ಪುಟ:Rangammana Vathara.pdf/೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ರಂಗಮ್ಮನ ವಠಾರ

89

ಸಾಕಾಗಿದೆ."
ಮೇಲಿಂದ ಕಿಟಿಕಿ ಮೂಲಕ ಇಣಿಕಿ ನೋಡಿ ಜಯರಾಮುವಿನ ತಾಯಿ
ಕೇಳಿದ್ದಳು:
"ಏನೋ ಅದು ಗಲಾಟೆ?"
ಜಯರಾಮು ಮೇಲಕ್ಕೆ ಬಂದು, ಕೆಳಗೆ ಆದ ಸಂಭಾಷಣೆಯನ್ನು ತಾಯಿಗೂ
ಹೇಳಿ ಬಿದ್ದು ನಕ್ಕ. ಆಕೆಗೂ ನಗು ಬರದಿರಲಿಲ್ಲ. ಆದರೂ ಎಂದಿನಂತೆ ಆಕೆ
ಹೇಳಿದಳು:
"ವಯಸ್ಸಾದೋರ ಜತೇಲಿ ಹಾಗೆಲ್ಲ ಮಾತಾಡ್ಬಾರದಪ್ಪಾ."
ಆದರೆ ಅಂತಹ ತುಂಟ ಮಾತುಗಳಿಂದ ಸಂತೋಷವಾಗಿರುತ್ತಿದ್ದ ಜಯರಾಮು
ಮತ್ತೊಂದು ದಿನ ರಂಗಮ್ಮ ಒಬ್ಬರೇ ಇದ್ದಾಗ ಕೇಳಿದ್ದ:
"ನಾನು ಅವತ್ತು ಹೇಳಿದ ವಿಷಯ ಏನ್ಮಾಡಿದಿರಿ ರಂಗಮ್ನೋರೆ?"
"ಯಾವ ವಿಷಯ್ವೊ?"
"ಅದೇ-ಕಕ್ಕಸಿಂದು."
ಹಾಗೆ ಹೇಳಿದಾಗ ಗಾಂಭೀರ್ಯ ಮರೆಯಾಗಿ ನಗು ಬಂದು ಬಿಟ್ಟಿತ್ತು ಜಯ
ರಾಮುಗೆ. ಅದನ್ನು ಗಮನಿಸಿ ರಂಗಮ್ಮ ಅರೆಮನಸಿನಿಂದ ರೇಗುತ್ತ ಹೇಳಿದ್ದರು:
"ನಗ್ತೀಯೇನೋ? ಕೈಲಾಗದ ಮುದುಕಿ ಒಬ್ಬಳಿದಾಳೇಂತ ನಿನಗೆಲ್ಲಾ ತಮಾಷೆ
ಯಾಗ್ಬಿಟ್ಟಿದೆ ಅಲ್ವೇ? ತಾಳು ಬರ್ಲಿ ನಿಮ್ಮಪ್ಪ."
ಜಯರಾಮು ನಕ್ಕು, ರಂಗಮ್ಮನನ್ನು ಕೇಳಿದ:
"ಗೋದಿಗೀದಿ ಏನಾದರೂ ಇದ್ದರೆ ಕೊಡಿ. ಹಿಟ್ಟು ಮಾಡಿಸಿಕೊಂಡು ಬರ್ತೀನಿ."
ಆ ಕ್ಷಣ ರಂಗಮ್ಮನಿಗೆ ಬೇರೆ ಎಲ್ಲವೂ ಮರೆತು ಹೋಯಿತು. ಸ್ವಯಂಸೇವಕ
ನಾಗಿ ಬಂದ ಜಯರಾಮು ಅವರ ಪ್ರೀತಿಪಾತ್ರನಾದ.
ನಾರಾಯಣಿ ಸತ್ತಾಗ ಅಂತ್ಯಸಂಸ್ಕಾರಕ್ಕೆಂದು ರಂಗಮ್ಮ ಐದು ರೂಪಾಯಿ
ತೆಗೆದುಕೊಟ್ಟ ಸನ್ನಿವೇಶ, ಹಾಗೆಯೇ ಅಕ್ಕಪಕ್ಕದವರು ಕಾಹಿಲೆ ಬಿದ್ದಾಗ ಅವರು
ನಡೆಸುತ್ತಿದ್ದ ಆರೈಕೆ- ಅದೊಂದು ಚಿತ್ರವಾದರೆ, ನಾರಾಯಣಿಯ ಗಂಡ ಮಕ್ಕಳೊಡನೆ
ಮನೆ ಬಿಟ್ಟು ಹೊರಟು ಹೋಗುವಂತೆ ಅವರು ಮಾಡಿದ್ದು, ಖಾಲಿ ಮನೆಯನ್ನು
ನೋಡಲು ಯಾರಾದರೂ ಬಂದಾಗ ಅವರು ಒಪ್ಪುವಂತೆ ಒಲಿಸಲು ಆಕೆ ತೋರಿಸು
ತ್ತಿದ್ದ ವಾಕ್ಚಾತುರ್ಯ- ಇದು ಇನ್ನೊಂದು ಚಿತ್ರವಾಗಿತ್ತು.

ಹೀಗೆ ಪ್ರತಿ ಮನುಷ್ಯನನ್ನೂ ಜಯರಾಮು ಸೂಕ್ಷ್ಮವಾಗಿ ನಿರೀಕ್ಷಿಸಿ ತಿಳಿದು
ಕೊಳ್ಳುತ್ತಿದ್ದ. ಪ್ರತಿಯೊಬ್ಬನೂ ಒಳಿತು_ಕೆಡಕುಗಳ ಸಮ್ಮಿಶ್ರಣ. ಕೆಲವರಲ್ಲಿ ಒಳಿತು
ಹೆಚ್ಚು. ಕೆಲವರಲ್ಲಿ ಕೆಡುಕು. ಪ್ರತಿಯೊಬ್ಬರನ್ನೂ ಹಾಗೆ ತೂಗಿ ನೋಡಿದ ಮೇಲೆ
ಮತ್ತೊಂದು ಪ್ರಶ್ನೆ ಏಳುತ್ತಿತ್ತು, 'ಈ ಮನುಷ್ಯ ಹೀಗೇಕೆ?' ಶಂಕೆ ಸಂದೇಹಗಳು

12