ಸಭಾಪರ್ವ: ೧೨. ಹನ್ನೆರಡನೆಯ ಸಂಧಿ

ವಿಕಿಸೋರ್ಸ್ದಿಂದ

<ಕುಮಾರವ್ಯಾಸ ಭಾರತ

ಸಭಾ ಪರ್ವ-ಹನ್ನೆರಡನೆಯ ಸಂಧಿ[ಸಂಪಾದಿಸಿ]

ಪಾಂಡುವಿನ ಮಕ್ಕಳುಗಳಾರಾ
ಪಾಂಡುವಿನಲೆನ್ನಲ್ಲಿ ಭೇದವ
ಕಂಡೆಲಾ ನೀನವರಿಗೇನಪ್ರಾಪ್ತವೇ ಧರಣಿ
ಉಂಡು ಬದುಕುವ ಬಹಳ ಭಾಗ್ಯರ
ಕಂಡಸೂಯಂಬಡುವ ಖಡ್ಡರ
ಭಂಡರೆನ್ನದೆ ಲೋಕ ನಿನಗಿದು ಸಾಮ್ಯವಲ್ಲೆಂದ ೪೯

ಅಹುದು ಬೊಪ್ಪ ವೃತಾಭಿಮಾನದ
ಕುಹಕಿ ಹೋಗಲಿ ನಿಮ್ಮ ಚಿತ್ತಕೆ
ಬಹ ಕುಮಾರರ ಕೂಡಿ ನಡೆವುದು ಪಾಂಡು ನಂದನರ
ಮಹಿಯ ಹಂಗಿಂಗೋಸುಗವೆ ಬಿ
ನ್ನಹವ ಮಾಡಿದೆನೆನಗೆ ಭಂಡಿನ
ರಹಣಿ ಬಂದುದು ಸಾಕಲೇ ಸೊಗಸಾಯ್ತು ಲೇಸೆಂದ ೫೦

ತಾಯೆ ನೇಮವಗೊಂಡೆನಯ್ಯಂ
ಗಾ ಯುಧಿಷ್ಠಿರನಾತ್ಮಜನಲೇ
ವಾಯುಸುತ ನರ ನಕುಲ ಸಹದೇವರು ಕುಮಾರರಲೆ
ಈ ಯುಗದಲಿನ್ನವರ ಸಂತತಿ
ದಾಯ ಭಾಗಿಗಳಾಗಿ ಬದುಕಲಿ
ರಾಯರಿಲ್ಲಾ ಮತ್ತೆ ನಮ್ಮನು ರಕ್ಷಿಸುವರೆಂದ ೫೧

ಅರಸ ಧರ್ಮಿಷ್ಠನು ಯುಧಿಷ್ಠಿರ
ಧರಣಿಪತಿಯುತ್ತಮನು ಪವನಜ
ನರರು ವಿನಯಾನ್ವಿತರು ನೀವೇ ಪುತ್ರವತ್ಸಲರು
ಧರಣಿಗಾವಿನ್ನೈಸಲೇ ನೂ
ರ್ವರು ಕುಮಾರರು ಹೊರಗೆ ನಿಮ್ಮಯ
ಕರುಣವೇ ಸಾಮ್ರಾಜ್ಯ ನಮ್ಮನು ಬೀಳುಗೊಡಿರೆಂದ ೫೨

ಆಯ ಛಲವಭಿಮಾನ ಹೋಗಲಿ
ಕಾಯಬೇಕೆಂಬರೆ ನೃಪಾಲರ
ಬಾಯ ತಂಬುಲ ತಿಂದು ಹೊರೆವೆವು ಬೆಂದ ಬಸುರುಗಳ
ಆಯ ಛಲವಾಚಂದ್ರ ತಾರಕ
ಕಾಯವಧ್ರುವವೆಂಬಡಿದಕೆ ಸ
ಹಾಯವಿದೆಲಾ ಕಾಲಕೂಟ ಕಠೋರ ನದಿಯೆಂದ ೫೩

ಅರಸನಭ್ಯುದಯವನು ಭೀಮನ
ಧರಧುರವನರ್ಜುನನ ಬಿಂಕವ
ನರಸಿಯಾಟೋಪವನು ಮಾದ್ರೀಸುತರ ಸಂಭ್ರಮವ
ಹೊರೆಯ ಧೃಷ್ಟದ್ಯುಮ್ನ ದ್ರುಪದಾ
ದ್ಯರ ವೃಥಾಡಂಬರವ ಕಂಡೆದೆ
ಬಿರಿದುದಳುಕಿದೆನಳುಕಿದೆನು ಸಂತವಿಸಲರಿದೆಂದ ೫೪

