ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಬೀಗಮುದ್ರೆ

ವಿಕಿಸೋರ್ಸ್ದಿಂದ

ಬೀಗಮುದ್ರೆ - ಕಾರ್ಮಿಕ ವಿವಾದ ಬಗೆಹರಿಯದ ಕಾಲದಲ್ಲಿ, ಕಾರ್ಖಾನೆಯ ಆಡಳಿತ ಮಂಡಳಿ ಕೈಗೊಳ್ಳುವ ಒಂದು ಕ್ರಮ (ಲಾಕ್ ಔಟ್). ಹೊರಗೀಲಿ ಪರ್ಯಾಯಪದ. ಕಾರ್ಖಾನೆಯ ಮಾಲೀಕ ಕಾರ್ಮಿಕರ ಬೇಡಿಕೆಗಳ ಬಗ್ಗೆ ಯಾವ ತೀರ್ಮಾನಕ್ಕೂ ಬರಲಾಗದ ಸ್ಥಿತಿ ತಲುಪಿದಾಗ ಕಾರ್ಮಿಕರು ಉದ್ರಿಕ್ತರಾಗಿ ಕಾರ್ಖಾನೆಗೆ ಧಕ್ಕೆ ತರುವರೆಂಬ ಭೀತಿಯಿಂದ ಕಾರ್ಖಾನೆಯನ್ನು ಮುಚ್ಚಿಬಿಡುತ್ತಾನೆ. ಈ ಪರಿಸ್ಥಿತಿಯೇ ಬೀಗಮುದ್ರೆ. ಕಾರ್ಖಾನೆಯ ಮಾಲೀಕ ಅಥವಾ ಆಡಳಿತಮಂಡಳಿಯ ಇಚ್ಛೆಗನುಗುಣವಾಗಿ ವಿವಾದಗಳು ತೀರ್ಮಾನಕ್ಕೆ ಬರದಾಗ, ಕಾರ್ಮಿಕರನ್ನು ಅಸಹಾಯಸ್ಥಿತಿಗೆ ತರುವುದಕ್ಕಾಗಿ ಕೆಲವು ಉದ್ಯಮ ಮಾಲೀಕರು ಇದನ್ನು ಬಳಸುತ್ತಾರೆ ಎಂಬ ವಾದವಿದೆ. ತಮ್ಮ ಬೇಡಿಕೆಗಳು ಶಾಂತವಾಗಿ ಬಗೆಹರಿಯದಿದ್ದಾಗ ಕಾರ್ಮಿಕರು ಮುಷ್ಕರ ಹೂಡುತ್ತಾರೆ. ಸಾಮಾನ್ಯವಾಗಿ ಮುಷ್ಕಗಳು ಕೂಲಿ ಹೆಚ್ಚಳಕ್ಕಾಗಿ ನಡೆಯುತ್ತವೆ. ಆಗ ಉದ್ಯಮ ಮಾಲೀಕರು ಕಾರ್ಮಿಕ ಸಂಘದ ನಾಯಕರೊಡನೆ ಸಮಾಲೋಚಿಸುತ್ತಾರೆ. ಆದರೆ ವಿವಾದ ಬಗೆಹರಿಯದೆ, ಮುಷ್ಕರ ಬಹಳ ಕಾಲದತನಕ ಮುಂದುವರಿದಾಗ, ಮತ್ತು ಒಪ್ಪಂದಕ್ಕೆ ಬರುವುದು ಸಾಧ್ಯವೇ ಇಲ್ಲವೆನ್ನುವ ಸ್ಥಿತಿ ಉಂಟಾದಾಗ ಮಾಲೀಕರು ತಮ್ಮ ಕಾರ್ಖಾನೆಯ ಹಿತದೃಷ್ಟಿಯಿಂದ ಬೀಗಮುದ್ರೆ ಸಾರುತ್ತಾರೆ. ಆಗ ಕಾರ್ಖಾನೆಯ ಇಲ್ಲ ಬಗೆಯ ಕೆಲಸ ಕಾರ್ಯಗಳನ್ನು ನಿಲ್ಲಿಸಿ ಪೊಲೀಸರ ರಕ್ಷಣೆಯಲ್ಲಿ ಕಾರ್ಖಾನೆಗೆ ಬೀಗ ಹಾಕಿ ಮುಚ್ಚಿಬಿಡುತ್ತಾರೆ.

