ರಂಗಮ್ಮನ ವಠಾರ/೧೪

ವಿಕಿಸೋರ್ಸ್ದಿಂದ

ವೆಂಕಟೀಶಯ್ಯ ಲಜ್ಜೆಗೊಂಡು ನಕ್ಕ.
ಅಹಲ್ಯಾ ದಿನವೂ ವೆಂಕಟೇಶನ ಜತೆಗೆ ಹೋಗಿ ಔಷಧಿ ತಂದಳು. ಜ್ವರ ಇಳಿ
ಯಿತು. ವೆಂಕಟೇಶ ಟಾನಿಕ್ ಕೊಡಿಸಿದ. ರಾಮಚಂದ್ರಯ್ಯ ಮೊದಲಿನಂತೆ ಓಡಾಡು
ವಂತಾದ.
ಅವನ ತಾಯಿ ಕೇಳಿದಳು:
"ಔಷಧೀದು ಎಲ್ಲಾ ಒಟ್ಟಿಗೆ ಎಷ್ಟಾಯಿತು?"
"ನಾಲ್ಕು ರೂಪಾಯಿ" ಎಂದ ವೆಂಕಟೇಶ. ಆ ತಾಯಿ ನಂಬಲಿಲ್ಲ.
"ಅಷ್ಟೇನೇ?"
ಆಕೆಯ ಕಡೆ ನೋಡದೆಯೇ ವೆಂಕಟೇಶ ಹೇಳಿದ:
"ಹೌದು, ಅಷ್ಟೆ."

೧೪

ಶಾಲೆ ಕಾಲೇಜುಗಳು ಆರಂಭವಾದೊಡನೆ, ಖಾಲಿ ಇದ್ದ ಕೊಠಡಿಯನ್ನು
ಬಾಡಿಗೆಗೆ ಹಿಡಿಯಲು ರಂಗಮ್ಮನ ವಠಾರಕ್ಕೆ ಹುಡುಗರು ಬಂದರು. ಎಂದಿನಂತೆಯೇ
ಈ ಸಲವೂ ಬ್ರಾಹ್ಮಣ ಹುಡುಗರಿಗೇ ಕೊಠಡಿಯನ್ನು ಕೊಡಲು ರಂಗಮ್ಮ ಯತ್ನಿಸಿ
ದರು. ಆದರೆ ಎಂದಿನಂತೆಯೇ ಈ ಸಲವೂ ಯತ್ನ ಸಫಲವಾಗಲಿಲ್ಲ. ಪರ ಊರಿನ
ಬ್ರಾಹ್ಮಣ ಹುಡುಗರು, ಬಾಡಿಗೆ ಹದಿಮೂರು ರೂಪಯಿ ಎಂದೊಡನೆ ಅಲ್ಲಿಂದ ಕಂಬಿ
ಕೀಳುತ್ತಿದ್ದರು. ಒಳ್ಳೆಯ ಬ್ರಾಹ್ಮಣ ಹುಡುಗರು ಬಂದರೆ ಒಂದು ರೂಪಾಯಿ ಕಡಿಮೆ
ಮಾಡೋಣವೆಂಬ ಯೋಚನೆಯೂ ರಂಗಮ್ಮನಿಗೆ ಬಂತು. ಆದರೆ ಹಾಗೆ ಭೇದ ಭಾವ
ತೋರುವುದು ಸರಿಯಲ್ಲವೆಂದು ಆ ಯೋಚನೆಯನ್ನು ಅವರು ಬಿಟ್ಟುಕೊಟ್ಟರು.
ಒಂದು ಸಂಜೆ ಮೂವರು ಹುಡುಗರು ಬಂದು ಹೇಳಿದರು:
"ರಂಗಮ್ನೋರನ್ನು ನೋಡಬೇಕಾಗಿತ್ತು."
ರಂಗಮ್ಮ ಅವರನ್ನು ಒಳಗೆ ಕರೆಯದೆ ತಾವೇ ಹೊರಗೆ ಬಂದರು.
"ಯಾರಪ್ಪ ನೀವು?"
"ಬಳ್ಳಾಪುರ ನಮ್ಮೂರು. ಪರಮೇಶ್ವರಪ್ಪ ಒಂದು ಕಾಗದ ಕೊಟ್ಟಿದಾರೆ."
ಆ ಹುಡುಗರಲ್ಲೊಬ್ಬ ಮಡಚಿದ್ದೊಂದು ಲಕೋಟೆಯನ್ನು ಹೊರ ತೆಗೆದ.
"ಯಾರು ಪರಮೇಶ್ವರಪ್ಪ?"
"ಅವರು ಹೋದ ವರ್ಷ ಇಲ್ಲೇ ಓದ್ಕೊಂಡಿದ್ರು."

