ಪುಟ:Rangammana Vathara.pdf/೧೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ರಂಗಮ್ಮನ ವಠಾರ

103

ವಿವಾದಗಳು, "ನಿಮ್ಮ ಮಗಳೇ ಬೇಡ...." "ಬೇರೆ ಮದುವೆ..." ಬಂದು ತಲಪಿ
ದೊಡನೆ, ನಡೆದ ಆಯಾಸದಿಂದ ಗಾಢವಾಗಿ ನಿದ್ದೆ ಹೋಗಿದ್ದ ಅಳಿಯ....ಒಂದೊಂದು
ಒಂದೊಂದು ತರಹೆ . ಆದರೂ ಅವರಿಗೆಲ್ಲ ಆ ಹಾಡು ಪ್ರಿಯವಾಗಿತ್ತು. 'ಪದುಮ'
ಎಂಬ ಪದ ಬಂದಾಗ ಪದ್ಮಾವತಿ ಮಗುವನ್ನೆತ್ತಿಕೊಂಡು ಎದ್ದು ನಿಂತಳು. ಆದರೆ
ಯಾರೂ ಅದನ್ನು ಗಮನಿಸಲಿಲ್ಲ. ಅಹಲ್ಯೆ ರಾಧೆಯರಿಗೆ ಅಂತಹ ಅನುಭವಗಳಿರ
ಲಿಲ್ಲ. ಆದರೂ ಆ ಹಾಡು ಇಂಥವೇ ಎಂದು ಹೇಳಲಾಗದ ಸವಿಯನ್ನು ಅವರಿಗೆ
ನೀಡುತ್ತಿತ್ತು.
ಹಾಡು ಮುಗಿಯಿತು. ಕತ್ತಲಾಗಿತ್ತು ಆಗಲೆ.
"ಸಾಕಮ್ಮ ಇನ್ನು, ಎಲ್ಲರೂ ಕೆಲಸ ಬಿಟ್ಬಿಟ್ಟು ಬಂದಿದೀರಾ..."
ಹೆಂಗಸರೆಲ್ಲಾ ಒಬ್ಬೊಬ್ಬರಾಗಿ ಹೊರಟು ಹೋದರು. ಆದರೆ ಅಹಲ್ಯಾ ಮತ್ತು
ರಾಧಾ ಏಳಲಿಲ್ಲ.
ಚಲಚ್ಚಿತ್ರ ನೋಡಲು ಅಹಲ್ಯೆಗೆ ಅವಕಾಶವೇ ಸಿಗುತ್ತಿರಲಿಲ್ಲ. ಆದರೆ ಚಲ
ಚ್ಚಿತ್ರದಹಾಡುಗಳೆಂದರೆ ಬಲು ಪ್ರೀತಿ. ಚಂಪಾವತಿಗೆ ಸಿನಿಮಾ ಹಾಡು ಖಂಡಿತ
ಬರುತ್ತಿರಬಹುದೆಂದು ಈಗ ಅವಳಿಗೆ ನಂಬಿಕೆಯಾಗಿತ್ತು. ಅಂಗಲಾಚುವ ಧ್ವನಿಯಲ್ಲಿ
ಆಕೆ ಕೇಳಿದಳು:
"ರೀ, ನಿಮಗೆ ಸಿನಿಮಾ ಹಾಡು ಬರಲ್ವೇನ್ರೀ?...ಒಂದು ಹಾಡು ಹೇಳ್ರಿ....
ಒಂದೇ ಸಾಕು."
ಚಂಪಾವತಿಗೆ ನಗು ಬಂತು.
"ಬೇಡಮ್ಮಾ...ರಂಗಮ್ನೋರಿಗೆ ಗೊತ್ತಾದರೆ ಎಲ್ಲಾದರು..."
"ಹುಂ. ಅವರೇನು ಮಾಡ್ತಾರೆ!"
"ಕಮಲಮ್ಮನಂತೂ..."
"ಹೋಗಲಿ ಬಿಡ್ರಿ. ಅದೊಂದು... ಒಂದು ಹೇಳೀಂದ್ರೆ."
"ಮೆತ್ತಗೆ ಹೇಳ್ಲಾ?"
"ಹೂಂ. ಹೂಂ. ಮೆತ್ತಗೆ ಹೇಳಿ."
"ಬಾಗಿಲು ಹಾಕೊಂಡು ಬಿಡಿ."
ಅಹಲ್ಯಾ ತಟಕ್ಕನೆದ್ದು ಬಾಗಿಲು ಹಾಕಿದಳು. ಹಾಗೆಯೇ ವಿದ್ಯುತ್ ಗುಂಡಿ
ಯನ್ನೂ ಅಮುಕಿದಳು. ಆದರೆ ರಂಗಮ್ಮ ದೀಪ ಹಾಕಿರಲಿಲ್ಲ.
ಕತ್ತಲೆಯಲ್ಲಿ ಚಂಪಾವತಿಯ ಮಗು ತಾಯಿಯನ್ನು ಬಿಗಿಯಾಗಿ ಅಪ್ಪಿಕೊಳ್ಳುತ್ತ
ಆ ಮೂವರ ಮುಖಗಳನ್ನೂ ನೋಡಿತು.
ಮೃದುವಾದ ಹತ್ತಿಯ ಅತಿ ಸೂಕ್ಷ್ಮ ಎಳೆಗಳು ಗಾಳಿಯಲ್ಲಿ ತೇಲಾಡಿದ ಹಾಗೆ
ಚಂಪಾವತಿಯ ಸ್ವರ ಹೊರಟಿತು. ಪುಟ್ಟ ಕಿಟಕಿಯ ಮೂಲಕ ಸೊಳ್ಳೆಗಳು ಟುಂಯ್
ಗುಡುತ್ತ ಬಂದವು. ಆದರೂ ಚಂಪಾ ಮೆಲುದನಿಯಲ್ಲಿ ಹಾಡಿದಳು: