ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಗಾಟ್ಲೆಂಡ್

ವಿಕಿಸೋರ್ಸ್ದಿಂದ

ಗಾಟ್ಲೆಂಡ್[ಸಂಪಾದಿಸಿ]

ಸ್ವೀಡನಿಗೆ ಸೇರಿದ ಒಂದು ದ್ವೀಪ. ಬಾಲ್ಟಿಕ್ ಸಮುದ್ರದಲ್ಲಿ ಉ.ಅ. 570-580 ನಡುವೆ, ಸ್ವೀಡನಿನ ಮುಖ್ಯ ಭೂಭಾಗದ ಪೂರ್ವಕ್ಕೆ 75 ಕಿಮೀ ದೂರದಲ್ಲಿದೆ. ಇದರ ಉದ್ದ 115.5 ಕಿಮೀ., ಕನಿಷ್ಠ ಅಗಲ 45ಕಿಮೀ. ವಿಸ್ತೀರ್ಣ 3.140ಚ.ಕಿಮೀ. ಇದೂ ಫಾರ, ಗಾಟ್ಸ್ಕ ಸ್ಯಾಂಡನ್, ಲಿಲ, ಸ್ಟೋರ್ಕಾರ್ಲ್ಸೊ ದ್ವೀಪಗಳೂ ಸೇರಿ ಗಾಟ್ಲೆಂಡ್ ಕೌಂಟಿಯಾಗಿದೆ. ಗಾಟ್ಲೆಂಡ್ ಪ್ರಸ್ಥಭೂಮಿ ಸಿಲೂರಿಯಮ್ ಸುಣ್ಣಕಲ್ಲಿನಿಂದ ಕೂಡಿದ್ದು, ಕರಾವಳಿಯಲ್ಲಿ ಸುಣ್ಣಕಲ್ಲಿನ ಉದ್ದನೆಯ ಸಾಲುಗಳಿವೆ. ಬಾರ್ಲಿ, ರೈ, ಸಕ್ಕರೆ ಬೀಟ್, ತರಕಾರಿ, ಹೂವು ಇಲ್ಲಿ ಬೆಳೆಯುತ್ತವೆ. ಫಾರ ಮರಳಿನಿಂದ ಕೂಡಿದೆ. ಕುರಿ ಮೇಯಿಸುವುದು ಇಲ್ಲಿಯ ಕಸಬು. ಮೀನುಗಾರಿಕೆ, ಸಿಮೆಂಟ್ ತಯಾರಿಕೆ ನಡೆಯುತ್ತವೆ. ಗಾಟ್ಲೆಂಡಿನ ಮುಖ್ಯ ಬಂದರು ವಿಸ್ಬಿ. ಇದೇ ಇಲ್ಲಿಯ ಮುಖ್ಯ ಪಟ್ಟಣ. ಪ್ರವಾಸ ದೃಷ್ಟಿಯಿಂದಲೂ ಗಾಟ್ಲೆಂಡ್ ಮುಖ್ಯವಾಗಿದೆ.

ಇತಿಹಾಸ[ಸಂಪಾದಿಸಿ]

ಗಾಟ್ಲೆಂಡ್ ಕಂಚಿನಯುಗದಿಂದಲೇ ವ್ಯಾಪಾರ ಕೇಂದ್ರವಾಗಿತ್ತು. 9ನೆಯ ಶತಮಾನದಿಂದಲೇ ಸ್ಪೀಡನಿಗೆ ಸೇರಿತು. 12ನೆಯ ಶತಮಾನದಲ್ಲಿ ಈ ದ್ವೀಪದ ವ್ಯಾಪಾರಿಗಳು ಪಶ್ಚಿಮ ಯುರೋಪ್ ಮತ್ತು ರಷ್ಯದ ನಡುವಿನ ಮಾರ್ಗದಲ್ಲಿ ಅಧಿಪತ್ಯ ಸ್ಥಾಪಿಸಿದರು. ಆರ್ಮನಿಯ ವ್ಯಾಪಾರಿಗಳು. ಇಲ್ಲಿಯ ಮುಖ್ಯ ಪಟ್ಟಣಗಳಲ್ಲಿ ಮತ್ತು ಇಲ್ಲಿಯ ಈಗಿನ ಮುಖ್ಯ ಪಟ್ಟಣವಾದ ವಿಸ್ಬಿಯಲ್ಲಿ ನೆಲೆಸಿದರು. ಇದು ಉಚ್ಛ್ರಾಯ ಸ್ಥಿತಿಯಲ್ಲಿ ಇದ್ದಾಗ 1361ರಲ್ಲಿ ಡಚ್ಚರು ಇದನ್ನು ವಶಪಡಿಸಿಕೊಂಡರು. 1654ರಲ್ಲಿ ಸ್ಪೀಡನ್ನಿಗೆ ಹಿಂತಿರುಗಸಲ್ಪಟ್ಟಿತು. 19ನೆಯ ಶತಮಾನದ ಕೊನೆಯಲ್ಲಿ ಕೋಟೆಗಳನ್ನು ಕಟ್ಟಿ ಬಲಪಡಿಸಿದರು.