ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಗೂಢಚರ್ಯೆ

ವಿಕಿಸೋರ್ಸ್ದಿಂದ

ವೇಷ ಮರೆಸಿಕೊಂಡು ಶತ್ರು ಶಿಬಿರಗಳಿಗಾಗಲಿ, ಶತ್ರು ದೇಶಗಳಿಗಾಗಲಿ ಹೋಗಿ ಅಲ್ಲಿನ ರಕ್ಷಣಾ ವ್ಯವಸ್ಥೆಗಳು, ಚಲನವಲನಗಳು, ರಾಜಕೀಯ ರಹಸ್ಯಗಳು ಮುಂತಾದವನ್ನು ಗುಟ್ಟಿನಲ್ಲಿ ಪತ್ತೆ ಮಾಡುವ ಕಾರ್ಯ (ಸ್ಪೈಯಿಂಗ್), ಬೇಹುಗಾರಿಕೆ ಪರ್ಯಾಯ ಪದ. ಗೂಢಚರ್ಯೆ ವೃತ್ತಿ ಮಾಡುವುದಕ್ಕೂ ಗುಪ್ತಚಾರರನ್ನು ಉಪಯೋಗಿಸುವ ವ್ಯವಸ್ಥೆಗೂ ಫ್ರೆಂಚ್ ಭಾಷೆಯ ಎಸ್ಪಿಯೋನೇಜ್ ಎಂಬ ಹೆಸರು ಈಗ ರೂಢಿಯಲ್ಲಿದೆ. ಎಲ್ಲ ಗೂಢಚಾರರಲ್ಲೂ ಇರಬೇಕಾದ ದಿಟ್ಟತನ, ಧೈರ್ಯ, ಸಾಹಸಪ್ರವೃತ್ತಿ, ಅಸಾಮಾನ್ಯವಾದ ವ್ಯವಹಾರ ಜ್ಞಾನ, ದೀರ್ಘಕಾಲದವರೆಗೂ ತಾಳಿಕೊಂಡಿರಬಲ್ಲ ಸಹನಶಕ್ತಿ, ಸಮರ್ಥ ವರದಿಗಳನ್ನು ಗುಪ್ತವಾಗಿ ರವಾನಿಸಬಲ್ಲ ಕೌಶಲ, ನಿರ್ಧರಣ ಸಾಮರ್ಥ್ಯ ಇತ್ಯಾದಿ. ತಮ್ಮತನವನ್ನು ಸದಾ ಉಳಿಸಿಕೊಂಡು ಇತರರೊಡನೆ ಸಮರಸವಾಗಿ ಬೆರೆತು ಅವರಿಂದ ಉಪಯುಕ್ತ ಮಾಹಿತಿಗಳನ್ನು ಸಂಗ್ರಹಿಸುವ ವ್ಯವಹಾರಚತುರರಿರುವರು.


ಗೂಢಚರ್ಯೆಯನ್ನು ವಿಶಾಲವಾಗಿ ಎರಡು ವಿಭಾಗಗಳಾಗಿ ಮಾಡಿ ಅಭ್ಯಸಿಸುವುದುಂಟು: ರಾಜಕೀಯ ಬೇಹುಗಾರಿಕೆ, ಸೇನಾ ಬೇಹುಗಾರಿಕೆ, ದೇಶದ ರಾಜಕೀಯ ವಿಷಯಗಳಿಗೂ ವ್ಯಕ್ತಿಗಳಿಗೂ ಸಂಬಂಧಿಸಿದ ಮಾಹಿತಿಗಳು, ವಾಣಿಜ್ಯ, ಆರ್ಥಿಕ ವ್ಯವಹಾರಗಳು, ಸರ್ಕಾರದ ಇತರ ಚಟುವಟಿಕೆಗಳು, ಯಂತ್ರ ಸ್ಥಾವರಗಳಿಗೆ ಸಂಬಂಧಿಸಿದ ವಿವರಗಳು ಇವೇ ಮುಂತಾದವನ್ನು ಸಂಗ್ರಹಿಸುವ ಬೇಹುಗಾರಿಕೆ ರಾಜಕೀಯ ಗೂಢಚರ್ಯೆಯ ಕಕ್ಷೆಯಲ್ಲಿ ಬರುತ್ತವೆ. ಪ್ರತಿಯೊಂದು ದೇಶದಲ್ಲೂ ಇಂಥ ವ್ಯವಸ್ಥೆ ಸರ್ಕಾರದ ಅಧೀನದಲ್ಲಿಯೇ ಇರುವುದು ಸಾಮಾನ್ಯ. ಅಲ್ಲದೆ ಖಾಸಗಿ ವ್ಯವಸ್ಥೆಗಳೂ ಆಯಾ ಹಿತಾಸಕ್ತಿಗಳ ಬೆಂಬಲಕ್ಕಾಗಿ ಇರುವುದು ಉಂಟು. ಯುದ್ಧ ಹಾಗೂ ಶಾಂತಿ ಕಾಲಗಳಲ್ಲಿ ನೇರವಾಗಿ ಯುದ್ಧ ಸಂಬಂಧ ವಿಷಯಗಳ ಮಾಹಿತಿ ಪಡೆಯುವುದು ಸೇನಾ ಗೂಢಚರ್ಯೆಯ ಪ್ರಧಾನೋದ್ದೇಶ.


