ಪುಟ:ಕಥಾ ಸಂಗ್ರಹ - ಭಾಗ ೨.djvu/೧೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಾವಣನ ಮರಣವು 169 ದರೋ ! ನನ್ನ ಕೈಗನ್ನಡಿಯನ್ನು ಒಡೆದುಹಾಕಿದರೋ ! ನನ್ನ ಚಿಂತಾಮಣಿಯನ್ನು ಸೂರೆಮಾಡಿದರೋ ! ಈ ಸಮಸ್ತ ವೀರ ಪರಿವಾರವೆಲ್ಲವೂ ಎಲ್ಲಿ ಹೋಗಿದ್ದಿತು? ನನ್ನ ಮರಿಯಾನೆಯ ಕತ್ತನ್ನು ಕೊಯ್ಯುತ್ತಿದ್ದಾಗ ಈ ಲಂಕಾ ದುರ್ಗವು ಉರಿದುಹೋ ಗಿದ್ದಿತೆ ! ಒಬ್ಬರೂ ಇರಲಿಲ್ಲವೇ ! ಇಷ್ಟು ಜನರಿದ್ದು ನನ್ನ ಸಂತೋಷಲತೆಯ ಮಲ ವನ್ನು ವಿರೋಧಿಗಳಿಂದ ಕೀಳಿಸಿ ಹಾಕಿದರಲ್ಲಾ! ಈ ರಾಕ್ಷಸ ರಾಜ್ಯದ ಸಂಪತ್ತನ್ನೆಲ್ಲಾ ನನ್ನರಗಿಣಿಮರಿಯೊಂದೇ ಉಂಡು ಮುಗಿಸುತ್ತಿದ್ದಿತೇ ! ಮಾರಿಯ ಬಳಗದಂತೆಯ ಯಮನ ಕೋಣಗಳಂತೆಯ ತುಂಬಿರುವ ಈ ರಾಕ್ಷಸ ಬಲವು ನನ್ನ ಚಿನ್ನದ ರನ್ನದ ಮುದ್ದಿನ ಬೊಂಬೆಯನ್ನು ಅರಿಗಳೆದುರಿಗೆ ನೂಕಿ ನೋಟ ನೋಡುತ್ತಿದ್ದರೇ ! ಹಾ ! ಪಾಪಿಯಾದ ನನ್ನ ಹೃದಯವೇ ! ನಿನಗೆ ದುಃಖದ ಮುಳ್ಳು ಹೊಕ್ಕಿತು. ತಾಪದ ಶಲಾಕೆಯು ನೆಟ್ಟಿತು. ಭಯದ ಬಾಣವು ನಾಟಿತು, ವ್ಯಥೆಯ ವಿಷಲತೆಯು ಮುಚ್ಚಿಕೊಂಡಿತು. ಇನ್ನು ಮುಂದೆ ನಿನಗೆ ಸಂತೋಷದ ವಾರ್ತೆಯೂ ಕೂಡ ದುರ್ಲಭವು, ಇಂದಿಗೆ ನಾನು ಅನಾಥಳಾದೆನು. ಯಾರೂ ನನಗೆ ದಿಕ್ಕಿಲ್ಲ, ಈ ನನ್ನ ಬಂಡಬಾಳನ್ನು ಇನ್ನಾ ದರೂ ವಿನಾಶಮಾಡದಿರುವ ದುರ್ವಿಧಿಗೆ ಕಾಲ್ಕುರಿದು ಹೋದುವೋ ! ತಡಮಾಡುವ ಮರಣಕ್ಕೆ ಕಣ್ಣು ಹೋದುವೋ ! ಅಯ್ಯಾ ಸಭಾಸ ದರೇ, ಅನಾಥಳಾದ ನನ್ನ ಮೊರೆಯನ್ನು ಯಾರೂ ವಿಚಾರಿಸುವುದಿಲ್ಲ ವೇ ? ನೀವರಸು ಗಳಲ್ಲವೇ ? ಹೀಗಿರುವುದು ನಿಮಗೆ ಮಹಾ ಪಾಪವಲ್ಲವೇ ? ಇಷ್ಟು ಕಠಿಣ ಹೃದಯ ರಾದ ನೀವೇ ನನ್ನ ಕಂದನನ್ನು ಕೊಲೆಗೊಡ್ಡಿ ಕರಿದೆವ್ವಗಳಂತೆ ಕೂತು ಕಾಲಹರಣ ಮಾಡಿದಿರಿ ಲೇಸು ಮಾಡಿಕೊಂಡಿರಿ ! ಇರಾಜ್ಯವನ್ನು ನೀವೇ ಪಾಲಿಸಿಕೊಳ್ಳಿರಿ ಎಂದು ದಿಕ್ಕು ದಿಕ್ಕುಗಳನ್ನು ನೋಡಿ ಮೊರೆಯಿಡುತ್ತ-ಹಗೆಗಳ ಕೊಲೆಗೆ ನನ್ನ ಮಗನ ತಲೆಯನ್ನೊಡ್ಡಿ ವಿಪತ್ತನ್ನು ತಪ್ಪಿಸಿಕೊಂಡು ಕ್ಷೇಮದಿಂದ ಬಂದಿರಾ ! ರಣ ದೇವತೆಗೆ ನನ್ನ ಮುದ್ದುಗುವರನನ್ನು ಬಲಿಗೊಟ್ಟು ಸಂತೋಷದಿಂದ ಬಂದಿರಾ ! ನನ್ನ ಪುತ್ರರತ್ನ ವನ್ನು ಧೋರಮೃತ್ಯುವಿನ ಬಾಯಿಗೆ ನೂಕಿ ನಿರ್ವ್ಯಸನವಾಗಿ ಬಂದಿರಾ ! ಹಾ ! ದುರ್ವಿಧಿಯೇ ! ಪರಮಪಾಪಿನಿಯಾದ ನನ್ನೊಬ್ಬಳಿಗೇ ಕೇಡೊದಗಿತಲ್ಲಾ! ನಿಮ್ಮನ್ನು ಕಷ್ಟ ಪಡಿಸುತ್ತಿದ್ದವನು ಹೋದನು. ಇನ್ನು ನಿಮಗೆ ನಿಷ್ಕಂಟಕವಾಯಿತು. ಸಂತೋಷದಿಂದ ಬದುಕಿರಿ ! ಅಯ್ಯೋ, ನನ್ನ ಕಂದನೇ ! ಸೋದರತ್ತೆಯಾದ ಶೂರ್ಪ ನಖಿಯು ನಿನಗೆ ಮೃತ್ಯುದೇವತೆಯಾಗಿ ಪರಿಣಮಿಸಿದಳೇ ! ಅವಳು ತನ್ನಣ್ಣನಿಗೆ ದುರ್ಬೋಧನೆಯನ್ನು ಬೋಧಿಸಿ ನನ್ನ ಕುಲಕಲ್ಪಲತೆಯ ಬೇರನ್ನು ಕಿತ್ತು ಬಿಸುಟಳೇ ! ಹೆತ್ತೊಡಲು ಬಿಗೆಯಿಂದ ಬೆಂದು ಬೂದಿಯಾಗುತ್ತಿರುವುದಲ್ಲಾ! ಈ ಬೇಗೆಗೆ ಪ್ರತೀಕಾರವೇನುಂಟು ? ಮರಣವೇ ಪ್ರತೀಕಾರವೋ ? ಈ ಕ್ಷಣದಲ್ಲಿಯೇ ಅದೊದಗಿ ದರೆ ನಾನೇ ಧನ್ಯಳು, ಕೂಡಲೆ ನನ್ನ ಮಗನನ್ನು ಸೇರಿ ಬದುಕುವೆನು, ಪಾಪಿನಿ ಯಾದ ನನ್ನ ಬಸಿರು ಬೆಂಡಾಯಿತು, ನನ್ನ ಮರಿಯಂಚೆಯನ್ನು ಎತ್ತಿ ಸಾಕಿದ. ತೋಳುಗಳು ನೆರೆಮುರಿದುವು, ಕಂಡಿರೇ ? ಎನ್ನುತ್ತ ಸೊಸೆಯರ ಕೊರಳುಗಳನ್ನು ತಬ್ಬಿ ಕೊಂಡು ರೋದಿಸುತ್ತ ಬಳಲಿ ಬಾಯಾರಿ ಬೆಂಡಾಗಿ ಹಾಗೇ ಮರ್ಛಹೊಂದಿ. ಭೂಮಿಯಲ್ಲಿ ಬಿದ್ದಳು.