ವಿಷಯಕ್ಕೆ ಹೋಗು

ಪುಟ:Kannadigara Karma Kathe.pdf/೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೩೩

೪ನೆಯ ಪ್ರಕರಣ

ಪ್ರಯಾಣ

ರಾಮರಾಜನು ಶೂರನಿದ್ದನು : ಆದರೆ ಅಪಮೃತ್ಯುವೆಂಬ ಶಬ್ದವನ್ನು, ಅಥವಾ ಅದನ್ನು ಸೂಚಿಸುವ ಬೇರೆ ಶಬ್ದಗಳನ್ನು ಯಾರ ಮುಖದಿಂದಾದರೂ ಕೇಳಿದ ಕೂಡಲೆ ಆತನ ಎದೆಯು ಧಸಕ್ಕೆನ್ನುತಿತ್ತು. ಆತನು ೨೫ ವರ್ಷದವನಾಗುವ ಮೊದಲೇ ಎರಡು ಯುದ್ಧಗಳಲ್ಲಿ ಪರಾಕ್ರಮವನ್ನು ತೋರಿಸಿ, ಮೃತ್ಯುವಿನ ಅತ್ಯಂತ ಉಗ್ರಸ್ವರೂಪವನ್ನು ಕಣ್ಣುಮುಟ್ಟಿ ನೋಡಿದ್ದನು; ಆದರೆ ಯುದ್ಧದ ಹೊರತು ಉಳಿದ ಅಪಘಾತದ ಮೃತ್ಯುವಿನ ಹೆಸರನ್ನು ಕೇಳಿದ ಕೂಡಲೆ ಆತನ ಸೊಂಡೆಯು ಒಣಗುತ್ತಿತ್ತು. ಆತನು ಒಳ್ಳೆ ಮಹತ್ವಾಕಾಂಕ್ಷಿಯಿದ್ದನೆಂದು ಮೇಲೆ ಹೇಳಿದೆಯಷ್ಟೇ? ಆತನು ತನ್ನ ಆಯುಷ್ಯದಲ್ಲಿ ಎಷ್ಟೊಂದು ಯುದ್ಧಗಳನ್ನು ಮಾಡಬೇಕು, ಎಷ್ಟೊಂದು ದೊಡ್ಡ ದೊಡ್ಡ ಪದವಿಗಳನ್ನು ಸಂಪಾದಿಸುತ್ತ ಹೋಗಬೇಕು ಎಂಬದನ್ನು ಕುರಿತು ಕಲ್ಪಿಸಿದ್ದನೆಂಬದನ್ನು ಮನಸ್ಸಿನಲ್ಲಿ ತಂದರೆ, ಆತನು ಅಪಘಾತದ ಮರಣಕ್ಕೆ ಇಷ್ಟು ಯಾಕೆ ಹೆದರುತ್ತಿದ್ದನೆಂಬುವ ಬಗ್ಗೆ ಯಾರಿಗಾದರೂ ಆಶ್ಚರ್ಯವಾಗಬಹುದಾಗಿದೆ. ಆದರೆ ಹೀಗೆ ಆಶ್ಚರ್ಯಪಡುವ ಕಾರಣವಿಲ್ಲ. “ಒಳ್ಳೆಯ ಕುದುರೆಗೊಂದು ಗೋಮವೆಂ"ಬಂತೆ ಒಳ್ಳೆಯ ಜನರಲ್ಲಿ ಒಂದೊಂದು ಗೋಮವಿರುವದುಂಟು. ಅರ್ಜುನ ಕರ್ಣರೆಂಬ ಭಾರತೀಯ ಮಹಾಯೋಧರಲ್ಲಿಯೂ ಒಂದೊಂದು ಗೋಮವಿತ್ತೆಂಬದನ್ನು ವಾಚಕರು ನೆನಪಿನಲ್ಲಿ ತಂದುಕೊಳ್ಳಬೇಕು. ಜರಿದಂತೆ ಅರ್ಜುನನ ಪರಾಕ್ರಮವೂ; ಹೊಗಳಿದಂತೆ ಕರ್ಣನ ಪರಾಕ್ರಮವೂ ಹೆಚ್ಚುತ್ತಿದ್ದವೆಂಬುದನ್ನು ವಾಚಕರು ಅರಿತಿರಬಹುದು. ಇದರ ವಿರುದ್ಧ ಸ್ಥಿತಿಯೊದಗಿದಾಗ, ಅಂದರೆ ಅರ್ಜುನನನ್ನು ಹೊಗಳಿದಾಗ, ಕರ್ಣನನ್ನು ಬೊಗಳಿದಾಗ ಅವರವರ ಪರಾಕ್ರಮಗಳು ಕುಗ್ಗುತ್ತಿದ್ದವು. ಅದರಂತೆ ರಾಮರಾಜನಲ್ಲಿಯಾದರೂ ಅಪಮೃತ್ಯುವಿನ ಭಯದ ಖೋಡಿಚಾಳಿಯೊಂದು ಇತ್ತು. ಮೆಹರ್ಜಾನಳು ಅಂದಂತೆ, ಈಗ ತಾನು ಪುಷ್ಕರಣಿಯಲ್ಲಿ ಮುಳುಗಿ ಹೋದರೆ ತನ್ನ ಮಹತ್ವಾಕಾಂಕ್ಷೆಯೆಲ್ಲ