ಪುಟ:ಉಮರನ ಒಸಗೆ.djvu/೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೫

ಎಷ್ಟು ನಯದ ಕೆಲಸವನ್ನು ಮಾಡಿದ್ದರೂ ಅದನ್ನು ಆತನು ಇನ್ನೂ ತಿದ್ದುತ್ತಲೇ ಇರುವನು. ಉಮರ್ ಅನುವಾದವು ಗಾತ್ರದಲ್ಲಿ ಸಣ್ಣದಾದರೂ ಅನೇಕ ವರ್ಷಗಳ ಶ್ರಮದಿಂದ ಸಿದ್ಧವಾದುದು. ಅದು ಆತನ ಜೀವಿತ ಕಾಲದಲ್ಲಿ ಪುನರ್ಮುದ್ರಿತವಾದ ಮೂರುಬಾರಿಯೂ ಹೊಸ ಹೊಸದಾಗಿ ತಿದ್ದುಪಾಟುಗಳನ್ನು ಪಡೆಯಿತು.

⁠ಫಿಟ್ಸ್-ಜೆರಲ್ಡನು ಅನುವಾದವೆಂದು ಹೆಸರಿಟ್ಟು ಬರೆದ ಕಾವ್ಯಗಳಲ್ಲಿ ತನ್ನ ಸ್ವಂತದ ಅಂಶಗಳನ್ನು ಯಥೇಷ್ಟವಾಗಿ ಸೇರಿಸಿರುವನೆಂದು ಮೇಲೆ ಹೇಳಿದೆಯಲ್ಲವೆ ? ಇದಕ್ಕೆ "ರುಬಾಯ್ಯಾತ್" ಕಾವ್ಯವು ಮಿಕ್ಕೆಲ್ಲಕ್ಕಿಂತ ದೊಡ್ಡ ನಿದರ್ಶನವಾಗಿದೆ. ಮಾತೃಕಾ ಗ್ರಂಥದಲ್ಲಿ ಕಾಣಬಾರದಿರುವ ಅನೇಕ ಸಂಗತಿಗಳನ್ನು ಈತನು ತಾನೇ ಸೇರಿಸಿರುವನೆಂದು ಗ್ರಂಥ ವಿಮರ್ಶಕರನೇಕರು ತೋರಿಸಿಕೊಟ್ಟರು. ಆದರೂ ತನ್ನ ಪ್ರಬಂಧದ ಪುನರ್ಮುದ್ರಣ ಸಂದರ್ಭದಲ್ಲಿ ಫಿಟ್ಸ್-ಜೆರಲ್ಡನು ವಿಮರ್ಶಕರ ಮಾತಿನಂತೆ ಅವನ್ನು ತಿದ್ದಲಿಲ್ಲ. ಉಮರನ ಹೃದಯವೆಂತಹುದೆಂದು ತನಗೆ ತೋರಿಬಂದಿತೋ ಅದನ್ನು ಪುನರಾವಿರ್ಭಾವಮಾಡಿಸಿಕೊಡುವುದು ತನ್ನ ಕೆಲಸವೇ ಹೊರತು, ಅಕ್ಷರಕ್ಕಕ್ಷರ ಮಾತಿಗೆ ಮಾತು ಬದಲಿಡುವುದು ತನ್ನ ಕೆಲಸವಲ್ಲವೆಂದು ಆತನು ಭಾವಿಸಿದ್ದನು. ಕಿವಿಗೆ ಮಧುರವೂ ಗಂಭೀರವೂ ಆದ ಪದಗಳು, ಗಮನವನ್ನು ಹಿಡಿದು ನಿಲ್ಲಿಸಬಲ್ಲ ವಾಕ್ಯ ಚಮತ್ಕಾರ, ಪ್ರತ್ಯಕ್ಷಾರ್ಥಕ್ಕಿಂತ ಆಳವಾಗಿ ಮನಸ್ಸಿನೊಳಕ್ಕಿಳಿದು ನಿಂತು ಪದೇ ಪದೇ ಸ್ಮರಣೆಮಾಡಿಸಿ ಕೊಳ್ಳುವ ಧ್ವನಿತಾರ್ಥ–ಇವು ಫಿಟ್ಸ್-ಜೆರಲ್ಡನಿಂದಾಗಿರುವ ಉಮರನ ಪುನರವತಾರಕ್ಕೆ ಲೋಕ ಪ್ರೀತಿಯನ್ನು ಸಂಪಾದಿಸಿ ಕೊಟ್ಟಿರುವ ಗುಣಗಳು. ಈ ಕಾವ್ಯವು ರಸಿಕ ಪ್ರಪಂಚದಲ್ಲಿ ––ಗುಲಾಬಿಯ ಕೋಮಲತೆ, ಮಲ್ಲಿಗೆಯ ಲಾವಣ್ಯ, ಜಾಜಿಯ ಸೌಕುಮಾರ್ಯ––ಇವೆಲ್ಲವನ್ನೂ ಸೇರಿಸಿಕೊಂಡಿರುವ ಒಂದು ದಿವ್ಯ ಪುಷ್ಪಗುಚ್ಛವನ್ನು ಹೋಲುತ್ತದೆ.