ಪುಟ:ಭಾರತ ದರ್ಶನ.djvu/೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಭಾರತ ದರ್ಶನ

ಪಡೆಯಲು ಕಾತರನಾಗಿದ್ದೇನೆ. ಸಾವಿನ ಭಯ ನನಗಿಲ್ಲದಿದ್ದರೂ ಸಾವಿನ ಹಂಬಲ ನನಗಿಲ್ಲ. ಜೀವನ ಶೂನ್ಯವನ್ನುವುದರಲ್ಲಿ ಅಥವಾ ವಿಮುಖತೆಯಲ್ಲಿ ನನಗೆ ನಂಬಿಕೆ ಇಲ್ಲ. ಜೀವನದಲ್ಲಿ ನನಗೆ ಆಶೆಯಿದೆ ; ಅದು ಇನ್ನೂ ನನ್ನನ್ನು ಆಕರ್ಷಿಸುತ್ತಿದೆ; ನನ್ನ ಸುತ್ತಲೂ ಅನೇಕ ಅವ್ಯಕ್ತ ಪ್ರತಿಬಂಧಕಗಳು ಬೆಳೆದು ಬಂದಿದ್ದರೂ ಅದರ ಅನುಭವ ಇನ್ನೂ ನನಗೆ ಬೇಕು. ಆದರೆ ಅದೇ ಆಶೆ ಜೀವನದೊಂದಿಗೆ ಆಟವಾಡಿ, ಅದರ ತುತ್ತ ತುದಿಯಿಂದ ಇಣಿಕಿನೋಡಿ ಅದರ ದಾಸನಾಗಿರದೆ ಪರಸ್ಪರ ಬೆಲೆಯನ್ನು ಹೆಚ್ಚಿಸಿಕೊಳ್ಳ ಬೇಕೆಂದು ಪ್ರೇರಿಸುತ್ತಿದೆ. ಜೀವನದ ಮಂದಗತಿ, ನೀರಸತೆ ನನ್ನನ್ನು ಆವರಿಸಿದಾಗ ಮೇಘ ಮಂಡಲದ ಕೋಲಾಹಲದೊಳಗೆ ನುಗ್ಗಿ:

ಮನದಿ ಎಲ್ಲ ಮನನಮಾಡಿ ತುಲನಮಾಡಿದೆ
ಉಳಿದ ದಿನಗಳೆಲ್ಲ ವ್ಯರ್ಥವೆಂದು ಮನಕೆ ತೋರಿದೆ
ಕಳೆದ ದಿನಗಳೆಲ್ಲ ಅ೦ತೆ ವ್ಯರ್ಥವಾಗಿದೆ
ಜೀವ ಸಾವು ಎರಡು ಈಗ ಸಮಕೆ ತೂಗಿವೆ

ಎಂದು ಹಾಡಲು ನಾನೊಬ್ಬ ವೈಮಾನಿಕನಾಗಬೇಕಿತ್ತು.

೫. ಗತಕಾಲ-ವರ್ತಮಾನ ಕಾಲಕ್ಕೆ ಸಂಬಂಧ

ಈ ಕ್ರಿಯಾಸಕ್ತಿ, ಕ್ರಿಯೆಯ ಮೂಲಕ ಜೀವನವನ್ನು ಅನುಭವಿಸುವ ಈ ಆಶೆ ನನ್ನ ಎಲ್ಲ ಭಾವನೆ ಮತ್ತು ಕಾರ್ಯಶಕ್ತಿಯ ಮೇಲೆ ಪರಿಣಾಮವನ್ನುಂಟುಮಾಡಿದೆ. ದೀರ್ಘಾಲೋಚನೆ ಸಹ ಒಂದು ವಿಧವಾದ ಕ್ರಿಯೆಯಲ್ಲದೆ, ಮುಂದಿನ ಕ್ರಿಯೆಯ ಒ೦ದು ಅ೦ಶ ಸಹ ಆಗುತ್ತದೆ. ಅದು ಕ್ರಿಯೆಗೂ ಜೀವನಕ್ಕೂ ಅಸಂಬದ್ಧವಾದ ಶೂನ್ಯತೆಯಿಂದ ಬಂದ ಕೇವಲ ಭಾವನಾವಸ್ತುವಲ್ಲ. ಕ್ರಿಯಾ ಮುಹೂರ್ತವಾದ ಇಂದಿನಕಾಲದ ಹುಟ್ಟು ಹಿಂದಿನದರಲ್ಲಿ, ಅದರ ಹರಿತ ಭವಿಷ್ಯತ್ತಿನಲ್ಲಿ; ಇವು ಒಂದಕ್ಕೊಂದು ಬಿಡಿಸಲಾಗದಂತೆ ಹೆಣೆದುಕೊಂಡು ಪರಸ್ಪರ ಸಂಬಂಧಿಸಲ್ಪಟವೆ.


