ಪುಟ:Khinnate banni nivarisoona.pdf/೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಇಳಿವಯಸ್ಸಿನಲ್ಲಿ ಖಿನ್ನತೆ ಕಾಯಿಲೆ

ಅರವತ್ತು ವರ್ಷ ವಯಸ್ಸಿನ ಅನಂತರ ಶೇಕಡಾ 30ರಷ್ಟು ವೃದ್ಧರು/ 75 ವರ್ಷ ವಯಸ್ಸಿನ ನಂತರ ಶೇಕಡಾ 50ರಷ್ಟು ವೃದ್ಧರು ಖಿನ್ನತೆಗೆ ಒಳಗಾಗುತ್ತಾರೆಂದು ಸಮೀಕ್ಷೆಗಳು ತಿಳಿಸುತ್ತವೆ. ವೃದ್ಧಾಪ್ಯದಲ್ಲಿ ಶರೀರ ಮತ್ತು ಮನಸ್ಸಿನಲ್ಲಾಗುವ ಬದಲಾವಣೆಗಳು, ಸಾಮಾಜಿಕ ಅಂಶಗಳು, ಕಾಡುವ ಅನಾರೋಗ್ಯ, ಆರ್ಥಿಕ ಪರಾವಲಂಬನೆ, ಮನೆಯವರ ನಿರ್ಲಕ್ಷ್ಯ, ಸಾವು, ಪಾಪಪ್ರಜ್ಞೆ ವೃದ್ಧರ ಖಿನ್ನತೆಗೆ ಕಾರಣವಾಗುತ್ತವೆ.

ವೃದ್ಧಾಪ್ಯದಲ್ಲಿ ಹಲವು ಕಾಯಿಲೆಗಳು, ಶಾರೀರಕ ಮತ್ತು ಮಾನಸಿಕ ದುರ್ಬಲತೆಗಳು ಕಾಡುತ್ತವೆ. ಜೀವನಸಂಗಾತಿ ಕಾಯಿಲೆಗಳಾದ ಡಯಾಬಿಟೀಸ್, ಬಿಪಿ, ಕೀಲುಬೇನೆ, ಕ್ಯಾನ್ಸರ್, ಹೃದ್ರೋಗಗಳು, ಲಿವರ್, ಕಿಡ್ನಿ ವೈಫಲ್ಯತೆ, ಮೂಳೆ ಜಳ್ಳಾಗುವುದು-ಮುರಿಯುವುದು ವ್ಯಕ್ತಿಯ ಜೀವವನ್ನು ಹಿಂಡುತ್ತವೆ. ಅನಾರೋಗ್ಯ ಪೀಡಿತರಾದ ಇಳಿವಯಸ್ಸಿನವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು, ಔಷಧೋಪಚಾರ ಮಾಡಿಸಲು ತಡ ಮಾಡುತ್ತಾರೆ. ತನ್ನಿಂದಾಗಿ ಅವರಿಗೆ ಖರ್ಚು ಹೆಚ್ಚು ತನ್ನ ಪರಾವಲಂಬನೆ ಹೆಚ್ಚುತ್ತಿದೆ. ಡಯಾಬಿಟೀಸ್, ಬಿ.ಪಿ. ಕಂಟ್ರೋಲ್‌ಗೆ ಬರುತ್ತಿಲ್ಲ. ವಿಷಮ ಪರಿಣಾಮಗಳಿಂದಾಗಿ ದೇಹ ದುರ್ಬಲವಾಗಿದೆ. ಎಲ್ಲಿ ಲಕ್ವಾ ಹೊಡೆಯು ತ್ತದೋ, ಹೃದಯಾಘಾತವಾಗುತ್ತದೆಯೋ ಎಂಬ ಆತಂಕ, ಎಂತಹ ಸಾವು ಬರುತ್ತದೋ, ಆಸ್ಪತ್ರೆಯಲ್ಲಿ, ಐಸಿಯುನಲ್ಲಿ, ಮೂಗು ಬಾಯಿಗೆ ಕೈಗೆ ಟ್ಯೂಬ್ ಹಾಕಿಸಿಕೊಂಡು ಬಿದ್ದಿರಬೇಕಾಗುತ್ತದೋ, ಏನೋ, ಸರಿಯಾದ ಚಿಕಿತ್ಸೆ ಸಿಗುತ್ತದೋ, ಇಲ್ಲವೋ, ಸತ್ತಮೇಲೆ ಸ್ವರ್ಗವೋ, ನರಕವೋ, ಪುನರ್ಜನ್ಮವೋ ಗೊತ್ತಿಲ್ಲ. ಈ ಎಲ್ಲಾ ಅಂಶಗಳು ವೃದ್ಧರ ಖಿನ್ನತೆಯನ್ನು ಹೆಚ್ಚಿಸುತ್ತವೆ. ಖಿನ್ನತೆಯಿಂದ ಅವರ ರೋಗಲಕ್ಷಣಗಳು ಉಲ್ಬಣಿಸುತ್ತವೆ. ಅಂಗಾಂಗ ದುರ್ಬಲತೆ ಹೆಚ್ಚುತ್ತದೆ. ಇದರಿಂದ ಮತ್ತಷ್ಟು ಖಿನ್ನತೆ, ಇದೊಂದು ವಿಷವರ್ತುಲವಾಗುತ್ತದೆ. ವೃದ್ಧಾಶ್ರಮಗಳಲ್ಲಿರುವ ವೃದ್ಧರಲ್ಲಿ, ಆಸ್ಪತ್ರೆಗಳಲ್ಲಿ ದೀರ್ಘಕಾಲ ಇರಬೇಕಾದವರಲ್ಲಿ ಖಿನ್ನತೆ ತೀವ್ರವಾಗಿರುತ್ತದೆ.


ಖಿನ್ನತೆ: ಬನ್ನಿ ನಿವಾರಿಸೋಣ / 19