ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಪಠ್ಯಪುಸ್ತಕ

ವಿಕಿಸೋರ್ಸ್ದಿಂದ

ಪಠ್ಯಪುಸ್ತಕ - ವಿದ್ಯಾರ್ಥಿಗಳ ವ್ಯಾಸಂಗಕ್ಕಾಗಿ ನಿರ್ಮಿತವಾಗಿದ್ದು ನಿರ್ದಿಷ್ಟ ವ್ಯಾಸಂಗ ವಿಷಯವನ್ನು ಶಿಷ್ಟರೀತಿಯಲ್ಲಿ ತಿಳಿಸುವ ಪುಸ್ತಕ (ಟೆಕ್ಸ್ಟ್ ಬುಕ್). ಕಲಿವಿಗೂ ತರಗತಿಯ ಬಳಕೆಗೂ ಮನೆಯ ವ್ಯಾಸಂಗಕ್ಕೂ ಪರೀಕ್ಷೆ ಸಿದ್ಧತೆಗೂ ಅವರು ಇದನ್ನೇ ಅನುಸರಿಸುತ್ತಾರೆ. ಅಧ್ಯಾಪಕರೂ ಬಹುಮಟ್ಟಿಗೆ ಇದನ್ನೇ ಅನುಸರಿಸುತ್ತಾರೆ. ವಿಷಯದ ಪ್ರತಿಪಾದನೆ ಹಾಗೂ ಬೋಧನೆಗಳ ಕ್ರಮ, ವಿಷಯಪ್ರಮಾಣ ಮತ್ತು ವ್ಯಾಪ್ತಿ, ಶಿಕ್ಷಣಾಭಿವೃದ್ಧಿಯ ಪರೀಕ್ಷೆ-ಇವೆಲ್ಲಕ್ಕೂ ಅವರಿಗೆ ಇದೇ ಆಧಾರ. ಶಿಕ್ಷಣದಲ್ಲಿ ಇಷ್ಟೊಂದು ಪ್ರಭಾವವನ್ನು ಹೊಂದಿರುವ ಈ ಪ್ರಮುಖ ಪಾಠೋಪಕರಣದ ರಚನೆ, ಮುದ್ರಣ, ಆಯ್ಕೆ ಮತ್ತು ಬಳಕೆ ಆಸಕ್ತಿಯ ವಿಷಯಗಳೆನಿಸಿವೆ.

ಪಠ್ಯಪುಸ್ತಕ ಬರೆಯತಕ್ಕವರು ಆ ವಿಷಯದ ಪಾಂಡಿತ್ಯವುಳ್ಳವರಾಗಿರುವುದರಲ್ಲಿ ಜೊತೆಗೆ ಲೇಖನ ಕಲೆಯಲ್ಲೂ ಪರಿಶ್ರಮ ಹೊಂದಿರುವುದು ಅಗತ್ಯ. ಅದನ್ನು ಆಧರಿಸಿ ವಿದ್ಯಾಥಿಗಳ ಜ್ಞಾನರೂಪುಗೊಳ್ಳುವುದರಿಂದ ವಿಷಯ ನಿರ್ದೋಷವಾಗಿಯೂ ನಿರ್ವಿವಾದವಾಗಿಯೂ ಇರಬೇಕಾಗುತ್ತದೆ. ಅಲ್ಲದೆ ಯಾವ ವಯಸ್ಸಿನ ಮಕ್ಕಳಿಗೆ ಎಷ್ಟು ವಿಷಯವನ್ನು ಯಾವ ರೀತಿ ತಿಳಿಸಬೇಕು ಎಂಬುದು ಬಲು ಮುಖ್ಯವಾದ ವಿಚಾರ. ಅಲ್ಲಿನ ವಿಷಯ ಜ್ಞಾನವನ್ನು ವರ್ಧಿಸುವಂತಿರಬೇಕು. ಶೈಲಿ ಆಕರ್ಷಕವಾಗಿರಬೇಕು. ಶಬ್ದ ಭಂಡಾರ ಆಯಾ ವಯಸ್ಸಿನ ಮಕ್ಕಳ ಹಿಡಿತಕ್ಕೆ ನಿಲುಕುವಂತಿರಬೇಕು. ಮುಖ್ಯವಾಗಿ ಪ್ರಾಥಮಿಕ ಶಾಲೆಗಳಲ್ಲಿ ಬಳಸಬಹುದಾದ ಪಠ್ಯಪುಸ್ತಕಗಳ ಬಗ್ಗೆ ಕೆಲವು ವಿವರಗಳನ್ನು ಮುಂದೆ ಕೊಡಲಾಗಿದೆ.

ಪುಸ್ತಕ ಒಂದು ವಿಷಯಕ್ಕೆ ಸಂಬಂಧಿಸಿದಂತೆ ಹಲವಾರು ಭಾಗಗಳನ್ನು ಒಳಗೊಂಡಿರಬಹುರು ; ಅಥವಾ ಒಂದು ವಿಯಷಕ್ಕೆ ಸಂಬಂಧಿಸಿದಂತೆ ಬೇರೆ ಬೇರೆ ಪಾಠಗಳನ್ನೊಳಗೊಂಡಿರಬಹದು. ಒಂದು ದೀರ್ಘ ವಿಷಯನ್ನು ಕುರಿತ ಹಲವಾರು ಅಧ್ಯಾಯಗಳಿದ್ದರೆ ಒಂದೊಂದು ಭಾಗಕ್ಕೂ ಪ್ರತ್ಯೇಕವೂ ಉಚಿತವೂ ಆದ ಶೀರ್ಷಿಕೆ ಕೊಡುವುದರ ಜೊತೆ ಹಿಂದಿನ ಪಾಠಕ್ಕೂ ಮುಂದಿನ ಪಾಠಕ್ಕೂ ನಡುವೆ ಸಹಜ ಸಂಬಂಧ ಏರ್ಪಡುವಂತೆ ನೋಡಿಕೊಳ್ಳಬೇಕು. ಗ್ರಂಥದ ಒಟ್ಟು ವಿಷಯದಲ್ಲಿ ಒಂದು ಸಾಮರಸ್ಯವಿರಬೇಕು. ಒಂದೊಂದು ಪಾಠ ಅಥವಾ ಅಧ್ಯಾಯದಲ್ಲಿ ಹಲವಾರು ಭಾವನೆಗಳು ಬಂದಾಗ ಅವನ್ನು ಪ್ರತ್ಯೇಕ ಪ್ಯಾರಾಗಳಾಗಿ ಒಡೆಯಬೇಕು. ಆರಂಭದಲ್ಲಿ ಆ ಪಾಠ ಅಥವಾ ಅಧ್ಯಾಯದ ಮುಖ್ಯಾಂಶ ಸಂಗ್ರಹವಾಗಿ ನಮೂದಾಗಿರಬೇಕು. ಕೊನೆಯಲ್ಲಿ ಆ ಪಾಠದ ವಿಷಯ ಮತ್ತೊಮ್ಮೆ ಧ್ವನಿತವಾಗುವಂಥ ಮಾತುಗಳಿಂದ ಮುಕ್ತಾಯವಾಗಬೇಕು. ಪಾಠದ ಆರಂಭದಲ್ಲಿ ವಿಷಯದ ಸೂಚನೆಯಿದ್ದರೆ, ಮಧ್ಯ ಅದರ ವಿಸ್ತಾರ ನಿರೂಪಣೆ ಬರಬೇಕು. ಜೊತೆಗೆ ಪಾಠದಲ್ಲಿ ಯಾವ ಭಾವನೆಯನ್ನೂ ಅನಗತ್ಯವಾಗಿ ಅತಿಯಾಗಿ ಲಂಭಿಸಬಾರದು. ಪಾಠದ ಕೊನೆಯಲ್ಲಿ ಬೋಧನೆಗೂ ಕಲಿವಿಗೂ ಮನೆಯಲ್ಲಿ ಮತ್ತೆ ವಿಷಯವನ್ನು ಮನನ ಮಾಡಿಕೊಳ್ಳುವುದಕ್ಕೂ ಅಗತ್ಯವೆನಿಸಿದರೆ ಬೇರೆ ಪುಸ್ತಕವನ್ನು ತಂದು ಓದುವುದಕ್ಕೂ ಯುಕ್ತ ಚಟುವಟಿಕೆಗಳನ್ನು ಕೈಗೊಳ್ಳುವುದಕ್ಕೂ ತಕ್ಕ ಅಭ್ಯಾಸ ಭಾಗ ಇರಬೇಕು.

ಪಾಠದಲ್ಲಿ ಬಳಸುವ ಭಾಷೆ ಸರಳವಾಗಿರಬೇಕು. ವಾಕ್ಯಗಳು ಅತಿ ದೀರ್ಘವಾಗಿರಬಾರದು, ಆಯಾ ಅಂತಸ್ತಿಗೆ ಮೀರಿದ ಪದಗಳನ್ನು ಸಾಧ್ಯವಾದ ಮಟ್ಟಿಗೆ ಬಳಸಬಾರದು. ಹೇಳತಕ್ಕ ವಿಷಯ, ನೀಡತಕ್ಕ ವಿವರಣೆ ಸ್ಪಷ್ಟಪಡುವಂತೆ ಉಚಿತರೀತಿಯ ಚಿತ್ರ, ನಕ್ಷೆ ಮುಂತಾದವನ್ನು ಸೇರಿಸಬಹುದು. ಪಾಠದ ವಿಷಯ ಸ್ಪಷ್ಟಪಡಿಸಬಲ್ಲ ಉದಾಹರಣೆ, ವಿವರಣೆ ಮುಂತಾದ ನಿದರ್ಶನಗಳನ್ನೂ ಬಳಸಬಹುದು. ಚಿಕ್ಕ ಮಕ್ಕಳ ಪಠ್ಯಪುಸ್ತಕಗಳಲ್ಲಂತೂ ಇವು ಅತ್ಯಗತ್ಯ.

