ಕುಮಾರವ್ಯಾಸ ಭಾರತ/ಸಟೀಕಾ (೩.ಅರಣ್ಯಪರ್ವ::ಸಂಧಿ-೦೩)

ವಿಕಿಸೋರ್ಸ್ದಿಂದ
<ಕುಮಾರವ್ಯಾಸಭಾರತ-ಸಟೀಕಾ

ಅರಣ್ಯಪರ್ವ: ೩ ನೆಯ ಸಂಧಿ[ಸಂಪಾದಿಸಿ]

ಸೂಚನೆ[ಸಂಪಾದಿಸಿ]

||ಸೂ||
ಬರುತ ಕ೦ಡನು ಕಣ್ವನಾಶ್ರಮ
ವರದ ಜಂಬೂಫಲವ ಮಾರುತಿ
ತರಲು ಯಮಸುತ ಹಲುಬೆ ಮುರರಿಪು ಶಾಖೆಗಡರಿಸಿದ || ಸೂ||

ಪದವಿಭಾಗ-ಅರ್ಥ:ಬರುತ ಕ೦ಡನು ಕಣ್ವನ+ ಆಶ್ರಮ+ ವರದ ಜಂಬೂಫಲವ ಮಾರುತಿ ತರಲು, ಯಮಸುತ ಹಲುಬೆ ಮುರರಿಪು ಶಾಖೆಗೆ+ ಅಡರಿಸಿದ
ಅರ್ಥ:ಭೀಮನು ಕಾಡಿನಲ್ಲಿ ಬರುತ್ತಿರುವಾಗ ಕಣ್ವನ ಆಶ್ರಮದಬಳಿ ಶ್ರೇಷ್ಠ ದೊಡ್ಡ ಜಂಬೂಫಲವನ್ನು ಕಂಡನು. ಅದನ್ನು ಅವನು ಕಿತ್ತು ತರಲು, ಯಮಸುತ ಧರ್ಮಜನು ಮುನಿಯ ಆಹಾರವಾದ ಅದನ್ನು ತಂದುದಕ್ಕೆ ದುಃಖಿಸಲು ಮುರರಿಪು ಕೃಷ್ಣನು ಬಂದು ಅದನ್ನು ಮೊದಲಿನಂತೆ ಮರದ ಕೊಂಬೆಗೆ ನೇರಲು ಜೋಡಿಸಿದನು.[೧][೨] [೩] [೪][೫]

ಕೊಳನ ತೀರದೆ ಪರ್ಣಶಾಲೆ[ಸಂಪಾದಿಸಿ]

ಕೇಳು ಜನಮೇಜಯ ಧರಿತ್ರೀ
ಪಾಲ ಯಮಸುತ ಮುನಿಜನಂಗಳ
ಮೇಳದಲಿ ಹೊರವಂಟು ತನ್ನನುಜಾತರೊಡಗೂಡಿ |
ತಾಳಿಗೆಯ ತಲ್ಲಣದ ಗಿರಿಗಳ
ಮೇಲೆ ಚರಿಸುತ ಬಂದು ವಿಪಿನ
ವ್ಯಾಳ ಗಜ ಶಾರ್ದೂಲ ಸಿಂಹಾದಿಗಳನೀಕ್ಷಿಸುತ || ೧ ||
ಪದವಿಭಾಗ-ಅರ್ಥ: ಕೇಳು ಜನಮೇಜಯ ಧರಿತ್ರೀಪಾಲ ಯಮಸುತ ಮುನಿಜನಂಗಳ ಮೇಳದಲಿ ಹೊರವಂಟು ತನ್ನ+ ಅನುಜಾತರೊಡಗೂಡಿ ತಾಳಿಗೆಯ (ನೆರೆ) ತಲ್ಲಣದ(ಅಂಜಿಕೆ, ಭಯ, ಭೀತಿ, ಚಿಂತೆ, ಮನೋವ್ಯಥೆ, ತಾಪ, ಸಂಕಟ,) ಗಿರಿಗಳ ಮೇಲೆ ಚರಿಸುತ(ಹೋಗುತ್ತಾ) ಬಂದು ವಿಪಿನವ್ಯಾಳ(ಹಾವು) ಗಜ ಶಾರ್ದೂಲ ಸಿಂಹಾದಿಗಳನು+ ಈಕ್ಷಿಸುತ(ನೋಡುತ್ತಾ)
ಅರ್ಥ: ವೈಶಂಪಾಯನ ಮುನಿಯು ಜನಮೇಜಯ ಧರಿತ್ರೀಪಾಲನೇ ಕೇಳು,' ಯಮಸುತ ಧರ್ಮಜನು ಮುನಿಜನರ ಸಂಗಡದಲ್ಲಿ ಕಾಮ್ಯಕ ವನದಿಂದ ಹೊರಟು ತನ್ನ ತಮ್ಮಂದಿರನ್ನು ಒಡಗೂಡಿಕೊಂಡು ಸಂಚರಿಸಲು ಬಹಳ ಕಠಿಣವಾದ ಗಿರಿಗಳ ಮೇಲೆ ಹೋಗುತ್ತಾ, ದಟ್ಟ ಕಾಡಿಗೆ ಬಂದು ಕಾಡಿನ ಹಾವುಗಳನ್ನೂ, ಆನೆ, ಹುಲಿ, ಸಿಂಹಾದಿಗಳನ್ನ ನೋಡುತ್ತಾ ಬರುತ್ತಿದ್ದನು.
ಬರಬರಲು ಮುಂದೊಂದು ವನದೊಳು
ಚರಿಪ ಪಕ್ಷಿ ಮೃಗಾಳಿ ತಳಿತಿಹ
ಬಿರಿಮುಗುಳನೀಕ್ಷಿಸುವ ಮರಿದುಂಬಿಗಳ ಮೇಳವದ |
ಪರಿಪರಿಯ ಮರ ಪೂ ಫಲಂಗಳ
ನಿರದೆ ಕೊಡುತಿರೆ ಪಕ್ಷಿಮೃಗಕುಲ
ವೆರಸಿ ಮೆರೆದವು ಬನದ ಸುತ್ತಲು ರಾಯ ಕೇಳೆಂದ || ೨ ||
ಪದವಿಭಾಗ-ಅರ್ಥ: ಬರಬರಲು ಮುಂದೊಂದು ವನದೊಳು ಚರಿಪ ಪಕ್ಷಿ ಮೃಗಾಳಿ ತಳಿತಿಹ ಬಿರಿಮುಗುಳನು+ ಈಕ್ಷಿಸುವ ಮರಿದುಂಬಿಗಳ ಮೇಳವದ ಪರಿಪರಿಯ ಮರ ಪೂ ಫಲಂಗಳನು+ ಇರದೆ ಕೊಡುತಿರೆ ಪಕ್ಷಿಮೃಗಕುಲ+ ವೆರಸಿ(ಸೇರಿ) ಮೆರೆದವು(ಶೋಭಿಸಿದವು) ಬನದ ಸುತ್ತಲು ರಾಯ ಕೇಳೆಂದ.
ಅರ್ಥ: 'ಪಾಂಡವರು ಕಾಢಿನಲ್ಲಿ ಬರಬರುತ್ತಿರುವಾಗ ಮುಂದೆ ಒಂದು ವನದಲ್ಲಿ ಹಾರುತ್ತಿರುವ ಪಕ್ಷಿಗಳು, ಅಲ್ಲಲ್ಲಿ ಚಲಿಸುತ್ತಿರುವ ಮೃಗಗಳ ಸಮೂಹ, ಗಿಡಗಳಲ್ಲಿ ತಳಿತಿರುವ- ಅರಳಿದ ಬಿರಿದ ಮೊಗ್ಗುಗಳನ್ನು ನೋಡುತ್ತಿರುವ ಮರಿದುಂಬಿಗಳ ಗುಂಪನ್ನೂ ನಾನಾಬಗೆಯ ಮರ, ಹೂವು, ಫಲಗಳನ್ನು ತಪ್ಪದೆ ಕೊಡುತ್ತಿರಲು ಪಕ್ಷಿ-ಮೃಗಕುಲವೆಲ್ಲಾಅದರೊಡನೆ ಸೇರಿ ವನದ ಸುತ್ತಲೂ ಶೋಭಿಸಿದವು' ವೈಶಂಪಾಯರಾಯನೇ ಕೇಳು ಎಂದ ಮುನಿ.
ತುಂಬುರರಳಿ ಲವಂಗ ಪಾದರಿ
ನಿಂಬೆ ಚೂತ ಪಲಾಶ ಪನಸಸು
ಜಂಬು ಗುಗ್ಗುಳಶೋಕ ವಟ ಪುನ್ನಾಗ ಚಂಪಕದ |
ಕುಂಭಿನಿಯೊಳುಳ್ಳಖಿಲ ವೃಕ್ಷ ಕ
ದಂಬದಲಿ ವನ ಮೆರೆದುದದನೇ
ನೆಂಬೆನೀ ಪರಿವಾರ ತುಂಬಿತು ಲಲಿತ ನಂದನದ || ೩ ||
ಪದವಿಭಾಗ-ಅರ್ಥ: ತುಂಬುರ+ ಅರಳಿ, ಲವಂಗ, ಪಾದರಿ, ನಿಂಬೆ, ಚೂತ ಪಲಾಶ, ಪನಸಸು, ಜಂಬು, ಗುಗ್ಗುಳ,+ ಅಶೋಕ, ವಟ, ಪುನ್ನಾಗ, ಚಂಪಕದ ಕುಂಭಿನಿಯೊಳು(ಭೂಮಿ)+ ಉಳ್ಳ+ ಅಖಿಲ ವೃಕ್ಷ ಕದಂಬದಲಿ ವನ ಮೆರೆದುದು+ ಅದನು+ ಏನೆಂಬೆನು+ ಈ ಪರಿವಾರ ತುಂಬಿತು ಲಲಿತ ನಂದನದ.
ಅರ್ಥ:ಆ ವನದಲ್ಲಿ ತುಂಬುರ, ಅರಳಿ, ಲವಂಗ, ಪಾದರಿ, ನಿಂಬೆ, ಚೂತ-ಹೂಬಿಟ್ಟ ಪಲಾಶ- ಮುತ್ತುಗ, ಪನಸಸು, ಜಂಬು(ನೇರಳೆ), ಗುಗ್ಗುಳ, ಅಶೋಕ, ವಟ(ಆಲ, ಆರಳಿ ಮೊದಲಾದವು), ಪುನ್ನಾಗಗಿಡ, ಚಂಪಕ-ಸಂಪಿಗೆ ಹೀಗೆ ಭೂಮಿಯಲ್ಲಿ ಇರುವ ಎಲ್ಲಾ ವೃಕ್ಷ ಕದಂಬಗಳಿಂದ ಆ ವನವು ಶೋಭಿಸುತ್ತಿತ್ತು; ಅದನ್ನು ಏನೆಂದು ಹೇಳಲಿ; ಧರ್ಮಜನ ಈ ಪರಿವಾರ ಲಲಿತ ನಂದನದನ್ನು ತುಂಬಿತು.
ತಿಳಿಗೊಳನ ಮಧ್ಯದಲಿ ಮೆರೆದಿಹ
ನಳಿನ ನೃಪನಿದಿರಿನಲಿ ಮಧುಪಾ
ವಳಿ ರವದ ಗಾಯಕರ ಪಿಕಪಾಠಕರ ನೃತ್ಯಗಳ |
ಲಲಿತ ನವಿಲಿನ ವಾದ್ಯಗಳ ಘುಳು
ಘುಳಿಪ ಕೊಳರ್ವಕ್ಕಿಗಳ ಲಕ್ಷ್ಮೀ
ಲಲನೆಯರಮನೆಯೆನಲು ಮೆರೆದುದು ಭೂಪ ಕೇಳೆಂದ || ೪ ||
ಪದವಿಭಾಗ-ಅರ್ಥ: ತಿಳಿಗೊಳನ ಮಧ್ಯದಲಿ ಮೆರೆದಿಹ ನಳಿನ ನೃಪನ+ ಇದಿರಿನಲಿ ಮಧುಪಾವಳಿ(ಮಧುಪ+ ಆವಳಿ) ರವದ(ಸದ್ದಿನ) ಗಾಯಕರ ಪಿಕಪಾಠಕರ(ಗಿಳಿ) ನೃತ್ಯಗಳ ಲಲಿತ ನವಿಲಿನ ವಾದ್ಯಗಳ ಘುಳುಘುಳಿಪ ಕೊಳರ್ವಕ್ಕಿಗಳ ಲಕ್ಷ್ಮೀಲಲನೆಯರ ಮನೆ+ಯೆ ಎನಲು ಮೆರೆದುದು ಭೂಪ ಕೇಳೆಂದ
ಅರ್ಥ:ಕಾಡಿನಲ್ಲಿ ಬರುತ್ತಿರುವಾಗ ಧರ್ಮಜನು ತಿಳಿಗೊಳದ ಮಧ್ಯದಲ್ಲಿ ಶೂಭಿಸುವ ಕಮಲದ ಹೂ; ಮತ್ತೆ ಆ ನೃಪನ ಇದಿರಿನಲ್ಲಿ ಜೇನುಹುಳುಗಳ ಸಂಪು, ಅವುಗಳ ಝೇಂಕಾರದ ಸದ್ದು; ಗಿಳಿ ಮೊದಾಲಾದ ಪಕ್ಷಿಗಳ ಗಾಯಕರ ಸಂಗೀತ; ಲಲಿತ- ಮನೋಹರ ನವಿಲುಗಳ ನೃತ್ಯಗಳು ಮತ್ತು ವಾದ್ಯಗಳ ಗಾನ; ಘುಳುಘುಳಿಪ ಕೊಳದ ಹಕ್ಕಿಗಳು, ಅವು ಇದ್ದು ಲಕ್ಷ್ಮೀ ಲಲನೆಯರ ಮನೆಯೆ ಎನ್ನುವಂತೆ ಶೋಭೀಸುತ್ತಿತ್ತು, ಭೂಪನೇ ಕೇಳು ಎಂದ ಮುನಿ.
ಬಂದು ಭೂಪತಿ ಕೊಳನ ತೀರದೆ
ನಿಂದು ತಮಗಾಶ್ರಯದ ಠಾವಹು
ದೆಂದು ಭೀಮಂಗರುಹಲಾ ಕ್ಷಣವಾತನೈತಂದು |
ತಂದು ತಳಿರನು ಪರ್ಣಶಾಲೆಗ
ಳಂದದಲಿ ರಚಿಸಿದನು ಭೂಸುರ
ವೃಂದ ಬಿಟ್ಟುದು ಧರ್ಮಪುತ್ರನ ಸುತ್ತುವಳಯದಲಿ || ೫ ||
ಪದವಿಭಾಗ-ಅರ್ಥ: ಬಂದು ಭೂಪತಿ ಕೊಳನ ತೀರದೆ ನಿಂದು ತಮಗೆ+ ಆಶ್ರಯದ ಠಾವು+ ಅಹುದೆಂದು(ನಿಜ, ಆಗಬಹುದು) ಭೀಮಂಗೆ+ ಅರುಹಲು(ಹೇಳಲು)+ ಆ ಕ್ಷಣವೆ+ ಆತನು+ ಐತಂದು(ಬಂದು) ತಂದು ತಳಿರನು(ಎಲೆಗಳನ್ನು, ಸೊಪ್ಪನ್ನು) ಪರ್ಣಶಾಲೆಗಳ+ ಅದದಲಿ ರಚಿಸಿದನು. ಭೂಸುರವೃಂದ ಬಿಟ್ಟುದು ಧರ್ಮಪುತ್ರನ ಸುತ್ತು ವಳಯದಲಿ(ಪ್ರದೇಶ).
ಅರ್ಥ: ಭೂಪತಿ ಧರ್ಮಜನು ಬಂದು ಕೊಳದ ತೀರದಲ್ಲಿ ನಿಂತು ನೋಡಿ, ಈ ಪ್ರದೇಶ ತಮಗೆ ವಸತಿ, ಆಶ್ರಯದ ಸ್ಥಾನಕ್ಕೆ ಯೋಗ್ಯವಾಗಿದೆ ಎಂದು ಭೀಮನಿಗೆ ಹೇಳಲು, ಅವನು ಆ ಕ್ಷಣವೆ ಬಂದು ಮರದ ಎಲೆಗಳ ಕೊಂಬೆಗಳನ್ನೂ ಸೊಪ್ಪನ್ನೂ ತಂದು ಪರ್ಣಶಾಲೆಗಳನ್ನು ಅಂದವಾಗಿ ರಚಿಸಿದನು. ಯುಧಿXfಠಿರನ ಸಂಗಡ ಬಂದ ಬ್ರಾಹ್ಮಣ ಸಮೂಹ ಧರ್ಮಪುತ್ರನ ಸುತ್ತು ವಲಯದ ಕುಟೀರಗಳಲ್ಲಿ ಬೀಡು ಬಿಟ್ಟಿತು.
ದಿನಪನಪರಾಂಬುಧಿಯನೈದಲು
ವನಜ ಮುಗಿದವು ಚಕ್ರವಾಕದ
ಮನಕೆ ಖತಿ ಕುಮುದಿನಿಗೆ ಮುದ ಯಾಮಿನಿಗೆ ಸುಮ್ಮಾನ |
ಕನಕಮಯ ವರ ರಥವನಡರಿದು
ದನುಜರನು ಸಂಹರಿಸೆ ಕಮಲಿನಿ
ಮನದೊಳುತ್ಸಾಹಿಸಲು ರವಿಯುದಯಾಚಲಕೆ ಬಂದ || ೬ ||
ಪದವಿಭಾಗ-ಅರ್ಥ: ದಿನಪನು(ರವಿ)+ ಅಪರಾಂಬುಧಿಯನು(ಪಶ್ಚಿಮ ಸಮುದ್ರವನ್ನು)+ ಐದಲು(ಹೋಗಲು) ವನಜ ಮುಗಿದವು(ಮುಚ್ಚಿದವು), ಚಕ್ರವಾಕದ(ಕೋಗಿಲೆ) ಮನಕೆ ಖತಿ(ಬೇಸರ), ಕುಮುದಿನಿಗೆ ಮುದ(ಸಂತಸ), ಯಾಮಿನಿಗೆ(ಸಂ. ರಾತ್ರಿ, ಇರುಳು) ಸುಮ್ಮಾನ, ಕನಕಮಯ ವರ ರಥವನು+ ಅಡರಿದು(ಏರಿ)+ ದನುಜರನು(ರಾಕ್ಷಸರು) ಸಂಹರಿಸೆ ಕಮಲಿನಿ(ಕಮಲಗಳಿಂದ ಕೂಡಿದ - ಕೊಳ, ಸರೋವರ) ಮನದೊಳು+ ಉತ್ಸಾಹಿಸಲು ರವಿಯು+ ಉದಯಾಚಲಕೆ(ಪೂರ್ವದ ಬೆಟ್ಟಕ್ಕೆ) ಬಂದ.
ಅರ್ಥ: ಸೂರ್ಯನು ಪಶ್ಚಿಮ ಸಮುದ್ರವನ್ನು ಹೊಗಲು, ಕಮಲಗಳು ಮುಚ್ಚಿದವು. ಚಕ್ರವಾಕ ಪಕ್ಷಿಯ ಮನಸ್ಸಿಗೆ ಬೇಸರ; ರಾತ್ರಿ ಅರಳುವ ಕುಮುದಿನಿಗೆ- ಕನ್ನೈದಿಲೆಗೆ ಸಂತಸ; ಯಾಮಿನಿಗೆ ಸುಮ್ಮಾನ- ಆನಂದ,; ಃಈಗಿರುವಾಗ ಸೂರ್ಯನು ಕನಕಮಯದ ಸುಂದರ ರಥವನ್ನು ಏರಿ ರಾತ್ರಿಯಲ್ಲಿ ಸಂಚರಿಸುವ ದನುಜರನ್ನು ಸಂಹರಿಸಲು, ಕಮಲಗಳಿಂದ ಕೂಡಿದ ಕೊಳ, ಸರೋವರಗಳು ಮನಸ್ಸಿನಲ್ಲಿ ಉತ್ಸಾಹಿಸಲು ಅವನು ಪೂರ್ವದ ಬೆಟ್ಟದಮೇಲೆ ಬಂದನು.(ತಾತ್ಪರ್ಯ:ರಾತ್ರಿ ಕಳೆದು ಬೆಳಗಾಯಿತು.)
ಋಷಿಗಳೊಳು ಮೇಳವು ವರಾಸನ
ಮೆಸೆವ ಬನದೊಳು ಬಳಿಕ ಗಂಗಾ
ಪ್ರಸರದಲ್ಲಿಯೆ (ಪಾ- ಪ್ರಸರದಲಿ) ಸ್ನಾನ ಭೋಜನ ಕಾಲದಲಿ ಪಾನ |
ಮಿಸುಪ ಸುತಿಯ ವಿಲಾಸಗಳ ಸಂ
ತಸದಿ ಕೇಳ್ವ ಸಮಾಸಪೂರಿತ
ವಸುಮತೀಧರ ಯಮಜನೆಸೆದನು ಭೂಪ ಕೇಳೆಂದ || ೭ ||
ಪದವಿಭಾಗ-ಅರ್ಥ: ಋಷಿಗಳೊಳು ಮೇಳವು ವರ+ ಆಸನಮು+ ಎಸೆವ ಬನದೊಳು(ವನದಲ್ಲಿ) ಬಳಿಕ ಗಂಗಾಪ್ರಸರದಲ್ಲಿಯೆ ಸ್ನಾನ, ಭೋಜನ ಕಾಲದಲಿ ಪಾನ, ಮಿಸುಪ(ಹೊಳಪು, ಕಾಂತಿ; ಅಂದ, ಲಾವಣ್ಯ) ಸುತಿಯ(ಸ್ತುತಿಯ- ದೇವರನಾಮ ೨ ಹೊಗಳಿಕೆ) ವಿಲಾಸಗಳ ಸಂತಸದಿ ಕೇಳ್ವ ಸಮಾಸ ಪೂರಿತ (ದೊರೆತನ ಹೊಂದಿದ ಸಮಾನ, ಅರಸು ೨ ಕ್ಷತ್ರಿಯ) ವಸುಮತೀಧರ ಯಮಜನು+ ಎಸೆದನು ಭೂಪ ಕೇಳೆಂದ.
ಅರ್ಥ: 'ಯಮಜ ಯುಧಿಷ್ಠಿರನಿಗೆ, ಋಷಿಗಳ ಜೊತೆಯಲ್ಲಿ ಮೇಳವು- ಸಹವಾಸವು; ಶೋಭಿಸುವ ಆ ವನದಲ್ಲಿ ಕುಳಿತುಕೊಳ್ಳಲು ಮರದನರಳಲ್ಲಿ ಎಲೆಗಳ ಉತ್ತಮ ಆಸನವು; ಬಳಿಕ ಗಂಗಾತೀರದಲ್ಲಿಯೆ ಸ್ನಾನ; ಭೋಜನ ಕಾಲದಲ್ಲಿ ಗಂಗಾಪಾನ; ಶೋಬಿಸುವ ಸ್ತುತಿಯ(ಲಾವಣ್ಯದಿಂದ ಕೂಡಿದ ಪಕ್ಷಿಗಳು, ನವಿಲುಗಳ ಗಾನದ ಸುತಿಯನ್ನು,) ವಿಲಾಸಗಳನ್ನು ಸಂತಸದಿಂದ ಕೇಳುವ ದೊರೆತನ ಹೊಂದಿದ ವಸುಮತೀಧರನಾದ ಧರ್ಮಜನು ಆಕಾಡಿನಲ್ಲಿ ಶೋಭಿಸಿದನು,' ಭೂಪ ಕೇಳೆಂದ.