"ಓ ಪರಮೇಶ್ವರಪ್ನಾ?" ಎಂದು ರಂಗಮ್ಮ ರಾಗವೆಳೆದರು. ಹಿಂದಿನ ವರ್ಷ

ಮೇಲಿನ ಕೊಠಡಿಯಲ್ಲಿ ವಾಸವಾಗಿದ್ದವರ ಮುಖ್ಯಸ್ಥ ತಮಗೆ ಕಾಗದ ಬರೆದಿದ್ದಾನೆಂದು
ಅವರಿಗೆ ಹೆಮ್ಮೆ ಎನಿಸಿತು. ಕಾಗದ ಕೊಡಲು ಕೈ ಚಾಚಿದ ಹುಡುಗನನ್ನು ನೋಡುತ್ತ
ಅವರೆಂದರು;
"ಅದೇನು ಬರೆದಿದ್ದಾನೋ ನೀವೇ ಸ್ವಲ್ಪ ಓದೀಪ್ಪ."
ಪರಮೇಶ್ವರಪ್ಪ ತನ್ನ ಊರಿನ ಹುಡುಗರ ಪರಿಚಯ ಮಾಡಿಕೊಟ್ಟು, ತಾನು
ಹಿಂದೆ ಇದ್ದ ಕೊಠಡಿಯನ್ನು ಬೇರೆ ಯಾರಿಗೂ ಕೊಡದೆ ಆ ಹುಡುಗರಿಗೇ ಕೊಡ
ಬೇಕೆಂದು ಕೇಳಿಕೊಂಡಿದ್ದ. 'ಬೇಡುವ ಆಶೀರ್ವಾದಗಳು' ಎಂದೇನೂ ಬರೆದಿರಲಿಲ್ಲ.
ಆದರೆ 'ಇತಿ ನಮಸ್ಕಾರಗಳು' ಎಂದು ತಿಳಿಸಿದ್ದ.
ಓದಿಯಾದ ಮೇಲೆ ಆ ಕಾಗದವನ್ನು, ಕೈ ಸ್ವಲ್ಪ ಕೆಳಕ್ಕೆ ಒಡ್ಡಿ, ರಂಗಮ್ಮ ಇಸ
ಕೊಂಡರು.
"ಬಾಡಿಗೆ ಎಷ್ಟೂಂತ ಗೊತ್ತೇನಪ್ಪ?"
"ಪರಮೇಶ್ವರಪ್ಪ ಹೇಳಿದಾರೆ...ಹದಿಮೂರು ರೂಪಾಯಿಂತ."
ಉಳಿದ ಶರತುಗಳನ್ನೂ ರಂಗಮ್ಮ ವಿವರಿಸಿದರು.
"ಪರಮೇಶ್ವರಪ್ಪ ವಿಶ್ವಾಸವಿಟ್ಟು ಬರೆದಿದಾನೆ ಅಂದ್ಮೇಲೆ ಕೊಡದೆ ಇರೋ
ಕಾಗುತ್ತೋ? ಅವನಿಗೆ ಪಾಸಾಯ್ತು ಅಲ್ವೆ?"
"ಅವರಿಗೆ ಪಾಸಾಯ್ತು. ಬೇರೆ ಇಬ್ಬರಿಗೆ ಒಂದೊಂದು ಪಾರ್ಟು ಹೋಗಿದೆ.
ಸೆಪ್ಟೆಂಬರಿಗೆ ಕಟ್ತಾರೆ"
ರಂಗಮ್ಮನಿಗೆ ಆ ವಿವರವೊಂದೂ ಅರ್ಥವಾಗಲಿಲ್ಲ.
"ಅಂತೂ ಚೆನ್ನಾಗಿದಾನಲ್ಲ,ಅಷ್ಟೇ ಸಂತೋಷ. ನಮ್ಮ ವಠಾರದಲ್ಲಿ ಓದಿದ
ಹುಡುಗರಿಗೆಲ್ಲ ದೊಡ್ಡ ಕೆಲಸ ಸಿಕ್ಕಿಯೇ ಸಿಗುತ್ತೆ."
ರಂಗಮ್ಮ ಪ್ರಯಾಸಪಟ್ಟು ಮಹಡಿಯ ಮೆಟ್ಟಲುಗಳನ್ನೇರಿ ಆ ಹುಡುಗರನ್ನು
ಕರೆದೊಯ್ದು ಕೊಠಡಿ ತೋರಿಸಿದರು. ಕಾಗದ ಕೊಟ್ಟವನು ಹದಿಮೂರು ರೂಪಾಯಿ
ಗಳನ್ನು ಎಣಿಸಿ ಕೊಟ್ಟ, ತಮ್ಮ ಸಾಮಾನು ತರಲೆಂದು ಇಳಿದು ಹೋದ ಹುಡುಗರನ್ನು
ಜಯರಾಮು ಮತ್ತು ರಾಧಾ ನೋಡಿದರು.
ಶಂಕರನಾರಾಯಣಯ್ಯ ಬರೆದಿದ್ದ 'ಮನೆ ಬಾಡಿಗೆಗೆ ಇದೆ. ಒಳಗಡೆ ವಿಚಾರಿಸಿ'
ಬೋರ್ಡು ರಂಗಮ್ಮನ ಮನೆಯೊಳಕ್ಕೆ ಹೋಯಿತು.
ಹುಡುಗರ ಕೈಯಲ್ಲಿ ರಂಗಮ್ಮ ಕರಾರು ಪತ್ರ ಬರೆಸುವ ಪದ್ಧತಿ ಇರಲಿಲ್ಲ. ಆದರೆ
ರಾತ್ರೆ ಸುಬ್ಬುಕೃಷ್ಣಯ್ಯನನ್ನು ಕರೆಸಿ ಪರಮೇಶ್ವರಪ್ಪ ಬರೆದಿದ್ದ ಕಾಗದವನ್ನು
ಮತ್ತೊಮ್ಮೆ ಓದಿಸಿದರು.

