ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕವ್ರಾಲ್, ಪೇದ್ರೂ ಆಲ್ವಾರೆಸ್

ವಿಕಿಸೋರ್ಸ್ದಿಂದ

ಕವ್ರಾಲ್, ಪೇದ್ರೂ ಆಲ್ವಾರೆಸ್ : ೧೪೬೭/೮-೧೫೨೦. ಪೋರ್ಚುಗೀಸ್ ನಾವಿಕ, ಸಾಹಸಿ. ದಕ್ಷಿಣ ಅಮೆರಿಕದಲ್ಲಿ ಈಗ ಬ್ರಜಿûಲ್ ಇರುವ ಪ್ರದೇಶವನ್ನು ತಲಪಿದ ಮೊಟ್ಟ ಮೊದಲಿನ ಐರೋಪ್ಯ. ಪೂರ್ವದೇಶಗಳಿಗೆಂದು ಹೊರಟ ಇವನ ಹಡಗುತಂಡ ಬಿರುಗಾಳಿಗಳ ಹೊಡೆತಕ್ಕೆ ಸಿಕ್ಕಿ ಅಮೆರಿಕದ ತೀರ ಸೇರಿತು. ಅಲ್ಲಿಂದ ಈತ ಹಿಂದಿರುಗಿ, ೧೫೦೦ರಲ್ಲಿ ಅಂಜೆದಿವದಲ್ಲಿ ಬಂದಿಳಿದ. ಇವನಿಗೂ ಮೊದಲು ವಾಸ್ಕೋಡ ಗಾಮ ಭಾರತಕ್ಕೆ ಬಂದಿದ್ದು, ೧೪೯೯ರಲ್ಲಿ ಲಿಸ್ಬನ್ನಿಗೆ ಹಿಂದಿರುಗಿದ್ದ. ಕವ್ರಾಲ್ ಕೋಳಿಕೋಡಿನಲ್ಲಿ ಒಂದು ವ್ಯಾಪಾರಕೇಂದ್ರ ಸ್ಥಾಪಿಸಿದ. ಈತನ ಜೊತೆಯಲ್ಲಿ ಭಾರತಕ್ಕೆ ಬಂದು ಕಡಲ ಕರೆಯಲ್ಲಿಳಿದ ಏಳು ಜನ ಫ್ರಾನ್ಸಿಸ್ಕನ್ ಪಾದ್ರಿಗಳು ಅಲ್ಲಿ ೨೩ ಜನರನ್ನು ಕ್ರೈಸ್ತರಾಗಿ ಮತಾಂತರಿಸಿದರು.

ಕವ್ರಾಲ್ ಪೋರ್ಚುಗಲ್ಲಿಗೆ ಮರಳಿದ ಮೇಲೆ ಮತ್ತೆ ಪ್ರವಾಸದಲ್ಲಿ ತೊಡಗಲಿಲ್ಲ. ವಿಶ್ರಾಂತ ಜೀವನ ನಡೆಸಿ ೧೫೨೦ರಲ್ಲಿ ತೀರಿಕೊಂಡ. ಇವನ ಸಮಾಧಿ ಪೋರ್ಚುಗಲ್ಲಿನ ಸಾಂಟಾರೆಂನಲ್ಲಿದೆ. (ಎಸ್.ಎಸ್.ಐ.)