ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕಣ್ಣು, ಮಾನವನ

ವಿಕಿಸೋರ್ಸ್ದಿಂದ

ಕಣ್ಣು, ಮಾನವನ : ಬೆಳಕಿನಿಂದ ನೋಟವೆಂಬ ಇಂದ್ರಿಯದ ಅರಿವು ಹುಟ್ಟಿಸುವ ಹೊರಗಣ ಅಂಗವೇ ಕಣ್ಣು. ಪಂಚೇಂದ್ರಿಯಗಳಲ್ಲೊಂದು. ಸರ್ವಾಂಗಾಣಾಂ ನಯನಂ ಪ್ರಧಾನಂ. ಕಣ್ಣು ಜ್ಞಾನಜ್ಯೋತಿಯ ಬಾಗಿಲು. ನಾಯಕ, ನೇತಾರ ಎಂಬ ಪದಗಳು ನಯನ, ನೇತ್ರ ಎಂಬ ಪದಗಳಿಂದ ಹುಟ್ಟಿವೆ. ಈ ಲೇಖನದಲ್ಲಿ ಮಾನವನ ಕಣ್ಣನ್ನು ಕುರಿತ ವಿವೇಚನೆ ಇದೆ.

ಕಣ್ಣಿನ ರಚನೆ, ಕೆಲಸ[ಸಂಪಾದಿಸಿ]

ಮಾನವನೂ ಸೇರಿ ಎಲ್ಲ ಬೆನ್ನು ಮೂಳೆ ಪ್ರಾಣಿಗಳಲ್ಲಿ ಕಣ್ಣುಗುಡ್ಡೆ ಕತ್ತಲುಕೋಣೆ ಅಥವಾ ಕ್ಯಾಮರಾ ಮಾದರಿಯಲ್ಲಿದೆ. ಇದು ನಿಜವಾಗಿ 1" ವ್ಯಾಸದ ಗೋಳಕೋಶ. ಕಣ್ಣುಗುಡ್ಡೆ ಮುಂದಿರುವ ಕೋಡುಪೊರೆ (ಕಾರ್ನಿಯ) ಪಾರದರ್ಶಕ; ಬಿಳಿಗುಡ್ಡೆಯ ಗೋಡೆ ಬೆಳಕಿನ ಕಿರಣಗಳನ್ನು ತಡೆಯುತ್ತದೆ. ಪಾಪೆಯ ಹಿಂದೆ ಮಸೂರವಿದೆ. ಮಸೂರದ ಮುಂದಿರುವುದು ನೀರಿನ ದ್ರವರಸದ ಗೂಡು. ಇದು ಕೋಡುಪೊರೆಯ ಮೂಲಕ ಕಾಣಿಸುತ್ತದೆ. ಮಸೂರದ ಹಿಂದಿರುವುದು ಕಾಚೀದ್ರವ ಗೂಡು. ನೀರಿನ ದ್ರವರಸ ಗೂಡಿನಲ್ಲಿ ಕರಿಯಾಲಿಯ (ಐರಿಸ್) ಮುಂದಿರುವುದು ಮುಂದಣ ಗೂಡು. ಹಿಂದಿರುವುದು ಹಿಂದಣ ಗೂಡು.

ಈ ಎರಡು ಗೂಡುಗಳಲ್ಲೂ ದ್ರವರಸವಿದೆ. ಕಾಚೀದ್ರವ ರಸ ಗೂಡಿನಲ್ಲಿ ಕಾಚೀದ್ರವ ಇದೆ. ಇವೆರಡು ಗೂಡುಗಳ ನಡುವೆ ಮಸೂರವಿದೆ. ಇದನ್ನು ಹಲವು ನವಿರಾದ ಕೋಮ ಸ್ನಾಯು ತಂತುಗಳು (ಜಿನ್ನನ ಸ್ನಾಯು) ಎತ್ತಿ ಹಿಡಿದಿವೆ. ಈ ಸ್ನಾಯು ಮಸೂರದ ಸುತ್ತ ಉಂಗುರದಂತಿದ್ದು ಕಣ್ಣುಗುಡ್ಡೆಯ ಗೋಡೆಗೆ ಅಂಟಿಕೊಂಡಿದೆ. ಮಸೂರ ಪಾರದರ್ಶಕವಾಗಿ ಇಪ್ಪಕ್ಕಗಳಲ್ಲೂ ಉಬ್ಬಿದೆ. ರಿಫ್ರೇಕ್ಷಣಾಂಕ 1.4. ಈರುಳ್ಳಿಯ ಪದರಗಳಂತೆ ಇದರಲ್ಲಿ ಕೋಟ್ಯಂತರ ಜೀವಕಣಗಳ ಜೋಡಣೆಯಾಗಿದೆ. ಮಸೂರಕ್ಕೆ ದಿಂಬುಚೀಲದಂಥ ಹೊದಿಕೆಯಿದೆ. ಮಸೂರದ ನಡುಭಾಗ ಗಟ್ಟಿಯಾಗಿದೆ. ಅದಕ್ಕೆ ಹೆಚ್ಚು ರಿಫ್ರೇಕ್ಷಣ ಶಕ್ತಿ ಇದೆ. ಹೊರಭಾಗ ಮೆತ್ತಗಿರುವುದರಿಂದ ತುಸು ಸ್ನಾಯುಬಲದಿಂದಲೇ ಆಕಾರದಲ್ಲಿ ಬದಲಾಗಬಲ್ಲುದು. ಮಸೂರ ನುಣ್ಣಗಿದೆ.

ಕಣ್ಣಿನ ರಿಫ್ರೇಕ್ಷಣ ತಂತ್ರ[ಸಂಪಾದಿಸಿ]

ಕಣ್ಣನ್ನು ಚಿತ್ರ ತೆಗೆವ ಕ್ಯಾಮರಾದೊಡನೆ ಹೋಲಿಸಬಹುದು. ಕ್ಯಾಮರಾದ ಮಸೂರಕ್ಕೆ ಕೋಡು ಪೊರೆ, ಕಣ ಮಸೂರಗಳು ಸಮ. ಕಣ್ಣು ಗುಡ್ಡೆ ಗೋಡೆಯ ತೀರ ಒಳಪದರವಾದ ಕಣ್ಜಾಲದ ಹಿಂಭಾಗಕ್ಕೆ ಕ್ಯಾಮರ ತಟ್ಟೆ ಸಮ. ಆಚೆಯಿಂದ ತೂರಿಬರುವ ಬೆಳಕಿನ ಕಿರಣಗಳು ಕಣ್ಣು ಗುಡ್ಡೆಯಲ್ಲಿ ಕಿರಣಶಾಸ್ತ್ರನಿಯಮಗಳ ಪ್ರಕಾರ ಬಾಗುತ್ತವೆ. ಮೊದಲು ಕೋಡುಪುರೆಯನ್ನು ತುರುವಾಗ, ಅದು ಮುಂದಕ್ಕೆ ಉಬ್ಬಿರುವುದರಿಂದಲೂ ಅದರ ಸಾಂದ್ರತೆ ಗಾಳಿಯ ಸಾಂದ್ರತೆಗಿಂತ ಹೆಚ್ಚಿರುವುದರಿಂದಲೂ ಕಿರಣಗಳು ಸಂಗಮಿಸುವಂತೆ ಮಧ್ಯಕ್ಕೆ ಬಾಗುತ್ತವೆ. ಕೋಡುಪೊರೆಯ ರಿಫ್ರೇಕ್ಷಣಾಂಕ 1.3. ಜಲಚರಗಳಲ್ಲಿ ನೀರಿನ ಮತ್ತು ಕೋಡುಪೊರೆಯ ಸಾಂದ್ರತೆಗಳು ಹೆಚ್ಚು ಕಡಿಮೆ ಸಮವಾಗಿರುವುದರಿಂದ ಕಿರಣಗಳು ಮಸೂರದಲ್ಲಿ ಮಾತ್ರ ಹೆಚ್ಚು ಬಾಗುತ್ತವೆ. ನೀರಿನ ದ್ರವರಸ ಮತ್ತು ಕಾಚೀದ್ರವ ರಸಗಳ ಸಾಂದ್ರತೆಗಳಲ್ಲಿ ವ್ಯತ್ಯಾಸ ಹೆಚ್ಚಿಲ್ಲದ್ದರಿಂದ ಕಿರಣಗಳು ಬಾಗುವುದಿಲ್ಲ. ಹೀಗೆ ಸಂಗಮಿಸುವ ಕಿರಣಗಳು ಕಣ್ಣುಗುಡ್ಡೆಯ ಹಿಂಭಾಗದಲ್ಲಿ ಕಣ್ಜಾಲದ ಮೇಲೆ ಬಿದ್ದು ಸಣ್ಣ, ನಿಜ ಬಿಂಬ ತಲೆಕೆಳಗಾಗಿ ಬೀಳುತ್ತದೆ. ಕ್ಯಾಮರಾದಲ್ಲಿ ಈ ಬಗೆಯ ಬಿಂಬವನ್ನು ಚೆನ್ನಾಗಿ ನೋಡಬಹುದು. ಮೆದುಳಿನ ಅಂಕೆಯಲ್ಲಿ ಉಂಗುರದಂತೆ ಮಸೂರದ ಸುತ್ತ ಇರುವ ಬಾಸೆಯ (ಸಿಲಿಯರಿ) ಸ್ನಾಯು ಕುಗ್ಗುವುದರಿಂದ ಮಸೂರವನ್ನು ಹಿಡಿದಿರುವ ತಂತುಗಳು ಸಡಿಲವಾಗಿ ಮಸೂರ ಉಬ್ಬಿ ಹತ್ತಿರದ ವಸ್ತುಗಳು ಚೆನ್ನಾಗಿ ಕಾಣುತ್ತವೆ. ಆ ಸ್ನಾಯು ಹಿಗ್ಗುವುದರಿಂದ ಮಸೂರ ತೆಳುವಾಗಿ ದೂರದ ವಸ್ತುಗಳು ಚೆನ್ನಾಗಿ ಕಾಣುತ್ತವೆ. ಹತ್ತಿರ, ದೂರದ ನೋಟಗಳನ್ನು ಸರಿಹೊಂದಿಸುವ ಏರ್ಪಾಟು ಇದೇ.

ಕಣ್ಣು ಗುಡ್ಡೆಯ ಗೋಡೆ[ಸಂಪಾದಿಸಿ]

ಇದರಲ್ಲಿ ಮೂರು ಪದರಗಳಿವೆ. ಹೊರಗಡೆ ನಾರಿನಂತೆ ಗಡುಸಾಗಿರುವುದು ಬಿಳಿಪದರ (ಸ್ಟೀರ). ಇದರ ಹಿಂದಿನ 2/3 ಭಾಗ ಪಾರದರ್ಶಕವಲ್ಲದ ಬಿಳಿಗುಡ್ಡೆ, ಮುಂದಿನ 1/3 ಭಾಗ ಪಾರದರ್ಶಕವಾದ ಕೋಡುಪೊರೆ. ಕೋಡು ಪೊರೆ ಇನ್ನಷ್ಟು ಉಬ್ಬಿದೆ. ಇದರಮೂಲಕ ಒಳಗಿರುವ ಕರಿಯಾಲಿ ಮುಂತಾದ ಭಾಗಗಳು ಕಾಣುತ್ತವೆ. ಹೊರಪದರದ ದಪ್ಪ ಎಲ್ಲೆಡೆಗಳಲ್ಲೂ ಸಮವಾಗಿಲ್ಲ. ನಡುವಣ ಪದರ ಕರಿದ್ರಾಕ್ಷಿಯ ಸಿಪ್ಪೆಯಂತಿದೆ. ಕಾಚೀದ್ರವ ದ್ರಾಕ್ಷಿಯ ಒಳ ಭಾಗದಂತಿದೆ. ಇದರ ಹೆಚ್ಚಿನ ಹಿಂಭಾಗ ತೆಳುವಾಗಿ ಹಲವು ಸಣ್ಣ ರಕ್ತನಾಳಗಳ ಜಾಲದಿಂದಾಗಿರುವ ಕಣ್ಜರಾಯು (ಕೊರಾಯ್ಡ್‌) ಪದರ. ಇದರಲ್ಲಿ ಕಪ್ಪು ಬಣ್ಣದ ಜೀವ ಕಣಗಳಿವೆ. ಕರ್ರಗಿರುವುದರಿಂದ ಬೇಡದ ಬೆಳಕಿನ ಕಿರಣಗಳು ಹಿಂದಕ್ಕೆ ಪುಟಿಸುವುದರಿಂದ ಕಣ್ಣು ಮಂಜಾಗುವುದು ತಪ್ಪುತ್ತದೆ. ರಕ್ತನಾಳಗಳು ಕಣ್ಜಾಲದ ಕಿರಣ ಗ್ರಾಹಿ ಕಣಗಳಿಗೆ ಪುಷ್ಟಿಯನ್ನು ನೀಡುತ್ತವೆ. ಇದೇ ಪದರ ಮುಂದೆ ಮಂದವಾಗಿ ಬಾಸೆಯ ದಿಂಡು (ಸಿಲಿಯರಿ ಬಾಡಿ) ಆಗಿದೆ. ಸಸ್ತನಿಗಳಲ್ಲಿ ಇದರ ಮೇಲೆ ಚಿತ್ರದ ಸೂರ್ಯನ ಕಿರಣಗಳಂತಿರುವ ದಿಬ್ಬಗಳಿವೆ. ಇದರಲ್ಲಿ ರಕ್ತನಾಳಗಳೂ ಅನೈಚ್ಛಿಕ ಸ್ನಾಯವೂ ಇವೆ. ಇದರ ಒಳಮೈಮೇಲೆ ಅಂಟಿರುವ ಒಳಪದರದ ತೆಳುಭಾಗದಿಂದ ನೀರಿನ ದ್ರವ ಒಸರುತ್ತದೆ. ಸ್ನಾಯುತಂತುಗಳಲ್ಲಿ ಅರ್ಧದಷ್ಟು ರೇಖಾಂಶಗಳಲ್ಲಿವೆ. ಮಿಕ್ಕವು ಅಕ್ಷಾಂಶಗಳಲ್ಲಿ ಗುಂಡಗೆ ಉಂಗುರದಂತಿವೆ. ಇವು ಕುಗ್ಗಿದಾಗ ಮಸೂರ ಸ್ನಾಯು ಸಡಿಲ ಬಿದ್ದು ಮಸೂರ ಉಬ್ಬುತ್ತದೆ.

ನಡುವಣ ಪದರದ ಮೂಂಭಾಗವೇ ಕರಿಯಾಲಿ (ಐರಿಸ್). ಇದರ ನಡುವಣ ಕಂಡಿಯೇ ಪಾಪೆ (ಪ್ಯುಪಿಲ್). ಇದರ ಬಣ್ಣ ಕೋಡು ಪೊರೆಯ ಮೂಲಕ ಹೊರ ಕಾಣುತ್ತದೆ. ಕಾಚೀದ್ರವರಸ ಗೂಡು ಕತ್ತಲಾಗಿರುವುದರಿಂದ ಪಾಪೆ ಎಲ್ಲರಲ್ಲೂ ಕರ್ರಗೆ ಕಾಣುತ್ತದೆ. ಭಾರತೀಯರಲ್ಲಿ ಸಾಮಾನ್ಯವಾಗಿ ಕರಯಾಲಿ ಕಂದೊ ಕಪ್ಪೊ ಬಣ್ಣಕ್ಕಿರುವುದು. ಬಿಳಿಯರಲ್ಲಿ ಕಂದು, ನೀಲಿ ಇಲ್ಲವೇ ಹಸುರಾಗಿರುವುದು. ಪಾಪೆಯ ಅಂಚಿನಲ್ಲಿರುವ ಗುಂಡು ಸ್ನಾಯು ಕುಗ್ಗಿದಾಗ ಪಾಪೆ ಹೆಚ್ಚು ಬೆಳಕಿನಲ್ಲಿ ಕಿರಿದಾಗುತ್ತದೆ. ಆರೆಕಡ್ಡಿಗಳಂತಿರುವ ಸ್ನಾಯುತಂತುಗಳು ಕುಗ್ಗುವುದರಿಂದ ಪಾಪೆ ಮಂದ ಬೆಳಕಿನಲ್ಲಿ ಹಿರಿದಾಗುತ್ತದೆ. ಕಣ್ಣುಚಾಲಕ (ಅಕ್ಯುಲೋಮೊಬಾರ್ನರ್ಟ್‌) ಎಂಬ ತಲೆಯ ನರ 3ನೆಯ ಗುಂಡುಸ್ನಾಯುವನ್ನು ನಿಯಂತ್ರಿಸುತ್ತದೆ. ಹಿರಿದಾಗಿಸುವ ಸ್ನಾಯು ಕತ್ತಿನ (ಅನುವೇದನಾ) ನರಗಳ ಹತೋಟಿಯಲ್ಲಿದೆ. ಹೆಚ್ಚು ಬೆಳಕಿನಲ್ಲಿ ಪಾಪೆ ಕಿರಿದಾಗುವುದರಿಂದ ಕಣ್ಜಾಲಕ್ಕೆ ಹೆಚ್ಚ್ಚು ಬೆಳಕಿನಿಂದಾಗಬಹುದಾದ ಹಾನಿ ತಪ್ಪುತ್ತದೆ. ಕರಿಯಾಲಿ ಕ್ಯಾಮರಾದಲ್ಲಿ ಮುಚ್ಚಿ ತೆಗೆವ ಕಂಡಿ ಇದ್ದಂತಿದೆ. ಬೇಕೆಂದಾಗ ನಾವು ಪಾಪೆಯನ್ನು ಚಿಕ್ಕದಾಗಿ ಅಥವಾ ದೊಡ್ಡದಾಗಿ ಮಾಡಲಾರೆವು. ಅನೈಚ್ಛಿಕ ಕೇಂದ್ರಗಳು ಮೆದುಳು, ಬೆನ್ನುಹುರಿಗಳಲ್ಲಿವೆ. ಒಳಪದರವೇ ನರಪಟಲ ಅಥವ ಕಣ್ಜಾಲ (ರೆಟೀನ). ಜಾಲದಂತಿರುವುದರಿಂದ ಈ ಹೆಸರು ಬಂದಿದೆ. ಇದು ಕಾಚೀದ್ರವರಸದ ಗೂಡಿನ ಗೋಡೆಯ ಬಹುಭಾಗದಲ್ಲಿದೆ. ಇದರ ಮುಂದಿನ ಅಂಚು ಗರಗಸದಂತಿದೆ. ಈ ಅಂಚಿನ ಹಿಂದಿರುವುದೇ ನೋಟಕ್ಕೆ ಕಾರಣವಾಗುವ ಭಾಗ-ಕಣ್ಜಾಲ. ಇದಕ್ಕೆ ಮುಂದಿನದು ತೆಳುವಾಗಿ ಕರಿಬಣ್ಣದ ಜೀವಕಣಗಳಿಂದಾಗಿ ಬಾಸೆಯ ದಿಂಡನ್ನೂ ಕರಿಯಾಲಿಯ ಹಿಂಭಾಗವನ್ನೂ ಪಾಪೆಯ ವರೆಗೂ ಮುಚ್ಚಿದೆ. ಕಣ್ಜಾಲ ಬಹು ಕೋಮಲವಾದುದು. ಇದರಲ್ಲಿ ಕಣ್ಣುನರದ ತಂತುಗಳ ಜಾಲವೂ ಹೇರಳವಾಗಿ ಸಣ್ಣ ರಕ್ತನಾಳಗಳೂ ಇವೆ. ಇವು ಕೇಂದ್ರ ಕಣ್ಜಾಲ ರಕ್ತನಾಳದ ಕವಲುಗಳು. ಇವಕ್ಕೂ ಕಣ್ಣುಗುಡ್ಡೆಯ ಇತರ ರಕ್ತನಾಳಗಳಿಗೂ ಸಂಬಂಧವಿಲ್ಲ. ಪಾಪೆಯ ಮೂಲಕ ಬೆಳಕು ಬಿಟ್ಟು, ಕಣ್ಣು ದರ್ಶಕದಿಂದ (ರೆಟಿನಾಸ್ಕೋಪ್) ಕಣ್ಣೊಳಗೆ ನೋಡಿದರೆ ಒಳ ಮತ್ತು ನಡುಪದರಗಳ ರಕ್ತನಾಳ ಜಾಲಗಳಿಂದ ಕಣ್ಜಾಲ ಕೆಂಪಗೆ ಕಾಣುತ್ತದೆ. ಹೊಸದಾಗಿ ಕೊಯ್ದು ಹೊರತೆಗೆದ ಕಣ್ಜಾಲ ಪಾರದರ್ಶಕವಾಗಿದ್ದು ಸ್ವಲ್ಪ ಕಾಲದಲ್ಲೆ ಮಂಜುಮಂಜಾಗುತ್ತದೆ.

ಕಣ್ಜಾಲದ ಪದರಗಳು[ಸಂಪಾದಿಸಿ]

ಬೆಳಕಿನ ಕಿರಣಗಳ ಭೌತಿಕ ಚೋದನೆಯಿಂದ ನೋಟದ ಅರಿವಿನ ಆರಂಭ ಕಣ್ಜಾಲದಲ್ಲಾಗುವುದು. ಕಣ್ಣಿನಲ್ಲಿ ನೋಟದ ಪ್ರಧಾನಾಂಗ ಇದೇ. ಕಣ್ಣುಗುಡ್ಡೆಯ ಇತರ ಭಾಗಗಳು ಇರುವುದು ಕಣ್ಜಾಲದ ಆಧಾರ, ಪುಷ್ಟಿಗಳಿಗೆ, ಕಿರಣಗಳನ್ನು ಬಾಗಿಸುವುದಕ್ಕೆ ಮಾತ್ರ. ಕಣ್ಜಾಲ ಮಿದುಳಿನ ಭಾಗವೆಂದು ಪಿಂಡ ವಿಕಾಸದ ತಿಳಿವಳಿಕೆಯಿಂದ ಗೊತ್ತಾಗುತ್ತದೆ. ಸೂಕ್ಷ್ಮ ರಚನೆಯಲ್ಲಿ ಇದಕ್ಕೆ ಕೇಂದ್ರದ ಮತ್ತು ಸುತ್ತಂಚಿನ (ಪೆರಿಫೆರಲ್) ನರಮಂಡಲಗಳ ಲಕ್ಷಣಗಳಿವೆ. ವಿಜ್ಞಾನಿಗಳು ಒಪ್ಪಿದಂತೆ ಕಣ್ಜಾಲದ ಸೂಕ್ಷ್ಮರಚನೆಯಲ್ಲಿ ಹತ್ತು ಪದರಗಳನ್ನು ಗುರುತಿಸಬಹುದು. 1 ಕಣ್ಜಾಲದ ಹೊರಪದರ ಕಣ್ಜರಾಯುವಿಗೆ ಅಂಟಿಕೊಂಡು ಕಾಚೀದ್ರವ ರಸ ತಾಕದಿರುವ ಕಡೆಯ ಒಂದು ಬಣ್ಣಕವಿರುವ ಜೀವ ಕಣ ಪೊರೆ. ಇದು ಪಿಂಡದಲ್ಲಿ ಮೆದುಳಿನಿಂದ ಹೊರಟುಕೊಳ್ಳುವ ಕಣ್ಣಿನ ಬುಡ್ಡೆ. ಎರಡು ಪದರಗಳ ಬಟ್ಟಲಾದ ಮೇಲೆ ಹೂರಪದರದಿಂದಾದುದು. 2 ಸಲಾಕಿ (ರಾಡ್) ಶಂಕುಗಳ (ಕೋನ್ಸ್‌) ಪದರ, ಕೋಲುಗಳು ಕೋಲುಕಣಗಳ ಆಚೆಯ ಭಾಗಗಳು. ಶಂಕುಗಳು ಶಂಕುಕಣಗಳ ಆಚೆಯ ಭಾಗಗಳು. ಬೆಳಕಿನ ಕಿರಣ ಕ್ಕೀಡಾಗುವುವು ಇವೇ. ಇವುಗಳಲ್ಲೇ ನೋಟಗೆಲಸ ಮೊದಲಾಗುವುದು. 3 ಹೊರೆಲ್ಲೆ ಪೊರೆ. ಇದು ಮುಲ್ಲರ್ ಆಧಾರ ತಂತುಗಳ ಮೇಲಿನ ಕೊನೆಗಳು ಒಂದುಗೂಡುವುದರಿಂದಾದುದು. 4. ಹೊರನಡುಬೀಜ (ನ್ಯೂಕ್ಲಿಯಾರ್). ಇದರಲ್ಲಿ ಸಲಾಕಿ ಶಂಕುಕಣಗಳ ನಡುಬೀಜಗಳಿವೆ. 5 ಹೊರಜಾಲಪದರ. ಇದು ಸಲಾಕಿ ಶಂಕುಕಣಗಳ ಮತ್ತು 6ನೆಯ ಪದರದ ಜೀವಕಣಗಳ ಹೊರಪಾದ ಗಳಿಂದಾದುದು. 6 ಒಳನಡುಬೀಜ ಪದರ. ಇದರಲ್ಲಿ ಇಗ್ಗಣೆ (ಬೈಪೋಲಾರ್) ಕಣಗಳ ನಡುಬೀಜಗಳು ಚುಕ್ಕಿಗಳಂತೆ ಕಾಣುತ್ತವೆ. 7 ಒಳಜಾಲ ಪದರ. ಇದರಲ್ಲಿ ಇಗ್ಗಣೆ ಕಣಗಳ ಒಳಪಾದಗಳೂ ನರಗಂಟು (ಗಾಂಗ್ಲಿಯಾನ್) ಕಣಗಳ ಹೊರಪಾದಗಳೂ ಕೂಡಿವೆ. 8 ನರಗಂಟು ನರಕಣಗಳ ಪದರ. 9 ಕಣ್ಣಿನ ನರತಂತುಗಳ ಪದರ-ಇದು ನರಗಂಟು ಕಣಗಳ ತಂತುಗಳಿಂದಾದುದು. 10 ಒಳಎಲ್ಲೆ ಪೊರೆ. ಇದು ಮುಲ್ಲರ್ ತಂತುಗಳ ಒಳಕೊನೆಗಳಿಂದಾದುದು. ಕಣ್ಜಾಲದ ನರಕಣಗಳು : 1 ಕಿರಣಗ್ರಾಹಿಗಳು ಸಲಾಕಿ ಶಂಕುಕಣಗಳು, 2. ಬೆಳಕು ಪಡೆಕಗಳು (ಪೋಟೊರಿಸೆಸ್ಟಾರ್ಸ್) ನಾಲ್ಕು ಐದು ಬಗೆಗಳ ಇಗ್ಗಣೆ ಕಣಗಳು ಮತ್ತು ಐದು ಆರು ಬಗೆಯ ನರಗಂಟು ಕಣಗಳು. ಇವು ಆವೇಗಗಳನ್ನು ಮೆದುಳಿಗೆ ತಲಪಿಸುತ್ತವೆ. 3 ಜೋಡಿಕಗಳು ಅಡ್ಡನರಕಣಗಳು ಮತ್ತು ತಂತುರಹಿತ (ಅಮೆಕ್ರೈನ್) ಕಣಗಳು. ಇವು ಬೆಳಕನ್ನು ಹಿಡಿವಾಗ ಕಣ್ಜಾಲದಲ್ಲಿ ಸಾಮರಸ್ಯ ತರುವುವು. ನರಕಸೆಗಳು, ಕಣ್ಜಾಲಗಳ ನರಕಣಗಳ ದಿಸೆಗೆಲಸ, ಕಣ್ಜಾಲದ ನಿಜಗೆಲಸಗಳಿಗೆ ಮುಖ್ಯವಾದ ಜಟಿಲವಾದ ವ್ಯೂಹದಲ್ಲಿ ಬಗೆಬಗೆಯ ನರಕಣಗಳು ಜೋಡಣೆಯಾಗಿವೆ. ಒಂದೊಂದು ನರಕಣವೂ ಇತರ ಕಣಗಳೊಡನೆ ತಾಕಿಕೊಂಡು ಕೆಲಸ ಮಾಡುತ್ತದೆ. ತಂತುಗಳ ಕೊನೆಯ ಶಾಖೆಗಳ ಕೊನೆಗಳು ಗಂಟು ಕಟ್ಟಿವೆ. ಈ ಗಂಟುಕೊನೆಗಳು ನರಕಣಗಳ ನಡುಭಾಗಗಳೊಡನೆ ಅಥವಾ ಅವುಗಳ ಚಾಚುಗಳೊಡನೆ ಅಂಟಿವೆ. ಈ ಸಂಧಿಗಳೇ ನರಕಸೆಗಳು (ಸೈನಾಪ್ಸಸ್). ಆವೇಗಗಳು ಒಂದೇ ಕಡೆಗೆ ಹೋಗುವವನ್ನು ಸರಾಗವಾಗಿ ಬಿಡುತ್ತ ಎದುರಾಗಿ ಬರುವವನ್ನು ತಡೆಯುತ್ತವೆ. ಇದೇ ದಿಸೆಗೆಲಸದ ವ್ಯವಸ್ಥೆ. ಇದರಿಂದ ಆವೇಗಗಳು ಎಲ್ಲ ದಿಕ್ಕುಗಳಲ್ಲಿ ಕಕ್ಕಾಬಿಕ್ಕಿಯಾಗುವುದು ತಪ್ಪುತ್ತದೆ. ನರಕಣದ ಶಾಖೆಗಳು ಇತರ ಕರಣಗಳಿಂದ ಬರುವ ಸಮಾಚಾರಗಳನ್ನು ಹಿಡಿಯುತ್ತವೆ. ನರಕಣದ ತಂತು ಉದ್ದವಿದ್ದು ಇದರ ಶಾಖೆಗಳ ಮೂಲಕ ಸಮಾಚಾರಗಳು ಇತರ ನರಕಣಗಳನ್ನು ಸೇರುತ್ತವೆ. ಹೇಗೂ ಅವು ಹಿಂದಕ್ಕೆ ಹೋಗುವಂತಿಲ್ಲ.

