ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕ್ಯಾಲಿಫೋರ್ನಿಯದ ಇತಿಹಾರ್ಸ

ವಿಕಿಸೋರ್ಸ್ದಿಂದ

ಕ್ಯಾಲಿಫೋರ್ನಿಯದ ಇತಿಹಾಸ

ಕ್ಯಾಲಿಫೋರ್ನಿಯ ಎಂಬ ಹೆಸರು ಗಾರ್ಸಿ ಓರ್ಡೋನೆಜ್ó ಡಿ ಮಾಂಟಾಲ್ವೋ ಎಂಬವನ ಬರೆವಣಿಗೆಯೊಂದರಿಂದ (1510) ತೆಗೆದುಕೊಂಡದ್ದು. ಇದು ಇಂಡೀಸಿನ ಬಲಕ್ಕಿರುವ ಒಂದು ದ್ವೀಪವೆಂದು ಆತ ಬಣ್ಣಿಸಿದ್ದ. 1533-34ರ ಸುಮಾರಿನಲ್ಲಿ ಕೆಳ ಕ್ಯಾಲಿಫೋರ್ನಿಯಕ್ಕೆ ಈ ಹೆಸರು ಬಂದಿರಬೇಕು. ತರುವಾಯ ಸ್ಯಾನ್ ಲೂಕಾಸ್ ಭೂಶಿರದಿಂದ ಪೆಸಿಫಿಕ್ ಸಾಗರದ ಅಂಚಿನ ವರೆಗೆ ಇಡೀ ಪ್ರದೇಶಕ್ಕೆ ಈ ಹೆಸರು ಅನ್ವಯವಾಯಿತು. ಕಾಲೊರಾಡೋ ನದಿಯ ದಕ್ಷಿಣ ಭಾಗವನ್ನು 1540ರಲ್ಲಿ ಕಂಡುಹಿಡಿಯಲಾಯಿತು. ಪರಿಶೋಧಕರು ಕ್ಯಾಲಿಫೋರ್ನಿಯವನ್ನು ಕಂಡರೂ ಅದರ ಒಳಹೊಕ್ಕಿರಲಿಲ್ಲ. 1542-43ರಲ್ಲಿ ವಾನ್‍ರೊಡ್ರಿಕ್ವೆಸ್ ಕಾಬ್ರಿಲ್ಲೋ ಇದರ ಪರಿಶೋಧನೆ ನಡೆಸಿದ. ಅವನ ತರುವಾಯ ಈ ಕೆಲಸವನ್ನು ಮುಂದುವರಿಸಿದವನು ಬಾರ್ತೊಲೋಮಿ ಫೆರೆಲೊ. 1579ರಲ್ಲಿ ಸ್ಯಾನ್ ಫ್ರಾನ್ಸಿಸ್ಕೋಗೆ ಉತ್ತರದಲ್ಲಿ ಬೊಡೀಗಾ ಕೊಲ್ಲಿಯಲ್ಲಿ ಫ್ರಾನ್ಸಿಸ್ ಡ್ರೇಕ್ ತನ್ನ ನಾವೆಗಳನ್ನು ಸರಿಪಡಿಸಿಕೊಂಡನೆಂದು ತಿಳಿದುಬರುತ್ತದೆ. ಫಿಲಿಪೀನ್ಸ್‍ನಿಂದ ಮೆಕ್ಸಿಕೋದ ಅಕಪುಲ್ಕೊ ರೇವಿಗೆ ಸಂಚರಿಸುತ್ತಿದ್ದ ಸ್ಟ್ಯಾನಿಷ್ ಹಡಗುಗಳು ಕ್ಯಾಲಿಫೋರ್ನಿಯದ ತೀರವನ್ನು ವೀಕ್ಷಿಸುತ್ತಿದ್ದುವು. ಸೆಬಾಸ್ಟಿಯನ್ ವಿಜ್óಕೇನೊ 1602-03ರಲ್ಲಿ ತೀರವನ್ನು ಪರಿಶೋಧಿಸಿ ಮಾಂಟಿರೇ ಕೊಲ್ಲಿಯನ್ನು ಕಂಡುಹಿಡಿದ. ತರುವಾಯ 150 ವರ್ಷಗಳವರೆಗೆ ಯಾವ ಪರಿಶೋಧನೆಯೂ ನಡೆಯಲಿಲ್ಲ. ಕ್ಯಾಲಿಫೋರ್ನಿಯ ಒಂದು ದ್ವೀಪವಾಗಿರಬೇಕೆಂಬುದೇ ಆಗಿನ ಕಲ್ಪನೆಯಾಗಿತ್ತು. ಜೆಸುóಯಿಟರು ಕೆಳ ಕ್ಯಾಲಿಫೋರ್ನಿಯ ಪ್ರದೇಶದಲ್ಲಿ 1697ರಲ್ಲಿ ನೆಲಸಿದರು. 1767ರಲ್ಲಿ ಸ್ಪೇನ್ ದೊರೆ 3ನೆಯ ಚಾರಲ್ಸ್ ಇವರನ್ನು ಹೊರದೂಡಿ ಆಜ್ಞೆ ಹೊರಡಿಸುವವರೆಗೂ ಅಲ್ಲಿದ್ದರು. ಅಲಾಸ್ಕವನ್ನು ರಷ್ಯನರು ಪರಿಶೋಧಿಸುವವರೆಗೂ ಅವರು ಉತ್ತರ ಕ್ಯಾಲಿಫೋರ್ನಿಯವನ್ನು ಆಕ್ರಮಿಸಿಕೊಳ್ಳುವ ಯೋಚನೆ ಮಾಡಲಿಲ್ಲ. ಸಾನ್‍ಡಿಯೇಗೋವನ್ನು 1769ರಲ್ಲೂ, ಮಾಂಟೆರೇಯನ್ನು 1770ರಲ್ಲೂ ಸ್ಪೇನ್ ಆಕ್ರಮಿಸಿಕೊಂಡಿತು.

ಕ್ಯಾಲಿಫೋರ್ನಿಯದ ಪ್ರಾರಂಭಿಕ ಇತಿಹಾಸದಲ್ಲಿ ಪಾದ್ರಿಗಳು ವಹಿಸಿದ ಪಾತ್ರ ಪ್ರಮುಖವಾದ್ದು. 1769 ಮತ್ತು 1823ರ ನಡುವೆ 21 ಕ್ರೈಸ್ತ ಮಿಷನ್‍ಗಳು ಇಲ್ಲಿ ಸ್ಥಾಪಿತವಾದುವು. ಈ ಪ್ರದೇಶದ ಆರ್ಥಿಕ ಅಭಿವೃದ್ಧಿ ಸಾಧಿಸಲು ಇವು ಕಾರಣ. ಮಾಂಟೆರೇ ನಗರದ ಸ್ಪ್ಯಾನಿಷ್ ಸೈನ್ಯಾಧಿಕಾರಿಗಳ ಆಡಳಿತಕ್ಕೆ ಈ ಪ್ರದೇಶ ಒಳಪಟ್ಟಿತ್ತು. 1808ರಲ್ಲಿ ಸ್ಪೇನ್ ಮತ್ತು ಮೆಕ್ಸಿಕೋ ದೇಶಗಳಲ್ಲಿ ಸಂಭವಿಸಿದ ರಾಜಕೀಯ ಕ್ಷೋಭೆಗಳ ಬಿಸಿ ಈ ಭಾಗಕ್ಕೆ ತಟ್ಟಲಿಲ್ಲ. ಮೆಕ್ಸಿಕೋದಲ್ಲಿ 1810ರಲ್ಲಿ ಕ್ರಾಂತಿ ಸಂಭವಿಸಿದಾಗ ಕ್ಯಾಲಿಫೋರ್ನಿಯ ಸ್ಪೇನಿಗೆ ನಿಷ್ಠೆಯಿಂದಿತ್ತು. ಮೆಕ್ಸಿಕೋ ಸ್ವಾತಂತ್ರ್ಯ ಗಳಿಸಿದ ಮೇಲೆ 1822ರಲ್ಲಿ ಕ್ಯಾಲಿಫೋರ್ನಿಯ ಆ ದೇಶದ ಅಧೀನಕ್ಕೆ ಒಳಪಟ್ಟಿತು.