ಸೆರೆಮನೆಯ ನನ್ನ ಜೀವನವು ಮೇಲೆ ಕ್ರಿಯಾಶೂನ್ಯವೆಂದು ತೋರಿದರೂ ಹೇಗೋ ಯಾವುದೊ ಒಂದು ಯೋಚನೆ ಯಾವುದೋ ಒಂದು ಭಾವನೆಯ ಮೂಲಕ, ಮುಂಬರುವ ಅಥವ ಕಲ್ಪನೆಯಲ್ಲಿರುವ ಕ್ರಿಯೆಗೆ ಅಂಟಿಕೊಂಡಿದೆ. ಅದರಿಂದಲೇ ನನಗೊಂದು ತೃಪ್ತಿ, ಅತೃಪ್ತಿಯಿಲ್ಲದೆ ಎಲ್ಲವೂ ಶೂನ್ಯ ವಾಗಿ ಜೀವನವೇ ಅಸಹನೀಯವಾದೀತು. ಪ್ರತ್ಯಕ್ಷ ಕ್ರಿಯಾಸಕ್ತಿ ನನಗೆ ಇಲ್ಲವಾದಾಗ ಗತಕಾಲದೆಡೆಯಲ್ಲಿ, ಇತಿಹಾಸದೆಡೆಯಲ್ಲಿ ಆ ಬಗೆಯ ಪ್ರವೇಶ ದೊರಕಿಸಿಕೊಳ್ಳಲು ಪ್ರಯತ್ನ ಪಟ್ಟಿದೇನೆ. ಏಕೆಂದರೆ ನನ್ನ ವೈಯಕ್ತಿಕ ಅನುಭವಗಳು ಕೆಲವು ವೇಳೆ ಐತಿಹಾಸಿಕ ಘಟನೆಗಳಾಗಿವೆ; ಮತ್ತು ನಾನೇ ನನ್ನ ಸ್ವಂತ ಪರಿಮಿತಿಯಲ್ಲಿ ಅಂತಹ ಘಟನೆಗಳ ಮೇಲೆ ಪ್ರಭಾವ ಬೀರಲು ಕಾರಣನಾಗಿದ್ದೇನೆ. ಇತಿಹಾಸ ಸಹ ನಾನೂ ಅದರೊಂದಿಗೆ ಸ್ವಲ್ಪ ಮಟ್ಟಿಗೆ ಐಕ್ಯವಾಗಬಹುದಾದ ಒಂದು ಸಜೀವಕಾರ್ಯ ಎಂದು ಭಾವಿಸಲು ಕಷ್ಟವಾಗಿಲ್ಲ.


ನಾನು ಇತಿಹಾಸದ ಕಡೆ ತಿರುಗಿದುದು ಬಹುಕಾಲದಮೇಲೆ, ಅದೂ ಅಸಂಖ್ಯಾತ ಘಟನೆಗಳು ಇಸವಿಗಳನ್ನು ಓದಿ ಅವುಗಳಿಂದ ನನ್ನ ಜೀವನಗತಿಗೆ ಸಂಬಂಧವಿಲ್ಲದಂತೆ ನಿರ್ಧಾರಗಳನ್ನೂ ಊಹೆಗಳನ್ನು ಮಾಡುವ ಸರ್ವಸಾಮಾನ್ಯವಾದ ನೇರಮಾರ್ಗದಿಂದಲ್ಲ. ಪ್ರಕೃತಾತೀತ ವಿಷಯಗಳಲ್ಲಿ ಅಥವಾ ಮುಂದಿನ ಜನ್ಮದ ವಿಷಯಗಳಲ್ಲಿ ನನ್ನ ಆಸಕ್ತಿ ಇನ್ನೂ ವಿರಳ. ವಿಜ್ಞಾನ, ಇಂದಿನ ಸಮಸ್ಯೆಗಳು, ನಮ್ಮ ಪ್ರಸಕ್ತ ಜೀವನ, ಇವೇ ನನ್ನನ್ನು ಹೆಚ್ಚು ಆಕರ್ಷಿಸಿದವು.


ನನಗೆ ಅಸ್ಪಷ್ಟವಾದ ಭಾವನೆ, ಉದ್ವೇಗ, ಆಸಕ್ತಿಗಳ ಯಾವುದೋ ಒಂದು ಸಂಕೀರ್ಣ ಶಕ್ತಿ ನನ್ನನ್ನು ಹೇಗೋ ಕ್ರಿಯೆಗೆ ಕರೆದೊಯ್ದಿತು; ಆ ಕ್ರಿಯ ಪುನಃ ಭಾವನಾ ಪ್ರಪಂಚಕ್ಕೆ ಕಳುಹಿ ಪ್ರಸ್ತುತಕಾಲವನ್ನು ಅರಿಯುವಂತೆ ಮಾಡಿತು. ಪ್ರಸ್ತುತಕಾಲದ ಬೇರುಗಳು ಭೂತಕಾಲದಲ್ಲಿ. ಆದ್ದರಿಂದ ಪ್ರಸ್ತುತ ಕಾಲವನ್ನು ಅರ್ಥಮಾಡಿಕೊಳ್ಳಲು ಗತಕಾಲದಲ್ಲಿ ಏನಾದರೂ ಇದ್ದರೆ ಆ ಜಾಡು