ಪುಟ:ಭಾರತ ದರ್ಶನ.djvu/೪೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಕೊನೆಯ ಅ೦ಕ ೩

೪೨೧

ನೋಡಿಕೊಳ್ಳುವುದಾಗಿತ್ತು. ವಿಮಾನ ದಾಳಿಯೋ, ದೂರದಲ್ಲಿ ಎಲ್ಲಿ ಮುತ್ತಿಗೆಯೋ ಒದಗಿದರೆ ಸಾಮಾನ್ಯ ಜನರಲ್ಲಿ ಭೀತಿ ಹುಟ್ಟುವುದು ಸಹಜವಿತ್ತು; ಇದನ್ನು ತಡೆಗಟ್ಟುವುದು ಅವಶ್ಯವಿತ್ತು. ಅಧಿಕಾರಿಗಳು ತೆಗೆದುಕೊಂಡ ಮುನ್ನೆಚ್ಚರಿಕೆಯ ಕಾರ್ಯಕ್ರಮವು ಏನೂ ತೃಪ್ತಿಕರ ಇರಲಿಲ್ಲ; ಜನರು ಇದನ್ನು ಅಪನಂಬಿಕೆಯಿಂದ ಸಹ ನೋಡುತ್ತಿದ್ದರು. ಗ್ರಾಮಾಂತರಗಳಲ್ಲಿ ದರೋಡೆಗಳೂ, ಸುಲಿಗೆಗಳೂ ಹೆಚ್ಚುತ್ತಿದ್ದವು.

ಈ ಎಲ್ಲ ದೊಡ್ಡ ಯೋಜನೆಗಳನ್ನು ನಾವು ಹಾಕಿಕೊಂಡು, ಸ್ವಲ್ಪ ಮಟ್ಟಿಗೆ ಕಾರ್ಯರೂಪಕ್ಕೂ ತಂದೆವು; ಆದರೂ ನಮ್ಮ ಯತ್ನವೆಲ್ಲ ನಮ್ಮೆದುರು ನಿಂತ ಮಹಾ ಬೃಹತ್ಸಮಸ್ಯೆಯ ಮೇಲ್ಮೈ ಮಾತ್ರ ತುರಿಸಿದಂತೆ ಕಂಡಿತು, ಸರಕಾರದ ಆಡಳಿತ ಯಂತ್ರವೂ ಜನರೂ ಸಂಪೂರ್ಣ ಸಹಕರಿಸಿದರೆ ಮಾತ್ರ ನಿಜವಾದ ಪರಿಹಾರ ಸಾಧ್ಯವಿತ್ತು; ಆದರೆ ಆ ಸಹಕಾರ ಮಾತ್ರ ಸಾಧ್ಯ ಇರಲಿಲ್ಲ. ವಿಷಮ ಪರಿಸ್ಥಿತಿಯ ಕರೆಗೆ ಓಗೊಟ್ಟು ಕಾರ್ಯೋನ್ಮುಖರಾಗಲು ಉತ್ಸಾಹದಿಂದ ನಾವು ಕುದಿಯುತ್ತಿದ್ದರೂ ಪರಿಣಾಮಕಾರಕ ಕಾರ್ಯಕ್ರಮ ಕೈಗೊಳ್ಳಲು ಸಾಧ್ಯವಿಲ್ಲದ ಈ ಸನ್ನಿವೇಶ ಎದೆಬಿರಿಯುವಂತೆ ಇತ್ತು. ಪ್ರಳಯಾಂತಕ ವಿಪತ್ತೂ ಸರ್ವನಾಶವೂ ನಾಗಾಲೋಟದಿಂದ ನಮ್ಮ ಕಡೆ ಮುನ್ನುಗ್ಗುತ್ತಿದ್ದವು; ಆದರೆ ಭಾರತವು ವಿದೇಶಗಳ ಶತ್ರು ಸೈನ್ಯಗಳ ಯುದ್ಧರಂಗವಾಗಿ ಕೋಪದಿಂದ, ಕಹಿ ಮನಸ್ಸಿನಿಂದ ನಿಸ್ಸಹಾಯಕವೂ ನಿಸ್ತೇಜವೂ ಆಗಿ ಕಾಲ ತಳ್ಳುತ್ತಿತ್ತು.