ಕರಗಿದಳು ಗಾಂಧಾರಿ ಕಂಬನಿ
ದುರುಗಲಲಿ ಧೃತರಾಷ್ಟ್ರನೆದೆ ಜ
ರ್ಝರಿತವಾದುದು ಮಗನ ಮಾತಿನ ಮುಸಲ ಹತಿಗಳಲಿ
ಸುರಿವ ನಯನಾಂಬುಗಳ ಮೂಗಿನ
ಬೆರಳ ತೂಗುವ ಮಕುಟದವನೀ
ಶ್ವರನು ಮೌನದೊಳಿದ್ದನೊಂದು ವಿಗಳಿಗೆ ಮಾತ್ರದಲಿ ೫೫

ಮಾತು ಸೊಗಸದಲಾ ವೃಥಾ ನೀ
ವೇತಕೆನ್ನನು ಕರೆಸಿದಿರಿ ನಿ
ಮ್ಮಾತಗಳು ಭೀಮಾರ್ಜುನರು ಸಹಿತೀ ಮಹೀತಳವ
ತಾತ ನೀವಾಳುವುದು ತಾಯೆ ಸು
ನೀತನಾ ಧರ್ಮಜನು ಧರ್ಮ ವಿ
ಘಾತಕರು ನಾವೆಮ್ಮ ಕಳುಹುವುದೆನುತ ಹೊರವಂಟ ೫೬

ಎಲೆಗೆ ಕರೆಯಾ ಪಾಪಿ ಕೌರವ
ಕುಲ ಕುಠಾರನ ನಿನ್ನ ಮಗನೊಡ
ನಳಿವೆನೈಸಲೆ ಪಾಂಡುಪುತ್ರರ ವೈರಬಂಧದಲಿ
ತಿಳುಹಿ ತಾಯೆನಲಾಕೆ ಶಕುನಿಯ
ಕಳುಹಿ ಕರೆಸಿದಡಾತ ಮರಳಿದ (೫೭

ನಳಲುದೊರೆಯಲಿ ಮೂಡಿ ಮುಳುಗಿದನಂದು ಧೃತರಾಷ್ಟ್ರ
ಏನ ನೆನೆದೈ ಮಗನೆ ಕುಂತೀ
ಸೂನುಗಳ ರಾಜ್ಯಾಪಹಾರದೊ
ಳೇನು ಬುದ್ಧಿ ವಿಳಾಸವಾವುದು ಕಾರ್ಯಗತಿ ನಿನಗೆ
ದಾನದಲಿ ಮೇಣ್ ಸಾಮದಲಿ ಭೇ
ದಾನುಮತದಲಿ ದಂಡದಲಿ ನೀ
ವೇನ ನಿಶ್ಬೈಸಿದಿರಿ ಹೇಳಿನ್ನಂಜಬೇಡೆಂದ ೫೮

ತಿಂದ ವಿಷವಳ್ಕಿದವು ಮಡುವಿನೊ
ಳಂದು ಬಿಸುಟರೆ ಮುಳುಗಿ ಸುಖದಲಿ
ಮಿಂದು ಹೊರವಂಟರು ಮಹಾಗ್ನಿಯ ಭವನ ಭಂಗದಲಿ
ಒಂದು ಕೂದಲು ಸೀಯದನಿಬರು
ಬಂದರಿವು ಮೊದಲಾದ ಕೃತ್ರಿಮ
ದಿಂದ ಪಾಂಡವರಳಿದುದಿಲ್ಲಿದಕೇನು ಹದನೆಂದ ೫೯

ನೀವು ಚಿತ್ತವಿಸಿದೊಡೆ ನೆತ್ತದೊ
ಳಾವು ಸೋಲಿಸಿ ಕೊಡುವೆವವರನು
ನೀವು ಕರೆಸುವುದಿಲ್ಲಿಗುಚಿತ ಪ್ರೀತಿವಚನದಲಿ
ನಾವು ಜಾಣರು ಜೀಯ ಜೂಜಿನ
ಜೀವಕಲೆಯಲಿ ಧರ್ಮಸುತನಿದ
ನಾವ ಹವಣೆಂದರಿಯನಾತನ ಜಯಿಸಬಹುದೆಂದ ೬೦

ಅಹುದು ತಪ್ಪೇನಿದುವೆ ಸಾಧನ
ವಹುದು ವಿದುರನ ಬುದ್ಧಿಗಭಿಮತ
ವಹಡೆ ಕರೆಸುವೆವೈಸಲೇ ಬೆಸಸುವೆನು ವಿದುರಂಗೆ
ಕುಹಕವಾತನಲಿಲ್ಲ ನೋಡುವ
ನಿಹಪರತ್ರದ ಹಿತವನಿದ ನಿ
ರ್ವಹಿಸಿ ಕೊಡುವರೆ ಮಂತ್ರವೆಂದನು ಮಗಗೆ ಧೃತರಾಷ್ಟ್ರ ೬೧

ಖೂಳರಲಿ ಸತ್ಕಳೆಗಳನು ನೆರೆ
ಕೇಳದವರಲಿ ಮಂತ್ರ ಬೀಜವ
ನಾಲಿಯಿಲ್ಲದವಂಗೆ ರೂಪು ವಿಲಾಸ ವಿಭ್ರಮವ
ಹೇಳುವಂತಿರೆ ನಿಮ್ಮ ವಿದುರನ
ಕೇಳಿಸಿದರಾ ಕಾರ್ಯಗತಿಗೆ ವಿ
ತಾಳವಾಗದೆ ಬೊಪ್ಪಯೆಂದನು ನಗುತ ಕುರುರಾಯ ೬೨