ಭೀಮನ ಬೇಟೆ[ಸಂಪಾದಿಸಿ]

ಇರುತಿರಲು ಕಲಿಭೀಮ ಮೃಗಯಾ
ತುರದಲಖಿಳ ಕಿರಾತರುಗಳೊಡ
ವೆರಸಿ ಹೊಕ್ಕನು ಗಿರಿತರುವ್ರಜ ಬಹಳ ಕಾನನವ |
ವರಹ ಮರೆ ಸಾರಂಗ ಪೆರ್ಬುಲಿ
ಕರಡಿ ವೃಕ ಶಾರ್ದೂಲ ಕೇಸರಿ
ಕರಿ ಕಳಭವೋಡಿದವು ದೆಸೆದೆಸೆಗೈದಿ ತಲ್ಲಣಿಸಿ || ೮ ||
ಪದವಿಭಾಗ-ಅರ್ಥ: ಇರುತಿರಲು ಕಲಿಭೀಮ ಮೃಗಯಾ+ ಆತುರದಲಿ+ ಅಖಿಳ ಕಿರಾತರುಗಳ+ ಒಡವೆರಸಿ ಹೊಕ್ಕನು ಗಿರಿ-ತರು-ವ್ರಜ(ದಟ್ಟಮರಗಳ ಪ್ರದೇಶ) ಬಹಳ ಕಾನನವ, ವರಹ ಮರೆ-ಸಾರಂಗ, ಪೆರ್ಬುಲಿ, ಕರಡಿ, ವೃಕ(ತೋಳ) ಶಾರ್ದೂಲ(ಹುಲಿ) ಕೇಸರಿ(ಸಿಂಹ), ಕರಿ(ಆನೆ) ಕಳಭ(ಆನೆಮರಿ), +ವೋಡಿದವು ದೆಸೆದೆಸೆಗ+ ಐದಿ(ಹೋಗಿ) ತಲ್ಲಣಿಸಿ(ಹೆದರಿ)
ಅರ್ಥ:ಹೀಗೆ ಪಾಂಡವರು ಕಾದಿನಲ್ಲಿ ಇರುತ್ತಿರಲು, ಕಲಿಭೀಮನು ಮೃಗಗಳ ಬೇಟೆಯಾಡುವ ತವಕದಲ್ಲಿ, ಅಲ್ಲಿ ವಾಸವಿದ್ದ ಅಖಿಲ ಕಿರಾತರುಗಳನ್ನು ಒಡಗೊಂಡು, ಬೇಟೆಗಾಗಿ ಕಾಡನ್ನು ಹೊಕ್ಕನು. ಅವರು ಬೆಟ್ಟಗಳ ದಟ್ಟ ಕಾಡಿನ ಪ್ರದೇಶದ ಬಹಳದಟ್ಟ ಕಾಡನ್ನು ಹೊಕ್ಕರು. ಅಲ್ಲಿ ಭಿಮನ ಆರಭಟಕ್ಕೆ ಹಂದಿ-ವರಹ ಅಡಗಿದ ಸಾರಂಗ- ಜಿಂಕೆ, ಹೆಬ್ಹುಲಿ, ಕರಡಿ, ತೋಳ, ಪಟ್ಟೆಹುಲಿ, ಸಿಂಹ, ಆನೆ, ಆನೆಮರಿ, ಇವು ಹೆದರಿ ದಿಕ್ಕುದಿಕ್ಕಿಗೆ ಹೊಗಿ ಓಡಿದವು.
ಹಾಸಗಳಹರಿವಿಡಿವ ನಾಯ್ಗಳ
ಬೀಸುವಲೆಗಳ ಕಾಲಗಣ್ಣಿಯ
ಸೂಸುವಲೆಗಳ ಧನು ಸರಳ ಭಾಸುರದ ಕುಪ್ಪಸದ |
ಕೇಶದಲಿ ತಳಿರುಗಳ ಬಿಗಿದು ವಿ
ಳಾಸದಲಿ ಹೊರವಂಟು ಹೆಬ್ಬಲೆ
ಬೀಸಿದರು ಬೇಂಟೆಗರು ಬಹಳ ಮೃಗಂಗಳನು ಕೆಡಹಿ || ೯ ||
ಪದವಿಭಾಗ-ಅರ್ಥ: ಹಾಸಗಳ ಹರಿವಿ+ ಇಡಿವ(ಹಿಡಿಯುವ) ನಾಯ್ಗಳ ಬೀಸುವಲೆಗಳ(ಬೀಸುಬಲೆಗಳ), ಕಾಲಗಣ್ಣಿಯ(ಕಾಲುಗಳನ್ನು ಕಟ್ಟುವ ಕಣ್ಣಿ- ಗಂಟು ಕುಣಿಕೆಯ ಹಗ್ಗ) ಸೂಸುವಲೆಗಳ(ಸೂಸು+ ಬಲೆಗಳ) ಧನು()ಬಿಲ್ಲು, ಸರಳ(ಬಾಣ) ಭಾಸುರದ(ಹಿರಿ ಬೆಲೆಯ) ಕುಪ್ಪಸದ ಕೇಶದಲಿ, ತಳಿರುಗಳ ಬಿಗಿದು ವಿಳಾಸದಲಿ(ಶೋಭೆಯಲ್ಲಿ) ಹೊರವಂಟು ಹೆಬ್ಬಲೆ ಬೀಸಿದರು ಬೇಂಟೆಗರು ಬಹಳ ಮೃಗಂಗಳನು ಕೆಡಹಿ.
ಅರ್ಥ:ಬೇಟೆಗಾರರು ಹಾಸುಬಲೆಗಳನ್ನುಹರಿವಿ, ಪ್ರಾಣಿಗಳನ್ನು ಹಿಡಿಯುವ ನಾಯಿಗಳೊಡನೆ, ಬೀಸುಬಲೆಗಳನ್ನೂ, ಕಾಲುಗಳನ್ನು ಕಟ್ಟುವ ಕಣ್ಣಿ ಎಂಬ ಗಂಟು ಕುಣಿಕೆಯ ಹಗ್ಗವನ್ನೂ ಸೂಸುವ ಬಲೆಗಳನ್ನೂ ಬಿಲ್ಲುಗಳನ್ನೂ, ಬಾಣಗಳನ್ನೂ, ಉಪಯೋಗಿಸಿ ಹಿರಿ ಬೆಲೆಯ ಶೋಬಿಸುವ ಕುಪ್ಪಸತೊಟ್ಟು, ಕೇಶವನ್ನು ಸಿಂಗರಿಸಿ ಕಟ್ಟಿ ಅದಕ್ಕೆ ಎಳೆಎಲೆಯ- ತಳಿರುಗಳನ್ನು ಬಿಗಿದು ಶೋಭಿಸುತ್ತಾ ಹೊರಹೊರಟು, ಹೆಬ್ಬಲೆ- ದೊಡ್ಡ ಬಲೆಗಳನ್ನು ಬೀಸಿದರು. ಬೇಟೆಗಾರರು ಹೀಗೆ ಬಹಳ ಮೃಗಗಳನನು ಕೊಂಉಕೆಡವಿದರು.
ಕೊಡಹಿ ಬಿಸುಟನು ಕೇಸರಿಯ ಕಾ
ಲ್ವಿಡಿದು ಸೀಳಿದ ಕರಿಗಳನು ಬೆಂ
ಬಿಡದೆ ಹಿಡಿದಪ್ಪಳಿಸಿದನು ಶಾರ್ದೂಲ ಹೆಬ್ಬುಲಿಯ |
ಅಡಗೆಡಹಿ ಪೇರ್ಮರಿ ವರಾಹನ
ಮಡದಲುರೆ ಘಟ್ಟಿಸಿ ವಿನೋದದಿ
ನಡೆಯೆ ಧರೆ ಕಂಪಿಸಿತು ಭೀಮನ ಪದದ ಘಲ್ಲಣೆಗೆ || ೧೦ ||
ಪದವಿಭಾಗ-ಅರ್ಥ: ಕೊಡಹಿ ಬಿಸುಟನು ಕೇಸರಿಯ ಕಾಲ್+ ವ+ ಹಿಡಿದು ಸೀಳಿದ ಕರಿಗಳನು(ಆನೆ) ಬೆಂಬಿಡದೆ ಹಿಡಿದು+ ಅಪ್ಪಳಿಸಿದನು ಶಾರ್ದೂಲ ಹೆಬ್ಬುಲಿಯ ಅಡ+ ಗೆ+ ಕೆಡಹಿ ಪೇರ್+ ಮರಿ(ಪೇರ್- ಹಿರಿಯ ಮರಿ) ವರಾಹನ(ಹಂದಿಯ)+ ಮಡದಲಿ(ಮಲಗಿದಲ್ಲಿ- ವಸತಿಯಲ್ಲಿ)+ ಉರೆ ಘಟ್ಟಿಸಿ ವಿನೋದದಿ ನಡೆಯೆ ಧರೆ ಕಂಪಿಸಿತು ಭೀಮನ ಪದದ ಘಲ್ಲಣೆಗೆ(ತೊಂದರೆ, ಪಟ್ಟಿಗೆ, ಬಡಿತಕ್ಕೆ )
ಅರ್ಥ: ಭೀಮನು ಸಿಂಹವನ್ನು ಹಿಡಿದು ಕೊಡವಿ ಬಿಸುಟನು; ಆನಗಳನ್ನು ಕಾಲು ಹಿಡಿದು ಸೀಳಿದನು; ಶಾರ್ದೂಲವೆಂಬ ಹೆಬ್ಬುಲಿಯನ್ನು ಬೆನ್ನಟ್ಟಿ ಹಿಡಿದು ಅಡ್ಡ ಕೆಡವಿ, ಅದರ ಮರಿಯನ್ನು ಅಪ್ಪಳಿಸಿದನು; ಹಂದಿಗಳ ವಸತಿಯಲ್ಲಿ ಬಲವಾಗಿ ಲಾಲು ಬಡಿದು ವಿನೋದದಿಂದ ನಡೆಯಲು ಭೂಮಿಯು ಭೀಮನ ಪಾದಗಳ ಬಡಿತಕ್ಕೆ ಕಂಪಿಸಿತು- ನಡುಗಿತು.
ಬಂದನತಿಬೇಂಟೆಯಲಿ ಚರಿಸುತ
ನಿಂದು ಹತವಾದಖಿಳ ಮೃಗಗಳ
ನಂದು ವ್ಯಾಧರ ನಿಕರಕಿತ್ತನು ಪವನಜಾತ್ಮಜನು |
ತಂದರವದಿರು ತವತವಗೆ ಪರಿ
ತಂದು ತರು ಶಿಖಿಯಿಂದ ದಹಿಸಿದ
ರಂದು ಮಾಂಸವನೊಲಿದು ಭಕ್ಷಿಸಿದರು ವಿನೋದದಲಿ || ೧೧ ||
ಪದವಿಭಾಗ-ಅರ್ಥ: ಬಂದನು+ ಅತಿ+ಬೇಂಟೆಯಲಿ ಚರಿಸುತ(ತೊಡಗಿ) ನಿಂದು ಹತವಾದ+ ಅಖಿಳ ಮೃಗಗಳನು+ ಅಂದು ವ್ಯಾಧರ ನಿಕರಕೆ+ ಇತ್ತನು ಪವನಜಾತ್ಮಜನು; ತಂದರು+ ಅವದಿರು(ಅವರು) ತವತವಗೆ ಪರಿತಂದು(ಪರಿಚ್ಛೇದ- ವಿಭಾಗ; ಪರಿ+ ತಂದು- ವಿಭಾಗಮಾಡಿತಂದು) ತರು ಶಿಖಿಯಿಂದ(ಮರದ ಕಡ್ಡಿ) ದಹಿಸಿದರು+ ಆದು ಮಾಂಸವನು;+ ಒಲಿದು ಭಕ್ಷಿಸಿದರು ವಿನೋದದಲಿ.
ಅರ್ಥ:ಭೀಮನು ಬೇಟೆಗೆ ಬಂದನು. ಬಂದವನು ಅತಿಯಾದ ಬೇಟೆಯ ಕಾರ್ಯದಲ್ಲಿ ತೊಡಗಿ, ಕೊನೆಗೆ ಬೇಟಯನ್ನು ಮುಗಿಸಿ ನಿಂತು, ಪವನಜಾತ್ಮಜನಾದ ಭೀಮನು ಹತವಾದ ಎಲ್ಲಾ ಮೃಗಗಳನ್ನೂ ಅಂದು ವ್ಯಾಧರ ಸಮೂಹಕ್ಕೇ ಕೊಟ್ಟುಬಿಟ್ಟನು. ಆ ಬೇಟೆಗಾರರು ಆ ಪ್ರಾಣಿಗಳನ್ನೆಲ್ಲಾ ತಂದರು. ಅವನ್ನು ತಮ್ಮತಮ್ಮಲಿ ಹಂಚಿಕೊಂಡು ಮರದ ಶಾಖೆಗಳಿಂದ ಅದರ ಮಾಂಸವನ್ನು ದಹಿಸಿದರು- ಸುಟ್ಟರು. ನಂತರ ವಿನೋದಿಂದ ಇಷ್ಟಪಟ್ಟು ಭಕ್ಷಿಸಿದರು- ತಿಂದರು.

