ಪುಟ:ಕ್ರಾಂತಿ ಕಲ್ಯಾಣ.pdf/೩೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ರಾಜಗೃಹದಿಂದ ಹೊನ್ನಮ್ಮನ ಚಾವಡಿಗೆ

೩೨೭


ಧೂರ್ತ ಹೆಂಗಸು ಅಂತ ಕಾಣ್ತದ, ನಾಯಕರೆ. ನಮ್ಮ ಹರೀಶರುದ್ರಯ್ಯನೋರ ಹಾಂಗ ಕಪನಿ ಮುಂಡಾಸು ಹಾಕ್ಕೊಂಡು ಕಂಕುಳಲ್ಲಿ ಜೋಳಗಿ ಹಿಡಿದು ಬಂದಾಳ್ರಿ, ನಾವು ಮೋಸ ಹೋದ್ವಿ.”

ನಾಯಕನು ಉಷಾವತಿಯನ್ನು ಬಂಧನದಿಂದ ಬಿಡಿಸಿ ಬೇರೆ ನಿಲ್ಲಿಸಿದನು. ಅವಳ ಮುಂಡಾಸು ಮೊದಲಲ್ಲೇ ಕೆಳಗುರುಳಿತ್ತು. ಎಳೆದಾಟದಲ್ಲಿ ಹರಿದ ಕಪನಿಯನ್ನು ಉಷಾವತಿ ತಾನೇ ತೆಗೆದು ಬಿಸುಡಿದ್ದಳು. ಜೋಳಿಗೆ ದೂರ ಬಿದ್ದಿತ್ತು. ಪಂಜುಗಳ ಬೆಳಕಿನಲ್ಲಿ ನಾಯಕನು ನೋಡಿದ್ದು, ಬಿಳಿಯ ಸೀರೆಯುಟ್ಟಿದ್ದ ಸುಂದರ ತರುಣಿಯೊಬ್ಬಳನ್ನು. ಹರೀಶರುದ್ರನೊಡನೆ ಅವಳಿಗೆ ಯಾವ ಹೋಲಿಕೆಯೂ ಇರಲಿಲ್ಲ.

ನಾಯಕನು ಹೆಂಗಸರ ಕಡೆ ತಿರುಗಿ, “ಇವಳು ನಿಮ್ಮಲ್ಲೇ ಒಬ್ಬಾಕಿ ಅಂತ ಕಾಣತೈತಿ. ಇವಳಿಗೆ ನೀವೇ ವೇಷಕಟ್ಟಿ ರಂಪಮಾಡಿ ನನಗೆ ಹೇಳ್ತಿದೀರಿ,” ಎಂದು ಗದರಿಸಿ ಹೇಳಿದನು.

ಹೆಗ್ಗಡಿತಿ ಸಿಟ್ಟಿನಿಂದ, “ಇವಳು ಸತ್ಯವಾಗೂ ಇಲ್ಲಿಯೋಳಲ್ಲ, ನಾಯಕರೆ. ಬೇಕಾರ ಅವಳನ್ನೇ ಕೇಳಿ,” ಎಂದಳು.

ನಾಯಕ ಉಷಾವತಿಯನ್ನು ಹತ್ತಿರ ಕರೆದು, “ನೀನು ಯಾರು? ಇವರ ಗುಂಪಿನವಳೆ?” ಎಂದು ಪ್ರಶ್ನಿಸಿದನು.

ಉಷಾವತಿ ತಲೆಯಾಡಿಸಿ ನಿರಾಕರಿಸಿದಳು.

“ನೀನೇನು ಮೂಕಳೆ? ಮಾತಾಡಲು ಬರುವುದಿಲ್ಲವೆ?” -ನಾಯಕನು ಪುನಃ ಪ್ರಶ್ನಿಸಿದನು, ತುಸು ಬಿರುಸಾದ ದನಿಯಿಂದ.

ಪ್ರಶ್ನೆಗಳಿಗೆ ಉತ್ತರ ಕೊಟ್ಟು ವಿಪತ್ತನ್ನು ಹೆಚ್ಚಿಸಿಕೊಳ್ಳುವ ಪ್ರತಿಯಾಗಿ ಮೂಕಾಭಿನಯವೇ ಏಕಾಗಬಾರದು? ಎಂದು ಚಿಂತಿಸಿ ಉಷಾವತಿ ಮೂಗು ಕೆರೆದುಕೊಂಡು ತಲೆಯಾಡಿಸಿದಳು. "ಹಹಃ ಹಿಹಿಃ!” ಎಂದು ಮೂಕಳಂತೆ ಶಬ್ದ ಮಾಡಿದಳು.

“ನಿನಗೆ ಹರೀಶ ರುದ್ರಯ್ಯನವರ ಪರಿಚಯವಿದೆಯೆ?”
ಉಷಾವತಿ ಇಮ್ಮಡಿ ವೇಗದಿಂದ ತಲೆ ಕೊಡವಿದಳು. “
ನೀನು ಇಲ್ಲಿಗೆ ಬಂದದ್ದು ಹೇಗೆ?”
ಉಷಾವತಿ ಮಹಾದ್ವಾರದ ಕಡೆಗೆ ಕೈ ತೋರಿಸಿದಳು.
“ನಿನ್ನ ಅನುಮತಿ ಪತ್ರವೆಲ್ಲಿ?”

ಆಗ ಉಷಾವತಿಗೆ ನೆನಪಾಯಿತು, ಬ್ರಹ್ಮಶಿವ ಅನುಮತಿ ಪತ್ರ ಕೊಡಲಿಲ್ಲವೆಂದು