1824ರಿಂದ 1840ರವರೆಗೆ ಅಲ್ಲಿ ಅವ್ಯವಸ್ಥೆ ಇತ್ತು. ಸ್ಪೇನ್ ದೇಶಕ್ಕೆ ನಿಷ್ಠೆ ಹೊಂದಿದ್ದ ಫ್ರಾನ್‍ಸಿಸ್ಕನ್ ಪಾದ್ರಿಗಳಿಗೆ ಮೆಕ್ಸಿಕೋದಲ್ಲಿ ಕ್ಯಾಲಿಪೋರ್ನಿಯದ ವಿಲೀನ ಒಪ್ಪಿಗೆಯಾಗಿರಲಿಲ್ಲ. ಪಾದ್ರಿಗಳ ಸಂಸ್ಥೆಗಳನ್ನು ಲೌಕಿಕಗೊಳಿಸುವುದು ಕ್ಯಾಲಿಫೋರ್ನಿಯದ ಮುಖ್ಯ ಸಮಸ್ಯೆಯಾಯಿತು. ಪಾದ್ರಿಗಳ ಸಮಸ್ಯೆ 1831ರಲ್ಲಿ ಪರಮಘಟ್ಟವನ್ನು ಮುಟ್ಟಿ, ಗವರ್ನರ್ ಮಾನ್ಯುಯೆಲ್ ವಿಕ್ಟೋರಿಯನ ಆಡಳಿತವನ್ನು ಎದುರಿಸಿ ಜನ ದಂಗೆಯೆದ್ದರು. ಈ ದಂಗೆಗೆ ಕಾರಣ ಮೆಕ್ಸಿಕೋ ಆಡಳಿತದ ಬಗ್ಗೆ ಅತೃಪ್ತಿ ಮತ್ತು ಉತ್ತರ ಹಾಗೂ ದಕ್ಷಿಣ ಕ್ಯಾಲಿಫೋರ್ನಿಯ ಭಾಗಗಳ ಜನರ ನಡುವಣ ವೈಮನಸ್ಯ. ಮೆಕ್ಸಿಕೋ ಆಡಳಿತದಿಂದ ಕ್ಯಾಲಿಫೋರ್ನಿಯಕ್ಕೆ ಹೆಚ್ಚಿನ ಪ್ರಯೋಜನವಾಗಿರಲಿಲ್ಲ. 1831ರಲ್ಲಿ ಗವರ್ನರ್ ವಿಕ್ಟೋರಿಯ ಪದಚ್ಯುತಿಗೊಂಡ. 1836ರಲ್ಲಿ ಗವರ್ನರ್ ಮಾರಿಯಾನೋ ಚೀಕೋ ಭೀತಿಗೊಂಡು ಪಲಾಯನ ಮಾಡಿದ. ಅದೇ ವರ್ಷ ಗವರ್ನರ್ ನಿಕೊಲಾಸ್ ಗ್ಯುಟಿರೆಜ್ ಮತ್ತು 1844-45ರಲ್ಲಿ ಗವರ್ನರ್ ಮಾನ್ಯುಯೆಲ್ ಮಿಚಿಲ್‍ಬೋರಿನ ಇವರನ್ನು ಅಧಿಕಾರದಿಂದ ಅಟ್ಟಿದರು. ಹೀಗೆ ಮೆಕ್ಸಿಕನ್ ಗವರ್ನರ್‍ಗಳನ್ನು ಓಡಿಸಿ ಸ್ವತಂತ್ರ ರಾಜ್ಯವನ್ನು ಸ್ಥಾಪಿಸಿಕೊಳ್ಳಲು ಅಲ್ಲಿಯ ಜನ ಅನುವಾದರು.

