ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಮೃದ್ವಸ್ಥಿ

ವಿಕಿಸೋರ್ಸ್ದಿಂದ

ಮೃದ್ವಸ್ಥಿ

ದೇಹದ ಕೆಲವು ಮೃದುಭಾಗಗಳಿಗೆ ಆಧಾರಭೂತವಾಗಿದ್ದು ಆಕಾರ ಕೊಡುವ ಮತ್ತು ಮಡಿಸಿದರೆ ಮುರಿಯದ ಘನ ರೂsಪದ ಊತಕ (ಕಾರ್ಟಿಲೇಜ್). ಮೆಲ್ಲೆಲುಬು, ಮೆತ್ತೆಲುಬು, ಮೃದ್ವಸ್ಥಿ ಪರ್ಯಾಯ ನಾಮಗಳು. ಕಶೇರುಕಗಳಲ್ಲಿ ಮಾತ್ರ ಕಂಡುಬರುವ ವಿಶಿಷ್ಟ ಅಂಗಾಂಶ. ಇದು ಆಧಾರ ಅಂಗಾಂಶಗಳಲ್ಲೊಂದು. ಮೂಳೆಯಷ್ಟು ಗಟ್ಟಿ ಇಲ್ಲದಿದ್ದರೂ ಭಾರ ಒತ್ತಡಗಳನ್ನು ತಡೆಯಬಲ್ಲದು ಮತ್ತು ಪುಟಿತ ಗುಣವುಳ್ಳದ್ದು. ಇದರಲ್ಲಿ ಜೀವಂತ ಕಣಗಳಿಗಿಂತ ನಿರ್ಜೀವ ಅಂತರಕಣ ವಸ್ತುವೇ ಹೆಚ್ಚು. ಇದರಲ್ಲಿ ನರತಂತುಗಳಿಲ್ಲ, ರಕ್ತನಾಳಗಳೂ ಇಲ್ಲ, ದುಗ್ಧನಾಳಗಳೂ ಇಲ್ಲ. ಜೀವಕಣಗಳಿಗೆ ಬೇಕಾದ ಆಹಾರ, ಆಕ್ಸಿಜನ್ನುಗಳು ಅಂತರಕಣ ವಸ್ತುವಿನ ಮೂಲಕ ವ್ಯಾಪಿಸುತ್ತ ಹೋಗುತ್ತವೆ. ಕಾಂಡ್ರಾಯಟಿನ್ ಸಲ್ಫೇಟ್, ಕಾಂಡ್ರೊಮ್ಯುಕಾಯಿಡುಗಳಿಂದ ಅಂತರಕಣ ವಸ್ತುವಿನ ಭೂಮಿಕೆಯಾಗಿ ಅದರಲ್ಲಿ ಕೊಲ್ಲಾಜೆನ್‍ಜನಕ ತಂತುಗಳಿರತ್ತವೆ. ಬೇಯಿಸಿದರೆ ತಂತುಗಳಿಂದ ಜೆಲೆಟಿನ್ ಉಂಟಾಗುತ್ತದೆ. ಭೂಮಿಕ ಮತ್ತು ತಂತುಗಳು ಸೇರಿ ಮಾತೃಕೆ (ಅಂತರಕಣವಸ್ತು ಮಾಧ್ಯಮವಸ್ತು) ಆಗುತ್ತದೆ. ಇದನ್ನು ಕತ್ತಿಯಿಂದ ಕೊಯ್ಯಬಹುದು.

ಕೀಲುಗಳಲ್ಲಿ, ಎದೆ ಪಂಜರದ ಎಲುಬುಗಳ ನಡುವೆ, ಧ್ವನಿನಾಳ, ಶ್ವಾಸನಾಳ, ಫುಪ್ಫುಸನಾಳಗಳು, ಮೂಗು ಮತ್ತು ಕಿವಿಗಳಲ್ಲಿ ಮೃದ್ವಸ್ಥಿ ಇದೆ. ಇದರಿಂದ ಅಸ್ಥಿಪಂಜರ ಹೆಚ್ಚು ಎಗರುಸ್ವಭಾವವುಳ್ಳದಾಗಿ ಸ್ಟ್ರಿಂಗಿನಂತೆ ಧಕ್ಕೆಗಳನ್ನು ತಡೆಯಬಲ್ಲದು. ಮೂಳೆಗಳು ಕೀಲುಭಾಗಗಳ ಮೇಲೆ ತೆಳುಮೃದ್ವಸ್ಥಿ ಇರುವುದರಿಂದ ಶಬ್ದವಿಲ್ಲದೆ ಕೀಲುಗಳು ಚಲಿಸುತ್ತವೆ. ವಯಸ್ಸಾಗುತ್ತ ಮೃದ್ವಸ್ಥಿ ಮೂಳೆಯಾಗಿ ಮಾರ್ಪಾಡಾಗಬಹುದು ಇಲ್ಲವೆ ನಶಿಸಬಹುದು. ಕೆಲವು ಮುದುಕರಲ್ಲಿ ಚಲಿಸುವ ಕೀಲುಗಳಿಂದ ಶಬ್ದವಾಗಿ ನೋಯಬಹುದು. ಉಸಿರು ನಾಳಮಾರ್ಗಗಳ ಭಿತ್ತಿಯಲ್ಲಿ ಮೃದ್ವಸ್ಥಿ ಉಂಗುರ ಅಥವಾ ಚೂರುಗಳಿರುವುದರಿಂದ ನಾಳಗಳು ಮುದುಡಿಕೊಳ್ಳದೆ, ಉಸಿರು ತಡೆಯಿಲ್ಲದೆ ಆಡುವುದು. ಎದೆ ಪಂಜರ ಉಸಿರಾಟದಲ್ಲಿ ಉಬ್ಬಿ ತಗ್ಗಲು ಮೃದ್ವಸ್ಥಿ ಸಹಾಯಕಾರಿ. (ಎಂ.ಡಿ.)