ಭೀಮನು ಜಂಬೂಫಲವನ್ನು ಕಿತ್ತನು[ಸಂಪಾದಿಸಿ]

ಮುಂದೆ ಕಂಡನು ದೂರದಲ್ಲಿಹ
ನಂದನದ ಮೆಳೆ ತರು ನಿಕಾಯದ
ಸಂದಣಿಯ ಪೂಗೊಂಚಲಿನ ಪಲ್ಲವ ನಿಕಾಯದಲಿ |
ಗೊಂದಣದ ತರು ಮಧ್ಯದಲ್ಲಿಹು
ದೊಂದು ಜಂಬೂವೃಕ್ಷ ಮೆರೆದಿರೆ
ನಿಂದು ನೋಡಿದು ಭೀಮ ವಿಸ್ಮಯಗೊಂಡನಾ ಕ್ಷಣಕೆ || ೧೨ ||
ಪದವಿಭಾಗ-ಅರ್ಥ: ಮುಂದೆ ಕಂಡನು ದೂರದಲ್ಲಿ+ ಇಹ(ಇರುವ) ನಂದನದ(ಇಂದ್ರನ ಉದ್ಯಾನವನ, ಸುಂದರ ತೋಟ) ಮೆಳೆ(ಒತೊತ್ತಾಗಿಬೆಳೆದ ಗಿಡ ಮರ) ತರು(ಮರ) ನಿಕಾಯದ(ಸಮೂಹದ) ಸಂದಣಿಯ ಪೂಗೊಂಚಲಿನ ಪಲ್ಲವ()ಚಿಗುರು ಎಲೆ ನಿಕಾಯದಲಿ(ಸಮೂಹ) ಗೊಂದಣದ(ಗುಂಪು) ತರು ಮಧ್ಯದಲ್ಲಿ+ ಇಹುದು+ ಒಂದು ಜಂಬೂವೃಕ್ಷ (ನೇರಿಳೆಮರ) ಮೆರೆದಿರೆ (ಶೋಭಿಸುತ್ತಿರಲು) ನಿಂದು ನೋಡಿದು ಭೀಮ ವಿಸ್ಮಯಗೊಂಡನು( ಆಶ್ಚರ್ಯಪಟ್ಟನು)+ ಆ ಕ್ಷಣಕೆ
ಅರ್ಥ:ಭೀಮನು ಆ ಕಾಡಿನಲ್ಲಿ ಮುಂದೆ ಬರುತ್ತಿರುವಾಗ ಒಂದು ಮರವನ್ನು ಕಂಡನು. ದೂರದಲ್ಲಿ ಇರುವ ಸುಂದರ ವನದಲ್ಲಿ ಒತೊತ್ತಾಗಿಬೆಳೆದ ಗಿಡ ಮರ ಸಮೂಹದ ಸಂದಣಿಯ ಮಧ್ಯದಲ್ಲಿ ಹೂವಿನ ಗೊಂಚಲಿನ ಚಿಗುರು ಎಲೆಗಳ ಗೊಂಚಲಿನ್ನು ಹೊಂದಿದ ಮರಗಳ ಮಧ್ಯದಲ್ಲಿ ಒಂದು ನೇರಿಳೆಮರ ಶೋಭಿಸುತ್ತ ಇರುವುದನ್ನು ಭೀಮನು ನಿಂತು ನೋಡಿದನು. ಅದರಿಂದ ಆ ಕ್ಷಣಕ್ಕೆ ಅವನು ಆಶ್ಚರ್ಯಪಟ್ಟನು.
ಇದು ವಿಚಿತ್ರದ ಫಲವು ತಾನೊಂ
ದಿದೆ ಮತಂಗಜ ಗಾತ್ರದಲಿ ತಾ
ನಿದನು ಕೊಂಡೊಯ್ವೆನು ಮಹೀಪಾಲಕನ ದರುಶನಕೆ |
ಗದೆಯ ಕಕ್ಷದಲೌಕಿ ಮಾರುತಿ
ಮಧುರಿಪುವ ನೆನೆವುತ್ತಲಾನಂ
ದದಲಿ ವೃಕ್ಷವನಡರಿ ಕೊಯ್ದಿಳುಹಿದನು ನಿಮಿಷದಲಿ || ೧೩ ||
ಪದವಿಭಾಗ-ಅರ್ಥ: ಇದು ವಿಚಿತ್ರದ ಫಲವು ತಾನು+ ಒಂದಿದೆ ಮತಂಗಜ(ಆನೆಯಂತೆ) ಗಾತ್ರದಲಿ, ತಾನ+ ಇದನು ಕೊಂಡೊಯ್ವೆನು ಮಹೀಪಾಲಕನ ದರುಶನಕೆ, ಗದೆಯ ಕಕ್ಷದಲಿ(ಬಗಲು) ಔಕಿ ಮಾರುತಿ ಮಧುರಿಪುವ(ಕೃಷ್ನನ) ನೆನೆವುತ್ತಲಿ+ ಆನಂದದಲಿ ವೃಕ್ಷವನು+ ಅಡರಿ(ಹತ್ತಿ) ಕೊಯ್ದು+ ಇಳುಹಿದನು ನಿಮಿಷದಲಿ.
ಅರ್ಥ:ಭೀಮನು ಆ ನೇರಿಲೆಮರದ ಮೇಲಿದ್ದ ಹಣ್ಣನ್ನು ಕಂಡು, ಇದು ವಿಚಿತ್ರವಾದ ಫಲವು; ಇಡೀ ಮರದಲ್ಲಿ ತಾನು ಒಂದೇ ಇದೆ. ಅದು ಮತ್ತಗಜದಂತೆ ಗಾತ್ರದಲಿ ಕೊಬ್ಬಿ ಬೆಳೆದಿದೆ. ತಾನು ಇದನ್ನು ಮಹೀಪಾಲ ಧರ್ಮಜನು ನೋಡಲು ತೆಗೆದುಕೊಂಡು ಹೋಗುವೆನು, ಎಂದು ಗದೆಯನ್ನು ಬಗಲಲ್ಲಿ ಔಕಿ ಹಿಡಿದುಕೊಂಡು ಭೀಮನು ಕೃಷ್ನನನ್ನು ಮನಸ್ಸಿನಲ್ಲಿ ನೆನೆಯುತ್ತಾ ಆನಂದದಿಂದ ಮರವನ್ನು ಹತ್ತಿ ದೊಡ್ಡ ನೇರಿಲುಹಣ್ಣನ್ನು ನಿಮಿಷದಲ್ಲಿ ಕೊಯ್ದು ಕೆಳಕ್ಕೆ ಇಳಿಸಿದನು.
ಫಲವ ಕೊಂಡಾ ಭೀಮ ಬೇಗದಿ
ನಲವಿನಲಿ ನಡೆತಂದು ಭೂಪನ
ನಿಳಯದಲಿ ತಂದಿಳುಹಿದರೆ ಯಮಸೂನು ಬೆರಗಾಗಿ |
ಕೆಲದಲಿದ್ದನುಜರಿರ ಋಷಿ ಜನ
ಗಳಿರ ನೋಡಿರೆಯೆನಲು ಶಿವಶಿವ
ನಳಿನನಾಭನೆ ಬಲ್ಲನೆಂದರು ಸಕಲ ಋಷಿವರರು || ೧೪ ||
ಪದವಿಭಾಗ-ಅರ್ಥ: ಫಲವ ಕೊಂಡಾ ಭೀಮ ಬೇಗದಿ ನಲವಿನಲಿ(ಸಂತಸದಿಂದ) ನಡೆತಂದು ಭೂಪನ ನಿಳಯದಲಿ(ವಸತಿಯಲ್ಲಿ) ತಂದು+ ಇಳುಹಿದರೆ, ಯಮಸೂನು ಬೆರಗಾಗಿ ಕೆಲದಲಿದ್ದ+ ಅನುಜರಿರ, ಋಷಿ ಜನಗಳಿರ, ನೋಡಿರೆ+ಯೆನಲು ಶಿವಶಿವ ನಳಿನನಾಭನೆ ಬಲ್ಲನು+ ಎಂದರು ಸಕಲ ಋಷಿವರರು.
ಅರ್ಥ:ಆ ಭೀಮನು ಆ ಕುಂಬಲಕಾಯಿಗಾತ್ರದ ನೇರಿಲೆ ಫಲವನ್ನು ತೆಗೆದುಕೊಂಡು, ಬೇಗಬೇಗ ಸಂತಸದಿಂದ) ಬಂದು ಧರ್ಮಜ ಭೂಪನ ಕುಟೀರದಲ್ಲಿ ತಂದು ಇಳಿಸಿದನು. ಹಾಗೆ ಇಳಿಸಿಟ್ಟರೆ ಧರ್ಮಜನು ಅದನ್ನು ಕಂಡು ಬೆರಗಾಗಿಹೋದನು. ಹತ್ತಿರದಲಿದ್ದವರನ್ನು ಕರೆದು ತಮ್ಮಂದಿರ, ಋಷಿ ಜನಗಳಿರ, ನೋಡಿರೆ, ಎನ್ನಲು; ಅವರು, 'ಶಿವಶಿವಾ ಇದೇನು ಅಚ್ಚರಿ ಇದರ ರಹಸ್ಯವನ್ನು ಆ ನಳಿನನಾಭ ದೇವನೇ ಬಲ್ಲನು,' ಎಂದು ಸಕಲ ಋಷಿಶ್ರೇಷ್ಠರು ಹೇಳಿದರು.
ಎನಲು ಸಹದೇವನ ಯುಧಿಷ್ಠಿರ
ಜನಪ ಬೆಸಗೊಳುತಿರಲು ಬಿನ್ನಹ
ದನುಜರಿಪು ಹರ ಕಮಲಭವರಿಗೆ ಕೊಡುವ ಶಾಪವನು |
ಅನುವ ಕಾಣೆನು ಕಣ್ವಮುನಿ ತಾ
ಮುನಿದನಾದರೆ ಶಪಿಸುವನು ಯೆಂ
ದನು ತ್ರಿಕಾಲಜ್ಞಾನಿ ಮಾದ್ರೀಸುತನು ಭೂಪತಿಗೆ || ೧೫ ||
ಪದವಿಭಾಗ-ಅರ್ಥ: ಎನಲು ಸಹದೇವನ ಯುಧಿಷ್ಠಿರ ಜನಪ ಬೆಸಗೊಳುತಿರಲು, ಬಿನ್ನಹ(ವಿನಯದಿಂದ ಹೇಳಿವುದು) ದನುಜರಿಪು(ವಿಷ್ಣು) ಹರ ಕಮಲಭವರಿಗೆ ಕೊಡುವ ಶಾಪವನು ಅನುವ (ರೀತಿ, ಅವಕಾಶ) ಕಾಣೆನು, ಕಣ್ವಮುನಿ ತಾ ಮುನಿದನಾದರೆ ಶಪಿಸುವನು ಯೆಂದನು ತ್ರಿಕಾಲಜ್ಞಾನಿ ಮಾದ್ರೀಸುತನು ಭೂಪತಿಗೆ.
ಅರ್ಥ:ಮುನಿಜನರು ಹೀಗೆ ಹೇಳಲು ಆಗ ಯುಧಿಷ್ಠಿರ ಜನಪತಿಯು, ತ್ರಿಕಾಲಜ್ಞಾನಿ ಮಾದ್ರೀಸುತನಾದ ಸಹದೇವನನ್ನು ಈ ಹಣ್ಣಿನ ರಹಸ್ಯವನ್ನು ಕುರಿತು ವಿಚಾರಿಸಿದನು. ಆಗ ಅವನು ವಿನಯದಿಂದ ಧರ್ಮಜನಿಗೆ ಹೇಳಿದನು; ವಿಷ್ಣು ಶಿವ ಬ್ರಹ್ಮ ಇವರಿಗೆ ಶಾಪವನ್ನು ಕೊಡುವ ಸಾಮರ್ಥ್ಯವುಳ್ಳವನು ಕಣ್ವ, ಅವನದು ಈ ಫಲ, ಅವನ ಶಾಪದಿಂದ ತಪ್ಪಿಸಿಕೊಳ್ಳವ ಅನುವನ್ನು- ಬಗೆಯನ್ನು ಕಾಣೆನು, ಕಣ್ವಮುನಿಯು ತಾನು ಕೋಪಗೊಂಡರೆ ಶಪಿಸುವನು,' ಎಂದನು.
ವರುಷಕೊಂದೇ ಫಲವಹುದು ಅದ
ನರಿತು ಯೋಗಧ್ಯಾನದಲಿ ಕಂ
ದೆರೆದು ಕರ ಸಂಪುಟವನರಳಿಚಲಾಗಲಾ ಫಲವು |
ಇರದೆ ಹಸ್ತದೊಳಿಳಿಯಲಾ ಮುನಿ
ಹರುಷದಿಂದದ ತಳೆದು ಕೊಂಬನು
ಪರಶಿವ ಧ್ಯಾನೈಕ ದೃಷ್ಟಿಯೊಳಿಪ್ಪನಾ ಮುನಿಪ || ೧೬ ||
ಪದವಿಭಾಗ-ಅರ್ಥ: ವರುಷಕೆ+ ಒಂದೇ ಫಲವು+ ಅಹುದು ಅದನು+ ಅರಿತು ಯೋಗಧ್ಯಾನದಲಿ ಕಂದೆರೆದು(ಕಣ್ಣು ತೆರೆದು) ಕರ ಸಂಪುಟವನು+ ಅರಳಿಚಲು+ ಆಗಲು+ ಆ ಫಲವು ಇರದೆ ಹಸ್ತದೊಳು+ ಇಳಿಯಲು+ ಆ ಮುನಿ ಹರುಷದಿಂದ+ ಅದ ತಳೆದು(ಹೊಂದು, ಪಡೆ, ಸ್ವೀಕರಿಸು) ಕೊಂಬನು, ಪರಶಿವ ಧ್ಯಾನ+ ಏಕ ದೃಷ್ಟಿಯೊಳಿಪ್ಪನು+ ಆ ಮುನಿಪ.
ಅರ್ಥ:ಸಹದೇವ ಹೇಳಿದ,'ಒಂದು ವರ್ಷದಲ್ಲಿ ಆ ಮರದಲ್ಲಿ ಅದು ಒಂದೇ ಫಲವು ಆಗುವುದು. ಅದನ್ನು ಯೋಗಧ್ಯಾನದಲ್ಲಿ ಅರಿತುಕೊಂಡು, ಮುನಿ ಕಣ್ಣು ತೆರೆದು ಅಂಗೈಗಳನ್ನು ಬಿಚ್ಚಿ ಸೇರಿಸಿದ ಸಂಪುಟವನ್ನು ಅರಳಿಸಲು, ಆಗ ಆ ಫಲವು ತಪ್ಪದೆ ಮುನಿಯ ಹಸ್ತದಲ್ಲಿ ಬಂದು ಇಳಿಯಲು, ಆ ಮುನಿಯು ಹರ್ಷದಿಂದ ಅದನ್ನು ಸ್ವೀಕರಿಸುವನು. ನಂತರ ಆ ಮುನಿಯು ಪರಶಿವನ ಧ್ಯಾನದ ಒಂದೇ ದೃಷ್ಟಿಯಲ್ಲಿ ಇರುವನು.
ಕಂದೆರೆದು ಮುನಿ ನೋಡಿದೊಡೆ ತಮ
ಗಿಂದು ಹರುವಹುದೆನುತ ಧರ್ಮಜ
ನೊಂದು ಫಲುಗುಣ ಭೀಮ ಸಹದೇವಾದಿಗಳು ಸಹಿತ |
ಬಂದನತಿ ವೇಗದಲಿ ಪವನಜ
ನಂದು ವೃಕ್ಷವ ತೋರಿಸಿದನೇ
ನೆಂದು ಬಣ್ಣಿಪೆ ಬಹಳ ಕೊನೆಗಳ ಗಗನ ಚುಂಬಿತವ || ೧೭ ||
ಪದವಿಭಾಗ-ಅರ್ಥ: ಕಂದೆರೆದು (ಕಣ್ಣು ತೆರೆದು) ಮುನಿ ನೋಡಿದೊಡೆ ತಮಗೆ+ ಇಂದು ಹರುವು(ತೊಂದರೆ ನಾಶ, ಹರಣ= ನಾಶ)+ ಅಹುದು(ಆಗುವುದು)+ ಎನುತ ಧರ್ಮಜ ನೊಂದು ಫಲುಗುಣ ಭೀಮ ಸಹದೇವಾದಿಗಳು ಸಹಿತ ಬಂದನು+ ಅತಿ ವೇಗದಲಿ; ಪವನಜನು+ ಅಂದು ವೃಕ್ಷವ ತೋರಿಸಿದನು+ ಏನೆಂದು ಬಣ್ಣಿಪೆ ಬಹಳ ಕೊನೆಗಳ ಗಗನ ಚುಂಬಿತವ
ಅರ್ಥ:ಮುನಿಯು ಕಣ್ಣು ತೆರೆದು ನೋಡಿದರೆ ತಮಗೆ ಇಂದು ತೊಂದರೆ ಆಗುವುದು ಎನ್ನುತ್ತಾ, ಧರ್ಮಜನು ನೊಂದು, ಫಲ್ಗುಣ ಭೀಮ ಸಹದೇವಾದಿಗಳು ಸಹಿತ ಅತಿ ವೇಗದಲಿ ಮರದ ಬಳಿ ಬಂದನು; ಭೀಮನು+ ಆಗ ಆ ವೃಕ್ಷವನ್ನು ತೋರಿಸಿದನು. ಆ ಮರವನ್ನು ಏನೆಂದು ಬಣ್ಣಿಪಲಿ! ಅದು ಬಹಳ ಕೊನೆಗಳಿಂದ ಕೂಡಿ ಆಕಾಶವನ್ನು ಚುಂಬಿಸುತ್ತಿತ್ತು.
ಕಂಡು ಯಮಸುತನತಿ ಭಯದಿಂದ
ಖಂಡಪರಶುವೆ ಬಲ್ಲ ನಾವ್ ಮುಂ
ಖಂಡಪರಶುವೆ ಬಲ್ಲ ನಾವ್ ಮುಂ
ಕೊಂಡು ಮಾಡಿದ ದುಷ್ಕೃತದ ಫಲವೆನುತ ಬಿಸುಸುಯ್ದ |
ಚಂಡವಿಕ್ರಮ ಭೀಮನದ ಕೈ
ಕೊಂಡು ತಾನವಿವೇಕದಲಿಯು
ದ್ದಂಡತನದಿಂ ತಂದ ಹತ್ತಿಸಲರಿದು ನಮಗೆಂದ || ೧೮ ||
ಪದವಿಭಾಗ-ಅರ್ಥ: ಕಂಡು ಯಮಸುತನು+ ಅತಿ ಭಯದಿನಂದ ಖಂಡಪರಶುವೆ(ಶಿವನೇ) ಬಲ್ಲ ನಾವ್ ಮುಂಕೊಂಡು(ಹಿಂದೆ, ಹಿಂದಿನ ಜನ್ಮದಲ್ಲಿ) ಮಾಡಿದ ದುಷ್ಕೃತದ ಫಲವೆನುತ ಬಿಸುಸುಯ್ದ; ಚಂಡವಿಕ್ರಮ ಭೀಮನದ ಕೈಕೊಂಡು ತಾನು+ ಅವಿವೇಕದಲಿಯು+ ಉದ್ದಂಡತನದಿಂ ತಂದ ಹತ್ತಿಸಲು+ ಅರಿದು ನಮಗೆಂದ
ಅರ್ಥ: ಆ ಮರವನ್ನು ಕಂಡು ಧರ್ಮಜನು ಬಹಳ ಭಯದಿಂದ ಇದರ ರಹಸ್ಯವನ್ನು ಆ ಶಿವನೇ ಬಲ್ಲನು. ನಾವು ಹಿಂದಿನ ಜನ್ಮದಲ್ಲಿ ಮಾಡಿದ ದುಷ್ಕೃತದ ಫಲವು ಇದು ಎನ್ನುತ್ತಾ ಬಿಸುಸುಯ್ದ- ನಿಟ್ಸುಸಿರು ಬಿಟ್ಟ; ಶೂರನಾದ ಈ ಭೀಮನು ಅದನ್ನು ಅವಿವೇಕದಿಂದಲೂ ಉದ್ದಂಡತನದಿಂದಲೂ ಅದನ್ನು ಕೊಯಿದು ತಂದನು. ಹೋಗೆ ತಂದ ಅದನ್ನು ಮರದಮೇಲೆ ಜೋಡಿಸಲು ನಮಗೆ ತಿಳಿಯದಲ್ಲಾ ಎಂದ.

