ಪುಟ:Banashankari.pdf/೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

 ಮೇಲಿಟ್ಟು, ಒಡೆದ ಕಲ್ಲೊಂದರ ಮೇಲೆ, ಎರಡೂ ಕೈಗಳಲ್ಲಿ ತಲೆ ಇರಿಸಿ, ಉಸಿರಿಗಾಗಿ ಏದುತ್ತ ಏದುತ್ತ ಮುನಿಯಪ್ಪ ಕುಳಿತಿದ್ದ. " ಏನಾಯ್ತು ಮುನಿಯ, ಏನಾಯ್ತು?" ಅತ್ತೆಯೂ ಇಳಿದು ಬಂದು ಸ್ವಲ್ಪ ದೂರದಲ್ಲಿ ನಿಂತರು. ಏನಾಯ್ತೂಂದ್ರೆ...?

ಆಮ್ಮಿ ಮೆಲ್ಲನೆ ನಡೆದು ಬಂದು ಬಾಗಿಲನ್ನು ಆಧರಿಸಿ ನಿಂತಳು. ಅವಳ ಮನಸ್ಸು ಕೇಳುತ್ತಿತ್ತು ಮೂಕವಾಗಿ:

' ಏನಾಯ್ತು ? ಅವರಿಗೇನಾಯ್ತು ? ನನ್ನ ದೇವರಿಗೇನಾಯ್ತು?' ಸ್ವರ ಹೊರಡಿಸಲೆತ್ನಿಸಿದ ಮುನಿಯ, ಮಾತಿನ ಬದಲು, ರೋದನದ ಧ್ವನಿ ತೆಗೆದ. ಅಯ್ಯೋ! ಎಂದರು ಅತ್ತೆ,ಏನಾಯ್ತು? ಮಾವ ಗದರಿ ನುಡಿದರು: ಸುಮ್ನಿರು ಲಕ್ಷೀ, ನೀನು ಸುಮ್ನಿರು!

ಮತ್ತೂ ನಾಲಾರು ನಿಮಿಷ ಮುನಿಯ ಮಾತನಾಡಲೇ ಇಲ್ಲ, ಮಡಿ–ಮೈಲಿಗೆಯನ್ನು, ಗಣಿಸದೆ ಮಾವ, ಆತನ ಭುಜ ಹಿಡಿದು ಕುಲುಕಿದರು.

ಹೇಳು ಮುನಿಯ! ಹೇಳು! ಏನಾಯು ಹೇಳು! ಎಲ್ಲಿ ರಾಮಚಂದ್ರ? ಬರಲಿಲ್ವೇನೂ? ಮುನಿಯ ಮಾವನ ಪಾದಗಳನ್ನು ಹಿಡಿದುಕೊಂಡ. "ನಾನು ಪಾಪಿ ! ದ್ಯಾವ್ರೂ...ನಾನು ಕಡು ಪಾಪಿ! ಆ ಬಳಿಕ ಪಿಸು ಮಾತಿನಲ್ಲಿ ಆ ವಿಷಯ... " ಚಿಕ್ಕ ಅಯ್ಯೋರು ಇವತು ಚಂಜೆಗೇ ತೀರ್ಹೋದ್ರು......ಅಯ್ಯೋ! " ಅಮ್ಮಿಗೆ ಕೇಳಿಸಿದುದು ಆ ಮಾತಲ್ಲ. ಅವಳ ಕಿವಿಯನ್ನಿರಿದುದು ಅತ್ತೆಯ ಕಠೋರ ರೋದನ.. ತಲೆತಿರುಗಿ ಅತ್ತೆ ನೆಲದ ಮೇಲೆ ಕುಸಿದು ಬಿದ್ದುದನ್ನು ಅವಳು ಕಂಡಳು. ಮಾವ ಸ್ತಂಭಿತರಾಗಿ ನಿಂತರು, ಕಲ್ಲು ಬೊಂಬೆಯ ಹಾಗೆ, ಕತ್ತೆಲೆಯನ್ನು ಭೇದಿಸಿಕೊಂಡು ಆಕಾಶಕ್ಕೆ ಅಡರಿದ ಆ ರೋದನವೊ! ಅಮ್ಮಿ ಅಧೀರಳಾದಾಗ ಯಾವಾಗಲೂ " ಅಮ್ಮಾ ಎನ್ನುತ್ತಿದ್ದಳು- ಗತಿಸಿದ ಅಮ್ಮನ ನೆನಪು. ಈಗಲೂ ಅತ್ತೆಯ ಬಳಿಗೆ ಓಡುತ್ತ ಓಡುತ್ತ ಅವಳು ಕೂಗಾಡಿದಳು: " ಅಮ್ಮಾ! ಆಮ್ಮಾ!... ಅಯ್ಯೋ! ನನ್ನ ರಾಮಚಂದ್ರನ್ನ, ಮುದ್ದು ಕಂದನ್ನ, ಕೊಂದರಪ್ಪೋ ಕೊಂದರು. ಅಯ್ಯೋ-ಅಯ್ಯೋ! ರಾಮ-ಚಂದ್ರ-...

ಅಮ್ಮಿ ಮಾವನ ಮುಖ ನೋಡಿದಳು, ಮುನಿಯನ ಮುಖ ನೋಡಿದಳು. ಆ! ಹಾಗೂ ಆಯಿತೆ?

ಅಮ್ಮಾ! ಅಮ್ಮಾ!... ಆ ಕೂಗಿನ ಜತೆಯಲ್ಲೇ, ಹೃದಯ ತಲ್ಲಣಿಸುವ ಹಾಗೆ ಬಿಕ್ಕಿ ಬಿಕ್ಕಿ ಬಂದ ಅಳು.