ಕಣ್ಜಾಲ ನರಕಣಗಳ ನರಕಸೆ ಬಂಧನಗಳು[ಸಂಪಾದಿಸಿ]

(ಅ) ಶಂಕು ಕಣಗಳ ಒಳಕೊನೆಗಳಿಗೂ ಇಗ್ಗಣೆ ಕಣಗಳ ಹೊರಕೊನೆಗಳಿಗೂ ಬಂಧನಗಳಿವೆ. (ಆ) ಸಲಾಕಿ ಕಣಗಳ ಒಳಗಂಟು ಕೊನೆಗಳಿಗೂ ಇಗ್ಗಣೆಗಳ ಹೊರಕೊನೆಗಳಿಗೂ ಬಂಧನಗಳಿವೆ. ಶಂಕು ಕಣಗಳ ಇಗ್ಗಣೆಗಳೂ ಸಲಾಕಿ ಕಣಗಳ ಇಗ್ಗಣೆಗಳೂ ಬೇರೆ ಬೇರೆ (ಇ) ಅಡ್ಡಕಣಗಳ ಶಾಖೆಗಳು ಶಂಕು ಕಣಗಳಿಗೆ ಮಾತ್ರ ಗಂಟುಬಿದ್ದಿವೆ, ಸಲಾಕಿ ಕಣಗಳಿಲ್ಲ. ಆದರೆ ಅಡ್ಡಕಣಗಳ ನರತಂತುಗಳು ಸಲಾಕಿ ಮತ್ತು ಶಂಕು ಕಣಗಳ ಒಳಕೊನೆಗಳಿಗೆ ಕೂಡಿಕೊಂಡಿವೆ. (ಈ) ಇಗ್ಗಣೆಗಳ ಒಳಕೊನೆಗಳಿಗೂ ನರಗಂಟು ಕಣಗಳ ಕವಲುಗಳಿಗೂ ಬಂಧನಗಳಿವೆ. ಕಣ್ಜಾಲದ ನಡುವೆ ಈ ನರಕಸೆ ಬಂಧನಗಳು ನಿರ್ದಿಷ್ಟವಾಗಿವೆ. ಆದರೆ ಸುತ್ತಲಿನ ಪ್ರದೇಶದಲ್ಲಿ ನರಕಸೆ ಬಂಧನಗಳು ಅನಿರ್ದಿಷ್ಟವಾಗಿರುವುದರಿಂದ ಈ ಭಾಗಗಳಲ್ಲಿ ನೋಟದ ಚುರುಕು ಕಡಿಮೆ.

ಕಣ್ಜಾಲದ ರಚನೆಗೂ ಅದರ ಕೆಲಸಗಳಿಗೂ ಇರುವ ಹೊಂದಾಣಿಕೆ ಲೆಕ್ಕವಿಲ್ಲದಷ್ಟು ನರಕಸೆಗಳಿಂದ, ಬೆಳಕುಪಡೆಕಗಳಿಂದ ಹೊರಟ ಆವೇಗ ದಾರಿಗಳಲ್ಲಿ ಹೋಗುವುದರಿಂದ ಹಲವು ರೀತಿಗಳಲ್ಲಿ ಆವೇಗ ಮಾರ್ಪಡುತ್ತದೆ. ಆಚೆಯಿಂದ ಬರುವ ಕಿರಣಗಳು ನಿರ್ಸಗನಿಯಮಗಳ ಪ್ರಕಾರ ಕೋಡು ಪೊರೆ ಮಸೂರಗಳಲ್ಲಿ ಬಾಗಿ ಕಾಚೀದ್ರವ ರಸ, ಕಣ್ಜಾಲಗಳನ್ನು ತೂರುತ್ತವೆ. ಇವುಗಳಿಂದ ಕಣ್ಜಾಲದ ಒಳಪದರಗಳ ಮೇಲೆ ಪರಿಣಾಮವಿಲ್ಲ. ಆಚೆಪದರದಲ್ಲಿ ಬೆಳಕುಪಡೆಕಗಳಾಗಿರುವ ಶಂಕು ಸಲಾಕಿ ಕಣಗಳನ್ನು ತಲಪಿದಾಗ ರಾಸಾಯನಿಕ ಕೆಲಸದಿಂದ ಆವೇಗಗಳು ಹುಟ್ಟುತ್ತವೆ. ಸಲಾಕಿಗಳಲ್ಲಿ ಕಿರಣಕ್ಕೀಡಾಗುವ ವಸ್ತುವಾದ ನೋಟಕೆನ್ನೀಲಿ (ರೊಡಾಪ್ಸಿನ್) ಇದೆ. ಬೆಳಕಿನಲ್ಲಿ ಈ ರಂಗು ಬಿಳಿಚಿಕೊಳ್ಳುತ್ತದೆ; ಕತ್ತಲಲ್ಲಿ ಊದಾ ಆಗುತ್ತದೆ. ಇದೇ ರೀತಿಯಲ್ಲಿ ಶಂಕುಗಳಲ್ಲೂ ಇಂಥದೇ ಆದರೆ ಬಣ್ಣವಿಲ್ಲದ, ರಾಸಾಯನಿಕವಿದೆಯೆಂದು ತಿಳಿಯಲಾಗಿದೆ. ಆದರೆ ಏಳು ಬಣ್ಣಗಳಲ್ಲಿರುವ ಕೆಲವು ಅಲೆಗಳಿಗೆ ಹೆಚ್ಚು ಸೂಕ್ಷ್ಮವಾಗಿದೆ. ಸಲಾಕಿಗಳ ಕೆಲಸ ಮುಖ್ಯವಾಗಿರುವುದು ಮಸಕು ಬೆಳಕಿನಲ್ಲಿ ಎಂದು ನಂಬಲಾಗಿದೆ. ಆದರೆ ಇವು ಬಣ್ಣಗಳನ್ನು ಗುರ್ತಿಸಲಾರವು. ಶಂಕುಗಳು ಸಾಕಷ್ಟು ಬೆಳಗುವ ಬೆಳಕಿನಲ್ಲೇ ಕೆಲಸ ಮಾಡುವುದು ; ಅವು ಬಣ್ಣಗಳನ್ನೂ ವಸ್ತುಗಳ ಸಣ್ಣ ವಿವರಗಳನ್ನೂ ಗುರುತಿಸಬಲ್ಲುವು. ಇದು ಹಗಲುನೋಟ. ಗೂಗೆಗಳಲ್ಲಿ ಶಂಕುಗಳಿಲ್ಲದೆ ಬರೀ ಸಲಾಕಿಗಳಿರುವುದರಿಂದ ಅವಕ್ಕಿ ಹಗಲುನೋಟವಿಲ್ಲ ; ಹೀಗೆ ಇತರ ನಿಶಾಚರಿಗಳ ಕಣ್ಣುಗಳಲ್ಲೂ ಶಂಕುಗಳಿಲ್ಲ. ಈ ವಿಷಯವಾಗಿ ಮಾನವ ದೃಷ್ಟಿಯಲ್ಲಿ ಎರಡು ಅಂಗಗಳಿವೆ ಎಂದು ಹೇಳಬಹುದು. ಒಂದು ಹಗಲುನೋಟಕ್ಕೆ, ಇನ್ನೊಂದು ರಾತ್ರಿನೋಟಕ್ಕೆ, ನೋಟಕೆನ್ನೀಲಿಗೂ ಎ ಜೀವಾತಿಗೂ ಸಂಬಂಧವಿದೆ. ಎ ಜೀವಾತು ಕೊರತೆಯಿಂದ ರಾತ್ರಿಕುರುಡು ಆಗುತ್ತದೆ.

ಕಣ್ಜಾಲದ ರಚನೆ ಬಣ್ಣನೋಟ[ಸಂಪಾದಿಸಿ]

ಬಣ್ಣನೊಟಕ್ಕೆ ಬೇಕಾದುವು ರಾಸಾಯನಿಕ ಅಂಶಗಳೋ ರಚನಾಂಶಗಳೋ ಎಂಬುದನ್ನು ಹಲವು ರೀತಿ ತರ್ಕಿಸಲಾಗಿದೆ. ಥಾಮಸ್ ಯಂಗ್, ಆಮೇಲೆ ಹರ್ಮನ್ ಫಾನ್ ಹೆಲ್ಮ್‌ ಹೋಲ್ಜ್‌ ಮತ್ತಿತರರು ಮೂರು ರಚನಾಂಶಗಳು (ಮೂರು ಬಗೆಯ ಶಂಕುಗಳು, ನರತಂತುಗಳು) ಇತರ ಬಣ್ಣಗಳಿಗೆ ಈಡಾಗುವಂತಿದ್ದರೂ ಕಾಮನ ಬಿಲ್ಲಿನ ಕೆಂಪು, ಹಸುರು, ನೀಲಿಗಳಿಗೆ ಮಾತ್ರ ನೀಲಿ ಸುಲಭವಾಗಿ ಈಡಾಗುವುವು ಎಂದು ಊಹಿಸಿದರು. ಇದೇ ಬಣ್ಣನೋಟದ ಮೂರ್ಬಣ್ಣ ಸಿದ್ಧಾಂತ. ಕೆಂಪು ಮತ್ತು ಹಸುರು ಅಥವಾ ಹಸುರು ಮತ್ತು ಅಥವಾ ಸರಸ್ವತಿ ಬಣ್ಣದ ಎರಡು ನರತಂತುಗಳ ಚೋದನೆಯಾದರೆ ನಡು ಬಣ್ಣನೋಟ ಅಂದರೆ ಹಳದಿ ಅಥವಾ ನೀಲಿ ಹಸುರು ಕಾಣುತ್ತದೆ. ಮೂರುಬಗೆಯ ನರತಂತುಗಳ ಚೋದನೆಯಾದರೆ ಬಿಳಿಯ ಬಣ್ಣ ಕಾಣುತ್ತದೆ. ಎವಾಲ್ಡ್‌ ಹೆರಿಂಗ್ ಮೂರು ಎದುರೆದುರು ಜೋಡಿಗಳು ಕೆಂಪು ಹಸುರು, ಹಳದಿ ನೀಲಿ, ಮತ್ತು ಸರಸ್ವತಿ ಕಪ್ಪು ಬಿಳುಪು ಇವೆಯೆಂದು ನಂಬಿದ (ಎದುರೆದುರು ಬಣ್ಣಗಳ ಸಿದ್ಧಾಂತ).

ಇಂದಿನ ವಿದ್ಯುದಂಗಕ್ರಿಯಾವಿಜ್ಞಾನದ ಪ್ರಕಾರ ಬದುಕಿರುವ ಕಣ್ಜಾಲದಲ್ಲಿ ರಚನೆಯೂ ನಿಜಗೆಲಸವೂ ಹೆಚ್ಚು ತೊಡಕಾಗಿರುವುದು ತೋರುತ್ತದೆ. ಗ್ರಾನಿಟನ ಮೇಲುಗೈಯಾದ ಶಾಮಕ ಸಿದ್ಧಾಂತದ ಪ್ರಕಾರ ಕಣ್ಜಾಲದ ವೇದನ ತಂತ್ರದಲ್ಲಿ ಎರಡು ಮೂಲವಿಧಗಳಿವೆ. ಮೊದಲ ವರ್ಗ ಮೇಲುಗೈಯವು ಒಂದು ಹಗಲು ನೋಟಕ್ಕೆ ಮತ್ತೊಂದು ರಾತ್ರಿನೋಟಕ್ಕೆ ಏಳು ಬಣ್ಣಗಳಿಗೂ ಅನ್ವಯಿಸುತ್ತವೆ. ಮಂದ ಬೆಳಕಿನ ಹೊಳಪುಗಳಿಗೂ ಅನ್ವಯಿಸುತ್ತವೆ. ಶಾಮಕವರ್ಗಕ್ಕೂ ಮೇಲುಗೈವರ್ಗಕ್ಕೂ ಸಂಬಂಧವಿಲ್ಲ. ಶಾಮಕವರ್ಗದ ತಂತ್ರಗಳು ತಿದ್ದುವಂಥವು-ಒಂದೊಂದೂ ಕಾಮನಬಿಲ್ಲಿನ ಕೆಲವು ಭಾಗಗಳಲ್ಲಿ ಕೆಲಸಮಾಡುತ್ತದೆ. ಅಲೆ ಉದ್ದಗಳು ಹಾಗೂ ನೆರಳುಗಳನ್ನನುಸರಿಸಿ ಹಿಡಿಯಲು ನಡುವರ್ತಿಯಾಗುತ್ತದೆ. ಮುಖ್ಯವಾಗಿ ತಿದ್ದುವ ವ್ಯಾಪ್ತಿಗಳು ಮುರಿವೆ: 1. 0.580-0.610, 2. 0.520-0.540 ಮತ್ತು 3. 0.404-0.470 ಮೈಕ್ರಾನ್ಗಳ ಉದ್ದಗಳಿರುವ ಕಿರಣತರಂಗಗಳು. ಈ ಅರ್ಥದಲ್ಲಿ ಗ್ರಾನಿಟನ ಸಿದ್ಧಾಂತ ಬಹು ವಿಜ್ಞಾನಿಗಳು ಒಪ್ಪುವ ತ್ರಿವರ್ಣ ಸಿದ್ಧಾಂತಕ್ಕೆ ಸರಿಹೊಂದುತ್ತದೆ. ಇರುವ ವ್ಯತ್ಯಾಸವೇನೆಂದರೆ ಗ್ರಾನಿಟನ ಸಿದ್ಧಾಂತದಲ್ಲಿ ಕಾಮನಬಿಲ್ಲಿನ ಸಣ್ಣ ಸಣ್ಣ ಭಾಗಕ್ಕೂ ಬೇರೆ ಬೇರೆ ಪ್ರತಿಕ್ರಿಯೆಗಳಾಗಿಸುವ ಹಲವು ತಿದ್ದುವ ತಂತ್ರಗಳಿವೆ. ಬಿಳುಪು ಅದರ ಹೊಳಪಿನ ಪ್ರಮಾಣ ಗೊತ್ತಾಗಲು ತನಿಯಾಗಿರುವ ತಂತ್ರ ಬಲವಾಗಿದೆ. ಈ ವಿಷಯದಲ್ಲಿ ಹೆನ್ರಿ ಪಯೆರಾನ್ ಒಪ್ಪಿದ್ದಾನೆ.

ಹೆಚ್ಚಾಗಿ ಮನೋವಿಜ್ಞಾನ, ಅಂಗಕ್ರಿಯಾಶಾಸ್ತ್ರಗಳ ಆಧಾರದ ಮೇಲೆ ಮಾಡಿದ ಕಣ್ಜಾಲದ ರಚನಾಂಶಗಳ ಅಧ್ಯಯನದಿಂದ ದೊರಕಿದ ಅಂಕಿ ಅಂಶಗಳನ್ನು ಗಮನಿಸಿದಾಗ, ಈ ಹಿಂದಿನ ಯತ್ನಗಳನ್ನು ಇನ್ನೂ ಚೆನ್ನಾಗಿ ವಿವರಿಸಬಹುದು. ಮೊದಲ ವಿಚಾರವೆಂದರೆ ಕಣ್ಜಾಲದ ಕಣ್ಣಿನ ನತಿಯಲ್ಲಿ ಸಲಾಕಿಗಳಿಲ್ಲದೆ ಬರೀ ಶಂಕುಗಳಿರುವುದು. ಎಲ್ಲ ಬಣ್ಣಗಳು ಇಲ್ಲ ಅರಿವಿಗೆ ಬರುವುದರಿಂದ ಖಚಿತ ಪ್ರಮಾಣದಲ್ಲಿ ಬಣ್ಣ ನೋಟಕ್ಕೆ ಸಲಾಕಿಗಳಲ್ಲದೆ ಶಂಕುಗಳೇ ಕಾರಣ. ಇನ್ನೊಂದಂಶವೆಂದರೆ, ಶಂಕುಗಳಲ್ಲಿ ಹಲವು ಬಗೆಗಳಿವೆ ಎಂಬ ಊಹೆಗೆ ಒಪ್ಪುವಷ್ಟು ಪುರಾವೆಯಿಲ್ಲದಿರುವುದು. ಅದರಲ್ಲೂ ಕಣ್ಣಿನ ನತಿಯಲ್ಲಿ ಅದರ ಸುತ್ತಲೂ ಎಲ್ಲ ಶಂಕುಗಳ ನರಕಸೆಗಳು ಒಂದೇ ರೀತಿಯಿದೆ. ಬಹುಶಃ ಅಕ್ಷಭಾಗದಲ್ಲಿ ಎಲ್ಲ ಶಂಕುಗಳಿಗೆ ಕಾರ್ಯಸಮತೆ ಇರುವ ಮತ್ತು ಎಲ್ಲ ಅಲೆ ಉದ್ದಗಳು ಅಥವಾ ಬಣ್ಣಛಾಯೆಗಳಿಂದ ಪ್ರತಿ ಶಂಕು ಚೋದಿತವಾಗುವ ಸಂಭವವಿದೆ. ರಾಸಾಯನಿಕ ರಚನೆ ಇನ್ನೂ ತಿಳಿಯದಿದ್ದರೂ ಮನಸ್ಸಿನಲ್ಲಿ ಕೊನೆಗೆ ಬಣ್ಣದ ಆವೇಗ ಒಂದೇ ರೀತಿಯ ಚೋದನೆ ಸರಣಿಗಳನ್ನು ಆರಂಭಿಸಲಿರುವ ತಂತ್ರ ಬಹುಶಃ ಶಂಕುಗಳಿಲ್ಲಿದೆ. ಶಂಕುಗಳ ಚೋದನೆಗಳನ್ನು ಬಳಸಿಕೊಳ್ಳುವುದು ಇಗ್ಗಣೆ ನರಗಂಟುಗಳಂಥ ಕಣ್ಜಾಲದ ಇತರ ರಚನಾಂಶಗಳ ಕರ್ತವ್ಯವೆಂದು ಕಾಣುತ್ತದೆ. ನಮಗೆ ತಿಳಿದಿರುವಂತೆ ಮೂಲ ಶಂಕುಚೋದನೆಗಳ ತಿದ್ದುಪಡಿಗಳು ಹಲವು ರೀತಿಯಲ್ಲಿ ನಡೆಯತ್ತವೆ. ವಿಭಜನೆ ಅಥವಾ ಆಯ್ಕೆ, ಪುಷ್ಟೀಕರಣ, ಸಂಕಲನ, ನಿಯಂತ್ರಣ ಅಥವಾ ಎದುರಿಸಿಕೆ. ಹೀಗೆ ನೋಡಿದರೆ, ಕಣ್ಜಾಲ ಬಲು ಸೋಜಿಗದ, ವ್ಯವಸ್ಥೆಗೊಂಡ, ಬೇರ್ಪಡಿಸುವ ತಂತ್ರ. ಇದರಿಂದ ಬೆಳಕುಪಡೆಕಗಳಲ್ಲಿ ಹುಟ್ಟಿದ ಚೋದನಾ ಆವೇಗಗಳು ಸಲಾಕಿಗಳಿಂತ ಹೆಚ್ಚಾಗಿ ಶಂಕುಗಳಲ್ಲಿ ಮಾರ್ಪಟ್ಟು ಕೊನೆಯ ಅರಿವಿಗೆ ಮೆದುಳಿನ ಕೇಂದ್ರಗಳಿಗೆ ರವಾನೆಯಾಗುತ್ತವೆ. ಕಣ್ಜಾಲದ ಪ್ರಾದೇಶಿಕ ವೈವಿಧ್ಯ ಮತ್ತು ನೋಟದ ಚುರುಕು ಒಟ್ಟಿನಲ್ಲಿ ಕಣ್ಜಾಲದ ಎಲ್ಲ ಭಾಗಗಳ ರಚನೆ ಒಂದೇ ರೀತಿಯಿದ್ದರೂ ಬೇರೆ ಬೇರೆ ಎಡೆಗಳಲ್ಲಿ ವ್ಯತ್ಯಾಸಗಳಿವೆ. ಬಹುಮುಖ್ಯವಾದುದು ನೋಟದ ಜಾಗ. ಹೊಸದಾಗಿ ಕಣ್ಜಾಲಗಳಲ್ಲಿ ಅಕ್ಷದಲ್ಲಿ ಹಳದಿ ಚುಕ್ಕೆ ಇರುತ್ತದೆ. ಈ ಕೇಂದ್ರದಲ್ಲಿ ನರಕಣಗಳ ಸಂಖ್ಯೆ ಹೆಚ್ಚಿರುವುದರಿಂದ ಇಲ್ಲಿ ಕಣ್ಜಾಲದ ದಪ್ಪ ಹೆಚ್ಚು. ಹಳದಿ ಚುಕ್ಕೆಯ ನಡುವೆ ಕಣ್ಜಾಲದ ಹೊರಪದರಗಳು ಪಕ್ಕಕ್ಕೆ ಸರಿದಿರುವುದರಿಂದ ಒಂದು ನತಿಯಿದೆ. ಈ ನತಿಯಲ್ಲಿ ಬೆಳಕುಪಡೆಕ ಕಣಗಳ ಪದರ ಮಾತ್ರ ಬಲು ದಪ್ಪಕ್ಕಿದೆ; ಇಲ್ಲಿ ಸಲಾಕಿಗಳಿಲ್ಲ. ಶಂಕುಗಳು ಉದ್ದವಾಗಿವೆ. ಈ ನತಿಯ ವ್ಯಾಸ 1.5 ಮಿಮೀ ಇಲ್ಲಿ ಕೇಂದ್ರಶಂಕುಗಳನ್ನು ತಲುಪುವ ಕಿರಣಗಳನ್ನು ತಡೆಯುವಂತೆ ರಕ್ತನಾಳಗಳಿಲ್ಲ. ಆದರೆ ಕೇಂದ್ರ ಶಂಕುಗಳ ಅಡ್ಡವ್ಯಾಸ 1 (1 ಮೈಕ್ರಾನ್=1/25000 ಅಂಗುಲ). ಇಷ್ಟು ಸಣಕಲ ಶಂಕುಗಳ ಸುತ್ತಮುತ್ತ ಇಲ್ಲ. ಈ ರಚನಾಂಶ ದೃಷ್ಟಿವ್ಯಾಪ್ತಿಯ ಕೇಂದ್ರದಲ್ಲಿರುವ ನೋಟದ ಚುರುಕಿಗೆ ಕಾರಣ. ಮೇಲೆ ನೋಡಿದರೆ ಒಂದೊಂದು ಶಂಕುವೂ ಆರು ಮೂಲೆ ಚೌಕವಾಗಿ ಕಾಣಿಸುತ್ತದೆ. ಈ ಆರು ಮೂಲೆಯವು ಒಂದನ್ನೊಂದು ದಾಟುವ ಸಾಲುಗಳಿಲ್ಲಿವೆ. ಈ ನತಿಯಿಂದ 3 ಮಿಮೀ ಒಳಗಡೆ ಕಣ್ಣುಬಟ್ಟು ಇದೆ. ಇದು ಸಲಾಕಿಶಂಕುಗಳಿಲ್ಲದ ಕುರುಡು ಚುಕ್ಕೆ. ಇದರ ಮೇಲೆ ಬಿದ್ದ ಕಿರಣಗಳು ಕಣ್ಣಿಗೆ ಕಾಣಬರುವುದಿಲ್ಲ. ಇಲ್ಲಿ ನರಗಂಟು ಕಣಗಳ ನರತಂತಗಳ ಕಣ್ಣುಗುಡ್ಡೆಯಿಂದ ಹೊರಟು ಕಣ್ಣು ನರವಾಗುತ್ತವೆ. ಕೇಂದ್ರಗುಳಿಯಲ್ಲಿ ಕಣ್ಜಾಲದ ರಚನೆ ಕ್ರಮವಾಗಿದ್ದು ಕೇಂದ್ರದಿಂದ ಕಣ್ಣು ನರವಾಗುತ್ತವೆ. ಕೇಂದ್ರಗುಳಿಯಲ್ಲಿ ಕಣ್ಜಾಲದ ರಚನೆ ಕ್ರಮವಾಗಿದ್ದು ಕೇಂದ್ರದಿಂದ ಆಚೆಗೆ ಹೋಗ ಹೋಗುತ್ತ, ಅದರಲ್ಲೂ ಹೆಚ್ಚಾಗಿ ಗರಗಸ ಅಂಚಿನಲ್ಲಿ, ಯದ್ವಾತದ್ವಾ ಆಗುತ್ತದೆ. ಇದಕ್ಕೆ ಸರಿಯಾಗಿ, ನೋಟದ ಚುರುಕೂ ಕಡಿಮೆಯಾಗುತ್ತ ಬರುತ್ತದೆ. ಕೇಂದ್ರದ ಸುತ್ತಲೂ ಒಂದೊಂದು ಇಗ್ಗಣೆಗೂ ನರಕಸೆ ಬಂಧನವಾದ ಸಲಾಕಿಶಂಕುಗಳ ಅಂಕಿಯೂ ಒಂದೊಂದು ನರಗಂಟು ಕಣಕ್ಕೆ ಬಂಧನವಾದ ಇಗ್ಗಣೆಗಳ ಅಂಕಿಯೂ ಹೆಚ್ಚಿ ಹೆಚ್ಚಿ ಅಂಚಿನಲ್ಲಿ ಅತ್ಯಲ್ಪಕಿರಣಗಳ ಚೋದನೆಗೂ ಹಾಗಾಗಿ ಚಲನಸಂಬಂಧವಾದ ಅರಿವಿಗೂ ಚುರುಕಾಗಿದೆ. ಈ ಮಟ್ಟದ ಚುರುಕು ಗರಗಸ ಅಂಚಿನಲ್ಲಿರುವಷ್ಟು ಅಕ್ಷಭಾಗದಲ್ಲಿಲ್ಲ.

ಕಣ್ಣಿನ ಉಪಾಂಗಗಳು[ಸಂಪಾದಿಸಿ]

ಕಣ್ಣುಗುಡ್ಡೆಯೂ ಇದಕ್ಕೆ ಸಂಬಂಧಿಸಿದ 7 ಸ್ನಾಯುಗಳು, ರಕ್ತನಾಳಗಳು, ನರಗಳು, ಕಣ್ಣೀರುಗ್ರಂಥಿ, ಕಣ್ಣುಗುಳಿಯ ಕೊಬ್ಬೂ ಸೇರಿ ತಲೆಬುರುಡೆಯಲ್ಲಿರುವ ಕಣ್ಣುಗುಳಿಯಲ್ಲಿವೆ. ಲೋಳೆಪೊರೆ, ಚರ್ಮ, ರೆಪ್ಪೆಗಳು ರೆಪ್ಪೆ ಗೂದಲು, ಹುಬ್ಬು_ಇವೂ ಕಣ್ಣಿನ ಭಾಗಗಳು. ಗ್ರಂಥಿಯಿಂದ ಹೊರಟ ಕಣ್ಣೀರು ರೆಪ್ಪೆಗಳು ಹರಡಿ ತೆರೆದಿರುವ ಕಣ್ಣುಭಾಗಗಳ ಲೋಳೆಪೊರೆಯನ್ನು ತೊಳೆದು ಕೋಡುಪೊರೆಯನ್ನು ಚೊಕ್ಕವಾಗೂ ಪಾರದರ್ಶಕವಾಗೂ ಇಡುತ್ತದೆ. ಕಣ್ಣೀರು ಸದಾ ಸ್ವಲ್ಪಸ್ವಲ್ಪವಾಗಿ ಒಸರುತ್ತಿರುತ್ತದೆ. ರೆಪ್ಪೆಬಡಿತ ನಿಂತರೂ ಕೋಡು ಪೊರೆ ಒಣಗುವುದರಿಂದ ಕುರುಡಾಗುತ್ತದೆ. ಅಳುವಾಗ ಹೆÀಚ್ಚು ಸುರಿದ ನೀರು ಆಚೆ ಸುರಿದರೂ ಕೊಂಚಭಾಗ ಕುಣಿಕೆಯಲ್ಲಿರುವ ಸಣ್ಣ ನಾಳಗಳ ಮೂಲಕ ಕುಣಿಕೆ ಚೀಲವನ್ನು ಸೇರಿ ಅಲ್ಲಿಂದ ಕಣ್ಣು ಮೂಗುನಾಳದ ಮೂಲಕ ಮೂಗನ್ನು ಸೇರುತ್ತದೆ. ಅದಕ್ಕೇ ಅಳುವಾಗ ಮೂಗಿನಲ್ಲೂ ನೀರು ಬರುವುದು. ಸದಾ ನೀರಿನಲ್ಲಿರುವ ಪ್ರಾಣಿಗಳಿಗೆ ರೆಪ್ಪೆಗಳು ಮತ್ತು ಕಣ್ಣೀರು ಗ್ರಂಥಿ ಬೇಕಾಗಿಲ್ಲ.

ಪಿಂಡದಲ್ಲಿ ಕಣ್ಣಿನ ವಿಕಾಸ[ಸಂಪಾದಿಸಿ]

ಪಿಂಡದ ಮೆದುಳಿನ ಭಾಗವಾದ ನಡುಮೆದುಳಿನಿಂದ ಎರಡು ಪಕ್ಕಚಾಚುಗಳು ಬೆಳೆಯುತ್ತವೆ. ಒಂದೊಂದು ಚಾಚೂ ಸಣ್ಣ ಟೊಳ್ಳುಗದೆಯಂತಿದ್ದು, ದುಂಡುಕೊನೆಯಲ್ಲಿ ಗುಳಿಬಿದ್ದ ಇಪ್ಪದರಗಳಿರುವ ಬಟ್ಟಲಿನಂತಾಗುತ್ತದೆ. ಈ ಬಟ್ಟಲಿನ ಹೊರಪದರದಿಂದ ಹೊರ ಕರಿಬಣ್ಣದ ಕಣಪದರದಿಂದ ಒಳಪದರವೂ ಸಲಾಕಿ ಶಂಕುಗಳು ಇಗ್ಗಣೆ ಕಣಗಳು, ನರಗಂಟುಗಳೂ ಹುಟ್ಟಿಕೊಳ್ಳುತ್ತವೆ. ಕಣ್ಣುಬಟ್ಟಲನ್ನು ಮುಚ್ಚಿರುವ ಹೊರಚರ್ಮ ದಪ್ಪಾಗಿ ಮಡಚಿಕೊಂಡು ಮುಚ್ಚಿನ ಚೀಲವಾಗಿ ಮೇಲ್ಚರ್ಮದಿಂದ ಬೇರ್ಪಟ್ಟು ಮಸೂರವಾಗುತ್ತದೆ. ಇದೇ ಜಾಗದಲ್ಲಿ ಅದೇ ಕಾಲದಲ್ಲಾದ ಗುಳಿಯ ತುಟಿಗಳಿಂದ ರೆಪ್ಪೆಗಳೂ ಲೋಡುಪೊರೆಯೂ ಆಗುತ್ತವೆ. ನಡುಚರ್ಮದಿಂದ ಕೋಡು ಪೊರೆಯ ಲೋಳೆಪೊರೆಯಲ್ಲಾದ ಭಾಗವು ಕರಿಯಾಲಿ ಹೊರಪದರ, ನಡುಪದರಗಳೂ (ಬಾಸೆಯದಿಂಡು ಕೂಡಿ) ಆಗುತ್ತವೆ. (ಎಂ.ಡಿ.)


ಕಣ್ಣಿನ ರೋಗಗಳು[ಸಂಪಾದಿಸಿ]

ಕಣ್ಣುಗುಡ್ಡೆ ಮತ್ತದರ ಹಲವು ಭಾಗಗಳಿಗೆ ಹತ್ತುವ ರೋಗಗಳು, ಗಾಯ ಪೆಟ್ಟುಗಳು, ವಿಷಮ ಗಂತಿಗಳನ್ನು (ಮೆಲಿಗ್ನೆಂಟ್ ಟ್ಯೂಮರ್ಸ್) ಇಲ್ಲಿ ವಿವರಿಸಿದೆ. ಕುರುಡುತನ, ನೋಟದ ಕುಂದುಗಳು, ಆಹಾರ ಪುಷ್ಟಿ ಸಾಲದೆ ಬರುವ ರೋಗಗಳನ್ನು ಬೇರೆಡೆ ಕೊಟ್ಟಿದೆ. (ನೋಡಿ- ಕಾಕುಪಾಲನೆ) (ನೋಡಿ- ಜೀವಾತುಗಳು) (ನೋಡಿ- ಕಣ್ಣಾಯಾಸ)

ರೆಪ್ಪೆಗಳ ರೋಗಗಳು[ಸಂಪಾದಿಸಿ]

ಕಣ್ಣಿಗೆ ಸಣ್ಣ ಪೆಟ್ಟು, ಅಪಾಯಗಳು ತಾಕದಂತೆ ತಡೆವುದಲ್ಲದೆ ಕಣ್ಣುಗುಡ್ಡೆ ಮುಂಭಾಗ ತೇವವಿಲ್ಲದೆ ಒಣಗದಂತೆ ಇರಿಸುವವು ರೆಪ್ಪೆಗಳು. ರೆಪ್ಪೆ ಮುಚ್ಚಲು ಸುತ್ತುವರಿಕ (ಆರ್ಬಿಕ್ಯುಲಾರಿಸ್) ಸ್ನಾಯುಕುಗ್ಗುವುದೇ ಕಾರಣ. ರೆಪ್ಪೆ ತೆರೆಯಲು ಬಾಣ ಮೊನೆಯಂಥ ಸ್ನಾಯುವಿದೆ. ಸಾಮಾನ್ಯವಾಗಿ ರೆಪ್ಪೆಗಳು ಕಣ್ಣುಗುಡ್ಡೆಗೆ ಚೆನ್ನಾಗಿ ತಾಕಿಕೊಂಡಿರುವುವು. ಇವು ನಿದ್ರೆಯಲ್ಲಿ ಮುಚ್ಚಿರುತ್ತವೆ. ಸುತ್ತುವರಿಕ ಸ್ನಾಯು ಸೆಡೆತುಕೊಂಡಾಗ ರೆಪ್ಪೆ ಅಂಚು ಒಳತಿರುಗಿರುವುದಕ್ಕೆ ಒಳತಿರುವೆ (ಎಂಟ್ರೋಪಿಯಾನ್) ಎಂದಿದೆ. ಆಗ ರೆಪ್ಪೆ ಗೂದಲು (ಎವೆ) ಕಣ್ಣುಗುಡ್ಡೆಯನ್ನು ಗೀಚಿದಂತಾಗಿ ಹುಣ್ಣಾಗಬಹುದು. ಇದಕ್ಕೆದುರಾಗಿ, ರೆಪ್ಪೆಗೆ ಗಾಯವೋ ಹುಣ್ಣೋ ಆಗಿ ವಾಸಿಯಾದ ಮೇಲೆ ಕಲೆಗಟ್ಟಿದಾಗ ರೆಪ್ಪೆ ಅಂಚು ಹೊರಮಡಿಸಿಕೊಂಡಿರುವುದಕ್ಕೆ ಹೊರತಿರುವೆ (ಎಕ್ ಟ್ರೋಪಿಯಾನ್) ಎಂದಿದೆ. ಮುಪ್ಪಿನಲ್ಲಿ ಕೆಳರೆಪ್ಪೆಗಳಲ್ಲಿ ಬಲವಿಲ್ಲದೆ ಜೋಲು ಬೀಳಬಹುದು. ನಿತ್ರಾಣದಿಂದ ರೆಪ್ಪೆ ಜೋಲು (ಟೋಸಿಸ್) ಬಿದ್ದಿರಬಹುದು. ಇದರಿಂದ ನೋಟಕ್ಕೆ ಅಡ್ಡಿಯಾದರೆ ಶಸ್ತ್ರಕ್ರಿಯೆಯಿಂದ ಸರಿಪಡಿಸಬಹುದು. ತಲೆಯ 7ನೆಯ ನರವಾದ, ಮೊಗದ ನರದ ಅಂಕೆಯಲ್ಲಿರುವ ಸುತ್ತರಿಕ ಸ್ನಾಯುವೇ ರೆಪ್ಪೆಗಳಿಂದ ಕಣ್ಣು ಮುಚ್ಚಲು ಕಾರಣವಾದ್ದರಿಂದ ಈ ನರದ ಅರನಾರಿಯಲ್ಲಿ (ಪೆರಾಲಿಸಿಸ್) ಕಣ್ಣುಮಿಟುಕಣೆ, ಮುಚ್ಚಿಗೆ ಆಗದು. ಹೀಗೆ ಬಹಳ ಹೊತ್ತು ಮುಚ್ಚದಂತಾದರೆ ಕಣ್ಣುಗುಡ್ಡೆ ಮುಂದಿರುವ ತಿಳಿಪೊರೆಯಾದ ಕೋಡು ಪೊರೆ (ಕಾರ್ನಿಯ) ಒಣಗಿ ಹುಣ್ಣೇಳುತ್ತದೆ. ಆಗ ನಿದ್ರೆಹೊತ್ತಿನಲ್ಲಿ ತೇವವಿರುವಂತೆ ಏನಾದರೂ ಉಪಾಯ ಮಾಡಬೇಕಾಗುವುದು.

ರೆಪ್ಪೆಗಳಲ್ಲಿನ ಗ್ರಂಥಿಗಳಿಂದ ಸುರಿವ ಮೈಜಿಡ್ಡು (ಸೀಬಂ) ರೆಪ್ಪೆ ಅಂಚುಗಳು ಒಂದಕ್ಕೊಂದು ಅಂಟದಂತೆ ಇರಿಸುವುದಲ್ಲದೆ, ಎಂದಿನ ಕಣ್ಣೀರು ಹೊರಕ್ಕೆ ಹರಿದು ಹೋಗದೆ ಹಾಗೆ ತಡೆವುದು. ಈ ಮೈಜಿಡ್ಡು ಗ್ರಂಥಗಳಿಗೆ ಸೊಂಕುಹತ್ತಿ ಕೀವು ಗೂಡುವುದೇ ಕಣ್ಕುಟಿಕೆ. ಇದಕ್ಕೆ ಸೋಂಕುರೋಧಕ ಮದ್ದುಗಳನ್ನು ಹಚ್ಚಿ ಕಾವು ಕೊಡುವುದರಿಂದ ಗುಣಪಡಿಸಬಹುದು. ಈ ರೆಪ್ಪೆ ಗ್ರಂಥಿಗಳಲ್ಲಿ ಅಡಚಣೆಯಾಗಿ ಒಳರೆಪ್ಪೆಯಾಳದಲ್ಲಿ ಗಟ್ಟಿ ಕುರು ಏಳುವುದೇ ಕಣ್ಣುಜಿಟ್ಟಿ (ಕೆಲೇಜಿûಯಾನ್). ಕೆಲವೇಳೆ ಇದು ಸುಲಭವಾಗಿ ವಾಸಿಯಾಗದ್ದರಿಂದ ಕೊಯ್ದು ಕೀವುಗಟ್ಟಿರುವುದನ್ನು ಹೊರಡಿಸದಿದ್ದರೆ ಗಟ್ಟಿಕಾಳಿನಂತೆ ಗಂಟು ಉಳಿವುದು.

ರೆಪ್ಪೆಯ ಅಂಚುಗಳಲ್ಲಿ ಕೂದಲ ಕೋಶಿಕಗಳಲ್ಲಿ (ಫಾಲಿಕಲ್ಸ್‌) ಸೋಂಕು ಹತ್ತಿ ರೆಪ್ಪೆಯುರಿತವಾಗಲು (ಬ್ಲೆಫರೈಟಿಸ್) ಚರ್ಮದ ಮೇಲೆ ಯಾವಾಗಲೂ ಇರುವ ಸಾಮಾನ್ಯ ಏಕಾಣುಜೀವಿಗಳೇ ಕಾರಣ. ಆಗ ರೆಪ್ಪೆಗೂದಲುಗಳ ಬುಡದಲ್ಲಿ ಪಿಸರುಗಟ್ಟಿ ಹುರುಪೆ (ಸ್ಕೇಲ್) ಏಳುತ್ತದೆ. ಜೀವಿರೋಧಕ ಮದ್ದುಗಳಿಂದ ಇದನ್ನು ಗುಣಪಡಿಸಬಹುದು.

ಕಣ್ಣೀರಿನ ಸಾಧನದ ರೋಗಗಳು[ಸಂಪಾದಿಸಿ]

ಕಣ್ಣುಗುಡ್ಡೆಯ ಮುಂಭಾಗದಮೇಲೆ ಯಾವಾಗಲೂ ಒಂದು ತೆಳುಪದರ ಉಳಿವಷ್ಟು ನೀರನ್ನು ಕಣ್ಣೀರು ಗ್ರಂಥಿಗಳು ಸುರಿಸುತ್ತಲೇ ಇರುತ್ತವೆ. ಕಣ್ಣೀರಿನ ತಯಾರಿಕೆ, ಕಣ್ಣೀರು ಆರಿಹೋಗುವಿಕೆ, ಕಣ್ಣೀರು ಕಾಲುವೆಗಳ ಮೂಲಕ ಹೊರಸಾಗಣೆಯ ವೇಗಗಳು ಯಾವಾಗಲೂ ಎಷ್ಟು ಚೆನ್ನಾಗಿ ಒಂದಕ್ಕೊಂದು ಹೊಂದಿಕೊಂಡಿರುವುವೆಂದರೆ ಸಾಧಾರಣವಾಗಿ ಕಣ್ಣೀರು ಹೊರಹರಿದು ಬೀಳದು. ಕಣ್ಣೀರಿನ ತೇವ ಕೂಡ ಯಾರ ಅರಿವಿಗೂ ಬರದಂತಿರುವುದು. ಕೆಲವು ಬೇನೆಗಳಲ್ಲಿ ಕಣ್ಣೀರು ಸುರಿತ ಏರುಪೇರಾಗುತ್ತದೆ. ಕಣ್ಣಿನಿಂದ ಮೂಗಿನೊಳಕ್ಕೆ ಸಾಗುವ ಕಾಲುವೆಗೆ ಅಡಚಣೆ ಆಗುವುದೇ ಕಣ್ಣೀರು ಹೆಚ್ಚಾಗಿ ಹೊರಬೀಳುವುದರ ಕಾರಣ. ಮೂಗಿನಲ್ಲಿ ಏನಾದರೂ ಬೆಳೆದಿದ್ದರೆ ಹೀಗಾಗುತ್ತದೆ. ಹಾಗೇ ಕೆಳರೆಪ್ಪೆಯ ವಿಕಾರ, ಕಣ್ಣೀರು ಕಾಲುವೆಯಲ್ಲಿ ಒತ್ತಳ್ಳುವ ಸ್ನಾಯುವಿನ ದುರ್ಬಲತೆಗಳೂ ಕಾರಣವಾಗಬಹುದು. ಮುಪ್ಪಿನಲ್ಲಿ ಕೆಳರೆಪ್ಪೆ ಜೋಲು ಬೀಳುವುದರಿಂದ ನೀರುಗಣ್ಣು (ಎಪಿಫೋರ) ಆಗಿ ಕೊಂಚ ಕಣ್ಣೀರು ಹೊರಸುರಿವುದು. ಇವಲ್ಲಿ ಬಹುಪಾಲನ್ನು ಶಸ್ತ್ರಕ್ರಿಯೆಯಿಂದ ಸರಿಪಡಿಸಬಹುದು. ಕಣ್ಣೀರು ಚೀಲಕ್ಕೂ ಮೂಗಿಗೂ ನಡುವಣ ಸಾಗಾಲುವೆ (ಡಕ್ಟ್‌) ಮುಚ್ಚಿಹೋಗಿದ್ದರೆ ಕಣ್ಣೀರು ಚೀಲದಲ್ಲಿ ಸೋಂಕು ಸೇರಿಕೊಳ್ಳುತ್ತದೆ. ಆಗ ಮುಚ್ಚಿಹೋದ ದಾರಿಯನ್ನು ಶಸ್ತ್ರಕ್ರಿಯೆಯಿಂದ ಬಿಡಿಸಿ ತೆರೆಯದಿದ್ದಲ್ಲಿ ಕೋಡು ಪೊರೆಗೆ ಅಪಾಯವಿದೆ.

ಕಣ್ಣೀರು ಸುರಿಕೆ ಸಾಲದಾದರೆ ಬಲು ತೊಂದರೆ, ಅಪಾಯ ಹೆಚ್ಚು. ಕಣ್ಣು ಒಣಗಿದಂತಾಗಿ ಕಣ್ಣಲ್ಲಿ ಏನೋ ಬಿದ್ದು ಕೆರೆಯುತ್ತಿರುವ ಹಾಗೆ ತೋಚುವುದು. ವಯಸ್ಸಾದ ಹೆಂಗಸರಲ್ಲಿ ಒಳಸುರಿಕೆಬೇನೆಯೊಂದರಲ್ಲಿ ಹೀಗಾಗುತ್ತದೆ. ಒಳಸುರಿಕ ಗ್ರಂಥಿ ಚಿಕಿತ್ಸೆ ನಡೆಸುವುದರೊಂದಿಗೆ, ಆಗಾಗ್ಗೆ ನೀರು ತೊಟ್ಟುಗಳನ್ನು ಹಾಕಿ ಕಣ್ಣೊಳಭಾಗವನ್ನು ತೋಯಿಸುತ್ತಿರುಬಹುದು. ಕಣ್ಣೀರು ಹರಿದು ಹೋಗದಂತೆ ಸಾಗುದಾರಿಗಳನ್ನು ಶಸ್ತ್ರಕ್ರಿಯೆಯಿಂದ ಮುಚ್ಚಿಹಾಕಬಹುದು. ಇನ್ನೇನೂ ಮಾಡಲಾಗದಿದ್ದರೆ, ಜೊಲ್ಲುಗ್ರಂಥಿ ನಾಳಗಳನ್ನು ಇಲ್ಲಿಗೆ ಜೋಡಿಸಿ ಹೊಲೆವುದುಂಟು. ಕೂಡು ಪೊರೆಯ ರೋಗಗಳು : ಕಣ್ಣುರೆಪ್ಪೆಗಳ ಹಿಂಭಾಗದಲ್ಲೂ ಕಣ್ಣು ಗುಡ್ಡೆಯ ಮೇಲೂ ಹೊದಿಸಿದಂತಿರುವ ಕೂಡುಪೊರೆ (ಕಂಜಂಕ್ಟೈವ) ಹೊರಗಾಳಿಗೆ ಒಡ್ಡಿರುವುದರಿಂದ ಸುಲಭವಾಗಿ ಸೋಂಕುಗಳು, ಒಗ್ಗದಿಕೆಗಳು, ಕೆರಳಿಕೆ ವಸ್ತುಗಳು, ರಾಸಾಯನಿಕಗಳಿಗೆ ಈಡಾಗಿ ಕೂಡುಪೊರೆಯುರಿತ (ಕಂಜಂಕ್ಟಿವೈಟಿಸ್) ಆಗುತ್ತದೆ. ಕಣ್ಣಲ್ಲಿ ರಕ್ತಗಟ್ಟಿ ಕೆಂಪೇರಿ, ಕಣ್ಣೀರು ಹರಿಸುತ್ತ, ರೋಸೋ ಗೀಜೋ ಕೀವೋ ಸುರಿಯಬಹುದು. ರಾತ್ರಿ ಮಲಗಿದ್ದು ಬೆಳಗ್ಗೆ ಎದ್ದಾಗ ಕಣ್ಣುರೆಪ್ಪೆಗಳು ಗೀಜುಕಟ್ಟಿ ಮೆತ್ತಿಹಾಕಿಕೊಂಡಿರುತ್ತವೆ. ಕಡಿತ, ಉರಿ ಆಗಿ, ಕಣ್ಣು ಚುಚ್ಚುತ್ತಿರುವುದು. ಸಾಮಾನ್ಯವಾಗಿ ನೋವು ಅಷ್ಟಾಗಿರದು. ನೋಟಕ್ಕೂ ಅಡ್ಡಿಯಿಲ್ಲ. ಅಡ್ಡಿಯಾಗಿದ್ದರೆ ಕೂಡುಪೊರೆಗೂ ಸೊಂಕು ಹತ್ತಿರಬೇಕು. ಸೂರ್ಯನ ಬೆಳಕಿನ ದೀಪ ಬೆಸಗೆ ದೀಪಚಾಪ, ಕಣ್ಣು ಕೊರೈಸುವ ಬಿಸಿಲುಗಳಿಂದಲೂ ಕೂಡುಪೊರೆಯುರಿತ ಏಳಬಹುದು. ಬೆಳಕಿಗೆ ಕಣ್ಣು ಬಿಡದಂತಾಗುತ್ತದೆ.