ಪಠ್ಯ ಪುಸ್ತಕದ ವಿಷಯ ನಿರೂಪಣೆಯಂತೆ ಅದರ ಅಂಗ ರಚನೆಯು ಉಚಿತವಾಗಿರಬೇಕು. ಪುಸ್ತಕ ಒಳಮೈ ಆಕರ್ಷಕವಾಗಿದ್ದು ಓದಲು ಪ್ರಾತ್ಸಾಹ ನೀಡುವಂತಿರಬೇಕು. ವಯೋಗುಣಕ್ಕೆ ತಕ್ಕ ದೊಡ್ಡ ಅಕ್ಷರಗಳಲ್ಲಿ ಒಳ್ಳೆಯ ಕಾಗದದ ಮೇಲೆ ಕಪ್ಪು ಮಸಿಯಲ್ಲಿ ಅಚ್ಚಾಗಿರಬೇಕು. ಅಗತ್ಯವೆನಿಸಿದರೆ ಚಿತ್ರ, ನಕ್ಷೆ ಮುಂತಾದವು ಬಣ್ಣದವಾಗಿರಬೇಕಾಗುತ್ತದೆ. ಪುಟ ಮತ್ತು ಪಂಕ್ತಿಗಳುದ್ದ, ಪದ ಮತ್ತು ಪಂಕ್ತಿಗಳ ನಡುವಣ ಸ್ಥಳಾವಕಾಶ- ಇವು ಓದಲು ತೊಡಕಾಗದಂತೆಯೂ ಕಣ್ಣಿಗೆ ನೋವಾಗದಂತೆಯೂ ಇರಬೇಕು. ಪುಸ್ತಕದ ಆರಂಭದಲ್ಲಿ ವಿಷಯ ಸೂಚಿಯಿದ್ದು ಕೊನೆಯಲ್ಲಿ ಅಕಾರಾದಿ ವಿಷಯ ಸೂಚಿಯೂ ಆಯಾ ವಿಷಯದ ಪುಟಸಂಖ್ಯೆಯೂ ಇರುವುದು ಒಳ್ಳೆಯದು. ಪುಸ್ತಕದ ಒಳಮೈಯಂತೆ ಹೊರ ಮೈಯೂ ಆಕರ್ಷಕವಾಗಿರಬೇಕು. ಸಾಧ್ಯವಾದರೆ ಮುಖಪುಟಕ್ಕೆ ವರ್ಣರಂಜಿತ ಚಿತ್ರಗಳನ್ನು ಬಳಸಬಹುದು.

ಒಟ್ಟಿನಲ್ಲಿ ಪಠ್ಯಪುಸ್ತಕವಿಷಯ ಹಾಗೂ ವ್ಯಾಕರಣಗಳ ದೃಷ್ಟಿಯಿಂದ ನಿರ್ದಿಷ್ಟವಾಗಿರಬೇಕು.

ಅನೇಕ ದೇಶಗಳಲ್ಲಿ ಒಂದನೆಯ ತರಗತಿಗೂ ಒಂದೊಂದು ವಿಷಯದಲ್ಲೂ ಒಂದೊಂದೇ ಪಠ್ಯಪುಸ್ತಕವನ್ನು ಶಿಕ್ಷಣ ಶಾಖೆ ಅಥವಾ ಮಂಡಲಿ ಅಂಗೀಕರಿಸಿ ಗೊತ್ತು ಮಾಡುವುದು. ಆ ಕಾರ್ಯದಲ್ಲಿ ಎರಡು ವಿಧಾನಗಳು ಪ್ರಚಾರದಲ್ಲಿವೆ. ಸರ್ಕಾರ ಆ ಕಾರ್ಯಕ್ಕಾಗಿ ನೇಮಿಸಿದ ಸಮಿತಿ ಖಾಸಗಿ ಪ್ರಕಾಶಕರಿಂದಲೂ ಪುಸ್ತಕಗಳನ್ನು ತರಿಸಿಕೊಂಡು ಉತ್ತಮವಾದವನ್ನು ಆಯ್ಕೆಮಾಡುವುದು. ಅನಂತರ ಆಯ್ಕೆಯಾದ ಪುಸ್ತಕಗಳನ್ನು ಅಚ್ಚಿಸಿ ಸರ್ಕಾರ ಇಡೀ ದೇಶದ ಆ ಮಟ್ಟದ ಎಲ್ಲ ತರಗತಿಗಳಿಗೂ ಅಥವಾ ಶಾಲಾಮಂಡಲದ ಎಲ್ಲ ತರಗತಿಗಳಿಗೂ ಹಂಚುವುದು. ಕೆಲವು ದೇಶಗಳಲ್ಲಿ ಒಂದೊಂದು ವಿಷಯಕ್ಕೂ ಒಂದಕ್ಕಿಂತ ಹೆಚ್ಚು ಪುಸ್ತಕಗಳನ್ನು ಗೊತ್ತುಮಾಡಿ ಅವುಗಳಲ್ಲಿ ಯಾವುದನ್ನಾದರೂ ಆಯ್ದುಕೊಳ್ಳುವ ಸ್ವಾತಂತ್ರ್ಯವನ್ನು ಶಾಲೆಗೆ ನೀಡುವುದಿದೆ. ಎರಡನೆಯ ವಿಧದಲ್ಲಿ ಸರಕಾರವೇ ಒಂದೊಂದು ತರಗತಿಯ ಒಂದೊಂದು ವಿಷಯಕ್ಕೂ ರಚನಾ ಸಮಿತಿಯನ್ನು ನೇಮಿಸಿ ಪುಸ್ತಕ ಬರೆಯುವ ಕಾರ್ಯವನ್ನು ಅದಕ್ಕೆ ವಹಿಸುವುದು. ಆ ಸಮಿತಿಯಲ್ಲಿ ಆ ವಿಷಯದಲ್ಲಿ ತಜ್ಞರು, ಅದನ್ನು ಬೋಧಿಸತಕ್ಕ ಅಧ್ಯಾಪಕರು ಮನಃಶ್ಶಾಸ್ತ್ರಜ್ಞರು, ಮುದ್ರಣಕಾರರು ಇರುವರು. ಅವರು ರಚಿಸಿದ ಪುಸ್ತಕವನ್ನು ಮತ್ತೊಂದು ಸಮಿತಿ ವಿಮರ್ಶಿಸುವುದು. ಅನಂತರ ಅಗತ್ಯ ತಿದ್ದುಪಡಿಯೊಡನೆ ಪುಸ್ತಕವನ್ನು ಅಂಗೀಕರಿಸಿ ಮುದ್ರಿಸಿ ಶಾಲೆಗಳ ಉಪಯೋಗಕ್ಕಾಗಿ ಒದಗಿಸುವರು.