ನಾನಾ ಸ್ವಭಾವಗಳ ವ್ಯಕ್ತಿಗಳು ನಾನಾ ಉದ್ದೇಶಗಳಿಂದ ಗೂಢಚರ್ಯೆವೃತ್ತಿಗೆ ಸೇರುತ್ತಾರೆ. ಅಪಾಯಗಳನ್ನು ಎದುರಿಸಬೇಕೆಂಬ ಇಚ್ಛೆ. ಸಾಹಸಗಳನ್ನು ಸಾಧಿಸುವ ಪ್ರವೃತ್ತಿಯುಳ್ಳವರು; ತಮ್ಮ ದೇಶದ ವಿರುದ್ಧ ಅತೃಪ್ತಿ, ಕೋಪವುಳ್ಳವರು; ಪಾತಕಗಳ ಚರಿತ್ರೆಯುಳ್ಳವರು; ರಾಷ್ಟ್ರೀಯ ಭಾವನೆ, ರಾಜನಿಷ್ಠೆಗಳಿಲ್ಲದೆ ಹೆಚ್ಚು ಹಣ ಬರುವ ಕಡೆ ಸೇರಿಕೊಳ್ಳುವ ಗೀಳಿರುವವರು; ದುಡ್ಡನ್ನು ಶೀಘ್ರವಾಗಿ ಗಳಿಸಲು ಯಾವುದಕ್ಕೂ ಹೇಸದೆ, ಏನುಬೇಕಾದರೂ ಮಾಡಲು ಸಿದ್ಧರಾಗಿರುವವರು ಮುಂತಾದವರಿರುತ್ತಾರೆ. ಸೇನಾ ಇಲಾಖೆಯಲ್ಲಿ ಶಿಕ್ಷಣ ಪಡೆದವರು ತಾವಾಗಿಯೇ ಮುಂದೆ ಬರುತ್ತಾರೆ. ಕೆಲವರು ಇಮ್ಮಡಿ ಬೇಹುಕಾರರಾಗಿ (ಡಬ್ಬಲ್ ಸ್ಟೈಸ್) ಮಿತ್ರ ಮತ್ತು ಶತ್ರು ಎರಡು ಪಕ್ಷಗಳಲ್ಲೂ ಕೆಲಸಮಾಡುತ್ತಾರೆ. ಕಾರ್ಲ್ ಷೂಲ್ ಮೆಯ್ಸ್‌ಟರ್ ಎಂಬ ಚರಿತ್ರೆಯ ಅತ್ಯಂತ ಪ್ರಖ್ಯಾತ ಇಮ್ಮಡಿ ಬೇಹುಕಾರ ಫ್ರಾನ್ಸಿನ ಚಕ್ರವರ್ತಿ ಮೊದಲನೆಯ ನೆಪೋಲಿಯನ್ ಮತ್ತು ಫ್ರಾನ್ಸಿನ ಶತ್ರು ಆಸ್ಟ್ರಿಯದ ಹ್ಯಾಪ್ಸ್‌ಬರ್ಗ್ ಇಬ್ಬರಿಂದಲೂ ಸಂಬಳ ಪಡೆಯುತ್ತಿದ್ದ. ಕೆಲವರು ದೇಶಾಭಿಮಾನದಿಂದ ತಮ್ಮ ದೇಶದವರಿಗೆ ಸಹಾಯ ಮಾಡಬೇಕೆಂಬ ಘನವಾದ ಉದ್ಧೇಶದಿಂದ ಗೂಡಚರ್ಯೆಗೆ ಸೇರಿ ಶತ್ರುಗಳಿಗೆ ಬಲಿಯಾಗುವುದುಂಟು. ಬ್ರಿಟಿಷ್ ನರ್ಸ್ ಈಡಿತ್ ಕೇವಲ್ ಎಂಬಾಕೆ ತನ್ನ ದೇಶದವರು ಶತ್ರುಗಳಿಂದ ಪಾರಾಗುವಂತೆ ಸಹಾಯ ಮಾಡಿದಳು. ಇದಕ್ಕಾಗಿ ಜರ್ಮನರು ಅವಳನ್ನು ಗುಂಡಿಕ್ಕಿ ಕೊಂದರು. ಲೂಯಿ ಬೆಟ್ಟಿಗ್ನಿಯರ್ ಎಂಬ ಫ್ರೆಂಚ್ ದೇಶಭಕ್ತಳಿಗೂ ಅದೇ ಗತಿಯಾಯಿತು. ಅಮೆರಿಕನ್ ಕ್ರಾಂತಿಯಲ್ಲಿ ಧರ್ಮನಿಷ್ಠನೂ ದೇಶಭಕ್ತನೂ ಆಗಿದ್ದ ನಾಥನ್ ಹೇಲ್ ಎಂಬ ಅಮೆರಿಕನನ್ನು ಬ್ರಿಟಿಷರು ಹಿಡಿದು ಗಲ್ಲಿಗೇರಿಸಿದರು. ಕೆಲವು ಕೃಪಣರು ದುಡ್ಡಿನಾಸೆಗೆ ಶತ್ರುಪಕ್ಷದ ಗೂಢಚಾರರಾಗಿ ವರ್ತಿಸಿ ತಮ್ಮ ದೇಶಕ್ಕೆ ದ್ರೋಹ ಮಾಡಿದ್ದೂ ಉಂಟು. ನಾರ್ವೆಯಲ್ಲಿ ಉನ್ನತ ಸೇನಾ ಹುದ್ದೆಯಲ್ಲಿದ್ದ ಕ್ವಿಸ್ಲಿಂಗ್ ಎಂಬಾತ ತನ್ನ ದೇಶಕ್ಕೆ ವಿಶ್ವಾಶಘಾತಕನಾಗಿ ಜರ್ಮನರಿಗೆ ರಹಸ್ಯಗಳನ್ನು ತಿಳಿಸಿದ್ದರಿಂದ ಅವನಿಗೆ ಮರಣದಂಡನೆಯಾಯಿತು. ಇಂಥ ದ್ರೋಹಿಗಳನ್ನು ಇಂದು ಇಂಗ್ಲಿಷಿನಲ್ಲಿ ಕ್ವಿಸ್ಲಿಂಗ್ ಎಂದೇ ಕರೆಯುವುದುಂಟು. ಎರಡನೆಯ ಮಹಾಯುದ್ಧದಲ್ಲಿ ಜವರ್iನಿಯ ಅಡ್ಮಿರಲ್ ವಿಲ್ಹೆಲ್ಮ್‌ ಕ್ಯಾನರಿಸ್ ಎಂಬಾತ ಬ್ರಿಟಿಷರೊಡನೆ ಸೇರಿಕೊಂಡು ಹಿಟ್ಲರನ್ನು ಕೊಲ್ಲಲು ನಡೆಸಿದ ಒಳಸಂಚಿಗಾಗಿ ಗಲ್ಲಿಗೇರಿಸಲ್ಪಟ್ಟ. ಇಂಗ್ಲೆಂಡಿನಲ್ಲಿ ಅತಿಗೋಪ್ಯ ಪರಮಾಣು ಶೋಧನೆಗಾಗಿ ನೇಮಿಸಲ್ಪಟ್ಟ ಕ್ಲಾಸ್ಪುಚ್ಸ್‌ ಮತ್ತು ಆಲನ್ ಮೇ ಎಂಬುವರು 1945ರಲ್ಲಿ ರಹಸ್ಯಗಳನ್ನು ರಷ್ಯನರಿಗೆ ತಿಳಿಸಿದರು. ಅಮೆರಿಕದ ಜೂಲಿಯನ್ ಮತ್ತು ಎಥೆಲ್ ರೋಜೆನ್ಬರ್ಗ್ ಎಂಬುವರು ಪರಮಾಣು ರಹಸ್ಯಗಳನ್ನು 1951ರಲ್ಲಿ ರಷ್ಯದ ಸರ್ಕಾರಕ್ಕೆ ತಿಳಿಸಿದ್ದಕ್ಕಾಗಿ ವಧಿಸಲ್ಪಟ್ಟರು. ರಷ್ಯದ ಏಜೆಂಟ್ ವಾಲ್ಟಿಮಿರ್ ಪೆಟ್ರೋವ್ ಮತ್ತು ಆತನ ಹೆಂಡತಿ ಆಸ್ಟ್ರೇಲಿಯಾದಲ್ಲಿ ರಷ್ಯನ್ ರಾಯಭಾರಿ ಇಲಾಖೆಯಲ್ಲಿದ್ದವರು ರಷ್ಯವನ್ನು ತ್ಯಜಿಸಿ ಆಸ್ಟ್ರೇಲಿಯ ಸರ್ಕಾರದ ಆಶ್ರಯವನ್ನು ಪಡೆದರು. ಬ್ರಿಟನ್ನಿನ ರಸಲ್ ಪಿಲ್ಟೀ ಮತ್ತು ಇನ್ನಿಬ್ಬರು ರಷ್ಯದ ಏಜೆಂಟುಗಳಾಗಿ ಗುಪ್ತ ಕೆಲಸ ಮಾಡಿದರೆಂದು ಹಿಡಿಯಲ್ಪಟ್ಟಾಗ ಅವರು ತಪ್ಪಿಸಿಕೊಂಡು ರಷ್ಯಕ್ಕೆ ಪಲಾಯನ ಮಾಡಿದರು.


