ಪುಟ:Khinnate banni nivarisoona.pdf/೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಖಿನ್ನತೆಯ ವ್ಯಾಪ್ತಿ

2016ರಲ್ಲಿ ನಿಮ್ಹಾನ್ಸ್ ಸಂಸ್ಥೆ ಪ್ರಕಟಿಸಿರುವ ವರದಿ ಪ್ರಕಾರ ಭಾರತದಲ್ಲಿ ಪ್ರತಿ ನೂರು ಜನರಲ್ಲಿ ಐದು ಜನ ಖಿನ್ನತೆ ರೋಗದಿಂದ ಬಳಲುತ್ತಿದ್ದಾರೆ. ಕಳವಳದ ವಿಚಾರವೆಂದರೆ ಬಹುತೇಕ ರೋಗಿಗಳಿಗೆ ತಮಗೆ ಖಿನ್ನತೆಯಿದೆ ಎಂಬುದು ತಿಳಿದಿರುವುದೇ ಇಲ್ಲ. ಖಿನ್ನತೆ ರೋಗಿಗಳು ತಮ್ಮ ಆರೋಗ್ಯ ಸರಿಯಿಲ್ಲ. ತಮಗೆ ವಿವಿಧ ಬಗೆಯ ಮತ್ತು ವಿವಿಧ ಭಾಗದಲ್ಲಿ ನೋವಿದೆ, ನಿಶ್ಯಕ್ತಿಯಿದೆ, ಆಯಾಸವಾಗುತ್ತಿದೆ, ಹಸಿವು ನಿದ್ರೆ ಮೈಥುನ/ಮಲಮೂತ್ರ ವಿಸರ್ಜನೆಯ ಏರುಪೇರಿದೆ. ಪರೀಕ್ಷೆ ಮಾಡಿ ಚಿಕಿತ್ಸೆ ಕೊಡಿ ಎಂದು ವೈದ್ಯರಲ್ಲಿಗೆ ಆಸ್ಪತ್ರೆಗೆ ಹೋಗುತ್ತಾರೆ. ಯಾವುದೇ ಚಿಕ್ಕ/ದೊಡ್ಡ ಆಸ್ಪತ್ರೆ, ಜನರಲ್ ಪ್ರಾಕ್ಟಿಶನರ್ ಅಥವಾ ತಜ್ಞ ವೈದ್ಯರಲ್ಲಿಗೆ ಹೋಗುವ ರೋಗಿಗಳಲ್ಲಿ ಶೇಕಡ 30-50ರಷ್ಟು ಮಂದಿಗೆ ಖಿನ್ನತೆ ರೋಗ ಇರುತ್ತದೆ ಎಂದು ನಮ್ಮ ದೇಶದಲ್ಲಿ ನಡೆದಿರುವ ಅಧ್ಯಯನಗಳು ತಿಳಿಸುತ್ತವೆ. ಇವರನ್ನು ಪರೀಕ್ಷಿಸಿದ ವೈದ್ಯರಿಗೆ ದೇಹದಲ್ಲಿ ಯಾವುದೇ ರೋಗ, ಕೊರತೆ ಕಂಡುಬರುವುದಿಲ್ಲ. ಎಲ್ಲಾ ಪರೀಕ್ಷಾ ವರದಿಗಳು (ರಕ್ತ, ಎಕ್ಸರೆ, ಇ.ಸಿ.ಜಿ., ಸ್ಕ್ಯಾನಿಂಗ್, ಎಂ.ಆರ್.ಐ. ಇತ್ಯಾದಿ) ನಾರ್ಮಲ್ ಆಗಿರುತ್ತವೆ. ಈ ರೋಗಗಳಿಗೆ ವೈದ್ಯರು ಒಂದಷ್ಟು ವಿಟಮಿನ್ ಮಾತ್ರೆಗಳು, ಟಾನಿಕ್‌ಗಳು, ನೋವು ನಿವಾರಕಗಳನ್ನು ಬರೆದು ಕೊಡುತ್ತಾರೆ. ಸಹಜವಾಗಿ ಈ ಔಷಧಿ-ಟಾನಿಕ್‌ಗಳಿಂದ ರೋಗಿಗಳಿಗೆ ವೃಥಾ ಖರ್ಚು ವಿನಾ ಬೇರಾವ ಪ್ರಯೋಜನವಿರುವುದಿಲ್ಲ. ಖಿನ್ನತೆ ರೋಗಿಗಳು, ಈ ಚಿಕಿತ್ಸೆ ವಿಫಲವಾದಾಗ ಕಂಗಾಲಾಗುತ್ತಾರೆ. ತಮ್ಮ ಗ್ರಹಚಾರ ಚೆನ್ನಾಗಿಲ್ಲ ಎಂತಲೋ, ಯಾರದ್ದೋ ಕೆಟ್ಟಕಣ್ಣು ಬಿದ್ದಿದೆ ಎಂತಲೋ ಯಾರೋ ಮಾಟ, ಮಂತ್ರ ಮಾಡಿದ್ದಾರೆ ಎಂತಲೋ, ಯಾರೋ ಮದ್ದು

ಹಾಕಿದ್ದಾರೆ ಎಂತಲೋ ಯಾವುದೋ ಪಾಪ ಕರ್ಮಫಲ ಎಂತಲೋ

10 / ಖಿನ್ನತೆ: ಬನ್ನಿ ನಿವಾರಿಸೋಣ