ಕೃಷ್ಣನ ಆಗಮನ[ಸಂಪಾದಿಸಿ]

ಹೇಳಿರೈ ಭೂಸುರರು ಋಷಿಗಳು
ಮೇಲೆ ಹತ್ತುವುಪಾಯವನು ಋಷಿ
ಜಾಲದೊಳಗೆಂದೆನಲು ನುಡಿದನು ಧೌಮ್ಯ ನಸುನಗುತ |
ಹೇಳಲರಿದಿದ ನಿಮ್ಮ ಸಲಹುವ
ಬಾಲಕೇಳಿಯ ಕೃಷ್ಣ ಬಲ್ಲನು
ಕಾಲವನು ನೂಕದೆ ಮಹಾತ್ಮನ ಭಜಿಸು ನೀನೆಂದ || ೧೯ ||
ಪದವಿಭಾಗ-ಅರ್ಥ: ಹೇಳಿರೈ ಭೂಸುರರು ಋಷಿಗಳು ಮೇಲೆ ಹತ್ತುವ+ ಉಪಾಯವನು ಋಷಿಜಾಲದೊಳಗೆ+ ಎಂದೆನಲು ನುಡಿದನು ಧೌಮ್ಯ ನಸುನಗುತ ಹೇಳಲು+ಅರಿದು(ತಿಳಿಯದು),+ ಇದ ನಿಮ್ಮ ಸಲಹುವ ಬಾಲಕೇಳಿಯ ಕೃಷ್ಣ ಬಲ್ಲನು, ಕಾಲವನು ನೂಕದೆ ಮಹಾತ್ಮನ ಭಜಿಸು ನೀನೆಂದ.
ಅರ್ಥ:ಧರ್ಮಜನು, ' ಭೂಸುರರಾದ ಬ್ರಾಹ್ಮಣರು ಮತ್ತು ಋಷಿಗಳು ಈ ಹಣ್ನು ಮರದ ಮೇಲೆ ಹತ್ತುವ ಉಪಾಯವನ್ನು ಹೇಳಿರಯ್ಯಾ; ಋಷಿಸಮೂಹದಲ್ಲಿ ಯಾರಿಗಾದರೂ ತಿಳಿದಿದ್ದರೆ ಹೇಳಿರಿ' ಎಂದುಎನ್ನಲು, ಧೌಮ್ಯ ಋಷಿಯು ನಸುನಗುತ್ಥಾ ನುಡಿದನು, 'ನಮಗೆ ಇದನ್ನು ಮರದಮೇಲೆ ಜೋಡಿಸುವ ಉಪಾಯ ಹೇಳಲು ತಿಳಿಯದು. ಇದಕ್ಕೆ ನಿಮ್ಮನ್ನು ಸಲಹುವ ಬಾಲಲಿಲಾ ಚತುರ ಕೃಷ್ಣನೇ ಬಲ್ಲನು; ಕಾಲವನ್ನು ಕಳೆಯದೆ ಆ ಮಹಾತ್ಮನನ್ನು ಭಜಿಸು ನೀನು,'ಎಂದ.
ಎನಲು ಭೂಪತಿ ಕೃಷ್ಣ ರಕ್ಷಿಸು
ದನುಜರಿಪು ಗೋವಿಂದ ರಕ್ಷಿಸು
ವನಜನಾಭ ಮುಕುಂದ ರಕ್ಷಿಸು ರಾವಣಾಂತಕನೆ |
ಮನಸಿಜನ ಪಿತ ರಾಮ ರಕ್ಷಿಸು
ಘನಮಹಿಮ ಕೇಶವನೆ ರಕ್ಷಿಸು
ನೆನೆವ ಭಕ್ತರ ಭಾಗ್ಯನಿಧಿ ಮಾಧವನೆ ರಕ್ಷಿಪುದು || ೨೦ ||
ಪದವಿಭಾಗ-ಅರ್ಥ: ಎನಲು ಭೂಪತಿ(ಧರ್ಮಜನು) ಕೃಷ್ಣ ರಕ್ಷಿಸು ದನುಜರಿಪು()ದನುಜರಿಗೆ ಶತ್ರು ಗೋವಿಂದ ರಕ್ಷಿಸು ವನಜನಾಭ(ಕಮಲನಾಭ) ಮುಕುಂದ ರಕ್ಷಿಸು, ರಾವಣಾಂತಕನೆ ಮನಸಿಜನ(ಮನ್ಮಥ) ಪಿತ, ರಾಮ ರಕ್ಷಿಸು ಘನಮಹಿಮ ಕೇಶವನೆ ರಕ್ಷಿಸು, ನೆನೆವ ಭಕ್ತರ ಭಾಗ್ಯನಿಧಿ ಮಾಧವನೆ ರಕ್ಷಿಪುದು.
ಅರ್ಥ:ಧೌಮ್ಯರ ಕೃಷ್ಣನನ್ನು ಕರೆ ಎನ್ನಲು, ಅವರ ಸಲಹೆಯಂತೆ ಧರ್ಮಜನು ಕೃಷ್ಣನನ್ನು ಹೀಗೆ ಸ್ತುತಿಸಿ ರಕ್ಷಿಸಲು ಕರೆದನು,'ಕೃಷ್ಣ ರಕ್ಷಿಸು ದನುಜರಿಪು ಗೋವಿಂದ ರಕ್ಷಿಸು, ವನಜನಾಭ ಮುಕುಂದ ರಕ್ಷಿಸು, ರಾವಣಾಂತಕನೆ ಮನ್ಮಥನ ಪಿತನೆ, ರಾಮ ರಕ್ಷಿಸು, ಘನಮಹಿಮ ಕೇಶವನೆ ರಕ್ಷಿಸು, ನೆನೆವ ಭಕ್ತರ ಭಾಗ್ಯನಿಧಿ ಮಾಧವನೆ ರಕ್ಷಿಪುದು.
ಎಂದು ಭಜಿಸುತ್ತಿರಲು ನೃಪ ಗೋ
ವಿಂದನಮಳಜ್ಞಾನದಲಿ ಸಾ
ನಂದದಿಂದಲೆ ಸತ್ಯಭಾಮಾದೇವಿಯರ ಕೂಡೆ |
ಮಂದಮತಿ ಪವಮಾನುಜನ ಕತ
ದಿಂದ ಪಾಂಡು ಕುಮಾರರಿಗೆ ಕೇ
ಡಿಂದು ಬಹುದಾ ಋಷಿಯ ಶಾಪದಿ ಶಿವಶಿವಾಯೆಂದ || ೨೧ ||
ಪದವಿಭಾಗ-ಅರ್ಥ: ಎಂದು ಭಜಿಸುತ್ತಿರಲು ನೃಪ, ಗೋವಿಂದನು+ ಅಮಳ ಜ್ಞಾನದಲಿ ಸ- ಉತ್ತಮ+ ಆನಂದದಿಂದಲೆ ಸತ್ಯಭಾಮಾದೇವಿಯರ ಕೂಡೆ, ಮಂದಮತಿ ಪವಮಾನುಜನ ಕತದಿಂದ(ಕಾರ್ಯ, ಸೇವಕತನ, ಪೌರುಷ, ಶೌರ್ಯ) ಪಾಂಡು ಕುಮಾರರಿಗೆ ಕೇಡಿಂದು ಬಹುದು+ ಆ ಋಷಿಯ ಶಾಪದಿ ಶಿವಶಿವಾ ಯೆಂದ.
ಅರ್ಥ:ಧರ್ಮಜನು ರಕ್ಷಿಸು - ರಕ್ಷಿಪುದು ಎಂದು ಭಜಿಸುತ್ತಿರಲು, ಕೃಷ್ಣನು ಅಮಲ- ದಿವ್ಯ ಜ್ಞಾನದಿಂದ ತಿಳಿದು, (ಆನಂದದಿಂದ) ಸತ್ಯಭಾಮಾದೇವಿಯರೊಡನೆ ಹೀಗೆಂದನು,'ದಡ್ಡ ಪವಮಾನುಜ ಭೀಮನ ಕೆಟ್ಟ ಸಾಹಸದಿಂದ ಈ ದಿನ ಪಾಂಡು ಕುಮಾರರಿಗೆ ಕೇಡು ಬಂದಿದೆ, ಆ ಕೇಡು ಋಷಿಯ ಶಾಪದಿಂದ ಬರುವುದು, ಶಿವಶಿವಾ.' ಯೆಂದ.(ಕೃಷ್ಣನದು ಸದಾ ಆನಂದ ಸ್ವಭಾವ)
ಎನುತ ಸಿಂಹಾಸನವನಿಳಿದಾ
ದನುಜರಿಪು ಕಮಲಾಕ್ಷಿ ನೀ ನಿ
ಲ್ಲೆನುತ ಮನವೇಗದಲಿ ಬಂದನು ಧರ್ಮಜನ ಹೊರೆಗೆ
ನೆನೆಯೆ ಲಕ್ಷ್ಮೀಕಾಂತ ಬಂದನು
ಘನದುರಿತ ದಾವಾಗ್ನಿ ಬಂದನು
ಯೆನುತ ಮೈಯಿಕ್ಕಿದನು ಮುನಿಜನ ಸಹಿತ ಯಮಸೂನು ೨೨
ಪದವಿಭಾಗ-ಅರ್ಥ:ಎನುತ ಸಿಂಹಾಸನವನು+ ಇಳಿದು+ ಆ ದನುಜರಿಪು ಕಮಲಾಕ್ಷಿ ನೀ ನಿಲ್ಲು (ಇಲ್ಲಿಯೇ ಇರು)+ ಎನುತ ಮನವೇಗದಲಿ ಬಂದನು ಧರ್ಮಜನ ಹೊರೆಗೆ, ನೆನೆಯೆ ಲಕ್ಷ್ಮೀಕಾಂತ ಬಂದನು ಘನದುರಿತ ದಾವಾಗ್ನಿ(ಘನ ದುರಿತ- ದೊಡ್ಡ ತಪ್ಪು- ಅದಕ್ಕೆ ಕಾಡುಗಿಚ್ಚು- ಅಗ್ನಿ- ನಾಶಮಾಡುವವನು) ಬಂದನುಯೆನುತ ಮೈಯಿಕ್ಕಿದನು(ಅಡ್ಡಬಿದ್ದು ನಮಿಸಿದನು) ಮುನಿಜನ ಸಹಿತ ಯಮಸೂನು(ಧರ್ಮಜ).
ಅರ್ಥ: 'ಪಾಂಡುಕುಮಾರರಿಗೆ ಕೇಡು ಬಂದಿದೆ'ಎನ್ನುತ್ತಾ ಆ ದನುಜರಿಪು ಕೃಷ್ಣನು ಸಿಂಹಾಸನವನ್ನು ಇಳಿದು,'ಕಮಲಾಕ್ಷಿ ಸತ್ಯಭಾಮೆ, ನೀನು ಇಲ್ಲಿಯೇ ಇರು, ಎಂದು ಮನೋವೇಗದಲ್ಲಿ ಬಂದನು ಧರ್ಮಜನ ಹೊರೆಗೆ- ಸಹಾಯಕ್ಕೆ ಬಂದನು, 'ನೆನೆಯುತ್ತಿದ್ದಂತೆ ಕೃಷ್ಣನು ಬಂದನು; ದೊಡ್ಡ ತಪ್ಪಿನಿಂದಾದ ದೋಷವನ್ನೂ ನಾಶಮಾಡುವವನು ಬಂದನು,' ಎನ್ನುತ್ತಾ ಧರ್ಮಜನು ಸಹೋದರರೊಡನೆ ಮತ್ತು ಮುನಿಜನರೊಡನೆ ಅಡ್ಡಬಿದ್ದು ನಮಸ್ಕರಿಸಿದನು.
ತೆಗೆದು ತಕ್ಕೈಸಿದನು ಭೂಪನ
ಮಿಗೆ ಹರುಷದಲಿ ಭೀಮ ಪಾರ್ಥರ
ನೆಗಹಿ ಮೈದಡವಿದನು ಮಾದ್ರೀಸುತರ ದ್ರೌಪದಿಯ |
ನಗುತ ಋಷಿಜನ ವಿಪ್ರ ಧೌಮ್ಯಾ
ದಿಗಳನುಚಿತೋಕ್ತಿಯಲಿ ಮನ್ನಿಸು
ತಗಧರನು ನೋಡಿದನು ಜಂಬೂಫಲದ ಘನತರುವ || ೨೩ ||
ಪದವಿಭಾಗ-ಅರ್ಥ: ತೆಗೆದು ತಕ್ಕೈಸಿದನು(ಅಪ್ಪಿ ಸಂತೈಸಿದನು) ಭೂಪನ, ಮಿಗೆ ಹರುಷದಲಿ ಭೀಮ ಪಾರ್ಥರ ನೆಗಹಿ(ನೆಲದಿಂದ ಎತ್ತಿ) ಮೈದಡವಿದನು- (ಮೈ+ ದ+ ತಡವಿದನು- ಸವರಿದನು) ಮಾದ್ರೀಸುತರ, ದ್ರೌಪದಿಯ ನಗುತ, ಋಷಿಜನ ವಿಪ್ರ ಧೌಮ್ಯಾದಿಗಳನು+ ಉಚಿತ+ ಉಕ್ತಿಯಲಿ(ಮಾತಿನಿಂದ) ಮನ್ನಿಸುತ+ ಅಗಧರನು(ಬೆಟ್ಟ ಹೊತ್ತವನು) ನೋಡಿದನು ಜಂಬೂಫಲದ ಘನತರುವ(ದೊಡ್ಡ ಮರವನ್ನು)
ಅರ್ಥ: ಕೃಷ್ನನ ಧರ್ಮಜನನ್ನು ಬರಸೆಳೆದು ಅಪ್ಪಿ ಸಂತೈಸಿದನು. ಬಹಳ ಹರ್ಷದಲ್ಲಿ ಭೀಮನನ್ನೂ, ಪಾರ್ಥನನ್ನೂ ಮಾದ್ರೀಸುತರನ್ನೂ ನೆಲದಿಂದ ಎತ್ತಿ ಮೈದಡವಿದನು. ದ್ರೌಪದಿಯನ್ನೂ ನಗುತ್ತಾ ಎತ್ತಿ ಸಂತೈಸಿದನು. ನಂತರ ಋಷಿಜನರನ್ನೂ ವಿಪ್ರರನ್ನೂ, ಧೌಮ್ಯಾದಿ ಋಷಿಮುನಿಗಳನ್ನೂ ಉಚಿಇತವಾಗದ ಮಾತಿನಿಂದ ಮನ್ನಿಸುತ್ತಾ ಕೃಷ್ಣನು ಜಂಬೂಫಲದ ದೊಡ್ಡ ಮರವನ್ನು ನೋಡಿದನು.

ನೇರಿಲೆ ಹಣ್ಣು ತೊಟ್ಟಿಗೆ ಸೇರಿತು[ಸಂಪಾದಿಸಿ]

ಕಾಳು ಮಾಡದಿರಕಟಕಟ ನೀವ್
ಮೇಲನರಿಯದೆ ಋಷಿಯ ಶಾಪವ
ನಾಲಿಸದೆ (ಪಾ- ನಾಲಿಸಿದೆ) ವರ ಮೂರ್ಖತನದಲೆ ನೆನೆದಿರನುಚಿತವ |
ಏಳಿ ಫಲವನು ತೊಟ್ಟ ಸರಿಸಕೆ
ಕಾಲದಲಿ ತಂದಿರಿಸಿ ನಿಮ್ಮನು
ಕೂಲಧರ್ಮಂಗಳನು ಬೇಗದಿ ಹೇಳಿ ನೀವೆಂದ || ೨೪ ||
ಪದವಿಭಾಗ-ಅರ್ಥ:ಕಾಳು ಮಾಡದಿರಿ+ ಅಕಟಕಟ ನೀವ್+ ಮೇಲನರಿಯದೆ ಋಷಿಯ ಶಾಪವನು+ ಆಲಿಸದೆ ವರ ಮೂರ್ಖತನದಲೆ ನೆನೆದಿರಿ+ ಅನುಚಿತವ ಏಳಿ ಫಲವನು ತೊಟ್ಟ ಸರಿಸಕೆ(ಸರ್ತಕ್ಕೆ- ಸಮಾನಕ್ಕೆ) ಕಾಲದಲಿ(ಮರದಕಾಲಲ್ಲಿ- ಬುಡ) ತಂದಿರಿಸಿ ನಿಮ್ಮ+ ಅನುಕೂಲ ಧರ್ಮಂಗಳನು ಬೇಗದಿ ಹೇಳಿ ನೀವೆಂದ.
ಅರ್ಥ:ಕೃಷ್ಭನು ಪಾಂಡವರಿಗೆ, 'ತಪ್ಪು ಕೆಲಸ ಮಾಡದಿರಿ, ಅಕಟಕಟ! ನೀವು ಉತ್ತಮ ರೀತಿಯನ್ನೂ ಉನ್ನತಿಯನ್ನೂ ಅರಿಯದೆ ತಪ್ಪು ಕೆಲಸ ಮಾಡಿದಿರಿ. ಋಷಿಯ ಶಾಪವನ್ನು ತಿಳಿಯದೆ ಬಹಳ ಮೂರ್ಖತನದಿಂದ ಅನುಚಿತವಾದ ಕಾರ್ಯವನ್ನು ನೆನೆದಿರಿ. ಈಗ ಏಳಿ ಫಲವನ್ನು ತೊಟ್ಟ ಸರ್ತಕ್ಕೆ ಮರದ ಹತ್ತಿರದಲ್ಲಿ ತಂದಿರಿಸಿ. ನೀವು ನಿಮ್ಮ ಅನುಕೂಲ-ಸ್ವಭಾವದಲ್ಲಿರುವ ಧರ್ಮಗಳನ್ನು ಬೇಗನೆ ಹೇಳಿ,' ಎಂದನು.
ಎನಲು ತಂದಿರಿಸಿದರು ಫಲವನು
ವನಜನಾಭನ ಹೇಳಿಕೆಯಲಾ
ಕ್ಷಣಕೆ ಕುಂತೀತನುಜ ಹೇಳೆನೆ ಕೈಗಳನು ಮುಗಿದು
ಇನ ಶಶಿಗಳಿಂದ್ರಾನಲಾಂತಕ
ದನುಜ ವರುಣ ಸಮೀರ ಹರಸಖ
ಮನುಮಥಾರಿಯೆ ನೀವು ಚಿತ್ತವಿಸೆನುತಲಿಂತೆಂದ ೨೫
ಪದವಿಭಾಗ-ಅರ್ಥ: ಎನಲು ತಂದು+ ಇರಿಸಿದರು ಫಲವನು ವನಜನಾಭನ ಹೇಳಿಕೆಯಲಿ+ ಆ ಕ್ಷಣಕೆ ಕುಂತೀ ತನುಜ ಹೇಳೆನೆ ಕೈಗಳನು ಮುಗಿದು 'ಇನ(ಸೂರ್ಯ) ಶಶಿಗಳು(ಚಂಚ್ರರು)+ ಇಂದ್ರ+ ಅನಲ(ಅಗ್ನಿ)+ ಅಂತಕ(ಯಮ), ದನುಜ, ವರುಣ ಸಮೀರ(ವಾಯು) ಹರಸಖ(ವಿಷ್ನು) ಮನುಮಥಾರಿಯೆ(ಶಿವ) ನೀವು ಚಿತ್ತವಿಸಿ+ ಎನುತಲಿ+ ಇಂತು+ ಎಂದ.
ಅರ್ಥ:ಕೃಷ್ನು ನಿಮ್ಮ ಅನುಸರಿಸುದ ಧರ್ಮವನ್ನು ಹೇಳಿ ಎನ್ನಲು, ಪಾಂಡವರು ಕೃಷ್ಣನ ಹೇಳಿಕೆಯಂತೆ, ಫಲವನ್ನು ತಂದು ಮರದ ಕಾಲಲ್ಲಿ ತೊಟ್ಟಿನ ಸರ್ತಕ್ಕೆ ಇಟ್ಟರು. ವನಜನಾಭನಾದ ಕೃಷ್ನನು ಆ ಕ್ಷಣಕ್ಕೆ, ಕುಂತೀ ತನುಜ ಧರ್ಮಜನೇ ಹೇಳು ಎನ್ನಲು, ಅವನು ಕೈಗಳನ್ನು ಮುಗಿದು 'ಸೂರ್ಯ,ಚಂಚ್ರರು, ಇಂದ್ರ, ಅಗ್ನಿ, ಯಮ, ದನುಜರು, ವರುಣ, ವಾಯು, ವಿಷ್ನು, ಶಿವ, ದೇವ ದನುಜರೇ ನೀವು ಚಿತ್ತವಿಸಿ- ಕೇಳಿ ಎನ್ನುತ್ತಾ, ಹೀಗೆ ಹೇಳಿದ.
ಶ್ಲೋಕ -
ಮಾತೃವತ್ ಪರದಾರಾಣಿ
ಪರದ್ರವ್ಯಾಣಿ ಲೋಷ್ಠವತ್
ಆತ್ಮವತ್ ಸರ್ವಭೂತಾನಿ
ಯಃ ಪಶ್ಯತಿ ಸ ಪಶ್ಯತಿ = ೧
=
ಪರಸತಿಯೆ ನಿಜಜನನಿ ಪರ ಧನ
ವಿರದೆ ಲೋಷ್ಠವು ಜೀವರಾಶಿಯ
ಪರರ ನೋವನು ತನ್ನ ನೋವೆಂದೆನುತ ಭಾವಿಸುವೆ |
ನಿರುತವೆನೆ ಫಲ ಧರೆಯ ಬಿಟ್ಟಂ
ತರದೊಳೊಮ್ಮೊಳ ನೆಗೆಯೆ ಮುರಹರ
ಮರುತಸುತ ಬಾರೆನಲು ನುಡಿದನು ಮುಗಿದು ಕರಯುಗವ || ೨೬ ||
ಪದವಿಭಾಗ-ಅರ್ಥ: ಪರಸತಿಯೆ ನಿಜ-ಜನನಿ ಪರ ಧನವು+ ಇರದೆ ಲೋಷ್ಠವು, ಜೀವರಾಶಿಯ ಪರರ ನೋವನು ತನ್ನ ನೋವೆಂದು+ ಎನುತ ಭಾವಿಸುವೆ; ನಿರುತವು+ ಎನೆ ಫಲ ಧರೆಯ(ಭೂಮಿಯನ್ನು) ಬಿಟ್ಟು+ ಅಂತರದೊಳು+ ಒಮ್ಮೊಳ ನೆಗೆಯೆ ಮುರಹರ ಮರುತಸುತ ಬಾರ+ ಎನಲು ನುಡಿದನು ಮುಗಿದು ಕರಯುಗವ.
ಅರ್ಥ:ಧರ್ಮಜನು ಕೈಮುಗಿದು ತಾನುಅನುಸರಿಸುವ ಧರ್ಮವನ್ನು ಹೇಳಿದನು. 'ಪರಸತಿಯು ತನ್ನತಾಯಿಯ ಸಮಾನ; ಪರರ ಧನವು ನಿಜವಾಗಿ ತನಗೆ ಮಣ್ಣಿನ ಹೆಂಟೆಯು, ಸಕಲ ಜೀವರಾಶಿಯ ಮತ್ತು ಪರರ ನೋವನ್ನು ತನ್ನ ನೋವೆಂದು ನಿತ್ಯವೂ ಭಾವಿಸುವೆ ಎನ್ನಲು, ಫಲವು ಧರೆಯನ್ನು ಬಿಟ್ಟು ಅಂತರದಲ್ಲಿ(ಆಕಾಶ- ಗಾಳಿಯಲ್ಲಿ) ಒಂದು ಮೊಳಮೇಲೆ ನೆಗೆಯಿತು; ಮುರಹರ ಕೃಷ್ಣನು ಮರುತಸುತನಾದ ಭೀಮನನ್ನು ಬಾರ, ಎನ್ನಲು, ಅವನುಕೈಮುಗಿದು ನುಡಿದನು.
ಶ್ಲೋಕ -
ಪ್ರಾಣಮೇವ ಪರಿತ್ಯಜ್ಯ
ಮಾನಮೇವಾಭಿರಕ್ಷತು
ಆನಿತ್ಯಮಧ್ರುವಂ ಪ್ರಾಣಂ
ಮಾನಮಾಚಂದ್ರತಾರಕಂ = ೨
=
ಜೀವವೀಕ್ಷಣವಿಳಿದು ಹೋಗಲಿ
ಕಾವುದಭಿಮಾನವನು ನಿತ್ಯದ
ಭಾವವಾಗಿಹುದಾತ್ಮವಾಚಂದ್ರಾರ್ಕವಭಿಮಾನ |
ನಾವು ಬೇರೊಂದರಿಯೆವಿದ್ದುದ
ದೇವರಿಗೆ ಬಿನ್ನವಿಸಿದೆವುಯೆನ
ಲಾವ ಬೇಗದಲಡರಿದುದೊ ಫಲವರಸ ಕೇಳೆಂದ || ೨೭ ||
ಪದವಿಭಾಗ-ಅರ್ಥ:ಜೀವವು+ ಈ ಕ್ಷಣವೆ+ ಇಳಿದು ಹೋಗಲಿ ಕಾವುದು+ ಅಭಿಮಾನವನು, ನಿತ್ಯದ ಭಾವವಾಗಿಹುದು+ ಆತ್ಮವು+ ಆಚಂದ್ರಾರ್ಕವು+ ಅಭಿಮಾನ ನಾವು ಬೇರೊಂದರಿಯೆವು+ ಇದ್ದುದ ದೇವರಿಗೆ ಬಿನ್ನವಿಸಿದೆವು(ಹೇಳಿದೆವು) ಯೆನಲು+ ಆವ ಬೇಗದಲಿ+ ಅಡರಿದುದೊ ಫಲವು+ ಅರಸ ಕೇಳು+ ಎಂದ.
ಅರ್ಥ:ಭೀಮನು ಹೇಳಿದ,'ಜೀವವು ಈ ಕ್ಷಣವೆ ಹೊರಟು ಹೋಗಲಿ, ಅದನ್ನು ಲೆಕ್ಕಿಸದೆ ಸ್ವ- ಅಭಿಮಾನವನ್ನು ಕಾಯ್ದುಕೊಳ್ಳಬೇಕು, ಇದು ತನ್ನ ನಿತ್ಯದ ಭಾವವಾಗಿರುವುದು. ಆತ್ಮವು ಆಚಂದ್ರಾರ್ಕವು- ಸದಾ ಇರುವುದು; ಅಭಿಮಾನವು ಮುಖ್ಯ; ನಾವು ಬೇರೆ ಯಾವ ಧರ್ಮವನ್ನೂ ಅರಿಯೆವು, ಇದ್ದುದನ್ನು - ಸತ್ಯವನ್ನು ದೇವರಿಗೆ ಬಿನ್ನವಿಸಿದೆವು. ಎನ್ನಲು ಯಾವ ಬೇಗದಲ್ಲಿ ಹಣ್ಣು ಮೇಲೆ ಅಡರಿತೋ ಆಶ್ಚರ್ಯ, ಹಣ್ಣು ಬಹಳ ಮೇಲೆ ಹೋಯಿತು. ಅರಸನೇ ಕೇಳು ಎಂದ ವೈಶಂಪಾಯನ ಮುನಿ.
ಏನು ನಿನ್ನಭಿಮತವು ಪಾರ್ಥ ನಿ
ಧಾನವನು ನುಡಿಯೆನಲು ಹೇಳುವೆ
ಮಾನನಿಧಿ ನಿಮಗರುಹುವೆನು ಚಿತ್ತವಿಸಿ ನೀವೆನುತ |
ಧ್ಯಾನದಲಿ ಕೈಮುಗಿದು ಶಂಕರ
ನೀನೆ ಗತಿಯೆಂದೆನುತಲಾ ಶಶಿ
ಭಾನು ದಿಗುಪಾಲರಿಗೆ ನಮಿಸುತ ಕೇಳಿ ನೀವೆಂದ || ೨೮ ||
ಪದವಿಭಾಗ-ಅರ್ಥ: ಏನು ನಿನ್ನ+ ಅಭಿಮತವು(ವಿಚಾರ) ಪಾರ್ಥ ನಿಧಾನವನು(ನಿದಾನ; ನಿರ್ಮಲ; ಮನಸ್ಸನ್ನು:- ಸಿರಿಗನ್ನಡ ಅರ್ಥಕೋಶ) ನುಡಿಯೆನಲು ಹೇಳುವೆ ಮಾನನಿಧಿ ನಿಮಗರುಹುವೆನು ಚಿತ್ತವಿಸಿ ನೀವೆನುತ ಧ್ಯಾನದಲಿ ಕೈಮುಗಿದು ಶಂಕರ ನೀನೆ ಗತಿ+ ಯೆಂದೆನುತಲಿ+ ಆ ಶಶಿಭಾನು ದಿಗುಪಾಲರಿಗೆ( ಚಂದ್ರ ಸೂರ್ಯರಿಗೆ ದಿಕ್ಪಾಲಕರಿಗೆ ) ನಮಿಸುತ ಕೇಳಿ ನೀವೆಂದ.