ಪಠ್ಯಪುಸ್ತಕ ರಾಷ್ಟ್ರೀಕರಣ : ಎಳೆಯ ಮಕ್ಕಳ ಮನಸ್ಸಿನ ಮೇಲೆ ಪಠ್ಯ ಪುಸ್ತಕದಲ್ಲಿ ಹೇಳಿರುವ ಅಂಶ ತೀವ್ರ ರೀತಿಯ ಪರಿಣಾಮ ಬೀರಬಲ್ಲದ್ದರಿಂದ ಅದನ್ನು ರಾಷ್ಟ್ರದಲ್ಲಿ ಹಲವು ರೀತಿಯ ಪ್ರಭಾವವನ್ನು ಬೀರಲು ಬಳಸಿಕೊಳ್ಳಬಹುದು. ಇದನ್ನರಿತ ಕೆಲವು ರಾಷ್ಟ್ರಗಳು ದೇಶದಾದ್ಯಂತ ಏಕರೀತಿಯ ಪಠ್ಯಕ್ರಮವನ್ನು ಗೊತ್ತಮಾಡುವಂತೆ ಪಠ್ಯಪುಸ್ತಕಗಳನ್ನೂ ತಾವೇ ಗೊತ್ತು ಮಾಡುವರು. ಹಾಗೆ ಗೊತ್ತುಮಾಡಿದ ಪಠ್ಯಪುಸ್ತಕಗಳನ್ನು ತಾವೇ ಬರೆಯಿಸಿ ಮುದ್ರಿಸಿ ಪ್ರಕಟಿಸುವರು. ಇದರಿಂದ ಹಲವು ಅನುಕೂಲಗಳೇನೋ ಉಂಟು. ರಾಷ್ಟ್ರದ ಅಧಿಕೃತ ನೀತಿಯನ್ನು ಕಿರಿಯರ ಮನಸ್ಸಿನ ಮೇಲೆ ಮೂಡಿಸಿ ಆ ಮೂಲಕ ಮುಂದಿನ ವಯಸ್ಕರಲ್ಲಿ ಉದ್ದೇಶಿತ ತತ್ವ ದೃಷ್ಟಿಯನ್ನು ಆಚರಣೆಗೆ ತಂದು ಭಾವೈಕ್ಯತೆಯನ್ನು ಸ್ಥಾಪಿಸಬಹುದು. ಜೊತೆಗೆ ಆದಷ್ಟು ಅಗ್ಗವಾಗಿ ಪುಸ್ತಕಗಳನ್ನು ಒದಗಿಸಬಹುದಲ್ಲದೆ ತಜ್ಞರಿಂದ ಒಳ್ಳೆಯ ಪುಸ್ತಕಗಳನ್ನು ಬರೆಯಿಸಿ ಪ್ರಕಟಿಸಲೂಬಹುದು. ಆದರೆ ಇದರಿಂದ ಕೆಲವು ಅನಾನುಕೂಲಗಳೂ ಉಂಟು. ದೇಶಕ್ಕೆಲ್ಲ ಒಂದೇ ರೀತಿಯ ಪಠ್ಯಪುಸ್ತಕಗಳಿದ್ದು ಒಂದೇ ರೀತಿಯ ಬೋಧನ ಕ್ರಮದಲ್ಲಿ ಒಂದು ರೀತಿಯ ಮಾಮೂಲು ಆಚರಣೆಗೆ ಬಂದು ಬಿಟ್ಟು ಪ್ರಗತಿ ಸಿದ್ಧಿಸುವುದಿಲ್ಲ. ಪಠ್ಯಪುಸ್ತಕ ಲೇಖಕರಿಗೆ ಪ್ರೋತ್ಸಾಹವಿಲ್ಲದೆ ಸ್ಪರ್ಧೆಗೆ ಅವಕಾಶವಿಲ್ಲದೆ ಆ ಕ್ಷೇತ್ರದಲ್ಲೂ ಪ್ರಗತಿ ಕುಂಠಿತವಾಗುವುದು. ಈ ಕಾರಣಗಳಿಂದ ಹಲವು ಶಿಕ್ಷಣವೇತ್ತರು ಪಠ್ಯಪುಸ್ತಕದ ರಾಷ್ಟ್ರೀಕರಣವನ್ನು ವಿರೋಧಿಸುವರು.

