ಪುಟ:ಭಾರತ ದರ್ಶನ.djvu/೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಬೇಡನ್ ವೀಲರ್: ಲಾಸೆನ್

೨೯

ಅಖಿಲ ಭಾರತ ರಾಷ್ಟ್ರ ಮಹಾಸಭೆಯ ಅಧ್ಯಕ್ಷತೆಗೆ ಎರಡನೆಯ ಬಾರಿ ನನ್ನನ್ನು ಆರಿಸಿದ್ದಾರೆ ಎಂಬ ಸುದ್ದಿ ಲಂಡನ್ನಿನಲ್ಲಿ ಇದ್ದಾಗಲೇ ಮುಟ್ಟಿತು. ಅನೇಕ ಸ್ನೇಹಿತರು ಮೊದಲೇ ಎಚ್ಚರಿಸಿದ್ದ ರಿಂದ ನಾನೂ ಅದನ್ನು ನಿರೀಕ್ಷಿಸಿದ್ದೆ. ಕಮಲಳ ಜೊತೆಗೆ ಚರ್ಚೆ ಸಹ ಮಾಡಿದ್ದೆ. ಈಗ ನನಗೊಂದು ಸಮಸ್ಯೆಯಾಯಿತು. ಈ ಸ್ಥಿತಿಯಲ್ಲಿ ಕಮಲಳನ್ನು ಬಿಟ್ಟು ಹೊರಡುವುದೆ ಅಥವ ಅಧ್ಯಕ್ಷ ಪದವಿಗೆ ರಾಜಿನಾಮೆ ಕೊಡುವುದೆ ? ರಾಜಿನಾಮೆ ಆಕೆಗೆ ಇಷ್ಟವಿರಲಿಲ್ಲ. ಆಕೆಯೂ ಸ್ವಲ್ಪ ಗುಣಹೊಂದಿದ್ದಳು. ಪುನಃ ಸ್ವಲ್ಪ ದಿವಸಗಳ ನಂತರ ಆಕೆಯ ಬಳಿ ಬರಬಹುದೆಂದು ಯೋಚಿಸಿದೆವು. ೧೯೩೬ನೆಯ ಇಸವಿಯ ಕೊನೆಯಲ್ಲಿ ಬೇಡನ್ ವೀಲರ್ ಬಿಟ್ಟು ಸ್ವಿಜರ್‌ಲೆಂಡಿನ ಲಾಸನ್ ಬಳಿ ಒಂದು ವಿಶ್ರಾಂತಿಮಂದಿರಕ್ಕೆ ಕಮಲಳನ್ನು ಕರೆದುಕೊಂಡು ಹೋದೆ.

೫. ಮೃತ್ಯು

ಕಮಲಳಿಗೂ ಮತ್ತು ನನಗೂ ಸ್ವಿಜರ್‌ಲೆಂಡ್ ಚೆನ್ನಾಗಿತ್ತು. ಆಕೆಗೆ ಹೆಚ್ಚು ಸಂತೋಷ ವಾಯಿತು. ಸ್ವಿಜರ್ ೦ಡಿನ ಈ ಪ್ರಾಂತ್ಯ ನನಗೆ ಸ್ವಲ್ಪ ಪರಿಚಯವಿದ್ದುದರಿಂದ ನನಗೂ ಸುಖವಾಗಿತ್ತು. ಆಕೆಯ ದೇಹ ಸ್ಥಿತಿಯಲ್ಲಿ ಯಾವ ಬದಲಾವಣೆಯೂ ಕಾಣಲಿಲ್ಲ; ಆದ್ದರಿಂದ ಯಾವ ಭಯವೂ ತೋರ ಲಿಲ್ಲ. ನಿದಾನವಾಗಿ ಚೇತರಿಸಿಕೊಳ್ಳುತ್ತ ಇನ್ನೂ ಕೆಲವು ಕಾಲ ಅದೇ ಸ್ಥಿತಿಯಲ್ಲಿರುವಂತೆ ತೋರಿತು.

ಈ ಮಧ್ಯೆ ಇಂಡಿಯಾದಿಂದ ಮೇಲಿಂದಮೇಲೆ ಕರೆ ಬರಲಾರಂಭಿಸಿತು. ಅಲ್ಲಿ ನನ್ನ ಸ್ನೇಹಿತರು ಹಿಂದಿರುಗಬೇಕೆಂದು ಒತ್ತಾಯಮಾಡುತ್ತಿದ್ದರು. ಸದಾ ನನ್ನ ದೇಶದ ಸಮಸ್ಯೆಗಳ ಆಲೋಚನೆ ಯಲ್ಲಿ ಮನಸ್ಸು ಕುದಿಯ ತೊಡಗಿತು. ಸೆರೆಮನೆಯ ವಾಸದಿಂದಲೋ ಇತರ ಕಾರಣಗಳಿಂದಲೋ ಸಾರ್ವಜನಿಕ ಪ್ರಶ್ನೆ ಗಳಲ್ಲಿ ಪ್ರತ್ಯಕ್ಷ ಭಾಗವಹಿಸಲು ನನಗೆ ಸಾಧ್ಯವಾಗಿರಲಿಲ್ಲ. ಮೂಗುದಾರ ಕಿತ್ತು ಹಾಕಿ ಮುನ್ನುಗ್ಗಲು ಹಾತೊರೆಯುತ್ತಿದ್ದೆ. ಪ್ಯಾರಿಸ್ ಮತ್ತು ಲಂಡನ್ ನಗರಗಳ ನನ್ನ ಭೇಟಿಯಿಂದ ಮತ್ತು ಇಂಡಿಯದಿಂದ ಬಂದ ವಾರ್ತೆಯಿಂದ ಪೊರೆ ಬಿಟ್ಟ ಹಾವಿನಂತೆ ಆಗಿದ್ದೆ. ಹಿಂದೇಟು ಹಾಕಲು ಸಾಧ್ಯವೇ ಇರಲಿಲ್ಲ.

