರವಂ ಪ್ರಳಯಭೈರವಾಕಾರಮಂ ಕೆಯ್ಕೊಂಡು ಕಾದೆ-
ವಚನ:ಪದವಿಭಾಗ-ಅರ್ಥ:ಆಗಳ್ ಪರಸೈನ್ಯಬೈರವಂ (ಅರ್ಜುನನು) ಪ್ರಳಯಭೈರವಾಕಾರಮಂ ಕೆಯ್ಕೊಂಡು ಕಾದೆ (ಪ್ರಳಯಕಾಲದ ಭೈರವನ ಸ್ವರೂಪಪಡೆದು ಯುದ್ಧಮಾಡಲು,) -
ವಚನ:ಅರ್ಥ:ವ|| ಆಗ ಪರಸೈನ್ಯಭೈರವನಾದ ಅರ್ಜುನನು ಪ್ರಳಯಕಾಲದ ಭೈರವನ ಸ್ವರೂಪಪಡೆದು ಯುದ್ಧಮಾಡಲು,-
ಕಂ|| ಶರಸಂಧಾನಾಕರ್ಷಣ
ಹರಣಾದಿ ವಿಶೇಷ ವಿವಿಧ ಸಂಕಲ್ಪ ಕಳಾ|
ಪರಿಣತಿಯಂ ಮೆರೆದುದು ತರ
ತರದೊಳೆ ಮುಳಿದರಿಗನಿಸುವ ಶರನಿಕರಂಗಳ್|| ೧೮೬ ||
ಪದ್ಯ-೧೮೬:ಪದವಿಭಾಗ-ಅರ್ಥ:ಶರಸಂಧಾನ ಆಕರ್ಷಣ ಹರಣ ಆದಿ (ಹೊಡೆಯುವ ಬಾಣದ ಶರಸಂಧಾನ (ಬಾಣವನ್ನು ಹೂಡುವುದು) ಆಕರ್ಷಣ (ಎಳೆಯುವುದು) ಹರಣ- ಬಿಲ್ಲಿನಿಂದ ತೆಗೆಯುವುದು; ಬಿಡುವುದು, ಇವೇ ಮೊದಲಾದ) ವಿಶೇಷ ವಿವಿಧ ಸಂಕಲ್ಪ ಕಳಾಪರಿಣತಿಯಂ (ಇವೇ ಮೊದಲಾದ ನಾನಾ ರೀತಿಯ ಕಲಾಪ್ರೌಢಿಮೆಯನ್ನು) ಮೆರೆದುದು ತರತರದೊಳೆ ಮುಳಿದ ಅರಿಗನು ಇಸುವ ಶರನಿಕರಂಗಳ್ (ಅರ್ಜುನನು ಕೋಪದಿಂದ ಹೊಡೆಯುವ ಬಾಣದ ಸಮೂಹಗಳು, ನಾನಾರೀತಿಯ ಕಲಾಪ್ರೌಢಿಮೆಯನ್ನು ಮೆರೆದುವು)
ಪದ್ಯ-೧೮೬:ಅರ್ಥ: ಅರ್ಜುನನು ಕೋಪದಿಂದ ಹೊಡೆಯುವ ಬಾಣದ ಸಮೂಹಗಳು, ಶರಸಂಧಾನ (ಬಾಣವನ್ನು ಹೂಡುವುದು) ಆಕರ್ಷಣ (ಎಳೆಯುವುದು) ಹರಣ (ಬಿಲ್ಲಿನಿಂದ ತೆಗೆಯುವುದು; ಬಿಡುವುದು) ಇವೇ ಮೊದಲಾದ ನಾನಾ ನಾನಾರೀತಿಯ ಕಲಾಪ್ರೌಢಿಮೆಯನ್ನು ಮೆರೆದುವು.
ಮುನಿದಿಸುವಿನಜನ ಸರಲಂ
ಮೊನೆಯಿಂ ಗಱಿವರೆಗಮೆಯ್ದೆ ಸೀಳ್ದುವು ಕಣೆಗಳ್|
ಘನ ಪಥಮನಳುರ್ದು ಸುಟ್ಟಪು
ವೆನೆ ನೆಗೆದುವು ಕೋಲ ಹೊಗೆಯುಮಂಬಿನ ಕಿಡಿಯುಂ|| ೧೮೭ ||
ಪದ್ಯ-೧೮೭:ಪದವಿಭಾಗ-ಅರ್ಥ:ಮುನಿದು ಇಸುವ ಇನಜನ ಸರಲಂ ಮೊನೆಯಿಂ (ಕೋಪಿಸಿಕೊಂಡು ಕರ್ಣನು ಪ್ರಯೋಗಿಸುವ ಬಾಣವನ್ನು) ಗಱಿವರೆಗಂ ಎಯ್ದೆ ಸೀಳ್ದುವು ಕಣೆಗಳ್ (ಅರ್ಜುನನ ಬಾಣಗಳು ತುದಿಯಿಂದ ಗರಿಯವರೆಗೆ ಸೀಳಿದುವು.) ಘನ ಪಥಮನು ಅಳುರ್ದು ಸುಟ್ಟಪುವು ಎನೆ (ಆಕಾಶಮಾರ್ಗವನ್ನೂ ವ್ಯಾಪಿಸಿ ಸುಡುತ್ತವೆ ಎನ್ನುವಂತೆ) ನೆಗೆದುವು ಕೋಲ ಹೊಗೆಯುಂ ಅಂಬಿನ ಕಿಡಿಯುಂ (ಬಾಣಗಳ ಹೊಗೆಯೂ ಕಿಡಿಯೂ ಮೇಲಕ್ಕೆ ನೆಗೆದುವು.)
ಪದ್ಯ-೧೮೭:ಅರ್ಥ: ಕೋಪಿಸಿಕೊಂಡು ಕರ್ಣನು ಪ್ರಯೋಗಿಸುವ ಬಾಣವನ್ನು ಅರ್ಜುನನ ಬಾಣಗಳು ತುದಿಯಿಂದ ಗರಿಯವರೆಗೆ ಸೀಳಿದುವು. ಆಕಾಶಮಾರ್ಗವನ್ನೂ ವ್ಯಾಪಿಸಿ ಸುಡುತ್ತವೆ ಎನ್ನುವ ಹಾಗೆ, ಬಾಣಗಳ ಹೊಗೆಯೂ ಕಿಡಿಯೂ ಮೇಲಕ್ಕೆ ನೆಗೆದುವು.
ಕೂಡೆ ಕಡಿವಂಬನಂಬೆಡೆ
ಮಾಡದೆ ಬಿಡದೊರಸೆ ಪುಟ್ಟಿದುರಿಗಳಗುರ್ವಂ|
ಮಾಡೆ ಕವಿದಳುರ್ವ ಬೆಂಕೆಯೊ
ಳಾಡಿಸಿದರ್ ಮೊಗಮನಮರಸುಂದರಿಯರ್ಕಳ್|| ೧೮೮ ||
ಪದ್ಯ-೧೮೮:ಪದವಿಭಾಗ-ಅರ್ಥ:ಕೂಡೆ ಕಡಿವಂಬನು ಅಂಬು ಎಡೆ ಮಾಡದೆ ಬಿಡದೆ ಒರಸೆ (ಕೂಡಲೆ ಕತ್ತರಿಸುವ ಬಾಣಗಳನ್ನು ಬಾಣಗಳು ಅವಕಾಶಕೊಡದೆ ತಪ್ಪದೆ ಉಜ್ಜಲು) ಪುಟ್ಟಿದ ಉರಿಗಳು ಅಗುರ್ವಂ ಮಾಡೆ (ಹುಟ್ಟಿದ ಉರಿಯ ಜ್ವಾಲೆಗಳು ಭಯವನ್ನುಂಟುಮಾಡಲು) ಕವಿದು ಅಳುರ್ವ ಬೆಂಕೆಯೊಳು (ಆವರಿಸಿ ಸುಡುವ ಉರಿಯಲ್ಲಿ) ಆಡಿಸಿದರ್ಮೊಗಮನು ಅಮರಸುಂದರಿಯರ್ಕಳ್ ( ದೇವಸುಂದರಿಯರು ತಮ್ಮ ಮುಖವನ್ನು ಅತ್ತ ಇತ್ತ ಅಲುಗಾಡಿಸಿದರು.)
ಪದ್ಯ-೧೮೮:ಅರ್ಥ:ಕೂಡಲೆ ಕತ್ತರಿಸುವ ಬಾಣಗಳನ್ನು ಬಾಣಗಳು ಅವಕಾಶಕೊಡದೆ ತಪ್ಪದೆ ಉಜ್ಜಲು ಹುಟ್ಟಿದ ಉರಿಯ ಜ್ವಾಲೆಗಳು ಭಯವನ್ನುಂಟುಮಾಡಲು ಆವರಿಸಿ ಸುಡುವ ಉರಿಯಲ್ಲಿ ದೇವಸುಂದರಿಯರು ತಮ್ಮ ಮುಖವನ್ನು ಅತ್ತ ಇತ್ತ ಅಲುಗಾಡಿಸಿದರು.
ಮೊನೆಯಂಬಿನ ತಂದಲೊಳ
ರ್ಜುನನಂ ಕರ್ಣನುಮನಿನಿಸು ಕಾಣದಣಂ ಮೆ|
ಲ್ಲನೆ ಬಗಿದು ನೋಡಿ ಕುಡುಮಿಂ
ಚಿನಂತೆ ಮೇಗೊಗೆದು ನಾರದಂ ನರ್ತಿಸಿದಂ|| ೧೮೯ ||
ಪದ್ಯ-೧೮೯:ಪದವಿಭಾಗ-ಅರ್ಥ:ಮೊನೆಯಂಬಿನ (ಮೊನಚಾದ ಬಾಣದ) ತಂದಲೊಳು ಅರ್ಜುನನಂ ಕರ್ಣನುಮನು ಇನಿಸು ಕಾಣದೆ ಅಣಂ (ತುಂತುರುಮಳೆಯಲ್ಲಿ ಅರ್ಜುನನೂ ಕರ್ಣನೂ ಸ್ವಲ್ಪವೂ ಕಾಣದಿರಲು) ಮೆಲ್ಲನೆ ಬಗಿದು ನೋಡಿ (ನಾರದನು ಸ್ವಲ್ಪವೂ ಸದ್ದಿಲ್ಲದೆ (ನಿಧಾನವಾಗಿ) ಭಾಗಮಾಡಿ ನೋಡಿ) ಕುಡುಮಿಂಚಿನಂತೆ ಮೇಗೆ ಒಗೆದು ನಾರದಂ ನರ್ತಿಸಿದಂ (ಕುಡುಮಿಂಚಿನಂತೆ ಮೇಲಕ್ಕೆ ಹಾರಿ ಕುಣಿದಾಡಿದನು.)
ಪದ್ಯ-೧೮೯:ಅರ್ಥ: ಮೊನಚಾದ ಬಾಣದ ತುಂತುರುಮಳೆಯಲ್ಲಿ ಅರ್ಜುನನೂ ಕರ್ಣನೂ ಸ್ವಲ್ಪವೂ ಕಾಣದಿರಲು ನಾರದನು ಸ್ವಲ್ಪವೂ ಸದ್ದಿಲ್ಲದೆ (ನಿಧಾನವಾಗಿ) ಭಾಗಮಾಡಿ ನೋಡಿ ಕುಡುಮಿಂಚಿನಂತೆ ಮೇಲಕ್ಕೆ ಹಾರಿ ಕುಣಿದಾಡಿದನು.
ಚಂ|| ಕವಿವ ಶರಾಳಿಯಂ ನಿಜ ಶರಾಳಿಗಳೞ ತೆರಳ್ದಿ ತೂಳ್ದಿ ಮಾ
ರ್ಕವಿದು ಪಳಂಚಿ ಪಾಯ್ದೊರಸೆ ಪುಟ್ಟಿದ ಕಿರ್ಚಳುರ್ದೆೞ್ದಜಾಂಡದಂ|
ತುವರಮಗುರ್ವು ಪರ್ವಿ ಕರಮರ್ವಿಸೆ ದಳ್ಳುರಿ ಪೆರ್ಚಿ ಕಂಡು ಖಾಂ
ಡವವನದಾಹಮಂ ನೆನೆಯಿಸಿತ್ತು ಗುಣಾರ್ಣವನಸ್ತ್ರಕೌಶಲಂ|| ೧೯೦ ||
ಪದ್ಯ-೧೯೦:ಪದವಿಭಾಗ-ಅರ್ಥ:ಕವಿವ ಶರಾಳಿಯಂ ನಿಜ ಶರಾಳಿಗಳೞ ತೆರಳ್ದಿ ತೂಳ್ದಿ (ಮುತ್ತಿರುವ ಬಾಣ ಸಮೂಹವನ್ನು ತನ್ನ ಬಾಣಸಮೂಹಗಳು ಆಕ್ರಮಿಸಿ ಓಡಿಸಿ ತಳ್ಳಿ) ಮಾರ್ ಕವಿದು ಪಳಂಚಿ ಪಾಯ್ದು ಒರಸೆ (ಪ್ರತಿಯಾಗಿ ಮುಚ್ಚಿ ತಗುಲಿ ನುಗ್ಗಿ ಉಜ್ಜಲು) ಪುಟ್ಟಿದ ಕಿರ್ಚ ಅಳುರ್ದು ಎೞ್ದು ಅಜಾಂಡದ ಅಂತುವರಂ ಅಗುರ್ವು ಪರ್ವಿ(ಅಲ್ಲಿ ಹುಟ್ಟಿದ ಬೆಂಕಿಯು ಎದ್ದು ಮೇಲಕ್ಕೆ ನೆಗೆದು ಬ್ರಹ್ಮಾಂಡದ ಕೊನೆಯವರೆಗೆ ಭಯವು ಹಬ್ಬುತ್ತಿರಲು) ಕರಂ ಅರ್ವಿಸೆ ದಳ್ಳುರಿ ಪೆರ್ಚಿ ಕಂಡು (ಹಾಗೆ ವಿಶೇಷವಾಗಿ ವ್ಯಾಪಿಸಿ ಹೆಚ್ಚಾಗಿ ಸುಡಲು ಆ ದಳ್ಳುರಿಯನ್ನು ನೋಡಿ) ಖಾಂಡವವನ ದಾಹಮಂ ನೆನೆಯಿಸಿತ್ತು ಗುಣಾರ್ಣವನ ಅಸ್ತ್ರಕೌಶಲಂ (ಅರ್ಜುನನ ಅಸ್ತ್ರಕೌಶಲವು ಖಾಂಡವವನವನ್ನು ಸುಟ್ಟುದನ್ನು ಜ್ಞಾಪಕಮಾಡಿತು.)
ಪದ್ಯ-೧೯೦:ಅರ್ಥ: ಮುತ್ತಿರುವ ಬಾಣ ಸಮೂಹವನ್ನು ತನ್ನ ಬಾಣಸಮೂಹಗಳು ಆಕ್ರಮಿಸಿ ಓಡಿಸಿ ತಳ್ಳಿ, ಪ್ರತಿಯಾಗಿ ಮುಚ್ಚಿ ತಗುಲಿ ನುಗ್ಗಿ ಉಜ್ಜಲು ಅಲ್ಲಿ ಹುಟ್ಟಿದ ಬೆಂಕಿಯು ಎದ್ದು ಮೇಲಕ್ಕೆ ನೆಗೆದು ಬ್ರಹ್ಮಾಂಡದ ಕೊನೆಯವರೆಗೆ ಭಯವು ಹಬ್ಬುತ್ತಿರಲು, ಹಾಗೆ ವಿಶೇಷವಾಗಿ ವ್ಯಾಪಿಸಿ ಹೆಚ್ಚಾಗಿ ಸುಡಲು ಆ ದಳ್ಳುರಿಯನ್ನು ನೋಡಿ ಅರ್ಜುನನ ಅಸ್ತ್ರಕೌಶಲವು ಖಾಂಡವವನವನ್ನು ಸುಟ್ಟುದನ್ನು ಜ್ಞಾಪಕಮಾಡಿತು.
ವ|| ಆಗಳ್ ಮದ್ರರಾಜನಂಗಾರಾಜನನಿಂತೆಂದನೀಯಂಬುಗಳೊಳೇಂ ತೀರ್ದಪುದು ದಿವ್ಯಾಸ್ತ್ರಂಗಳಿಂದೆಚ್ಚು ಪಗೆಯಂ ಸಾಧ್ಯಂ ಮಾಡೆಂಬುದುಂ ಕೊಂತಿಗೆ ತನ್ನ ನುಡಿದ ನುಡಿವಳಿಯಂ ನೆನೆದು ಪುರಿಗಣೆಯ ದೊಣೆಗೆ ಕೆಯ್ಯಂ ನೀಡದೆ ರೌದ್ರಶರದ ದೊಣೆಗೆ ಕೆಯ್ಯಂ ನೀಡಿದಾಗಳ್-
ವಚನ:ಪದವಿಭಾಗ-ಅರ್ಥ:ಆಗಳ್ ಮದ್ರರಾಜನು ಅಂಗಾರಾಜನನು ಇಂತೆಂದನು ಈಯಂಬುಗಳೊಳು ಏಂ ತೀರ್ದಪುದು (ಆಗ ಶಲ್ಯನು ಕರ್ಣನಿಗೆ ಹೀಗೆಂದನು- ಈ ಬಾಣಗಳಿಂದ ಏನು ಮುಗಿಯುತ್ತದೆ?) ದಿವ್ಯಾಸ್ತ್ರಂಗಳಿಂದ ಎಚ್ಚು ಪಗೆಯಂ ಸಾಧ್ಯಂ ಮಾಡು ಎಂಬುದುಂ(ದಿವ್ಯಾಸ್ತ್ರಗಳನ್ನು ಪ್ರಯೋಗಿಸಿ ಹಗೆಯನ್ನು ಹೊಡೆ, ಗೆಲುವು ಸಾಧ್ಯವಾಗುವಂತೆ ಮಾಡು ಎನ್ನಲು) ಕೊಂತಿಗೆ ತನ್ನ ನುಡಿದ ನುಡಿವ ಅಳಿಯಂ ನೆನೆದು (ಕುಂತೀದೇವಿಗೆ ತಾನು ಕೊಟ್ಟ ವಾಗ್ದಾನವನ್ನು ನೆನೆದು ) ಪುರಿಗಣೆಯ ದೊಣೆಗೆ ಕೆಯ್ಯಂ ನೀಡದೆ (ದಿವ್ಯಾಸ್ತ್ರಗಳ ಬತ್ತಳಿಕೆಗೆ ಕೈಯನ್ನು ಚಾಚದೆ) ರೌದ್ರಶರದ ದೊಣೆಗೆ ಕೆಯ್ಯಂ ನೀಡಿದಾಗಳ್ (ರೌದ್ರಬಾಣಗಳ ಬತ್ತಳಿಕೆಗೆ ಕೈಯನ್ನು ಹಾಕಿದಾಗ.)-
ವಚನ:ಅರ್ಥ: ಆಗ ಶಲ್ಯನು ಕರ್ಣನಿಗೆ ಹೀಗೆಂದನು- ಈ ಬಾಣಗಳಿಂದ ಏನು ಮುಗಿಯುತ್ತದೆ? ದಿವ್ಯಾಸ್ತ್ರಗಳನ್ನು ಪ್ರಯೋಗಿಸಿ ಹಗೆಯನ್ನು ಹೊಡೆ, ಎನ್ನಲು ಕುಂತೀದೇವಿಗೆ ತಾನು ಕೊಟ್ಟ ವಾಗ್ದಾನವನ್ನು ನೆನೆದು ದಿವ್ಯಾಸ್ತ್ರಗಳ ಬತ್ತಳಿಕೆಗೆ ಕೈಯನ್ನು ಚಾಚದೆ, ರೌದ್ರಬಾಣಗಳ ಬತ್ತಳಿಕೆಗೆ ಕೈಯನ್ನು ಹಾಕಿದಾಗ.