"ನೋಡು ಬ್ರಾಹ್ಮಣನಲ್ದೇ ಇದ್ದರೆ ಏನಾಯ್ತು? ಈ ಊರು ಬಿಟ್ಟು
ಹೋದ್ಮೇಲೂ ರಂಗಮ್ಮನ ವಠಾರವನ್ನ ಆತ ಮರೆತಿಲ್ಲ. ಎಷ್ಟೊಂದು ವಿಶ್ವಾಸ
ಇಟ್ಕೊಂಡಿದಾನೆ!"

ಒಂದು ಕ್ಷಣ ತಡೆದು ಪ್ರಶಂಸೆಯನ್ನು ರಂಗಮ್ಮ ಮತ್ತೂ ಮುಂದುವರೆಸಿದರು:
"ಒಳ್ಳೆ ಹುಡುಗ ಪರಮೇಶ್ವರಪ್ಪ. ಯಾವ ಗಲಾಟೇನೂ ಇರ್ಲಿಲ್ಲ. ರಾತ್ರೆ
ಯೆಲ್ಲಾ ದೀಪ ಉರಿಸ್ದೇನೇ ಪ್ಯಾಸ್ ಮಾಡ್ಕೊಂಡ."
ಸುಬ್ಬುಕೃಷ್ಣಯ್ಯನೆದ್ದು, ರಂಗಮ್ಮನನ್ನು ಅವರ ಯೋಚನೆಗಳ ಪಾಡಿಗೆ ಬಿಟ್ಟು,
ಊಟಕ್ಕೆ ಹೊರಟ.
...ರಂಗಮ್ಮನ ಪಕ್ಕದ ಮನೆಯಾಕೆಯೂ ಮಕ್ಕಳೊಡನೆ ಬಂದಳು. ಒಬ್ಬನಿಗೆ
ತೇರ್ಗಡೆಯಾಗಿತ್ತು. ಇನ್ನೊಬ್ಬ ಅಷ್ಟು ಭಾಗ್ಯವಂತನಾಗಿರಲಿಲ್ಲ.
...ಜಯರಾಮುವಿನ ತಂದೆ ಮತ್ತೊಂದು ಪ್ರವಾಸ ಮುಗಿಸಿ ಮನೆಗೆ ಬಂದರು.
"ಈ ಮಳೇಲಿ ಇನ್ನು ಎರಡು ತಿಂಗಳು ಹೊರಗೆ ಕಾಲು ಹಾಕೋ ಹಾಗೇ ಇಲ್ಲ.
ಉಸ್ಸಪ್ಪ!" ಎಂದು ಉದ್ಗಾರ ತೆಗೆದರು.
ಸೆಪ್ಟೆಂಬರ್ ತಿಂಗಳನ್ನು ಇದಿರು ನೋಡುತ್ತಾ, ಕೊನೆಯ ಹಂತವನ್ನು ದಾಟಿ
ಮುಗಿಸಲು ಜಯರಾಮು ಸಿದ್ಧತೆ ನಡೆಸಿದ.
ಹಸ್ತ ಸಾಮುದ್ರಿಕದ ಪದ್ಮನಾಭಯ್ಯ ಅಳಿಯನೂರಿಗೆ ಹೋಗಿ, ತಿಂಗಳು ತುಂಬಿದ್ದ
ಮಗಳನ್ನು ಗೌರಿಹಬ್ಬಕ್ಕೆಂದು ಕರೆದು ತಂದ. ಮೈ ತುಂಬಿ ಮುದ್ದಾಗಿದ್ದ ಆಕೆಯನ್ನು