ಅರುಹಿದರೆ ವಿದುರಂಗೆ ಕಾರ‍್ಯವ
ಮುರಿವನಾತನು ಬಳಿಕ ನಿಮ್ಮಯ
ಕಿರಿಯ ತಮ್ಮನ ಮಕ್ಕಳಿಗೆ ಕೊಡಿ ಹಸ್ತಿನಾಪುರವ
ಹರುಕುಗಳು ನಾವ್ ನೂರು ಮಕ್ಕಳು
ಹೊರಗೆ ಬದುಕುವೆವೈಸಲೇ ನಿ
ಮ್ಮುರುವ ಮಕ್ಕಳುಗೂಡಿ ಸುಖದಲಿ ರಾಜ್ಯವಾಳೆಂದ ೬೩

ಪಾರಲೌಕಿಕದುಳಿವನೈಹಿಕ
ದೋರೆ ಪೋರೆಯನಿಂದು ಬಲ್ಲವ
ರಾರು ಹೇಳಾ ವಿದುರನಲ್ಲದೆ ನಮ್ಮ ಪೈಕದಲಿ
ಸಾರವಾತನ ಮಾತು ನಯ ವಿ
ಸ್ತಾರ ಸಹಿತಿಹುದಲ್ಲಿ ನಂಬುಗೆ
ದೂರವಿಲ್ಲೆನಗರಿಯೆ ನೀ ನಿಲ್ಲೆಂದನಂಧ ನೃಪ ೬೪

ತಿಳುಹಿ ವಿದುರನನವರ ಕರೆಯಲು
ಕಳುಹುವೆನು ಯಮಸೂನು ನಿಮ್ಮಯ
ಬಲುಹಿನಲಿ ಬಳುಕುವನೆ ಭೀಮಾರ‍್ಜುನರು ಕಿರುಕುಳರೆ
ತಿಳಿವೊಡೀತನ ಬುದ್ಧಿಯೇ ನಿ
ರ‍್ಮಲಿನವಹುದು ನಿಧಾನವಿದು ನೀ
ಕಳವಳಿಸದಿದ್ದರೆ ಮನೋರಥ ಸಿದ್ಧಿಯಹುದೆಂದು ೬೫

ನೀ ಕರುಣದಲಿ ನಮ್ಮ ಸಲಹುವ
ಡಾ ಕುಮಾರರ ಕರೆಸಿಕೊಟ್ಟರೆ
ಸಾಕು ಮತ್ತೊಂದಿಹುದಲೇ ಪಾಂಚಾಲ ನಂದನೆಯ
ನೂಕಿ ಮುಂದಲೆವಿಡಿದು ತೊತ್ತಿರೊ
ಳಾಕೆಯನು ಕುಳ್ಳಿರಿಸಿದಂದು ವಿ
ಶೋಕನಹೆನಾ ದಿವಸದಲಿ ಕೃತಕೃತ್ಯ ತಾನೆಂದ ೬೬

ಪೋಗು ನೀನೆಂದವನ ಕಳುಹಿದ
ನಾಗ ಮನದೊಳಗಧಿಕ ಚಿಂತಾ
ಸಾಗರದೊಳೋರಂತೆ ಮುಳುಗಿದನಂದು ಧೃತರಾಷ್ಟ್ರ
ಈಗಳಿನ ಸವಿಗಳುಪಿ ಮೇಲಣ
ತಾಗನರಿಯನು ಕಂದನಿದಕಿ
ನ್ನೇಗುವೆನು ಗಾಂಧಾರಿ ನೀ ಹೇಳೆಂದನಾ ಭೂಪ ೬೭

ಅವರು ಕಪಟವನರಿಯರೀತನ
ಹವಣ ನೀನೇ ಕಂಡೆ ಕರೆಸಿದ
ಡವರು ನಿಲ್ಲರು ಗೋರಿಯಲಿ ಬಳಿಸಂದ ಮೃಗದಂತೆ
ನವಗೆ ಬಹುದಪ ಕೀರ್ತಿಯೀಗಿ
ನ್ನವನ ಕುಹಕವ ಲೋಕವರಿಯದು
ಶಿವಶಿವಾಯಂದಳಲಿ ಮರುಗಿದನಂದು ಧೃತರಾಷ್ಟ್ರ ೬೮

ಮುರಿವೆನೇ ಮುನಿದಿವರು ನೂರ್ವರು
ತೊರೆವರೆನ್ನನು ತೊಡಕಿಸುವೆನೇ
ತರಿದು ಬಿಸುಡುವರವರು ಕೌರವ ಶತಕವನು ಬಳಿಕ
ಹೊರಗೊಳಗೆ ಹದನಿದು ನಿಧಾನಿಸ
ಲರಿಯೆನೆನ್ನಸುವಿನಲಿ ಹೃದಯದ
ಸೆರೆ ಬಿಡದು ಶಿವ ಶಿವಯೆನುತ ಮರುಗಿದನು ಧೃತರಾಷ್ಟ್ರ ೬೯