ಕಂ|| ಮುಳಿಸಂ ನೆಱಪಲ್ಕರ್ಧಾ
ವಳೀಕ ಶರರೂಪದಿಂದಸುಂಗೊಳೆ ದೊಣೆಯಿಂ|
ಪೊಳೆದು ಬರೆ ಕೆಯ್ಗೆ ತಾಂ ವಿ
ಸ್ಫುಳಿಂಗ ಪಿಂಗಳಿತ ಭುವನ ಭವನಾಭೋಗಂ|| ೧೯೧ ||
ಪದ್ಯ-೧೯೧:ಪದವಿಭಾಗ-ಅರ್ಥ:ಮುಳಿಸಂ ನೆಱಪಲ್ಕೆ ಅರ್ಧಾವಳೀಕ ಶರರೂಪದಿಂದ (ಹಿಂದಿನ ಕೋಪವನ್ನು ತೀರಿಸಿಕೊಳ್ಳುವುದಕ್ಕಾಗಿ, ಅರ್ಧಚಂದ್ರಾಕೃತಿಯ ಬಾಣರೂಪಲ್ಲಿ) ಅಸುಂಗೊಳೆ ದೊಣೆಯಿಂ ಪೊಳೆದು ಬರೆ (ಪ್ರಾಣಾಪಹಾರಮಾಡಲು ಬತ್ತಳಿಕೆಯಿಂದ ಹೊಳೆಯುತ್ತ ಬರಲು) ಕೆಯ್ಗೆ ತಾಂ ವಿಸ್ಫುಳಿಂಗ ಪಿಂಗಳಿತ ಭುವನ ಭವನಾಭೋಗಂ (ಕಿಡಿಗಳಿಂದ ಪಿಂಗಳ ಬಣ್ಣದ ಕಾಂತಿಯಿಂದ ಕೂಡಿ, - ಬತ್ತಳಿಕೆಯಿಂದ ಹೊಳೆಯುತ್ತ ಬರಲು )
ಪದ್ಯ-೧೯೧:ಅರ್ಥ: ಹಿಂದಿನ ಕೋಪವನ್ನು ತೀರಿಸಿಕೊಳ್ಳುವುದಕ್ಕಾಗಿ ಕಿಡಿಗಳಿಂದ ಹಳದಿ ಕೆಂಪು ಮತ್ತು ಕಪ್ಪು ಮಿಶ್ರವಾದ ಪಿಂಗಳ ಬಣ್ಣದ ಕಾಂತಿಯಿಂದಲೂ ಕೂಡಿದ ಪ್ರಪಂಚವೆಂಬ ಮನೆಯಷ್ಟು ವಿಸ್ತಾರವಾದ ಅರ್ಧಾವಲೀಕವೆಂಬ ಅರ್ಧ ಉಳಿದಿದ್ದ ಸರ್ಪವು ಬಾಣದ ಆಕಾರದಲ್ಲಿ ಬತ್ತಳಿಕೆಯಿಂದ ಹೊಳೆಯುತ್ತ ಪ್ರಾಣಾಪಹಾರಮಾಡಲು ಕೈಗೆ ಬಂದಿತು. ಹಾಗೆ ಬರಲು-
ತಿರಿಪಿದೊಡದನೆಳೆ ತಿಱ್ರನೆ
ತಿರಿದುದು ತಿರುವಾಯೊಳಿಡೆ ಸುರರ್ ಮೊರೆಯಿಟ್ಟರ್|
ಭರದೆ ತೆಗೆನೆರೆಯೆ ಮೆಯ್ದೆಗೆ
ದರವಿಂದೋದ್ಭವನಿನೊಗೆದುದಾ ಬ್ರಹ್ಮಾಂಡಂ|| ೧೯೨ ||
ಪದ್ಯ-೧೯೨:ಪದವಿಭಾಗ-ಅರ್ಥ:ತಿರಿಪಿದೊಡೆ ಅದನು ಎಳೆ (ಇಳೆ) ತಿಱ್ರನೆ ತಿರಿದುದು (ಅದನ್ನು ತಿರುಗಿಸಲು ಭೂಮಿಯು ತಿರ್ರೆಂದು ತಿರುಗಿತು) ತಿರುವಾಯೊಳು ಇಡೆ (ಬಿಲ್ಲಿನ ಹೆದೆಗೇರಿಸಿ ಇಡಲು) ಸುರರ್ ಮೊರೆಯಿಟ್ಟರ್ (ದೇವತೆಗಳು ಗಟ್ಟಿಯಾಗಿ ಕೂಗಿಕೊಂಡರು) ಭರದೆ ತೆಗೆ ನೆರೆಯೆ (ವೇಗದಿಂದ ಹೆದೆಯನ್ನು ಕಿವಿಯವರೆಗೆ ಸೆಳೆಯಲು) ಮೆಯ್ದೆಗೆದ (ಗರ್ಭಾಸ್ರಾವವಾದ) ಅರವಿಂದೋದ್ಭವನಿಂ ಒಗೆದುದು ಆ ಬ್ರಹ್ಮಾಂಡಂ (ಬ್ರಹ್ಮನಿಂದ ಬ್ರಹ್ಮಾಂಡವು ಹುಟ್ಟಿತು)
ಪದ್ಯ-೧೯೨:ಅರ್ಥ:ಅದನ್ನು (ಆ ಸರ್ಪದ ಬಾಣವನ್ನು)ತಿರುಗಿಸಲು ಭೂಮಿಯು ತಿರ್ರೆಂದು ತಿರುಗಿತು. ಬಿಲ್ಲಿನ ಹೆದೆಗೇರಿಸಿ ಇಡಲು ದೇವತೆಗಳು ಗಟ್ಟಿಯಾಗಿ ಕೂಗಿಕೊಂಡರು. ವೇಗದಿಂದ ಹೆದೆಯನ್ನು ಕಿವಿಯವರೆಗೆ ಸೆಳೆಯಲು ಮೈಯಿಳಿದ (ಗರ್ಭಾಸ್ರಾವವಾದ) ಬ್ರಹ್ಮನಿಂದ ಬ್ರಹ್ಮಾಂಡವು ಹುಟ್ಟಿತು. ಜಗತ್ತನ್ನು ಹೊಟ್ಟೆಯಲ್ಲಿ ಹೊಂದಿದ ಬ್ರಹ್ಮನಿಗೇ ಗರ್ಭಸ್ರಾವವಾಗುವಷ್ಟು ಭಯಾನಕವಾಗಿತ್ತು ಎಂದು ಭಾವ.
ಕಂ|| ತುಡೆ ಕರ್ಣನದಂ ನಡನಡ
ನಡುಗಿ ಸುಯೋಧನನ ಸಕಲ ರಾಜ್ಯಶ್ರೀಯುಂ|
ಸಡಿಲಿಸಿದ ತೋಳನಾಗಳ್
ಸಡಿಲಿಸಲಣ್ಮಳೆ ದಲದಱಗುರ್ವೇಂ ಪಿರಿದೋ|| ೧೯೩ ||
ಪದ್ಯ-೧೯೩:ಪದವಿಭಾಗ-ಅರ್ಥ:ತುಡೆ ಕರ್ಣನು ಅದಂ ನಡನಡನಡುಗಿ ಸುಯೋಧನನ ಸಕಲ ರಾಜ್ಯಶ್ರೀಯುಂ (ಅದನ್ನು ಕರ್ಣನು ಪ್ರಯೋಗಮಾಡಲು ದುರ್ಯೋಧನನ ಸಮಸ್ತ ರಾಜ್ಯಶ್ರೀಯು ಗಡಗಡನೆ ನಡುಗಿ ) ಸಡಿಲಿಸಿದ ತೋಳನು ಅಗಳ್ (ಅಗಲ) ಸಡಿಲಿಸಲು(ಸಡಿಲಿಸಿದ್ದ ತನ್ನ ತೋಳನ್ನು ಸಡಿಲಿಸಲು ಆಗ ಪೂರಾ ಸಡಿಸಲು) ಅಣ್ಮಳೆ ದಲ್ ಅದಱ ಅಗುರ್ವೇಂ ಪಿರಿದೋ (ಪ್ರಯತ್ನ ಮಾಡುವುದಿಲ್ಲವೇ? ಅದರ ಭಯಂಕರತೆ ಅತ್ಯದ್ಭುತವಾಗಿತ್ತು.)
ಪದ್ಯ-೧೯೩:ಅರ್ಥ: ಅದನ್ನು ಕರ್ಣನು ಪ್ರಯೋಗಮಾಡಲು ದುರ್ಯೋಧನನ ಸಮಸ್ತ ರಾಜ್ಯಶ್ರೀಯು ಗಡಗಡನೆ ನಡುಗಿ ಸಡಿಲಿಸಿದ್ದ ತನ್ನ ತೋಳನ್ನು ಸಡಿಲಿಸಲು ಆಗ ಪೂರಾ ಸಡಿಸಲು ಪ್ರಯತ್ನ ಮಾಡುವುದಿಲ್ಲವೇ? ಅದರ ಭಯಂಕರತೆ ಅತ್ಯದ್ಭುತವಾಗಿತ್ತು.
ಆಕರ್ಣಾಂತಂ ತೆಗೆನೆರೆ
ದಾ ಕರ್ಣನಿಸಲ್ಕೆ ಬಗೆದೊಡುಡುಗುಡುಗಿಸಲೀ||
ಭೀಕರ ಬಾಣಮನಾದವಿ
ವೇಕದಿನುರದೆಡೆಗೆ ತುಡದೆ ತಲೆಗೆಯೆ ತುಡುವಾ|| ೧೯೪ ||
ಪದ್ಯ-೧೯೪:ಪದವಿಭಾಗ-ಅರ್ಥ:ಆಕರ್ಣಾಂತಂ ತೆಗೆನೆರೆದು ಆ ಕರ್ಣನು ಇಸಲ್ಕೆ ಬಗೆದೊಡೆ (ಕಿವಿಯವರೆಗೂ ಪೂರ್ಣವಾಗಿ ಸೆಳೆದು ಕರ್ಣನು ಹೊಡೆಯಲು ಮನಸ್ಸು ಮಾಡುತ್ತಿದ್ದ ಹಾಗೆಯೇ) ಉಡುಗು ಉಡುಗು (ತಡೆಹಿಡಿ ತಡೆಹಿಡಿ) ಇಸಲು (ಹೊಡೆಯಲು) ಈ ಭೀಕರ ಬಾಣಮನು ಆದ ವಿವೇಕದಿಂ ಉರದೆಡೆಗೆ ತುಡದೆ (ಈ ಭಯಂಕರವಾದ ಬಾಣವನ್ನು ವಿವೇಕದಿಂದ ಎದೆಯ ಪ್ರದೇಶಕ್ಕೆ ಗುರಿಯಿಡದೆ) ತಲೆಗೆಯೆ ತುಡುವಾ (ತಲೆಗೆ ಗುರಿಯಿಡುತ್ತೀಯಾ?)
ಪದ್ಯ-೧೯೪:ಅರ್ಥ: (ಬಾಣವನ್ನು)ಕಿವಿಯವರೆಗೂ ಪೂರ್ಣವಾಗಿ ಸೆಳೆದು ಕರ್ಣನು ಹೊಡೆಯಲು ಮನಸ್ಸು ಮಾಡುತ್ತಿದ್ದ ಹಾಗೆಯೇ ಹಿಂದಕ್ಕೆ ತೆಗೆ, ಹಿಂದಕ್ಕೆ ತೆಗೆ; ಹೊಡೆಯಲು; ಈ ಭಯಂಕರವಾದ ಬಾಣವನ್ನು ವಿವೇಕದಿಂದ ಎದೆಯ ಪ್ರದೇಶಕ್ಕೆ ಗುರಿಯಿಡದೆ ತಲೆಗೆ ಗುರಿಯಿಡುತ್ತೀಯಾ? ಎಂದನು ಶಲ್ಯ.
ಉರದೆಡೆಗೆ ತುಡೆ ಜಯಶ್ರೀ
ಗಿರಲೆಡೆ ನಿನಗಪ್ಪುದಾ ಸುಯೋಧನನೊಳ್ ಶ್ರೀ
ಗಿರಲೆಡೆಯಪ್ಪುದು ಮೇಣ್ ದಿನ
ಕರಸುತ ತೊದಳುಂಟೆ ಬಗೆಯೆ ಸಂದೆಯಮುಂಟೇ|| ೧೯೫ ||

ಪದ್ಯ-೦೦:ಪದವಿಭಾಗ-ಅರ್ಥ:ಉರದ ಎಡೆಗೆ ತುಡೆ (ಎದೆಯ ಪ್ರದೇಶಕ್ಕೆ ಗುರಿಯಿಟ್ಟು ತೊಟ್ಟರೆ ) ಜಯಶ್ರೀಗೆ ಇರಲ್ ಎಡೆ ನಿನಗೆ ಅಪ್ಪುದು (ಜಯಲಕ್ಷ್ಮಿಯು ನಿನ್ನಲ್ಲಿರಲು ಅವಕಾಶವಾಗುತ್ತದೆ.) ಆ ಸುಯೋಧನನೊಳ್ ಶ್ರೀಗೆ ಇರಲು ಎಡೆಯಪ್ಪುದು (ಆ ದುರ್ಯೋಧನನಲ್ಲಿಯೂ ಜಯಲಕ್ಷ್ಮಿಯಿರುವಳು.) ಮೇಣ್ ದಿನಕರಸುತ ತೊದಳುಂಟೆ ಬಗೆಯೆ ಸಂದೆಯಮುಂಟೇ (ಕರ್ಣಾ ಈ ಮಾತು ಸುಳ್ಳಾಗುವುದೇ? ಅದರಲ್ಲಿ-ಸಂಶಯವಿದೆಯೇ?. ) ಪದ್ಯ-೦೦:ಅರ್ಥ: ಎದೆಯ ಪ್ರದೇಶಕ್ಕೆ ಗುರಿಯಿಟ್ಟು ತೊಟ್ಟರೆ ಜಯಲಕ್ಷ್ಮಿಯು ನಿನ್ನಲ್ಲಿರಲು ಅವಕಾಶವಾಗುತ್ತದೆ. ಆ ದುರ್ಯೋಧನನಲ್ಲಿಯೂ ಜಯಲಕ್ಷ್ಮಿಯಿರುವಳು. ಕರ್ಣಾ ಈ ಮಾತು ಸುಳ್ಳಾಗುವುದೇ? ಅದರಲ್ಲಿ-ಸಂಶಯವಿದೆಯೇ?.

ವ|| ಎಂಬುದುಂ ಶಲ್ಯನ ನುಡಿದ ನುಡಿಯನವಧಾರಿಸಿ ತನ್ನ ಮನದೊಳೆ ಕರ್ಣನಿಂತೆಂದಂ-
ವಚನ:ಪದವಿಭಾಗ-ಅರ್ಥ:ಎಂಬುದುಂ (ಎನ್ನಲು) ಶಲ್ಯನ ನುಡಿದ ನುಡಿಯನು ಅವಧಾರಿಸಿ ( ಕೇಳಿ) ತನ್ನ ಮನದೊಳೆ ಕರ್ಣನು ಇಂತೆಂದಂ-
ವಚನ:ಅರ್ಥ:ಎನ್ನಲು, ಶಲ್ಯನು ನುಡಿದ ಮಾತನ್ನು ಕೇಳಿ ತನ್ನ ಮನಸ್ಸಿನಲ್ಲಿಯೇ ಕರ್ಣನು ಹೀಗೆಂದುಕೊಂಡನು.
ಮ|| ಎನಿತುಂ ಶಲ್ಯನ ಪೇೞ್ದ ಪಾಂಗೆ ತೊದಳಿಲ್ಲಿಂತಾದೊಡಾ ಶಕ್ರಪು
ತ್ರನನಾಂ ಕೊಂದೊಡೆ ಧರ್ಮಪುತ್ರನೞಗುಂ ತಾಯೆಂದೆ ಮುಂ ಕೊಂತಿ ಬಂ|
ದಿನಿಸಂ ಪ್ರಾರ್ಥಿಸಿ ಪೋದಳೆನ್ನನದನಾಂ ಮಾಣ್ದಿರ್ದೆನಿರ್ದಾಗಳೊ
ಳ್ಪಿನ ಪೆರ್ಮಾತಿನ ನನ್ನಿ ಬನ್ನದೊಳೊಡಂಬಟ್ಟಿರ್ಪುದಂ ಮಾೞ್ಪೆನೇ|| ೧೯೬ ||
ಪದ್ಯ-೧೯೬:ಪದವಿಭಾಗ-ಅರ್ಥ:ಎನಿತುಂ ಶಲ್ಯನ ಪೇೞ್ದ ಪಾಂಗೆ (ಎಷ್ಟೆಂದರೂ ಶಲ್ಯನು ಹೇಳಿದ ಹಾಗೆಯೇ ಸರಿ) ತೊದಳಿಲ್ಲ ಅಂತು ಆದೊಡೆ (ಸುಳ್ಳಿಲ್ಲ. ಅವನು ಹೇಳಿದಂತೆಮಾಡಿದರೆ) ಆಂ ಶಕ್ರಪುತ್ರನನು ಆಂ ಕೊಂದೊಡೆ (ಆ ಇಂದ್ರಪುತ್ರನಾದ ಅರ್ಜುನನನ್ನು ನಾನು ಕೊಂದರೆ) ಧರ್ಮಪುತ್ರನು ಅೞಗುಂ (ಧರ್ಮರಾಜನು ಸಾಯುತ್ತಾನೆ.) ತಾಯ್ ಎಂದೆ ಮುಂ ಕೊಂತಿ ಬಂದು (ನನ್ನ ತಾಯಿಯೆಂದೇ ಕುಂತಿ ಬಂದು) ಇನಿಸಂ ಪ್ರಾರ್ಥಿಸಿ ಪೋದಳು ಎನ್ನನು (ನನ್ನಲ್ಲಿ ಇದನ್ನೇ ಬೇಡಿಹೋದಳು) ಅದನು ಆಂ( ಅದನ್ನು ನಾನು ) ಮಾಣ್ದಿರ್ದೆಂ (ತಪ್ಪಿ ನಡೆದರೆ ಅಥವಾ ಅದನ್ನು ಎಂದರೆ ಶಲ್ಯ ಹೇಳಿದ ಮಾತನ್ನು ಮಾಣ್ದಿರ್ದೆಂ -ಬಿಟ್ಟಿದ್ದೇನೆ) ಇರ್ದಾಗಳ್ ಒಳ್ಪಿನ ಪೆರ್ಮಾತಿನ ನನ್ನಿ (ಇದ್ದಾಗ ಎಂದರೆ ಬದುಕಿದ್ದಾಗ ಆ ಒಳ್ಳೆಯ ದೊಡ್ಡಮಾತಿನ/ ಕೊಟ್ಟಮಾತಿನ ಸತ್ಯ) ಬನ್ನದೊಳು ಒಡಂಬಟ್ಟು ಇರ್ಪುದಂ ಮಾೞ್ಪೆನೇ (ಕೊಟ್ಟಮಾತಿನ ಸತ್ಯ ಭಂಗವಾದುದನ್ನು ನಾನು ಮಾಡುವೆನೇ? ಇಲ್ಲ.)
ಪದ್ಯ-೧೯೬:ಅರ್ಥ: ಎಷ್ಟೆಂದರೂ ಶಲ್ಯನು ಹೇಳಿದ ಹಾಗೆಯೇ (ಸರಿ) ಸುಳ್ಳಿಲ್ಲ. ಅವನು ಹೇಳಿದಂತೆಮಾಡಿದರೆ ಆ ಇಂದ್ರಪುತ್ರನಾದ ಅರ್ಜುನನನ್ನು ನಾನು ಕೊಂದರೆ ಧರ್ಮರಾಜನು ಸಾಯುತ್ತಾನೆ. ನನ್ನ ತಾಯಿಯೆಂದೇ ಕುಂತಿ ಬಂದು ನನ್ನಲ್ಲಿ ಇದನ್ನೇ ಬೇಡಿಹೋದಳು. ಅದನ್ನು ನಾನು ತಪ್ಪಿ ನಡೆದರೆ,ಅಥವಾ (ಅದನ್ನು ಎಂದರೆ ಶಲ್ಯ ಹೇಳಿದ ಮಾತನ್ನು ಬಿಟ್ಟಿದ್ದೇನೆ.) ಇದ್ದಾಗ ಎಂದರೆ ಬದುಕಿದ್ದಾಗ ಆ ಒಳ್ಳೆಯ ದೊಡ್ಡಮಾತಿನ/ ಕೊಟ್ಟಮಾತಿನ ಸತ್ಯ ಭಂಗವಾದುದನ್ನು ನಾನು ಮಾಡುವೆನೇ? (ಮಾಡಲಾರೆ.)
ಚಂ|| ತನಗುಱುವಂತುಟಾಗೆ ಕಡು ನನ್ನಿಯ ಪೆಂಪುಮನಾಂತು ಭೂಭುಜರ್
ತನಗಿನಿತೂನಮಾಗೆ ಮೆರೆದಾ ಭುಜವೀರ್ಯಮನಾಂತು ಮಾಣ್ಬುದೇಂ|
ತನಗುಱುವೊಂದು ನನ್ನಿಯನೆ ಪೂಣ್ದು ಕರಂ ಪಿರಿದುಂ ಬಲಸ್ಥನ
ಪ್ಪನನೆ ಕಱುತ್ತು ಕಾದಿ ನೆಗೞ್ದಾತನೆ ನನ್ನಿಯ ಬೀರದಾಗರಂ|| ೧೯೭
ಪದ್ಯ-೧೯೭:ಪದವಿಭಾಗ-ಅರ್ಥ: ತನಗೆ ಉಱುವಂತುಟು ಆಗೆ (ತನಗೆ, ಇರುವಷ್ಟು ಆಗಲು- ಕಾಲ) ಕಡು ನನ್ನಿಯ ಪೆಂಪುಮನು ಆಂತು (ಕಠಿಣ ಸತ್ಯವನ್ನೂ ಪರಾಕ್ರಮವನ್ನೂ ಹೊಂದಿ) ಭೂಭುಜರ್ ತನಗೆ ಇನಿತುಂ ಉನಮಾಗೆ (ಪೂರ್ಣವಾದ ಭುಜಶಕ್ತಿಯನ್ನು ಪಡೆದಿದ್ದೂ ಅದರಲ್ಲಿ ಸ್ವಲ್ಪ ಕಡಿಮೆಯಾದರೆ, ತಪ್ಪಿದರೆ) ಮೆರೆದ ಆ ಭುಜವೀರ್ಯಮನು ಆಂತು (ಮೆರೆದ ಆ ತೋಳಬಲವನ್ನು ಹೊಂದಿ) ಮಾಣ್ಬುದೇಂ (ಮಾಡುವುದೇನು? ಪ್ರಯೋಜನವಿಲ್ಲ!) ತನಗುಱುವ ಒಂದು ನನ್ನಿಯನೆ ಪೂಣ್ದು ಕರಂ ಪಿರಿದುಂ (ತನಗೆ ಸಾಧ್ಯವಾದಷ್ಟು ಸತ್ಯಪ್ರತಿಜ್ಞೆಮಾಡಿ, ವಿಶೇಷ- ದೊಡ್ಡ) ಬಲಸ್ಥನಪ್ಪನನೆ ಕಱುತ್ತು ಕಾದಿ (ಸೈನ್ಯವಿದ್ದವನನ್ನೆ ಗುರಿಯಿಟ್ಟು ಕಾದಿ) ನೆಗೞ್ದ ಆತನೆ ನನ್ನಿಯ ಬೀರದ ಆಗರಂ (ಸತ್ಯ ಮತ್ತು ಪರಾಕ್ರಮದ ಆವಾಸಸ್ಥಾನನಾಗುವನು.)