ಕರಡಜ್ವರದೊಂದಿಗೆ (ಹೇ ಫೀವರ್) ಕೊಂಚವಾಗಿ ಒಗ್ಗದಿಕ ಕೂಡುಪೊರೆಯುರಿತ ಕಾಣಿಸಿಕೊಳ್ಳಬಹುದು. ಊತ, ಕೆಂಪೇರಿಕೆ, ಕೆರೆತ, ದದ್ದುಗಳೂ ಏಳಬಹುದು. ಮದ್ದುಹಾಕುವುದನ್ನು ನಿಲ್ಲಿಸಿದರೆ ಇವೆಲ್ಲ ಶಮನವಾಗುತ್ತವೆ. ಕಾರಣಕಾರಕಗೊತ್ತಿಲ್ಲವಾದರೂ ವಸಂತದ (ವರ್ನಲ್) ಕೂಡುಪೊರೆಯುರಿತವೂ ಒಗ್ಗದಿಕೆಯದೆಂಬ ಅಭಿಪ್ರಾಯವಿದೆ. ಮಕ್ಕಳಲ್ಲಿ ವಸಂತದಲ್ಲಿ ಕೆರಳುವುದು ಸಾಮಾನ್ಯ. ಕೆರೆತ ವಿಪರೀತವಾಗಿ ಕೂಡುಪೊರೆ ಮಂದವಾಗುತ್ತದೆ. ಸ್ಟಿರಾಯ್ಡ್‌ ಮದ್ದುಗಳಿಂದ ಕೆರೆತ ಇಳಿಯುತ್ತದೆ.

ಹೊರಗಾಳಿ, ದೂಳು, ಕಾವು, ಚಳಿಗಳಿಗೆ ತೆರೆದೊಡ್ಡಿರುವುದರಿಂದ ಕೂಡುಪೊರೆಗೆ ರೋಗಾಣುಗಳು ಸುಲಭವಾಗಿ ತಾಕುತ್ತಿರುವುವು. ಆದರೆ ಸೋಂಕು ಹತ್ತಿದರೆ ಜೀವಿರೋಧಕಗಳ ತೆರನ ಬಲವಾದ ಮದ್ದುಗಳಿಂದ ಚೆನ್ನಾಗಿ ತಡೆಯಬಹುದು, ಗುಣಪಡಿಸಬಹುದು. ದೊಡ್ಡವರ ಪರಮಾ (ಗೊನೋರಿಯ) ರೋಗ ಆಗ ಹುಟ್ಟಿದ ಹಸುಗೂಸುಗಳ ಕೂಡುಪೊರೆಗೆ ಹತ್ತಿ ಕುರುಡಾಗುತ್ತಿದ್ದ ಕಾಲ ಜೀವಿರೋಧಕ ಮದ್ದುಗಳು ಬಂದಾಗಿಂದ ಕಾಣದಾಗಿದೆ. ಬೇಸಗೆಯಲ್ಲಿ ಸಾಮಾನ್ಯವಾಗಿ ಬರುವ ಕಣ್ಣುನೋವು (ಕೆಂಗಣ್ಣು) ಇಂದಿನ ಗುಣಕಾರಿ ಮದ್ದುಗಳಿಗೆ ಮಣಿದಿದೆ. ಯಾವ ಸೋಂಕು ರೋಧಕ ಮದ್ದಿಗೂ ಜಗ್ಗದ ವಿಷಕಣಗಳಿಂದಾದ (ವೈರಸಸ್) ಕೂಡುಪೊರೆಯುರಿತ ಪ್ರಪಂಚದ ಎರಡನೆಯ ಯುದ್ಧ ಕಾಲದಲ್ಲಿ ಸಾಂಕ್ರಾಮಿಕವಾಗಿ ತಲೆದೋರಿತು. ಮುಖ್ಯವಾಗಿ ಹಡಗು ಕಟ್ಟೆಗಳಲ್ಲಿ ಇದರ ಹಾವಳಿ ಹೆಚ್ಚಾಗಿ ಬಹಳ ನಷ್ಟವಾಯಿತು. ಬಲು ಅಂಟುರೋಗವಾದ್ದರಿಂದ ಈಗಲೂ ಸಾಂಕ್ರಾಮಿಕವಾಗುವುದುಂಟು. 2-3 ತಿಂಗಳು ಕಾಡಿಸಿದರೂ ಕೊನೆಗೆ ಗುಣವಾಗುತ್ತದೆ.

ಈಜಿಪ್ಟ್‌ ಭಾರತದಲ್ಲಿ ಅಲ್ಲಲ್ಲಿ ಸಾಂಕ್ರಾಮಿಕದಂತೆ ಹಬ್ಬಿರುವ ಬೇರೂರಿದ ಅಂಟುರೋಗ ರವೆಗಣ್ಣೂ (ಟ್ರಾಕೋಮ) ಕೂಡುಪೊರೆಯುರಿತವೇ. ಹಿಂದುಳಿದ ನಾಡುಗಳಲ್ಲಿ ಇದು ಮುಖ್ಯವಾಗಿ ಶಾಲಾಮಕ್ಕಳಲ್ಲಿ ಹೆಚ್ಚಾಗಿ ಕಂಡುಬಂದು, ಚಿಕಿತ್ಸೆ ಇಲ್ಲವಾದರೆ ಕೂಡುಪೊರೆಯ ಮೇಲೆ ಕಲೆಗಟ್ಟಿ ಕುರುಡಾಗುತ್ತಿದ್ದರು. ವಿಶ್ವ ಆರೊಗ್ಯ ಸಂಸ್ಥೆ ಮತ್ತಿತರ ಸಂಘಗಳ ಸತತ ಯತ್ನ, ನೆರವಿನಿಂದ ಬಹಳ ಕಡೆ ಇದರ ಹಾವಳಿ ಇಳಿಯುತ್ತಿದೆ. ಈ ರೋಗಕ್ಕೆ ಕಾರಣವಾದ ವಿಷಕಣ ಕೆಲವು ಜೀವಿರೋಧಕಗಳಿಗೆ ಜಗ್ಗುತ್ತದೆ. ಗಂಡು, ಹೆಣ್ಣು ಈಜುಗಾರರ ಜನನಾಂಗಗಳಲ್ಲಿ ರೋಗ ತೋರದಿದ್ದರೂ ಅಲ್ಲಿರುವ ಒಂದು ವಿಷಕಣವೇ, ಕಣ್ಣಿಗೆ ತಾಕಿದರೆ ಈಜು ಕೊಳದ ಕೂಡುಪೊರೆಯುರಿತ ಆಗುವುದರ ಕಾರಣ ಸೋಂಕಿರುವ ಈಜುಕೊಳದಲ್ಲಿ ಇಳಿಯುವವರೆಲ್ಲರಿಗೂ ಹತ್ತುವುದು. ಎರಡು ಕಣ್ಣುಗಳಲ್ಲೂ ರೋಸು ಸುರಿಸುವ ಈ ಬೇನೆ ಸಲ್ಫೋನೇಮೈಡುಗಳಿಂದ ಗುಣವಾಗುತ್ತದೆ.

ಚರ್ಮ ಮತ್ತು ಲೋಳಪೊರೆಗಳ ಎಷ್ಟೊ ರೋಗಗಳು, ಅದರಲ್ಲೂ ಗಂಟಲಮಾರಿ (ಡಿಫ್ತೀರಿಯ), ದಡಾರ, ನಾಯಿ ಕೆಮ್ಮುಗಳಂಥ ಎಳೆತನದ ಕೂರಾದ ಸೋಂಕಿನ ಜ್ವರದ ರೋಗಗಳಲ್ಲಿ ಅಷ್ಟಿಷ್ಟು ಕೂಡುಪೊರೆಯುರಿತ ಕಾಣಿಸಿಕೊಳ್ಳವುದು ಸಾಮಾನ್ಯ.

ಒಣಕಲ ನಾಡುಗಳಲ್ಲಿ ಕಂಡುಬರುವ ಉರಿತವೇಳಿಸದ ಕೂಡುಪೊರೆ ರೋಗ ಒಂದಿದೆ. ಪುಕ್ಕಪೊರೆ (ಟೆರಿಜಿಯಂ) ರೋಗದಲ್ಲಿ ಗಾಳಿ, ದೂಳುಗಳಿಗೊಡ್ಡಿದ ಕೂಡುಪೊರೆಯ ಭಾಗ ಮುದುರಿಕೊಳ್ಳುವುದಲ್ಲದೆ ಕೂಡುಪೊರೆಯ ಮೇಲೂ ತೆವಳುತ್ತದೆ. ಇದರಿಂದ ಕಣ್ಣುನೋಟಕ್ಕೆ ಆತಂಕವಾಗುವುದು. ಎಳೆಯದಾಗಿರುವಾಗ ಇದನ್ನು ನೋಡಲು ವಿಕಾರ. ಸಣ್ಣ ಶಸ್ತ್ರಕ್ರಿಯೆಯಿಂದ ಇದನ್ನು ಗುಣಪಡಿಸಿ ಮತ್ತೆ ಮರುಕಳಿಸದಂತೆ ತಡೆಗಟ್ಟಬಹುದು,

ಕೂಡು ಪೊರೆಯ ರೋಗಗಳು[ಸಂಪಾದಿಸಿ]

ಕಣ್ಣೊಳಗೊಂದು ಮಸೂರವಿದ್ದರೂ ಕೂಡು ಪೊರೆಯೂ ಒಂದು ಕಣ್ಣುಗುಡ್ಡೆಯ ಮುಂಭಾಗದ ಗೋಡೆಯಾಗಿರುವ ಮಸೂರ ಎನ್ನಬಹುದು. ಇದು ತಿಳಿಯಾಗಿ ಆಚೆ ಕಾಣುವಂತಿದ್ದು ನುಣುಪಾಗಿರಲು ಮುಖ್ಯ ಕಾರಣ ಇದರ ಜೀವಕಣಗಳ ಪದರಗಳ ಕ್ರಮವಾದ ಜೋಡಣೆ. ಕೂಡು ಪೊರೆಗೆ ಗಾಯವೋ ಹುಣ್ಣೋ ಆದಮೇಲೆ ವಾಸಿಯಾಗಿ ಕಲೆಗಟ್ಟಿದರೆ ಆ ಜಾಗಗಳಲ್ಲೆಲ್ಲ ಮೊದಲಿನ ತಿಳಿಯಾಗಿ ಆಚೆಗಾಣಿಕ ಗುಣವನ್ನು ನೀಗುತ್ತದೆ. ಹೀಗೆ ಕಲೆಗಟ್ಟಿದಾಗ ಬೇರೆಯವರ ಕಣ್ಣಿನಿಂದ ತೆಗೆದು ತಂದುದನ್ನು ಕೆಟ್ಟಿರುವ ಭಾಗಕ್ಕೆ ನಾಟಿ ಹಾಕುವುದಕ್ಕೆ ನೇತ್ರದಾನ ಎನ್ನುವುದುಂಟು. ಕೆಲವೇಳೆ ಇದಕ್ಕಾಗಿ ಕನ್ನಡಕಗಳನ್ನು ಹಾಕಿಸಿ ಸರಿಪಡಿಸಬಹುದು.

ಗಾಳಿ, ದೂಳುಗಳಿಗೆ ತೆರೆದಿಟ್ಟಿರುವುದೂ ಇದರಲ್ಲಿ ರಕ್ತನಾಳಗಳೇ ಇಲ್ಲದ್ದೂ ಕೊಂಚ ಗಾಯವಾದರೂ ನೋಟಕ್ಕೆ ವಿಪರೀತ ಅಡ್ಡಿಯಾಗುವುದೂ ಕೂಡು ಪೊರೆ ಕೆಡುವ ಮುಖ್ಯ ಕಾರಣಗಳು. ಹೊರಗಿನ ಇಲ್ಲವೇ ಮೈಯೊಳಗೇ ಏಳುವ ಕಾರಣಗಳಿಂದ ಕೂಡು ಪೊರೆಯ ಸಾಮಾನ್ಯ ರೋಗಗಳು ಬರಬಹುದು. ಕೂಡು ಪೊರೆ ರೋಗಗಳಿಗೆ ಸೋಂಕು, ಜೀವವಸ್ತುಕರಣ (ಮೆಟಬಾಲಿಸಂ), ರಕ್ತಸುತ್ತಾಟ, ಒಗ್ಗದಿಕೆ, ಅನುವಳಿಕೆ (ಡೀಜನರೇಷನ್) ಕಾರಣಗಳಾಗಬಹುದು. ಮಾದರಿಯಾಗಿ ನಾಲ್ಕು ತೆರನ ರೋಗಗಳನ್ನು ವಿವರಿಸಿದೆ.

ಕೂಡು ಪೊರೆಯ ಹುಣ್ಣು[ಸಂಪಾದಿಸಿ]

ಇದು ಹೊರಗಣ ಸೋಂಕು, ಗಾಯಪೆಟ್ಟುಗಳಿಂದ ಆಗುವುದು. ಬಹುಮಟ್ಟಿಗೆ ಕೇವಲ ಕೂಡು ಪೊರೆ ಮೇಲ್ಮೈ ಮೇಲಾಗುವ ಸಣ್ಣ ಗೀಚಲಿನ ಮೂಲಕ ರೋಗಾಣುಗಳು ಒಳಹೊಗುತ್ತವೆ. ಗೀಚಲೊಂದಿಗೇ ಏಕಾಣುಜೀವಿಗಳೂ ಒಳಸೇರಬಹುದು. ರೋಗಾಣುಗಳು ವಿಷಮತೆ ಸೋಂಕು ರೋಧಕ ಚಿಕಿತ್ಸೆಗೆ ತಕ್ಕಂತೆ ಅಕ್ಕಪಕ್ಕದ ಊತಕ ಹಾಳಾಗಿ ಹುಣ್ಣೇಳುತ್ತದೆ. ಬಹುಪಾಲು ಈ ಹುಣ್ಣುಗಳು ಚಿಕಿತ್ಸೆಗೆ ಮಣಿದು 2-3 ವಾರಗಳಲ್ಲಿ ವಾಸಿಯಾಗಿ, ಹಾಳಾದ ಭಾಗದಷ್ಟು ಆಕಾರದ ಆಳವಾದ ಕಲೆಗಟ್ಟೂ (ಸ್ಕಾರ್) ಉಳಿದುಬಿಡುತ್ತದೆ. ಚಿಕಿತ್ಸೆ ಕೈಗೂಡದಲ್ಲಿ ರೋಗಾಣು ಬಲು ಜೋರಾಗಿದ್ದರೆ ಹಾಳಾದ ಭಾಗಗಳಿಗೆ ತಕ್ಕಂತೆ ಹುಣ್ಣು ಆಳವಾಗೂ ಪಕ್ಕಗಳಲ್ಲಿ ಹರಡಿಕೊಂಡೂ ದೊಡ್ಡದಾಗುವುದು. ಆಳವಾಗಿ ಹರಡಿದರಂತೂ ಕೂಡು ಪೊರೆಯಲ್ಲಿ ತೂತು ಬಿದ್ದು ನೀರಿನ ದ್ರವರಸ (ಆಕ್ವಿಯಸ್ ಹ್ಯೂಮರ್) ಸುರಿದುಹೋಗಿ ಕೂಡು ಪೊರೆಗೆ ಕರಿಯಾಲಿ (ಐರಿಸ್) ತಾಕುವುದರಿಂದ ತೀರ ಅಪಾಯಕರ. ಕಣ್ಣುಗುಡ್ಡೆ ಗಾತ್ರ, ಆಕಾರಗಳು ಕುಸಿದುಬೀಳುತ್ತವೆ. ಸಾಮಾನ್ಯವಾಗಿ ಕರಿಯಾಲಿ ಆ ತೂತಿಗೆ ಅಡ್ಡಬಿದ್ದು ಮುಚ್ಚಿ ಕಣ್ಣುಗುಡ್ಡೆ ಮತ್ತೆ ಎಂದಿನ ಆಕಾರ ಗಾತ್ರಗಳಿಗೆ ಬರುತ್ತದೆ. ಆದರೆ ಕರಿಯಾಲಿ ಕೂಡು ಪೊರೆಗೆ ಅಂಟಿಕೊಂಡರೆ ಇನ್ನೂ ತೊಡಕೇ. ತೂತುಬಿದ್ದಮೇಲೆ ಕೂಡು ಪೊರೆ ಹುಣ್ಣು ಸಾಧಾರಣವಾಗಿ ವಾಸಿಯಾಗುವುದು.

ಸರಳ ತದ್ದಿನ ಸೊಂಕು[ಸಂಪಾದಿಸಿ]

ಜ್ವರದ ಬೊಬ್ಬೆಯ ವಿಷಕರಣದಿಂದೇಳುವ ಸರಳತದ್ದು (ಜಪಿಸ್ ಸಿಂಪ್ಲೆಕ್ಸ್‌) ಕೂಡು ಪೊರೆಗೆ ತಾಕುವ ಇನ್ನೊಂದು ಸೋಂಕು. ಎಷ್ಟೊ ಮಂದಿಯ ಕೂಡುಪೊರೆ ಚೀಲಗಳಲ್ಲಿ ಈ ವಿಷಕಣಗಳಿದ್ದರೂ ಕೆಲವರಲ್ಲಿ ಮಾತ್ರ ಇವು ಒಳಹೊಕ್ಕು ಸೊಂಕೆಬ್ಬಿಸುವುದರ ನಿಜವಾದ ಕಾರಣ ಗೊತ್ತಿಲ್ಲ. ಹೀಗಾದಾಗ ಮೊದಲು ಮರದ ಕೊಂಬೆಗಳ ಆಕಾರದ ಬೂದುಬಣ್ಣದ ಹುಣ್ಣಾಗಿ ಕಣ್ಣುರಿಯುತ್ತ ಕಣ್ಣೀರು ಸುರಿಯುತ್ತಿರುವುದು. ರೋಗ ತಡೆವ ಬಲ ಜೋರಾಗಿದ್ದರೆ ಕೆಲವೇ ದಿನಗಳಲ್ಲಿ ವಾಸಿಯಾಗುತ್ತದೆ. ಹಾಗಿಲ್ಲವಾದರೆ ಬಹಳ ಭಾಗ ಹಾಳಾಗುವುದು. ಇದನ್ನು ಎಳಸಿನಲ್ಲೇ ಗುರುತಿಸಿ ಮದ್ದುಗಳ ಚಿಕಿತ್ಸೆ ಒದಗಿಸಬೇಕು.

ಊತಕಾಂತರದ ಕೂಡು ಪೊರೆಯುರಿತ[ಸಂಪಾದಿಸಿ]

ಹುಟ್ಟಿನಿಂದ ಬರುವ ಉಪದಂಶ (ಸಿಫಿಲಿಸ್) ರೋಗದಲ್ಲಿ ಕೇವಲ ಮೇಲ್ಮೈಯಲ್ಲಿ ಹುಣ್ಣಾಗದೆ ಒಳಗೂ ಹಬ್ಬುವ ಕೂಡು ಪೊರೆಯುರಿತವಿದು. (ಇಂಟರ್ಸ್ಪಿಷಿಯಲ್ ಕೆರಟೈಟಿಸ್). ಮಗುವಿನ 5-8ನೆಯ ವಯಸ್ಸಿನಲ್ಲಿ ಇದು ತಲೆದೋರುತ್ತದೆ. ಉಪದಂಶ ರೋಗ ತಾಯಿಯಿಂದ ಮಗುವಿಗೆ ಹತ್ತಿರುವ ಮೊಟ್ಟಮೊದಲ ಲಕ್ಷಣವಾಗಿರಬಹುದು. ಇಡೀ ಕೂಡು ಪೊರೆ ಮಸಕಾಗಿ ನೀಲಿಗೆಂಪೇರಿರು ತ್ತದೆ. ಬೆಳಕಿಗೆ ಕಣ್ಣುಬಿಡಲಾಗದೆ ಕಣ್ಣೀರು ಸುರಿಯುತ್ತಿರುವುದು. ಕೆಲವು ತಿಂಗಳು ಕಾಡುವುದು. ಇನ್ನೊಂದು ಕಣ್ಣಿನಲ್ಲೂ ರೋಗ ತಲೆಹಾಕುವುದು. ಉಪದಂಶ ರೋಗದ ಚಿಕಿತ್ಸೆಯಿಂದ ರೋಗ ನಿಧಾನವಾಗಿ ಅಣಗುತ್ತದೆ. ಈ ರೋಗ ಬಾರದಂತೆ ತಡೆಯಲು ರೋಗಿತಾಯಿಗೆ ಹೆರಿಗೆಗೆ ಮುಂಚೆಯೇ ಪೆನಿಸಿಲಿನ್ ಚಿಕಿತ್ಸೆ ಕೊಡುವುದೇ ಚೆನ್ನಾದ ಉಪಾಯ.

ಅನುವಳಿಕ ಬೇನೆಗಳು[ಸಂಪಾದಿಸಿ]

ತೀರ ಸಾಮಾನ್ಯವಾದ ಈ ಬೇನೆಗಳಿಂದ ಕೂಡು ಪೊರೆಗೆ ಆಗುವ ಅನಾಹುತಗಳು ತಿಳಿದಿವೆಯೇ ಹೊರತು ಕಾರಣವಾಗಲೀ ಚಿಕಿತ್ಸೆಯಾಗಲೀ ಏನೂ ಗೊತ್ತಿಲ್ಲ. ಯಾವ ನೋವೂ ಇರಸುಮುರಸೂ ಉರಿಯೂ ಇಲ್ಲದೆಯೇ ಕೂಡು ಪೊರೆ ಬರುಬರುತ್ತ ಮಸಕಾಗಿ, ನೋಟವೂ ಮಂದವಾಗುತ್ತದೆ. ಮಸಕು ಗೊಳಿಸುವ ಚುಕ್ಕೆಗಳು. ಗಂಟುಗಳು, ಕಲೆಗಳು, ಗೆರೆಗಳಂತೆ ಬಗೆಬಗೆಯಾಗಿರಬಹುದು. ಹೀಗೆ ಕೂಡುಪೊರೆ ನಿಧಾನವಾಗಿ ಬೀಳಾಗಲು ಬಾಳುವೆ ರೀತಿ, ಕಸಬು, ಹವ, ಬೇರೆ ಕಾಯಿಲೆಗಳು ಏನೇನೂ ಕಾರಣಗಳಲ್ಲ. ಬಹುಮಂದಿಯಲ್ಲಿ ತಲೆಮಾರಿನ ಪ್ರಭಾವ ಇರುವಂತೆ ತೋರುವುದು.

ಬಿಳಿಪದರದ ರೋಗಗಳು[ಸಂಪಾದಿಸಿ]

ಕೂಡು ಪೊರೆಯವಕ್ಕಿಂತಲೂ ಬಿಳಿಪದರವು (ಸ್ಕ್ಲೀರ) ವಿರಳ. ಕೀಲುಗಳು, ಸ್ನಾಯುಗಳು, ಕಂಡರಗಳ ಉರಿತದೊಂದಿಗೇ ಬಿಳಿಪದರುರಿತ (ಸ್ಕ್ಲೀರೈಟಿಸ್) ತಲೆದೋರುವುದರಿಂದ ಇಡೀ ಮೈಗೆ ಹತ್ತುವ ರೋಗವಿದು. ಆಡ್ರಿನಲ್ ಗ್ರಂಥಿ ರಗಟೆಯ ಸ್ಟಿರಾಯ್ಡ್‌ ಮದ್ದುಗಳು ಗುಣಕಾರಿ. ನೀಲಿ ಪೊರೆಯ ರೋಗಗಳು : ಕಣ್ಣುಗುಡ್ಡೆ ಗೋಡೆಯ 3 ಪದರಗಳಲ್ಲಿ ನಡುವಣ ಪದರವಾದ ನೀಲಿ ಪೊರೆಯಲ್ಲಿ (ಯೂವಿಯ) ಕರಿಯಾಲಿ, ಬಾಸೆಯ ದಿಂಡು (ಸಿಲಿಯರಿ ಬಾಡಿ), ಕಣ್ಜರಾಯ (ಕೊರಾಯ್ಡ್‌) ಇವೆ. ಕಣ್ಣಿನ ನೋಟ ಸಾಧನದಲ್ಲಿ, ಎರಡು ತೆರನ ಸ್ನಾಯುಗಳಿರುವ, ಪಾಪೆಯನ್ನು (ಪ್ಯುಪಿಲ್) ಹಿಗ್ಗಿಕುಗ್ಗಿಸುವ ಕರಿಯಾಲಿ ವಪೆಯಂತೆ ವರ್ತಿಸುವುದು. ನೀರಿನ ದ್ರವರಸವನ್ನು (ಅಕ್ವಿಯಸ್ ಹ್ಯೂಮರ್) ಸುರಿಸುತ್ತ ಮಸೂರದ ಗಾತ್ರವನ್ನು ಹೆಚ್ಚುಕಡಿಮೆ ಮಾಡಿ ದೂರ ನೋಟವನ್ನು ಹತ್ತಿರದ ನೋಟವಾಗಿಸುತ್ತದೆ. ಒಳಪದರದಲ್ಲಿರುವ ಕಣ್ಜಾಲಕ್ಕೆ (ರೆಟೀನ) ಅಪಾರವಾಗಿ ರಕ್ತ ಒದಗಿಸುವ ರಕ್ತನಾಳಗಳು ಕಣ್ಜರಾಯುವಿನಲ್ಲಿವೆ.

ಇವು ಮೂರು ರಚನಾಂಗಗಳಿಗೂ ಹತ್ತುವ ಉರಿತ ರೋಗಗಳ ಕಾರಣವಾದ ಜೀವಾಣುಗಳು ಸಾಮಾನ್ಯವಾಗಿ ರಕ್ತಹರಿವಿನ ಮೂಲಕ ಬರುತ್ತವೆ. ಮೈ ಬೇನೆಗಳಲ್ಲಿ ಹಲವು ಕೂರಾಗೋ (ಅಕ್ಯೂಟ್) ಬೇರೂರಿಯೋ (ಕ್ರಾನಿಕ್) ಇವಕ್ಕೂ ಹರಡಿಕೊಂಡು ಮೈಬೇನೆ ಇಳಿದುಹೋದಾಗ ಇಲ್ಲೂ ವಾಸಿಯಾಗುವುದು.