ಏಕೆ ನಿಮಗೀ ಚಿಂತೆಯಿಂದೆರ
ಡೌಕಿದವು ದುಷ್ಕಾರ್ಯ ಸಂಧಿ ವಿ
ವೇಕ ನಿಕರದಲೊರೆದು ಮೋಹರಿಸೊಂದು ಬಾಹೆಯಲಿ
ಈ ಕುರುವ್ರಜ ನೂರ ಹಿಡಿ ಕುಂ
ತೀ ಕುಮಾರರ ಬಿಡು ತನೂಜರ
ನೂಕು ಹಿಡಿ ಪಾಂಡವರನೆಂದಳು ಪತಿಗೆ ಗಾಂಧಾರಿ ೭೦

ಐಸಲೇ ತಾನಾದುದಾಗಲಿ
ಲೇಸ ಕಾಣೆನು ನಿನ್ನ ಮಕ್ಕಳ
ವಾಸಿಗಳ ವಿಸ್ತಾರ ಮೆರೆಯಲಿ ಹಲವು ಮಾತೇನು
ಆ ಸಭೆಯ ಸರಿಸದ ಸಭಾ ವಿ
ನ್ಯಾಸ ಶಿಲ್ಪಿಗರಾರೆನುತ ಧರ
ಣೀಶ ಕರೆಸಿದನುರು ಸಭಾ ನಿರ್ಮಾಣ ಕೋವಿದರ ೭೧

ತೆಗೆಸಿ ಭಂಡಾರದಲಿ ಬಹು ವ
ಸ್ತುಗಳನಿತ್ತನು ತರು ಶಿಲಾಕೋ
ಟಿಗಳ ತರಿಸಿದನುರು ಸಹಸ್ರಸ್ತಂಭ ಡಂಬರವ
ಝಗಝಗಿಪ ಬಹು ಮೌಲ್ಯ ಮುಕ್ತಾ
ಳಿಗಳನುರುತರ ರಶ್ಮಿ ಲಹರಿ
ಸ್ಥಗಿತ ದಿಗು ಭಿತ್ತಿಗಳನನುಪಮ ರತ್ನರಾಶಿಗಳ ೭೨

ಮಾಡಿತಗ್ಗದ ಸಭೆ ಸುಧರ್ಮೆಯ
ನೇಡಿಸುವ ಚೆಲುವಿನಲಿ ಪುರದಲಿ
ರೂಢಿಸಿತು ಬಳಿಕಂಧ ನೃಪನೇಕಾಂತ ಭವನದಲಿ
ಕೂಡಿಕೊಂಡು ಕುಲಾಪಘಾತದ
ಕೇಡಿಗರ ಕಲ್ಪನೆಯ ಕಲುಷದ
ಜೋಡಿಯನೆ ನಿಶ್ಬೈಸಿ ವಿದುರಂಗರುಹಿದನು ಕರೆಸಿ ೭೩

ವಿದುರ ಕೇಳೈ ಪಾಂಡವರ ಸಂ
ಪದಕೆ ಸರಿಯೊ ಮಿಗಿಲೋ ಸಭೆ ತಾ
ನಿದು ವಿಶೇಷವಲಾ ಸಮಸ್ತ ಕ್ಷತ್ರ ವಿಭವದಲಿ
ಇದರೊಳೋಲಗವಿತ್ತು ಹರ್ಷಾ
ಸ್ಪದರು ಕುರು ನೃಪರಲ್ಲಿ ಸುಖ ದ್ಯೂ
ತದಲಿ ರಮಿಸಲಿ ಕರೆದು ತಾ ಕುಂತೀ ಕುಮಾರಕರ ೭೪

ಅವರ ವಿಭವವನವರ ಯಾಗೋ
ತ್ಸವವನಿಂದ್ರಪ್ರಸ್ಥದಲಿ ಕಂ
ಡೆವು ಮನೋಹರವಾಯ್ತು ಬೆಳವಿಗೆ ಪಾಂಡು ನಂದನರ
ಅವರು ಹಸ್ತಿನಪುರಿಗೆ ಬಂದು
ತ್ಸವದಲೀ ಸಭೆಯಲಿ ಸುಖ ದ್ಯೂ
ತವನು ರಮಿಸಲಿ ಸೇರಿ ಬದುಕಲಿ ಪಾಂಡು ಸುತರೆಂದ ೭೫

