ಪುಟ:ಭಾರತ ದರ್ಶನ.djvu/೪೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೪೮೬

ಭಾರತ ದರ್ಶನ

ಹೇಳುತ್ತಾನೆ. ಇದೆಲ್ಲ ಕೇವಲ ಕಲ್ಪನೆ. ಆ ಬಗೆಯ ಪರಿವರ್ತನೆಗಳು ಆಗುತ್ತವೆಯೋ ಇಲ್ಲವೋ ಹೇಳಲು ಸಾಧ್ಯವಿಲ್ಲ. ಯಾವುದಾದರೂ ಒಂದು ಪ್ರಬಲ ವಿಶ್ವ ಬಾಂಧವ್ಯ ಪ್ರೇಮದಿಂದ ಏಕೀಭವಿಸಿ ಕೆಲಸಮಾಡಲು ಸಾಧ್ಯವಿದ್ದರೆ ಆ ರೀತಿ ದೊಡ್ಡ ದೊಡ್ಡ ಜನಾಂಗ ಅತೀತ ಪ್ರದೇಶಗಳನ್ನಾಗಿ ಸಹ ಪ್ರಪಂಚ ವಿಭಜಿಸಲು ನನಗೆ ಇಷ್ಟವಿಲ್ಲ. ಪ್ರಪಂಚದ ಜನತೆ ಪ್ರಪಂಚದ ಐಕಮತ್ಯ, ಮತ್ತು ಪ್ರಪಂಚ ಸಂಸ್ಥೆಯನ್ನು ಮೂಢತನದಿಂದ ನಿವಾರಿಸಿದರೆ ಒಳಾಡಳಿತ ಸ್ವಾತಂತ್ರ್ಯ ಇಟ್ಟುಕೊಂಡು ರೂಪುಗೊಂಡ ಈ ಜನಾಂಗ ಅತೀತ ಮಹಾರಾಷ್ಟ್ರಗಳು ಜನ್ಮತಾಳುವುದೇ ನಿಶ್ಚಯ. ಸಣ್ಣ ಜನಾಂಗಗಳ ರಾಜ್ಯಗಳ ಕಾಲ ಮುಗಿಯಿತು. ಸಂಸ್ಕೃತಿ ದೃಷ್ಟಿಯಿಂದ ಸ್ವತಂತ್ರ ಉಳಿಯಬಹುದು, ಆದರೆ ಸ್ವತಂತ್ರ ರಾಜಕೀಯ ಪ್ರದೇಶವಾಗಿ ಉಳಿಯಲು ಸಾಧ್ಯವಿಲ್ಲ.

ಭವಿಷ್ಯ ಏನೇ ಇರಲಿ ಪ್ರಪಂಚದ ಮೇಲೆ ಭಾರತ ತನ್ನ ಪ್ರಭಾವ ಬೀರಬಲ್ಲುದಾದರೆ ಪ್ರಪಂಚಕ್ಕೆ ಕ್ಷೇಮ. ಏಕೆಂದರೆ ಅದು ಯಾವಾಗಲೂ ಶಾಂತಿ ಮತ್ತು ಸಹಕಾರದ ಪರ ಮತ್ತು ಆಕ್ರಮಣದ ವಿರುದ್ಧ.

೧೨. ವಾಸ್ತವಿಕ ಪರಿಜ್ಞಾನ ಮತ್ತು ಪ್ರಪಂಚ ರಾಜಕೀಯ : ಪ್ರಪಂಚ ಆಕ್ರಮಣವೇ ?
ಅಥವ ಪ್ರಪಂಚ ಸಂಸ್ಥೆಯೆ? ಅಮೆರಿಕೆಯ ಸಂಯುಕ್ತ ಸಂಸ್ಥಾನಗಳು ಮತ್ತು
ಸೋವಿಯಟ್ ರಷ್ಯದ ಸಂಯುಕ್ತ ಸಂಸ್ಥಾನಗಳು

ಯೂರೋಪಿನ ಯುದ್ಧ ಕೊನೆಯ ಅಂಕ ಪ್ರವೇಶಮಾಡಿದಂತೆ ಇದೆ. ಪೂರ್ವ ಪಶ್ಚಿಮ ದಿಕ್ಕುಗಳೆರಡರಿಂದಲೂ ಮುನ್ನುಗ್ಗುತ್ತಿರುವ ಸೈನ್ಯಗಗಳೆದುರು ನಾಜಿಶಕ್ತಿ ಕುಸಿದು ಬೀಳುತ್ತಿದೆ. ಸ್ವಾತಂತ್ರ್ಯದ ಹೋರಾಟಕ್ಕೆ ಮಾತೃಸ್ಥಾನವಾದ ಸುಂದರ, ಗಂಭೀರ ಪ್ಯಾರಿಸ್ ಪುನಃ ಸ್ವತಂತ್ರವಾಗಿದೆ. ಯುದ್ಧ ಸಮಸ್ಯೆ ಗಳಿಗಿಂತ ಕಠಿಣ ಶಾಂತಿ ಸಮಸ್ಯೆಗಳು ಮಾನವನ ಮನಸ್ಸು ಕದಡಲು ಆರಂಭಿಸುತ್ತವೆ. ಇವೆಲ್ಲದರ ಹಿಂದೆ ಮೊದಲನೆಯ ಪ್ರಪಂಚ ಯುದ್ಧಾನಂತರದ ವರ್ಷಗಳ ಮಹಾ ಅಪಯಶಸ್ಸಿನ ಬೃಹದಾಕಾರದ ಕರಿನೆರಳು ಕಣ್ಣನ್ನು ಕವಿಯುತ್ತಿದೆ. ಇನ್ನು ಸಾಕು, ಎಂಬ ಕೂಗು ಕೇಳುತ್ತಿದೆ, ೧೯೧೮ ರಲ್ಲಿ ಸಹ ಅದೇ ಶ್ರುತಿ ಇತ್ತು.