ಪದ್ಯ-೧೯೭:ಅರ್ಥ:ಸಾಮಾನ್ಯ ರಾಜರಾದವರು ತಮಗೆ ಸಾಧ್ಯವಾದಷ್ಟು ಕಠಿಣ ಸತ್ಯವನ್ನೂ ಪರಾಕ್ರಮವನ್ನೂ ಹೊಂದಿ, ಪೂರ್ಣವಾದ ಭುಜಶಕ್ತಿಯನ್ನು ಪಡೆದಿದ್ದೂ ಅದರಲ್ಲಿ ಸ್ವಲ್ಪ ತಪ್ಪಿದರೆ ಮೆರೆದ ಆ ತೋಳಬಲವನ್ನು ಹೊಂದಿ ಮಾಡುವುದೇನು? ತನಗೆ ಸಾಧ್ಯವಾದಷ್ಟು ಸತ್ಯಪ್ರತಿಜ್ಞೆಮಾಡಿ, ದೊಡ್ಡ ಸೈನ್ಯವಿದ್ದವನನ್ನೆ ಗುರಿಯಿಟ್ಟು ಕಾದಿ ಪ್ರಸಿದ್ಧಿಪಡೆದವನೇ ಸತ್ಯ ಮತ್ತು ಪರಾಕ್ರಮದ ಆವಾಸಸ್ಥಾನನಾಗುವನು.
ಮ|| ಅಱಿಯರ್ ಪಾಂಡವರೆನ್ನನಿನ್ನುಮಱಿಪಲ್ ನೀಮೆಂದದಂ ಚಕ್ರಿಗಾ
ನಱಿಪಿರ್ದೆಂ ಪೃಥೆಯುಂ ಮದೀಯ ಸುತರೊಳ್ ವೈಕರ್ತನಂ ನನ್ನಿಯಂ|
ನಿಱಿಸಲ್ಕಾರ್ಕುಮಮೋಘಮೆಂದು ಮನದೊಳ್ ನಂಬಿರ್ದಳಿನ್ನಿಲ್ಲಿ ಪೆಂ
ಪೆಱಕಂಬೆತ್ತಿರೆ ಕಾವೆನೆನ್ನ ನುಡಿಯಂ ಕೆಯ್ಕೊಂಡ ಕಟ್ಟಾಯಮಂ|| ೧೯೮ ||
ಪದ್ಯ-೧೯೮:ಪದವಿಭಾಗ-ಅರ್ಥ:ಅಱಿಯರ್ ಪಾಂಡವರು ಎನ್ನಂ ಇನ್ನುಂ (ಪಾಂಡವರು ನನ್ನನ್ನು ಇನ್ನೂ -ಯಾರೆಂದು- ತಿಳಿಯರು) ಅಱಿಪಲ್ (ವೇಡ,ವೇಡಿಂ) ನೀಂ ಎಂದು ಅದಂ ಚಕ್ರಿಗೆ ಆನ್ ಅಱಿಪಿರ್ದೆಂ (ನೀವು ತಿಳಿಸಬೇಡಿ ಎಂದು ನಾನು ಕೃಷ್ಣನನ್ನು ಹೇಳಿದ್ದೆ.) ಪೃಥೆಯುಂ ಮದೀಯ ಸುತರೊಳ್ ( ಕುಂತಿಯೂ ನನ್ನ ಮಕ್ಕಳಲ್ಲಿ) ವೈಕರ್ತನಂ (ಸೂರ್ಯನ ಮಗ ಕರ್ಣ) ನನ್ನಿಯಂ ನಿಱಿಸಲ್ಕ್ ಆರ್ಕುಂ ಅಮೋಘಮೆಂದು (ಸತ್ಯವನ್ನು ಸ್ಥಾಪಿಸುವುದಕ್ಕೆ ಸಮರ್ಥನೆಂದು,ಅಮೋಘಂ ಅರ್ಕು- ತಪಪ್ಪದವನು ಅಕ್ಕು ಎಂದ) ಮನದೊಳ್ ನಂಬಿರ್ದಳ್ (ಮನಸ್ಸಿನಲ್ಲಿ ನಂಬಿದ್ದಾಳೆ). ಇನ್ನಿಲ್ಲಿ ಪೆಂಪು ಎಱಕಂಬೆತ್ತಿರೆ (ಇಂತಹ ಹಿರಿಮೆಯು ನನ್ನಲ್ಲಿ ಎರಕ ಹೊಯ್ದಿರಲು/ ತುಂಬಿರಲು) ಕಾವೆನು ಎನ್ನ ನುಡಿಯಂ ಕೆಯ್ಕೊಂಡ ಕಟ್ಟಾಯಮಂ (ನನ್ನ ಭಾಷೆಯನ್ನೂ ನಾನು ಅಂಗೀಕರಿಸಿರುವ ನನ್ನ ತೀವ್ರವಾದ ಶೌರ್ಯವನ್ನೂ ರಕ್ಷಿಸುತ್ತೇನೆ)
ಪದ್ಯ-೧೯೮:ಅರ್ಥ:ಪಾಂಡವರು ನನ್ನನ್ನು ಇನ್ನೂ (ಯಾರೆಂದು) ತಿಳಿಯರು. ನೀವು ತಿಳಿಸಬೇಡಿ ಎಂದು ನಾನು ಕೃಷ್ಣನನ್ನು ಹೇಳಿದ್ದೆ. ಕುಂತಿಯೂ ನನ್ನ ಮಕ್ಕಳಲ್ಲಿ ಕರ್ಣನು ಸತ್ಯವನ್ನು ಸ್ಥಾಪಿಸುವುದಕ್ಕೆ ಪೂರ್ಣವಾಗಿ ಸಮರ್ಥನೆಂದು ಮನಸ್ಸಿನಲ್ಲಿ ನಂಬಿದ್ದಾಳೆ. ಇಂತಹ ಹಿರಿಮೆಯು ನನ್ನಲ್ಲಿ ಎರಕ ಹೊಯ್ದಿರಲು ನನ್ನ ಭಾಷೆಯನ್ನೂ ನಾನು ಅಂಗೀಕರಿಸಿರುವ ನನ್ನ ತೀವ್ರವಾದ ಶೌರ್ಯವನ್ನೂ ರಕ್ಷಿಸುತ್ತೇನೆ. ಎಂದು ಕರ್ಣನು ನಿಶ್ಚಯಿಸಿದಮು.
ಕಂ|| ಎಂಬುದನೆ ಬಗೆದು ಪೆಱತನ
ಣಂ ಬಗೆಯದೆ ಮದ್ರಪತಿಯನೆಂದಂ ಮುಂ ತೊ|
ಟ್ಟಂಬನದನುಗಿದು ಕುಂದಿಸಿ
ದಂ ಭಯದಿಂ ಕರ್ಣನೆಂದು ಲೋಕಂ ನಗದೇ|| ೧೯೯ ||
ಪದ್ಯ-೧೯೯:ಪದವಿಭಾಗ-ಅರ್ಥ:ಎಂಬುದನೆ ಬಗೆದು ಪೆಱತನು ಅಣಂ ಬಗೆಯದೆ (ಎಂಬುದಾಗಿಯೇ ಯೋಚಿಸಿ ಬೇರೆರೀತಿಯನ್ನೂ ಸ್ವಲ್ಪವೂ ಯೋಚಿಸದೆ) ಮದ್ರಪತಿಯನು ಎಂದಂ (ಶಲ್ಯನಿಗೆ ಹೇಳಿದನು,) ಮುಂ ತೊಟ್ಟ ಅಂಬನು ಅದನು ಉಗಿದು ಕುಂದಿಸಿದಂ ಭಯದಿಂ ಕರ್ಣನೆಂದು ಲೋಕಂ ನಗದೇ (‘ಕರ್ಣನು ಮೊದಲು ಪ್ರಯೋಗಿಸಿದ ಬಾಣವನ್ನು ಭಯದಿಂದ ಹಿಂದಕ್ಕೆ ಸೆಳೆದು ಕುಗ್ಗಿಸಿದನು’ ಎಂದು ಮುಂದೆ ಲೋಕವು ನಗುವುದಿಲ್ಲವೇ?)
ಪದ್ಯ-೧೯೯:ಅರ್ಥ:ಎಂಬುದಾಗಿಯೇ ಯೋಚಿಸಿ ಬೇರೆರೀತಿಯನ್ನೂ ಸ್ವಲ್ಪವೂ ಯೋಚಿಸದೆ ಶಲ್ಯನಿಗೆ ಹೇಳಿದನು, ‘ಕರ್ಣನು ಮೊದಲು ಪ್ರಯೋಗಿಸಿದ ಬಾಣವನ್ನು ಭಯದಿಂದ ಹಿಂದಕ್ಕೆ ಸೆಳೆದು ಕುಗ್ಗಿಸಿದನು’ ಎಂದು ಮುಂದೆ ಲೋಕವು ನಗುವುದಿಲ್ಲವೇ?
ಕಂ|| ಉಡುಗುಡುಗುಡುಗೆಂದಿಸೆ ಬಱ
ಸಿಡಿಲೆಱಪಂತೆಱಪ ಸರಲ ಬರವಂ ಕಂಡಾ|
ಗಡೆ ಚಕ್ರಿ ನೆಲನೊಳೆಣ್ಬೆರ
ಲಡಂಗೆ ನರರಥಮನೊತ್ತಿದಂ ನಿಪುಣತೆಯಿಂ|| ೨೦೦ ||
ಪದ್ಯ-೨೦೦:ಪದವಿಭಾಗ-ಅರ್ಥ:ಉಡುಗು ಉಡುಗು ಉಡುಗೆಂದು ಇಸೆ (ತಗ್ಗಿಸು, ತಗ್ಗಿಸು, ತಗ್ಗಿಸು ಎನ್ನುತ್ತಿದ್ದರೂ, ಹೊಡೆಯಲು,) ಬಱಸಿಡಿಲು ಎಱಪಂತೆ ಎಱಪ ಸರಲ ಬರವಂ ಕಂಡು (ಬರಸಿಡಿಲು ಎರಗುವಂತೆ ಎರಗುವ ಬಾಣದ ಬರುವಿಕೆಯನ್ನು ಕಂಡು) ಆಗಡೆ ಚಕ್ರಿ ನೆಲನೊಳ್ ಎಣ್ಬೆರಲ್ ಅಡಂಗೆ (ಆಗಲೆ ಕೃಷ್ಣನು ಅರ್ಜುನನ ತೇರನ್ನು ಭೂಮಿಯಲ್ಲಿ ಎಂಟುಬೆರಳು ಆಳಕ್ಕೆ ಅಡಗುವ ಹಾಗೆ) ನರರಥಮನು ಒತ್ತಿದಂ ನಿಪುಣತೆಯಿಂ (ಅರ್ಜುನನ ರಥವನ್ನು ಭೂಮಿಯಲ್ಲಿ ಎಂಟುಬೆರಳು ಆಳಕ್ಕೆ ಅಡಗುವ ಹಾಗೆ ಕೌಶಲದಿಂದ ಒತ್ತಿದನು.)
ಪದ್ಯ-೨೦೦:ಅರ್ಥ:ಶಲ್ಯನು ಗುರಿಯನ್ನು ತಗ್ಗಿಸು, ತಗ್ಗಿಸು, ತಗ್ಗಿಸು ಎನ್ನುತ್ತಿದ್ದರೂ, ಹೊಡೆಯಲು ಬರಸಿಡಿಲು ಎರಗುವಂತೆ ಎರಗುವ ಬಾಣದ ಬರುವಿಕೆಯನ್ನು ಕಂಡು ಆಗಲೆ ಕೃಷ್ಣನು, ಅರ್ಜುನನ ರಥವನ್ನು ಭೂಮಿಯಲ್ಲಿ ಎಂಟುಬೆರಳು ಆಳಕ್ಕೆ ಅಡಗುವ ಹಾಗೆ ಕೌಶಲದಿಂದ ಒತ್ತಿದನು.
ಒತ್ತುವುದುಂ ಶರಮಿರದೆ
ಯ್ದುತ್ತೆ ಕಿರೀಟಿಯ ಕಿರೀಟಮಂ ಕೊರೆದೊಡೆ ಪ|
ರ್ವಿತ್ತು ಭಯಮಿಂದ್ರನಂ ಮು
ತ್ತಿತ್ತೞಲೀಶ್ವರನನಾಗಳಾ ಸಂಕಟದೊಳ್|| ೨೦೧ ||
ಪದ್ಯ-೨೦೧:ಪದವಿಭಾಗ-ಅರ್ಥ:ಒತ್ತುವುದುಂ ಶರಮ್ ಇರದೆ ಎಯ್ದುತ್ತೆ (ರಥವನ್ನು ಒತ್ತಲಾಗಿ, ಬಾಣವು ಸುಮ್ಮನಿರದೆ ಹತ್ತಿರಬರುತ್ತಾ) ಕಿರೀಟಿಯ ಕಿರೀಟಮಂ ಕೊರೆದೊಡೆ (ಅರ್ಜುನನ ಕಿರೀಟವನ್ನು ಕತ್ತರಿಸಲು) ಪರ್ವಿತ್ತು ಭಯಂ ಇಂದ್ರನಂ (ಆಗ ಇಂದ್ರನನ್ನು ಭಯವಾವರಿಸಿತು.) ಮುತ್ತಿತ್ತು ಅೞಲ್ ಈಶ್ವರನನು ಆಗಳ್ ಆ ಸಂಕಟದೊಳ್ (ಆ ಸಂಕಟದಲ್ಲಿ ದುಖವು ಈಶ್ವರನನ್ನು ಆವರಿಸಿಕೊಂಡಿತು)
ಪದ್ಯ-೨೦೧:ಅರ್ಥ:ರಥವನ್ನು ಒತ್ತಲಾಗಿ, ಬಾಣವು ಸುಮ್ಮನಿರದೆ ಹತ್ತಿರಬರುತ್ತಾ ಅರ್ಜುನನ ಕಿರೀಟವನ್ನು ಕತ್ತರಿಸಲು ಆಗ ಇಂದ್ರನನ್ನು ಭಯವಾವರಿಸಿತು. ಆ ಸಂಕಟದಲ್ಲಿ ದುಖವು ಈಶ್ವರನನ್ನು ಆವರಿಸಿಕೊಂಡಿತು.
ಒಳಗಱಿಯದೆ ಕೌರವಬಳ
ಜಳನಿಧಿ ಬೊಬ್ಬಿಱದು ಮೇಲುದಂ ಬೀಸಿದೊಡು|
ಚ್ಚಳಿಸಿದ ಮಕುಟದ ಮಣಿಗಳ
ಪೊಳೆಪುಗಳಿಂದುಳ್ಕಮೆೞ್ದುವೆಂಟುಂ ದೆಸೆಯೊಳ್|| ೨೦೨ ||
ಪದ್ಯ-೨೦೨:ಪದವಿಭಾಗ-ಅರ್ಥ:ಒಳಗ ಅಱಿಯದೆ ಕೌರವಬಳಜಳನಿಧಿ (ಇದರ ರಹಸ್ಯವನ್ನರಿಯದೆ ಕೌರವಸೇನಾಸಮುದ್ರವು)ಬೊಬ್ಬಿಱದು ಮೇಲುದಂ ಬೀಸಿದೊಡೆ (ಆರ್ಭಟಮಾಡಿ (ಸಂತೋಷದಿಂದ) ಉತ್ತರೀಯವನ್ನು ಬೀಸಲು) ಉಚ್ಚಳಿಸಿದ ಮಕುಟದ ಮಣಿಗಳ ಪೊಳೆಪುಗಳಿಂದ ಉಳ್ಕಮೆೞ್ದುವು ಎಂಟುಂ ದೆಸೆಯೊಳ್ (ಚಿಮ್ಮಿದ ಕಿರೀಟದ ರತ್ನಗಳ ಹೊಳಪಿನಿಂದ ಎಂಟುದಿಕ್ಕುಗಳಲ್ಲಿಯೂ ಉಲ್ಖಾಪಾತಗಳು ಎದ್ದುವು.)
ಪದ್ಯ-೨೦೨:ಅರ್ಥ:ಇದರ ರಹಸ್ಯವನ್ನರಿಯದೆ ಕೌರವಸೇನಾಸಮುದ್ರವು ಆರ್ಭಟಮಾಡಿ (ಸಂತೋಷದಿಂದ) ಉತ್ತರೀಯವನ್ನು ಬೀಸಲು ಚಿಮ್ಮಿದ ಕಿರೀಟದ ರತ್ನಗಳ ಹೊಳಪಿನಿಂದ ಎಂಟುದಿಕ್ಕುಗಳಲ್ಲಿಯೂ ಉಲ್ಖಾಪಾತಗಳು ಎದ್ದುವು.
ವ|| ಅಂತು ರುಂದ್ರನೀಳಾದ್ರೀಂದ್ರ ರತ್ನಕೂಟಾಗ್ರಮುದಗ್ರ ವಜ್ರಘಾತದಿಂದುರುಳ್ವಂತೆ ರತ್ನಮಕುಟಮರಾತಿಶಾತಶರದಿನುರುಳ್ವುದು ಮಳಿನೀಳೋಜ್ವಳ ಸಹಸ್ರಕುಂತಳಂಗಳ್ ಪರಕಲಿಸಿ ಬಂದು ಪೊಱಮುಯ್ವನಳ್ಳಿಱಿಯೆ ಪಚ್ಚುಗಂಟಿಕ್ಕಿ ಗಾಂಡೀವಧನ್ವಂ ಸನ್ನದ್ಧನಾಗಿರ್ಪನ್ನೆಗಂ-
ವಚನ:ಪದವಿಭಾಗ-ಅರ್ಥ:ಅಂತು ರುಂದ್ರ (ಹಾಗೆ ವಿಸ್ತಾರವೂ) ನೀಳಾದ್ರಿ ಇಂದ್ರ ರತ್ನಕೂಟ ಅಗ್ರಮುದ ಅಗ್ರ (ರತ್ನಮಯವೂ ಆದ ನೀಲಪರ್ವತದ ಶಿಖರಗಳ ತುದಿಯ ಭಾಗವು ) ವಜ್ರಘಾತದಿಂದ ಉರುಳ್ವಂತೆ (ಬಲವಾದ ವಜ್ರಾಯುಧದ ಪೆಟ್ಟಿನಿಂದ ಉರುಳುವ ಹಾಗೆ) ರತ್ನಮಕುಟಂ ಆರಾತಿ ಶಾತ ಶರದಿಂ ಉರುಳ್ವುದುಂ (ರತ್ನಕಿರೀಟವು ಶತ್ರುವಿನ ಹರಿತವಾದ ಬಾಣದಿಂದ ಉರುಳಲು) ಅಳಿನೀಳೋಜ್ವಳ ಸಹಸ್ರಕುಂತಳಂಗಳ್ (ದುಂಬಿಗಳ ಕಪ್ಪುಬಣ್ಣದಂತೆ ಪ್ರಕಾಶಮಾನವಾಗಿರುವ ಸಹಸ್ರ ಗುಂಗುರು ಕೂದಲುಗಳು) ಪರಕಲಿಸಿ ಬಂದು ಪೊಱಮುಯ್ವನ್ ಅಳ್ಳಿಱಿಯೆ (ಕೆದರಿ ಬಂದು ಹೆಗಲಿನ ಹೊರಭಾಗವನ್ನು ಮುಟ್ಟಲು) ಪಚ್ಚುಗಂಟಿಕ್ಕಿ ಗಾಂಡೀವಧನ್ವಂ ಸನ್ನದ್ಧನಾಗಿರ್ಪ ಅನ್ನೆಗಂ (ಅದನ್ನು ಎರಡು ಭಾಗವಾಗಿ ಗಂಟಿಕ್ಕಿ ಅರ್ಜುನನು ಸಿದ್ಧವಾಗುವಷ್ಟರಲ್ಲಿ)-
ವಚನ:ಅರ್ಥ:ಕಿರೀಟವು ಬೀಳಲು, ಹಾಗೆ ವಿಸ್ತಾರವೂ ರತ್ನಮಯವೂ ಆದ ನೀಲಪರ್ವತದ ಶಿಖರಗಳ ತುದಿಯ ಭಾಗವು ಬಲವಾದ ವಜ್ರಾಯುಧದ ಪೆಟ್ಟಿನಿಂದ ಉರುಳುವ ಹಾಗೆ ರತ್ನಕಿರೀಟವು ಶತ್ರುವಿನ ಹರಿತವಾದ ಬಾಣದಿಂದ ಉರುಳಲು ದುಂಬಿಗಳ ಕಪ್ಪುಬಣ್ಣದಂತೆ ಪ್ರಕಾಶಮಾನವಾಗಿರುವ ಸಹಸ್ರ ಗುಂಗುರು ಕೂದಲುಗಳು ಕೆದರಿ ಬಂದು ಹೆಗಲಿನ ಹೊರಭಾಗವನ್ನು ಮುಟ್ಟಲು ಅದನ್ನು ಎರಡು ಭಾಗವಾಗಿ ಗಂಟಿಕ್ಕಿ ಅರ್ಜುನನು ಸಿದ್ಧವಾಗುವಷ್ಟರಲ್ಲಿ-.