ಪಠ್ಯಪುಸ್ತಕ ಮತ್ತು ಪಕ್ಷೀಯ ಅಥವಾ ಮತೀಯರ ಪ್ರಚಾರ : ಪಠ್ಯಪುಸ್ತಕ ಎಳೆಯಮಕ್ಕಳ ಮೇಲೆ ಪ್ರಭಾವ ಬೀರತಕ್ಕ ಸಾಧನವಾಗಿರುವುದರಿಂದ ಹಾಗೂ ರಾಷ್ಟ್ರೀಕರಿಸಿರುವ ದೇಶಗಳಲ್ಲಿ ಅಧಿಕಾರದಲ್ಲಿರುವ ಸರ್ಕಾರ ತನ್ನ ರಾಜಕೀಯ ಅಥವಾ ಧಾರ್ಮಿಕ ಸಿದ್ಧಾಂತಗಳನ್ನು ಪ್ರಚಾರಮಾಡಲು ಪ್ರಚಾರ ಮಾಧ್ಯಮವನ್ನಾಗಿ ಬಳಸಬಹುದಾದ ಅವಕಾಶವುಂಟು. ಸರ್ವಾಧಿಕಾರಿ ರಾಷ್ಟ್ರಗಳಲ್ಲೇನೋ ಇದು ಅಂಗೀಕೃತ ಸಾಧನವಾಗಿದ್ದರೂ ಲೋಕಸತ್ತೆಯ ರಾಷ್ಟ್ರಗಳಲ್ಲಿ ಅಧಿಕಾರದಲ್ಲಿರುವ ಪಕ್ಷಗಳು ಅಂದಿಗಂದಿಗೆ ಬದಲಾಗಬಹುದಾದ ಅವಕಾಶವಿರುವುದರಿಂದ ಪಕ್ಷೀಯ ಸಿದ್ದಾಂತಗಳನ್ನು ಅಥವಾ ಧಾರ್ಮಿಕ ತತ್ತ್ವಗಳನ್ನು ಪ್ರಚಾರಮಾಡುವುದು ವಿಹಿತವೆನಿಸುವುದಿಲ್ಲ. ರಾಜಕೀಯ, ಧಾರ್ಮಿಕ, ಆರ್ಥಿಕ, ಸಾಮಾಜಿಕ ಮುಂತಾದ ವಿವಿಧ ಬಗೆಯ ಅಭಿಪ್ರಾಯಗಳನ್ನು ಪಠ್ಯಪುಸ್ತಕದಲ್ಲಿ ವಿವರಿಸಬಹುದಾದರೂ ಯಾವೊಂದು ದೃಷ್ಟಿಯನ್ನೂ ಪ್ರಚಾರ ದೃಷ್ಟಿಯಿಂದ ಪ್ರತಿಪಾದಿಸಿರಬಾರದು. ಸರ್ವಸಮ್ಮತವಾದ ಅಂಶಗಳನ್ನು ನಿರ್ಭಿಡೆಯಿಂದ ಪ್ರತಿಪಾದಿಸಿರಬಹುದು. ಧಾರ್ಮಿಕಸಂಸ್ಥೆಗಳು ನಡೆಸುವ ಖಾಸಗಿ ಶಾಲೆಗಳಾದರೂ ಪಠ್ಯಪುಸ್ತಕದ ಮೂಲಕ ಮತ ಪ್ರಚಾರಾದಿಗಳಿಗೆ ಅವಕಾಶ ಇರಬಾರದು.

