ಪುಟ:Kannadigara Karma Kathe.pdf/೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಅಂಕುರಾಭಿವೃದ್ಧಿ

೨೫

ಎಷ್ಟು ದಿವಸ ನಡೆಯಬೇಕು ? ಬರಬರುತ್ತ ರಾಮರಾಜನಿಗೆ ಮೆಹರ್ಜಾನಳು ಭಾರವಾಗಹತ್ತಿದಳು. ಮಂತ್ರಿ ಪದವಿಗೇರುವ ಉಬ್ಬಿನಲ್ಲಿ ಆತನು ಯಾವಾಗಾದರೊಮ್ಮೆ ಮೆಹರ್ಜಾನಳ ಬಳಿಗೆ ಹೋಗಹತ್ತಿದನು. ಒಂದು ದಿನ ಮೆಹರ್ಜಾನಳು ರಾಮರಾಜನನ್ನು ಈ ವಿಷಯವಾಗಿ ಕೇಳಲು, ಆತನು-ಪ್ರಿಯೇ ಮೆಹರ್ಜಾನ, ನನ್ನ ಮೇಲಿನ ನಿನ್ನ ವಿಶ್ವಾಸವು ಕಡಿಮೆಯಾಗಹತ್ತಿರುವುದನ್ನು ನೋಡಿ ನನಗೆ ಬಹಳ ದುಃಖವಾಗುತ್ತದೆ. ಹೀಗೆ ಮಾಡಬೇಡ. ನಿನ್ನ ಹಿತದ ಸಲುವಾಗಿಯೇ ನಾನು ಯತ್ನಿಸುತ್ತಿರುವೆನು. ಈಗ ಒಬ್ಬ ಸರದಾರನ ಹೆಂಡತಿಯೆನಿಸಿಕೊಳ್ಳುತ್ತಿರುವ ನೀನು ವಿಕಲ್ಪವೆಣಿಸಬಹುದೊ ? ಎಂದು ಕೇಳಲು ಆ ಸರಳಹೃದಯದ ಮೆಹರ್ಜಾನಳೂ ಅಷ್ಟಕ್ಕೆ ಸಂತೋಷಪಟ್ಟು ವಿಕಲ್ಪವಿಲ್ಲದೆ ಮೊದಲಿನಂತೆ ರಾಮರಾಜನನ್ನು ಪ್ರೀತಿಸಹತ್ತಿದಳು. ರಾಮರಾಜನ ಈ ಮೋಸದ ನಡೆಗೆಯು ಧೂರ್ತಳಾದ ಮಾರ್ಜೀನೆಗೆ ಗೊತ್ತಾಗದೆ ಇರಲಿಲ್ಲ ! ಆದರೂ ಆಕೆಯು ತನ್ನ ಮನಸ್ಸಿನಲ್ಲಿದ್ದದ್ದನ್ನು ಮೆಹರ್ಜಾನಳ ಮುಂದೆ ಆಡಲಿಲ್ಲ. ಹೀಗೆಯ ಕೆಲವು ದಿನಗಳು ಹೋದವು. ರಾಮರಾಜನು ತನ್ನ ಮನಸ್ಸಿನ ಸಂಶಯದಿಂದ ಮೆಹರ್ಜಾನಗಳನ್ನು ರಮಿಸುವದಕ್ಕಾಗಿ ಆಗಾಗ್ಗೆ ಬೆಲೆಯುಳ್ಳ ಅಲಂಕಾರಗಳನ್ನು ತಂದು ಕೊಡಹತ್ತಿದನು. ತನಗೆ ಬರುವುದಕ್ಕೆ ತಡವಾದ ಪ್ರಸಂಗದಲ್ಲಿ ಸವಿಯಾದ ಪತ್ರಗಳನ್ನು ಆಕೆಗೆ ಬರೆದು ಕಳಿಸಹತ್ತಿದನು. ಏನು ಮಾಡಿದರೂ ಮೆಹರ್ಜಾನಳ ಮನಸ್ಸಿನಲ್ಲಿ ರಾಮರಾಜನ ಪ್ರೇಮದ ವಿಷಯವಾಗಿ ಆಗಾಗ್ಗೆ ವಿಕಲ್ಪವು ಉತ್ಪನ್ನವಾಗುವದು ಹೋಗಲಿಲ್ಲ. ಮನಸ್ಸು ದೋಷೈಕ ದೃಷ್ಟಿಯಾಯಿತೆಂದರೆ, ಇಲ್ಲದ ಹುಳುಕುಗಳೂ ಅದಕ್ಕೆ ತೋರಹತ್ತುತ್ತವೆ. ಇತ್ತ ರಾಮರಾಜನು ತನಗೆ ಬೆಲೆಯುಳ್ಳ ವಸ್ತ್ರಾಲಂಕಾರಗಳನ್ನು ಕೊಡುತ್ತಿದ್ದದ್ದು, ತನ್ನನ್ನು ರಮಿಸುವದಕ್ಕಲ್ಲದೆ ಪ್ರೀತಿಗೋಸ್ಕರವಲ್ಲೆಂದು ಮೆಹರ್ಜಾನಳು ಎಣಿಸ ಹತ್ತಿದಳು. "ಮನೋಹಿ ಜನ್ಮಾಂತರ ಸಂಗತಿಜ್ಞಂ" ಅಂದರೆ ಮನಸ್ಸು (ಸಂಬಂಧಿಕರ) ಜನ್ಮಾಂತರದ ಸಂಗತಿಗಳನ್ನು ತಿಳಿಯುತ್ತದೆಂದು ಕಾಳಿದಾಸ ಕವಿಯು ಹೇಳಿರುವನೆಂದಬಳಿಕ, ಇದೇ ಜನ್ಮದಲ್ಲಿ ತನಗೆ ಸಂಬಂಧಪಟ್ಟಿದ್ದ ರಾಮರಾಜನ ಮನಸ್ಸಿನ ಸ್ಥಿತಿಯನ್ನು ಮೆಹರ್ಜಾನಳ ಮನಸ್ಸು ತಿಳಿಯದೆ ಹ್ಯಾಗೆ ಹೋಗಬೇಕು ? ಆದರೂ ಮೆಹರ್ಜಾನಳು ರಾಮರಾಜನಂತೆ ಮಹತ್ವಾಕಾಂಕ್ಷಿಯಿದ್ದಿಲ್ಲ. ತಾನಾಗಿ ಪ್ರಾಪ್ತವಾಗಿದ್ದ ರಾಮರಾಜನ ಅಕೃತ್ರಿಮ ಪ್ರೇಮವನ್ನು ಕಾಯ್ದುಕೊಳ್ಳುವದರ ಹೊರತು ಹೆಚ್ಚಿನ ಉಸಾಬರಿಯು ಆಕೆಗೆ ಬೇಕಾಗಿದ್ದಿಲ್ಲ. ಕಪಟಾಚರಣೆಯನ್ನಂತು ಆ ಸುಂದರಿಯು ಅರಿಯೇ ಅರಿಯಳು; ಆದ್ದರಿಂದ ಆ ನಿರ್ಮಲಾಂತಃಕರಣದ ತರುಣಿಯು ರಾಮರಾಜನ