ಪುಟ:Rangammana Vathara.pdf/೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ರಂಗಮ್ಮನ ವಠಾರ

29

ಗೆಳೆತನದ ನೆನಪಿಗೆಂದು ನೀಲಿ ಕೆಂಪು ಬಣ್ಣದ ತನ್ನ ಒಂದು ಪೆನ್ಸಿಲನ್ನು ಆತ ಪುಟ್ಟನಿಗೆ
ಕೊಟ್ಟ.
"ಮರೀಬೇಡ ಪುಟ್ಟೂ."
"ಇಲ್ಲ. ಮರೆಯೋಲ್ಲ."
"ಪ್ರತಿ ಭಾನುವಾರವೂ ಆಟ ಆಡೋಕೆ ಬರ್ಬೇಕು."
" ಹೂಂ. ಬರ್ತೀನಿ."
ಆದರೆ ಹೊಸ ಬಿಡಾರ ಎಲ್ಲಿ ಎಷ್ಟು ದೂರ ಎಂಬುದು ಇಬ್ಬರಿಗೂ ಗೊತ್ತಿರಲಿಲ್ಲ.
ತೆರವಾದ ಮನೆಯ ಒಳಹೊಕ್ಕು ದೀಪದ ಬಲ್ಬನ್ನು ನೋಡಿ ಬಂದು, ರಂಗಮ್ಮ
ನಾರಾಯಣಿಯ ಗಂಡನನ್ನು ಕೇಳಿದರು:
"ಮನೆ ಎಲ್ಮಾಡಿದೀಯಪ್ಪ?"
"ಚಿಕ್ಕಮಾವಳ್ಳೀಲಿ ರಂಗಮ್ನೋರೆ."
"ಎಷ್ಟು ಬಾಡಿಗೆ?"
"ಸದ್ಯ ಒಬ್ಬ ಸ್ನೇಹಿತನ ಮನೇಲಿ ಹೋಗಿರ್ತೀನಿ."
"ಓ...ಹಾಗೋ..."
ಸಂಜೆ ಬೇಗನೆ ಆ ಪ್ರದೇಶ ಬಿಡಬೇಕೆಂದು ಆತ ಬಯಸಿದ್ದ. ವಠಾರಕ್ಕೆ ಹಿಂತಿ
ರುಗುವ ಗಂಡಸರಿಗೆಲ್ಲ ಮುಖ ತೋರಿಸುವ ಇಚ್ಛೆ ಆತನಿಗಿರಲಿಲ್ಲ.
ಮನೆಯಲ್ಲೇ ಇದ್ದ ಗುಂಡಣ್ಣ ಸಾಮಾನಿನ ಚೀಲಗಳನ್ನು ಹೊರ ಅಂಗಳಕ್ಕೆ
ತಂದು ಸಾಬಿಯ ಕೈಗೊಪ್ಪಿಸಲು ನೆರವಾದ.
ವಠಾರದ ನಿವಾಸಿಗಳಲ್ಲಿ ಹೆಚ್ಚಿನ ಹೆಂಗಳೆಯರು ಅಂಗಳಕ್ಕೆ ಬಂದು ನಿಂತರು.
ಮನೆಯೊಳಗಿದ್ದ ಕವಿ ಜಯರಾಮು ಮಹಡಿಯ ಮೇಲಿನ ಕಿಟಕಿಯಿಂದ ಕೆಳಗಿಣಿಕಿ
ನೋಡಿದ.
ಏಳು ವರ್ಷಗಳ ಹಿಂದೆ ಸೊಗಸಾದೊಂದು ಜಟಕಾ ಗಾಡಿ ಆ ವಠಾರಕ್ಕೆ
ಬಂದಿತ್ತು. ಯೌವನ ಸೌಂದರ್ಯ ಆರೋಗ್ಯಗಳ ಪ್ರತಿಮೂರ್ತಿಯಾಗಿ ಚೊಚ್ಚಲ ಮಗು
ಪುಟ್ಟನೊಡನೆ ನಾರಾಯಣಿ ಆ ಗಾಡಿಯಿಂದ ಕೆಳಕ್ಕಿಳಿದಿದ್ದಳು. ಆ ಬಳಿಕ ಆಕೆಯ
ಗಂಡ. ಪುಟ್ಟನ ತಂದೆ ಇಷ್ಟು ವರ್ಷಗಳ ಕಾಲವೂ ವಠಾರದ ಪಾಲಿಗೆ 'ನಾರಾಯಣಿಯ
ಗಂಡ'ನಾಗಿಯೇ ಉಳಿದಿದ್ದ.
ಕಮಲಮ್ಮ ಸೆರಗಿನಿಂದ ಕಣ್ಣೊತ್ತಿಕೊಳ್ಳುತ್ತ, ಕಾಮಾಕ್ಷಿಯ ಕಂಕುಳಿನಿಂದ
ನಾರಾಯಣಿಯ ಹಸುಗೂಸನ್ನು ಪಡೆದು ಪುಟ್ಟನಿಗೆ ಕೊಟ್ಟಳು. ಜೋಲು ಮೋರೆ
ಹಾಕಿಕೊಂಡಿದ್ದ ಪುಟ್ಟ ಆ ಮಗುವನ್ನು ತನ್ನ ಕಂಕುಳಿಗೇರಿಸಿದ.
"ಪೋಲಿ ಅಲೀಬೇಡ ಪುಟ್ಟೂ. ನಿಮ್ಮಪ್ಪನಿಗೆ ಕೆಲಸ ಸಿಕ್ಕಿದ ತಕ್ಷಣ ಸ್ಕೂಲಿಗೆ
ಹೋಗು...."
___ಎಂದು ರಂಗಮ್ಮ ಆ ಹುಡುಗನನ್ನು ಉದ್ದೇಶಿಸಿ ಹಿತದ ಮಾತನ್ನಾಡಿದರು.