ಪ್ರಪಂಚಾದ್ಯಂತ ಗೂಢಚಾರರಿಗಾಗಿ ಪ್ರತಿವರ್ಷವೂ ಕೋಟ್ಯಂತರ ರೂಪಾಯಿಗಳು ಖರ್ಚಾಗುತ್ತವೆ. ಕೆಲವು ಸಂದರ್ಭಗಳಲ್ಲಿ ಅವರಿಗಾಗಿ ಗುಪ್ತನಿಧಿಯನ್ನೂ ಶೇಖರಿಸಲಾಗುತ್ತದೆ. ಗೂಢಚರ್ಯೆಯಲ್ಲಿ ಬೇರೆ ಬೇರೆ ದೇಶಗಳಲ್ಲಿ ಬೇರೆ ಬೇರೆ ಕಟ್ಟಳೆಗಳಿವೆ. ಒಂದು ರಾಷ್ಟ್ರದಲ್ಲಿ ಶತ್ರು ದೇಶದ ಗೂಢಚಾರರು ನಡೆಸುವ ಪ್ರಯತ್ನಗಳನ್ನೂ ಏರ್ಪಾಡುಗಳನ್ನೂ ಮುರಿದುಹಾಕಲು ಆ ರಾಷ್ಟ್ರದ ಗೂಢಚಾರರು ಪ್ರತಿಕ್ರಿಯೆ ಕ್ರಮಗಳನ್ನು ಆಚರಿಸುತ್ತಾರೆ. ಈ ಪ್ರತಿವಿಧಾನದ ಗೂಢಚಾರರು ಶತ್ರು ಗೂಢಚಾರರನ್ನು ಅವರ ಸಂಧಾನಗಳನ್ನು ಗುಟ್ಟಿನಲ್ಲಿ ಶೋಧಿಸುತ್ತಾ ಅವನ್ನು ಪ್ರತಿಕೂಲ ಕ್ರಮಗಳಿಂದ ನಿರ್ಮೂಲ ಮಾಡುತ್ತಾರೆ. ಈ ವ್ಯವಸ್ಥೆಗೆ ಪ್ರತಿಗೂಢಚರ್ಯೆ (ಕೌಂಟರ್-ಸ್ಪೈಯಿಂಗ್) ಎಂದು ಹೆಸರು. ಒಂದನೆಯ ಮಹಾಯುದ್ಧದ ಆರಂಭದಲ್ಲಿ ಬ್ರಿಟಿಷ್ ಗೂಢಚಾರರು ಇಂಗ್ಲೆಂಡಿನಲ್ಲಿದ್ದ ಎಲ್ಲ ಶತ್ರು ಏಜೆಂಟರನ್ನು ಹಿಡಿದು ಬಂಧಿಸಿದರು. ಜರ್ಮನರು ಇಂಗ್ಲೆಂಡಿನಲ್ಲಿ ಹೂಡಿದ್ದ ಗುಪ್ತ ಚಳವಳಿಗಳಿಗೆ ನಾಯಕನಾಗಿದ್ದ ಆನ್ಸ್‌ ಎಂಬ ಹಜಾಮನನ್ನು ಸೆರೆ ಹಿಡಿದ ಬಳಿಕ ಆ ಉಪದ್ರವ ಅಡಗಿತು. ಅಮೆರಿಕದಲ್ಲಿ ವಿದೇಶಿ ಬೇಹುಕಾರರ 33 ತಂಡಗಳು ಕಂಡು ಹಿಡಿಯಲ್ಪಟ್ಟವು.