ಅರ್ಥ:ಕೃಷ್ಣನು ಅರ್ಜುನನಿಗೆ,' ನಿನ್ನ ಅಭಿಮತವು ಏನು? ಪಾರ್ಥ, ನಿರ್ಮಲ ವಿಚಾರವನ್ನು ನುಡಿ,ಎನ್ನಲು, ಅರ್ಜುನನು ಹೇಳುವೆ, ಮಾನನಿಧಿ ನಿಮಗೆ ಹೇಳುವೆನು ನೀವು ಚಿತ್ತವಿಸಿ-ಕೇಳಿ ಎನ್ನತ್ತಾ, ಧ್ಯಾನದಲ್ಲಿ ಕೈಮುಗಿದು "ಶಂಕರ ನೀನೆ ಗತಿ" ಎಂದು ಎನ್ನುತ್ತಾ ಆ ಚಂದ್ರ ಸೂರ್ಯರಿಗೆ ದಿಕ್ಪಾಲಕರಿಗೆ ನಮಿಸುತ್ತಾ, ನೀವು ಕೇಳಿ ಎಂದ.
ಶ್ಲೋಕ -
ನಿಮಂತ್ರಣೋತ್ಸವೋ ವಿಪ್ರಾಃ
ಗಾವೋ ನವ ತೃಣೋತ್ಸವಾಃ
ಸುಭರ್ತಾರೋತ್ಸವಾ ನಾರ್ಯಃ
ಅಹಂ ಕೃಷ್ಣ ರಣೋತ್ಸವಃ = ೩
=
ಪರಗೃಹದ ಭೋಜನಕೆ ವಿಪ್ರರು
ಪರಿಣಮಿಸುವೋಲ್ ಪಶು ಸಮೂಹವು
ಇರದೆ ನವತೃಣದಿಂದ ತುಷ್ಟಿಯನೈದುವಂದದಲಿ |
ವರಸತಿಯು ನಿಜಪತಿಯ ಕಂಡಾ
ಹರುಷವಹುದೆನಗಾಹವದಲೆಲೆ
ಹರಿಯೆಯೆನೆ ಬೇಗದಲಿ ಫಲವಡರಿತ್ತು ನಿಮಿಷದಲಿ || ೨೯ ||
ಪದವಿಭಾಗ-ಅರ್ಥ: ಪರಗೃಹದ ಭೋಜನಕೆ ವಿಪ್ರರು ಪರಿಣಮಿಸುವೋಲ್; ಪಶು ಸಮೂಹವು ಇರದೆ ನವತೃಣದಿಂದ(ತೃಣ- ಹುಲ್ಲು) ತುಷ್ಟಿಯನು+ಐದುವಂದದಲಿ. ವರಸತಿಯು ನಿಜಪತಿಯ ಕಂಡು ಆ ಹರುಷವ+ ಅಹುದ(ಆಗುವುದೋ)+ ಎನಗೆ ಆಹವದಲೆ+ ಎಲೆಹರಿಯೆ ಯೆನೆ ಬೇಗದಲಿ ಫಲವು+ಅಡರಿತ್ತು ನಿಮಿಷದಲಿ.
ಅರ್ಥ:ಕೃಷ್ಣನೇ,'ಪರಗೃಹದ ಭೋಜನದಿಂದ ವಿಪ್ರರು ಹೇಗೆ ಪರಿಣಾಮ ಹೊಂದುತ್ತಾರೋ ಹಾಗೆ; ಪಶು ಸಮೂಹವು ಹೊಸಹುಲ್ಲಿನಿಂದ ಇರದೆ ತಣಿವನ್ನು ಹೊಂದುವ ರೀತಿಯಲ್ಲಿ; ವರಸತಿಯು ತನ್ನ ಪತಿಯನ್ನು ಕಂಡಾಗ ಆ ಹರುಷವು ಆಗುವುದೋ ನನಗೆ ಯುದ್ಧದಲ್ಲೇ ಸಂತೋಷವಾಗುವುದು, ಎಲೆ ಹರಿಯೆ,' ಎನ್ನಲು, ಬೇಗದಿಂದ ಫಲವು ನಿಮಿಷದಲ್ಲಿ ಮೇಲಕ್ಕೆ ಅಡರಿತ್ತು.
ಶ್ಲೋಕ -
ಧರ್ಮೋ ಜಯತು ನಾಧರ್ಮಃ
ಸತ್ಯಂ ಜಯತು ನಾನೃತಂ
ಕ್ಷಮಾ ಜಯತು ನ ಕ್ರೋಧೋ
ವಿಷ್ಣುರ್ಜಯತು ನಾಸುರಃ = ೪
=
ಧರ್ಮವನು ನೆರೆ ಜಯಿಸಲರಿಯದ
ಧರ್ಮ ಸತ್ಯವ ಮೀರಲರಿವುದೆ
ನಿರ್ಮಳದ ಸೈರಣೆಯ ಗೆಲುವುದೆ ಕ್ರೋಧ ಭಾವಿಸಲು |
ಕರ್ಮಹರ ಕೃಷ್ಣನನು ಗೆಲುವರೆ
ದುರ್ಮತಿಗಳಹ ಅಸುರರೆನಲಾ
ಧರ್ಮತತ್ವವ ನಕುಲ ವಿರಚಿಸಲೈದಿತಾ ಫಲವು || ೩೦ ||
ಪದವಿಭಾಗ-ಅರ್ಥ: ಧರ್ಮವನು ನೆರೆ ಜಯಿಸಲು+ ಅರಿಯದು+ ಅಧರ್ಮ, ಸತ್ಯವ ಮೀರಲು+ ಅರಿವುದೆ ನಿರ್ಮಳದ ಸೈರಣೆಯ ಗೆಲುವುದೆ ಕ್ರೋಧ; ಭಾವಿಸಲು ಕರ್ಮಹರ ಕೃಷ್ಣನನು ಗೆಲುವರೆ ದುರ್ಮತಿಗಳು+ ಅಹ ಅಸುರರು ಎನಲು(ಹೊಡೆಯಲು) ಆ ಧರ್ಮತತ್ವವ ನಕುಲ ವಿರಚಿಸಲು+ ಐದಿತು(ಹೋಯಿತು) ಫಲವು.
'ಅರ್ಥ:ನಕುಲನು ತಾನು ನಂಬಿದ ಧರ್ಮತತ್ತ್ವನ್ನು ಹೇಳಿದನು,'ಧರ್ಮವನ್ನು ಅಧರ್ಮವು ಹೆಚ್ಚು ಜಯಿಸಲು ಅರಿಯದು-ತಿಳಿಯದು, ಅಸಾಧ್ಯ, ಸತ್ಯವನ್ನು ಮೀರಲು ಅಸತ್ಯ ಅರಿತಿಲ್ಲ. ನಿರ್ಮಲವಾದ ಸೈರಣೆಯನ್ನು ಕ್ರೋಧವು ಗೆಲ್ಲುವುದೆ? ಇಲ್ಲ; ಭಾವಿಸಲು- ವಿಚಾರ ಮಾಡಿದರೆ ಕರ್ಮಹರ ಕೃಷ್ಣನನ್ನು ದುರ್ಮತಿಗಳು ಅಸುರರು ಹೊಡೆದರೆ ಗೆಲ್ಲುವರೆ? ಅಹ -ಇಲ್ಲ. ಆ ಧರ್ಮತತ್ವವನ್ನು ತಾನು ನಂಬಿರುವುದಾಗಿ ನಕುಲ ವಿವರಿಸಲು ಫಲವು ಮತ್ತೂ ಮೇಲೆ ಹೋಯಿತು.
ಶ್ಲೋಕ -
ಸತ್ಯಂ ಮಾತಾ ಪಿತಾ ಜ್ಞಾನಂ
ಧರ್ಮೋಭ್ರಾತಾ ದಯಾ ಸಖಾ
ಶಾಂತಿಃ ಪತ್ನೀ ಕ್ಷಮಾಸೂನು
ಷ್ಷಡೈತೇ ಮಮ ಬಾಂಧವಾಃ = ೫
=
ಸತ್ಯವೇ ನಿಜಮಾತೆ ಜ್ಞಾನವೆ
ನಿತ್ಯವಹ ಪಿತ ಧರ್ಮವನುಜನು
ಮತ್ತೆ ದಯವೇ ಮಿತ್ರ ಶಾಂತಿಯೆ ಪತ್ನಿ(ಯು) ಕ್ಷಮೆಸೂನು |
ಸತ್ಯವನು ಸಹದೇವ ನುಡಿಯಲಿ
ಕತ್ಯಧಿಕಫಲ ಮೇಲೆ ಚಿಗಿಯಲು
ಮತ್ತೆ ಮುರರಿಪು ದ್ರುಪದಸುತೆ ಬಾಯೆಂದನುಚಿತದಲಿ || ೩೧ ||
ಪದವಿಭಾಗ-ಅರ್ಥ:ಸತ್ಯವೇ ನಿಜಮಾತೆ, ಜ್ಞಾನವೆ ನಿತ್ಯವಹ ಪಿತ, ಧರ್ಮವು+ ಅನುಜನು, ಮತ್ತೆ ದಯವೇ ಮಿತ್ರ, ಶಾಂತಿಯೆ ಪತ್ನಿ(ಯು), ಕ್ಷಮೆಸೂನು, ಸತ್ಯವನು ಸಹದೇವ ನುಡಿಯಲಿಕೆ+ ಅತ್ಯಧಿಕಫಲ ಮೇಲೆ ಚಿಗಿಯಲು ಮತ್ತೆ ಮುರರಿಪು ದ್ರುಪದಸುತೆ ಬಾ+ಯೆಂದನು+ ಉಚಿತದಲಿ.
ಅರ್ಥ:ಸಹದೇವನು, ತನ್ನ ಧರ್ಮವನ್ನು ಹೀಗೆ ಹೇಳಿದನು,'ಸತ್ಯವೇ ತನ್ನಮಾತೆ, ಜ್ಞಾನವೆ ನಿತ್ಯವಾಗಿರುವ ಪಿತ, ಧರ್ಮವು ಸೋದರನು, ಮತ್ತೆ ದಯವೇ ಮಿತ್ರ, ಶಾಂತಿಯೆ ತನ್ನ ಪತ್ನಿ(ಸಹಚರ), ಕ್ಷಮೆಯೇ ಮಗನು.' ಹೀಗೆ ತನ್ನ ಧರ್ಮದ ಸತ್ಯವನ್ನು ಸಹದೇವ ನುಡಿಯಲು ದೊಡ್ಡಫಲ ಮತ್ತೂ ಮೇಲೆ ಚಿಗಿಯಿತು. ಆಗ ಮತ್ತೆ ಕೃಷ್ಣನು ದ್ರುಪದಸುತೆಯಾದ ದ್ರೌಪದಿಯನ್ನು 'ಬಾ- ನೀನು ಹೇಳು' ಎಂದು ಉಚಿತ ರೀತಿಯಲ್ಲಿ ಹೇಳಿದನು.
ಶ್ಲೋಕ -
ಸುಂದರಂ ಪುರುಷಂ ದೃಷ್ಟ್ವಾ
ಪಿತರಂ ಭ್ರಾತರಂ ಸುತಂ
ಯೋನಿರ್ದ್ರವತಿ ನಾರೀಣಾಂ
ಸತ್ಯಂ ಬ್ರೂಮೀಹ ಕೇಶವ = ೬
=
ಭಾವವಹ ಪುರುಷರನು ಕಾಣುತ
ಭಾವಿಸಲು ಪಿತ ಸುತರ ಅನುಜರ
ಠಾವಿನಲಿಯಾದರೆಯು ಯೋನಿರ್ದ್ರವಣ ಸತಿಯರಿಗೆ
ಭಾವದಲಿ ಮರೆವಿಡಿದು ನುಡಿಯಲಿ
ಕಾ ವಿಗಡ ಫಲವಡರದಿರುತಿರೆ
ದೇವ ನುಡಿದನು ವಂಚಿಸದೆ ನಿಶ್ಚಯವ ಹೇಳೆಂದ ೩೨
ಪದವಿಭಾಗ-ಅರ್ಥ: ಭಾವವಹ ಪುರುಷರನು ಕಾಣುತ ಭಾವಿಸಲು ಪಿತ ಸುತರ ಅನುಜರ ಠಾವಿನಲಿಯಾದರೆಯು ಯೋನಿರ್ದ್ರವಣ ಸತಿಯರಿಗೆ(ಹೆಂಗಸರಿಗೆ); ಭಾವದಲಿ ಮರೆವಿಡಿದು ನುಡಿಯಲಿಕೆ+ ಆ ವಿಗಡ ಫಲವು+ ಅಡರದೆ+ ಇರುತಿರೆ ದೇವ ನುಡಿದನು ವಂಚಿಸದೆ ನಿಶ್ಚಯವ ಹೇಳೆಂದ.
ಅರ್ಥ: ಸುಂದರ ಭಾವದ ಪುರುಷರನ್ನು ಕಾಣುತ್ತಲೆ, ಅವರು ತಂದೆಯಾಗಿರಲಿ, ಸುತರಾಗಿರಲಿ, ಸೋದರಾಗಿರಲಿ, ಯಾವುದೇ ಸಂದರ್ಭ-ಪ್ರದೇಶದಲ್ಲಿದ್ದರೂ ಉದ್ರೇಕದಭಾವನೆಗೆ ಒಳಗಾಗಿ ಪ್ರಾಯದ ಹೆಂಗಸರಿಗೆ ಯೋನಿರ್ದ್ರವಣವಾಗುವುದು(ಯೋನಿಯಳಗೆ ದ್ರವಿಸಿ ಒದ್ದೆಯಾಗುವುದು). ಹೀಗೆ ದ್ರೌಪದಿಯು ತನ್ನ ಮನಸ್ಸಿನ ಭಾವನೆಯ ಸತ್ಯವನ್ನು ಮರೆಮಾಚಿ, ಹೆಂಗಸರ ದೇಹಧರ್ಮದ- ಸ್ವಭಾವನ್ನು ಮಾತ್ರಾ ನುಡಿಯಲು ಆ ಸೊಕ್ಕಿನ ಫಲವು ಮೇಲಕ್ಕೆ ಅಡರದೆ ಹಾಗೇ ಅಂತರದಲ್ಲಿ ನಿಂತಿತ್ತು. ಅದು ಹಾಗೆ ಇರಲು ಕೃಷ್ಣನು ದ್ರೌಪದಿಗೆ ನುಡಿದನು. ಅವನು 'ನೀನು ವಂಚಿಸದೆ ನಿಶ್ಚಯವನ್ನು, ನಿನ್ನ ಅಂತರಂಗದ ಸತ್ಯವನ್ನು ಹೇಳು,' ಎಂದ.