ವಿಪರೀತ ನೋವು, ಕಣ್ಣಿನ ರಕ್ತಗಟ್ಟು, ಚುಮಗುಡಿಕೆ. ಮುಂದಣ ಗೂಡಿನಲ್ಲಿ (ಆ್ಯಂಟೀರಿಯರ್ ಚೇಂಬರ್) ರಸದ ಒಸರಿಕೆ, ಬಹುಪಾಲು ನೋಟಕ್ಕೆ ಪುರಾ ಅಡಚಣೆ ಇವು ತೋರಿ ಇದ್ದಕ್ಕಿದ್ದ ಹಾಗೆ ಕೂರಾದ ಕರಿಯಾಲಿಯುರಿತವಾಗಿ (ಐರೈಟಿಸ್) ಕಾಣಿಸಿಕೊಳ್ಳುತ್ತವೆ. ಸರಿಯಾದ ಚಿಕಿತ್ಸೆಯಿಂದ ಅಷ್ಟೇಬೇಗನೆ ವಾಸಿಮಾಡಬಹುದು. ಕೆಲವೇಳೆ ಕೂರಾದ ಇಲ್ಲವೇ ಬೇರೂರಿದ ಕೀಲುರಿತದೊಂದಿಗೆ ಈ ಬೇನೆ ತಲೆದೋರುವುದು. ಬೇರೂರಿದ ನೀಲಿ ಪೊರೆಯುರಿತದಲ್ಲಿ (ಯೂವಿಯೈಟಿಸ್) ರಕ್ತಗಟ್ಟು, ಚುಮಗುಡಿಕೆ, ನೋವೂ ಅಷ್ಟಾಗಿರವು. ಮುಂದಣ ಮತ್ತು ಕಾಚೀ (ವಿಟ್ರಿಯಸ್) ಗೂಡುಗಳೊಳಕ್ಕೆ ಒಸರಿದ ರಸದ ಪ್ರಮಾಣಕ್ಕೆ ತಕ್ಕಂತೆ ಕಣ್ಣು ನೋಟವೂ ಮಂದವಾಗುತ್ತದೆ. ಕಣ್ಜರಾಯುರಿತ (ಕೊರಾಯ್ಡೈಟಿಸ್) ಒಳಗಿನ ಕಣ್ಜಾಲಕ್ಕೆ ಹರಡಿ ಆ ಭಾಗದ ನೋಟದಲ್ಲಿ ಕುರುಡು ಚುಕ್ಕೆ ಏಳಿಸುತ್ತದೆ. ಮರುಕಳಿಕೆ ಜ್ವರ (ರೆಕರೆಂಟ್ ಫೀವರ್) ಹಂದಾಡ ಜ್ವರ (ಅಂಡ್ಯುಲೆಂಟ್ ಫೀವರ್), ಮಾಂಸಂದಬೇನೆ (ಸಾರ್ಕಾಯ್ಡೋಸಿಸ್) ಕ್ಷಯ, ಉಪದಂಶ ರೋಗಗಳಲ್ಲಿ ಬೇರೂರಿದ ನೀಲಿ ಪೊರೆಯುರಿತ ಏಳುತ್ತದೆ. ಎಷ್ಟೊ ವೇಳೆ ಮೈಯಲ್ಲಿ ಬೇರಾವ ಬೇನೆಗಳೂ ಹೊರಗಾಣದಿದ್ದರೂ ಹೀಗಾಗಬಹುದು. ಮೈಬೇನೆಗೆ ಚಿಕಿತ್ಸೆಯಾದರೆ ಇದೂ ಅಣಗುತ್ತದೆ. ಸ್ಟಿರಾಯ್ಡ್‌ ಮದ್ದುಗಳಿಂದ ರೋಗ ತಗ್ಗಿ ಚೆನ್ನಾಗಿ ವಾಸಿಯಾಗುತ್ತದೆ.

ಕಣ್ಜಾಲದ ರೋಗಗಳು[ಸಂಪಾದಿಸಿ]

ಕಣ್ಣುಗುಡ್ಡೆಯ ಗೋಡೆಯಲ್ಲಿ ಎಲ್ಲಕ್ಕೂ ಒಳಗಿರುವ, ಬಲು ಕೋಮಲವಾಗಿರುವ ಪದರವೇ ಕಣ್ಜಾಲ. ಇದರ ಮೇಲೆ ಬಿದ್ದ ಬೆಳಕಿನ ಬಿಂಬವನ್ನು ನರದ ಆವೇಗಗಳಾಗಿ (ಇಂಪಲ್ಸಸ್) ಮಾರ್ಪಡಿಸಿ ಮಿದುಳಿನಲ್ಲಿ ನೋಟದ ಅರಿವುಂಟು ಮಾಡುವ ಹಲವು ಕೂಡಿಸುವ ಕೊಂಡಿಗಳಂತಿರುವ ಜೀವಕಣಗಳ ಹಲವು ಪದರಗಳು ಇದರಲ್ಲಿವೆ.

ಕಣ್ಜಾಲದ ರೋಗಗಳಲ್ಲಿ ಮೈಗೆ ಹತ್ತುವ ಧಮನಿ ಪೆಡಸಣೆ (ಆರ್ಟೀರಿಯೊ ಸ್ಲ್ಕೀರೋಸಿಸ್), ರಕ್ತ ಒತ್ತಡವೇರಿಕ ಗುಂಡಿಗೆ ರಕ್ತನಾಳಗಳ ಇಲ್ಲವೇ ಮೂತ್ರಪಿಂಡದ ರೋಗಗಳು, ಸಿಹಿಮೂತ್ರ, ಬಸಿರಿನ ರಕ್ತನಂಜು, ಮತ್ತಿತರ ರಕ್ತನಾಳಗಳ ಉರಿತದ ಒಗ್ಗದಿಕೆಯ ಅನುವಳಿಕ ರೋಗಗಳ ಒಂದಡೆಯ ತೋರಿಕೆಯವೇ ಹೆಚ್ಚು. ಕಣ್ಣು ದರ್ಶಕದಿಂದ (ಆಫ್ತಾಲ್ಮೊಸ್ಕೋಪ್) ಕಣ್ಜಾಲವನ್ನೂ ಅದರ ರಕ್ತನಾಳಗಳನ್ನೂ ನೇರವಾಗಿ ನೋಡಬಹುದಾದ್ದರಿಂದ, ಮೈಯಲ್ಲಿನ ರಕ್ತನಾಳಗಳ ರೋಗವನ್ನು ವೈದ್ಯ ಇಲ್ಲಿ ಚೆನ್ನಾಗಿ ಪತ್ತೆಹಚ್ಚುತ್ತಾನೆ.

ಕಣ್ಜಾಲದ ರೋಗಗಳಲ್ಲಿ ಬಹುಪಾಲು ಅನುವಳಿಕೆಗೆ ಸಂಬಂಧಿಸಿವೆ. ಬಣ್ಣಕದ (ಪಿಗ್ಮೆಂಟರಿ) ಅನುವಳಿಕೆಯಾಗಿರುವ ಬಣ್ಣಕದ ಕಣ್ಜಾಲುರಿತದಲ್ಲಿ (ರೆಟಿನೈಟಿಸ್ ಪಿಗ್ಮೆಂಟೋಸ) ಇರುಳ್ನೋಟವೂ ಅಂಚುಗಳಲ್ಲಿನ ನೋಟವೂ ಬರುಬರುತ್ತ ಮಂದವಾಗುತ್ತವೆ. ಕೆಲವೇಳೆ ಹೀಗಾಗಲು ಎಷ್ಟೊ ವರ್ಷಗಳೇ ಹಿಡಿಯಬಹುದು. ಇನ್ನೂ ಬೇಗನೆ ಹೀಗಾದರೆ ಮಕ್ಕಳಲ್ಲಿ ನೋಟ ಮಂದವಾಗಿ ವಿಪರೀತ ತೊಂದರೆಗಳಾಗುತ್ತವೆ. ಬಹುಮಟ್ಟಿಗೆ ಇದು ವಂಶಪರಂಪರೆಯಿಂದ ಬರುವುದು. ಈ ಬಗೆಯ ಇನ್ನೂ ಕೆಲವು ರೋಗಗಳಲ್ಲಿ ಕಣ್ಜಾಲದ ನಡುಭಾಗ ಹಾಳಾಗುವುದರಿಂದ, ಆಕಾರಗಳನ್ನು ಗುರುತಿಸುವುದೂ ಓದಿ ಬರೆಯುವುದೂ ಅಸಾಧ್ಯವಾಗುತ್ತದೆ. ಈ ರೋಗಗಳಿಗೆ ಪರಿಹಾರವೇ ಇನ್ನೂ ಗೊತ್ತಿಲ್ಲ. ಮುಂದುವರಿದ ನಾಡುಗಳಲ್ಲಿ, ನವಮಾಸ ತುಂಬುವ ಮೊದಲೇ ಹುಟ್ಟುವ ಎಳೆಗೂಸುಗಳನ್ನು ಏನಾದರೂ ಮಾಡಿ ಉಳಿಸಿಕೊಳ್ಳಲು ಮೊದಲು ಕೆಲವು ವಾರಗಳ ತನಕ ಬಹಳ ಆಮ್ಲಜನಕವನ್ನು ಕೊಟ್ಟುದರಿಂದ ಮಸೂರದ ಹಿಂಭಾಗ ನಾರಿನಂತೆ ಗಡುಸಾಗಿ (ರಿಟ್ರೊಲೆಂಟಲ್ ಫೈಬ್ರೊಪ್ಲೇಸಿಯ) ಕುರುಡಾಗುವುದು ಕಂಡುಬಂದಿದೆ. ಆಮ್ಲಜನಕ ನೀಡುವ ಪ್ರಮಾಣವನ್ನು ಎಷ್ಟುಬೇಕೋ ಅಷ್ಟಕ್ಕೆ ಇಳಿಸುವುದರಿಂದ ಇದನ್ನು ತಪ್ಪಿಸಬಹುದು.

ಕಣ್ಜರಾಯುವಿನ ಉರಿತ ಅದರ ತಳದಲ್ಲಿರುವ ಕಣ್ಜಾಲಕ್ಕೂ ಹರಡಿಳಿದು ಒಂದಿಷ್ಟು ಹಾಳಾಗಬಹುದು. ಕಲೆಗಟ್ಟದೆಯೇ ಹಾಳಾದರೆ ಕಣ್ಜಾಲದಲ್ಲಿ ತೂತಾಗಿ ಇಲ್ಲವೇ ಬೆಂದು ಇಡೀ ಕಣ್ಜಾಲವೋ ಒಂದು ಭಾಗವೋ ಕಿತ್ತು ಕಳಚಿಕೊಂಡು (ಡಿಟ್ಯಾಚ್ಮೆಂಟ್) ಸುಕ್ಕುಗಟ್ಟಬಹುದು. ಕಾಚೀ ದ್ರವರಸ ಕುಗ್ಗಿ ಎಳೆದಂತಾದರೂ ಕಣ್ಜಾಲ ಕಿತ್ತು ಕಳಚಿಕೊಳ್ಳಬಹುದು. ಇವೆರಡನ್ನೂ ಈಗ ಶಸ್ತ್ರಕ್ರಿಯೆಯಿಂದಲೂ ಲೇಸರ್ನಿಂದಲೂ ಸರಿಪಡಿಸಬಹುದು. ಮಸೂರದ ರೋಗಗಳು : ಕಣ್ಣು ನೋಟವನ್ನು ದೂರಕ್ಕೋ ಹತ್ತಿರಕ್ಕೋ ಹೊಂದಿಸುವ ಕೆಲಸ ಹರಳಂತಿರುವ ಕಣ್ಣಿನ ಮಸೂರದ್ದು. ಬಾಸೆಯ ದಿಂಡಲ್ಲಿರುವ ಹೊಂದುವಳಿಯ (ಅಕಾಮಡೇಷನ್) ಸ್ನಾಯು ಕುಗ್ಗಿ ಹಿಗ್ಗುವುದರಿಂದ ಮಸೂರದ ದಪ್ಪವನ್ನು ಹೆಚ್ಚೂಕಡಿಮೆ ಮಾಡಿ ಅದರ ಮೇಲ್ಮೈ ಕೊಂಕುಗಳನ್ನು ಬದಲಿಸುತ್ತದೆ. ಮಸೂರ ಮುಳುಗಿರುವ ನೀರಿನ ದ್ರವರಸದಿಂದ ಅದರ ಪುಷ್ಟಿ ಆಗಬೇಕೇ ಹೊರತು, ಮಸೂರದಲ್ಲಿ ಯಾವ ನರವೂ ರಕ್ತನಾಳವೂ ಇಲ್ಲ. ನಡುವೆ ಇರುವ ದಟ್ಟವಾದ ಹಳೆಯ ಪದರಗಳ ಮೇಲೆ ಎಳೆಯವು ಕೂಡುತ್ತ ಬಾಳಿನುದ್ದಕ್ಕೂ ಇದು ಬೆಳೆಯುತ್ತಲೇ ಇರುವುದು. ವಯಸ್ಸಾದ ಹಾಗೆಲ್ಲ ಈ ನಡುವಣ ಪಪ್ಪು ಹಿಗ್ಗಿ ಕುಗ್ಗದಂತಾಗುವುದರಿಂದಲೇ ಚಾಳೀಸ ಬಂದು ಹತ್ತಿರ ನೋಡಲು ಕನ್ನಡಕ ಹಾಕಿಕೊಳ್ಳಬೇಕಾಗುತ್ತದೆ. ಇದು ವಯಸ್ಸಿನ ಪರಿಣಾಮವೇ ಹೊರತು ರೋಗ ಎನಿಸದು.

ರೋಗ ಹತ್ತಿತೆಂದರೆ ತಿಳಿಯಾಗಿ ಆಚೆಗಾಣುವಂತಿರುವ ಮಸೂರ ಮಸಕಾಗಿ ಬಿಡುತ್ತದೆ. ಮಸಕಿನ ಕಲೆ, ಚುಕ್ಕೆಗಳು ಮಸೂರದ ಅಂಚಿನಲ್ಲಿದ್ದರೆ ನೋಟಕ್ಕೆ ಅಡ್ಡಿಬರವು. ಮಸೂರದ ನಡುವೆ ಇದ್ದರಂತೂ ನೋಟಕ್ಕೆ ತೀರ ಆತಂಕವಾಗುತ್ತದೆ. ಮನೆಯೊಳಗಿನ ಬೆಳಕಿನಲ್ಲಿ ಅಷ್ಟಿಷ್ಟು ಚೆನ್ನಾಗಿ ಕಂಡರೂ ಹೊರಗಡೆ ಕಣ್ಣು ತೀರ ಮಂಜು ಮಂಜಾಗಬಹುದು.

ಮೋತಿಬಿಂದು (ಕ್ಯಾಟರಾಕ್ಟ್‌) ಎಂದರೆ ಮಸೂರದಲ್ಲಿ ಕಾಣಬರುವ ಕಲೆ ಇಲ್ಲವೇ ದಟ್ಟ ಚುಕ್ಕೆ ಎನ್ನುವುದೇ ಸರಿಯಾದರೂ ಸಾಮಾನ್ಯವಾಗಿ ವಯಸ್ಸಾದವರಲ್ಲಿ ಬರುಬರುತ್ತ ನೋಟಕ್ಕೆ ಅಡ್ಡಿಯಾಗುವಂತೆ ಪೊರೆ ಬೆಳೆದಂತೆ ಕಾಣುವುದಕ್ಕೇ ಹೇಳುವುದುಂಟು. ಹಲವು ಕಾರಣಗಳಿಂದ ಮಸೂರಕ್ಕೆ ಪುಷ್ಟಿವಸ್ತುಗಳ ಸರಬರಾಜಿನ ಕೊರೆಯಾಗಿ ಅದರಲ್ಲಿ ಅಸಹಜ ಊತಕವೇಳುವುದೇ ಮೋತಿಬಿಂದು ಆಗುವ ಕಾರಣ. ಆಹಾರ ವಸ್ತುಗಳಲ್ಲಿ ಬಗೆಬಗೆಯ ಜೀವಾಳದ ಅಂಶಗಳ ಕೊರೆಯಿಂದ ಪ್ರಯೋಗಾಲಯದ ಪ್ರಾಣಿಗಳಲ್ಲಿ ಮೋತಿಬಿಂದು ಆಗಿಸುವುದು ಸಾಧ್ಯವಾಗಿದೆ. ಉಪಗುರಾಣಿಕ (ಪ್ಯಾರತೈರಾಯ್ಡ್‌), ಮಾಂಸಲಿ (ಪ್ಯಾಂಕ್ರಿಯಾಸ್) ಗ್ರಂಥಿಗಳ ಬೇನೆಗಳಲ್ಲಿ ಮಾನವನ ಮೋತಿಬಿಂದು ಆಗುವುದು. ಆದರೆ ಮುಪ್ಪಿನಲ್ಲಿ ಆಗುವುದೇ ಸಾಮಾನ್ಯ.

ಎಳೆಮಕ್ಕಳಲ್ಲಿ ತಲೆಮಾರುಗಳಲ್ಲೂ ಮೋತಿಬಿಂದು ಆಗಬಹುದು. ಬಸುರಿನ ಮೊದಲ 3 ತಿಂಗಳಲ್ಲಿ ಸೀಮೆ ದಡಾರ (ಜರ್ಮನ್ ಮೀಸಲ್ಸ್‌) ಎದ್ದಿದ್ದರೂ ಹುಟ್ಟುವ ಕೂಸಿಗೆ ಹೀಗಾಗಬಹುದು. ಮೋತಿಬಿಂದು ಬೆಳೆಯುತ್ತಿರುವಾಗ, ಪಾಪೆಯಲ್ಲಿ ಬೂದು ಚುಕ್ಕೆಗಳಾಗೋ ಇಡೀ ಪಾಪೆ ಮಸಕಾಗೋ ತೋರಬಹುದು. ಕಣ್ಣಿನ ಉಳಿದೆಲ್ಲ ಭಾಗಗಳೂ ಆರೋಗ್ಯವಾಗಿದ್ದಲ್ಲಿ ಇಡೀ ಮಸೂರ ಮಸಕಾದರೂ ಪುರ್ತಿ ಕುರುಡಾಗದು. ಬೆಳಕು, ಬಣ್ಣಗಳನ್ನಾದರೂ ಗುರುತಿಸಬಹುದು. ಬೆಳಕು ಬರುವ ದಿಕ್ಕನ್ನೂ ಕಂಡುಕೊಳ್ಳಬಹುದು. ಬರಬರುತ್ತ ನೋಟ ಕುಂದಿ ಎದುರಿಗೆ ಹಿಡಿದ ಬೆರಳುಗಳನ್ನು ಕೂಡ ಎಣಿಸದಂತಾಗಿ, ಎಂದಿನ ಕೆಲಸಗಳಿಗೆ ತೊಡಕೆನಿಸಿದಾಗ, ಬೆಳೆಯುತ್ತಿರುವ ಮೋತಿ ಬಿಂದುಗಳಿಗೆ ಇಡೀ ಮಸೂರವನ್ನು ಶಸ್ತ್ರಚಿಕಿತ್ಸೆಯಿಂದ ತೆಗೆದುಹಾಕುವುದೊಂದೇ ಪರಿಣಾಮಕಾರ ಉಪಾಯ.

ಕಾಚೀ ದಿಂಡಿನ ರೋಗಗಳು[ಸಂಪಾದಿಸಿ]

ಬದುಕಿರುವ ಯಾವ ಜೀವಕಣಗಳೂ ಬಹುಮಟ್ಟಿಗೆ ಇಲ್ಲದ, ಗಿಜಿಯಂತಿರುವ (ಜೆಲ್ಲಿ), ಬಣ್ಣವಿರದ ಗಾಜುಗೋಳದಂತಿರುವ ವಸ್ತು (ವಿಟ್ರಿಯಸ್ ಬಾಡಿ) ಕಣ್ಣುಗುಡ್ಡೆಯೊಳಗೆ ಹಿಂದಣ ರಷ್ಟು ಭಾಗವನ್ನು ತುಂಬಿರುವುದು. ಇದಕ್ಕೆ ರೋಗ ಹತ್ತಿದರೆ ಕೊಂಚ ಮಸಕಾಗುತ್ತದೆ. ತರತರದ ಆಕಾರ, ಗಾತ್ರಗಳ ದಾರ, ಚುಕ್ಕೆಗಳಾಗಿ ಕಣ್ಣುಮುಂದೆ ತೋರಿದಾಗ ರೋಗಿ ಗಾಬರಿಯಿಂದ ವೈದ್ಯನ ಸಲಹೆಗೆ ಓಡುವನು. ಹೀಗೆ ತೇಲುವಂತೆ ಕಾಣುವ ವಸ್ತುಗಳಿಂದ ಅಷ್ಟೇನೂ ಕೆಡುಕಾಗದು. ಕಾಚೀ ದಿಂಡಿನ ಸುತ್ತ ಇರುವ ಊತಕಗಳಲ್ಲಿ ಕೊಂಚ ಉರಿತವೆದ್ದರೆ ಹೀಗಾಗುವುದು. ಆದರೆ ಇವು ದೊಡ್ಡ ಆಕಾರಗಳಲ್ಲಿ ಕಣ್ಣು ಮುಂದೆ ತೇಲಿ ಹೋದಂತೆ. ತಲೆ ಆಡಿಸಿದರೆ ಓಡಾಡಿದಂತೆ ಕಾಣುವುದರಿಂದ ರೋಗಿ ಗಾಬರಿಯಾಗುತ್ತಾನೆ. ಕೊಂಚಕಾಲದಲ್ಲೇ ಇದು ವಾಸಿಯಾಗುತ್ತದೆ. ಕಾಚೀ ದಿಂಡಿನಲ್ಲಿ ಮಸಕಿನ ಚುಕ್ಕೆಗಳು ಕಾಣುವುದು ಹೆಚ್ಚುತ್ತಿದ್ದರೆ ಬಾಸೆಯ ದಿಂಡು, ಕಣ್ವರಾಯು ಇಲ್ಲವೇ ಕಣ್ವಾಲದ ರೋಗಸೂಚನೆ ಆಗಿರಬಹುದು.

ಹತ್ತುಗಣ್ಣು[ಸಂಪಾದಿಸಿ]

ಕಾಚೀ ದಿಂಡಿನಿಂದ ತಯಾರಾಗುವ ನೀರಿನ ದ್ರವರಸವೇ ಕಣ್ಣಿನಲ್ಲಿನ ರಕ್ತನಾಳಗಳೇ ಇಲ್ಲದ ಮಸೂರಕ್ಕೂ ಕೋಡು ಪೊರೆಗೂ ಪುಷ್ಟಿ ಒದಗಿಸುತ್ತದೆ. ಇದು ಮುಂದಣ ಗೂಡಿನೊಳಕ್ಕೆ ಪಾಪೆಯ ಮೂಲಕ ಒಂದೇ ಸಮನೆ ಹರಿಯುತ್ತಲೇ ಇದ್ದು, ಬಿಳಿಪದರವೂ ಕೋಡು ಪೊರೆಯೂ ಕೂಡುವ ಮೂಲೆಯಲ್ಲಿ ಬಲುಕಿರಿದಾದ ಸಾಗಾಲುವೆಗಳ ಮೂಲಕ ಕಣ್ಣಿನಿಂದ ಹೊರಸಾಗುತ್ತದೆ. ಈ ದ್ರವರಸದ ತಯಾರಿಕೆ, ಹೊರಸಾಗಾಣಿಕೆಗಳ ವೇಗಗಳಿಂದ ಕಣ್ಣೊಳಗಿನ ಒತ್ತಡ ಹುಟ್ಟುವುದು. ಈ ಒತ್ತಡ ಇರುವುದರಿಂದಲೇ ಕಣ್ಣಿನ (ಉದ್ದ, ಅಗಲ, ದಪ್ಪ) ಆಕಾರ ಉಳಿಯುತ್ತದೆ. ಕಣ್ಣುಗುಡ್ಡೆ ಮೇಲೆ ಬಿಗುಪುಮಾಪಕವನ್ನು (ಟೋನೋಮೀಟರ್) ಒತ್ತಿರಿಸಿ ಕಣ್ಣೊಳಗಿನ ಒತ್ತಡವನ್ನು ಅಳೆಯಬಹುದು. ಸಾಮಾನ್ಯವಾಗಿ ಈ ಒತ್ತಡ 12-22 ಮಿಮೀ ಪಾದರಸದಷ್ಟಿರುವುದು. ಎಷ್ಟು ಬೇಕೋ ಅಷ್ಟಿದ್ದರೆ ಕಣ್ಣಿಗೆ ಆರೋಗ್ಯ. ಮಿತಿಮೀರಿದರೆ ಕಣ್ಣಿನ ಬಹುಪಾಲು ಎಲ್ಲ ಭಾಗಗಳಿಗೂ ಅಪಾಯಕರ.

ಕಣ್ಣೊಳಗಿನ ಒತ್ತಡ ಎಂದಿನ ಮಿತಿ ಮೀರಿ ಏರಿದ್ದರೆ, ಹತ್ತಗಣ್ಣು (ಗ್ಲಾಕೋಮ) ರೋಗವಾಗುತ್ತದೆ. ಈ ರೋಗದಲ್ಲಿ ದ್ರವರಸದ ತಯಾರಿಕೆಯ ವೇಗ ಎಂದಿನಂತೆ ಇದ್ದರೂ ಅದರ ಹೊರಸಾಗಣೆಗೆ ಎಲ್ಲಾದರೂ ಆತಂಕ ಆಗಿರುವುದು. ಕರಿಯಾಲಿ ದಿಂಡುರಿತದಲ್ಲಿ (ಐರಿಡೊಸೈಕ್ಲೈಟಿಸ್) ಪಾಪೆಯ ಅಂಚುಗಳು ಮಸೂರದ ಮುಂಭಾಗಕ್ಕೆ ರೋಸಿನಿಂದ ಅಂಟಿಕೊಳ್ಳುತ್ತವೆ. ಇದರಿಂದ ದೊಡ್ಡ ತಡೆ ಹಾಕಿದಂತಾಗಿ ಕರಿಯಾಲಿ ಹಿಂದುಗಡೆ ಕಣ್ಣೊಳಗಿನ ಒತ್ತಡ ಏರುತ್ತದೆ. ಹೀಗೇ ಮೋತಿ ಬಿಂದು ಆಗುವಾಗ ಹರಳಿನಂತಿರುವ ಮಸೂರ ಊದಿಕೊಂಡು ಕರಿಯಾಲಿಯನ್ನು ಕೋಡು ಪೊರೆಗೆ ತಳ್ಳುವುದರಿಂದಲೂ ದ್ರವರಸ ಹೊರಸಾಗಣೆಗೆ ಅಡ್ಡಿಯಾಗುವುದು. ಕಣ್ಣೊಳಗಿನ ಒತ್ತಡವೇರಿಕೆಯೇ ಇದರ ಪರಿಣಾಮ. ಕಣ್ಣಲ್ಲಿ ಬೇರೆಲ್ಲಾದರೂ ರೋಗವಾಗಿ ಆಮೇಲೆ ಕಾಣಬರುವುದಕ್ಕೆ ಮರುಚಲನ (ಸೆಂಕೆಡರಿ) ಹತ್ತಗಣ್ಣು ಎಂದಿದೆ. ಬೇರೆ ಯಾವ ಕಾರಣವೂ ಕಾಣದೆ ಕಂಡುಬರುವ ಬಗೆಯದು ಪ್ರಾಥಮಿಕ (ಪ್ರೈಮರಿ). ಏರಿದೊತ್ತಡದೊಂದಿಗೆ ಕೆಲವು ಗೊತ್ತಾದ ರೋಗ ಲಕ್ಷಣಗಳೂ ತೋರಬಹುದು. ಆಗಾಗ್ಗೆ ಕಣ್ಣು ಮಂಜಾಗುತ್ತದೆ. ದೀಪಗಳ ಸುತ್ತಲೂ ಬಣ್ಣದ ನೆರಿಗೆಗಳು ಕಾಣುವುದೂ ಕಣ್ಣೊಳಗೂ ಅದರ ಹಿಂದುಗಡೆಯೂ ಕೊಂಚವೋ ಜೋರಾಗೋ ನೋಯುವುದೂ ಸಾಮಾನ್ಯ. ಮೂಲೆ ಮುಚ್ಚಿಕೆಯಿಂದಾಗುವ ಈ ಹತ್ತಗಣ್ಣು ರೋಗಿ ಕಣ್ಣು ವಾಸಿಯಾಗದಷ್ಟು ಹಾಳಾಗುವ ಮುಂಚೆಯೇ ವೈದ್ಯನ ನೆರವು ಕೋರುವನು.