19ನೆಯ ಶತಮಾನದ ಆದಿಯಲ್ಲಿ. ಕ್ಯಾಲಿಫೋರ್ನಿಯ ಪ್ರದೇಶ ಸ್ಪೇನ್ ದೇಶದ ಆಡಳಿತಕ್ಕೆ ಒಳಪಟ್ಟಿದ್ದಾಗ ಸ್ಪೇನಿನ ಕಾನೂನುಗಳಿಗೆ ವಿರುದ್ಧವಾಗಿ ಕ್ಯಾಲಿಫೋರ್ನಿಯದ ವಿದೇಶಿ ವ್ಯಾಪಾರ ಬೆಳೆಯುತ್ತಿತ್ತು. ಸ್ಪೇನ್ ಅಮೆರಿಕ ಕ್ರಾಂತಿಗಳ ಕಾಲದಲ್ಲಿ ಈ ವ್ಯಾಪಾರಕ್ಕೆ ಮತ್ತಷ್ಟು ಉತ್ತೇಜನ ದೊರಕಿತು. ರಷ್ಯನರು ಈ ಭಾಗಕ್ಕೆ 1805ರಲ್ಲಿ ಬಂದು 1812ರಲ್ಲಿ ರಾಸ್ ಕೋಟೆಯನ್ನು ಸ್ಥಾಪಿಸಿ ಅದನ್ನು 1841ರವರೆಗೆ ತಮ್ಮ ವಶದಲ್ಲಿಟ್ಟುಕೊಂಡಿದ್ದರು. ತುಪ್ಪುಳು ಸಂಗ್ರಹಕ್ಕಾಗಿ ಅವರು ಸ್ಯಾನ್ ಫ್ರಾನ್ಸಿಸ್ಕೋ ಕೊಲ್ಲಿಯವರೆಗೂ ಬಂದಿದ್ದರು. 1826ರಲ್ಲಿ ಅಮೆರಿಕ ಸಂಯುಕ್ತಸಂಸ್ಥಾನದ ಬೇಟೆಗಾರರು ಈ ರಾಜ್ಯವನ್ನು ದಾಟಿ ಸಾಗರತೀರವನ್ನು ಮುಟ್ಟಿದರು. 1830ರಲ್ಲಿ ಹಡ್‍ಸನ್ ಬೇ ಕಂಪನಿ ತುಪ್ಪುಳಿಗಾಗಿ ಉತ್ತರ ಕ್ಯಾಲಿಫೋರ್ನಿಯದಲ್ಲಿ ಕಾಯಾಚರಣೆ ನಡೆಸಿತು. ಕೊನೆಗೆ 1840ರ ಹೊತ್ತಿಗೆ ಅಮೆರಿಕನರು ಕ್ರಮಕ್ರಮವಾಗಿ ಈ ಭಾಗಕ್ಕೆ ವಲಸೆ ಬರಲಾರಂಭಿಸಿದರು. 1835ರಲ್ಲಿ ಅಮೆರಿಕ ಸಂಯುಕ್ತಸಂಸ್ಥಾನದ ಅಧ್ಯಕ್ಷ ಆಂಡ್ರ್ಯೂ ಜಾಕ್‍ಸನ್ ಕ್ಯಾಲಿಫೋರ್ನಿಯವನ್ನು ಕೊಳ್ಳಲು ನೀಡಿದ ಸಲಹೆಯನ್ನು ಮೆಕ್ಸಿಕೋ ನಿರಾಕರಿಸಿತು. 1845ರಲ್ಲಿ ಕ್ಯಾಲಿಫೋರ್ನಿಯವನ್ನು ಮೆಕ್ಸಿಕೋದಿಂದ ಪ್ರತ್ಯೇಕಿಸಲು ಮಾಂಟೆರೇ ನಗರದಲ್ಲಿದ್ದ ಅಮೆರಿಕನ್ ರಾಯಭಾರಿ ತನ್ನ ಸರ್ಕಾರದ ಪರವಾಗಿ ವ್ಯವಹರಿಸಿದ. ಮೆಕ್ಸಿಕೋದೊಂದಿಗೆ ಯುದ್ಧ ಸಂಭವಿಸಿದ ಪಕ್ಷದಲ್ಲಿ ಕ್ಯಾಲಿಫೋರ್ನಿಯದ ಬಂದರುಗಳನ್ನು ಹಿಡಿದುಕೊಳ್ಳುವಂತೆ ಅದೇ ಸಮಯದಲ್ಲಿ ಅಮೆರಿಕ ಸರ್ಕಾರ ತನ್ನ ನೌಕಾಧಿಕಾರಿಗಳಿಗೆ ಸೂಚನೆ ನೀಡಿತ್ತು. ಅಮೆರಿಕನರು 1846ರಲ್ಲಿ ಸೊನೊಮವನ್ನು ಆಕ್ರಮಿಸಿದರು. ಜಾನ್ ಡ್ರೇಕ್ ಸ್ಲೋಟ್ ಜುಲೈ 1846ರಲ್ಲಿ ಮಾಂಟೆರೇ ನಗರದಲ್ಲಿ ಅಮೆರಿಕದ ಧ್ವಜವನ್ನು ಹಾರಿಸಿದ. ಕ್ಯಾಲಿಫೋರ್ನಿಯ ಅಮೆರಿಕ ಸಂಯುಕ್ತಸಂಸ್ಥಾನಕ್ಕೆ ಸೇರಿದ ಪ್ರದೇಶವೆಂದು ಘೋಷಿಸಿದ.