ಗೂಢಚರ್ಯೆ ಪ್ರಪಂಚದ ಅತ್ಯಂತ ಪುರಾತನ ಕಸಬುಗಳಲ್ಲೊಂದು. ಅದು ಬಲು ಹಿಂದಿನಿಂದಲೂ ಯುದ್ಧತಂತ್ರದ ಒಂದು ಅಂಗವಾಗಿದೆ. ಪ್ರಾಚೀನ ಈಜಿಪ್ಟರು ಗೂಢಚರ್ಯೆಯ ಇಲಾಖೆಯನ್ನೇ ಸ್ಥಾಪಿಸಿದ್ದರು. ಅವರು ಗೂಢಚಾರರನ್ನು ಹಿಟ್ಟಿನ ಚೀಲಗಳಲ್ಲಿ ಬಚ್ಚಿಟ್ಟು ಅವನ್ನು ತಾವು ಹಿಡಿದುಕೊಳ್ಳಬೇಕೆಂದಿದ್ದ ಹಡಗುಗಳಲ್ಲಿ ಇಡುತ್ತಿದ್ದರು. ಅಲೆಗ್ಸಾಂಡರ್ ಮಹಾಶಯ ತನ್ನ ಕೈಕೆಳಗಿನ ಅಧಿಕಾರಿಗಳಲ್ಲಿ ನಂಬಿಕಸ್ಥರಾರೆಂಬುದನ್ನು ಒಂದು ತಂತ್ರದಿಂದ ಪತ್ತೆ ಮಾಡುತ್ತಿದ್ದ. ಪರ್ಷಿಯಕ್ಕೆ ದಂಡಯಾತ್ರೆ ಹೋದಾಗ ಅಧಿಕಾರಿಗಳ ಸಂದೇಶಗಳನ್ನು ಊರಿಗೆ ಒಯ್ಯಲು ವಿಶಿಷ್ಟದೂತನನ್ನು ಕಳಿಸುವೆನೆಂದೂ ಎಲ್ಲರೂ ಸಂದೇಶಗಳನ್ನು ದೂತನಿಗೆ ಕೊಡಬಹುದೆಂದೂ ತಿಳಿಸಿ ಎಲ್ಲರೂ ಕಾಗದಗಳನ್ನು ಹರಿಕಾರನಿಗೆ ಕೊಟ್ಟ ಬಳಿಕ ಅಲೆಗ್ಸಾಂಡರ್ ಅವನ್ನು ಗುಟ್ಟಾಗಿ ಓದಿಕೊಂಡು ಯಾರು ಯಾರು ರಾಜದ್ರೋಹಿಗಳೆಂಬುದನ್ನು ಅರಿಯುತ್ತಿದ್ದ. ಗ್ರೀಕರು ಬೇಹುಕಾರರ ತಂತ್ರದಿಂದ ಶತ್ರುಗಳ ರಕ್ಷಣಾಕ್ಷೇತ್ರವನ್ನು ಭೇದಿಸಿ ಟ್ರೋಜನ್ ಕುದುರೆಯನ್ನು ಹಿಡಿದರು. ಪರ್ಷಿಯದಲ್ಲಿ ನಿರ್ಬಂಧದಲ್ಲಿದ್ದ ಹಿಸಿಯಾಸ್ ಎಂಬಾತ ಗ್ರೀಕರಿಗೆ ಸುದ್ದಿ ಕಳಿಸಲು ಒಬ್ಬ ಗುಲಾಮನ ತಲೆಕೂದಲನ್ನು ಬೋಳಿಸಿ ಚರ್ಮದ ಮೇಲೆ ಬರೆದು, ಕೂದಲು ಬೆಳೆದನಂತರ ಅವನನ್ನು ಗ್ರೀಕರ ಬಳಿಗೆ ಕಳಿಸಿದ; ಗ್ರೀಕರು ಅವನ ಕೂದಲನ್ನು ಬೋಳಿಸಿ ಸುದ್ದಿಯನ್ನು ಓದಿಕೊಂಡರು. ಭಾರತದಲ್ಲಿ ಎಲ್ಲ ರಾಜ್ಯಗಳಲ್ಲೂ ಗೂಢಚಾರರ ವ್ಯವಸ್ಥೆ ಪ್ರಬಲವಾಗಿತ್ತು; ಅದು ಚಾಣಕ್ಯನ ಮುಖ್ಯ ತಂತ್ರ. ಕೆನಾನ್ ಪ್ರಾಂತದ ಸೈನಿಕ ರಹಸ್ಯಗಳನ್ನು ಪತ್ತೆ ಮಾಡಲು ಮೋಸಸ್ 12 ಗೂಢಚಾರರನ್ನು ಕಳಿಸಿದನೆಂದು ಬೈಬಲಿನಲ್ಲಿ ಉಲ್ಲೇಖವಿದೆ. ಸೇನಾಪತಿ ಸಿಪಿಯೋ ಆಫ್ರಿಕಾನಸ್ ಪ್ರ.ಶ.ಪು. 200ರಲ್ಲಿ ಹ್ಯಾನಿಬಾಲ್ನನ್ನು ಫ್ಯೂನಿಕ್ ಯುದ್ಧದಲ್ಲಿ ಸೋಲಿಸಿದ್ದು ಅವನ ಬೇಹುಕಾರರು ಆಫ್ರಿಕಾದಲ್ಲಿ ಹೊಗೆಯ ಸಂಕೇತಗಳಿಂದ ಶತ್ರುವಿನ ಚಲನವಲನಗಳನ್ನು ತಿಳಿಸಿದ್ದರಿಂದ ಗೂಢಚಾರರ ಸಹಕಾರವಿಲ್ಲದೆ ಸಿಪಿಯೋ ಯುದ್ಧಪರಂಪರೆಯನ್ನು ಗೆಲ್ಲಲಾಗುತ್ತಿರಲಿಲ್ಲ. 17ನೆಯ ಶತಮಾನದಲ್ಲಿ ಬ್ರಿಟಿಷ್ ನೌಕಾಧಿಕಾರಿ ಸ್ಯಾಮ್ಯುಎಲ್ ಪೆಪಿಸ್ ಎಂಬಾತ ನಿದ್ರೆ ಮಾಡುತ್ತಿದ್ದ ಒಬ್ಬ ಡಚ್ ರಾಯಭಾರಿಯ ಜೇಬಿನಿಂದ ಬೀಗದ ಕೈಯನ್ನು ಕದ್ದುಕೊಂಡು, ಅವನ ಬೀರುವಿನ ಬೀಗವನ್ನು ತೆರೆದು, ಡಚ್ರಾಜ್ಯದ ಬಹು ರಹಸ್ಯದ ಕಾಗದ ಪತ್ರಗಳನ್ನು ತೆಗೆದು ತನ್ನ ರಾಜ ಎರಡನೆಯ ಚಾರಲ್ಸ್‌ಗೆ ಕೊಟ್ಟ.


ಮಧ್ಯಯುಗದಲ್ಲಿ ಚರ್ಚಿನ ಅಧಿಕಾರಿಗಳು ಗುಪ್ತ ಏಜೆಂಟರು ಯುರೋಪಿನಾದ್ಯಂತ ಇದ್ದರು. 14ನೆಯ ಶತಮಾನದಲ್ಲಿ ಮೂರನೆಯ ಎಡ್ವರ್ಡ್ ರಾಜ ಪೋಪನ ಆಸ್ಥಾನದ ರಹಸ್ಯಗಳನ್ನು ತಿಳಿಸಲು ಕೌಂಟ್ ನಿಕೋಲಿನೋ ಡೆಲ್ಫಿಸ್ಯೋ ಎಂಬ ಏಜೆಂಟರನ್ನು ನೇಮಿಸಿದ್ದ. ಸ್ವರಾಷ್ಟ್ರಕಲಹ, ಕ್ರಾಂತಿ, ಮತಸಂಬಂಧ ಉಪದ್ರವಗಳಲ್ಲಿ ಗುಪ್ತ ಏಜೆಂಟರ ಪಾತ್ರ ಹಿರಿದಾದದ್ದು. ಇಂಗ್ಲೆಂಡಿನ ಮೊದಲನೆಯ ಎಲಿಜ಼ಬೆತ್ ರಾಣಿಯ ಆಳ್ವಿಕೆಯಲ್ಲಿ ಬರ್ಲಿ ಮತ್ತು ವಾಲ್ಸಿಂಗ್ ಹಾಮ್ರು ಬಹು ಚಾತುರ್ಯದಿಂದ ಗೂಢಚಾರರನ್ನು ಉಪಯೋಗಿಸಿದರು. ಫ್ರಾನ್ಸಿನಲ್ಲಿ 13 ಮತ್ತು 15ನೆಯ ಲೂಯಿಗಳು ಗೂಢಚಾರರಿಂದ ಅಪಾರ ಪ್ರಯೋಜನವನ್ನು ಪಡೆದರು. ಗೂಢಚರ್ಯೆ 17ನೆಯ ಶತಮಾನದಲ್ಲಿ ಇಂಗ್ಲೆಂಡಿನಲ್ಲಿ ಕ್ರಾಮ್ವೆಲ್ನಿಂದಲೂ ಫ್ರಾನ್ಸಿನಲ್ಲಿ ಕಾರ್ಡಿನಲ್ ರಿಷಿಲುನಿಂದಲೂ ವ್ಯವಸ್ಥಿತ ಪದ್ಧತಿಯಾಯಿತು. ರಿಷಿಲೂ ಅದನ್ನು ಪೂರ್ಣಗೊಳಿಸಿದ. ವೆನಿಸ್ ಪ್ರಜಾಧಿಪತ್ಯದ ಸ್ಬಿರ್ರಿ ಎಂಬ ಗುಪ್ತಸಂಸ್ಥೆಯೂ ರಷ್ಯದ ಒಖಾನಾ ಎಂಬ ಗುಪ್ತ ಪೊಲೀಸ್ ಸಿಬ್ಬಂದಿಯೂ ಫ್ರಾನ್ಸಿನ ಕ್ರಾಂತಿಯ ಕಾಲದ ಗುಪ್ತ ಪೊಲೀಸರೂ ರಷ್ಯದ eóÁರ್ ಚಕ್ರವರ್ತಿಗಳ ಆಡಳಿತದಲ್ಲಿದ್ದ ಗುಪ್ತ ಏಜೆಂಟರೂ ಜರ್ಮನಿಯ ನಾಜಿ಼ಗಳ ಗೆಸ್ಟಾಪೋ ಎಂಬ ಗುಪ್ತ ಸುದ್ದಿಗಾರರೂ ಎಲ್ಲ ದರ್ಜೆಗಳ ಜನರೊಡನೆ ಬೆರೆತು ಅವರ ಮರ್ಮ ಒಳಸಂಚುಗಳನ್ನು ಅರಿತು ವರದಿ ಮಾಡುತ್ತಿದ್ದರು.


18ನೆಯ ಶತಮಾನದಲ್ಲಿ ಪ್ರಷ್ಯದ ಫ್ರೆಡರಿಕ್ ಮಹಾಶಯ ಬೇಹುಕಾರರ ತಂಡಗಳಿಂದ ನೆರವು ಪಡೆದ. ನೆಪೋಲಿಯನ್ ಬೇಹುಕಾರರನ್ನು ಬಹಳ ಉಪಯೋಗಿಸಿದ. ಅವನ ಯುದ್ಧಗಳಲ್ಲಿ ಗೂಢಚರ್ಯೆ ಕ್ರಮ ಬಹು ಸಮರ್ಥವಾಗಿತ್ತು. ಪೊಲೀಸ್ ಮಂತ್ರಿಯಾಗಿದ್ದ ಫೌಚೆಯ ಗೂಢಚಾರರು ಜಾಕೊಬಿನ್ನರು, ರಾಯಲಿಸ್ಟರು ಮುಂತಾದ ಅನೇಕ ಪಂಗಡದವರ ಒಳಸಂಚುಗಳನ್ನು ಪತ್ತೆ ಮಾಡಿದರು. ವಾಟರ್ಲೂ ಯುದ್ಧಕ್ಕೆ ಮುಂಚೆ ಡ್ಯೂಕ್ ಆಫ್ ವೆಲ್ಲಿಂಗ್ಟನ್ ಫ್ರಾನ್ಸಿನಲ್ಲಿದ್ದ ತನ್ನ ಗುಪ್ತ ಏಜಂಟರುಗಳಿಂದ ನೆಪೋಲಿಯನ್ನನ ಯೋಜನೆಯ ವಿವರಗಳನ್ನು ತಿಳಿದುಕೊಂಡಿದ್ದ. ರಷ್ಯ, ಆಸ್ಟ್ರಿಯ ಮತ್ತು ಪ್ರಷ್ಯ ರಾಷ್ಟ್ರಗಳು ಒಟ್ಟಿಗೆ ಪವಿತ್ರಮೈತ್ರಿ ಎಂಬ ಒಪ್ಪಂದವನ್ನು ಮಾಡಿಕೊಂಡ ಬಳಿಕ ಆ ಸಂಸ್ಥೆಯ ಗೂಢಚಾರರು, ಸುದ್ದಿಗಾರರು, ಗುಪ್ತ ಏಜೆಂಟರು ಯುರೋಪಿನಾದ್ಯಂತ ತಂಡೋಪತಂಡವಾಗಿ ಹರಡಿಕೊಂಡರು.


19ನೆಯ ಶತಮಾನದಲ್ಲಿ ಪ್ರಷ್ಯದ ಬಿಸ್ಮಾರ್ಕ್ನ ಬೇಹುಕಾರರು ಬಲೆಗಳಂತೆ ಹರಡಿಕೊಂಡಿದ್ದರು. ಆ ಗೂಢಚಾರರ ಇಲಾಖೆಯ ನಾಯಕನಾಗಿದ್ದ ವಿಲಿಯಮ್ ಸ್ಟೈಬರ್ ಎಂಬಾತ ಜರ್ಮನರ ಗೂಢಚರ್ಯೆಯನ್ನು ಬಹು ಚೆನ್ನಾಗಿ ವ್ಯವಸ್ಥೆ ಪಡಿಸಿದ್ದ. ಅವನು ವೇಷಪಲ್ಲಟ ಮಾಡಿಕೊಂಡು ನಾನಾ ಕಪಟರೂಪಗಳಲ್ಲಿ ಬೊಹೀಮಿಯಕ್ಕೆ ಹೋಗಿ ತನ್ನ ಗೂಢಚಾರರ ನೆರವಿನಿಂದ ಪ್ರಷ್ಯದ ಸೇನೆ 1866ರಲ್ಲಿ ಬೊಹೀಮಿಯ ಕದನದಲ್ಲಿ ಗೆಲ್ಲುವಂತೆ ಮಾಡಿದ. 1870ರಲ್ಲಿ ನಡೆದ ಫ್ರೆಂಚ್-ಪ್ರಷ್ಯನ್ ಯುದ್ಧಕ್ಕೆ ಸಿದ್ಧವಾಗಲು ಅವನು ಗೂಢಚರ್ಯೆ ತಯಾರಿಕೆಯನ್ನು ಬಹು ಪರಿಷ್ಕೃತವಾಗಿ ಮಾಡಿಕೊಂಡು ಫ್ರಾನ್ಸಿಗೆ 30,000 ಮಂದಿ ಗೂಢಚಾರರನ್ನು ಕಳುಹಿಸಿದ್ದ. ಈ ಪ್ರಚಂಡ ಗೂಢತಂತ್ರದಿಂದ ಪ್ರಷ್ಯಕ್ಕೆ ಗೆಲುವಾಯಿತು.


ಅಮೆರಿಕದ ಕ್ರಾಂತಿಯಲ್ಲಿ ಪ್ರಖ್ಯಾತ ಗೂಢಚಾರರಿದ್ದರು. ಬ್ರಿಟಿಷರ ಬೇಹುಕಾರ ಮೇಜರ್ ಜಾನ್ ಅಂಡ್ರೆಯನ್ನು ಅಮೆರಿಕನ್ನರು ಹಿಡಿದು ಗಲ್ಲಿಗೇರಿಸಿದರು. ಅಮೆರಿಕದ ಸ್ವರಾಷ್ಟ್ರಕಲಹದಲ್ಲಿ ಸ್ತ್ರೀಬೇಹುಕಾರರು ಎರಡು ಪಕ್ಷಗಳಲ್ಲೂ ಇದ್ದರು. ರೋಸ್ ಗ್ರೀನ್ಹೌ ಮತ್ತು ಬೆಲ್ಲೆ ಬಾಯ್ ಎಂಬ ಮಹಿಳಾ ಗೂಢಚಾರರು ಅಮೂಲ್ಯ ಸಂಗತಿಗಳನ್ನು ಶೇಖರಿಸಿ ರಾಷ್ಟ್ರಮಂಡಲಿಗೆ ಕಳಿಸುತ್ತಿದ್ದರು. ಇವು ಮಂಡಲಿಗೆ ವಿಜಯವನ್ನು ತಂದುವು. ಪಾಲಿನ್ ಕಷ್ಮನ್ ಎಂಬ ನಟಿ ಮತ್ತು ಎಮ್ಮಾ ಎಡ್ಮಂಡ್ಸ್‌ ಎಂಬ ಮಹಿಳೆ ಯೂನಿಯನ್ ಕಡೆ ಗೂಢಚಾರರಾಗಿದ್ದರು. ಎಲಿಜ಼ಬೆತ್ ಲ್ಯೂ ಎಂಬ ಯುವತಿ ಸಂಬಳವನ್ನು ತೆಗೆದುಕೊಳ್ಳದೆ ತನ್ನ ಸ್ವಂತ ಖರ್ಚಿನಿಂದಲೇ ಗುಪ್ತ ಏಜೆಂಟಳಾಗಿದ್ದಳು. ಮಂಡಲಿಯ ಬೇಹುಕಾರ ಕ್ರಮ ಎಷ್ಟು ಸಮರ್ಥವಾಗಿತ್ತೆಂದರೆ ಅಧ್ಯಕ್ಷ ಏಬ್ರಹಾಮ್ ಲಿಂಕನ್ನನ ಆಲೋಚನಾಸಭೆಯ ವೃತ್ತಾಂತಗಳೂ ಇತರ ರಹಸ್ಯಗಳೂ 49 ಗಂಟೆಗಳೊಳಗೆ ಮಂಡಲಿಯ ಮುಖಂಡರಿಗೆ ತಿಳಿದುಬರುತ್ತಿತ್ತು. ಬೆಲ್ಲೆ ಬಾಯ್ ಎಂಬ ಯುವತಿ ಬಂದೂಕು ಹಾರುತ್ತಿದ್ದಾಗಲೂ ಮುನ್ನುಗ್ಗಿ ಜನರಲ್ ಜಾಕ್ಸನ್ಗೆ ರಹಸ್ಯಸುದ್ದಿಗಳನ್ನು ತಿಳಿಸಿದಳು. ಇದರಿಂದ ಮಂಡಲಿಗೆ ಗೆಲುವಾಯಿತು. ಜಪಾನಿಯರು 1904-05ರಲ್ಲಿ ಮಂಚೂರಿಯವನ್ನು ಧಾಳಿಮಾಡುವುದಕ್ಕೆ ಮೊದಲು ರಷ್ಯದ ಚಲನವಲನಗಳನ್ನು ತಮ್ಮ ಗೂಢಚಾರರಿಂದ ಚೆನ್ನಾಗಿ ಅರಿತಿದ್ದರು.


ಮೊದಲನೆಯ ಮಹಾಯುದ್ಧಕ್ಕೆ ತಯಾರಾಗಲು ಜರ್ಮನ್ನರು ನಾನಾ ದೇಶಗಳಲ್ಲಿದ್ದ ತಮ್ಮ ಗೂಢಚಾರರಿಂದ ರಹಸ್ಯ ಸುದ್ದಿಗಳನ್ನು ತರಿಸಿದ್ದರು. ಅಮೆರಿಕ ತನ್ನ ಮಿತ್ರ ರಾಷ್ಟ್ರಗಳಿಗೆ ನೀಡುತ್ತಿದ್ದ ನೆರವನ್ನು ಮುರಿಯಲು ಜರ್ಮನಿ ಕೇಪಿಬಾನ್ ರಿಂಬೆನಲ್ ಎಂಬ ಗುಪ್ತಚಾರರನ್ನು 1915ರಲ್ಲಿ ಅಮೆರಿಕಕ್ಕೆ ಕಳಿಸಿತು. ಆ ಕಾಲದಲ್ಲಿ ಫ್ರಾನ್ಸಿನಲ್ಲಿದ್ದ ರೈತರು, ಚಾಕರರು, ಹಜಾಮರು, ವ್ಯಾಪಾರ ಪ್ರವಾಸಿಗಳು, ಉಪಾಧ್ಯಾಯರುಗಳಲ್ಲಿ ಅನೇಕರು ಜರ್ಮನರಾಗಿದ್ದರು. ಅವರು ತಾವು ಜರ್ಮನರೆಂದು ತಿಳಿಸದೆ ಇತರ ಜನಾಂಗದವರೆಂದು ಹೇಳಿಕೊಳ್ಳುತ್ತಿದ್ದರು. ಅವರಲ್ಲಿ ಅನೇಕರು ಜರ್ಮನಿಯ ಗೂಢಚಾರರಾಗಿ ವರ್ತಿಸಿದರು. ಜರ್ಮನಿಯ ನೌಕೆಯಲ್ಲಿ ಹಿಂದೆ ಕ್ಯಾಪ್ಟನ್ ಆಗಿದ್ದ ಆಲ್ಫ್ರೆಡ್ ವೆಹ್ರಿಂಗ್ ಎಂಬಾತ ಆಲ್ಬರ್ಟ್ ಓಟೆಲ್ ಎಂಬ ಮಿಥ್ಯಾನಾಮದಲ್ಲಿ ಜರ್ಮನಿಯ ಏಜೆಂಟಾಗಿ ಸ್ಕಾಟ್ಲೆಂಡಿನಲ್ಲಿ ಬಹಳ ವರ್ಷ ನೆಲೆಸಿ 1938ರಲ್ಲಿ ಜರ್ಮನಿಗೆ ಬ್ರಿಟಿಷ್ ನೌಕೆಯ ರಹಸ್ಯಗಳನ್ನು ಹ್ರಸ್ವತರಂಗ ಪ್ರೇಷಕದಲ್ಲಿ (ಷಾರ್ಟ್ ವೇವ್ ಟ್ರಾನ್ಸ್‌ ಮೀಟರ್) ಕಳಿಸಿದ್ದರಿಂದ ಜರ್ಮನರು ಬ್ರಿಟಿಷ್ ಯುದ್ಧ ಹಡಗು ರಾಯಲ್ ಓಕನ್ನು ಮುಳುಗಿಸಲು ಸಾಧ್ಯವಾಯಿತು.


