ಪುಟ:ಭಾರತ ದರ್ಶನ.djvu/೪೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೪೦೨

ಭಾರತ ದರ್ಶನ

ನಡೆಯುವುದಾಗಿ ಭರವಸೆಕೊಟ್ಟು, ಈಗಲೇ ಬಂಧಿಸಲು ಸಾಧ್ಯವಿಲ್ಲವೆಂದೂ ಗಾಂಧಿಜಿಗೆ ಸ್ಪಷ್ಟಪಡಿಸಿತು. ಈ ಭಿನ್ನಾಭಿಪ್ರಾಯದಿಂದ ಕಾಂಗ್ರೆಸ್ ಗಾಂಧಿಜಿಯಿಂದ ದೂರವಾಗಬೇಕಾಯಿತು. ಪುನಃ ಚರ್ಚೆ ಮಾಡಿ ಎರಡು ತಿಂಗಳನಂತರ ನಿರ್ಣಯಿಸಿದ ಒಂದು ಉಭಯ ಸಮ್ಮತ ತೀರ್ಮಾನಕ್ಕೆ ಅಖಿಲ ಭಾರತ ಕಾಂಗ್ರೆಸ್ ಸಮಿತಿ ಒಪ್ಪಿಗೆ ಕೊಟ್ಟಿತು. ಗಾಂಧಿಜಿಯ ಪೂರ್ಣ ಅಭಿಪ್ರಾಯ ಆ ಒಪ್ಪಂದದಲ್ಲಿ ಪ್ರತಿಬಿಂಬಿತವಾಗಿರಲಿಲ್ಲ; ಆದರೆ ಅವರಿಗೆ ಇಷ್ಟವಿಲ್ಲದಿದ್ದರೂ ಕಾಂಗ್ರೆಸ್ಸು ಆ ವಿಷಯದಲ್ಲಿ ಎಷ್ಟು ಹೇಳಬಹುದೆಂದು ಅವರು ಅಭಿಪ್ರಾಯಪಟ್ಟರೊ ಅಷ್ಟು ಮಾತ್ರ ಅದರಲ್ಲಿ ಪ್ರತಿಬಿಂಬಿತವಾಗಿತ್ತು. ಇಷ್ಟು ಹೊತ್ತಿಗೆ ರಾಷ್ಟ್ರೀಯ ಸರಕಾರದ ಆಧಾರದ ಮೇಲೆ ಕಾಂಗ್ರೆಸ್ ನೀಡಿದ್ದ ಸಹಕಾರ ಹಸ್ತವನ್ನು ಬ್ರಿಟಿಷ್ ಸರಕಾರ ನಿರಾಕರಿಸಿತ್ತು. ಯಾವುದೋ ಒಂದು ಬಗೆಯ ಹೋರಾಟವು ಅನತಿದೂರದಲ್ಲಿರುವಂತೆ ಕಂಡಿತು; ಗಾಂಧೀಜಿ ಮತ್ತು ಕಾಂಗ್ರೆಸ್ ತಮ್ಮ ಭಿನ್ನಾಭಿಪ್ರಾಯ ಹೇಗಾದರೂ ಸರಿಪಡಿಸಿಕೊಂಡು ಒಟ್ಟಿಗೆ ಸಾಗಬೇಕಾದ್ದು ಅನಿವಾರ್ಯವೆನಿಸಿತು. ಸ್ವಲ್ಪವೂ ಹಿಂದೆ ಮುಂದೆ ನೋಡದೆ ನಮ್ಮ ಸಹಕಾರ ಹಸ್ತವನ್ನು ಸಂಪೂರ್ಣ ನಿರಾಕರಿಸಿದ್ದರಿಂದ ಈ ನಿರ್ಣಯದಲ್ಲಿ ಯುದ್ಧದ ಮಾತನ್ನೇ ಎತ್ತಲಿಲ್ಲ. ಅಹಿಂಸೆಯ ವಿಷಯದಲ್ಲಿ ತಾತ್ವಿಕವಾಗಿ ಕಾಂಗ್ರೆಸ್ಸಿನ ನೀತಿ ಏನೆಂಬುದನ್ನು ಚರ್ಚಿಸಲಾಗಿತ್ತು; ಕಾಂಗ್ರೆಸ್ಸಿನ ಅಭಿಪ್ರಾಯದಲ್ಲಿ ಭಾವಿ ಸ್ವತಂತ್ರ ಭಾರತವು ತನ್ನ ವಿದೇಶಾಂಗ ವ್ಯವಹಾರದಲ್ಲಿ ಸಹ ಅಹಿಂಸಾಮಾರ್ಗವನ್ನೇ ಅನುಸರಿಸಬೇಕೆಂದು ಹೇಳಲಾಗಿತ್ತು. ಆ ನಿರ್ಣಯವು ಈ ರೀತಿ ಇತ್ತು:

"ಸ್ವರಾಜ್ಯ ಸಾಧನೆಗೆ ಮಾತ್ರವಲ್ಲದೆ ಸ್ವತಂತ್ರ ಭಾರತದಲ್ಲಿ ಸಹ ಅಹಿಂಸಾ ನೀತಿ ಮತ್ತು ಮಾರ್ಗ ಅನುಸರಿಸಲು ಸಾಧ್ಯವಿದೆ ಎಂದು ಭಾರತ ಕಾಂಗ್ರೆಸ್ ಸಮಿತಿ ಅಭಿಪ್ರಾಯ ಪಡುತ್ತದೆ. ಪ್ರಪಂಚದ ವಿನಾಶ ತಡೆಗಟ್ಟಬೇಕಾದರೆ ಮತ್ತು ಮಾನವಕುಲ ಪಾಶವೀವೃತ್ತಿಯಿಂದ ವಿಮುಖವಾಗಬೇಕಾದರೆ ಮತ್ತು ಒಂದು ಹೆಚ್ಚು ನ್ಯಾಯಪೂರ್ಣ ನೂತನ ರಾಜಕೀಯ ಮತ್ತು ಆರ್ಥಿಕ ಜೀವನ ಆರಂಭವಾಗಬೇಕಾದರೆ ಪ್ರಪಂಚದಲ್ಲಿ ಪೂರ್ಣ ರಸ್ತೆ ಸಂನ್ಯಾಸ ಅವಶ್ಯವೆಂದು ಇತ್ತೀಚಿನ ಪ್ರಪಂಚದ ಘಟನೆಗಳು ಸ್ಪಷ್ಟಗೊಳಿಸಿವೆ; ಮತ್ತು ಈ ಸಮಿತಿಯ ಅಭಿಪ್ರಾಯವೂ ಅದೇ ಇದೆ. ಆದ್ದರಿಂದ ಸ್ವತಂತ್ರ ಭಾರತದ ಪೂರ್ಣ ಬಲವು ಪ್ರಪಂಚದ ಶಸ್ತ್ರ ಸಂನ್ಯಾಸದ ಕಡೆ ಇದೆ; ಮತ್ತು ಈ ದಾರಿಯಲ್ಲಿ ತಾನೇ ಮಾರ್ಗದರ್ಶಿತ್ವ ತೋರಲು ಸಿದ್ಧವಿದೆ. ಆದರೆ ಅದು ಎಷ್ಟರಮಟ್ಟಿಗೆ ಸಾಧ್ಯ ಎನ್ನುವುದು ಪರದೇಶಗಳ ಮತ್ತು ದೇಶದ ಒಳ ಪರಿಸ್ಥಿತಿ ಗಳನ್ನು ಅವಲಂಬಿಸಿದೆ; ಆದರೂ ರಾಷ್ಟ್ರವು ಶಸ್ತ್ರ ಸಂನ್ಯಾಸಕ್ಕೆ ಪೂರ್ಣ ಬೆಂಬಲ ಕೊಡುತ್ತದೆ. ಫಲಪ್ರದ ಶಾಸ್ತ್ರ ಸನ್ಯಾಸವೂ ಪ್ರಪಂಚದಲ್ಲಿ ಚಿರಶಾಂತಿಯೂ ಯಶಸ್ವಿಯಾಗಬೇಕಾದರೆ ರಾಷ್ಟ್ರ ರಾಷ್ಟ್ರಗಳ ಮಧ್ಯೆ ಯುದ್ಧಗಳು ನಿಲ್ಲಬೇಕು. ಆ ಯುದ್ಧ ನಿಲ್ಲಬೇಕಾದರೆ ರಾಷ್ಟ್ರಗಳ ಘರ್ಷಣೆಗಳು ಮತ್ತು ಯುದ್ಧಗಳಿಗೆ ಇರುವ ಕಾರಣಗಳು ಮಾಯವಾಗಬೇಕು. ಒಂದು ರಾಷ್ಟ್ರದಿಂದ ಇನ್ನೊಂದು ರಾಷ್ಟದ ಆಕ್ರಮಣ, ಒಂದು ಜನಾಂಗದಿಂದ ಇನ್ನೊಂದು ಜನಾಂಗದ ಸುಲಿಗೆ ತಪ್ಪಿದರೆಮಾತ್ರ ಈ ಕಾರಣಗಳು ನಾಶವಾಗಲು ಸಾಧ್ಯ. ಈ ಗುರಿಯ ಸಾಧನೆಯೇ ಭಾರತದ ಶಾಂತಿಯುತ ಹೋರಾಟದ ಧ್ಯೇಯ. ಭಾರತದ ಜನತೆಯು ಸಂಪೂರ್ಣ ಸ್ವಾತಂತ್ರ್ಯ ಪಡೆಯಬೇಕೆಂದಿರುವುದೂ ಇದೇ ಉದ್ದೇಶಕ್ಕಾಗಿ, ಪ್ರಪಂಚದ ಶಾಂತಿ ಮತ್ತು ಪ್ರಗತಿ ಸಾಧನೆಗಾಗಿ ಪ್ರಪಂಚದ ಸ್ವತಂತ್ರ ರಾಷ್ಟ್ರಗಳು ಸಹಕರಿಸಿ ಕಲೆತು ಕೆಲಸ ಮಾಡುವುದಕ್ಕೂ ಇದು ಸಹಾಯಕವಾಗುತ್ತದೆ." ಕಾಂಗ್ರೆಸ್ಸಿನ ಈ ನಿರ್ಣಯದಲ್ಲಿ ಶಾಂತಿಯುತ ಮಾರ್ಗ ಮತ್ತು ಶಸ್ತ್ರ ಸಂನ್ಯಾಸಕ್ಕೆ ಪೂರ್ಣ ಬೆಂಬಲವಿದ್ದರೂ ಅದಕ್ಕೆ ಅನೇಕ ಷರತ್ತುಗಳೂ, ಮಿತಿಗಳೂ ಇದ್ದವು.

೧೯೪೦ ರಲ್ಲಿ ಕಾಂಗ್ರೆಸ್ಸಿನ ಒಳಗಡೆ ಇದ್ದ ಭಿನ್ನಾಭಿಪ್ರಾಯಗಳು ಮಾಯವಾಗಿ ನಮ್ಮಲ್ಲಿ ಅನೇಕರು ಒಂದು ವರ್ಷ ಸೆರೆಮನೆ ಸೇರಬೇಕಾಯಿತು. ೧೯೪೧ ನೆಯ ಡಿಸೆಂಬರ್ ತಿಂಗಳಲ್ಲಿ ಗಾಂಧಿಜಿ ಪೂರ್ಣ ಅಹಿಂಸಾಮಾರ್ಗವೇ ಕಾಂಗ್ರೆಸ್ಸಿನ ನೀತಿಯಾಗಬೇಕೆಂದಾಗ ಪುನಃ ಅದೇ ಸಂದಿಗ್ಧ ಪರಿಸ್ಥಿತಿ ಒದಗಿತು. ಪುನಃ ಒಡಕು ಹುಟ್ಟಿ ಸಾರ್ವತ್ರಿಕ ಭಿನ್ನಾಭಿಪ್ರಾಯ ಒದಗಿ ಕಾಂಗ್ರೆಸ್ ಅಧ್ಯಕ್ಷ ಮೌಲಾನ ಅಬುಲ್