ಪುಟ:Abhaya.pdf/೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಓಡಿಸು ಈತನನ್ನು ಸಹಸ್ರಗಟ್ಟಲೆ ವರದಕ್ಷಿಣೆಕೇಳಿದವನು ಇವನೆ ಅಲ್ಲವೆ? ಎಳೆಯ ಹೃದಯದ ಮೇಲೆ ಕಾದ ಕಬ್ಬಿಣದಿಂದ ಬರೆ ಎಳೆದವನು ಈತನೆ ಅಲ್ಲವೆ?..ಆದರೆ ಮನಸ್ಸಿನ ಇನ್ನೊಂದು ಭಾಗ ಕೊಳಲನ್ನೂದುತ್ತಾ ವೈಯಾರವಾಗಿ ಹೇಳುತಿತ್ತು: ಎಷ್ಟೊಂದು ಸಾರೆ ಸ್ಮರಿಸಿಕೊಂಡಿದ್ದೆ ಈ ಗಾರುಡಿಗನನ್ನು. ಇಗೋ ಈ ಮನ್ಮಧ ಈಗ ಬಂದು ನಿಂತಿದ್ದಾನೆ. ಬಿಡಬೇಡ. ಕರೆ. ಒಳಗೆ ಕರೆ.

ಬನ್ನಿ--ಎಂದಿದ್ದಳು ತುಂಗಮ್ಮ

ಆದರೆ ಅವನು ಬರಲಿಲ್ಲ.

"ನೀವು ಒಬ್ರೇ ಇರೋವಾಗ ಬರೊಲ್ವಮ್ಮಾ! ಹಲ್ಲು ಮುರಿದು ಕೈಗೆ

ಕೊಡ್ತೀನೀಂತ ಹೇಳಿದ್ರಿ!"

ಮೂರು ವರ್ಷಗಳಿಗೂ ಹೆಚ್ಚು ಕಾಲವಾಗಿತ್ತು ಆಕೆ ಆ ಮಾತನ್ನಾಡಿ.

ಆತ ನಗುತಿದ್ದ ನಿಜ. ಆದರೂ ಅಂತಹ ಮಾತನ್ನು ಹಾಗೆ ಆಡ

ಬಹುದೆ?

ತುಂಗಮ್ಮನೂ ನಕ್ಕಳು. ಯಾವುದರ ಸಂಕೇತವೆಂಬುದು ತನಗೇ

ಅರ್ಥವಾಗದೆ ಇದ್ದ ಕಂಬನಿ, ಆಕೆಯ ಕಣ್ಣಂಚಿನಲ್ಲಿ ತುಳುಕಾಡಿತು.

"ಬನ್ನಿ!"

"ಈಗಲೇ ಮುರಿದು ಕೈಗೆ ಕೊಡ್ತೀರೇನು?"

"ಆಯ್ಯೊ, ಎಷ್ಟು ಹೇಳ್ತೀರ ಅದನ್ನೆ"

ನಾರಾಯಣ ಮೂರ್ತಿ ಸ್ವರ ಬದಲಿಸಿದ.

"ಮೇಲಿನ ಭಾನುವಾರ ಬರ್ತೀನೀಂತ ನಿಮ್ತಂದೆಗೆ ಹೇಳಿ.

ನನ್ನನ್ನ ಇಲ್ಲಿಗೇ ಪೋಸ್ಟ್ ಮಾಡಿದಾರೆ. ಹೊಸಉದ್ಯೋಗ. ಡಿ.ಸಿ.ಯವರ ಕಚೇರಿಲಿದೀನಿ. ಒಂದು ವಾರವಾಯ್ತು ಬಂದು."

"ಓ!"

"ಸರಿ, ಹೊರಡ್ತೀನಿ."

ಒತ್ತಾಯಿಸಿ ಕರೆಯುವ ಇಚ್ಛೆಯಾಯಿತು ತುಂಗಮ್ಮನಿಗೆ. ಆದರೆ

ಮಾತು ಹೊರಡಲೇ ಇಲ್ಲ. ಆತನೊ? ಅಷ್ಟರಲ್ಲೇ ಬೀದಿಗಿಳಿದು ಠೀವಿಯಿಂದ ನಡೆದುಹೋಗುತಿದ್ದ.