ಕಂಡು ಕಾಮಾಕ್ಷಿಗೆ ಒಂದು ವಿಧವಾಯಿತು. ಆಕೆಗೆ ಪದ್ಮನಾಭಯ್ಯನ ಮಗಳ ಪರಿ
ಚಯವೂ ಇರಲಿಲ್ಲ. ಎರಡು ದಿನ ಹಾಗೆಯೇ ಇದ್ದ ಮೇಲೆ ಅಹಲ್ಯಾ ಅವರಿಬ್ಬರಿಗೂ
ಪರಿಚಯ ಮಾಡಿಸಿಕೊಟ್ಟಳು. ಪದ್ಮನಾಭಯ್ಯನ ಮಗಳು ಪರಮಸುಖಿಯೇನೂ
ಆಗಿರಲಿಲ್ಲ. ಆಕೆಯ ಗಂಡ ಒಳ್ಳೆಯವನಾಗಿದ್ದ. ಆದರೆ ಆತನದೇನೂ ಮನೆಯಲ್ಲಿ
ನಡೆಯುತ್ತಿರಲಿಲ್ಲ. ಇತರರು ಅವಳಿಗೆ ಹಿಂಸೆ ಕೊಡುತ್ತಿದ್ದರು. ಆ ಕಥೆಯನ್ನೆಲ್ಲ
ಕೇಳುತ್ತ, ಕಾಮಾಕ್ಷಿ ತಾನೇ ಪರವಾಗಿಲ್ಲ ಎಂದುಕೊಂಡಳು.
ಪದ್ಮನಾಭಯ್ಯ ಅಲ್ಲೇ ಇದ್ದರೂ ವಠಾರದವರು ಯಾರೂ ಅವನಿಗೆ ಕೈ ತೋರಿ
ಸಲು ಬರಲಿಲ್ಲ. ಹಿತ್ತಲ ಗಿಡ ಮದ್ದಲ್ಲ. ಅಲ್ಲದೆ ವಠಾರದವರ ಕೈ ಓದುವ ಇಷ್ಟವೂ
ಆತನಿಗಿರಲಿಲ್ಲ.
ಚಂದ್ರಶೇಖರಯ್ಯನ ಹೆಸರು_ಹಲಿಗೆ ಅವನ ಕಣ್ಣಿಗೆ ಬಿತ್ತು . ಎದುರು ಬದಿಯ
ಕೊನೆಯ ಮನೆಯವರ ಖ್ಯಾತಿ ಕಿವಿಗೆ ಬಿತ್ತು. ಪದ್ಮನಾಭಯ್ಯ ಶಂಕರನಾರಾಯಣಯ್ಯನ
ಪರಿಚಯ ಮಾಡಿಕೊಂಡ.
"ನೀವು ನನಗೊಂದು ಬೋರ್ಡು ಯಾಕೆ ಬರಕೊಡ್ಬಾರ್ದು?"
"ಓಹೋ! ಅದಕ್ಕೇನು? ಬರೆಯೋಣ_ಬರೆಯೋಣ."
"ಪಾಮಿಸ್ಟ್ರಿ ಬೋರ್ಡು ಒಂದಿದ್ರೆ ಚೆನ್ನಾಗಿರುತ್ತೆ. ಅಲ್ಲ ಅಂತೀರಾ?"
"ಚಿನ್ನಾಗಿರುತ್ತೆ! ನೀವು ಎರಡಡಿ ಉದ್ದ ಒಂದಡಿ ಅಗಲದ್ದು ಒಳ್ಳೇ ಹಲಿಗೆ
ಸಂಪಾದಿಸ್ಕೊಂಡು ಬನ್ನಿ."