ನಾನು ಪ್ರಬಲ ಯುದ್ಧ ವಿರೋಧಿ ಆದರೂ, ಜಪಾನರು ಭಾರತಕ್ಕೆ ಮುತ್ತಿಗೆ ಹಾಕುವರೆಂದು ನನಗೆ ಭಯವಾಗಲಿಲ್ಲ. ಭಾರತಕ್ಕೆ ಯುದ್ಧವು ತುಂಬ ಹಾನಿಕರವಾದರೂ ನನ್ನ ಮನಸ್ಸಿನ ಹಿನ್ನೆಲೆಯ ಒಂದು ದೃಷ್ಟಿಯಿಂದ ಈ ಯುದ್ಧ ಬರುವುದನ್ನು ಸ್ವಾಗತಿಸಿದ್ದೆ. ಒಮ್ಮೆ ಎಲ್ಲವೂ ತಲೆಕೆಳಕಾಗಿ ಮಂಥನವಾಗ ಬೇಕೆಂಬ ಇಚ್ಛೆ ಇತ್ತು. ಬ್ರಿಟಿಷರು ನಮ್ಮ ಮೇಲೆ ಹೇರಿದ್ದ ಸ್ಮಶಾನ ಶಾಂತಿಯಿಂದ ಜನಕೋಟಿಯು ಹೊಡೆದೆದ್ದು ಪ್ರತ್ಯಕ್ಷ ಹೊಸ ಅನುಭವ ಪಡೆಯುವದು ಅವಶ್ಯವಿತ್ತು. ಅವರನ್ನು ಬಿಡದೆ ಅಂಟಿಕೊಂಡಿದ್ದ ಗತಕಾಲದ ಜೀರ್ಣ ಪದ್ಧತಿಗಳು ಭಸ್ಮವಾಗಿ, ಪ್ರಕೃತ ಕಾಲದ ನಗ್ನ ವಾಸ್ತವದ ಎದುರಿನಲ್ಲಿ ತಮ್ಮ ಅಲ್ಪ ರಾಜಕೀಯ ಭಿನ್ನತೆಗಳನ್ನು ಮರೆಯುವಂತೆಯೂ, ತಾತ್ಕಾಲಿಕ ಸಮಸ್ಯೆಗಳನ್ನೇ ಪೆಡಂಭೂತ ಮಾಡಿ ಕೊಂಡು ಮನಸ್ಸು ಕೆಡಿಸಿಕೊಳ್ಳದಂತೆಯೂ ಅವರನ್ನು ಚಾಟಿಯ ಏಟಿನಂತೆ ಹೊಡೆದೆಬ್ಬಿಸಲು ಏನಾದರೂ ಬೇಕಾಗಿತ್ತು. ಹಿಂದಿನ ಬೇರುಗಳನ್ನು ಕಳೆದು ಕೊಳ್ಳದೆ, ಆದರೆ ಅಷ್ಟರಲ್ಲೇ ಅಲ್ಪ ತೃಪ್ತರಾಗಿ ಬಾಳದೆ ಇಂದಿನದನ್ನು ಅರಿತು ಭವಿಷ್ಯದ ಕಡೆಗೂ ದೃಷ್ಟಿ ಇಟ್ಟು . . . . ಜೀವನದ ತಾಳ ಮತ್ತು ಗತಿಗಳನ್ನು ಬದಲಾಯಿಸಿ ಇಂದಿನ ಕಾಲ ಮತ್ತು ಭವಿಷ್ಯದೊಂದಿಗೆ ಸಾಮರಸ್ಯದಿಂದ ನಡೆಯಲು ಪರಿವರ್ತನೆ ಅತ್ಯಗತ್ಯ ವಿತ್ತು. ಯುದ್ಧದ ವೆಚ್ಚವು ಅಪಾರವಿತ್ತು; ಮುಂದಿನ ಪರಿಣಾಮವೂ ಅನಿಶ್ಚಿತವಿತ್ತು. ಆದರೆ ನಾವೇನೂ ಅದನ್ನು ಬಯಸಿದವರಲ್ಲ. ಅದೇ ನಮ್ಮ ಬಾಗಿಲಿಗೆ ಬಂದಿದ್ದರಿಂದ ರಾಷ್ಟ್ರದ ನರಗಳನ್ನು ಬಿಗಿಮಾಡಿ ಹೊಸ ಜೀವನ ವಿಕಾಸಕ್ಕೆ ಅವಶ್ಯವಾದ ಎಲ್ಲ ಮುಖ್ಯ ಅನುಭವಗಳನ್ನೂ ಅದರಿಂದ ಪಡೆಯ ಬಹುದಿತ್ತು. ಅನೇಕರು ಸಾಯುವುದು ಅನಿವಾರವಿತ್ತು; ಆದರೆ ಕಾಮಪೀಡಿತರಾಗಿ ಸಾಯುವುದಕ್ಕಿಂತ ಯುದ್ಧದಲ್ಲಿ ಮಡಿಯುವುದು ಉತ್ತಮವಿತ್ತು; ನಿರಾಸೆಯ ಗೋಳಿನ ಬಾಳಿಗಿಂತ ಸಾವನ್ನು ಅಪ್ಪುವುದು ಹಿತಕರವಿತ್ತು. ಆದರೆ ಸಾವಿನಲ್ಲಿ ಹೊಸ ಬಾಳಿನ ಅಂಕುರ, ಸಾವನ್ನು ಅರಿಯದ ವ್ಯಕ್ತಿಗಳು ಮತ್ತು ರಾಷ್ಟ್ರಗಳು ಜೀವನವನ್ನೂ ಅರಿಯರು. “ಮರಣವೇ ಜೀವನ”.