ಶ್ಲೋಕ -

ಪಂಚ ಮೇ ಪತಯಸ್ಸಂತಿ
ಷಷ್ಠಸ್ತು ಮಮ ರೋಚತೇ
ಪುರುಷಾಣಾಮಭಾವೇನ
ಸರ್ವ ನಾರ್ಯಾಃ ಪತಿವ್ರತಾಃ = ೭
=
ಪತಿಗಳೀಶ್ವರನಾಜ್ಞೆಯಿಂದವೆ
ಯತಿಶಯದಲೈವರು ಮನಸ್ಸಿನ
ಮತದಲಾರಾಗಿಹುದು ಬೇರೊಂದಿಲ್ಲ ಚಿತ್ತದಲಿ |
ಪೃಥಿವಿಯಲಿ ಪರಪುರುಷನು ದು
ರ್ಮತಿಯೊಳೊಡಬಡುವವಳು ಸತಿಯೇ
ಸತತ ಕರುಣಾಕರಯೆನಲು ಫಲ ಠಾವನಡರಿದುದು || ೩೩ ||
ಪದವಿಭಾಗ-ಅರ್ಥ:ಪತಿಗಳು+ ಈಶ್ವರನ+ ಆಜ್ಞೆಯಿಂದವೆ+ ಯ+ ಅತಿಶಯದಲಿ(ಹೆಚ್ಚಾಗಿ)+ ಐವರು, ಮನಸ್ಸಿನ ಮತದಲಿ+ ಆರು+ ಆಗಿ+ ಇಹುದು ಬೇರೊಂದು+ ಇಲ್ಲ ಚಿತ್ತದಲಿ; ಪೃಥಿವಿಯಲಿ ಪರಪುರುಷನು ದುರ್ಮತಿಯೊಳು(ದುರ್ಬುದ್ಧಿಯಯಿಂದ)+ ಒಡಬಡುವವಳು ಸತಿಯೇ? ಸತತ ಕರುಣಾಕರ ಯೆ+ ಎನಲು ಫಲ ಠಾವನು+ ಅಡರಿದುದು.
ಅರ್ಥ:ಆಗ ದ್ರೌಪದಿಯು,'ತನಗೆ ಈಶ್ವರನ ಆಜ್ಞೆಯಿಂದಲೇ ಐವರು ಪತಿಗಳು, ಉಳಿದ ಸತಿಯರಿಗಿಂತ ಅತಿಶಯದಲ್ಲಿ- ಹೆಚ್ಚಾಗಿ ಇದ್ದಾರೆ. ಆದರೆ ತನಗೆ ಮನಸ್ಸಿನ ಒಳಮತದಲ್ಲಿ ತನಗೆ ಆರು ಪತಿಗಳು ಎಂಬ ಭಾವವು ಇರುವುದು. ಇದರಲ್ಲಿ ಬೇರೆ ಯಾವುದೇ ಒಂದು ಕೆಟ್ಟಯೋಚನೆ ಚಿತ್ತದಲಿ ಇಲ್ಲ; ಪೃಥಿವಿಯಲ್ಲಿ ಪರಪುರುಷನ್ನು ದುರ್ಮತಿಯಿಂದ ಒಪ್ಪಿಕೊಳ್ಲುವವಳು ಸತತ ಸತಿಯೇ, ಪತಿವ್ರಯೇ? ಅಲ್ಲ!(ತಾನು ಈ ಐವರನ್ನು ಬಿಟ್ಟು ಬೇರೆ ಪುರುಷರನ್ನು ಬಯಸಿಲ್ಲ), ಕರುಣಾಕರ ಕೃಷ್ಣಾ,' ಎನ್ನಲು ಆ ಫಲವು ತನ್ನ ಠಾವನ್ನು- ಸ್ಥಾನವನ್ನು ಸೇರಿತು.(ಹಣ್ಣು ತೊಟ್ಟಿನಲ್ಲಿ ಸೇರಿಕೊಂಡಿತು)
ಹರುಷ ಮಿಗೆ ಋಷಿಜನಕೆ ಧೌಮ್ಯನು
ಕರಗಳನು ನೆಗಹುತ ಯುಧಿಷ್ಠಿರ
ಧರಣಿಪತಿ ಕೇಳ್ ಕೃಷ್ಣನಿರೆ ನಿನಗಾವುದರಿದೆಂದು |
ಇರದೆ ದೇವನ ಪಾದ ಪಂಕಜ
ಕೆರಗಿದುದು ಮುನಿನಿಕರ ಬುಧಜನ
ನಿರತ ಪರಮಾನಂದದಿಂದೈದಿದರು ತದ್ವನವ || ೩೪ ||
ಪದವಿಭಾಗ-ಅರ್ಥ: ಹರುಷ ಮಿಗೆ(ಹೆಚ್ಚಲು) ಋಷಿಜನಕೆ ಧೌಮ್ಯನು ಕರಗಳನು ನೆಗಹುತ ಯುಧಿಷ್ಠಿರ ಧರಣಿಪತಿ ಕೇಳ್- ಕೃಷ್ಣನು+ ಇರೆ ನಿನಗೆ ಆವುದು ಅರಿದೆಂದು(ಅರಿದು+ ಎಂದು; ಅಸಾಧ್ಯವಾದುದು) ಇರದೆ(ಕೂಡಲೆ) ದೇವನ ಪಾದ ಪಂಕಜಕೆ+ ಎರಗಿದುದು ಮುನಿನಿಕರ(ನಿಕರ= ಸಮೂಹ) ಬುಧಜನ+ ನಿರತ(ನಿರತ?= ತೊಡಗಿದವನು; ಇದ್ದವರು?) ಪರಮಾನಂದದಿಂದ+ ಐದಿದರು(ಹೋದರು) ತದ್+ ವನವ
ಅರ್ಥ: ಹೀಗೆ ಬಂದ ಸಂಕಷ್ಟ ಪರಿಹಾರವಾಗಲು ಎಲ್ಲರೀಗೂ ಹರ್ಷವು ಹೆಚ್ಚಲು, ಋಷಿಜನರಿಗೆ ಧೌಮ್ಯನು ಕೈಗಳನ್ನು ಮೇಲೆ ಎತ್ತಿ, ಹೀಗೆಂದನು,'ಯುಧಿಷ್ಠಿರ ಧರಣಿಪತಿಯೇ ಕೇಳು, ಕೃಷ್ಣನು ನಿನ್ನ ಬೆಂಬಲಕ್ಕೆ ಇರಲು ನಿನಗೆ ಯಾವುದು ಅಸಾಧ್ಯವಾದುದು ಇದೆ! ಅಸಾಧ್ಯವಾದುದು ಯಾವುದೂ ಇಲ್ಲ. ಆಗ ಅವರೆಲ್ಲರೂ- ಮುನಿನಿಕರ ಮತ್ತು ಇದ್ದ ಬುಧಜನ ಸಮೂಹ ಕೂಡಲೆ ದೇವನ ಪಾದಕಮಲಕ್ಕೆ ಎರಗಿದರು- ನಮಿಸಿದರು. ನಂತರ ಪರಮಾನಂದದಿಂದ ಅವರೆಲ್ಲರೂ ಪರ್ಣಕುಟೀರಗಳಿದ್ದ ಆ ವನಕ್ಕೆ ಹೋದರು.

ಕಣ್ವ ಋಷಿಯ ಆಗಮನ[ಸಂಪಾದಿಸಿ]

ಮುನಿಪ ಕಣ್ವನು ಕಣ್ದೆರೆದು ಪರ
ಮನನು ಜಾನಿಸಿ ಕರವನರಳಿಚ
ಲೊನೆದು ಬಿದ್ದುದು ಪಣ್ಣು ಕಂಡನು ನಗುತ ಮನದೊಳಗೆ |
ವನಜನಾಭನ ತಂತ್ರವಿದು ಪಾ
ವನ ಸುರೂಪನ ನೋಳ್ಪೆನೆಂದಾ
ಮುನಿಪ ಫಲಸಹ ಬಂದು ಕಂಡನು ಕೃಷ್ಣ ಪಾಂಡವರ || ೩೫ ||
ಪದವಿಭಾಗ-ಅರ್ಥ: ಮುನಿಪ ಕಣ್ವನು ಕಣ್ದೆರೆದು (ಕಣ್ಣು+ ತೆರದು)ಪರಮನನು(ದೇವರನ್ನು) ಜಾನಿಸಿ(ನೆನೆದು) ಕರವನು+ ಅರಳಿಚಲು+ ಒನೆದು ಬಿದ್ದುದು ಪಣ್ಣು, ಕಂಡನು ನಗುತ ಮನದೊಳಗೆ ವನಜನಾಭನ ತಂತ್ರವಿದು ಪಾವನ ಸುರೂಪನ ನೋಳ್ಪೆನೆಂದು+ ಆ ಮುನಿಪ ಫಲಸಹ ಬಂದು ಕಂಡನು ಕೃಷ್ಣ ಪಾಂಡವರ.
ಅರ್ಥ:ಕೃಷ್ನೂ ಪಾಂದವರೂ ತಮ್ಮ ಜೊತೆಯವರೊಡನೆ ಹೊರಡಲು ತೊಡಗಿದಾಗ,ಅದೇ ಸಮಯದಲ್ಲಿ ಮುನಿಪ ಕಣ್ವನು ಕಣ್ಣು ತೆರದು ದೇವರನ್ನು ನನೆದು ಹಸ್ತಗಳನ್ನು ಅರಳಿಸಲು, ಆ ಹಣ್ಣು ಒನೆದಾಡಿ ತೊಟ್ಟಿನಿಂದ ಕಳಚಿ ಮುನಿಯ ಹಸ್ತಕ್ಕೆ ಬಿದ್ದಿತು. ಮುನಿಯು ಮನದಲ್ಲಿ ನಡೆದುದನ್ನು ಕಂಡನು. ಅವನು ನಗುತ್ತಾ ಮನದಲ್ಲಿ ಇದು ವನಜನಾಭ ಕೃಷ್ಣನ ತಂತ್ರವು ಎಂದು ಯೋಚಿಸಿ, ಪಾವನ ಸುರೂಪನಾದ ಕೃಷ್ನನನ್ನು ನೋಡುವೆನೆಂದು ಆ ಮುನಿಪನು ಫಲಸಹಿತ ಬಂದು ಕೃಷ್ಣ ಮತ್ತು ಪಾಂಡವರನ್ನು ಕಂಡನು.
ಇದಿರೊಳಿರಿಸಿದನಾ ಫಲವ ಸಂ
ಮುದದಿ ಹೊಂಪುಳಿಯೋಗಿ ಮುನಿಯಾ
ಪದುಮನಾಭಂಗೆರಗಿ ತೆಗೆ ನೀ ಫಲವನೆಂದೆನಲು ||
ಮದನಪಿತ ನಸುನಗುತ ಮುನಿಪನ
ಹದುಳ ಮಿಗೆ ಸೈಪಿಟ್ಟು ನೆಗಹಿದ
ನುದಿತ ಫಲವನು ಹಂಚ ಹೇಳಿದನಾ ನೃಪಾಲಂಗೆ || ೩೬ ||
ಪದವಿಭಾಗ-ಅರ್ಥ: ಇದಿರೊಳು+ ಇರಿಸಿದನು+ ಆ ಫಲವ ಸಂ- ಮುದದಿ ಹೊಂಪುಳಿಯೋಗಿ ( ಹಿಗ್ಗಿ ಪುಳಕಗೊಂಡು) ಮುನಿಯು+ ಆ ಪದುಮನಾಭಂಗೆ+ ಎರಗಿ(ನಮಿಸಿ), ತೆಗೆ ನೀ ಫಲವನು+ ಎಂದೆನಲು ಮದನಪಿತ ನಸುನಗುತ ಮುನಿಪನ ಹದುಳ( ಪ್ರೀತಿ, ಶ್ರದ್ಧೆ, ಭಕ್ತಿ, ನೆಮ್ಮದಿ) ಮಿಗೆ-ಹೆಚ್ಚಲು ಸೈಪಿಟ್ಟು(ಸೈಪು= ಪುಣ್ಯ,ಸುಕೃತ ಅದೃಷ್ಟ,ಸೌಭಾಗ್ಯ ) ನೆಗಹಿದನು() ಎತ್ತಿದನು+ ಉದಿತ(ತೊಟ್ಟಿನಿಂದ ಎದ್ದು ಬಂದ) ಫಲವನು, ಹಂಚ ಹೇಳಿದನು+ ಆ ನೃಪಾಲಂಗೆ(ಧರ್ಮಜನಿಗೆ)
ಅರ್ಥ:ಮುನಿಯು ಆ ಪದುಮನಾಭನಿಗೆ ನಮಿಸಿ, ಅವನ ಎದುಇನಲ್ಲಿ ಆ ಫಲವನ್ನು ಸಂತಸದಿಂದ ಇಟ್ಟನು. ಅವನು ಕೃಷ್ಣನನ್ನು ನೋಡಿ ಹಿಗ್ಗಿ ಪುಳಕಗೊಂಡು, ಕೃಷ್ಣಾ ನೀನು ಫಲವನ್ನು ತೆಗೆದುಕೊ ಎಂದು ಹೇಳಲು, ಮದನಪಿತನಾದ ಕೃಷ್ಣನು ನಸುನಗುತ್ತಾ ಮುನಿಪನ ವಿಶ್ವಾಸ, ಪ್ರೀತಿ, ಶ್ರದ್ಧೆ, ಭಕ್ತಿಯು ಬಹಳವಾಗಿರುವುದನ್ನು ನೋಡಿ ಅವನನ್ನು ಸಮಾಧಾನ ಪಡಿಸಿ ಈ ಹಣ್ಣನ್ನು ಪೆಯುವುದು ನನ್ನು ಸೌಭಾಗ್ಯ ಎಂದು ಹೇಳಿ ತೊಟ್ಟಿನಿಂದ ಎದ್ದು ಬಂದ ಆ ಫಲವನ್ನು ಎತ್ತಿದನು. ಅದನ್ನು ಕೃಷ್ನನು ಎಲ್ಲರಿಗೂ ಹಂಚಲು ಆ ಧರ್ಮಜನಿಗೆ ಹೇಳಿದನು.
ಬರಿಸಿ ಋಷಿಗಳನವರವರ ತರ
ವರಿದು ಕೊಡಿಸಿದನುಳಿದುದನು ಭೂ
ಸುರ ಸಹೋದರರಿಂಗೆ ಮುನಿಸತಿಯರಿಗೆ ದ್ರೌಪದಿಗೆ |
ಮುರಹರಗೆ ತನ್ಮುನಿಪ ಕಣ್ವಂ
ಗಿರಿಸಿ ಕೈವೀಸಿದೊಡೆ ಫಲವನು
ಹರುಷ ಮಿಗೆ ಭುಂಜಿಸಿತು ಭೂಪತಿ ಕೇಳು ಕೌತುಕವ || ೩೭ ||
ಪದವಿಭಾಗ-ಅರ್ಥ:ಬರಿಸಿ ಋಷಿಗಳನು+ ಅವರವರ ತರವ+ ಅರಿದು(ತಿಳಿದು) ಕೊಡಿಸಿದನು+ ಉಳಿದುದನು ಭೂಸುರ ಸಹೋದರರಿಂಗೆ, ಮುನಿಸತಿಯರಿಗೆ, ದ್ರೌಪದಿಗೆ, ಮುರಹರಗೆ, ತತ್+ನ್+ ಮುನಿಪ ಕಣ್ವಂಗೆ+ ಇರಿಸಿ ಕೈವೀಸಿದೊಡೆ, ಫಲವನು ಹರುಷ ಮಿಗೆ ಭುಂಜಿಸಿತು ಭೂಪತಿ ಕೇಳು ಕೌತುಕವ.
ಅರ್ಥ:ಕೃಷ್ಣನ ಹೇಳಿಕೆಯಂತೆ ಧರ್ಮಜನು ಆಶ್ರಮಕ್ಕೆ ಹೊರಟಿದ್ದ ಋಷಿಗಳನ್ನು ಬರಿಸಿ- ಹಿಂದಕ್ಕೆ ಕರೆಸಿ ಕೂರಿಸಿ. ಅವರವರ ತರವನ್ನು- ರೀತಿಯನ್ನು ತಿಳಿದು ಹಣ್ಣಿನ ಪಾಲನ್ನು ಕೊಡಿಸಿದನು. ಉಳಿದುದನ್ನು ಭೂಸುರ- ಬ್ರಾಹ್ಮಣರಿಗೆ, ಸಹೋದರರಿಂಗೆ, ಮುನಿಸತಿಯರಿಗೆ, ದ್ರೌಪದಿಗೆ, ಮುರಹರ ಕೃಷ್ಣನಿಗೆ ಮತ್ತೆ ಆ ಮುನಿಪ ಕಣ್ವನಿಗೆ ಅವನ ಎದುರಲ್ಲಿ ಇರಿಸಿ ಇರಿಸಿ ಧರ್ಮಜನು ಎಲ್ಲರೂ ಸ್ವೀಕರಿಸಿ- ತಿನ್ನಿರಿ ಎಂದು ಕೈಬೀಸಿ ಸನ್ನೆ ಮಾಡಿದಾಗ ಎಲ್ಲರೂ ಒಟ್ಟಿಗೆ ಫಲವನ್ನು ಬಹಳ ಹರ್ಷದಿಂದ ಭುಂಜಿಸಿತು- ತಿಂದರು; ಭೂಪತಿ ಜನಮೇಜಯನೇ ಈ ಕೌತುಕವನ್ನು ಕೇಳಯ್ಯಾ ಎಂದ.
ಟಿಪ್ಪಣಿ:(ಸಾಮೂಹಿವಾಗಿದ್ದಾಗ ತಿನ್ನಲು ಕೊಟ್ಟರೆ -ಬಡಿಸಿದರೆ - ಪೂಜ್ಯರು ತಿನ್ನಲು ಆರಂಭಿಸಿದಮೇಲೆ ಉಳಿದವರೂ ತಿನ್ನುವುದು ಪದ್ದತಿ, ಅಥವಾ ಯಜಮಾನನು ತಿನ್ನಲು ಕೈ ಸನ್ನೆ ಮಾಡಿದರೆ ಅಥವಾ ದೇವರ ಹೆಸರು ಹೇಳಿ ಕೂಗಿದರೆ - ಉದಾ:ಜೈ ಶ್ರೀ ರಾಮ್; ಆಗ ಎಲ್ಲರೂ ಒಟ್ಟಗೆ ಭೋಜನ ಆರಂಬಿಸುವರು. ಇದು ಸಮೂಹಿಕ ಭೋಜನದಲ್ಲಿ ಹಿಂದಿನಿಂದ ನೆಡೆದು ಬಂದ ಪದ್ದತಿ. ಆ ಹಣ್ಣು ಪವಾಡದಿಂದ ಮತ್ತೂ ಹಿಗ್ಗಿ ಎಲ್ಲರಿಗೂ ಸಾಕಾಯಿತು. ಈ ಕಥೆ ಮೂಲ ಭಾರತದಲ್ಲಿ ಇದೆಯೋ ಅಥವಾ ಕುಮಾರವ್ಯಾಸನ ಕವಿಸೃಷ್ಠಿಯೋ ತಿಳಿಯದು.)

