ಪುಟ:ಸ್ವಾಮಿ ಅಪರಂಪಾರ.pdf/೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಸ್ವಾಮಿ ಅಪರಂಪಾರ ೮೧

 [ತನ್ನ ತಾಯಿಯನ್ನು ಕಾಣುತ್ತಿರುವ ಭ್ರಮೆ ವೀರಪ್ಪನಿಗೆ.'ಅಮ್ಮಾ! ಅಮ್ಮಾ'ಎಂದು ಕೂಗುತ್ತ ಆಕೆಯ ಬಳಿಗೆ ಓಡುವ ಆಸೆ. ಆದರೆ ಅವಳೀಗ ಈ ಲೋಕದಲ್ಲಿ ಇಲ್ಲವಲ್ಲ?
   ಈಕೆ ಯಾರು ಹಾಗಾದರೆ? ಎಲ್ಲೋ ನೋಡಿರುವೆನಲ್ಲ?]
   'ಮಹಾದೇವ ಮಹಾದೇವ' ಎಂದು ಅಪರಂಪಾರ ಉಚ್ಚರಿಸಬೇಕು ಎನ್ನುವಷ್ಟರಲ್ಲೆ ಆಕೆ ಎಂದಳು:
   "ಶರಣು-ಶರಣು...ದಯಮಾಡಿಸಬೇಕು."
    ಅರಮನೆಯನ್ನು ಬಳಸಿಕೊಂಡು ಆಕೆ ದಕ್ಷಿಣ ದಿಕ್ಕಿಗೆ ನಡೆದಳು.  ಅಪರಂಪಾರ ಅವಳನ್ನು ಹಿಂಬಾಲಿಸಿದ. ಅರಮನೆಯ ದಕ್ಷಿಣ ಮೂಲೆಯನ್ನು ತಲಪುತ್ತಲೆ ಅವನಿಗೆ ಬವಳಿ ಬಂದಂತಾಯಿತು. ಹೊರಜಗಲಿಯ ಮೇಲೆ ಆತ ಕುಳಿತುಬಿಟ್ಟ.
   ಹೊಸ್ತಿಲ ಬಳಿ ನಿಂತು ಗಂಗಮ್ಮನೆಂದಳು:
   "ಇವತ್ತು ಇಲ್ಲೆ ದಾಸೋಹಕ್ಕೆ ನಿಲ್ಲಬೇಕು."
   ಕರ್ಕಶ ಧ್ವನಿಯಲ್ಲಿ ಅಪರಂಪಾರ ನುಡಿದ:
   "ಇಲ್ಲ. ನಾವು ದಾರಿತಪ್ಪಿ ಬಂದೆವು, ಈಗಲೇ ಹೋಗಬೇಕು.”
   "ಹಣ್ಣುಹಂಪಲಾದರೂ ತಗೊಳ್ಳುವಿರಂತೆ."
   "ಏನೂ ಬೇಡ."
   [ವೀರಪ್ಪ ಮನದೊಳಗೆ ಗೊಣಗಿದ: ಒಳ್ಳೆ ಫಜೀತಿಯಾಯಿತಲ್ಲ?   ನಮ್ಮ ಮನೆ ಯೊಳಗೆ ಬಂದು ಹೊಕ್ಕಿರೋ ಈಕೆ ಯಾರು? ನಾನು ಹೊರಗಿನವನು, ತಾನೇ ಮನೆ ಯೊಡತಿ ಅನ್ನುವ ಹಾಗೆ ಮಾತಾಡುತ್ತಿದ್ದಾಳಲ್ಲಾ?]
  ಅಪರಂಪಾರನ ಒಳದನಿ ಚೀರಿತು:
  "ಬೆದಕದಿರು, ಬೆದಕಿದರೆ ಹುರುಳಿಲ್ಲ...ಎನ್ನ ಚಿತ್ರವು ಅತ್ತಿಯ ಹಣ್ಣು ನೋಡಯ್ಯ ವಿಚಾರಿಸಿದರೆ ಏನೂ ಹುರುಳಿಲ್ಲವಯ್ಯ..."
 ಕಣ್ಣಲ್ಲಿ ಕಂಬನಿ ತುಂಬಿ ಗಂಗಮ್ಮನೆಂದಳು :
 "ನಮಗೆ ಭಾಗ್ಯವಿಲ್ಲ."
 [ವೀರಪ್ಪ : ಅರಮನೆಯೊಳಗಿದೀರಿ. ಭಾಗ್ಯ ಇಲ್ಲ-ಅನ್ನತೀರಿ. ಆಹಾ!]
 "ಭಾಗ್ಯ ಅನ್ನೋ ಮಾತೆಲ್ಲ ಮಾಯೆಯ ಮಹಿಮೆ ತಾಯಿಾ."
 "ನಾವು ಇಲ್ಲಿಯವರಲ್ಲ. ಮಲೆತಿರಿಕೆಬೆಟ್ಟದ..."
 [ವೀರಪ್ಪನ ಮೆದುಳಲ್ಲಿ ಗುಡುಗಿನ ಸದ್ದಾಯಿತು...ಮಲೆತಿರಿಕೆಬೆಟ್ಟ? ಮಲೆತಿರಿಕೆ-? ಏನು ಹೇಳುತ್ತಿದಾಳೆ ಆಕೆ?]
 “ಏನಂದೆ ತಾಯೀ ?"
 "ನನ್ನ ಮಗಳನ್ನು ಈ ಮನೆಗೆ ತಂದರು.ಅವಳ ಕೈ ನೋಡಿ ಒಂದು ಮಾತು ತಾವು ಹೇಳಿದರಾಗುತಿತ್ತು."
  “ಮಗಳು ?” 
  "ಹಾ...ಇಲ್ಲಿ ಬಾ ಶಾಂತವ್ವ...ಏ ಶಾಂತೂ..ರಾಜಮ್ಮಾಜೀ !...”
  [ವೀರಪ್ಪ : ಶಾಂತವ್ವ ?   ರಾಜಮ್ಮಾಜಿ ?  ಅಯ್ಯೋ! ಇದೇನು? ನಾನಿಲ್ಲಿಂದ ಓಡಬೇಕು, ಓಡಬೇಕು !] 
  6