ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಗಿನಿ ಹುಲ್ಲು

ವಿಕಿಸೋರ್ಸ್ದಿಂದ

ಪ್ಯಾನಿಕಂ ಮ್ಯಾಕ್ಸಿಮಂ ಎಂಬ ವೈಜ್ಞಾನಿಕ ಹೆಸರಿನ ಒಂದು ಹುಲ್ಲು. ಆಫ್ರಿಕದ ಮೂಲವಾಸಿ. 1.3-3 ಮೀ ಎತ್ತರಕ್ಕೆ ಬೆಳೆಯುವ ಬಹುವಾರ್ಷಿಕ ಹುಲ್ಲು ಇದು. ಅಧಿಕ ಗಾತ್ರದಲ್ಲಿ ಕ್ಯಾಲ್ಸಿಯಮ್ ಮತ್ತು ಫಾಸ್ಫರಸ್ಗಳನ್ನೂ ಶೇ.5-8 ರಷ್ಟು ಪ್ರೋಟೀನುಗಳನ್ನೂ ಒಳಗೊಂಡಿದ್ದು ಉತ್ತಮ ಬಗೆಯ ಮೇವುಗಳಲ್ಲೊಂದು ಎನಿಸಿದೆ. ಇದನ್ನು ಹಸಿ ಇಲ್ಲವೆ ಒಣಹುಲ್ಲಾಗಿ ಬಳಸಬಹುದು. ಹಲವಾರು ಬಗೆಯ ಮಣ್ಣಿನಲ್ಲೂ ವಾಯುಪರಿಸ್ಥಿತಿಗಳಲ್ಲೂ ಬೆಳೆಯಬಲ್ಲ ಸಾಮರ್ಥ್ಯ ಇದಕ್ಕೆ ಇದೆ. ಆದರೆ ಮಣ್ಣಿನಲ್ಲಿ ನೀರು ನಿಲ್ಲುವಂತಿರಬಾರದು. ಇದು ಚಳಿಯನ್ನು ತಡೆಯಲಾರದು. ಬೀಜ ಇಲ್ಲವೆ ಬೇರು ತುಂಡುಗಳಿಂದ ಇದನ್ನು ವೃದ್ಧಿಸಬಹುದು. ಬೀಜ ಬಿತ್ತಿದ 2 1/2 ತಿಂಗಳ ಅನಂತರ ಮೊದಲ ಬಾರಿಗೆ ಇದನ್ನು ಕಟಾಯಿಸಬಹುದು. ಆಮೇಲೆ 6-8 ವಾರಗಳ ಅಂತರಕ್ಕೊಮ್ಮೆ ಹಲವಾರು ವರ್ಷಗಳ ಕಾಲ ಕತ್ತರಿಸಬಹುದು. ಗಿನಿಹುಲ್ಲಿನ ವಾರ್ಷಿಕ ಇಳುವರಿ ಹೆಕ್ಟೇರಿಗೆ 38-62 ಮೆಟ್ರಕ್ ಟನ್ನುಗಳಷ್ಟಾಗುತ್ತದೆ. ಆದರೆ ಕೊಟ್ಟಿಗೆ ಗೊಬ್ಬರ, ಕಂಪೋಸ್ಟ್, ಅಮೋನಿಯಂ ಸಲ್ಫೇಟ್, ಚರಂಡಿ ನೀರು ಮುಂತಾದ ಗೊಬ್ಬರಗಳನ್ನು ಕೊಟ್ಟು ಬೆಳೆಸಿದಲ್ಲಿ ಹುಲ್ಲಿನ ಬೆಳೆವಣಿಗೆ ಇನ್ನೂ ಹುಲುಸಾಗಿ ಇಳುವರಿ ಹೆಕ್ಟೇರಿಗೆ 250 ಮೆಟ್ರಿಕ್ ಟನ್ನುಗಳವರೆಗೆ ಹೆಚ್ಚುವುದುಂಟು.


ಗಿನಿ ಹುಲ್ಲನ್ನು ಅನೇಕ ವರ್ಷಗಳವರೆಗೆ ಬೆಳೆಸಬಹುದಾದರೂ 3-5 ವರ್ಷಗಳ ಮೇಲೆ ಇಳುವರಿ ಕಡಿಮೆಯಾಗುವುದರಿಂದ ಆ ಅವಧಿಯ ಅನಂತರ ಹಳೆಯ ಗಿಡಗಳನ್ನು ಕಿತ್ತು ಹೊಸದಾಗಿ ಕೃಷಿ ಮಾಡಬೇಕು.