ಯುದ್ಧ ಭಾರತಕ್ಕೆ ಬಂದರೂ ಅದರಿಂದ ನಮಗೆ ಯಾವ ಉತ್ಸಾಹವೂ ಆಗಲಿಲ್ಲ. ಸಾವು ನೋವುಗಳನ್ನು ಮರೆತು, ಸ್ವಾರ್ಥವನ್ನು ನಿರ್ಲಕ್ಷಿಸಿ, ಸ್ವಾತಂತ್ರ್ಯ ರಕ್ಷಣೆಗೆ ಮಾತ್ರ ಬೆಲೆಕೊಟ್ಟು, ಮುಂದಿನ ಭವಿಷ್ಯದ ದೃಷ್ಟಿಯೊಂದನ್ನೇ ಕಾಣುತ್ತ ಯಾವುದೋ ಒಂದು ಸಂತೋಷದ ಉನ್ಮಾದದಲ್ಲಿ ಸರ್ವಶಕ್ತಿಯನ್ನೂವಿನಿಯೋಗಿಸಿ ಕಾದಾಡುವ ಅದೃಷ್ಟ ನಮಗೆ ದೊರೆಯಲಿಲ್ಲ. ಸಹಿಸಲಶಕ್ಯವಾದ ಸಂಕಟ ಮತ್ತು ವ್ಯಸನ ಮಾತ್ರ ನಮ್ಮ ಪಾಲಿಗೆ ಬಂದಿತ್ತು; ನಮ್ಮ ಕಣ್ಣು ಕೋರೈಸಿ ನೋವು ಹೆಚ್ಚಿಸಿ ಎದುರುನಿಂತ ನಿವಾರಿಸಲಶಕ್ಕೆವಾದ ಅಪಘಾತದ ಅರಿವು ಮಾತ್ರ ನಮ್ಮದಾಗಿತ್ತು. ಅನಿವಾರ್ಯವೂ, ತಪ್ಪಿಸಿಕೊಳ್ಳಲಸಾಧ್ಯವೂ ಆದ ಈ ವೈಯಕ್ತಿಕ ಮತ್ತು ರಾಷ್ಟ್ರೀಯ ದುರಂತದ ಚಿಂತೆ ಮಾತ್ರ ನಮ್ಮ ಮನಸ್ಸನ್ನು ಪೂರ್ಣ ಆವರಿಸಿ ಕೊರೆಯತೊಡಗಿತ್ತು.