ಪಠ್ಯಪುಸ್ತಕಗಳ ಬಳಕೆ : ಆಧುನಿಕವಾಗಿ ಬಳಕೆಗೆ ಬಂದಿರುವ ಕೆಲವು ಶಿಕ್ಷಣ ಪದ್ಧತಿಗಳು ಪ್ರಾಥಮಿಕ ಶಾಲೆಯಲ್ಲಿ ಪಠ್ಯಪುಸ್ತಕಗಳ ಬಳಕೆಯನ್ನೇ ನಿಷೇಧಿಸಿರುವುವಾದರೂ ಪ್ರಪಂಚದ ಎಲ್ಲ ದೇಶಗಳಲ್ಲೂ ಪಠ್ಯಪುಸ್ತಕ ಅನಿವಾರ್ಯವೆನ್ನಬಹುದಾದ ಪಾಠೋಪಕರಣವಾಗಿ ಬಳಕೆಯಲ್ಲಿದೆ. ಅಷ್ಟಾಗಿ ಇತರ ಪುಸ್ತಕಗಳು ದೊರೆಯದ ಗ್ರಾಮಾಂತರ ಪ್ರದೇಶದ ಶಾಲೆಗಳಲ್ಲಿ ಪಠ್ಯಪುಸ್ತಕವೊಂದೇ ಅಧ್ಯಾಪಕರ ಬೋಧನೆಗೆ ಏಕೈಕ ಸಾಧನ. ನಗರಪ್ರದೇಶದ ಶಾಲೆಗಳಲ್ಲೂ ಹೆಜ್ಜೆ ಹೆಜ್ಜೆಗೆ ಪಾಠಮಾಡುವಾಗ ಅದನ್ನೇ ಬಳಸಬೇಕಾಗುತ್ತದೆ. ಅದು ಅನುಸರಿಸುವ ಕ್ರಮದಲ್ಲೇ ಪಾಠ ನಡೆಯಬೇಕಾಗುತ್ತದೆ. ಅದು ವಿಷಯವನ್ನು ಪ್ರತಿಪಾದಿಸಿರುವ ಸ್ವರೂಪದಲ್ಲೆ ವಿಷಯವನ್ನು ವಿವರಿಸಬೇಕಾಗುತ್ತದೆ. ಅಲ್ಲಿ ಕೊಟ್ಟಿರುವ ಚಟುವಟಿಕೆಗಳನ್ನೆ ಅಧ್ಯಾಪಕರು ಹೇಳಿ ಮಾಡಿಸಬೇಕಾಗುತ್ತದೆ. ಹೀಗೆ ಪಠ್ಯಪುಸ್ತಕವನ್ನು ಕಣ್ಣುಮುಚ್ಚಿಕೊಂಡು ಅನುಸರಿಸುವುದು ಸರಾಗವೆನಿಸಿದರೂ ಅದರಿಂದ ಹಲವು ವೇಳೆ ಅನರ್ಥವಾಗಬಹುದು. ಅನೇಕ ಸಲ ಪಠ್ಯಪುಸ್ತಕದಲ್ಲಿ ಹೇಳಿರುವ ವಿಷಯ ಸಾಧುವಲ್ಲದಿರಬಹುದು ; ಅಥವಾ ಸಮರ್ಪಕವಾಗಿಲ್ಲದಿರಬಹುದು. ಅಲ್ಲಿ ಸೂಚಿಸಿರುವ ಬೋಧನಕ್ರಮವೂ ಅಷ್ಟು ಉಚಿತವಲ್ಲದಿರಬಹುದು. ಎಂದೊ ಬರೆದ ಪಠ್ಯಪುಸ್ತಕವಾದರೆ ಅದರಲ್ಲಿ ಕಾಲಕ್ಕೆ ಒಪ್ಪದ ಅಭಿಪ್ರಾಯಗಳೂ ನಿರೂಪಣೆಗಳೂ ಇರಬಹುದು. ಅಂಥ ಪುಸ್ತಕಗಳನ್ನು ಸುಮ್ಮನೆ ಅನುಸರಿಸಿ ಪಾಠ ಮಾಡುವುದು ಅಪರಾಧವೆನಿಸೀತು. ಆದ್ದರಿಂದ ಅಧ್ಯಾಪಕರು ಅದನ್ನೊಂದು ಸ್ಥೂಲ ಮಾರ್ಗದರ್ಶನವೆಂದು ಪರಿಗಣಿಸಿ ಅನಿವಾರ್ಯವಾದರೆ ಯುಕ್ತ ಬದಲಾವಣೆ ಮಾಡಿಕೊಳ್ಳಬೇಕು. ಎಂದರೆ ಪಠ್ಯಪುಸ್ತಕ ಪಾಠೋಪಕರಣವಾಗಿ ಬಳಸಿದರೂ ಜಾಣ್ಮೆಯಿಂದ ಬಳಸಿಕೊಳ್ಳಬೇಕು.

ಉಚಿತ ಪಠ್ಯಪುಸ್ತಕಗಳ ವಿತರಣೆ : ಕಡ್ಡಾಯ ಪ್ರಾಥಮಿಕ ಹಾಗೂ ಕಿರಿಯ ಪ್ರೌಢಶಾಲೆಯ ಶಿಕ್ಷಣ ಆಚರಣೆಗೆ ಬಂದಂತೆ ಮಕ್ಕಳ ಶಿಕ್ಷಣದ ವೆಚ್ಚ ಪೋಷಕರ ಮೇಲೆ ಕಡ್ಡಾಯವಾಗಿ ಬೀಳುತ್ತಿದೆ. ಆದರೆ ಬಡ ಕುಟುಂಬಗಳಿಗೆ ಇದು ಭರಿಸಲಾರದ ವೆಚ್ಚವಾಗಿ ಪರಿಣಮಿಸುತ್ತಿದೆ. ಆದ್ದರಿಂದ ಅಂಥ ಕುಟುಂಬಗಳಿಗೆ ಹಲವು ರೀತಿಯ ಸಹಾಯ ನೀಡುವ ಯೋಜನೆ ಕೆಲವು ದೇಶಗಳಲ್ಲಿ ಪ್ರಚಾರದಲ್ಲಿದೆ. ಆ ಯೋಜನೆಯಲ್ಲಿ ಅಂಥ ಕುಟುಂಬಗಳ ಮಕ್ಕಳಿಗೆ ಉಚಿತವಾಗಿ ಪಠ್ಯಪುಸ್ತಕಗಳನ್ನು ಒದಗಿಸುವುದೂ ಒಂದು ಅಂಶ. ಈ ಕಾರ್ಯವನ್ನು ಸರ್ಕಾರವೆ ವಹಿಸಕೊಳ್ಳುತ್ತಿದೆ. ಕೆಲವು ಕಡೆ ರೋಟರಿ ಸಂಸ್ಥೆ, ಲಯನ್ಸ್ ಸಂಸ್ಥೆ, ರೌಂಡ್ ಟೇಬಲ್ ಮುಂತಾದ ಅಂತರರಾಷ್ಟ್ರೀಯ ಸಂಸ್ಥೆಗಳೂ ಈ ಕಾರ್ಯವನ್ನು ನಿರ್ವಹಿಸುತ್ತಿವೆ.

