ಪುಟ:Mysore-University-Encyclopaedia-Vol-1-Part-1.pdf/೧೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ದಾರ್ ಪೂರಣ್‍ಸಿಂಗ್ ಅವರ ಬರೆಹಗಳ ಸಂಗ್ರಹಣಾ ಗ್ರಂಥ. ಭಾರತದ ಹದಿನಾಲ್ಕು ಭಾಷೆಗಳಿಂದಲೂ ಆರಸಿ ಸಂಗ್ರಹಿಸಿರುವ ಭಾರತೀಯ ಕವಿತಾ ಎಂಬ ಕವನ ಸಂಕಲನ ಹತ್ತು ಸಂಪುಟಗಳಷ್ಟು ದೊಡ್ಡದಾಗಿದೆ. ಇದನ್ನು ಅಕೆಡಮಿ ಈಗಾಗಲೇ ಪ್ರಕಟಿಸಿದೆ. ರವೀಂದ್ರ 101 ಕವನಗಳನ್ನೊಳಗೊಂಡಿರುವ ಏಕೋತ್ತರ ಶತಿ ಎಂಬ ಗ್ರಂಥದ ಮೊದಲ ಆರು ಸಂಪುಟಗಳನ್ನು ಮತ್ತು 500 ಕವನಗಳಿರುವ ಗೀತಾಪಂಚಶತಿ ಎಂಬ ಗ್ರಂಥವನ್ನೂ ಈ ಅಕೆಡಮಿ ಪ್ರಕಟಿಸಿದೆ. ಇದಲ್ಲದೆ ರವೀಂದ್ರರ 21 ಸಣ್ಣಕಥೆಗಳ ಸಂಕಲನವಾದ ಏಕವಿಂಶತಿ ಎಂಬ ಪುಸ್ತಕದ ಗುಜರಾತಿ, ಪಂಜಾಬಿ, ಮರಾಠಿ, ಕನ್ನಡ ಮತ್ತು ಒರಿಯ ಭಾಷೆಗಳ ಪ್ರತಿಗಳನ್ನು ಇದು ಹೊರತಂದಿದೆ. 1961ರಲ್ಲಿ ರವೀಂದ್ರರ ಶತಮಾನೋತ್ಸವ ಸಂಚಿಕೆಯನ್ನು ಪ್ರಕಟಿಸಿ, ರೋಲಾ(ಂಡ್)ನ ದಿ ಲೈಫ್ ಆಫ್ ವಿವೇಕಾನಂದ ಎಂಬ ಪುಸ್ತಕವನ್ನೂ ಹೊರ ತಂದಿದೆ. ಭಾರತದ ಯಾವುದೇ ಭಾಷೆಯಲ್ಲಿ ಹಾಗೂ ಇಂಗ್ಲಿಷ್‍ನಲ್ಲಿ ಶ್ರೇಷ್ಠಮಟ್ಟದ ಕೃತಿಗಳನ್ನು ರಚಿಸುವ ಸಾಹಿತ್ಯತಜ್ಞರಿಗೆ ಪ್ರತಿವರ್ಷವೂ ಆರ್ಥಿಕ ಸಹಾಯದೊಂದಿಗೆ ಪ್ರಶಸ್ತಿ ನೀಡಿ (ರೂ 50,000=00) ಸನ್ಮಾನಿಸುತ್ತಿದೆ ಕನ್ನಡದ ಪ್ರಸಿದ್ಧ ಲೇಖಕರನೇಕರಿಗೆ ಈ ಪ್ರಶಸ್ತಿ ದೊರೆತಿದೆ. ಭಾಷಾಸಮ್ಮಾನ್ ಎಂಬ ಪುರಸ್ಕಾರವನ್ನೂ ನೀಡುತ್ತಿದೆ. ಅಕೆಡಮಿಯ ಪ್ರಾದೇಶಿಕ ಕಚೇರಿಗಳು ಕಲ್ಕತ್ತ ಬೆಂಗಳೂರು ಮತ್ತು ಮದರಾಸುಗಳಲ್ಲಿವೆ. (ಎಸ್.