ಮಾತು ಹೊಲಸಿನ ಗಂಧವಾಗಿದೆ
ಭೀತಿ ರಸದಲಿ ಮನ ಮುಳುಗಿತೀ
ಪ್ರೀತಿ ಮಾರಿಯ ಮುಸುಕನುಗಿವುದನಾರು ಕಲಿಸಿದರು
ಕೈತವದ ಕಣಿ ನಿನ್ನ ಮಗ ನೀ
ಸೋತೆಲಾ ಶಿವಶಿವ ಸುಖಾಂಗ
ದ್ಯೂತವೇ ಹಾ ಹಾಯೆನುತ ತಲೆದೂಗಿದನು ವಿದುರ ೭೬

ಹಾ ಮರುಳೆ ಕೆಣಕುವರೆ ಫಲುಗುಣ
ಭೀಮರನು ಮಿಗೆ ಹೆಚ್ಚಿ ಬೆಳೆದು
ದ್ದಾಮ ಸಿರಿಯಿದು ಹಸ್ತಿನಾಪುರವಕಟ ಕೆಡಿಸಿದೆಲ
ಕೈ ಮಗುಚದೇ ವಿಭವವಿದು ನಿ
ರ್ನಾಮರಾರೋ ಬಿತ್ತಿದರು ಕುರು
ಭೂಮಿಯಲಿ ವಿಷ ಬೀಜವನು ಹಾಯೆನುತ ಬಿಸುಸುಯ್ದ ೭೭

ವಿದುರ ಬೆಂಬೀಳದಿರು ಬಿಂಕದ
ಹದನ ಬಲ್ಲೆನು ಭೀಮ ಪಾರ್ಥರ
ಮುದವ ಬಯಸುವೆ ಮುನಿಯಲಾಪೆನೆ ಹೇಳು ತನಯರಿಗೆ
ಇದು ಮಹಾ ಸಭೆಯಿಲ್ಲಿ ಮೇಳಾ
ಪದಲಿ ಕುರು ಪಾಂಡವರು ಸದ್ಯೂ
ತದಲಿ ರಮಿಸುವರೇನು ಹೊಲ್ಲೆಹವೆಂದನಂಧ ನೃಪ ೭೮

ಮೊದಲಲಿದು ಸುದ್ಯೂತವವಸಾ
ನದಲಿ ವಿಷಮ ದ್ಯೂತದಲಿ ನಿಲು
ವುದು ನಿವಾರಣವುಂಟೆ ಮರ್ಮವನಿರಿದ ಸಬಳದಲಿ
ತುದಿಗೆ ತಾನಿದಪಥ್ಯ ಕುರುವ
ರ್ಗದಲಿ ವಿನಾಶಕ ಬೀಜವದು ನಿಮ
ಗಿದರೊಳಗೆ ಸೊಗಸಾದುದೇ ಕೈಕೊಂಡೆ ನಾನೆಂದ ೭೯

ಕರೆದು ತಾ ನೀನವರ ನಾನುಪ
ಚರಿಸುವಂದವ ನೋಡು ನಿನ್ನಯ
ಕರಣವೃತ್ತಿಗೆ ಕಠಿಣವಹವೇ ನಮ್ಮ ಮಾತುಗಳು
ದುರುಳರವರಿವರೆಂಬರದನಾ
ದರಿಸದಿರು ನೀ ಹೋಗು ಪಾಂಡವ
ಧರಣಿಪರನೊಡಗೊಂಡು ಬಾಯೆಂದಟ್ಟಿದನು ನೃಪತಿ ೮೦

ಅರುಹಿದನು ಭೀಷ್ಮಂಗೆ ಗುರು ಕೃಪ
ರರಿದರಿನ್ನಪಮೃತ್ಯುವೇನೆಂ
ದರಿಯದಿನ್ನುತ್ಸಾಹ ಶಕ್ತಿಗೆ ಮನವ ಮಾಡಿತಲ
ಹರಿದುದೇ ಕುರುವಂಶ ಲತೆ ಹೊ
ಕ್ಕಿರಿದನೇ ಧೃತರಾಷ್ಟ್ರ ನೀ ಬೇ
ಸರದಿರವರನು ಕರೆದು ತಾ ಹೋಗೆಂದರವರಂದು ೮೧

ಶುಭಮುಹೂರ್ತ ವಿಳಾಸ ಲಗ್ನ ದೊ
ಳಿಭಪುರಿಯ ಹೊರವಂಟು ಸುರ ಸ
ನ್ನಿಭನು ಬಂದನು ಹಲವು ಪಯಣದಲಿವರ ಪಟ್ಟಣಕೆ
ರಭಸ ಮಿಗಿಲಿದಿರ್ಗೊಂಡು ತಂದರು
ಸಭೆಗೆ ಮಾನ್ಯ ಯಥೋಪಚಾರ
ಪ್ರಭವ ಸತ್ಕಾರದಲಿ ಕೇಳ್ದರು ಕುಶಲ ಸಂಗತಿಯ ೮೨