ಚಂ|| ಪುರಿಗಣೆಯಪ್ಪ ಕಾರಣದಿನಂತದು ತಪ್ಪಿದೆನೆಂದು ನೊಂದು ಪ
ಲ್ಮೊರೆದಹಿ ರೂಪದಿಂ ಮಗುೞ್ದು ಬಂದಿನನಂದನನಲ್ಲಿಗೆನ್ನನಂ|
ತರಿಸದೆ ತೊಟ್ಟು ಬೇಗಮಿಸು ವೈರಿಯನೀಗಳೆ ಕೊಂದಪೆಂ ರಸಾಂ
ಬರ ಧರಣೀವಿಭಾಗದೊಳಗಾವೆಡೆವೊಕ್ಕೊಡಮಂಗನಾಯಕಾ|| ೨೦೩ ||
ಪದ್ಯ-೨೦೩:ಪದವಿಭಾಗ-ಅರ್ಥ:ಪುರಿಗಣೆಯಪ್ಪ ಕಾರಣದಿಂ ಅಂತುಅದು ತಪ್ಪಿದೆನು ಎಂದು ನೊಂದು(ವೇಗದ ಅಸ್ತ್ರವಾದ (ಹುರಿಗಣೆಯಾದ) ಕಾರಣದಿಂದ ಹಾಗೆ ತಪ್ಪುಮಾಡಿದೆನು ಎಂದು ವ್ಯಥೆಪಟ್ಟು) ಪಲ್ಮೊರೆದಹಿ ರೂಪದಿಂ ಮಗುೞ್ದು ಬಂದು ಇನನಂದನನಲ್ಲಿಗೆ (ಹಲ್ಲುಕಡಿದು ಶಬ್ದಮಾಡಿ ಹಾವಿನ ರೂಪದಿಂದ ಪುನ ಕರ್ಣನ ಹತ್ತಿರಕ್ಕೆ ಬಂದು) ಎನ್ನನಂ ತರಿಸದೆ ತೊಟ್ಟು ಬೇಗಂ ಇಸು (‘ಕರ್ಣಾ, ನನ್ನನ್ನು ಸಾವಕಾಶಮಾಡದೆ ಬಿಲ್ಲಿನಲ್ಲಿ ತೊಡಿಸಿ ಬೇಗ ಹೂಡು;) ವೈರಿಯನು ಈಗಳೆ ಕೊಂದಪೆಂ ರಸ ಅಂಬರ ಧರಣೀವಿಭಾಗದೊಳಗೆ (ಸ್ವರ್ಗಮರ್ತ್ಯಪಾತಾಳವಿಭಾಗದಲ್ಲಿ) ಆವೆಡೆ ವೊಕ್ಕೊಡಂ ಅಂಗನಾಯಕಾ (ಯಾವಸ್ಥಳದಲ್ಲಿ ಪ್ರವೇಶಮಾಡಿದ್ದರೂ ಶತ್ರುವನ್ನು ಈಗಲೇ ಕೊಲ್ಲುತ್ತೇನೆ ಕರ್ಣಾ’ ಎಂದಿತು.)
ಪದ್ಯ-೨೦೩:ಅರ್ಥ: ಸರ್ಪವು, ವೇಗದ ಅಸ್ತ್ರವಾದ (ಹುರಿಗಣೆಯಾದ) ಕಾರಣದಿಂದ ಹಾಗೆ ತಪ್ಪುಮಾಡಿದೆನು ಎಂದು ವ್ಯಥೆಪಟ್ಟು, ಹಲ್ಲುಕಡಿದು ಶಬ್ದಮಾಡಿ ಹಾವಿನ ರೂಪದಿಂದ ಪುನ ಕರ್ಣನ ಹತ್ತಿರಕ್ಕೆ ಬಂದು ‘ಕರ್ಣಾ, ನನ್ನನ್ನು ಸಾವಕಾಶಮಾಡದೆ ಬಿಲ್ಲಿನಲ್ಲಿ ತೊಡಿಸಿ ಬೇಗ ಹೂಡು; ಸ್ವರ್ಗಮರ್ತ್ಯಪಾತಾಳವಿಭಾಗದಲ್ಲಿ ಯಾವಸ್ಥಳದಲ್ಲಿ ಪ್ರವೇಶಮಾಡಿದ್ದರೂ ಶತ್ರುವನ್ನು ಈಗಲೇ ಕೊಲ್ಲುತ್ತೇನೆ’ ಎಂದಿತು.
ವ|| ಎಂಬುದುಂ ನೀನಾರ್ಗೇನೆಂಬೆಯದಾವುದು ಕಾರಣದಿಂದಮೆನ್ನ ದೊಣೆಯಂ ಪೊಕ್ಕಿರ್ದೆಯೆಂದೊಡಾನಶ್ವಸೇನನೆಂಬ ಪನ್ನಗನೆನೆಂದು ತನ್ನ ವೈರ ಕಾರಣನಱಿಯೆ ಪೇೞ್ದೊಡೆ ದರಹಸಿತವದನಾರವಿಂದನಾಗಿ-
ವಚನ:ಪದವಿಭಾಗ-ಅರ್ಥ: ಎಂಬುದುಂ ನೀನು ಆರ್ಗೆ? ಏನೆಂಬೆ? (‘ಸರ್ಪ ಹಾಗೆನ್ನಲು, ನೀನು ಯಾರು? ಏನು ಹೇಳುತ್ತಿರುವೆ?’ )ಅದು ಆವುದು ಕಾರಣದಿಂದಂ ಎನ್ನ ದೊಣೆಯಂ ಪೊಕ್ಕಿರ್ದೆ ಯೆಂದೊಡೆ (ಯಾವ ಕಾರಣದಿಂದ ನನ್ನ ಬತ್ತಳಿಕೆಯನ್ನು ಹೊಕ್ಕಿದ್ದೆ’ ಎನ್ನಲು) ಅನಶ್ವಸೇನನೆಂಬ ಪನ್ನಗನು ಎನೆ (‘ನಾವು ಅಶ್ವಸೇನನೆಂಬ ಹಾವು’ ಎಂದು ತಿಳಿಸಿ) ಎಂದು ತನ್ನ ವೈರ ಕಾರಣನು ಅಱಿಯೆ ಪೇೞ್ದೊಡೆ (ತನ್ನ ವೈರಕ್ಕೆ ಕಾರಣವನ್ನು ಸ್ಪಷ್ಟವಾಗಿ ತಿಳಿಸಲು) ದರಹಸಿತವದನ ಅರವಿಂದನಾಗಿ (ಮುಗುಳುನಗೆಯಿಂದ ಕೂಡಿದ ಮುಖವುಳ್ಳವನಾಗಿ)-
ವಚನ:ಅರ್ಥ:‘ಸರ್ಪ ಹಾಗೆನ್ನಲು, ನೀನು ಯಾರು, ಯಾರ ಕಡೆಯವನು? ಏನು ಹೇಳುತ್ತಿರುವೆ?’ ಯಾವ ಕಾರಣದಿಂದ ನನ್ನ ಬತ್ತಳಿಕೆಯನ್ನು ಹೊಕ್ಕಿದ್ದೆ’ ಎನ್ನಲು ‘ನಾವು ಅಶ್ವಸೇನನೆಂಬ ಹಾವು’ ಎಂದು ತಿಳಿಸಿ ತನ್ನ ವೈರಕ್ಕೆ ಕಾರಣವನ್ನು ಸ್ಪಷ್ಟವಾಗಿ ತಿಳಿಸಲು ಮುಗುಳುನಗೆಯಿಂದ ಕೂಡಿದ ಮುಖವುಳ್ಳವನಾಗಿ
ಕಂ|| ಶರರೂಪದೊಳಿರೆ ನಿನ್ನಂ
ಶರಮೆಂದಾಂ ತೊಟ್ಟೆನಱಿದು ತುಡುವೆನೆ ನಿನ್ನಂ|
ನೆರದೊಳ್ ಕೊಲ್ವಂತೆನಗೇ
ನರಿಯನೆ ಗಾಂಡೀವಧನ್ವನೆಂಬುದುಮಾಗಳ್|| ೨೦೪ ||
ಪದ್ಯ-೨೦೪:ಪದವಿಭಾಗ-ಅರ್ಥ:ಶರರೂಪದೊಳು ಇರೆ ನಿನ್ನಂ ಶರಮೆಂದು ಆಂ ತೊಟ್ಟೆನು (‘ಬಾಣಾಕಾರದಿಂದಿರಲು ನಿನ್ನನ್ನು ಬಾಣವೆಂದು ಬಿಲ್ಲಿಗೆ ಹೂಡಿದೆನು.) ಅಱಿದು ತುಡುವೆನೆ ನಿನ್ನಂ (ತಿಳಿದೂ ನಿನ್ನನ್ನು ತೊಡುವೆನೆ?) ನೆರದೊಳ್ ಕೊಲ್ವಂತೆ ಎನಗೇನು ಅರಿಯನೆ (ನಿನ್ನ ಸಹಾಯದಿಂದ ಕೊಲ್ಲುವಷ್ಟು ಅರ್ಜುನನು ನನಗೆ ಅಸಾಧ್ಯನೆ?’) ಗಾಂಡೀವಧನ್ವನು ಎಂಬುದುಂ ಆಗಳ್ (ಅರ್ಜುನನು ಎನ್ನಲು- ಆಗ-)
ಪದ್ಯ-೨೦೪:ಅರ್ಥ: ‘ಬಾಣಾಕಾರದಿಂದಿರಲು ನಿನ್ನನ್ನು ಬಾಣವೆಂದು ಬಿಲ್ಲಿಗೆ ಹೂಡಿದೆನು. (ನೀನು ಯಾರೆಂದು) ತಿಳಿದೂ ನಿನ್ನನ್ನು ತೊಡುವೆನೆ? ನಿನ್ನ ಸಹಾಯದಿಂದ ಕೊಲ್ಲುವಷ್ಟು ಅರ್ಜುನನು ನನಗೆ ಅಸಾಧ್ಯನೆ?’ ಎಂದನು- ಎನ್ನಲು- ಆಗ-
ನೀಂ ನಿನ್ನ ಪಗೆಯನಾರ್ಪೊಡ
ದಂ ನೆಱಪೆನೆ ನೆಗೆದು ಬರ್ಪ ವಿಪಪನ್ನಗನಂ|
ಪನ್ನತನೆಡೆಯೊಳರಿಗಂ
ತನ್ನಯ ಗರುಡಾಸ್ತ್ರದಿಂದೆ ಕುಱಿದಱಿದಱಿದಂ|| ೨೦೫ ||
ಪದ್ಯ-೨೦೫:ಪದವಿಭಾಗ-ಅರ್ಥ:ನೀಂ ನಿನ್ನ ಪಗೆಯನು ಆರ್ಪೊಡೆ ಅದಂ ನೆಱಪು ಎನೆ (ಸರ್ಪವು ‘ಹಾಗಾದರೆ ಶತ್ರುತ್ವವನ್ನು ಸಮರ್ಥನಾದರೆ ನೀನು ಪೂರ್ಣಮಾಡು’ ಎಂದು ಹೇಳಿ) ನೆಗೆದು ಬರ್ಪ ವಿಪಪನ್ನಗನಂ (ಅರ್ಜುನನ ಕಡೆಗೆ ಹಾರಿ ಬರುತ್ತಿದ್ದ ವಿಷಸರ್ಪವನ್ನು) ಪನ್ನತನು ಎಡೆಯೊಳ್ ಅರಿಗಂ ತನ್ನಯ ಗರುಡಾಸ್ತ್ರದಿಂದೆ (ಶೂರನಾದ ಅರಿಗನು ಮಧ್ಯಮಾರ್ಗದಲ್ಲಿಯೇ ಗರುಡಬಾಣದಿಂದ) ಕುಱಿದಱಿದ -ಕುರಿದರಿದಂತೆ- ಅಱಿದಂ ಅರಿದಂ (ಕುರಿಯನ್ನು ಕತ್ತರಿಸುವಂತೆ ಕತ್ತರಿಸಿದನು.)
ಪದ್ಯ-೨೦೫:ಅರ್ಥ:ಸರ್ಪವು ‘ಹಾಗಾದರೆ ಶತ್ರುತ್ವವನ್ನು ಸಮರ್ಥನಾದರೆ ನೀನು ಪೂರ್ಣಮಾಡು’ ಎಂದು ಹೇಳಿ, ಅರ್ಜುನನ ಕಡೆಗೆ ಹಾರಿ ಬರುತ್ತಿದ್ದ ವಿಷಸರ್ಪವನ್ನೂ ಶೂರನಾದ ಅರ್ಜುನನು ಮಧ್ಯಮಾರ್ಗದಲ್ಲಿಯೇ ಗರುಡಬಾಣದಿಂದ ಕುರಿಯನ್ನು ಕತ್ತರಿಸುವಂತೆ ಕತ್ತರಿಸಿದನು.

ಕರ್ಣನ ವಧೆ[ಸಂಪಾದಿಸಿ]

ವ|| ಆಗಳಂಗರಾಜಂಗೆ ಶಲ್ಯಂ ಕಿನಿಸಿ ಮುಳಿಸಿನೊಳೆ ಕಣ್ಗಾಣದಿಂತಪ್ಪೇಕಗ್ರಾಹಿಗ ಮೊರಂಟಂಗಂ ರಥಮನೆಸಗೆನೆಂದು ವರೂಥದಿಂದಿೞಿದು ಪೋಗೆ-
ವಚನ:ಪದವಿಭಾಗ-ಅರ್ಥ:ಆಗಳ್ ಅಂಗರಾಜಂಗೆ ಶಲ್ಯಂ ಕಿನಿಸಿ (ಆಗ ಕರ್ಣನ ಬಗೆಗೆ ಶಲ್ಯನು ಕೋಪಿಸಿಕೊಂಡು) ಮುಳಿಸಿನೊಳೆ ಕಣ್ಗಾಣದ ಇಂತಪ್ಪ ಏಕಗ್ರಾಹಿಗಂ ಒರಂಟಂಗಂ (ಕೋಪದಿಂದ ಕಣ್ಗಾಣದ ಇಂತಹ ಹಟಮಾರಿಗೂ ಒರಟನಿಗೂ) ರಥಮನು ಎಸಗೆನೆಂದು ವರೂಥದಿಂದ ಇೞಿದು ಪೋಗೆ (ತಾನು ತೇರನ್ನು ನಡೆಸುವುದಿಲ್ಲವೆಂದು ರಥದಿಂದ ಇಳಿದು ಹೋಗಲು)-
ವಚನ:ಅರ್ಥ:ಆಗ ಕರ್ಣನ ಬಗೆಗೆ ಶಲ್ಯನು ಕೋಪಿಸಿಕೊಂಡು, ಕೋಪದಿಂದ ಕಣ್ಗಾಣದ ಇಂತಹ ಹಟಮಾರಿಗೂ ಒರಟನಿಗೂ, ತಾನು ತೇರನ್ನು ನಡೆಸುವುದಿಲ್ಲವೆಂದು ರಥದಿಂದ ಇಳಿದು ಹೋದನು. ಆಗ-
ಚಂ|| ಅರಿಗನ ಬಟ್ಟಿನಂಬುಗಳ ಬಲ್ಸರಿ ಸೋಂಕುಗುಮೇೞಿಮೆನ್ನ ತೋ
ಳ್ನೆರಮೆನಗೆನ್ನ ಬಿಲ್ಲೆ ನೆರಮೆಂದು ವರೂಥತುರಂಗಮಂಗಳಂ||
ತುರಿಪದೆ ತಾನೆ ಚೋದಿಸುತುಮಾರ್ದಿಸುತುಂ ಕಡಿಕೆಯ್ದು ಕಾದೆ ಭೀ
ಕರ ರಥಚಕ್ರಮಂ ಪಿಡಿದು ನುಂಗಿದಳೊರ್ಮೆಯೆ ಧಾತ್ರಿ ಕೋಪದಿಂ|| ೨೦೬ ||
ಪದ್ಯ-೨೦೬:ಪದವಿಭಾಗ-ಅರ್ಥ:ಅರಿಗನ ಬಟ್ಟಿನಂಬುಗಳ ಬಲ್ಸರಿ ಸೋಂಕುಗುಂ (ಅರ್ಜುನನ ಗಟ್ಟಿ ಬಾಣಗಳ ದೊಡ್ಡ ಮಳೆಯು ತಗುಲುತ್ತಿದೆ) ಏೞಿಂ ಎನ್ನ ತೋಳ್ ನೆರಂ ಎನಗೆ (ನನ್ನ ತೋಳುಗಳು ನನಗೆ ಸಹಾಯ,ನೆರವು,) ಎನ್ನ ಬಿಲ್ಲೆ ನೆರಂ ಎಂದು (ನನ್ನ ಬಿಲ್ಲೇ ಸಹಾಯ’ ಎಂದು) ವರೂಥ ತುರಂಗಮಂಗಳಂ ತುರಿಪದೆ (ರಥದ ಕುದುರೆಗಳನ್ನು ವೇಗವಾಗಿ) ತಾನೆ ಚೋದಿಸುತುಂ ಆರ್ದಿಸುತುಂ ಕಡಿಕೆಯ್ದು ಕಾದೆ (ತಾನೇ ನಡೆಸುತ್ತ ಆರ್ಭಟಮಾಡಿ ತೀವ್ರವಾಗಿ ಯುದ್ಧಮಾಡಲು) ಭೀಕರ ರಥಚಕ್ರಮಂ ಪಿಡಿದು ನುಂಗಿದಳು ಒರ್ಮೆಯೆ ಧಾತ್ರಿ ಕೋಪದಿಂ (ಭೀಕರವಾಗಿ ತೇರಿನ ಚಕ್ರವನ್ನು ಹಿಡಿದು ಇದಕ್ಕಿದ್ದ ಹಾಗೆ ಭೂಮಿಯು ನುಂಗಿದಳು)
ಪದ್ಯ-೨೦೬:ಅರ್ಥ:‘ಅರ್ಜುನನ ಗಟ್ಟಿ ಬಾಣಗಳ ದೊಡ್ಡ ಮಳೆಯು ತಗುಲುತ್ತಿದೆ ಏಳಿ, ನನ್ನ ತೋಳುಗಳು ನನಗೆ ಸಹಾಯ, ನನ್ನ ಬಿಲ್ಲೇ ಸಹಾಯ’ ಎಂದು ರಥದ ಕುದುರೆಗಳನ್ನು ವೇಗವಾಗಿ ತಾನೇ ನಡೆಸುತ್ತ ಆರ್ಭಟಮಾಡಿ ತೀವ್ರವಾಗಿ ಯುದ್ಧಮಾಡಲು, ಭೀಕರವಾಗಿ ತೇರಿನ ಚಕ್ರವನ್ನು ಹಿಡಿದು ಇದಕ್ಕಿದ್ದ ಹಾಗೆ ಭೂಮಿಯು ನುಂಗಿದಳು (ಕರ್ಣನ ತೇರಿನ ಗಾಲಿಗಳು ಇದಕ್ಕಿದ್ದ ಹಾಗೆ ಭೂಮಿಯಲ್ಲಿ ಹೂತುಹೋದುವು)
ವ|| ಅಂತು ತನ್ನಂ ಮುನ್ನೆ ಮುಯ್ಯೇೞ್ ಸೂೞ್ವರಮೊಲ್ಲಣಿಗೆಯಂ ಪಿೞಿವಂತೆ ಪಿಂಡಿ ಪಿೞಿದ ಪಗೆಗೆ ರಥಚಕ್ರಮಂ ನುಂಗುವುದುಂ ರಥದಿಂದಿೞಿದು ಗಾಲಿಯನೆತ್ತುವಾಗಳಿವನನೀ ಪದದೊಳ್ ಕಡಿದೊಟ್ಟದಾಗಳ್ ಗೆಲಲಾರೆಯೆಂದು ನುಡಿದ ಮುಕುಂದನ ನುಡಿಗೆ ಕೊಕ್ಕರಿಸಿ ಜಗದೇಕಮಲ್ಲನಿಂತೆಂದಂ-
ವಚನ:ಪದವಿಭಾಗ-ಅರ್ಥ:ಅಂತು ತನ್ನಂ ಮುನ್ನೆ ಮುಯ್ಯೇೞ್ ಸೂೞ್ವರಂ (ಹಿಂದೆ 'ಹಾಗೆ ತನ್ನನ್ನು ಇಪ್ಪತ್ತೊಂದು ಸಲ) ಒಲ್ಲಣಿಗೆಯಂ ಪಿೞಿವಂತೆ ಪಿಂಡಿ ಪಿೞಿದ ಪಗೆಗೆ (ಒದ್ದೆಯ ಬಟ್ಟೆಯನ್ನು ಹಿಂಡುವಂತೆ ಹಿಂಡಿದ ದ್ವೇಷಕ್ಕೆ) ರಥಚಕ್ರಮಂ ನುಂಗುವುದುಂ (ರಥಚಕ್ರವನ್ನು ಭೂಮಿಯು ನುಂಗಲು) ರಥದಿಂದ ಇೞಿದು ಗಾಲಿಯನು ಎತ್ತುವಾಗಳ್ (ರಥದಿಂದಿಳಿದು ಕರ್ಣನು ಗಾಲಿಯನ್ನು ಎತ್ತುತ್ತಿದ್ದನು, ಆಗ-) ಇವನನು ಈ ಪದದೊಳ್ ಕಡಿದು ಒಟ್ಟದಾಗಳ್ ಗೆಲಲಾರೆಯೆಂದು (ಇವನನ್ನು ಈ ಸ್ಥಿತಿಯಲ್ಲಿ (ಸನ್ನಿವೇಶದಲ್ಲಿ) ಕತ್ತರಿಸಿ ರಾಶಿಮಾಡದಿದ್ದರೆ ಗೆಲ್ಲಲಾರೆ ಎಂದು) ನುಡಿದ ಮುಕುಂದನ ನುಡಿಗೆ ಕೊಕ್ಕರಿಸಿ (ಹೇಳಿದ ಕೃಷ್ಣನ ಮಾತಿಗೆ ಅಸಹ್ಯಪಟ್ಟು), ಜಗದೇಕಮಲ್ಲನು ಇಂತೆಂದಂ (ಅರ್ಜುನನು ಹೀಗೆ ಹೇಳಿದನು)-
'ವಚನ:ಅರ್ಥ: ಹಿಂದೆ 'ಹಾಗೆ ತನ್ನನ್ನು ಇಪ್ಪತ್ತೊಂದು ಸಲ ಒದ್ದೆಯ ಬಟ್ಟೆಯನ್ನು ಹಿಂಡುವಂತೆ ಹಿಂಡಿದ ದ್ವೇಷಕ್ಕೆ ರಥಚಕ್ರವನ್ನು ಭೂಮಿಯು ನುಂಗಲು, ರಥದಿಂದಿಳಿದು ಕರ್ಣನು ಗಾಲಿಯನ್ನು ಎತ್ತುತ್ತಿದ್ದನು. ಆಗ, ಇವನನ್ನು ಈ ಸ್ಥಿತಿಯಲ್ಲಿ (ಸನ್ನಿವೇಶದಲ್ಲಿ) ಕತ್ತರಿಸಿ ರಾಶಿಮಾಡದಿದ್ದರೆ ಗೆಲ್ಲಲಾರೆ ಎಂದು ಹೇಳಿದ ಕೃಷ್ಣನ ಮಾತಿಗೆ ಅಸಹ್ಯಪಟ್ಟು ಅರ್ಜುನನು ಹೀಗೆ ಹೇಳಿದನು.