ಕಣ್ವಾಶ್ರಮದಿಂದ ನಿರ್ಗಮನ[ಸಂಪಾದಿಸಿ]

ಪಾರಣೆಯನುರೆ ಮಾಡಿ ಮುನಿಪ ಮ
ಹೀರಮಣನನು ಬೀಳುಕೊಟ್ಟನು
ದಾರ ಲಕ್ಷ್ಮೀಕಾಂತನನು ಬೀಳ್ಕೊಂಡು ಮತ್ತೊಂದು |
ಸಾರವಹ ಸುಸ್ಥಾನಕೈದಿದ
ನಾರು ಭಾವಿಸಬಲ್ಲರಾ ಮುರ
ವೈರಿಯನುಪಮ ಮಹಿಮೆಗಳ ಭೂಪಾಲ ಕೇಳೆಂದ || ೩೮ ||
ಪದವಿಭಾಗ-ಅರ್ಥ: ಪಾರಣೆಯನ(ಉಪವಾಸದ ನಂತರದ- ಊಟ, ಉಪಾಹಾರ)+ ಉರೆ ಮಾಡಿ ಮುನಿಪ ಮಹೀರಮಣನನು(ಮಹೀ - ಭೂಮಿ; ಧರ್ಮಜ) ಬೀಳುಕೊಟ್ಟನು+ ಉದಾರ ಲಕ್ಷ್ಮೀಕಾಂತನನು ಬೀಳ್ಕೊಂಡು ಮತ್ತೊಂದು ಸಾರವಹ(ಸಾರವತ್ತಾದ, ಉತ್ತಮ) ಸುಸ್ಥಾನಕೆ+ ಐದಿದನು(ಹೋದನು)+ ಆರು(ಯಾರು) ಭಾವಿಸಬಲ್ಲರು+ಆ ಮುರವೈರಿಯ+ ಅನುಪಮ ಮಹಿಮೆಗಳ ಭೂಪಾಲ(ಜನಮೇಜಯ) ಕೇಳೆಂದ.
ಅರ್ಥ:ಜನಮೇಜಯ ಭೂಪಾಲನೇ ಕೇಳು, 'ನೇರಿಲ ಹಣ್ನನ್ನು ಪಾರಣೆಯನ್ನು ಚೆನ್ನಾಗಿ ಮಾಡಿದ ನಂತರ ಮುನಿಪ ಕಣ್ವನು ಧರ್ಮಜನನ್ನು ಬೀಳ್ಕೊಟ್ಟನು- ಕಳುಹಿಸಿಕೊಟ್ಟನು. ಉದಾರ ಮನಸ್ಸಿನ ಕೃಷ್ಣನನ್ನು ಧರ್ಮಜನು ದ್ವಾರಾವತಿಗೆ ಬೀಳ್ಕೊಟ್ಟು, ಕಣ್ವನ ವನಪ್ರದೇಶದಿಂದ ಹೊರಟು ತನ್ನ ಮೊದಲ ಕಾಡಿನ ನೆಲೆಯನ್ನು ತೊರೆದು ಮತ್ತೊಂದು ಉತ್ತಮ ವನಸುಸ್ಥಾನಕ್ಕೆ ಹೋದನು. ಆ ಮುರವೈರಿಯಾದ ಕೃಷ್ಣನ ಅನುಪಮ ಮಹಿಮೆಗಳನ್ನು ಯಾರು ಭಾವಿಸಬಲ್ಲರು- ಊಹಿಸಬಲ್ಲರು? 'ಎಂದ.
ದೇವ ನಿಮ್ಮಡಿಯಂಘ್ರಿ ಕಮಲವ
ನಾವ ನೆನೆವನವಂಗೆ ಜಪತಪ
ಸಾವು ಹುಟ್ಟಿಲ್ಲೆಂಬುದೈ ವರವೇದ ಶಾಸ್ತ್ರಗಳು |
ನಾವಲೇ ಕೃತಕೃತ್ಯರಿಂದೀ
ದೇವ ಸಾಕ್ಷಾತ್ಕಾರ ದರ್ಶನ
ಭಾವವೋಯಿದು ನಮಗೆನುತ ಹೊಗಳಿದನು ಸಹದೇವ || ೩೯ ||
ಪದವಿಭಾಗ-ಅರ್ಥ:ದೇವ ನಿಮ್ಮ+ ಅಡಿಯ(ಪಾದದ) ಅಂಘ್ರಿಕಮಲವನು+ ಆವ ನೆನೆವನು+ ಅವಂಗೆ ಜಪ+ ತಪ+ ಸಾವು ಹುಟ್ಟಿಲ್ಲೆಂಬುದೈ ವರವೇದ ಶಾಸ್ತ್ರಗಳು ನಾವಲೇ ಕೃತಕೃತ್ಯರು+ ಇಂದು+ ಈ ದೇವ ಸಾಕ್ಷಾತ್ಕಾರ ದರ್ಶನಭಾವವೋ+ ಯಿ+ ಇದು ನಮಗೆ+ ಎನುತ ಹೊಗಳಿದನು ಸಹದೇವ.
ಅರ್ಥ:ಸಹದೇವನು,'ದೇವ ಕೃಷ್ಣಾ, ನಿಮ್ಮ ಪಾದಪದ್ಮಗಳನ್ನು ಯಾವನು ನೆನೆಯುವನೋ ಅವನಿಗೆ, ಜಪ, ತಪ, ಸಾವು, ಇರವುದಿಲ್ಲ ಎಂಬುದಯ್ಯಾ ಶ್ರೇಷ್ಠವೇದ ಶಾಸ್ತ್ರಗಳು; ನಾವಲ್ಲವೇ ಕೃತಕೃತ್ಯರು; ಇಂದು ಈ ದೇವ ಸಾಕ್ಷಾತ್ಕಾರ ದರ್ಶನಭಾವವು ನಮಗೆ ಇದು ವಿಶೇಷವಾದುದು!' ಎನ್ನುತ್ತಾ ಹೊಗಳಿದನು.
ಹರಿಯೊಲಿದು ಮೈದಡವಿಯೈವರ
ತರುಣಿಯನು ಸಂತೈಸಿಯಾ ಮುನಿ
ವರರನುಪಚರಿಸಿದನು ಬುದ್ಧಿಯನೊರೆದು ಧರ್ಮಜಗೆ ||
ಉರುತರೋತ್ತರ ಸಿದ್ಧಿ ನಿಮಗಿ
ನ್ನಿರದೆ ಫಲಿಸುವುದೆಂದು ಸೂಚಿಸಿ
ಮರಳಿ ತನ್ನಯ ಪುರಿಗೆ ಗಮನೋದ್ಯೋಗಮನನಾದ || ೪೦ ||
ಪದವಿಭಾಗ-ಅರ್ಥ: ಹರಿಯು(ಕೃಷ್ಣನು)+ ಒಲಿದು(ಪ್ರೀತಿಯಿಂದ) ಮೈದಡವಿ+ ಐವರ+ತರುಣಿಯನು ಸಂತೈಸಿಯು+ ಆ ಮುನಿವರರನು+ ಉಪಚರಿಸಿದನು ಬುದ್ಧಿಯನು+ ಒರೆದು(ಹೇಳಿ) ಧರ್ಮಜಗೆ ಉರುತರೋತ್ತರ ಸಿದ್ಧಿ ನಿಮಗೆ+ ಇನ್ನು+ ಇರದೆ(ನಿಜವಾಗಿಯೂ) ಫಲಿಸುವುದೆಂದು ಸೂಚಿಸಿ ಮರಳಿ ತನ್ನಯ ಪುರಿಗೆ ಗಮನ+ ಉದ್ಯೋಗಮನನಾದ.
ಅರ್ಥ:ಕೃಷ್ಣನು ಹೊರಡುವಾಗ ಪ್ರೀತಿಯಿಂದ ಪಾಂಡವರು ಐವರ ಮೈ ಸವರಿ ಸಮಾಧಾನ ಪಡಿಸಿ, ತರುಣಿ ದ್ರೌಪದಿಯನ್ನು ಸಂತೈಸಿದನು. ಆ ಮುನಿವರರನ್ನು ಉಪಚರಿಸಿದನು. ಧರ್ಮಜಗೆ ಎಚ್ಚರಿಕೆಯಿಂದ ಇರಲು ಬುದ್ಧಿಯನ್ನು ಹೇಳಿ, ನಿಮಗೆ ನಿಜವಾಗಿಯೂ ಉರುತರೋತ್ತರ ಸಿದ್ಧಿಯು ಇನ್ನು ಫಲಿಸುವುದೆಂದು ಸೂಚಿಸಿ, ಮರಳಿ- ಕೃಷ್ಣನು ತನ್ನ ದ್ವಾರಕಾಪುರಿಗೆ ಹೋಗುವ ಉದ್ಯೋಗದಕಡೆ ಮನಸ್ಸು ಕೊಟ್ಟನು.
ಬಂದನಾ ಭೂಪತಿ ಮುರಾಂತಕ
ನಂದಣದ ಬಲ ದೆಸೆಯಲನಿಲಜ
ಮುಂದೆ ವಾಮದಿ ಪಾರ್ಥಯಮಳ ದ್ರೌಪದಾದೇವಿ |
ಹಿಂದೆ ಬರೆ ಕಿರಿದೆಡೆಯಲಲ್ಲಿಯೆ
ನಿಂದು ಕಳುಹಿದನೆಲ್ಲರನು ಗೋ
ವಿಂದನೇರಿದ ರಥವ ಗದುಗಿನ ವೀರನಾರಾಯಣ || ೪೧ ||
ಪದವಿಭಾಗ-ಅರ್ಥ: ಬಂದನು+ ಆ ಭೂಪತಿ ಮುರಾಂತಕನ+ ಅಂದಣದ(ಪಲ್ಲಕ್ಕಿ) ಬಲ ದೆಸೆಯಲಿ+ ಅನಿಲಜ ಮುಂದೆ, ವಾಮದಿ ಪಾರ್ಥ, ಯಮಳ ದ್ರೌಪದಾದೇವಿ ಹಿಂದೆ ಬರೆ, ಕಿರಿದೆಡೆಯಲಿ(ಸ್ವಲ್ಪ ದೂರ ಹೋದ ಕೂಡಲೆ ಒಂದು ಸ್ಥಳದಲ್ಲಿ ನಿಂತು)+ ಅಲ್ಲಿಯೆ ನಿಂದು ಕಳುಹಿದನು+ ಎಲ್ಲರನು ಗೋವಿಂದನು ಏರಿದ ರಥವ ಗದುಗಿನ ವೀರನಾರಾಯಣ.
ಅರ್ಥ:ಕೃಷ್ಣನನ್ನು ಬಳಿಗೊಳಿಸಲು (ಬೀಳ್ಕೊಡಲು) ಆ ಭೂಪತಿ ಧರ್ಮಜನು ಬಂದನು. ಅವನು ಕೃಷ್ಣನ ಪಲ್ಲಕ್ಕಿಯ ಬಲದ ದೆಸೆಲ್ಲಿಯೂ, ಭೀಮನು ಮುಂದೆ, ಎಡದಲ್ಲಿ ಪಾರ್ಥ, ನಕುಲ ಸಹದೇವ ದ್ರೌಪದಾದೇವಿ ಇವರು ಪಲ್ಲಕ್ಕಿಯ ಹಿಂದೆ, ಹೀಗೆಯೇ ಬರುತ್ತಿರುವಂತೆ, ಸ್ವಲ್ಪ ದೂರ ಹೋದ ಕೂಡಲೆ ಅಲ್ಲಿಯೆ ಕೃಷ್ಣನು ನಿಂತು, ಅವರೆಲ್ಲರನ್ನೂ ಇನ್ನು ಹಿಂತಿರುಗಿ ಹೋಗಿ ಎಂದು ಕಳುಹಿಸಿದನು. ನಂತರ ಅವನು- ಗದುಗಿನ ವೀರನಾರಾಯಣನು ರಥವನ್ನು ಏರಿದನು.
♠♠♠

ನೋಡಿ[ಸಂಪಾದಿಸಿ]

  1. ಕುಮಾರವ್ಯಾಸ ಭಾರತ/ಸಟೀಕಾ (೩.ಅರಣ್ಯಪರ್ವ::ಸಂಧಿ-೦೧)
  2. ಕುಮಾರವ್ಯಾಸ ಭಾರತ/ಸಟೀಕಾ (೩.ಅರಣ್ಯಪರ್ವ::ಸಂಧಿ-೦೨)
  3. ಕುಮಾರವ್ಯಾಸ ಭಾರತ/ಸಟೀಕಾ (೩.ಅರಣ್ಯಪರ್ವ::ಸಂಧಿ-೦೧)

ಪರಿವಿಡಿ[ಸಂಪಾದಿಸಿ]

ಕನ್ನಡ ವಿಕಿಸೋರ್ಸ್[ಸಂಪಾದಿಸಿ]

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ | ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ


ಉಲ್ಲೇಖ[ಸಂಪಾದಿಸಿ]

  1. ಕರ್ನಾಟ ಭಾರತ ಕಥಾಮಂಜರಿ- ಕುವೆಂಪು ಮತ್ತು ಮಾಸ್ತಿವೆಂಕಟೇಶ ಐಯಂಗಾರ್ ಸಂಪಾದಿತ. ಇಂದ:ಮೈಸೂರು ಸಂಸ್ಥಾನದ ಸಾಹಿತ್ಯ ಮತ್ತು ಸಂಸ್ಕೃತಿ ಇಲಾಖೆ.
  2. ಕನ್ನಡದ ಪದಗಳಿಗೆ ಅರ್ಥ -ಕನ್ನಡ ಸಾಹಿತ್ಯ ಪರಿಷತ್ ನಿಘಂಟು,
  3. ಪ್ರೊ. ಜಿ. ವೆಂಕಟಸುಬ್ಬಯ್ಯ ಕನ್ನಡ-ಕನ್ನಡ ನಿಘಂಟು
  4. ದಾಸ ಸಾಹಿತ್ಯ ನಿಘಂಟು
  5. ಸಿರಿಗನ್ನಡ ಅರ್ಥಕೋಶ