ಪಠ್ಯಪುಸ್ತಕ ರಚನೆಯಲ್ಲಿ ಸಂಶೋಧನೆ : ಉತ್ತಮ ರೀತಿಯಲ್ಲಿ ರಚನೆಯಾದ ಪಠ್ಯಪುಸ್ತಕಗಳ ಬಳಕೆಯಿಂದ ಬೋಧನಕ್ರಮದಲ್ಲಿ ಪ್ರಗತಿ ಸಾಧನೆಯಾಗುವುದಲ್ಲದೆ ಮಕ್ಕಳ ಕಲಿವೂ ಪರಿಣಾಮಕಾರಿಯಾತ್ತವೆ. ಆದ್ದರಿಂದ ಅವುಗಳ ಗುಣಮಟ್ಟವನ್ನು ಉತ್ತಮಪಡಿಸುವ ಕಾರ್ಯ ಶಿಕ್ಷಣ ಶಾಖೆಗೆ ಸಂದ ಹೊಣೆಗಾರಿಕೆಯಾಗುತ್ತದೆ. ಈ ಅಂಶವನ್ನು ಅರಿತಂತೆ ಅನೇಕ ದೇಶಗಳಲ್ಲಿ ಪಠ್ಯಪುಸ್ತಕಗಳ ರಚನೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಕುರಿತಂತೆ ವಿಚಾರಗೋಷ್ಠಿ, ಕಾರ್ಯಶಾಲೆ, ಸಂಶೋಧನಾಲಯ ಮುಂತಾದವನ್ನು ಏರ್ಪಡಿಸಲಾಗುತ್ತಿದೆ. ಬೇರೆ ಬೇರೆ ದೇಶಗಳಲ್ಲಿ ಪ್ರಚಾರದಲ್ಲಿರುವ ಪಠ್ಯಪುಸ್ತಕಗಳನ್ನು ಸಂಗ್ರಹಿಸಿ ಪಠ್ಯಪುಸ್ತಕ ಗ್ರಂಥಾಲಯವನ್ನು ಏರ್ಪಡಿಸಲಾಗುತ್ತಿದೆ. ಅಲ್ಲಿರುವ ಪುಸ್ತಕಗಳ ಪರಿಶೀಲನೆಯಿಂದ ಅವುಗಳ ರಚನೆಯಲ್ಲಿ ಬಳಸಲಾಗುತ್ತಿರುವ ನೂತನ ತಂತ್ರಗಳನ್ನು ಪಠ್ಯಪುಸ್ತಕ ಲೇಖಕರು ಅರಿತುಕೊಂಡು ತಾವೂ ಆ ಮೇಲ್ಪಂಕ್ತಿಯಲ್ಲಿ ಕೃತಿರಚನೆ ಮಾಡಲು ಅವಕಾಶವಾಗುತ್ತದೆ. ಉತ್ತಮ ಪಠ್ಯಪುಸ್ತಕಗಳಿಗೆ ಯುಕ್ತ ಬಹುಮಾನ ಪುರಸ್ಕಾರಗಳನ್ನು ಕೊಡುವುದರ ಮೂಲಕ ಆ ಕಾರ್ಯದಲ್ಲಿ ತೊಡಗಿರುವ ಖಾಸಗಿ ಲೇಖಕರಿಗೆ ಪ್ರೋತ್ಸಾಹ ನೀಡುವುದೂ ಅಗತ್ಯ.

ಪಠ್ಯಪುಸ್ತಕಗಳ ಕೋಠಿ (ಟೆಕ್ಸ್ಟ್ ಬ್ಯಾಂಕ್) : ಎಲ್ಲ ಮಟ್ಟದ ಶಿಕ್ಷಣ ಸಂಸ್ಥೆಗಳಲ್ಲೂ ಅದರಲ್ಲೂ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಪುಸ್ತಕಗಳನ್ನು ಕೊಳ್ಳಲಾರದ ಅನೇಕ ವಿದ್ಯಾರ್ಥಿಗಳಿರುತ್ತಾರೆ. ಆಯಾ ವಿದ್ಯಾ ಸಂಸ್ಥೆಯ ಗ್ರಂಥಾಲಯದಲ್ಲಿ ಪಠ್ಯಪುಸ್ತಕಗಳು ಇರುವುದಾದರೂ ಎಲ್ಲ ವಿದ್ಯಾರ್ಥಿಗಳಿಗೂ ಅವು ದೊರೆಯುವುದು ಅಸಂಭವ. ಆದ್ದರಿಂದ ಈಚೆಗೆ ಕೆಲವು ಪ್ರದೇಶಗಳಲ್ಲಿ ಮುಖ್ಯ ಸ್ಥಳಗಳಲ್ಲಿ ಪಠ್ಯಪುಸ್ತಕ ಕೋಠಿಯನ್ನು ಏರ್ಪಡಿಸಲಾಗುತ್ತಿದೆ. ಅಲ್ಲಿ ಎಲ್ಲ ಪಠ್ಯ ಪುಸ್ತಕಗಳನ್ನು ಅಧಿಕ ಸಂಖ್ಯೆಯಲ್ಲಿ ಸಂಗ್ರಹಿಸಿಟ್ಟಿರುವರು. ವಿದ್ಯಾರ್ಥಿಗಳು ಅಲ್ಲಿಗೆ ಹೋಗಿ ತಮ್ಮ ತರಗತಿಯ ಪಠ್ಯಪುಸ್ತಕಗಳನ್ನು ಪಡೆದು ಬಳಸಿಕೊಳ್ಳಬಹುದು. ಉನ್ನತ ಶಿಕ್ಷಣದ ಅಧಿಕ ಬೆಲೆಯ ಗ್ರಂಥಗಳನ್ನು ಕೊಳ್ಳುವುದು ಅನೇಕ ವೇಳೆ ಶ್ರೀಮಂತರಿಗೂ ಸಹ ಅಸಾಧ್ಯವೆನಿಸುವುದುಂಟು. ಅಂಥವರಿಗೂ ಪಠ್ಯಪುಸ್ತಕದ ಕೋಠಿ ಉಪಯುಕ್ತವೆನಿಸಬಲ್ಲದು.