ಆರ್.ಪಿ.) ಸಂಗೀತ ನಾಟಕ ಅಕೆಡಮಿ: 1953ರಲ್ಲಿ ಭಾರತ ಸರ್ಕಾರದಿಂದ ಸ್ಥಾಪಿತವಾದ ಈ ಸಂಸ್ಥೆ ಸ್ವಯಮಧಿಕಾರವುಳ್ಳದಾಗಿದ್ದು ಸಂಗೀತ, ನೃತ್ಯ ಮತ್ತು ನಾಟಕ ಇವುಗಳ ಪುರೋಭಿವೃದ್ಧಿಗೆ ಹಾಗೂ ಪ್ರಚಾರಕ್ಕಾಗಿ ಶ್ರಮಿಸುತ್ತಿದೆ. ಇದರ ಆಡಳಿತ ನಿರ್ವಹಣೆಯನ್ನು ಪ್ರಧಾನಾಡಳಿತ ಮಂಡಲಿ, ಕಾರ್ಯನಿರ್ವಾಹಕ ಮಂಡಲಿ, ಆರ್ಥಿಕ ಸಮಿತಿಗಳು ಹೊತ್ತಿವೆ. ಇವಲ್ಲದೆ ಇತರ ವಿಶೇಷ ಸಮಿತಿಗಳನ್ನು ರಚಿಸಲು ಕಾರ್ಯ ನಿರ್ವಾಹಕಮಂಡಲಿ ಅಧಿಕಾರವನ್ನು ಹೊಂದಿದೆ. ಈ ಅಕೆಡಮಿಯ ಕಾರ್ಯಕ್ರಮದಲ್ಲಿ ಛಾಯಾಗ್ರಹಣ, ಧ್ವನಿಮುದ್ರಣ, ಚಿತ್ರೀಕರಣ - ಮುಂತಾದ ಸಾಧನ ಸಲಕರಣೆಗಳಿಂದ ಜಾನಪದ ಕಲೆಯ ಹಾಗೂ ವಸ್ತು ವಿಶೇಷಗಳ ಸಂಗ್ರಹಣೆ ಒಂದು ಮುಖ್ಯವಾದ ಅಂಶ. ಶಾಸ್ತ್ರೀಯ ಹಾಗು ಜಾನಪದ ಸಂಗೀತದ ಧ್ವನಿಮುದ್ರಿಕೆಯ ಸಂಗ್ರಹಣಕ್ಕಾಗಿ ಪ್ರತ್ಯೇಕ ವಿಭಾಗವೇ ಇದೆ. ಸಂಗೀತ ವಾದ್ಯಗಳ ಸಂಗ್ರಹಾಲಯ ಮತ್ತು ಧ್ವನಿಮುದ್ರಣ ಸ್ಟುಡಿಯೊವೊಂದನ್ನು ಈ ಅಕೆಡಮಿ ಹೊಂದಿದೆ. ಸಂಗೀತ, ನೃತ್ಯ ಮತ್ತು ನಾಟಕಗಳಲ್ಲಿ ವಿಶೇಷ ರೀತಿಯ ತರಬೇತಿ ಪಡೆದ ಕಲಾವಿದರಿಗೆ ಮತ್ತು ಅಪೂರ್ವ ಕಲಾಕೃತಿಗಳಿಗೆ ಇದು ಪ್ರೋತ್ಸಾಹ ನೀಡುತ್ತಿದೆ. ಸಂಗೀತನಾಟಕ ಎಂಬ ತ್ರೈಮಾಸಿಕ ಪತ್ರಿಕೆಯೊಂದನ್ನು ಮತ್ತು ಒಂದು ಪಾಕ್ಷಿಕ ಸುದ್ದಿ ಪತ್ರಿಕೆಯನ್ನು ಇದು ಪ್ರಕಟಿಸುತ್ತಿದೆ. ಮೂರು