ಮ|| ಬಱುವಂ ಸಾರಥಿಯಿಲ್ಲ ಮೆಯ್ಗೆ ಮರೆಯುಂ ತಾನಿಲ್ಲದೆಂತೀಗಳಾ
ನಿಱವೆಂ ನೋಡಿರೆ ಮತ್ತಮೊಂದನಿಸಲುಂ ಕೆಯ್ಯೇೞದೇಕೆಂದುಮಾ|
ನಱಿಯೆಂ ಕೂರ್ಮೆಯೆ ಮಿಕ್ಕು ಬಂದಪುದಿದರ್ಕೇಗೆಯ್ವೆನೇನೆಂಬೆನಾಂ|
ಮಱೆದೆಂ ಮುನ್ನಿನದೊಂದು ವೈರಮನಿದಿಂತೇಕಾರಣಂ ಭೂಧರಾ|| ೨೦೭ ||
ಪದ್ಯ-೨೦೭:ಪದವಿಭಾಗ-ಅರ್ಥ: ಬಱುವಂ ಸಾರಥಿಯಿಲ್ಲ ಮೆಯ್ಗೆ ಮರೆಯುಂ ತಾನಿಲ್ಲದೆಂತೆ (ಬರಿದಾದವನು (ನಿಸ್ಸಹಾಯಕನು), ಸಾರಥಿಯೂ ಇಲ್ಲ; ಶರೀರಕ್ಕೆ ಮರೆಯಾದ ಕವಚವೂ ಇಲ್ಲ;) ಈಗಳು ಆನಿಱವೆಂ (ಆನಿಸುವೆಂ, ಆನು ಇಸುವೆಂ) ನೋಡಿರೆ ಮತ್ತಂ ಒಂದನು ಇಸಲುಂ ಕೆಯ್ಯೇೞದು (ನೋಡಿರಿ, ಮತ್ತೆ- ಮತ್ತೊಂದು ವಿಚಾರ, ಒಂದು ಬಾಣವನ್ನು ಹೊಡೆಯುವುದಕ್ಕೂ ಕೈಗಳು ಏಳುವುದಿಲ್ಲ.) ಏಕೆಂದುಂ ಆನಱಿಯೆಂ ಕೂರ್ಮೆಯೆ ಮಿಕ್ಕು ಬಂದಪುದು (ಏತಕ್ಕೆಂದು ನಾನು ತಿಳಿಯಲಾರೆ; ಪ್ರೀತಿಯೆ ಉಕ್ಕಿ ಬರುತ್ತಿದೆ.) ಇದರ್ಕೆ ಏಗೆಯ್ವೆನು (ಇದಕ್ಕೆ ಏನು ಮಾಡಲಿ,) ಏನೆಂಬೆ ನಾಂ ಮರೆದೆಂ ಮುನ್ನಿನದೊಂದು ವೈರಮನು (ಏನೆಂದು ಹೇಳಲಿ; ನಾನು ಹಿಂದಿನ ದ್ವೇಷವನ್ನು ಮರೆತೆನು;) ಇದಿಂತು ಏಕಾರಣಂ ಭೂಧರಾ (ಕೃಷ್ಣಾ ಇದಕ್ಕೇನು ಕಾರಣ?)
ಪದ್ಯ-೨೧೭:ಅರ್ಥ:ಅರ್ಜುನ ಹೇಳಿದ, ಕರ್ಣನು ಈಗ- ಬರಿದಾದವನು (ನಿಸ್ಸಹಾಯಕನು), ಸಾರಥಿಯೂ ಇಲ್ಲ; ಶರೀರಕ್ಕೆ ಮರೆಯಾದ ಕವಚವೂ ಇಲ್ಲ; ನೋಡಿರಿ ನಾನು ಈಗ ನಾನು ಹೊಡೆಯಲೇ?; ಮತ್ತೊಂದು ವಿಚಾರ, ಒಂದು ಬಾಣವನ್ನು ಹೊಡೆಯುವುದಕ್ಕೂ ಕೈಗಳು ಏಳುವುದಿಲ್ಲ. ಏತಕ್ಕೆಂದು ನಾನು ತಿಳಿಯಲಾರೆ; ಪ್ರೀತಿಯೆ ಉಕ್ಕಿ ಬರುತ್ತಿದೆ. ಇದಕ್ಕೆ ಏನು ಮಾಡಲಿ, ಏನೆಂದು ಹೇಳಲಿ; ನಾನು ಹಿಂದಿನ ದ್ವೇಷವನ್ನು ಮರೆತೆನು; ಕೃಷ್ಣಾ ಇದಕ್ಕೇನು ಕಾರಣ?
  • ಟಿಪ್ಪಣಿ:: ಮೂಲ ಭಾರತದಲ್ಲಿ ಅರ್ಜುನನು ಕರ್ಣನ್ನು ಹೊಡೆಯುವಾಗ ಅವನ ಬಗೆಗೆ ಕರುಣೆ ಪ್ರೀತಿ ತೋರಿದ ವಿಷಯ ಇಲ್ಲ. ಇದು ಪಂಪನ ಕವಿಸಮಯವೋ ಅಥವಾ ಬೇರೆಕಾವ್ಯದಲ್ಲಿ ಇದ್ದುದೋ ಅರಿಯುವುದಿಲ್ಲ. ಇದೇ ಭಾಗ ಕುಮಾರವ್ಯಾಸನ ಭಾರತದಲ್ಲಿ ಇನ್ನೂ ಹೆಚ್ಚು ಭಾವುಕತೆಯಿಂದ ಬಂದಿದೆ. ವ್ಯಾಸಭಾರತದಲ್ಲಿ ರಥದ ಗಾಲಿಹುಗಿದಾಗ ಕರ್ಣ ಸ್ವಲ್ಪ ತದೆಯಲು ಹೇಳಿ, ನಿರಾಯುಧನಾದ ತನನ್ನನ್ನು ಹೊಡೆಯುವುದು ಧರ್ಮವಲ್ಲವೆಂದು ಹೇಳುತ್ತಾನೆ ಅದಕ್ಕೆ ಕೃಷ್ಣ ಆಭಿಮನ್ಯುವನ್ನು ಕೊಲ್ಲುವಾಗ ದ್ರೌಪದಿಯನ್ನು ಸಭೆಗೆ ಎಳೆದಾಗ ನಿನ್ನಧರ್ಮ ಎಲ್ಲಿ ಹೋಗಿತ್ತು ಎನ್ನುತ್ತಾನೆ.ಅದಕ್ಕೆ ಕರ್ಣ ನಾಚಿಕೊಳ್ಳುತ್ತಾನೆ. ಗಾಲಿಯನ್ನು ಎತ್ತಿ ನಂತರ ಯುದ್ಧಕ್ಕೆ ನಿಲ್ಲುವನು. (ಡಿ.ಎಲ್.ಎನ್.)
ವ|| ಎಂಬುದುಮೆನಿತಱಿಯದಿರ್ದೊಡಂ ಸೋದರಿಕೆಯೆ ಮಿಕ್ಕು ಬರ್ಕುಮಾಗದೆಯೆಂದು ತನ್ನಂತರ್ಗತದೊಳ್ ಬಗೆದಸುರಾಂತಕನಿಂತೆಂದಂ-
ವಚನ:ಪದವಿಭಾಗ-ಅರ್ಥ:ಎಂಬುದುಂ ಅನಿತು ಅಱಿಯದಿರ್ದೊಡಂ (ಎನ್ನಲು ಅದು- ವಾಸ್ತವಾಂಶವು ತಿಳಿಯದಿದ್ದರೂ) ಸೋದರಿಕೆಯೆ ಮಿಕ್ಕು ಬರ್ಕುಮಾಗದೆ (ಭ್ರಾತೃಭಾವವೇ ಉಕ್ಕಿ ಬರುತ್ತದೆಯಲ್ಲವೇ) ಎಂದು ತನ್ನ ಅಂತರ್ಗತದೊಳ್ ಬಗೆದ ಅಸುರಾಂತಕನು ಇಂತೆಂದಂ (ಎಂದು ತನ್ನ ಮನಸ್ಸಿನಲ್ಲಿ ತಿಳಿದು ಕೃಷ್ಣನು ಹೀಗೆ ಹೇಳಿದನು)-
ವಚನ:ಅರ್ಥ: ಎನ್ನಲು ಅದು- ವಾಸ್ತವಾಂಶವು ತಿಳಿಯದಿದ್ದರೂ, ಭ್ರಾತೃಭಾವವೇ ಉಕ್ಕಿ ಬರುತ್ತದೆಯಲ್ಲವೇ ಎಂದು ತನ್ನ ಮನಸ್ಸಿನಲ್ಲಿ ತಿಳಿದು ಕೃಷ್ಣನು ಹೀಗೆ ಹೇಳಿದನು-
ಚಂ|| ನೆಗೞ್ದಭಿಮನ್ಯುವಂ ಚಲದಿನಂದಿಱಿದಿಂದು ನಿಜಾಗ್ರಜಾತನಂ
ಸುಗಿವಿನಮೆಚ್ಚು ಬೀರದೊಳೆ ಬೀಗುವ ಸೂತಸುತಂಗೆ ನೀನುಮಾ||
ಜಿಗೆ ಸೆಡೆದಿರ್ದೆಯಪ್ಪೊಡಿರು ಚಕ್ರನಿಘಾತದಿನಿಕ್ಕಿ ಬೀರಮು
ರ್ವಿಗೆ ಪಡಿಚಂದಮಾಗೆ ತಱಿದೊಟ್ಟಿ ಜಯಾಂಗನೆಗಾಣ್ಮನಾದಪೆಂ|| ೨೦೮ ||
ಪದ್ಯ-೨೦೮:ಪದವಿಭಾಗ-ಅರ್ಥ: ನೆಗೞ್ದ ಅಭಿಮನ್ಯುವಂ ಚಲದಿನಂದು ಅಱಿದು (ಅಂದು ಶ್ರೇಷ್ಠನಾದ ಅಭಿಮನ್ನುವನ್ನು ಹಟದಿಂದ ಕತ್ತರಿಸಿ) ಇಂದು ನಿಜಾಗ್ರಜಾತನಂ ಸುಗಿವಿನಮ್ ಎಚ್ಚು (ಇಂದು ನಿಮ್ಮಣ್ಣನಾದ ಧರ್ಮರಾಯನನು ಹೆದರುವಂತೆ ಹೊಡೆದು) ಬೀರದೊಳೆ ಬೀಗುವ ಸೂತಸುತಂಗೆ (ಶೌರ್ಯದಿಂದ ಅಹಂಕಾರಪಡುವ ಸೂತನ ಮಗನಿಗೆ) ನೀನುಂ ಆಜಿಗೆ ಸೆಡೆದಿರ್ದೆಯಪ್ಪೊಡೆ ಇರು (ನೀನು ಯುದ್ಧಕ್ಕೆ ಸೆಟೆದುನಿಲ್ಲದಿದ್ದರೆ ಇರು ) ಚಕ್ರನಿಘಾತದಿಂ ಇಕ್ಕಿ ಬೀರಮ್ ಉರ್ವಿಗೆ ಪಡಿಚಂದಮಾಗೆ ತಱಿದು ಒಟ್ಟಿ (ನಾನೇ ಚಕ್ರಾಯುಧದ ಪೆಟ್ಟಿನಿಂದ ಹೊಡೆದು ಪರಾಶ್ರಮವು ಲೋಕಕ್ಕೆ ಮಾದರಿಯಾಗುವ ಹಾಗೆ ಕತ್ತರಿಸಿ ರಾಶಿ ಮಾಡಿ) ಜಯಾಂಗನೆಗೆ ಆಣ್ಮನಾದಪೆಂ (ಜಯಲಕ್ಷ್ಮಿಗೆ ಒಡೆಯನಾಗುತ್ತೇನೆ. )
ಪದ್ಯ-೨೦೮:ಅರ್ಥ: ಅಂದು ಶ್ರೇಷ್ಠನಾದ ಅಭಿಮನ್ನುವನ್ನು ಹಟದಿಂದ ಕತ್ತರಿಸಿ, ಇಂದು ನಿಮ್ಮಣ್ಣನಾದ ಧರ್ಮರಾಯನನು ಹೆದರುವಂತೆ ಹೊಡೆದು, ಶೌರ್ಯದಿಂದ ಅಹಂಕಾರಪಡುವ ಸೂತನ ಮಗನಿಗೆ ನೀನು ಯುದ್ಧಕ್ಕೆ ಸೆಟೆದುನಿಲ್ಲದಿದ್ದರೆ ಇರು, ನಾನೇ ಚಕ್ರಾಯುಧದ ಪೆಟ್ಟಿನಿಂದ ಹೊಡೆದು ಪರಾಶ್ರಮವು ಲೋಕಕ್ಕೆ ಮಾದರಿಯಾಗುವ ಹಾಗೆ ಕತ್ತರಿಸಿ ರಾಶಿ ಮಾಡಿ ಜಯಲಕ್ಷ್ಮಿಗೆ ಒಡೆಯನಾಗುತ್ತೇನೆ.
ವ|| ಎಂಬನ್ನೆಗಂ ಧರಾತಳಮಳರೆ ರಥದ ಗಾಲಿಯಂ ಕಿೞ್ತು ಮತ್ತಂ ರಥಮನಪ್ರತಿರಥ ನೇಱಿ ನಿಟ್ಟಾಲಿಯಾಗೆ ಮುಟ್ಟೆವಂದು ಕಿಡಿಗುಟ್ಟೆ ಮರ್ಮೋದ್ಘಾಟನಂಗೆಯ್ದು ಕಾದುವಾಗಳ್ ಕಪಿಧ್ವಜಂ ವನದಂತಿಯಂತೆ ಧ್ವಾಂಕ್ಷದ್ವಜಮನುಡಿದು ಕೆಡೆವಿನಮೆಚ್ಚಾಗಳ್-
ವಚನ:ಪದವಿಭಾಗ-ಅರ್ಥ:ಎಂಬನ್ನೆಗಂ ಧರಾತಳಂ ಅಳರೆ ರಥದ ಗಾಲಿಯಂ ಕಿೞ್ತು (ಭೂಮಿಯು ನಡುಗುವ ಹಾಗೆ ತೇರಿನ ಚಕ್ರವನ್ನು ಕಿತ್ತು) ಮತ್ತಂ ರಥಮನು ಅಪ್ರತಿರಥನು ಏಱಿ (ಪುನಃ ಪ್ರತಿರಥನಿಲ್ಲದ ಕರ್ಣನು ರಥವನ್ನು ಹತ್ತಿ) ನಿಟ್ಟಾಲಿಯಾಗೆ ಮುಟ್ಟೆವಂದು ಕಿಡಿಗುಟ್ಟೆ (ದಿಟ್ಟಿಸುವ ದೃಷ್ಟಿಯಿಂದ ಸಮೀಪಕ್ಕೆ ಬಂದು ಕಿಡಿಗಳನ್ನು ಸುರಿಸಿ) ಮರ್ಮೋದ್ಘಾಟನಂ ಗೆಯ್ದು ಕಾದುವಾಗಳ್ (ಮರ್ಮಭೇದಕವಾದ ಮಾತುಗಳನ್ನಾಡಿ ಯುದ್ಧಮಾಡುವಾಗ) ಕಪಿಧ್ವಜಂ ವನದಂತಿಯಂತೆ ಧ್ವಾಂಕ್ಷ-ದ್ವಜಮನು ಉಡಿದು ಕೆಡೆವಿನಂ ಎಚ್ಚಾಗಳ್ (ಕಪಿದ್ವಜನಾದ ಅರ್ಜುನನು ಕಾಡಾನೆಯಂತೆ ಕಾಗೆಯ ಬಾವುಟವನ್ನು ಕತ್ತರಿಸಿ ಕೆಡೆಯುವ ಹಾಗೆ ಹೊಡೆದನು.)-
ವಚನ:ಅರ್ಥ:ಎನ್ನುವಷ್ಟರಲ್ಲಿ ಭೂಮಿಯು ನಡುಗುವ ಹಾಗೆ ತೇರಿನ ಚಕ್ರವನ್ನು ಕಿತ್ತು ಪುನಃ ಪ್ರತಿರಥನಿಲ್ಲದ ಕರ್ಣನು ರಥವನ್ನು ಹತ್ತಿ, ದಿಟ್ಟಿಸುವ ದೃಷ್ಟಿಯಿಂದ ಸಮೀಪಕ್ಕೆ ಬಂದು ಕಿಡಿಗಳನ್ನು ಸುರಿಸಿ ಮರ್ಮಭೇದಕವಾದ ಮಾತುಗಳನ್ನಾಡಿ ಯುದ್ಧಮಾಡುವಾಗ, ಕಪಿದ್ವಜನಾದ ಅರ್ಜುನನು ಕಾಡಾನೆಯಂತೆ ಕಾಗೆಯ ಬಾವುಟವನ್ನು ಕತ್ತರಿಸಿ ಕೆಡೆಯುವ ಹಾಗೆ ಹೊಡೆದನು.
ಕಂ|| ಪೞಯಿಗೆ ಬಿೞ್ದೊಡೆ ಬೀರದ
ಪೞವಿಗೆಯಂ ನಿೞಿಸಲೆಂದೆ ಹರಿ ವಕ್ಷಮನ
ಲ್ಲೞಿವೋಗೆಯೆಚ್ಚು ಮುಳಿಸವ
ಗೞಿಯಿಸುತಿರೆ ನರನ ಬಿಲ್ಲ ಗೊಣೆಯುಮನೆಚ್ಚಂ|| ೨೦೯ ||
ಪದ್ಯ-೨೦೯:ಪದವಿಭಾಗ-ಅರ್ಥ:ಪೞಯಿಗೆ ಬಿೞ್ದೊಡೆ ಬೀರದ ಪೞವಿಗೆಯಂ ನಿೞಿಸಲೆಂದೆ (ಬಾವುಟವು ಬೀಳಲು ಶೌರ್ಯದ ಧ್ವಜವನ್ನು ನಿಲ್ಲಿಸಬೇಕೆಂದೇ) ಹರಿ ವಕ್ಷಮನು ಅಲ್ಲೞಿವೋಗೆ ಎಚ್ಚು (ಕೃಷ್ಣನ ಎದೆಯನ್ನು ಸೀಳಿಹೋಗುವ ಹಾಗೆ ಹೊಡೆದು) ಮುಳಿಸು ಅವಗೞಿಯಿಸುತಿರೆ ನರನ ಬಿಲ್ಲ ಗೊಣೆಯುಮನು ಎಚ್ಚಂ ()
ಪದ್ಯ-೨೦೯:ಅರ್ಥ: ಬಾವುಟವು ಬೀಳಲು ಶೌರ್ಯದ ಧ್ವಜವನ್ನು ನಿಲ್ಲಿಸಬೇಕೆಂದೇ ಕೃಷ್ಣನ ಎದೆಯನ್ನು ಸೀಳಿಹೋಗುವ ಹಾಗೆ ಹೊಡೆದು, ಕೋಪವು ಅಧಿಕವಾಗುತ್ತಿರಲು ಅರ್ಜುನನ ಬಿಲ್ಲಿನ ಹೆದೆಯನ್ನು ಕತ್ತರಿಸಿದನು ಕರ್ಣ.