"ನೀವು ಕೆಲಸ ಮಾಡೋ ಕಡೆ ಯಾವುದಾದರೂ ಚೂರು..."

"ಇಲ್ಲ. ಅಲ್ಲಿ ಬಟ್ಟೆ ಮೇಲೆ ಬರೆಯೋದು."
ಹಲಿಗೆ ಸಿಗದೆ ಬೋರ್ಡಿನ ಯೋಚನೆಯನ್ನು ಆತ ಬಿಟ್ಟುಕೊಡಬಹುದು ಎಂದು
ಭಾವಿಸಿದ್ದ ಶಂಕರನಾರಾಯಣಯ್ಯ. ಅದು ಸುಳ್ಳಾಯಿತು. ಊರೆಲ್ಲ ಸುತ್ತಾಡಿ
ಪದ್ಮನಾಭಯ್ಯ ಮೂರು ಕಾಸು ಕೊಡದೆಯೇ ಒಂದು ಹಲಿಗೆ ದೊರಕಿಸಿಕೊಂಡು
ಬಂದ.
ಶಂಕರನಾರಾಯಣಯ್ಯನೆಂದ:
"ಬೋರ್ಡು ಅದೇನೂಂತ ಬರೀಬೇಕೋ ಅದನ್ನ ಕಾಗದದ ಮೇಲೆ ಬರಕೊಡಿ."
ಆತ ಬರೆದುಕೊಟ್ಟ.
'ಪಾಮಿಸ್ಟ್ರಿ ಪ್ರೊಫೆಸರ್ ಪದ್ಮನಾಭಯ್ಯ.'
ಶಂಕರನಾರಾಯಣಯ್ಯ ಪ್ರಯಾಸಪಟ್ಟು ನಗು ತಡೆದುಕೊಂಡು ಹೇಳಿದ:
"ಇದೇ ಸರಿಯಾಗಿದೆ ಅಂತೀರಾ?"
"ಹೂಂ. ಹೂಂ. ಹಾಗೇ ಇರಬೇಕು."
ಎರಡು ದಿನಗಳಲ್ಲಿ ಬೋರ್ಡು ಸಿದ್ಧವಾಯಿತು. ಬರೆದುದಕ್ಕೆ ಪ್ರತಿಫಲದ
ಮಾತನ್ನು ಯಾರೂ ಆಡಲಿಲ್ಲ. ರಂಗಮ್ಮನಿಗೆ, ಪದ್ಮನಾಭಯ್ಯ ಬೋರ್ಡು ತೂಗ
ಹಾಕುವ ಯೋಚನೆ ಹಿಡಿಸಲಿಲ್ಲ. ಅಲ್ಲದೆ ಪದ್ಮನಾಭಯ್ಯನ ಮನಸ್ಸಿನೊಳಗೇ ಇದ್ದ
ಅಂಜಿಕೆಯೂ ನಿಜವಾಯಿತು. ವಠಾರದ ಹೊರಗಿನ ಗೋಡೆಗಳಲ್ಲೆಲ್ಲೂ ಬೋರ್ಡುನ್ನು
ತೂಗಹಾಕುವಂತಿರಲಿಲ್ಲ.
"ಜಗಳಕ್ಕೆ ಕಾರಣ. ಅದೆಲ್ಲಾ ಬೇಡೀಪ್ಪಾ," ಎಂದು ಖಡಾಖಂಡಿತವಾಗಿ
ರಂಗಮ್ಮ ಹೇಳಿದರು.
ಆದರೂ ಎದೆಗುಂದದೆ ಪದ್ಮನಾಭಯ್ಯ, ಬೀದಿಗೆ ಕಾಣಿಸುವಂತೆ ಹಿತ್ತಿಲ
ಗೋಡೆಯ ಮೂಲೆಯಲ್ಲಿ ಬೋರ್ಡನ್ನು ಒರಗಿಸಿದ.
ಚಂಪಾ ಕೇಳಿದಳು:
"ಬೋರ್ಡು ಬರೆದದ್ದಕ್ಕೆ ಏನಾದರೂ ಬಂತೇಂದ್ರೆ?"
ಶಂಕರನಾರಾಯಣಯ್ಯ ಉತ್ತರವಿತ್ತ:
"ಪ್ರೊಫೆಸರುಗಳು ದುಡ್ಡು ಕೊಡ್ತಾರೇನೆ?"
ಚಂಪಾವತಿ ನಕ್ಕು ನುಡಿದಳು:
"ಅದರ ಬದಲು ಅವರಿಗೊಂದಿಷ್ಟು ‍ಕೈನಾದರೂ ತೋರಿಸ್ಬಾರ್ದೆ?"
"ಕೈ ತೋರಿಸಿ ಅವಲಕ್ಷಣ ಅನ್ನಿಸ್ಕೊಳ್ಲೇನು?"
"ಏನಿಲ್ಲ. ನಿಮ್ಮ ಕೈ ನೋಡಿ,ಎಲ್ಲಾ ಚೆನ್ನಾಗಿದೇಂತ ಆತ ಅನ್ನದೇ ಇದ್ದರೆ
ಆಮೇಲೆ ಹೇಳಿ!"
"ಹೌದು ಅಷ್ಟು ಸೊಗಸಾಗಿ ಬೋರ್ಡು ಬರೆದಿರೋ ಕೈ!"

18

ಮೂರನೆಯ ದಿನ ಬೆಳಗು ಮುಂಜಾನೆ ಬೋರ್ಡು ಅಲ್ಲಿರಲಿಲ್ಲ. ರಾತ್ರೆ
ಹೊತ್ತು ಯಾರೋ ಎಗರಿಸಿಕೊಂಡು ಹೋಗಿದ್ದರು. ಅಳುವ ಹಾಗಾಯಿತು ಪದ್ಮ
ನಾಭಯ್ಯನಿಗೆ. ಅವಾಚ್ಯ ಪದಗಳ ಪ್ರಯೋಗವೆಲ್ಲ ಮುಗಿದ ಮೇಲೆ ಆತ ಗುಮ್ಮೆಂದು
ಸುಮ್ಮನಾದ. ವಠಾರದ ಎಷ್ಟೋ ಮನೆಗಳಲ್ಲಿ ಆ ಪ್ರಕರಣದಿಂದಾಗಿ ಜನ ನಕ್ಕು ನಕ್ಕು
ಆರೋಗ್ಯವಂತರಾದರು. ಪದ್ಮನಾಭಯ್ಯನ ಹೆಸರು ಪ್ರೊಫೆಸರ್ ಎಂದು
ಮಾರ್ಪಟ್ಟಿತು.
ಅದಾದ ಮಾರನೆಯ ದಿನ ಪದ್ಮನಾಭಯ್ಯನ ಅಳಿಯ ಬಂದು ಗರ್ಭಿಣಿ ಹೆಂಡತಿ
ಯನ್ನು ಕರೆದೊಯ್ದ...
...ಚಂಪಾವತಿ ತುಂಬಾ ಖುಶಿಯಾಗಿದ್ದಳು. ಶಂಕರನಾರಾಯಣಯ್ಯನಿಗೆ ಅರ್ಥ
ವಾಗಲಿಲ್ಲ.
"ಯಾಕೆ ಹಾಗೆ ನನ್ನನ್ನೇ ನೋಡ್ತಿದ್ದೀಯಾ?"
"ಎಲ್ನೋಡ್ದೆ?"
ಹಾಗೆ ಕೇಳಿ,ಗಟ್ಟಿಯಾಗಿ ಚಂಪಾ ನಕ್ಕಳು.
ರಹಸ್ಯ ಬಹಳ ಹೊತ್ತು ಬಗೆಹರಿಯಲೇ ಇಲ್ಲ.
ದೀಪ ಆರಿದಾಗಲಿನ್ನೂ ಹಾಸಿಗೆ ಬಿಡಿಸಿರಲಿಲ್ಲ. ಕತ್ತಲಲ್ಲೆ ಹಾಸುತ್ತ ಚಂಪಾ
ಹೇಳಿದಳು:
"ಇವತ್ತು ಪ್ರೊಫೆಸರ್ ರ ಅಳಿಯ ಬಂದಿದ್ರೂಂದ್ರೆ..."
"ಅಂತೂ ಬೋರ್ಡು ಬರೆಸಿ ಬಿರುದು ಗಿಟ್ಟಿಸ್ಕೊಂಡು!"
"ಹೂಂ. ಆ ಅಳಿಯ ಪ್ರೊಫೆಸರ್ ಮಗಳ್ನ ಕರಕೊಂಡು ಹೋದ."
"ಆಕೆ ಬಸುರೀಂತ ಹೇಳಿದ್ಯಲ್ಲೇ ನೀನು?"
"ಹೌದು. ಅದಕ್ಕೇ ಕರಕೊಂಡು ಹೋದ. ಅನುಕೂಲಸ್ಥ ಅಂತ ತೋರುತ್ತೆ.
ಜಗಳ ಆಯ್ತು,ಚೊಚ್ಚಲ ಬಾಣಂತನ ಇಲ್ಲೇ ಆಗ್ಲಿ ಅಂದರು ಪ್ರೊಫೆಸರ್ ಹೆಂಡತಿ.
ಬೇಡ,ನಮ್ಮೂರಲ್ಲಿ ಒಳ್ಳೇ ಆಸ್ಪತ್ರೆ ಇದೆ. ಅಲ್ಲಿಗೇ ಕರಕೊಂಡು ಬಾ ಅಂದಿದಾರೆ
ನಮ್ಮಮ್ಮ_ಎಂದು ಅಳಿಯ. ಹುಡುಗಿ ಎದ್ದೇ ಬಿಟ್ಟಳು ಗಂಡನು ಜತೆಗೆ."
"ಭೇಷ್!"
ಆಮೇಲೆ ಚಂಪಾ ಮಾತನಾಡಲಿಲ್ಲ.ತಲೆಗಳು ದಿಂಬುನ್ನು ಸೋಂಕಿದುವು.
ಒಮ್ಮೆಲೆ ಶಂಕರನಾರಾಯಣಯ್ಯ ಏನೋ ಹೊಳೆದವನಂತೆ ಅಂದ:
"ಚಂಪಾ!"
"ಏನು?"
"ಈ ತಿಂಗಳು ನೀನು ಹೊರಗೆ ಕೂತೇ ಇಲ್ವಲ್ಲೇ!"
ಚಂಪಾ ನಗೆ ತಡೆದುಕೊಂಡು ಹೇಳಿದಳು:

"ಇಲ್ಲ.ಅದ್ದಕ್ಕೆ?"