ಕಮಲಳ ಸಂಗಡ ಚರ್ಚೆ ಮಾಡಿ ವೈದ್ಯರ ಸಲಹೆ ಪಡೆದೆ. ಇಂಡಿಯಾಕ್ಕೆ ಹಿಂದಿರುಗಬೇಕೆಂದು ಇಬ್ಬರೂ ಒಪ್ಪಿದರು. ಡಚ್ ಕೆ. ಎಲ್. ಎಮ್. ವಿಮಾನಮಾರ್ಗದ ಒಂದು ವಿಮಾನದಲ್ಲಿ ಸ್ಥಳ ಗೊತ್ತು ಮಾಡಿದೆ. ಫೆಬ್ರುವರಿ ೨೮ ನೆ ದಿನ ನಾನು ಲಾಸೆನ್ ನಿಂದ ಹೊರಡಬೇಕಾಗಿತ್ತು. ಇಷ್ಟೆಲ್ಲ ಆದಮೇಲೆ ನಾನು ಅವಳಿಂದ ಅಗಲಿ ಹೊರಡಲು ಕಮಲಳಿಗೆ ಮನಸ್ಸಿಲ್ಲವೆಂದು ಭಾಸವಾಯಿತು. ಆದರೂ ನನ್ನ ಕಾರ್ಯಕ್ರಮವನ್ನು ಬದಲಾಯಿಸಬೇಕೆಂದು ಆಕೆ ಹೇಳಲಿಲ್ಲ. ಇಂಡಿಯದಲ್ಲಿ ಬಹಳ ದಿನ ಇರುವುದಿಲ್ಲ. ಎರಡು ತಿಂಗಳಲ್ಲಿ ಹಿಂದಿರುಗುತ್ತೇನೆ ಎಂದು ಹೇಳಿದೆ. ಆಕೆಗೆ ಬೇಕೆಂದರೆ ಇನ್ನೂ ಮುಂಚೆಯೇ ಬರುತ್ತೇನೆ. ಕೇಬಲ್ ಕೊಟ್ಟರೆ ವಿಮಾನಮೂಲಕ ಒಂದು ವಾರದಲ್ಲಿ ಬರುತ್ತೇನೆ ಎಂದೆ.

ನಾನು ಹೊರಡಲು ನಾಲೈದು ದಿನಗಳು ಮಾತ್ರ ಇದ್ದವು. ಇಂದಿರ ಹತ್ತಿರದಲ್ಲೇ ಬೆಕ್ಸ್‌ನಲ್ಲಿನಲ್ಲಿ ಓದುತ್ತಿದ್ದಳು. ನನ್ನೊಟ್ಟಿಗೆ ಆ ಕೊನೆಯ ದಿನಗಳನ್ನು ಕಳೆಯಲು ಬರುವವಳಿದ್ದಳು. ವೈದ್ಯನು ಬಂದು ನನ್ನ ಪ್ರಯಾಣವನ್ನು ಒಂದುವಾರ ಅಥವಾ ಹತ್ತು ದಿವಸ ಮುಂದುವರಿಸಲು ಹೇಳಿದ. ಇನ್ನೇನೂ ಹೇಳಲಿಲ್ಲ. ಒಡನೆ ಒಪ್ಪಿ ಆ ಮುಂದಿನ ಕೆ. ಎಲ್. ಎಮ್. ವಿಮಾನದಲ್ಲಿ ಸ್ಥಳ ಇಡಲು ತಿಳಿಸಿದೆ.

ಈ ಕೊನೆಯ ದಿನಗಳು ಕಳೆಯುತ್ತ ಬಂದಂತೆ ಕಮಲಳಲ್ಲಿ ಒಂದು ಅತಿಸೂಕ್ಷ್ಮ ಅಸಾಧ್ಯ ವ್ಯತ್ಯಾಸ ಕಂಡಿತು. ನನಗೆ ತೋರುವಮಟ್ಟಿಗೆ ದೇಹಸ್ಥಿತಿ ಒಂದೇ ಸಮನಿತ್ತು. ಆದರೆ ಆಕೆಯ ಮನಸ್ಸು ಬಾಹ್ಯ ಪ್ರಪಂಚದಿಂದ ದೂರದೂರವಾಗುವಂತೆ ಕಾಣುತ್ತಲಿತ್ತು. ಯಾರೋ ತನ್ನನ್ನು ಕರೆಯುತ್ತಿದಾರೆ. ನಾನು ಯಾರನ್ನೂ ಕಾಣದಿದ್ದರೂ, ಯಾರೋ ಕೊಠಡಿಯೊಳಗೆ ಬಂದರು, ಯಾವುದೋ ಆಕೃತಿ ಕಾಣಿಸುತ್ತಿದೆ ಎಂದು ಹೇಳುತ್ತಿದ್ದಳು.