ಬೆಳಗುವ ಸೊಡರ್ಗಳ ಬೆಳಗ
ಗ್ಗಳಿಸುವವೋಲ್ ಪೋಪ ಪೊೞ್ತಳೊಳ್ ತೇಜಂ ಪ|
ಜ್ಜಳಿಸೆ ತೞತೞಿಸೆ ತೊಳ ತೊಳ
ತೊಳಗಿದನಸ್ತಮಯ ಸಮಯದೊಳ್ ದಿನಪಸುತಂ|| ೨೧೦ ||
ಪದ್ಯ-೨೧೦:ಪದವಿಭಾಗ-ಅರ್ಥ:ಬೆಳಗುವ ಸೊಡರ್ಗಳ ಬೆಳಗು ಅಗ್ಗಳಿಸುವವೋಲ್ (ಉರಿಯುವ ದೀಪಗಳ ಕಾಂತಿಯು ಆರಿಹೋಗುವ ಕಾಲದಲ್ಲಿ ಹೆಚ್ಚಾಗಿ ಜ್ವಲಿಸುವ ಹಾಗೆ) ಪೋಪ ಪೊೞ್ತಳೊಳ್ ತೇಜಂ ಪಜ್ಜಳಿಸೆ (ಸೂರ್ಯಪುತ್ರನಾದ ಕರ್ಣನು- * ಮುಳುಗುವ (ಸಾಯುವ) ಕಾಲದಲ್ಲಿ ತೇಜಸ್ಸು ಪ್ರಜ್ವಲಿಸಲು) ತೞತೞಿಸೆ ತೊಳ ತೊಳತೊಳಗಿದನು ಅಸ್ತಮಯ ಸಮಯದೊಳ್ ದಿನಪಸುತಂ-* (ಮುಳುಗುವ (ಸಾಯುವ) ಕಾಲದಲ್ಲಿ ತೇಜಸ್ಸು ಪ್ರಜ್ವಲಿಸಲು ತಳತಳನೆ ಪ್ರಕಾಶಿಸಿದನು. )
ಪದ್ಯ-೨೧೦:ಅರ್ಥ:ಉರಿಯುವ ದೀಪಗಳ ಕಾಂತಿಯು ಆರಿಹೋಗುವ ಕಾಲದಲ್ಲಿ ಹೆಚ್ಚಾಗಿ ಜ್ವಲಿಸುವ ಹಾಗೆ ಸೂರ್ಯಪುತ್ರನಾದ ಕರ್ಣನು ಮುಳುಗುವ (ಸಾಯುವ) ಕಾಲದಲ್ಲಿ ತೇಜಸ್ಸು ಪ್ರಜ್ವಲಿಸಲು ತಳತಳನೆ ಪ್ರಕಾಶಿಸಿದನು.
ವ|| ಅಂತು ಕರ್ಣ ನಿಶಿತ ವಿಕರ್ಣಹತಿಯಿಂದಮಸುರಾಂತಕಂ ಕೞಿಯೆ ನೊಂದು-
ವಚನ:ಪದವಿಭಾಗ-ಅರ್ಥ:ಅಂತು ಕರ್ಣ ನಿಶಿತ ವಿಕರ್ಣಹತಿಯಿಂದಂ (ಹರಿತವಾದ ಬಾಣದ ಪೆಟ್ಟಿನಿಂದ) ಅಸುರಾಂತಕಂ ಕೞಿಯೆ (ಸಾಯುವಷ್ಟು) ನೊಂದು-
ವಚನ:ಅರ್ಥ: ವ|| ಹಾಗೆ ಕರ್ಣನ ಹರಿತವಾದ ಬಾಣದ ಪೆಟ್ಟಿನಿಂದ ಕೃಷ್ಣುನು ಸಾಯುವಷ್ಟು ನೊಂದು-
ಕಂ|| ಕಸೆಯಂ ಬಿಟ್ಟುಱದಭಿಮಂ
ತ್ರಿಸಿ ಚಕ್ರಮನಸುರವೈರಿಯಿಡುವಾಗಳ್ ಬಾ|
ರಿಸಿ ಪೆಱತು ಗೊಣೆಯದಿಂದೇ
ಱಿಸಿ ಬಿಲ್ಲಂ ತ್ರಿಭುವನಂಗಳಳ್ಳಾಡುವಿನಂ|| ೨೧೧ ||
ಪದ್ಯ-೨೧೧:ಪದವಿಭಾಗ-ಅರ್ಥ: ಕಸೆಯಂ ಬಿಟ್ಟು ಉಱದೆ ಅಭಿಮಂತ್ರಿಸಿ ಚಕ್ರಮನು ಅಸುರವೈರಿಯಿಡುವಾಗಳ್ (ಚಾವುಟಿಯನ್ನು ಎಸೆದು ಚಕ್ರಾಯುಧವನ್ನು ಬೇಗ ಅಭಿಮಂತ್ರಿಸಿ ಕೃಷ್ಣನು ಎಸೆಯುವಾಗ) ಬಾರಿಸಿ (ಅರ್ಜುನನು ಅದನ್ನು- ತಡೆದು) ಪೆಱತು ಗೊಣೆಯದಿಂದೆ ಏಱಿಸಿ ಬಿಲ್ಲಂ (ಬೇರೊಂದು ಹೆದೆಯಿಂದ ಬಿಲ್ಲನ್ನು ಕಟ್ಟಿ) ತ್ರಿಭುವನಂಗಳು ಅಳ್ಳಾಡುವಿನಂ (ಮೂರುಲೋಕಗಳು ನಡುಗುವ ಹಾಗೆ)
ಪದ್ಯ-೨೧೧:ಅರ್ಥ: ಚಾವುಟಿಯನ್ನು ಎಸೆದು ಚಕ್ರಾಯುಧವನ್ನು ಬೇಗ ಅಭಿಮಂತ್ರಿಸಿ ಕೃಷ್ಣನು ಎಸೆಯುವಾಗ ಅರ್ಜುನನು ಅದನ್ನು ತಡೆದು ಬೇರೊಂದು ಹೆದೆಯಿಂದ ಬಿಲ್ಲನ್ನು ಕಟ್ಟಿ ಮೂರುಲೋಕಗಳು ನಡುಗುವ ಹಾಗೆ-
ವ|| ಮುನ್ನಮುಂದ್ರಕೀಲನಗೇಂದ್ರದೊಳ್ ಪಶುಪತಿಯನಾರಾಧಿಸಿ ಪಾಶುಪತಾಸ್ತ್ರಂ ಬಡೆದಂದು ತೆಲ್ಲಟಿಯೆಂದು-
ವಚನ:ಪದವಿಭಾಗ-ಅರ್ಥ: ಮುನ್ನಂ ಇಂದ್ರಕೀಲ ನಗೇಂದ್ರದೊಳ್ (ಹಿಂದೆ ಇಂದ್ರಕೀಲ ಪರ್ವತದಲ್ಲಿ) ಪಶುಪತಿಯನು ಆರಾಧಿಸಿ ಪಾಶುಪತಾಸ್ತ್ರಂ ಬಡೆದಂದು (ಈಶ್ವರನನ್ನು ಪೂಜಿಸಿ ಪಾಶುಪತಾಸ್ತ್ರವನ್ನು ಪಡೆದ ದಿನ) ತೆಲ್ಲಟಿಯೆಂದು (ಬಳುವಳಿಯೆಂದು, ಕೊಡಿಗೆ ಎಂದು)-
ವಚನ:ಅರ್ಥ:ಹಿಂದೆ ಇಂದ್ರಕೀಲ ಪರ್ವತದಲ್ಲಿ ಈಶ್ವರನನ್ನು ಪೂಜಿಸಿ ಪಾಶುಪತಾಸ್ತ್ರವನ್ನು ಪಡೆದ ದಿನ ಬಳುವಳಿಯೆಂದು-
ಚಂ|| ಗಿರಿಜೆಯ ಮೆಚ್ಚಿ ಕೊಟ್ಟ ನಿಶಿತಾಸ್ತ್ರಮನಂಜಲಿಕಾಸ್ತ್ರಮಂ ಭಯಂ
ಕರತರಮಾಗೆ ಕೊಂಡು ವಿಧಿಯಿಂದಭಿಮಂತ್ರಿಸಿ ಪೂಡೆ ಬಿಲ್ಲೊಳು|
ರ್ವರೆ ನಡುಗಿತ್ತಜಾಂಡಮೊಡೆದತ್ತು ನೆಲಂ ಪಿಡುಗಿತ್ತು ಸಪ್ತಸಾ|
ಗರಮುಡುಗಿತ್ತು ಸಾಹಸಮದೇಂ ಪಿರಿದೋ ಕದನತ್ರಿಣೇತ್ರನಾ|| ೨೧೨
ಪದ್ಯ-೨೧೨:ಪದವಿಭಾಗ-ಅರ್ಥ:ಗಿರಿಜೆಯ ಮೆಚ್ಚಿ ಕೊಟ್ಟ ನಿಶಿತಾಸ್ತ್ರಮಂ ಅಂಜಲಿಕಾಸ್ತ್ರಮಂ (ಪಾರ್ವತಿಯು ಪ್ರೀತಿಯಿಂದ ಕೊಟ್ಟ ಹರಿತವಾದ ಅಂಜಿಲಿಕಾಸ್ತ್ರವನ್ನು) ಭಯಂಕರತರಮ್ ಆಗೆ (ಭೀಕರವಾಗುವ ಹಾಗೆ) ಕೊಂಡು ವಿಧಿಯಿಂದ ಅಭಿಮಂತ್ರಿಸಿ ಪೂಡೆ ಬಿಲ್ಲೊಳು (ಕೈಗೆ ತೆಗೆದುಕೊಂಡು ಶಾಸ್ತ್ರರೀತಿಯಿಂದ ಅಭಿಮಂತ್ರಣ ಮಾಡಿ -ಮಂತ್ರಾ ದೇವತೆಯನ್ನು ಆಹ್ವಾನಿಸಿ, ಬಿಲ್ಲಿನಲ್ಲಿ ಹೂಡಲು) ಉರ್ವರೆ ನಡುಗಿತ್ತು ಅಜಾಂಡಂ ಒಡೆದತ್ತು ನೆಲಂ ಪಿಡುಗಿತ್ತು (ಭೂಮಿಯು ಕಂಪಿಸಿತು. ಬ್ರಹ್ಮಾಂಡವು ಒಡೆಯಿತು, ನೆಲವು ಸಿಡಿಯಿತು) ಸಪ್ತಸಾಗರಂ ಉಡುಗಿತ್ತು (ಏಳು ಸಮುದ್ರಗಳು ಕುಗ್ಗಿದುವು) ಸಾಹಸಂ ಅದೇಂ ಪಿರಿದೋ ಕದನತ್ರಿಣೇತ್ರನಾ (ಕದನತ್ರಿಣೇತ್ರನಾದ ಅರ್ಜುನನ ಸಾಹಸವು ಏನು ಹಿರಿದಾದುದೊ; ಅತಿಮಹತ್ತರವಾದುದು.)
ಪದ್ಯ-೨೧೨:ಅರ್ಥ: ಪಾರ್ವತಿಯು ಪ್ರೀತಿಯಿಂದ ಕೊಟ್ಟ ಹರಿತವಾದ ಅಂಜಿಲಿಕಾಸ್ತ್ರವನ್ನು ಭೀಕರವಾಗುವ ಹಾಗೆ ಕೈಗೆ ತೆಗೆದುಕೊಂಡು ಶಾಸ್ತ್ರರೀತಿಯಿಂದ ಅಭಿಮಂತ್ರಣ ಮಾಡಿ (ಮಂತ್ರಾ ದೇವತೆಯನ್ನು ಆಹ್ವಾನಿಸಿ) ಬಿಲ್ಲಿನಲ್ಲಿ ಹೂಡಲು ಭೂಮಿಯು ಕಂಪಿಸಿತು. ಬ್ರಹ್ಮಾಂಡವು ಒಡೆಯಿತು, ನೆಲವು ಸಿಡಿಯಿತು, ಏಳು ಸಮುದ್ರಗಳು ಕುಗ್ಗಿದುವು. ಕದನತ್ರಿಣೇತ್ರನಾದ ಅರ್ಜುನನ ಸಾಹಸವು ಏನು ಹಿರಿದಾದುದೊ; ಅತಿಮಹತ್ತರವಾದುದು.
ವ|| ಆಗಳಖಿಳಭುವನಭವನಸಂಹಾರಕಮಪ್ಪಂಲಿಕಾಸ್ತ್ರಮನಮೋಘಾಸ್ತ್ರ ಧನಂಜಯನಾ ಕರ್ಣಾಂತಂಬರಂ ತೆಗೆದಾಕರ್ಣಾಂತಂ ಮಾಡಲ್ ಬಗೆದು ಕಂಧರಸಂಧಿಯಂ ನಿಟ್ಟಿಸಿ-
ವಚನ:ಪದವಿಭಾಗ-ಅರ್ಥ:ಆಗಳ್ ಅಖಿಳ ಭುವನಭವನ ಸಂಹಾರಕಮಪ್ಪ ಅಂಜಲಿಕಾಸ್ತ್ರಮಂ (ಆಗ ಸಮಸ್ತಲೋಕವೆಂಬ ಆಶ್ರಯವನ್ನು ನಾಶಮಾಡುವ ಅಂಜಲಿಕಾಸ್ತ್ರವನ್ನು) ಅಮೋಘಾಸ್ತ್ರ ಧನಂಜಯನು ಕರ್ಣಾಂತಂಬರಂ ತೆಗೆದು (ಅಮೋಘಾಸ್ತ್ರ ಧನಂಜಯನಾದ ಅರ್ಜುನನು ಕರ್ಣನನ್ನು ಕೊಲ್ಲಲು ಯೋಚಿಸಿ ಕಿವಿಯವರೆಗೂ ಸೆಳೆದು) ಆ ಕರ್ಣ ಅಂತಂ ಮಾಡಲ್ ಬಗೆದು (ಆ ಕರ್ಣನನ್ನು ಕೊಲ್ಲಲು ಯೋಚಿಸಿ) ಕಂಧರ ಸಂಧಿಯಂ ನಿಟ್ಟಿಸಿ (ಕತ್ತಿನ ಸಂದಿಯನ್ನು ನಿರೀಕ್ಷಿಸಿ- )-
ವಚನ:ಅರ್ಥ: ಆಗ ಸಮಸ್ತಲೋಕವೆಂಬ ಆಶ್ರಯವನ್ನು ನಾಶಮಾಡುವ ಅಂಜಲಿಕಾಸ್ತ್ರವನ್ನು ಅಮೋಘಾಸ್ತ್ರ ಧನಂಜಯನಾದ ಅರ್ಜುನನು ಆ ಕರ್ಣನನ್ನು ಕೊಲ್ಲಲು ಯೋಚಿಸಿ ಕಿವಿಯವರೆಗೂ ಸೆಳೆದು ಕರ್ಣನನ್ನು ಕೊಲ್ಲಲು ಯೋಚಿಸಿ, ಕತ್ತಿನ ಸಂದಿಯನ್ನು ನಿರೀಕ್ಷಿಸಿ-
ಮ||ಸ್ರ|| ಮುಳಿದೆಚ್ಚಾಗಳ್ ಮಹೋಗ್ರಪ್ರಳಯಶಿಖಿ ಶಿಖಾನೀಕಮಂ ವಿಸ್ಫುಲಿಂಗಂ
ಗಳುಮಂ ಬೀಱುತ್ತುಮೌರ್ವಜ್ವಳನುರುಚಿಯುಮಂ ತಾನೆ ತೋಱುತ್ತುಮಾಟಂ|
ದಳುರುತ್ತುಂ ಬಂದು ಕೊಂಡಾಗಳೆ ಗಗನತಳಂ ಪಾಯ್ದ ಕೆನ್ನತ್ತರಿಂದು
ಚ್ಚಳಿಸುತ್ತಿರ್ಪನ್ನೆಗಂ ಬಿೞ್ದುದು ಭರದೆ ಸಿಡಿಲ್ದತ್ತ ಕರ್ಣೋತ್ತಮಾಂಗಂ|| ೨೧೩
ಪದ್ಯ-೨೧೩:ಪದವಿಭಾಗ-ಅರ್ಥ:ಮುಳಿದು ಎಚ್ಚಾಗಳ್ (ಕೋಪದಿಂದ ಹೊಡೆದಾಗ,) ಮಹಾ ಉಗ್ರ ಪ್ರಳಯಶಿಖಿ ಶಿಖಾನೀಕಮಂ (ಮಹಾಭಯಂಕರವಾದ ಪ್ರಳಯಕಾಲದ ಅಗ್ನಿಯ ಜ್ವಾಲಾಸಮೂಹವನ್ನೂ) ವಿಸ್ಫುಲಿಂಗಂಗಳುಮಂ (ಕಿಡಿಗಳನ್ನೂ) ಬೀಱುತ್ತುಂ ಔರ್ವಜ್ವಳನ ಉ- ರುಚಿಯುಮಂ (ಕೆದರುತ್ತ ಬಡಬಾಗ್ನಿಯು ಕಾಂತಿಯನ್ನು) ತಾನೆ ತೋಱುತ್ತುಂ ಆಟಂದು ಉಳುರುತ್ತುಂ ಬಂದು ಕೊಂಡಾಗಳೆ (ತಾನೇ ಪ್ರದರ್ಶಿಸುತ್ತ ಮೇಲೆಬಿದ್ದು ಉರುಳುತ್ತ/ ಹರಡುತ್ತ ಬಂದು ತಗಲಿದಾಗ) ಗಗನತಳಂ ಪಾಯ್ದ ಕೆನ್ನತ್ತರಿಂದ ಉಚ್ಚಳಿಸುತ್ತಿರ್ಪ ಅನ್ನೆಗಂ (ಚಿಮ್ಮಿದ ಕೆಂಪುರಕ್ತವು ಆಕಾಶಪ್ರದೇಶವನ್ನೂ ದಾಟಿ ಮೇಲಕ್ಕೆ ಹಾರುತ್ತಿರಲು, ಆನಂತರ) ಬಿೞ್ದುದು ಭರದೆ ಸಿಡಿಲ್ದು ಅತ್ತ ಕರ್ಣೋತ್ತಮಾಂಗಂ (ಕರ್ಣನ ತಲೆಯು ರಭಸದಿಂದ ಸಿಡಿದು ಆ ಕಡೆ ಬಿದ್ದಿತು.)
ಪದ್ಯ-೨೧೩:ಅರ್ಥ: ಕೋಪದಿಂದ ಹೊಡೆದಾಗ, ಮಹಾಭಯಂಕರವಾದ ಪ್ರಳಯಕಾಲದ ಅಗ್ನಿಯ ಜ್ವಾಲಾಸಮೂಹವನ್ನೂ ಕಿಡಿಗಳನ್ನೂ ಕೆದರುತ್ತ ಬಡಬಾಗ್ನಿಯು ಕಾಂತಿಯನ್ನು ತಾನೇ ಪ್ರದರ್ಶಿಸುತ್ತ ಮೇಲೆಬಿದ್ದು ಉರುಳುತ್ತ/ ಹರಡುತ್ತ ಬಂದು ತಗಲಿದಾಗ ಚಿಮ್ಮಿದ ಕೆಂಪುರಕ್ತವು ಆಕಾಶಪ್ರದೇಶವನ್ನೂ ದಾಟಿ ಮೇಲಕ್ಕೆ ಹಾರುತ್ತಿರಲು ಕರ್ಣನ ತಲೆಯು ರಭಸದಿಂದ ಸಿಡಿದು ಆ ಕಡೆ ಬಿದ್ದಿತು.