ಆದರೆ ರೋಗಿಗೆ ಕಣ್ಣು ಕೆಟ್ಟಿರುವುದು ಅರಿವಿಗೆ ಬರುವ ಮೊದಲೇ ಇನಿತೂ ನೋವಿಲ್ಲದೆ ಹಾಳಾಗಿಬಿಡುವ ಬೇರೂರಿದ ಹತ್ತಗಣ್ಣು ಗಲಾಟೆಯಿಲ್ಲದೆ ಆಗುವುದೂ ಉಂಟು. ಕಣ್ಣೊಳಗಿನ ಏರಿದೊತ್ತಡದಿಂದ, ಕಣ್ಣು ಗುಡ್ಡೆಯಿಂದ ಹಿಂದುಗಡೆ ನರತಂತುಗಳು ಹೊರಬೀಳುವ ಕಡೆಯ ಕಣ್ಜಾಲದ ರಕ್ತಪುರೈಕೆಗೆ ಅಡ್ಡಿಯಾಗುತ್ತದೆ. ಹೀಗೇಕೆಲವು ದಿನಗಳಿದ್ದರೆ ಆ ನರಂತುಗಳು ಸತ್ತು ಆಭಾಗದ ಕಣ್ಜಾಲ ನೋಟದ ಕೆಲಸಕ್ಕೆ ಬಾರದಾಗುವುದು. ಮೊದಲಮೊದಲು ಕಣ್ಜಾಲದ (ಫೀಲ್ಡ್‌ ಆಫ್ ವಿಷನ್) ನಡುಭಾಗಗಳಲ್ಲಿ ಕಣ್ಣು ಕಾಣದಂತಾಗಿ, ಏರಿದೊತ್ತಡ ಹಾಗೇ ಇದ್ದಲ್ಲಿ ಏನೂ ಕಾಣದಂತಾಗುವುದು.

ಬೇರೂರಿದ ಹತ್ತಗಣ್ಣು ಸಾಮಾನ್ಯವಾಗಿ ಎರಡು ಕಣ್ಣುಗಳಲ್ಲೂ ಒಂದೇ ಬಾರಿ ಕಾಣಿಸಿಕೊಳ್ಳದ್ದೊಂದು ರೋಗಿಯ ದೊಡ್ಡ ಪುಣ್ಯ. ಎರಡು ಕಣ್ಣುಗಳ ನೋಟದ ನಡುವೆ ವ್ಯತ್ಯಾಸ ತೋರಿದಾಗ ರೋಗಿಯೇ ಕಣ್ಣು ವೈದ್ಯನ ಸಲಹೆ ಕೋರುವನು. ಅಂತೂ ರೋಗಿ ತನಗೆ ಏನಾಗಿದೆಯೆಂಬ ಅರಿವು ಬರುವುದರೊಳಗಾಗಿ ಬೇರೂರಿದ ಹತ್ತಗಣ್ಣು ವೈದ್ಯನ ಮಾಮೂಲು ಪರೀಕ್ಷೆಯಲ್ಲೇ ಗೊತ್ತಾಗುತ್ತದೆ. ಇದಕ್ಕೋಸ್ಕರವೇ ಮುಂಬಯಿ ಮುಂತಾದೆಡೆಗಳಲ್ಲಿ ವಯಸ್ಸಿನ ಇಡೀ ಜನರನ್ನು ಒಟ್ಟಾರೆ ಪರೀಕ್ಷಿಸುತ್ತ ಈ ಬೇರೂರಿದ ಹತ್ತಗಣ್ಣು ರೋಗವನ್ನು ಕಂಡುಕೊಂಡು ನಿವಾರಕ ಸೂಚನೆಗಳನ್ನು ನೀಡಿ ಕಣ್ಣು ಕಳೆದುಕೊಳ್ಳುವುದನ್ನು ತಪ್ಪಿಸುವುದುಂಟು.

ಹತ್ತಗಣ್ಣಿನ ಚಿಕಿತ್ಸೆಗೆ ಮದ್ದುಗಳೂ ಇವೆ, ಶಸ್ತ್ರಕ್ರಿಯೆಯೂ ಇದೆ. ಕಣ್ಣಿಗೆ ಹಾಕುವ ಹಲವು ಮದ್ದುಗಳ ಮುಲಾಮು, ತೊಟ್ಟುಗಳು ಕಣ್ಣೊಳಗಿನ ಒತ್ತಡವನ್ನು ಇಳಿಸುತ್ತವೆ. ನುಂಗುವ ಮದ್ದುಗಳೂ ಕೆಲವಿವೆ. ಶಸ್ತ್ರಕ್ರಿಯೆಯಿಂದ ದ್ರವರಸದ ಹೊರಸಾಗಣೆಯ ಅಡಚಣೆಯನ್ನು ತೆಗೆಯಬಹುದು ಇಲ್ಲವೇ ಹೊಸ ದಾರಿಗಳನ್ನು ಮಾಡಬಹುದು. ಮುಖ್ಯವಾಗಿ, ಕಣ್ಣು ಇನ್ನಷ್ಟು ಹಾಳಾಗದಿರಬೇಕಾದರೆ ತೀರ ಎಳಸಿನ ಹಂತದಲ್ಲಿ ಕರಿಯಾಲಿಯಲ್ಲಿ ಗುಂಡಿಕಾಜದ ತೆರನ ತೂತು ಮಾಡಿದರೆ ವಾಸಿಯಾಗುತ್ತದೆ.

ಇಡೀ ಕಣ್ಣುಗುಡ್ಡೆಯ ರೋಗಗಳು[ಸಂಪಾದಿಸಿ]

ಹತ್ತೆನೋಟ (ಮೈಯೋಪಿಯ). ದೂರನೋಟ (ಹೈಪರೋಪಿಯ). ಅಸಮೋಸರಿಕೆ (ಅಸ್ಟಿಗ್ಮಾಟಿಸಂ) ಇವು ಕೇವಲ ಕಣ್ಣಿನ ಗಾತ್ರ. ಆಕಾರಗಳ ವ್ಯತ್ಯಾಸಗಳ ಪರಿಣಾಮವೇ ಹೊರತು ರೋಗಗಳಲ್ಲ. ಆದರೆ ಕಣ್ಣುಗುಡ್ಡೆ ಅಸಹಜವಾಗಿ ಉದ್ದ ಸಾಗಿದ್ದರಿಂದಲೋ ಬೆಳೆದುದರಿಂದಲೋ ಕಣ್ಜರಾಯವೂ ಕಣ್ವಾಲವೂ ಹಾಳಾಗಿ ಏಳುವ ಅನುವಳಿಕ ಹತ್ತೆಗಣ್ಣೇ ಬೇರೆ, ಕಣ್ಣು ನೋಟ ಹಾಳಾಗುವುದನ್ನು ತಪ್ಪಿಸಲು ಕಣ್ಣುಗುಡ್ಡೆಯನ್ನು ಶಸ್ತ್ರವೈದ್ಯ ಮೋಟು ಮಾಡಬಹುದು.

ಕಣ್ಣುಗುಳಿಯ ರೋಗಗಳು[ಸಂಪಾದಿಸಿ]

ಕಣ್ಣುಗುಳಿಯನ್ನು ಕಣ್ಣುಗುಡ್ಡೆಯೇ ಅಲ್ಲದೆ ಅದಕ್ಕೆ ಸಂಬಂಧಿಸಿದ ಸ್ನಾಯುಗಳು. ರಕ್ತನಾಳಗಳು, ನರಗಳು ಇವೆ. ಎರಡು ಕಣ್ಣುಗಳೂ ಮುಂಚಾಚಿಕೊಂಡು ಹೊರಗೆ ಎದ್ದು ಕಾಣುವುದಕ್ಕೆ ಮೆಡ್ಡಗಣ್ಣು (ಎಕ್ಸಾಫ್ತಾಲ್ಮೋಸ್) ಎಂದಿದೆ. ಗುರಾಣಿಕ (ತೈರಾಯ್ಡ್‌) ಗ್ರಂಥಿಯ ಮಿತಿಮೀರಿದ ಚಟುವಟಿಕೆಯಿಂದಾಗುವ ಒಳಸುರಿಕ ಗ್ರಂಥಿ ರೋಗವಾದ ಮೆಡ್ಡಗಣ್ಣಿನ ಗಳಗಂಡದ (ಗಾಯ್ಟರ್) ಲಕ್ಷಣವಿದು. (ನೋಡಿ- ಗುರಾಣಿಕ-ಗ್ರಂಥಿಯ-ರೋಗಗಳು). ಆ ಗ್ರಂಥಿ ರೋಗದ ಚಿಕಿತ್ಸೆಯೊಂದಿಗೆ ತೀರ ಹೊರಗೊಡ್ಡಿರುವ ಕಣ್ಣುಗುಡ್ಡೆಗೆ ಕಾಪನ್ನು ಒದಗಿಸಬೇಕಾಗುವುದು. ಒಂದೇ ಕಣ್ಣು ಹೀಗಾಗಿದ್ದರೆ ಆ ಕಣ್ಣುಗುಳಿಯಲ್ಲಿ ಏನೋ ಗಂತಿ ಬೆಳೆದಿರುವ ಸೂಚನೆಯಾಗಿರಬಹುದು.

ಕಣ್ಣಿನ ನರ, ನೋಟದರಿವಿನ ನರಗಳ ರೋಗಗಳು[ಸಂಪಾದಿಸಿ]

ಕಣ್ಜಾಲದ ನರತಂತುಗಳು ಒಂದುಗೂಡಿ ಕಣ್ಣಿನ ದಪ್ಪ ನರವಾಗಿ ಕಣ್ಣುಗಡ್ಡೆ ಹಿಂದುಗಡೆ ಮೂಗಿನ ಕಡೆಯ ಪಕ್ಕದಲ್ಲಿ ಹೊರಬಿದ್ದು, ಕಣ್ಣುಗಳಿ ಹಿಂತುದಿಯಲ್ಲಿ ಹಾದು ಕಪಾಲದೊಳಗಡೆ ಮೆದುಳಿನ ನೊಸಲ ಹಾಲೆಯ (ಫ್ರಾಂಟಲ್ ಲೋಬ್) ಕೆಳಗಿರುವುದು. ಇನ್ನೂ ಹಿಂದುಗಡೆ ಇನ್ನೊಂದು ಕಣ್ಣಿನದರೊಂದಿಗೆ ಈ ನರವೂ ಸೇರಿ ಅಡ್ಡ ಹಾದು ನರತಂತುಗಳನ್ನು ಹಂಚಿಕೊಳ್ಳುವುದು. ಇಲ್ಲಿಂದ ಹಿಂದಕ್ಕೆ, ಎರಡೂ ಕಣ್ಣುಗಳ ಕಣ್ಜಾಲಗಳ ಬಲಗಡೆ ಅರ್ಧಭಾಗದ ನರತಂತುಗಳು ಬಲ ನಿಮ್ಮಿದುಳ ಅರೆಗೋಳದೊಳಕ್ಕೂ (ಸೆಂಟ್ರಲ್ ಹೆಮಿಸ್ಪಿಯರ್), ಎಡಗಡೆ ಅರ್ಧಭಾಗವು ಎಡ ಅರೆಗೋಳದೊಳಕ್ಕೂ ತೂರುತ್ತವೆ. ಮೆದುಳಲ್ಲಿರುವವು ನೋಟದರಿವಿನ ನರಗಳು.

ಕಣ್ಣಿನ ನರ, ನೋಟದರಿವಿನ ನರಗಳಿಗೆ ಉರಿತ, ವಿಷಮಗಂತಿ, ರಕ್ತನಾಳ ರೋಗಗಳು ಹತ್ತಬಹುದು. ನರಗಳಿಗೆ ಮಾತ್ರ ಹತ್ತುವ ಜೀವಾಣುಗಳು ವಿಷ ಕಣಗಳು ಕಣ್ಣಿನ ನರಕ್ಕೆ ತಾಗಿದಲ್ಲಿ ಒಂದು ಕಣ್ಣಲ್ಲಿ ಅಲ್ಲಲ್ಲಿ ಕುರುಡು ಚುಕ್ಕೆಗಳು ಕಾಣಿಸಿಕೊಳ್ಳುತ್ತವೆ. ಮೆದುಳಲ್ಲಿನ ನೋಟದರಿವಿನ ನರಗಳಿಗೆ ತಾಕಿದರೆ, ಆಯಾ ಪಕ್ಕಗಳ ಅರೆಭಾಗದ ಕುರುಡಾಗಿ ಅರೆಗಣ್ನೋಟ (ಹೆಮಿಯನಾಪ್ಸಿಯ) ಆಗುವುದು. ಕಪಾಲದಲ್ಲಿನ ರೋಗಗಳಲ್ಲಿ ಕಣ್ಣಿನ ನೋಟ ಕುಂದಿದ್ದರೆ ಪರೀಕ್ಷಿಸಿದಾಗ, ತಲೆ ಬುರಡೆಯಲ್ಲಿ ಎಲ್ಲಿ ಏನಾಗಿರಬಹುದೆಂದು ಊಹಿಸಬಹುದು.

ಮೆಳ್ಳೆಗಣ್ಣು[ಸಂಪಾದಿಸಿ]

ಇಕ್ಕಣ್ಣಿನ (ಬೈನಾಕ್ಯುಲಾರ್) ನೋಟ ಚೆನ್ನಾಗಿರಬೇಕಾದರೆ ಎರಡು ಕಣ್ಣುಗಳ ಚಲನೆಯೂ ಒಂದಕ್ಕೊಂದು ಹೊಂದಿಕೊಂಡಿರಬೇಕು ಒಂದೊಂದು ಕಣ್ಣುಗುಡ್ಡೆ ಸುತ್ತ ಆರು ಸ್ನಾಯುಗಳೂ ಮಿದುಳಲ್ಲಿ ಅವಕ್ಕೆ ಸಂಬಂಧಿಸಿದ ಹೊಂದುಗೂಡಿಸುವ ನರಕೇಂದ್ರಗಳೂ ಇವೆ. ವರ್ಷದ ಎಳೆಗೂಸು ತನ್ನ ಕಣ್ಣುಗಳ ಚಲನೆಯನ್ನು ಅಂಕೆಗೆ ತರುವುದನ್ನು ಕಲಿತುಕೊಳ್ಳುತ್ತದೆ. ಇದಕ್ಕೆ ಅಡ್ಡಿ ಬರುವ ಕಾರಣಗಳು ಕೆಲವಿದೆ. ಎರಡು ಕಣ್ಣುಗಳೂ ದೂರನೋಟದವೋ ಹತ್ತೆ ನೋಟದವೋ ಆಗಿರಬಹುದು, ಎರಡು ಕಣ್ಣುಗುಡ್ಡೆಗಳ ಬೆಳೆವಣಿಗೆಯಲ್ಲಿ ವ್ಯತ್ಯಾಸವಿರಬಹುದು. ಕಣ್ಣು ಹೊರಗಿನ ಸ್ನಾಯುಗಳ ಬಲ ಒಂದೊಂದರಲ್ಲಿ ಒಂದೊಂದು ಮಟ್ಟಕ್ಕೆ ಇರಬಹುದು. ಮೆದುಳಲ್ಲಿ ಹತೋಟಿ ಕೇಂದ್ರಗಳ ವಿಕಾಸ ಕುಂದಿರಬಹುದು. ಹೀಗೆ ಯಾವ ಮಟ್ಟದಲ್ಲಿ ಕೆಟ್ಟಿದ್ದರೂ ಒಟ್ಟಾರೆ ಪರಿಣಾಮ ಮಾತ್ರ ಒಂದೇ. ಗಮನ ಸೆಳೆವ ವಸ್ತುವಿನಲ್ಲಿ ಒಂದು ಕಣ್ಣು ನೇರವಾಗಿ ನೆಟ್ಟಿದ್ದರೆ, ಇನ್ನೊಂದು ಕಣ್ಣು ಒಳಕ್ಕೋ ಹೊರಕ್ಕೋ ಮೇಲಕ್ಕೋ ಕೆಳಕ್ಕೋ ತಿರುಗಿರುತ್ತದೆ. ಇದಕ್ಕೆ ಮೆಳ್ಳೆಗಣ್ಣು (ಸ್ಕ್ವಿಂಟ್, ಸ್ಟ್ರಬೀಸ್ಮಸ್) ಎಂದಿದೆ. ಇದನ್ನು ವಿವರಿಸುವಾಗ ಯಾವ ದಿಕ್ಕಿನದೆಂದು ಸೂಚಿಸುವುದುಂಟು. ಒಂದೊಂದು ಬಾರಿ ಒಂದೊಂದು ಕಣ್ಣು ಹೀಗೆ ತಿರುಗುವುದೋ ಯಾವಾಗಲೂ ಇರುವುದೋ ಒಂದೊಂದು ಬಾರಿ ಬರುವುದೋ ಎಂಬುದನ್ನು ಗಮನಿಸಬೇಕು.

ಎಳೆಮಕ್ಕಳಲ್ಲಿ ಮೆಳ್ಳೆಗಣ್ಣು ಕೇವಲ ಮೊಗದ ಅಂದ ಕೆಡಿಸುವುದು ಮಾತ್ರವಲ್ಲ: ಮೆಳ್ಳೆಗಣ್ಣಾಗಿದ್ದರೆ ಎರಡೂ ಕಣ್ಣುಗಳ ನಡುವೆ ಎಂದಿನ ಹೊಂದಾಣಿಕೆ ಬೆಳೆಯದು, ಬೇರೆಡೆಗೆ ತಿರುಗುವ ಕಣ್ಣಿನ ನೋಟದ ಬಲ ಕುಗ್ಗುತ್ತ ಹೋಗುತ್ತದೆ. ಒಂದೇ ಕಣ್ಣಿನ ಮಳ್ಳೆಗಣ್ಣಾಗಿದ್ದರೆ ತುಂಬ ಕೆಡುಕಾದ್ದರಿಂದ ಕೂಡಲೇ ಕಣ್ಣುವ್ಶೆದ್ಯರಿಗೆ ತೋರಿ ತಕ್ಕ ಚಿಕಿತ್ಸೆ ಮಾಡಿಸಬೇಕು.

ಕಣ್ಣುಗಳ ಚಲನೆಯ ಇನ್ನೊಂದು ಸಾಮಾನ್ಯ ಬೇನೆಯಿದೆ. ಇದರಲ್ಲಿ ಎರಡು ಕಣ್ಣುಗಳ ನೋಟವೂ ನೆಟ್ಟಗಿದ್ದು. ಬೇನೆ ಬಿದ್ದಾಗಲೂ ಬೇಸರದ ದಣಿವಾದಾಗಲೂ ಒಂದು ಕಣ್ಣು ಒಳಕ್ಕೋ ಹೊರಕ್ಕೋ ತಿರುಗುವುದು, ಉಳಿದ ಹೊತ್ತಿನಲ್ಲೆಲ್ಲ ಚೆನ್ನಾಗಿರುತ್ತದೆ. ಬಿಟ್ಟು ಬಿಟ್ಟು ತೋರುವ ಈ ಮೆಳ್ಳೆಗಣ್ಣಿನಲ್ಲಿ ಮೆದುಳಿನ ನರಕೇಂದ್ರದ ಹತೋಟಿ ಕೆಲವೇಳೆ ತಪ್ಪಿರುತ್ತದೆ.

ಬಿಟ್ಟು ಬಿಟ್ಟು ಬರುವ ಮೆಳ್ಳೆಗಣ್ಣಿಗೂ ಹೊರಗಾಣದ (ಲೇಟೆಂಟ್) ಬಗೆಯದಕ್ಕೂ ಸಂಬಂಧವಿದೆ. ಎರಡನೆಯದರಲ್ಲಿ ಒಂದು ಕಣ್ಣನ್ನು ಒಂದು ತೊಟ್ಟುಚೂರಿಂದ ಮುಚ್ಚಿದರೆ ಮೆಳ್ಳೆಗಣ್ಣು ಹೊರತೋರುವುದು. ಹೊರಗಾಣದ ಮೆಳ್ಳೆಗಣ್ಣಲ್ಲಿ ಕಣ್ಣು ತ್ರಾಸ ಇರುತ್ತದೆ.

ಅದಿರುಗುಣ್ಣು[ಸಂಪಾದಿಸಿ]

ಎರಡು ಕಣ್ಣುಗಳೂ ತಾಳೆಗತಿಯಲ್ಲಿ ತಾವಾಗಿಯೇ ಅದಿರುವುದಕ್ಕೆ ಅದಿರುಗಣ್ಣು (ನಿಜ್ಟಾಗ್ಮಸ್) ಎಂದಿದೆ. ಗಾಡಿಯಲ್ಲಿ ಹೋಗುತ್ತಿರುವಾಗ, ಯಾರಾದರೂ ಆಚೆ ತಲೆಹಾಕಿ ಇಣಿಕಿ ನೋಡುತ್ತಿದ್ದರೆ ಅಡ್ಡಡ್ಡನೆಯ ಅದಿರುಗಣ್ಣು ತೋರುವುದು. ಹೀಗೇ ಮೇಲಕ್ಕೂ ಕೆಳಕ್ಕೂ ಆಡುವ ಎತ್ತುಗದಲ್ಲಿ (ಎಲಿವೇಟರ್) ಹೋಗುವಾಗ ಕಂಡಿಯಲ್ಲಿ ಇಣಿಕು ಹಾಕಿದರೆ ನೆಟ್ಟನೆಯ ಅದಿರಿಗಣ್ಣನ್ನು ಮಾತ್ರ ರೋಗ ಎನ್ನಬಹುದು. ಹುಟ್ಟಿದಾಗಲೋ ಹುಟ್ಟಿದ ಕೆಲವೇ ತಿಂಗಳಲ್ಲೋ ಅದಿರುಗಣ್ಣು ಕಾಣಿಸಿಕೊಂಡರೆ ಕಣ್ಜಾಲದ ನಡುವಣ ಭಾಗ ಸರಿಯಾಗಿ ವಿಕಾಸವಾಗಿಲ್ಲ ಎನ್ನಬಹುದು. ಆಗ ನೋಟ ಒಂದಿಷ್ಟು ಕುಂದಿರುವುದೇ ಹೊರತು ಕುರುಡಲ್ಲ. ವಯಸ್ಸಿಗೆ ಬಂದಮೇಲೆ ಅದಿರುಗಣ್ಣು ತೋರಿದರೆ ಕೇಂದ್ರದ ನರದ ಮಂಡಲದ ಬೇರೆ ಬೇರೆ ಭಾಗಗಳಿಗೆ ರೋಗ ಹತ್ತಿರುವ ಲಕ್ಷಣವದು. ಮೈಯ ಸಮತೋಲವನ್ನು ಉಳಿಸಿಕೊಳ್ಳುವುದರಲ್ಲಿ ಬಲು ಮುಖ್ಯವಾಗಿ ನೆರವಾಗುವ ನಡುವೆಯ ಸಾಧನ (ವೆಸ್ಟಿಬೂಲಾರ್ ಆಪರೇಟಸ್) ಅದಿರು ಗಣ್ಣಿನ ನರಬೇನೆಗಳಲ್ಲಿ ಕೆಟ್ಟಿರುವುದು ಸಾಮಾನ್ಯ.

ಕಣ್ಣಿನ ಚಲನೆಯ ಬೇನೆಗಳ ಚಿಕಿತ್ಸೆ ಮೂರು ಬಗೆಯದು. ಮುಖ್ಯವಾಗಿ ಚಿಕ್ಕ ಮಕ್ಕಳ ಮೆಳ್ಳೆಗಣ್ಣಿನ ಚಿಕಿತ್ಸೆಯಲ್ಲಿ ದುರ್ಬಲಕಣ್ಣಿನ ನೋಟವನ್ನು ಉತ್ತಮಗೊಳಿಸುವ ಎಲ್ಲ ಯತ್ನಗಳನ್ನೂ ಮಾಡಬೇಕು. ಕ್ರಮವಾಗಿ ಅಂಗಸಾಧನೆ, ಬಡವಾದ ಕಣ್ಣನ್ನು ಮುಚ್ಚಿರುವುದರಿಂದ ಅನುಕೂಲ. ಕಣ್ಣಿನ ಚಲನೆಗಳನ್ನು ನಿಧಾನವಾಗಿ ಮಾಡುತ್ತಿದ್ದರೆ ಮೆದುಳಿನ ಹತೋಟಿಯನ್ನು ಬರುಬರುತ್ತ ಪಡೆಯಬಹುದು. ಕಣ್ಣಿನ ಸ್ನಾಯುಗಳ ಸಮತೋಲ ವಿಪರೀತ ಏರುಪೇರಾಗಿದ್ದರೆ ಅವನ್ನು ಶಸ್ತ್ರಕ್ರಿಯೆಯಿಂದ ಸರಿಪಡಿಸಬೇಕು.