ಬ್ರಿಟಿಷರ ಗುಪ್ತ ಏಜೆಂಟುಗಳು ಜರ್ಮನಿಯಲ್ಲೂ ಜರ್ಮನಿ ವಶಪಡಿಸಿಕೊಂಡ ದೇಶಗಳಲ್ಲೂ ನಡೆಯುತ್ತಿದ್ದ ಸಂಗತಿಗಳನ್ನು ಬ್ರಿಟನ್ನಿಗೆ ವರದಿ ಮಾಡುತ್ತಿದ್ದರು. ತರಬೇಕಾದ ಏಜೆಂಟುಗಳನ್ನು ಅಮೆರಿಕನ್ನರು ಪ್ಯಾರಾಚೂಟ್ಗಳಿಂದ ಫ್ರಾನ್ಸಿನಲ್ಲಿ ಇಳಿಸಿದರು. ಅವರು ಜರ್ಮನರ ಐದು ಡಿವಿಜ಼ನ್‍ಗಳು ಕೆಲಸ ಮಾಡದಂತೆ ತಂತ್ರ ನಡೆಸಿದರು. ರಷ್ಯದ ಗೂಢಚಾರ ರಿಚರ್ಡ್ ಸೋರ್ಜ್ ಎಂಬಾತ ಜಪಾನಿನಲ್ಲಿ ನಿಂತು ತಾನು ಜರ್ಮನ್ ಪಕ್ಷದ ಸುದ್ದಿಗಾರನೆಂದು ನಟಿಸಿ ಜರ್ಮನರ ರಹಸ್ಯಗಳನ್ನು ರಷ್ಯಕ್ಕೆ ತಿಳಿಸುತ್ತಿದ್ದ. ಜರ್ಮನರ 170 ಡಿವಿಜ಼ನ್‍ಗಳು ಸೋವಿಯೆತ್ ಸರಹದ್ದಿನಲ್ಲಿದ್ದವೆಂದೂ ಅವು ಐದು ವಾರಗಳಲ್ಲಿ ಮಾಸ್ಕೋ ಕಡೆಯಲ್ಲಿ ಧಾಳಿಮಾಡುವುದೆಂದೂ ರಷ್ಯಕ್ಕೆ 1941ರಲ್ಲಿ ತಿಳಿಸಿದ. ಜಪಾನರು ಅವನನ್ನು ಹಿಡಿದು ವಧಿಸಿದರು.


ಒಂದನೆಯ ಮಹಾಯುದ್ಧದ ಕಾಲದಲ್ಲಿ ಗರ್ಟ್ರೂಡ್ ಮಾರ್ಗರೇಟ್ ಜೆಲ್ಲ್‌ ಎಂಬ ಬಹು ಸುಂದರ ಡಚ್ ನರ್ತಕಿ ಜರ್ಮನಿಯ ಬೇಹುಕಾರಳಾಗಿ ಮಾತಾಹಾರಿ ಎಂಬ ಹೆಸರಿನಲ್ಲಿ ಪ್ಯಾರಿಸಿನಲ್ಲಿ ನೆಲೆಸಿ ಫ್ರಾನ್ಸ್‌ ಮತ್ತು ಇಂಗ್ಲೆಂಡಿನ ರಹಸ್ಯಗಳನ್ನು ಜರ್ಮನಿಗೆ ನೀಡುತ್ತಿದ್ದಳು. ಠಕ್ಕು, ಬೆಡಗು, ಬಿನ್ನಾಣಗಳಿಂದ ಅವಳು ಅನೇಕ ಉನ್ನತ ಫ್ರೆಂಚ್ ಸೇನಾಧಿಕಾರಿಗಳನ್ನು ಮರಳುಮಾಡಿ ತನ್ನ ಬಲೆಯಲ್ಲಿ ಸಿಕ್ಕಿಸಿ, ಅಮಲೇರಿಸುವ ಮಾದಕಗಳಿಂದ ಮೈಮರೆಯುವಂತೆ ಮಾಡಿ, ಅವರಿಂದ ಸೇನಾ ರಹಸ್ಯಗಳನ್ನು ಸೆಳೆಯುತ್ತಿದ್ದಳು. ಅವಳು ತಿಳಿಸಿದ ಒಂದು ಸುದ್ದಿ 75,000 ಮಂದಿ ಫ್ರೆಂಚ್ ಸೈನಿಕರ ಕೊಲೆಯಾಗುವಂತೆ ಮಾಡಿತು. 1917ರಲ್ಲಿ ಫ್ರೆಂಚ್ ಅಧಿಕಾರಿಗಳು ಅವಳನ್ನು ಗುಂಡಿಕ್ಕಿ ಕೊಂದರು.


ಅಮೆರಿಕ, ಗ್ರೇಟ್ ಬ್ರಿಟನ್ ಮತ್ತು ಕೆನಡಗಳಲ್ಲಿ ಪರಮಾಣು ವಿಜ್ಞಾನದ ರಹಸ್ಯಗಳನ್ನು ಚೌರ್ಯ ಮಾಡಲು ರಷ್ಯನ್ ಗೂಢಚಾರರ ಅನೇಕ ತಂಡಗಳಿದ್ದವು. ಅಮೆರಿಕದಲ್ಲಿ ರಷ್ಯದ ಗೂಢಚಾರಿಯಾಗಿ ವರ್ತಿಸುತ್ತಿದ್ದ ಕರ್ನಲ್ ರುಡಾಲ್ಫ್‌ ಐವನೋವಿಚ್ ಏಬೆಲ್ಗೆ 1957ರಲ್ಲಿ 30 ವರ್ಷ ಕಾರಾಗೃಹ ಶಿಕ್ಷೆಯಾಯಿತು. ಇಂಗ್ಲೆಂಡಿನಲ್ಲಿ 1953 ರಿಂದಲೂ ರಷ್ಯದ ಏಜೆಂಟಾಗಿದ್ದ ಜಾರ್ಜ್ ಬೇಕ್ಗೆ 42 ವರ್ಷಗಳ ಕಾರಾಗೃಹ ಶಿಕ್ಷೆಯಾಯಿತು. ಇಟಲಿಯ ಕೈಗಾರಿಕಾಮಂಡಲಿಯೊಂದು ಅಮೆರಿಕದ ಒಂದು ಮಳಿಗೆಯಲ್ಲಿ ತನ್ನ ಕೆಲವು ರಸಾಯನಶಾಸ್ತ್ರಜ್ಞರನ್ನು ಕೆಲಸಕ್ಕೆ ಸೇರಿಸಿ ಅವರ ಮೂಲಕ ಅರಿಯೋಮೈಸಿನ್ ಎಂಬ ಔಷಧಿ ತಯಾರಿಯ ಸೂತ್ರವನ್ನು ಕಳವು ಮಾಡಿ, ಅದನ್ನು ಯುರೋಪಿನ ಅಂಗಡಿಗಳಲ್ಲಿ ಮಾರಿ ಯಥೇಚ್ಛ ಹಣವನ್ನು ಸಂಪಾದಿಸಿತು. ರಷ್ಯನ್ನರು ಮಾಸ್ಕೋ ಪಟ್ಟಣದ ಅಮೆರಿಕನ್ ರಾಯಭಾರಿ ಕಚೇರಿಯಲ್ಲಿ ಒಂದು ಗುಪ್ತ ಮೈಕ್ರೊಫೋನನ್ನು ಬಚ್ಚಿಟ್ಟು ಅನೇಕ ವರ್ಷ ಕಾಲ ಅಮೆರಿಕನ್ನರ ಸಂದೇಶಗಳನ್ನು ಮರೆಯಲ್ಲಿ ಕೇಳುತ್ತಿದ್ದರು.