ವ|| ಅಂತು ತಲೆ ನೆಲೆದೊಳುರುಳ್ದೊಡೆ ಲೋಕಕ್ಕೆಲ್ಲಮಗುಂದಲೆಯಾದ ಬೀರಮೆಸೆಯೆ ಪ್ರಾಣಮೊಡಲಿಂದಂ ತೊಲಗೆಯುಂ ತೊಲಗದ ನನ್ನಿಯನುದಾಹರಿಸುವಂತೆ ಪತ್ತೆಂಟು ಕೋಲ ನೆಚ್ಚಟ್ಟೆಯುಂ ನೆಲದೊಳಾಚಂದ್ರಸ್ಥಾಯಿಯಾಗೆ ಚತುರ್ದಶಭುವನಂಗಳಂ ಪಸರಿಸಿ ನಿಂದೊಡೆಸೆ ದುದಾಹರಣಮೊಳ್ಪಿನುದಾಹರಣಮುಮಾಗೆ ಗುಣಾರ್ಣವನ ಶರಪರಿಣತಿಯಿಂದೆ ಕುಲಶೈಲಂ ಬೀೞ್ವಂತೆ ನೆಲನದಿರೆ ಬಿೞiಗಳ್-
ವಚನ:ಪದವಿಭಾಗ-ಅರ್ಥ:ಅಂತು ತಲೆ ನೆಲೆದೊಳು ಉರುಳ್ದೊಡೆ ಲೋಕಕ್ಕೆಲ್ಲಂ ಗುಂದಲೆಯಾದ ಬೀರಮ್ ಎಸೆಯೆ (ಹಾಗೆ ತಲೆಯು ಭೂಮಿಯಲ್ಲಿ ಉರುಳಲು ಲೋಕಕ್ಕೆಲ್ಲ ಅತಿಶಯವಾದ ವೀರತ್ವವು ಪ್ರಕಾಶಿಸಲು) ಪ್ರಾಣಂ ಒಡಲಿಂದಂ ತೊಲಗೆಯುಂ (ಪ್ರಾಣವು ಶರೀರದಿಂದ ಹೋದರೂ) ತೊಲಗದ ನನ್ನಿಯನು ಉದಾಹರಿಸುವಂತೆ (ಸತ್ಯವು ಮಾತ್ರ ಹೋಗದಿರುವುದನ್ನು ಉದಾಹರಿಸುವಂತೆ) ಪತ್ತೆಂಟು ಕೋಲನು ಎಚ್ಚು ಅಟ್ಟೆಯುಂ (ಹತ್ತೆಂಟು ಬಾಣಗಳನ್ನು ಹೊಡೆದು ಅವನ ಮುಂಡವು) ನೆಲದೊಳು ಆಚಂದ್ರಸ್ಥಾಯಿಂ ಆಗೆ (ಚಂದ್ರನಿರುವವರೆಗೂ ನಿಲ್ಲುವಂತೆ) ಚತುರ್ದಶಭುವನಂಗಳಂ ಪಸರಿಸಿ (ಹದಿನಾಲ್ಕು ಲೋಕಗಳನ್ನೂ ಆವರಿಸಿ) ನಿಂದೊಡೆ (ಅಟ್ಟೆಯುಂ - ಅವನ ಮುಂಡವು ದೃಢವಾಗಿ ನಿಂತಿತು.ನಿಂತು) ಎಸೆದುದು ಆ ಹರಣಂ ಒಳ್ಪಿನ ಉದಾಹರಣಮುಂ ಆಗೆ (ಜೀವ ಅಪಹರಣವಾದುದು ಒಳ್ಳೆಯತನದ ಮಾರ್ಗದರ್ಶನವಾಗಲು ಶೋಭಿಸಿತು) ಗುಣಾರ್ಣವನ ಶರಪರಿಣತಿಯಿಂದೆ (ಅರ್ಜುನನ ಬಾಣಕೌಶಲ್ಯದಿಂದ ) ಕುಲಶೈಲಂ ಬೀೞ್ವಂತೆ ನೆಲನು ಅದಿರೆ ಬಿೞ್ದಾಗಳ್ (ಮುಂಡವೂ ಕುಲಪರ್ವತವು ಬೀಳುವ ಹಾಗೆಭೂಮಿಯು ಕಂಪಿಸುವ ಹಾಗೆ ಬಿದ್ದಿತು.)-
ವಚನ:ಅರ್ಥ: ಹಾಗೆ ತಲೆಯು ಭೂಮಿಯಲ್ಲಿ ಉರುಳಲು ಲೋಕಕ್ಕೆಲ್ಲ ಅತಿಶಯವಾದ ವೀರತ್ವವು ಪ್ರಕಾಶಿಸಲು, ಪ್ರಾಣವು ಶರೀರದಿಂದ ಹೋದರೂ, ಸತ್ಯವು ಮಾತ್ರ ಹೋಗದಿರುವುದನ್ನು ಉದಾಹರಿಸುವಂತೆ ಅವನ ಕೀರ್ತಿಯು ಹದಿನಾಲ್ಕು ಲೋಕಗಳನ್ನೂ ಆವರಿಸಿ ಚಂದ್ರನಿರುವವರೆಗೂ ನಿಲ್ಲುವಂತೆ ಅವನ ಮುಂಡವು ಹತ್ತೆಂಟು ಬಾಣಗಳನ್ನು ಹೊಡೆದು ದೃಢವಾಗಿ ನಿಂತಿತು. ಹಾಗೆ ದೇಹವು ನಿಂತು, ಜೀವ ಅಪಹರಣವಾದುದು ಒಳ್ಳೆಯತನದ ಮಾರ್ಗದರ್ಶನವಾಗಲು ಶೋಭಿಸಿತು. ಅರ್ಜುನನ ಬಾಣಕೌಶಲ್ಯದಿಂದ ಮುಂಡವೂ ಕುಲಪರ್ವತವು ಬೀಳುವ ಹಾಗೆಭೂಮಿಯು ಕಂಪಿಸುವ ಹಾಗೆ ಬಿದ್ದಿತು.
ಕಂ|| ಚಾಗದ ನನ್ನಿಯ ಕಲಿತನ
ದಾಗರಮೆನೆ ನೆಗೞ್ದ ಕರ್ಣನೊಡಲಿಂದೆಂತುಂ|
ಪೋಗಲ್ಕಱಿಯದೆ ಸಿರಿ ಕರ
ಮಾಗಳ್ ಕರಿಕರ್ಣತಾಳ ಸಂಚಳೆಯಾದಳ್|| ೨೧೪ ||
ಪದ್ಯ-೦೦:ಪದವಿಭಾಗ-ಅರ್ಥ:ಚಾಗದ ನನ್ನಿಯ ಕಲಿತನದಾಗರಂ ಎನೆ (ತ್ಯಾಗ ಸತ್ಯ ಪರಾಕ್ರಮಗಳಿಗೆ ಆವಾಸಸ್ಥಾನವೆನ್ನುವಂತೆ) ನೆಗೞ್ದ ಕರ್ಣನ ಒಡಲಿಂದ (ಪ್ರಸಿದ್ಧನಾದ ಕರ್ಣನ ಶರೀರದಿಂದ) ಎಂತುಂ ಪೋಗಲ್ಕೆ ಅಱಿಯದೆ ಸಿರಿ (ಹೇಗೂ ಬಿಟ್ಟು ಹೋಗುವುದಕ್ಕೆ ತಿಳಿಯದೆ ಲಕ್ಷ್ಮಿಯು) ಕರಂ ಆಗಳ್ ಕರಿಕರ್ಣತಾಳ (ವಿಶೇಷವಾಗಿ ಆಗ ಆನೆಯ ಚಲಿಸುತ್ತಿರುವ ಕಿವಿಗಳಂತೆ ) ಸಂಚಳೆಯಾದಳ್ (ಚಂಚಲೆಯಾದಳು)
ಪದ್ಯ-೦೦:ಅರ್ಥ:ತ್ಯಾಗ ಸತ್ಯ ಪರಾಕ್ರಮಗಳಿಗೆ ಆವಾಸಸ್ಥಾನವೆನ್ನುವಂತೆ ಪ್ರಸಿದ್ಧನಾದ ಕರ್ಣನ ಶರೀರದಿಂದ ಹೇಗೂ ಬಿಟ್ಟು ಹೋಗುವುದಕ್ಕೆ ತಿಳಿಯದೆ ಲಕ್ಷ್ಮಿಯು ಆಗ ಆನೆಯ ಚಲಿಸುತ್ತಿರುವ ಕಿವಿಗಳಂತೆ ಚಂಚಲೆಯಾದಳು.
ಕಂ||ಕುಡುಮಿಂಚಿನ ಸಿಡಿಲುರುಳಿಯೊ
ಳೊಡಂಬಡಂ ಪಡೆಯೆ ಕರ್ಣನೊಡಲಿಂದಾಗಳ್|
ನಡೆ ನೋಡೆ ನೋಡೆ ದಿನಪನೊ
ಳೊಡಗೂಡಿದುದೊಂದು ಮೂರ್ತಿ ತೇಜೋರೂಪಂ|| ೨೧೫ ||
ಪದ್ಯ-೨೧೫:ಪದವಿಭಾಗ-ಅರ್ಥ:ಕುಡುಮಿಂಚಿನ ಸಿಡಿಲ ಉರುಳಿಯೊಳು ಒಡಂಬಡಂ ಪಡೆಯೆ (ವಕ್ರಮಿಂಚಿನಿಂದ ಕೂಡಿದ ಸಿಡಿಲಿನ ಉಂಡೆಯ ತೇಜಸ್ಸಿಗೆ ಒಪ್ಪುವ ರೂಪು ಪಡೆದು ) ಕರ್ಣನೊಡಲಿಂದಾಗಳ್ ನಡೆ ನೋಡೆ ನೋಡೆ (ಆಕಾರವೊಂದು ನೋಡುತ್ತಿರುವ ಹಾಗೆಯೇ ಕರ್ಣನ ಶರೀರದಿಂದ ಹೊರಟು) ದಿನಪನೊಳು ಒಡಗೂಡಿದುದು ಒಂದು ಮೂರ್ತಿ ತೇಜೋರೂಪಂ (ಸೂರ್ಯನಲ್ಲಿ ಐಕ್ಯವಾಯಿತು. )
ಪದ್ಯ-೨೧೫:ಅರ್ಥ: ವಕ್ರಮಿಂಚಿನಿಂದ ಕೂಡಿದ ಸಿಡಿಲಿನ ಉಂಡೆಯ ತೇಜಸ್ಸಿನ ರೂಪವನ್ನು ಪಡೆದು, ಆಕಾರವೊಂದು ನೋಡುತ್ತಿರುವ ಹಾಗೆಯೇ ಕರ್ಣನ ಶರೀರದಿಂದ (ಹೊರಟು) ಸೂರ್ಯನಲ್ಲಿ ಐಕ್ಯವಾಯಿತು.
ಪಿಡಿದನೆ ಪುರಿಗಣೆಯನೆರ
ೞ್ನುಡಿದನೆ ಬಳ್ಕಿದನೆ ತಾನೆ ತನ್ನನೆ ಚಲಮಂ|
ಪಿಡಿದೞಿದನೆಂದು ದೇವರ
ಪಡೆ ಗಡಣದೆ ಪೊಗೞ್ದುದಿನತನೂಜನ ಗಂಡಂ|| ೨೧೬ ||
ಪದ್ಯ-೨೧೬:ಪದವಿಭಾಗ-ಅರ್ಥ:ಪಿಡಿದನೆ ಪುರಿಗಣೆಯನು (‘ದಿವ್ಯಾಸ್ತ್ರವನ್ನು ಹಿಡಿದನೆ?’) ಎರೞ್ನುಡಿದನೆ ಬಳ್ಕಿದನೆ (ಎರಡು ಮಾತನ್ನಾಡಿದನೇ? / ಸುಳ್ಳು ಮಾತನ್ನಾಡಿದನೆ?) ತಾನೆ ತನ್ನನೆ ಚಲಮಂ ಪಿಡಿದು ಅೞಿದನೆಂದು - ಅಳಿದನು ಎಂದು(ತಾನೆ ತನ್ನ ಹಟವನ್ನು ಬಿಗಿಯಾಗಿ ಹಿಡಿದು ಸತ್ತನು’ ಎಂದು) ದೇವರಪಡೆ ಗಡಣದೆ ಪೊಗೞ್ದುದು (ದೇವತೆಗಳ ಸಮೂಹವು ಕರ್ಣನ ಪೌರಷವನ್ನು ಹೊಗಳಿತು.) ಇನತನೂಜನ ಗಂಡಂ (ಕರ್ಣನ ಪೌರಷವನ್ನು )
ಪದ್ಯ-೨೧೬:ಅರ್ಥ: ಕರ್ಣನು, ‘ದಿವ್ಯಾಸ್ತ್ರವನ್ನು ಹಿಡಿದನೆ?’ ಎರಡು ಮಾತನ್ನಾಡಿದನೇ? ಭಯಪಟ್ಟನೆ? ತಾನೆ ತನ್ನ ಹಟವನ್ನು ಬಿಗಿಯಾಗಿ ಹಿಡಿದು ಸತ್ತನು’ ಎಂದು ದೇವತೆಗಳ ಸಮೂಹವು ಕರ್ಣನ ಪೌರಷವನ್ನು ಹೊಗಳಿತು.
ಚಂ|| ನೆನೆಯದಿರಣ್ಣ ಭಾರತದೊಳಿಂ ಪೆಱರಾರುಮನೊಂದೆ ಚಿತ್ತದಿಂ
ನೆನೆವೊಡೆ ಕರ್ಣನಂ ನೆನೆಯ ಕರ್ಣನೊಳಾರ್ ದೊರೆ ಕರ್ಣನೇಱು ಕ|
ರ್ಣನ ಕಡು ನನ್ನಿ ಕರ್ಣನಳವಂಕದ ಕರ್ಣನ ಚಾಗಮೆಂದು ಕ
ರ್ಣನ ಪಡೆಮಾತಿನೊಳ್ ಪುದಿದು ಕರ್ಣರಸಾಯನಮಲ್ತೆ ಭಾರತಂ|| ೨೧೭ ||
ಪದ್ಯ-೨೧೭:ಪದವಿಭಾಗ-ಅರ್ಥ:ನೆನೆಯದಿರಣ್ಣ ಭಾರತದೊಳಿಂ ಪೆಱರ್ ಆರುಮನು ( ಅಣ್ಣಾ, ಭಾರತದಲ್ಲಿ ಬೇರೆ ಯಾರನ್ನೂ ನೆನೆಯಬೇಡ;) ಒಂದೆ ಚಿತ್ತದಿಂ ನೆನೆವೊಡೆ ಕರ್ಣನಂ ನೆನೆಯ (ಒಂದೇ ಮನಸ್ಸಿನಿಂದ/ ಮನಃಪೂರ್ವಕವಾಗಿ ನೆನೆಯುವುದಾದರೆ ಕರ್ಣನನ್ನು ಜ್ಞಾಪಿಸಿಕೊಳ್ಳಪ್ಪ;) ಕರ್ಣನೊಳು ಆರ್ ದೊರೆ (ಕರ್ಣನಿಗೆ ಯಾರು ಸಮಾನ?) ಕರ್ಣನ ಏಱು (ಕರ್ಣನ ಪರಾಕ್ರಮ, (ಯುದ್ಧ)) ಕರ್ಣನ ಕಡು ನನ್ನಿ (ಕರ್ಣನ ಕಠಿಣವಾದ ಸತ್ಯ,) ಕರ್ಣನ ಅಳವು (ಕರ್ಣನ ಶಕ್ತಿ,) ಅಂಕದ ಕರ್ಣನ ಚಾಗಮ್ ಎಂದು ಕರ್ಣನ ಪಡೆಮಾತಿನೊಳ್ ಪುದಿದು (ಪ್ರಸಿದ್ಧವಾದ ಕರ್ಣನ ತ್ಯಾಗ ಎಂದು ಕರ್ಣನ ಆಡುಮಾತಿನಿಂದಲೇ -ದಾನಶೂರ ಕರ್ಣ- ಎಂದು ತುಂಬಿ) ಕರ್ಣರಸಾಯನಂ ಅಲ್ತೆ ಭಾರತಂ (ಭಾರತವು ಕರ್ಣ ರಸಾಯನವಾಗಿದೆಯಲ್ಲವೇ? ) (ಕರ್ಣನ ಪಾತ್ರದ ರಸಾಯನ, ಸೊಗಸು; ಕರ್ಣಕ್ಕೆ- ಕಿವಿಗೆ ರಸಾಯನದಂತೆ ಇಂಪು, ಹಿತ.)
ಪದ್ಯ-೨೧೭:ಅರ್ಥ: ಅಣ್ಣಾ, ಭಾರತದಲ್ಲಿ ಬೇರೆ ಯಾರನ್ನೂ ನೆನೆಯಬೇಡ; ಒಂದೇ ಮನಸ್ಸಿನಿಂದ/ ಮನಃಪೂರ್ವಕವಾಗಿ ನೆನೆಯುವುದಾದರೆ ಕರ್ಣನನ್ನು ಜ್ಞಾಪಿಸಿಕೊಳ್ಳಪ್ಪ; ಕರ್ಣನಿಗೆ ಯಾರು ಸಮಾನ? ಕರ್ಣನ ಪರಾಕ್ರಮ, (ಯುದ್ಧ), ಕರ್ಣನ ಕಠಿಣವಾದ ಸತ್ಯ, ಕರ್ಣನ ಶಕ್ತಿ, ಪ್ರಸಿದ್ಧವಾದ ಕರ್ಣನ ತ್ಯಾಗ ಎಂದು ಕರ್ಣನ ಆಡುಮಾತಿನಿಂದಲೇ ತುಂಬಿ ಭಾರತವು ಕರ್ಣರಸಾಯನವಾಗಿದೆಯಲ್ಲವೇ?
  • ಟಿಪ್ಪಣಿ. ೧:: ಪಂಪನು ಕರ್ಣನಿಗೆ ಕೊಟ್ಟ ಪ್ರಾಮುಖ್ಯತೆಯನ್ನು ಕೆಲವರು ಒಪ್ಪದಿರಬಹುದು. ಆದರೆ ಪಂಪನ ಕಾವ್ಯದ ಕರ್ಣಪಾತ್ರದ ಸೃಷ್ಟಿಯಲ್ಲಿ ಅವನಲ್ಲಿ ಹೆಚ್ಚು ದೋಷವಿಲ್ಲ. ಕರ್ಣನೇ ಹೇಳುವಂತೆ ವ್ಯಕ್ತಿ ದೈವದ ಆಟದ ವಸ್ತು. ಅವನದು ದುರ್ದೈವ. ಅದನ್ನು ಅವನು ಒಪ್ಪಿಕೊಂಡಿದ್ದಾನೆ. ಹಾಗಾಗಿ ಕೃಷ್ಣನೊಡನೆ ತನ್ನ ಹುಟ್ಟಿನ ವಿಷಯವನ್ನು ಪಾಂಡವರಿಗೆ ತಿಳಿಸಬಾರದೆಂದು ಹೇಳಿರುತ್ತಾನೆ. ಪಂಪನು ತನ್ನ ದೊರೆಗೆ ಹೋಲಿಸಿದ ಅರ್ಜುನನ್ನೂ ಬಿಟ್ಟು ದುರಂತನಾಯಕ ಕರ್ಣನಬಗ್ಗೆ ಹೆಚ್ಚು ಅನುಕಂಪ ಹೊಂದಿರುವಂತೆ ತೋರುವುದು.
  • ಟಿಪ್ಪಣಿ -೨::ಇಂಗ್ಲಷ್‍ ಕಾವ್ಯಗಳಲ್ಲಿ ಪ್ರೀತಿ ಪಾತ್ರರು ಮರಣಹೊಂದಿದಾಗ ಅವರ ಬಗೆಗೆ 'ಎಲಿಜಿ' ಎಂಬ 'ಮೃತರ ಬಗೆಗೆ ಶೋಕಗೀತೆ' - 'ಚರಮಗೀತೆ'ಯ ನ್ನು ರಚಿಸುವ ಬಗೆ ಇದೆ. ಆ ವಿಭಾಗಕ್ಕೆ ಸೇರಬಹುದಾದ ಉತ್ತಮ ಚರಮಗೀತೆಯನ್ನು (ಎಲಿಜಿಯನ್ನು) ಪಂಪ ಕರ್ಣನ ಬಗ್ಗೆ ರಚಿಸಿದ್ದಾನೆ ಎನ್ನಬಹುದು.
ವ|| ಅಂತು ರಿಪುಕುರಂಗಕಂಠೀರವನ ಕೆಯ್ಯೊಳ್ ವೈಕರ್ತನಂ ಸಾಯಲೊಡಂ ಮೇಲುದಂ ಬೀಸಿ ಬೊಬ್ಬಿಱಿದಾರ್ವ ಪಾಂಡವಪತಾಕಿನಿಯೊಳ್-
ವಚನ:ಪದವಿಭಾಗ-ಅರ್ಥ:ಅಂತು ರಿಪುಕುರಂಗ ಕಂಠೀರವನ ಕೆಯ್ಯೊಳ್ (ಹಾಗೆ ಶತ್ರುಗಳೆಂಬ ಹುಲ್ಲೆಗಳಿಗೆ ಸಿಂಹನಾಗಿರುವ ಅರ್ಜುನನ ಕೈಯಲ್ಲಿ) ವೈಕರ್ತನಂ ಸಾಯಲು (ಕರ್ಣನು ಸಾಯಲು) ಒಡಂ ಮೇಲುದಂ ಬೀಸಿ ಬೊಬ್ಬಿಱಿದು ಆರ್ವ ಪಾಂಡವ ಪತಾಕಿನಿಯೊಳ್ (ಕೂಡಲೆ ಉತ್ತರೀಯವನ್ನು ಬೀಸಿ (ಸಂತೋಷಸೂಚಕವಾಗಿ) ಬೊಬ್ಬಿರಿದು ಗರ್ಜಿಸುವ ಪಾಂಡವಸೈನ್ಯವು ಜಯಶಬ್ದಮಾಡಿತು.)-
ವಚನ:ಅರ್ಥ:ಹಾಗೆ ರಿಪುಕುರಂಗಕಂಠೀರವನಾದ ಅರ್ಜುನನ ಕಯ್ಯಲ್ಲಿ ಕರ್ಣನು ಸಾಯಲು ಕೂಡಲೆ ಉತ್ತರೀಯವನ್ನು ಬೀಸಿ (ಸಂತೋಷಸೂಚಕವಾಗಿ) ಬೊಬ್ಬಿರಿದು ಗರ್ಜಿಸುವ ಪಾಂಡವಸೈನ್ಯವು ಜಯಶಬ್ದಮಾಡಿತು.
ಕಂ|| ಬದ್ದವಣದ ಪರೆಗಳ್ ಕಿವಿ
ಸದ್ದಂಗಿಡೆ ಮೊೞಗೆ ದೇವದುಂದುಭಿರವದೊಂ|
ದುದ್ದಾನಿ ನೆಗೞೆ ಮುಗುಳಲ
ರೊದ್ದೆ ಕರಂ ಸಿದ್ಧಮಾದುದಂಬರತಲದೊಳ್ ||೨೧೮ ||
ಪದ್ಯ-೨೧೮:ಪದವಿಭಾಗ-ಅರ್ಥ:ಬದ್ದವಣದ ಪರೆಗಳ್ ಕಿವಿ ಸದ್ದಂಗಿಡೆ ಮೊೞಗೆ (ಮಂಗಳವಾದ್ಯಗಳು ಭೋರ್ಗರೆದುವು. ಕಿವಿಕಿವುಡಾಗುವಂತೆ ಜಯಭೇರಿಗಳು ಮೊಳಗಿದುವು.) ದೇವ ದುಂದುಭಿ ರವದ ಒಂದು ಉದ್ದಾನಿ ನೆಗೞೆ (ದೇವದುಂದುಭಿಯ ಒಂದು ಅತಿಶಯ ಉಂಟಾಯಿತು.) ಮುಗುಳ ಅಲರ್ ಒದ್ದೆ ಕರಂ ಸಿದ್ಧಮಾದುದು ಅಂಬರತಲದೊಳ್ (ಆಕಾಶದಲ್ಲಿ ಪುಷ್ಪವೃಷ್ಟಿಗೆ ಹೂವಿನ ಮೊಗ್ಗುಗಳು ಸಿದ್ಧವಾದವು.)
ಪದ್ಯ-೨೧೮:ಅರ್ಥ: ಮಂಗಳವಾದ್ಯಗಳು ಭೋರ್ಗರೆದುವು. ಕಿವಿಕಿವುಡಾಗುವಂತೆ ಜಯಭೇರಿಗಳು ಮೊಳಗಿದುವು. ದೇವದುಂದುಭಿಯ ಒಂದು ಅತಿಶಯ ಉಂಟಾಯಿತು. ಆಕಾಶದಲ್ಲಿ ಪುಷ್ಪವೃಷ್ಟಿಗೆ ಹೂವಿನ ಮೊಗ್ಗುಗಳು ಸಿದ್ಧವಾದವು.
ಚಂ|| ಒದವಿದಲಂಪು ಕಣ್ಣೆವೆ ಕರುಳ್ ತನಗೆಂಬುದನುಂಟುಮಾಡೆ ನೋ
ಡಿದುದರೆ ಕಣ್ಗಳೞ್ಕಮೆವಡುತ್ತಿರೆ ಪೋ ಪಸವೋಡಿತೆಂದು ನೀ
ರದಪಥದೊಳ್ ತಗುಳ್ದರಿಗನಂ ಪೊಗೞ್ದಾಡಿದನಂದು ದಂಡಕಾ
ಷ್ಠದ ತುದಿಯೊಳ್ ಪಳಂಚಲೆಯೆ ಕೋವಣವಂ ಗುಡಿಗಟ್ಟಿ ನಾರದಂ|| ೨೧೯
ಪದ್ಯ-೨೧೯:ಪದವಿಭಾಗ-ಅರ್ಥ:ಒದವಿದ ಅಲಂಪು (ಸಮೃದ್ಧಿಯಾದ ಸಂತಸವು,) ಕಣ್ಣೆವೆ ಕರುಳ್ ತನಗೆಂಬುದನುಂಟುಮಾಡೆ (ತನಗೆ ಕಣ್ಣೂ ಕರುಳೂ ಇದೆ ಎಂಬ ಭಾವವನ್ನುಂಟುಮಾಡಿ ) ನೋಡಿದುದರೆ (ಬಹಳ ಕಾಲದಿಂದ ನೋಡಿದ್ದಲ್ಲಿಯೇ) ಕಣ್ಗಳು ಅೞ್ಕಮೆವಡುತ್ತಿರೆ (ಕಣ್ಣುಗಳು ಅಜೀರ್ಣವನ್ನು ಹೊಂದಿರಲು, ನೋಡಿ ತೃಪ್ತಿಪಟ್ಟು ಹೆಚ್ಚಾಗಿರಲು,) ಪೋ ಪಸವು ಓಡಿತು ಎಂದು (ಹೋಗು, ಸಾಕಿನ್ನು ಪಸವು/ಬರವು ಹೋಯಿತು ಎಂದು) ನೀರದಪಥದೊಳ್ ತಗುಳ್ದು (ಅರ್ಜುನನ್ನು ಅನುಸರಿಸಿ/ ಕುರಿತು) ಅರಿಗನಂ ಪೊಗೞ್ದು (ಹೊಗಳಿ) ಆಡಿದನು ಅಂದು (ಆಕಾಶದಲ್ಲಿ ಅರ್ಜುನನನ್ನು ಕುರಿತು ಹೊಗಳುತ್ತ ಅಂದು ಹೊಗಳಿ ಕುಣಿದಾಡಿದನು. ಯಾರೆಂದರೆ-) ದಂಡಕಾಷ್ಠದ ತುದಿಯೊಳ್ ಪಳಂಚಿ (ಸೇರಿಸಿಕೊಂಡು) ಅಲೆಯೆ (ಅಲುಗಿಸುತ್ತ) ಕೋವಣವಂ (ಕೌಪೀನವನ್ನು) ಗುಡಿಗಟ್ಟಿ ನಾರದಂ (ತನ್ನ ದಂಡದಂತಿರುವ ಕೋಲಿನ ತುದಿಗೆ ಕೋಪೀನವನ್ನು ಸೇರಿಸಿಕೊಂಡು ಬಾವುಟದಂತೆ ಅಲುಗಿಸುತ್ತ ನಾರದನು ಹೊಗಳಿ ಕುಣಿದಾಡಿದನು.)
ಪದ್ಯ-೨೧೯:ಅರ್ಥ: ಕರ್ಣಾರ್ಜುನರ ಕಾಳಗವನ್ನು ನೋಡಿ, ಸಮೃದ್ಧಿಯಾದ ಸಂತಸವು, ತನಗೆ ಕಣ್ಣೂ ಕರುಳೂ ಇದೆ ಎಂಬ ಭಾವವನ್ನುಂಟುಮಾಡಿ ಬಹಳ ಕಾಲದಿಂದ ನೋಡಿದ್ದಲ್ಲಿಯೇ ನನ್ನ ಕಣ್ಣುಗಳು ಅಜೀರ್ಣವನ್ನು ಹೊಂದಿರಲು, ನೋಡಿ ತೃಪ್ತಿಪಟ್ಟು ಹೆಚ್ಚಾಗಿ, ಹೋಗು, ಸಾಕಿನ್ನು ಪಸವು/ಬರವು ಹೋಯಿತು ಎಂದು ಆಕಾಶದಲ್ಲಿ ಅರ್ಜುನನನ್ನು ಕುರಿತು ಹೊಗಳುತ್ತ ತನ್ನ ದಂಡದಂತಿರುವ ಕೋಲಿನ ತುದಿಗೆ ಕೌಪೀನವನ್ನು ಸೇರಿಸಿಕೊಂಡು ಬಾವುಟದಂತೆ ಅಲುಗಿಸುತ್ತ ನಾರದನು ಹೊಗಳಿ ಕುಣಿದಾಡಿದನು.
ವ|| ಆಗಳ್-
ವಚನ:ಅರ್ಥ:ವ|| ಆಗ
ಕಂ|| ಪೞಯಿಗೆಯನುಡುಗಿ ರಥಮಂ
ಪೆೞವನನೆಸಗಲ್ಕೆವೇೞ್ದು ಸುತಶೋಕದ ಪೊಂ|
ಪುೞಿಯೊಳ್ ಮೆಯ್ಯಱಿಯದೆ ನೀ
ರಿೞಿವಂತೆವೊಲಿೞಿದನಪರಜಳಗೆ ದಿನಪಂ|| ೨೨೦ ||
ಪದ್ಯ-೨೨೦:ಪದವಿಭಾಗ-ಅರ್ಥ:ಪೞಯಿಗೆಯನು ಉಡುಗಿ ರಥಮಂ ಪೆೞವನಂ ಎಸಗಲ್ಕೆ ವೇೞ್ದು (ಬಾವುಟವನ್ನು ಇಳಿಸಿ ಹೆಳವನಾದ ಅರುಣನನ್ನು ತೇರನ್ನು ನಡೆಸುವಂತೆ ಹೇಳಿ) ಸುತಶೋಕದ ಪೊಂಪುೞಿಯೊಳ್ (ಪುತ್ರಶೋಕದ ಆಧಿಕ್ಯದಲ್ಲಿ) ಮೆಯ್ಯ ಅಱಿಯದೆ ನೀರ್ ಇೞಿವಂತೆವೊಲ್ (ಪುತ್ರಶೋಕದ ಆಧಿಕ್ಯದಲ್ಲಿ ಸೂರ್ಯನು ಮಯ್ಯ ಅರಿಯದ-ದೇಹದ ಪರಿವೆ ಇಲ್ಲದೆ -ಜ್ಞಾನಶೂನ್ಯನಾಗಿ (ಸತ್ತವರಿಗೆ) ನೀರಿಗೆ ಇಳಿದು ಸ್ನಾನಮಾಡುವ ಹಾಗೆ) ಇೞಿದನು ಅಪರಜಳಗೆ ದಿನಪಂ (ಸೂರ್ಯನು ಪಶ್ಚಿಮಸಮುದ್ರಕ್ಕೆ ಇಳಿದನು.) (ಅರುಣ -ಸೂರ್ಯನ ಸಾರಥಿ - ಕಾಲಿಲ್ಲ.)
ಪದ್ಯ-೦೦:ಅರ್ಥ: ಬಾವುಟವನ್ನು ಇಳಿಸಿ ಹೆಳವನಾದ ಅರುಣನನ್ನು ತೇರನ್ನು ನಡೆಸುವಂತೆ ಹೇಳಿ ಪುತ್ರಶೋಕದ ಆಧಿಕ್ಯದಲ್ಲಿ ಸೂರ್ಯನು ಜ್ಞಾನಶೂನ್ಯನಾಗಿ (ಸತ್ತವರಿಗೆ) ನೀರಿಗೆ ಇಳಿದು ಸ್ನಾನಮಾಡುವ ಹಾಗೆ ಸೂರ್ಯನು ಪಶ್ಚಿಮಸಮುದ್ರಕ್ಕೆ ಇಳಿದನು. (ಅಸ್ತಮಯವಾದನು)
ವ|| ಆಗಳ್ ಕರ್ಣನ ಬೞಿವೞಿಯನೆ ತನ್ನ ಪೋಪುದನಭಿನಯಿಸುವಂತೆ ಶೋಕೋದ್ರೇಕದೊಳ್ ಮೆಯ್ಯಱಿಯದೆ ಕನಕರಥದೊಳ್ ಮೆಯ್ಯನೀಡಾಡಿ ನಾಡಾಡಿಯಲ್ಲದೆ ಮೂರ್ಛೆವೋದ ದುರ್ಯೋಧನನನಶ್ವತ್ಥಾಮ ಕೃಪ ಕೃತವರ್ಮ ಶಕುನಿಯರ್ ನಿಜ ನಿವಾಸಕ್ಕೊಡಗೊಂಡು ಪೋದರಾಗಳ್-
ವಚನ:ಪದವಿಭಾಗ-ಅರ್ಥ:ಆಗಳ್ ಕರ್ಣನ ಬೞಿವೞಿಯನೆ (ಬಳಿವಳಿಸು- ಸ್ವಲ್ಪ ದೂರ ಜೊತೆಯಲ್ಲಿಹೋಗಿ ಕಳಿಸುವುದು) ತನ್ನ ಪೋಪುದನು ಅಭಿನಯಿಸುವಂತೆ (ಆಗ ಕರ್ಣನ ದಾರಿಯಲ್ಲಿಯೇ ತಾನೂ ಹೋಗುವುದನ್ನು ಅಭಿನಯಿಸುವಂತೆ) ಶೋಕೋದ್ರೇಕದೊಳ್ ಮೆಯ್ಯಱಿಯದೆ (ದುಃಖದ ಉದ್ರೇಕದಿಂದ ಜ್ಞಾನಶೂನ್ಯನಾಗಿ) ಕನಕರಥದೊಳ್ ಮೆಯ್ಯನು ಈಡಾಡಿ ನಾಡಾಡಿಯಲ್ಲದೆ ಮೂರ್ಛೆವೋದ (ಚಿನ್ನದ ತೇರಿನಲ್ಲಿಯೇ ಶರೀರವನ್ನು ಚಾಚಿ ಅಸಾಧಾರಣ ರೀತಿಯಲ್ಲಿ ಮೂರ್ಛೆ ಹೋಗಿದ್ದ) ದುರ್ಯೋಧನನನು ಅಶ್ವತ್ಥಾಮ ಕೃಪ ಕೃತವರ್ಮ ಶಕುನಿಯರ್ ನಿಜ ನಿವಾಸಕ್ಕೊಡಗೊಂಡು ಪೋದರಾಗಳ್ (ದುರ್ಯೋಧನನನ್ನು ಅಶ್ವತ್ಥಾಮ, ಕೃಪ, ಕೃತವರ್ಮ, ಶಕುನಿಯರು ತಮ್ಮ ವಾಸಸ್ಥಳಕ್ಕೆ ಜೊತೆಯಲ್ಲಿ ಕರೆದುಕೊಂಡು ಹೋದರು. ಆಗ)-
ವಚನ:ಅರ್ಥ:ಆಗ ಕರ್ಣನ ದಾರಿಯಲ್ಲಿಯೇ ತಾನೂ ಹೋಗುವುದನ್ನು ಅಭಿನಯಿಸುವಂತೆ ದುಃಖದ ಉದ್ರೇಕದಿಂದ ಜ್ಞಾನಶೂನ್ಯನಾಗಿ ಚಿನ್ನದ ತೇರಿನಲ್ಲಿಯೇ ಶರೀರವನ್ನು ಚಾಚಿ ಅಸಾಧಾರಣ ರೀತಿಯಲ್ಲಿ ಮೂರ್ಛೆ ಹೋಗಿದ್ದ ದುರ್ಯೋಧನನನ್ನು ಅಶ್ವತ್ಥಾಮ, ಕೃಪ, ಕೃತವರ್ಮ, ಶಕುನಿಯರು ತಮ್ಮ ವಾಸಸ್ಥಳಕ್ಕೆ ಜೊತೆಯಲ್ಲಿ ಕರೆದುಕೊಂಡು ಹೋದರು. ಆಗ
ಚಂ|| ಸುರಿವಜರಪ್ರಸೂನರಜದಿಂ ಕವಿಲಾದ ಶಿರೋರುಹಂ ರಜಂ
ಬೊರೆದಳಿಮಾಲೆ ಮಾಲೆಯನೆ ಪೋಲೆ ಪಯೋಜಜ ಪಾರ್ವತೀಶರೊ|
ಳ್ವರಕೆಯನಾಂತು ಕರ್ಣಹತಿಯೊಳ್ ತನಗೞ್ಕಱನೀಯೆ ಬಂದನಂ
ದರಮನೆಗಚ್ಯುತಂಬೆರಸಳುರ್ಕೆಯಿನಮ್ಯನ ಗಂಧವಾರಣಂ|| ೨೨೧
ಪದ್ಯ-೨೨೧:ಪದವಿಭಾಗ-ಅರ್ಥ: ಸುರಿವ ಅಜರ ಪ್ರಸೂನ(ಹೂವಿನ) ರಜದಿಂ (ದೇವತೆಗಳು ಸುರಿಯುತ್ತಿರುವ ಹೂವುಗಳ ಪರಾಗದಿಂದ) ಕವಿಲಾದ ಶಿರೋರುಹಂ (ಕಪಿಲಬಣ್ಣವಾದ ಕೂದಲು,) ರಜಂ ಬೊರೆದ ಅಳಿಮಾಲೆ ಮಾಲೆಯನೆ ಪೋಲೆ (ಪರಾಗದಿಂದ ಮುಚ್ಚಲ್ಪಟ್ಟ ಅಳಿ/ ದುಂಬಿಗಳ ಸಮೂಹದಿಂದ ಕೂಡಿದ ಹೂವಿನ ಮಾಲೆಯನ್ನೇ ಹೋಲುತ್ತಿರಲು,) ಪಯೋಜಜ (ಬ್ರಹ್ಮ) ಪಾರ್ವತೀಶರ (ಶಿವರ) ಒಳ್ವರಕೆಯನು ಆಂತು (ಒಳ್ಳೆಯ ಆಶೀರ್ವಾದವನ್ನು ಪಡೆದು) ಕರ್ಣ ಹತಿಯೊಳ್ ತನಗೆ ಅೞ್ಕಱನೀಯೆ (ಕರ್ಣನ ವಧೆಯಿಂದ ತನಗೆ/ಧರ್ಮಜನಿಗೆ ಆನಂದವನ್ನುಂಟುಮಾಡುತ್ತಿರಲು) ಬಂದನು ಅಂದು ಅರಮನೆಗೆ ಅಚ್ಯುತಂ ಬೆರಸು ಅಳುರ್ಕೆಯಿಂ ಅಮ್ಯನ ಗಂಧವಾರಣಂ- ಅರ್ಜುನನು (ಅಮ್ಮನ ಗಂಧವಾರಣನಾದ ಅರ್ಜುನನು ಕೃಷ್ಣನೊಡಗೂಡಿ ಆ ದಿನ ಅತಿಶಯದಿಂದ ಅರಮನೆಗೆ ಬಂದನು.)
ಪದ್ಯ-೨೨೧:ಅರ್ಥ: ದೇವತೆಗಳು ಸುರಿಯುತ್ತಿರುವ ಹೂವುಗಳ ಪರಾಗದಿಂದ ಕಪಿಲಬಣ್ಣವಾದ ಕೂದಲು, ಪರಾಗದಿಂದ ಮುಚ್ಚಲ್ಪಟ್ಟ ದುಂಬಿಗಳ ಸಮೂಹದಿಂದ ಕೂಡಿದ ಹೂವಿನ ಮಾಲೆಯನ್ನೇ ಹೋಲುತ್ತಿರಲು, ಬ್ರಹ್ಮ ಮತ್ತು ರುದ್ರರ ಒಳ್ಳೆಯ ಆಶೀರ್ವಾದವನ್ನು ಪಡೆದು ಕರ್ಣನ ವಧೆಯಿಂದ ತನಗೆ/ಧರ್ಮಜನಿಗೆ ಆನಂದವನ್ನುಂಟುಮಾಡುತ್ತಿರಲು ಅಮ್ಮನ ಗಂಧವಾರಣನಾದ ಅರ್ಜುನನು ಕೃಷ್ಣನೊಡಗೂಡಿ ಆ ದಿನ ಅತಿಶಯದಿಂದ ಅರಮನೆಗೆ ಬಂದನು.
|| ಇದು ವಿವಿಧ ವಿಬುಧಜನವಿನುತ ಜಿನಪದಾಂಭೋಜ ವರಪ್ರಸಾದೋತ್ಪನ್ನ ಪ್ರಸನ್ನ ಗಂಭೀರ ವಚನ ರಚನ ಚತುರ ಕವಿತಾಗುಣಾರ್ಣವವಿರಚಿತಮಪ್ಪ ವಿಕ್ರಮಾರ್ಜುನವಿಜಯದೊಳ್ ದ್ವಾದಶಾಶ್ವಾಸಂ||
||ವ|| ಇದು ಅನೇಕ ದೇವತೆಗಳಿಂದ ಸ್ತುತಿಸಲ್ಪಟ್ಟ ಜಿನಪಾದಕಮಲಗಳ ವರಪ್ರಸಾದದಿಂದ ಹುಟ್ಟಿದುದೂ ತಿಳಿಯಾದುದೂ ಗಂಭೀರವಾದುದೂ ಆದ ಮಾತುಗಳ ರಚನೆಯಲ್ಲಿ ಚಾತುರ್ಯವನ್ನುಳ್ಳ ಕವಿತಾಗುಣಾರ್ಣವನಿಂದ ರಚಿತವಾದುದೂ ಆದ ವಿಕ್ರಮಾರ್ಜುನವಿಜಯದಲ್ಲಿ ಹನ್ನೆರಡನೆಯ ಆಶ್ವಾಸ||
♦♣♣♣♣♣♣♣♣♣♣♣♣♣♣♣♣♣♣♣♦

ಪಂಪಭಾರತ[ಸಂಪಾದಿಸಿ]

ಪಂಪಭಾರತ: ಅಧ್ಯಾಯ ಅಥವ ಆಶ್ವಾಸಗಳು-> ಪಂಪ:ಕವಿ-ಕೃತಿ ಪರಿಚಯ 1 2 3 4 5 6 7 8 9 10 11 12 13 14 ಅನುಬಂಧ 16 ಪಂಪ - ಒಂದು ಚಿಂತನೆ ವ್ಯಾಸ ಭಾರತ ಮತ್ತು ಪಂಪಭಾರತ: ಪರಾಮರ್ಶೆ

ಪರಿವಿಡಿ[ಸಂಪಾದಿಸಿ]

ಕನ್ನಡ ವಿಕಿಸೋರ್ಸ್[ಸಂಪಾದಿಸಿ]

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ | ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