ಕಣ್ಣುಹೊರಗಿನ ಸ್ನಾಯುಗಳ ಇತರ ರೋಗಗಳು : ಒಂದು ಇಲ್ಲವೇ ಹಲವು ಸ್ನಾಯುಗಳ ಅರನಾರಿಯಾಗಿ ಕಣ್ಣುಗಳ ಚಲನೆ ಕೆಟ್ಟರೆ ಇನ್ನೋಟದಿಂದ (ಡಿಪ್ಲೋಪಿಯ) ಎಲ್ಲವೂ ಎರಡಾಗಿ ಕಾಣುವುದಲ್ಲದೆ ಅರನಾರಿಯಾದ ಸ್ನಾಯು ಇರುವ ಕಡೆಚಲನೆ ಇಲ್ಲವಾಗುತ್ತದೆ. ಇನ್ಙೋಟದ ರೋಗಿಗೆ ನಿಜವಾದ ಬಿಂಬಕ್ಕೂ ಹುಸಿಬಿಂಬಕ್ಕೂ ವ್ಯತ್ಯಾಸಗಾಣದೆ ತಬ್ಬಿಬ್ಬಾಗಿ ತೊಡಕಾಗುತ್ತದೆ. ಕೇಂದ್ರ ನರದ ಮಂಡಲದಲ್ಲಿ ಕೆಟ್ಟಿರುವುದರಿಂದ ಸಾಮಾನ್ಯ ವೈದ್ಯನ ಕಣ್ಣು ವೈದ್ಯನಿಗೆ ಬೇಕಾಗುತ್ತದೆ.

ಕಣ್ಣಿನ ಗಾಯ, ಪೆಟ್ಟುಗಳು[ಸಂಪಾದಿಸಿ]

ಸುಲಭವಾಗಿ ಕಟ್ಟುನಿಟ್ಟಿನ ಶಾಶ್ವತ ನೋಟಗುಂದಿಕ ಪೆಟ್ಟು, ಗಾಯಗಳಿಗೆ ಈಡಾಗುವಂತಿವೆ ಮಾನವಕಣ್ಣುಗಳು. ರೆಪ್ಪೆಗಳಂತೂ ಕಣ್ಣುಗಳಿಗೆ ಪುರ್ತಿ ಕಾಪು ಒದಗಿಸಲಾರವು. ಕೆಲವರು ಕೆಲಸ ಮಾಡುವಾಗ ತಮ್ಮ ತಲೆ, ಕಣ್ಣುಗಳನ್ನೂ ತೀರ ಹತ್ತಿರ ತರುವುದರಿಂದ ಅಪಾಯ ಇನ್ನೂ ಹೆಚ್ಚುವುದು. ಕಣ್ಣು ಬಲು ಸುಲಭವಾಗಿ ಹಾಳಾಗುವುದು. ಕೇವಲ ಒಂದು ಉಕ್ಕಿನ ಚೂರು ಕಣ್ಣಲ್ಲಿ ಹೊಕ್ಕರೆ ಇಡೀ ಕಣ್ಣೇ ಹಾಳಾಗಬಹುದು. ಅದರಲ್ಲೂ ಹರಳಂತಿರುವ ಮಸೂರ, ಕಾಜೀ ದಿಂಡು, ಇಲ್ಲವೇ ಕಣ್ಜಾಲಕ್ಕೆ ಪೆಟ್ಟಾಯಿತೆಂದರೆ ಶಾಶ್ವತವಾಗಿ ನೋಟ ಕುಂದುತ್ತದೆ.

ಕಣ್ಣೊಳಗೆ ತೂರದ ಗಾಯಗಳು ತೂರುವವಷ್ಟು ಅಪಾಯಕರವಲ್ಲ. ಆದ್ದರಿಂದ ಕಣ್ಣುವೈದ್ಯ ಗಾಯಗಳಲ್ಲಿ ಮೊದಲು ಈ ವ್ಯತ್ಯಾಸವನ್ನು ಗುರುತಿಸಿ ಮುಂದುವರಿವನು. ತೂರುವುದೆಂದರೆ ಕಣ್ಣುಗುಡ್ಡೆಯ ಮೂರೂ ಪದರಗಳನ್ನು ತೂತಿಟ್ಟುಕೊಂಡು ಹಾಯ್ದು ಕಣ್ಣೊಳಗೇ ಉಳಿವುದು. ಇದರಿಂದ ಗಾಯವಾದ ಊತಕಕ್ಕಾದ ಅಪಾಯದೊಂದಿಗೆ ಸೋಂಕೂ ಒಳಸೇರಿ, ಹೊರ ವಸ್ತುವೊಂದು ಒಳಗೇ ಉಳಿದು ಬಿಡುತ್ತದೆ. ತೂರಿದ ಗಾಯದಿಂದ ಮೊದಮೊದಲು ಏನೂ ತೊಡಕು ಕಾಣದಿರಬಹುದು. ಎಕೆಂದರೆ ತೂತು ಮುಚ್ಚಿಹೋಗಿರಬಹುದು. ಆದ್ದರಿಂದ ಯಂತ್ರಗಳೊಂದಿಗೆ ಕೆಲಸ ಮಾಡುವವರು ಏನಾದರೂ ಚೂಪಾದ ಚೂರು ಹಾರಿ ತೂರಿತು ಎನಿಸಿದರೆ ಕೂಡಲೇ ಕಣ್ಣುವೈದ್ಯನನ್ನು ಕಾಣುವುದೊಳ್ಳೆಯದು. ತೂರಿದ ಗಾಯವಾದಾಗ, ಕೂಡಲೇ ಒಳಸೇರಿದ ಹೆರವಸ್ತುವನ್ನು ಕಂಡುಕೊಂಡು ತೆಗೆಯಬೇಕು. ತೂರಿ ತೂತಾಗಿರುವುದನ್ನು ಶಸ್ತ್ರಕ್ರಿಯೆಯಿಂದ ಮುಚ್ಚಬೇಕು. ಸೋಂಕುರೋಧಕ ಮದ್ದುಗಳನ್ನು ಬಳಸಬೇಕು.

ಒಂದು ಕಣ್ಣಿನ ತೂರುವ ಗಾಯದಿಂದೇಳುವ ಮಹಾಕೆಡುಕೆಂದರೆ ಚೆನ್ನಾಗಿರುವ ಕಣ್ಣಿಗೂ ಅಪಾಯ ತಾಕುವುದೇ. ವಿರಳವಾಗಿ, ವಿಪರೀತ ಗಾಯವಾಗಿ ಕರಿಯಾಲಿ, ಬಾಸೆಯ ದಿಂಡಿನ ಉರಿತ ಆಗಿಯೇ ಇದ್ದರೆ, ಗಾಯವಾದ ಕಣ್ಣಲ್ಲಿ ಹಾಳಾದ ಊತಕಗಳಿಗೆ ಎದುರಾಗಿ ಹುಟ್ಟಿದ ರೋಧವಸ್ತುಗಳಿಂದ (ಆಂಟಿಬಾಡೀಸ್) ಇನ್ನೊಂದು ಕಣ್ಣಿನ ಉರಿತವಾಗುವುದು. ಎಷ್ಟೊ ಬಾರಿ ಕೆಲವು ವರ್ಷಗಳು ಕಳೆದ ಮೇಲೆ ಹೀಗಾಗಬಹುದು. ಕೊನೆಗೆ ಆ ಕಣ್ಣೂಕುರುಡಾಗಿ ಕೆಲಸಕ್ಕೆ ಬಾರದಷ್ಟು ಹಾಳಾಗುತ್ತದೆ. ಈಗ ಸ್ಟಿರಾಯ್ಡ್‌ ಮದ್ದುಗಳಿಂದ ಇದನ್ನು ತಡೆಯಬಹುದು. ಪೆಟ್ಟುಬಿದ್ದು ಸರಿಪಡಿಸಲಾಗದ ಕಣ್ಣನ್ನು ತೆಗೆದು ಹಾಕಿದರೂ ಇನ್ನೊಂದು ಕಣ್ಣು ಉಳಿಯ ಬಹುದು.

ಕಣ್ಣಿನ ಸಾವಿರಾರು ತೆರನ ಗಾಯ, ಪೆಟ್ಟುಗಳಲ್ಲಿ ತಾಕುವ ವಸ್ತುವಿಗೆ ವೇಗವಿಲ್ಲದ್ದ ರಿಂದ ಕಣ್ಣುಗುಡ್ಡೆಯ ಒಳಹೊಗಲಾರದು. ಸಣ್ಣಪುಟ್ಟ ವಸ್ತುಗಳು ಕೇವಲ ಕೂಡುಪೊರೆ, ಕೂಡು ಪೊರೆಗಳಲ್ಲಿ ಹುದುಕಿಕೊಳ್ಳುತ್ತವೆ. ಆದ್ದರಿಂದ ಸುಲಭವಾಗಿ ತೆಗೆಯಬಹುದು. ಆದರೆ ಕೂಡ ಪೊರೆಯನ್ನು ಗೀಚಿದರೆ ದಿನವೆಲ್ಲ ನೋವಿರುತ್ತದೆ. ತಕ್ಕ ಚಿಕಿತ್ಸೆಯಾದರೆ, ಪುರ್ತಿ ವಾಸಿಯಾಗುವುದು. ಆದರೆ ಆಮ್ಲಗಳೋ ಕ್ಷಾರವೋ ಕಣ್ಣಿಗೆ ಹಾರಿದರೆ ಕೂಡುಪೊರೆ, ಕೂಡುಪೊರೆಗಳ ಮೇಲಿನ ಪದರಗಳೇ ಹಾಳಾಗುತ್ತವೆ. ಇದರಿಂದ ಕಣ್ಣುಗುಡ್ಡೆ ಚಲನೆ ಮಿತಿಗೊಳ್ಳುವುದು. ಕೂಡಲೇ ಧಾರಾಳವಾಗಿ ಸಾಮಾನ್ಯ ನಲ್ಲಿ ನೀರಿನಿಂದ ಕಣ್ಣನ್ನು ಚೆನ್ನಾಗಿ ತೊಳೆದರೆ, ಮುಂದೆ ನಿಧಾನವಾಗಿ ಶಸ್ತ್ರವೈದ್ಯ ಗಮನಿಸುವುದಕ್ಕಿಂತ ಸಾವಿರ ಪಾಲು ಮೇಲು. ಕಣ್ಣುಗುಡ್ಡೆಗೆ ಮೂಗಪೆಟ್ಟು ಬಿದ್ದರೆ ಕೆಲವೆಡೆ ಬಿರಿದು ಒಡೆಯಬಹುದು. ಇದರಿಂದ ಬಹಳ ಅಪಾಯವಿದೆ. ಮೊದಲು ರೆಪ್ಪೆಯಲ್ಲಿ ರಕ್ತ ಸುರಿದು ಕೆಂಪೇರಿರುವುದರಿಂದ ಒಳಗಿನ ನಾಳದ ಅಪಾಯ ಹೊರಗಾಣದೆ ಹೋಗುತ್ತದೆ.

ಕಣ್ಣಿನಲ್ಲಿ ಏಳುವ ವಿಷಯಗಂತಿಗಳು: ಕಣ್ಣಿನಲ್ಲಿ ಎರಡು ಬಗೆಗಳ ಏಡಿಗಂತಿಗಳು ಏಳುತ್ತವೆ. ಹಸುಗೂಸುಗಳ ಇಲ್ಲವೇ ಹಸುಳೆಗಳ ಕಣ್ಜಾಲದಲ್ಲಿ ಏಳುವ ಕಣ್ಜಾಲಮೊಳ್ಗಂತಿ (ರೆಟೀಸೊಬ್ಲಾಸ್ಟೋಮ) ಒಂದು; ನಡುವಯಸ್ಸಿಗರಲ್ಲಿ ನೀಲಿಪೊರೆಯಲ್ಲಿ ಏಳುವ ವಿಷಮ ಕರ್ವಣ್ಣಗಂತಿ (ಮೆಲಿಗ್ನೆಂಟ್ ಮೆಲನೋಮ) ಇನ್ನೊಂದು. ಆವುಗಳ ಕಾರಣಗೊತ್ತಿಲ್ಲ. ಆದರೆ ಕಣ್ಜಾಲಮೊಳ್ಗಂತಿ ಕೆಲವು ತಲೆಮಾರುಗಳಲ್ಲಿ ತಲೆಹಾಕುವಂತಿದೆ. ಎಳೆಯದರಲ್ಲೇ ಕಂಡುಹಿಡಿದು, ಗಂತಿಯನ್ನೋ ಕೆಲವೇಳೆ ಇಡೀ ಕಣ್ಣುಗುಡ್ಡೆಯನ್ನೊ ತೆಗೆದು ಹಾಕುವುದರಿಂದ ವಿಷಯ ಕರ್ವಣ್ಣಗಂತಿಯಿಂದ ರೋಗಿ ಸಾಯುವುದನ್ನು ತಪ್ಪಿಸಬಹುದು, ಕಣ್ಣಾಲಮೊಳ್ಗಂತಿ ಎರಡು ಕಣ್ಣುಗಳಲ್ಲೂ ಹಲವು ಗಂತಿಗಳು ಎದ್ದಹಾಗೆ ತೋರಬಹುದು. ಕಣ್ಜಾಲವೊಳ್ಗಂತಿ ಎರಡು ಕಣ್ಣುಗಳಲ್ಲೂ ಹಲವು ಗಂತಿಗಳು ಎದ್ದಹಾಗೆ ತೋರಬಹುದು. ವಿಕಿರಣ ಚಿಕಿತ್ಸೆ, ಏಡಿ ಗಂತಿಮಾರಕ ಮದ್ದುಗಳಿಂದಲೂ ಚಿಕಿತ್ಸೆ ನಡೆಸಬಹುದು. (ಎಸ್.ಟಿ.ಪಿ;ಕೆಎಸ್ಯು.;ಡಿ.ಎಸ್.ಎಸ್.)

ಕಣ್ಣಿನ ಶಸ್ತ್ರವೈದ್ಯ[ಸಂಪಾದಿಸಿ]

: ಸಣ್ಣದಾಗಿದ್ದರೂ ಜಟಿಲ ಇಂದ್ರಿಯವಾದ ಕಣ್ಣಿನ ಮೇಲೆ ನಡೆಸುವ ಶಸ್ತ್ರವೈದ್ಯ. ಬಲು ಸಣ್ಣ ಕೋಮಲವಾದ ರಚನಾಂಶಗಳ ಮೇಲೆ ಶಸ್ತ್ರಕ್ರಿಯೆ ಆಗಬೇಕಿರುವುದರಿಂದ ಇದನ್ನು ಮಿಲಿಮೀಟರು ಶಸ್ತ್ರವೈದ್ಯ ಎನ್ನುವುದುಂಟು. ಇದರಲ್ಲಿ ಕೈಗೊಂಡದ್ದು ಕೈಗೂಡುವುದಕ್ಕೂ ಅನಾಹುತಕ್ಕೂ ಅಷ್ಟೇನೂ ಅಂತರವಿಲ್ಲ. ಸಾಮಾನ್ಯ ಶಸ್ತ್ರವೈದ್ಯನಿಗೆ ಇರಬೇಕಾದ ಮನಸು, ಚುರುಕುತನ, ಕೈಚಳಕಗಳೊಂದಿಗೆ ಕಣ್ಣಿನ ಶಸ್ತ್ರವೈದ್ಯನ ಕಣ್ಣುಗಳ ನೋಟ ಚೆನ್ನಾಗಿರಬೇಕಲ್ಲದೆ ಇಕ್ಕಣ್ಣು (ಬೈನಾಕ್ಯುಲರ್) ನೋಟವೂ ಚೆನ್ನಾಗಿರಲೇಬೇಕು. ಕೈಗಳಲ್ಲಿ ಇನಿತೂ ನಡುಕವಿರಬಾರದು. ಶಸ್ತ್ರ ಕ್ರಿಯೆಯಲ್ಲಿ ಬಲಗೈಯಷ್ಟೇ ಸರಾಗವಾಗಿ ಎಡಗೈಯನ್ನೂ ಬಳಸುವಂತಿದ್ದರಂತೂ ಇನ್ನೂ ಅನುಕೂಲ. ಕಣ್ಣಿನ ಶಸ್ತ್ರಕ್ರಿಯೆ ಕಣ್ಣಿನೊಳಗೋ ಹೊರಗೋ ನಡೆಸಬಹುದು. ಕಣ್ಣುಗುಡ್ಡೆಯ ಮೇಲಿನವಲ್ಲದೆ ಕಣ್ಣಿಗೆ ಸಂಬಂಧಿಸಿದ ಗುಡ್ಡೆ. ಹೊರಗಿನ ಸ್ನಾಯುಗಳು, ಕಣ್ಣುಗುಳಿ, ರೆಪ್ಪೆಗಳು, ಕಣ್ಣೀರು ಗ್ರಂಥಿ ಚೀಲ ನಾಳಗಳ ಮೇಲೂ ಶಸ್ತ್ರಕ್ರಿಯೆ ಆಗುವುದು. ಕಣ್ಣುಗಳ ಮೇಲೆ ನಡೆವ ಶಸ್ತ್ರಕ್ರಿಯೆಯ ಉದ್ದೇಶಗಳು ಹಲವಾರಿವೆ.

ಮೊದಲಾಗಿ, ಕಣ್ಣಿಂದ ನೋಡುವಂತೆ ಮಾಡುವುದರಲ್ಲಿ ಕಣ್ಣಿನ ಪೊರೆ ತೆಗೆಯುವುದು ಸಾಮಾನ್ಯ. ಕಣ್ಣೊಳಗೆ ಮಸಕಾಗಿ ಗಟ್ಟಿಯಾಗಿರುವ ಮಸೂರವನ್ನು (ಪೊರೆ) ಶಸ್ತ್ರಕ್ರಿಯೆಯಿಂದ ಹೊರತೆಗೆಯಬೇಕು. ಕಣ್ಣಿನ ನೋಟದ ಅರಿವಿಗೆ ಮೂಲಕಾರಣವಾದ, ಕಣ್ಣುಗುಡ್ಡೆಯ ಒಳಪದರವಾಗಿರುವ ಕಣ್ಜಾಲ ಕಳಚಿಕೊಂಡರೆ (ರೆಟೀನಲ್ ಡಿಟ್ಯಾಚ್ಮೆಂಟ್) ಕುರುಡಾಗುತ್ತದೆ. ಇದನ್ನು ಮತ್ತೆ ಸರಿಗೂಡಿಸಲು ಶಸ್ತ್ರಕ್ರಿಯೆಯಿಂದಲೂ ಅಸಾಧ್ಯ ; ಇತ್ತೀಚೆಗೆ, ಲೇಸರ್ ಕಿರಣಗಳಿಂದ ಸರಿಪಡಿಸುವ ಯತ್ನಗಳೂ ಕೈಗೂಡಿವೆ. ಕಣ್ಣುಗುಡ್ಡೆ ಮುಂಭಾಗದಲ್ಲಿ ತಿಳಿಗಾಜಂತಿರುವ ಕೋಡು ಪೊರೆಯಲ್ಲಿ ಕಣ್ಣು ಹೂವಾಗಿ ಬಿಳಿ ಚುಕ್ಕೆಗಳಿಂದ ಕುರುಡಾಗುವುದರಿಂದ, ಕೋಡು ಪೊರೆಯನ್ನು ಮಾತ್ರ ತೆಗೆದುಹಾಕಿ, ಆ ಜಾಗದಲ್ಲಿ ಬೇರೆಯವರ ಕಣ್ಣಿಂದ ದಾನವಾಗಿ ತಂದುದನ್ನು ಜೋಡಿಸಿ ನಾಟಿ ಹಾಕುವುದು (ಕಾರ್ನಿಯೊಪ್ಲಾಸ್ಟಿ) ಇತ್ತೀಚೆಗೆ ಜನಪ್ರಿಯವಾಗಿ ಬಹಳ ಮಂದಿಗೆ ಕಣ್ಣುಬಂದಿದೆ. ಇದನ್ನೇ ನೇತ್ರದಾನ ಎನ್ನುವುದುಂಟು; ಇಲ್ಲಿ ಕೇವಲ ಅವರೆ ಕಾಳಗಲದ ತಿಳಿಪೊರೆಯನ್ನು ನಾಟಿಹಾಕಲಾಗುವುದೇ ಹೊರತು, ಇಡೀ ಕಣ್ಣುಗುಡ್ಡೆಯನ್ನು ಇನ್ನೊಬ್ಬರಿಗೆ ನಾಟಿಹಾಕಲು ಇಂದಿಗೂ ಸಾಧ್ಯವಾಗಿಲ್ಲ.

ಇರುವ ನೋಟವನ್ನು ಕಾಪಿಡುವುದು ಕಣ್ಣಿನ ಶಸ್ತ್ರವೈದ್ಯದ ಇನ್ನೊಂದು ಉದ್ದೇಶ. ಒಂದು ಕಣ್ಣು ಗುಡ್ಡೆಯಲ್ಲಿ ಏನೋ ಕಾರಣದಿಂದ ಇದಕ್ಕಿದ್ದ ಹಾಗೆ ಒಳಗಡೆ ಒತ್ತಡ ಏರಿ ಕಣ್ಣುಕಾಣದಂತೆ ಆಗುವುದಕ್ಕೆ ಹತ್ತಗಣ್ಣು (ಗ್ಲಾಕೋಮ) ಎಂದು ಹೆಸರು. ಮದ್ದುಗಳಿಗೆ ಜಗ್ಗದಂತಾದರೆ, ಕಣ್ಣುಗುಡ್ಡೆ ಶಾಶ್ವತವಾಗಿ ಹಾಳಾಗುವುದನ್ನು ತಪ್ಪಿಸಲು ಏರಿದ ಒತ್ತಡವನ್ನು ಶಸ್ತ್ರಕ್ರಿಯೆಯಿಂದ ಇಳಿಸುವುದೊಂದೇ ದಾರಿ.

ಕುರುಡಾಗುವುದನ್ನು ತಪ್ಪಿಸಲೂ ಕೆಲವು ಶಸ್ತ್ರಕ್ರಿಯೆಗಳನ್ನು ಕೈಗೊಳ್ಳುವುದುಂಟು. ಕೋಡು ಪೊರೆಗೆ ರೋಗಹತ್ತಿ ಹಾಳಾಗುವಂತಿದ್ದರೆ, ಕೆಲವೇಳೆ ಅದು ವಾಸಿಯಾಗುವ ತನಕ ಕಣ್ಣು ತೆರೆಯಲಾಗದಂತೆ ರೆಪ್ಪೆಗಳು ಮುಚ್ಚಿರುವಂತೆ ಹೊಲಿದಿರಬೇಕಾಗುತ್ತದೆ. ಹಾಗೇ ಕಣ್ಗುಳಿಯಲ್ಲಿ ಬೆಳೆದ ಗಂತಿಯಿಂದಲೋ ಏರಿದ ಒತ್ತಡದಿಂದಲೋ ಕಣ್ಣಿನ ಹಿಂದಿರುವ ಮುಖ್ಯ ನರವೇ ಅಪಾಯಕ್ಕೊಳಗಾದಾಗ ಕೂಡಲೇ ಶಸ್ತ್ರಕ್ರಿಯೆಯಿಂದ ಹೋಗಲಾಡಿಸಬೇಕು.

ಕಣ್ಣಿನಲ್ಲಿ ಬೆಳೆವ ಏಡಿಗಂತಿ ತೆರನ ಮಾಂಸಗಂತಿ (ಸಾರ್ಕೋಮ) ಮುಂತಾದವು ಬೆಳೆದಾಗ ಶಸ್ತ್ರಕ್ರಿಯೆಯಿಂದ ಬುಡಮಟ್ಟ ತೆಗೆದು ಹಾಕಿ ರೋಗಿಯ ಸಾವನ್ನು ತಪ್ಪಿಸುವ ಸಂದರ್ಭಗಳೂ ಇವೆ. ಕೇವಲ ಮದ್ದುಗಳಿಂದ ಕಣ್ಣಲ್ಲಿನ ತಡೆಯಲಾಗದ ನೋವು, ಶೂಲೆಗಳನ್ನು ಕಳೆಯಲೂ ಶಸ್ತ್ರಕ್ರಿಯೆ ಆಗುವುದುಂಟು. ಕಣ್ಣೀರು ಒಂದೇ ಸಮನೆ ಸುರಿಯುತ್ತಿದ್ದಲ್ಲಿ, ಕಣ್ಣೀರು ಗ್ರಂಥಿ, ಚೀಲ, ನಾಳಗಳಲ್ಲಿನ ರೋಗದ ಪರಿಣಾಮವಾಗಿ ಅಡಚಣೆಯಾಗಿರುವುದನ್ನು ಕಳೆಯಲೂ ಸಾಮಾನ್ಯವಾಗಿ ಶಸ್ತ್ರಕ್ರಿಯೆ ಮಾಡಬೇಕಾಗುತ್ತದೆ.

ಕಣ್ಣಿನ ಅಂದ ಹೆಚ್ಚಿಸುವ ಶಸ್ತ್ರಕ್ರಿಯೆಗಳು ಕೆಲವಿವೆ. ಅಂಥವಲ್ಲಿ ಮೆಳ್ಳೆಗಣ್ಣಿನದೂ ಒಂದು. ಕಣ್ಣುಗುಡ್ಡೆ ಹೊರಮೈಮೇಲಿರುವ ಸ್ನಾಯುಗಳಲ್ಲಿ ಕೆಲವನ್ನು ಮೊಟಕುಗೊಳಿಸಿ ಇಲ್ಲವೇ ಉದ್ದ ನೀಟುವುದರಿಂದ ಇವನ್ನು ಸುಲಭವಾಗಿ ಚಿಕ್ಕಂದಿನಲ್ಲೇ ಸರಿಪಡಿಸಬಹುದು. ತೀರ ಏನೂ ಕಾಣದಂತಾಗಿ ವಿಕಾರವಾದ ಕಣ್ಣನ್ನು ಕಿತ್ತು ಹಾಕಿ ನಕಲಿ ಕಣ್ಣನ್ನು ತೋರಿಕೆಗಾಗಿ ಇಡಬಹುದು. ಕಣ್ಣು ರೆಪ್ಪೆಗಳು ಜೋಲು ಬೀಳುವುದು, ಒಳಕ್ಕೋ ಹೊರಕ್ಕೋ ಮಡಿಸಿ ಅಂಟಿರುವುದು ಮುಂತಾದುವನ್ನೂ ಶಸ್ತ್ರಕ್ರಿಯೆಯಿಂದ ಸರಿಪಡಿಸಬಹುದು. (ಡಿ.ಸಿ.)