ಎರಡನೆಯ ಮಹಾಯುದ್ಧ ಕಾಲದಲ್ಲಿ ಅನೇಕ ದೇಶಗಳ ಗೂಢಚಾರರು ವಿಶಿಷ್ಟ ಶಿಕ್ಷಣ ಕೇಂದ್ರಗಳಲ್ಲಿ ತರಬೇತಿ ಪಡೆದರು. ರೇಡಿಯೋ ಪ್ರೇಷಕಗಳನ್ನು ರಚಿಸುವುದು; ಆಕಾಶವಿಮಾನ, ಹಡಗುಗಳನ್ನು ವರ್ಗೀಕರಿಸಿ ಸರಿಯಾಗಿ ವರ್ಣಿಸುವುದು; ಫಿಲ್ಮಿನ ಮೇಲೆ ಬಹು ಸಣ್ಣ ಅಕ್ಷರಗಳಲ್ಲಿ ಬರೆದ ಸಂದೇಶಗಳಿರುವ ಸೂಕ್ಷ್ಮಗುರುತುಗಳನ್ನು (ಮೈಕ್ರೋಡಾಟ್ಸ್‌) ಉಪಯೋಗಿಸುವ ಕ್ರಮ; ಗುಪ್ತ ಲಿಪಿ, ಗುಪ್ತ ಬರವಣಿಗೆ, ಅದೃಶ್ಯ ಶಾಯಿಯ ಉಪಯೋಗ; ವಿದೇಶೀ ಭಾಷೆ, ಪದ್ಧತಿ, ಚರಿತ್ರೆಗಳಿಗೆ ಅನುಸಾರವಾಗಿ ವರ್ತಿಸುವುದು; ಹೊಸಬರೊಡನೆ ಗೆಳೆತನ ಬೆಳೆಸುವುದು; ಕಪಟ ವೇಷಗಳನ್ನು ಧರಿಸುವುದು; ರಾಸಾಯನಿಕಗಳಿಂದ ದ್ರಾವಣ ಮಾಡುವುದು; ಗುಪ್ತ ಸಂಕೇತಗಳು ಮುಂತಾದವನ್ನು ಕಲಿತರು. ಬೇಹುಕಾರರು ಸಮಾಚಾರಗಳನ್ನು ಸಂಗ್ರಹಿಸಲು ನಾನಾವಿಧಗಳನ್ನು ಅನುಸರಿಸುತ್ತಾರೆ-ಕಾಗದಪತ್ರಗಳು, ನಕ್ಷೆ, ಮ್ಯಾಪ್, ಏಕಸ್ವ ಮುಂತಾದವನ್ನು ಕದಿಯುವುದು; ಫೋಟೊ ತೆಗೆಯುವುದು; ಲಂಚ ಕೊಡುವುದು; ಸುಲಭವಾಗಿ ಬಚ್ಚಿಟ್ಟು ಕೈಯಲ್ಲಿ ಒಯ್ಯುವಂಥ ನಿಸ್ತಂತು ಯಂತ್ರಗಳನ್ನು (ವೈರ್ಲೆಸ್ ಸೆಟ್ಸ್‌) ಉಪಯೋಗಿಸುವುದು; ಎಕ್ಸ್‌ಕಿರಣ ಸಲಕರಣೆ, ಮೈಕ್ರೋಫೋನುಗಳಿಂದ ಗೋಡೆಯಾಚೆ ನಡೆಯುವ ಮಾತುಗಳನ್ನು ಹೊಂಚಿ ಕೇಳುವುದು; ವಾಯು ತರಂಗಗಳಲ್ಲಿನ ಗುಪ್ತ ಸಂದೇಶಗಳನ್ನು ಹಿಡಿಯುವುದು ನಿಸ್ತಂತುವಿನಿಂದ ಕದ್ದು ಕೇಳುವುದು ಇತ್ಯಾದಿ. ನೀರಿನೊಳಗೆ ಹುದುಗಿಕೊಂಡು ಮೇಲಿರುವ ಹಡಗುಗಳಲ್ಲಾಗುವ ಸಂಗತಿಗಳನ್ನು ಕೇಳಲೂ ಶತ್ರುವಿನ ಹೊಸ ನಮೂನೆಯ ಹಡಗುಗಳನ್ನು ಅನ್ವೇಷಿಸಲೂ ಸಾಧ್ಯವಾಗುವಂತೆ ನೂತನ ಸಲಕರಣೆಗಳಾಗಿವೆ. ಉಪಗ್ರಹಗಳನ್ನು ಅಂತರಿಕ್ಷಕ್ಕೆ ಹಾರಿಸಿ ಅವು ಭೂಮಿಯನ್ನು ಸುತ್ತುತ್ತಿರುವಾಗ ಇತರ ದೇಶಗಳ ಭೂಸ್ಥಿತಿ, ಸೇನಾರಚನೆಗಳನ್ನು ಚಿತ್ರಿಸಿ, ಆ ಚಿತ್ರಗಳನ್ನು ಭೂಮಿಗೆ ಕಳಿಸುವ ವಿಧಗಳೂ ಬಂದಿವೆ. ಬ್ರಿಟನ್ನಿನ ಸ್ಕಾಟ್ಲೆಂಡ್ಯಾರ್ಡ್, ಫ್ರಾನ್ಸಿನ ಡುಕ್ಸೆಮಿ ಬ್ಯುರೋ ಮತ್ತು ರಷ್ಯದ ಕೆ.ವಿ.ಡಿ. ಸಂಸ್ಥೆಗಳಲ್ಲಿ ಗೂಢಚರ್ಯೆಯ ಇಲಾಖೆಗಳೇ ಇವೆ. ಚೀನದ ಗೂಢಚಾರರಂತೂ ಜಗತ್ತಿನಾದ್ಯಂತ ಹರಡಿಕೊಂಡಿದ್ದಾರೆ.