ಬೀಗಮುದ್ರೆ ಮುಷ್ಕರದಷ್ಟು ಸಾಮಾನ್ಯವಲ್ಲ. ಒಟ್ಟು ಮುಷ್ಕರದ ಶೇಕಡಾ 5-8ರಷ್ಟು ಮಾತ್ರ ಬೀಗಮುದ್ರೆಯಲ್ಲಿ ಪರ್ಯವಸಾನವಾಗುತ್ತವೆ. ಬೀಗಮುದ್ರೆಯಿಂದಾಗಿ ಕಾರ್ಮಿಕರು ನಿರುದ್ಯೋಗಸ್ಥರಾಗುವುದರಿಂದ ಅವರು ಮಾಲೀಕರೊಡನೆ ಅಥವಾ ಆಡಳಿತ ಮಂಡಳಿಗಳ ಒಡನೆ ಯಾವುದಾದರೂ ಒಪ್ಪಂದಕ್ಕೆ ಬರಲೇಬೇಕಾಗುತ್ತದೆ. ಬೀಗಮುದ್ರೆಗಳ ಸರಿಯಾದ ಅಂಕೆ ಅಂಶಗಳಿಲ್ಲದ ಕಾರಣ ಇದರಿಂದ ದೇಶಕ್ಕೆ ಎಷ್ಟು ನಷ್ಟವಾಗುತ್ತದೆ ಮತ್ತು ಆಗಿದೆ ಎಂಬುದು ತಿಳಿದುಬರುವುದಿಲ್ಲ.

ಬೀಗಮುದ್ರೆಯಿಂದ ಕೈಗಾರಿಕಾ ಸಂಬಂಧ ಕೆಡುತ್ತದೆ. ಉತ್ಪಾದನೆ ಸಂಪೂರ್ಣವಾಗಿ ಕುಂಠಿತವಾಗುತ್ತದೆ. ಭಾರತದಂಥ ಅನಭಿವೃದ್ಧಿ ಶೀಲ ರಾಷ್ಟ್ರದಲ್ಲಿ ಬೀಗಮುದ್ರೆ ಉಂಟಾದಾಗ ಕೈಗಾರಿಕೋತ್ಪನ ತೀವ್ರವಾಗಿ ಕುಸಿಯುತ್ತದೆ. ಕಾರ್ಮಿಕ ಸಂಘಗಳು ತುಂಬ ಬಲಿಷ್ಟವಾಗಿದ್ದು ಕಾನೂನು ಮೀರಿ ವರ್ತಿಸುವ ಮತ್ತು ಬಲಪ್ರಯೋಗದ, ನಷ್ಟ ಉಂಟುಮಾಡುವ ಪರಿಸ್ಥಿತಿಯಲ್ಲಿ ಬೀಗಮುದ್ರೆ ಒಂದು ತಾತ್ಕಾಲಿಕ ರಕ್ಷಣೆ ಎಂದೂ ಹೇಳಬಹುದು. ಸರ್ಕಾರದ ಮಾಲೀಕತ್ವದಲ್ಲಿರುವ ಸಾರ್ವಜನಿಕ ಕೈಗಾರಿಕೆಗಳಲ್ಲೂ ಬೀಗಮುದ್ರೆ ಪರಿಸ್ಥಿತಿ ಬರುತ್ತದೆ. ಸಾಮಾನ್ಯವಾಗಿ ಭಾರತದಲ್ಲಿ ಬೀಗಮುದ್ರೆ ಕೂಲಿ ಏರಿಕೆ ಬೇಡಿಕೆಯ ಮೂಲದ್ದಾಗಿರುತ್ತದೆ. (ಸಿ.ಕೆ.ಆರ್.)