ಕಣ್ಣುವಿಜ್ಞಾನ[ಸಂಪಾದಿಸಿ]

ಕಣ್ಣುಗಳ ರಚನೆ, ನಿಜಗೆಲಸ, ಊನ, ಕುಂದು, ರೋಗಗಳನ್ನು ವಿವರಿಸುವ ವಿಜ್ಞಾನ (ಆಫ್ತಾಲ್ಮೋಲಜಿ). ವೈದ್ಯವಿಜ್ಞಾನದಲ್ಲಿ ಒಂದು ಮುಖ್ಯ ಇಂದ್ರಿಯವಾದ ಕಣ್ಣನ್ನು ಇದು ವಿಶೇಷವಾಗಿ ಪರಿಶೀಲಿಸುತ್ತದೆ. ನರವಿಜ್ಞಾನ, ಒಳಾಂಗ ವೈದ್ಯವಿಜ್ಞಾನ, ರೋಗವಿಜ್ಞಾನ, ಶಸ್ತ್ರವೈದ್ಯ, ಔಷಧವಿಜ್ಞಾನ, ರೋಗನಿರೋಧಕ ವಿಜ್ಞಾನ, ಪಿಂಡವಿಜ್ಞಾನ ಮುಂತಾದವೆಲ್ಲ ಇದಕ್ಕೂ ಅನ್ವಯವಾಗುತ್ತವೆ. ಕಣ್ಣಿನ ವಿಕಾಸದಲ್ಲಿ ಕುಂದು, ರೋಗ, ಗಾಯ, ಪೆಟ್ಟುಗಳು, ರಕ್ತನಂಟು, ಪುಷ್ಟಿಗೇಡು, ಅನುವಳಿಕೆ(ಡಿಜನರೇಷನ್) ಮುಪ್ಪು, ಒಸರಿಕೆ (ರಿಫ್ರಾಕ್ಷನ್) ಇವುಗಳಲ್ಲಿ ಯಾವುದರಿಂದ ನೋಟ ಕೆಟ್ಟರೂ ಅದನ್ನು ಸರಿಪಡಿಸುವ ಜವಾಬ್ದಾರಿ ಕಣ್ಣು ವೈದ್ಯನದು. ಈತ ದೇಹವನ್ನು ಪರೀಕ್ಷಿಸಿ ವೈಗೋ ನರಗಳಿಗೋ ಹತ್ತಿದ ರೋಗಗಳನ್ನು ಕಂಡುಹಿಡಿಯುವಾಗ ನೋಟ ಮತ್ತು ಕಣ್ಣೊಳಗಿನ ಪರೀಕ್ಷೆಗಳನ್ನು ವಿಶೇಷವಾಗಿ ಮಾಡಿ ಮದ್ದುಗಳನ್ನೊ ನೋಟ ಸರಿಪಡಿಸಲು ಕನ್ನಡಕಗಳನ್ನೋ ಸಲಹೆ ಮಾಡಿ, ಬೇಕೆನಿಸಿದಾಗ ಶಸ್ತ್ರವೈದ್ಯವನ್ನೂ ಕೈಗೊಳ್ಳುವನು. ಕಣ್ಣು ವೈದ್ಯರ ತರಬೇತಿಗಾಗಿ ಬೇರೆ ಆಸ್ಪತ್ರೆಗಳೂ ಸಂಸ್ಥೆಗಳೂ ಸಂಶೋಧನಾಲಯಗಳೂ ಇವೆ. ಕಣ್ಣುವೈದ್ಯ ಪರಿಣತ ಮೊದಲು ಸಾಮಾನ್ಯ ವೈದ್ಯನಾಗಿರಬೇಕು ನಂತರ ವೈದ್ಯರ ಕಾಲೇಜುಗಳಲ್ಲೂ ಪದವೀಧರರಾಗುವವರಿಗೆ ಇದಕ್ಕಾಗಿ ಬೇರೆ ತರಬೇತಿ 2 ವರ್ಷ -ಡಿ.ಓ.ಎಂ.ಎಸ್ ಮತ್ತು 3 ವರ್ಷ ಎಂ.ಎಸ್. ಪದವಿ ಪಡೆಯಬೇಕು.

ಒಬ್ಬನ ಬಾಳುವೆಯಲ್ಲಿ ಕಣ್ಣಿನ ಮುಖ್ಯಪಾತ್ರ ನಮ್ಮ ಪುರ್ವಿಕರಿಗೆ ಚೆನ್ನಾಗಿ ಮನದಟ್ಟಾಗಿತ್ತು. ಅವರಿಗೆ ಕೊಂಚಮಟ್ಟಿಗೆ ಕಣ್ಣಿನ ರಚನೆ ತಿಳಿದಿದ್ದರೂ 18ನೆಯ ಶತಮಾನಕ್ಕೂ ಹಿಂದೆ ಕಣ್ಣಿನ ನಿಜಗೆಲಸದ ಕಲ್ಪನೆ ಅಷ್ಟಾಗಿರಲಿಲ್ಲ. ಪುರಾತನ ಈಜಿಪ್ಟಿನರು ಕಣ್ಣುವಿಜ್ಞಾನವನ್ನು ವಿಶೇಷವಿಜ್ಞಾನವೆಂದು ಪರಿಗಣಿಸಿದ್ದರು. 17ನೆಯ ಶತಮಾನದ ಕೆಪ್ಲರ್ ಡೆಕಾರ್ಟೆ ಕಣ್ಣುವಿಜ್ಞಾನದ ಮೂಲ ಸೂತ್ರಗಳ ಅರಿವು ಇತ್ತೆಂದು ತೋರುತ್ತದೆ. ಕಣ್ಣಿನ ರೋಗಗಳನ್ನು ಕುರಿತು ಕೆಲವು ಪುಸ್ತಕಗಳಿದ್ದುವು: ಜಾರ್ಜ್ ಬಾರ್ಟಿಷನ ಜರ್ಮನ್ ಪುಸ್ತಕ (1583), ಕಣ್ಣಿನ ನೋಟದ ಕೆಡದಂತಿರಿಸಿಕೆ ಎಂಬ ರಿಚರ್ಡ್ ಬ್ಯಾನಿಸ್ಟರನ ಇಂಗ್ಲಿಷ್ ಪುಸ್ತಕ (1583). ಲೀಡನ್ನಿನಲ್ಲಿ ಹರ್ಮನ ಬೊಯೊರೇವ್ ಕಣ್ಣುವಿಜ್ಞಾನದ ಮೇಲೆ ಉಪನ್ಯಾಸಗಳನ್ನಿತ್ತ (1708) ಕಣ್ಣಿನ ಮೇಲೆ ಬಿಂದುವಿಗಾಗಿ (ಕ್ಯಾಟರಾಕ್ಟ್‌) ಕಣ್ಣಿನ ಮಸೂರವನ್ನು ತೆಗೆದುಹಾಕುವ ವಿಧಾನವನ್ನು ಮೊದಲು ಜಾರಿಗೆ ತಂದ ಜಾಕ್ವಿಸ್ ಡೇವಿಯಲ್(1752) ಕಣ್ಣು ನೋಟದ ಕುಂದುಗಳಲ್ಲಿ, ಹತ್ತ ಕಣ್ಣು (ಗ್ಲೊಕೋಮಾ) (1750). ರಾತ್ರಿ ಕುರುಡು (1767), ಬಣ್ಣ ಕುರುಡುತನ (1794), ಅಸಮನಿಟ್ಟು (ಅಸ್ಟಿಗ್ಮಾಟಿಸಂ) (1801) ಮೊದಲು ಗಮನಕ್ಕೆ ಬಂದುವು. ಕಣ್ಣೊಳಗಿನ ಹೊಂದುವಳಿ(ಅಕಾಮಡೇಷನ್) ಸ್ನಾಯುಗಳನ್ನು ಮಾರ್ಗಾಗ್ನಿ ವಿವರಿಸಿದ (1761). ತಾರಕೆಯ (ಐರಿಸ್) ಚಲನೆಗಳನ್ನು ಮೊದಲಾ ಫಾಂಟಾನ ಬಣ್ಣಿಸಿದ (1775). ಕಣ್ಣೊಳಗಿರುವ ಬಿಳಿ ಚುಕ್ಕೆಯನ್ನು (ಮ್ಯಾಕ್ಯುಲ ಲೂಟಿಯ) ಬುಜೆ಼ ಬಣ್ಣಿಸಿದರೂ ಅದಕ್ಕೆ ಹೆಸರಿಟ್ಟವ ಸೊಮ್ಮರಿಂಗ್ (1791). ತಾಮಸ್ ಯಂಗ್ನ ಪ್ರಕಟಣೆಗಳಿಂದ (1800-1804) ದೃಗ್ವಿಜ್ಞಾನದ (ಆಪ್ಟಿಕ್ಸ್‌) ಯಾಂತ್ರಿಕತೆ, ಬೆಳಕಿನ ಅಲೆ ಸಿದ್ಧಾಂತ ಇವುಗಳಿಂದ ಕಣ್ಣುವಿಜ್ಞಾನ ಮುನ್ನಡೆಯಿತು. ಆದರೆ ಇಂದಿನ ಕಣ್ಣುವಿಜ್ಞಾನ ನಿಜವಾದ (1850) ವಿಜ್ಞಾನದ ಮಟ್ಟಕ್ಕೇರಿದ್ದು ಹರ್ಮನ್ ವಾನ್ಹೆಲ್ಮ್‌ ಹೋಲ್ಜ್‌ ಕಣ್ಣು ದರ್ಶಕವನ್ನು (ಆಫ್ತಾಲ್ಮೋಸ್ಕೋಪ್) ಕಂಡುಹಿಡಿದ ಮೇಲೆ ಮಾತ್ರ 19ನೆಯ ಶತಮಾನದ ಕೊನೆಯರ್ಧದಲ್ಲಿ ಆಲ್ಟೆಕ್ಟ್‌ ವಾನ್ ಗ್ರೀಫ್ (1828-70) ಮತ್ತು ಅವನ ಹಿಂಬಾಲಕರು ಕಣ್ಣಿನ ಓಸರಿಕೆ, ಹೊಂದುವಳಿಗಳನ್ನು ಅಭ್ಯಸಿಸಿ ಅವುಗಳ ರೋಗಗಳನ್ನು ಚೆನ್ನಾಗಿ ಚಿಕಿತ್ಸೆ ಮಾಡಿ ಶಸ್ತ್ರಕ್ರಿಯಾ ವಿಧಾನಗಳನ್ನೂ ಜಾರಿಗೆ ತಂದರು. ಕಣ್ಣಿನ ಶಸ್ತ್ರವೈದ್ಯದ ತಂದೆ ಗ್ರೀಫ್ ಎನ್ನಬಹುದು. ನೋಟದ ಕುಂದುಗಳನ್ನು ಕನ್ನಡಕಗಳಿಂದ ಸರಿಪಡಿಸುವ ಇಂದಿನ ವಿಧಾನಗಳನ್ನು ಜಾರಿಗೆ ತಂದವ ಫ್ರಾನ್ಸ್‌ ಕಾರ್ನೆಲಿಸ್ ಡಾಂಡರ್ಸ್ (1818-89). ಕಣ್ಣಲ್ಲಿ ಬೆಳಕಿನ ಗತಿಯನ್ನು ವಿವರಿಸಿ ನೊಬೆಲ್ ಬಹುಮಾನ (1911) ಪಡೆದವನು ಅಲ್ಪಾರ್ ಗಲ್ ಸ್ಟ್ರಾಂಡ್ (1862-1930). ಕಣ್ಣಿನ ಪೊರೆ ಶಸ್ತ್ರಕ್ರಿಯೆಯನ್ನು ಯೋಜನಾಬದ್ಧ ರೀತಿಯಲ್ಲಿ ಮಾಡಿದ ಕೀರ್ತಿ ಜಾಕ್ಸ್‌ ಡೇವಿಯಲ್(1696-1762)ಗೆ ಸಲ್ಲುತ್ತದೆ. 1748ರಲ್ಲಿ ಈತ ಇದನ್ನು ಮಾಡಿ ತೋರಿಸಿದ.

ಈತ ಕಾರ್ನಿಯಾದ ಕೆಳಭಾಗದಲ್ಲಿ ಉದ್ದನೆ ಗಾಯಮಾಡಿ, ಸೂಕ್ತ ಉಪಕರಣದಿಂದ ಅದನ್ನು ಎತ್ತಿ ಹಿಡಿದು ಮಸೂರದ ಹಿಂದೆ ಸೂಜಿಯನ್ನು ತೂರಿಸಿ ಮಸೂರ ಹೊರ ತೆಗೆಯುತ್ತಿದ್ದ. ಹಾಗೆ ಮಾಡುವಾಗ ಕೆಲವೊಮ್ಮೆ ವಿಟ್ರಿಯಸ್ ಹೊರಗೆ ಬರುತ್ತಿತ್ತು. 1756ರಲ್ಲಿ ಈತ 434 ಶಸ್ತ್ರಕ್ರಿಯೆ ಮಾಡಿದ್ದು, ಅದರಲ್ಲಿ 50ರಲ್ಲಿ ಮಾತ್ರ ಅಪಯಶಸ್ಸು ದೊರಕಿತ್ತು.

ಡೇವಿಯಲ್ನ ತಂತ್ರ ಕಷ್ಟವಾದ್ದರಿಂದ ಪರ್ಸಿವಲ್ ಪಾಟ್ ಎಂಬ ಬ್ರಿಟಿಷ್ ನೇತ್ರತಜ್ಞ, ಆಂಟೋನಿಯೋ ಸ್ಕಾರ್ಪ್ ಎಂಬ ಇಟಲಿಯ ವೈದ್ಯ ಡುಪಿಟ್ರಿನ್ ಎಂಬ ಫ್ರೆಂಚ್ ತಜ್ಞ-ಎಲ್ಲರೂ ಹಳೆಯ ಕೌಚಿಂಗ್ ಪದ್ಧತಿಯನ್ನೇ ಅನುಸರಿಸುತ್ತಿದ್ದರು. 1752ರಲ್ಲಿ ಜಾರ್ಜ್ ಡಿ.ಲ.ಫಾಯ್ ಎಂಬ ಫ್ರೆಂಚ್ ತಜ್ಞ ಡೇವಿಯಲ್ನ ತಂತ್ರವನ್ನು ತೀರ ಸುಲಭಗೊಳಿಸಿ, ಎರಡೇ ಉಪಕರಣಗಳಿಂದ ಪೊರೆ ತೆಗೆಯುವುದನ್ನು ಪ್ರಚಲಿತಗೊಳಿಸಿದ. ಅನಂತರದ ಬೆಳೆವಣಿಗೆಯೆಂದರೆ 1759-84ರ ಮಧ್ಯೆ ಪಿಯರ್ ಫ್ರಾಂಕೋಯಿಸ್-ಬೆನಜೆಟ್ ಪಾಮಾರ್ಡ್ ತಂದ ಮೂರು ಬದಲಾವಣೆಗಳು, ರೋಗಿಯನ್ನು ಕೂರಿಸುವುದಕ್ಕಿಂತ ಮಲಗಿಸಿ ಶಸ್ತ್ರಕ್ರಿಯೆ ಮಾಡಿದರೆ ಒಳ್ಳೆಯದು ಎಂಬ ಅಂಶ. ಅನಂತರ ಶಸ್ತ್ರಕ್ರಿಯೆ ಮಾಡುವಾಗ ಕಣ್ಣು ಚಲಿಸದಂತೆ ಮಾಡಲು ಒಂದು ಉಪಕರಣವನ್ನು ಉಪಯೋಗಿಸಿದ. ಕಾರ್ನಿಯದ ಕೆಳಭಾಗಕ್ಕಿಂತ ಮೇಲ್ಭಾಗದಲ್ಲಿ ಗಾಯ ಮಾಡಿದರೆ ಹೆಚ್ಚು ಒಳ್ಳೆಯದು ಎಂಬುದನ್ನು ಕಂಡುಹಿಡಿದ.

ಮೊದಲಿನ ಗಾಯಗಳು ಕಾರ್ನಿಯದ ಮೇಲೆಯೇ ಇರುತ್ತಿದ್ದವು. 1863ರಲ್ಲಿ ಜೂಲಿಯಸ್ ಜೇಕವಸನ್ ಎಂಬಾತ ಲಿಂಬಸ್ ಭಾಗದಲ್ಲಿ ಗಾಯ ಮಾಡಲು ಆರಂಬಿಸಿದ ನಂತರ ತೊಡಕುಗಳು ಶೇ.3ಕ್ಕೆ ಇಳಿದವು. 1866ರಲ್ಲಿ ಅಲ್ಟ್ರೆಕ್ಟ್‌ವಾನ್ ಗ್ರೀಫೆ ಲೀನಿಯರ್ ಎಕ್ಸ್‌ಟ್ರಾಕ್ಷನ್ ಎಂಬ ಹೊಸ ಪದ್ಧತಿಯನ್ನು ಆರಂಭಿಸಿದ. ಐರಿಡೆಕ್ಟಮಿ ಮಾಡುವ ಪದ್ಧತಿ ಆಗಲೇ ಆರಂಭವಾಯಿತು. ಆದರೆ ತಾರಕೆಯ ಒಂದು ಬದಿಗೆ ಮಾತ್ರ ಮಾಡುವ ಫೆರಿಫರಲ್ ಐರಿಡೆಕ್ಟಮಿ 1895ರಲ್ಲಿ ಬಜಾರ್ಡಿ ಎಂಬಾತನಿಂದ ಆರಂಭವಾಯಿತಾದರೂ, 1911-12ರಲ್ಲಿ ಎಲ್ಷ್‌ನಿಗ್ನಿಂದ ಜನಪ್ರಿಯವಾಯಿತು. ಮಸೂರವನ್ನು ಅದರ ಪದರಗೂಡಲೇ ಇಡಿಯಾಗಿ ಹೊರಗೆ ತೆಗೆಯುವ ಪದ್ಧತಿ 1753ರಲ್ಲಿ ಸ್ಯಾಮುಯೆಲ್ ಷಾರ್ಪ್ ಲಂಡನ್ನಲ್ಲಿ ಆರಂಭಿಸಿದ. ಈತ ತನ್ನ ಹೆಬ್ಬೆರಳಿನ ಒತ್ತಡದಿಂದಲೇ ಮಸೂರವನ್ನು ಹೊರ ತೆಗೆಯುತ್ತಿದ್ದ. ಅನಂತರ ವಿವಿಧ ಉಪಕರಣಗಳಿಂದ ಒತ್ತಡ ಕೊಟ್ಟು ಮಸೂರ ಹೊರ ತೆಗೆಯಲಾರಂಭಿಸಿದರು. ಅಮೃತಸರದ ಮಲ್ರೋನೆಜ್ ಎಂಬಾತ ಕಂಡು ಹಿಡಿದ ಪದ್ಧತಿಯನ್ನು ಕಲೋನೆಲ್ ಹೆನ್ರಿ ಸ್ಮಿತ್ (1900-26) ಎಂಬಾತ ಭಾರತದ ಬಹಳ ರೋಗಿಗಳಲ್ಲಿ ಪ್ರಯೋಗಿಸಿ ಶಸ್ತ್ರಕ್ರಿಯೆ ನಡೆಸಿದ. ಇದೇ ರೀತಿ ಲೂಪ್, ವೆಕ್ವಿಸ್, ಸ್ಪೂನ್, ಮೊದಲಾದವುಗಳನ್ನು ಉಪಯೋಗಿಸಿ ಕಣ್ಣಿನ ಗುಡ್ಡೆಗೆ ಒತ್ತುಕೊಟ್ಟು ಮಸೂರ ಹೊರತೆಗೆಯುವ ಪದ್ಧತಿಯನ್ನು ಜಗತ್ತಿನಾದ್ಯಂತ ವಿವಿಧ ತಜ್ಞರುಗಳು ನಡೆಸತೊಡಗಿದರು. ಇದರಲ್ಲಿ ವಿಟ್ರಿಯಸ್ ಹೊರಗೆ ಬಂದು ವಿವಿಧ ತೊಂದರೆಗಳನ್ನು ಒಡ್ಡುವ ಅಪಾಯ ಇದ್ದೇ ಇತ್ತು. ಇದನ್ನು ಮನಗಂಡು ಇದಕ್ಕೆ ಬದಲಾಗಿ ಮಸೂರವನ್ನು ಚಿಮಟದಿಂದಲೇ ಹೊರ ತೆಗೆಯುವ ಪದ್ಧತಿಯನ್ನು 1870ರಲ್ಲಿ ಟೆರ್ಸನ್ ಎಂಬಾತ ಆರಂಭಿಸಿದ. ನಂತರ 1878ರಲ್ಲಿ ಲ್ಯಾಂಡ್ಸ್‌ ಬರ್ಗ್ ಎಂಬಾತ ಬೇರೆ ರೀತಿಯ ಉಪಕರಣದಿಂದ ಇದನ್ನು ಮಾಡಿದರೂ, ಯೂಜಿನ್ಕಾಲ್ಟ್‌ (1894-1925) ಎಂಬಾತ ಪ್ಯಾರಿಸ್ನಲ್ಲಿ, ಇದಕ್ಕಾಗಿಯೇ ಬೇರೆ ರೀತಿಯ ಚಿಮಟವನ್ನೇ (ಛಿಚಿಠಿsuಟeಜಿoಡಿಛಿeಠಿs) ಕಂಡು ಹಿಡಿದ. ಇದನ್ನು ಹಲವು ಬದಲಾವಣೆಗಳೊಂದಿಗೆ, ಬುಕಾರ್ಸ್ಟ್‌ನ ಸ್ಟಾನ್ ಕುಲೇನ್ (1912) ನ್ಯೂಯಾರ್ಕ್ನ ಅರ್ನಾಲ್ಡ್‌ ನ್ಯಾಸ್ (1914-47) ಪ್ರಾಗ್ನ ಆಂಟನ್ ಎಲ್ಷ್‌ನಿಗ್ (1922-32) ಎಡಿನ್ಬರೋದ ಆರ್ಥರ್ ಸಿನ್ಕ್ಲೇರ್-ಅವರುಗಳು ಜನಪ್ರಿಯಗೊಳಿಸಿದರು.

ಮಸೂರದ ತಂತುಗಳನ್ನು ನಾಶಗೊಳಿಸಿ (Zoಟಿuಟoಡಿ ಜisಣಡಿuಛಿಣioಟಿ) ಹೊರ ತೆಗೆಯುವ ಪದ್ಧತಿ 1866ರಲ್ಲಿ ಡಿಲೂಕ ಎನ್ನುವಾತನಿಂದ ಆರಂಭಗೊಂಡರೂ-ಆಲ್ಫಾ-ಕ್ರೀಮೋಟ್ರಿಪ್ಸಿನ್ ಉಪಯೋಗಿಸಿ ಅದನ್ನು ಒಳ್ಳೆಯ ರೀತಿಯಿಂದ ಮಾಡಿದ ಕೀರ್ತಿ 1958ರಲ್ಲಿ ಜೆ.ಬರಾಕರ್ಗೆ ಸಲ್ಲುತ್ತದೆ.

ಹೊಲಿಗೆಗಳು : ಕಾರ್ನಿಯದ ಭಾಗದಲ್ಲಿ ಉಂಟಾದ ಗಾಯವನ್ನು ಹೊಲಿಗೆಯ ಮೂಲಕ ಮುಚ್ಚುವ ಪದ್ಧತಿ 1867ರಲ್ಲಿ ಹೆನ್ರಿ ವಿಲಿಯಮ್ಸ್‌ನಿಂದ ಆರಂಭಗೊಂಡರೂ 30 ವರ್ಷಗಳ ನಂತರ 1894ರಲ್ಲಿ ಕಾಲ್ಸ್‌ನಿಂದ ಜನಪ್ರಿಯಗೊಂಡಿತು. ಅದರ ಹಲವು ಬದಲಾವಣೆಗಳು ಉಪಯೋಗಕ್ಕೆ ಬಂದವು.

ಸ್ಥಳೀಯ ಅರಿವಳಿಕೆ ಉಪಯೋಗಿಸುವುದು ಮತ್ತು ವಿವಿಧ ಔಷಧಗಳನ್ನು ಉಪಯೋಗಿಸಿ ನೋವನ್ನು ಕಡಿಮೆಮಾಡುವುದು-ಇವು ಮುಂದಿನ ಬೆಳೆವಣಿಗೆಗಳಾದವು. ವಿಯನ್ನಾದ ಕಾರ್ಲ್ ಕೋಲರ್ ಎಂಬಾತ 1884ರಲ್ಲಿ ಕೋಕೇನ್ ಹನಿಗಳನ್ನು ಕಣ್ಣಿಗೆ ಬಿಟ್ಟು ಈ ಪದ್ಧತಿ ಆರಂಭಿಸಿದ. ರಿಟ್ರೋಬಲ್ಪಾರ್ ಇಂಜೆಕ್ಷನ್ ಉಪಯೋಗಿಸುವುದು ಆರಂಭಿಸಿದ್ದು 1928ರಲ್ಲಿ ಎಲ್ಷ್‌ನಿಗ್. ಫೇಶಿಯಲ್ ನರದ ಶಾಖೆಗಳಿಗೆ ಇಂಜೆಕ್ಷನ್ ಕೊಟ್ಟು ಅರಿವಳಿಕೆ ಉಂಟುಮಾಡುವ ಪದ್ಧತಿ ಆರಂಭಿಸಿದ್ದು ಬ್ರಸೆಲ್ಸ್‌ನ ವಾನ್ಲಿಂಟ್ 1914ರಲ್ಲಿ. ರೈಟ್ (1921-26) ಎಂಬ ಮದ್ರಾಸಿನ ತಜ್ಞ ಕಿವಿಗಿಂತ ಸ್ವಲ್ಪ ಮುಂಭಾಗದಲ್ಲಿ ಇಂಜೆಕ್ಷನ್ ಕೊಡುವ ರೀತಿಯಲ್ಲಿ ಬದಲಾಯಿಸಿದರೂ ಅದನ್ನು ತೀರ ಸರಳಗೊಳಿಸಿದವನು ಓಬ್ರೈನ್ ಎಂಬಾತ (1929). ಕಣ್ಣಿನ ಪೊರೆ ಶಸ್ತ್ರಕ್ರಿಯೆಯ ಅನಂತರ ದಪ್ಪ ಕನ್ನಡಕ ಕೊಡುವ ಪದ್ಧತಿಯನ್ನು 1623ರಲ್ಲಿ ಬೆನಿಟೋ ಡಾಜಾ ಡಿ ವಾಲ್ಡಿಸ್ ಎಂಬಾತನು ಹೇಳಿದ್ದರೂ ಒಂದು ಶತಮಾನ ಕಳೆಯುವವರೆಗೂ, ಅಂದರೆ 18ನೇ ಶತಮಾನದವರೆಗೂ ಇದು ಜಾರಿಗೆ ಬಂದಿರಲಿಲ್ಲ. (ಡಿ.ಎಸ್.ಎಸ್.; ಎಚ್.ಎಸ್.ಎಂ.)