1848ರ ಕೌಲಿನ ಪ್ರಕಾರ ಕ್ಯಾಲಿಫೋರ್ನಿಯವನ್ನು ಅಮೆರಿಕ ಸಂಯುಕ್ತಸಂಸ್ಥಾನಕ್ಕೆ ಮೆಕ್ಸಿಕೋ ಬಿಟ್ಟುಕೊಟ್ಟಿತು. ಆ ತರುವಾಯ ಅಲ್ಲಿ ಚಿನ್ನ ಸಿಕ್ಕಿದ್ದರಿಂದ ಅದರ ಪ್ರಾಮುಖ್ಯ ಹೆಚ್ಚಿತು. ಅಮೆರಿಕನ್ ನೌಕೆಗಳಿಗೆ ಸ್ಯಾನ್‍ಫ್ರಾನ್ಸಿಸ್ಕೋ ಒಂದು ಬಂದರಾಯಿತು. ಈ ಮಧ್ಯೆ ಕ್ಯಾಲಿಫೋರ್ನಿಯದಲ್ಲಿ ಜನರ ನೆಮ್ಮದಿ ಸಾಧಿಸಲು ಯುಕ್ತ ಕಾಯಿದೆಗಳ ಅಗತ್ಯವಿತ್ತು. ಅರಾಜಕತೆಯನ್ನು ತಡೆಯಲು 1849ರಲ್ಲಿ ಹಂಗಾಮಿ ಸ್ಥಳೀಯ ಸರ್ಕಾರಗಳು ನಾನಾ ನಗರಗಳಲ್ಲಿ ಸ್ಥಾಪಿತವಾದವು. 1850ರಲ್ಲಿ ಅಮೆರಿಕದ ಕಾಂಗ್ರೆಸ್ ಅಂಗೀಕರಿಸಿದ ವಿಧೇಯಕದ ಪ್ರಕಾರ ಕ್ಯಾಲಿಫೋರ್ನಿಯ ಒಂದು ರಾಜ್ಯವಾಯಿತು. ಈ ಮಧ್ಯೆ ಚಿನ್ನದ ಆಸೆಯಿಂದ ಅಮೆರಿಕದ ಜನರು ಕ್ಯಾಲಿಫೋರ್ನಿಯದ ಪರ್ವತಭಾಗಗಳತ್ತ ಸಾಗಿದರು. ಕ್ಯಾಲಿಫೋರ್ನಿಯದಲ್ಲಿ ಶಿಸ್ತನ್ನು ಕಠಿಣ ಕಾಯಿದೆಗಳಿಂದ ರಕ್ಷಿಸಬೇಕಾಯಿತು. ಅಲ್ಲಿ ಗುಲಾಮರ ಸಮಸ್ಯೆ ಬಗೆಹರಿದಿರಲಿಲ್ಲ. ಸೆನೆಟ್ ಸದಸ್ಯ ವಿಲಿಯಂ ಎಂ.ಗ್ವಿನ್ ಕ್ಯಾಲಿಫೋರ್ನಿಯವನ್ನು ಎರಡು ರಾಜ್ಯಗಳನ್ನಾಗಿ ವಿಭಜಿಸಲು ಪ್ರಯತ್ನಿಸಿದ. ಅಮೆರಿಕ ಸಂಯುಕ್ತಸಂಸ್ಥಾನದ ಅಂತರ್ಯುದ್ಧದ ಕಾಲದಲ್ಲಿ ಈ ರಾಜ್ಯ ಒಕ್ಕೂಟಕ್ಕೆ ನಿಷ್ಠೆಯಿಂದಿತ್ತು. ರಾಜ್ಯದ ಆಡಳಿತದಲ್ಲಿ ಸುಧಾರಣೆಗಳನ್ನು ತಂದು ಅದನ್ನು ಹೆಚ್ಚು ಪ್ರಜಾಸತ್ತಾತ್ಮಕವಾಗಿ ಮಾಡಲು ಕ್ರಮ ಕೈಕೊಂಡದ್ದು 20ನೆಯ ಶತಮಾನದ ಆದಿಯಲ್ಲಿ. 1925ರಿಂದೀಚೆಗೆ ಇದರ ಇತಿಹಾಸ ಅಮೆರಿಕ ಸಂಯುಕ್ತಸಂಸ್ಥಾನದ ಇತಿಹಾಸದಲ್ಲಿ ಸೇರಿಹೋಗಿದೆ. (ವಿ.ಜಿ.ಕೆ.)