ಧರಣಿಪತಿ ಗಾಂಗೇಯ ಗೌತಮ
ಗುರುತನುಜ ಗುರು ಕರ್ಣ ಸೌಬಲ
ಕುರು ನೃಪತಿಯನುಜಾತ್ಮಜರು ಗಾಂಧಾರಿ ಭಾನುಮತಿ
ವರಸಚಿವ ಸಾಮಂತ ಪರಿಜನ
ಪುರಜನಂಗಳ ಕುಶಲವನು ವಿ
ಸ್ತರಿಸಿದನು ವಿದುರನು ಮಹೀಪತಿಗಾಪ್ತ ಬಾಂಧವರ ೮೩

ಪಾವುಡಂಗಳನಿತ್ತು ಭೂಪನ
ನೋವಿದನು ನಾನಾ ಕಥಾ ಸಂ
ಭಾವನಾನಂತರದ ಮಜ್ಜನ ಭೋಜನಾದಿಗಳ
ಆ ವಿವಿಧ ಸತ್ಕಾರದಲಿ ದಿವ
ಸಾವಸಾನವ ಕಳೆದು ಬಳಿಕ ಸ
ಭಾವಳಯದಲಿ ಪಾಂಡು ಸುತರಿಗೆ ನುಡಿದನಾ ವಿದುರ ೮೪

ಧರಣಿಪತಿ ಬೆಸಸಿದನು ನೀವೈ
ವರು ಕುಮಾರರು ರಾಜಸೂಯಾ
ಧ್ವರ ಮಹಾವ್ರತದೇಕ ಭುಕ್ತಾದಿಯಲಿ ಬಳಲಿದಿರಿ
ವರಸಭೆಯ ರಚಿಸಿದರು ಹಸ್ತಿನ
ಪುರಿಗೆ ಬಿಜಯಂಗೈದು ವಿಭವೋ
ತ್ಕರದ ವಿಮಳ ದ್ಯೂತದಲಿ ರಮಿಸುವುದು ನೀವೆಂದ ೮೫

ನೋಡುವುದು ಬಾಂಧವರ ನಿಮ್ಮಡಿ
ಮಾಡುವುದು ಸೌಖ್ಯವನು ಭಯದಲಿ
ಬಾಡುವುದಲೇ ರಿಪುನೃಪಾಲರ ಸಮರ ಜಯಬೀಜ
ಜೋಡಿಸುವುದಗಲದಲಿ ಕೀರ್ತಿಯ
ಝಾಡಿಯನು ನಿಮ್ಮಭ್ಯುದಯ ಬಳಿ
ಕೇಡಿಸುವುದೈ ದುಂದುಮಾರ ದಿಲೀಪ ದಶರಥರ ೮೬

ನಂಬಿಸುವ ನಿಮ್ಮಯ್ಯನಿದ ಬೇ
ಡೆಂಬವರು ಗುರು ಭೀಷ್ಮರುಳಿದವ
ರಂಬಿನೋಪಾದಿಯಲಿ ನಿಲುವರು ಪಲವು ಮಾತೇನು
ಶಂಬರರು ನೃಪ ಕರ್ಣ ಶಕುನಿಗ
ಳೆಂಬವರು ನಿಮ್ಮೊಡನೆ ವಚನಾ
ಡಂಬರವೆ ಬಹದುಂಟೆ ಬಿಜಯಂಗೈಯಿ ನೀವೆಂದ ೮೭

ಕರೆಸುವನು ಧೃತರಾಷ್ಟ್ರ ಗಡ ನ
ಮ್ಮರಸನಲಿ ಧೃತರಾಟಷ್ಟ್ರನಲಿ ನಮ
ಗೆರಡು ಮನವೇ ಭಾವ ಭೇದವೆ ಪಾಂಡು ಬೊಪ್ಪನಲಿ
ವರವೆ ದೊರಕಲಿ ಶಾಪವೇ ಮೇಣ್ಬ
ರಲಿ ಭಯವಿಲ್ಲೆ ಮೆಗೆ ಬೊಪ್ಪನ
ಕರಣ ಕೃತಿಗೆ ಹಸಾದವೆಂದನು ಧರ್ಮನಂದನನು ೮೮

ದ್ಯೂತ ಮೃಗಯಾ ವ್ಯಸನ ಪೌರು
ಷ್ಯಾತಿಶಯ ಮಧುಪಾನ ಕಾಂತಾ
ಪ್ರೀತಿ ದಂಡ ವಿಘಾತಿ ದೂಷಣವರ್ಥ ಸಂಗತಿಯು
ಜಾತ ಸಪ್ತವ್ಯಸನವಿವು ಸಂ
ಪ್ರೀತಿಕರ ಮೊದಲಲಿ ವಿಪಾಕದೊ
ಳಾತು ಕೆಡಿಸುವ ಹದನನರಿದಿಹುದೆಂದನಾ ವಿದುರ ೮೯

