ಪುಟ:ಕ್ರಾಂತಿ ಕಲ್ಯಾಣ.pdf/೩೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೩೩೦

ಕ್ರಾಂತಿ ಕಲ್ಯಾಣ


ಸ್ಥಿತಿಯಲ್ಲಿರುವುದಿಲ್ಲ. ಒಂದುದಿನದ ವವ್ಯಹಾರಕ್ಕೆ ಇವಳು ಸಾಕು-ಎಂದು ಅವನು ನಿರ್ಧರಿಸಿಕೊಂಡನು.

“ಇವಳು ಈ ರಾತ್ರಿ ಚಾವಡಿಯಲ್ಲಿರಲಿ. ನಾಳೆ ವಿಚಾರಣೆ ನಡೆಸುತ್ತೇನೆ. ಈಗ ನೀನು ಹೋಗಬಹುದು,” ಎಂದು ಹೆಗ್ಗಡೆ ನಾಯಕನನ್ನು ಕಳುಹಿಸಿ, ಉಷಾವತಿಗೆ ಕುಳಿತುಕೊಳ್ಳುವಂತೆ ಸನ್ನೆ ಮಾಡಿದನು. ಉಷಾವತಿ ಬೆದರಿದವಳಂತೆ ಎದುರಿಗಿದ್ದ ಸುಖಾಸನದಲ್ಲಿ ಸರಿದು ಕುಳಿತುಕೊಂಡಳು.

“ನಿನಗೆ ಓದಿ ಬರೆಯಲು ಬರುವುದೆ?”
ಉಷಾವತಿ ತಲೆಯಾಡಿಸಿ ಬರುವುದಾಗಿ ಹೇಳಿದಳು.

ಹೆಗ್ಗಡೆ ಹಲಿಗೆ ಬಳಪಗಳನ್ನು ಮುಂದಿಟ್ಟು, “ಹಾಗಾದರೆ ನೀನು ಯಾರು, ಇಲ್ಲಿಗೆ ಹೇಗೆ ಬಂದೆ ಎಂಬುದನ್ನು ಇದರಲ್ಲಿ ಬರೆ,” ಎಂದನು.

ಉಷಾವತಿ ಕೂಡಲೆ ಉತ್ತರ ಬರೆದುಕೊಟ್ಟಳು.
ಹೆಗ್ಗಡೆ ಓದಿಕೊಂಡನು :

“ನಾನು ನಗರದ ಶ್ರೀಮಂತ ವಣಿಕನೊಬ್ಬನ ವಿಧವಾಪುತ್ರಿ, ತಂದೆ ತಾಯಿಗಳ ಪರಿಚಯ ತಿಳಿಸುವುದಿಲ್ಲ. ಇಂದು ಸಂಜೆ ತ್ರಿಪುರಾಂತಕ ದೇಗುಲಕ್ಕೆ ಹೋಗಿದ್ದಾಗ ಧೂರ್ತರು ನನ್ನನ್ನು ಅಪಹರಿಸಿ, ಮೈಮೇಲಿನ ಆಭರಣಗಳನ್ನು ಕಿತ್ತುಕೊಂಡು ಸಮೀಪದ ಅಡವಿಯಲ್ಲಿ ಬಿಟ್ಟುಹೋದರು. ಅರಮನೆಯ ಬೆಳಕು ಕಂಡು ಮಹಾದ್ವಾರಕ್ಕೆ ಬಂದೆ. ತೋಟದಲ್ಲಿದ್ದ ಹೆಂಗಸರು ನನ್ನನ್ನು ಸುತ್ತುಗಟ್ಟಿ ಅಪಹಾಸ್ಯ ಮಾಡುತ್ತಿದ್ದಾಗ ನಾಯಕನು ಬಂದು ಬಿಡಿಸಿ ಇಲ್ಲಿಗೆ ಕರೆದುತಂದ.”

ಹೆಗ್ಗಡೆ ಭಾವಿಸಿದನು, ನಿಜವೋ ಸುಳ್ಳೋ. ಘಟನೆ ಅಸಂಭವವಲ್ಲ. ಈಗೆರಡು ತಿಂಗಳಿಂದ ಇಂತಹ ಒಂದೆರಡು ಪ್ರಸಂಗಗಳು ನಗರದಲ್ಲಿ ನಡೆದಿವೆ. ಕಾಲ ಕೆಡುತ್ತಿರುವುದರ ಸೂಚನೆ ಇದು-ಎಂದು. ಉಷಾವತಿಯೊಡನೆ ಅವನು, “ನಾಳೆ ಮುಂಜಾವಿಗೆ ಮೇನೆಯಲ್ಲಿ ನಿನ್ನನ್ನು ತ್ರಿಪುರಾಂತಕ ದೇಗುಲಕ್ಕೆ ಕಳುಹಿಸುತ್ತೇನೆ. ಅಲ್ಲಿಂದ ನೀನು ತಂದೆಯ ಮನೆಗೆ ಹೋಗಬಹುದು. ಅದಕ್ಕೆ ಮೊದಲು, ಈ ರಾತ್ರಿ, ಒಂದು ಕಾರ್ಯದಲ್ಲಿ ನೀನು ನನಗೆ ಸಹಾಯ ಮಾಡಬೇಕು,” ಎಂದನು.

ಉಷಾವತಿ ತಲೆಯಾಡಿಸಿ ಒಪ್ಪಿಕೊಂಡಳು.
“ಈ ಅರಮನೆಯಲ್ಲಿ ಯಾರಿರುವರೆಂದು ನಿನಗೆ ತಿಳಿದಿದೆಯೆ?”
ಉಷಾವತಿ ತಲೆಯಾಡಿಸಿ ಇಲ್ಲವೆಂದಳು.

ಹೆಗ್ಗಡೆ ಹೇಳಿದನು : “ತಿಳಿಯದಿರುವುದೇ ಒಳ್ಳೆಯದು. ಅವರು ಚಾಲುಕ್ಯ ರಾಜ್ಯದಲ್ಲಿ ಬಹುದೊಡ್ಡ ವ್ಯಕ್ತಿ. ಪ್ರತಿಷ್ಠೆ ಗೌರವಗಳಲ್ಲಿ ಅವರಷ್ಟು ದೊಡ್ಡವರು