ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕೃತಯುಗ

ವಿಕಿಸೋರ್ಸ್ದಿಂದ

ಕೃತಯುಗ

ಪ್ರಪಂಚದ ಕಾಲಮಾನಗಳಿಗನ್ವಯಿಸುವಂತೆ ನಿಯಮಿತವಾಗಿ ಯುಗಗಳೆಂದು ನಿರ್ದಿಷ್ಟವಾಗಿರುವ ಚತುರ್ಯುಗಗಳಲ್ಲಿ ಒಂದನೆಯದು. ಇದಕ್ಕೆ ಆದಿಯುಗ, ದೇವಯುಗ, ಸ್ವರ್ಣಯುಗ ಎಂಬ ಬೇರೆ ಬೇರೆ ಹೆಸರುಗಳಿವೆ. ರವಿ, ಚಂದ್ರ, ಬೃಹಸ್ಪತಿ- ಈ ಮೂರು ಗ್ರಹಗಳೂ ಪುಷ್ಯನಕ್ಷತ್ರದಲ್ಲಿ ಸೇರಿದಾಗ ಕೃತಯುಗದ ಆರಂಭವೆಂದು ಪ್ರತೀತಿ. ಇದರ ಅವಧಿ 1,728,000 ಮಾನುಷ ವರ್ಷಗಳು. ಈ ಯುಗದಲ್ಲಿ ಜನ್ಮ ತಾಳಿದ್ದರಿಂದಲೇ ಕೃತಕೃತ್ಯರಾಗುವುದರಿಂದ ಇದಕ್ಕೆ ಕೃತಯುಗವೆಂಬ ಹೆಸರು ಬಂತೆಂದು ಹೇಳಿದ್ದಾರೆ. ಯುಗವಿಚಾರಗಳನ್ನು ಪ್ರತಿಪಾದಿಸುವ ಹಲವಾರು ಪುರಾಣಾದಿ ಗ್ರಂಥಗಳ ಪ್ರಕಾರ ಕೃತಯುಗದ ಕೆಲವು ಸಾಮಾನ್ಯ ಲಕ್ಷಣಗಳು ಹೀಗಿವೆ: ಕೃತಯುಗದಲ್ಲಿ ಬೆಳೆವ ಧಾನ್ಯ ಸರ್ವಶ್ರೇಷ್ಠವಾದುದು. ಬ್ರಹ್ಮ ಇದರ ಅಧಿದೇವತೆ. ಇಲ್ಲಿ ಧರ್ಮ ನಾಲ್ಕು ಪಾದಗಳನ್ನೂ ಹೊಂದಿ ಸ್ಥಿರವಾಗಿರುತ್ತದೆ. ಆದ್ದರಿಂದ ಈ ಯುಗದ ಜನರೆಲ್ಲರೂ ಧರ್ಮನಿಷ್ಠರೂ ತಪೋವ್ರತಪರಾಯಣರೂ ಆಗಿರುತ್ತಾರೆ. ಅವರೆಲ್ಲ ನಾರಾಯಣನ ಸೇವೆಯಲ್ಲಿ ನಿರತರು ಮತ್ತು ಶೋಕವ್ಯಾಧಿರಹಿತರು. ಇದು ಸತ್ಯವಂತರ, ದಯಾಶೀಲರ, ದೀರ್ಘಜೀವಿಗಳ, ಪರೋಪಕಾರಿಗಳ, ಸರ್ವಶಾಸ್ತ್ರಪಾರಂಗತರ ಯುಗ. ಅಲ್ಲದೆ ಈ ಯುಗದಲ್ಲಿ ರಾಜರು ಧರ್ಮಗ್ರಾಹಿಗಳೂ ಪ್ರಜಾಪಾಲಕರೂ ಆಗಿದ್ದು, ಭೂಮಿಧಾನ್ಯಾದಿ ಸಂಪತ್ತಿನಿಂದ ಕೂಡಿ ಜಗತ್ತೆಲ್ಲವೂ ಸುಭಿಕ್ಷವಾಗಿರುತ್ತದೆ. ಅಹೋ ಸತ್ಯಯುಗಸ್ಯಾಸ್ತಿ ಕಃ ಸಂಖ್ಯಾತುಂ ಗುಣಾನ್ ಕ್ಷಮಃ(ಈ ಸತ್ಯಯುಗದ ಗುಣಗಳನ್ನು ಎಣಿಕೆ ಮಾಡಲು ಯಾವನು ತಾನೆ ಶಕ್ತನಾಗಿದ್ದಾನೆ) ಎಂಬ ಮಾತುಗಳಲ್ಲಿ ಯುಗದ ಮಹಿಮೆಯನ್ನು ಪದ್ಮ ಪುರಾಣ ಕೊಂಡಾಡುತ್ತದೆ. (ನೋಡಿ- ಯುಗ-2) (ಬಿ.ಕೆ.ಎಸ್.)