ವರ್ಷ ಅವಧಿಯ ನಾಟ್ಯಕಲೆಯ ಒಂದು ತರಬೇತಿ ಶಿಕ್ಷಣವನ್ನು ನೀಡುವ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮ ಎಂಬ ಸಂಸ್ಥೆಯೊಂದನ್ನು ಈ ಅಕೆಡಮಿ ನಡೆಸುತ್ತಿದೆ. ಮಣಿಪುರಿ ನೃತ್ಯದಲ್ಲಿ ತರಬೇತಿ ಕೊಡಲು ಇಂಪಾಲ್‍ನಲ್ಲಿ ಜವಹರ್‍ಲಾಲ್ ನೆಹರು ಡ್ಯಾನ್ಸ್ ಅಕೆಡಮಿ ಎಂಬ ಸಂಸ್ಥೆಯನ್ನೂ ಮತ್ತು ದೆಹಲಿಯಲ್ಲಿ ಕಥಕ್ಕಳಿ ನೃತ್ಯದಲ್ಲಿ ತರಬೇತಿ ಕೊಡುವ ಕೇಂದ್ರವೊಂದನ್ನೂ ಈ ಅಕೆಡಮಿ ನಡೆಸುತ್ತಿದೆ. ಕಲಾಭಿವೃದ್ಧಿಯ ಪಥದಲ್ಲಿ ಸಂಶೋಧನೆ, ತರಬೇತಿ, ವ್ಯಾಸಂಗಗೋಷ್ಠಿ, ಉತ್ಸವಾಚರಣೆ, ಸಂಗೀತ, ನೃತ್ಯ, ನಾಟಕಗಳಿಗೆ ಸಂಬಂಧಿಸಿದ ಪ್ರಕಟಣೆಗಳಿಗೆ ಸಹಾಯಧನ ನೀಡಿಕೆ - ಮೊದಲಾದುವುಗಳನ್ನು ಈ ಅಕೆಡಮಿ ಕೈಗೊಳ್ಳುತ್ತಿರುವುದಲ್ಲದೆ ಪ್ರತಿವರ್ಷವೂ ಸಂಗೀತ, ನೃತ್ಯ, ನಾಟಕ ಕ್ಷೇತ್ರಗಳಲ್ಲಿ ಶ್ರೇಷ್ಠದರ್ಜೆಯ ಕಲಾವಂತರಿಗೆ ಸನ್ಮಾನವನ್ನು ಮಾಡಿ ಪ್ರಶಸ್ತಿಯನ್ನು ನೀಡುತ್ತಿದೆ. (ಎಸ್.ಆರ್.ಪಿ.) ಲಲಿತಕಲಾ ಅಕೆಡಮಿ: ಚಿತ್ರಕಲೆ, ವಾಸ್ತುಶಿಲ್ಪ, ಮೂರ್ತಿಶಿಲ್ಪ - ಮುಂತಾದ ಕಲಾಕ್ಷೇತ್ರಗಳಿಗೆ ಸಂಬಂಧಿಸಿದಂತೆ ಇರುವ ಅಧ್ಯಯನ ಮತ್ತು ಸಂಶೋಧನೆಗಳಿಗೆ ಉತ್ತೇಜನ ನೀಡುವ ಮೂಲಭೂತ ಧ್ಯೇಯವನ್ನಿಟ್ಟುಕೊಂಡಿರುವ ಈ ಅಕೆಡಮಿ ಸ್ಥಾಪನೆಯಾದದ್ದು 1954ರಲ್ಲಿ. ಇದು ಸಂಪೂರ್ಣವಾಗಿ ಕೇಂದ್ರ ಸರ್ಕಾರದ ನೆರವಿನಿಂದಲೇ ನಡೆಯುತ್ತಿದೆ. ಇದು ಪೂರ್ಣವಾಗಿ ಸ್ವಯಮಧಿಕಾರವುಳ್ಳ ಸಂಸ್ಥೆಯಾಗಿಲ್ಲ. ಕೇಂದ್ರ ಸರ್ಕಾರ ಮತ್ತು ಪ್ರಧಾನಾಡಳಿತ ಮಂಡಲಿ ಈ ಅಕೆಡಮಿಯ ಆಡಳಿತವನ್ನು ವಹಿಸಿಕೊಂಡಿದೆ. ಈ ಅಕೆಡಮಿಯ ಮುಖ್ಯವಾದ ಎರಡು ಕಾರ್ಯಗಳೆಂದರೆ ರಾಷ್ಟ್ರೀಯ ಹಾಗು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನಗಳನ್ನೇರ್ಪಡಿಸುವುದು ಮತ್ತು ಭಾರತದ ಪ್ರಾಚೀನ ಮತ್ತು ಆಧುನಿಕ ಕಲೆಗಾರಿಕೆಗೆ ಸಂಬಂಧಿಸಿದ ಪ್ರಕಾಶಿಕೆಗಳನ್ನು ಹೊರತರುವುದು. ಇದಲ್ಲದೆ ಅನೇಕ ಕಲಾಸಂಸ್ಥೆಗಳಿಗೆ ನೆರವನ್ನು ನೀಡಿ ಗೋಷ್ಠಿಗಳನ್ನೇರ್ಪಡಿಸುವುದು, ಗೋಡೆಯ ಮೇಲೆ ರಚಿಸಿದ ವರ್ಣಚಿತ್ರಗಳ ಹಾಗೂ ಕಲಾವಂತರ ಚಿತ್ರಗಳನ್ನು ಪುನರ್‍ಮುದ್ರಿಸಿಕೊಳ್ಳುವುದು ಮುಂತಾದುವು ಅಕೆಡಮಿಯ ಇತರ ಚಟುವಟಿಕೆಗಳು. 1968ರಲ್ಲಿ ನವದೆಹಲಿಯಲ್ಲಿ ಈ ಅಕೆಡಮಿ ನಡೆಸಿದ ಅಂತಾರಾಷ್ಟ್ರೀಯ ತ್ರೈವಾರ್ಷಿಕೋತ್ಸವದಲ್ಲಿ 35 ರಾಷ್ಟ್ರಗಳು ಭಾಗವಹಿಸಿದ್ದುವು. ಅಕೆಡಮಿಯ ಚಟುವಟಿಕೆಗಳಲ್ಲಿ ಸೇರಿದ ಇತರ ಅಂಶಗಳೆಂದರೆ: ಪ್ರತಿವರ್ಷವೂ ರಾಷ್ಟ್ರೀಯ ಕಲಾಪ್ರದರ್ಶನವನ್ನೇರ್ಪಡಿಸುವುದು, ವಿದೇಶೀ ಕಲಾವಸ್ತು ಪ್ರದರ್ಶನಗಳ ನ್ನೇರ್ಪಡಿಸುವುದು, ಭಾರತದ ಕಲಾಪ್ರದರ್ಶನವನ್ನು ವಿದೇಶಗಳಲ್ಲಿ ನಡೆಸುವುದು, ಜಾನಪದ ಗೀತೆ, ವಸ್ತು ಮುಂತಾದುವುಗಳ ಸಂಗ್ರಹಣೆ, ಗಾರೆಯ ಮೇಲೆ ರಚಿಸಿರುವ ವರ್ಣಚಿತ್ರಗಳನ್ನು ಚಿತ್ರಿಸಿಕೊಳ್ಳುವುದು, ಪ್ರಕಟನೆಗಳನ್ನು ಹೊರಡಿಸುವುದು, ಕಲಾ ಸಂಸ್ಥೆಗಳಿಗೆ ಅಂಗೀಕಾರ, ನೆರವು ನೀಡುವುದು - ಇತ್ಯಾದಿ. ಈ ಅಕೆಡಮಿ ಪ್ರಕಾಶ ಪಡಿಸಿರುವ ಪುಸ್ತಕಗಳಲ್ಲಿ ಮೊಗಲರ ಕಾಲದ ಬರವಣಿಗೆಯ ಚಿತ್ರಪ್ರತಿಗಳು; ಪಹಾರಿ ಚಿತ್ರಕಲೆಯಲ್ಲಿ ಶ್ರೀಕೃಷ್ಣನ ಕಥೆ: ಅಜಂತ, ಮೇವಾರ, ಕಿಷನ್‍ಗಢ್, ಬುಂಡಿ ಮುಂತಾದ ಸ್ಥಳಗಳ ವರ್ಣಚಿತ್ರಗಳು; ಬೇಂದ್ರೆ, ರವಿವರ್ಮ, ಹೆಬ್ಬಾರ್, ಛಾವ್ಡಾ, ಪಣಿಕರ್- ಮುಂತಾದ ವ್ಯಕ್ತಿಗಳ ಮೇಲೆ ಪ್ರಬಂಧ ಗ್ರಂಥಗಳ ಪ್ರಕಟಣೆ - ಇತ್ಯಾದಿ ಕಂಡುಬರುತ್ತವೆ. ಇವಲ್ಲದೆ ಎರಡು ದ್ವಿವಾರ್ಷಿಕ ಪತ್ರಿಕೆಗಳನ್ನು ಪ್ರಕಟಿಸುತ್ತಿದೆ. ರಾಷ್ಟ್ರೀಯ ಕಲಾಪ್ರದರ್ಶನದಲ್ಲಿ ಭಾಗವಹಿಸುವ ಶ್ರೇಷ್ಠದರ್ಜೆಯ ಕಲಾವಂತರಿಗೆ ಪ್ರತಿವರ್ಷವೂ ಪ್ರಶಸ್ತಿಗಳನ್ನಿತ್ತು ವಿಜೇತರಿಗೆ ತಾಮ್ರಪತ್ರ, ಅಂಗವಸ್ತ್ರ ಮತ್ತು ನಗದು ಬಹುಮಾನ ನೀಡಿ ಗೌರವಿಸುತ್ತದೆ. (ಎಸ್.ಆರ್.ಪಿ.) ಅಕೇಟೀಸ್ : ವರ್ಜಿಲ್ ಕವಿಯ ಲ್ಯಾಟಿನ್ ಭಾಷೆಯ ಮಹಾಕಾವ್ಯ ಈನಿಯಡ್‍ನಲ್ಲಿ ಬರುವ ನಾಯಕ ಈನಿಯಸ್ಸನ ಸಂಗಡಿಗ, ನಿಷ್ಠಾವಂತ ಸ್ನೇಹಿತ. ಫೈಡಸ್ ಅಕೇಟೀಸ್ ಎನ್ನುವುದು ನಿಷ್ಠಾವಂತನೂ ಆಸಕ್ತನೂ ಆದ ಸಂಗಡಿಗನನ್ನು ಕುರಿತು ಹೇಳುವ ಲೋಕರೂಢಿಯ ಮಾತಾಗಿದೆ. (ಸಿ.ಎನ್.ಎಂ.) ಅಕೇಮೆನಿಡೇ : ಪರ್ಷಿಯದ ಪ್ರಾಚೀನ ರಾಜವಂಶದ ಹೆಸರು. ಈ ವಂಶದ ಮೂಲಪುರುಷ ಹಖಮನೀಷ್. ಇವನು ಪ್ರ.ಶ.ಪೂ.7ನೆಯ ಶತಮಾನದಲ್ಲಿ ಪರ್ಷಿಯದ ನೈಋತ್ಯ ಪ್ರಾಂತ್ಯವನ್ನಾಳುತ್ತಿದ್ದನೆಂದು ತಿಳಿದುಬಂದಿದೆ. ಹಖಮನೀಷ್ ಎಂಬ ಹೆಸರೇ ಗ್ರೀಕರ ಮತ್ತು ರೋಮನರ ಉಚ್ಚಾರಣೆಯ ಪರಿಣಾಮವಾಗಿ ಅಕೇಮೆನಿಡೇ ಎಂದು ರೂಪಾಂತರ ಹೊಂದಿದೆ. ಪ್ರ.ಶ.ಪೂ. 50 ಶತಮಾನಗಳ ಹಿಂದೆಯೇ ಪರ್ಷಿಯದಲ್ಲಿ ಸ್ಥಾಪಿತವಾಗಿ ಬೆಳೆದು ಬಂದಿದ್ದ ಈಲಾಂ ಸಾಮ್ರಾಜ್ಯ ಆಳಿದ ಮೇಲೆ ಅಕೇಮೆನಿಡೇ ದೊರೆಗಳು ರಾಜ್ಯವನ್ನು ವಿಸ್ತರಿಸಲು ಅನುಕೂಲವಾಯಿತು. ಪ್ರ.ಶ.ಪೂ.5ನೆಯ ಶತಮಾನದಲ್ಲಿ ಆಳಿದ ಕೈರಸ್ ಮಹಾಶಯ ಲಿಡಿಯದ ಕ್ರೀಸಸ್, ಬ್ಯಾಬಿಲೋನಿಯದ ನೆಬೊನೈಡಸ್ ಮುಂತಾದ ನೆರೆ ರಾಜರನ್ನು ಸೋಲಿಸಿ ದೊಡ್ಡ ಸಾಮ್ರಾಜ್ಯವನ್ನೇ ಕಟ್ಟಿದ. ಪ್ರಬಲವಾಗಿದ್ದ ಮೀಡಿಯ ರಾಜ್ಯವೂ ಅವನ ಕೈವಶವಾಯಿತು. ಪ್ರ.ಶ.ಪೂ.546ರ ಕಾಲಕ್ಕೆ ಅವನು ಕಟ್ಟಿದ್ದ ಸಾಮ್ರಾಜ್ಯ ಭದ್ರತೆಯನ್ನು ಪಡೆದಿತ್ತೆನ್ನಬಹುದು. ಆತನು ಗೆದ್ದ ರಾಜ್ಯಗಳ ನಾಗರಿಕಜೀವನ ಸಂಸ್ಕøತಿಗಳನ್ನು ಅಳಿಸದೆ ಅವುಗಳ ತಳಪಾಯದ ಮೇಲೆ ಹೊಸ ಸಂಸ್ಕøತಿಯನ್ನು ರೂಪಿಸಲೆತ್ನಿಸಿದ. ಈಜಿಪ್ಟ್, ಬ್ಯಾಬಿಲೋನಿಯ ಮುಂತಾದ ಕಡೆಗಳಿಂದ ಶಿಲ್ಪಿಗಳನ್ನು ಬರಮಾಡಿಕೊಂಡು ಪಸಾಗಾರ್ಡೆ ಎಂಬಲ್ಲಿ ಭವ್ಯವಾದ ಅರಮನೆ ಮುಂತಾದ ಕಟ್ಟಡಗಳನ್ನು ನಿರ್ಮಿಸಿದ. ಎರಡು ಶತಮಾನಗಳ ಕಾಲ ಕೈರಸ್ ಕಟ್ಟಿದ ಸಾಮ್ರಾಜ್ಯ ಭವ್ಯವಾಗಿ ಬಾಳಿತು. ಪ್ರ.ಶ.ಪೂ. 522ರಿಂದ 485ರವರೆಗೆ ಆಳಿದ ಡೇರಿಯಸ್ಸನ ಕಾಲದಲ್ಲಿ ಸಿಂಧೂನದಿಯವರೆಗಿನ ಪ್ರದೇಶವೆಲ್ಲ ಪರ್ಷಿಯನ್ನರ ಕೈವಶವಾಯಿತು. ಡೇರಿಯಸ್ಸ್ ಆ ವಿಶಾಲ ಸಾಮ್ರಾಜ್ಯವನ್ನು ಇಪ್ಪತ್ತು ಪ್ರಾಂತಗಳಾಗಿ ವಿಭಾಗಿಸಿ ಪ್ರತಿಯೊಂದಕ್ಕೂ ದಕ್ಷ ಮಾಂಡಲಿಕರನ್ನು ನೇಮಿಸಿದ. ಗ್ರೀಸ್‍ದೇಶದ ಮೇಲೆ ದಂಡೆತ್ತಿ ಹೋದಾಗ ಮಾತ್ರ ಮ್ಯಾರಥಾನ್ ಕದನದಲ್ಲಿ ಆತ ಸೋತು ಹಿಮ್ಮೆಟ್ಟಬೇಕಾಯಿತು. ಅವನ ಮಗನಾದ ಸರ್‍ಕ್ಸಸ್ ಗ್ರೀಕರನ್ನು ಸೋಲಿಸಲು ಪುನಃ ಪ್ರಯತ್ನಿಸಿ ಸೆಲಾಮಿಸ್ ಮತ್ತು ಪ್ಲಾಟಿಯ ಕದನಗಳಲ್ಲಿ ಸೋತು ಹಿಂತಿರುಗಬೇಕಾಯಿತು. ಅನಂತರದ ಕಾಲವನ್ನು ಅಕೇಮೆನಿಡೇ ಸಾಮ್ರಾಜ್ಯದ ಅವನತಿಯ ಕಾಲವೆನ್ನಬಹುದು. ಕೊನೆಯ ದೊರೆಯಾದ ಮೂರನೆಯ ಡೇರಿಯಸ್ ಅರ್ಬೆಲ ಕಾಳಗದಲ್ಲಿ ಅಲೆಗ್ಸಾಂಡರನಿಗೆ ಸೋತು (ಪ್ರ.ಶ.ಪೂ.331) ರಣರಂಗದಿಂದ ಓಡಿಹೋಗಬೇಕಾಯಿತು. ಪರ್ಷಿಯ ಸಾಮ್ರಾಜ್ಯ ವೆಲ್ಲ ಅಲೆಗ್ಸಾಂಡರನ ಮ್ಯಾಸಿಡೋನಿಯ ಸಾಮ್ರಾಜ್ಯಕ್ಕೆ ಸೇರಿಹೋಯಿತು. (ಎ.ಎಂ.) ಅಕೇಯನ್ನರು : ಪ್ರಾಚೀನ ಗ್ರೀಸ್‍ದೇಶದ ಜನ. ಹೊರದೇಶಗಳಿಂದ ವಲಸೆ ಬಂದು ನೆಲೆಸಿದವರೋ ಮೂಲನಿವಾಸಿಗಳೋ ಎಂಬ ವಿಷಯದಲ್ಲಿ ಭಿನ್ನಾಭಿಪ್ರಾಯವಿದೆ. ಪ್ರ.ಶ.ಪೂ.13ನೆಯ ಶತಮಾನದಲ್ಲೇ ಅವರು ಗ್ರೀಸಿನ ದಕ್ಷಿಣ ಭಾಗವಾದ ಪೆಲೆಪೊನೀಸಸ್‍ನಲ್ಲಿ ನೆಲೆಸಿದ್ದರು. ಹಿಂದೆ ಮೈಸಿನೀ ನಾಗರಿಕತೆ ಹರಡಿದ್ದ ಪ್ರಾಂತವನ್ನೆಲ್ಲ ಅವರು ಸ್ವಾಧೀನಪಡಿಸಿಕೊಂಡಿದ್ದರು. ಪ್ರ.ಶ.ಪೂ. ಸು. 10ನೆಯ ಶತಮಾನದಲ್ಲಿ ಡೋರಿಯನ್ನರೆಂಬ ಹೊಸ ಜನ ಬಂದುದರ ಪರಿಣಾಮವಾಗಿ ಅಕೇಯನ್ನರಲ್ಲಿ ಕೆಲವರು ಪೆಲೊಪೊನೀಸಸ್‍ನ ಉತ್ತರ ಭಾಗದಲ್ಲಿ ನೆಲೆಸಿದರು; ಮಿಕ್ಕವರು ಏಷ್ಯ ಮೈನರ್‍ಗೆ ಮತ್ತು ದಕ್ಷಿಣ ಇಟಲಿಗೆ ವಲಸೆ ಹೋದರು. ಇವರು ರೋಮಿನೊಂದಿಗೆ ನಿರ್ನಾಮವಾಗುವವರೆಗೂ ಹೊಡೆದಾಡಿದರು.