ಆಕೆ ಆ ಸಂಜೆಯೆಲ್ಲ ವಿಚಿತ್ರವಾಗಿ ತನ್ನನ್ನು ನೋಡುತ್ತಿದ್ದುದು, ಪದ್ಮನಾ
ಭಯ್ಯನ ಮಗಳ_ಅಳಿಯನ ಪ್ರಸ್ತಾಪ, ಪ್ರತಿಯೊಂದೂ ಆತನಿಗೆ ಅರ್ಥವಾಯಿತು.
ಮೊದಲೇ ತಿಳಿಯದೆ ಹೋದೆನೆಂದು ತನ್ನ ಬಗ್ಗೆ ತಾನೇ ರೇಗುತ್ತ ಆತನೆಂದ:
"ಏನೂ ಇಲ್ಲ. ಅದಕ್ಕೆ?"
"ಇನ್ನೇನು ಹೇಳ್ಬೇಕು ನಿಮಗೆ?"
"ಕೆಟ್ಟವಳು!"
"ನೀವೇ ಕೆಡಿಸ್ದೋರು!"
ಮತ್ತೂ ಸ್ವಲ್ಪ ಸಂದೇಹಿಸುತ್ತ ಆತ ಕೇಳಿದ:
"ನಿಜವೇನೆ ಹಾಗಾದರೆ?"
"ಅಷ್ಟು ತಿಳೀದೇನೋ ನಿಮಗೆ!"
ಚಂಪಾ ನಕ್ಕಳು. ಆತ ಆ ನಗುವನ್ನು ನಿಲ್ಲಿಸಿದ. ತನಗೆ ನಿದ್ದೆ ಬಂದಿಲ್ಲವೆಂದು
ಮಗು ಅತ್ತಿತು.
....ಊರೂರು ಸುತ್ತಿ ಆಗ್ಗಾಗೆ ಬರುತ್ತಿದ್ದ ಕಮಲಮ್ಮನ ಗಂಡ, ಹೆಂಡತಿ
ಯನ್ನು ಪ್ರೀತಿಸುವುದಿತ್ತು_ಮನಸ್ಸು ತೃಪ್ತಿಯಾಗುವವರೆಗೆ. ಆ ಬಳಿಕ ಕಮಲಮ್ಮನ
ಪಾಡು ಕಮಲಮ್ಮನಿಗೆ. ಆತ ಮಧ್ಯ ವಯಸ್ಸಿನ ಕಟುಮಸ್ತಾದ ಆಸಾಮಿ.
ಕಮಲಮ್ಮನನ್ನು ಬಿಟ್ಟುಬಿಡುವ,ಬೇರೆ ಮದುವೆ ಮಾಡಿಕೊಳ್ಳುವ,ಯೋಚನೆ
ಆತನಿಗೆ ಎಷ್ಟೋ ಸಾರೆ ಬಂದಿತ್ತು. ಆದರೆ ಯಾವುದೋ ಸಂಸ್ಕಾರ ಅಡ್ಡ ಬಂದು,
"ಛೆ! ಹಾಗೆ ಮಾಡಬಾರದು"ಎಂದಿತ್ತು ಪ್ರತಿಸಲವೂ.
ಅದೇ ಸಂಸ್ಕಾರದ ಫಲವಾಗಿಯೇ ಒಮ್ಮೊಮ್ಮೆ, ಕ್ರೂರವಾಗಿದ್ದರೂ ಸತ್ಯ
ವಾಗಿದ್ದ ಮಾತುಗಳು ಆತನ ಬಾಯಿಯಿಂದ ಹೊರಡುತ್ತಿದ್ದುವು.
"ವೈದಿಕ ವೃತ್ತಿ ಹುಂ!ನಿಜವಾಗಿ ನೋಡಿದರೆ ಇದು ತಿರುಪೆ ಎತ್ತೋದು."
ಅಥವಾ...
"ಹಾಡಿದ್ದೇ ಹಾಡ್ಕೊಂಡು ಬರೋಲ್ವೆ ತಂಬೂರಿ ದಾಸ? ಹಾಗೆ ನಮ್ಮ ಮಂತ್ರ
ಪಠಣ."
ಆತನಿಗೆ ಹೆಚ್ಚಿನ ವಿದ್ವತ್ತಿರಲಿಲ್ಲ. ಸಂಸ್ಕೃತ_ಕನ್ನಡ_ಯಾವುದರಲ್ಲೂ ಆಳವಾದ
ಅಭ್ಯಾಸವಿರಲಿಲ್ಲ.ತನ್ನ ವೃತ್ತಿ ಸಾಗಿಸಿಕೊಂಡು ಹೋಗಲು ಎಷ್ಟು ಬೇಕೋ ಅಷ್ಟೆ.
ಆದರೆ ತನ್ನ ವೈಯಕ್ತಿಕ ಇರುವಿಕೆಗಾಗಿ ಲೋಕದ ಮೇಲೆಯೇ ಮುನಿದುಕೊಂಡಿದ್ದ.
ಆತ ವಕ್ರಾಚಾರ್ಯನಾಗಿದ್ದ. ಸ್ನೇಹಿತರು, ಸಂಬಂಧಿಕರು ಇಲ್ಲವೆ ಕಮಲಮ್ಮನೊಡನೆ
ಮಾತನಾಡಿದಾಗಲೆಲ್ಲ ಆತನ ಮಾತು ವಕ್ರವಾಗಿರುತ್ತಿತ್ತು.

ಇನ್ನು ತಮಗೆ ಮಕ್ಕಳಾಗುವುದಿಲ್ಲವೆಂಬುದು,ಮಕ್ಕಳಾದರೂ ಉಳಿಯುವುದಿಲ್ಲ
ವೆಂಬುದು, ಕಮಲಮ್ಮನಿಗೆ ಖಚಿತವಾಗಿತ್ತು. ಹೆಂಗಸರ ಕಾಹಿಲೆಗಳನ್ನೆಲ್ಲ ಗುಣ
ಪಡಿಸುವ ದೊಡ್ಡ ಲೇಡಿ ಡಾಕ್ವರೊಬ್ಬರ ವಿಷಯ ಒಮ್ಮೆ ಯಾರೋ ಪ್ರಸ್ತಾಪಿಸಿದ್ದರು.