ಖಳರು ಕೌರವರಕ್ಷ ಧೂರ್ತರ
ತಿಲಕ ಶಕುನಿ ವಿಕಾರಿಯಾ ದು
ಸ್ಸಳೆಯ ಪತಿ ದೌರ್ಜನ್ಯಮಖದೀಕ್ಷಿತನು ಕಲಿಕರ್ಣ
ಉಳಿದ ಭೀಷ್ಮ ದ್ರೋಣರೇ ನಿ
ಷ್ಫಲ ವಿಧಾನರು ನಿಮ್ಮ ಬೊಪ್ಪನ
ಬಳಕೆ ಕನ್ನಡಿ ನೋಡಿಕೊಳಿ ನೀವೆಂದನಾ ವಿದುರ ೯೦

ಪ್ರಕಟವದು ಸಲೆ ಕರ್ಣ ಕೌರವ
ಶಕುನಿಗಳ ದುಶ್ಚೇಷ್ಟೆ ಭೀಷ್ಮಾ
ದ್ಯಕುಟಿಲರು ಸಲ್ಲರು ಸುಯೋಧನ ಮಂತ್ರ ಸಂಗತಿಗೆ
ಮುಕುರ ಪಥವೆಮ್ಮಯ್ಯನೆಂಬುದು
ವಿಕಳವಲ್ಲಲೆ ವಿದುರ ಪರಿ ಪಾ
ಲಕನಲೇ ಧೃತರಾಷ್ಟ್ರನಾತನ ನಂಬಿ ಬಹೆವೆಂದ ೯೧

ಕರೆಸಿ ನಿಮ್ಮಯ ಮಂತ್ರಿಜನ ಮು
ಖ್ಯರ ಪಸಾಯ್ತರ ಕೇಳುವುದು ಮನ
ದೊರಗೆ ತೂಕಕೆ ಬಹರೆ ಭೀಮಾದಿಗಳ ಮತವಿಡಿದು
ಅರಸ ನಿಶ್ಬೈಸುವುದೆನಲು ನೀ
ಮರುಳೆ ವಿದುರ ಭವದ್ವಚೋವಿ
ಸ್ತರಕೆ ಪಡಿಸಣವುಂಟೆ ಶಿವಶಿವಯೆಂದನಾ ಭೂಪ ೯೨

ಹೋಹುದೇನಭಿಮತವೆ ಧೂರ್ತ
ವ್ಯೂಹವದು ಭೀಷ್ಮಾದಿ ಹಿರಿಯರು
ಸಾಹಸಿಗರಲ್ಲದೆ ರಹಸ್ಯಕೆ ಸಲ್ಲರವರುಗಳು
ಕಾಹುರರು ಕೌರವರು ಸಮರೋ
ತ್ಸಾಹಶಕ್ತಿಗೆ ಠಾವದಲ್ಲ
ವ್ಯಾಹತವೆ ಮತವೆಂದು ಭೀಮಾದಿಗಳ ಬೆಸಗೊಂಡ ೯೩

ಜೀಯ ಬಿನ್ನಹವಿಂದು ದೇಹ
ಚ್ಛಾಯೆಗುಂಟೇ ಬೇರೆ ಚೇಷ್ಟೆ ನ
ವಾಯಿಯೇ ನಮ್ಮಿನಿಬರಿಗೆ ರಾಜಾಭಿಮಾನದಲಿ
ನೋಯೆ ನೋವುದು ನಿಮ್ಮ ದೇಹದ
ಬೀಯದಲಿ ನಾಣ್ಬೀಯವಹುದೆ
ಮ್ಮಾಯತಂ ಸ್ವಾತಂತ್ರ್ಯವೆಮಗಿಲ್ಲೆಂದನಾ ಭೀಮ ೯೪

ಕರೆಸುವನು ಧೃತರಾಷ್ಟ್ರ ನಿಮ್ಮನು
ಕರೆವ ಮಣಿಹ ಸುಯೋಧನಾದ್ಯರ
ಮರುಳುಗಳ ಮಾತೇನು ಹಿತವರು ನೀವಲಾ ನನಗೆ
ಧರಣಿಯಿದು ಶಾಶ್ವತವೆ ತಂದೆಗೆ
ಹಿರಿಯನಾ ಧೃತರಾಷ್ಟ್ರನಾಜ್ಜೆಯ
ಶಿರದೊಳಾಂತೆನು ಬಹೆನೆನುತ ನಿಶ್ಬೈಸಿದನು ನೃಪತಿ ೯೫

ಇರುಳ ನೂಕಿದರುದಯದಲಿ ಭೂ
ಸುರರ ಕರೆಸಿದರಮಳ ಸಾಂವ
ತ್ಸರಿಕ ಸುಮುಹೂರ್ತದಲಿ ಹೊಯಿಸಿದರಂದು ಹೊರ ಗುಡಿಯ
ಪುರದ ಕಾಹನು ಸಚಿವ ಸಾವಂ
ತರಿಗೆ ನೇಮಿಸಿ ಸಕಲ ದಳ ಮೋ
ಹರದ ದೆಖ್ಖಾಳವನು ಕಂಡನು ಪುರವ ಹೊರವಂಟ ೯೬

