ಪುಟ:ಗೌರ್ಮೆಂಟ್ ಬ್ರಾಹ್ಮಣ.pdf/೩೬

ವಿಕಿಸೋರ್ಸ್ದಿಂದ
(ಪುಟ:ಗೌರ್ಮೆಂಟ್ ಬ್ರಾಮ್ಮಣ.pdf/೩೬ ಇಂದ ಪುನರ್ನಿರ್ದೇಶಿತ)
ಈ ಪುಟವನ್ನು ಪ್ರಕಟಿಸಲಾಗಿದೆ

೨೦

ಗೌರ್ಮೆಂಟ್ ಬ್ರಾಹ್ಮಣ

ಇನ್ನೂ ಹಿತವೆನಿಸುತ್ತಿತ್ತು. ಅಂತಹ ಬಸರಕೋಡ ರಸ್ತೆಯನ್ನು ಬಿಟ್ಟು ಡಾಂಬರ್ ರಸ್ತೆಯ ಮೇಲೆ ನಡೆಯುವುದೆಂದರೆ ನನಗೆ ಬೇಸರ. ಈ ಕಾರಣಕ್ಕೆ ನಾನು "ಬಸರಕೋಡಕ್ಕೆ ಹೋಗೋಣ" ಎಂದಾಗ, ಅಜ್ಜಿಗೂ ಅದು ದೂರಾದರೂ ಪರವಾಗಿಲ್ಲ ಬಸರಕೋಡಕ್ಕೆ ಹೋಗುವುದೇ ಒಳ್ಳೆಯದೆನಿಸಿತ್ತೋ ಏನೋ.

ಹೌದು ಅಲ್ಲಿ ಹೋಗುದು ಚಲೋ ಅನ್ಸತ್ತದ
ಆದ್ರ ಏನು ಮಾಡುದು.....
ಆ ಕುರಸಾಲ್ಯ ಏನು ಮಾಡ್ತಾನೋ ಏನೋ......

ಎಂದು ತನ್ನೊಳಗೆ ಒಟಗುಟ್ಟುತ್ತ ಕೊಂಟೋಜಿಯ ದಾರಿಯನ್ನೇ ತುಳಿಯತೊಡಗಿದಳು. ಊರು ದಾಟಿ ಡಾಂಬರ್ ರಸ್ತೆ ಸೇರಿದಾಗ, ಕೊಂಟೋಜಿಗೆ ಒಂದು ಚಕ್ಕಡಿ ಹೊರಟಿತ್ತು.

ಯಪ್ಪಾ, ಏ ಯಪ್ಪಾss..
ಸಣ್ಣ ಹುಡುಗೈತ್ಯ, ನಡ್ಯಾಕ ಆಗಂಗಿಲ್ಲ.
ಬ್ಯಾಡಂದ್ರು ಬೆನ್ನ ಹತ್ತಿ ಬಂದೈತಿ...... ಕೇಳಂಗಿಲ್ಲಿದು......
ಸ್ವಲ್ಪ ಹತ್ಸಗೊರ್ರಿಯಪ್ಪಾss.........

ಎಂದು ಅಂಗಲಾಚಿ ಬೇಡಿಕೊಳ್ಳುತ್ತಿದ್ದಳು. ಅಜ್ಜಿಯ ಜೊತೆಗೆ, ತಾಯಿಯ ಜೊತೆಗೆ ಹೊರಟರೆ, ಅಜ್ಜಿಯಾಗಲಿ, ತಾಯಿಯಾಗಲಿ ಈ ರೀತಿ ಕೇಳುವುದು ಮಾಮೂಲಿ ಮಾತುಗಳು. ಈ ಮಾತುಗಳು ಪ್ರಾರಂಭವಾದರೆ ಸಾಕು. ಆಗ ನಾನು ನಡೆದು ಸೋತು ಬಳಲಿ ಬೆಂಡಾದವನಂತೆ ಇಲ್ಲವೆ ಸುಟ್ಟ ಬದನೆಕಾಯಿಯಂತೆ ಮುಖ ಬಾಡಿಸುತ್ತಿದ್ದೆ. ಕೆಲವರು ಮನಕರಗಿ ಚಕ್ಕಡಿಯಲ್ಲಿ ಹತ್ತಿಸಿಕೊಂಡರೆ ಇನ್ನೂ ಕೆಲವರು (ನಾವು ಹರಿಜನರೆಂದು ಗೊತ್ತಿದ್ದವರು) ಇನ್ನೂ ಹೆಚ್ಚಿನ ರಭಸದಲ್ಲಿ ಚಕ್ಕಡಿಯನ್ನು ಓಡಿಸಿಕೊಂಡು ಹೋಗುತ್ತಿದ್ದರು. ಆದರೆ ಇಲ್ಲಿ ಹಾಗೇನಾಗಲಿಲ್ಲ. ಅಜ್ಜಿ ಕೇಳಿದಾಕ್ಷಣ ಆ ವ್ಯಕ್ತಿ ಕೂಡ್ರಿಸಲು ಹೇಳಿದ. ಮಾತು-ಕತೆಯೊಂದಿಗೆ ಕೊಂಟೋಜಿ ತಲುಪಿದೆವು.

ನಿನಗೆ ಪುಣ್ಯ ಬರಪ್ಪ/
ನನ್ನಂಗ ಗಸಾನs ಮೊಮ್ಮಕ್ಕಳ ಕಾಣ್ಹಾಂಗ
ಆ ದೇವರು ಮಾಡ್ಲಿ.......

ಎಂದು ಬ್ರಾಹ್ಮಣರಂತ ಹರಕೆ ಕೊಟ್ಟು ನನ್ನನ್ನು ಚಕ್ಕಡಿಯಿಂದ ಇಳಿಸಿಕೊಂಡಳು. ಆಗಲೇ ಬಿಸಿಲೇರಿತ್ತು. ಕೋಣದ ಮನೆಯವರ ಹಿತ್ತಲ ಬಾಗಿಲಿಗೆ ತಲುಪಿದೆವು. ನಾನು ಎಮ್ಮ ನೋಡುತ್ತ ನಿಂತೆ. ಅಜ್ಜಿ ಇನ್ನೊಂದು ಹೆಂಗಸಿನ ಜೊತೆಗೆ ಮಾತನಾಡುತ್ತಿದ್ದಳು.

"ಹಿಂಡಿ ಹತ್ತಿಕಾಳು ತಂದಿಯೇನಬೇ ಮುದಕಿ"