ಆದರೆ ಆ ಡಾಕ್ಟರ ಜಾತಿ ಬೇರೆ. ಅದಲ್ಲದೆ ಅದು ನೂರಿನ್ನೂರು ರೂಪಾಯಿ ವೆಚ್ಚದ
ಬಾಬು. ಆ ವಿಷಯವನ್ನು ಗಂಡನ ಕಿವಿ ಮೇಲೆ ಹಾಕಿ ಕಮಲಮ್ಮ ಸುಮ್ಮನಾಗಿದ್ದಳು.
ಆತ ಗದರಿ ನುಡಿದಿದ್ದ:
"ಮಾರವಾಡಿ ಕಾಲು ಹಿಡಿದು ಸಾಲ ತರಬೇಕು ಅಂತೀಯೇನು?ಲೇಡಿ
ಡಾಕ್ಟರು!..."
"ನಾನೆಲ್ಲಿ ಹಾಗಂದೆ? ಸುಮ್ನೆ ಹೇಳ್ದೆ ಅಷ್ಟೆ."
ಡಾಕ್ಟರು ಯಾವ ಜನವಾದರೇನು? ಮನುಷ್ಯರು ತಾನೇ? ತಾನು ಬರಿಗೈ ಬಡವ
ಎಂದು ಹೇಳಿಕೊಂಡರೆ ರೋಗ ಪರೀಕ್ಷೆಗೇನೂ ಖರ್ಚಾಗಲಾರದು-ಎಂದು ಆತ
ಯೋಚಿಸಿದ. ಆದರೆ ಪರೀಕ್ಷೆಯಾದ ಮೇಲೆ ಔಷಧಿ ತರಬೇಕು. ಅದಕ್ಕೆ ಬೇಕು
ದುಡ್ಡು. ಎಷ್ಟು ರೂಪಾಯಿಯೋ ಏನೋ. ಆ ಚಿಂತೆ ಆತನನ್ನು ಕಾಡಿತು.
"ಮನುಷ್ಯನ ಕೈಲಿ ಏನಿದೆ? ಎಲ್ಲಾ ಆ ಭಗವಂತನ ಇಚ್ಛೆ. ಆ ಮಹಾರಾಯ
ಅದೇನು ಬರೆದಿದ್ದಾನೋ?" ಎಂದು ಆತ ಹೆಂಡತಿಗೆ ಹೇಳಿದ.
ಆದರೆ, ಹೊರಗೆ ಹಾಗೆ ಹೇಳಿದರೂ ಮನಸ್ಸಿನೊಳಗೆ ಆಸೆ ಇದ್ದೇ ಇತ್ತು.
'ಅನುಕೂಲವಾದಾಗ ಒಮ್ಮೆ ಪರೀಕ್ಷೆ ಮಾಡಿಸಬೇಕು' ಎಂದು ತೀರ್ಮಾನಿಸಿದ್ದ. ಆದರೆ
ಇಷ್ಟು ವರ್ಷಗಳಾದರೂ ಅನುಕೂಲವಾಗಿಯೇ ಇರಲಿಲ್ಲ.
ಒಂಟಿಯಾಗಿಯೇ ಅಸಂಖ್ಯ ರಾತ್ರೆಗಳನ್ನು ಕಳೆದು ಅಭ್ಯಾಸವಾಗಿದ್ದ
ಕಮಲಮ್ಮ....
....ಈ ರಾತ್ರೆ ಆಕೆ ಒಂಟಿಯಾಗಿರಲಿಲ್ಲ. ಗಂಡ ಬಂದಿದ್ದ.
ಗಂಡ ಬಂದೊಡನೆ ಸರಸ ಸಲ್ಲಾಪಗಳಾದುವೆಂದು ಅರ್ಥವಲ್ಲ. ಅಂತಹ
ಅಭ್ಯಾಸವನ್ನು ಆ ವಕ್ರಾಚಾರ್ಯ ಇಟ್ಟಿರಲಿಲ್ಲ. ದಾಂಪತ್ಯ ಜೀವನದ ಮೊದಲ ವರ್ಷಗಳ
ಸುಖವೀಗ ಗತಕಾಲದ ನೆನಪು ಮಾತ್ರ. ಆದರೆ ಆ ನೆನಪು ಕೂಡ ಒಂದು ಶತಮಾನದ
ಹಿಂದಿನ ಕತೆಯೇನೋ ಎನ್ನುವ ಹಾಗೆ ಮಾಸಿಹೋಗಿತ್ತು.
ಗಂಡ ಊರಿಗೆ ಬಂದಾಗ ಕಮಲಮ್ಮ ಆತನ ಜತೆಯಲ್ಲಿ ಮಲಗುತ್ತಿದ್ದಳು.
ಆದರೆ, ಗಂಡನ ರೋಮ ತುಂಬಿದ ವಕ್ಷಸ್ಥಲದ ಮೇಲೆ ಮುಖವಿಟ್ಟು ಅಳಬೇಕೆಂದು
ಆಕೆಗೆ ತೋರುತ್ತಿರಲಿಲ್ಲ. ಹೃದಯದ ದುಗುಡವನ್ನು ಬಿಚ್ಚಿಟ್ಟು ಹೆಂಡತಿಯೊಡನೆ
ಮಾತನಾಡಬೇಕೆಂದು ಆತನಿಗೂ ಅನಿಸುತ್ತಿರಲಿಲ್ಲ.
ಮಲಗಿದೊಡನೆ ಏನೋ ನೆನಪಾಗಿ ಈ ಸಲ ಆತ ಕೇಳಿದ:
"ಈ ತಿಂಗಳ ಬಾಡಿಗೆ ಕೊಟ್ಟೆಯೇನು?"
"ಹೂಂ."
"ಇಲ್ಲಿ ಮಳೆ ಚೆನ್ನಾಗಿ ಬಿತ್ತೆ?"
"ಹೌದು."

"ರಂಗಮ್ಮ ಈ ವರ್ಷವೂ ಭಾವಣಿ ದುರಸ್ತಿ ಮಾಡಿಸ್ಲಿಲ್ಲ."