ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ವ್ಯಕ್ತಿಭಾಷೆ

ವಿಕಿಸೋರ್ಸ್ದಿಂದ

ವ್ಯಕ್ತಿಭಾಷೆ:- ಭಾಷೆಯ ಒಂದು ಪ್ರಭೇದ. ಒಂದು ನಿರ್ದಿಷ್ಟ ಕಾಲಾವಧಿಯಲ್ಲಿ ಒಬ್ಬ ವ್ಯಕ್ತಿ ಯಾವುದಾದರೊಂದು ಭಾಷಾರೂಪವನ್ನಾ ಡುವ ಪ್ರಕ್ರಿಯೆ(ಈಡಿಯೊಲೆಕ್ಟ್). ಒಬ್ಬ ವ್ಯಕ್ತಿ ಎಲ್ಲ ಕಾಲದಲ್ಲಿಯೂ ಒಂದೇ ರೀತಿ ಮಾತನಾಡುವುದಿಲ್ಲ; ಸನ್ನಿವೇಶಕ್ಕನುಗುಣವಾಗಿ ಅವನ ಮಾತು ಬದಲಾಗುತ್ತಿರುತ್ತದೆ. ಸಾಮಾನ್ಯವಾಗಿ ಒಬ್ಬ ವ್ಯಕ್ತಿ ಹುಟ್ಟಿದಂದಿ ನಿಂದ ಸಾಯುವ ತನಕ ಆಡುವ ಭಾಷೆಯ ರೀತಿಯನ್ನು ವ್ಯಕ್ತಿಭಾಷೆ ಎಂದು ಪರಿಗಣಿಸಲಾಗುತ್ತದೆ. ಇದು ಸಂಕೀರ್ಣ ಸ್ವರೂಪದಲ್ಲಿರುತ್ತದೆ, ವ್ಯಕ್ತಿಯಿಂದ ವ್ಯಕ್ತಿಗೆ ವ್ಯತ್ಯಾಸಹೊಂದುತ್ತದೆ. ವ್ಯಕ್ತಿಯೊಬ್ಬ ತಾನೇ ಆಯ್ಕೆ ಮಾಡಿದ ಪದಗಳನ್ನೂ ಮತ್ತು ಭಾಷಿಕರೂಢಿಗಳನ್ನೂ ಸ್ವಂತ ಉಪಯೋಗಕ್ಕಾಗಿ ಬಳಸಿಕೊಳ್ಳುವ ಮತ್ತು ಒಬ್ಬ ವ್ಯಕ್ತಿ ಒಂದು ನಿರ್ದಿಷ್ಟ ಸಮಯದಲ್ಲಿ ಆಡಿದ ಭಾಷಿಕರೂಢಿಗಳ ಮೊತ್ತವೇ ವ್ಯಕ್ತಿಭಾಷೆಯೆಂದು ವಾಲ್ಷ್ ಅಭಿಪ್ರಾಯಪಟ್ಟಿದ್ದಾನೆ. ವ್ಯಕ್ತಿಭಾಷೆ ಎಂದರೆ ಒಬ್ಬ ವ್ಯಕ್ತಿಯ ಭಾಷಿಕ ಪದ್ಧತಿ ಅಥವಾ ಅವನ ಸ್ವಂತ ಉಪಭಾಷೆ ಎಂಬುದು ಡೇವಿಡ್ ಕ್ರಿಸ್ಟಲ್ಲನ ಅಭಿಮತ. ಅಂತೆಯೇ ಒಂದು ಭಾಷಾ ಸಮುದಾಯವನ್ನು ಪ್ರಾದೇಶಿಕವಾಗಿ ಮತ್ತು ಸಾಮಾಜಿಕವಾಗಿ ಎಷ್ಟೇ ಸೂಕ್ಷ್ಮವಾಗಿ ವ್ಯಾಖ್ಯಾನಿಸಿದರೂ ಅದನ್ನು ಆಡುವವರ ಮಾತಿನ ರೂಪದಲ್ಲಿ ಒಂದು ನಿಶ್ಚಿತ ಹಂತದ ವ್ಯವಸ್ಥಿತ ಭಿನ್ನತೆ ಕಂಡುಬರುತ್ತದೆ. ಅದಕ್ಕಾಗಿ ಪ್ರತಿಯೊಂದು ಭಾಷಾ ಸಮುದಾಯದವನ್ನೂ ಸ್ವಲ್ಪ ಭಿನ್ನವಾಗಿರುವ ಉಪಭಾಷೆಯನ್ನು ಮಾತನಾಡುತ್ತಾನೆ ಮತ್ತು ಅದು ಅವನ ವ್ಯಕ್ತಿ ಭಾಷೆಯಾಗಿರುತ್ತದೆ ಎಂಬುದು ಜಾನ್ ಲಯನ್ಸನ ಅಭಿಪ್ರಾಯ. ವ್ಯಕ್ತಿಭಾಷೆಗಳಲ್ಲಿ ಕೆಲವು ಸಾಮ್ಯವನ್ನೂ ಗುರುತಿಸಬಹುದು. ಅದು ಒಂದು ನಿರ್ದಿಷ್ಟ ಗುಂಪಿಗೆ ಅಥವಾ ಒಂದು ಊರಿಗೆ ಸೇರಿದ ಭಾಷೆಯಾ ಗಿರಬಹುದು. ಇವನ್ನೇ ಭಾಷಾಪ್ರಭೇದಗಳು ಎಂದು ಕರೆಯಲಾಗಿದೆ. ಇಂತಹ ಅನೇಕ ಪ್ರಭೇದಗಳ ಮೊತ್ತವೇ ಉಪಭಾಷೆ. ವ್ಯಕ್ತಿಭಾಷೆ ಮತ್ತು ಉಪಭಾಷೆಗಳ ನಡುವಿನ ಭಾಷಾರೂಪಗಳೇ ಉಪಭಾಷಾರೂಪ ಗಳು. ಪರಸ್ಪರ ಅರಿವು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗುತ್ತದೆ. ಬೇರೆ ಬೇರೆ ಉಪಭಾಷೆಗಳನ್ನಾಡುವ ವ್ಯಕ್ತಿಗಳಲ್ಲಿ ಸರಾಸರಿ ಅರಿವಿನ ಅಂಶ ಕಡಮೆ ಇದ್ದರೂ ಸಂವಹನದಲ್ಲಿ ತೊಂದರೆಯಾಗುವುದಿಲ್ಲ. ಭಾಷೆ ಪ್ರಕಟವಾಗುವುದು ಸಾರ್ಥಕ್ಯ ಕಂಡುಕೊಳ್ಳುವುದು ವ್ಯಕ್ತಿಭಾಷೆಯ ಮೂಲಕವೇ ಎಂಬುದು ಭಾಷಾವಿಜ್ಞಾನಿಗಳ ಅಭಿಮತ. ಆದ್ದರಿಂದ ವಿಭಜಿಸಿ ನೋಡಿದರೆ ಭಾಷೆ ಅನೇಕ ವ್ಯಕ್ತಿಭಾಷೆಗಳ ಮೊತ್ತ ಎನ್ನುತ್ತಾನೆ ಸಿ.ಎಫ್. ಹಾಕೆಟ್. ಒಂದು ಭಾಷಾಸಮಾಜದ ಎಲ್ಲ ಜನರ ವ್ಯಕ್ತಿಭಾಷೆಗಳಲ್ಲಿರುವ ಸಮಾನ ಅಂಶಗಳನ್ನು ಬೇರ್ಪಡಿಸಿ ಒಂದು ವ್ಯವಸ್ಥೆಗೆ ತಂದರೆ ಅದೇ ಭಾಷೆ ಎಂದ ಕೆರೋಲ್. ವ್ಯಕ್ತಿ ಭಾಷೆಗಳ ಮೂಲಕ ಸಂವಹನ ಮಾಧ್ಯಮವಾದ ಭಾಷೆಯ ಪ್ರಕಟಣೆ ಭಾಷೆ ಮತ್ತು ಉಪಭಾಷೆಗಳಿಗಿರುವ ಸಾದೃಶ್ಯ ಮತ್ತು ವೈದೃಶ್ಯಗಳನ್ನು ತಿಳಿಯಲು ಸಾಧ್ಯವಾಗುತ್ತದೆ. (ಬಿ.ಕೆ.ಆರ್.)