ಏಕಾಂತ ಪಠ್ಯಪುಸ್ತಕ : ಪಠ್ಯಕ್ರಮದ ಒಂದೊಂದು ವಿಷಯದ ವಿವರವನ್ನೂ (ಸಿಲಬಸ್) ಆಧಾರ ಮಾಡಿಕೊಂಡು ಒಂದೊಂದು ಪಠ್ಯಪುಸ್ತಕವನ್ನು ಬರೆಯುವುದು ಪ್ರಚಾರದಲ್ಲಿರುವ ಸಂಪ್ರದಾಯವಾದರೂ ಕೆಲವು ಶ್ರೀಮಂತ ರಾಷ್ಟ್ರಗಳಲ್ಲಿ ವ್ಯಾಸಂಗ ವಿಷಯದ ಒಂದೊಂದು ಅಂಶಕ್ಕೂ ಪ್ರತ್ಯೇಕ ಪಠ್ಯಪುಸ್ತಕ (ಯೂನಿಟೆಕ್ಸ್ಟ್) ಬರೆದು ಪ್ರಕಟಿಸುವ ಪದ್ಧತಿ ಆಚರಣೆಗೆ ಬರುತ್ತಿದೆ. ಅಮೆರಿಕದ ಸಂಯುಕ್ತ ಸಾಂಸ್ಥಾನಗಳಲ್ಲಿ ಇಂಥ ಪುಸ್ತಕಗಳ ಬಳಕೆ ಕಂಡುಬರುತ್ತದೆ. ವಿದ್ಯಾರ್ಥಿಗಳಲ್ಲೂ ಅವು ಆಸಕ್ತಿ ಮೂಡಿಸುತ್ತಿವೆ. ಅಂಥ ಒಂದೊಂದು ಪುಟ್ಟಪುಸ್ತಕದಲ್ಲೂ ವರ್ಣಚಿತ್ರಗಳು ವಿಷಯ ವಿಭಾಗಕ್ಕೆ ಸಂಬಂಧಿಸಿದ ಆಸಕ್ತಿಯ ಇತರ ವಿಷಯಗಳು ಸೇರಿರುವುದುಂಟು. ಪುಸ್ತಕದ ಬೆಲೆ ಕಡಿಮೆಯಾಗಿದ್ದರೂ ಆ ವಿಷಯಕ್ಕೆ ಸಂಬಂಧಿಸಿದ ಒಟ್ಟು ಪುಸ್ತಕಗಳ ಬೆಲೆ ಅಧಿಕವಾಗುತ್ತದೆ. ಆದ್ದರಿಂದ ಅಷ್ಟಾಗಿ ಶ್ರೀಮಂತರಲ್ಲದ ಕುಟುಂಬಗಳ ಮಕ್ಕಳಿಗೆ ಅವು ಎಟುಕಲಾರದೆನಿಸಿವೆ. ಆದರೆ ಅವನ್ನು ಓದಲು ಮಕ್ಕಳಿಗೆ ಸಹಜವಾಗಿ ಆಸಕ್ತಿಯಿರುತ್ತದೆ. ಪಠ್ಯಪುಸ್ತಕದ ರಚನೆಯ ನಿಯಮಗಳಿಗೆ ಸ್ವಲ್ಪ ವಿನಾಯಿತಿಯಿರುವ ಅವುಗಳ ರಚನೆ ಪಠ್ಯಪುಸ್ತಕಗಳನ್ನೆ ಬಳಸಿ ಬೇಸರವಾಗಿರುವ ಮಕ್ಕಳಿಗೂ ಅಧ್ಯಾಪಕರಿಗೂ ಅವು ಉಪಯುಕ್ತ ವಾಚನ ವಸ್ತುವಾಗಿ ಬಳಕೆಯಾಗಬಲ್ಲುವು. ಆದ್ದರಿಂದ ಅವನ್ನು ಗ್ರಂಥಾಲಯದಲ್ಲಿ ಸಂಗ್ರಹಿಸಿ ವಿದ್ಯಾರ್ಥಿಗಳಿಗೆ ಒದಗಿಸಬಹುದು. (ಎನ್.ಎಸ್.ವಿ.)