ಹದಿನೈದು ವರ್ಷಗಳ ಹಿಂದೆ ೧೯೨೯ ರಲ್ಲಿ “ಈ ಕತೆಯಿಂದ ನಮ್ಮ ಭವಿಷ್ಯದ ನಿರೂಪಣೆಗೆ ಆವಶ್ಯವಿರುವ ಜ್ಞಾನ ಮತ್ತು ಅರ್ಥವನ್ನು ಮಾನವ ಕುಲ ಕಲಿಯಬೇಕು. ರಾಷ್ಟ್ರ ರಾಷ್ಟ್ರಗಳ ಮಧ್ಯೆ ಏಳುವ ಕಲಹಗಳಿಗೂ ಆ ಕಲಹ ಕೊನೆಗಾಣಿಸಲು ಹೂಡುವ ಯುದ್ಧದಿಂದ ಒದಗುವ ಸಂಕಟಕ್ಕೂ ಯುದ್ಧದ ಘೋರ ಮಹಾಯಜ್ಞ ಕುಂಡದಲ್ಲಿ ಕೊಟ್ಟ ಪೂರ್ಣಾಹುತಿಯಿಂದ ದೊರಕುವ ಶುಷ್ಕ ಲಾಭಕ್ಕೂ ನಿದಾನವಾಗಿ ಪುನರ್ರಚನೆ ಮಾಡಬೇಕಾದ ದೀರ್ಘಕಾಲಕ್ಕೂ ಅತಿ ಕಷ್ಟದಿಂದ ಎದುರಿಸಬೇಕಾದ ಭಯಂಕರ ಅಪಾಯಗಳಿಗೂ ಕೂದಲೆಳೆಯಿಂದ, ಒಂದು ನಾಣ್ಯದ ಒಂದು ತಿರುವಿನಲ್ಲಿ ಅಥವ ಕೇವಲ ಆಕಸ್ಮಿಕದಿಂದ ಪಾರಾದ ಗಂಡಾಂತರಗಳಿಗೂ ಇರುವ ಅಪಾರ ಅಂತರವನ್ನು ಅರಿತರೆ ಇನ್ನೊಂದು ಮಹಾಯುದ್ಧ ತಪ್ಪಿಸುವ ಕಾರ್ಯವೆ ಮಾನವಕುಲದ ಪ್ರಥಮ ಕರ್ತವ್ಯ ಆಗಬೇಕು," ಎಂದು ವಿನ್ಸ್ಟನ್ ಚರ್ಚಿಲ್ ಹೇಳಿದಾನೆ.

ಯುದ್ಧ ಕಾಲದಲ್ಲೂ ಶಾಂತಿ ಸಮಯದಲ್ಲೂ ಪ್ರಮುಖ ಪಾತ್ರವಹಿಸಿ ಮಹಾವಿಪತ್ತಿನ ಸಂಕಟ ಸಮಯದಲ್ಲಿ ಅದ್ಭುತ ಧೈರ್ಯದಿಂದ ತನ್ನ ದೇಶದ ನಾಯಕತ್ವ ವಹಿಸಿ, ವಿಜಯೋತ್ಸವದಲ್ಲಿ ತನ್ನ ದೇಶಕ್ಕಾಗಿ ಮಹಾ ಕನಸು ಕಂಡ ಚರ್ಚಿಲ್‌ಗೆ ಪೂರ್ಣ ಜ್ಞಾನೋದಯವಾಗಿರಬೇಕು. ಮೊದಲನೆ ಪ್ರಪಂಚ ಯುದ್ಧದ ನಂತರ ಬ್ರಿಟಿಷ್ ಸೈನ್ಯಗಳು ಭಾರತದ ಗಡಿಯಿಂದ ಇರಾಣ, ಇರಾಕ್, ಪ್ಯಾಲೆ ಸ್ಟೈನ್ ಮತ್ತು ಕಾಂಸ್ಟಾಂಟಿನೋಪಲ್ವರೆಗೆ ಸಿರಿಯ ಮುಂತಾಗಿ ಪಶ್ಚಿಮ ಏಷ್ಯ ಎಲ್ಲವನ್ನೂ ಆಕ್ರಮಣ ಮಾಡಿದವು. ಆಗ ಚರ್ಚಿಲ್ ಬ್ರಿಟನ್ನಿನ ಮಧ್ಯಪ್ರಾಚ್ಯ ಸಾಮ್ರಾಜ್ಯದ ಕನಸು ಕಂಡನು. ಆದರೆ ವಿಧಿವೈಚಿತ್ರ್ಯ ಬೇರೆ ಇತ್ತು. ಆತನಿಗೆ ಈಗ ಕಾಣುತ್ತಿರುವ ಮುಂದಿನ ಮಹಾ ಕನಸುಗಳೇನು? ಈಗ ಸೆರೆ ಮನೆಯಲ್ಲಿರುವ ಧೀರ, ಪ್ರಸಿದ್ಧ, ನನ್ನ ಸಹೋದ್ಯೋಗಿಯೊಬ್ಬರು “ಯುದ್ಧವು ಒಂದು ಅದ್ಭುತ ಮಂತ್ರವಾದಿ. ಜಯಾಪಜಯ ಪಡೆದ ಇಬ್ಬರ ಕನಸುಗಳನ್ನೂ ಪುಡಿಪುಡಿಮಾಡಬಲ್ಲ ಪ್ರಚಂಡ ಶಕ್ತಿಗಳನ್ನು ತಯಾರಿಸಿ,