ಬಿಗಿದ ರೆಂಚೆಯ ಹೊಮ್ಮಿಣಿಯ ಹೊರ
ಜೆಗಳ ಜೋಡಿಯ ಪಕ್ಕಘಂಟೆಯ
ಝಗೆಯ ಮೊಗರಂಬದ ನವಾಯಿಯ ಮಣಿಯ ಜಲವಟೆಯ
ಬಿಗಿದ ಕೂರಂಕುಶದ ಮಾವಂ
ತಿಗನ ಸನ್ನೆಗೆ ಕುಸಿದ ದಂತಿಯ
ಹೆಗಲ ಹೊಂಗದ್ದುಗೆಗೆ ಬಿಜಯಂಗೈದನಾ ಭೂಪ ೯೭

ತಿಳಿತವಿನನುದಯದಲಿ ತಾರಾ
ವಳಿಗಳದ್ಭುತವೆನಲು ಮುಕ್ತಾ
ವಳಿಯ ಧವಳಚ್ಛತ್ರದೆಡ ಬಲಕೊಲೆವ ಚೌರಿಗಳ
ಕೆಲಬಲದ ಭೀಮಾರ್ಜುನರ ಗಜ
ದಳದ ಮುಂದೆ ಕುಮಾರ ವರ್ಗದ
ಸುಳಿವುಗಳ ಸೌರಂಭದಲಿ ಹೊರವಂಟನಾ ಭೂಪ ೯೮

ಮುಂದೆ ಮೋಹರ ತೆಗೆದು ನಡೆದುದು
ಸಂದಣಿಸಿ ನಕುಲಾದಿ ಭೂಪರು
ಹಿಂದೆ ಮಣಿ ಕೇವಣದ ದಡ್ಡಿಯ ಬಿಗಿದ ಬೀಯಗದ
ಗೊಂದಣದ ಹೆಮ್ಮಕ್ಕಳಿದ್ದೆಸೆ
ಯಂದಣದ ಸಂದಣಿಗಳಲಿ ನಡೆ
ತಂದವನಿಬರ ರಾಣಿವಾಸದ ದಂಡಿಗೆಗಳಂದು ೯೯

ಉಡಿಗೆಗಳ ದೇಸಿಯ ವಿಳಾಸದ
ತೊಡಿಗೆಗಳ ಮೌಳಿಯ ನವಾಯಿಯ
ಮುಡಿಗಳೆಡ ಬಲದೋರೆನೋಟದ ಬಳ್ಳಿ ಬೆಳಗುಗಳ
ಕಡು ಬೆಮರ ತನು ಪರಿಮಳದೊಳೆಡೆ
ವಿಡದ ಗಗನೋದರದ ಗರುವೆಯ
ರಡಸಿದರು ದ್ರುಪದಾತ್ಮಜೆಯ ದಂಡಿಗೆಯ ಬಳಸಿನಲಿ ೧೦೦

ಭೂರಿ ಭೇರೀ ವಾದ್ಯರವ ಕೈ
ವಾರಿಗಳ ಕಳಕಳದೊಳಡಗಿತು
ನಾರಿಯರ ನೇವುರದ ಮೊಳಗಿನೊಳದ್ದುದಾ ರಭಸ
ಆರು ಹೊಗಳುವರಾ ವಿಭವ ವಿ
ಸ್ತಾರ ಪಣವನು ಪಯಣ ಗತಿಯಲಿ
ಭೂರಮಣನೈತಂದು ಹೊಕ್ಕನು ಹಸ್ತಿನಾಪುರವ ೧೦೧

ನೋಡಿ[ಸಂಪಾದಿಸಿ]

ಸಂಧಿಗಳು[ಸಂಪಾದಿಸಿ]

ಪರ್ವಗಳು[ಸಂಪಾದಿಸಿ]

<ಪರ್ವಗಳು <>ಆದಿಪರ್ವ<> ಸಭಾಪರ್ವ <>ಅರಣ್ಯಪರ್ವ <>ವಿರಾಟಪರ್ವ<>ಉದ್ಯೋಗಪರ್ವ< >ಭೀಷ್ಮಪರ್ವ< >ದ್ರೋಣಪರ್ವ<>ಕರ್ಣಪರ್ವ< >ಶಲ್ಯಪರ್ವ<>ಗದಾಪರ್ವ

ಪರಿವಿಡಿ[ಸಂಪಾದಿಸಿ]

ಕನ್ನಡ ವಿಕಿಸೋರ್ಸ್[ಸಂಪಾದಿಸಿ]

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ | ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ


ಉಲ್ಲೇಖ[ಸಂಪಾದಿಸಿ]

  • ಭಾರತ ಕಥಾಮಂಜರಿ- ಕುವೆಂಪು ಮತ್ತು ಮಾಸ್ತಿವೆಂಕಟೇಶ ಐಯಂಗಾರ್ ಸಂಪಾದಿತ. ಇಂದ:ಮೈಸೂರು ಸಂಸ್ಥಾನದ ಸಾಹಿತ್ಯ ಮತ್ತು ಸಂಸ್ಖರತಿ ಇಲಾಖೆ.